ಒಂದು ಭಾಷೆಯಲ್ಲಿರುವ ಮೂಲ ಮತ್ತು ಸಮಸ್ತ ರೂಪಗಳನ್ನು ಗುರುತಿಸಿ ಅವುಗಳನ್ನು ಸಂಯೋಜಿಸುವ ವಿಧಾನವೆ ನಿಘಂಟು ರಚನೆ. ಒಬ್ಬ ಭಾಷಿಕ ಒಂದು ಭಾಷೆಯನ್ನು ಸಮರ್ಥವಾಗಿ ಬಳಸುತ್ತಾನೆಂದರೆ ಅವನು ಆ ಭಾಷೆಯ ರಚನೆಗಳನ್ನೆಲ್ಲ ಅರಿತಿರುತ್ತಾನೆಂದಲ್ಲ. ಅವನು ಆ ಭಾಷೆಯನ್ನು ಕೇಳುಗನಾಗಿ ಹಾಗೂ ಮಾತನಾಡುವವನಾಗಿ ಬಳಸಬಲ್ಲ. ಆದರೆ ಭಾಷಾ ರೂಪಗಳನ್ನು ಕಲೆಹಾಕಿ ಸಂಯೋಜಿಸಲು ಅವನು ಅಸಮರ್ಥನಾಗುತ್ತಾನೆ. ವಿಶಿಷ್ಟವಾದ ತರಬೇತಿಯಿಂದ ಮಾತ್ರ ವ್ಯಕ್ತಿ ಭಾಷಿಕ ರೂಪಗಳನ್ನು ಕಲೆಹಾಕಿ ಸಂಯೋಜಿಸಲು ಸಾಧ್ಯ. ಒಂದು ಭಾಷೆಯಲ್ಲಿನ ನಿಘಂಟಿಮಗಳನ್ನು ಕಲೆಹಾಕಿ ವ್ಯವಸ್ಥಿತವಾಗಿ ಸಂಯೋಜಿಸಿ, ಅರ್ಥೈಸುವ ವ್ಯಕ್ತಿಗೆ ನಿಘಂಟುಕಾರ ಎಂದು ಹೆಸರು. ಆದರೆ ನಿಘಂಟು ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯೂ ನಿಘಂಟುಕಾರ ಆಗಲಾರ. ಅವನು ಕೆಲವು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.

ನಿಘಂಟುಕಾರ ನಿಘಂಟುಶಾಸ್ತ್ರದ ಮೂಲತತ್ವಗಳನ್ನು, ಕ್ಷೇತ್ರಕಾರ್ಯದ ವಿಧಾನಗಳನ್ನು ಅರಿತವನಾಗಿರಬೇಕು. ವಿಶೇಷವಾಗಿ ಧ್ವನಿರಚನೆ ಮತ್ತು ಆಕೃತಿಮಾ ರಚನೆಯಲ್ಲಿ ತರಬೇತಿ ಹೊಂದಿರಬೇಕು. ನಿಘಂಟಿಮಗಳನ್ನು ಸಂಗ್ರಹಿಸುವಾಗ, ಸಂಯೋಜಿಸುವಾಗ ನಿಘಂಟುಕಾರನಿಗೆ ಧ್ವನಿಮಾ, ಆಕೃತಿಮಾ, ವಾಕ್ಯರಚನೆ, ಶಬ್ದಕೋಶದ ನಿಯಮಗಳು, ಧ್ವನ್ಯಾಲೇಖ, ಧ್ವನಿಮಾಲೇಖ ಮುಂತಾದವುಗಳಲ್ಲಿ ಪರಿಣತಿ ಮತ್ತು ಪ್ರಭುತ್ವ ಹೊಂದಿರಬೇಕಲ್ಲದೆ ಅವುಗಳನ್ನು ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸುವ ಕೌಶಲ್ಯ ಹೊಂದಿರಬೇಕು. ಭಾಷಾ ಸಮುದಾಯದಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಸಂದರ್ಭದಲ್ಲಿ ಭಾಷಾಬಳಕೆಯ ರೀತಿಯನ್ನು ತಿಳಿದವನಾಗಿರಬೇಕು. ಭಾಷಾಸಮುದಾಯದ ಸದಸ್ಯರ (ಭಾಷಿಕರ) ವರ್ತನೆಗಳನ್ನು, ಒಲವು – ನಿಲುವುಗಳನ್ನು ಅರಿಯಲಿಕ್ಕೆ ನಿಘಂಟುಕಾರನಿಗೆ ಮನಃಶಾಸ್ತ್ರ,, ಸಮಾಜಶಾಸ್ತ್ರ, ಜಾನಪದಶಾಸ್ತ್ರ ಹಾಗೂ ಭಾಷಾವಿಜ್ಞಾನದ ತಕ್ಕಮಟ್ಟಿನ ಜ್ಞಾನ ಇರಬೇಕಾಗುತ್ತದೆ. ನಿಘಂಟು ವಿಶ್ಲೇಷಣೆಯ ಆಧುನಿಕ ಸಿದ್ಧಾಂತಗಳ ಸ್ಪಷ್ಟ ತಿಳಿವಳಿಕೆ ಹೊಂದಿರಬೇಕಲ್ಲದೆ ಅವುಗಳನ್ನು ತಾನು ತಯಾರಿಸುವ ನಿಘಂಟು ರಚನೆಯಲ್ಲಿ ಬಳಸಿಕೊಳ್ಳಬೇಕು.

ನಿಘಂಟು ರಚನೆ ಎರಡು ಹಂತಗಳಲ್ಲಿ ನಡೆಯುತ್ತದೆ. ಮೊದಲನೆಯದು ಸಂಗ್ರಹಣೆ. ಎರಡನೆಯದು ಸಂಯೋಜನೆ. ಸಂಗ್ರಹಣೆಯ ಸಂದರ್ಭದಲ್ಲಿ ನಿರೂಪಕರು ಉಚ್ಚರಿಸಿದ ಭಾಷಾ ಘಟಕಗಳನ್ನು ಅಂತರರಾಷ್ಟ್ರೀಯ ಲೇಖನದ ಮೂಲಕ ಆಲೇಖಿಸಿಕೊಳ್ಳಬೇಕಾಗುತ್ತದೆ. ಅನಂತರ ಸಂಗ್ರಹಿಸಿದ ದತ್ತಗಳ, ವಿಶ್ಲೇಷಣೆಗೆ ಸಹಾಯವಾಗುವಂತೆ ಸಂಯೋಜಿಸಲಾಗುತ್ತದೆ. ಮೇಲ್ನೋಟಕ್ಕೆ ಸಂಗ್ರಹಣೆ ಹಾಗೂ ಸಂಯೋಜನೆ ಬೇರೆ ಬೇರೆ ಎಂದು ತಾತ್ವಿಕವಾಗಿ ವಿಭಾಗ ಮಾಡಿದರೂ ಅವು ಒಂದರೊಳಗೊಂದು ಹೆಣೆದುಕೊಂಡಿವೆ. ನಿಘಂಟಿಮಗಳ ಸಂಗ್ರಹ ನಡೆದಂತೆಯೇ ನಿಘಂಟುಕಾರನ ಮನಸ್ಸಿನಲ್ಲಿ ಸಂಯೋಜನೆಯ ವಿಚಾರಗಳೂ ಬರುತ್ತಿರುತ್ತವೆ. ಆಗ ಸಂಗ್ರಹಿಸಿದ ದತ್ತದ ಸಂಯೋಜನೆ ಮಾಡಿ ಮತ್ತೆ ದತ್ತ ಸಂಗ್ರಹಿಸಬೇಕಾಗುತ್ತದೆ. ಇದೇ ರೀತಿ ನಿಘಂಟಿಮಗಳ ಸಂಗ್ರಹಣೆ, ಸಂಯೋಜನೆ ಅವುಗಳ ತುಲನೆ, ಪರಿಶೀಲನೆ ಈ ಪ್ರಕ್ರಿಯೆ ನಿರಂತರವಾಗಿ ನಡೆದೇ ಇರುತ್ತದೆ.

ಶಬ್ದಾರ್ಥಗಳನ್ನು ವಿವೇಚಿಸುವಾಗ ಕೋಶಕಾರನಿಗೆ ಎಷ್ಟು ಎಚ್ಚರಿಕೆ, ಹಿಂಜರಿಕೆಗಳಿದ್ದರೂ ಕಡಿಮೆಯೇ. ಕೋಶ ಸಿದ್ಧತೆಯಲ್ಲಿ ಮೂಲರೂಪ ಮತ್ತು ಸಮಸ್ತ ರೂಪಗಳನ್ನು ಮಾತ್ರ ಮುಖ್ಯ ನಮೂದುಗಳನ್ನಾಗಿ ಕೊಡಬೇಕು. ಸಾಧಿತ ರೂಪಗಳನ್ನು ಮೂಲರೂಪಗಳ ಅಡಿಯಲ್ಲಿಯೇ ಕೊಡಬೇಕು. ಏಕಭಾಷಿಕ ನಿಘಂಟು ರಚನೆಯನ್ನು ಅನುಲಕ್ಷಿಸಿ ಕೆಲವು ಮಾತುಗಳನ್ನು ಇಲ್ಲಿ ಹೇಳಲಾಗಿದೆ. ಅತಿ (ನಾ) ಹೆಚ್ಚು; ಅಧಿಕ. ~ ಅಲ್ಪ = ತೀರ ಕಡಿಮೆಯಾದ ಇಲ್ಲಿ ‘ಅತ್ಯಲ್ಪ’ವನ್ನು ಮುಖ್ಯ ನಮೂದಾಗಿ ಕೊಡಬಾರದು. ಸಾಧಿತ ರೂಪಗಳಲ್ಲಿ ಅರ್ಥ ಭಿನ್ನತೆಯಿದ್ದರೆ ಮುಖ್ಯ ನಮೂದನ್ನಾಗಿ ಕೊಡಬೇಕು. ಉದಾ: ಅತಿಕ್ರಮ (ನಾ): ೧. ಮೀರುವುದು ೨. ನಿಯಮ ವಿರುದ್ಧವಾದುದು. ಭಿನ್ನ ವ್ಯಾಕರಣ ವರ್ಗಕ್ಕೆ ಸೇರಿದ ಹಾಗೂ ರೂಪ ಸಾಮ್ಯವಿರುವ ಶಬ್ದಗಳನ್ನು ಒಂದೇ ಮುಖ್ಯ ಉಲ್ಲೇಖವನ್ನಾಗಿ ಕೊಡಬೇಕು. ಉದಾ: ಕರಿ (ಕ್ರಿ) ೧. ಸುಟ್ಟು ಕರಿಗಾಗು ೨. ಸುಡು (ನಾ) ೧.ಕರಿಯಬಣ್ಣ ೨. ಅಶುಭ ಪ್ರಾದೇಶಿಕ ರೂಪಗಳನ್ನು ದಾಖಲಿಸಬೇಕು. ಉದಾ: ಕರುಳು~ಕಳ್ಳ, ನೆರಳು – ನೆಳ್ಳ, ಧಣಿವು – ರಗಡ (ಬೆಳಗಾವಿ).

ಕನ್ನಡದಲ್ಲಿ ಬಿಂದು ಸಹಿತವಾಗಿಯೂ ಬಿಂದುರಹಿತವಾಗಿಯೂ ಇರುವ ಕಲವು ಶಬ್ದಗಳಿಗೆ ಸಮಾನವಾದ ಅರ್ಥ ಇರುವುದುಂಟು. ಆ ಬಗೆಯ ಶಬ್ದಗಳನ್ನು ಕೊಡುವಾಗ ಬಿಂದುವಿಗೆ ಕಂಸನ್ನು ಹಾಕಿ ಎರಡನ್ನೂ ಒಂದೇ ಮುಖ್ಯ ಉಲ್ಲೇಖವನ್ನಾಗಿ ಕೊಡಬೇಕು. ತೋ(೦)ಟ, ನೂ(೦)ಕು, ಮಲ(೦)ಗು ಮುಂ. ಕೋಶಗಳಲ್ಲಿ ಮುಖ್ಯ ಉಲ್ಲೇಖಗಳು, ಉಪ ಉಲ್ಲೇಖಗಳು ಸ್ಪಷ್ಟವಾಗಿ ಗೋಚರವಾಗಲು ವಿರಾಮ ಚಿಹ್ನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಕೋಶಗಳಲ್ಲಿ ಪೂರ್ಣ ವಿರಾಮ, ಅಲ್ಪವಿರಾಮ, ಅರ್ಧವಿರಾಮ, ಪ್ರಶ್ನಾರ್ಥಕ, ದುಂಡುಕಂಸ, ಉದ್ಗಾರವಾಚಕ, ಕಿರುಗೆರೆ ಇಂತಹ ವಿರಾಮ ಚಿಹ್ನೆಗಳನ್ನು ಸಂದರ್ಭೋಚಿತವಾಗಿ ಬಳಸಬೇಕು. ಅವು ಪದಗಳ ನಿಖರತೆ ಮತ್ತು ಅರ್ಥ ಸ್ಪಷ್ಟತೆಯನ್ನುಂಟು ಮಾಡುವಲ್ಲಿ ತುಂಬ ನೆರವಾಗುತ್ತವೆ.

ಶಬ್ದಾರ್ಥ ವಿವೇಚನೆಯ ನಿಖರತೆಗೆ ನಿಘಂಟುಕಾರ ಕಾವ್ಯಗಳನ್ನು ಚೆನ್ನಾಗಿ ಓದಿದವನಾಗಿರಬೇಕು. ಸಾಹಿತ್ಯ ಸಂಬಂಧಿಶಾಸ್ತ್ರಗಳನ್ನು ತಿಳಿದವನಾಗಿರಬೇಕು. ಗ್ರಂಥಸಂಪಾದನೆಯ ತತ್ವಗಳನ್ನು ಅರಿತವನಾಗಿರಬೇಕು. ನಿಘಂಟು ರಚನೆಯಲ್ಲಿ ಒಪ್ಪಿತ ಪಾಠಗಳ ಕೃತಿಗಳು ಅತ್ಯಗತ್ಯ. ಶಾಸ್ತ್ರೀಯವಾಗಿ ಸಂಪಾದಿತವಲ್ಲದ ಕೃತಿಗಳಿಂದ ಅಪಶಬ್ಧಗಳೂ ಮಿಥ್ಯಾ ಶಬ್ದಗಳೂ ನಿಘಂಟುವಿನಲ್ಲಿ ಎಡೆ ಪಡೆಯುತ್ತವೆ. ಸಂಪಾದನೆಯ ಪರ್ವತೇಶದ ಚತುರಾಚಾರ್ಯದಲ್ಲಿ ಒಂದು ಪದ್ಯದ ಪಾಠ ಇಂತಿದೆ. ‘ತೆರಳ್ದಿ ಪುಲಿಯಂತೆ ಘುಡುಘುಡಿಯಾ ವ್ಯಾಸ ತೆರಳ್ದನಾ’ ಇಲ್ಲಿದ ತೆರಳ್ದಿದ ಪುಲಿಯಂತೆ ಎಂಬುದು ಅರ್ಥವಾಗುವುದಿಲ್ಲ. ಇದು ಲಿಪಿಕಾರನ ದೋಷವಾಗಿರಬಹುದು. ವಾಸ್ತವವಾಗಿ ಅದು ‘ಕೆರಳ್ದೀದ ಪುಲಿಯಂತ ಘುಡುಘುಡುಸಿ’ ಎಂದಿರಬೇಕು. ಶಬ್ದಮಣಿದರ್ಪಣದಲ್ಲಿ ‘ಈಂದ ಪುಲಿಯಾವೊಲಿರ್ದಳ್‌’ ಎಂಬ ಪ್ರಯೋಗದ ನೆರವಿನಿಂದ ಅದನ್ನು ಸರಿಪಡಿಸಲು ಸಾಧ್ಯವಾಯಿತು. ಹೀಗೆ ನಿಘಂಟಿಮಗಳ ಸಾಹಿತ್ಯಗಳನ್ನು ಸರಿಪಡಿಸಲಿಲ್ಕೆ ಕೋಶಕಾರನಿಗೆ ಗ್ರಂಥಸಂಪಾದನೆಯ ತತ್ವಗಳ ಪರಿಚಯವಿರಬೇಕು.

ಶಬ್ದಾರ್ಥ ಖಚಿತೆಗೆ ಕೋಶಕಾರನ ವುತ್ಪತ್ತಿಗೆ ಮಿತಿಯನ್ನು ಹಾಕುವುದಕ್ಕೆ ಸಾಧ್ಯವಿಲ್ಲ. ಚಿದಾನಂದಮೂರ್ತಿಯವರು ನೆಯ್ಯಱಿಸು, ಒಗಟು. ವೆಂಕಟಾಲಶಾಸ್ತ್ರೀ ಅವರು ಖಲ್ವಾಯಿತ ಇಂತಹ ಶಬ್ದಗಳ ನಿರ್ವಚನಕ್ಕೆ ಅವರು ಪಟ್ಟಿರುವ ಶ್ರಮ, ಮಾಡಿರುವ ಆಲೋಚನೆ ಅಪಾರ ಮತ್ತು ಅನುಕರಣೀಯ. ಕೋಶಕಾರ ಕೋಶ ರಚಿಸುವ ಭಾಷೆಯ ಮೇಲೆ ಪ್ರಭುತ್ವವಿರಬೇಕು. ಆ ಭಾಷೆಯ ವಿಭಿನ್ನ ಅವಸ್ಥೆಗಳ ಪರಿಚಯವುಳ್ಳ ವೈಯಾಕರಣಿಯಾಗಿರಬೇಕು. ಜ್ಞಾತಿ ಪದಗಳ ಭಾಷಾಸ್ಕಂದವನ್ನು ತಿಳಿದವನಾಗಿರಬೇಕು. ಸಂಸ್ಕೃತ, ಪ್ರಾಕೃತ ಭಾಷೆಗಳ ಸ್ಥೂಲ ಪರಿಚಯವು ಅವನಿಗಿರಬೇಕು. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವ ಸಾಮರ್ಥ್ಯ ಇರಬೇಕು. ಕೊನೆಯದಾಗಿ ನಿಘಂಟುವಿಗೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ಕ್ರಮವಾಗಿಯೂ ವಿಶದವಾಗಿಯೂ ನಿರೂಪಿಸಿದ ಮೇಲೆ ಕೋಶಕಾರ ತನ್ನ ಕೋಶಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ತನ್ನ ಪ್ರಸ್ತಾವನೆಯಲ್ಲಿ ಸುದೀರ್ಘವಾಗಿ ಪ್ರತಿಪಾದನೆ ಮಾಡಬೇಕು.

ನಿಘಂಟುಕಾರನ ವ್ಯಕ್ತಿತ್ವದ ಬಗ್ಗೆ ಒಂದೆರಡು ಮಾತನ್ನು ಹೇಳಬೇಕು. ನಿಘಂಟುಕಾರ ನಿರೂಪಕರೊಡನೆ, ಸಂಪಾದಕ ಮಂಡಳಿಯ ಸದಸ್ಯರೊಡನೆ ಮುಕ್ತ ಮನಸ್ಸಿನಿಂದ ಬರೆಯುವ ಸರಳ ವ್ಯಕ್ತಿಯಾಗಿರಬೇಕು. ಅವರೊಡನೆ ಸಹನೆ, ಸಹಾನುಭೂತಿಯಿಂದ ಹೊಂದಿಕೊಂಡು ಹೋಗಬೇಕು. ನಿಘಂಟು ರಚನೆ ನಿಘಂಟುಕಾರನ ‘ಬೌದ್ಧಿಕ ಶ್ರಮ’ವನ್ನು ಅವಲಂಬಿಸಿದ ಕೆಲಸ. ಕೋಶರಚನೆಯ ಪ್ರತಿಹಂತದಲ್ಲಿಯೂ ಸತ್ಯ, ತಾಳ್ಮೆ, ಪ್ರಾಮಾಣಿಕತೆಯಿಂದಿರಬೇಕು. ಇವು ಅವನ ಯಶಸ್ಸಿನ ಗುಟ್ಟಿಗೆ ಮುಖ್ಯ ಕಾರಣ. ಆಯ್ದುಕೊಂಡ ಕ್ಷೇತ್ರಕ್ಕೆಯ ಪುನಃ ಪುನಃ ಭೇಟಿ ಕೊಡುವುದರಿಂದ ಹಾಗೂ ಆಯ್ದುಕೊಂಡ ಕೃತಿಯನ್ನು ಪುನಃ ಪುನಃ ಓದುವುದರಿಂದ ನಿಘಂಟುವಿಗೆ ಸಂಬಂಧಿಸಿದ ಹೊಸ ಹೊಸ ಅಂಶಗಳು, ಸಂಗತಿಗಳು ತಿಳಿದುಬರುತ್ತವೆ. ಇದರಿಂದ ಅವನ ನಿಘಂಟು ಸತ್ವಯುತವಾಗುತ್ತದೆ. ಇಂತಹ ಸಾಮರ್ಥ್ಯ ಸಿದ್ಧತೆಗಳಿದ್ದವನು ಮಾತ್ರವೇ ಆದರ್ಶ ಪ್ರಾಯವೂ ಪ್ರಮಾಣಭೂತವೂ ಆದ ನಿಘಂಟನ್ನು ಸಿದ್ಧಪಡಿಸಬಲ್ಲನು. ಶ್ರೇಷ್ಠ ವಿದ್ವಾಂಸರಾದ ಟಿ. ವಿ. ವೆಂಕಟಾಚಲಶಾಸ್ತ್ರೀ ಅವರು ಒಂದು ಸಂದರ್ಭದಲ್ಲಿ ಹೇಳಿದ ಮಾತುಗಳನ್ನೇ ಬಳಸಿ ಹೇಳುವುದಾದರೆ ‘ಒಂದು ಒಳ್ಳೆಯ ಭಾಷಾ ನಿಘಂಟುವಿನ ರಚನೆ ಆ ಭಾಷೆಯ ಸಂಸ್ಕೃತಿಯನ್ನು ಪುನಸೃಷ್ಟಿಸುವ ಪವಿತ್ರಕಾರ್ಯ; ಪರಂಪರೆಯಲ್ಲಿ ಬೇರು ಬಿಟ್ಟ ಪ್ರಗತಿ ಪಥದಲ್ಲಿ ಕಣ್ಣು ನೆಟ್ಟಿರುವ ಒಂದು ಬೌದ್ಧಿಯಾತ್ರೆ’.