ಭಾಷೆಯ ಆಧುನೀಕರಣವನ್ನು ಕುರಿತಾದ ವಿವೇಚನೆ ಕನ್ನಡದಲ್ಲಿ ಸ್ವಲ್ಪ ಮಟ್ಟಿಗೆ ನಡೆದಿದೆ.

[1] ಇಂಗ್ಲಿಶಿನಲ್ಲಿ ಈ ಕುರಿತು ಸಾಕಷ್ಟು ಬರಹಗಳು ಬಂದಿವೆ. ಶಬ್ದಕೋಶ ವಿಸ್ತರಣೆ, ವ್ಯಾಕರಣ ನಿಯಮಗಳು ಸಡಿಲಗೊಳ್ಳುವಿಕೆ ಹಾಗೂ ಭಾಷಾ ಬೆಳವಣಿಗೆಗೆ ಭಾಷಾ ಆಧುನೀಕರಣ ತುಂಬ ಸಹಾಯಕಾರಿಯಾಗಿದೆ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಕನ್ನಡ ಭಾಷೆ ಹತ್ತಾರು ರೀತಿಯಲ್ಲಿ ದಿನದಿನವೂ ಬದಲಾಗುತ್ತಿದೆ. ಈ ಬದಲಾವಣೆಯ ದಿಕ್ಕು ದಿಸೆಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ. ಸಮೂಹ ಮಾಧ್ಯಮಗಳಲ್ಲಿ ಸಮೃದ್ಧ ಪ್ರಮಾಣದ್ಲಲಿ ಹೊಸ ಹೊಸ ಪದಗಳು, ವಾಕ್ಯಗಳು ದಿನವೂ ಬಳಕೆಯಾಗುತ್ತಿವೆ. ಅವುಗಳನ್ನು ಸಂಗ್ರಹಿಸುವುದು ವಿಶ್ಲೇಷಿಸುವುದು ದೊಡ್ಡ ಸಾಹಸವೇ ಸರಿ. ಈ ಕೆಲಸ ಇತ್ತಿತ್ತಲಾಗಿ ನಡೆಯುತ್ತಿದೆ.[2] ಈ ಅಧ್ಯಾಯದಲ್ಲಿ ಭಾಷಾ ಆಧುನೀಕರಣದ ಪರಿಶೀಲನೆಗಾಗಿ ಸಾಮಗ್ರಿಗಳನ್ನು ಕಲೆ ಹಾಕುವ ಕೆಲಸವನ್ನು ಮಾಡಿದ್ದೇನೆ. ಅದರಂತೆ ಕನ್ನಡದಲ್ಲಿ ಧಾರಾಳವಾಗಿ ಬಳಕೆಯಾಗುತ್ತಿರುವ ಆಂಗ್ಲ ಭಾಷೆಯ ization/isation ಸಂವಾದಿಯಾಗಿ ‘ಈ ಕರಣ’ ಪ್ರತ್ಯಯ ಬಳಕೆಯಾದ ರೀತಿಯ ಬಗ್ಗೆ ಹಾಗೂ ಪ್ರಚಲಿತ ಕೋಶ ರಚನೆಯಲ್ಲಿ ಆಧುನೀಕರಣದ ಪಾತ್ರದ ಬಗ್ಗೆ ಚರ್ಚಿಸಿದ್ದೇನೆ.

ಅಭಿವೃದ್ಧಿ ಹೊಂದಿದ ಭಾಷೆಗಳಲ್ಲಿಯ ತಂತ್ರಜ್ಞಾನ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿನ ಜ್ಞಾನವನ್ನು, ಭಾಷಾ ಸಂಪತ್ತನ್ನು (Speech – Repertory) ಅಭಿವೃದ್ಧಿ ಹೊಂದುತ್ತಿರುವ ಭಾಷೆಗಳು ತಮ್ಮ ಅಗತ್ಯತೆಗಳನ್ನು ಪೂರೈಸಲು ತಮ್ಮ ಪದಕೋಶವನ್ನು ವೃದ್ಧಿಪಡಿಸಿಕೊಂಡು ತಮ್ಮತನವನ್ನು ಸ್ಥಾಪಿಸಿಕೊಳ್ಳಲು ಸದಾ ಹವಣಿಸುತ್ತಿರುತ್ತವೆ. ಆ ವೇಳೆಯಲ್ಲಿ ಸಂವಹನಕ್ಕೆ ಅನುಕೂಲವಾಗುವಂತೆ ಭಾಷಾ ರಚನೆ ಮತ್ತು ಬಳಸುವ ರೀತಿಯಲ್ಲಿ ಬದಲಾವಣೆ ಅನಿವಾರ್ಯವಾಗುತ್ತದೆ. ಈ ರೀತಿಯ ಬದಲಾವಣೆಯೇ ಭಾಷಾ ಆಧುನೀಕರಣ. ಕನ್ನಡ ಭಾಷೆ ಬೇರೆ ಬೇರೆ ವಲಯಗಳಲ್ಲಿ (Domains)ಬೇರೆ ಬೇರೆ ರೀತಿಯಾಗಿ ಬಳಕೆಯಾಗಿ ಬೆಳವಣಿಗೆ ಹೊಂದುತ್ತಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳಲ್ಲಿ ಭಾಷೆ ಬಳಕೆಯಾಗುವಾಗ ಧ್ವನ್ಯುಚ್ಚಾರಣೆ ಹಾಗೂ ಪದರಚನೆಯಿಂದ ಹಿಡಿದು ವಾಕ್ಯ ರಚನೆಯವರೆಗೆ ಬದಲಾವಣೆ ಕಂಡು ಬರುತ್ತದೆ. ಆ ವೇಳೆಯಲ್ಲಿ ಹೊಸ ಪದಗಳು ಭಾಷೆಗೆ ಬಂದು ಸೇರುತ್ತವೆ. ಹಳೆಯ ಪದಗಳು ಬಿದ್ದು ಹೋಗಿ ಹೊಸ ಅರ್ಥದಲ್ಲಿ ಬಳಕೆಯಾಗುತ್ತವೆ. ಅಭಿವ್ಯಕ್ತಿಗೆ ಮತ್ತು ಗ್ರಹಿಕೆಗೆ ತೊಂದರೆ ಉಂಟಾಗದಂತೆ ಭಾಷಾ ಸಮುದಾಯಕ್ಕೆ ಸ್ಪಂದಿಸುವಂತೆ ಭಾಷಿಕರ ಸಂವಹನಕ್ಕೆ ಸಹಾಯಕವಾಗಲು ಭಾಷಿಕರ ಭಾಷಾ ಮನೋವೃತ್ತಿಗಳಲ್ಲಿ ಬದಲಾವಣೆಯನ್ನು ತರುವುದು ಭಾಷಾ ಆಧುನೀಕರಣದ ಮುಖ್ಯ ಉದ್ದೇಶವಾಗಿದೆ.

ಭಾಷಾ ಆಧುನೀಕರಣವು ಭಾಷಾಮಿಶ್ರಣ, ಭಾಷಾಪಲ್ಲಟ, ಭಾಷಾ ಸ್ವೀಕರಣ, ಡೈಗ್ಲಾಸಿಯಾ ಮುಂತಾದ ಸಾಮಾಜಿಕ ಭಾಷಾವಿಜ್ಞಾನದ ಪರಿಕಲ್ಪನೆಗಳ ಮೂಲಕ ನಡೆಯುವ ಅಧ್ಯಯನವಾಗಿದೆ. ಭಾಷಾ ಬಳಕೆಯ ರಚನೆಯ ಸ್ವರೂಪವನ್ನು ಸಾಮಾಜಿಕ ಭಾಷಾವಿಜ್ಞಾನದ ನೆಲೆಗಳಿಂದ ನೋಡಬೇಕಾಗುತ್ತದೆ. ಇಂಗ್ಲಿಶ್‌ಪ್ರಭಾವಶಾಲಿ ಮಾಧ್ಯಮವಾಗಿದೆ. ವಿವಿಧ ವಿಷಯಗಳ ಜ್ಞಾನ ಇಂಗ್ಲಿಷ್‌ಮಾಧ್ಯಮದ ಮೂಲಕ ದೊರೆಯುವುದರಿಂದ ವಿದ್ಯಾವಂತ ಕನ್ನಡಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇಂಗ್ಲಿಶನ್ನು ಬಹುವಾಗಿ ಅವಲಂಬಿಸಬೇಕಾಗಿದೆ. ಅಲ್ಲಿಯ ಪದರಚನೆ, ವಾಕ್ಯರಚನೆಯ ಕ್ರಮವನ್ನು ಕನ್ನಡ ತನ್ನ ಜಾಯಮಾನಕ್ಕೆ ತಕ್ಕಂತೆ ಅಳವಡಿಸಿಕೊಂಡಿದೆ. ಆ ವೇಳೆಯಲ್ಲಿ ಆಂಗ್ಲ ರೂಪಗಳನ್ನು ಕನ್ನಡಿಕರಿಸುವಾಗ ಟಂಕೀಕರಣ, ತದ್ಬವೀಕರಣ, ಸಾದೃಶ್ಯದೃಷ್ಟಿ, ಸ್ಟೀಕರಣ ಮತ್ತು ಅನುವಾದ ಮುಂತಾದ ಭಾಷಿಕ ಕ್ರಿಯೆಗಳು ನಡೆಯುತ್ತಿವೆ.[3] (ಇವುಗಳ ಬಗ್ಗೆ ಇದೇ ಅಧ್ಯಾಯದಲ್ಲಿ ಮುಂದೆ ಚರ್ಚಿಸಲಾಗಿದೆ). ಕನ್ನಡದಲ್ಲಿ ಭಾಷಾ ಆಧುನೀಕರಣ ಪ್ರಕ್ರಿಯೆಯು ಪದರಚನೆಯ ನೆಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭಾಷಾ ಕ್ಷೇತ್ರದಲ್ಲಿ ನಡೆಯುವ ಹೊಸ ಹೊಸ ಶೋಧನೆಗಳಿಂದ ಭಾಷಾ ರಚನೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಇದರಿಂದ ಇದುವರೆಗೆ ಒಪ್ಪಿಗೆಯಾಗದ ಪದರಚನೆಗಳು ಈಗ ಕನ್ನಡ ಭಾಷೆಯ ಜಾಯಮಾನಕ್ಕೆ ಅನುಗುಣವಾಗಿ ಬಳಕೆಯಾಗುತ್ತಿವೆ.

ಕನ್ನಡ ಭಾಷೆ ಆಧುನೀಕರಣವನ್ನು ಮೈಗೂಡಿಸಿಕೊಳ್ಳುತ್ತಿರುವಾಗ ಮತ್ತು ಅದರ ಅಭಿವ್ಯಕ್ತಿಗಾಗಿ, ಹೊಸ ಪರಿಭಾಷೆಗಳಿಗಾಗಿ ಹೊಸ ಹೊಸ ವಿಧಾನಗಳನ್ನು ಕನ್ನಡವು ಹುಡುಕುತ್ತಿದೆ. ಕನ್ನಡದಲ್ಲಿ ಆಧುನೀಕರಣದ ಪ್ರಭಾವವಿರುವ ಭಾಷಿಕ ಪ್ರಕ್ರಿಯೆಗಳ ರಚನೆಯ ಕ್ರಮವನ್ನು ಇಲ್ಲಿ ಹೇಳಲಾಗಿದೆ.

‘ಇಸು’ ಪ್ರತ್ಯಯ ಮೊದಲು ಕ್ರಿಯಾ ಧಾತುಗಳಿಗೆ ಮಾತ್ರ ಹತ್ತಿ ಪ್ರೇರಣಾರ್ಥಕವನ್ನು ಕೊಡುತ್ತಿತ್ತು. ಉದಾ: ಮಾಡಿಸು, ಓಡಿಸು, ಕಾಡಿಸು, ತಿನಿಸು ಮುಂತಾದವು. ಈಗ ಅನ್ಯಭಾಷೆಗಳಿಂದ ಎರವಲು ಪಡೆದ ನಾಮರೂಪಗಳಿಗೆ ‘ಇಸು’ ಪ್ರತ್ಯಯ ಹತ್ತಿ ಕ್ರಿಯಾರೂಪಗಳನ್ನು ಸಾಧಿಸುವ ಪ್ರವೃತ್ತಿ ಕನ್ನಡದಲ್ಲಿ ಕಂಡುಬರುತ್ತಿದೆ. ಉದಾ: ಶೋಧಿಸು, ಆನಂದಿಸು, ಸುಖಿಸು, ರೂಪಿಸು, ಖೇದಿಸು, ಮಿಶ್ರಿಸು, ರಮಾನಿಸು, ಟೈಪಿಸು ಮುಂತಾದವು. ಕೆಲವು ಕ್ರಿಯಾರೂಪಗಳಿಗೆ ‘ಇಸು’ ಪ್ರತ್ಯಯ ಹತ್ತಿದ ನಂತರ ‘ಇಕೆ’ ತದ್ಧಿತ ಪ್ರತ್ಯಯ ಸೇರಿಸುವ ಕ್ರಮವೂ ಇದೆ. ಉದಾ: ಚಿಂತಿಸುವಿಕೆ, ವಿಚಾರಿಸುವಿಕೆ, ವಿವರಿಸುವಿಕೆ.

ಅನ್ಯಭಾಷೆಯ ಸ್ವೀಕೃತ ಶಬ್ದಗಳಿಗೆ ನಮ್ಮ ಭಾಷಾ ಭಂಡಾರದಲ್ಲಿರುವ ಸಾಮಗ್ರಿಗಳ ಸಹಾಯದಿಂದ ಹೊಸ ಪದಗಳನ್ನು ನಿರ್ಮಿಸಿ ಚಲಾವಣೆಗೆ ತರುವ ಟಂಕೀಕರಣ ಕ್ರಿಯೆ ಇತ್ತಿತ್ತಲಾಗಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಭಾಷಾ ಆಧುನೀಕರಣಕ್ಕೆ ಕನ್ನಡ ಆಯ್ದುಕೊಂಡ ಪರ್ಯಾಯ ತಂತ್ರವಿದು. ಇದರ ಉದ್ದೇಶ ಕನ್ನಡದ ಪ್ರತ್ಯೇಕತನವನ್ನು ಸ್ಥಾಪಿಸುವುದೇ ಆಗಿದೆ. ಪತ್ರಿಕೆಗಳಲ್ಲಿ ಬರುತ್ತಿರುವ ಕೆಲವು ಪ್ರಯೋಗಗಳನ್ನು ಗಮನಿಸಬೇಕು.

Input  ಒಳಸುರಿತ
Inner truth  ಒಳನನ್ನಿ
Invester  ವಿನಿಯೋಜಕ
Pink  ಕೆನ್ನೆಲ
Fiord  ಕಿರುಕೊಲ್ಲಿ
Trend – Setter ಮಾರ್ಗಸ್ಥಾಪಕ ಮುಂತಾದವು.

ಅನ್ಯಭಾಷೆಯ ಶಬ್ದಗಳನ್ನು ಸ್ವೀಕರಿಸುವುದರ ಜೊತೆಗೆ ಅದನ್ನು ನಿರ್ದೇಶಿಸುವ ಶಬ್ದಗಳನ್ನು ತೆಗೆದುಕೊಳ್ಳದ ಕ್ರಿಯೆ ಈಗಾಗಲೇ ನಡೆಯುತ್ತಿದೆ. ಉದಾ: ಬಸ್‌>ಬಸ್ಸು,ಕಾರ್‌>ಕಾರು, ಬ್ಯಾಕ್‌>ಬ್ಯಾಂಕು ಮೊದಲಾದವು. ಆ ವೇಳೆಯಲ್ಲಿ ಕನ್ನಡ ಭಾಷೆಯ ರಚನೆಗೆ ತಕ್ಕಂತೆ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಮಾಡಬಹುದು. ವ್ಯಂಜನಾಂತಗಳನ್ನು ಸ್ವರಾಂತಗಳಾಗಿ ಪರಿವರ್ತಿಸುವ ಕ್ರಿಯೆ ಉತ್ತರ ಕರ್ನಾಟಕದ ವ್ಯವಹಾರಿಕ ಶಿಷ್ಟ ಕನ್ನಡದಲ್ಲಿ ಮತ್ತು ಪತ್ರಿಕೆಗಳಲ್ಲಿ ಕಂಡುಬರುತ್ತದೆ. ಅನ್ಯಭಾಷಾ ಸ್ವೀಕರಣ ಪದಗಳಿಗೆ ತನ, ಗಾರ[4] ಇಂತಹ ತದ್ಧಿತ, ಪ್ರತ್ಯಯಗಳು ಹತ್ತಿಸಿ ಅನೇಕ ಹೊಸಪದಗಳು ಕನ್ನಡದಲ್ಲಿ ಬಳಕೆಯಾಗುತ್ತಿವೆ. ಉದಾ: ಕಳಪೆತನ, ದಿಲ್ದಾರತನ, ಉಡಾಫೆತನ, ಜವಾಬ್ದಾರಿತನ, ಬಾಲುಗಾರ, ಡಿಸ್ಕವರಿಗಾರ, ಬ್ಯಾಟುಗಾರ, ಹೊಡೆತಗಾರ, ಎಸೆತಗಾರ, ಪೋರೈಗೆಗಾರ ಮುಂತಾದವು. ಗಾರ ಪ್ರತ್ಯಯ ಹತ್ತಿದ ನಂತರ ‘ಇಕೆ’ ಪ್ರತ್ಯಯ ಸೇರಿಸುವ ವಾಡಿಕೆಯೂ ಕಂಡುಬರುತ್ತದೆ. ಉದಾ: ಬಾಲುಗಾರಿಕೆ, ಬ್ಯಾಟುಗಾರಿಕೆ, ಇಂತಹ ಹೊಸ ರೂಪಗಳ ಸೃಷ್ಟಿಗೆ ಸಾದೃಶ್ಯ ಸೃಷ್ಟಿಕಾರಣವಾಗಿದೆ.

ಕನ್ನಡದ ಕೆಲವು ರೂಪಗಳಿಗೆ ‘ಇಕೆ’ ಪ್ರತ್ಯಯವನ್ನು ನೇರವಾಗಿ ಹಚ್ಚಬಹುದು. ಉದಾ: ಕೇಳಿಕೆ, ಹೇಳಿಕೆ, ಸಲ್ಲಿಕೆ, ಬೇಡಿಕೆ, ಪ್ರಣಾಳಿಕೆ ಮುಂತಾದವು. ‘ತೆ’ ಪ್ರತ್ಯಯವನ್ನು ನಾಮರೂಪಗಳಿಗೆ ಹಚ್ಚಿ ಹೊಸ ರೂಪಗಳನ್ನು ಸೃಷ್ಟಿಯಾಗುತ್ತವೆ. ಉದಾ: ಗಂಭೀರತೆ, ಉದಾರತೆ, ಉಚಿತತೆ ಮುಂತಾದವು. ‘ಗ’ ಪ್ರತ್ಯಯ ಬಳಸಿ ನಾಮರೂಪಗಳನ್ನು ಸೃಷ್ಟಿಸುವ ಬೆ ಇತ್ತಿತ್ತಲಾಗಿ ಕಾಣಬಹುದಾಗಿದೆ. ಉದಾ: ಓಡುಗ, ಅದರಂತೆ ಕ್ರೀಡಾಳು, ಭಾಗಾಳು, ಸ್ಪರ್ಧಾಳು, ಬುದ್ದಿಗೇಡಿ, ತಿಳಿಗೇಡಿ, ಕಿಡಿಗೇಡಿ ಮುಂತಾದ ರೂಪಗಳು ಸಾದೃಶ್ಯ ಮೂಲದಿಂದ ಬಳಕೆಯಾಗುತ್ತಲಿವೆ.

ಕನ್ನಡದಲ್ಲಿ ಬಳಕೆಯಾಗುವ ಸಂಸ್ಕೃತ ವಿಶೇಷಣಗಳಿಗೆ ಈಯ, ಆರ್ಹ, ಇಕ ಹಾಗೂ ಆತ್ಮಕ, ಪ್ರತ್ಯಯಗಳು ಮೊದಲು ಸಮೂಹ ಮಾಧ್ಯಮಗಳಲ್ಲಿ ಮಾತ್ರ ಬಳಕೆಯಾಗುತ್ತಿದ್ದವು. ಈಗ ಔಪಚಾರಿಕ ಸಂದರ್ಭಗಳಲ್ಲಿಯೂ ಧಾರಾಳವಾಗಿ ಬಳಕೆಯಾಗುತ್ತಿವೆ (ಸಭೆ, ಸಮಾರಂಭಗಳಲ್ಲಿ, ಪಾಠ ಪ್ರವಚನಗಳಲ್ಲಿ, ಭಾಷಣಗಳಲ್ಲಿ). ಉದಾ: ಪ್ರಶಂಸನೀಯ, ಪ್ರಶಸನಾರ್ಹ, ಮಾನವೀಯ, ಶಿಕ್ಷಾರ್ಹ, ಮಾನವಿಕ, ಅರೆಕಾಲಿಕ, ರಸಾತ್ಮಕ, ಗುಣಾತ್ಮಕ ಮುಂತಾದವು. ಸಂಸ್ಕೃತ ಪದಗಳನ್ನು ಸ್ವೀಕರಿಸಿದ ನಂತರ ಸಂಸ್ಕೃತ ಪದರಚನೆಗಳಲ್ಲಿ ಕಂಡುಬರುವ ಪೂರ್ವ ಪ್ರತ್ಯಯ ಹಚ್ಚುವ ಕ್ರಮ ಕನ್ನಡ ಪದಗಳಿಗೂ ರೂಢಿಯಾಯಿತು. ಉದಾ: ಅಸಹಾಯಕ, ಅನಿವಾಸಿ. ಕನ್ನಡ ಧಾತುಗಳಿಗೆ ಕೆಲವು ದೇಸಿ ಪದಗಳು ಪೂರ್ವ ಪ್ರತ್ಯಯಗಳಾಗಿ ಬಳಕೆಯಾಗುತ್ತಿವೆ. ಉದಾ: ಮೇಲ್ಮನೆ, ಮೇಲ್ಜಾತಿ, ಮುಂಬಡ್ತಿ, ಹಿಂಪುಟ, ಇವು ಈಗಾಗಲೇ ಔಪಚಾರಿಕ ಮತ್ತು ಅನೌಪಚಾರಿಕ ಸಂದರ್ಭಗಳಲ್ಲಿ ಕಂಡುಬರುತ್ತವೆ.

ಇಂಗ್ಲಿಶ್‌ಭಾಷೆಯ ಸಂಪರ್ಕ ನಮಗೆ ಉಂಟಾದ ಮೇಲೆ ಅನೇಕ ಪದಗಳನ್ನು, ನುಡಿಕಟ್ಟುಗಳನ್ನು ಶಬ್ದಶಃ ಭಾಷಾಂತರಿಸಿದ್ದೇವೆ.

Anti – body  ಪ್ರತಿಕಾಯ
Ply wood  ಪದರ ಹಲಗೆ
Soft – Ware  ಮೃದುಪಕರಣ
Rain forest  ಮಳೆಕಾಡು
Search – light  ಶೋಧಕ ದೀಪ
Home State  ತೌರುರಾಜ್ಯ
Red Indian  ಕೆಂಭಾರತೀಯ

ಮುಂತಾದವು. ಆಂಗ್ಲ ಭಾಷೆಯ ಪದಪುಂಜದಲ್ಲಿ ಒಂದು ಭಾಗವನ್ನು ಮಾತ್ರ ಭಾಷಾಂತರಿಸಿ ಇನ್ನೊಂದನ್ನು ಶಬ್ದ ಸ್ವೀಕರಣ ಮಾಡಿಕೊಳ್ಳುತ್ತೇವೆ (ನಮ್ಮ ಪ್ರಾಚೀನರ ಪ್ರಕಾರ ಇದು ಅರಿಸಮಾಸ).

ಉದಾ:

Hand pump ಕೈ ಪಂಪು
Atom bomb ಆಟಂಬಾಂಬ್‌

ಈ ಪದಪುಂಜಗಳಲ್ಲಿ ಪಂಪ್‌, ಬಾಂಬ್‌ಇವು ಈಗಾಗಲೇ ಕನ್ನಡದಲ್ಲಿ ಸ್ವೀಕೃತ ಶಬ್ದಗಳಾಗಿವೆ. ಅವುಗಳನ್ನು ಅನುವಾದಿಸಲು ಹೊರಟರೆ ಸಂವಹನ ಸಮಸ್ಯೆ ಉಂಟಾಗುತ್ತದೆ. ಆಧುನೀಕರಣ ಪ್ರಕ್ರಿಯೆಯಲ್ಲಿ ಇಂತಹ ಹಲವಾರು ಕಸಿ ರೂಪಗಳು ಬಳಕೆಯಾಗುತ್ತವೆ.

ಕನ್ನಡ ಪದಗಳಿಗೆ ಅನ್ಯಭಾಷೆಯ ಪದಗಳು ಸೇರಿ ಮಿಶ್ರ ಸಮಾಸಗಳು ಸಿದ್ಧವಾಗುತ್ತವೆ. ಉದಾ: ಆದ್ಯತಾಪಟ್ಟಿ, ನಡುಗಾಲ, ಎದುರು ಕೋಪಿ, ಹಗಲು ಕುರುಡ, ಛಾಯಾ ಪರೀಕ್ಷೆ, ಅಸುರವೇಗ ಮುಂತಾದವು. ಕ್ರೀಡಾ ರಜಿಸ್ಟರಿನಲ್ಲಿ ಇಂಗ್ಲಿಶ್‌ನಾಮಪದಗಳಿಗೆ ಕನ್ನಡ ನಾಮಪದ ಹಾಗೂ ಕ್ರಿಯಾಪದಗಳು ಸೇರಿ ಸಮಾಸ ಪದಗಳು ಬಳಕೆಯಾಗುತ್ತಿವೆ. ಉದಾ: ಸ್ಕೋರ್‌ಬಾಲ್‌, ಬ್ಯಾಟಿಂಗ್‌, ಬಾಲ್‌, ಟೆಸ್ಟ್‌ವಿರಾಮ, ಟೆಸ್ಟ್‌ವಿಜಯ, ಕ್ಯಾಚ್‌ಇತ್ತು, ರನ್‌ಚಚ್ಚು, ವಿಕೆಟ್‌ನಷ್ಟ, ಬ್ಯಾಟ್‌ಬೀಸು, ಅಡ್ಜೆಸ್ಟ್‌ಮಾಡು, ಅಂಪೈರ್‌ನಿರ್ಣಯ, ಆಂಗ್ಲಪದಗಳು ಭಾಷಾಂತರವಾಗಿ ಕನ್ನಡದಲ್ಲಿ ಸಮಾಸ ಪದಗಳಾಗುತ್ತವೆ.

Mass – media  ಸಮೂಹ ಮಾಧ್ಯಮ
Rain forest  ಮಳೆಕಾಡು
Tri – party  ತ್ರಿಪಕ್ಷೀಯ
Auditorin  ಶ್ರಾವಕ ಸ್ಥಾನ

ಮುಂತಾದ ಪದಗಳು ಕನ್ನಡ ಭಾಷೆಯ ಜಾಯಮಾನಕ್ಕೆ ತಕ್ಕಂತೆ ಬಳಕೆಯಾಗುತ್ತವೆ. ಕನ್ನಡ ವಾಕ್ಯ ರಚನೆಗಳ ಮೇಲೆ ಆಧುನೀಕರಣ ಪ್ರಭಾವ ಸಾಕಷ್ಟು ಆದರೂ ಈ ಬಗ್ಗೆ ಅಧ್ಯಯನಗಳು ನಡೆದಿಲ್ಲ. ಕನ್ನಡದಲ್ಲಿ (ದ್ರಾವಿಡ ಭಾಷೆಗಳಲ್ಲಿ) ಇಲ್ಲದ ಕರ್ಮಣಿ ಪ್ರಯೋಗ ದಿನಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಉದಾ: ಮಂತ್ರಿಗಳು ಹೇಳಲ್ಪಟ್ಟರು, ಇದು ಅವರಿಂದ ಹೇಗೆ ಸಾಧಿಸಲ್ಪಟ್ಟಿತು ಮುಂತಾದವು. ಅರ್ಥ ಸಂದಿಗ್ಧತೆಯನ್ನು ಹೊಂದಿದ ವಾಕ್ಯ ರಚನೆಗಳು ವೃತ್ತಪತ್ರಿಕೆಗಳಲ್ಲಿ ಬಳಕೆಯಾಗುತ್ತವೆ. ಉದಾ: ಭ್ರಷ್ಟ ಅಧಿಕಾರಿಗಳನ್ನು ಮಂತ್ರಿಗಳು ವರ್ಗಾಯಿಸಿದರು. ತನ್ನ ಪುಸ್ತಕವನ್ನು ಹರಿದ ಹುಡುಗನಿಗೆ ರಾಜು ಬೈದನು. ಈ ವಾಕ್ಯಗಳಲ್ಲಿ ಬಳಕೆಯಾದ ವ್ಯಾಕರಣ ಘಟಕಗಳ ನಿಕಟ ಸಂಬಂಧವನ್ನು ಗುರುತಿಸುವುದು ಕಷ್ಟ. ಇದರಿಂದ ಅರ್ಥ ಸಂದಿಗ್ಧತೆ ಉಂಟಾಗುತ್ತದೆ. ಪತ್ರಿಕೆಗಳಲ್ಲಿ ಸೂಚಿತಾರ್ಥವನ್ನು ಕೊಡುವ ವಾಕ್ಯಗಳು ಕಾಣಿಸುತ್ತವೆ. ಉದಾ: ಅವನು ದುಡ್ಡು ಎಂದರೆ ಸಾಯುತ್ತಾನೆ (ಹಣದ ಬಗ್ಗೆ ಆಸೆ ಇದೆ), ಸಿನಿಮಾ ಎಂದರೆ ಪ್ರಾಣ ಬಿಡುತ್ತಾನೆ (ಸಿನಿಮಾ ನೋಡುವುದರ ಬಗ್ಗೆ ತುಂಬ ಉತ್ಸಾಹವಿದೆ).

ಪತ್ರಿಕೆಗಳ ಕ್ರೀಡಾ ಭಾಗದಲ್ಲಿಯ ಶೀರ್ಷಿಕೆ ಬರಹಗಳಲ್ಲಿ ಆಟದ ಪರಿಣಾಮ ಹಾಗೂ ಗತಿಯನ್ನು ಹೇಳುವಾಗ, ವಾಕ್ಯಗಳ ಮಧ್ಯ ಆಂಗ್ಲಪದಗಳು ವಿಪುಲವಾಗಿ ಸೇರುತ್ತವೆ. ಆಟದಲ್ಲಿ ಚೆನ್ನಾಗಿ ಆಡಿದ ತಂಡದ ಪರವಾಗಿ ಹೇಳುವಾಗ

ಭಾರತಕ್ಕೆ ಇನಿಂಗ್ಸ್‌ಜಯ
ಇನಿಂಗ್ಸ್‌ಜಯದ ಹಾದಿಯಲ್ಲಿ ಭಾರತ
ಸತತ ಇನಿಂಗ್ಸ್‌ಜಯದತ್ತ ಭಾರತ
ಭಾರತಕ್ಕೆ ಇನಿಂಗ್ಸ್‌ವಿಜಯದ ಹ್ಯಾಟ್ರಿಕ್‌
ಉತ್ತಮ ಸ್ಥಿತಿಯಲ್ಲಿ ಭಾರತ
ಗೆಲುವಿನತ್ತ ಭಾರತ ದಾಪುಗಾಲು ಮುಂತಾದವು.

ಚೆನ್ನಾಗಿ ಆಡಿದ ತಂಡ ಸ್ಥಿತಿಯನ್ನು ಹೇಳುವಾಗ

ಶ್ರೀಲಂಕಾಕ್ಕೆ ಫಾಲೋ ಆನ್‌ಭೀತಿ
ಸ್ಪಿನ್ನಿಗೆ ಮತ್ತೆ ಕುಸಿದ ಶ್ರೀಲಂಕಾ
ಭಾರತದ ಸ್ಪಿನ್ನಿಗೆ ಚಡಪಡಿಸಿದ ಆಸ್ಟ್ರೇಲಿಯಾ
ಮತ್ತೆ ಕಾಲು ಜಾರಿದ ಶ್ರೀಲಂಕಾ ಮುಂತಾದವು.

ಇಂಗ್ಲಿಶ್‌ವಾಕ್ಯರಚನೆಯ ಮಾದರಿಯಲ್ಲಿ ಈ ರೀತಿ ಕನ್ನಡದಲ್ಲಿ ಅನುವಾದಗಳಾಗಿವೆ. ಇಂತಹ ವಾಕ್ಯಗಳು ಕನ್ನಡದಲ್ಲಿ ಬಳಕೆಯಾಗುತ್ತಿವೆ.

ಉಪಭಾಷಾ ರೂಪಗಳು ಬರವಣಿಗೆಯ ರೂಪವನ್ನು ಪಡೆದುಕೊಂಡಿವೆ. ಸಣ್ಣ ಪತ್ರಿಕೆಗಳಲ್ಲಿ ಈ ಪ್ರಕ್ರಿಯೆ ಧಾರಾಳವಾಗಿ ಕಂಡುಬರುತ್ತಿದೆ (ಲೋಕದರ್ಶನ, ಗೋಕಾಕ ಟೈಮ್ಸ್‌ಮುಂತಾದವು). ಬೆಳಗಾವಿ ಪ್ರದೇಶದ ಸಣ್ಣ ಪತ್ರಿಕೆಗಳಲ್ಲಿ ಆ ಭಾಗದ ಉಪಭಾಷೆ ರೂಪಗಳು ದೊರೆಯುತ್ತವೆ. ಚಲೋ, ರೊಖ್ಖ, ಸೊಂಡಿ, ಲವುಟ್‌, ಗೆಬಿಕಿ ಮುಂತಾದವು. ಅದರಂತೆ ಮೈಸೂರು ಪತ್ರಿಕೆ, ರಾಮನಗರಂ ಟೈಮ್ಸ್‌, ಕೊಡಚಾದ್ರಿ ಮುಂತಾದ ಮೈಸೂರು ಪ್ರದೇಶದ ಸಣ್ಣ ಪತ್ರಿಕೆಗಳಲ್ಲಿ ಬೊಳ್ಗೆ, ಸಾಮ್ಟೆ, ಸೊಗಸು, ತರುಗಣಿ ಮುಂತಾದವು ಆ ಪ್ರದೇಶದ ನಿತ್ಯಜೀವನದಲ್ಲಿ ಬಳಕೆಯಾಗುವ ಆಡುರೂಪಗಳು ಬರಹಕ್ಕಿಳಿದಿವೆ. ಆಗಾಗ್ಗೆ ಮೈಸೂರು ಪ್ರದೇಶದ ಉಪಭಾಷೆಯ ರಚನೆಗಳು, ವಾಕ್ಯಸರಣಿ ಬೆಳಗಾವಿ ಪ್ರದೇಶದ ಸಣ್ಣ ಪತ್ರಿಕೆಗಳಲ್ಲಿ ಹಾಗೂ ಬೆಳಗಾವಿ ಪ್ರದೇಶದ ಆಡುರೂಪಗಳು ಮೈಸೂರು ಪ್ರದೇಶದ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾ: ಸೊಗಸು, ರೊಖ್ಖ, ಮಂದಿ, ಜನ ಮುಂತಾದ ರೂಪಗಳು ಎಲ್ಲ ಪ್ರದೇಶದ ಕನ್ನಡಿಗರಿಗೆ ಸುಲಭವಾಗಿ ಈಗ ಅರ್ಥವಾಗುತ್ತಿವೆ. ಭಾಷೆಯ ಆಧುನೀಕರಣ ಪ್ರಭಾವದಿಂದ ಉಭಾಷಾ ರೂಪಗಳು ಬರಹಕ್ಕೆ ಇಳಿದಿರುವುದರಿಂದ ಭಾಷಿಕರಿಗೆ ಸಂವಹನ ಸಮಸ್ಯೆ ನಿವಾರಣೆಯಾಗಿದೆ ಎಂದೇ ಹೇಳಬೇಕು. ಇಂತಹ ನಿಟ್ಟಿನಲ್ಲಿ ಉಪಭಾಷಾ ನಿಘಂಟುಗಳು ಒಂದು ಭೂ ಪ್ರದೇಶದ ಅಧ್ಯಯನಕ್ಕೆ ತುಂಬ ನೆರವಾಗುತ್ತವೆ.

ಭಾಷಾ ಆಧುನೀಕರಣ ಪ್ರಕ್ರಿಯೆ ನಿರಂತರವಾಗಿ ಹರಿಯುವ ಧಾರೆಯಿದಂತೆ. ಪರಿವರ್ತನಶೀಲತೆ ಅದರ ಲಕ್ಷಣ. ಮೇಲೆ ಹೇಳಿದ ನಿಯಮಗಳು, ಉದಾಹರಣೆಗಳು ಸ್ಥಿರವಾಗಿ ನಿಲ್ಲಲಾರವು. ಅಭಿವ್ಯಕ್ತಿಸುವ, ಅರ್ಥೈಸುವ, ವಿಧಾನಗಳಲ್ಲಿ ಬದಲಾವಣೆಯಾಗುತ್ತಾ ಹೋಗುತ್ತವೆ ಎಂಬುದನ್ನು ಮರೆಯಬಾರದು. ಆಧುನೀಕರಣದ ಅಧ್ಯಯನ ಕನ್ನಡದಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ನಡೆದಿಲ್ಲ. ಪತ್ರಿಕೋದ್ಯಮ, ಭಾಷಾವಿಜ್ಞಾನ, ಮನೋವಿಜ್ಞಾನ, ಸಮಾಜಶಾಸ್ತ್ರ ಮುಂತಾದ ವಿಷಯಗಳ ಸಹಾಯ ಪಡೆದು ಆಧುನೀಕರಣ ಅಧ್ಯಯನ ನಡೆಯಬೇಕಾಗಿದೆ. ಶಿಕ್ಷಣ, ಆಡಳಿತ, ಸಮೂಹ ಮಾಧ್ಯ, ವ್ಯವಹಾರ ಮುಂತಾದ ವಲಯಗಳಲ್ಲಿ ಭಾಷೆ ಬಳಕೆಯಾಗುತ್ತಿದೆ. ಅದು ವ್ಯವಸ್ಥಿತವಾಗಿ ಬಳಕೆಯಾಗಬೇಕು. ಭಾಷಾವಿಜ್ಞಾನಿಗಳು ಮೇಲೆ ಹೇಳಿದ ವಿವಿಧ ವಿಷಯಗಳ ವಿದ್ವಾಂಸರ ಸಹಾಯ ಪಡೆದು ಭಾಷಾ ಯೋಜನೆಗಳನ್ನು ರೂಪಿಸಬೇಕು. ಆ ವೇಳೆಯಲ್ಲಿ ಆಧುನೀಕರಣಕ್ಕೆ ಆದ್ಯ ಗಮನಕೊಡಬೇಕು. ಕನ್ನಡ ಭಾಷೆಯನ್ನು ಸಾರ್ಥಕವಾದ ರೀತಿಯಲ್ಲಿ ಬಳಸಲಿಕ್ಕೆ, ಬೆಳೆಸಲಿಕ್ಕೆ ಆಧುನೀಕರಣ ಮತ್ತು ಪ್ರಮಾಣೀಕರಣದ ಚೌಕಟ್ಟಿನಲ್ಲಿ ಕನ್ನಡ ಭಾಷೆಯ ಅಧ್ಯಯನ ನಡೆಯಬೇಕಾಗಿದೆ ಎಂದು ಸೂಚಿಸ ಬಯಸುತ್ತೇನೆ.

ಆಂಗ್ಲದಿಂದ ಕನ್ನಡಕ್ಕೆ ಅನುವಾದದ ಕೆಲವು ಪದಗಳಲ್ಲಿ ಆಂಗ್ಲಪದಗಳ ಅಂತ್ಯ Ization/Isation ಪ್ರತ್ಯಯವಿದ್ದರೆ ಅದಕ್ಕೆ ಸಂವಾದಿಯಾಗಿ ‘ಈಕರಣ’ ಪ್ರತ್ಯಯವನ್ನು ಕನ್ನಡದಲ್ಲಿ ಬಳಸುವ ರೂಢಿ ಇದೆ.

ಉದಾ:

Modernization  ಆಧುನೀಕರಣ
Standernization  ಪ್ರಮಾಣೀಕರಣ
Nationalization  ರಾಷ್ಟ್ರೀಕರಣ
Westernization  ಪಾಶ್ಚಾತ್ತೀಕರಣ
Sanskrization  ಸಂಸ್ಕೃತೀಕರಣ
Urbanization  ನಗರೀಕರಣ
Centralization  ಕೇಂದ್ರೀಕರಣ
Industrialization  ಔದ್ಯೋಗಿಕರಣ

ಇಂತಹ ಅನೇಕ ರೂಪಗಳು ಕನ್ನಡ ಭಾಷಾ ಬಳಕೆಯ ಬೇರೆ ಬೇರೆ ವಲಯಗಳಲ್ಲಿ ಬಳಕೆಯಾಗುತ್ತವೆ. Ization/isation ಸಮಾನವಾಗಿ ‘ಈಕರಣ’ ಪ್ರತ್ಯಯ ಹತ್ತುವಲ್ಲಿ ಒಂದು ನಿಯಮವಿರುವಂತೆ ಕಾಣುತ್ತದೆ.

ಆಧುನಿಕ + ಈಕರಣ  ಆಧುನೀಕರಣ
ಕೇಂದ್ರೀಯ + ಈಕರಣ  ಕೇಂದ್ರೀಕರಣ
ಔದ್ಯೋಗಿಕ + ಈಕರಣ  ಔದ್ಯೋಗೀಕರಣ

ಈ ಉದಾಹರಣೆಗಳನ್ನು ಗಮನಿಸಿದಾಗ ಅವು ಮುಂದೆ ಸಮಾನಪದಗಳಾಗುವಾಗ ಪೂರ್ವಪದ ಕೊನೆಯ ವರ್ಣ ಲೋಪವಾಗುತ್ತವೆ. (ಕ.ಯ.ಕ.) (ಅದರ ಹಿಂದಿನ ವರ್ಣ ದೀರ್ಘವಾಗುತ್ತದೆ). ಈ ನಿಯಮ ‘ಈಕರಣ’ ಹತ್ತುವ ಎಲ್ಲ ಪದರಚನೆಗಳಲ್ಲಿಯೂ ಕಂಡುಬರುತ್ತದೆ. ಇದು ಹೆಚ್ಚಾಗಿ ಕನ್ನಡದಲ್ಲಿ ಬಳಕೆಯಾಗುವ ಸಂಸ್ಕೃತ ನಾಮಪದ ಪುಂಜಗಳಿಗೆ ಮಾತ್ರ ಅನ್ವಯವಾಗುತ್ತದೆ. ಸಂಸ್ಕೃತ ಪ್ರಕೃತಿ ರೂಪಕ್ಕೆ ‘ಈಕರಣ’ ಪ್ರತ್ಯಯ ಹಚ್ಚಿ ಸಮಾಸ ರೂಪಗಳು ಸಿದ್ಧವಾಗುತ್ತವೆ.

ಆಧುನಿಕ + ಈಕರಣ ಆಧುನೀಕರಣ

‘ಆಧುನೀಕರಣ’ವಾಗುವಲ್ಲಿ ಸೌಲಭ್ಯಾಕಾಂಕ್ಷೆ ಕಾರಣವಲ್ಲ, ಅಲ್ಲಿ ಸಂಧಿಕ್ರಿಯೆ ನಡೆಯುತ್ತದೆ ಎಂಬುದನ್ನು ಗಮನಿಸಬೇಕು. ‘ಈಕರಣ’ ಎಂದರೆ ಮಾಡುವಂತಹದು ಎಂಬರ್ಥವನ್ನು ಸೂಚಿಸುತ್ತದೆ.

ಉದಾಹರಣೆಗೆ: ಕೇಂದ್ರೀಕರಣ – ಕೇಂದ್ರೀಕರಣ ಮಾಡುವುದು ಎಂದರ್ಥ. ಕೈಗಾರೀಕರಣ – ಕೈಗಾರೀಕರಣ ಮಾಡುವುದು (ಮಾಡುವಂತಹದು) ಎಂಬರ್ಥ. ಭಾಷೆಯಲ್ಲಿ ಬಳಕೆಯಾಗುವ ಇಂತಹ ಪದರಚನೆಗಳನ್ನು ಅವುಗಳ ಹಿಂದಿನ ಸಮಾಜೋ – ಭಾಷಿಕ ಕ್ರಿಯೆಗಳ ಸಂದರ್ಭವನ್ನು ಗಮನಿಸಬೇಕಾಗುತ್ತದೆ.

ಮೇಲಿನ ಉದಾಹರಣೆಗಳಲ್ಲಿ ಪೂರ್ವಪದಗಳಾದ Modern, Standard, Central ಮುಂತಾದವುಗಳನ್ನು ನಮ್ಮ ಭಾಷಾ ರಚನೆಗೆ ಅನುಗುಣವಾಗಿ ಸ್ವೀಕರಿಸಿದ್ದೇವೆ (ಅವೆಲ್ಲ ಶಬ್ದಸ್ವೀಕರಣಗಳಾಗಿವೆ). ಆದರೆ ization ಮತ್ತು ಅದಕ್ಕೆ ಸಂವಾದಿಯಾಗಿ ಬರುವ ‘ಈಕರಣ’ ಪ್ರತ್ಯಯ ಕನ್ನಡದಲ್ಲಿ ಬಳಕೆಯಾಗುವ ಸಂಸ್ಕೃತ ಪದಗಳಿಗೆ ಅನ್ವಯವಾಗುತ್ತದೆ. ಸಾದೃಶ್ಯ ಸೃಷ್ಟಿಯಿಂದ ಅನೇಕ ಹೊಸ ಪದಗಳು ಸೃಷ್ಟಿಯಾಗಿ ಬಳಕೆಯಾಗುತ್ತವೆ. ಇದರಿಂದ ಕನ್ನಡ ಶಬ್ದಕೋಶ ಬೆಳವಣಿಕೆಯೂ ಆಗುತ್ತದೆ. ಅಲ್ಲದೆ ನಾವು ಬಳಸುವ ಈ ಮಾದರಿಯ ರೂಪಗಳು ವಿದ್ಯಾವಂತ, ಅವಿದ್ಯಾವಂತ ಭಾಷಿಕರ ಅರ್ಥಗ್ರಹಣಕ್ಕೆ, ಅಭಿವ್ಯ್ಕತಿಕರಣಕ್ಕೆ ಹಾಗೂ ಸಂವಹನಕ್ಕೆ ಯಾವುದೇ ರೀತಿಯ ತೊಂದರೆಯಾಗದಿರುವುದರಿಂದ ಕನ್ನಡ ಭಾಷೆಯ ಪದರಚನೆಯ ಜಾಯಮಾನಕ್ಕೆ ಅವು ಹೊಂದಿಕೆಯಾಗಿವೆ.

ಭಾಷೆಯ ಆಧುನೀಕರಣ ಮತ್ತು ಜಾಗತೀಕರಣದಿಂದ ಕನ್ನಡ ಭಾಷೆ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿದೆ. ದಿನದಿನವೂ ಕನ್ನಡದ ಪದ ರಚನೆ ಬದಲಾಗುತ್ತಿದೆ. ಹೊಸ ರೀತಿಯ – ಬಳಕೆಗೆ ಕನ್ನಡ ಭಾಷೆಯನ್ನು ಸನ್ನದ್ಧಗೊಳಿಸಬೇಕಾಗಿದೆ. ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಭಿವೃದ್ಧಿ ವಿಭಾಗವು ಈ ನಿಟ್ಟಿನಲ್ಲಿ ಕಾರ್ಯ ತತ್ಪರವಾಗಿದೆ. ಭಾಷೆಯ ಬೆಳವಣಿಗೆಯ ಕ್ರಮವನ್ನು ದಾಖಲಿಸುವ ‘ದಿನದಿನ’ ಎಂಬ ಸಂಪುಟಗಳನ್ನು ಪ್ರಕಟಿಸಿದೆ. ಮಾಧ್ಯಮಗಳಲ್ಲಿ ಬಳಕೆಯಾಗುವ ಹೊಸ ಪದಗಳಿಗೆ ಅರ್ಥ ಹೇಳುವುದು ‘ದಿನದಿನ’ ನಿಘಂಟಿನ ಉದ್ದೇಶವಾಗಿದೆ. ಕೆಲವು ನಮೂದುಗಳನ್ನು ನೋಡಬಹುದು.[5]

ಇಳಿತಾಯ ನಾ ಜಾಹಿರಾತಿನಲ್ಲಿ ಬಳಕೆ. ವಸ್ತುವಿನ ಮಾರುವ ಬೆಲೆಯಲ್ಲಿ ಗ್ರಾಹಕರಿಗೆ ಕೊಡುವ ರಿಯಾಯಿತಿ. ‘ಈ ಬಹುದೊಡ್ಡ ಇಳಿತಾಯಗಳು ಮತ್ತು ಬೆಲೆ ಕೊಡುಗೆಗಳೊಂದಿಗೆ….’ ಉಳಿತಾಯ ರೂಪದ ಮಾದರಿಯಲ್ಲಿ ಈ ರೂಪವನ್ನು ಬಳಸಲಾಗಿದೆ. ‘ಇಳಿಕೆ’ ಬಳಕೆಯಲ್ಲಿರುವ ಪರ್ಯಾಯ ಪದ. ಮಾದರಿ : ಮಿಗುತಾಯ.
ಮಾತುಗಂಟ ನಾ ಮಯೂರ, ಸುಧಾ ಮಾತಾಡುವವನು. ಮಾತು ಕೇಳುವ ಜತೆಗಾರರಿಗಾಗಿ ಕಾತರಿಸುವನು. ‘ಅವನು ಮಾತುಗಂಟ. ಆಡಿದ ಮಾತುಗಳೆಲ್ಲ ತುಪಾಕಿ ಎನಿಸಿದರೂ ಅರ್ಧಕ್ಕೂ ಹೆಚ್ಚು ಭಾಗ ಹುಸಿ’. ಮಾದರಿ : ಜಗಳಗಂಟ.

ಈ ಕೋಶದಲ್ಲಿ ಮುಖ್ಯ ನಮೂದು ಅದರ ವ್ಯಾಕರಣ ವರ್ಗ, ಯಾವ ಮಾಧ್ಯಮದಲ್ಲಿ ಬಳಕೆಯಾಗಿದೆ ಎಂಬುದರ ವಿವರ, ಪ್ರಯೋಗ ಹಾಗೂ ಅರ್ಥ ಹೀಗೆ ಪದದ ವಿವರಣೆ ನಿರೂಪಿತವಾಗಿದೆ. ಇಲ್ಲಿಯ ನಮೂದುಗಳು ಕನ್ನಡದ ಯಾವ ನಿಘಂಟುಗಳಲ್ಲೂ ದಾಖಲಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಕನ್ನಡದ ಬಳಕೆಯ ವಲಯಗಳು (ಶಿಕ್ಷಣ, ನ್ಯಾಯಾಲಯ, ಸಮೂಹ ಮಾಧ್ಯಮ) ಈಗ ಸಿದ್ಧವಾಗಿವೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಪ್ರಮಾಣ ಪರಿಭಾಷೆಗಳ ನಿರ್ಮಾಣವಾಗಬೇಕಾಗಿದೆ. ಪದಗಳ ನಿರ್ಮಾಣ ಮತ್ತು ಬಳಕೆ ಒಂದರ್ಥದಲ್ಲಿ ನಡೆಯುವ ನಿರಂತರ ಕ್ರಿಯೆ, ಚಲನಶೀಲತೆ ಭಾಷೆಯ ಲಕ್ಷಣವಾಗಿರುವುದರಿಂದ ಭಾಷೆಗಳು ತಮ್ಮ ಪದಕೋಶದ ಬೆಳವಣಿಗೆಗಾಗಿ ದೇಶ್ಯ ಮತ್ತು ಅನ್ಯದೇಶ್ಯ ಮೂಲದ ಪದಗಳನ್ನು ಪಡೆಯುತ್ತವೆ. ಆಧುನೀಕರಣವು ಕನ್ನಡ ರಚನೆಗೆ ಚಾಲನೆ ನೀಡುತ್ತದೆಯಲ್ಲದೆ ಪದಕೋಶ ಬೆಳವಣಿಗೆಗೆ ಹೊಸ ಆಯಾಮವನ್ನು ಹಾಗೂ ಅರ್ಥವ್ಯಾಪ್ತಿಯನ್ನುಂಟು ಮಾಡಿತು.

 

[1] ಎ. ಚಿದಾನಂದಮೂರ್ತಿ – ‘ವಾರ್ತಾಮಾಧ್ಯಮದಲ್ಲಿಕನ್ನಡಭಾಷೆಯಆಧುನೀಕರಣ’ (ವಾಗರ್ಥ). ಎಸ್‌. ಎನ್‌. ಶ್ರೀಧರ-ಭಾಷಾಆಧುನೀಕರಣ; ರಾಚನಿಕಮತ್ತುಸಮಾಜೋಭಾಷಿಕಆಯಾಮಗಳು. ‘ಸಂಶೋಧನ’ (ಎಂ. ಚಿದಾನಂದಮೂರ್ತಿಗೌರವಸಂಪುಟ) ಸಂ. ಲಕ್ಷ್ಮಣ್‌ತೆಲಗಾವಿ.

[2] ಸಮೂಹಮಾಧ್ಯಮಗಳಲ್ಲಿಬಳಕೆಯಾಗುವಹೊಸಹೊಸಪದಗಳನ್ನುಗುರುತಿಸಿಅವುಗಳಿಗೆಅರ್ಥವನ್ನುದಾಖಲಿಸುವಪ್ರಯತ್ನವನ್ನುಕನ್ನಡವಿಶ್ವವಿದ್ಯಾಲಯದ ‘ನಮ್ಮಕನ್ನಡ’ ಸಂಪತ್ರಿಕೆಮಾಡಿಕೊಡುತ್ತಿದೆ (ಸಂ). ಕೆ. ವಿ. ನಾರಾಯಣಮತ್ತುಇತರರು.

[3] ೧೯೯೪ರಲ್ಲಿಕನ್ನಡವಿಶ್ವವಿದ್ಯಾಲಯದಕನ್ನಡಭಾಷಾಭಿವೃದ್ಧಿ. ವಿಭಾಗವುಕನ್ನಡದಲ್ಲಿನಡೆಯುತ್ತಿರುವಭಾಷಾಬಳಕೆಯಬದಲಾವಣೆಗಳನ್ನುಕಂಡುಕೊಳ್ಳುವ ‘ದಿನದಿನ’ ಎಂಬಯೋಜನೆಯನ್ನುಹಮ್ಮಿಕೊಂಡಿತ್ತು. ಪ್ರತಿದಿನಭಾಷಾಬಳಕೆಯಹೊಸಸಾಧ್ಯತೆಗಳಬಗೆಗೆವಿಶಿಷ್ಟಪದ, ವಾಕ್ಯಪ್ರಯೋಗದಬಗ್ಗೆಕೆಲವುಸಮಸ್ಯೆಗಳನ್ನುಕೊಟ್ಟುಅವುಗಳಿಗೆಪ್ರತಿಕ್ರಿಯೆಗಳನ್ನುಕೇಳಲಾಗುತ್ತಿತ್ತು. ನಾನೂಸೇರಿದಂತೆಅನೇಕರುಪ್ರತಿಕ್ರಿಯಿಸುತ್ತಿದ್ದರು. ಆಸಮಸ್ಯೆಗಳಿಗೆಉತ್ತರರೂಪದಲ್ಲಿನನ್ನಪ್ರತಿಕ್ರಿಯೆಗಳನ್ನುಇಲ್ಲಿಬಳಸಿಕೊಂಡಿದ್ದೇನೆ.

[4] ‘ಗಾರ’ ತದ್ಧಿತಪ್ರತ್ಯಯಹತ್ತಿದರೂಪಗಳುಕ್ರೀಡಾರಿಜಿಸ್ಟರಿನಲ್ಲಿಕಂಡುಬರುತ್ತವೆ.

[5] ‘ದಿನದಿನ’ (೧೯೯೭) ಸಂ. ಕೆ.ವಿ. ನಾರಾಯಣಮತ್ತುಇತರರು. ಕ.ವಿ.ವಿ.ಹಂಪಿಪು. ೨೫, ೧೨೧.