ಕೋಶಕಾರ ಸಮಕಾಲೀನ ಸಮುದಾಯದೊಡನೆ ಅರ್ಥಪೂರ್ಣ ಸಂಬಂಧ ಸೃಷ್ಟಿಸಿಕೊಂಡರೆ ಆಗ ಅವನ ಕೋಶಕ್ಕೆ ಸಾಂಸ್ಕೃತಿಕ ಮಹತ್ವ ಪ್ರಾಪ್ತವಾಗುತ್ತದೆ. ಚಲನಶೀಲವಾದ ಭಾಷೆಯ ಸ್ವರೂಪವನ್ನು ಕೋಶಕಾರ ಅರಿತಿರಬೇಕಾಗುತ್ತದೆ. ಕೋಶದಲ್ಲಿ ಪದಗಳ ವ್ಯಾಕರಣ ರಚನೆಯ ಜೊತೆಗೆ ಅವುಗಳ ಸಾಮಾಜಿಕ ಅಂಶಗಳನ್ನು ಚರ್ಚಿಸಬೇಕು. ಏಕೆಂದರೆ ಪ್ರತಿಯೊಬ್ಬ ಭಾಷಿಕನು ತಾನು ವಾಸಿಸುವ ಭಾಷಾ ಸಮುದಾಯದ ಭಾಗವಾಗಿ ಆ ಸಮುದಾಯದ ಭಾಷಾ ಪ್ರಬೇಧವನ್ನೋ ವ್ಯಕ್ತಿ ಭಾಷೆಯನ್ನೋ ಬಳಸುತ್ತಿರುತ್ತಾನೆ. ಅಂತಹ ಸಂದರ್ಭದಲ್ಲಿ ಕೋಶಕಾರ ಭಾಷಾ ಸಮುದಾಯದಲ್ಲಿಯ ಪದ, ಪದಪುಂಜ, ವಾಕ್ಯಭಾಗ, ನುಡಿಗಟ್ಟು, ಗಾದೆ ಮುಂತಾದ ವಾಗ್ರೂಢಿಗಳ ಅರ್ಥ ವಿಶೇಷತೆಗಳನ್ನು ವಿವರಿಸಬೇಕು. ಇದರಿಂದ ಭಾಷಿಕ ರೂಪಗಳಿಗೆ ಇರುವ ಸಾಮಾಜಿಕ ಚಹರೆ ಅಭಿವ್ಯಕ್ತವಾಗುತ್ತದೆ.

ಪದಗಳಿಗೆ ಅರ್ಥ ಕೊಡುವುದು ಮಾತ್ರ ಕೋಶಕಾರನ ಉದ್ದೇಶವಲ್ಲ. ಪದದ ಅರ್ಥ ಹುಡುಕುತ್ತ ಅದರ ಬೇರೆ – ಕಾಂಡ – ಇಗುರು ಇತ್ಯಾದಿಗಳ ಮೂಲವನ್ನು ಶೋಧಿಸಿ ಬಳಕೆಯಲ್ಲಿ ಅದು ಹೇಗೆಲ್ಲ ಬದಲಾವಣೆಗೆ ಒಳಗಾಗಿದೆ ಎಂಬುದನ್ನು ಪತ್ತೆಮಾಡಿ ಅದರ ಸ್ವರೂಪವನ್ನು ಗುರುತಿಸಬೇಕು. ಅಂತಹ ಪ್ರಯತ್ನ ಕನ್ನಡದಲ್ಲಿ ತಕ್ಕಮಟ್ಟಿಗೆ ನಡೆದಿದೆ. ಪಾ. ವೆಂ. ಆಚಾರ್ಯರ ‘ಪದಾರ್ಥ ಚಿಂತಾಮಣಿ’, ಜಿ. ವೆಂಕಟಸುಬ್ಬಯ್ಯ ಅವರ ‘ಇಗೋ ಕನ್ನಡ’ ಇದಕ್ಕೆ ಉತ್ತಮ ನಿದರ್ಶನಗಳಾಗಿವೆ. ಇವರ ಕೋಶದಲ್ಲಿ ಪ್ರತಿಯೊಂದು ಪದವನ್ನು ಅದರ ಬಳಕೆಯ ಸಾಮಾಜಿಕ ಆಯಾಮವನ್ನು ಕುರಿತು ವಿವೇಚಿಸಲಾಗಿದೆ. ಕೋಶಕಾರರು ಸಮಕಾಲೀನ ಸಮಾಜದೊಡನೆ ಅರ್ಥಪೂರ್ಣ ಸಂಬಂಧ ಸೃಷ್ಟಿಸಿಕೊಳ್ಳಲು ಹವಣಿಸುತ್ತಾರೆ.

ಆದ್ದರಿಂದಲೇ ಅವರ ಈ ಕೋಶಗಳಿಗೆ ಸಾಮಾಜಿಕ ಮಹತ್ವ ಪ್ರಾಪ್ತಿಯಾಗಿದೆ. ವಿದ್ವತ್ತು, ಪಾಂಡಿತ್ಯ ಸಮಕಾಲೀನ ಸಮಾಜಕ್ಕೆ ಹೇಗೆ ಪ್ರಸ್ತುತವಾಗಬೇಕೆಂಬುದಕ್ಕೆ ಪಾ. ವೆಂ. ಮತ್ತು ಜಿ. ವೆಂ. ಅವರ ನಿಘಂಟುಗಳು ನಮಗೆ ಮುಖ್ಯ ಮಾದರಿಯಾಗಿವೆ. ಇವರ ಕೋಶಗಳಲ್ಲಿಯ ನಮೂದುಗಳು ಆಸಕ್ತ ವಿದ್ವಾಂಸರಿಗೆ, ಅಧ್ಯಾಪಕ – ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಓದುಗರಿಗೆ ನೆರವಾಗುತ್ತವೆ. ಉದಾಹರಣೆಗೆ: ಕೆಲವು ನಮೂದುಗಳ ವಿವರಣೆಯನ್ನು ನೋಡಬಹುದು.

ದಡ್ಡ – ದಡ್ಡ ಎಂದರೆ ಮಂದಮತಿ. ಈ ಶಬ್ದಕ್ಕೆ ಪರಿಷತ್‌ಕನ್ನಡ ನಿಘಂಟು ದೂರಗಾಮಿ ನಿಷ್ಪತ್ತಿಯನ್ನು ಕೊಟ್ಟಿಲ್ಲ; ತುಳು, ಕೊಡವ ಭಾಷೆಗಳಲ್ಲಿಯೂ ಅದು ಇರುವುದನ್ನು ಸೂಚಿಸಿ ಕೈ ಬಿಟ್ಟಿದೆ. ಇದು ಪ್ರಾಕೃತದ ಜಡ್ಡದಿಂದ ಬಂತು. ಜಡ್ಡ ಸಂಸ್ಕೃತದ ಜಡದಿಂದಲೂ ಅದು ವೈದಿಕ ಸಂಸ್ಕೃತದ ಜಳ್ಹುವಿನಿಂದಲೂ ಬಂತು. ಅದರಾಚೆಗೆ ಲ್ಯಾಟಿನ್ನಿನಲ್ಲಿ ಗೇಲು (Gelu) ಕೂಡ ಅದೇ ಪೀಳಿಗೆಯದು. ಇಂಗ್ಲಿಷ್‌ನ ಡಲ್‌(Dull) ಕೂಡ ದಡ್ಡನಿಗೇ ಸಂಬಂಧಿಸಿರಬಹುದು. – ಪಾ. ವೆಂ. ಆಚಾರ್ಯ, ಪದಾರ್ಥ ಚಿಂತಾಮಣಿ, (೧೯೯೮) ಪು. ೧೯೦.

ಪಗಾರ – ಪಗಾರ ಎಂಬ ಸಂಬಳ, ಕೆಲಸ ಮಾಡುವವರಿಗೆ ನಿಶ್ಚಿತ ಅವಧಿಗಾಗಿ ಗೊತ್ತುಪಡಿಸಿಕೊಂಡ ಪ್ರತಿಫಲ. ಕೊಡುವಿಕೆ ಎಂಬರ್ಥದಲ್ಲಿ ವಿಶೇಷತಃ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿರುವಂಥಾದ್ದು. ತಿಂಗಳ ಪಗಾರ, ವಾರದ ಪಗಾರ ಇತ್ಯಾದಿ. ಇದು ಕನ್ನಡಕ್ಕೆ ಬಂದದ್ದು ಮರಾಠಿಯಿಂದ ಎಂದು ಪ್ರತೀತ.

ಮರಾಠಿಯಲ್ಲಿ ಈ ಶಬ್ದ ಇರುವುದು ನಿಜ. ಆದರೆ ಶೋಧಿಸಿದರೆ ಅದರ ಮೂಲ ಪೋರ್ಚುಗೀಸ್‌ಅದರಲ್ಲಿ pagar ಎಂದರೆ ಹಣಸಂದಾಯ, ಸಂಬಳ pagar ಎಂದರೆ ಹಣ ಸಲ್ಲಿಸು. ಇಂಗ್ಲಿಷಿನ Pay ಮತ್ತು ಪೋರ್ಚುಗೀಸಿನ ಈ paga (pagar) ಎರಡೂ ಲ್ಯಾಟಿನ್ನಿನ Pacare = ಸಮಾಧಾನಪಡಿಸು, ಶಾಂತಗೊಳಿಸು ಎಂಬ ಧಾತುವಿನಿಂದ ಹೊರಟವುಗಳು. ಬಾಕಿಯನ್ನು ತೀರಿಸಿದರೆ ಪಡೆದವನಿಗೆ ಸಮಾಧಾನ ಅಲ್ಲವೇ? ಗೋವೆಯನ್ನು ಪೋರ್ಚುಗೀಸರು ಗೆದ್ದುಕೊಂಡ ಮೇಲೆ ನೆರೆಯ ಕನ್ನಡಕ್ಕೂ ಮರಾಠಿಗೂ ಈ ಶಬ್ದ ಪ್ರತ್ಯೇಕವಾಗಿಯೇ ಹಬ್ಬಿರಬಹುದು. – (ಪಾ. ವೆಂ. ಆಚಾರ್ಯ, ಅದೇ ಕೃತಿ, ಪು. ೨೭೯)

ಯೆಕ್ಕುಟ್ಟ ಹೋಗ್ಲಿ – ಇದು ಸರಿಯಾಗಿ ಹೇಳಿದರೆ ಎಕ್ಕಹುಟ್ಟಿ ಹೋಗಲಿ ಎಂದಾಗುತ್ತದೆ. ಎಕ್ಕ ಎಂಬುದು ಒಂದು ಗಿಡ. ಅದು ಬೆಳೆಸುವ ಗಿಡವಲ್ಲ. ತಾನೆ ತಾನಾಗಿ ಪಾಳು ಭೂಮಿಯಲ್ಲಿ ಬೆಳೆಯುತ್ತದೆ. ಒಬ್ಬರ ಮನೆ ಅಥವಾ ಜಮೀನು ಎಕ್ಕಹುಟ್ಟಿ ಹೋಗಲಿ ಎಂದರೆ ಹಾಳು ಬೀಳಲಿ ಎಂದರ್ಥ. ಸರ್ವನಾಶವಾಗಲಿ ಎಂಬ ಅರ್ಥದ ಬೈಗಳು. ಇದನ್ನು ಹೇಳಬೇಕಾದರೆ ಅಂಥವರಿಗೆ ತುಂಬಾ ಕೋಪ ಬಂದಿರಬೇಕು. – (ಜಿ. ವೆಂಕಟಸುಬ್ಬಯ್ಯ, ‘ಇಗೋ ಕನ್ನಡ’ ನಿಘಂಟು, ೧೯೯೬, ಪು. ೩೩೮)

ಬ್ಲಾಕ್‌ಮೇಲ್‌ – ಎಂಬುದು ಇಂಗ್ಲಿಷಿನ Black mail ಎಂಬ ಶಬ್ದ. ಇದಕ್ಕೆ ‘ಹೆದರಿ ಹಣ ಕೀಳುವುದು’ ಎಂದು ಮುಖ್ಯವಾದ ಅರ್ಥ. ಒಬ್ಬ ವ್ಯಕ್ತಿಯೂ ಏನಾದರೂ ಅಪರಾಧವನ್ನೋ ಅನ್ಯಾಯವನ್ನೋ ಅನೈತಿಕ ಕಾರ್ಯವನ್ನೋ ಮಾಡಿದ್ದರೆ ಅದನ್ನು ಕಣ್ಣಾರೆ ಕಂಡು ಪ್ರಕಟಿಸುವ ಆಧಾರವುಳ್ಳದ್ದು. ಆ ಪ್ರಕಟಣೆಯ ಹೆದರಿಕೆಯನ್ನು ಒಡ್ಡಿ ಅಂಥವರಿಂದ ತನ್ನ ಕೆಲಸವನ್ನು ಸಾಧಿಸಿಕೊಳ್ಳುವುದು. Black ಎಂಬುದು ಕಳಂಕಕ್ಕೆ ಹೊಂದುತ್ತದೆ. Mail ಎಂಬುದು ಹಿಂದೆ, ಕಪ್ಪಕಾಣಿಕೆಯೆಂಬ ಅರ್ಥವನ್ನು ಹೊಂದಿತ್ತಂತೆ ಆ ಅರ್ಥ ಈ ಶಬ್ದದಲ್ಲಿ ಉಳಿದುಬಂದಿದೆ. ಅದು Middle English ಶಬ್ದ. – (ಜಿ. ವೆಂಕಟಸುಬ್ಬಯ್ಯ, ಅದೇ ಕೃತಿ ಪು. ೩೦೪)

ಕನ್ನಡ ಓದುಗರ ಶಬ್ದ ಶಕ್ತಿಯನ್ನು ಬೆಳೆಸುವಲ್ಲಿ ನಿತ್ಯ ಬಳಕೆಯಲ್ಲಿರುವ ಶಬ್ದಗಳ ಅರ್ಥ ಸ್ವರೂಪವನ್ನು ಅರಿಯುವಲ್ಲಿ ಇಂತಹ ಸಾಮಾಜಿಕ ನಿಘಂಟುಗಳು ತುಂಬ ನೆರವಾಗುತ್ತವೆ. ಪಾ. ವೆಂ. ಅವರು ಕೊಡುವ ಪರಂಗಿ ರೋಗ, ಪಂಗನಾಮ, ಪೈಸಾ, ಜಿಲೇಬಿ, ತುಪ್ಪ ಇಂತಹ ರೂಪಗಳು. ಜಿ. ವೆಂ. ಅವರು ಕೊಡುವ ಪಂಚಸೂನ, ಮೀಸೆ ಹೊತ್ತ ಗಂಡಸು, ಬೆಂಕಿಗೆ ಜ್ವರಬರುವ ಮಾತು, ಬೆಂಡೆತ್ತು ಇಂತಹ ಪ್ರಯೋಗಗಳನ್ನು ಓದುವುದೇ ಸೊಗಸು. ಪ್ರತಿ ನಮೂದುಗಳ ವಿವರಣೆಗೆ ಕಾವ್ಯ, ಶಾಸನ, ಆಡುನುಡಿಯ ಮಾಹಿತಿಗಳನ್ನು ಬಳಸಿ, ವ್ಯಾಖ್ಯಾನಿಸುತ್ತಾರೆ. ಆ ಪದಗಳ ಮೂಲಾರ್ಥ ರೂಢಿಯಾರ್ಥ ಅನ್ಯದೇಶ್ಯ ಶಬ್ದವಾಗಿದ್ದರೆ ಅದರ ವಿವಿಧ ಸ್ವರೂಪ, ಅದು ಕನ್ನಡದಲ್ಲಿ ಪಡೆದುಕೊಳ್ಳುವ ಅರ್ಥ ಹಾಗೂ ಅದರ ಸಾಮಾಜಿಕ ಆಯಾಮವನ್ನು ಅನುಲಕ್ಷಿಸಿ ವಿವೇಚಿಸುತ್ತಾರೆ. ಶಬ್ದ ಅರ್ಥ, ಗಾದೆಯ ವಿಸ್ತರಣೆ, ಪದ್ಯದ ಭಾವಾರ್ಥ, ಪದ್ಯದ ಅನ್ವಯ ಕ್ರಮ, ನುಡಿಗಟ್ಟಿನ ಬಳಕೆಯ ಹಿನ್ನೆಲೆ – ಹೀಗೆ ಅನೇಕ ಬಗೆಯ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದರಿಂದ ಪದಗಳ ಅರ್ಥ ಸ್ವರೂಪವನ್ನು ಬಿಚ್ಚಿ ಓದುಗರ ತಿಳಿವಳಿಕೆಯನ್ನು ವಿಸ್ತರಿಸಿದಂತಾಗುತ್ತದೆ. ಸಮುದಾಯದಲ್ಲಿ ಬಳಕೆಯಾಗುವ ಕೆಲವು ಪದಗಳು ಸಂಸ್ಕೃತಿ ಪರಿವೇಷವನ್ನು ಹೊಂದಿರುತ್ತವೆ.

‘ಬಳೆ’ ಎಂಬುದು ವಲಯದ ತದ್ಭವ. ಇದರ ಶಬ್ದಶಃ ಅರ್ಥ ವರ್ತುಲ; ವೃತ್ತಮಂಡಲ. ಇದರ ಸಾಂಸ್ಕೃತಿಕ ಅರ್ಥ ಸ್ತ್ರೀಯರ ಸೌಭಾಗ್ಯದ ಲಕ್ಷಣವೆಂದು ಕೈಗಳಿಗೆ ಹಾಕುವ ವರ್ತುಲಾಕಾರದ ಆಭರಣ. ಬಳೆಗಳಲ್ಲಿ ಗಾಜಿನ ಬಳೆಗಳಿಗೆ ಹೆಚ್ಚು ಪ್ರಾಶಸ್ತ್ಯ. ಮದುವೆಗೆ ಮುನ್ನ ಸಾಮಾನ್ಯವಾಗಿ ಎಲ್ಲ ಜನಾಂಗಗಳಲ್ಲಿಯೂ ‘ಬಳೆ ತೊಡಿಸುವ ಶಾಸ್ತ್ರ’ ಮಾಡುತ್ತಾರೆ. ಅದು ಮಂಗಲ ದ್ಯೋತಕ. ಇದರಂತೆ ಜಂಗಮ, ಜೋಕುಮಾರ, ತಾಳಿ, ದೀಪಾವಳಿ, ಬಲಿ, ಭೂತ, ಮಹಾನವಮಿ, ಮೈಲಾರ, ಮೈಲಿಗೆ, ವೀಳೆ, ಸೀಮಂತ, ಹರಕೆ – ಇಂತಹ ಪದಗಳಿಗೆ ಸಂಸ್ಕೃತಿ ವಿಶಿಷ್ಟ ಅರ್ಥವಿರುತ್ತದೆ. ಅವು ಬಳಕೆಯ ಸಾಮಾಜಿಕ ಆಯಾಮವನ್ನು ಹೊಂದಿರುತ್ತವೆ. ಭಾಷೆಯ ಪದಕೋಶದ ಬೆಳವಣಿಗೆಯ ದೃಷ್ಟಿಯಿಂದ ಹಾಗೂ ಕನ್ನಡಿಗರ ಅರಿವಿನ ಪರಿಧಿಯ ಹಿಗ್ಗುವಿಕೆಗೆ ಪದ ಬಳಕೆಯ ಸಮಾಜಿಕ ವಲಯವು ಮಹತ್ವದ ಪಾತ್ರ ವಹಿಸುತ್ತದೆ. ಕನ್ನಡ ಭಾಷೆಯಲ್ಲಿ ವಿಶಿಷ್ಟಾರ್ಥ ವಾಗ್ರೂಢಿಗಳು ಬಳಕೆಯಲ್ಲಿವೆ. ಅದನ್ನು ಹೀಗೂ ಹೇಳಬಹುದು. ಒಂದು ಪದವನ್ನು ಅಥವಾ ಪದಸಮುದಾಯವನ್ನು ಅಲಂಕಾರಿಕವಾಗಿಯೋ ಲಾಕ್ಷಣಿಕವಾಗಿಯೋ ಬಳಸಿ ಮಾಡಿಕೊಂಡ ಅನೇಕ ತರದ ನುಡಿಗಟ್ಟುಗಳಿವೆ. ವಿಶೇಷವಾಗಿ ಆಡುನುಡಿಗಳಲ್ಲಿ ಅವುಗಳ ಬಳಕೆ ಹೆಚ್ಚು.

ಕುತ್ತಿಗೆ ಕೊಯ್ಯು – ಮೋಸ ಮಾಡು, ವಿಶ್ವಾಸ ಘಾತಮಾಡು
ಎದೆತಟ್ಟಿ ಹೇಳು – ಧೈರ್ಯದಿಂದ ಹೇಳು, ಖಚಿತವಾಗಿ ಹೇಳು
ತಲೆತೆಗೆ – ಕ್ಷಾರಮಾಡು, ಜೀವ ತೆಗೆ
ತಿರುಗಾಲು ತಿಪ್ಪ – ಅಲೆದಾಡುವವ

ಈ ವಿಧದ ಪ್ರಯೋಗ ವಿಶೇಷಗಳಿಂದ ಭಾಷೆಯ ಶೈಲಿಗೆ ಒಂದು ಚಾಚು, ಒಂದು ರೀತಿಯ ಮೊನಚು ಉಂಟಾಗುತ್ತದೆ. ಭಾವದಲ್ಲೂ ಆಳ ಹರಹುಗಳುಂಟಾಗುತ್ತವೆ. ಇಂತಹ ಪದಗಳು ಭಾಷಿಕ ಕ್ರಿಯೆಯನ್ನು ವಿಶ್ಲೇಷಿಸುತ್ತವೆ.

ವೃತ್ತಿ ಪದಗಳು ಆಯಾ ವೃತ್ತಿ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಉದಾಹರಣೆಗೆ ಕುಂಬಾರ ವೃತ್ತಿಗೆ ಸಂಬಂಧಿಸಿದ ಆವಿಗೆ, ತಿಗರಿ, ಸೊಳುವು, ಇಸಾಳಿ ಇಂತಹ ಪದಗಳ ಬಳಕೆಯ ಹಿಂದೆ ಬಲವಾದ ಸಾಮಾಜಿಕ ಸಂಗತಿಗಳು ಕೆಲಸ ಮಾಡುತ್ತವೆ. ಕುಂಬಾರಿಕೆಯ ವೃತ್ತಿಯಲ್ಲಿ ಬಳಸುವ ಕೆಲವು ಪದಪುಂಜಗಳು ಭಾಷಾ ಬಳಕೆಯ ಬೇರೆ ಬೇರೆ ಸಾಮಾಜಿಕ ವರ್ಗಗಳಲ್ಲಿ ವಿಶಿಷ್ಟ ಅರ್ಥವನ್ನು ಕೊಡುತ್ತವೆ. ಇದನ್ನು ಹೀಗೂ ಹೇಳಬಹುದು. ಪದಗಳು ವಾಚ್ಯಾರ್ಥ ವಲಯದಿಂದ ಲಕ್ಷಣಾರ್ಥ ವಲಯಕ್ಕೆ ಚಲಿಸುತ್ತವೆ.

ಗಡಿಗೆ ಒಡೆಯಿತು
ಹಂಚು ಬಿತ್ತು
 ಇವು ಕೆಲವು ಸಂದರ್ಭಗಳಲ್ಲಿ ಅಶುಭವನ್ನು ಸೂಚಿಸುತ್ತವೆ.
ಐರಾಣಿ ಬಂತು
ಗುಗ್ಗಳ ಹಂಚು
 ಇಂತಹ ಪದಪುಂಜಗಳು ಶುಭದ ಸಂಕೇತಗಳಾಗಿವೆ.
ಹಸಿಗಡಿಗೆ
ಗಡಿಗೆ ಸುಟ್ಟಿಲ್ಲ
 ಇಂತಹ ಪದಗಳು ಬುದ್ದಿಹೀನ, ದಡ್ಡ ಎಂಬರ್ಥವನ್ನು ಕೊಡುತ್ತವೆ.
ತಿಗರಿಗೂಟ ಅಗಲ ಹಂಚ ಬೂದಿ ಚೆಲ್ಲು  ಇವು ವ್ಯಂಗ್ಯಾರ್ಥವನ್ನು ಕೊಡುತ್ತವೆ.

ಹೀಗೆ ಪದಗಳು ಒಳಚಲನೆಗೆ ಒಳಗಾಗುತ್ತವೆ. ಅಂತಹ ಅರ್ಥ ಸಾಧ್ಯತೆಗಳು ಭಾಷಿಕರು ಬದುಕುತ್ತಿರುವ ಸಾಂಸ್ಕೃತಿಕ ಸಂದರ್ಭದಲ್ಲಿ ಅಡಕವಾಗಿರುತ್ತವೆ. ಜನಜೀವನದ ಭಾಗವಾಗಿ ಬೆಳೆದುಬಂದಿರುವ ಪದಗಳು, ಪದಪುಂಜಗಳು ನಮ್ಮ ಸಾಂಸ್ಕೃತಿಕ ನೆನಪಿನ ಭಾಗವಾಗುತ್ತವೆ. ಕನ್ನಡ ಪದಕೋಶದಲ್ಲಿ ನಡೆಯುವ ಪದಗಳ ಬಳಕೆಯ ಅರ್ಥ ವಲಯವನ್ನು ಕುರಿತು ಅಧ್ಯಯನ ನಡೆಯಬೇಕಾಗಿದೆ.