ಭಾಗ ೪ – ಮಿಕ್ಕ ಸಂಪರ್ಕ ಸಾಧನಗಳು

ಅಂಚೆ ತಂತಿ

ಕರ್ನಾಟಕವು ಒಂದು ವಿಶಾಲವಾದ ರಾಜ್ಯವಾಗುವುದರಿಂದ ಅದರ ಅಂಚೆ – ತಂತಿ ಖಾತೆಗಳನ್ನು ಈವರೆಗೂ ಮೈಸೂರು ಸಂಸ್ಥಾನವನ್ನು ಮದ್ರಾಸಿಗೆ ಸೇರಿಸಿದಂತೆ ಎತ್ತಲೋ ಸೇರಿಸಿದರೆ, ಇನ್ನು ಮುಂದೆ ನಡೆಯಲಾರದು. ಈ ರಾಜ್ಯಕ್ಕೆ ಪ್ರತ್ಯೇಕವಾದ ಪೋಸ್ಟ್ ಮಾಸ್ಟರ್ ಜನರಲ್‍ನೂ, ಜನರಲ್ ಪೋಸ್ಟ್ ಆಫೀಸೂ ಹಾಗೂ ಸೆಂಟ್ರಲ್ ಟೆಲಿಗ್ರಾಫ್ ಆಫೀಸೂ ದೊರೆಯಬೇಕು. ಇದರ ಕೇಂದ್ರ ಬೆಂಗಳೂರು ಅಥವಾ ಬೇರೊಂದು ಹೆಚ್ಚು ಮಧ್ಯವರ್ತಿಯಾದ ಸ್ಥಳವಾಗಬಹುದು. ದ್ವಿತೀಯ ಯೋಜನೆಯಲ್ಲಿ ಇಡೀ ಭಾರತದಲ್ಲಿ ೨೦,೦೦೦ ಅಂಚೆ ಕಟ್ಟೆಗಳು ಹೆಚ್ಚಲಿವೆ. ಆ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಕನಿಷ್ಟ ೧೨೦೦ ಹೊಸ ಅಂಚೆ ಕಟ್ಟೆಗಳು ದೊರೆಯಬೇಕು. ಟೆಲಿಪೋನು ಟೆಲಿಗ್ರಾಪುಗಳ ಸೌಕರ್ಯ ದ್ವಿತೀಯ ಪಂಚವಾರ್ಷಿಕ ಯೋಜನೆಯ ಮೇರೆಗೆ ದೊರೆತೆರೆ ಪ್ರಶ್ನೆಯೇ ಇಲ್ಲ. ಆದರೆ ವಾರ್ಷಿಕ ನಮ್ಮ ನಾಡಿನ ಅಂಚೆಯ ಸೌಕರ್ಯದಲ್ಲಿ ಮುಖ್ಯವಾದ ಅವಶ್ಯಕತೆ ಮೇಲೆ ಸೂಚಿಸಿದ ರೀತಿಯ ವಿಮಾನ ಸಾರಿಗೆ.

ಬಾನುಲಿ

ಬಾನುಲಿ (ಆಕಾಶವಾಣಿ) ಯ ವಿಚಾರದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಸೌಕರ್ಯ ಸಿಕ್ಕೇ ಇದೆ. ಬೆಂಗಳೂರಿನ ಆಕಾಶವಾಣಿ ಭಾರತದ ದೊಡ್ಡ ಕೇಂದ್ರಗಳಲ್ಲೊಂದು. ಅದರೆ ಬೆಂಗಳೂರಿನಿಂದ ಬಹುದೂರ ಇರುವ ಹಾಗು ಒಂದು ನಿರ್ದಿಷ್ಟ ರೀತಿಯಲ್ಲಿ ಸುಸಂಘಟಿತವಾದ ಪ್ರದೇಶವಾದ ಹೈದ್ರಾಬಾದು ಕರ್ನಾತಕಕ್ಕೆ ಧಾರವಾಡದಂತಹ ಒಂದು ಪೈಲಟ್ ಸ್ಟೇಷನ್ನಾದರೂ ಅತ್ಯವಶ್ಯ. ಯುದ್ಧಾನಂತರದ ಹೈದ್ರಾಬಾದು ಯೋಜನೆಯ ಯೋಜನೆಯ ಮೇರೆಗೆ ಗುಲ್ಬರ್ಗದಲ್ಲಿ ಒಂದು ರೇಡಿಯೋ ಸ್ಟೇಷನ್ನಿನ ಲೆಕ್ಕವಿತ್ತು. ಆ ಪ್ರಕಾರ ಗುಲ್ಬರ್ಗದಲ್ಲಿ ಒಂದು ಸ್ಟೇಷನ್ನು ಇರುವದು ಅವಶ್ಯ. ಬೀದರ – ಕಾರವಾರದಂತಹ ದೂರದ ಹಾಗೂ ಗಡಿಯ ಪಟ್ಟಣಗಳೊಡನೆ ವೈರ್ ಲೆಸ್ ಸಂಪರ್ಕವಿರಬೇಕು.

ಕೊನೆಯ ಮಾತು

ಸಾರಾಂಶ

೧. ನಮ್ಮ ಹೊಸ ರಾಜ್ಯ ರಸ್ತೆಗಳ ಬೆಳವಣಿಗೆಗೆ ಪ್ರಪ್ರಥಮ ಪ್ರಾಧಾನ್ಯತೆಯನ್ನು ಕೊಡಬೇಕು. ಹಾಗು ಆ ಬೆಳವಣಿಗೆಯ ೩/೪ ಸೌಕರ್ಯವಾದರೂ ಬಯಲು ಸೀಮೆಗೆ ಆಗಬೇಕು. ರಾಜಧಾನಿ ಒಂದು ಮೂಲೆಯಲ್ಲಿರುವ ಅನಾನುಕೂಲತೆಯನ್ನು ತೊಡೆದು ಹಾಕಲು ಇದೊಂದು ಒಳ್ಳೆಯ ಉಪಾಯ. ಹಾಗೆಯೇ ನಾಡಿನ ಆರ್ಥಿಕ ಬೆನ್ನೆಲುಬು ಸಹ ರಸ್ತೆಗಳ ಬೆಳವಣಿಗೆಯೇ. ಮೈಸೂರು ಸಂಸ್ಥಾನದ ದ್ವಿತೀಯ ಯೋಜನೆಯಲ್ಲಿ ರಸ್ತೆಗಳ ಬೆಳವಣಿಗೆಯ ಬಗೆಗೆ ಮಹತ್ವಾಕಾಂಕ್ಷೆ ಪೂರ್ಣವಾದ ಉದ್ದಿಶ್ಯವಿಲ್ಲ. ಆದರೆ ಕರ್ನಾಟಕದ ರಾಜ್ಯದಲ್ಲಿ ಮಾತ್ರ ಅದು ನಡೆಯದು. ಭಾರತ ಸರಕಾರವು ಹೇಗೆ ತನ್ನ ದ್ವಿತೀಯ ಪಂಚವಾರ್ಷಿಕ ಯೋಜನೆಯಲ್ಲಿ ೩೦ ರಷ್ಟು ಯೋಜನಾಧನವನ್ನು ಸಾರಿಗೆ ಸಂಪರ್ಕಕ್ಕೆ ಮೀಸಲಾಗಿರಿಸಿದೆಯೋ ಹಾಗೆಯೇ ಕರ್ನಾತಕವು ತನ್ನ ಯೋಜನಾಧನದ ೩೦ನ್ನು ಸಾರಿಗೆ ಸಂಚಾರ ಸಂಪರ್ಕಾದಿಗಳಿಗೆ ಮೀಸಲಿಟ್ಟು, ಅದರ ೪೦ ರಸ್ತೆಗಳಿಗೂ, ೪೦ ರ್ಕರಾವಳಿಯ ಅಭಿವೃದ್ಧಿಗೂ, ಮಿಕ್ಕ ೨೦ ಇತರ ವಿಷಯಗಳಿಗೂ ಬಳಸಬಹುದು. ಇಡೀ ಕರ್ನಾಟಕದ ಯೋಜನಾಧನ ಸಾಧಾರಣ ೧೬೦ ಕೋಟಿಯಷ್ಟಾಗಬೇಕು. ಅದರಲ್ಲಿಯ ಸಾಧಾರಣ ೫೦ ಕೋಟಿ ರೂಪಾಯಿ ಬರೀ ಸಾರಿಗೆ – ಸಂಪರ್ಕಗಳಿಗೆ, ಎಂದರೆ ೨೦ ಕೋಟಿ ಮಿಕ್ಕ ಸಾಧನಗಳಿಗೆ. ಇದು ಅತಿ ಮಹತ್ವಾಕಾಂಕ್ಷೆಯೇನಲ್ಲ. ಇಷ್ಟಾದರೂ ಕೂಡಲೇ ಆಗದಿದ್ದರೆ, ಕರ್ನಾಟಕದ ರಥ ಕುಂಟುವುದರಲ್ಲಿ ಸಂದೇಹವಿಲ್ಲ.

೨. ಸರಕಾರೀ ರಸ್ತೆ ಸಂಚಾರ ವ್ಯವಸ್ಥೆ ನಮ್ಮ ರಾಜ್ಯಕ್ಕೆ ಮತ್ತೊಂದು ದೊಡ್ಡ ಆರ್ಥಿಕ ಬಲ. ಅದರ ಬೆಳವಣಿಗೆ ರಾಜ್ಯವನ್ನೆಲ್ಲಾ ವ್ಯಾಪಿಸಬೇಕು ಬೊಂಬಾಯಿ ಕರ್ನಾಟಕದ ಬಲಿಷ್ಟವಾದ ಈ ವ್ಯವಸ್ಥೆಯನ್ನು ಕರ್ನಾಟಕ ಸರಕಾರ ಕೂಡಲೇ ಕೈವಶಪಡಿಸಿಕೊಳ್ಳಬೇಕು.

೩. ಕರಾವಳಿ ಅಭಿವೃದ್ಧಿಗೂ ಮೇಲ್ಪಂಕ್ತಿಯ ಪ್ರಾಧಾನ್ಯವನ್ನು ಕೊಡಬೇಕು. ಭಾರತದ ದ್ವಿತೀಯ ಪಂಚವಾರ್ಷಿಕ ಯೋಜನೆಯಲ್ಲಿ ಮಂಗಳೂರಿಗಾಗಲಿ, ಮಲಪೆಯಾಗಲಿ ಅಭಿವೃದ್ಧಿಗೊಳ್ಳುವುದು ಖಂಡಿತ. ಆದರೆ ಕರ್ನಾಟಕದ ಬಹು ಭಾಗಕ್ಕೆ ಅವರೆಡೂ ದೂರವಾಗುವುದರಿಂದ ಅಲ್ಪವೆಚ್ಚದಲ್ಲಿಯೇ ಹಿರಿದಾಗಿ ಮಾಡಬಹುದಾದ ನೈಸರ್ಗಿಕ ಸೌಕರ್ಯವುಳ್ಳ ಕಾರವಾರನ್ನು ಪ್ರಾಂತೀಯ (ಇಂಟರ್ ಮೀಡಿಯಟ್) ಬಂದರನ್ನಾಗಿಯಾದರೂ ಬೆಳೆಯಿಸಬೇಕು.

೪. ರೈಲ್ದಾರಿಗಳಲ್ಲಿ ಕರಾವಳಿಗಭಿಮುಖವಾದವೂ, ಕೆಲವು ಬ್ರಾಡ್‍ಗೇಜಿಗೆ ಪರಿವರ್ತಿಸಬೇಕಾದವೂ ಅಭಿವೃದ್ಧಿಗಾಗಿ ತಡೆದು ನಿಂತಿವೆ. ಅವಕ್ಕೆ ಮೊದಲು ಪ್ರಾಧಾನ್ಯ ಅವಶ್ಯ.

೫. ವಿಮಾನ ದಾರಿಗಳಲ್ಲಿ ಒಂದು ರಾತ್ರಿ ಮೇಲ್ ವಿಮಾನ ಸಾರಿಗೆಯೂ, ಒಂದು ಅಥವಾ ಎರಡೂ ಫೀಡರ್ ಸರ್ವಿಸುಗಳೂ, ಮೂರು ಹೊಸ ನಿಲ್ದಾಣಗಳೂ ಅತ್ಯವಶ್ಯ. ಇವು ಹುಬ್ಬಳ್ಳಿ – ಗದಗು, ಬಿಜಾಪುರ, ಹಾಗೂ ಗುಲ್ಬರ್ಗ.

೬. ಮಿಕ್ಕ ಬೆಳವಣಿಗೆಗಳಲ್ಲಿ, ಹುಬ್ಬಳ್ಳಿ ಅಥವಾ ಬಳ್ಳಾರಿಯಂಥ ಮಧ್ಯವರ್ತಿ ಜಾಗದಲ್ಲಿ ಪಿ.ಎಂ.ಜಿ. ಹಾಗೂ ಜಿ.ಪಿ.ಓ. ಹಾಗೂ ಸಿ.ಟಿ.ಓ ಅವಶ್ಯ.

೭. ಗುಲ್ಬರ್ಗಕ್ಕೂ ಒಂದು ಪೈಲಟ್ ರೇಡಿಯೋ ಸ್ಟೇಷನ್ ಅವಶ್ಯ.

೮. ಕರ್ನಾಟಕದ ಪ್ರವಾಸಿ ಪ್ರೇಕ್ಷಿತ ಆಕರ್ಷಣೆ ಹೆಚ್ಚಿಸಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ ಒಂದು ಇಲಾಖೆ ಖಾತೆಯನ್ನೇ ಏರ್ಪಡಿಸಬೇಕು. ಮೈಸೂರ ಹೊರಗಿನ ಕರ್ನಾಟಕದಲ್ಲಿ ಯಾತ್ರಿಕರು ಹಾಗೂ ಪ್ರವಾಸಿಪ್ರೇಕ್ಷಕರು ಉಳಿದುಕೊಳ್ಳುವ ಅನುಕೂಲತೆ ತೀರ ಕೀಳಾಗಿದೆ. ಅವಶ್ಯವಿದ್ದ ಸ್ಥಳಗಳಲ್ಲೆಲ್ಲ ಮೈಸೂರು ಮಟ್ಟದ ವಿಶ್ರಾಂತಿ ಮಂದಿರಗಳೂ, ಪ್ರವಾಸಿಮಂದಿರಗಳೂ ಆಗುವುದು ಅತ್ಯಗತ್ಯ. ಹುಬ್ಬಳ್ಳಿ, ಬಿಜಾಪುರಗಳಲ್ಲಿ ಬೃಂದಾವನದ ‘ಹೋಟೆಲ್ ಕೃಷ್ಣರಾಜಸಾಗರ’ ಮಟ್ಟದ ಒಂದಾದರೂ ಸರಕಾರಿ ವಿಶ್ರಾಂತಿ ಮಂದಿರ ಅತ್ಯವಶ್ಯ. ಅಲ್ಲದೆ ಬೆಳಗಾವಿ, ಹುಬ್ಬಳ್ಳಿ, ಬಿಜಾಪುರ, ಗುಲ್ಬರ್ಗ, ಹೊಸಪೇಟೆ, ದಾವಣಗೆರೆ, ಮಂಗಳೂರು, ಮೈಸೂರುಗಳಂತಹ ಸ್ಥಳಗಲಲ್ಲಿ ‘ಪ್ರಪ್ರೇಕ್ಷಕ’ ಇಲಾಖೆಯ ಶಾಖೆಗಳೂ, ಬಾದಾಮಿ, ಬೀದರ, ಗದಗು, ಕಾರವಾರ, ಸಾಗರ, ಕಾರ್ಕಳ ಅಥವಾ ಶಿವಮೊಗ್ಗ, ಬೇಲೂರು ಅಥವಾ ಹಾಸನಗಳಂತಹ ಸ್ಥಳಗಳಲ್ಲಿ ಪ್ರವಾಸೀಪ್ರೇಕ್ಷಕ ಇಲಾಖೆಯ ಉಪಶಾಖೆಗಳೂ ಉಂಟಾಗಬೇಕು.

ತಾತ್ಪರ್ಯ

ಕನ್ನಡನಾಡು ಒಂದಾದುದು ಬರೀ ಕನ್ನಡಿಗರ ಆಂದೋಲನದಿಂದಲ್ಲ. ಸಮಗ್ರ ಭಾರತದಲ್ಲೇ ಆಗಿರುವ ಒಂದು ಪುನರುಜ್ಜೀವನದ ನವಪಲ್ಲಟ ಪರಿವರ್ತನಗಳ ಪರಿಣಾಮ ಅದು. ಆ ಪುನರುಜ್ಜೀವನದ ಕ್ರಮ ಹಾಗು ವಿಕಾಸಗಳಲ್ಲಿ ಭಾಷೆ ಅತ್ಯಂತ ಮಹತ್ತಮವಾದ ಪಾತ್ರ ವಹಿಸಿದೆ. ಅಂತೇ ರಾಷ್ಟ್ರದ ಮೇಲೆ ಭಾಷೆಗಳಿಗಿರುವ ಜನ್ಮಸಿದ್ಧ ಹಕ್ಕನ್ನು ಎಂಥೆಂಥಾ ವಿರೋಧಿ ಅತಿರಥಿ ಮಹಾರಥಿಗಳು ತಡೆಯದೆ ಹೋದರು. ಇದನ್ನೆಲ್ಲಾ ಬಗೆದು, ನವಕರ್ನಾಟಕ ಮಿಶ್ರ ಭಾಷೆಯ ರಾಜ್ಯ, ಭಾಷಾತೀತ ರಾಜ್ಯ ಎಂಬ ಸಲ್ಲದ ಸೋಗನ್ನು ಹಾಕದೆ, ಭಾರತದ ಮಿಕ್ಕೆಲ್ಲ ರಾಜ್ಯಗಳಂತೆ ನಮ್ಮದೂ ಒಂದು ಭಾಷಾರಾಜ್ಯ ಎಂತಲೇ ಅಭಿಮಾನದಿಂದ ಒಪ್ಪೋಣ. ಭಾಷೆ ಜನಜೀವನಕ್ಕೆಷ್ಟೋ ಅಷ್ಟೇ ಆಡಳಿತಕ್ಕೂ ಅತ್ಯಗತ್ಯ ಸಾಧನ. ಒಂದು ನಾಡಿಗೆ ಸಂಚಾರ – ಸಂಪರ್ಕ – ಸಾಧನಗಳು ಎಷ್ಟು ಅಗತ್ಯವೋ ಅದಕ್ಕೂ ಸಾವಿರಪಾಲು ಹೆಚ್ಚು ಅಗತ್ಯ ಭಾಷೆ. ಏಕೆಂದರೆ ಅದು ಸಾಮಾಜಿಕತೆ ಹಾಗು ವಿಚಾರಾದರ್ಶಗಳ ಸಂಚಾರ ಸಂಪರ್ಕಕ್ಕೆ ಅಸಮಾನವಾದ ಸಾಧನ. ಆದರೆ, ನಮ್ಮ ರಾಜ್ಯ ಭಾರತದ ಒಂದು ರಾಜಕೀಯ ಅಂಗ ಹಾಗೂ ಮಿಕ್ಕ ಭಾಷಾರಾಜ್ಯಗಳ ಸಹೋದರ, ಒಡನಾಡಿ ಎಂಬುದನ್ನು ಮರೆಯಲಾಗದು. ಮೇಲಾಗಿ ಸಂಯುಕ್ತ ಕರ್ನಾಟಕದ ಬೇಡಿಕೆ ಹೊರಹೊರಗೆ ಭಾಷಾತ್ಮಕವಾಗಿದ್ದರೂ, ನಿಜವಾಗಿ ಅದು ಆರ್ಥಿಕ ದೃಷ್ಟಿಯಲ್ಲಿ ಹಿಂದುಳಿದವರ ಕೂಗಾಗಿತ್ತು. ಆದುದರಿಂದ ಈಗ ಒಂದಾಗಿರುವ ಸಂಯುಕ್ತ ಕರ್ನಾಟಕ ಹಿಂದುಳಿದ ಪ್ರದೇಶಗಳದೇ ಒಂದು ಸಂಯುಕ್ತ ರಾಜ್ಯವೆಂತಲೂ, ಭಾಷೆ ಒಂದಾಗಿರುವುದು ಒಂದು ಹೆಚ್ಚಿನ ಆನುಕೂಲ್ಯ ಎಂತಲೂ ಭಾವಿಸಿಕೊಳ್ಳಬೇಕು. ಆದುದರಿಂದ ಭಾಷೆ, ಸಾಹಿತ್ಯಗಳ ಬೆಳವಣಿಗೆಗಿಂತಲೂ, ಹಿಂದುಳಿದ ಪ್ರದೇಶಗಳ ಆರ್ಥಿಕ ಬೆಳವಣಿಗೆಯೇ ಕರ್ನಾಟಕ ರಾಜ್ಯದ ಗುರಿ ಎಂದು ಬಗೆಯಬೇಕು. ಈ ವಿಷಯದಲ್ಲಿ, ಮೈಸೂರು ಸಂಸ್ಥಾನದಲ್ಲೂ ಬೆಂಗಳೂರು, ಮೈಸೂರುಗಳ ಪರಿಸರದಲ್ಲಿ ಮಾತ್ರ ಸಾಕಷ್ಟು ಬೆಳವಣಿಗೆಯಾಗಿದೆಯೇ ಹೊರತು, ಮಿಕ್ಕ ಹಲಭಾಗ ಸಾಕಷ್ಟು ಹಿಂದುಳಿದಿದೆ. ಇದನ್ನೆಲ್ಲಾ ಬಗೆದರೆ, ನಿಜ ಕರ್ನಾಟಕ, ಕೊಡಗು, ಕನ್ನಡ ಜಿಲ್ಲೆ, ಶಿವಮೊಗ್ಗ, ಚಿತ್ರದುರ್ಗ, ಬಿಜಾಪುರ, ಗುಲ್ಬರ್ಗಗಳ ಪ್ರದೇಶದಲ್ಲಿರುವುದಲ್ಲದೆ, ಬೆಂಗಳೂರು – ಮಂಗಳೂರು – ಮೈಸೂರು ನಗರಗಳಲ್ಲಿಲ್ಲ. ಇದನ್ನು ಮನದಟ್ಟಾಗುವಂತೆ ಅರಿತಾಗ ಮಾತ್ರ ನಾವು ನಮ್ಮ ನಾಡಿಗೆ ಸಮರ್ಪಕವಾದ ಸಂಚಾರ ಸಂಪರ್ಕಗಳ ಸಾಧನೆಗಳನ್ನು ಸಂಯೋಜಿಸಿಕೊಳ್ಳಬಲ್ಲೆವು. ಕರ್ನಾಟಕದ ಬಹು ಭಾಗ ನಾಡಿನ ಪಶ್ಚಿಮ ಹಾಗು ಉತ್ತರ ನಿಟ್ಟಿನಲ್ಲಿರುವುದರಿಂದಲೂ, ಅದರಲ್ಲಿ ಕೆಲಭಾಗ ರಾಜಧಾನಿಯಿಂದ ತಿ ದೂರದಲ್ಲಿರುವುದರಿಂದಲೂ, ಬೆಂಗಳೂರು ಇನ್ನು ಮುಂದೆ ಉತ್ತರಾಭಿಮುಖವಾಗಬೇಕು. ಸಂಸಾರಿಯಾದವನಿಗೆ ಹೊರಗಿನ ದೊಡ್ಡಸ್ತಿಕೆ ಎಷ್ಟೇ ಇದ್ದರೂ, ತನ್ನ ಕುಟುಂಬದ ಹೊಣೆ ಹೇಗೆ ಆದ್ಯಕರ್ತವ್ಯವೋ ಹಾಗೇ ಬೆಂಗಳೂರು, ತನ್ನ ಅಂತರ್ ಭಾರತೀಯ, ಅಂತರ್ ರಾಷ್ಟ್ರೀಯ ಹಿರಿಮೆ ಎಷ್ಟೇ ಇದ್ದರೂ ಕರ್ನಾಟಕದ ಆರ್ಥಿಕ ಅಂತರ್ವ್ಯವಸ್ಥೆ ಹೆಚ್ಚು ಕೀಳಾಗಿರುವಲ್ಲಿ, ತನ್ನ ಹೊಣೆ ಹೆಚ್ಚಿದೆಯೆಂದು ಬಗೆದುಕೊಳ್ಳಬೇಕು. ಹಾಗೆಯೇ ಉತ್ತರದ ಕನ್ನಡಿಗರು ತಮ್ಮ ಜೀವಾಳದ ಸೂತ್ರಗಳು ಬೆಂಗಳೂರಲ್ಲಿರುವುದನ್ನು ಬಗೆದು ದಕ್ಷಿಣಾಭಿಮುಖಗಳಾಗಿ ದಕ್ಷಿಣದ ಹಿರಿಮೆಯಲ್ಲಿ ಬೆರೆಯಲು ಮನಃಪೂರ್ವಕ ಯತ್ನಿಸಬೇಕು. ಈ ಪರಸ್ಪರತೆಗೆ ನಮ್ಮ ನಾಡಿನ ಸಾರಿಗೆ – ಸಂಚಾರ – ಸಂಪರ್ಕಗಳ ಸುವ್ಯವಸ್ಥಿತ ಸಂಯೋಜನೆ ಒಂದು ಹಿರಿದಾದ ಭೌತಿಕ ಸಾಧನ. ಈ ಸಾಧನ ಸುಸಂಘಟಿತವಾಗಬೇಕಾದರೆ ದಕ್ಷಿಣದ ಕನ್ನಡಿಗರೂ ಉತ್ತರದ ಕನ್ನಡಿಗರೂ ಪಶ್ಚಿಮಾಭಿಮುಖಿಗಳಾಗಿ ಕರಾವಳಿಯನ್ನು ಪೂರ್ತಿ ಅಭಿವೃದ್ಧಿಗೊಳಿಸಬೇಕು. ನಮ್ಮ ಕರಾವಳಿ ಚಿಕ್ಕದಾಗಿ, ಅತಿ ಸಂಪನ್ನವಾಗಿ ಇರುವುದರಿಂದ, ಅದರ ಮೇಲೆ ನಾವು ನಮ್ಮ ಆರ್ಥಿಕ ಶಕ್ತಿಗಳನ್ನು ಚೆನ್ನಾಗಿ ಕ್ರೋಡೀಕರಿಸಿ ಅದನ್ನು ಅಭಿವೃದ್ಧಿಗೊಳಿಸುವುದು ಸುಲಭಸಾಧ್ಯ.

ಕೊನೆಯದಾಗಿ ಕನ್ನಡಿಗರು ಆತ್ಮಾಭಿಮುಖಗಳೂ ಆಗಬೇಕು. ಆ ಆತ್ಮವಿರುವುದು ಹಂಪೆಯಲ್ಲಿ; ಹಾಳಾದ ವಿಜಯನಗರದಲ್ಲಿ. ಅದು ಮತ್ತೆ ಪುನರುಜ್ಜೀವಿತವಾಗಬೇಕು. ಅದೇ ನಮ್ಮನ್ನು ತಾಳಿಬಾಳಿಸುವ ಭುವನೇಶ್ವರೀ ಶಕ್ತಿ; ನಮ್ಮ ಸಾಂಸ್ಕೃತಿಕ ಹಿರಿಮೆಯ ಹೃದಯ ಆದರೆ ಇದು ಕೇವಲ ಭಾವನೆಯ ಮಾತಲ್ಲ. ಹಂಪೆಯ ಬಿದರೆ ಅಥವಾ ಕೊಡಗಿನ ಒಂದು ಮೂಲೆಯಲ್ಲಿದ್ದಿದ್ದರೆ, ನಾವದನ್ನು ಇಷ್ಟು ಮಹತ್ವ ಕೊಟ್ಟು ಪುನರುಜ್ಜೀವಿಸಬೇಕೆಂದು ತಾನೇ ಹೇಳುತ್ತಿರಲಿಲ್ಲ. ಆದರೆ ಸಮಗ್ರ ಕರ್ನಾಟಕದ ಸಾರಿಗೆ – ಸಂಚಾರ – ಸಂಪರ್ಕದ ಸಮಸ್ಯೆಯನ್ನು ಸೂಕ್ತವಾಗಿ ಅಭ್ಯಸಿಸುತ್ತಿರುವಾಗ ಹಂಪೆ (ಹೊಸಪೇಟೆ) ಹೇಗೆ ನಮ್ಮ ಹೆದ್ದಾರಿಗಳ ಕೇಂದ್ರವಾಗಬಲ್ಲುದೆಂಬುದೂ, ಹೇಗೆ ಅದು ಭಂಗೋಲಿಕವಾಗಿಯೂ ನಮ್ಮ ಹೊಸರಾಜ್ಯದ ಹೃದಯವಾಗಬಲ್ಲುದೆಂಬುದೂ ನನ್ನ ನಿದರ್ಶನಕ್ಕೆ ಬಂದಿದೆ. ಅಲ್ಲದೆ ಸೊಂಡೂರು – ಹೊಸಪೇಟೆ ಬಳಿ ಒಂದು ಹಿರಿ ಔದ್ಯೋಗಿಕ ಕೇಂದ್ರವು ಸಂಭಾವ್ಯವಾಗಿರುವುದರಿಂದ ನಮ್ಮ ನಾಡಿನ ಸಾಂಸ್ಕೃತಿಕ – ಭೂಗೋಳಿಕ – ಔದ್ಯೋಗಿಕ ಹೃದಯ ಹಂಪೆಯ ಪರಿಸರವೇ ಏಕಾಗಬಾರದೆಂದು ಈ ಮೂಲಕ ಕನ್ನಡಿಗರಲ್ಲೆಲ್ಲ ಕೇಳಿಕೊಳ್ಳುತ್ತೇನೆ. ಇದೊಂದು ಅಪರೂಪದ ಸುಯೋಗವಲ್ಲವೇ? ಇದರಿಂದ ಹೊಸ ಮೈಸೂರು ರಾಜ್ಯದ ಚತುರ್ಮುಖ ಅಭಿವೃದ್ಧಿ ಪೂರ್ತಿಯಾಗುವುದಲ್ಲವೇ?

—-

ಸೂಚನೆ : ಈ ಬರೆಹದಲ್ಲಿ ಮೈಸೂರು, ಸಂಸ್ಥಾನ, ಮೈಸೂರು ಪ್ರದೇಶ ಎಂದಿರುವ ಕಡೆಗಳಲ್ಲೆಲ್ಲಾ, ಬಳ್ಳಾರಿ ಜಿಲ್ಲೆಯೂ ಸೇರಿ ಎಂದು ಅರ್ಥ ಮಾಡಿಕೊಳ್ಳಬೇಕು.

ಈ ಬರಹದಲ್ಲಿ ಎತ್ತಿ ಹೇಳಿರುವ ಅಂಕಿ ಅಂಶಗಳಿಗೂ, ನಕ್ಷೆ ವಿವರಣೆಗಳಿಗೂ ಬರಹಗಾರರೇ ಹೊಣೆಗಾರರು. ಕಾರಣ, ಈ ಬರಹದ Copy Right ಬರಹಗಾರರಿಗೆ ಸೇರಿದೆ.

ಇದರಲ್ಲಿರುವ ಹೇಳಿಕೆ, ಅಭಿಪ್ರಾಯ, ಸೂಚನೆ ಇತ್ಯಾದಿ ವಿಷಯಗಳಿಗೆ ಬರಹಗಾರರೇ ಹೊಣೆ.