ಕನ್ನಡಿಗರಿಗೆ ನಿಘಂಟು ರಚನೆಯ ವಿಧಾನವು ಸಂಸ್ಕೃತದಿಂದ ಬಂದಿರಬಹುದೆನ್ನುವುದರ ಬಗ್ಗೆ ಸಂದೇಹವಿಲ್ಲ. ಸಂಸ್ಕೃತ ನಿಘಂಟುಕಾರರಲ್ಲಿ ವರರುಚಿ, ಬಾಗುರಿ, ಶಾಶ್ವತ, ಅಮರಸಿಂಹ, ಗೋಪಾಲಕ, ಧನಂಜಯ, ಹಲಾಯುಧ ಮೊದಲಾದವರ ನಿಘಂಟುಗಳ ಪ್ರಭಾವ ಕನ್ನಡ ನಿಘಂಟುಗಾರರ ಮೇಲೆ ಆಗಿದೆ. ಸಂಸ್ಕೃತ ನಿಘಂಟುಗಳ ರಚನೆಯ ವಿನ್ಯಾಸಕ್ಕೆ ತಕ್ಕಂತೆ ಪ್ರಾಚೀನ ಕನ್ನಡ ನಿಘಂಟುಗಳು ರಚಿತವಾದವು. ಸಂಸ್ಕೃತ ನಿಘಂಟುಗಳು ಶ್ಲೋಕಗಳು ರೂಪದಲ್ಲಿ ರಚಿತವಾದರೆ ಕನ್ನಡ ನಿಘಂಟುಗಳು ಕಂದ, ಷಟ್ಪದಿಗಳಲ್ಲಿ ರಚಿತವಾದವು. ಉಲಬ್ಧವಿರುವ ಪ್ರಾಚೀನ ನಿಘಂಟುಗಳನ್ನು ಅವಲೋಕಿಸಿದಾಗ ಅವುಗಳನ್ನು ಕನ್ನಡ – ಕನ್ನಡ ನಿಘಂಟುಗಳು, ಸಂಸ್ಕೃತ – ಕನ್ನಡ ನಿಘಂಟುಗಳು ಹಾಗೂ ಕನ್ನಡ – ಸಂಸ್ಕೃತ ನಿಘಂಟುಗಳೆಂದು ಮೂರು ಬಗೆಯಾಗಿ ವಿಂಗಡಿಸಬಹುದು.

ಪ್ರಾಚೀನ ಕನ್ನಡ ನಿಘಂಟುಗಳು ಪಂಡಿತರಿಂದ ಪಂಡಿತರಿಗಾಗಿ ರಚಿತವಾಗಿದ್ದು ವಾಸ್ತವದಲ್ಲಿ ಅವು ಪದ ಸಂಗ್ರಹಗಳೋ ಅಪೂರ್ಣ ಅರ್ಥಕೋಶಗಳೋ ಆಗಿವೆ. ಕಾಲಕ್ರಮೇಣ ಅವು ಸಾರ್ವಜನಿಕ ಉಪಯೋಗಿಯಾದ ಸಾಮಾನ್ಯ ಕೋಶಗಳಿಗೂ ಆಧುನಿಕ ಭಾಷಾಶಾಸ್ತ್ರದ ತಳಹದಿಯ ಮೇಲೆ ರಚಿತವಾಗುತ್ತಿರುವ ಆಧುನಿಕ ಕೋಶಗಳಿಗೂ ಆಕರವಾದವು. ಪ್ರಾಚೀನ ನಿಘಂಟುಗಳು ಹಳಗನ್ನಡ ಸಾಹಿತ್ಯಾಧ್ಯಯನಕ್ಕೆ ಅತ್ಯಗತ್ಯವಾದ ಕೈಪಿಡಿಗಳಾಗಿವೆ. ಈ ಅಧ್ಯಾಯದಲ್ಲಿ ಪ್ರಾಚೀನ ಕನ್ನಡ ನಿಘಂಟುಗಳ ಸ್ಥೂಲ ಸಮೀಕ್ಷೆಯನ್ನು ಮಾಡಲಾಗಿದೆ.

ರನ್ನ ಕಂದ (ಸು. ೯೯೦): ನಮಗೆ ಉಪಬ್ದವಿರುವ ಮೊದಲನೆಯ ಪ್ರಾಚೀನ ನಿಘಂಟುಯಿದಾಗಿದೆ. ಇದರ ಕರ್ತೃ ರನ್ನನಿರಬಹುದೆಂದು ಕವಿ ಚರಿತ್ರೆಕಾರರ ಅಭಿಪ್ರಾಯ. ಇದಕ್ಕೆ ಆಧಾರವೆಂದರೆ ಪ್ರತಿಯೊಂದು ಪದ್ಯವು ಕವಿ ರತ್ನಾ ಇಲ್ಲವೇ ಕವಿ ರನ್ನಾ ಎಂದು ಮುಗಿಯುವುದು. ಕೃತಿಕಾರ ತನ್ನ ಕಾಲದಲ್ಲಿ ಪ್ರಚಲಿತವಾಗಿದ್ದ ಹಳಗನ್ನಡ ರೂಪಗಳ ಅರ್ಥಗಳನ್ನು ಕಂದಗಳಲ್ಲಿ ಕೊಟ್ಟಿದ್ದಾನೆ. ಆದರೆ ಈ ನಿಘಂಟು ಪೂರ್ಣವಾಗಿ ಉಪಲಬ್ಧವಾಗಿಲ್ಲ. ತ.ಸು. ಶಾಮರಾಯರು ಹನ್ನೊಂದು ಪದ್ಯಗಳಿರುವ ಓಲೆಯ ಪ್ರತಿಗಳನ್ನಾಧರಿಸಿ ‘ರನ್ನಕಂದ’ ಎಂಬ ಹೆಸರಿನಲ್ಲಿ ಈ ನಿಘಂಟನ್ನು ಪ್ರಕಟಿಸಿದ್ದಾರೆ. (ಕನ್ನಡ ಸಾಹಿತ್ಯ ಪರಿಷ್ಪತ್ರಿಕೆ ಸಂ – ೩೧, ಸಂ – ೩೪). ಇದು ತೀರ ಅಶುದ್ಧವೂ ಸ್ಖಾಲಿತ್ಯಗಳಿಂದ ಕೂಡಿದುದೂ ಆಗಿದೆ. ಇದಾದ ನಂತರ ಎಂ. ಎಂ. ಕಲಬುರ್ಗಿ ಅವರು ಕೊಲ್ಲಾಪುರದಲ್ಲಿ ತಮಗೆ ದೊರೆತ ಎರಡು ಹಸ್ತಪ್ರತಿಗಳ ಮೂಲಕ ‘ರನ್ನ ನಿಘಂಟು’ ಎಂಬ ಹೆಸರಿನಿಂದ ಸಂಪಾದಿಸಿದ್ದಾರೆ (ಮಾರ್ಗ ಸಂ – ೧). ಇದರಲ್ಲಿ ೪೫ ಕಂದ ಪದ್ಯಗಳಿಗೆ. ಇದು ಸಹಿತ ಅಶುದ್ಧವೂ ಸ್ಖಾಲಿತ್ಯಯುಕ್ತವೂ ಆಗಿದೆ. ಈ ನಿಘಂಟಿನಲ್ಲಿ ಕೆಲವು ತಮಿಳ್‌ಶಬ್ದಗಳಿರುವುದು ಕಂಡುಬರುತ್ತದೆ. ಒಟ್ಟಿನಲ್ಲಿ ಇದು ಕನ್ನಡದ ಪ್ರಥಮ ನಿಘಂಟು ಎಂಬ ಕೀರ್ತಿಗೆ ಪಾತ್ರವಾಗಿದೆ.

ಅಭಿಧಾನ ವಸ್ತುಕೋಶ (ಸು. ೧೦೪೨): ಎರಡನೆಯ ನಾಗವರ್ಮನಿಂದ ರಚಿತವಾದ ‘ಅಭಿಧಾನ ವಸ್ತುಕೋಶ’. ಕಂದ ಮತ್ತು ವೃತ್ತಗಳಲ್ಲಿ ರಚಿತವಾಗಿದೆ. ಸಂಸ್ಕೃತ ನಿಘಂಟುಗಳೇ ಈ ಕೋಶದ ರಚನೆಗೆ ಪ್ರೇರಣೆಯಾಗಿದೆಯೆಂದು ನಿಘಂಟುಕಾರ ಹೇಳಿದ್ದಾನೆ.

ವರರುಚಿ ಹಲಾಯುಧಂ ಬಾ
ಗುರಿ ಶಾಶ್ವತ ಮಮರ ಕೋಶಮೆಂಬಿವು ಮೊದಲಾ
ಗಿರೆ ಪೂರ್ವ ಶಾಸ್ತ್ರಮಂಸಂ
ಹರಿಸಿ ಮನಂಗೊಳೆ ನಿಘಂಟಿಮಂ ವಿರಚಿಸುವೆಂ (೧ – ೧ – ೨)

ಈ ಕೋಶವು ಸಂಸ್ಕೃತ ಕೋಶ ಶಿಲ್ಪದ ಹಾಗೆ ಏಕಾರ್ಥ ಕಾಂಡ, ನಾನಾರ್ಥ ಕಾಂಡ ಮತ್ತು ಸಾಮಾನ್ಯ ಕಾಂಡ ಎಂಬ ಮೂರು ಕಾಂಡಗಳನ್ನೊಳಗೊಂಡಿದೆ. ಕನ್ನಡ ಕಾವ್ಯಗಳಲ್ಲಿ ಬಳಕೆಯಾಗುವ ಸಂಸ್ಕೃತ ಶಬ್ದಗಳಿಗೆ ಕನ್ನಡದಲ್ಲಿ ಅರ್ಥ ತಿಳಿಸುವ ಮೊದಲನೆಯ ಸಂಸ್ಕೃತ – ಕನ್ನಡ ನಿಘಂಟು ಇದಾಗಿದೆ. ಸಂಸ್ಕೃತದ ಪರ್ಯಾಯ ಶಬ್ದಗಳನ್ನು ಹೇಳುವಾಗ ಸಂದರ್ಭಾನುಸಾರವಾಗಿ ದೇಶ್ಯ ಶಬ್ದಗಳನ್ನು ಸೇರಿಸಿರುವುದೂ ಕನ್ನಡ ಶಬ್ದಗಳಲ್ಲಿಯೇ ಅರ್ಥ ಹೇಳಿರುವುದೂ ಉಂಟು. ಕೆಲವು ಕಠಿಣ ದೇಶ್ಯ ಶಬ್ದಗಳ ಅರ್ಥ ತಿಳಿಯಲು ಇದು ನೆರವಾಗುತ್ತದೆ. ತರುವಾಯದ ಕೋಶಕಾರರಾದ ಅಭಿನವ ಮಂಗರಾಜ (ಸು. ೧೩೯೦), ಹಾಗೂ ದೇವೋತ್ತಮ (ಸು. ೧೬೦೦)ರು ಈ ನಿಘಂಟಿನಿಂದ ಪ್ರೇರಿತರಾಗಿ ತಮ್ಮ ಕೋಶಗಳನ್ನು ರಚಿಸುವಂತೆ ಹೇಳಿಕೊಂಡಿದ್ದಾರೆ. ಪ್ರಾಚೀನ ಕನ್ನಡ ನಿಘಂಟುಗಳಲ್ಲಿ ಇದು ವಿಷಯ ಭರಿತವೂ ವ್ಯಾಪ್ತಿಯುಳ್ಳದ್ದೂ ಆಗಿದೆ.

ಶಬ್ದಮಣಿದರ್ಪಣ (ಸು. ೧೨೬೦): ಕನ್ನಡ ಪ್ರಸಿದ್ಧ ವ್ಯಾಕರಣಕಾರನಾದ ಕೇಶಿರಾಜ ತನ್ನ ಶಬ್ದಮಣಿದರ್ಪಣ. ಅಕ್ಷರ ಪ್ರಕರಣದಲ್ಲಿ ಬಂದಿರುವ ‘ಱೞಕುಳ’ಗಳ ಪಟ್ಟಿ ಹಾಗೂ ಕನ್ನಡ ಕ್ರಿಯಾ ರೂಪಗಳನ್ನು ಹೇಳುವ ‘ಧಾತು ಪ್ರಕರಣ’ ಹಾಗೂ ಹಳಗನ್ನಡ ಶಬ್ದಗಳಿಗೆ ಅರ್ಥ ಹೇಳುವ ‘ಪ್ರಯೋಗಸಾರ’ ಈ ಪ್ರಕರಣಗಳು ಒಂದು ರೀತಿಯಲ್ಲಿ ನಿಘಂಟಿನಂತೆ ಸಿದ್ಧವಾಗಿವೆ. ಸಹಸ್ರಾರು ಹಳಗನ್ನಡ ಶಬ್ದಗಳನ್ನು ಸಂಗ್ರಹಿಸಿ ಕೋಶಾಧ್ಯಯನಕ್ಕೆ ಮಹೋಪಕಾರ ಮಾಡಿದ್ದಾರೆ. ಈತನ ತರುವಾಯ ಬಂದ ನಿಘಂಟುಕಾರರಿಗೆಲ್ಲ ಇದೂ ಒಂದು ಆಕರ ಗ್ರಂಥವಾಯಿತು. ಸಹಜಱೞಂಗಳ ಬಗೆಗೆ ಹೇಳುತ್ತಾ

ಏಕತ್ರಿಚತುಃ ಪಂ
ಚಾಕಲಿತಾರ್ಥಂಗಳಾಗಿ ಱೞನೊಳವುನಿಸ
ರ್ಗಾ ಕೃತಿಯಿಂದ ವನಾದಿಮ
ಹಾ ಕವಿ ಕೃತಿ ದೃಷ್ಟಮಂ ನಿರಾಕುಲ ಮುಸಿರ್ವೇಂ

ಹಳಗನ್ನಡ ಕಾವ್ಯಗಳಲ್ಲಿ ಬಳಕೆಯಾಗಿರುವ ಒಂದರ್ಥದಿಂದ ಐದರ್ಥವುಳ್ಳ ಱೞ ಯುಕ್ತವಾದ ಸ್ವತಂತ್ರ ಪದಗಳ ಪಟ್ಟಿಯನ್ನು ಕೊಟ್ಟಿದ್ದಾನೆ. ಕೇಶಿರಾಜನ ಧಾತು ಪ್ರಕರಣವು ಕನ್ನಡ ಕೋಶದ ಅಧ್ಯಯನದ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾಗಿದೆ. ಅವನು ಕೊಟ್ಟಿರುವ ಧಾತುಗಳ ಸಂಖ್ಯೆ ೯೮೫ ಅವುಗಳ ಪಟ್ಟಿ ಪ್ರಮಾಣ ಪೂರ್ವಕವಾದುದು. ಹಳಗನ್ನಡ ಸಾಹಿತ್ಯದಲ್ಲಿ ಪ್ರಯುಕ್ತವಾದ ನೂರಾರು ಧಾತುಗಳ ಅರ್ಥ ನಿರ್ಣಯಕ್ಕೆ ಕೇಶಿರಾಜನ ಧಾತುಪಾಠವೇ ಏಕೈಕ ಪ್ರಾಚೀನ ಸಾಧನವಾಗಿದೆ. ‘ಕ’ಕಾರದಿಂದ ಮೊದಲಾಗಿ ‘ಳ’ ಕಾರದವರೆಗೆ ಬೇರೆ ಬೇರೆ ವ್ಯಂಜನಾಕ್ಷರಗಳಿಂದ ಕೊನೆಗೊಳ್ಳುವ ಧಾತುಗಳಿಗೆ ಸಂಸ್ಕೃತದಲ್ಲಿ ಕ್ರಿಯಾರ್ಥವನ್ನು ಹೇಳಿದ್ದಾನೆ. ಈ, ಓ ಎಂಬಿವು ಎರಡೇ ಸ್ವರ ಧಾತುಗಳು, ಉಳಿದವು ವ್ಯಂಜನಾಕ್ಷರಗಳಿಂದ ಕೊನೆಗೊಳ್ಳುವ ಧಾತುಗಳಾಗಿವೆ. ಕೇಶಿರಾಜನ ಧಾತು ಪಾಠದಿಂದ ಹಳಗನ್ನಡ ಕ್ರಿಯಾರೂಪಗಳ ಸ್ವರೂಪ ತಿಳಿದುಬರುತ್ತದೆ. ಪ್ರಯೋಗಸಾರವೆಂಬ ಪ್ರಕರಣದಲ್ಲಿ ೨೩೩ ಹಳಗನ್ನಡದ ಕ್ಲಿಷ್ಟ ಪದಗಳಿಗೆ ಪರಿಚಿತ ಕನ್ನಡ ಶಬ್ದಗಳಲ್ಲಿ ಅರ್ಥ ನೀಡಿದ್ದಾನೆ. ಈ ಪ್ರಕರಣವು ಕನ್ನಡ – ಕನ್ನಡ ಶಬ್ದಕೋಶವಾಗಿದೆ.

ಅಭಿನವಾಭಿಧಾನಂ (ಸು. ೧೩೯೮): ಎರಡನೆಯ ಮಂಗರಾಜನ ಈ ಕೃತಿಯು ನಾಗವರ್ಮನ ಅಭಿಧಾನ ವಸ್ತುಕೋಶದ ಬಳಿಕ ಎರಡನೆಯ ಪ್ರಸಿದ್ಧ ಸಂಸ್ಕತ – ಕನ್ನಡ ನಿಘಂಟು. ಈ ಕೋಶದಲ್ಲಿ ಸ್ವರ್ಗ, ಭೂಮಿ, ಪಾತಾಳ, ಸಾಮಾನ್ಯ ಮತ್ತು ನಾನಾರ್ಥ ಎಂಬ ಐದು ಕಾಂಡಗಳಿದ್ದು ಪ್ರತಿಕಾಂಡವು ವಿಷಯಕ್ಕೆ ಅನುಗುಣವಾಗಿ ವರ್ಗ – ಉಪವರ್ಗಗಳಲ್ಲಿ ವಿಭಜಿತವಾಗಿವೆ. ಸಾಮಾನ್ಯ ಮತ್ತು ನಾನಾರ್ಥ ಕಾಂಡಗಳಲ್ಲಿ ಮಾತ್ರ ವರ್ಗ ವಿಭಜನೆಯಿಲ್ಲ. ಇಲ್ಲಿ ೫೩೯ ವಾರ್ಧಕ ಷಟ್ಪದಿಗಳಿವೆ. ಕನ್ನಡ ಭಾಷೆಯ ಪ್ರಾಚೀನ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಹಾಗೂ ನಿಘಂಟುವಿನಲ್ಲಿ ಕಂಡುಬರುವ ಸಂಸ್ಕೃತ ಶಬ್ದಗಳಿಗೆ ಕನ್ನಡದಲ್ಲಿ ಅರ್ಥ ಹೇಳುವುದು ನಿಘಂಟುಕಾರನ ಉದ್ದೇಶವಾಗಿದೆ. ಮಂಗರಾಜನ ನಿಘಂಟುವಿನಲ್ಲಿ ಅರ್ಥ ಹೇಳುವುದು ನಿಘಂಟುಕಾರನ ಉದ್ದೇಶವಾಗಿದೆ. ಮಂಗರಾಜನ ನಿಘಂಟುವಿನಲ್ಲಿ ಒಂದು ಶಬ್ದಕ್ಕೆ ಒಂದು ಕನ್ನಡ ಶಬ್ದದ ಅರ್ಥ, ಸಮಾನಾರ್ಥಕವಾದ ಹಲವು ಸಂಸ್ಕೃತ ಶಬ್ದಗಳಿಗೆ ಒಂದು ಸಂಸ್ಕೃತ ಅಥವಾ ಕನ್ನಡ ಶಬ್ದದ ಅರ್ಥ, ವಸ್ತುವಿವರಣೆ, ಸಂಕೇತಾರ್ಥ, ನಾನಾರ್ಥ ಹೀಗೆ ನಿರೂಪಣೆಯಲ್ಲಿ ವೈವಿಧ್ಯವುಂಟು. ದೇವತೆಗಳು, ಗ್ರಹಗಳು, ದಿಕ್ಕುಗಳು, ಕಾಲ, ಭೂಮಿ, ಬೆಟ್ಟ, ಕುಲ, ವೃತ್ತಿಗಳು ಇತ್ಯಾದಿ ಸಂಸ್ಕೃತ ಶಬ್ದಗಳಿಗೆ ಕನ್ನಡ ಸಮಾನಾರ್ಥಕಗಳನ್ನು ಈ ನಿಘಂಟು ಒದಗಿಸುತ್ತದೆ. ಮುಖ್ಯವಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಜನಜೀವನದ ಪುನರ್‌ರಚನೆಗೆ ಬೇಕಾದ ಎಷ್ಟೋ ಸಾಮಗ್ರಿ ಇಲ್ಲಿ ದೊರೆಯುತ್ತದೆ. ಮಂಗರಾಜನ ಈ ಕೋಶವು ನಾಗವರ್ಮನ ಅಭಿಧಾನ ವಸ್ತುಕೋಶದ ಬಳಿಕ ಗಣ್ಯಸ್ಥಾನ ಪಡೆಯುತ್ತದೆ.

ಕರ್ಣಾಟಕ ಶಬ್ದಸಾರಂ (ಸು. ೧೪೦೦): ಕನ್ನಡ ಪದಗಳಿಗೆ ಕನ್ನಡದಲ್ಲಿ ಅರ್ಥ ಹೊಂದಿರುವ ಮೊದಲನೆಯ ಕನ್ನಡ – ಕನ್ನಡ ನಿಘಂಟುಯಿದಾಗಿದೆ. ಈ ಕೋಶದ ಕರ್ತೃ, ಕಾಲ ತಿಳಿದು ಬಂದಿಲ್ಲ. ಕವಿ ಚರಿತ್ರೆಕಾರರು ಇದರ ಕಾಲ ಸು. ೧೪೦೦ ಎಂದಿದ್ದಾರೆ. ಈ ಕೋಶದಲ್ಲಿ ನಡುಗನ್ನಡ ಕಾವ್ಯದಲ್ಲಿ ಪ್ರಚಲಿತವಾಗಿದ್ದ ಶಬ್ದಗಳು ಅಲ್ಲಲ್ಲಿ ಕಂಡುಬರುತ್ತಿರುವುದರಿಂದ ಈ ಕೃತಿ ೧೪೦೦ ರಲ್ಲಿ ರಚಿತವಾಗಿರಬಹುದು. ಈ ಕೋಶದಲ್ಲಿ ಹಳಗನ್ನಡ, ನಡುಗನ್ನಡ, ದೇಶ್ಯ ಶಬ್ದಗಳ ಹಾಗೂ ತದ್ಭವಗಳ ಅರ್ಥ ಹೇಳಿದೆ. ಶಬ್ದಗಳ ಆಯ್ಕೆ ಪರಿಮಿತವಾಗಿದ್ದು ಅರ್ಥ ಹೇಳಲು ಕೋಶಕಾರನು ತನಗೆ ಸುಲಭವೆಂದು ತೋರಿದ ಕನ್ನಡ ಮತ್ತು ಸಂಸ್ಕೃತ ಶಬ್ದಗಳನ್ನು ಬಳಸಿದ್ದಾರೆ. ೬೬೬ ಗದ್ಯವಾಕ್ಯಗಳಲ್ಲಿ ೧೪೧೬ ಪದಗಳಿಗೆ ಇಲ್ಲಿ ಅರ್ಥ ಹೇಳಿದೆ. ಸಮಾನಾರ್ಥಕ ಶಬ್ದಗಳನ್ನೆಲ್ಲ ಒಗ್ಗೂಡಿಸಿಯೂ ತದ್ಭವಗಳಿಗೆ ಅವುಗಳ ಸಂಸ್ಕೃತ ರೂಪಗಳನ್ನು ನೀಡಿಯೂ ವ್ಯಾಕರಣಾಂಶಗಳನ್ನೂ ಅಲ್ಲಲ್ಲಿ ವಿವರಿಸಿಯೂ ಅರ್ಥ ವಿವರಣೆ ಮಾಡಿದೆ. ಉದಾ: ಮಾಕಾಳಿ, ಮಾದೇವಿ, ಸಬ್ಬಾಣಿ, ಐಕಿಲ್ವೆಟ್ಟುಣುಗಿ, ಸಿಂಗದೇರಳ್‌ಈ ೫ ಪಾರ್ವತಿಯ ಪೆಸರ್‌. ಈ ನಿಘಂಟುವಿಗೆ ಶಬ್ದಮಣಿದರ್ಪಣದ ವಿವಿಧ ಪ್ರಕರಣಗಳು ಆಧಾರ ಸಾಮಗ್ರಿಗಳಾಗಿವೆ. ಆ ಕಾಲದ ನಾಡುಗರ ಆಟಗಳು, ಅರಣ್ಯದ ವನಸ್ಪತಿಗಳು ಹಾಗೂ ಪ್ರಾಣಿ – ಪಕ್ಷಿಗಳು ಮೊದಲಾದ ಶಬ್ದಗಳನ್ನು ಪರಿಚಯಿಸುವ ಈ ನಿಘಂಟು ತನ್ನ ಮಿತಿಯಲ್ಲಿ ಒಂದು ಬೆಲೆಯುಳ್ಳ ಸಾಂಸ್ಕೃತಿಕ ನಿಘಂಟಾಗಿದೆ.

ಕರ್ನಾಟಕ ನಿಘಂಟು (ಸು. ೧೪೦೦): ಈ ನಿಘಂಟುವಿನ ಕರ್ತೃ, ಕಾಲ ತಿಳಿದು ಬಂದಿಲ್ಲ. ಅಷ್ಟೇ ಏಕೆ ಈ ನಿಘಂಟಿನ ಸರಿಯಾದ ಹೆಸರು ಎಲ್ಲೂ ಉಲ್ಲೇಖಗೊಂಡಿಲ್ಲ. ಕಾವ್ಯಮಂಜರಿ ಪರಿಷ್ಕರಣದ ಸಂಪಾದಕರು ‘ಕರ್ನಾಟಕ ನಿಘಂಟು’ ಎಂದು ಕರೆದಿದ್ದಾರೆ. ಕವಿ ಚರಿತ್ರೆಕಾರರು ‘ಕಬ್ಬಿಗರ ಕೈಪಿಡಿ’ ಎಂದು ಕರೆದು ಇದರ ಕಾಲವನ್ನು ಸು. ೧೪೦೦ ಎಂದು ಊಹಿಸಿದ್ದಾರೆ. ೯೮ ಕಂದ ಮತ್ತು ವೃತ್ತಗಳಲ್ಲಿ ಈ ಕೋಶ ರಚಿತವಾಗಿದೆ. ಹಳಗನ್ನಡ ಶಬ್ದಗಳಿಗೆ ದೇಶ್ಯ ಮತ್ತು ತದ್ಭವಗಳಿಗೆ ಅರ್ಥ ಹೇಳುವ ಕನ್ನಡ – ಕನ್ನಡ ಲಘು ನಿಘಂಟು ಇದಾಗಿದೆ. ಸಾಮಾನ್ಯವಾಗಿ ಒಂದೊಂದೇ ದೇಶ್ಯ ಹಾಗೂ ತದ್ಭವ ಶಬ್ದಗಳನ್ನೆತ್ತಿಕೊಂಡು ಸುಲಭವಾದ ದೇಶ್ಯ ಅಥವಾ ಸಂಸ್ಕೃತ ಪ್ರತಿಶಬ್ದಗಳಲ್ಲಿ ಅರ್ಥ ಹೇಳುವುದು ಇಲ್ಲಿಯ ಪದ್ಧತಿ.

ಸರಸತಿ ಸಾರದೆ ನುಡಿವೆಣ್‌
ಸಿರಿಯಱಿಯಂ ಸೌರಿಯೆಂದು ತಾವರೆ ಗಣ್ಣಂ
ಸಿರಿಯಾಣ್ಮಂ ಪೊಡೆಯಲರಂ
ಸಿರಿಯನೆ ಮಾಲಕುಮಿಯೆನೆ ಮಹಾಲಕ್ಷ್ಮಿ ಯೊಳಂ

ಪದ್ಯ ಬಂಧದ ಬಿಗಿ, ನಿರೂಪಣೆಯಲ್ಲಿ ಏಕಸೂತ್ರತೆ, ಶಬ್ದಗಳ ಆಯ್ಕೆಯಲ್ಲಿ ಉಪಯುಕ್ತತೆಯ ದೃಷ್ಟಿ ಇಲ್ಲಿ ಗಮನಾರ್ಹವಾಗಿದೆ. ಈ ನಿಘಂಟುವಿಗೆ ಶಬ್ದಮಣಿದರ್ಪಣದ ಪ್ರಯೋಗಸಾರ ಮತ್ತು ಧಾತು ಪ್ರಕರಣಗಳು ಆಧಾರವಾಗಿವೆ.

ಚತುರಾಸ್ಯ ನಿಘಂಟು (ಸು. ೧೪೫೦): ಪ್ರಾಚೀನ ನಿಘಂಟುಗಳಲ್ಲಿ ಈ ನಿಘಂಟು ಅತ್ಯಂತ ಜಟಿಲ ಪ್ರಾಯವೂ ಗೊಂದಲಮಯವೂ ಆಗಿದೆ. ಇದರ ಕರ್ತೃ ಮತ್ತು ಕಾಲ ಸಂದಿಗ್ಧವಾಗಿದೆ. ಕವಿ ಚರಿತ್ರೆಕಾರರು ಈ ನಿಘಂಟಿನ ಕರ್ತೃ ‘ಚತುರಾಸ್ಯ ಬೊಮ್ಮರಸ’ ಎಂದು ಹೇಳಿ ಈತನ ಕಾಲವನ್ನು ಕ್ರಿ. ಶ. ಸು. ೧೪೫೦ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ನಿಘಂಟುವಿನಲ್ಲಿ ೨೧೩ ಕಂದಪದ್ಯಗಳಿವೆ. ತನ್ನ ಕೋಶದ ಉದ್ದೇಶದ ಬಗ್ಗೆ ಕೋಶಕಾರ ಹೀಗೆ ಹೇಳಿದ್ದಾನೆ.

ಕವಿ ಚತುರಾಸ್ಯನೆಂದೆನಿ
ಸುವನಾಮದೆ ದೇಸಿ ತದ್ಭವಂ ತತ್ಸಮವೆಂ
ಬಿವಱಿಂದ ಮಚ್ಚಗನ್ನಡ
ವಿವರಣೆ ಚೆಲ್ವಾಗೆ ರಚಿಸಿದಂ ಚತುರಾಸ್ಯಂ

ದೇಶ್ಯ ಮತ್ತು ತದ್ಭವ ಕೋಶ ಇದಾಗಿದೆ. ತತ್ಸಮಗಳೆಂಬ ವಿಶಿಷ್ಟ ಪದಗಳೂ ಇಲ್ಲಿ ಸೇರಿವೆ. ದೇಶ್ಯ ಶಬ್ದಗಳಿಗೆ ಪರ್ಯಾಯವಾದ ಕನ್ನಡ ಶಬ್ದಗಳಲ್ಲಿ ಹಾಗೂ ತದ್ಭವಗಳಿಗೆ ಮೂಲವಾದ ಸಂಸ್ಕೃತ ಶಬ್ದಗಳಲ್ಲಿ ಅರ್ಥ ನೀಡಿದೆ.

ಕಬ್ಬಿಗರ ಕೈಪಿಡಿ (ಸು. ೧೫೩೦): ವಾರ್ಧಕ ಷಟ್ಪದಿಯಲ್ಲಿ ರಚನೆಗೊಂಡಿರುವ ಈ ಕೋಶ ೧೦೦ ಪದ್ಯಗಳನ್ನೊಳಗೊಂಡಿದೆ. ಇದರಲ್ಲಿ ಹಳಗನ್ನಡ ಶಬ್ದಗಳ ಅರ್ಥಗಳನ್ನು ಹೇಳಲಾಗಿದೆ. ಈ ನಿಘಂಟುವಿನ ಲಕ್ಷಣವನ್ನು ಕೋಶಕಾರ ಲಿಂಗಮಂತ್ರಿ ಈ ರೀತಿ ಹೇಳಿದ್ದಾನೆ.

ವಿಸೂಪ ಗೂಢ ಪದ ಪ್ರಯೋಗ ದೊಳ್ವಂರಸಮ
ನೊಸರ್ವಚ್ಚಗನ್ನಡದ ಚೆಲ್ವುಮಂ ತದ್ಭವದ
ಬೆಸುಗೆಯಂ ದೇಶೀಯ ಕಮರ್ದ ಸೊಂಪಂ ತೊಳಪ ತತ್ಸಮದ ಭಿನ್ನಣವನು
ಉಸುರೆಂದು ಕೋವಿದರ್‌ಬೆಸಸಲಾನಿದಕೆ ಶೋ
ಭಿಸುವ ಕಬ್ಬಿಗರ ಕೈ ಪಿಡಿಯೆಂದು ಪೆಸರವಿ
ತ್ತೊಸೆದು ಪೇೞ್ದಪೆನು ಲಾಲಿಸುವುದಾವಾಗಳುಂ ರಸಕ ಜನರಕ್ತಯಿಂದ

ದೇಶ್ಯ, ಗೂಡಾರ್ಥ, ತತ್ಸಮ, ಅರ್ಥ ಹೇಳಿದೆ. ಈ ಕೋಶಕ್ಕೆ ಶಬ್ದಮಣಿದರ್ಪಣ, ಶಬ್ದಸಾರ ಮೊದಲಾದ ಹಳಗನ್ನಡ ನಿಘಂಟುಗಳ ಆಧಾರಗಳಾಗಿವೆ. ಮಧ್ಯಕಾಲೀನ ವೀರಶೈವ ಕವಿಗಳು ಬಳಸುತ್ತಿದ್ದ ವಿಶಿಷ್ಟವಾದ ಶಬ್ದರೂಪಗಳಿಗೂ ಸಮಸ್ತ ರೂಪಗಳಿಗೂ ಅರ್ಥ ಕೊಡಲಾಗಿದೆ. ಈ ನಿಘಂಟಿಗೆ ಹೆಸರು ಘಟ್ಟದ ಹೊನ್ನಪ್ಪ ‘ಚಕೋರ ಚಂದ್ರಿಕೆ’ ಎಂಬ ಟೀಕೆಯನ್ನು ಬರೆದಿದ್ದಾನೆ.

ಕರ್ಣಾಟಕ ಶಬ್ದ ಮಂಜರಿ (ಸು. ೧೫೦೦): ಇದರ ಕರ್ತೃ ವಿರಕ್ತ ತೋಂಟದಾರ್ಯ. ಕೋಶಕಾರ ತನ್ನ ನಿಘಂಟುವಿನ ಸ್ವರೂಪವನ್ನು ಹೇಳಿದ್ದಾನೆ.

ಇಂತು ನೆಱಿ ಕರ್ನಾಟಕ ಭಾಷೆಯೊಳ್‌ತಱಿ ಸಂದ
ನಂತ ನಾಮಂಗಳೊಳ್‌ದೇಶೀಯ ಪಲವು ತೆರಿ
ನಂತವು ಮಹಾಶೇಷಗಂ ತಿಳಿಯಲಳ ವಲ್ಲವಱೊಳು ಪುಕೆಲ ಶಬ್ದಮಂ
ಸಂತಸ ದೊಳಚ್ಚಗನ್ನಡ ಗೂಢ ಪದ ತತ್ಸ
ಮಂ ತದ್ಭವಗಳೆಂಬ ಶಬ್ದ ನಾಮಗಳ ನೋ
ರಂತೆ ವಿರಚಿಸಿದೆನೆಲ್ಲಾ ಕವೀಶ್ವರರು ದಾಹರಣ ಸನ್ಮಾರ್ಗ ವಿಡಿದು

ಈ ಕೋಶದಲ್ಲಿ ಅಚ್ಚಗನ್ನಡ, ಗೂಢ ಪದ, ತದ್ಭವ, ತತ್ಸವ ಈ ನಾಲ್ಕು ಶಬ್ದಗಳಿಗೆ ಪೂರ್ವ ಕವಿ ಪ್ರಯೋಗಗಳನ್ನು ಗಮನಿಸಿ ಅರ್ಥ ಹೇಳಿದೆ. ಈ ಕೃತಿ ೧೨೦ ವಾರ್ಧಕ ಷಟ್ಪದಿ ಪದ್ಯಗಳನ್ನೊಳಗೊಂಡಿದೆ. ಇದು ಗಾತ್ರದಲ್ಲಿ ಕಿರಿದಾದರೂ ವಿಷಯ ವೈವಿಧ್ಯತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ಕೋಶದಲ್ಲಿ ಭೂಮಿ, ಜಲ, ಪಕ್ಷಿ, ಗೃಹ, ಆಭರಣಗಳು ಅದರಂತೆ ನಾನಾರ್ಥ ವರ್ಗ, ಅವ್ಯಯ ವರ್ಗ, ವಿಶೇಷವರ್ಗ ಇಂತಹ ವ್ಯಾಕರಣಾತ್ಮಕ ವರ್ಗಗಳಿವೆ. ಶಬ್ದಾರ್ಥ ಜೋಡಣೆಯಲ್ಲಿ ಒಂದು ವ್ಯವಸ್ಥೆಯೂ ಸ್ಪಷ್ಟತೆಯೂ ಇದ್ದು ನಿಘಂಟುವಿನ ಉಪಯುಕ್ತತೆ ಇದರಿಂದ ಹೆಚ್ಚಿದೆ. ಈ ಕಾರಣಗಳಿಂದ ಈ ಕೋಶಕ್ಕೆ ನಾಲ್ಕು ಟೀಕೆಗಳು ಬಂದಿವೆ. ಹೆಸರು ಘಟ್ಟದ ಹೊನ್ನಪ್ಪನ ಟೀಕೆ ವಿಬುಧಾನಂದನೀ, ಎನ್‌. ಆರ್‌. ಕರಿಬಸವಶಾಸ್ತ್ರೀ ಅವರ ಸುಜನೋಲ್ಲಾಸಿನೀ, ಶ್ರೀನಿವಾಸ (?) ಕರ್ನಾಟಕ ಶಬ್ದಮಂಜರಿ ಟೀಕೆ ಹಾಗೂ ಮುನೇಗೌಡರ ಕರ್ಣಾಟಕ ಶಬ್ದಮಂಜರಿ ಟೀಕೆ. ಕನ್ನಡದಲ್ಲಿ ಇನ್ನಾವ ಕೋಶಕ್ಕೂ ಇಷ್ಟೊಂದು ಟೀಕೆಗಳು ಇಲ್ಲದಿರುವುದು ಈ ನಿಘಂಟಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಕರ್ಣಾಟಕ ಸಂಜೀವನಂ (ಸು. ೧೬೦೦): ಶೃಂಗಾರ ಕವಿಯ ಈ ಕೋಶದಲ್ಲಿ ೩೫ ವಾರ್ಧಕ ಷಟ್ಪದಿಗಳಿವೆ. ಇದು ‘ಱೞಕುಳ’ ನಿಘಂಟು ಎಂದು ಪ್ರಸಿದ್ಧವಾಗಿದೆ. ಱೞಕುಳ ಶಬ್ದಗಳ ಸ್ಪಷ್ಟ ವಿವೇಚನೆಗೆ ಈ ನಿಘಂಟು ತುಂಬ ಉಪಯುಕ್ತವಾಗಿದೆ. ಶಬ್ದಮಣಿದರ್ಪಣದ ಸಹಜಱೞಂಗಳ್‌ಮತ್ತು ಪ್ರಯೋಗಸಾರ ಪ್ರಕರಣಗಳನ್ನಾಧರಿಸಿ ಈ ನಿಘಂಟು ಸಿದ್ಧವಾಗಿದೆ.

ಕರ್ಣಾಟಕ ಭಾರತ ನಿಘಂಟು (ಸು. ೧೬೦೦): ಈ ಕೋಶದ ಕರ್ತೃ, ಕಾಲ ತಿಳಿದುಬಂದಿಲ್ಲ. ಇದರ ಕರ್ತೃ ಕುಮಾರವ್ಯಾಸ ಭಾರತದಲ್ಲಿನ ಪದ್ಯಗಳಿಗೆ ಅರ್ಥವನ್ನು ನಿರೂಪಿಸಿರುವುದಾಗಿ ಹೇಳಿದ್ದಾರೆ.

ಭಾರತದೊಳ್‌ಕವಿರಾಜ ಕು
ಮಾರವ್ಯಾಸಂ ನೆಗೞ್ದಿ ಶಬ್ದಂಗಳನಾ
ನಾರಯಿದು ಸುರ್ವೆಂ ನಿಜದಿಂ
ಧೀರರಿದಂ ಮೆಚ್ಚಿ ಮನದೆ ಗೊಳ್ವುದು ಮುದುದಿಂ

ಇದರಿಂದ ಕುಮಾರವ್ಯಾಸನ ನಂತರ ಈ ಕೃತಿ ರಚನೆಯಾಗಿರುವುದೆಂದು ಸ್ಪಷ್ಟವಾಗಿ ತಿಳಿಯುತ್ತದೆ. ೬೮ ಕಂದಪದ್ಯಗಳು ಇದರಲ್ಲಿವೆ. ಕುಮಾರವ್ಯಾಸ ಭಾರತದಲ್ಲಿನ ಕೆಲವು ದೇಶ್ಯಗಳಿಗೆ, ತದ್ಭವಗಳಿಗೆ ಅರ್ಥವಿವರಣೆಯನ್ನು ನಿರೂಪಿಸಲಾಗಿದೆ.

ಕವಿಕಂಠಹಾರ (ಸು. ೧೬೪೦): ಪ್ರಾಚೀನ ನಿಘಂಟುಗಳಲ್ಲಿ ಇದು ಕೊನೆಯದು. ಇದರ ಕರ್ತೃ ಸೂರ್ಯ ಕವಿ. ಇದರಲ್ಲಿ ೨೭೧ ಕಂದಪದ್ಯಗಳಿವೆ. ಕರ್ಣಾಟಕ ಶಬ್ದಸಾರ, ಶಬ್ದಮಣಿದರ್ಪಣ ಮೊದಲಾದ ಪೂರ್ವ ಕೋಶಗಳ ಆಧಾರದಿಂದ ಸಿದ್ಧವಾಗಿದೆ. ದೇಶ್ಯ ಮತ್ತು ತದ್ಭವ ಶಬ್ದಗಳಿಗೆ ಅರ್ಥ ವಿವರಣೆ ಇಲ್ಲಿದೆ.

ಪ್ರಾಚೀನ ನಿಘಂಟುಗಳಲ್ಲಿ ಕೆಲವು ಸೀಮಿತ ಉದ್ದೇಶದಿಂದ ರಚಿತವಾಗಿದೆ. ಅವುಗಳಲ್ಲಿ ಕೆಲವು ಇಂತಿವೆ. ಅಜ್ಞಾನ ಕಾಲ, ಕರ್ತೃಕ ‘ಶಬ್ದ ರತ್ನಾಕರ’ (ಸು. ೧೬೦೦), ‘ಪದ್ಯ ನಾನಾಥ್ಯ’ (ಸು. ೧೬೦೦), ಚೆನ್ನಕವಿಯ ‘ಶಬ್ದಾಗಮ’ (ಸು.೧೬೦೦), ‘ನಾನಾಥ್ಯಕಂದ’ (ಸು ೧೬೦೦), ದೇವೋತ್ತಮನ ‘ನಾನಾರ್ಥ ರತ್ನಾಕರ’ (ಸು. ೧೬೦೦) ಈ ಬಗೆಯ ನಿಘಂಟುಗಳು ಮುಖ್ಯವಾಗಿ ಕನ್ನಡ ಕಾವ್ಯಾಭ್ಯಾಸಿಗಳಿಗೆ ಸಹಾಯಕವಾಗಿವೆ. ಅಮೃತಾನಂದಿನಿ ‘ಅ’ ಕಾರಾದಿ ವೈದ್ಯ ನಿಘಂಟು’ (ಸು. ೧೩೦೦), ಲಕ್ಷಣ ಪಂಡಿತನ ‘ಅ’ ಕಾರಾದಿ ನಿಘಂಟು’ (೧೭೭೫) ಅಜ್ಞಾತ ಕಾಲ ಕರ್ತೃಗಳಾದ ಧ್ವನ್ವಂತರಿ ನಿಘಂಟು’, ‘ಇಂದ್ರ ದೀಪಿಕಾ ನಿಘಂಟು’,‘ಮದನಾರಿ ವೈದ್ಯ ನಿಘಂಟು’, ‘ಔಷದೀಕೋಶ’ ಈ ನಿಘಂಟುಗಳು ಸಸ್ಯಗಳಿಗೆ ಗಿಡ ಮೂಲಿಕೆಗಳಿಗೆ ಸಂಬಂಧಿಸಿವೆ.

ಪ್ರಾಚೀನ ಕೋಶಕಾರರು ಶಬ್ದಕೋಶಗಳನ್ನು ರಚಿಸಿ ತಮ್ಮ ಕಾಲದ ಸಾಹಿತ್ಯಿಕ ಪ್ರಗತಿಗೆ ಕಾರಣರಾಗಿದ್ದಾರೆ. ಪರಂಪರೆಯ ಶಬ್ದ ಸಂಪತ್ತನ್ನು ಉಳಿಸಿ ಬೆಳೆಸಿ ಕನ್ನಡ ವಾಗ್ಭಾಂಡರದ ವಿಪುಲತೆಯನ್ನು ಹೆಚ್ಚಿಸಿದ್ದಾರೆ. ಪ್ರಾಚೀನ ಕೋಶಗಳು ಅಕ್ಷರಾನುಕ್ರಮಣಿಕೆಯಲ್ಲಿಲ್ಲದಿದ್ದರೂ ವಿಷಯಾನುಕ್ರಮಣಿಕೆಯಲ್ಲಿರುವುದು ಅವುಗಳ ವೈಶಿಷ್ಟ್ಯವಾಗಿದೆ. ಪ್ರಾಚೀನರು ಶಬ್ದಕೋಶಗಳನ್ನು ಹೆಚ್ಚಾಗಿ ಕವಿಗಳ ಉಪಯೋಗಕ್ಕೆ ಬರೆದಿರುವುದರಿಂದ ಅಕ್ಷರಾನುಕ್ರಮಣಿಕೆ ಅವರಿಗೆ ಮೂಖ್ಯವಾಗಲಿಲ್ಲ. ಕಾವ್ಯಾಧ್ಯಯನಕ್ಕೆ ಅವರು ಪ್ರಾಮುಖ್ಯತೆ ಕೊಟ್ಟಿದ್ದರು. ಆದ್ದರಿಂದ ಅವರಿಗೆ ನಾನಾರ್ಥವುಳ್ಳ ಒಂದು ಶಬ್ದ ಇಲ್ಲವೇ ಶಬ್ದ ಸಮುಚ್ಚಯವನ್ನು ಒಂದೇ ಕಡೆಯಲ್ಲಿ ಹೇಳುವ ಕ್ರಮ ಮುಖ್ಯವಾಗಿ ತೋರಿತು. ಇಂತಹ ಶಬ್ದಗಳನ್ನು ಮತ್ತು ಅವುಗಳ ಅರ್ಥ ವಿಶೇಷಗಳನ್ನು ಪೂರ್ತಿಯಾಗಿ ಕಂಠಪಾಠ ಮಾಡುವುದು ಅವರಿಗೆ ಮುಖ್ಯವಾಗಿತ್ತು.

ಪ್ರಾಚೀನ ನಿಘಂಟುಗಳು ಸಮ್ಮಿಶ್ರ ರೂಪವಾಗಿದ್ದು ಸಂಸ್ಕೃತ ಕನ್ನಡ ಎಂದಾಗಲಿ ತತ್ಸಮ – ತದ್ಭವ ಎಂದಾಗಲಿ ಭೇದ ಮಾಡದೆ ಶಬ್ದಕ್ಕೆ ಪ್ರತಿ ಶಬ್ದವೆಂಬಂತೆ ಪರ್ಯಾಯ ಪದ ರೂಪಗಳನ್ನು ಲಕ್ಷ್ಯವಾಗಿರಿಸಿಕೊಂಡಿರುವಂತೆ ತೋರುವುದರಿಂದ ಇವುಗಳಲ್ಲಿ ಆಧುನಿಕ ನಿಘಂಟುಗಳ ಹಾಗೆ ಒಂದು ಶಿಸ್ತು, ವ್ಯವಸ್ಥೆ ಇಲ್ಲದಿರಬಹುದು. ಆದರೆ ಈಗ ಬಳಕೆಯಲ್ಲಿ ತಪ್ಪಿರುವ, ನಷ್ಟ ಶಬ್ದಗಳು, ಅರ್ಥಾಂತರ ಹೊಂದಿರುವ ಶಬ್ದಗಳು, ಕ್ಲಿಷ್ಟ ಪದಗಳು ಇವಕ್ಕೆಲ್ಲ ಒಂದು ಮಿತ ಪ್ರಮಾಣದಲ್ಲಿಯಾದರೂ ಈ ನಿಘಂಟುಗಳಲ್ಲಿ ಅರ್ಥವನ್ನು ಕಂಡುಕೊಳ್ಳಬಹುದಾಗಿದೆ. ಅಲ್ಲದೆ ಒಂದು ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಮಹತ್ವದ ಶಬ್ದಗಳ ಒಂದು ನಿಧಿಯಾಗಿಯೂ ಅವು ಸಹಾಯಕ್ಕೆ ಬರುತ್ತವೆಯಲ್ಲದೆ ಆ ಕಾಲದ ಜನಜೀವನವನ್ನು ಪುನರ್‌ರಚಿಸುವಾಗ ಪ್ರಾಚೀನ ನಿಘಂಟುಗಳು ಪೂರಕವಾಗುತ್ತವೆ.