ಕನ್ನಡದಲ್ಲಿ ನಿಘಂಟು ಸಾಹಿತ್ಯದ ಅಧ್ಯಯನ ಸಮೀಕ್ಷೆಯನ್ನು ಈ ಅಧ್ಯಾಯದಲ್ಲಿ ಕೈಕೊಳ್ಳಬಹುದಾಗಿದೆ. ಪ್ರಾಚೀನ ನಿಘಂಟುಗಳು ಸಂಸ್ಕೃತದ ಮಾದರಿಯನ್ನನುಸರಿಸಿ ರಚನೆಯಾದವು. ಪಾಶ್ಚಿಮಾತ್ಯರ ಪ್ರಭಾವದಿಂದಾಗಿ ಆಧುನಿಕ ನಿಘಂಟುಗಳ ರಚನೆ ವ್ಯವಸ್ಥಿತವಾಗ ನಡೆಯಲ್ಪಟ್ಟವು. ಹೀಗೆ ಪರಂಪರೆಯಿಂದ, ಪಾಶ್ಚಾತ್ಯರಿಂದ ಪ್ರಭಾವಿತರಾಗಿ ವೈವಿಧ್ಯಮಯವಾದ ನಿಘಂಟುಗಳು ಕನ್ನಡದಲ್ಲಿ ರಚನೆಗೊಂಡವು. ಆದರೆ ನಿಘಂಟುಗಳ ಕುರಿತಾದ ಅಧ್ಯಯನ ತುಂಬ ಕಡಿಮೆಯೆಂದೇ ಹೇಳಬೇಕು. ಈವರೆಗೆ ನಡೆದಿರುವ ನಿಘಂಟುಗಳ ಕುರಿತಾದ ಅಧ್ಯಯನವನ್ನು ಎರಡು ರೀತಿಯಲ್ಲಿ ಗುರುತಿಸಿಕೊಳ್ಳಬಹುದೆನಿಸುತ್ತದೆ.

೧. ಗ್ರಂಥಗಳು

೨. ಲೇಖನಗಳು

೧. ಗ್ರಂಥಗಳು: ಜಿ. ವೆಂಕಟಸುಬ್ಬಯ್ಯನವರ ‘ಕನ್ನಡ ನಿಘಂಟುಶಾಸ್ತ್ರ ಪರಿಚಯ’ (೧೯೯೩) ಕನ್ನಡ ನಿಘಂಟುಗಳ ಸ್ಥೂಲ ಪರಿಚಯ ಮಾಡಿಕೊಡುವ ಮೊದಲ ಗ್ರಂಥವಾಗಿದೆ. ಅನೇಕ ಬಗೆಯ ಕೋಶಗಳನ್ನು ರಚಿಸಿದ ಜಿ. ವೆಂಕಟಸುಬ್ಬಯ್ಯನವರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಈ ಗ್ರಂಥವನ್ನು ರಚಿಸಿದ್ದಾರೆ. ಎಂಟು ಅಧ್ಯಾಯವನ್ನೊಳಗೊಂಡ ಈ ಗ್ರಂಥದಲ್ಲಿ ಭಾರತೀಯ ಭಾಷೆಗಳಲ್ಲಿ ನಿಘಂಟುವಿಗೆ ಇರುವ ಹಿನ್ನೆಲೆ, ನಿಘಂಟುಶಾಸ್ತ್ರ, ನಿರುಕ್ತ, ಭಾಷಾಶಾಸ್ತ್ರದ ಬೆಳವಣಿಗೆಯಿಂದ ನಿಘಂಟುಶಾಸ್ತ್ರದ ಮೇಲಾದ ಪ್ರಭಾವ, ನಿಘಂಟು ರಚನೆಯಶಾಸ್ತ್ರ, ಕನ್ನಡದಲ್ಲಿ ರಚಿತವಾದ ಕೆಲವು ನಿಘಂಟುಗಳ ಪರಿಚಯ, ನಿಘಂಟು ರಚನೆಯ ವಿವಿಧ ಹಂತಗಳು, ಪ್ರಾಚೀನದಿಂದ ಆಧುನಿಕದವರೆಗೆ ಕನ್ನಡ ನಿಘಂಟುಗಳ ಕಿರುಚರಿತ್ರೆ ಹಾಗೂ ಗ್ರಂಥದ ಅಧ್ಯಯನಕ್ಕೆ ಪೂರಕವಾಗಿರುವ ಆರು ಅನುಬಂಧಗಳಿವೆ. ಶ್ರೇಷ್ಠ ನಿಘಂಟುಕಾರನಾಗಲು ಇರಬೇಕಾದ ಅರ್ಹತೆಗಳು, ನಿಘಂಟನ್ನು ಉಪಯೋಗಿಸುವ ಬಗೆ, ಮೃಗ, ಪಕ್ಷಿ, ಕ್ರಿಮಿ, ಕೀಟ, ಗಿಡ, ಮರ ಇವುಗಳಿಗೆ ವಿವರಣೆಯನ್ನು ಕೊಡುವಲ್ಲಿ ನಿಘಂಟುಗಳು ವಹಿಸುವ ಪಾತ್ರ, ಕನ್ನಡದಲ್ಲಿ ಕೆಲವು ವಿಶಿಷ್ಟ ಕೋಶಗಳು, ತುಳು ನಿಘಂಟುಗಳು, ಆಕ್ಸಫರ್ಡ್‌ಇಂಗ್ಲಿಶ್‌ಡಿಕ್ಷನರಿ ಇಂತಹ ಮೌಲಿಕ ವಿಷಯಗಳನ್ನೊಳಗೊಂಡಿದೆ. ನಿಘಂಟುಶಾಸ್ತ್ರದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳ ನಿರೂಪಣೆ ಈ ಗ್ರಂಥದಲ್ಲಿದೆ. ಇದು ವಿದ್ವಾಂಸರಿಗೆ, ಸಂಶೋಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪರಾಮರ್ಶನ ಗ್ರಂಥವಾಗಿದೆ.

ಡಾ. ವಿಲ್ಯಂ ಮಾಡ್ತ ಹಾಗೂ ಆರ್‌. ವೈ. ಕುಲಕರ್ಣಿ ಅವರು ಜೊತೆ ಸೇರಿ ಬರೆದ “‘ನಿಘಂಟು ರಚನಾ ವಿಜ್ಞಾನ’ (೧೯೯೪)‘. ಆರು ಅಧ್ಯಾಯವನ್ನೊಳಗೊಂಡ ಈ ಗ್ರಂಥದ ಮೊದಲು ಮೂರು ಅಧ್ಯಾಯಗಳಲ್ಲಿ ನಿಘಂಟುಶಾಸ್ತ್ರದ ಸಾಮಾನ್ಯ ಅಂಶಗಳನ್ನು ಚರ್ಚಿಸುತ್ತಾರೆ. ನಿಘಂಟು ವಿಜ್ಞಾನ, ನಿಘಂಟು ರಚನೆ, ಕನ್ನಡ ನಿಘಂಟುಗಳ ಬೆಳವಣಿಗೆ ಮತ್ತು ವೈವಿಧ್ಯತೆ, ನಿಘಂಟಿಮ ಮತ್ತು ಅವುಗಳ ಸಂಯೋಜನೆ, ಭಾಷಾ ವೈವಿಧ್ಯತೆ ಮತ್ತು ನಿಘಂಟು ವಿಜ್ಞಾನ ಹಾಗೂ ನಿಘಂಟು ರಚನೆಯ ಮಾರ್ಗದರ್ಶಕ ಸೂತ್ರಗಾದ ಕ್ಷೇತ್ರಕಾರ್ಯ, ನಿಘಂಟಿಮಗಳ ಆಯ್ಕೆ, ನಿಘಂಟಿಮಗಳ ರಚನೆಯ ವಿಧಾನಗಳನ್ನೊಳಗೊಂಡಿದೆ. ನಿಘಂಟಿಮಗಳ ವರ್ಗೀಕರಣವನ್ನು ಮುಖ್ಯವಾಗಿ ಬಹುಕಾಲಿಕ ಮತ್ತು ಏಕಕಾಲಿಕ ಎಂದು ವಿಂಗಡಿಸಿ ಬಹುಕಾಲಿಕದಲ್ಲಿ ಐತಿಹಾಸಿಕ ಹಾಗೂ ಉತ್ಪತ್ತಿಕ ನಿಘಂಟುಗಳು ಸಮಾವೇಶಗೊಳ್ಳುತ್ತವೆ. ಏಕಕಾಲಿಕದಲ್ಲಿ ಸಾಮಾನಯ ಹಾಗೂ ನಿರ್ಬಂಧಿತ ನಿಘಂಟುಗಳು ಸಮಾವೇಶಗೊಳ್ಳುತ್ತವೆ. ಲೇಖಕರು ಉದಾಹರಣೆಗಳ ಮೂಲಕ ಆ ನಿಘಂಟುಗಳ ಅರ್ಥ ವಿವರಣೆಯನ್ನು ನಿರೂಪಿಸಿದ್ದಾರೆ. ನಂತರ ಕನ್ನಡ ನಿಘಂಟುಗಳ ಬೆಳವಣಿಗೆಯ ಬಗೆಗೆ ವಿವರಿಸುತ್ತ ಕನ್ನಡ ನಿಘಂಟುಗಳನ್ನು ಏಕಭಾಷಿಕ, ದ್ವಿಭಾಷಿಕ, ಬಹುಭಾಷಿಕ, ಪಾರಿಭಾಷಿಕ, ಸಂಪ್ರಬಂಧದಲ್ಲಿ ಬರುವ ಶಬ್ದಕೋಶಗಳು ಮತ್ತು ವೃತ್ತಿ ಪದಕೋಶಗಳೆಂದು ಆರು ವರ್ಗಗಳಲ್ಲಿ ವಿಂಗಡಿಸಿದ್ದಾರೆ.

ಇದೇ ಗ್ರಂಥದ ನಂತರ ಮೂರು ಅಧ್ಯಾಯಗಳು ವೃತ್ತಿ ಪದಕೋಶಗಳಿಗೆ ಸಂಬಂಧಪಟ್ಟಿವೆ. ವೃತ್ತಿ ಪದಕೋಶಗಳು ಭಾಷಿಕ ಸಮುದಾಯಗಳ ಸಂಸ್ಕೃತಿಯನನು ತಿಳಿದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವು ಒಂದು ವೃತ್ತಿಗೆ ಸಂಬಂಧಪಟ್ಟ ಸಮಗ್ರ ಪದಗಳನ್ನು ಸಂಗ್ರಹಿಸಿ, ವರ್ಗೀಕರಿಸಿ, ಅರ್ಥ ವಿವರಣೆಯನ್ನು ಕೊಡುತ್ತವೆ. ಕನ್ನಡದಲ್ಲಿ ವೃತ್ತಿ ಪದಕೋಶಗಳು ತುಂಬ ಕಡಿಮೆ (ಈಚೆಗೆ ಈ ಕೆಲಸ ನಡೆಯುತ್ತಿದೆ). ಲೇಖಕರು ಈ ಮೂರು ಅಧ್ಯಾಯಗಳಲ್ಲಿ ವೃತ್ತಿ ಪದಕೋಶಗಳ ಮಹತ್ವ. ಈವರೆಗೆ ಕನ್ನಡದಲ್ಲಿ ರಚಿತವಾದ ಮೂರು ವೃತ್ತಿ ಪದಕೋಶಗಳಾದ ‘ಉಲ್ಲಾಳ ನರಸಿಂಗರಾವ್‌ರ ‘A Kisamwar Glossary of Kanarese Words (೧೯೮೧) ಎಸ್‌. ಜಿ. ವಿರಕ್ತಮಠರ ‘ಕಲಬುರ್ಗಿ ಜಿಲ್ಲೆಯ ಒಕ್ಕಲುತನ ವೃತ್ತಿ ಪದಗಳ ಅಧ್ಯಯನ’ (೧೯೮೧), ಆರ್‌. ವೈ. ಕುಲಕರ್ಣಿಯವರ ‘A, Linguistics Analysis of Weavers Occupational Vocubulary in Kannada’ (೧೯೮೪) ಇವುಗಳ ರಚನಾ ವಿಧಾನದ ಬಗೆಗೆ ತಿಳಿಸಿದ್ದಾರೆ. ವೃತ್ತಿ ಪದಕೋಶಗಳನ್ನು ರಚಿಸುವಾಗ ಸಂಶೋಧಕ ಕ್ಷೇತ್ರಕಾರ್ಯಕ್ಕೆ ಹೋಗಬೇಕಾಗುತ್ತದೆ. ಆ ವೇಳೆಯಲ್ಲಿ ಪ್ರಶ್ನಾವಳಿಗಳು ಪ್ರಮುಖ ಪಾತ್ರವಹಿಸುತ್ತವೆ. ನಿರೂಪಕರಿಂದ ಮಾಹಿತಿಗಳನ್ನು ಪಡೆಯಲು ಪ್ರಶ್ನಾವಳಿಯಲ್ಲಿ ಯಾವ ಅಂಶಗಳಿರಬೇಕು ಎಂಬುದರ ಬಗ್ಗೆ ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಕೃಷಿ ಪದಕೋಶ ಹಾಗೂ ನೇಕಾರರ ಪದಕೋಶದ ಪ್ರಶ್ನಾವಳಿಯ ಮಾದರಿಗಳನ್ನು ಕೊಟ್ಟಿದ್ದಾರೆ. ಈ ಗ್ರಂಥದಲ್ಲಿಯ ‘ವೃತ್ತಿಪದಕೋಶ ಸ್ವರೂಪ ಮತ್ತು ರಚನೆ’ ಎಂಬ ಲೇಖನ ತುಂಬ ಮೌಲಿಕವಾಗಿದೆ. ಬಹುಶಃ ಕರ್ನಾಟಕದಲ್ಲಿ ವೃತ್ತಿ ಪದಕೋಶದ ರಚನಾ ಸ್ವರೂಪವನ್ನು ತಿಳಿಸುವ ಮೊದಲ ಪ್ರಯತ್ನ ಇದಾಗಿದೆ. ವೃತ್ತಿಪದ ಕೋಶದಲ್ಲಿಯ ಪಾರಿಭಾಷಿಕ ಪದಗಳಾದ ವೃತ್ತಿಪದ, ನಿಘಂಟಿಮ, ನಿಘಂಟು, ಪದಕೋಶ, ವೃತ್ತಿಪದಕೋಶ ಇವುಗಳ ಅರ್ಥ ವಿವರಣೆಯನ್ನು ತಿಳಿಸಿ ವೃತ್ತಿ ಪದಕೋಶದಲ್ಲಿ ಪ್ರಧಾನಪದಗಳನ್ನು ದಾಖಲಿಸುವಿಕೆ, ಪರ್ಯಾಯ ರೂಪಗಳನ್ನು ಕೊಡುವ ರೀತಿ, ಅವುಗಳ ಸಂಯೋಜನೆ, ವರ್ಗೀಕರಣ ಮುಂತಾದ ವಿಷಯಗಳನ್ನು ಉದಾಹರಣೆ ಸಹಿತವಾಗಿ ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ವೃತ್ತಿಪದಕೋಶ ಯೋಜನೆಯನ್ನು ಯಾವ ರೀತಿಯಾಗಿ ಹಮ್ಮಿಕೊಂಡು ಕಾರ್ಯರೂಪಕ್ಕೆ ತರಬೇಕೆಂದು ವಿವರವಾಗಿ ಹೇಳಿದ್ದಾರೆ. ವೃತ್ತಿಪದಕೋಶಗಳನ್ನು ರಚಿಸುವಾಗ ಈ ಗ್ರಂಥ ಕೈಪಿಡಿಯಂತೆ ಸಹಾಯಕವಾಗುತ್ತದೆ.

ಭಾರತೀಯ ಭಾಷೆಗಳ ಕೇಂದ್ರ ಸಂಸ್ಥಾನವು (C.I.I.L) ೧೯೮೦ರಲ್ಲಿ ಪ್ರಕಟಿಸಿದ ‘Lexicography in India’ ಭಾರತೀಯ ಭಾಷೆಗಳಲ್ಲಿ ನಿಘಂಟು ರಚನೆಯ ಬಗೆಗೆ ನಡೆಸಿದ ವಿಚಾರ ಸಂಕಿರಣಗಳಲ್ಲಿ ಮಂಡಿತವಾದ ಲೇಖನಗಳ ಸಂಕಲನವಾಗಿದೆ. ಈ ಸಂಕಲನ ಗ್ರಂಥದಲ್ಲಿ ಎರಡು ಭಾಗಗಳಿವೆ. ಭಾಗ ಒಂದರಲ್ಲಿ ಭಾರತದ ಭಾಷೆಗಳಾದ ‘ಆಸಾಮಿ’, ‘ಬೆಂಗಾಲಿ’ (ಬಂಗಾಲಿ), ‘ಗುಜರಾತಿ’, ‘ಹಿಂದಿ’, ‘ಕನ್ನಡ’, ‘ಕಾಶ್ಮೀರಿ’, ‘ಮರಾಠಿ’, ಓರಿಸ್ಸಾ, ಸಿಂಧಿ, ತಮಿಳ್ ಮತ್ತು ತೆಲುಗು ಈ ಭಾಷೆಗಳಲ್ಲಿ ರಚಿತವಾದ ಏಕಭಾಷಿಕ ಮತ್ತು ದ್ವಿಭಾಷಿಕ ಕೋಶಗಳ ಸಮೀಕ್ಷೆ ಮತ್ತು ರಚನಾ ವಿಧಾನಗಳ ಬಗೆಗೆ ನುರಿತ ವಿದ್ವಾಂಸರಿಂದ ಬರೆದ ಲೇಖನಗಳು ತುಂಬ ಉಪಯುಕ್ತವಾಗಿದೆ. ಇದರಲ್ಲಿ ಮೂರು ಲೇಖನಗಳು ಕನ್ನಡ ಕೋಶಗಳಿಗೆ ಸಂಬಂಧಪಟ್ಟಿವೆ. ಗುರುನಾಥ ಜೋಶಿಯವರ A, Brief Survery of Dictionary in Karnataka ಎಂಬ ಲೇಖನದಲ್ಲಿ ಕನ್ನಡ ಕೋಶಗಳ ಸ್ಥೂಲ ಸಮೀಕ್ಷೆಯಿದೆ, ಎ. ಎಸ್‌. ಕೇದಿಲಾಯವರ History of Dictionaries in Kannada with special reference to Billingual Dictionaries ಇದರಲ್ಲಿ ಪ್ರಾಚೀನ ಮತ್ತು ಆಧುನಿಕ ದ್ವಿಭಾಷಿಕ ಕೋಶಗಳ ಸಂಕ್ಷಿಪ್ತ ಸಮೀಕ್ಷೆಯನ್ನೊಳಗೊಂಡಿದೆ. ಎನ್‌. ಬಸವರಾಧ್ಯರ ‘Preparation of Kannada – Kannada Dictionary on Historical Principles’ ಈ ಬರೆಹ ಐತಿಹಾಸಿಕ ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸಿದ ನಿಘಂಟುಗಳ ರಚನಾ ವಿಧಾನದ ಬಗ್ಗೆ ತಿಳಿಸುತ್ತದೆ. ಭಾಗ ಎರಡರಲ್ಲಿ ನಿಘಂಟು ರಚನೆಯ ಸಿದ್ಧಾಂತ ಮತ್ತು ತಂತ್ರಗಳ ಬಗ್ಗೆ ಸಂಬಂಧಪಟ್ಟಿರುವ ಎಂಟು ಲೇಖನಗಳಿವೆ. ನಿಘಂಟು ರಚನೆಯಲ್ಲಿ ಕಂಪ್ಯೂಟರದ ಪಾತ್ರ, ಹಿಂದಿ – ಇಂಗ್ಲಿಶ್‌ಸಂಯೋಜಿತ ಕೋಶ, ದ್ವಿಭಾಷಿಕ ನಿಘಂಟು ರಚನೆಯ ಸಮಸ್ಯೆಗಳು, ಉಪಭಾಷಿಕ ಕೋಶಗಳ ರಚನೆ, ನಿಘಂಟು ರಚನೆಯ ಕೆಲವು ಸಮಸ್ಯೆಗಳು, ಸೋವಿಯತ್‌ಯೂನಿಯನ್‌ದಲ್ಲಿ ನಿಘಂಟುಶಾಸ್ತ್ರದ ಬೆಳವಣಿಗೆಯ ತತ್ವಗಳು. ಆಧುನಿಕ ಭಾರತೀಯ ಭಾಷೆಗಳಲ್ಲಿ ನಿಘಂಟು ರಚನೆಯನ್ನು ಕುರಿತು ಕೆಲವು ಸಲಹೆಗಳು ಮುಂತಾದ ಅಂಶಗಳನ್ನೊಳಗೊಂಡ ಮೌಲಿಕ ಬರೆಹಗಳಿವೆ. ಈ ಗ್ರಂಥವು ನಿಘಂಟುಶಾಸ್ತ್ರದ ಬಗೆಗೆ ಅಧ್ಯಯನ ಮಾಡುವ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಮಹತ್ವದ ಒಳನೋಟಗಳನ್ನು ಕೊಡುತ್ತದೆ.

೨. ಲೇಖನಗಳು

ಕನ್ನಡ ನಿಘಂಟುಗಳನ್ನು ಕುರಿತು ಗ್ರಂಥಗಳು ವಿರಳವಾದಂತೆ ಲೇಖನಗಳೂ ವಿರಳವಾಗಿವೆ. ನಾಡಿನ ಬೇರೆ – ಬೇರೆ ಸಂಪತ್ರಿಕೆಗಳಲ್ಲಿ, ಅಭಿನಂದನ, ಸಂಸ್ಮರಣ ಗ್ರಂಥಗಳಲ್ಲಿ ಪ್ರಕಟವಾದ ಲೇಖನಗಳ ಅಧ್ಯಯನ ಸಮೀಕ್ಷೆಯನ್ನು ಈ ಭಾಗದಲ್ಲಿ ಮಾಡಬಹುದು.

ಡಿ. ಎಲ್‌. ನರಸಿಂಹಾಚಾರ್ಯರ ‘ಕನ್ನಡದಲ್ಲಿ ಶಬ್ದ ರಚನೆ’ ತುಂಬ ಮೌಲಿಕ ಲೇಖನವಾಗಿದೆ (೧೯೭೧ ಪೀಠಿಕೆಗಳು – ಲೇಖನಗಳು). ಕನ್ನಡ ಶಬ್ದ ರಚನೆಯ ಸ್ವರೂಪವನ್ನು ಅದು ತಿಳಿಸಿಕೊಡುತ್ತದೆ. ಕೇಶಿರಾಜನ ಧಾತು ಪಾಠ ಕನ್ನಡಕೋಶ ರಚನೆಗೆ ತುಂಬ ನೆರವಾಗುತ್ತದೆ. ಡಿ. ಎಲ್‌. ಎನ್‌. ಅವರು ಧಾತುಪಾಠದ ಬಗೆಗೆ ವಿವರವಾಗಿ ಚರ್ಚಿಸಿದ್ದಾರೆ. ಮೂಲರೂಪಗಳಿಗೆ ಬೇರೆ ಬೇರೆ ಪ್ರತ್ಯಯಗಳು ಸೇರಿ ಬೇರೆ ಬೇರೆ ಪದರಚನೆಗಳಿಗೆ ಕಾರಣವಾಗುತ್ತದೆ. ನಂತರ ಡಿ. ಎಲ್‌. ಎನ್‌. ಅವರು ಕೃಲ್ಲಿಂಗಗಳು, ಕದಂತ ಭಾವನಾಮಗಳು, ನಾಮಧಾತುಗಳ ಬಗ್‌ಎ ಸಂಸ್ಕೃತ ಮತ್ತು ಕನ್ನಡ ವ್ಯಾಕರಣ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ವಿವೇಚನೆ ಮಾಡಿದ್ದಾರೆ. ಸಮಾಸಗಳು, ಯಮಳ ಶಬ್ದಗಳು, ಸಾದೃಶ್ಯ ಮೂಲ ರಚನೆಯ ಬಗ್ಗೆ ವಿವೇಚಿಸಿದ್ದಾರೆ. ಕನ್ನಡದಲ್ಲಿ ಅಂತ್ಯ ಪ್ರತ್ಯಯಗಳ ಪ್ರಯೋಗದಿಂದ ಹೊಸ ಶಬ್ದಗಳು ನಿರ್ಮಾಣವಾಗುತ್ತವೆ ಎಂಬುದನ್ನು ಡಿ. ಎಲ್‌. ಎನ್‌ಅವರು ಹೇಳಿರುವುದನ್ನು ಗಮನಿಸಿದರೆ ಭಾಷಾ ಆಧುನೀಕರಣದ ದೃಷ್ಟಿಯಿಂದಲೂ ಈ ವಿಚಾರಗಳು ಪ್ರಸ್ತುತವೆನಿಸುತ್ತವೆ. ಈ ಬರೆಹದಲ್ಲಿ ಕನ್ನಡ ಶಬ್ದರಚನೆಯ (ಶಬ್ದ ಕಲ್ಪದ) ಒಂದು ಸ್ಪಷ್ಟ ಚಿತ್ರಣ ಭಾಷಾಭ್ಯಾಸಿಗಳಿಗೆ ದೊರೆಯುತ್ತದೆ.

ಡಿ. ಎಲ್‌. ಎನ್‌. ಅವರು ‘ಕನ್ನಡ ಹೊಸ ನಿಘಂಟು’ ಎಂಬ ಇನ್ನೊಂದು ಲೇಖನವನ್ನು ಬರೆದಿದ್ದಾರೆ. (೧೯೭೧ ಪೀಠಿಕೆಗಳು – ಲೇಖನಗಳು) ಪ್ರಾಚೀನದಿಂದ ಅರ್ವಾಚೀನದವರೆಗಿನ ಕನ್ನಡ ಕಾವ್ಯಗಳಲ್ಲಿ ಬಳಕೆಯಾದ ಒಂದೊಂದು ಪದಕ್ಕೂ ಒಂದೊಂದು ವಿಶೇಷ ಅರ್ಥವಿದೆ. ಎಷ್ಟೋ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಪದಗಳಿವೆ. ಅವುಗಳ ಬಳಕೆಯ ಪ್ರಯೋಗಗಳನ್ನು ಹುಡುಕಿ ಅರ್ಥ ಕೊಡಬೇಕಾದ ಹೊಸ ನಿಘಂಟು ಕನ್ನಡಕ್ಕೆ ತುಂಬ ಅಗತ್ಯವಿದೆ ಎಂದು ಹೇಳಿದ್ದಾರೆ. ಪ್ರಾಚೀನ ಕಾವ್ಯಗಳಲ್ಲಿ ಬಳಕೆಯಾದ ಕೆಲವು ಕ್ಲಿಸಷ್ಟ ಹಾಗೂ ಸಾಂಸ್ಕೃತಿಕ ಮಹತ್ವವಿರುವ ಪದಗಳಿಗೆ ಅರ್ಥವನ್ನು ಕಿಟೆಲ್‌ಕೊಟ್ಟಿದ್ದಾನೆ. ಅದೇ ಕ್ರಮವನ್ನು ಹಿಡಿದು ಡಿ. ಎಲ್‌. ಎನ್‌. ಅವರು ಮೇಗಾಳಿ, ಕಿಗ್ಗಾಳಿ, ಹುಡುಕುನೀರು, ಬಡಪ, ಓಹರಿ, ಸಾಹರಿ, ಒಲ್ಲಣಿಗ, ಮಾವಿಟ್ಟಿ ಇಂತಹ ರೂಪಗಳ ಅರ್ಥ ನಿರ್ಣಯವನ್ನು ಮಾಡಿದ್ದಾರೆ. ಕನ್ನಡ ಕಾವ್ಯ ಶಾಸನಗಳಲ್ಲಿ ಇಂತಹ ಸಾವಿರಾರು ಪದಗಳಿವೆ. ಅವುಗಳನ್ನು ಕೂಡಿಹಾಕಿ ಅವುಗಳಿಗೆ ಅರ್ಥ ನಿರೂಪಣೆ ಮಾಡುವ ಕೆಲಸ ಆಗಬೇಕಾಗಿದೆ. ಅದುವೇ ಡಿ. ಎಲ್‌. ಎನ್‌. ಅವರು ಹೇಳಿದ ಹೊಸ ನಿಘಂಟು. ಅದಕ್ಕೆ ಬೇಕಾದ ಮಾರ್ಗದರ್ಶಕ ಸೂತ್ರಗಳನ್ನು ಆಚಾರ್ಯರು ರೂಪಿಸಿದ್ದಾರೆ. ಡಿ. ಎಲ್‌. ಎನ್‌ರು ‘ನಿಘಂಟು ರಚನೆ’ ಎಂಬ ಇನ್ನೊಂದು ಬರಹದಲ್ಲಿ (೧೯೭೧ ಪೀಠಿಕೆಗಳು – ಲೇಖನಗಳು) ಶಬ್ದ ಸ್ವರೂಪ, ಶಬ್ದ ವ್ಯಾಪಾರ, ನಿಘಂಟುಕಾರನ ಕರ್ತವ್ಯಗಳು ಮುಂತಾದ ನಿಘಂಟು ರಚನೆಯ ಸೈದ್ಧಾಂತಿಕ ಅಂಶಗಳ ಬಗ್ಗೆ ಚರ್ಚಿಸಿದ್ದಾರೆ.

ಎನ್‌. ಬಸವಾರಾದ್ಯರ ‘ನಿಘಂಟುಶಾಸ್ತ್ರ ಮತ್ತು ಕನ್ನಡ ನಿಘಂಟುಗಳು’ ಎಂಬ ಲೇಖನವು (ಸಂಶೋಧನ ೧೯೯೧) ನಿಘಂಟುಶಾಸ್ತ್ರದ ಅರ್ಥ, ಭಾರತದಲ್ಲಿ ನಿಘಂಟು ರಚನೆಯ ಕಾರ್ಯ ಪ್ರಾರಂಭವಾದ ಬಗೆ, ಸಂಸ್ಕೃತ ಕೋಶಕಾರರು ಕನ್ನಡ ಕೋಶಕಾರರ ಮೇಲೆ ಬೀರಿದ ಪ್ರಭಾವವನ್ನು ಸಂಕ್ಷಿಪ್ತವಾಗಿ ವಿವರಿಸಿ ಪ್ರಮುಖ ಇಂಗ್ಲಿಶ್‌ಕೋಶಗಳಾದ ವೆಬ್ಸಟರ್‌ಕೋಶ ಹಾಗೂ ಆಕ್ಸ್‌ಫರ್ಡ್‌ಇಂಗ್ಲಿಶ್‌ನಿಘಂಟುಗಳ ಸ್ವರೂಪವನ್ನು ವಿವರಿಸಿದ್ದಾರೆ. ನಂತರ ರನ್ನಕಂದ ಮೊದಲುಗೊಂಡು ಸೂರ್ಯ ಕವಿಯ ಕವಿಕಂಠಹಾರದವರೆಗಿನ ಎಲ್ಲ ಪ್ರಾಚೀನ ನಿಘಂಟುಗಳ ಬಗೆಗೆ ಸಂಕ್ಷಿಪ್ತವಾಗಿಯಾದರೂ ಚೊಕ್ಕಟ್ಟಾಗಿ ವಿವರಿಸಿದ್ದಾರೆ. ಎನ್‌. ಬಸವರಾಧ್ಯರು ‘ನಿಘಂಟುಗಳು’ ಎಂಬ ಇನ್ನೊಂದು ಬರೆಹದಲ್ಲಿ (೧೯೯೩) ಸ್ವಾತಂತ್ರ್ಯೋತ್ತರದ ಕಾಲದಲ್ಲಿ ಬಂದಿರುವ ಕನ್ನಡ – ಕನ್ನಡ ನಿಘಂಟುಗಳು, ಕನ್ನಡ – ಇಂಗ್ಲಿಶ್‌ನಿಘಂಟುಗಳು ಬೇರೆ ಬೇರೆ ಜ್ಞಾನಕ್ಷೇತ್ರದಲ್ಲಿ ಬಂದಿರುವ ಪಾರಿಭಾಷಿಕ ಕೋಶಗಳು ಆಡಳಿತಾತ್ಮಕ ಪದಕೋಶಗಳು ಇನ್ನು ಬೇರೆ ಬೇರೆ ಕ್ಷೇತ್ರದಲ್ಲಿ ಬಂದಿರುವ ನಿಘಂಟುಗಳು ಸ್ವರೂಪವನ್ನು ವಿವರಿಸಿದ್ದಾರೆ. ಸ್ವಾತಂತ್ರ್ಯೋತ್ತರದ ಕಾಲದಲ್ಲಿ ಬಂದಿರುವ ನಿಘಂಟುಗಳ ಸ್ಥೂಲ ನೋಟ ಈ ಬರಹದಲ್ಲಿದೆ.

ಹಿ. ಚಿ.ಶಾಂತವೀರಯ್ಯನವರು ‘ಕನ್ನಡ ನಿಘಂಟುಗಳು’ (ಹಕ್ಕಿನೋಟ) ಎಂಬ ಲೇಖನವನ್ನು ಬರೆದಿದ್ದಾರೆ. (೧೯೮೫ ಕನ್ನಡ ಅಳಿವು – ಉಳಿವು). ಇಲ್ಲಿ ಕನ್ನಡದಲ್ಲಿ ಪ್ರಕಟವಾದ ಪ್ರಾಚೀನ ಕೋಶಗಳು ಹಾಗೂ ಆಧುನಿಕ ಕೋಶಗಳ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಪ್ರಮುಖ ೫೧ ಕೋಶಗಳ ಬಗೆಗೆ ವಿವರಣೆ ಇಲ್ಲಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರು ‘ಕನ್ನಡ ಮುನ್ನಡೆಯಲ್ಲಿ ನಿಘಂಟುಗಳು’ (೧೯೮೫ ಕನ್ನಡದ ಅಳಿವು – ಉಳಿವು) ಎಂಬ ಲೇಖನದಲ್ಲಿ ಕನ್ನಡ ನಿಘಂಟು ಇನ್ನೂ ಕನ್ನೆ ನೆಲ ಈ ಕ್ಷೇತ್ರದಲ್ಲಿ ಆಗಬೇಕಾದ ಕೆಲಸ ತುಂಬ ಇದೆ. ವಿವಿಧ ಕ್ಷೇತ್ರದಲ್ಲಿ ಪಾರಿಭಾಷಿಕ ಕೋಶಗಳು, ಸ್ಥಳನಾಮ ಕೋಶಗಳು, ಉಪಭಾಷಿಕ ಕೋಶಗಳು ತುರ್ತಾಗಿ ಸಿದ್ಧವಾಗಬೇಕಾಗಿವೆಯೆಂದು ಜಿ. ವೆಂ. ಅವರು ತುಂಬ ಕಳಕಳಿಯಿಂದ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಭವಿಷ್ಯದಲ್ಲಿ ಯಾವ ಯಾವ ನಿಘಂಟುಗಳು ಸಿದ್ಧವಾಗಬೇಕಾಗಿವೆ ಎಂಬುದರ ಬಗೆಗೆ ಸೂಚನೆಗಳು ಇಲ್ಲಿವೆ. ಕೆ. ನಾರಾಯಣರು ‘ಕನ್ನಡ ಭಾಷೆಯಲ್ಲಿ ನಿಘಂಟು’ ಎಂಬ ಲೇಖನದಲ್ಲಿ ನಿಘಂಟುವಿನ ಅರ್ಥ, ಬಗೆಗಳು ಹಾಗೂ ರಚನಾ ವಿಧಾನವನ್ನು ಹೇಳಿ ಕನ್ನಡದಲ್ಲಿ ಬಂದಿರುವ ನಿಘಂಟುಗಳ ಪರಿಚಯ ಮಾಡಿದ್ದಾರೆ. (೧೯೭೬). ನಂತರ ನಾರಾಯಣರು ಕನ್ನಡ ಭಾಷಾ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಶಾಸನ ನಿಘಂಟು, ಉತ್ಪತ್ತಿ ನಿಘಂಟು, ಪ್ರಾದೇಶಿಕ ಮತ್ತು ಉಪಭಾಷಾ ನಿಘಂಟು, ದ್ವಿಭಾಷಿಕ ನಿಘಂಟುಗಳು, ಸ್ಥಳ ಮತ್ತು ವ್ಯಕ್ತಿಸೂಚಿ ನಿಘಂಟುಗಳು, ವೃತ್ತಿಪದ ನಿಘಂಟುಗಳು, ಕನ್ನಡ ವ್ಯಾಕರಣ ಪದಕೋಶಗಳು ರಚಿತವಾಗಬೇಕಾಗಿವೆಯೆಂದು ಸಕಾರಣವಾಗಿವೆಯೇ ಸಂಬಂಧವನ್ನು ಹೇಳಿದುದು ತುಂಬ ಸೂಕ್ತವಾಗಿದೆ.

ಡಾ. ವಿಲ್ಯಂ ಮಾಡ್ತ ಅವರು ‘ಏಕಭಾಷಿಕ ನಿಘಂಟು ರಚನೆ’ ಎಂಬ ಲೇಖನವನ್ನು ಬರೆದಿದ್ದಾರೆ. (ಸಾರ್ಥಕ, ೧೯೯೫). ವೈಜ್ಞಾನಿಕವಾಗಿ ನಿಘಂಟು ರಚನೆ ಮಾಡುವಲ್ಲಿ ಕ್ಷೇತ್ರಕಾರ್ಯ, ನಿಘಂಟಿಮಗಳ ಆಯ್ಕೆ ಮತ್ತು ನಿಘಂಟಿಮಗಳ ರಚನೆ ಈ ಮೂರು ವಿಧಾನಗಳು ಬಹುಮುಖ್ಯ ಪಾತ್ರವಹಿಸುತ್ತವೆ. ನಿಘಂಟುಗಳ ರಚನೆಯಲ್ಲಿ ಇವುಗಳನ್ನು ಯಾವ ರೀತಿಯಾಗಿ ಬಳಸಬೇಕು ಎಂಬುದರ ಬಗ್ಗೆ ಡಾ. ಮಾಡ್ತರವರು ಉದಾಹರಣೆಗಳ ಮೂಲಕ ನಿರೂಪಿಸಿದ್ದಾರೆ. ನಿಘಂಟಿಮಗಳು, ನಿಘಂಟಿಮದ ಸಮಾನಾರ್ಥಕ ರೂಪಗಳು ಮತ್ತು ನಿಘಂಟಿಮದ ವಿವರಣೆ ಈ ನಾಲ್ಕು ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಏಕಭಾಷಿಕ ಕೋಶಗಳನ್ನು ರಚಿಸುವಾಗ ನಿಘಂಟುಕಾರ ಗಮನಿಸಬೇಕಾದ ಅಂಶಗಳನ್ನು ಚರ್ಚಿಸಿದ್ದಾರೆ. ಡಾ. ಬಿ. ಬಿ. ಮಹಿದಾಸರು ‘ಕನ್ನಡದಲ್ಲಿ ನಿಘಂಟುಗಳು’ ಎಂಬ ವಿಸ್ತಾರವಾದ ಲೇಖನವನ್ನು ಬರೆದಿರುವುದು (ಸಾರ್ಥಕ, ೧೯೯೫). ಇದರಲ್ಲಿ ರನ್ನಕಂದ ಮೊದಲುಕೊಂಡು ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸಿದ ಕನ್ನಡ – ಕನ್ನಡ ನಿಘಂಟು ಸಂಪುಟಗಳವರೆಗಿನ ಸಮೀಕ್ಷೆಯಿದೆ. ಈ ಲೇಖನದಲ್ಲಿ ಮೂರು ಭಾಗಗಳಿವೆ. ಅತಿ ಸಂಕ್ಷಿಪ್ತ ಏಕಭಾಷಿಕ ನಿಘಂಟುಗಳು (ಹಳಗನ್ನಡ ಮತ್ತು ನಡುಗನ್ನಡ ಕಾಲದ), ದ್ವಿಭಾಷಾ ನಿಘಂಟುಗಳು (ಮಿಶನರಿಗಳ ನಿಘಂಟು ಕಾರ್ಯ ಹಾಗೂ ಪ್ರಮುಖ ಮಿಶನರಿ ಕೋಶಗಳು) ಹಾಗೂ ವಿಸ್ತೃತ ಕನ್ನಡ – ಕನ್ನಡ ಕೋಶಗಳು ಮತ್ತು ಆಧುನಿಕ ಕೋಶಗಳ ಪಕ್ಷಿ ನೋಟವಿದೆ. ಕನ್ನಡ ಕೋಶಗಳ ಸ್ಥೂಲ ನೋಟವನ್ನು ತಿಳಿದುಕೊಳ್ಳಲು ಈ ಲೇಖನ ತುಂಬ ನೆರವಾಗುತ್ತದೆ.

ಕೆ. ವಿ. ನಾರಾಯಣರ ‘ಭಾಷೆಯ ಸುತ್ತಮುತ್ತ’ (೧೯೯೮) ಒಂದು ಬೆಲೆಯುಳ್ಳ ಪುಸ್ತಕ. ಭಾಷಾಧ್ಯಯನಕ್ಕೆ ಸಂಬಂಧಿಸಿದ ಕೃತಿಯಿದು. ಅದರಲ್ಲಿಯ ‘ಪದಕೋಶ’ ಭಾಗವು ಕೋಶಾಧ್ಯಯನ ಕ್ಷೇತ್ರಕ್ಕೆ ಗಣ್ಯ ಕೊಡುಗೆಯಾಗಿದೆ. ಅದರಲ್ಲಿ ನಾರಾಯಣರು ಮೊದಲ ಭಾರಿಗೆ ಅಧುನಿಕ ಕೋಶ ರಚನೆಗೆ ಕೆಲವು ಪರಿಭಾಷೆಗಳನ್ನು, ಪರಿಕಲ್ಪನೆಗಳನ್ನು ಒದಗಿಸಿಕೊಟ್ಟಿದ್ದಾರೆ. ಪದಕೋಶದಲ್ಲಿ ಒಳಚಲನೆ, ಕೋಶಿಯ ಮತ್ತು ಕೋಶೋತ್ತರ ಮುಂತಾದವು ಬಹಳ ಮುಖ್ಯವಾಗಿವೆ. ಕನ್ನಡ ನಿಘಂಟು ರಚನೆಯನ್ನು ಮರುಪರಿಶೀಲನೆಗೆ ಒಳಪಡಿಸುವ, ಪಾರಂಪರಿಕ ಅಧ್ಯಯನ ಶಿಸ್ತನ್ನು ಒಡೆದು ನೋಡುವ ಯತ್ನವನ್ನು ‘ಹೊಸಗನ್ನಡಕ್ಕೆ ಒಂದು ಹೊಸ ನಿಘಂಟು’ ಎಂಬ ಲೇಖನದಲ್ಲಿ ಮಾಡಿದ್ದಾರೆ. ಕೋಶರಚನಾ ವಿಧಾನದ ಬಗೆಗೆ ಅಧ್ಯಯನ ಮಾಡುವವರು ನಾರಾಯಣರ ಈ ಬರೆಹಗಳನ್ನು ಗಮನಿಸಬೇಕೆಂದು ಬೇರೆ ಹೇಳಬೇಕಾಗಿಲ್ಲ.

ಪ್ರಾಚೀನ ನಿಘಂಟುಗಳಿಗೆ ನೇರವಾಗಿ ಸಂಬಂಧಿಸಿದಂತೆ ಕೆಲವು ಲೇಖನಗಳು ಬಂದಿವೆ. ಎನ್‌. ಬಸವರಾಧ್ಯರು ಪ್ರಾಚೀನ ಕನ್ನಡದ ಮತ್ತು ನಿಘಂಟುಗಳಾದ ರನ್ನಕಂದ ಶಬ್ದಮಣಿದರ್ಪಣಂ (ಸಹಜಱೞಂಗಳ್‌, ಧಾತು ಪ್ರಕರಣ, ಪ್ರಯೋಗಸಾರ) ಕರ್ಣಾಟಕ ಶಬ್ದಸಾರಂ, ಕರ್ಣಾಟಕ ನಿಘಂಟು, ಚರುರಾಸ್ಯ ನಿಘಂಟು, ಕಬ್ಬಿಗರ ಕೈಪಿಡಿ, ಕರ್ಣಾಟಕ ಶಬ್ದಮಂಜರಿ, ಕರ್ಣಾಟಕ ಸಂಜೀವನಂ, ಕರ್ಣಾಟಕ ಭಾರತ ನಿಘಂಟು, ಕವಿಕಂಠಹಾರ ಇವುಗಳನ್ನು ಶಾಸ್ತ್ರಶುದ್ಧವಾಗಿ ‘ಹಳಗನ್ನಡದ ನಿಘಂಟು’ ಎಂಬ ಹೆಸರಿನಲ್ಲಿ ಸಂಪಾದಿಸಿದ್ದಾರೆ (೧೯೭೬ ಡಿ. ವಿ. ಕೆ. ಮೂರ್ತಿ). ೪೫ ಪುಟಗಳ ಅಭ್ಯಾಸ ಪೂರ್ಣ ಪ್ರಸ್ತಾವಣೆಯಲ್ಲಿ ಆಯಾ ನಿಘಂಟುಗಳ ಕಾಲ, ಕರ್ತೃ ಸಂಪಾದನೆಯ ವಿಧಾನ ಇತ್ಯಾದಿ ಅಂಶಗಳನ್ನು ಚರ್ಚಿಸಿದ್ದಾರೆ. ಗ್ರಂಥದ ಅಧ್ಯಯನಕ್ಕೆ ಪೂರಕವಾಗಿ ಪದ್ಯಗಳ ಅಕಾರಾದಿ, ಶಬ್ದಾರ್ಥ ಕೋಶ ಇವು ಕೋಶಾಧ್ಯಯನಕ್ಕೆ ತುಂಬ ನೆರವಾಗುತ್ತದೆ. ಶ್ರೀ ಎಸ್‌. ಶಿವಣ್ಣನವರು ಕ್ರಿ. ಶ. ೧೬೦೦ ರಿಂದ ೧೮೫೦ ರ ಕಾಲದವರೆಗೆ ಶಾಸ್ತ್ರ ಸಾಹಿತ್ಯ ಕೃತಿಗಳನ್ನು ಸಮೀಕ್ಷೆ ಮಾಡುವಾಗ ಆ ಕಾಲದಲ್ಲಿ ಬಂದಿರುವ ಪ್ರಾಚೀನ ಏಳು ನಿಘಂಟು ಕೃತಿಗಳಾದ ಭಾರತ ನಿಘಂಟು, ಚೆನ್ನ ಕವಿಯ ನಾನಾರ್ಥಕಂದ, ವಿರಕ್ತ ತೋಂಟದಾರ್ಯರ ಕರ್ಣಾಟಕ ಶಬ್ದಮಂಜರಿ, ಸೂರ್ಯ ಕವಿಯ ಕವಿಕಂಠಹಾರ, ಶೃಂಗಾರ ಕವಿಯ ಕರ್ಣಾಟಕ ಸಂಜೀವನ, ಲಕ್ಷ್ಮಣಶಾಸ್ತ್ರಿಗಳ ನಾಮಲಿಂಗಾನುಶಾಸನ ಟೀಕೆ, ಮುಮ್ಮಡಿ ಕೃಷ್ಣರಾಜರ ಚಾಮುಂಡಾ ಲಘುನಿಘಂಟು ಈ ಕೋಶಗಳ ಬಗೆಗೆ ಸಮೀಕ್ಷೆ ಮಾಡಿದ್ದಾರೆ (ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂ. ೫, ೧೯೮೨).

ಟಿ. ವಿ. ವೆಂಕಟಾಚಲಶಾಸ್ತ್ರೀಯವರು ಎರಡನೆಯ ಮಂಗರಾಜನ ‘ಅಭಿನವಾಭಿಧಾನಂ’ (ಮಂಗರಾಜ ನಿಘಂಟು)ದ ಬಗೆಗೆ ವಿವೇಚನೆ ಮಾಡಿದ್ದಾರೆ (ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ ೫ನೇ ಸಂಪುಟ ೧೯೮೧). ಮಂಗರಾಜನ ಕಾಲ (೧೩೯೮), ಕೃತಿಗಳು, ಕವಿಯ ವೈಯಕ್ತಿಕ ಚರಿತ್ರೆ, ಕೃತಿಯ ಸ್ವರೂಪದ ಬಗ್ಗೆ ಮೌಲಿಕ ವಿಚಾರಗಳನ್ನು ಹೇಳಿದ್ದಾರೆ. ವೆಂಕಟಾಚಲಶಾಸ್ತ್ರೀಯವರು ಅದೇ ಸಂಪುಟದಲ್ಲಿ ‘ಕರ್ಣಾಟಕ ನಿಘಂಟು’ ಹಾಗೂ‘ಕರ್ಣಾಟಕ ಶಬ್ದಸಾರ’ಗಳ ಕರ್ತೃತ್ವ, ಕಾಲ ವಿಚಾರ, ಕೃತಿಗಳ ಪರಿಶೀಲನೆಯನ್ನೊಳಗೊಂಡ ಲೇಖನಗಳನ್ನು ಬರೆದಿದ್ದಾರೆ.

ಪ್ರೊ. ಎಂ. ಮರಿಯಪ್ಪಭಟ್ಟರು ಪರಿಷ್ಕರಿಸಿ ಪ್ರಕಟಿಸಿದ ಕಿಟೆಲ್‌ನಿಘಂಟುವಿನ ನಾಲ್ಕು ಸಂಪುಟಗಳ ಬಗೆಗೆ ಎನ್‌. ಬಸವರಾಧ್ಯರು ಲೇಖನವೊಂದನ್ನು ಬರೆದಿದ್ದಾರೆ (ಸಾರ್ಥಕ, ೧೯೯೫). ‘ಕಿಟೆಲ್‌ರ ಕನ್ನಡ – ಇಂಗ್ಲಿಶ್‌ನಿಘಂಟು ಒಂದು ಅವಲೋಕನ ‘ಕನ್ನಡ ನಿಘಂಟು’ ಕ್ಷೇತ್ರಕ್ಕೆ ಪ್ರೊ. ಭಟ್ಟರ ಕೊಡುಗೆಯನ್ನು ವಿವರಿಸಿ ಅವರ ಪರಿಷ್ಕರಣದ ಸಂಪುಟಗಳ ಸ್ವರೂಪದ ಬಗ್ಗೆ ಹೇಳಿದ್ದಾರೆ. ನಂತರ ಭಟ್ಟರ ಪರಿಷ್ಕರಣದ ಆವೃತ್ತಿಗಳಲ್ಲಿ ಉಳಿದಿರಬಹುದಾದ ಕೆಲವೊಂದು ದೋಷಗಳ ಬಗೆಗೆ ಉದಾಹರಣೆ ಸಹಿತವಾಗಿ ತಿಳಿಸಿದ್ದಾರೆ. ಕಿಟೆಲ್‌ನಿಘಂಟನ್ನು ಅಭ್ಯಸಿಸುವವರಿಗೆ ಈ ಲೇಖನ ತುಂಬ ನೆರವಾಗುತ್ತದೆ.

ಟಿ. ವಿ. ವೆಂಕಟಾಚಲಶಾಸ್ತ್ರೀಯವರು ‘ಸಂಸ್ಕೃತ ಮತ್ತು ಕನ್ನಡ ನಿಘಂಟು ಸಾಹಿತ್ಯ’ ಎಂಬ ಲೇಖನದಲ್ಲಿ (೧೯೮೮) ಸಂಸ್ಕೃತ ಮತ್ತು ಕನ್ನಡದ ನಿಘಂಟುಗಳ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಸಂಸ್ಕೃತ ನಿಘಂಟುಕಾರರು ಕನ್ನಡ ಕೋಶಕಾರರ ಮೇಲೆ ಪ್ರಭಾವ ಬೀರಿದ ಬಗೆಯನ್ನು ತಿಳಿಸಿ ಕನ್ನಡದ ಪ್ರಾಚೀನ ಮತ್ತು ಆಧುನಿಕ ನಿಘಂಟುಗಳ ಸಾಮ್ಯ ವೈಷಮ್ಯಗಳ ಬಗ್ಗೆ ಮೌಲಿಕವಾದ ವಿಚಾರಗಳನ್ನು ಹೇಳಿದ್ದಾರೆ. ವಿಲ್ಯಂಮಾಡ್ತರವು ‘ನಿಘಂಟು ವಿಜ್ಞಾನ’ (೧೯೮೯) ಎಂಬ ಲೇಖನದಲ್ಲಿ ನಿಘಂಟುವಿನ ಅರ್ಥ ಮತ್ತು ಸ್ವರೂಪದ ಬಗ್ಗೆ ತಾತ್ವಿಕವಾದ ಕೆಲವು ಅಂಶಗಳನ್ನು ಹೇಳಿದ್ದಾರೆ.

ಕನ್ನಡ ಕೋಶಗಳ ಬೆಳವಣಿಗೆ ಹಾಗೂ ಕನ್ನಡದಲ್ಲಿ ಬಂದಿರುವ ನಿಘಂಟುಗಳನ್ನು ಕುರಿತಾದ ಕೆಲವು ಬರೆಹಗಳು ಬಂದಿವೆ. ಎಂ. ರಾಜಗೋಪಾಲಚಾರ್ಯರು ‘ಸಂಸ್ಕೃತ ಕೋಶಗಳ ಬೆಳವಣಿಗೆ’ ಎಂಬ ಲೇಖನದಲ್ಲಿ (ಅಭಿಜ್ಞಾನ, ೧೯೯೫) ಸಂಸ್ಕೃತದಲ್ಲಿ ಬಂದಿರುವ ದಶ ನಿಘಂಟುಗಳ ಪರಿಚಯ ಮಾಡಿದ್ದಾರೆ. ಸಂಸ್ಕೃತ ಕೋಶದಲ್ಲಿ ಪದಗಳು ಲಿಂಗಭೇದ, ಪ್ರತ್ಯಯಭೇದ, ಸಮಾಸ ಭೇದಗಳಿಂದ ನಿಷ್ಪನ್ನವಾಗಿ ಬೇರೆ ಬೇರೆ ಅರ್ಥ ಛಾಯೆಗಳನ್ನು ತಳೆದಿವೆ ಎಂಬುದರ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ‘ಸಂಸ್ಕೃತ ಕೋಶಶಾಸ್ತ್ರಕ್ಕೆ ಕರ್ನಾಟಕದ ಕೊಡುಗೆ’ ಎಂಬ ಲೇಖನದಲ್ಲಿ ಪಾಂಡುರಂಗ ಭಟ್ಟರು (೧೯೯೫, ಸಾರ್ಥಕ) ಕನ್ನಡದ ಕವಿ, ಶಾಸ್ತ್ರಕಾರರು ಸಂಸ್ಕೃತದಿಂದ ಪ್ರೇರಣೆ ಪಡೆದು ಕೃತಿರಚನೆ ಮಾಡಿದರು. ಇದಕ್ಕೆ ನಿಘಂಟುಗಳೂ ಹೊರತಲ್ಲ. ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಸಂಪರ್ಕ ಬಹಳ ದಿವಸಗಳಿಂದ ಒಂದು ಇನ್ನೊಂದು ಮೇಲೆ ಪ್ರಭಾವ ಬೀರಿವೆ. ಸಂಸ್ಕೃತ ಕೋಶಕಾರರು ಕನ್ನಡ ಕೋಶಕಾರರ ಮೇಲೆ ಪ್ರಭಾವ ಬೀರಿದಂತೆ ಕನ್ನಡ ಕೋಶಕಾರರು ಸಂಸ್ಕೃತದ ಮೇಲೆ ಪ್ರಭಾವ ಬೀರಿದ್ದಾರೆ. ಸಂಸ್ಕೃತ ಕೋಶಶಾಸ್ತ್ರಕ್ಕೆ ಕರ್ನಾಟಕದ ಕೊಡುಗೆ ಯಾವ ಬಗೆಯದು ಎಂಬುದನ್ನು ಈ ಲೇಖನ ಸೋದಾಹರಣವಾಗಿ ತಿಳಿಸಿಕೊಡುತ್ತದೆ.

ತಾಳ್ತಜೆ ವಸಂತಕುಮಾರರ ‘ನಾನಾರ್ಥ ಪದಕೋಶ’ ಎಂಬ ಲೇಖನವು (ಅಭಿಜ್ಞಾನ, ೧೯೯೫) ನಾನಾರ್ಥ ಕೋಶದ ರಚನೆಗೆ ಸಂಬಂಧಿಸಿದಂತೆ ತಾತ್ವಿಕ ಚರ್ಚೆಯನ್ನು ಒಳಗೊಂಡಿದೆ ಹಾಗೂ ಆನುಷಂಗಿಕವಾಗಿ ಕನ್ನಡ ಕಾವ್ಯ ಮೀಮಾಂಸೆಯ ಐದು ಪದಗಳನ್ನು ಒಳಗೊಂಡ ಪ್ರಾಯೋಗಿಕ ನಾನಾರ್ಥ ಪದಕೋಶವನ್ನು ಅಳವಡಿಸಿದೆ. ನಾನಾರ್ಥ ಪದಕೋಶದ ರಚನಾ ವಿಧಾನ ಹಾಗೂ ಪ್ರಯೋಜನಗಳ ಬಗೆಗೂ ಲಕ್ಷ್ಯವಿರಿಸುತ್ತ ಚಿಂತನೆಯನ್ನು ಬೆಳೆಸಲಾಗಿದೆ.

ತೀ. ನಂ. ಶ್ರೀಕಂಠಯ್ಯನವರು ‘ಆಕ್ಸ್‌ಫರ್ಡ್‌ಇಂಗ್ಲಿಷ್‌ಡಿಕ್ಷನರಿ’ಯ ಬಗ್ಗೆ ಲೇಖನವನ್ನು ಬರೆದಿದ್ದಾರೆ (೧೯೮೫). ಎಸ್‌. ಎಸ್‌. ಅಂಗಡಿಯವರು ‘ಕನ್ನಡದಲ್ಲಿ ವೃತ್ತಿ ಪದಕೋಶಗಳು’ ಎಂಬ ಲೇಖನದಲ್ಲಿ (೧೯೯೫) ಕನ್ನಡದಲ್ಲಿ ಈವರೆಗೆ ಬಂದಿರುವ ವೃತ್ತಿಪದಕೋಶಗಳ ಸಮೀಕ್ಷೆಯನ್ನು ಮಾಡಿದ್ದಾರೆ. ಎನ್‌. ಬಸವರಾಧ್ಯರು ಮಿಶನರಿ ಕಾಲದ ಪ್ರಮುಖ ಕೋಶಕಾರರಾದ ರೀವ್‌, ಕಿಟೆಲ್‌, ಜೀಗ್ಲರ್‌ಇವರುಗಳ ನಿಘಂಟು ರಚನಾ ಕಾರ್ಯ ಹಾಗೂ ಆ ಕಾರ್ಯಕ್ಕೆ ಕೈಹಾಕುವ ಮೊದಲು ಅವರಿಗಿರುವ ಸಾಮಾಜಿಕ ಒತ್ತಡ ಇತ್ಯಾದಿಗಳನ್ನು ಕುರಿತು ಲೇಖನವನ್ನು ಬರೆದಿದ್ದಾರೆ (೧೯೯೧) ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ). ಎನ್‌. ಬಸವಾರಾಧ್ಯರು ‘ಕನ್ನಡ ನಿಘಂಟು ಕ್ಷೇತ್ರಕ್ಕೆ ತೀ. ನಂ. ಶ್ರೀಯವರ ಕೊಡುಗೆ’ ಎಂಬ ಲೇಖನದಲ್ಲಿ (ಶ್ರೀಕಂಠ ತೀರ್ಥ, ೧೯೭೬) ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ರಚನೆಯ ಪ್ರಥಮ ಸಂಪಾದಕ ಸಮಿತಿಯ ಅಧ್ಯಕ್ಷರಾಗಿ ತೀ.ನಂ.ಶ್ರೀಯವರು ಪಟ್ಟಶ್ರಮ, ಶ್ರದ್ಧೆಯನ್ನು ವಿವರಿಸಿ ತೀನಂಶ್ರೀಯವರ ಶಬ್ದಾರ್ಥ ವಿವೇಚನೆ, ಪ್ರಯೋಗಗಳನ್ನು ಸೂಚಿಸುವ ರೀತಿ, ವಿರಾಮ ಚಿಹ್ನೆಗಳ ಬಗೆಗೆ ಅವರಿಗಿರುವ ಶ್ರದ್ಧೆ ಮುಂತಾದ ಅಂಶಗಳ ಬಗೆಗೆ ನಿರೂಪಿಸಿದ್ದಾರೆ. ಆದರ್ಶ ನಿಘಂಟುಕಾರ ಯಾವ ರೀತಿಯಾಗಿರಬೇಕು ಎಂಬುದನ್ನು ಈ ಲೇಖನವು ತಿಳಿಸುತ್ತದೆ.

ಪಾದೇಕಲ್ಲು ವಿಷ್ಣುಭಟ್ಟರು ‘ತುಳುವಿನಲ್ಲಿ ನಿಘಂಟು ಕಾರ್ಯ’ ಎಂಬ ಲೇಖನದಲ್ಲಿ (ಸಾರ್ಥಕ, ೧೯೯೫) ತುಳು ಭಾಷೆಗೆ ಸೇರಿದ ಮೂರು ಕೋಶಗಳಾದ ಮ್ಯಾನರ್‌ತುಳು – ಇಂಗ್ಲಿಶ್‌ಕೋಶ, ಎಂ. ಮರಿಯಪ್ಪಭಟ್ಟ ಮತ್ತು ಎ. ಶಂಕರ ಕೇದಿಲಾಯರು ಜೊತೆ ಸೇರಿ ಸಂಪಾದಿಸಿದ ತುಳು – ಇಂಗ್ಲಿಶ್‌ಕೋಶ ಹಾಗೂ ಯು. ಪಿ. ಉಪಾಧ್ಯಾಯರ ಪ್ರಧಾನ ಸಂಪಾದಕತ್ವದಲ್ಲಿ ಹೊರಬರುತ್ತಿರುವ ತುಳು ನಿಘಂಟುಗಳು ಈ ಮೂರು ಕೋಶಗಳ ರಚನಾ ವಿಧಾನವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ಪ್ರೊ. ಎಂ. ಮರಿಯಪ್ಪ ಭಟ್ಟರು ಮತ್ತು ಎ. ಶಂಕರ ಕೇದಿಲಾಯರ ಜೊತೆ ಸೇರಿ ಸಂಪಾದಿಸಿದ ‘ತುಳು – ಇಂಗ್ಲಿಶ್‌ಶಬ್ದಕೋಶ’ದ ಬಗ್ಗೆ ಡಾ. ಕೆ. ಪದ್ಮನಾಭ ಕೇಕುಣ್ಣಾ ಅವರು ಲೇಖನವನ್ನು ಬರೆದಿದ್ದಾರೆ. (ಸಾರ್ಥಕ, ೧೯೯೫) ಈ ಕೋಶಕ್ಕೂ ಪೂರ್ವದಲ್ಲಿ ರಚಿತವಾದ ಮ್ಯಾನರ್‌ಕೋಶಕ್ಕೂ ಇದಕ್ಕೂ ಇರುವ ಸಾಮ್ಯ ವೈಷ್ಯಮಗಳು ಈ ಕೋಶದ ರಚನಾವಿಧಾನ, ಲಿಪ್ಯಂತರ, ವರ್ಣಾನುಕ್ರಮ ಇತ್ಯಾದಿಗಳ ಬಗ್ಗೆ ವಿವೇಚನೆ ಮಾಡಿದ್ದಾರೆ. ದ್ವಿಭಾಷಿಕ ಕೋಶವೊಂದನ್ನು ವಿಮರ್ಶಾತ್ಮಕವಾಗಿ, ತೌಲನಿಕವಾಗಿ ಪರಿಶೀಲನೆ ಮಾಡಲು ಈ ಲೇಖನ ಮಾದರಿಯಾಗಿದೆ. ಪ್ರೊ. ಮರಿಯಪ್ಪಭಟ್ಟರು ಲೇಖನವನ್ನು ಬರೆದಿದ್ದಾರೆ (೧೯೯೫ ಸಾರ್ಥಕ). ಇದರಲ್ಲಿ ೪,೭೦೦ ಹವ್ಯಕ ಶಬ್ದಗಳು ಎಡೆ ಪಡೆದಿವೆ. ಕನ್ನಡ ಭಾಷಾಭ್ಯಾಸದಲ್ಲಿ ಈ ಕೋಶ ತುಂಬ ನೆರವಾಗುತ್ತದೆ.

ಎಂ. ವಿ. ಸೀತಾರಾಮಯ್ಯ ಅವರ ‘ಶಾಸ್ತ್ರ ಸಾಹಿತ್ಯ’ ಎಂಬ ಗ್ರಂಥದಲ್ಲಿ ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರಗಳ ಬಗೆಗೆ ವಿವರಿಸಿ ಪ್ರಾಚೀನ ನಿಘಂಟುಗಳ ಬಗೆಗೆ ವಿವರಿಸಿದ್ದಾರೆ. ವಿಲ್ಯಂ ಮಾಡ್ತರವರ ‘ಫರ್ಡಿನಾಂಡ್‌ಕಿಟೆಲ್‌ಜೀವನ ಸಾಧನ ಕೋಶರಚನೆ (೧೯೯೪) ಎಂಬ ಗ್ರಂಥದಲ್ಲಿ ಎರಡು ಭಾಗಗಳಿವೆ. ಭಾಗ ಒಂದರಲ್ಲಿ ಕಿಟೆಲ್‌ಜೀವನ ಸಾಧನೆಯ ಬಗೆಗೆ ವಿವರಣೆಯಿದ್ದರೆ ಭಾಗ ಎರಡರಲ್ಲಿ ಕಿಟೆಲ್‌ಕೋಶದ ರಚನಾ ವಿಧಾನದ ಬಗೆಗೆ ಉದಾಹರಣೆ ಸಹಿತವಾಗಿ ನಿರೂಪಿಸಿದ್ದಾರೆ. ಕಿಟೆಲ್‌ಕೋಶವನ್ನು ರಚನಾ ಅಭ್ಯಸಿಸುವಾಗ ಇದು ತುಂಬ ನೆರವಾಗುತ್ತದೆ. ಎನ್‌. ಬಸವರಾಧ್ಯರು (೧೯೭೧) ‘ನಿಘಂಟು ಕ್ಷೇತ್ರಕ್ಕೆ ಕಿಟೆಲ್‌ರ ಕೊಡುಗೆ’ ಎಂಬ ಲೇಖನದಲ್ಲಿ (ಕನ್ನಡಕ್ಕೆ ಕಿಟೆಲ್‌ರ ಕೊಡುಗೆ) ಕಿಟೆಲ್‌ಕೋಶದ ಸ್ವರೂಪ, ಅವರ ಸಾಧನೆ ಇತ್ಯಾದಿ ವಿಷಯದ ಬಗೆಗೆ ಚರ್ಚಿಸಿದ್ದಾರೆ. ಕೆ. ಕೆಂಪೆಗೌಡರು (೧೯೮೮) ‘ಕೋಶವಿಜ್ಞಾನ’ ಎಂಬ ಲೇಖನದಲ್ಲಿ ಕೋಶದ ಅರ್ಥ, ಬಗೆಗಳು, ಕೋಶಗಳನ್ನು ರಚಿಸಿಕೊಳ್ಳುವ ವಿಧಾನದ ಬಗೆಗೆ ಲೇಖನವನ್ನು ಬರೆದಿದ್ದಾರೆ.

ಕನ್ನಡದಲ್ಲಿ ಈವರೆಗೆ ರಚಿತವಾದ ಎಲ್ಲ ಬಗೆಯ ನಿಘಂಟುಗಳಲ್ಲಿ ಅಭ್ಯಾಸ ಪೂರ್ಣವೂ ವಿಸ್ತಾರವೂ ಆದ ಪ್ರಸ್ತಾವನೆಗಳಿವೆ. ಅವು ನಿಘಂಟುಗಳ ಅಧ್ಯಯನಕ್ಕೆ ತುಂಬ ಸಹಾಯಕಾರಿಯಾಗುತ್ತವೆ.

ಕನ್ನಡದಲ್ಲಿ ಈವರೆಗೆ ಬಂದಿರುವ ನಿಘಂಟುಗಳನ್ನು ಸಿದ್ಧವಾಗಬೇಕಾದ ನಿಘಂಟುಗಳೊಡನೆ ಹೋಲಿಸಿ ನೋಡಿದಾಗ ಆಗಿರುವ ಕೆಲ ಕಡಿಮೆಯೆಂದೇ ಹೇಳಬೇಕು. ಬೇರೆ ಬೇರೆ ಜ್ಞಾನಕ್ಷೇತ್ರಗಳ ಸ್ಥೂಲ ಪರಿಚಯವಾಗಬೇಕಾದರೆ ವಿವರಣಾತ್ಮಕ ನಿಘಂಟುಗಳು ಅವಶ್ಯಕವಾಗಿವೆ. ಸಂಸ್ಕೃತಿ ಅಧ್ಯಯನಕ್ಕೆ ಸ್ಥಳನಾಮ, ವ್ಯಕ್ತಿನಾಮ, ಗ್ರಾಮೀಣ ಪದಕೋಶ, ಶಾಸನ ಶಬ್ದಕೋಶ, ಉಪಭಾಷಿಕ ಕೋಶಗಳು ನೆರವು ನೀಡುತ್ತವೆ. ಶಾಸ್ತ್ರಾಧ್ಯಯನಕ್ಕೆ ವ್ಯಾಕರಣ ಪರಿಭಾಷಾ ಕೋಶ, ಛಂದಶ್ಯಾಸ್ತ್ರ ಶಬ್ದಕೋಶ, ಪ್ರಕೋಶಗಳು ತುಂಬ ಅಗತ್ಯ. ಕೊನೆಯದಾಗಿ ಒಂದು ಮಾತನ್ನು ಹೇಳಲೇಬೇಕು. ನಿಘಂಟು ರಚನೆ ಕೂಡಿ ಮಾಡುವ ಸಾಂಸ್ಥಿಕ ಕೆಲಸವಾದ್ದರಿಂದ ಸರಕಾರದ ಅನುದಾನ ಪಡೆಯುವ ಸಂಸ್ಥೆಗಳಲ್ಲಿ ಉದಾ: ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಕಾಡೆಮಿಗಳಲ್ಲಿ ಖಾಯಂ ಆಗಿ ನಿಘಂಟು ನಿರ್ದೇಶನಾಲಯಗಳಿರಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನಿಘಂಟು ಇಲಾಖೆಯೆಂಬ ಪ್ರತ್ಯೇಕ ಶಾಖೆ ಅಸ್ತಿತ್ವಕ್ಕೆ ಬರಬೇಕು. ಅನುದಾನರಹಿತ ಸಂಸ್ಥೆಗಳು ನಿಘಂಟು ರಚಿಸಲು ಅಧ್ಯಯನಕ್ಕೆ ನಿಘಂಟುಗಳು ತಳಹದಿಯಿದ್ದಂತೆ ಹಾಗೂ ಅವು ಪ್ರಮುಖ ಆಕರ ಸಾಮಗ್ರಿಗಳಾಗುತ್ತವೆ. ನಿಘಂಟು ರಚನೆಯಲ್ಲಿ ಹೊಸ ದೃಷ್ಟಿಕೋನಗಳು ಮೂಡಿ ಬಗೆ ಬಗೆಯ ಕೋಶಗಳು ಸಿದ್ಧವಾಗಬೇಕಾಗಿವೆ.