ಪ್ರಪಂಚದಲ್ಲಿ ಮಾನವ ಅತ್ಯಂತ ಮುಂದುವರೆದ ಪ್ರಾಣಿಯಾಗಿದ್ದಾನೆ. ಪ್ರಾಣಿಗಳಿಂದ ಮಾನವನನ್ನು ಪ್ರತ್ಯೇಕಿಸುವ ಪ್ರಮುಖವಾದ ಅಂಶವೆಂದರೆ ಭಾಷೆ. ಹಿಂದೆ ಮಾನವನನ್ನು ಆಲೋಚನಾ ಸಾಮರ್ಥ್ಯವುಳ್ಳ ಪ್ರಾಣಿಯೆಂದು ಕರೆಯುತ್ತಿದ್ದರು. ಆದರೆ ಅದಕ್ಕಿಂತಲೂ ಹೆಚ್ಚು ಪ್ರಧಾನವಾದುದು ಮಾತನಾಡುವ ಶಕ್ತಿ. ಭಾಷೆಯಿಂದಲೆ ಮಾನವ ತನ್ನ ಜನನದಿಂದ ಮೊದಲುಗೊಂಡು ತಲೆತಲಾಂತರವಾಗಿ ಅನುಕೂಲಗಳನ್ನು ಸಾಧಿಸಿಕೊಂಡು ಪ್ರಗತಿ ಪಥದಲ್ಲಿ ಮುಂದುವರೆದಿದ್ದಾನೆ. ಮಾನವ ಭಾಷೆಯು ಸ್ವರ, ವ್ಯಂಜನ, ಪದ, ಪದಪುಂಜ, ವಾಕ್ಯಗಳಿಂದ ರಚನೆಯಾಗಿದೆ. ಮಾನವನ ಭಾಷೆಯ ಸ್ವರೂಪವನ್ನು ಕುರಿತಾದ ವೈಜ್ಞಾನಿಕ ಅಧ್ಯಯನವೇ. ಭಾಷಾವಿಜ್ಞಾನ ಭಾಷಾವಿಜ್ಞಾನದ ಹಲವು ಶಾಖೆಗಳಲ್ಲಿ ನಿಘಂಟು ರಚನೆಯೂ ಒಂದಾಗಿದೆ.

ಅನೇಕ ನಿಘಂಟುಕಾರರು ನಿಘಂಟುವಿನ ಬಗೆಗೆ ಚಿಂತಿಸಿ ನಿಘಂಟು ಎಂದರೇನು? ಅದರ ಸ್ವರೂಪವೇನು? ಎಂಬುದರ ಬಗ್ಗೆ ತಮಗೆ ತಿಳಿದಂತೆ ಹೇಳಲು ಯತ್ನಿಸಿದ್ದಾರೆ. ಕೆಲವರ ವಾಕ್ಯಗಳನ್ನು ಇಲ್ಲಿ ಕೊಡಲಾಗಿದೆ.

‘ಒಂದು ಭಾಷಾ ಸಮುದಾಯದಲ್ಲಿನ ಸ್ವತಂತ್ರ ಭಾಷಾ ರೂಪಗಳನ್ನು ಆರಿಸಿಕೊಂಡು ಪ್ರತಿಯೊಂದು ಪದದ ಉಚ್ಚಾರ, ವ್ಯಾಕರಣಾಂಶ, ನಿಷ್ಪತ್ತಿ ಇತ್ಯಾದಿ ಅಂಶಗಳನ್ನು ಅನುಲಕ್ಷಿಸಿ ಮೂಲರೂಪ ಮತ್ತು ಸಮಸ್ತ ರೂಪಗಳನ್ನು ವ್ಯವಸ್ಥಿತವಾಗಿ (ಅಕಾರಾದಿಯಾಗಿ) ಸಂಯೋಜಿಸಿಕೊಳ್ಳುವುದೇ ನಿಘಂಟು.’[1] ಎಸ್‌.ಎಂ.ಕತ್ರೆ

‘ಒಂದು ಭಾಷೆಯಲ್ಲಿನ ಎಲ್ಲ ಶಬ್ದಗಳ ಅರ್ಥ, ಅವುಗಳ ವ್ಯಾಕರಣ ಅನುಶಾಸನಗಳ ಕಾರ್ಯ, ವುತ್ಪತ್ತಿ, ವಾಕ್ಯರಚನೆಯ ಪ್ರಭೇದಗಳು ಉಚ್ಚಾರಣೆ, ಪ್ರಚಲಿತ ಹಾಗೂ ಸಂದರ್ಭೋಚಿತ ಅರ್ಥ, ಸಮಾನಾರ್ಥ ವ್ಯತಿರಿಕ್ತಾರ್ಥ, ಪೂರ್ವಗ್ರಂಥಗಳಲ್ಲಿ ಉಪಯೋಗವಾಗಿರುವ ಅರ್ಥ ಚಿತ್ರಣ ಇವುಗಳನ್ನು ತಿಳಿಸುವ ಅಕಾರಾದಿ ಪದಗಳನ್ನೊಳಗೊಂಡ ಕೃತಿಗೆ ನಿಘಂಟು ಎಂದು ಹೆಸರು’.[2]ಕೆ. ನಾರಾಯಣ

ನಿಘಂಟು ಮತ್ತು ಕೋಶಗಳ ಸಾಮ್ಯತೆಯ ಬಗ್ಗೆ ಜಿ. ವೆಂಕಟಸುಬ್ಬಯ್ಯ ಅವರು ಹೀಗೆ ಬರೆದಿದ್ದಾರೆ. ‘ನಿಘಂಟು – ಕೋಶ ಈ ಎರಡು ಶಬ್ದಗಳಿಗೂ ಒಂದೇ ಅರ್ಥ. ಆದರೆ ನಿಘಂಟು ಎಂಬುದು ವೇದಗಳಲ್ಲಿರುವ ಶಬ್ದಗಳಿಗೆ ಅರ್ಥ ಹೇಳುವ ಮೊದಲ ಪ್ರಯತ್ನಕ್ಕೆ ಇಟ್ಟ ಹೆಸರು. ನಿಘಂಟು ಶಬ್ದಕ್ಕೆ ‘ಯಸ್ಮಾ ದರ್ಥಾನ್ನಿಘಂಟಯತಿ ತಸ್ಮಾನಿಘಂಟು:’ ಎಂದು ವ್ಯಾಡಿ ಎಂಬ ನಿಘಂಟುಕಾರ ವಿವರಿಸುತ್ತಾನೆ. ಅರ್ಥವನ್ನು ನಿರ್ಧಾರವಾಗಿ ತಿಳಿಸುವುದರಿಂದ ಅವಕ್ಕೆ ನಿಘಂಟು ಎಂದು ಹೆಸರು. ಆ ವ್ಯಾಖ್ಯಾನಕ್ಕೆ ಅರ್ಥ ಮೊದಲು ವೇದಗಳಲ್ಲಿಯೂ ನಿಗೂಢಾರ್ಥದ ಪಟ್ಟಿಗೆ ಮೊದಲು ನಿಘಂಟು ಎಂಬ ಹೆಸರು ಅನ್ವರ್ಥವಾಯಿತು. ಇತರ ಶಬ್ದಗಳ ಪಟ್ಟಿಗಳಿಗೆ ಅರ್ಥ ಹೇಳುವ ರಚನೆಗಳಿಗೆ ಕೋಶ ಎಂದು ಹೆಸರು ಬಂತು. ಸಂಸ್ಕೃತದಲ್ಲಿ ಕೋಶ – ಕೋಷ ಎಂಬ ಎರಡೂ ರೂಪಗಳಿವೆ. ಎರಡು ಸರಿಯಾದುವೇ. ಕೋಶ ಶಬ್ದವು ಕುಕ್ಷಿ ಅಥವಾ ಕೋಷ್ಠ ಎಂಬುದರಿಂದ ಬಂದಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಕೋಶಕ್ಕೆ ಮೊದಲು ಅರ್ಥ ಬೊಕ್ಕಸು, ಖಜಾನೆ ಎಂದು. ಬಳಿಕ ಶಬ್ದಗಳ ಬೊಕ್ಕಸವಾದ ನಿಘಂಟಿಗೂ ಕೋಶ ಎಂಬುದು ಪ್ರಯೋಗವಾಗುತ್ತಾ ಬಂತು. ನಿಘಂಟಿಗೆ ನಿಘಂಟುಕ ಎಂಬ ಪರ್ಯಾಯ ರೂಪವೂ ಇದೆ. ಕನ್ನಡದಲ್ಲಿ ಬಂಡಾರ, ಭಂಡಾರ ಎಂಬ ಶಬ್ದಗಳಿವೆ. ನಿಘಂಟಿಗೆ ಶಬ್ದಭಂಡಾರವೆಂದು ಕರೆಯಬಹುದು. ಈ ಭಂಡಾರ ಎಂಬುದು ಸಂಸ್ಕೃತದ ಭಾಂಡಾಗಾರ ಎಂಬುದರಿಂದ ಬಂದುದು. ಭಂಡಾರ ಎಂಬುದಕ್ಕೂ ಕೋಶ ಎಂದೇ ಅರ್ಥ.’[3]

ನಿಘಂಟು ಮತ್ತು ಕೋಶಗಳು ಒಂದೇ ಅರ್ಥದಲ್ಲಿ ಬಳಕೆಯಾಗುತ್ತವೆ. ಅವುಗಳಿಗೆ ಪರ್ಯಾಯವಾಗಿ ನಾಮಮಾಲಾ, ಶಬ್ದಾರ್ಣವ, ಶಬ್ದಮಾಲಾ, ಶಬ್ದಾವಳಿ, ಅಭಿಧಾನ, ಅಭಿಧಾನಕೋಶ, ಅಭಿಧಾನಮಾಲೆ, ಕಲ್ಪತರು ಇತ್ಯಾದಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದೆ.

ಒಟ್ಟಾರೆಯಾಗಿ ನಿಘಂಟು ಎಂದರೆ ಭಾಷೆಯ ಎಲ್ಲ ಶಬ್ದಗಳನ್ನು ವ್ಯವಸ್ಥಿತವಾಗಿ ಪಟ್ಟಿ ಮಾಡಿ ಆ ಶಬ್ದಗಳ ಅರ್ಥವನ್ನು ಒಮದು ಕ್ರಮದಲ್ಲಿ ಜೋಡಿಸಿ ಅವುಗಳಿಗೆ ಸರಿ ಹೊಂದುವ ಪ್ರಾಚೀನ ಹಾಗೂ ನವೀನ ಪ್ರಯೋಗಗಳನ್ನು ಉಲ್ಲೇಖಿಸಿ ಆ ಶಬ್ದದ ವ್ಯಾಕರಣ ವಿವರಗಳನ್ನು ಸೇರಿಸಿ ಪದಗಳನ್ನು ಅಕಾರಾದಿಯಾಗಿ ಜೋಡಿಸಿರುವ ಪುಸ್ತಕ. ಅದರಲ್ಲಿಯ ಮುಖ್ಯೋಲ್ಲೇಖ ಮಾನವ ಜೀವನದ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ ಎಂಬುದನ್ನೂ ಇತರ ವಿವರಗಳನ್ನೂ ಆ ಶಬ್ದದ ಅಡಿಯಲ್ಲಿ ನೀಡಿರುತ್ತದೆ. ಸ್ಥೂಲವಾಗಿ ನಿಘಂಟು ಎಂದರೆ ಇಷ್ಟನ್ನು ಹೇಳಬಹುದು. ಇದರ ಜೊತೆಗೆ ಆ ಶಬ್ದಗಳ ಕಾಗುಣಿತ, ಉಚ್ಛಾರಣೆ, ಅವುಗಳ ಸಮಾನಾರ್ಥ ಮತ್ತು ವಿರುದ್ಧಾರ್ಥಕ ಶಬ್ದಗಳು ಅವುಗಳ ವ್ಯುತ್ಪತ್ತಿ, ಜ್ಞಾತಿ ಶಬ್ದಗಳು ಮತ್ತು ಅವುಗಳ ಚರಿತ್ರೆ ಇತ್ಯಾದಿಗಳನ್ನು ಸೇರಿಸಿರುವ ಅರ್ಥವತ್ತಾದ ಸ್ವತಂತ್ರ ಭಾಷಾ ಘಟಕಗಳು ನಿಘಂಟುವಿನಲ್ಲಿರುತ್ತವೆ.

ನಿಘಂಟುವಿನಲ್ಲಿ ಬಳಕೆಯಾಗುವ ಶಬ್ದಗಳಲ್ಲಿ ಅರ್ಥ ಇರುವುದಿಲ್ಲ. ಶಬ್ದಗಳು ಕಾಲ, ದೇಶ, ಪರಿಸರ ಹಾಗೂ ಸಂಸ್ಕೃತಿಗಳಿಂದ ಅರ್ಥವನ್ನು ಪಡೆದುಕೊಳ್ಳುತ್ತವೆ. ಒಂದು ಶಬ್ದಕ್ಕೆ ಒಂದು ಅರ್ಥ ರೂಢಿಗತವಾಗಿ ಪ್ರಾಪ್ತವಾಗುತ್ತದೆ. ಒಂದು ವಸ್ತು, ವಿಚಾರ, ಭಾವನೆಯನ್ನು ಇದೇ ಧ್ವನಿ ಮೊತ್ತದಿಂದ ಗುರುತಿಸಬೇಕೆಂಬ ಸಾರ್ವತ್ರಿಕ ನಿಯಮವೇನೂ ಇಲ್ಲ. ಅವು ಒಂದು ಸಮೂಹದ ಭಾಷಾವಲಯದ ಜನರ ಇಚ್ಛೆಯನ್ನವಲಂಬಿಸಿ ಬಳಕೆಯಾಗುತ್ತವೆ. ವಸ್ತು ಒಂದೇ ಆದರೂ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಧ್ವನಿ ಮೊತ್ತದಿಂದ ಅದು ಗುರುತಿಸಲ್ಪಡುತ್ತದೆ. ಉದಾಹರಣೆ – ಒಂದು ಪ್ರಾಣಿ ಕನ್ನಡ ಭಾಷಿಕರಲ್ಲಿ ‘ಬೆಕ್ಕು’ ಎಂದಾದರೆ ಇಂಗ್ಲಿಶ್ ಭಾಷಿಕರಲ್ಲಿ ‘ಕ್ಯಾಟ್’ ಎಂದಾಗುತ್ತದೆ. ಅಂದರೆ ಶಬ್ದಗಳು ಯಾದೃಚ್ಛಿಕವಾಗಿ ಸಾಮಾಜಿಕ ಒಪ್ಪಂದವಾಗಿ ಬಳಕೆಯಾಗುತ್ತವೆ. ನಿಘಂಟುಗಳಲ್ಲಿ ಮೂಲರೂಪ ಮತ್ತು ಸಾಧಿತರೂಪಗಳು ಮಾತ್ರ ಇರಬೇಕು. (ಉದ: ಕಲ್ಲು, ಕಗ್ಗಲ್ಲು) ಆದರೆ ಪದಪುಂಜಗಳಿರಬಾರದು. (ಬೆಂಕಿಪೆಟ್ಟಿಗೆ) ಏಕೆಂದರೆ ಪದಪುಂಜಗಳಿಗೆ ಕೊನೆ ಇರುವುದಿಲ್ಲ ಎಂಬುದನ್ನು ಗಮನಿಸಬೇಕು.

ನಿಘಂಟುಶಾಸ್ತ್ರವು ಆನ್ವಯಿಕ ಭಾಷಾವಿಜ್ಞಾನದ ಶಾಖೆಯಾಗಿದೆ. ಅವೆರಡು ಪರಸ್ಪರ ಪೂರಕವಾಗಿವೆ. ನಿಘಂಟುಶಾಸ್ತ್ರವು ಪದಗಳ ವಿವೇಚನೆ ಹಾಗೂ ಅವುಗಳ ವೈಜ್ಞಾನಿಕ ಅಧ್ಯಯನಕ್ಕೆ ಒತ್ತು ಕೊಡುತ್ತದೆ. ಭಾಷಾಶಾಸ್ತ್ರವು ಒಂದು ಭಾಷೆಯ ರಚನೆ ಹಾಗು ಬೇರೆ ಬೇರೆ ಸಾಮಾಜಿಕ ಸಂದರ್ಭದಲ್ಲಿ ಭಾಷಾ ಬಳಕೆಯ ರೀತಿ ಮುಂತಾದ ಅಂಶಗಳಿಗೆ ಒತ್ತು ಕೊಡಲಾಗುವುದು. ಒಂದು ಭಾಷೆ ಹಾಗೂ ಭಾಷಾ ಪ್ರಭೇದಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವಾಗ ಅವು ಪ್ರಮುಖ ಪಾತ್ರವಹಿಸುತ್ತವೆ.

ನಿಘಂಟುವಿಗೆ ಸಂಬಂಧಪಟ್ಟಂತೆ ಎರಡು ಮುಖ್ಯ ವಿಭಾಗಗಳನ್ನು ಗುರುತಿಸಲಾಗಿದೆ. ನಿಘಂಟುಶಾಸ್ತ್ರ, ನಿಘಂಟು ರಚನೆ ಇವುಗಳಲ್ಲಿ ಮೊದಲನೆಯದು ನಿಘಂಟುಗಳಿಗೆ ಸಂಬಂಧಿಸಿದ ಮೂಲತತ್ವಗಳನ್ನು ವೈಜ್ಞಾನಿಕವಗಿ ನಿರೂಪಿಸಲಾಗುತ್ತದೆ. ಎರಡನೆಯದು ನಿಘಂಟು ರಚನೆಯ ಕ್ರಮವನ್ನು ವಿವರಿಸಲಾಗುತ್ತದೆ. ನಿಘಂಟುಶಾಸ್ತ್ರ ಎಲ್ಲ ಭಾಷೆಗಳಿಗೆ ಸಂಬಂಧಪಟ್ಟಿದ್ದು, ನಿಘಂಟುರಚನೆ ಒಂದು ನಿರ್ದಿಷ್ಟ ಭಾಷೆಗೆ ಮಾತ್ರ ಸಂಬಂಧಪಟ್ಟಿರುತ್ತದೆ. ‘ಒಂದು ಭಾಷೆಯನ್ನು ಆಡು ಜನರು ವಾಸಿಸುವ ಪ್ರದೇಶದಲ್ಲಿ ಮೈತಳೆಯುವ ಸಾಮಾಜಿಕ, ರಾಜಕೀಯ ಮತ್ತು ಮತೀಯ ಬೆಳವಣಿಗೆಗಳಿಂದ ಅನೇಕ ಹೊಸ ಶಬ್ದಗಳು ಸೃಷ್ಟಿಯಾಗುತ್ತಿವೆ. ವಿಜ್ಞಾನದ ಪ್ರಗತಿ, ಕೈಗಾರಿಕೆಗಳ ಪ್ರಭಾವ, ಯಂತ್ರ – ತಂತ್ರಗಳ ವ್ಯಾಪಕವಾದ ಉಪಯೋಗ ಇವುಗಳಿಂದಲೂ ಶಬ್ದ ಜಾಲ ಬೆಲೆಯುತ್ತದೆ. ಅವೆಲ್ಲ ನಿಘಂಟುಶಾಸ್ತ್ರದ ಕಕ್ಷೆಯಲ್ಲಿ ಬರುತ್ತವೆ. ಒಂದು ಭಾಷೆಯಲ್ಲಿರುವ ಶಬ್ದ ಸಮೂಹವೆಲ್ಲ ಆ ಭಾಷೆಯ ಶಬ್ದ ವ್ಯವಸ್ಥೆಗೆ ಒಳಗಾದದ್ದು. ಪ್ರತಿಯೊಂದು ಶಬ್ದಕ್ಕೂ ಒಂದು ಅರ್ಥವಿದೆ. ಉಚ್ಚಾರಣೆಯಿದೆ, ಚರಿತ್ರೆಯಿದೆ. ನಿಘಂಟುಶಾಸ್ತ್ರವು ಶಬ್ದದ ಎಲ್ಲ ಮುಖಗಳನ್ನು ಅಭ್ಯಸಿಸುತ್ತದೆ.’[4] ನಿಘಂಟುಶಾಸ್ತ್ರ ಮತ್ತು ನಿಘಂಟುರಚನೆ ಇವೆರಡು ಭಾಷೆಯ ಅಧ್ಯಯನದಲ್ಲಿ ತುಂಬ ನೆರವಾಗುತ್ತವೆ.

ನಿಘಂಟುರಚನೆಗೆ ಭಾಷಾಶಾಸ್ತ್ರವು ತುಂಬ ಸಹಾಯಕವಾಗಿದೆ. ಶಬ್ದಗಳ ಆಯ್ಕೆಯಿಂದ ಹಿಡಿದು ಅವುಗಳ ಅರ್ಥ ನಿರ್ಣಯ, ಅರ್ಥಗಳ ಅನುಕ್ರಮ, ಜ್ಞಾತಿ ಶಬ್ದಗಳ ಉಲ್ಲೇಖ ಮತ್ತು ಅರ್ಥ ನಿರೂಪಣೆಯ ಮಾರ್ಗ ಇತ್ಯಾದಿಗಳಲೆಲ್ಲ ಭಾಷಾಶಾಸ್ತ್ರದ ವಿವಿಧ ಜ್ಞಾನ ಶಾಖೆಗಳು ಕೋಶಕಾರನಿಗೆ ನೆರವು ನೀಡುತ್ತವೆ. ಉದಾ: ಒಂದು ಸಮುದಾಯದ ಭಾಷೆಯನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ನಿಘಂಟಿಮಗಳನ್ನು (ನಮೂದುಗಳು) ಆಯ್ಕೆ ಮಾಡುವಾಗ ಕ್ಷೇತ್ರ ಭಾಷಾಶಾಸ್ತ್ರವು, ಪದಗಳ ವ್ಯುತ್ಪತ್ತಿಗೆ ತೊಡುವಾಗ ಐತಿಹಾಸಿಕ ಭಾಷಾಶಾಸ್ತ್ರವು, ಕ್ಷೇತ್ರ ಭಾಷಾ ಸಮುದಾಯದಲ್ಲಿಯ ನುಡಿಗಟ್ಟು, ಗಾದೆ, ಒಗಟುಗಳನ್ನು ಶೋಧಿಸಿ ಅವುಗಳ ಬಳಕೆಯನ್ನು ಅನುಲಕ್ಷಿಸಿ ಅವುಗಳ ಸಾಂಸ್ಕೃತಿಕ ಮಹತ್ವವನ್ನು ಹೇಳುವಾಗ ಸಾಮಾಜಿಕ ಭಾಷಾಶಾಸ್ತ್ರವು ಕೋಶಕಾರನಿಗೆ ನೆರವಾಗುತ್ತವೆ. ಅದರಂತೆ ಒಂದು ಸಮುದಾಯದ ಭಾಷೆಯ ಅಧ್ಯಯನಕ್ಕೆ ನಿಘಂಟುಗಳು ಭಾಷಾಶಾಸ್ತ್ರಜ್ಞರಿಗೆ ನೆರವಾಗುತ್ತದೆ. ಭಾಷಾ ಸಮುದಾಯವು ಅನೇಕ ಪದಗಳನ್ನು, ಪದಪುಂಜಗಳನ್ನು ಭಾಷಾ ಸಂಶೋಧಕನಿಗೆ ಕೊಡುತ್ತವೆ.

ನಿಘಂಟು ರಚನೆಯಲ್ಲಿ ಭಾಷಾಶಾಸ್ತ್ರದ ತಿಳಿವಳಿಕೆ ಅನಿವಾರ್ಯವೆನಿಸುತ್ತದೆ. ಏಕೆಂದರೆ ಭಾಷಾಶಾಸ್ತ್ರಜ್ಞ ಭಾಷೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತಾನೆ. ಭಾಷಾಶಾಸ್ತ್ರಜ್ಞ ಭಾಷಾಧ್ವನಿಗಳ ಸ್ವರಾಘಾತ, ಸನ್ನಿಕರ್ಷ ಇವುಗಳನ್ನು ಸರಿಯಾಗಿ ನಿಗದಿಪಡಿಸಬಲ್ಲ. ಭಾಷಾ ಪ್ರಭೇದಗಳ ರಚನೆಯನ್ನು ಸರಿಯಾಗಿ ಗುರುತಿಸಬಲ್ಲ. ಭಾಷೆಯಲ್ಲಿಯ ಧ್ವನಿಮಾ, ಅಕೃತಿಮಾ ಇವುಗಳ ಪುನಾರಚನೆ ಭಾಷಾಶಾಸ್ತ್ರದ ಒಂದು ಅಂಗವಾಗಿರುವುದರಿಂದ ಪದಗಳ ವ್ಯುತ್ಪತ್ತಿಯನ್ನು ವೈಜ್ಞಾನಿಕವಾಗಿ ಭಾಷಾವಿಜ್ಞಾನಿ ನಿರ್ದೇಶಿಸಬಲ್ಲ. ವ್ಯಾಕರಣದ ವಿವರಗಳನ್ನು ಮತ್ತು ವಾಕ್ಯರಚನೆಯ ವೈಶಿಷ್ಟ್ಯವನ್ನು ತಿಳಿಸಬಲ್ಲ. ನಿಘಂಟುವಿನ ತಯಾರಿಕೆಯಲ್ಲಿ ಈ ಎಲ್ಲ ದೃಷ್ಟಿಯಿಂದ ಭಾಷಾಶಾಸ್ತ್ರದ ಅನಿವಾರ್ಯತೆ ಕಂಡುಬರುತ್ತದೆ.

ಸಾಮಾಜಿಕ ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ಒಂದು ಸಮುದಾಯದ ಭಾಷೆಯನ್ನು ವಿಶ್ಲೇಷಿಸುವಾಗ ಒಂದು ಶಬ್ದಕ್ಕೆ ಒಂದು ಅರ್ಥ ಇದ್ದರೆ ಆ ಅರ್ಥವೂ ಸರ್ವಕಾಲಕ್ಕೂ ಒಂದೇ ಆಗಿರುವುದಿಲ್ಲ. ಸಂದರ್ಭಾನುಸಾರವಾಗಿ ಶಬ್ದದ ಅರ್ಥಗಳಲ್ಲಿ ವ್ಯತ್ಯಾಸಗಳುಂಟಾಗುತ್ತವೆ. ಆದುದರಿಂದ ಪ್ರತಿಯೊಂದು ಶಬ್ದದ ವ್ಯುತ್ಪತ್ತಿ, ಅದು ಬದಲಾವಣೆ ಹೊಂದಿದ ಬೇರೆ ಬೇರೆ ರೂಪಗಳು, ಸದ್ಯದಲ್ಲಿ ಅದು ಹೊಂದಿರುವ ರೂಪ, ಮಿಕ್ಕ ಶಬ್ದಗಳ ಜೊತೆಯಲ್ಲಿ ಹೋಲಿಸಿದರೆ ಕಂಡುಬರುವ ಸಾಮ್ಯ – ವೈಷಮ್ಯಗಳು ಮುಂತಾದವುಗನ್ನೆಲ್ಲ ಅಭ್ಯಾಸ ಮಾಡಬೇಕಾಗುತ್ತದೆ. ಕೆಲವು ವೇಳೆ ಒಂದೊಂದು ಶಬ್ದ ಬಿಡಿಯಾಗಿ ಪ್ರಯೋಗಗಳಲ್ಲಿ ದೊರೆಯದೆ ಹೋಗಬಹುದು. ಆಗ ಆ ಸಮುದಾಯದಲ್ಲಿ ಕಂಡು ಬರುವ ಗಾದೆ, ಒಗಟು ಹಾಗೂ ನುಡಿಗಟ್ಟುಗಳಲ್ಲಿ ಅದರ ಸುಳಿವು ಕಾಣಬರುತ್ತದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ನಿಘಂಟು ಮತ್ತು ಭಾಷಾಶಾಸ್ತ್ರದ ಜ್ಞಾನ ಅವಶ್ಯವಾಗಿ ಬೇಕಾಗುತ್ತದೆ. ಕೋಶಕಾರರು ಭಾಷೆಯ ಪದಗಳನ್ನು ಮುಖ್ಯವಾಗಿ ಗಣನೆಗೆ ತೆಗೆದುಕೊಂಡರೆ ಭಾಷಾಶಾಸ್ತ್ರಜ್ಞರು ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಭಾಷೆಯಲ್ಲಿನ ಶಬ್ದ ಪ್ರಯೋಗಗಳನ್ನು, ಪ್ರಾದೇಶಿಕ ವೈಶಿಷ್ಟ್ಯತೆಗಳನ್ನು ಕೂಲಂಕುಷವಾಗಿ ವಿಶ್ಲೇಷಿಸಿ ನಿಘಂಟುವಿನ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ.

ನಿಘಂಟುಶಾಸ್ತ್ರ ಒಂದು ಮಹತ್ವದ ಅಧ್ಯಯನ ಶಾಖೆ, ಶ್ರಮವಹಿಸಿ ಮಾಡುವ ಈ ಅಧ್ಯಯನದಿಂದ ಪ್ರಯೋಜನವೇನು? ವ್ಯಕ್ತಿಗೆ ಬೇಕಾಗಿರುವುದು ಒಂದೋ ಎರಡೋ ನಿಘಂಟುಗಳು ಅವನು ಬೆಳೆದ ಪರಿಸರಕ್ಕೆ ತಕ್ಕಂತೆ ಅದೇ ವ್ಯಕ್ತಿ ತಾನಾಡುವ ಭಾಷೆಯ ಸ್ವರೂಪವನ್ನು, ತನ್ನ ಭಾಷೆಯಲ್ಲಿನ ಸಾಹಿತ್ಯವನ್ನು ಚೆನ್ನಾಗಿ ತಿಳಿದುಕೊಳ್ಳಬೇಕೆಂದು ಬಯಸಿದರೆ ನಿಘಂಟುಶಾಸ್ತ್ರ ಹಾಗೂ ಅದರ ಕಕ್ಷೆಯಲ್ಲಿ ಬರುವ ವ್ಯಾಕರಣ, ಭಾಷಾವಿಜ್ಞಾನವನ್ನು ಕಲಿಯಬೇಕಾಗುತ್ತದೆ. ಇದರಿಂದ ಅವನ ಬುದ್ಧಿ ಬಲ ಅಧಿಕವಾಗುತ್ತದೆ. ಸಾಹಿತ್ಯದ ಅರ್ಥ ಹೆಚ್ಚು ಪರಿಷ್ಕಾರವಾಗಿ ರಸಾನುಭವಕ್ಕೆ ಸಹಾಯಕವಾಗುತ್ತದೆ. ಹೀಗೆ ಅವನ ಭಾವ ಬುದ್ಧಿಗಳ ಬೆಳವಣಿಗೆ ಸಮತೂಕದಲ್ಲಿ ನಡೆಯುವಂತಾಗುತ್ತದೆ. ಅವನ ವ್ಯಕ್ತಿತ್ವ ಅರಳುವಂತಾಗುತ್ತದೆ. ವ್ಯಾಕರಣ, ಛಂದಸ್ಸು, ಅಲಂಕಾರ, ಶಬ್ದಾರ್ಥ ನಿರ್ಣಯ ವಿಧಾನ ಇಲ್ಲವೆ ಸಾಹಿತ್ಯಾಭ್ಯಾಸಕ್ಕೆ ನೆರವಾಗುವ ಶಾಸ್ತ್ರಾಂಶಗಳು. ವಿಸ್ತಾರವಾಗಿರುವ ಭಾಷಾವಿಜ್ಞಾನ ಕಕ್ಷೆಯಲ್ಲಿ ಇವೆಲ್ಲ ಅಂತರ್ಗತವಾಗಿರುತ್ತವೆ.

ಒಂದು ಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಶಬ್ದಗಳನ್ನು ಒಂದೆಡೆ ಒದಗಿಸಿಕೊಡುವುದು ನಿಘಂಟುವಿನ ಮುಖ್ಯ ಉದ್ದೇಶ. ಅದರಂತೆ ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಒಂದು ಪದವನ್ನು ನಿರ್ದೇಶಿಸುವುದರ ಮೂಲಕ ಭಾಷಾ ಏಕರೂಪತೆಯನ್ನು ಕಾಪಾಡಿಕೊಳ್ಳುವುದು. ಮಾನವನ ಜ್ಞಾನ ವಿಕಾಸಕ್ಕೆ ಕಾವ್ಯ, ಶಾಸ್ತ್ರ, ಪುರಾಣಾದಿಗಳು ಎಷ್ಟು ಅವಶ್ಯಕವೋ ನಿಘಂಟು ಅಷ್ಟೇ ಅವಶ್ಯಕ. ಆದುದರಿಂದಲೇ ನಮ್ಮ ಪ್ರಾಚೀನರು ನಿಘಂಟನ್ನು ಒಂದು ಶಾಸ್ತ್ರವಾಗಿ ಪರಿಗಣಿಸಿ ಅದಕ್ಕೆ ವಿಶೇಷ ಮಾನ್ಯತೆಯನ್ನು ಕೊಟ್ಟಿದ್ದರು. ಪ್ರಾಚೀನ ನಿಘಂಟುಗಳೆಲ್ಲಾ ಬಹುಮಟ್ಟಿಗೆ ಛಂದೋಬದ್ಧವಾಗಿ ಪದ್ಯ ರೂಪದಲ್ಲಿರುವುದರಿಂದ ಅವುಗಳನ್ನು ಕಂಠಪಾಠ ಮಾಡಲು ಸುಲಭವಾಗುತ್ತಿತ್ತು. ಪ್ರಾಚೀನ ಕಾಲದಿಂದಲೂ ಜನ ನಿಘಂಟುವಿನ ಪ್ರಯೋಜನವನ್ನು ಕಂಡುಕೊಂಡಿದ್ದರು. ಆದುದರಿಂದಲೇ ಇದು ಜೀವಂತ ಶಾಸ್ತ್ರವಾಗಿ ಇಂದಿಗೂ ಉಳಿದುಕೊಂಡು ಬಂದಿದೆ. ಮಾನವನ ಜ್ಞಾನ ಪರಿಪೂರ್ಣತೆಗೆ ಉಳಿದ ಎಲ್ಲಾ ಜ್ಞಾನ ಶಾಖೆಗಳಿಗಿಂತಲೂ ನಿಘಂಟು ಬಹುಮುಖ್ಯವಾದುದು. ಆದುದರಿಂದಲೇ ‘ಕೋಶ ಓದು; ದೇಶ ನೋಡು’ ಎಂಬ ಗಾದೆ ಇಂದಿಗೂ ಮನೆಮಾತಾಗಿದೆ.

ನಿಘಂಟುಗಳಿಂದ ಆಗುವ ಪ್ರಯೋಜನಗಳು ಅಪಾರ, ಭಾಷೆಯ ವಿಚಾರದಲ್ಲಿ ಸ್ವಂತ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು, ಭಾಷಾ ಪ್ರಭೇದಗಳ ವೈಶಿಷ್ಟ್ಯತೆಗಳನ್ನು ಅರಿತುಕೊಳ್ಳಲು ಧರ್ಮ, ಸಮಾಜ, ಕಲೆ, ಕೃಷಿ ಮುಂತಾದ ಸಂದರ್ಭದಲ್ಲಿ ಬರುವ ಪದಗಳನ್ನು ಕಲೆಹಾಕಿ ಕೋಶಗಳನ್ನು ರಚಿಸುವುದರಿಂದ ಒಂದು ಸಮುದಾಯದ ಸಾಂಸ್ಕೃತಿಕ ವೈಶಿಷ್ಟ್ಯತೆಗಳನ್ನು ಗುರುತಿಸಲು ಸಹಾಯಕವಾಗುತ್ತದೆ. ಅನ್ಯಭಾಷೆಗಳನ್ನು ಸುಲಭವಾಗಿ ಕಲಿಯಲು, ಭಾಷೆ – ಭಾಷೆಗಳ ತೌಲನಿಕ ಅಧ್ಯಯನಕ್ಕೆ, ಒಂದು ಭಾಷೆಯಲ್ಲಿರುವ ಸಮಾನಾರ್ಥಕ ಪದಗಳನ್ನು ಆ ಪದಗಳಲ್ಲಿರುವ ಅನೇಕಾರ್ಥಕಗಳನ್ನು ತಿಳಿದುಕೊಳ್ಳಲು ನಿಘಂಟುಗಳು ನೆರವಾಗುತ್ತವೆ. ವೈಜ್ಞಾನಿಕತೆ ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ ನಿಘಂಟುಶಾಸ್ತ್ರ ಎಂದಿಗಿಂತಲೂ ಹೆಚ್ಚು ಅವಶ್ಯಕತೆಯನ್ನು ಪಡೆದಿದೆ. ಒಂದು ಭಾಷೆಯ ಬೆಳವಣಿಗೆಯಲ್ಲಿ ಕೋಶಗಳು ಮಹತ್ವದ ಆಕರಗಳಾಗಿವೆ.

 

[1] The lexicon is an inventory of the free froms of a language arranged system atically and againset each from are shown their functional load of meaning in each distinct meaning full situation. -S.M. Katre (1964) Lexicography p.p-5

[2] ಕೆ. ನಾರಾಯಣ (೧೯೭೬) ‘ಕನ್ನಡ ಭಾಷೆಯಲ್ಲಿ ನಿಘಂಟು ರಚನೆ’. ಸಾಹಿತ್ಯಜೀವಿ (ಜಿ. ವೆಂಕಸುಬ್ಬಯ್ಯ ಅವರ ಅಭಿನಂದನ ಗ್ರಂಥ) ಪು. ೨೪೭.

[3] ಪ್ರೋ. ಜಿ ವೆಂಕಟಸುಬ್ಬಯ್ಯನವರು ನಿಘಂಟು-ಕೋಶ ಇವುಗಳ ಅರ್ಥಸಾಮ್ಯತೆಯ ಬಗ್ಗೆ ನಾನು ಕೇಳಿದ ಪ್ರಶ್ನೆಗೆ ದಿನಾಂಕ ೭.೧೨.೧೯೯೭ರ ಪ್ರಜಾವಾಣಿ ದಿನ ಪತ್ರಿಕೆಯ ‘ಇಗೋ ಕನ್ನಡ’ ಅಂಕಣದಲ್ಲಿ ವಿವರಿಸಿದರು.

[4] Lexicology is the science of study of words whereas lexicography is the writing of the word in some concrete from i.e.in the from of dictionary as we shall see later lexicology and lexicography are very closely related rather the latter is directly dependent on the former and may be called applied lexcology -R.A. Singh (1991), An Introduction to lexicography p.p-1