ಪ್ರಪಂಚದಲ್ಲಿ ವೈವಿಧ್ಯಮಯವಾ ನಿಘಂಟುಗಳು ಬಳಕೆಯಲ್ಲಿವೆ. ಆ ಎಲ್ಲ ನಿಘಂಟುಗಳನ್ನು ಅಧ್ಯಯನದ ಸೌಕರ್ಯಕ್ಕಾಗಿ ಕೆಲವು ವರ್ಗ, ಉಪವರ್ಗಗಳನ್ನಾಗಿ ವಿಂಗಡಿಸಬೇಕಾಗುತ್ತದೆ. ಹಾಗೆ ವರ್ಗೀಕರಿಸುವಾಗ ಮೂರು ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕಾಗುತ್ತದೆ.

೧. ಭಾಷೆಗಳ ಸಂಖ್ಯೆಗಳನ್ನಾಧರಿಸಿ : ಅ. ಏಕಭಾಷಿಕ
ಆ. ದ್ವಿಭಾಷಿಕ
ಇ. ಬಹುಭಾಷಿಕ
೨. ಭಾಷೆಗಳ ಸ್ಥಾನಮಾನವನ್ನಾಧರಿಸಿ : ಅ. ಬರೆಹದ ಭಾಷೆ
ಆ. ಆಡುಭಾಷೆ
೩. ಭಾಷೆಗಳ ಕಾಲಘಟ್ಟವನ್ನಾಧರಿಸಿ : ಅ. ಐತಿಹಾಸಿಕ
ಆ. ಸಮಕಾಲೀನ

ಈ ರೀತಿಯ ವರ್ಗೀಕರಣದಿಂದ ನಿಘಂಟಿಮಗಳ ರಚನೆ ಮತ್ತು ಆಂತರಿಕ ಸಂಬಂಧಕ್ಕೆ ಹೆಚ್ಚಿನ ಮಾನ್ಯತೆ ದೊರೆತಂತಾಗುತ್ತದೆ. ಪ್ರಪಂಚದ ನಿಘಂಟುಗಳನ್ನು ಕೋಶಕಾರರು ಪರಿಶೀಲಿಸಿ ನಾನಾ ತೆರನಾದ ಆಧಾರಗಳಿಂದ ವಿಭಾಗ ಮಾಡಿದ್ದಾರೆ. ಈ ವಿಭಾಗಗಳನ್ನು ಬಹು ಸಂಕ್ಷೇಪವಾಗಿ ಇಲ್ಲಿ ತಿಳಿಸಿದೆ :

೧. ಎಲ್‌. ಜುಗುತ್ಸಾ ಅವರು (೧೯೭೧) : ವಿಶ್ವಕೋಶಗಳು, ಭಾಷಿಕ ನಿಘಂಟುಗಳು ಬಹುಕಾಲಿಕ ನಿಘಂಟುಗಳು, ನಿರ್ಬಂಧಿತ ನಿಘಂಟುಗಳು, ಸಾಮಾನ್ಯವಾಗಿ ನಿಘಂಟುಗಳು ಏಕಭಾಷಿಕ ಮತ್ತು ದ್ವಿಭಾಷಿಕ ನಿಘಂಟುಗಳು
೨. ಆರ್‌.ಎ. ಸಿಂಗ ಅವರು (೧೯೯೧) : ಅ. ಉಪಭಾಷಾ ಕೋಶಗಳು, ಪಾರಿಭಾಷಿಕ ಕೋಶಗಳು, ವೃತ್ತಿ, ಕಲೆ, ಕ್ರಾಫ್ಟ್‌ಸಂಬಂಧಿಸಿದ ಕೋಶಗಳು, ವ್ಯಂಗ ಪದಗಳು ಮತ್ತು ಗ್ರಾಮೋಕ್ತಿ ಕೋಶಗಳು
ಆ. ಕಾಗುಣಿತ ನಿಘಂಟುಗಳು, ಉಚ್ಚಾರಣಾತ್ಮಕ ನಿಘಂಟುಗಳು, ಪದರಚನೆಯ ನಿಘಂಟುಗಳು, ಏಕಾರ್ಥ ನಿಘಂಟುಗಳು, ಅನೇಕಾರ್ಥ ನಿಘಂಟುಗಳು, ವ್ಯಾಕರಣಾತ್ಮಕ ನಿಘಂಟುಗಳು, ಹಿನ್ನಿಘಂಟುಗಳು ಸಂಕ್ಷೇಪ ನಿಘಂಟುಗಳು.
ಇ. ಸಮಾನಾರ್ಥಕ ಕೋಶಗಳು, ವಿರುದ್ಧಾರ್ಥಕ ಕೋಶಗಳು.
ಈ. ವ್ಯವಹಾರಿಕ ನಿಘಂಟುಗಳು, ಉಪಭಾಷಾ ನಿಘಂಟುಗಳು.
ಉ. ಪದಪುಂಜ ನಿಘಂಟುಗಳು, ಗಾದೆ ಮತ್ತು ನುಡಿಗಟ್ಟು ನಿಘಂಟುಗಳು, ಹೊಸ ಪದಗಳ ನಿಘಂಟುಗಳು, ಎರವಲು ಪದಕೋಶಗಳು.
೩. ಕೆ. ನಾರಾಯಣರು (೧೯೭೬): ಅ. ವುತ್ಪತ್ತಿ ನಿಘಂಟು
ಆ. ಐತಿಹಾಸಿಕ ನಿಘಂಟು
ಇ. ಸಾಮಾನ್ಯ ನಿಘಂಟು (ಏಕಭಾಷಿಕ, ಬಹುಭಾಷಿಕ).
ಈ. ವಿಶಿಷ್ಟ ಉದ್ದೇಶ ನಿಘಂಟು (ಉಚ್ಚಾರಣಾ ನಿಘಂಟು, ತಾಂತ್ರಿಕ ನಿಘಂಟು, ವೃತ್ತಿಪದ ನಿಘಂಟು, ಗ್ರಾಂಥಿಕ ನಿಘಂಟು).
೪. ವಿಲ್ಯಂ ಮಾಡ್ತ ಅವರು (೧೯೯೪): ಅ. ಬಹುಕಾಲಿಕ (ಐತಿಹಾಸಿಕ, ವ್ಯುತ್ಪತ್ತಿಕ)
ಆ. ಏಕಕಾಲಿಕ (ಸಾಮಾನ್ಯ, ನಿರ್ಬಂಧಿತ)

ನಿಘಂಟುಶಾಸ್ತ್ರಜ್ಞರು ಮತ್ತು ಭಾಷಾವಿಜ್ಞಾನಿಗಳು ನಿಘಂಟುಗಳನ್ನು ಬೇರೆ ಬೇರೆ ತತ್ವ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಮೇಲಿನಂತೆ ವರ್ಗೀಕರಿಸಿದ್ದಾರೆ. ಅವರ ವರ್ಗೀಕರಣವನ್ನು ಅನುಲಕ್ಷಿಸಿ ಕೋಶಗಳನ್ನು ಸ್ಥೂಲವಾಗಿ ಈ ಕೆಳಗಿನಂತೆ ವಿಂಗಡಿಸಿ ವಿವರಿಸಬಹುದು.

೧. ಸಾಮಾನ್ಯ ನಿಘಂಟು : ಅ. ಏಕಭಾಷಿಕ
ಆ. ದ್ವಿಭಾಷಿಕ
ಇ. ಬಹುಭಾಷಿಕ
೨. ಐತಿಹಾಸಿಕ ನಿಘಂಟು
೩. ವ್ಯುತ್ಪತ್ತಿ ನಿಘಂಟು  
೪. ವಿಶಿಷ್ಟ ಉದ್ದೇಶವುಳ್ಳ ನಿಘಂಟುಗಳು : ವಿಶ್ವಕೋಶಗಳು, ವೃತ್ತಿ ಪದಕೋಶಗಳು, ಪಾರಿಭಾಷಿಕ ಪದಕೋಶಗಳು, ಗ್ರಾಂಥಿಕ ಪದಕೋಶಗಳು, ಉಚ್ಚಾರಣಾತ್ಮಕ ಪದಕೋಶಗಳು, ಇತರ ಬಗೆಯ ವಿಶಿಷ್ಟ ಕೋಶಗಳು.

೧. ಸಾಮಾನ್ಯ ನಿಘಂಟು: ಯಾವುದೇ ಒಂದು ಸೀಮಿತ ವಲಯಕ್ಕೆ ನಿರ್ಬಂಧಗೊಳಿಸದೆ ಸಾಮಾನ್ಯವಾಗಿ ಬರೆಹದ ಭಾಷೆಯ ನಿಘಂಟುಗಳು ಸಾಮಾನ್ಯ ನಿಘಂಟುಗಳಾಗಿವೆ. ಅವುಗಳ ರಚನೆ ವಿವರಣಾತ್ಮಕವಾಗಿರುತ್ತದೆ. ಈ ಬಗೆಯ ನಿಘಂಟುಗಳಲ್ಲಿ ಒಂದು ಭಾಷೆಯ ಶಬ್ದ ಅದರ ಪರ್ಯಾಯ ರೂಪಗಳು, ಅವುಗಳ ಅರ್ಥ ವಿವರಣೆ, ವ್ಯುತ್ಪತ್ತಿ, ವ್ಯಾಕರಣಾಂಶಗಳು ಈ ಅಂಶಗಳು ಅಡಕವಾಗಿರುತ್ತದೆ. ಸಾಮಾನ್ಯ ನಿಘಂಟುಗಳಲ್ಲಿ ಮೂರು ಬಗೆ. ಅ. ಏಕಭಾಷಿಕ ಆ. ದ್ವಿಭಾಷಿಕ ಇ. ಬಹುಭಾಷಿಕ.

ಅ. ಏಕಭಾಷಿಕ ನಿಘಂಟು: ಇದರ ಹೆಸರೇ ಹೇಳುವಂತೆ ಯಾವುದಾದರೊಂದು ಭಾಷೆಯ ನಿಘಂಟಿಮಗಳಿಗೆ ಅದೇ ಭಾಷೆಯಲ್ಲಿಯೇ ಅರ್ಥ ವಿವರಣೇಯನ್ನು ಕೊಡಲಾಗುತ್ತದೆ. ಒಂದು ಭಾಷೆಯ ನಿಘಂಟಿಮಗಳ ವಿವರ ಈ ಬಗೆಯ ನಿಘಂಟುಗಳಲ್ಲಿ ಸಿಗುತ್ತದೆ. ಏಕಭಾಷಿಕ ನಿಘಂಟುಗಳಲ್ಲಿ ಮುಖ್ಯವಾಗಿ ಮೂರು ಪ್ರಕಾರಗಳು. ಒಂದು, ಕಾವ್ಯ ಮಾಧ್ಯಮದಲ್ಲಿ ರಚಿತವಾದದ್ದು. ಉದಾ: ರನ್ನಕಂದ, ಕರ್ಣಾಟಕ ಶಬ್ದಮಂಜರಿ. ಎರಡು, ಗದ್ಯದಲ್ಲಿ ರಚಿತವಾದದ್ದು. ಉದಾ: ಕರ್ಣಾಟಕ ಶಬ್ದಸಾರಂ, ಸಿರಿಗನ್ನಡ ಅರ್ಥಕೋಶ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ – ಕನ್ನಡ ನಿಘಂಟು. ಮೂರು, ಸಚಿತ್ರ ನಿಘಂಟು. ಉದಾ: ಕವಲಿ ಅವರ ಕನ್ನಡ – ಕನ್ನಡ ಕಸ್ತೂರಿಕೋಶ. ಏಕಭಾಷೆಯ ನಿಘಂಟುಗಳು ಆ ಭಾಷೆಯನ್ನು ಬಲ್ಲವರ ಉಪಯೋಗಕ್ಕಾಗಿ ನಿರ್ಮಿತವಾಗಿರುತ್ತವೆ. ಪ್ರತಿಯೊಬ್ಬ ಭಾಷಿಕರು ತನ್ನ ಭಾಷೆಯ ಎಲ್ಲ ಪದಗಳನ್ನು ಬಳಸುವುದಿಲ್ಲ. ನಿತ್ಯೋಪಯೋಗಿ ಪದಗಳು ಮಿತವಾಗಿರುತ್ತವೆ. ಕೆಲವು ಸಾರಿ ಭಾಷಿಕರಿಗೆ ಕೆಲವು ಪದಗಳ ಅರ್ಥ ಗೊತ್ತಿದ್ದರೂ ಅವುಗಳನ್ನು ಉಪಯೋಗಿಸುವುದಿಲ್ಲ. ಕೆಲವು ಪದಗಳನ್ನು ಕೆಲವು ಸಂದರ್ಭದಲ್ಲಿ ಮಾತ್ರ ಉಪಯೋಗಿಸಲು ಗೊತ್ತಿರುತ್ತದೆ. ಈ ನಿಘಂಟುಗಳು ಆ ಭಾಷೆಯನ್ನು ಎರಡನೆಯ ಭಾಷೆಯಾಗಿ ಕಲಿಯುವವನ ಉಪಯೋಗಕ್ಕೆ ನೆರವಾಗುತ್ತವೆ. ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಗಳನ್ನು ಅನುಲಕ್ಷಿಸಿ ಏಕಭಾಷಿಕ ನಿಘಂಟುಗಳನ್ನು ರಚಿಸಬಹುದು. ತನ್ಮೂಲಕ ಒಂದು ಪ್ರದೇಶ ಹಾಗೂ ಜನಾಂಗದ ಆಡುನುಡಿಯ ವೈಶಿಷ್ಟ್ಯವನ್ನು ಅರಿಯಲು ತುಂಬ ನೆರವಾಗುತ್ತವೆ.

ಆ. ದ್ವಿಭಾಷಿಕ ನಿಘಂಟು: ಒಂದು ಭಾಷೆಯ ಶಬ್ದಗಳಿಗೆ ಇನ್ನೊಂದು ಭಾಷೆಯಲ್ಲಿ ಅರ್ಥ ವಿವರಣೆಯನ್ನು ನೀಡುವ ನಿಘಂಟುಗಳು ದ್ವಿಭಾಷಿಕ ನಿಘಂಟುಗಳು. ಈ ರೀತಿಯ ನಿಘಂಟುಗಳನ್ನು ರಚಿಸಬೇಕಾದರೆ ಅನೇಕ ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ. ಕೆ. ನಾರಾಯಣರು (೧೯೭೬) ಕೆಲವು ಅಂಶಗಳನ್ನು ಸೂಚಿಸಿದ್ದಾರೆ. ೧. ಮೂಲಭಾಷೆ ಮತ್ತು ಉದ್ದಿಷ್ಟ ಭಾಷೆಯ ಪದಗಳಿಗೆ ಸಮಾನತೆಯನ್ನು ಕಲ್ಪಿಸಿಕೊಟ್ಟಿರಬೇಕು. ೨ ಮೂಲ ಭಾಷೆಯ ಪದ, ನುಡಿಗಟ್ಟು ಹಾಗೂ ವಾಗ್ರೂಢಿಯ ಪ್ರಯೋಗಗಳನ್ನು ಹೊಂದಿರಬೇಕು. ೩. ಮೂಲಭಾಷೆಯ ಪದಗಳ ಸಾಧಿತ ರೂಪ, ಅರ್ಥ ಛಾಯೆಗಳನ್ನು ವಿವರಿಸುತ್ತಿರಬೇಕು. ೪. ಪದಗಳ ಎಲ್ಲ ಮಟ್ಟದ ಪ್ರಯೋಗಗಳನ್ನು (ಔಪಚಾರಿಕ/ಅನೌಪಚಾರಿಕ) ಹೊಂದಿರಬೇಕು. ೫. ವ್ಯಕ್ತಿನಾಮಗಳ, ಸ್ಥಳನಾಮಗಳ ವಿವರಗಳನ್ನು ತಿಳಿಸುತ್ತಿರಬೇಕು. ೬. ವ್ಯವಹಾರಿಕ ಮತ್ತು ತಾಂತ್ರಿಕ ವಿಶಿಷ್ಟ ಪದಗಳನ್ನೊಳಗೊಂಡಿರಬೇಕು. ೭. ಪದಗಳ ವರ‍್ಯಾಯ ಪ್ರಯೋಗಗಳನ್ನು ಹಾಗೂ ಪ್ರಚಲಿತ ಪ್ರಯೋಗಗಳನ್ನು ತಿಳಿಸುತ್ತಿರಬೇಕು. ೮. ಭಾಷೆಯನ್ನು ಆಡುವವರು ಮಾತನಾಡುವಾಗ ಉಚ್ಚರಿಸುತ್ತಿರುವ ರೀತಿಯಲ್ಲಿರಬೇಕು. ೯. ಅವಶ್ಯಕತೆ ಇದ್ದಲ್ಲಿ ಚಿತ್ರಗಳಿಂದ ಕೂಡಿದ್ದರೆ ಹೆಚ್ಚು ಉಪಯುಕ್ತವಾಗಬಲ್ಲದು. ಒಂದು ದ್ವಿಭಾಷಾ ನಿಘಂಟು ಪರಿಪೂರ್ಣವಾಗಿರಬೇಕಾದರೆ ಈ ಎಲ್ಲ ಅಂಶಗಳನ್ನೊಳಗೊಂಡಿರಬೇಕು. ಕನ್ನಡದಲ್ಲಿ ಎರಡನೆಯ ನಾಗವರ್ಮನ ಅಭಿದಾನ ವಸ್ತುಕೋಶ, ಮಂಗರಾಜನ ಅಭಿನವಾಭಿಧಾನಂ ಮತ್ತು ಮಿಶನರಿ ಕೋಶಗಳು ದ್ವಿಭಾಷಿಕೋಶಗಳಾಗಿವೆ. ಎರಡು ಭಾಷೆಗಳ ಪರಸ್ಪರ ವಿಚಾರ ವಿನಿಮಯ ಹಾಗೂ ಜ್ಞಾನಾರ್ಜನೆಗೆ ದ್ವಿಭಾಷಿಕ ಕೋಶಗಳು ತುಂಬ ಸಹಕಾರಿಯಾಗಿವೆ.

ಇ. ಬಹುಭಾಷಿಕ ನಿಘಂಟುಗಳು: ಎರಡು ಭಾಷೆಗಳಿಗಿಂತ ಹೆಚ್ಚು ಭಾಷೆಗಳನ್ನು ಉಪಯೋಗಿಸಿಕೊಂಡು ರಚಿಸುವ ನಿಘಂಟುಗಳನ್ನು ಬಹುಭಾಷಿಕ ನಿಘಂಟುಗಳೆಂದು ಕರೆಯುತ್ತಾರೆ. ದ್ವಿಭಾಷಿಕ ನಿಘಂಟುಗಳನ್ನು ಸಿದ್ಧಪಡಿಸುವಾಗ ಗಮನದಲ್ಲಿಡಬೇಕಾದ ಅಂಶಗಳನ್ನು ಇಲ್ಲಿಯೂ ಗಮನಿಸಬೇಕಾಗುತ್ತದೆ. ಕನ್ನಡದಲ್ಲಿ ಬಹುಭಾಷಿಕ ನಿಘಂಟುಗಳು ತುಂಬ ಕಡಿಮೆ. ಉದಾ: ಎಲ್‌.ಎಸ್‌ಚಿಟಗುಪ್ಪಿ ಅವರ ಹಿಂದಿ – ಕನ್ನಡ – ಇಂಗ್ಲಿಷ್‌ಶಬ್ದಕೋಶ, ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನೆ ಕೇಂದ್ರದವರು ಸಿದ್ಧಪಡಿಸಿದ ತುಳು – ಕನ್ನಡ ಇಂಗ್ಲಿಷ್‌ನಿಘಂಟು ಸಂಪುಟಗಳು (ಆರು ಸಂಪುಟಗಳು). ದ್ವಿಭಾಷಾ ಮತ್ತು ಬಹುಭಾಷಾ ನಿಘಂಟುಗಳನ್ನು ತಯಾರಿಸುವುದು ಸ್ವಲ್ಪ ಕಠಿಣ ಕಾರ್ಯವಾಗಿದೆ. ಈ ನಿಘಂಟುಗಳು ಆಯಾಕಾಲದ ಭಾಷಿಕ ಸ್ವರೂಪವನ್ನು ಪ್ರತಿನಿಧಿಸುತ್ತವೆ.

೨. ಐತಿಹಾಸಿಕ ನಿಘಂಟು: ಐತಿಹಾಸಿಕ ನಿಘಂಟು ಒಂದು ಭಾಷೆಯಲ್ಲಿಯ ಪದ ಮತ್ತು ಪದರೂಪಗಳ ಅರ್ಥದಲ್ಲಾಗುವ ಬದಲಾವಣೆಗಳನ್ನು ಕಾಲಾನುಕ್ರಮವಾಗಿ ತೋರಿಸುತ್ತವೆ. ಈ ನಿಘಂಟುಗಳು ಪದದ ಅರ್ಥ ಮತ್ತು ಅರ್ಥದ ಬದಲಾವಣೆ (ಸಂಕೋಚ ಅಥವಾ ವಿಸ್ತರಣೆ) ಇವುಗಳ ಕಡೆಗೆ ಆದ್ಯ ಗಮನ ಕೊಡುತ್ತವೆ. ಒಂದು ಭಾಷೆಯ ಚಾರಿತ್ರಿಕ ಬೆಳವಣಿಗೆಯನ್ನು ಅರಿತುಕೊಳ್ಳಲು ಈ ನಿಘಂಟುಗಳು ತುಂಬ ನೆರವಾಗುತ್ತವೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ – ಕನ್ನಡ ನಿಘಂಟು ಸಂಪುಟಗಳು ಕನ್ನಡ ಭಾಷೆಯ ಚಾರಿತ್ರಿಕ ಬೆಳವಣಿಗೆಯನ್ನರಿಯಲು ಉತ್ತಮ ಆಕರಗಳಾಗಿವೆ. ಐತಿಹಾಸಿಕ ನಿಘಂಟುಗಳು ನಿಘಂಟಿಮಗಳ ರೂಪ ಮತ್ತು ಅರ್ಥ ಬದಲಾವಣೆಗೆ ಒತ್ತು ಕೊಡುತ್ತವೆ.

೩. ವ್ಯುತ್ಪತ್ತಿ ನಿಘಂಟು : ಇವು ನಿಘಂಟಿಮಗಳ ವ್ಯುತ್ಪತ್ತಿಗೆ ಪ್ರಾಧ್ಯಾನ್ಯತೆ ಕೊಡುತ್ತವೆ. ಈ ಮಾದರಿಯ ಕೋಶಗಳು ಭಾಷೆಯಲ್ಲಿ ಈಗ ಬಳಕೆಯಲ್ಲಿರುವ ಮತ್ತು ಒಂದು ಕಾಲಕ್ಕೆ ಬಳಕೆಯಲ್ಲಿದ್ದು ಈಗ ಬಳಕೆಯಿಂದ ತಪ್ಪಿಹೋದ ನಿಘಂಟಿಮಗಳ ಸಹಾಯದಿಂದ ಭಾಷೆಯ ಮೂಲ ರೂಪಗಳನ್ನು ಪುನಾರಷಿಸುತ್ತವೆ. ಸ್ಥೂಲವಾಗಿ ಹೇಳುವುದಾದರೆ ಇವು ಭಾಷೆಯಲ್ಲಿ ಪದಗಳ ಪೂರ್ವ ಇತಿಹಾಸವನ್ನು ತಿಳಿಸುತ್ತವೆ ಎನ್ನಬಹುದು. ಈ ನಿಘಂಟುಗಳಲ್ಲಿ ಕೊಡಲಾಗುತ್ತದೆ. ವ್ಯುತ್ಪತ್ತಿ ನಿಘಂಟು ಒಂದು ಭಾಷೆಯ ಭಾಷಾ ಪ್ರಭೇದಗಳನ್ನು ಹಾಗೂ ಗ್ರಾಂಥಿಕ ಆಧಾರಗಳನ್ನು ಬಳಸಿಕೊಂಡು ಅದೇ ಭಾಷೆಯ ನಿಘಂಟಿಮಗಳ ವ್ಯುತ್ಪತ್ತಿಯನ್ನು ಹೇಳುತ್ತವೆ ಅಥವಾ ಒಂದೇ ಭಾಷಾ ಕುಟುಂಬದ ಭಾಷೆಗಳನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರುತ್ತವೆ. ಆರ್‌. ಎಲ್‌. ಟರ್ನರ್‌ಅವರ A Comparative Dictionary of A Draividian Etymological Dictionary (೧೯೬೨), ಟಿ. ಬರೊ ಮತ್ತು ಎಂ. ಬಿ. ಎಮಿನೋ ಅವರ A Draividian Etymological Dictionary (೧೯೬೧) ಇವು ವುತ್ಪತ್ತಿ ನಿಘಂಟುಗಳಿಗೆ ಉತ್ತಮ ಉದಾಹರಣೆಗಳು. ಭಾಷೆಯ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಕಂಡುಬರುವ ನಿಘಂಟಿಮಗಳ ವೈವಿಧ್ಯತೆಯನ್ನು ಕಂಡುಹಿಡಿಯಲು, ಒಂದು ಭಾಷೆ/ಭಾಷೆಗಳ ಮೂಲ ರೂಪಗಳನ್ನು ಶೋಧಿಸಲು ಉತ್ಪತ್ತಿ ನಿಘಂಟುಗಳು ತುಂಬ ನೆರವಾಗುತ್ತವೆ.

೪. ವಿಶಿಷ್ಟ ಉದ್ದೇಶ ನಿಘಂಟು : ಸಾಮಾನ್ಯ ನಿಘಂಟುಗಳಲ್ಲಿ ವಿಶಿಷ್ಟ ವಿಷಯಗಳಿಗೆ ಸಂಬಂಧಿಸಿದ ಪದಗಳು ದಾಖಲಾಗಿರುವುದು ತುಂಬ ಕಡಿಮೆ. ಒಂದು ವೇಳೆ ದಾಖಲಾದರೂ ಅದಕ್ಕೆ ಯಾವ ಅರ್ಥವನ್ನು ಕೊಡಬೇಕಾಗಿತ್ತೋ ಆ ಅರ್ಥ ಕೊಟ್ಟಿರುವುದಿಲ್ಲ. ಇದು ಸಾಮಾನ್ಯ ನಿಘಂಟಿನ ಮಿತಿಯೂ ಆಗಿದೆ. ವಿಶಿಷ್ಟ ವಿಷಯಕ್ಕಾಗಿಯೇ ಪ್ರತ್ಯೇಕ ನಿಘಂಟುಗಳನ್ನು ರಚಿಸಬೇಕಾಗುತ್ತದೆ. ಅಂತಹ ನಿಘಂಟುಗಳು ವಿಶಿಷ್ಟ ಉದ್ದೇಶ ನಿಘಂಟುಗಳೆನಿಸಿಕೊಳ್ಳುತ್ತವೆ. ಟಿ. ವಿ. ವೆಂಕಟಾಚಲಶಾಸ್ತ್ರೀ ಅವರ ‘ಶ್ರೀವತ್ಸನಿಘಂಟು’, ‘ಗಜಶಾಸ್ತ್ರ ಶಬ್ದಕೋಶ, ವಿಶಿಷ್ಟ ಕೋಶಗಳಿಗೆ ಉತ್ತಮ ಉದಾಹರಣೆಗಳಾಗಿವೆ.

ಅ. ವಿಶ್ವಕೋಶಗಳು: ವಿಶ್ವಕೋಶಗಳ ವ್ಯಾಪ್ತಿ ವಿಶಾಲವಾದುದು. ಒಂದೊಂದು ವಿಷಯ, ಘಟನೆ ಹಾಗೂ ವ್ಯಕ್ತಿಗೆ ಸಂಬಂಧಿಸಿದಂತೆ ಸ್ಥೂಲವಾದ ವಿವರಣೆ ಇಲ್ಲಿರುತ್ತದೆ. ವಿಶ್ವಕೋಶಗಳನ್ನು ರಚಿಸುವಾಗ ಸ್ಥಳದ ಮತ್ತು ವ್ಯಕ್ತಿಯ ಹೆಸರುಗಳು ಹಾಗೂ ಆ ಸ್ಥಳದ ಮಹತ್ವದ ವ್ಯಕ್ತಿಗಳ ಕಾರ್ಯಸಾಧನೆ, ಮಾನವ ಜ್ಞಾನದ ಎಲ್ಲ ಶಾಖೆಗಳು, ಐತಿಹಾಸಿಕ ಘಟನೆಗಳ ವ್ಯಾಪಕ ಜ್ಞಾನ ಹಾಗೂ ಭೌಗೋಳಿಕ ಮತ್ತು ಸಾಂಸ್ಕೃತಿಕ ಅಂಶಗಳು ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕರ್ನಾಟಕದಲ್ಲಿ ಅನೇಕ ವಿಶ್ವಕೋಶಗಳು ಬಂದಿವೆ. ಉದಾ; ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಷಯ ವಿಶ್ವಕೋಶಗಳು, ಕನ್ನಡ ವಿಶ್ವವಿದ್ಯಾಲಯದ ಭಾಷೆ, ಧರ್ಮ, ಕರಕುಶಲಕಲೆ, ಜೀವ ಜಗತ್ತು, ವೈದ್ಯ ವಿಶ್ವಕೋಶಗಳು ಸಾಕಷ್ಟು ಮಾಹಿತಿಗಳನ್ನೊಳಗೊಂಡ ಮಹತ್ವದ ಆಕರ ಗ್ರಂಥಗಳಾಗಿವೆ.

ಆ. ವೃತ್ತಿ ಪದಕೋಶಗಳು: ವೃತ್ತಿ ಪದಕೋಶಗಳು ನಿರ್ದಿಷ್ಟ ವೃತ್ತಿಗೆ ಸಂಬಂಧಿಸಿರುತ್ತವೆ. ವೃತ್ತಿ ಪದಗಳ ಸಂಗ್ರಹ ಮತ್ತು ವಿಶ್ಲೇಷಣೆ ಸಾಮಾಜಿಕ ಭಾಷಾಧ್ಯಯನದ ದೃಷ್ಟಿಯಿಂದ ತುಂಬ ಉಪಯುಕ್ತವಾದುದು. ಆಧುನಿಕ ವಿಜ್ಞಾನ ತಂತ್ರಜ್ಞಾನದ ಪ್ರಭಾವದಿಂದ ವಂಶಪರಂಪರಾಗತವಾಗಿ ಬಂದಿರುವ ಜಾನಪದ ಕೈಕಸಬುಗಳಾದ ಕುಂಬಾರಿಕೆ, ಕಂಬಾರಿಕೆ, ಬಡಿಗತನ, ಚಮ್ಮಾರಿಕೆ ಮುಂತಾದ ವೃತ್ತಿಗಳಿಗೆ ಸಂಬಂಧಿಸಿದ ಪದ ಸಂಪತ್ತನ್ನು ರಕ್ಷಿಸಿ ಆವೃತ್ತಿ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ತಿಳಿದುಕೊಳ್ಳಲು ವೃತ್ತಿ ಪದಗಳು ಮಹತ್ವದ ಪಾತ್ರ ವಹಿಸುತ್ತವೆ. ಜಾನಪದ ಕೈಕಸಬುಗಳಲ್ಲಿ ಉಪಯೋಗಿಸುವ ಪದಗಳು ಹೆಚ್ಚು ಅಚ್ಚಕನ್ನಡ ಪದಗಳಾಗಿರುವುದರಿಂದ ಅಂತಹುಗಳನ್ನು ಸಂಗ್ರಹಿಸಿ ಅವುಗಳಿಗೆ ಅರ್ಥ ಕೊಡುವುದು ಅಗತ್ಯವಿದೆ. ಅವು ಕನ್ನಡ ಶಬ್ದಕೋಶಕ್ಕೆ ಉತ್ತಮ ಕೊಡುಗೆಗಳಾಗುತ್ತವೆ ಎಂಬುದರ ಬಗೆಗೆ ಅನುಮಾನಗಳಿಲ್ಲ. ಒಂದು ವೃತ್ತಿಯನ್ನು ಅವಲಂಬಿಸಿದ ಜನ ತಮ್ಮದೇ ಆದ ಸಮಾಜ ಮತ್ತು ಸಾಂಸ್ಕೃತಿಕ ಚೌಕಟ್ಟನ್ನು ಹೊಂದಿರುತ್ತಾರೆ. ತಮ್ಮ ವೃತ್ತಿಯಲ್ಲಿ ವಿಶಿಷ್ಟ ಪದ ಪ್ರಯೋಗಗಳನ್ನು, ನುಡಿಗಟ್ಟುಗಳನ್ನು ಬಳಸುತ್ತಿರುತ್ತಾರೆ. ಅವುಗಳನ್ನು ಸಂಗ್ರಹಿಸಿ ಅಭ್ಯಸಿಸುವುದರಿಂದ ಆ ಸಮುದಾಯದ ಭಾಷಾ ಪ್ರಯೋಗ ಹಾಗೂ ವೃತ್ತಿ ಸಮುದಾಯದ ಜನಾಂಗಿಕ ಅಧ್ಯಯನಕ್ಕೂ ತುಂಬ ಸಹಕಾರಿಯಾಗುತ್ತದೆ. ವಿವಿಧ ವೃತ್ತಿಪದಗಳ ಸಂಗ್ರಹ ಮತ್ತು ವಿಶ್ಲೇಷಣೆಯ ಕಾರ್ಯ ತೆಲುಗು ಭಾಷೆಯಲ್ಲಿ ನಡೆದಿದೆ. ಕನ್ನಡದಲ್ಲಿ ವೃತ್ತಿ ಪರಿಭಾಷಾ ಕ್ಷೇತ್ರ ಕಾರ್ಯ ನಡೆದು ವಿವಿಧ ವೃತ್ತಿಪದಕೋಶಗಳು ಸಿದ್ಧವಾಗಬೇಕಾಗಿವೆ. ಇತ್ತೀಚೆಗೆ ಈ ಕೆಲಸವೂ ನಡೆಯುತ್ತಿದೆ. ಕನ್ನಡ ವಿಶ್ವವಿದ್ಯಾಲಯವು ಕೃಷಿ, ಪಾಂಚಾಳ, ನೇಕಾರ ಮುಂತಾದ ವೃತ್ತಿಪದಕೋಶಗಳನ್ನು ಸಿದ್ಧಪಡಿಸಿವೆ.

ಇ. ಪರಿಭಾಷಿಕ ಪದಕೋಶಗಳು: ಒಂದು ನಿರ್ದಿಷ್ಟ ಅಧ್ಯಯನ ಕ್ಷೇತ್ರದ ವಿಶಿಷ್ಟ ಪದಗಳಿಗೆ ಸಂಬಂಧಿಸಿದ ಕೋಶಗಳು ಪರಿಭಾಷಿಕ ಪದಕೋಶಗಳಾಗುತ್ತವೆ. ಇವು ನಿರ್ದಿಷ್ಟ ವಿಷಯಕ್ಕೆ ನಿರ್ದಿಷ್ಟ ಅರ್ಥವನ್ನು ಹೊಂದಿರುತ್ತವೆ. ಒಂದು ಭಾಷೆ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿ ಇವು ಸಿದ್ಧವಾಗಿರುತ್ತವೆ. ಉದಾ: ಭಾಷೆ, ಧರ್ಮ, ಚರಿತ್ರೆ, ಕಲೆ, ಶಿಕ್ಷಣ ಮುಂತಾದವು. ಪಾರಿಭಾಷಿಕ ಕೋಶಗಳು ಆ ಕ್ಷೇತ್ರದ ಅಧ್ಯಯನಕ್ಕೆ ಒಂದು ಬಗೆಯ ಶಿಸ್ತು ಮತ್ತು ಖಚಿತತೆ ತಂದು ಕೊಡುತ್ತದೆಯಲ್ಲದೆ ಆ ಕ್ಷೇತ್ರದ ಎಲ್ಲೆಯನ್ನೂ ವಿಸ್ತರಿಸುತ್ತವೆ. ಕನ್ನಡದಲ್ಲಿ ಈ ತೆರನಾದ ಕೋಶಗಳು ಸಾಕಷ್ಟು ಪ್ರಮಾಣದಲ್ಲಿ ರಚಿತವಾಗಿವೆ. ಎನ್‌. ಎಸ್‌. ವೀರಪ್ಪನವರ ‘ಶಿಕ್ಷಣಶಾಸ್ತ್ರದ ಪಾರಿಭಾಷಿಕ ನಿಘಂಟು’ ಪಾರಿಭಾಷಿಕ ಕೋಶಕ್ಕೆ ಅತ್ಯುತ್ತಮ ಮಾದರಿಯಾಗಿದೆ.

ಈ. ಗ್ರಾಂಥಿಕ ಪದಕೋಶಗಳು: ಒಂದು ಗ್ರಂಥದಲ್ಲಿ ಬರುವ ವಿಶಿಷ್ಟ ಪದಗಳ ಅರ್ಥವನ್ನು ಈ ಕೋಶಳು ಒಳಗೊಂಡಿರುತ್ತವೆ. ಇವುಗಳಿಗೆ ಪದಪ್ರಯೋಗ ಕೋಶ (ಪ್ರಕೋಶ)ಗಳೆಂದು ಕರೆಯುತ್ತಾರೆ. ಎಸ್‌. ಆರ್‌. ಗುಂಜಾಳ ಅವರು ಬಸವಣ್ಣನ ಮತ್ತು ತೋಂಟದ ಸಿದ್ಧಲಿಂಗಯತಿಗಳ ವಚನಗಳಿಗೆ, ಜಿ. ವೆಂಕಟಸುಬ್ಬಯ್ಯನವರು ಮುದ್ದಣ್ಣ ಕೃತಿಗಳಿಗೆ ಪ್ರಕೋಶಗಳನ್ನು ಸಿದ್ಧಪಡಿಸಿದ್ದಾರೆ. ಗ್ರಂಥದಲ್ಲಿಯ ವಿಶಿಷ್ಟ ಪದ ಹಾಗೂ ಅದು ಬರುವ ಸಂದರ್ಭ ಪಡೆದುಕೊಳ್ಳುವ ಅರ್ಥ ಛಾಯೆ ಇತ್ಯಾದಿ ಅಂಶಗಳು ಈ ಕೋಶದಲ್ಲಿ ಅಡಕವಾಗಿರುತ್ತವೆ. ಒಬ್ಬ ಕವಿಯ ಶಬ್ದ ನಿರ್ಮಾಣ ಕಲೆಯನ್ನು ಎತ್ತಿ ತೋರಿಸುವುದಲ್ಲದೆ ಆ ಕವಿಯ ಗ್ರಂಥಗಳನ್ನು ಓದುವಾಗ ಇಂತಹ ಕೋಶಗಳು ಕೈಪಿಡಿಯಂತೆ ನೆರವಾಗುತ್ತವೆ.

ಉ. ಉಚ್ಚಾರಣಾತ್ಮಕ ಕೋಶಗಳು: ಭಾಷೆಯ ಪ್ರತಿಯೊಂದು ಪದವೂ ತನ್ನದೇ ಆದ ಉಚ್ಚಾರಣೆಯನ್ನು ಹೊಂದಿರುತ್ತದೆ. ಧ್ವನ್ಯುಚ್ಚಾರವನ್ನು ಅನುಲಕ್ಷಿಸಿ ಸಿದ್ಧವಾದ ಕೋಶಗಳು ಉಚ್ಚಾರಣಾತ್ಮಕ ಕೋಶಗಳಾಗಿವೆ. ಇವುಗಳಲ್ಲಿ ಪದದ ಸ್ವರಾಘಾತ, ತೀವ್ರತೆ, ಕಾಲಾವಧಿ, ವಿರಾಮ ಮುಂತಾದ ಅವಿಭಾಜಕ ಧ್ವನಿಮಾದ ಅಂಶಗಳನ್ನು ಸಮರ್ಪಕವಾಗಿ ಬಿಂಬಿಸಲ್ಪಟ್ಟಿರುತ್ತದೆ. ಡೇನಿಯಲ್‌ಜಾನ್ಮ್‌ನ `English Pronouncing Dictionary’ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ತರದ ಕೋಶಗಳಲ್ಲಿ ಪದಗಳು ಅಂತರರಾಷ್ಟ್ರೀಯ ಧ್ವನಿ ಲಿಪಿಯಲ್ಲಿ ರೇಖಿಸಲ್ಪಟ್ಟಿರುತ್ತವೆ (IPA).

ಊ. ಇತರ ಬಗೆಯ ವಿಶಿಷ್ಟ ಕೋಶಗಳು: ಪದಗಳ ಕಾಗುಣಿತ ಹಾಗೂ ಅವುಗಳ ಧ್ವನ್ಯಾತ್ಮಕ ಬದಲಾವಣೆಗಳನ್ನು ಅನುಲಕ್ಷಿಸಿ ಸಿದ್ಧವಾದ ‘ಕಾಗುಣಿತ ನಿಘಂಟು’ಗಳು, ಪದಗಳ ಪೂರ್ವ ಪ್ರತ್ಯಯ, ಅಂತ್ಯ ಪ್ರತ್ಯಯ, ಧಾತು – ಪ್ರಾತಿಪದಿಕಗಳನ್ನು ಅನುಲಕ್ಷಿಸಿ ಸಿದ್ಧವಾದ ‘ಪದರಚನೆಯ ನಿಘಂಟು’ಗಳು, ಪದಗಳ ವ್ಯಾಕರಣ ವರ್ಗಗಳನ್ನು ಹಾಗೂ ಪದಗಳ ಸ್ವರೂಪವನ್ನು ತಿಳಿಸುವ ‘ವ್ಯಾಕರಣಾತ್ಮಕ ನಿಘಂಟು’ಗಳು ಅಕಾರಾದಿಯ ಕೊನೆಯ ಶಬ್ದಗಳನ್ನಾಧರಿಸಿ ಪದಗಳನ್ನು ಸಂಕಲಿಸುವ ‘ಹಿನ್ನಿಘಂಟು’ಗಳು. ಒಂದು ನಿರ್ದಿಷ್ಟ ಭಾಷೆಯಲ್ಲಿಯ ಬಳಕೆಯಾದ ಸಂಕ್ಷೇಪಗಳನ್ನು ವ್ಯವಸ್ಥಿತವಾಗಿ ಪಟ್ಟಿ ಮಾಡಿದರೆ ಅದು ‘ಸಂಕ್ಷೇಪ್ತ ನಿಘಂಟು’, ನಿರ್ದಿಷ್ಟ ಜನವರ್ಗದಲ್ಲಿ ಬಳಕೆಯಾಗುವ ವ್ಯಂಗ್ಯ ಪದಗಳಿಗೆ ಅರ್ಥ ಕೊಡುವ ‘ವ್ಯಂಗೋಕ್ತಿ ನಿಘಂಟು’. ಇದರಂತೆ ‘ಗ್ರಾಮೋಕ್ತಿ’, ‘ಗಾದೆ’, ‘ಒಗಟು’ ‘ಒಡಪು’, ‘ವ್ಯಕ್ತಿನಾಮ’ ಮತ್ತು ‘ಸ್ಥಳನಾಮ’, ‘ಸಮಾನಾರ್ಥಕ’, ‘ವಿರುದ್ಧಾರ್ಥಕ’, ‘ಪತ್ರಿಕಾ ನಿಘಂಟು’ ಇವೆಲ್ಲವೂ ವಿಶಿಷ್ಟ ಉದ್ದೇಶ ನಿಘಂಟುಗಳಾಗಿವೆ.

ಹೀಗೆ ನಿಘಂಟಿಮಗಳ ರಚನಾತ್ಮಕ ಅಂಶಗಳನ್ನಾಧರಿಸಿ ವಿದ್ವಾಂಸರು ಕೋಶಗಳನ್ನು ಮೇಲಿನಂತೆ ವರ್ಗ, ಉಪವರ್ಗಗಳಲ್ಲಿ ವರ್ಗೀಕರಿಸಿದ್ದಾರೆ. ನಿಘಂಟುಗಳ ಆಳವಾದ ಅಧ್ಯಯನ ನಡೆದಂತೆ ಇನ್ನು ಸಮರ್ಪಕವಾಗಿ ವರ್ಗೀಕರಿಸಲು ಅನುವಾಗುತ್ತದೆ. ಈಗ ಮಾಡಿರುವ ವರ್ಗೀಕರಣವೇ ಕೊನೆಯದು ಹಾಗೂ ಇದೇ ಸಮರ್ಪಕ ಎಂದು ಹೇಳಲು ಬಾರದು. ಇನ್ನೂ ಹೆಚ್ಚು ನಿರ್ದಿಷ್ಟವಾಗಿ ವರ್ಗೀಕರಿಸುವ ವಿಧಾನಗಳನ್ನು ಕಂಡುಕೊಳ್ಳುವ ಅವಶ್ಯಕತೆ ನಿಘಂಟುಗಳ ಮಟ್ಟಿಗಂತೂ ಇದ್ದೇ ಇದೆ.