ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ‘ಪರಾಮರ್ಶನ ಪುಸ್ತಕ ಮಾಲೆ’ಯ ಪ್ರಥಮ ಕೃತಿಯಾಗಿ ಈ ಗ್ರಂಥ ಪ್ರಕಟವಗುತ್ತಿದೆ. ಈ ಕೃತಿ ರಚನೆಗೆ ಅವಕಾಶ ಮಾಡಿಕೊಟ್ಟಿರುವ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ನಾನು ಬಹುವಾಗಿ ಋಣಿಯಾಗಿದ್ದೇನೆ. ಅವರು ಈ ಕೃತಿ ರಚನೆಯ ವಿಷಯದಲ್ಲಿ ವಿಶೇಷ ಆಸಕ್ತಿ. ವಹಿಸಿದ್ದಾರೆ. ಅವರ ವಿಶ್ವಾಸಪೂರ್ವಕ ಒತ್ತಾಯವಿಲ್ಲದಿದ್ದರೆ ಈ ಬರವಣಿಗೆ ಆಗುತ್ತಿರಲಿಲ್ಲ. ಅವರಿಗೆ ನನ್ನ ವಿಶೇಷ ವಂದನೆಗಳು.

ನನಗೆ ನಿಘಂಟುಶಾಸ್ತ್ರದಲ್ಲಿ ಆಸಕ್ತಿ ಹುಟ್ಟಿಸಿದ್ದು ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ‘ಭಾಷಾಶಾಸ್ತ್ರ ಶಿಶಿರ ಶಾಲೆ’ (೧೯೯೩ ನವೆಂಬರ್‌). ಅಲ್ಲಿ ಡಾ. ಭ. ಕೃಷ್ಣಮೂರ್ತಿ ಅವರು ವೃತ್ತಿ ಪದಕೋಶಕ್ಕೆ ಸಂಬಂಧಿಸಿದಂತೆ ಎರಡು ಉಪನ್ಯಾಸಗಳನ್ನು ಕೊಟ್ಟರು. ಅವುಗಳನ್ನು ನಾನು ಎಂದೂ ಮರೆಯಲಾರೆ. ಆ ಶಾಲೆಯು ಭಾಷಾಶಾಸ್ತ್ರ ಮತ್ತು ನಿಘಂಟುಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೊಸ ತಾತ್ವಿಕ ಚರ್ಚೆಗಳನ್ನು ಹುಟ್ಟು ಹಾಕಿತು. ಆ ಶಾಲೆಯಲ್ಲಿ ನಾನು ಕಲಿತ ಕೋಶ ರಚನೆಯ ಶಿಕ್ಷಣವನ್ನು ಬೆಳೆಸಿಕೊಳ್ಳುವ ಅವಕಾಶಗಳು ಮುಂದೆ ಒದಗಿಬಂದವು. ಕೋಶ ರಚನೆಗೆ ಸಂಬಂಧಿಸಿದಂತೆ ಎಂ.ಫಿಲ್‌ಮತ್ತು ಪಿಎಚ್‌.ಡಿ. ಅಧ್ಯಯನವನ್ನು ಕೈಕೊಳ್ಳುವುದರ ಮೂಲಕ ಆ ಅಧ್ಯಯನ ಕ್ಷೇತ್ರ ನನ್ನ ಕಾರ್ಯ ಕ್ಷೇತ್ರವಾಯಿತು.

ನಾನು ಕಲಿತ ಕೋಶ ರಚನೆಯ ತತ್ವಗಳನ್ನು ಸರಳವಾದ ಶೈಲಿಯಲ್ಲಿ ಆದಷ್ಟು ಕಡಿಮೆ ಪಾರಿಭಾಷಿಕಗಳೊಡನೆ ಪರಿಚಯ ಮಾಡಿಕೊಡುವುದು ಈ ಕೃತಿಯ ಉದ್ದೇಶ. ಕನ್ನಡ ಭಾಷೆಯನ್ನು ವಿಶೇಷ ಅಧ್ಯಯನದ ವಿಷಯವಾಗಿ ಆರಿಸಿಕೊಂಡ ವಿದ್ಯಾರ್ಥಿಗಳನ್ನು ಹಾಗೂ ಆಸಕ್ತ ವಿದ್ಯಾವಂತರನ್ನು ಗಮನದಲ್ಲಿಟ್ಟುಕೊಂಡು ಈ ಕೃತಿಯನ್ನು ಸಿದ್ಧಪಡಿಸಿದ್ದೇನೆ. ಕನ್ನಡದಲ್ಲಿ ಬಂದಿರುವ ಎಲ್ಲ ಬಗೆಯ ನಿಘಂಟುಗಳನ್ನು ಮೂಲ ಆಕರಗಳಾಗಿ ಬಳಸಿಕೊಂಡಿದ್ದೇನೆ. ಕನ್ನಡದಲ್ಲಿ ರಚನೆಯಾದ ನಿಘಂಟುಗಳ ವೈಧಾನಿಕತೆಯೂ ಹಾಗೂ ನಿಘಂಟುಗಳನ್ನು ಸಿದ್ಧಪಡಿಸುವರಿಗೆ ಮಾರ್ಗದರ್ಶನ ಸೂತ್ರಗಳೂ ಈ ಕೃತಿಯಲ್ಲಿ ಇವೆ ಎಂಬುದನ್ನು ಹೇಳಲೇಬೇಕಾಗಿದೆ. ಈವರೆಗೆ ಕೋಶರಚನೆಯ ಸಿದ್ಧಾಂತಗಳನ್ನೊಳಗೊಂಡ ಪೂರ್ಣ ಪ್ರಮಾಣದ ಗ್ರಂಥ ಕನ್ನಡದಲ್ಲಿ ಪ್ರಕಟಗೊಂಡಿಲ್ಲ. ಇಂತಹ ಪ್ರಯತ್ನವು ಇದು ಮೊದಲನೆಯದಾಗಿರುವುದರಿಂದ ನನ್ನ ಪುಸ್ತಕವು ಕನ್ನಡದ ಒಂದು ಕೊರತೆಯನ್ನು ಸ್ವಲ್ಪಮಟ್ಟಿಗಾದರೂ ನೀಗಿಸುವುದೆಂದು ಭಾವಿಸಿದ್ದೇನೆ.

ನನ್ನ ಅಧ್ಯಯನಕ್ಕೆ ಸ್ಫೂರ್ತಿ, ಪ್ರೇರಣೆಯಾಗಿರುವ ಶ್ರೇಷ್ಠ ವಿದ್ವಾಂಸ ಡಾ. ಎಂ. ಚಿದಾನಂದಮೂರ್ತಿ ಅವರನ್ನು ಸ್ಮರಿಸುವುದು ನನಗೆ ಪ್ರೀತಿಯೂ ಗೌರವದ ವಿಷಯವೂ ಆಗಿದೆ. ನಾನು ನನ್ನ ಬರಹಗಳನ್ನು ಬರೆಯುವ ಮೊದಲು ಅವರೊಡನೆ ಚರ್ಚಿಸುತ್ತೇನೆ. ‘ನೀನು ಹಿಡಿದಿರುವ ದಾರಿ ಚೆನ್ನಾಗಿದೆ, ಮುಂದುವರಿಸು’ ಎಂದಾಗ ನನಗಾಗುವ ಸಂತೋಷ ಅಷ್ಟಿಷ್ಟಲ್ಲ. ನನ್ನ ಅಧ್ಯಯನಕ್ಕೆ ಬಹುದೊಡ್ಡ ಶಕ್ತಿಯಾಗಿರುವ ಸಂಶೋಧನೆಯ ಆ ಕುಲಗುರುವಿನ ನೆನೆಪಾದಾಗಲೆಲ್ಲ ಕೃತಜ್ಞತೆಯಿಂದ ಕರಗಿ ಹೋಗುತ್ತೇನೆ.

ಈ ಗ್ರಂಥ ಪ್ರಕಟವಾಗುತ್ತಿರುವ ಸಂದರ್ಭದಲ್ಲಿ ಸಲಹೆ, ಮಾರ್ಗದರ್ಶನ ಮಾಡಿದ ಮಹನೀಯರನ್ನು ಸ್ಮರಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ವೃತ್ತಿಗಾಗಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದಾಗಿನಿಂದ ಡಾ. ಕೆ. ವಿ. ನಾರಾಯಣ ಮತ್ತು ಪ್ರೊ. ಎ. ವಿ. ನಾವಡ ಈ ಇಬ್ಬರು ಪ್ರಾಧ್ಯಾಪಕರ ಗರಡಿಯಲ್ಲಿ ನಾನು ಪಳಗಿದ್ದೇನೆ. ಅವರ ಸಂಪರ್ಕದ ಪ್ರಯೋಜನವನ್ನು ಪಡೆದುಕೊಂಡಿದ್ದೇನೆ. ನನ್ನ ವಿಚಾರಗಳು ಹರಿತವಾಗಲು ಅವರು ಕಾರಣರಾಗಿದ್ದಾರೆ ಅವರಿಗೆ ನನ್ನ ಅನಂತ ವಂದನೆಗಳು.

ಕೃತಿಯನ್ನು ಪ್ರಕಟಿಸಲು ಒಪ್ಪಿಗೆಯಿತ್ತ ಕುಲಪತಿಗಳಾದ ಡಾ. ಎಚ್‌. ಜೆ. ಲಕ್ಕಪ್ಪಗೌಡ ಅವರಿಗೆ ನನ್ನ ಅನಂತ ಕೃತಜ್ಞತೆಗಳು. ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ. ಚಿ. ಬೋರಲಿಂಗಯ್ಯ ಅವರಿಗೆ, ವಿಭಾಗದ ಮುಖ್ಯಸ್ಥರಾದ ಡಾ. ವಿರೇಶ ಬಡಿಗೇರ ಅವರಿಗೆ, ಮುಖಪುಟ ವಿನ್ಯಾಸ ರಚಿಸಿದ ಕೆ. ಕೆ. ಮಕಾಳಿ ಅವರಿಗೆ, ಸುಂದರವಾಗಿ ಅಕ್ಷರ ಸಂಯೋಜಿಸಿದ ವಿದ್ಯಾರಣ್ಯ ಗಣಕ ಕೇಂದ್ರದ ಶ್ರೀ ಜೆ. ಬಸವರಾಜ ಅವರಿಗೆ ನಾನು ತುಂಬು ಹೃದಯದಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಡಾ. ಎಸ್‌. ಎಸ್‌. ಅಂಗಡಿ