ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಪ್ರಜ್ಞೆಯನ್ನು ಎಚ್ಚರಿಸುವ, ವಿಕರಿಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡ ಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕ. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಅಕ್ಷರ ಒಂದು ಭಾಷೆಯ ಪ್ರಥಮ ಘಟಕ. ಆದರೂ ಅರ್ಥಪೂರ್ಣ ಘಟಕವಾಗಬೇಕಾದರೆ ಅದು ಪದರೂಪವನ್ನು ತಳೆಯಬೇಕು. ಆದ್ದರಿಂದ ಯಾವುದೇ ಭಾಷೆಯನ್ನು ಅರಿತುಕೊಳ್ಳಲು ಅಗತ್ಯವಾದ ಮೂಲ ಘಟಕ ಆ ಭಾಷೆಯಲ್ಲಿ ಪ್ರಯೋಗವಾಗುವ ಪದ. ಒಂದಕ್ಕಿಂತ ಹೆಚ್ಚು ಪದಗಳು ಸೇರಿ ಪದ ಸಮೂಹವಾಗುವವು. ಈ ಪದ ಸಮೂಹ ತನ್ನ ಮೂಲ ಪದಗಳ ಅರ್ಥದ ಸಂಬಂಧಗಳೊಡನೆ ಒಂದು ಪರಿಕಲ್ಪನೆಯನ್ನು ನಮ್ಮ ಮುಂದೆ ಇಡುತ್ತದೆ. ಮನುಷ್ಯನ ಅನುಭವ ಜ್ಞಾನ ಹೆಚ್ಚಾದಂತೆಲ್ಲ ಅವನು ತನ್ನ ಮನಸ್ಸಿನ ಭಾವನೆಗಳ ಅಥವಾ ತಾನು ಕಂಡ ಅಥವಾ ಕಂಡುಹಿಡಿದ ವಸ್ತುಗಳ ಸ್ವರೂಪವನ್ನು ಸ್ಪಷ್ಟಪಡಿಸುವುದಕ್ಕಾಗಿ ಪದಗಳ ಮೊರೆ ಹೋಗುತ್ತಾನೆ. ಹೀಗಾಗಿ ನಾಗರಿಕತೆ ಮುಂದುವರಿದಂತೆ, ಜನಜೀವನದ ವ್ಯಾಪ್ತಿ ವಿಶಾಲವಾದಂತೆ, ಜ್ಞಾನ ಚಿಂತನೆಗಳ ಹರವು ವ್ಯಾಪಕವಾದಂತೆ, ಹತ್ತಾರು, ನೂರಾರು, ಸಾವಿರಾರು ಪದಗಳು ಒಂದು ಭಾಷೆಯ ಮೂಲ ಪದಗಳ ಕೋಶದಲ್ಲಿ ಸ್ಥಾನ ಪಡೆಯುತ್ತವೆ. ಈ ಪದಗಳು ಈ ಭಾಷೆಯ ಮೂಲ ಅಕ್ಷರಗಳ ಸಂಯೋಜನೆಯಿಂದ ಸೃಷ್ಟಿಯಾಗಬಹುದು ಅಥವಾ ಬೇರೆ ಬೇರೆ ಭಾಷೆಗಳ ಬೇರೆ ಬೇರೆ ವಸ್ತು ಸಾಮಗ್ರಿಗಳ ಪರಿಚಯದಿಂದಾಗಿ ಆಯಾ ಭಾಷೆಗಳಿಂದ ಆಮದಾಗಿ ನಮ್ಮ ಮೂಲ ಪದಕೋಶದೊಡನೆ ಸೇರಿಕೊಂಡು ನಮ್ಮ ಪದ ಸಂಪತ್ತನ್ನು ಮತ್ತು ಅದು ಸೂಚಿಸುವ ಅರ್ಥ ವ್ಯಾಪ್ತಿಯನ್ನು ವಿಸ್ತಾರಗೊಳಿಸಬಹುದು. ಹೀಗಾಗಿ ಒಂದು ನಿರ್ದಿಷ್ಟ ಪದಕ್ಕೆ ಒಂದು ಅಥವಾ ಹೆಚ್ಚು ನಿರ್ದಿಷ್ಟ ಅರ್ಥಗಳು ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಒಂದು ಭಾಷೆಯ ವಿವಿಧ ಆಯಾಮಗಳನ್ನು ಅದು ಒಳಗೊಂಡಿರುವ ವಿಶಿಷ್ಟ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆಯಾ ಪದಗಳ ನಿರ್ದಿಷ್ಟ, ಸ್ಥೂಲ ಮತ್ತು ಸೂಕ್ಷ್ಮ ಅರ್ಥಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೀಗೆ ಪದಗಳು ಅವಿಸಿಟ್ಟುಕೊಂಡಿರುವ ಅರ್ಥಗಳನ್ನು ವಿವರಿಸುವ ಕೋಶವನ್ನು ಪದಕೋಶವೆನ್ನಲಾಗುತ್ತದೆ. ಇದಕ್ಕೆ ಪರ್ಯಾಯವಾಗಿ ನಿಘಂಟು ಎಂಬ ಪದ ಪ್ರಾಚೀನ ಕಾಲದಿಂದಲೂ ಬಳಕೆಯಾಗುತ್ತಾ ಬಂದಿದೆ. ಒಂದು ಭಾಷೆಯ ಮುಖ್ಯ ಪದಗಳ ಸಾಮಾನ್ಯ ಅರ್ಥಗಳನ್ನು ಉಲ್ಲೇಖಿಸುವ ಕೃತಿಯನ್ನು ಸಾಮಾನ್ಯ ನಿಘಂಟು ಎನ್ನುತ್ತಾರೆ. ನಿರ್ದಿಷ್ಟ ವಸ್ತು ಮತ್ತು ವಿಷಯಕ್ಕೆ ಸಂಬಂಧಿಸಿದ ವಿಷಯವಾರು ನಿಘಂಟುಗಳು ನಮ್ಮಲ್ಲಿವೆ. ಹಾಗೆಯೇ ಒಂದಕ್ಕಿಂತ ಹೆಚ್ಚು ಭಾಷೆಯ ಪದಗಳ ಅರ್ಥವನ್ನು ನೀಡುವ ದ್ವಿಭಾಷಿಕ ನಿಘಂಟು, ಬಹುಭಾಷಿಕ ನಿಘಂಟು, ಸಮಾನಾರ್ಥ ನಿಘಂಟು, ವಿರುದ್ಧಾರ್ಥ ನಿಘಂಟು ಮುಂತಾದ ರಚನೆಗಳಾಗಿವೆ. ವಿಷಯವಾರು ನಿಘಂಟುಗಳಿಗೆ ಸಂಬಂಧಿಸಿ ಛಂದೋನಿಘಂಟು, ಮೀಮಾಂಸೆ ನಿಘಂಟು, ಜನಪದ ನಿಘಂಟು, ವಿಜ್ಞಾನ ನಿಘಂಟು, ಆಡುಭಾಷೆಗಳ ನಿಘಂಟು, ಸಮಾಜಶಾಸ್ತ್ರ ನಿಘಂಟು ಇತ್ಯಾದಿಯಾಗಿ ಬಹು ಬಗೆಯ ನಿಘಂಟುಗಳು ನಮ್ಮಲ್ಲಿ ದೊರೆಯುತ್ತವೆ. ಇವೆಲ್ಲ ಒಂದು ನಿರ್ದಿಷ್ಟ ಜ್ಞಾನ ಶಾಖೆಯ ಪರಿಚಯವನ್ನು ಮಾಡಿಕೊಡುವ ವಿಶಿಷ್ಟ ಪದಗಳನ್ನು ಮತ್ತು ಅರ್ಥಗಳನ್ನು ಒಳಗೊಂಡಿರುತ್ತವೆ. ಪ್ರಬುದ್ಧವಾದ ಭಾಷೆ ಅಂದರೆ ವಿವಿಧ ಕಾಲಿಕ ವಿನ್ಯಾಸ ಮತ್ತು ಸ್ವರೂಪಗಳಿಂದಾಗಿ ಬಗೆಬಗೆಯ ರೂಪಗಳನ್ನು ಮತ್ತು ವ್ಯಾಪ್ತಿಯನ್ನು ಪಡೆಯುತ್ತಾ ಹೋಗುತ್ತವೆ. ಇಂಥ ನಿಘಂಟು ಒಂದು ಭಾಷೆಯ ಸ್ವರೂಪವ್ನನು, ಅದು ಒಳಗೊಳ್ಳಬಹುದಾದ ವಿವಿಧ ಕಲ್ಪನೆಗಳನ್ನು ನಮ್ಮ ಮುಂದಿಡುವ ಮೂಲಕ ಆ ಭಾಷಾ ಶರೀರದ ವಿವಿಧ ಆಕೃತಿಗಳನ್ನು, ಅರ್ಥಗಳನ್ನು ನೀಡುವುದರ ಜೊತೆಗೆ ಆ ಭಾಷೆಯ ಬೆಳವಣಿಗೆಯ ಎತ್ತರ ಬಿತ್ತರಗಳನ್ನು, ಅರ್ಥಗಳನ್ನು ನೀಡುವುದರ ಜೊತೆಗೆ ಆ ಭಾಷೆಯ ಬೆಳವಣಿಗೆಯ ಎತ್ತರ ಬಿತ್ತರಗಳನ್ನು, ಸಾಧನೆ ಸಿದ್ಧಿಗಳನ್ನು ಸಹ ಸಂಕೇತಿಸುವುದುಂಟು. ಕನ್ನಡದಲ್ಲೂ ಕಾಲದಿಂದ ಕಾಲಕ್ಕೆ ಭಾಷೆ ತಳೆದ ವಿವಿಧ ಸ್ವರೂಪಗಳಿಂದಾಗಿ ಹಳಗನ್ನಡ ನಿಘಂಟು, ನಡುಗನ್ನಡ ನಿಘಂಟು, ಹೊಸಗನ್ನಡ ನಿಘಂಟು ಈ ತೆರನಾದ ನಿಘಂಟುಗಳು ರಚನೆಯಾಗುತ್ತಿವೆ. ತಾಂತ್ರಿಕ ಪ್ರಗತಿಯಾದಂತೆ ವಿವಿಧ ತಾಂತ್ರಿಕ ನಿಘಂಟುಗಳೂ ಹುಟ್ಟಿಕೊಳ್ಳುತ್ತಿವೆ.

ಹೀಗೆ ನಿಘಂಟುವಿನ ಸ್ವರೂಪ ಮತ್ತು ಉದ್ದೇಶಗಳು ವಿಸ್ತಾರವಾದಂತೆ ಹೊಸ ನಿಘಂಟುಗಳ ಅವಶ್ಯಕತೆ ತಲೆದೋರುತ್ತದೆ. ಈ ನಿಘಂಟುಗಳ ನಿರ್ಮಾಣ ನಿಘಂಟುಕಾರನ ವುತ್ಪತ್ತಿ, ಲೋಕಾನುಭವ, ಭಾಷಾ ಪ್ರಭುತ್ವ, ಸೂಕ್ಷ್ಮ ಸಂವೇದನೆ, ಪದನಿರ್ಮಾಣ ಪ್ರತಿಭೆ, ವಿಷಯದ ಪ್ರಗಾಢ ಪರಿಜ್ಞಾನ ಮುಂತಾದ ಸಾಮರ್ಥ್ಯಗಳನ್ನು ಅವಲಂಬಿಸಿರುತ್ತದೆ. ಈ ಪದರಚನಾ ಕೌಶಲ ನಿರ್ದಿಷ್ಟ ಶಾಸ್ತ್ರೀಯ ಮಾರ್ಗವನ್ನು ಅನುಸರಿಸಿ ಅಭಿವ್ಯಕ್ತಗೊಳ್ಳಬೇಕಾಗುತ್ತದೆ. ಇದು ಅಪಾರ ಪರಿಶ್ರಮದಿಂದ, ಆಳವಾದ ಅಧ್ಯಯನದಿಂದ, ಸೂಕ್ಷ್ಮ ಪರಿಶೀಲನಾಶಕ್ತಿಯಿಂದ ಸಂಭವಿಸುತ್ತದೆ. ಈ ನಿಘಂಟು ರಚನೆ ಶುಷ್ಕ ಪಾಂಡಿತ್ಯದಿಂದ ಮಾತ್ರ ಸಾಧ್ಯವಾಗುವಂಥದಲ್ಲ. ಪದ ಪದಗಳ ನಾಡಿಯನ್ನು ಮಿಡಿದು ಅದರ ಅಂತರಂಗದ ನಾದ ಭಾವಗಳನ್ನು ಗ್ರಹಿಸಬಲ್ಲ ಸೃಜನಶೀಲ ಪ್ರತಿಭೆಯನ್ನೂ ಅದು ಅಪೇಕ್ಷಿಸುತ್ತದೆ. ಸುಲಭ ಸಾಧ್ಯವಲ್ಲದ ಇಂಥ ಕ್ಲಿಷ್ಟ ಹಾಗೂ ಆನಂದದಾಯಕ ಕ್ಷೇತ್ರಕ್ಕೆ ಪ್ರವೇಶಿಸುವವರ ಸಂಖ್ಯೆ ತುಂಬಾ ಕಡಿಮೆ. ಈ ನಿಘಂಟು ರಚನೆಯ ರಹಸ್ಯೆ ಮತ್ತು ಮಾರ್ಗಗಳನ್ನು ತಿಳಿಸುವ ಶಾಸ್ತ್ರೀಯ ಗ್ರಂಥದ ಕೊರತೆಯನ್ನು ಡಾ. ಎಸ್‌. ಎಸ್‌. ಅಂಗಡಿಯವರು ಈ ಕೃತಿಯ ಮೂಲಕ ನಿವಾರಿಸಲು ಪ್ರಯತ್ನಿಸುತ್ತಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಗಂಭೀರ ವಿದ್ವಾಂಸರಾದ ಇವರ ಈ ಕೃತಿ ಭಾಷೆಯ ಅನಂತ ವಿನ್ಯಾಸಗಳನ್ನು, ಅರ್ಥ ವೈವಿಧ್ಯತೆಯನ್ನು, ರೂಪ ವೈಶಿಷ್ಟ್ಯಗಳನ್ನು, ಹಳೆಯ – ಹೊಸ ದಾರಿಗಳನ್ನು, ಸೂಕ್ಷ್ಮಾತಿಸೂಕ್ಷ್ಮ ಅರ್ಥತರಂಗಗಳನ್ನು ಇವರು ಹೃದ್ಗತ ಬುದ್ಧಿಗತ ಮಾಡಿಕೊಂಡಿರುವರೆಂಬುದಕ್ಕೆ ಸಮರ್ಥ ಸಾಕ್ಷಿಯಾಗಿದ್ದು ಈ ದಾರಿಯಲ್ಲಿ ಹೆಚ್ಚಿನ ಸಾಧನೆ ಮಾಡುವವರಿಗೆ ಮಾರ್ಗದರ್ಶಿಯಾಗಿದೆ. ಇಂಥದೊಂದು ವಿಶಿಷ್ಟ ಕೃತಿಯನ್ನು ರಚಿಸಿದ ಡಾ. ಎಸ್‌. ಎಸ್‌. ಅಂಗಡಿಯವರಿಗೆ ಅಭಿನಂದನೆಗಳು.

ಡಾ. ಎಚ್‌. ಜೆ. ಲಕ್ಕಪ್ಪಗೌಡ
ಕುಲಪತಿಯವರು