ಕನ್ನಡಕ್ಕೇ ತನ್ನದೇ ಆದ ನಿಘಂಟು ಸಾಹಿತ್ಯದ ಪರಂಪರೆಯಿದೆ. ರನ್ನ ಕಂದ ಆದಿಯಾಗಿ ಕವಿಕಂಠಹಾರದವರೆಗೆ ಒಂದು ಗಟ್ಟಿ ತಳಹದಿಯಿದೆ. ಆಧುನಿಕ ಕೋಶ ರಚನೆಯ ದೃಷ್ಟಿಯಿಂದಲೂ ಕನ್ನಡ ಹಿಂದು ಬಿದ್ದಿಲ್ಲ. ಆ ದಿಸೆಯಲ್ಲಿ ಕನ್ನಡವನ್ನು ಮೊದಲು ನಡೆಸಿದ ಶ್ರೇಯಸ್ಸು ಮಿಶನರಿ ವಿದ್ವಾಂಸರಿಗೆ ಸಲ್ಲುತ್ತದೆ. ಮಿಶನರಿಗಳು ನಿಘಂಟು ಕ್ಷೇತ್ರದಲ್ಲಿ ಆಸಕ್ತಿ ವಹಿಸಿದ್ದರಿಂದ ಈ ಕ್ಷೇತ್ರದಲ್ಲಿ ನೂತನ ಮನ್ವಂತರವೊಂದು ತೆರೆಯಿನ್ನಬಹುದು. ಅವರು ಕೋಶ ರಚನೆಗೆ ಕ್ಷೇತ್ರಕಾರ್ಯ ಅವಲಂಬಿಸಿದುದು, ಆಡುನುಡಿಗೆ ಪ್ರಾಶಸ್ತ್ಯ ನೀಡಿದುದು ಹಾಗೂ ಅಕ್ಷರಾನು ಕ್ರಮಣಿಕೆಯ ಜೋಡನೆಯ ಕ್ರಮವನ್ನು ಅನುಸರಿಸಿರುವುದರಿಂದ ಅವರಿಂದ ಹೊಸಬಗೆಯ ಕೋಶ ರಚನೆಯ ವಿಧಾನ ಆರಂಭವಾಯಿತು. ಅವರು ಹಾಕಿಕೊಟ್ಟ ಮಾದರಿಯಲ್ಲಿಯೇ ಆಧುನಿಕ ಕೋಶಗಳು ಸಿದ್ಧವಾದವು. ಮಿಶನರಿಗಳ ಹಾಗೂ ಅವರ ನಂತರ ಬಂದ ಆಧುನಿಕ ಕೋಶಗಳು ವೈವಿದ್ಯ ಪೂರ್ಣವಾಗಿವೆ. ಅವುಗಳ ಸ್ಥೂಲ ಸಮೀಕ್ಷೆಯನ್ನು ಈ ಅಧ್ಯಾಯದಲ್ಲಿ ಮಾಡಿಕೊಡಲಾಗಿದೆ.

ಸಂಸ್ಕೃತ – ಕನ್ನಡ ನಿಘಂಟುಗಳು: ಕನ್ನಡ ಕಾವ್ಯಗಳನ್ನು ಅಭ್ಯಸಿಸುವಾಗ ಸಂಸ್ಕೃತ ಪದಗಳು ಹೇರಳವಾಗಿ ದೊರೆಯುತ್ತವೆ. ಅವುಗಳ ಅರ್ಥವನ್ನು ತಿಳಿದುಕೊಳ್ಳಲಿಕ್ಕೆ ಸಂಸ್ಕೃತ ಪದಗಳಿಗೆ ಕನ್ನಡದಲ್ಲಿ ಅರ್ಥ ಹೇಳುವ ಸಂಸ್ಕೃತ – ಕನ್ನಡ ದ್ವಿಭಾಷಿಕ ನಿಘಂಟುಗಳು ತುಂಬ ನೆರವಾಗುತ್ತವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಎಸ್‌.ವಿ.ಹಂಜಿ ಅವರು ಸಿದ್ಧಪಡಿಸಿದ ‘ಸಂಸ್ಕೃತ – ಕನ್ನಡ ಕೋಶ’ (೧೯೬೭), ಜಿ.ವಿ. ಜೋಶಿ ಅವರ ‘ಸಂಸ್ಕೃತ – ಕನ್ನಡ ಶಬ್ದಕೋಶ’ (೧೯೬೫), ಡಿ.ವಿ. ಹೊಳ್ಳ ಅವರ ‘ತದ್ಭವ – ಸಂಸ್ಕೃತ ಶಬ್ದಕೋಶ’ (೧೯೫೦) ಇವು ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿವೆ. ಚಕ್ರವರ್ತಿ ಶ್ರೀನಿವಾಸ ಗೋಪಾಲಾಚಾರ್ಯರು ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದ ‘ಸಂಸ್ಕೃತ – ಕನ್ನಡ ಶಬ್ದಕೋಶಗಳು’ (೧೯೬೧) ಹೆಚ್ಚು ವಿಸ್ತಾರವೂ ಅಧಿಕೃತವೂ ಆಗಿದ್ದು ವಿದ್ವಾಂಸರ ಮನ್ನಣೆಯನ್ನು ಪಡೆದಿವೆ.

ಪಾರಿಭಾಷಿಕ ಪದಕೋಶಗಳು : ಕನ್ನಡ ಭಾಷಾಭಿವೃದ್ಧಿಯ ದೃಷ್ಟಿಯಿಂದಾಗಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಧರ್ಮ ಮುಂತಾದ ಬೇರೆ ಬೇರೆ ಜ್ಞಾನ ಕ್ಷೇತ್ರದ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ ತರಲು ಅನೇಕ ಪಾರಿಭಾಷಿಕ ಪದಗಳು ರಚಿತವಾಗಿವೆ. ಬೋಧನೆ, ಕಲಿಕೆ ಹಾಗೂ ಕಠಿಣ ಪದಗಳನ್ನು ಅರ್ಥೈಸಲು ಪಾರಿಭಾಷಿಕ ಪದಗಳು ನಿರ್ಮಾಣವಾಗಿವೆ. ಕನ್ನಡ ಮತ್ತು ನಿರ್ದೇಶನಾಲಯವು ಅಬಕಾರಿ, ಶಿಕ್ಷಣ, ಅರಣ್ಯ ಮುಂತಾದ ೩೪ ಇಲಾಖೆಗಳ ಪಾರಿಭಾಷಿಕ ಪದಕೋಶಗಳನ್ನು ಪ್ರಕಟಿಸಿದೆ. ಆಡಳಿತದಲ್ಲಿ ಕನ್ನಡವು ಸಂಪೂರ್ಣವಾಗಿ ಅನುಷ್ಠಾನಗೊಳ್ಳಬೇಕೆಂದೇ ಅದರ ಉದ್ದೇಶವಾಗಿದೆ. ಅದರಂತೆ ಬೇರೆ ಬೇರೆ ಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅನೇಕ ಪಾರಿಭಾಷಿಕ ಪದಕೋಶಗಳು ಕನ್ನಡದಲ್ಲಿ ರಚಿತವಾಗಿವೆ. ಡಿ. ಎಸ್‌. ಶಿವಪ್ಪನವರು ಸಿದ್ಧಪಡಿಸಿದ ‘ವೈದ್ಯಕ ಪದಗಳ ಹುಟ್ಟು ರಚನೆ’ (೧೯೯೦) ಎಂಬ ಕೋಶವು ವೈದ್ಯಕ ಪದಗಳ ಹುಟ್ಟು, ನಿಷ್ಪತ್ತಿ ಅವುಗಳ ಪದರಚನೆ ಹಾಗೂ ವರ್ಗೀಕರಣ ಮುಂತಾದ ವಿಷಯನ್ನೊಳಗೊಂಡ ಮೌಲಿಕ ಕೃತಿಯಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟಿಸಿದ ವಚನಸಾಹಿತ್ಯದ ಜನಪ್ರಿಯ ಆವೃತ್ತಿಯ ೧೫ನೆಯ ಸಂಪುಟ ‘ವಚನ ಪರಿಭಾಷಾ ಕೋಶ’ವನ್ನು ಡಾ.ಎಸ್‌.ವಿದ್ಯಶಂಕರ ಅವರು ಸಂಪಾದಿಸಿದ್ದಾರೆ (೧೯೯೩). ಆ ಕೋಶದಲ್ಲಿ ವೀರಶೈವ ಧರ್ಮ ಹಾಗೂ ವಚನ ಸಾಹಿತ್ಯದಲ್ಲಿ ಕಂಡು ಬರುವ ವಿಶಿಷ್ಟ ಪಾರಿಭಾಷಿಕಗಳಿಗೆ ವಿವರಣೆ ಕೊಡಲಾಗಿದೆ. ಶರಣ ಸಾಹಿತ್ಯದ ಅಧ್ಯಯನಕ್ಕೆ ಈ ಗ್ರಂಥ ಮಹತ್ವದ ಆಕರವಾಗುತ್ತದೆ. ಅದೇ ಇಲಾಖೆಯು ‘ಕಾನೂನು ಪದಕೋಶ’ (ಇಂಗ್ಲಿಶ್‌ – ಕನ್ನಡ) ಸಿದ್ಧಪಡಿಸಿದೆ (೧೯೮೦). ಕಾನೂನು ಶಾಸ್ತ್ರಕ್ಕೆ ಸಂಬಂಧಿಸಿದಂತೆ ಆ ಕೋಶದಲ್ಲಿ ೪೬೦೦ ಪದಗಳಿಗೆ ಅರ್ಥ ವಿವರಣೆ ಕೊಡಲಾಗಿದೆ. ಕಾನೂನು ವಿದ್ಯಾರ್ಥಿಗಳಿಗೆ ಸಂಶೋಧಕರಿಗೆ ಈ ಕೋಶ ತುಂಬ ನೆರವಾಗುತ್ತದೆ. ಎಸ್‌.ಸಿ. ಹೀರೆಮಠರು ಕಾನೂನು ಪದಗಳಿಗೆ ಅರ್ಥ ನೀಡುವ ‘ಕಾನೂನು ರತ್ನಕೋಶ’ (೧೯೯೭)ವನ್ನು ಸಿದ್ಧಪಡಿಸಿದ್ದಾರೆ.

ಜೈನಧರ್ಮ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಪಾರಿಭಾಚಿಕ ಪದಗಳಿಗೆ ಅರ್ಥ ವಿವರಣೆಯನ್ನು ಕೊಡಲು ಮ.ಪ್ರ.ಪೂಜಾರರು ‘ಜೈನಧರ್ಮ ಪರಿಭಾಷೆ’ (೧೯೩೦), ತ.ಸು. ಶಾಮರಾಯ ಮತ್ತು ಪ. ನಾಗರಾಜಯ್ಯ ಅವರು ಜೊತೆ ಸೇರಿ ‘ಜೈನ ಪರಿಭಾಷಾಕೋಶ’ವನ್ನು ಸಿದ್ಧಪಡಿಸಿದ್ದಾರೆ. ನಾರಾಯಣ ಉಡುಪ ಅವರು ಸಂಪಾದಿಸಿದ ‘ಪುರಾಣ ಭಾರತದ ಕೋಶ’ (೧೯೭೫)ದಲ್ಲಿ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ ಹಾಗೂ ಪುರಾಣಗಳಲ್ಲಿ ಅಭಿವ್ಯಕ್ತವಾಗಿರುವ ದೇವತೆಗಳು, ವ್ಯಕ್ತಿಗಳು, ನದಿಗಳು, ಪುಣ್ಯಕ್ಷೇತ್ರಗಳು, ಇವೇ ಮೊದಲಾದವುಗಳನ್ನು ಸಂಗ್ರಹಿಸಿ ಅರ್ಥ ವಿವರಣೆಯನ್ನು ಕೊಡಲಾಗಿದೆ. ಬೆನಗಲ್‌ರಾಮರಾವ್‌ಮತ್ತು ಪಾನ್ಯಂ ಸುಂದರಶಾಸ್ತ್ರೀ ಅವರು ಜತೆ ಸೇರಿ ಸಂಪಾದಿಸಿದ ‘ಪುರಾಣನಾಮ ಚುಡಾಮಣಿ’ (೧೯೪೧) ಯಲ್ಲಿ ದೇವತೆಗಳು, ಋಷಿಗಳು ಹಾಗೂ ಪುಣ್ಯ ಕ್ಷೇತ್ರಗಳ ಬಗ್ಗೆ ವಿವರಣೆಯಿದೆ. ಫ.ಗು. ಹಳಕಟ್ಟಿ ಅವರ ‘ಶಿವಾನುಭವ ಶಬ್ದಕೋಶ’ (೧೯೪೭)ದಲ್ಲಿ ವಚನ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ವಿಶಿಷ್ಟ ಪದಗಳಿಗೆ ಅರ್ಥ ವಿವರಣೆಯಿದೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ‘ಇಂಗ್ಲಿಶ್‌ – ಕನ್ನಡ ವಿಜ್ಞಾನ ಕೋಶ’ವನ್ನು ಪ್ರಕಟಿಸಿದೆ (೧೯೯೦). ಇದರ ಸಂಪಾದಕರು ಜೆ. ಆರ್‌. ಲಕ್ಷ್ಮಣರಾವ್‌ಮತ್ತು ಆಡ್ಯನಡ್ಕ ಕೃಷ್ಣಭಟ್‌. ಇದರಲ್ಲಿ ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನ, ಗಣಿತ, ಸಂಖ್ಯಾಶಾಸ್ತ್ರ, ಖಗೋಳಶಾಸ್ತ್ರ, ಪವನಶಾಸ್ತ್ರ, ಭೂವಿಜ್ಞಾನ, ಭೂಗೋಳಶಾಸ್ತ್ರ, ಎಂಜಿನಿಯರಿಂಗ್‌, ವೈದ್ಯಶಾಸ್ತ್ರ ಹಾಗೂ ಕೃಷಿ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪಾರಿಭಾಷಿಕಗಳಿಗೆ ಕನ್ನಡದಲ್ಲಿ ಸಮಾನ ಶಬ್ದಗಳನ್ನು ಕೊಡಲಾಗಿದೆ. ಆರ್‌. ಎಲ್‌. ನರಸಿಂಹಯ್ಯನವರು ‘Glossary of Scientific term’s’ ಹಾಗೂ ಕೆ. ಆರ್‌. ಚಕ್ರವರ್ತಿ ಅವರು Kannada Scientific Glossary (೧೯೨೩) ಎಂಬ ವಿಜ್ಞಾನಕ್ಕೆ ಸಂಬಂಧಿಸಿದ ಕೋಶಗಳನ್ನು ರಚಿಸಿದ್ದಾರೆ. (೧೯೭೩). ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಪದಗಳಿಗೆ ವಿವರಣೆ ಈ ಕೋಶದಲ್ಲಿದೆ. ಡಾ. ಬುದರಾವ್‌ಮಹಿಷಿ ಅವರು ಸಂಪಾದಿಸಿದ ‘ಮರಾಠಿ – ಕನ್ನಡ – ಸಂಸ್ಕೃತ ವನಸ್ಪತಿಕೋಶ’ದಲ್ಲಿ ಆಯುರ್ವೇದಿಕ್‌ಪದಗಳಿಗೆ ಅರ್ಥವಿವರಣೆಯಿದೆ.

ಎನ್‌. ಎಸ್‌. ವೀರಪ್ಪನವರು ‘ಶಿಕ್ಷಣ ಶಾಸ್ತ್ರದ ಪರಿಭಾಷಿಕ ನಿಘಂಟು’ವನ್ನು ರಚಿಸಿದ್ದಾರೆ. ಇದರಲ್ಲಿ ಇಂಗ್ಲಿಶ್‌ಪಾರಿಭಾಷಿಕಗಳಿಗೆ ಕನ್ನಡ ಸಮಾನಾರ್ಥಕಗಳಿವೆ. ಜೊತೆಗೆ ಪ್ರತಿಯೊಂದು ಪದಗಳ ಅರ್ಥ ವಿವರಣೆ, ಪ್ರಯೋಗ ಮುಂತಾದ ಅಂಶಗಳ ವಿವರಣೆಯಿದೆ. ಇಷ್ಟೊಂದು ಸಮಗ್ರವಾದ, ವಿಚಾರ ಪಲಿಪ್ಲುತವಾದ ಶಿಕ್ಷಣದ ನಿಘಂಟು ಯಾವುದೇ ಭಾರತೀಯ ಭಾಷೆಯಲ್ಲಿಯೂ ಇನ್ನೂ ಬಂದಿಲ್ಲ. ಶಿಕ್ಷಣ ಶಾಸ್ತ್ರದ ವಿದ್ಯಾರ್ಥಿಗಳು, ವಿದ್ವಾಂಸರು ಅತ್ಯವಶ್ಯವಾಗಿ ಗಮನಿಸಬೇಕಾದ ಆಕರ ಗ್ರಂಥ ಇದಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಇದೊಂದು ಅಮೂಲ್ಯ ಕೊಡುಗೆ. ಬೇರೆ ಬೇರೆ ಅಧ್ಯಯನ ಕ್ಷೇತ್ರಗಳಿಗೂ ಇಂತಹ ವಿವರಣಾತ್ಮಕ ನಿಘಂಟುಗಳು ಸಿದ್ಧವಾಗಬೇಕಾಗಿದೆ. ಕೆ. ಕೆಂಪೇಗೌಡರು ಭಾಷಾ ವಿಜ್ಞಾನದಲ್ಲಿ ಬರುವ ಪರಿಭಾಷಿಕಗಳನ್ನು ಕಲೆ ಹಾಕಿ ‘ಭಾಷಾ ವಿಜ್ಞಾನ ಕೋಶ’ವನ್ನು ರಚಿಸಿದ್ದಾರೆ. (೧೯೭೬). ಭಾಷಾಭ್ಯಾಸಿಗಳಿಗೆ ಇದು ನೆರವಾಗುತ್ತದೆ. ಎ. ಎಸ್. ಧರಣೇಂದ್ರಯ್ಯ ಅವರು ‘ಮನೋವಿಜ್ಞಾನ ಪಾರಿಭಾಷಿಕ ಕೋಶ’ವನ್ನು ಸಿದ್ಧಪಡಿಸಿದ್ದಾರೆ. ಮನಃಶಾಸ್ತ್ರ ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ ಇದು ಸಹಕಾರಿಯಾಗಿದೆ.

ಕನ್ನಡ – ಕನ್ನಡ ಕೋಶಗಳು: ಕನ್ನಡದಲ್ಲಿ ಕನ್ನಡ – ಕನ್ನಡ ಏಕಭಾಷಿಕ ಕೋಶಗಳು ಇತರ ಕೋಶಗಳಿಗೆ ಹೋಲಿಸಿದಾಗ ಅಧಿಕವಾಗಿವೆ. ಗಂಗಾಧರ ಮಡಿವಾಳೇಶ್ವರ ತುರುಮರಿ ಅವರು ಸಿದ್ಧಪಡಿಸಿದ ‘ಶಬ್ದಮಂಜರಿ’ (೧೮೯೦)ಯು ದೇಶೀಯ ಪಂಡಿತರಿಂದ ರಚಿತವಾದ ಮೊದಲ ಕನ್ನಡ – ಕನ್ನಡ ನಿಘಂಟಾಗಿದೆ. ಇದರಲ್ಲಿ ಹಳಗನ್ನಡ ಮತ್ತು ದೇಶ್ಯ ಶಬ್ದಗಳಿಗೆ ಅರ್ಥವನ್ನು ವಿವರಿಸಿದೆ. ಕನ್ನಡ ಶಬ್ದಾರ್ಥ ವಿವೇಚನೆಗೆ ಸಂಬಂಧಿಸಿದಂತೆ ‘ಶಬ್ದವುತ್ಪತ್ತಿ’ (೧೯೦೦) ಎಂಬ ಕೋಶವನ್ನು ಗುರುರಾವ್‌ವಿಠಲರಾವ್‌ಮೊಹರೆ ಅವರು ರಚಿಸಿದ್ದಾರೆ. ಮಚ್ಚಿಮಲೆ ಶಂಕರನಾರಾಯಣರಾವ್‌, ಆರ್‌. ಎಸ್‌. ನಾವೂರ‍್ಕರ್‌ಮತ್ತು ಸೇಡಿಯಾಪು ಕೃಷ್ಣಭಟ್‌ಅವರಿಂದ ರಚಿತವಾದ ‘ಕನ್ನಡ ನಿಘಂಟು’ (೧೯೫೧) ಇದರಲ್ಲಿ ಕನ್ನಡ – ಸಂಸ್ಕೃತ ಶಬ್ದಗಳಿಗೆ ಹಾಗೂ ಹಳಗನ್ನಡದ ಕೆಲವು ಶಬ್ದ ರೂಪಗಳಿಗೆ ಅರ್ಥ ಹೇಳಿದೆ. ಹೆಚ್‌. ವಿ. ರಮಾಕಾಂತರಿಂದ ರಚಿತವಾದ ‘ಕನ್ನಡ – ಕನ್ನಡ ಶಬ್ದಕೋಶ’ (೧೯೫೨) ಇದರಲ್ಲಿ ಹಳಗನ್ನಡ ಶಬ್ದಗಳಿಗೆ ಅರ್ಥ ಹೇಳಿದೆ.

ಗುರುನಾಥ ಜೋಶಿ ಮತ್ತು ಜಿ. ಅಶ್ವತ್ಥನಾರಾಯಣರಾವ್‌ಅವರಿಂದ ಸಂಕಲಿತವಾದ ‘ಕನ್ನಡ – ಕನ್ನಡ ಶಬ್ದಕೋಶ’(೧೯೫೬) ದಲ್ಲಿ ಕನ್ನಡ ಮತ್ತು ಸಂಸ್ಕೃತ ಶಬ್ದಗಳಿಗೆ ಅರ್ಥವನ್ನು ವಿವರಿಸಿದೆ. ‘ಸಚಿತ್ರ ಕನ್ನಡ – ಕನ್ನಡ ಕಸ್ತೂರಿ ಕೋಶ’ವು ಚೆ. ಎ. ಕವಲಿ ಅವರಿಂದ ಸಂಕಲಿತವಾಗಿದೆ (೧೯೫೭). ಇದರಲ್ಲಿ ಸಂಸ್ಕೃತ, ಕನ್ನಡ ಹಾಗೂ ಅನ್ಯದೇಶ್ಯ ಶಬ್ದಗಳಿಗೆ ಅರ್ಥ ಕೊಡಲಾಗಿದೆ. ಆಯಾ ಶಬ್ದಗಳನ್ನು ವಿವರಿಸುವಾಗ ಚಿತ್ರಗಳ ಅವಶ್ಯಕತೆಯಿದ್ದರೆ ಚಿತ್ರಗಳನ್ನು ಕೊಟ್ಟಿರುವುದು ಈ ನಿಘಂಟಿನ ವೈಶಿಷ್ಟ್ಯವಾಗಿದೆ. ‘ಕನ್ನಡ ಕಾವ್ಯ ಪದ ಮಂಜರಿ’ ಎಂಬ ಕೋಶವನ್ನು ಸ. ಸ. ಮಾಳವಾಡ, ಕ. ವೆಂ. ರಾಜಗೋಪಾಲ ಮತ್ತು ಟಿ. ಕೇಶವಭಟ್‌ಇವರಿಂದ ಸಂಕಲಿತವಾಗಿದೆ (೧೯೭೦). ಇದರಲ್ಲಿ ಪ್ರಾಚೀನ ಕಾವ್ಯಗಳಿಂದ ಶಬ್ದಗಳನ್ನು ಸಂಗ್ರಹಿಸಿ ಅವುಗಳಿಗೆ ಅರ್ಥವನ್ನು ವಿವರಿಸಿದೆ. ಶಿವರಾಮ ಕಾರಂತರ ‘ಸಿರಿಗನ್ನಡ ಅರ್ಥಕೋಶ’ದಲ್ಲಿ ಕನ್ನಡ, ಸಂಸ್ಕೃತ ಹಾಗೂ ಅನ್ಯದೇಶ್ಯಗಳಿಗೆ ಕನ್ನಡದಲ್ಲಿ ಅರ್ಥ ಕೊಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ – ಕನ್ನಡ ನಿಘಂಟು’ ನಾಡಿನ ಹಲವಾರು ಪರಿಣಿತ ವಿದ್ವಾಂಸರ ನೆರವಿನಿಂದ ಸಿದ್ಧಪಡಿಸಿದ ಬೃಹತ್‌ನಿಘಂಟು. ಐತಿಹಾಸಿಕ ಭಾಷಾಶಾಸ್ತ್ರದ ತತ್ವಗಳಿನುಸಾರವಾಗಿ ಚಾರಿತ್ರಿಕ ವಿವರಣೆಗಳಿಂದ ಕೂಡಿರುವ ಪ್ರಮಾಣಭೂತ ನಿಘಂಟುವಿದು. ಇದರ ೮ ಸಂಪುಟಗಳು ಪ್ರಕಟವಾಗಿವೆ. ಹಲ್ಮಿಡಿ ಶಾಸನದಿಂದ ಹಿಡಿದು ಇಂದಿನವರೆಗೆ ಉಪಲಬ್ದವಾದ ಪ್ರಕಟಿತ ಮತ್ತು ಅಪ್ರಕಟಿತ ಕಾವ್ಯ, ಶಾಸ್ತ್ರ ಹಾಗೂ ಶಾಸನಗಳನ್ನು ಅವಲೋಕಿಸಿ ಶಬ್ದಗಳನ್ನು ಸಂಗ್ರಹಿಸಲಾಗಿದೆ. ಬರೆಹದ ರೂಪಗಳಂತೆ ಉಪಭಾಷಾ ರೂಪಗಳು ಇಲ್ಲಿ ದಾಖಲಾಗಿರುವುದು ವಿಶೇಷವಾಗಿದೆ. ಪ್ರಾಚೀನ ಕನ್ನಡ ನಿಘಂಟುಗಳಲ್ಲಿ ಕಂಡುಬಂದಿರುವ ಅರೆಕೊರೆಗಳನ್ನು ನಿವಾರಿಸಿಕೊಂಡು ಸಿದ್ಧವಾಗಿರುವ ಈ ನಿಘಂಟು ಕನ್ನಡಿಗರ ಬಹುದಿನದ ಆಶೋತ್ತರಗಳನ್ನು ಪೂರೈಸಿದೆ. ಕನ್ನಡ ಭಾಷೆಯ ಚಾರಿತ್ರಿಕ ಬೆಳವಣಿಗೆಯನ್ನು ಗುರುತಿಸುವುದೇ ಈ ನಿಘಂಟುವಿನ ಮುಖ್ಯ ಉದ್ದೇಶವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸಿದ ಬೃಹತ್‌ನಿಘಂಟುಗಳ ಮುರಿನಿಘಂಟು ‘ಸಂಕ್ಷಿಪ್ತ ಕನ್ನಡ ನಿಘಂಟು’ (೧೯೭೫) ಇದು ಆಸಕ್ತ ವಿದ್ಯಾವಂತರಿಗೆ, ವಿದ್ಯಾರ್ಥಿಗಳಿಗೆ ವಿಶೇಷ ಪ್ರಯೋಜನಕಾರಿಯಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟು ರಚಿತವಾದ ‘ಕನ್ನಡ ರತ್ನಕೋಶ’ (೧೯೭೭) ತುಂಬ ಜನಪ್ರಿಯವಾಗಿದೆ. ಇದು ಈಚೆಗೆ ಎರಡನೆಯ ಆವೃತ್ತಿಯನ್ನು (೧೯೯೪) ಕಂಡಿದೆ.

ಇಂಗ್ಲಿಶ್‌ – ಕನ್ನಡ ನಿಘಂಟುಗಳು: ಈ ವರ್ಗಕ್ಕೆ ಸೇರಿದ ಕೋಶಗಳು ಹೆಚ್ಚಾಗಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರಚಿತವಾಗಿವೆ. ವಿಲ್ಯಂ ರೀವ್‌ನ ‘A Dictionary of English and Canarese’ ನಿಘಂಟು (೧೮೨೪), ಜಾನ್‌ಗ್ಯಾರೆಟ್‌ನ ‘A Manual of English and Canarese Dictionary’ (೧೮೪೪), ಎಫ್‌. ಜೀಗ್ಲರ್‌ನ English Kannrese School dictionary (೧೮೭೬) ಅದರಂತೆ ಮೈಸೂರು ವಿಶ್ವವಿದ್ಯಾಲಯವು ಪ್ರಕಟಿಸಿದ ‘ಇಂಗ್ಲಿಶ್‌ – ಕನ್ನಡ ನಿಘಂಟು’, ಎಲ್‌. ಗುಂಡಶಾಸ್ತ್ರೀ ಅವರ ‘ಇಂಗ್ಲಿಶ್‌’ ಕನ್ನಡ ನಿಘಂಟು (೧೯೫೯), ಈ ಎಲ್ಲ ಕೋಶಗಳು ಶಾಲಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರಚಿತವಾಗಿವೆ. ೧೯೬೭ರಲ್ಲಿ ಕರ್ನಾಟಕ ಸರಕಾರದ ವತಿಯಿಂದ ಪ್ರಕಟವಾದ ‘ಆಡಳಿತ ಶಬ್ದಕೋಶ ಇಂಗ್ಲಿಶ್‌ – ಕನ್ನಡ’ ಈ ಶಬ್ದಕೋಶದಲ್ಲಿ ಆಡಳಿತದಲ್ಲಿ ಬಳಕೆಯಾಗುವ ಅನೇಕ ಆಂಗ್ಲ ಪದಗಳಿಗೆ ಸಮಾನಾರ್ಥಕ ಕನ್ನಡ ಪದಗಳನ್ನು ಕೊಟ್ಟಿದೆ.

ಕನ್ನಡ – ಇಂಗ್ಲಿಶ್‌ಕೋಶಗಳು: ಈ ವರ್ಗದ ಕೋಶಗಳು ಮೊದಲು ಮಿಶನರಿ ಕೋಶಕಾರರಿಂದ ರಚಿತವಾದವು. ರೀವ್‌ನ ‘A Dictionary of Canarese and English’(೧೮೩೨) ಅಕಾರಾದಿ ಕ್ರಮದಲ್ಲಿ ಪ್ರಕಟವಾದ ಹಾಗೂ ಪಾಶ್ಚಾತ್ಯ ವಿದ್ವಾಂಸರು ಕನ್ನಡಕ್ಕೆ ಸಿದ್ಧಪಡಿಸಿದ ನಿಘಂಟುಗಳಲ್ಲಿ ಇದು ಮೊದಲನೆಯದು. ಈ ನಿಘಂಟುವಿನಲ್ಲಿ ಕನ್ನಡ ಮತ್ತು ಸಂಸ್ಕೃತ ಶಬ್ದಗಳಿಗೆ ಇಂಗ್ಲಿಶ್‌ನಲ್ಲಿ ಅರ್ಥ ಹೇಳಿದೆ. ಡೇನಿಯಲ್‌ಸ್ಯಾಂಡರಸನ್‌ಎಂಬ ವಿದ್ವಾಂಸರು ರೀವ್‌ನಿಘಂಟನ್ನು ಪರಿಷ್ಕರಿಸಿದನು ಅದುವೇ ‘A Dictionary of Canarese and English’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದನು (೧೮೫೮). ಜಾನ್ ಗ್ಯಾರೆಟ್‌ನು ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರೀವ್‌ನಿಘಂಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿದನು. ಅದುವೇ ‘A Manual Kanarese and English dictionary’ಆಗಿದೆ. ಈ ನಿಘಂಟಿನಲ್ಲಿ ದೇಶ್ಯ, ಅನ್ಯದೇಶ್ಯ ಹಾಗೂ ಸಂಸ್ಕೃತ ಶಬ್ದಗಳಿಗೆ ಇಂಗ್ಲಿಶ್‌ದಲ್ಲಿ ಅರ್ಥ ಕೊಡಲಾಗಿದೆ. ಇದು ೧೮೭೧ರ ವೇಳೆಗೆ ಮೂರು ಮುದ್ರಣಗಳನ್ನು ಕಂಡಿದೆ ಎಂಬುದನ್ನು ಗಮನಿಸಿದರೆ ಅದರ ಜನಪ್ರಿಯತೆ ಗೋಚರವಾಗುತ್ತದೆ.

ರೆ. ಎಫ್‌. ಕಿಟೆಲ್‌ರು ಸಿದ್ಧಪಡಿಸಿದ ‘A Kannada – English Dictionary’ ಎಂಬುದು ಕನ್ನಡದ ಶ್ರೇಷ್ಠ ನಿಘಂಟುಗಳಲ್ಲಿ ಒಂದಾಗಿದೆ. ವಿದ್ವತ್‌ಲೋಕದಲ್ಲಿ ಕಿಟೆಲ್‌ಎಂದಾಕ್ಷಣ ತಕ್ಷಣ ನೆನಪಿಗೆ ಬರುವುದು ಅವರು ಸಿದ್ಧಪಡಿಸಿದ ನಿಘಂಟು. ಹತ್ತಾರು ವರ್ಷಗಳ ಪರಿಶ್ರಮದಿಂದ ಹೊರಬಂದಿರುವ ಈ ನಿಘಂಟುವಿನಲ್ಲಿ ಪ್ರಾಚೀನ ಕಾವ್ಯ, ಶಾಸನಗಳಿಂದ ಹಾಗೂ ಆಡು – ನುಡಿಗಳಿಂದ ಶಬ್ದಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ದೇಶ್ಯ, ಅನ್ಯದೇಶ್ಯ ಹಾಗೂ ಸಂಸ್ಕೃತ ಶಬ್ದಗಳಿಗೆ ಇಂಗ್ಲಿಶ್‌ನಲ್ಲಿ ಅರ್ಥಗಳನ್ನು ಕೊಟ್ಟಿದೆ. ಈ ಕೋಶವು ಒಂದು ಕಾಲಘಟ್ಟದ ಜನಜೀವನವನ್ನು ತಿಳಿದುಕೊಳ್ಳುವ ಸಾಂಸ್ಕೃತಿಕ ಪದಕೋಶವೂ ಆಗಿದೆ. ಪ್ರತಿಶಬ್ದಕ್ಕೂ ಆಧಾರವನ್ನು ಸೂಚಿಸಿರುವ ಈ ನಿಘಂಟು ಪ್ರಮಾಣಭೂತವಾಗಿದೆ. ಕನ್ನಡ ನಿಘಂಟು ಚರಿತ್ರೆಯಲ್ಲಿ ಇದು ಮೈಲುಗಲ್ಲಿನಂತಿದೆ. ಈ ನಿಘಂಟನ್ನು ಆಧರಿಸಿ ಅನೇಕ ನಿಘಂಟುಗಳು ಹುಟ್ಟಿಕೊಂಡವು. ಈ ಕೋಶವು ೧೮೯೩ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡು ಈಗ ಅದು ಐದು ಸಾರಿ ಮರು ಮುದ್ರಣವಾಗಿದೆ. ಪ್ರೊ. ಎಂ. ಮರಿಯಪ್ಪಭಟ್‌ಅವರು ಈ ಕೋಶವನ್ನು ಪರಿಷ್ಕರಿಸಿ ನಾಲ್ಕು ಸಂಪುಟಗಳಲ್ಲಿ ಹೊರತಂದಿದ್ದಾರೆ. ಬ್ಯುಚರ್‌ನು ‘Kannada – English – Kannada Dictionary’ (೧೯೪೪)ಈಗ ಇದು ಹಲವಾರು ಮುದ್ರಣಗಳನ್ನು ಕಂಡಿದೆ. ಪ್ರತಿಯೊಂದು ಮುದ್ರಣದಲ್ಲಿಯೂ ಪರಿಷ್ಕರಣಗೊಂಡು ಹೊಸ ಶಬ್ದಗಳು ಸೇರ್ಪಡೆಯಾಗುತ್ತ ಬಂದಿರುವ ಈ ನಿಘಂಟು ತುಂಬ ಜನಪ್ರಿಯವಾಗಿದೆ. ಇದರಲ್ಲಿ ಸು. ೨,೫೦೦ ಪದಗಳಿಗೆ ಸಾವಿರಾರು ನುಡಿಗಟ್ಟುಗಳಿಗೆ ಅರ್ಥ ವಿವರಣೆಯನ್ನು ಕೊಡಲಾಗಿದೆ. ವಿಠಲ್‌ಶೆನೈ ಅವರು English – English – Kannada Dictionary (೧೯೬೨)ಯನ್ನು ಸಿದ್ಧಪಡಿಸಿದ್ದಾರೆ. ಐ. ಬಿ. ಹೆಚ್‌. ಪ್ರಕಾಶನದಿಂದ ಪ್ರಕಟವಾದ English – English – Kannada Dictionary’ ವಿದ್ಯಾರ್ಥಿಗಳಿಗೆ ಇಂಗ್ಲಿಶ್‌ಭಾಷೆಯನ್ನು ಕಲಿಯಲು ತುಂಬ ನೆರವಾಗುತ್ತದೆ. ಈ ನಿಘಂಟನ್ನು ಪ್ರೊ. ಎಲ್‌. ಎಸ್‌. ಶೇಷಗಿರಿರಾವ್‌, ಪ್ರೊ. ವಿ. ನಾಗರಾಜರಾವ್‌, ಪ್ರೊ. ಹೆಚ್‌. ಕೆ. ರಾಮಚಂದ್ರಮೂರ್ತಿಯವರು ಜತೆಗೂಡಿ ಸಂಪಾದಿಸಿದ್ದಾರೆ. ಈ ಎಲ್ಲ ಕೋಶಗಳಲ್ಲಿ ಇಂಗ್ಲಿಶ್‌ಶಬ್ದಗಳಿಗೆ ಇಂಗ್ಲಿಶ್‌ಮತ್ತು ಕನ್ನಡದಲ್ಲಿ ಅರ್ಥ ಕೊಡಲಾಗಿದೆ. ಪಿ. ಮಂಗೇಶ್‌ರಾವ್‌ಅವರು ಸಿದ್ಧಪಡಿಸಿದ ‘The English Kannada Pocket Dictionary’ (೧೯೮೫) ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿದೆ.

ಕನ್ನಡ – ಕನ್ನಡ – ಇಂಗ್ಲಿಶ್‌ನಿಘಂಟುಗಳು: ಐ.ಬಿ.ಹೆಚ್‌. ಪ್ರಕಾಶನದವರು ‘ಕನ್ನಡ – ಕನ್ನಡ – ಇಂಗ್ಲಿಶ್‌ನಿಘಂಟನ್ನು’ ಪ್ರಕಟಿಸಿದ್ದಾರೆ. ಇದರ ಸಂಪಾದಕರು ಪ್ರೊ. ಜಿ. ವೆಂಕಟಸುಬ್ಬಯ್ಯ, ಪ್ರೊ. ಎಲ್‌. ಎಸ್‌. ಶೇಷಗಿರಿರಾವ್‌, ಪ್ರೊ. ಎಚ್‌. ಕೆ. ರಾಮಚಂದ್ರ ಮೂರ್ತಿ. ಇದರಲ್ಲಿ ಶಬ್ದಾರ್ಥ ಸೇರಿ ೯೦,೦೦೦ ನಮೂದುಗಳನ್ನು ಅರ್ಥ ಹೇಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುಗಳು ಹಾಗೂ ಕಿಟೆಲ್‌ಕೋಶ ಇದಕ್ಕೆ ಮುಖ್ಯ ಆಧಾರವಾಗಿದೆ. ‘ಕನ್ನಡ – ಕನ್ನಡ – ಇಂಗ್ಲಿಶ್‌ನಿಘಂಟು’ (೧೯೬೫) ಇದು ಚಿಕ್ಕದಾದರೂ ಚೊಕ್ಕಟ್ಟಾಗಿ ಪ್ರಕಟವಾಗಿದೆ. ಇದರ ಸಂಪಾದಕರು ಆರ್‌. ಎಸ್‌. ರಾಮರಾಯರು. ಶ್ರೀಯುತರು ತಮ್ಮ ಆಡಳಿತಾನುಭವದಿಂದ ದಿನನಿತ್ಯ ಬಳಕೆಯಲ್ಲಿರುವ ಶಬ್ದಗಳನ್ನು ಈ ನಿಘಂಟಿನಲ್ಲಿ ಸೇರಿಸಿದ್ದಾರೆ. ಇದರ ವೈಶಿಷ್ಟ್ಯವೆಂದರೆ ಒಂದು ಪದಕ್ಕೆ ಅರ್ಥವನ್ನು ಒಂದೇ ಪದದಲ್ಲಿ ಕೊಟ್ಟಿರುವುದು. ವಿವರಣೆಯನ್ನು ಕೊಡುವ ಗೋಜಿಗೆ ಹೋಗಿಲ್ಲದಿರುವುದು.

ಗಾದೆಗಳ ಕೋಶಗಳು: ಒಂದು ಪ್ರದೇಶದ ಅಥವಾ ಸಮುದಾಯದ ಜನಜೀವನವನ್ನು ತಿಳಿದುಕೊಳ್ಳುವಲ್ಲಿ ಜನಪದ ಸಾಹಿತ್ಯ ಪ್ರಕಾರಗಳು ತುಂಬ ನೆರವಾಗುತ್ತವೆ. ಅವುಗಳಲ್ಲಿ ಗಾದೆಗಳು ಪ್ರಮುಖವಾದವುಗಳು. ಕನ್ನಡದಲ್ಲಿ ಗಾದೆಗಳಿಗೆ ಸಂಬಂಧಿಸಿದಂತೆ ಕೋಶಗಳು ರಚಿತವಾಗಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಕನ್ನಡ ಗಾದೆಗಳ ಕೋಶ – ಟಿ.ವಿ. ವೆಂಕಟರಮಣಯ್ಯ (೧೯೬೩), ಕರ್ನಾಟಕ ಲೋಕೋಕ್ತಿ ನಿಧಿ – ಪ್ರ. ಬಾಸೆಲ್‌ಮಿಶನ್‌ಬೆಂಗಳೂರು (೧೯೧೨), ಕಿಟೆಲ್‌ಕೋಶದ ಗಾದೆಗಳು – ರಾ. ಗೌ. (ಪ್ರ. ಮು. ೧೯೬೯ ದ್ವಿ. ಮು. ೧೯೭೩), ಆಧುನಿಕ ಗಾದೆಗಳು – ಟಿ. ವಿ. ವೆಂಕಟಜೀವನವನ್ನು ತಿಳಿದುಕೊಳ್ಳಲು ತುಂಬ ನೆರವಾಗುತ್ತವೆ.

ನುಡಿಗಟ್ಟು, ಸಮಾನಾರ್ಥಕ, ವಿರುದ್ಧಾರ್ಥಕ ಹಾಗೂ ತತ್ಸಮ ತದ್ಭವ ಕೋಶಗಳು: ಕನ್ನಡದಲ್ಲಿ ಪಡೆನುಡಿ ಅಥವಾ ನುಡಿಗಟ್ಟುಗಳಿಗೆ ಸಂಬಂಧಿಸಿದಂತೆ ಎರಡು ಕೋಶಗಳು ಬಂದಿವೆ. ಟಿ.ವಿ. ವೆಂಕಟರಮಣಯ್ಯನವರಿಂದ ರಚಿತವಾದ ‘ಕನ್ನಡ ಪಡೆನುಡಿಗಳು ಬೃಹತ್‌ಕೋಶ’ (೧೯೯೦), ಎಂ. ರಾಜಗೋಪಾಲಚಾರ್ಯರ ‘ಕನ್ನಡ ವಾಗ್ರೂಢಿಗಳು’ ಈ ಎರಡು ತುಂಬ ಉಪಯುಕ್ತವಾಗಿದೆ. ಜೆ.ಎಂ. ಹನಸೋಗೆ ಅವರ ‘ಕನ್ನಡ ಶಬ್ದ ಸಾಗರ’ (೧೯೭೨) ವಿಶಿಷ್ಟ ರೀತಿಯ ಕೋಶವಾಗಿದೆ. ಆ ಕೋಶದಲ್ಲಿ ಕನ್ನಡ – ಇಂಗ್ಲಿಶ್‌ಮತ್ತು ಇಂಗ್ಲಿಶ್‌ – ಕನ್ನಡದಲ್ಲಿ ಸಮನಾರ್ಥಕ ಹಾಗೂ ವಿರುದ್ಧಾರ್ಥಕ ಶಬ್ದಗಳಿಗೆ ಅರ್ಥ ಕೊಡಲಾಗಿದೆ. ಶ್ರೀಮತಿ ಚೈತ್ರ ಅವರು ‘ತತ್ಸಮ – ತದ್ಭವ, ತದ್ಭವ – ತತ್ಸಮ ಕೋಶ’ (೧೯೮೭ – ೮೮)ವನ್ನು ರಚಿಸಿದ್ದಾರೆ. ಸಾ.ಶಿ. ಮರುಳಯ್ಯ ಮತ್ತು ಇತರು ಸೇರಿ ಸಂಪಾದಿಸಿದ ‘ಅವಳಿ ಪಡೆನುಡಿ ಕೋಶ’ (೧೯೯೮) ಇದು ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿದೆ.

ಹಿಂದಿ – ಕನ್ನಡ ಕೋಶಗಳು : ಹಿಂದಿ ರಾಷ್ಟ್ರೀಯ ಭಾಷೆಯೆಂದೂ ಆಡಳಿತ ಭಾಷೆಯೆಂದೂ ಒಪ್ಪಿತವಾಗಿದೆ. ಕನ್ನಡವೂ ಸೇರಿದಂತೆ ಇತರೆ ದೇಶಿಯ ಭಾಷೆಗಳಲ್ಲಿ ಹಿಂದಿ ಕೋಶಗಳೂ ರಚಿತವಾಗಿವೆ. ಪ್ರೊ. ಜಂಬುನಾಥನ ಅವರ ‘ಹಿಂದಿ – ಕನ್ನಡ ಕೋಶ’ (೧೯೪೫), ಪ್ರೊ. ಗುರುನಾಥ ಜೋಶಿ ಅವರ ‘ಹಿಂದಿ – ಕನ್ನಡ ಶಬ್ದಕೋಶ’ (೧೯೫೦), ಪಂಡಿತ ಸಿದ್ದನಾಥ ಪಂತ ಅವರು ‘ಹಿಂದಿ – ಕನ್ನಡ ಕೋಶ’ (೧೯೪೫), ಶ್ರೀ ಮನ್ನೂರವರ ‘ಹಿಂದಿ – ಕನ್ನಡ ಕೋಶ’ಗಳು ಪ್ರಕಟವಾಗಿವೆ. ಇವುಗಳಲ್ಲಿ ಗುರುನಾಥ ಜೋಶಿಯವರ ಕೋಶವು ತುಂಬ ಜನಪ್ರಿಯವಾಗಿದೆ. ಹಿಂದಿ – ಹಿಂದಿ – ಕನ್ನಡ ಕೋಶಗಳು – ಈ ವರ್ಗದಲ್ಲಿ ಒಂದೇ ಒಂದು ನಿಘಂಟು ರಚಿತವಾಗಿದೆ. ಅದುವೇ ಜೆ.ಡಿ ಮೈಕಲೆಯವರ ‘ಹಿಂದಿ – ಹಿಂದಿ – ಕನ್ನಡ ರತ್ನಕೋಶ’ (೧೯೫೧) ಇದು ಹಿಂದಿ ಹಾಗೂ ಕನ್ನಡ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿದೆ. ಕನ್ನಡ – ಹಿಂದಿ ಕೋಶಗಳು – ಎರಡು ಕೋಶಗಳು ಈ ವರ್ಗದಲ್ಲಿ ರಚನೆಯಾಗಿವೆ. ಜೆ.ಡಿ.ಮೈಕಲೆ, ಎಸ್‌.ವಿ.ಭಟ್‌, ಚಾಂದುಲಾಲ ದುಬೆ ಅವರು ಜೊತೆ ಸೇರಿ ಸಂಪಾದಿಸಿದ ‘ಸಚಿತ್ರ ಕನ್ನಡ – ಹಿಂದಿ ಆದರ್ಶಕೋಶ’ (೧೯೫೭) ಹಾಗೂ ಗುರುನಾಥ ಜೋಶಿಯವರ ‘ಕನ್ನಡ – ಕನ್ನಡ – ಹಿಂದಿ ಶಬ್ದಕೋಶ’ (೧೯೫೭). ಈ ಕೋಶಗಳು ಹಿಂದಿ ಹಾಗೂ ಕನ್ನಡ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿವೆ. ಹಿಂದಿಇಂಗ್ಲಿಶ್‌ – ಕನ್ನಡ ನಿಘಂಟುಗಳು – ಈ ವರ್ಗದಲ್ಲಿ ಒಂದು ಕೋಶ ಮಾತ್ರ ರಚಿತವಾಗಿದೆ. ಅದುವೇ ಎಲ್‌.ಎಸ್‌. ಚಿಟಗುಪ್ಪಿಯವರ ‘ಆಧುನಿಕ ಹಿಂದಿ – ಕನ್ನಡ – ಇಂಗ್ಲಿಶ್‌ಶಬ್ದಕೋಶ’ ಇದು ಹಿಂದಿ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಶ್‌ನ್ನು ತಿಳಿದುಕೊಳ್ಳಲು ತುಂಬ ಸಹಕಾರಿಯಾಗುತ್ತದೆ.

ಅಚ್ಚಗನ್ನಡ ನುಡಿಕೋಶ : ಕೊಳಂಬೆ ಪುಟ್ಟಣ್ಣ ಗೌಡರ ‘ಅಚ್ಚಗನ್ನಡ ನುಡಿಕೋಶ’ವು ಕನ್ನಡದ ಐತಿಹಾಸಿಕ ಬೆಳವಣಿಗೆಯನ್ನು ದಾಖಲಿಸುತ್ತದೆ. ಭಾಷಾ ಬಳಕೆಯಲ್ಲಿ ಕೈಜಾರಿ ಹೋದ ಅನೇಕ ಪದರಚನೆಗಳು ಮತ್ತೆ ಚಲಾವಣೆಗೆ ತರುವ ಸಾಧ್ಯತೆಗಳತ್ತ ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ. ಆಧುನಿಕ ಕಾಲದಲ್ಲಿ ಎಲ್ಲೆಡೆಯಿಂದ ಆಕ್ರಮಿಸಿಕೊಳ್ಳುತ್ತಿರುವ ವಿಜ್ಞಾನ – ತಂತ್ರಜ್ಞಾನ – ಮಾನವಿಕಗಳನ್ನು ನಮ್ಮ ಭಾಷೆಯಲ್ಲಿ ಹೇಳಲು ಅನೇಕ ಮೂಲ ಪದಗಳ, ಸಮಾಸ ಪದಗಳ ಅವಶ್ಯಕತೆಯಿದೆ, ಅಂತಹ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಇಂತಹ ನುಡಿಕೋಶಗಳನ್ನು ಮೂಲ ಆಕರಗಳನ್ನಾಗಿ ಬಳಸಿಕೊಳ್ಳಬಹುದಾಗಿದೆ. ಕೊಳಂಬೆಯವರು ಆಡಂಯ್ಯನ ಪರಂಪರೆಗೆ ಸೇರಿದ ವಿದ್ವಾಂಸ ಕವಿ. ಪ್ರಯೋಗಶೀಲ ಮನ್ನೋಧರ್ಮದ ಇವರು ಆಂಡಯ್ಯನಿಗಿಂತಲೂ ಒಂದು ಹೆಜ್ಜೆ ಮುಂದೆ ಹೋದವರು. ದೇಶ್ಯ ಶಬ್ದಗಳಿಂದಷ್ಟೇ ಕಾವ್ಯ ಕಟ್ಟಿದವರು. ದೇಶ್ಯ ಪದಗಳ ಬಗೆಗಿನ ಅಪಾರವಾದ ಒಲವು ಅವರನ್ನು ಇಂತಹ ನಿಘಂಡಿನ ರಚನೆಗೆ ಕೈಹಾಕಿರಬೇಕು. ಈ ನಿಘಂಟನ್ನು ಪರಿಶೀಲಿಸಿದಾಗ ಇಲ್ಲಿಯ ಬಹುಪಾಲು ಪದಗಳು ಕಿಟೆಲ್‌ಕೋಶ ಹಾಗೂ ಕನ್ನಡ – ಕನ್ನಡ ನಿಘಂಟಿನ ಸಂಪುಟಗಳಲ್ಲಿ ದಾಖಲಿತವಾದವುಗಳಾದರೂ ಅನೇಕ ಹೊಸ ಪದಗಳು ಕಂಡುಬರುತ್ತವೆ. ವಿಶೇಷವಾಗಿ ಮುದ್ದಣ್ಮನ ಶಬ್ದ ನಿಷ್ಪತ್ತಿಯ ಮಾದರಿಯನ್ನನುಸರಿಸಿ ಅನೇಕ ಪದಗಳನ್ನು ಸೃಷ್ಟಿಸಿದ್ದಾರೆ. ವಿವಿಧ ವೃತ್ತಿಯ ಪದಗಳಿಗೆ ಈ ನಿಘಂಟುವಿನಲ್ಲಿ ಸ್ಥಾನ ಕಲ್ಪಸಿದುದು. ಈ ಕೋಶದ ಉಪಯುಕ್ತತೆಯನ್ನು ಹೆಚ್ಚಿಸಿದೆ. ಸ್ಥಳೀಯ ಗಾದೆಗಳನ್ನು ಅರ್ಥ ಸ್ಪಷ್ಟತೆಗಾಗಿ ನೀಡುತ್ತಾರೆ. ಕನ್ನಡ ಶಬ್ದ ಭಂಡಾರಕ್ಕೆ ಅನೇಕ ಪ್ಗಳು ಈ ನಿಘಂಟುವಿನ ಮೂಲಕ ಬಂದುದು ಸ್ವಾಗತಾರ್ಹ ಸಂಗತಿ. ಕನ್ನಡ ಕೋಶ ಚರಿತೆಯಲ್ಲಿ ಇದೊಂದು ಬೆಲೆಯುಳ್ಳ ಕೋಶವಾಗಿದೆ.

ಸಮಕಾಲೀನ ಕನ್ನಡ ಕೋಶಗಳು : ಭಾಷೆ ಬೆಳವಣಿಗೆಯಾದಂತೆ ಪದ ರಚನೆಯಲ್ಲಿ ವ್ಯತ್ಯಾಸಗಳುಂಟಾಗುತ್ತವೆ. ಬಳಕೆಯ ಸಂದರ್ಭ ಹಾಗೂ ಅರ್ಥದಲ್ಲಿಯೂ ವ್ಯತ್ಯಾಸಗಳಾಗುತ್ತವೆ. ಹೊಸ ಪದಗಳು ಭಾಷೆಗೆ ಬಂದು ಸೇರುತ್ತವೆ. ಹಳೆಯ ರೂಪಗಳು ಹೊಸ ಅರ್ಥದಲ್ಲಿ ಬಳಕೆಯಾಗುತ್ತವೆ. ಪ್ರಚಲಿತ ಕನ್ನಡ ಪದ ರೂಪಗಳಿಗೆ ಅರ್ಥವನ್ನು ನೀಡುವ ಎರಡು ಕೋಶಗಳು ಕನ್ನಡದಲ್ಲಿ ರಚಿತವಾಗಿವೆ.

ಜಿ. ವೆಂಕಟಸುಬ್ಬಯ್ಯನವರ ‘ಇಗೋ ಕನ್ನಡ’, ೧ ಮತ್ತು ೨ ಸಾಮಾಜಿಕ ನಿಘಂಟುಗಳು ಭಾಷಾ ಬಳಕೆಯ ಸಾಮಾಜಿಕ ಆಯಾಮಕ್ಕೆ ಸಂಬಂಧಿಸಿವೆ. ೧೯೯೧ ರಿಂದ ಪ್ರಜಾವಾಣಿ ದಿನಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ‘ಇಗೋ ಕನ್ನಡ’ ಎಂಬ ಅಂಕಣದಲ್ಲಿ ಜಿ.ವೆ. ಅವರು ಪ್ರೌಢಶಾಲೆಯ ಅಧ್ಯಾಪಕರಿಗೆ, ವಿಧ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಜನರಿಗೆ ತಲೆದೋರುವ ಸಂದೇಹಗಳನ್ನು ಪರಿಗಣಿಸಿ ಉಪಕರಿಸಿದ್ದಾರೆ. ಇಗೋ ಕನ್ನಡ’ದ ಅಂಕಣದ ವಿಷಯಗಳನ್ನು ಪರಿಷ್ಕರಣಗೊಂಡು ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಈ ನಿಘಂಟುವಿನಲ್ಲಿಯ ವಿಷಯಗಳು ವೈವಿದ್ಯಮಯವಾಗಿವೆ. ಆಡಳಿತ, ಕೃಷಿ, ನ್ಯಾಯ ತೀರ್ಮಾನದಲ್ಲಿ ಕನ್ನಡ ಬಳಕೆ, ಭಾಷಾಸ್ವೀಕರಣ, ಗಾದೆ, ನುಡಿಗಟ್ಟು, ಶಬ್ದ ನಿಷ್ಪತ್ತಿ, ವ್ಯಾಕರಣ ಪ್ರಕ್ರಿಯೆಗಳು, ಪದ್ಯಗಳ ಭಾವಾನುವಾದ, ಸಮನಾರ್ಥಕ ಪದಗಳ ಅರ್ಥ ವಿವರಣೆ ಮುಂತಾದವು. ಈ ಎಲ್ಲ ವಿಷಯಗಳು ಸಾಮಾಜಿಕ ಭಾಷಾಶಾಸ್ತ್ರ ವ್ಯಾಸಂಗಕ್ಕೆ ಒಳಪಡುವುದರಿಂದ ಇದನ್ನು ‘ಸಮಾಜಿಕ ನಿಘಂಟು’ ಎಂದು ಕರೆದಿರುವುದು ಸೂಕ್ತವಾಗಿದೆ. ಭಾಷಾಬೆಳವಣಿಗೆಯಲ್ಲಿ ಆಧುನೀಕರಣ ಮತ್ತು ಪ್ರಮಾಣೀಕರಣಗಳು ಮಹತ್ವದ ಪಾತ್ರವಹಿಸುತ್ತವೆ. ಕನ್ನಡದಲ್ಲಿ ಇಂತಹ ಪ್ರಕ್ರಿಯೆಗಳಿಂದ ಹೊಸ ಶಬ್ದಗಳು ನಿರ್ಮಾಣವಾಗಿ ಹೊಸ ಅರ್ಥದಲ್ಲಿ ಬಳಕೆಯಾಗುತ್ತಿವೆ. ಜಿ.ವೆಂ. ಅವರ ಈ ಕೋಶವನ್ನು ಗಮನಿಸಿದಾಗ ಅದು ತಿಳಿದುಬರುತ್ತದೆ.

ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗುತ್ತಿರುವ ‘ನಮ್ಮ ಕನ್ನಡ’ ಎಂಬ ಸಂಪತ್ರಿಕೆಯಲ್ಲಿ ಕನ್ನಡದ ಬೇರೆ ಬೇರೆ ವರ್ತಮಾನ ಪತ್ರಿಕೆಗಳಲ್ಲಿ ಹಾಗೂ ಸೃಜನಶೀಲ ಬರೆಹಗಳಲ್ಲಿ ಕಾಣಿಸಿಕೊಳ್ಳುವ ಹೊಸ ಪದಗಳಿಗೆ ಅರ್ಥವನ್ನು ಕೊಡಲಾಗುತ್ತಿದೆ. ಕನ್ನಡದಲ್ಲಿ ಪ್ರತಿ ದಿನವೂ ಹೊಸ ಪದರಚನೆಗಳು ನಿರ್ಮಾಣವಾಗುತ್ತಿವೆ ಎಂಬುದಕ್ಕೆ ‘ನಮ್ಮ ಕನ್ನಡ’ ಸಂಪತ್ರಿಕೆಯನ್ನು ನೋಡಿದಾಗ ವೇದ್ಯವಾಗುತ್ತದೆ. ಪ್ರಧಾನಪದ, ಅದರ ಅರ್ಥ, ಬಳಕೆಯಾದ ಸಂದರ್ಭ, ಅದರ ಪರ್ಯಾಯ ರೂಪಗಳು, ಸಾಧಿತ ರೂಪಗಳು ಮುಂತಾದವುಗಳ ವಿವರಣೆ ಇದರಲ್ಲಿದೆ. ಕನ್ನಡ ಕಾವ್ಯ, ವಾಕ್ಯ ರಚನೆಗಳು, ಅವುಗಳು ಬಳಕೆಯಲ್ಲಾಗುವ ಸಮಸ್ಯೆಗಳು ಇತ್ಯಾದಿ ಅಂಶಗಳನ್ನು ಚರ್ಚಿಸುವ ‘ಗಂಟು’ ಎಂಬ ಭಾಗವಿದೆ. ಕನ್ನಡದಲ್ಲಿ ಬಳಕೆಯಾಗುವ ವಾಕ್ಯ ರಚನೆಯನ್ನು ತಿಳಿದುಕೊಳ್ಳಲು ಈ ಭಾಗ ತುಂಬ ನೆರವಾಗುತ್ತದೆ. ಕನ್ನಡದ ಬೇರೆ ಬೇರೆ ಪ್ರಾದೇಶಿಕ ರೂಪಗಳ ಅರ್ಥವನ್ನು ತಿಳಿಸುವ ‘ನಿಧಾನ’ವೆಂಬ ಭಾಗವಿದೆ. ಹೀಗೆ ದಿನದಿನ, ಗಂಟು, ನಿಧಾನ ಹಾಗೂ ಸಂಪಾದಕರಾದ ಕೆ.ವಿ. ನಾರಾಯಣರು ಬರೆಯುತ್ತಿರುವ ಅಗ್ರ ಲೇಖನ ಇವುಗಳನ್ನೆಲ್ಲ ಒಳಗೊಂಡ ಈ ಮಾಸಪತ್ರಿಕೆ ಸಮಕಾಲೀನ ಕನ್ನಡ ಭಾಷೆಯ ಜಾಯಮಾನವನ್ನು ತಿಳಿದುಕೊಳ್ಳಲಿಕ್ಕೆ ಮಹತ್ವದ ಆಕರವಾಗಿದೆ. ‘ನಮ್ಮ ಕನ್ನಡ’ದಲ್ಲಿಯ ಪದರಚನೆಯ ಭಾಗವು ‘ದಿನದಿನ’ ಎಂಬ ಶೀರ್ಷಿಕೆಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ.

ಪ್ರಕೋಶಗಳು : ಒಬ್ಬ ಕವಿ ತನ್ನ ಕಾವ್ಯದಲ್ಲಿ ಬಳಸಿದ ಎಲ್ಲ ಶಬ್ದ ಪ್ರಯೋಗಗಳನ್ನು ಕ್ರೋಢೀಕರಿಸಿ ಅವು ಎಷ್ಟು ಅರ್ಥದಲ್ಲಿ ಬಳಕೆಗೊಂಡಿವೆ ಎಂಬುದನ್ನು ತಿಳಿಸಿಕೊಡುವ ಕೋಶಗಳಿವು. ಇಂಗ್ಲಿಶ್‌ನಲ್ಲಿ ಇವುಗಳಿಗೆ ‘Concordance’ ಎಂಬ ಕರೆಯುವರು. ಇದರಲ್ಲಿ ವಿಶಿಷ್ಟ ಪದಗಳು, ಅವುಗಳ ಸಂದರ್ಭ, ಅವು ಬರುವ ಪ್ರಯೋಗಗಳ ಉಲ್ಲೇಖಗಳು ಈ ಎಲ್ಲ ಅಂಶಗಳು ಸಮಾವೇಶಗೊಳ್ಳುತ್ತವೆ.

ಈಚೆಗೆ ಕನ್ನಡದ ಕೆಲವು ಕವಿಗಳ ಪದ ಪ್ರಯೋಗ ಕೋಶಗಳು ಸಿದ್ಧವಾಗಿವೆ. ಡಾ.ಬಿ. ರಾಮಚಂದ್ರರಾವ್‌ಅವರ ಪಿಎಚ್‌.ಡಿ.ನಿಬಂಧ ‘A, Descriptive Grammar of pampaBharata’ ಎಂಬ ಗ್ರಂಥದ ಎರಡನೆಯ ಭಾಗದಲ್ಲಿ ಪಂಪಭಾರತದಲ್ಲಿ ಪ್ರಯೋಗವಾದ ಎಲ್ಲ ಕನ್ನಡ ಶಬ್ದಗಳನ್ನು ಪಟ್ಟಿ ಮಾಡಿ ಅರ್ಥಕೊಡಲಾಗಿದೆ. ಎಸ್‌. ಆರ್‌ಗುಂಜಾಳರು ‘ಬಸವಣ್ಣನವರ ವಚನಗಳ ಪದ ಪ್ರಯೋಗ ಕೋಶ’ವನ್ನು ಸಿದ್ಧಪಡಿಸಿದ್ದಾರೆ (೧೯೭೩). ಶ್ರೀಯುತರು ತುಂಬ ಶ್ರದ್ಧೆಯಿಂದ ವ್ಯವಸ್ಥಿತವಾಗಿ ಈ ಕೋಶವನ್ನು ರಚಿಸಿದ್ದಾರೆ. ಇದೇ ಮಾದರಿಯಲ್ಲಿ ಎಸ್‌. ಆರ್‌.ಗುಂಜಾಳ ಮತ್ತು ಬಿ.ಎಲ್‌. ಬ್ಯಾಡಗಿ ಜೊತೆ ಸೇರಿ ಸಂಪಾದಿಸಿದ ‘ತೋಂಟದ ಸಿದ್ಧಲಿಂಗ ಯತಿಗಳ ಪದಪ್ರಯೋಗ ಕೋಶ’ (೧೯೮೩) ತುಂಬ ಮೌಲಿಕವಾಗಿದೆ. ಸಿ.ಓಂಕಾರಪ್ಪ ಅವರ ‘Verbal Bases of Kumaravyasa’ (೧೯೮೩), ಎಂ. ಎಸ್‌. ಪಾಟೀಲರು ಸಿದ್ಧಪಡಿಸಿದ ‘ಶ್ರೀ ಸಿದ್ಧರಾಮೇಶ್ವರ ವಚನ ಪದ ಪ್ರಯೋಗಕೋಶ’ (೧೯೮೩), ಎ. ವಿ. ನಾವಡ ಮತ್ತು ಸಿ. ಉಪೇಂದ್ರ ಸೋಮಯಾಜಿ ಜೊತೆ ಸೇರಿ ಸಿದ್ಧಪಡಿಸಿದ ‘ಗೋವಿಂದ ಪೈ ಪದ ಪ್ರಯೋಗ ಕೋಶ’ (೧೯೮೬), ಎನ್‌. ಕೆ. ಕುಲಕರ್ಣಿ ಅವರ ಕುಮಾರವ್ಯಾಸ ನಿಘಂಟು (೧೯೭೧), ಬಸವರಾಜ ಮಲಶೆಟ್ಟಿ ಅವರ ‘ಮಹಾಕವಿ ಹರಿಹರನ ಕೃತಿಗಳ ಪದಕೋಶ’, ಜಿ. ವೆಂಕಟಸುಬ್ಬಯ್ಯನವರ ‘ಮುದ್ದಣ್ಣ ಪದ ಪ್ರಯೋಗ ಕೋಶ’ (೧೯೯೬) ಇವು ಗಮನಾರ್ಹವಾಗಿವೆ. ಆಯಾ ಕವಿಗಳ ಕಾವ್ಯವನ್ನು ಅಧ್ಯಯನ ಮಾಡುವಾಗ ಪ್ರಕೋಶಗಳು ಕೈಪಿಡಿಯಂತೆ ನೆರವಾಗುತ್ತವೆ; ಸಂಶೋಧಕನಿಗೆ ಬಹುಮುಖ್ಯ ಆಕರಗಳಾಗುತ್ತವೆ.

ವೃತ್ತಿಪದ ಕೋಶಗಳು: ವೃತ್ತಿ ಪದಗಳು ಜನಾಂಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ತಿಳಿದುಕೊಳ್ಳಲು ಮಹತ್ವದ ಆಕರಗಳಾಗಿವೆ. ವೃತ್ತಿ ಪದಗಳು ಹೆಚ್ಚಾಗಿ ಅಚ್ಚಗನ್ನಡ ಪದಗಳಾಗಿರುವುದರಿಂದ ಅಂತಹುಗಳನ್ನು ಸಂಗ್ರಹಿಸಿ ಅವುಗಳಿಗೆ ಅರ್ಥ ಕೊಡುವುದು ಅಗತ್ಯವಿದೆ. ಕನ್ನಡದಲ್ಲಿ ವೃತ್ತಿಪದಗಳ ಸಂಗ್ರಹ ಮತ್ತು ವಿಶ್ಲೇಷಣೆಯ ಕಾರ್ಯ ನಡೆದಿದೆ. ಅನೇಕ ವೃತ್ತಿ ಪದಕೋಶಗಳು ಸಿದ್ಧವಾಗಿವೆ. ಉಲ್ಲಾಳ ನರಸಿಂಗರಾವ್‌ಅವರ ‘A Kisamwar Glossary of Kannada Words’ (೧೮೯೧) ಈ ಕೋಶದಲ್ಲಿ ಬೇರೆ ಬೇರೆ ವೃತ್ತಿಗೆ ಸೇರಿದ ಪದಗಳನ್ನು ಕಲೆಹಾಕಲಾಗಿದೆ. ವಿ. ಶಿವಾನಂದರ ‘ಕಲಬುರ್ಗಿ ಜಿಲ್ಲೆಯ ಒಕ್ಕಲುತನದ ವೃತ್ತಿ ಪದಗಳ ಕಲೆಹಾಕಲಾಗಿದೆ. ವಿ. ಶಿವಾನಂದರ ‘ಕಲಬುರ್ಗಿ ಜಿಲ್ಲೆಯ ಒಕ್ಕಲುತನದ ವೃತ್ತಿಪದಗಳ ಅಧ್ಯಯನ’ (೧೯೮೧), ಆರ್‌. ವೈ. ಕುಲಕರ್ಣಿ ಅವರ ‘ವಿಜಾಪುರ ಜಿಲ್ಲೆಯ ನೇಕಾರದ ವೃತ್ತಿಪದಗಳ ಅಧ್ಯಯನ’ (೧೯೮೪)ಗಳು ಕ್ರಮವಾಗಿ ಪಿಎಚ್‌.ಡಿ. ಮತ್ತು ಎಂ.ಫಿಲ್‌ಪದವಿಗಾಗಿ ಸಾದರ ಪಡಿಸಿದ ನಿಬಂಧಗಳಾಗಿವೆ. ಈ ಎರಡು ನಿಬಂಧಗಳು ಪ್ರಕಟವಾಗಿಲ್ಲ. ಪ್ರಕೃತ ಲೇಖಕರ ‘ಕುಂಬಾರ ವೃತ್ತಿಪದಕೋಶ’ (೧೯೯೮), ಬಡಿಗ ವೃತ್ತಿಪದ ಮಂಜಿರಿ (೧೯೯೯) ಬೆಳಗಾವಿ ಜಿಲ್ಲೆಯನ್ನು ಕೇಂದ್ರವಾಗಿಟ್ಟುಕೊಂಡು ಕುಂಬಾರ ಮತ್ತು ಬಡಿಗರ ವೃತ್ತಿ ಪದಗಳನ್ನು ಕಲೆಹಾಕಿ ಕೋಶ ರಚನಾಶಾಸ್ತ್ರದ ಹಿನ್ನೆಲೆಯಲ್ಲಿ ಸಿದ್ಧಪಡಿಸಿದ್ದಾರೆ. ಇವು ಕನ್ನಡದಲ್ಲಿ ಪ್ರಕಟವಾದ ಮೊದಲ ವೃತ್ತಿ ಪದಕೋಶಗಳಾಗಿವೆ.

ಕನ್ನಡ ವಿಶ್ವವಿದ್ಯಾಲಯವು ‘ಕರ್ನಾಟಕ ವೃತ್ತಿ ಪದಮಂಜರಿ’ ಮಾಲೆಯ ಅಡಿಯಲ್ಲಿ (ಬಹುಮಟ್ಟಿಗೆ) ಎಲ್ಲ ವೃತ್ತಿಗಳ ಪದಗಳನ್ನು ಸಂಗ್ರಹಿಸಿ ಕೋಶ ರಚನೆಯ ತತ್ವಗಳ ಹಿನ್ನೆಲೆಯಲ್ಲಿ ವೃತ್ತಿ ಪದಕೋಶಗಳನ್ನು ಸಿದ್ಧಪಡಿಸಿದೆ. ಕೆ. ವಿ. ನಾರಾಯಣ ಮತ್ತು ಇತರರು ‘ಕೃಷಿಪದಕೋಶ’, ಡಿ. ಪಾಂಡುರಂಗಬಾಬು ಅವರು ‘ಪಾಂಚಾಳ ವೃತ್ತಿ ಪದಕೋಶ’, ಸಾಂಬಮೂರ್ತಿ ಅವರು ‘ನೇಕಾರ ವೃತ್ತಿ ಪದಕೋಶ’, ಅಶೋಕಕುಮಾರ ರಂಜೇರೆ ಅವರು ಗುಡಿಗಾರ, ಮೇದಾರ, ಕೊರಚ ವೃತ್ತಿಯನ್ನೊಳಗೊಂಡ ‘ವಿವಿಧ ವೃತ್ತಿ ಪದಕೋಶ’, ಎಸ್‌. ಎಸ್‌. ಅಂಗಡಿ ಅವರು ಗಾಣಿಗ, ಡೋಹರ, ಕುಂಬಾರ, ಕ್ಷೌರಿಕ, ಚಮ್ಮಾರ ಹಾಗೂ ಹೂಗಾರ ವೃತ್ತಿಯನ್ನೊಳಗೊಂಡ ‘ಸಂಕೀರ್ಣ ವೃತ್ತಿ ಪದಕೋಶ’ವನ್ನು ಸಿದ್ಧಪಡಿಸಿದ್ದಾರೆ. ಪ್ರತಿಯೊಂದು ವೃತ್ತಿ ಪದಕೋಶದಲ್ಲಿಯೂ ಅರ್ಥ ಸ್ಪಷ್ಟತೆಗಾಗಿ ರೇಖಾ ಚಿತ್ರಗಳಿರುವುದು ಗಮನಾರ್ಹ ಅಂಶವಾಗಿದೆ. ಎಂ. ಎಂ. ಹೊಸಮನಿ ಮತ್ತು ಎಸ್‌. ಸಿ. ಚಂದ್ರಯ್ಯ ಅವರು ಜೊತೆ ಸೇರಿ ಸಿದ್ಧಪಡಿಸಿದ ‘ಕೃಷಿ ಉಪಕರಣಗಳು’ ಎಂಬ ಗ್ರಂಥವು ಎಂಬ ಕೃಷಿ ಉಪಕರಣಗಳ ಅರ್ಥ ವಿವರಣೆ ಮತ್ತು ಅವುಗಳ ಚಿತ್ರಗಳನ್ನೊಳಗೊಂಡ ಮಹತ್ವದ ಕೃತಿಯಾಗಿದೆ.

ಕೆಲವು ವೃತ್ತಿ ಪದಗಳು ಲೇಖನ ರೂಪದಲ್ಲಿ ಬಂದಿವೆ. ದೇವಾನಂದ ಮಾಲಗತ್ತಿ ಅವರು ‘ಚಮ್ಮಾರರು ಮತ್ತು ಅವರ ಉಪಕರಣಗಳ ವಿಚಕ್ಷಣ ನೋಟ’ (೧೯೯೦) ಎಂಬ ಲೇಖನವನ್ನು, ಹೆಚ್‌. ಹೆಚ್‌. ಗಂಗಾಧರಾಚಾರ್ಯರು ‘ವಿಶ್ವಕರ್ಮರ ಶಬ್ದಕೋಶ’ವನ್ನು (೧೯೮೬), ವಿ. ಶಿವಾನಂದರು ‘ಒಕ್ಕಲುತನ ವೃತ್ತಿ ಪದಕೋಶ’ (೧೯೭೮), ‘ಕನ್ನಡ ವೃತ್ತಿ ಪದಕೋಶ (೧೯೭೯) ಎಂಬ ಲೇಖನಗಳನ್ನು, ಹೆಚ್‌. ಎಂ. ಮಹೇಶ್ವರಯ್ಯನವರು ‘ಮಲೆನಾಡಿನ ಕೃಷಿಕರ ವೃತ್ತಿ ಪದಕೋಶ’ (೧೯೮೫)ವನ್ನು, ಎಸ್‌. ಎಸ್‌. ಅಂಗಡಿ ಅವರು ‘ಕ್ಷೌರಿಕರು ಮತ್ತು ಅವರ ವೃತ್ತಿ ಪದಗಳು’ (೧೯೯೬), ‘ಮೇದಾರ ವೃತ್ತಿ ಪದಕೋಶ’ (೧೯೯೯) ಎಂಬ ಲೇಖನಗಳನ್ನು ಸಿದ್ಧಪಡಿಸಿದ್ದಾರೆ. ಈ ಲೇಖನಗಳು ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿವೆ.

ವಿಶಿಷ್ಟ ಬಗೆಯ ಪದಕೋಶಗಳು: ಟಿ. ವಿ. ವೆಂಕಟಾಚಲಶಾಸ್ತ್ರೀ ಅವರ ‘ಶ್ರೀವತ್ಸ ನಿಘಂಟು’ (೧೯೭೧) ವಿಶಿಷ್ಟ ಪ್ರಕಾರಕ್ಕೆ ಸೇರಿದ ಕೋಶವಾಗಿದೆ. ಸಾಹಿತ್ಯ, ಕಲೆ, ಧರ್ಮ, ತತ್ವಶಾಸ್ತ್ರ, ರಾಜ್ಯಶಾಸ್ತ್ರ ವೈದ್ಯಶಾಸ್ತ್ರ, ಕಾಮಶಾಸ್ತ್ರ ಮೊದಲಾದ ವಿವಿಧ ಶಾಖೆಗಳಿಗೆ ಸಂಬಂಧಿಸಿದ ಸು. ೪೦೦೦ ಸಂಖ್ಯಾ ವಿಶಿಷ್ಟ ಪದಗಳಿಗೆ ವಿವರಣೆಯನ್ನು ಕೊಡಲಾಗಿದೆ. ಇದೇ ಲೇಖಕರು ಸಿದ್ಧಪಡಿಸಿದ ‘ಗಜಶಾಸ್ತ್ರ ಶಬ್ದಕೋಶ’ (೧೯೯೪)ವು ಆನೆಗೆ ಸಂಬಂಧಿಸಿದ ಪದಗಳನ್ನು ಕುರಿತು ಸವಿವರಗಳನ್ನೊಳಗೊಂಡಿದೆ. ಈ ಎರಡು ಕೋಶಗಳಲ್ಲಿ ಶಾಸ್ತ್ರೀಗಳ ಆಳವಾದ ವಿದ್ವತ್ತು. ಸೂಕ್ಷ್ಮವಾದ ಒಳನೋಟಗಳಿಂದ ಕೋಶಾಧ್ಯಯನ ಕ್ಷೇತ್ರದಲ್ಲಿ ಅನನ್ಯವಾಗಿವೆ.

ಹುಬ್ಬಳ್ಳಿಯ ಲೋಕ ಶಿಕ್ಷಣ ಟ್ರಸ್ಟ್‌ದವ ರು ೧೯೬೫ರಲ್ಲಿ ಪ್ರಕಟಿಸಿರುವ ‘ಪತ್ರಿಕಾ ನಿಘಂಟು’ ಚಿಕ್ಕದಾದರೂ ಉಪಯುಕ್ತವಾಗಿದೆ. ಪತ್ರಿಕಾ ಪ್ರಪಂಚದಲ್ಲಿ ಚಾಲ್ತಿಯಲ್ಲಿರುವ ಶಬ್ದಗಳ ಅರ್ಥ ವಿವರಣೆ ಇಲ್ಲಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರು ವೃತ್ತ ಪತ್ರಿಕೆಗಳಲ್ಲಿ ಬಳಕೆಯಾದ ಹೊಸ ಪದಗಳಿಗೆ ಅರ್ಥಕೊಡುವ ‘ಪತ್ರಿಕಾ ನಿಘಂಟ’ನ್ನು ರಚಿಸಿದ್ದಾರೆ (೧೯೯೮). ಇದನ್ನು ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಕಟಿಸಿದೆ. ಎಚ್‌. ಎಸ್‌. ಕೆ. ಅವರು ಸಂಕಲಿಸಿದ ‘ಬ್ಯಾಂಕಿಂಗ್‌ಕೈಪಿಡಿ’ ಇದು ಬ್ಯಾಂಕಿಂಗ್‌ವ್ಯವಹಾರ ಮಾಡುವವರಿಗೆ ನೆರವು ನೀಡುವುದರಲ್ಲಿ ಸಂದೇಹವಿಲ್ಲ. ಬೆಂಗಳೂರಿನ ಐ. ಬಿ. ಹೆಚ್‌. ಪ್ರಕಾಶದವರು ಪ್ರಕಟಿಸಿರುವ ‘ವರ್ಣ ರಂಜಿತ ಸಚಿತ್ರ ಶಾಲಾ ನಿಘಂಟು’ ವಿದ್ಯಾರ್ಥಿಗಳಿಗೂ ಜನಸಾಮಾನ್ಯರಿಗೂ ತುಂಬ ಪ್ರಯೋಜನಕಾರಿಯಾಗಿದೆ. ಈ ನಿಘಂಟು ಇಸಬೇಲ್‌ಮೇರಿ ಮ್ಯಾಕಲೀನ್‌ಅವರ ‘Ilustrated School Dictionary’ಯ ಕನ್ನಡ ಅನುವಾದ ಅನುವಾದಸಿದವರು. ಎನ್‌. ಬಸವರಾಧ್ಯ ಮತ್ತು ಟಿ. ಆರ್‌. ಮಹಾದೇವಯ್ಯನವರು. ಸುಂದರ ವರ್ಣ ಚಿತ್ರಗಳಿಂದ ಕೂಡಿರುವ ಈ ನಿಘಂಟು ತುಂಬ ಆಕರ್ಷಣೀಯವೂ ಉಪಯುಕ್ತವೂ ಆಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟಿಸಿದ ‘ಸಂಕ್ಷಿಪ್ತ ಆಡಳಿತ ಪದಕೋಶ’ (೧೯೬೭:೧೯೮೯) ಆಡಳಿತಾತ್ಮಕ ಕ್ಲಿಷ್ಟ ಪದಗಳಿಗೆ ಅರ್ಥಗಳನ್ನು ಸುಲಭಗೊಳಿಸಲಾಗಿದೆ. ಅರ್ಥ ಸಂದಿಗ್ಧತೆಗಳನ್ನು ದೂರ ಮಾಡಲಾಗಿದೆ. ಸು. ೭,೫೦೦ ಪದ ಹಾಗೂ ಪದಪುಂಜವನ್ನೊಳಗೊಂಡ ಈ ಕೋಶ ಆಡಳಿತದಲ್ಲಿ ಕನ್ನಡ ಬಳಕೆಯನ್ನು ಚುರುಕುಗೊಳಿಸುವಲ್ಲಿ ನೆರವಾಗುತ್ತದೆ. ಪಾ. ವೆಂ. ಆಚಾರ್ಯರು ಪದ, ಅರ್ಥ ಸಂಲಗ್ನತೆಗಳನ್ನು ಕುರಿತು ವಿವರಣಾತ್ಮಕ ಚಿಂತನೆಗಳನ್ನೊಳಗೊಂಡ ‘ಪದಾರ್ಥ ಚಿಂತಾಮಣಿ’ (ಭಾಗ – ೧ – ೨) (೧೯೯೧) ಎಂಬ ಕೋಶಗಳನ್ನು ರಚಿಸಿದ್ದಾರೆ. ಇವು ತುಂಬ ಉಪಯುಕ್ತವಾಗಿವೆ. ಇಲ್ಲಿನ ಒಂದೊಂದು ಪದವನ್ನೂ ಬಹಳ ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ. ಎಲ್ಲದಕ್ಕೂ ಆಧಾರವಿರುತ್ತದೆ. ಪ್ರತಿಯೊಂದು ಪದದ ಬಗೆಗೆ ನಮಗೆ ತಿಳಿದಿರದ ಎಷ್ಟೋ ಸಂಗತಿಗಳು ಈ ಬರಹದಲ್ಲಿರುತ್ತವೆ. ಈ ಸಂಗತಿಗಳು ರೂಪಕ್ಕೆ ಸಂಬಂಧಿಸಿರಬಹುದು, ಅರ್ಥಕ್ಕೆ ಸಂಬಂಧಿಸಿರಬಹುದು ಅಥವಾ ಭಾಷೆಗಳ ಪರಸ್ಪರ ಸಂಬಂಧಗಳನ್ನೇ ಕುರಿತಿರಬಹುದು. ಇದು ಕನ್ನಡ ಪದಗಳ ಸಾಮಾಜಿಕ ಆಯಾಮಕ್ಕೆ ಸಂಬಂಧಿಸಿದ ಮೊದಲ ಪುಸ್ತಕ. ಪ್ರೊ. ಜಿ. ವೆಂಕಟಸುಬ್ಬಯ್ಯನವರು ಎರವಲು ಪದಕೋಶವನ್ನು ರಚಿಸಿದ್ದಾರೆ (೧೯೯೮). ಇಲ್ಲಿ ಲೇಖಕರು ಎತ್ತಿಕೊಂಡ ಶಬ್ದಗಳು ಕನ್ನಡಕ್ಕೆ ಅನ್ಯಭಾಷೆಯ ಮೂಲದಿಂದ ಆಮದಾದ ಶಬ್ದಗಳು. ಅವು ರೂಪಾಂತರಕೊಂಡು ಕನ್ನಡ ಶಬ್ದಗಳಾಗಿ ಸೇರಿಕೊಂಡವುಗಳನ್ನು ಮಾತ್ರ ಗಮನಿಸಿದ್ದಾರೆ. ಹಾಗೆ ಬಂದು ಸೇರಿಕೊಂಡವುಗಳಲ್ಲಿ ಸಂಸ್ಕೃತ ಮೂಲದಿಂದ ಬಂದವನ್ನು ಬಿಟ್ಟು ಸಂಸ್ಕೃತೇತರ ಅನ್ಯಭಾಷೆ (ಇಂಗ್ಲಿಷ್‌, ಹಿಂದಿ, ಮರಠಿ, ಉರ್ದು ಇತ್ಯಾದಿ)ಗಳಿಂದ ಬಂದವನ್ನಷ್ಟೇ ದಾಖಲಿಸಿ ಅವುಗಳ ಬಳಕೆಯ ಸಂದರ್ಭವನ್ನನುಸರಿಸಿ ಅರ್ಥಕೊಟ್ಟಿದ್ದಾರೆ.

ಸಾಹಿತ್ಯ ವಿಮರ್ಶೆ, ಸಂಗೀತ, ನೃತ್ಯ ಮುಂತಾದ ಕ್ಷೇತ್ರಗಳಲ್ಲಿ ಬಳಕೆಯಾಗುವ ಪಾರಿಭಾಷಿಕ ಪದಗಳಿಗೆ ಅರ್ಥ ವಿವರಣೆಯನ್ನು ಕೊಡುವ ವಿವರಣಾತ್ಮಕ ಪದಕೋಶಗಳೂ ರಚಿತವಾಗಿವೆ. ಓ. ಎಲ್‌. ನಾಗಭೂಷಣಸ್ವಾಮಿಯವರ ‘ವಿಮರ್ಶೆಯ ಪರಿಭಾಷೆ’, ಜಿ. ಎಸ್‌. ಶಿವರುದ್ರಪ್ಪ ಮತ್ತು ಕೆ. ವಿ. ನಾರಾಯಣರು ಜತೆ ಸೇರಿ ಸಂಪಾದಿಸಿದ ‘ಕಾವ್ಯಾರ್ಥ ಪದಕೋಶ’ (೧೯೮೦), ಜಿ. ಎಸ್‌. ಶಿವರುದ್ರಪ್ಪ ಹಾಗೂ ಎಸ್‌. ವಿದ್ಯಾಶಂಕರ ಜತೆಗೂಡಿ ಸಂಪಾದಿಸಿದ ‘ವಾಕ್ಯಮಾಣಿಕ್ಯ ಕೋಶ’, ಎನ್. ಮರಿಶಾಮಾಚಾರ್‌ರ ‘ಲಲಿತ ಕಲಾ ಪದಕೋಶ’, ಟಿ. ಕೇಶವಭಟ್ಟರು ಸಿದ್ಧಪಡಿಸಿದ ‘ಹವ್ಯಕ ಶಬ್ದ ಮಂಜರಿ’ ಹವ್ಯಕರ ಆಡುನುಡಿಯಲ್ಲಿ ಉಳಿದಿರುವ ಹಳಗನ್ನಡ ಶಬ್ದಗಳ ಸ್ವರೂಪವನ್ನು ತಿಳಿಸಿದ್ದಾರೆ. ಮುದೇನೂರು ಸಂಗಣ್ಣನವರ ‘ಚಿಗಟೇರಿ ಪದಕೋಶ’ವು (೧೯೯೭) ಬಳ್ಳಾರಿ ಪ್ರದೇಶದ ಪ್ರಾದೇಶಿಕ ರೂಪಗಳನ್ನು ತಿಳಿಸಿಕೊಡುವ ಮೌಲಿಕವಾದ ಉಪಭಾಷಾಕೋಶವಾಗಿದೆ.

ತುಳು – ಕನ್ನಡ – ಇಂಗ್ಲಿಶ್‌ಶಬ್ದಕೋಶಗಳು: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು ಡಾ. ಯು. ಪಿ. ಉಪಾಧ್ಯಾಯವರ ಪ್ರಧಾನ ಸಂಪಾದಕತ್ವದಲ್ಲಿ ತುಳು ನಿಘಂಟು ಯೋಜನೆಯನ್ನು ಕೈಗೆತ್ತಿಕೊಂಡು ಇದೀಗ ಮುಗಿಸಿದೆ (೧೯೯೭). ತುಳು ನಿಘಂಟು ಆರು ಸಂಪುಟಗಳಲ್ಲಿ ಬಂದಿವೆ. ತುಳು ಪ್ರಮುಖ ದ್ರಾವಿಡ ಭಾಷೆಯಾದರೂ ಅದಕ್ಕೆ ಲಿಪಿಯಿಲ್ಲ ಕನ್ನಡ ಲಿಪಿಯನ್ನೇ ತುಳು ಭಾಷೆಯನ್ನು ಆಡುವವರು ಬರೆಹಕ್ಕೆ ಉಪಯೋಗಿಸುತ್ತಾರೆ. ಭಾರತದ ಯಾವ ಲಿಪಿ ರಹಿತ ಭಾಷೆಗಳಲ್ಲಿಯೂ ಇಂತಹ ನಿಘಂಟುಗಳು ಈವರೆಗೂ ಸಿದ್ಧವಾಗಿಲ್ಲ. ನಿಘಂಟು ಕ್ಷೇತ್ರದಲ್ಲಿ ತುಳು ನಿಘಂಟಿಗೆ ವಿಶಿಷ್ಟ ಸ್ಥಾನವಿದೆ. ನಿಘಂಟು ರಚನೆಯ ಆಧುನಿಕ ವಿಧಿ ವಿಧಾನಗಳನ್ನನುಸರಿಸಿ ಇವು ಸಿದ್ಧವಾಗಿವೆ. ಸಾಮಗ್ರಿ ಸಂಗ್ರಹಿಸುವಾಗ ವಿಸ್ತೃತವಾದ ಕ್ಷೇತ್ರಕಾರ್ಯವನ್ನೊಳಗೊಂಡಿದೆ. ಸಾಮಗ್ರಿ ಸಂಗ್ರಹಿಸುವಾಗ ಶಿಷ್ಟ ಸಾಹಿತ್ಯ, ಜಾನಪದ ಹಾಗೂ ಉಪಭಾಷೆಗಳ ಬಳಕೆ, ಗಾದೆ, ಒಗಟು, ನುಡಿಗಟ್ಟುಗಳ ಉಲ್ಲೇಖ, ವೃತ್ತಿ, ಸ್ಥಳನಾಮಗಳು, ಕಲೆ, ವಿನೋದ, ನಂಬಿಕೆ, ಆಚರಣೆಗಳ ಬಗ್ಗೆ ವಿವರಣೆಗಳು ವ್ಯಾಕರಣ ಸಂಬಂಧಿ ವಿವರಣೆಗಳು ಬಂದಿವೆ. ಈ ನಿಘಂಟುವಿನ ಎಲ್ಲ ಶಬ್ದಗಳಿಗೂ ರೋಮನ್‌ಲಿಪಿಯಲ್ಲಿ ಲಿಪ್ಯಂತರವನ್ನು ಹಾಗೆಯೇ ಇಂಗ್ಲಿಶ್‌ಹಾಗೂ ಕನ್ನಡದಲ್ಲಿ ಅರ್ಥ ವಿವರಗಳನ್ನು ನೀಡಲಾಗಿದೆ. ಈ ನಿಘಂಟುಗಳು ತುಳು ಭಾಷಿಕ ಸಮುದಾಯದವರ ಬಹುದಿನದ ಆಶೋತ್ತರಗಳನ್ನು ಇಡೇರಿಸಿದೆ. ಇದು ತುಳು ಭಾಷಿಕರ ಸಾಂಸ್ಕೃತಿಕ ಪದಕೋಶವಾಗಿದೆ.

ಆಧುನಿಕ ನಿಘಂಟುಗಳು ವೈವಿಧ್ಯ ಪೂರ್ಣವಾಗಿದ್ದು ಕನ್ನಡಿಗರ ತಿಳಿವಳಿಕೆಯ ಮಟ್ಟವನ್ನು ವಿಸ್ತರಿಸುತ್ತಿವೆ. ಇತ್ತೀಚೆಗೆ ಭಾಷಾ ಬಳಕೆಯ ವಿವಿಧ ವಲಯಗಳಲ್ಲಿ ವಿಶಿಷ್ಟ ಉದ್ದೇಶವುಳ್ಳ ಬಗೆಬಗೆಯ ನಿಘಂಟುಗಳು ರಚಿತವಾಗುತ್ತಿರುವುದು ಕನ್ನಡ ಭಾಷಾಭಿವೃದ್ಧಿಗೆ ತೋರುಗಂಬವಾಗಿದೆ.