ಬದಲಾವಣೆ ಪ್ರಕೃತಿಯ ನಿಯಮ. ಭಾಷಾಸಮುದಾಯವೂ ಈ ನಿಯಮಕ್ಕೆ ಹೊರತಾಗಿಲ್ಲ. ಮಾನವ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಸಮಾಜ ರಚನೆಯಲ್ಲಿ, ವ್ಯವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳು ಸಾಮಾಜಿಕ ಬದಲಾವಣೆಗಳೆನಿಸಿಕೊಳ್ಳುತ್ತವೆ. ಅದರಂತೆ ಒಂದು ಅಧ್ಯಯನ ಕ್ಷೇತ್ರದಲ್ಲಿ ಆಧುನಿಕ ವಿಚಾರಧಾರೆಗಳ ಮೂಲಕ ನಡೆಯುವ ಬದಲಾವಣೆ ಇತರ ಕ್ಷೇತ್ರಗಳಿಗೂ ವ್ಯಾಪಿಸಿ ಕೊನೆಗೆ ಇಡೀ ಸಮಾಜಕ್ಕೇ ವ್ಯಾಪಿಸಿಕೊಳ್ಳುವುದುಂಟು. ನಿಘಂಟು ಕ್ಷೇತ್ರವೂ ಇದಕ್ಕೆ ಹೊರತಲ್ಲ. ನಿಘಂಟು ಸಿದ್ಧತೆಯಲ್ಲಿ ಕಂಪ್ಯೂಟರ್‌ವನ್ನು ಬಳಸಿದರೆ ಕೋಶರಚನೆಯಲ್ಲಿ ಅದರಿಂದಾಗುವ ಪ್ರಯೋಜನವನ್ನು ಕುರಿತು ಈ ಸಂಪ್ರಬಂದದಲ್ಲಿ ವಿವೇಚಿಸಲಾಗಿದೆ. ಭಾಷೆಯ ಬೆಳವಣಿಗೆಯಲ್ಲಿ ಕೋಶಗಳು ಪ್ರಮುಖ ಪಾತ್ರವಹಿಸುತ್ತವೆ. ಅವು ಕೇವಲ ಶಬ್ದಾರ್ಥಗಳ ನಿರ್ವಚನ ಮಾತ್ರವಲ್ಲ, ಶಬ್ದಗಳ ಚರಿತ್ರೆ ಮತ್ತು ಅವುಗಳೆ ಸಾಮಾಜಿಕ ಆಯಾಮವನ್ನೊಳಗೊಂಡ ಸಾಂಸ್ಕೃತಿಕ ಪಠ್ಯಗಳಾಗಿವೆ. ಒಂದು ಭಾಷಾ ಸಮುದಾಯದ ಮೂಲರೂಪ, ಸಮಸ್ತರೂಪಗಳನ್ನು ಸಂಗ್ರಹಿಸಿ, ವ್ಯವಸ್ಥಿತವಾಗಿ ವರ್ಗೀಕರಿಸಿ ಅವುಗಳ ಉಚ್ಚಾರಣೆ, ವ್ಯಾಕರಣವರ್ಗ, ಅರ್ಥ, ಪ್ರಯೋಗ, ವುತ್ಪತ್ತಿ ಇತ್ಯಾದಿಗಳನ್ನು ಉಲ್ಲೇಖಿಸಿ ಪದಗಳನ್ನು ಅಕಾರಾದಿಯಾಗಿ ಸಂಯೋಜಿಸಿರುವ ಕೃತಿಯನ್ನು ಸ್ಥೂಲವಾಗಿ ನಿಘಂಟು ಎಂದು ಕರೆಯಬಹುದು.

ವೈಜ್ಞಾನಿಕವಾಗಿ ನಿಘಂಟನ್ನು ರಚಿಸುವಾಗ ಕೋಶಕಾರನು ಮೂರು ವಿಧಾನಗಳನ್ನು ಅನುಸರಿಸಬೇಕು. ಕ್ಷೇತ್ರಕಾರ್ಯ, ನಮೂದುಗಳ ಆಯ್ಕೆ ಮತ್ತು ನಮೂದುಗಳ ರಚನೆ. ನಿಘಂಟು ರಚನೆಯನ್ನು ಗಮನದಲ್ಲಿಟ್ಟುಕೊಂಡು ಕೋಶಕಾರ ಕ್ಷೇತ್ರಕಾರ್ಯ ಮಾಡಿ, ಭಾಷಿಕಸಾಮಗ್ರಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಕ್ಷೇತ್ರಕಾರ್ಯ ಮಾಡುವಾಗ ತಾನು ಸಿದ್ಧಪಡಿಸುವ ಕೋಶದ ಸ್ವರೂಪವನ್ನು ಅವನು ಲಕ್ಷದಲ್ಲಿಟ್ಟುಕೊಳ್ಳಬೇಕು. ಪಟ್ಟಿಕೆಗಳನ್ನು ಮಾಡಿಕೊಂಡು ಪ್ರತಿಯೊಂದು ಮುಖ್ಯ ನಮೂದಿಗೂ ಅದರ ಸ್ವರೂಪವನ್ನು ಅನುಲಕ್ಷಿಸಿ ಅರ್ಥ ಕೊಡಬೇಕು. ಆದರೆ ಒಬ್ಬ ವ್ಯಕ್ತಿ ಇಲ್ಲವೆ ಒಂದು ಸಂಸ್ಥೆ ಒಂದು ನಿಘಂಟನ್ನು ಸಿದ್ಧಪಡಿಸಬೇಕಾದರೆ ಅದಕ್ಕೆ ಒಬ್ಬ ವ್ಯಕ್ತಿ ಇಲ್ಲವೆ ಒಂದು ಸಂಸ್ಥೆ ಒಂದು ನಿಘಂಟನ್ನು ಸಿದ್ಧಪಡಿಸಬೇಕಾದರೆ ಅದಕ್ಕೆ ಅಧಿಕವಾದ ವೇಳೆ, ವೆಚ್ಚ ಮತ್ತು ಶ್ರಮ ಬೇಕಾಗುತ್ತದೆ. ಇದನ್ನು ಉಳಿಸಲು ಹಾಗೂ ಅಲ್ಪಸಮಯದಲ್ಲಿ ಅಧಿಕ ಕೆಲಸ ಮಾಡಲು ಈಗ ಲಭ್ಯವಿರುವ ಕಂಪ್ಯೂಟರ್‌ತಂತ್ರಜ್ಞಾನವನ್ನು ಕೋಶರಚನೆಯಲ್ಲಿ ಬಳಸುವು ಹೆಚ್ಚು ಸಾಧುವಾದುದಾಗಿದೆ. ಅದರಂತೆ ವರ್ಣನಾತ್ಮಕ ಭಾಷಾವಿಜ್ಞಾನದ ತತ್ವಗಳ ಹಿನ್ನೆಲೆಯಲ್ಲಿ ಮುಖ್ಯ ನಮೂದುಗಳನ್ನು, ಉಪ ನಮೂದುಗಳನ್ನು, ಸಾಧಿತ ರೂಪಗಳನ್ನು ಸಂಯೋಜಿಸುವಾಗಲೂ ಕಂಪ್ಯೂಟರದ ನೆರವನ್ನು ಪಡೆಯಬಹುದು.

ಕಂಪ್ಯೂಟರ್‌ಎಂದರೇನು?

ಕಂಪ್ಯೂಟರ್‌ಎಂಬುದು ವಿದ್ಯುನ್ಮಾನ ಉಪಕರಣ. ಕೊಟ್ಟಿರುವ ಇನ್‌ಪುಟ್‌ಗಳ ಮೇಲೆ ಸಂಚಯಿತ ಕಾರ್ಯಕ್ರಮದ ನಿಯಂತ್ರಣಕೊಳಪಟ್ಟು ನಿಯೋಜಿತ ಕ್ರಮದಲ್ಲಿ ದತ್ತಾಂಶಗಳನ್ನು ಸಂಸ್ಕರಿಸಿ ನಮಗೆ ಬೇಕಾದ ಫಲಿತವನ್ನು ಅಥವಾ ಮಾಹಿತಿಯನ್ನು ಒದಗಿಸಬಲ್ಲ ವಿದ್ಯುನ್ಮಾನ ಯಂತ್ರವೇ ಕಂಪ್ಯೂಟರ್‌. ಕಂಪ್ಯೂಟರ್‌ದಲ್ಲಿ ದತ್ತಾಂಶ ಅಂಗ (Input device), ಸ್ಮರಣಾಂಗ (Memory Unit), ಕೇಂದ್ರೀಯ ಸಂಸ್ಕರಣಾಂಗ (Central Processing Unit) ಮತ್ತು ನಿರ್ಗಮನಾಂಗ (Output device)ಗಳಿರುತ್ತವೆ. ಕಂಪ್ಯೂಟರ್‌ದಲ್ಲಿ ನೀಡುವ ದತ್ತಾಂಶಗಳೇ ಇನ್‌ಪುಟ್‌ಗಳು. ಕಂಪ್ಯೂಟರ್‌ಪಡೆದಂತಹ ದತ್ತಾಂಶಗಳ ಮೇಲೆ ನಿರ್ದೇಶನಗಳ ಮೂಲಕ ಕಾರ್ಯವಿಧಿಗಳನ್ನು ಕೈಕೊಳ್ಳುವುದೇ ಸಂಸ್ಕರಣ (Process) ಕಂಪ್ಯೂಟರ್‌ದಲ್ಲಿ ಶೇಖರಿತವಾದ ದತ್ತಾಂಶಗಳನ್ನು ಸಂಸ್ಕರಿಸಿ ನಾವು ಪಡೆದುಕೊಳ್ಳುವ ಮಾಹಿತಿಗಳೇ ಫಲಿತಗಳು.

input > ಸಂಸ್ಕರಣ <
ಪ್ರಕ್ರಿಯೆ /
output
ವಾಗರ್ಥ ಎಂ ಚಿದಾನಂದಮೂರ್ತಿ ದತ್ತಗಳು ಎಂ. ಚಿದಾನಂದಮೂರ್ತಿ ಅವರ ವಾಗರ್ಥವು ಕನ್ನಡದ ಶ್ರೇಷ್ಠಕೃತಿಗಳಲ್ಲಿ ಒಂದು
ಅರ್ಥಪೂರ್ಣ ಫಲಿತಾಂಶ

ಗಣಕಯಂತ್ರದಲ್ಲಿ ನಾವು ಕೊಟ್ಯಂತಹ ದತ್ತಾಂಶಗಳಿಂದ ಅಲ್ಲಿ ನಡೆಯುವ ಪ್ರಕ್ರಿಯೆಯಿಂದ ಅರ್ಥಪೂರ್ಣವಾದ ಫಲಿತಗಳು ಬರುತ್ತವೆ. ಗಣಕಯಂತ್ರದ ಕ್ರಿಯಾವ್ಯವಸ್ಥೆಯನ್ನು ಹೀಗೆ ತೋರಿಸಬಹುದು.

ಇನ್‌ಪುಟ್ > ಪ್ರೊಸೆಸ್ > ಫಲಿತಗಳು

ನಾವು ಕೊಟ್ಟಂತಹ ಭಾಷಾಸಾಮಗ್ರಿಗಳ ಮೂಲಕ ಕಂಪ್ಯೂಟರ್‌ಕಾರ್ಯವನ್ನು ಕೈಕೊಳ್ಳುತ್ತದೆ. ಅದು ದತ್ತಾಂಶಗಳನ್ನು ಆಗಮನಾಂಗದಿಂದ (Input) ಪಡೆದು ಕೇಂದ್ರೀಯ ಸಂಸ್ಕರಣ ವಿಭಾಗದಲ್ಲಿ ದತ್ತಾಂಶಗಳನ್ನು ಸಂಸ್ಕರಿಸಿ, ನಿರ್ಗಮನಾಂಗದ (Output) ಮೂಲಕ ಫಲಿತಾಂಶಗಳನ್ನು ಪ್ರಕಟಿಸುತ್ತದೆ.

ಕೋಶಕಾರನು ಕೋಶವನ್ನು ಸಿದ್ಧಪಡಿಸುವಾಗ ಶಬ್ದಗಳ ಪಟ್ಟಿಕೆಗಳನ್ನು ಸಿದ್ಧಪಡಿಸಿ ಕಂಪ್ಯೂಟರ್‌ದಲ್ಲಿ ಸೇರಿಸಬೇಕು. ತನಗೆ ಯಾವ ಬಗೆಯ ಕೋಶಗಳು ಬೇಕು (ಏಕಭಾಷಿಕ, ದ್ವಿಭಾಷಿಕ ಮತ್ತು ಬಹುಭಾಷಿಕ) ಎಂಬುದನ್ನು ನಿರ್ಧರಿಸಿಕೊಂಡು ಕಂಪ್ಯೂಟರ್‌ದಲ್ಲಿಯೇ ಅದನ್ನು ಸಿದ್ಧಪಡಿಸಬಹುದಾದ ನಿಘಂಟುವಿನ ಕಡತದ ಸಂಖ್ಯೆ, ಭಾಷೆಯ ಹೆಸರು, ಆಕೃತಿಮಾಗಳು, ಉಪ ಆಕೃತಿಮಾಗಳು, ಆಡುರೂಪಗಳು, ಎರವಲು ಪದಗಳು ಮುಂತಾದವುಗಳನ್ನು ಬಳಸಿಕೊಳ್ಳುವ ವಿಧಾನ ಹಾಗೂ ಸಾಂದರ್ಭಿಕ ಸೂಚ್ಯಂಕಗಳನ್ನು ಪ್ಲಾಪಿಯಲ್ಲಿ ಹಾಕಿಕೊಳ್ಳಬೇಕು.

ಕೋಶಕಾರ ತಾನು ಸಿದ್ಧಪಡಿಸುವ ನಿಘಂಟಿನ ಸ್ವರೂಪಕ್ಕೆ ತಕ್ಕಂತೆ ಅವುಗಳನ್ನು ಸಂಯೋಜಿಸಬೇಕಾಗುತ್ತದೆ.

  ದತ್ತಗಳು ಕೋಡ್‌ನಂ.  
  ಕಲ್ಲು  
ನಾಮರೂಪಗಳು ಮಣ್ಣು  
  ಗಿಡ  
I ಶಾಲೆ  
  ಪೆನ್ನು  
ಕ್ರಿಯಾರೂಪಗಳು ಬೇಡು  
  ಮಾಡು  
  Book A ಪುಸ್ತಕ
  Pen A ಪೆನ್ನು
  Cap A ಟೊಪ್ಪಿಗೆ
II Cat A ಬೆಕ್ಕು
  Eat B ತಿನ್ನು
  Sleep B ಮಗಲು

I ಈ ಭಾಗವು ಏಕಭಾಷಿಕ ನಿಘಂಟು. II ಈ ಭಾಗವು ದ್ವಿಭಾಷಿಕ ನಿಘಂಟು. ಇಲ್ಲಿಯ ದತ್ತಗಳನ್ನು ಯಂತ್ರಭಾಷೆಗೆ ಭಾಷಾಂತರಿಸಿ ಕೇಂದ್ರೀಯ ಸಂಸ್ಕರಣಾಂಗಗಳಿಗೆ ಕಳಿಸಿದಾಗ ಅಲ್ಲಿ ಸಂಸ್ಕರಣನ ಹೊಂದಿ, ಫಲಿತಾಂಶವು ಸ್ಮರಣಾಂಗಗಳಿಗೆ ಕಳಿಸಿದಾಗ ಸಂಸ್ಕರಣಾಂಗಗಳಲ್ಲಿ ಹೊಂದಿದ ಫಲಿತಾಂಶಗಳನ್ನು ಸಂಗ್ರಹಿಸಿಡಲಾಗುವುದು ಮತ್ತು ಬೇಕಾದಾಗ ಮರಳಿ ಪಡೆಯಬಹುದು. ಕಂಪ್ಯೂಟರಿಗೆ ಅದ್ಭುತ ಸ್ಮರಣ ಶಕ್ತಿಯಿರುವುದರಿಂದ ಈ ಎಲ್ಲ ಕೆಲಸ ಕಾರ್ಯಗಳು ಅತ್ಯಂತ ವೇಗವಾಗಿ ನಡೆಯುತ್ತವೆ.

ನಿಘಂಟಿಮಗಳ ಪರಿಷ್ಕರಣೆ ಮತ್ತು ಕಂಪ್ಯೂಟರ್‌

ಈಗ ಲಭ್ಯವಿರುವ ನಿಘಂಟುಗಳು ಉದಾಹರಣೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಕನ್ನಡ ನಿಘಂಟಿನ ಎಂಟು ಸಂಪುಟಗಳಾಗಿರಬಹುದು ಇಲ್ಲವೆ ಕನ್ನಡ ವಿಶ್ವವಿದ್ಯಾಲಯದ ವೃತ್ತಿ ಪದಮಂಜರಿ ಮಾಲೆಯ ವೃತ್ತಿಪದಕೋಶ ಸಂಪುಟಗಳಾಗಿರಬಹುದು. ಇವು ಈಗ ಲಭ್ಯವಿವೆ. ಆದರೆ ಪರಿಷ್ಕರಣೆಯಾಗಬೇಕಾಗಿದೆ. ನಿಘಂಟು ರಚನೆಗೆ ಕೊನೆ ಎಂಬುದೇ ಇಲ್ಲ. ಬೆಳವಣಿಗೆ ಭಾಷೆಯ ಆರೋಗ್ಯದ ಲಕ್ಷಣ. ಭಾಷೆ ಬದಲಾವಣೆಯಾಗುವಾಗ ಹಳೆಯ ಪದಗಳು ಲುಪ್ತವಾಗುತ್ತವೆ, ಹೊಸ ಪದಗಳು ಭಾಷೆಗೆ ಬಂದು ಸೇರುತ್ತವೆ. ಹಳೆಯ ಪದಗಳು ಹೊಸ ಅರ್ಥದಲ್ಲಿ ಬಳಕೆಯಾಗುತ್ತವೆ. ಹೀಗೆ ಹಲವಾರು ರೀತಿಯಲ್ಲಿ ಈಗಿರುವ ಉಲ್ಲೇಖಗಳನ್ನು ಪರಿಷ್ಕರಣೆ ಮಾಡಬೇಕಾಗುತ್ತದೆ. ನಾವು ಸಾಂಪ್ರದಾಯಕ ರೀತಿಯಲ್ಲಿ ಹತ್ತಾರು ಜನರನ್ನು ಕಲೆ ಹಾಕಿ ತಿದ್ದುತ್ತಾ ಕುಳಿತರೆ ಶ್ರಮ, ಕಾಲ, ಹಣ ಎಲ್ಲವು ವೆಚ್ಚವಾಗುತ್ತದೆ. ಸಿದ್ಧವಿರುವ ನಿಘಂಟುಗಳನ್ನು ಕಂಪ್ಯೂಟರಿಗೆ ಅಳವಡಿಸಿ ಅಲ್ಲಿಯೇ ಅಗತ್ಯ ಬದಲಾವಣೆಯನ್ನು ಮಾಡಿಕೊಂಡು ಪರಿಷ್ಕರಿಸುವುದು ಹೆಚ್ಚು ಉಪಯುಕ್ತ ವಿಧಾನವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ – ಕನ್ನಡ ನಿಘಂಟುಗಳ ಪರಿಷ್ಕರಣೆಯನ್ನು ಕುರಿತು ಕೆ. ವಿ. ನಾರಾಯಣ ಮೂರು ಸಲಹೆಗಳನ್ನು ಕೊಟ್ಟಿದ್ದಾರೆ. ೧. ಕೇವಲ ನಿಘಂಟಾಗಿ ಬಳಸಲು ಮಾಹಿತಿಕಣಜವನ್ನು (ಕನ್ನಡ – ಕನ್ನಡ ನಿಘಂಟು). ಕಾಂಪ್ಯಾಕ್ಟ್‌ಡಿಸ್ಕಿನಲ್ಲಿ ಸಂಗ್ರಹಿಸಬೇಕು. ಇದರಿಂದ ನಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ೨. ಈ ಮಾಹಿತಿ ಕಣಜದ ಪರಿಷ್ಕರಣ ಕಾರ್ಯವನ್ನು ಕಂಪ್ಯೂಟರ್‌ದಲ್ಲಿಯೇ ಮಾಡಬಹುದು. ೩. ಮಾಹಿತಿ ಕಣಜದಿಂದ ಅಂತಸ್ಥ ಮಾಹಿತಿಸರಣಿಯನ್ನು ಸುಲಭವಾಗಿ ಹೆಕ್ಕಿ ತೆಗೆಯುವುದು* ಇಲ್ಲಿಯ ಮಾಹಿತಿಯನ್ನು ಬೇರೆ ಭಾಷೆಗಳಿಗೆ ತರ್ಜುಮೆಯನ್ನೂ ಮಾಡಬಹುದು.

ನಿಘಂಟುವಿನಲ್ಲಿ ಮೂಲರೂಪ ಮತ್ತು ಸಮಸ್ತಪದಗಳಿರಬೇಕಾದುದು ಸಾಮಾನ್ಯ ನಿಯಮ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ – ಕನ್ನಡ ನಿಘಂಟಿನಲ್ಲಿ ಮೂಲರೂಪ, ಸಮಸ್ತ ಪದಗಳೊಡನೆ ಪದಪುಂಜಗಳೂ ಮುಖ್ಯ ನಮೂದುಗಳಾಗಿವೆ. ಉದಾಹರಣೆಗೆ

ಅಪಮಾನ/ಮಾಡು
ಅವಮಾನ/ಮಾಡು
ಅಪರಿಣಾಮ/ವಿಹಾರ
ಅಪರೂಪ/ದರ್ಶನ
ಆತಂಕ/ಗೊಳ್ಳು
ಆರಂಭ/ಭಾಷಣ

ಇಂತಹ ಸಾವಿರಾರು ಪದಪುಂಜಗಳು ಇಲ್ಲಿ ಎಡೆಪಡೆದಿವೆ. ಪದಪುಂಜಗಳನ್ನು ಸೇರಿಸುತ್ತ ಹೋದರೆ ಅದಕ್ಕೆ ಕೊನೆ ಎಂಬುದೇ ಇಲ್ಲ. ಪರಿಷ್ಕರಿಸುವಾಗ ಕೋಶಕಾರ ಅವುಗಳ ಮೂಲರೂಪ ಇಲ್ಲವೆ ಸಮಸ್ತ ರೂಪಗಳನ್ನು ಉಳಿಸಿಕೊಂಡರೆ ಸಾಕು. ಉದಾಹರಣೆಗೆ ಆತಂಕ: ಭಯ, ಹೆದರಿಕೆ (ಆತಂಕ+ಕೊಳ್ಳು(>ಕೊಳ್‌) ಇಷ್ಟು ಸಾಕು. ಆದರೆ ‘ಆತಂಕಗೊಳ್ಳು’ ಮುಖ್ಯ ನಮೂದು ಸೇರಿಸಿರುವುದು ಅಸಾಧುವಾದುದು. ಕೋಶಕಾರನಿಗೆ ಭಾಷಾವಿಜ್ಞಾನದ ಮತ್ತು ನಿಘಂಟುತತ್ವಗಳ ಜೊತೆಗೆ ಕಂಪ್ಯೂಟರ್‌ಜ್ಞಾನವಿದ್ದರೆ ಈ ಕೆಲಸ ಸುಲಭವಾಗಿ ಮತ್ತು ವೇಗವಾಗಿ ನಡೆಯುತ್ತದೆ.

ಕನ್ನಡ ನಿಘಂಟುವಿನಲ್ಲಿ ಸೇರ್ಪಡೆಯಾದ ನಾಮಪದ, ಕ್ರಿಯಾಪದ, ಸರ್ವನಾಮ, ವಿಶೇಷಣ, ಸಂಖ್ಯಾವಾಚಕ ಮುಂತಾದ ವ್ಯಾಕರಣ ವರ್ಗಗಳನ್ನು ಪ್ರತ್ಯೇಕವಾಗಿ ಹೊರತೆಗೆದು ಅವುಗಳ ಸ್ವರೂಪವನ್ನು ವಿಶ್ಲೇಷಿಸಬಹುದು. ಅದರಂತೆ ಪದರೂಪಗಳ ಸಹಸಂಬಂಧವನ್ನು ಗುರುತಿಸಲು ಹಾಗೂ ಆಯಾಕೋಶಗಳ ಸ್ವರೂಪಕ್ಕೆ ತಕ್ಕಂತೆ ಅಕಾರಾದಿ ಕ್ರಮದಲ್ಲಿ ನಮೂದುಗಳನ್ನು ಸಂಯೋಜಿಸಲು ಕಂಪ್ಯೂಟರ್‌ತುಂಬ ನೆರವಾಗುತ್ತದೆ. ವೃತ್ತಿಪದ ಕೋಶಗಳ ಪರಿಷ್ಕರಣೆಯಲ್ಲಿಯೂ ಈ ಕ್ರಮವನ್ನು ಅನುಸರಿಸಬಹುದು.

ಒಬ್ಬ ಕವಿ ತನ್ನ ಕಾವ್ಯದಲ್ಲಿ ಬಳಸಿರುವ ಎಲ್ಲ ಶಬ್ದ ಪ್ರಯೋಗಗಳನ್ನು ಕ್ರೋಢಿಕರಿಸಿ ಒಂದು ಪದ ಎಷ್ಟು ಅರ್ಥದಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಕೋಶಗಳು ತುಂಬ ನೆರವಾಗುತ್ತವೆ. ಒಂದು ಪ್ರಕೋಶವನ್ನು ಸಿದ್ಧಪಡಿಸಬೇಕಾದರೆ ನಮಗೆ ವರ್ಷಾನುಗಂಟಲೆ ವೇಳೆ ಹಿಡಿಯುತ್ತದೆ. ಅದರ ಬದಲು ಕಾವ್ಯದ ಪ್ರತಿಯೊಂದು ಸಾಲನ್ನು ಕಂಪ್ಯೂಟರ್‌ಗೆ ಅಳವಡಿಸಿದರೆ ಒಂದು ತಿಂಗಳಲ್ಲಿಯೇ ಪ್ರಕೋಶ ಸಿದ್ಧವಾಗುತ್ತದೆ. ಒಂದು ಪದ ಒಂದು ಕಾವ್ಯದ ಯಾವ ಆಶ್ವಾಸದಲ್ಲಿ ಯಾವ ಅರ್ಥದಲ್ಲಿ ಬಂದಿದೆ ಎಂಬುದನ್ನು ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು. ಉದಾ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಪ್ರಕೋಶದಲ್ಲಿ ‘ಲಿಂಗ’ ಪದದ ಉಲ್ಲೇಖಗಳು ೧೫೬ಕ್ಕೂ ಹೆಚ್ಚು ಸಾರಿ ಇವೆ.

–        ನಾದ ಪ್ರಿಯಂ ನಾದ ಮಯಂ ನಾದೋರ್ಲಿಂಗ ನಗೇಶ್ವರಂ ೬
+ + + ಶರಣ ಕರುಣಾಕರ

–        ಹೀಂಗೆ ಅನಾದಿ ವಿಡಿದು ಬಂದ ಗುರು ಅನಾದಿ ವಿಡಿದು
ಲಿಂಗ ಅನಾದಿ ವಿಡಿದು ಬಂದ ಜಂಗಮ ಅನಾದಿ ವಿಡಿದು ೮
ಗುರುಶಿಷ್ಯ ಸಂಬಂಧ

–        ಅಱುಹಿಲ್ಲದ ಮಱಹಿಲ್ಲದ ಮಹಾಮಹಿಮ ನೀನಾದ
ಕಾರಣ ನಿನ್ನ ನಿರಮಯ ಲಿಂಗ ವೆಂದೆನಯ್ಯ

–         – ಹೀಂಗೆ ಅಂಗ ಲಿಂಗವೆಂದು ಉಪಾಸ್ಯ ಉಪಾಸಕ
ನೆಂದು ವರ್ತಿಸುತ್ತಿಹುದು ನೋಡಾ

–         – ಆದಿ ಅನಾದಿಗಳೇನೂ ಇಲ್ಲದ ನಿರೂಪಮ ಲಿಂಗದಲ್ಲಿ
ಅನುಪದ ಭಕ್ತಿ ಜನಿಸಿತ್ತು ನೋಡಾ ೪೮

ಇಂತಹ ಉಲ್ಲೇಖಗಳು ಪುಟಗಟ್ಟಲೆ ಸಾಗುತ್ತವೆ. ಸಂದರ್ಭಕ್ಕೆ ಅರ್ಥಭಿನ್ನತೆಯನ್ನುಂಟು ಮಾಡುತ್ತವೆ. ಅದರಂತೆ ‘ಜಂಗಮ’, ‘ಗುರು’, ‘ಐಕ್ಯ’, ‘ಪ್ರಸಾದ’, ‘ಪಾದೋದಕ’ ಮುಂತಾದ ಶಬ್ದಗಳು ವೀರಶೈವ ಧರ್ಮದ ಸಾಂಸ್ಕೃತಿಕ ಪದಕೋಶಗಳಾಗಿವೆ. ಹರಿಹರನ ರಗಳೆಗಳನ್ನು ಕಂಪ್ಯೂಟರ್‌ಗೆ ಒಳಪಡಿಸಿದಾಗ ಶಿವ ಪ್ರಸ್ತಾವದ ಸಂದರ್ಭಗಳನ್ನು ಹೆಕ್ಕಿ ತೆಗೆದರೆ ಒಂದು ಸಂಪ್ರಬಂಧದ ವಸ್ತುವಾಗುತ್ತದೆ. ಇದರಿಂದ ಒಂದು ಶಬ್ದವನ್ನು ಕವಿ ಎಷ್ಟು ರೀತಿಯಲ್ಲಿ ಬಳಸಿದ್ದಾನೆ ಎಂಬುದು ತಿಳಿಯುವುದಲ್ಲದೆ ಕಾವ್ಯದ ಆಶಯವೂ ಸ್ಪಷ್ಟವಾಗುತ್ತದೆ. ಕಂಪ್ಯೂಟರ್‌ಸಹಾಯದಿಮದ ಪ್ರಕೋಶ ನಿರ್ಮಾಣಕ್ಕೆ ತುಂಬ ಪ್ರಯೋಜನವಿದೆ. ಶಬ್ದಾರ್ಥ ನಿರ್ಣಯದಲ್ಲಿ ಹೆಚ್ಚು ನಿಖರತೆಯೂ ಪ್ರಾಪ್ತವಾಗುತ್ತದೆಯಲ್ಲದೆ ಶ್ರಮ ಮತ್ತು ಸಮಯದ ಉಳಿತಾಯವೂ ಆಗುತ್ತದೆ.

ಕೋಶರಚನೆಯಲ್ಲಿ ಕಂಪ್ಯೂಟರ್‌ದ ಮಹತ್ವವು ಅಪಾರವಾದುದು. ಆದರೆ ವೇಗವಾದ ಕ್ರಿಯಾವಿಧಾನ, ಅಗಾಧ ಸಂಗ್ರಹ ಸಾಮರ್ಥ್ಯ, ನಿಖರವಾದ ಕಾರ್ಯಶೀಲತೆ, ಪುನರಾವರ್ತನ ಕ್ರಿಯೆಯಿಂದ ಜ್ಞಾನಾಭಿವೃದ್ಧಿಗೆ ತುಂಬ ನೆರವಾಗುತ್ತದೆ. ಇದರಿಂದ ಬೋಧನೆ ಮತ್ತು ಕಲಿಕೆಯ ವಿಧಾನವೂ ಹೆಚ್ಚು ಪರಿಣಾಮಕಾರಿಯಾಗಿದೆ. ಈಗ ಇಂಟರ್‌ನೆಟ್‌ಅವಕಾಶವಿರುವುದರಿಂದ ವಿಶ್ವದ ಅನೇಕ ನಿಘಂಟುಗಳಲ್ಲಿಯ ಮಾಹಿತಿಗಳನ್ನು ಕಂಪ್ಯೂಟರಿಗೆ ಅಳವಡಿಸಿ ಭಾಷೆಯ ಅಧ್ಯಯನಕ್ಕೆ ಅವುಗಳನ್ನು ಬಳಸಿಕೊಂಡು ಆ ಕ್ಷೇತ್ರದ ಎಲ್ಲೆಯನ್ನು ವಿಸ್ತರಿಸಬಹುದು.

 

* ಹೆಚ್ಚಿನವಿವರಣೆಗಾಗಿನೋಡಿ. ನಾರಾಯಣಕೆ. ವಿ. ‘ಕನ್ನಡ-ಕನ್ನಡನಿಘಂಟಿನಕಂಪ್ಯೂಟರೀಕರಣ’ ಭಾಷೆಯಸುತ್ತಮುತ್ತ (೧೯೯೮) ಆಲೇಖನವೇಈಸಂಪ್ರಬಂಧಕ್ಕೆಪ್ರೇರಣೆಕೊಟ್ಟಿದೆ.