ಆಧುನಿಕ ಕಾಲದಲ್ಲಿ ನಿಘಂಟು ರಚನೆ ಕೇವಲ ಶಬ್ದಗಳ ನಿರ್ವಚನಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾಷೆಯ ಇತಿಹಾಸ, ಶಬ್ದಗಳ ರೂಪ, ಆಕೃತಿ, ಉಚ್ಚಾರಗಳ ಬದಲಾವಣೆಗಳು ಮೊದಲಾದವುಗಳನ್ನು ಗಂಭೀರವಾಗಿ ಪರಿಗಣಿಸಿ ಕೋಶದಲ್ಲಿ ನಮೂದಿಸಬೇಕಾಗುತ್ತದೆ. ನಿಘಂಟುಗಳನ್ನು ರಚಿಸುವಾಗ ನಿಘಂಟಿಮದ ಅರ್ಥ, ವೈವಿದ್ಯತೆ ಮತ್ತು ಅವುಗಳ ಸಂಯೋಜನೆಯನ್ನು ಕುರಿತು ವಿವೇಚನೆ ಮಾಡಬೇಕಾಗುತ್ತದೆ. ವೈಜ್ಞಾನಿಕವಾಗಿ ನಿಘಂಟು ರಚನೆ ಮಾಡುವಲ್ಲಿ ಡಾ. ವಿಲ್ಯಂ ಮಾಡ್ತ ಅವರು ಮೂರು ಮುಖ್ಯ ವಿಧಾನಗಳನ್ನು ಸೂಚಿಸಿದ್ದಾರೆ.

[1]

ಅ. ಕ್ಷೇತ್ರ ಕಾರ್ಯ

ಆ. ನಿಘಂಟಿಮಗಳ ಆಯ್ಕೆ

ಇ. ನಿಘಂಟಿಮಗಳ ರಚನೆ

ನಿಘಂಟು ರಚನೆಗೆ ಕೈಹಾಕುವ ಮೊದಲು ನಿಘಂಟುಕಾರ ಆರಂಭದಲ್ಲಿಯೇ ಎರಡು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಂದು ಭಾಷಾ ಸ್ವರೂಪದ ಬಗೆಗಾದರೆ, ಇನ್ನೊಂದು ನಿಘಂಟಿನ ಸ್ವರೂಪದ ಬಗೆಗೆ. ಯಾವ ಭಾಷೆಗೆ ನಾವು ನಿಘಂಟು ರಚಿಸುತ್ತೇವೆಯೋ ಆ ಭಾಷೆಯ ಪೂರ್ಣ ಬೇಕೆ ಬೇಕು. ಆ ಭಾಷೆಯ ಉಪಭಾಷೆಗಳು ಮತ್ತು ಅವುಗಳ ಪರಸ್ಪರ ಸಂಬಂಧವನ್ನು ಕುರಿತು ಆತನಿಗೆ ಸರಿಯಾದ ಜ್ಞಾನ ಇರಬೇಕಾಗುತ್ತದೆ. ಆಡು ಮಾತಿಗೂ ಸಾಹಿತ್ಯ ಭಾಷೆಗೂ ಇರುವ ಅನ್ಯೋನ್ಯ ಸಂಬಂಧ ಆತ ತಿಳಿದುಕೊಳ್ಳಬೇಕು. ಬರೆಹದ ಭಾಷೆಯಲ್ಲಿ ಅನೇಕ ಪ್ರಾಚೀನ ರೂಪಗಳಿವೆಯೇ? ಅದರಲ್ಲಿ ಉಪಭಾಷೆಯ ಪದಗಳು ಬಳಕೆಯಾಗುತ್ತವೆಯೇ? ಇದ್ದರೆ ಎಷ್ಟು ಪ್ರಮಾಣದಲ್ಲಿ? ಕಾಲಿಕ ಉಪಭಾಷೆಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ನಾವು ಕಾಣುತ್ತೇವೆಯೇ? ಇವೇ ಮೊದಲಾದ ಪ್ರಶ್ನೆಗಳನ್ನು ನಿಘಂಟುಕಾರ ನಿಘಂಟು ರಚನೆಯ ಆರಂಭದಲ್ಲಿಯೇ ಕೇಳಿಕೊಳ್ಳಬೇಕಾಗುತ್ತದೆ. ಎರಡನೆಯದಾಗಿ ತಾನು ಚಿಸಬೇಕಾದ ನಿಘಂಟುವಿನ ಸ್ವರೂಪ ಹೇಗಿರಬೇಕೆಂಬುದನ್ನು ನಿಘಂಟುಕಾರ ಮೊದಲೇ ನಿರ್ಧರಿಸಬೇಕಾಗುತ್ತದೆ. ನಿಘಂಟುಗಳ ಸ್ವರೂಪ, ಅವುಗಳಲ್ಲಿ ಅರ್ಥಗಳನ್ನು ಸೂಚಿಸುವ ರೂತಿ, ಉಪಭಾಷಾ ನಿಘಂಟಿಮಗಳು ಹಾಗೂ ಅವುಗಳ ಪ್ರಾಚೀನ ರೂಪಗಳು, ಇತ್ಯಾದಿಗಳ ಸೇರ್ಪಡೆ ನಿಘಂಟುವಿನ ಗುರಿ, ಪ್ರಭೇದ ಮತ್ತು ಗಾತ್ರವನ್ನು ಅನುಸರಿಸುತ್ತದೆ.[2] ಈ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೋಶಕಾರ ಕೋಶ ರಚನೆಗೆ ತೊಡಬೇಕಾಗುತ್ತದೆ.

ಅ. ಕ್ಷೇತ್ರಕಾರ್ಯ: ನಿಘಂಟು ರಚನೆಯನ್ನು ಗಮನದಲ್ಲಿಟ್ಟುಕೊಂಡು ನಿಘಂಟುಕಾರ ಕ್ಷೇತ್ರಕಾರ್ಯವನ್ನು ಮಾಡಬೇಕು.[3]ಕೋಶಕ್ಕೆ ಅವಶ್ಯಕವಾದ ಸಾಮಗ್ರಿಗಳು ಸಮಗ್ರವಾಗಿ ಹಾಗೂ ಸಮರ್ಪಕವಾಗಿ ದೊರೆಯುವ ತನಕ ಕ್ಷೇತ್ರಕಾರ್ಯ ಮುಂದುವರಿಸಬೇಕು. ಕ್ಷೇತ್ರದಲ್ಲಿ ಭಾಷಾಸಮುದಾಯಕ್ಕೆ ಸಂಬಂಧಿಸಿದಂತೆ ಮೂಲ ಆಕರಗಳಿಂದ ಸಾಮಗ್ರಿಗಳನ್ನು ಸಂಗ್ರಹಿಸಬೇಕಾಗುತ್ತದೆ. ನಿಘಂಟು ರಚನೆಯಲ್ಲಿ ಮೂಲಸಾಮಗ್ರಿಗಳಿಗೆ (ನಿಘಂಟಿಮಗಳು) ಪ್ರಥಮ ಸ್ಥಾನವಿದೆ. ನಿಘಂಟಿಮಗಳು ಮೂಲ ಆಕರಗಳಲ್ಲಿ ದೊರೆಯುತ್ತವೆ. ಕ್ಷೇತ್ರದಲ್ಲಿ ಸಿಗುವ ಮೂಲ ಆಕರಗಳೆಂದರೆ:

ಸಂಗ್ರಹಾಲಯಗಳು
 – ದಾಖಲೆ ಸಂಗ್ರಹಾಲಯಗಳು
ವಸ್ತು ಸಂಗ್ರಹಾಲಯಗಳು

ಇತರ ವಸ್ತುಗಳು
– ಗ್ರಂಥಾಲಯಗಳು
ಚಲನಚಿತ್ರಗಳು
ವಿಡಿಯೋ ಕ್ಯಾಸೆಟುಗಳು
ಸ್ಥಳೀಯ ಸಣ್ಣ ಪತ್ರಿಕೆಗಳು

ಈ ಮೂಲಕ ಆಕರಗಳಲ್ಲಿ ಒಂದು ಪ್ರದೇಶಕ್ಕೆ ಸಂಬಂಧಪಟ್ಟ ಆರ್ಥಿಕ, ಆಡಳಿತಾತ್ಮಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ, ರಾಜಕೀಯ ಮುಂತಾದ ಕ್ಷೇತ್ರಕ್ಕೆ ಸಂಬಂಧಿಸಿದ ಅಮೂಲ್ಯ ಮಾಹಿತಿಗಳು ದೊರೆಯುತ್ತವೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಕೋಶಕಾರ ಮೇಲಿನ ಮೂಲ ಆಕರಗಳು ಇರುವಲ್ಲಿಗೆ ಹೋಗಿ ನಿಘಂಟಿಮಗಳನ್ನು ಸಂಗ್ರಹಿಸಬೇಕು. ನಿಘಂಟಿಮಗಳನ್ನು ಸಂಗ್ರಹಿಸುವ ಸಂದರ್ಭಗಳಲ್ಲಿ ಕೋಶಕಾರ ತುಂಬ ಸಹನೆ ಮತ್ತು ಶಿಸ್ತಿನಿಂದ ವರ್ತಿಸಬೇಕು. ಕೋಶಕಾರ ನಿಘಂಟು ವಿಜ್ಞಾನದ ಮೂಲತತ್ವಗಳನ್ನು, ಕ್ಷೇತ್ರ ಕಾರ್ಯದ ವಿಧಾನಗಳನ್ನು ಅರಿತವನಾಗಿರಬೇಕು. ವಿಶೇಷವಾಗಿ ಧ್ವನಿರಚನಾಶಾಸ್ತ್ರದ ಧ್ವನ್ಯುತ್ಪಾದನಾ ಧ್ವನಿಶಾಸ್ತ್ರದಲ್ಲಿ ತರಬೇತಿ ಹೊಂದಿರಬೇಕು. ನಿಘಂಟಿಮಗಳನ್ನು ಸಂಗ್ರಹಿಸುವಾಗ, ವಿಶ್ಲೇಷಿಸುವಾಗ ಕೋಶಕಾರನಿಗೆ ಧ್ವನಿಮಾ, ಆಕೃತಿಮಾ, ವಾಕ್ಯ ರಚನೆ, ಶಬ್ದಕೋಶದ ನಿಯಮಗಳ ಹಾಗೂ ಧ್ವಾನ್ಯಾಲೇಖ, ಧ್ವನಿಮಾಲೇಖ ಮುಂತಾದವುಗಳಲ್ಲಿ ಪರಿಣತಿ ಮತ್ತು ಪ್ರಭುತ್ವ ಹೊಂದಿರಬೇಕಲ್ಲದೆ ಅವುಗಳನ್ನು ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತಾ ಹೋಗಬೇಕಾಗುತ್ತದೆ. ಭಾಷಾ ಸಮುದಾಯದ ಔಪಚಾರಿಕ – ಅನೌಪಚಾರಿಕ ಸಂದರ್ಭದಲ್ಲಿ ಭಾಷಾ ಬಳಕೆಯ ರೀತಿಯನ್ನು ತಿಳಿದವನಾಗಿರಬೇಕು.

ನಿಘಂಟುಕಾರನು ಅರಿಸಿದ ಭಾಷೆ ಮಾತೃಭಾಷೆಯಾಗಿದ್ದರೆ ಆತ ಮಾತುಗನಾಗಿ ಆ ಭಾಷೆಯ ಒಂದು ಉಪಭಾಷೆಯನ್ನು ಮಾತನಾಡುತ್ತಾನೆಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕಾರಣ ನಿಘಂಟು ರಚಿಸುವ ಸಂದರ್ಭದಲ್ಲಿ ಬೇರೆ ಬೇರೆ ಪ್ರದೇಶಗಳ ಸಾಮಾಜಿಕ ಸ್ತರಗಳ ಜನರನ್ನು ಆತ ಸಂಪರ್ಕಿಸಿ ವ್ಯಾಪಕವಾದ ಸಾಮಗ್ರಿಯನ್ನು ಕಲೆಹಾಕಬೇಕು. ಸ್ವಭಾಷೆಯ ಕೋಶವನ್ನು ಸಿದ್ಧಪಡಿಸುವ ಕೋಶಕಾರ ನಿಘಂಟಿಮಗಳನ್ನು ಕಲೆಹಾಕುವ ಸಂದರ್ಭದಲ್ಲಿ ಅಧಿಕ ವ್ಯತ್ಯಾಸ ಹಾಗೂ ಅಪೂರ್ವ ವ್ಯತ್ಯಾಸಗಳಾಗದಂತೆ ಜಾಗರೂಕತೆ ವಹಿಸಬೇಕು.

ನಿಘಂಟು ರಚನೆಯ ಭಾಷೆ ನಿಘಂಟುಕಾರನ ಮಾತೃಭಾಷೆಗಿಂತ ಭಿನ್ನವಾಗಿದ್ದರೆ ನಿಘಂಟಿಮಗಳನ್ನು ಕಲೆ ಹಾಕುವ ಸಂದರ್ಭದಲ್ಲಿ ಆತ ನಿರೂಪಕರ ಸಹಾಯ ಪಡೆಯಬೇಕು.[4] ಭಾಷಾ ಸಾಮಗ್ರಿಗಳನ್ನು ಸಂಗ್ರಹಿಸುವಾಗ, ತಪಾಸಿಸುವಾಗ ನಿರೂಪಕರು ಮಹತ್ವದ ಪಾತ್ರ ವಹಿಸುತ್ತಾರೆ. ಭಾಷಾ ಸಾಮಗ್ರಿಗಳನ್ನು ಆಲೇಖಿಸುವಾಗ, ವಿಶ್ಲೇಷಿಸುವಾಗ ಉಚ್ಚಾರಣೆಯಿಂದ, ಕೇಳುವಿಕೆಯಿಂದ, ಅವಿಭಾಜಕಗಳಿಂದಾಗಿ ಅನೇಕ ದೋಷಗಳು ಉಂಟಾಗುತ್ತವೆ. ಅವುಗಳನ್ನು ನಿವಾರಿಸಲು, ಸಂಶಯಗಳನ್ನು, ಗೊಂದಲಗಳನ್ನು ಪರಿಹರಿಸಲು ನಿರೂಪಕರು ಅತಿ ಅವಶ್ಯ. ನಿರೂಪಕರಿಗೆ ಕೋಶ ರಚಿಸುವ ಭಾಷೆ ಮಾತೃಭಾಷೆಯಾಗಿರಬೇಕು. ಅವರು ಒಳ್ಳೆಯ ಸ್ವಭಾವದವರು, ನಂಬಿಗಸ್ತರು, ಚುರುಕು ಸ್ವಭಾವದವರು ಮತ್ತು ಮಧ್ಯಮ ವಯಸ್ಸಿನವರೂ ಆಗಿರಬೇಕು. ಸಾಧ್ಯವಾದಲ್ಲಿ ಅವರು ಅಕ್ಷರಸ್ಥರೂ ವಿದ್ಯಾವಂತರೂ ಆಗಿದ್ದು ತಮ್ಮ ಭಾಷೆಯ ಬಗೆಗೆ ಶುಷ್ಕ ಅಭಿಮಾನಕ್ಕಿಂತ ಹೆಚ್ಚು ಪಾಂಡಿತ್ಯ ಉಳ್ಳವರಾಗಿದ್ದರೆ ಬಹು ಉತ್ತಮ. ತಮ್ಮ ಭಾಷಾಜ್ಞಾನವನ್ನು ಅಭಿವ್ಯಕ್ತಪಡಿಸುವ ಸಾಮರ್ಥ್ಯ ಅವರಲ್ಲಿರಬೇಕು. ನಿರೂಪಕರ ಸಂಖ್ಯಾ ನಿರ್ಣಯ ನಿಘಂಟುವಿನ ಸ್ವರೂಪ ಹಾಗೂ ಗಾತ್ರವನ್ನು ಅವಲಂಬಿಸಿರುತ್ತದೆ. ಭಾಷಾ ನಿರೂಪಕರನ್ನು ಆರಿಸುವಾಗ ಅವರು ಬೇರೆ ಬೇರೆ ಸಮುದಾಯಗಳ ಸಮರ್ಥ ಪ್ರತಿನಿಧಿಗಳಾಗಿರಬೇಕು. ಆಯ್ಕೆ ಮಾಡಿಕೊಂಡ ನಿರೂಪಕರಿಗೆ ಕೋಶರಚನೆ ಹಾಗೂ ಧ್ವನಿಶಾಸ್ತ್ರಕ್ಕೆ ಸಂಬಂಧಿಸಿದಂತೆ ಸೂಕ್ತ ತರಬೇತಿ ನೀಡಬೇಕಾಗುತ್ತದೆ.

ಭಾಷಾ ಸಮುದಾಯದಲ್ಲಿ ಸೂಕ್ತ ನಿರೂಪಕರು ಕೆಲವೊಮ್ಮೆ ಸಿಗದೇ ಇದ್ದಾಗ ಕೋಶಕಾರ ವಿವರಣಾತ್ಮಕರನ್ನು ಉಪಯೋಗಿಸಿಕೊಳ್ಳಬೇಕಾಗುತ್ತದೆ. (ಅಂತಹ ಸಂದರ್ಭಗಳು ಬಹಳ ಕಡಿಮೆ). ಅವರ ಮುಖ್ಯ ಕಾರ್ಯವೆಂದರೆ ಕೋಶಕಾರ ಮತ್ತು ಭಾಷಾ ಸಮುದಾಯದ ನಡುವೆ ಸಂಪರ್ಕವನ್ನುಂಟು ಮಾಡುವುದು, ಮಧ್ಯಸ್ಥಿಕೆ ವಹಿಸುವುದು. ವಿವರಣಾವರ್ತಕರು ಸಮುದಾಯದ ಭಾಷೆ ಮತ್ತು ಕೋಶಕಾರ ಭಾಷೆ ಎರಡರಲ್ಲೂ ಪ್ರಭುತ್ವ ಹೊಂದಿರಬೇಕಾಗುತ್ತದೆ. ಕೋಶಕಾರ ತನ್ನ ಅಧ್ಯಯನದ ಉದ್ದೇಶ, ಸ್ವರೂಪವನ್ನು ವಿವರಣಾಕರ್ತರಿಗೆ ತಿಳಿಸಿಕೊಡಬೇಕು. ಅವರಿಗೂ ಸೂಕ್ತ ತರಬೇತಿ ಕೊಡಬೇಕಾಗುತ್ತದೆ.

ಬಾಷಾ ಸಮುದಾಯ ೦   ೦ ಕೋಶಕಾರ

ವಿವರಣಾಕರ್ತ

ನಿರೂಪಕರ ಜೊತೆ ವಿವಿಧ ಜ್ಞಾನ ಕ್ಷೇತ್ರಗಳಿಂದ ಸೂಕ್ತ ಪರಿಣಿತರನ್ನು ಆರಿಸಿಕೊಂಡು ಅವರ ಸಲಹೆ, ಮಾರ್ಗದರ್ಶನ ಪಡೆಯಬೇಕು. ನಿರೂಪಕರು ಸಂಗ್ರಹಿಸಿದ ಮಾಹಿತಿಯನ್ನು ಈ ಪರಿಣಿತರು ಪರಾಮರ್ಶಿಸಬೇಕು. ಸಮಸ್ಯೆಗಳು ಮತ್ತು ಶಂಕೆಗಳು ಮೂಡಿದಾಗ ಪರಿಣಿತರಿಂದ ಪರಿಹಾರ ದೊರಕಿಸಿಕೊಳ್ಳಬೇಕು. ಇಂಥ ಸಂದರ್ಭಗಳಲ್ಲಿ ಪ್ರಚಲಿತವಾಗಿರುವ ಇತರ ನಿಘಂಟುಗಳ ಸಹಾಯವನ್ನೂ ಪಡೆಯಬೇಕು. ಹಾಗೆ ಹಲವು ಬಗೆಯ ಸಹಾಯ ಸಹಕಾರಗಳನ್ನು ಪಡೆಯುವುದನ್ನು ನಿಘಂಟುಕಾರ ಮರೆಯಬಾರದು. ನಿರೂಪಕರಿಂದ ಉದ್ದೇಶಿತ ಸಾಮಗ್ರಿಗಳನ್ನು ಹೊರತೆಗೆಯುವುದು ಸುಲಭದ ಕೆಲಸವಲ್ಲ. ಸಾಮಗ್ರಿಗಳು ಸಮಂಜಸತೆ ಮತ್ತು ವಿಶ್ವಸನೀಯತೆಯಿಂದ ಕೂಡಿರಬೇಕಾದರೆ ಹಾಗೂ ಕೋಶಕಾರನ ಕ್ಷೇತ್ರಕಾರ್ಯ ಯಶಸ್ವಿಯಾಗಲು, ಪರಿಣಾಮಕಾರಿಯಾಗಲು ಕ್ಷೇತ್ರಕರ್ತ ಪ್ರಶ್ನಾವಳಿ, ಸಂದರ್ಶನ, ವೀಕ್ಷಣೆ, ತಪಶೀಲುಪಟ್ಟ, ತಾಳೆಪಟ್ಟಿ, ಸಮಾಜೋಮಾಪನ ಪಟ್ಟಿ ಮುಂತಾದ ಸಾಧನ – ತಂತ್ರಗಳನ್ನು ಸದರ್ಭೂಚಿತವಾಗಿ ಬಳಸಬೇಕು. ಅವುಗಳನ್ನು ಬಳಸುವ ವಿಧಾನವನ್ನು ಚೆನ್ನಾಗಿ ಅರಿತವನಾಗಿರಬೇಕು. ಅವುಗಳನ್ನು ಬಳಸಿಕೊಂಡು ಸೃಜನಸಾಹಿತ್ಯ ಹಾಗೂ ಪ್ರಾಯೋಜ್ಯ ಸಾಹಿತ್ಯವಾದ ಕಾನೂನು, ವಾಣಿಜ್ಯ, ಆಡಳಿತ, ವೃತ್ತಿ ಮೊದಲಾದವುಗಳಿಗೆ ಸಂಬಂಧಿಸಿದ ಸಾಹಿತ್ಯದಿಂದಲೂ ದತ್ತ ಸಂಗ್ರಹ ಮಾಡಬೇಕು. ಪ್ರಚಲಿತ ಆಗು – ಹೋಗುಗಳನ್ನು ತಿಳಿದುಕೊಳ್ಳಲು ವರ್ತಮಾನ ಪತ್ರಿಕೆ, ನಿಯತಕಾಲಿಕೆಗಳಿಂದಲೂ ಸಾಮಗ್ರಿ ಸಂಗ್ರಹಿಸುವಾಗ ಭಾಷಾಕ್ಷೇತ್ರ ಪ್ರಮುಖ ಪಾತ್ರವಹಿಸುತ್ತದೆ.

ಆ. ನಿಘಂಟಿಮಗಳ ಆಯ್ಕೆ: ನಿಘಂಟುವಿನ ಉದ್ದೇಶ ಮತ್ತು ವ್ಯಾಪ್ತಿಗೆ ಅನುಗುಣವಾಗಿ ಉತ್ತಮವಾದ ನಿಘಂಟಿಮಗಳನ್ನು ಸಂಗ್ರಹಿಸುವುದೇ ಕ್ಷೇತ್ರ ಕಾರ್ಯದ ಮುಖ್ಯ ಉದ್ದೇಶವಾಗಿದೆ. ಉತ್ತಮವಾದ ನಿಘಂಟಿಮಗಳ ಮೇಲೆಯೇ ಕೋಶಕಾರನ ಕೋಶದ ರಚನೆ ನಿಂತಿರುತ್ತದೆ. ಕೋಶ ರಚನೆಯಲ್ಲಿ ನಿಘಂಟಿಮಗಳ ಆಯ್ಕೆ ಯಾವ ರೀತಿಯಾಗಿರಬೇಕೆಂಬುದರ ಬಗೆಗೆ ತುಳು ನಿಘಂಟು ಯೋಜನೆಯ ಪ್ರಧಾನ ಸಂಪಾದಕರಾದ ಡಾ. ಯು. ಪಿ. ಉಪಾಧ್ಯಾಯ ಅವರು ತುಂಬ ಸಮರ್ಪಕವಾದ ಮಾತುಗಳನ್ನಾಡಿದ್ದಾರೆ. “ಕೋಶಕ್ಕೆ ಬೇಕಾದ ಸಾಮಗ್ರಿಗಳನ್ನು ಕೇವಲ ಲಿಖಿತ ಗ್ರಂಥಗಳ ಮೂಲದಿಂದ ಮಾತ್ರವಲ್ಲದೆ ಸಾಮಾಜಿಕ ಹಾಗೂ ಪ್ರಾದೇಶಿಕ ಆಡುನುಡಿಗಳಿಂದಲೂ ಸಂಗ್ರಹಿಸಬೇಕು. ತುಂಬ ಘನವಾದ ಅಲಂಕಾರಿಕ ಉದ್ಗಂಥಗಳಿಂದ ಹಿಡಿದು ಗದ್ದೆಗಳಲ್ಲಿ ಕೆಲಸ ಮಾಡುವ ಹೆಣ್ಣಾಳುಗಳ ಅತ್ಯಂತ ಲಘುವಾದ ವಿನೋದಾತ್ಮಕ ಹಾಡುಗಳವರೆಗೆ ದಾರ್ಶನಿಕರ ಉಚ್ಚ ಮಟ್ಟದ ಸುಸಂಸ್ಕೃತ ಜ್ಞಾನೋಪದೇಶದಿಂದ ಹಿಡಿದು ಮಕ್ಕಳ ಸರಸ ಸ್ನಿಗ್ಧ ತೊದಲು ನುಡಿಗಳವರೆಗೆ ಎಲ್ಲ ರೀತಿಯ ರಚನಾ ಶೈಲಿಗಳನ್ನು ಕೋಶಕಾರರು ಸೆರೆ ಹಿಡಿಯಬೇಕು. ಔಪಚಾರಿಕ ಪ್ರಯೋಗಗಳೊಂದಿಗೆ ಭಿನ್ನ ಸಾಮಾಜಿಕ, ಆರ್ಥಿಕ ಸ್ತರಗಳಲ್ಲಿರುವ ಜನರ ಮಾತುಗಳನ್ನೂ ಆ ಪ್ರದೇಶದ, ಪಂಗಡ, ಜನಪದ ಆಚರಣೆಯ ಸಂದರ್ಭ ಮುಂತಾದವುಗಳನ್ನು ಸ್ಪಷ್ಟವಾಗಿ ಸೂಚಿಸಬಲ್ಲ ಸಂಕೇತಗಳೊಂದಿಗೆ ಬರೆದಿಟ್ಟುಕೊಳ್ಳಬೇಕು. ಸಾಧಿತ ಪದಗಳನ್ನು, ಸಮಸ್ತ ಪದಗಳನ್ನು, ಕೂಡುನುಡಿಗಳನ್ನು, ಸಮರ್ಪಕ ಉದಾಹರಣೆ, ನಿದರ್ಶನ, ಸಾಂಸ್ಕೃತಿಕ ಟಿಪ್ಪಣಿ, ವಿವರಣೆಗಳೊಂದಿಗೆ ದಾಖಲಿಸಿಕೊಳ್ಳಬೇಕು. ಅಂತರರಾಷ್ಟ್ರೀಯ ಉಪಯೋಗಕ್ಕೆ ಅನುಕೂಲವಾಗುವಂತೆ ದೇಶೀಯ ಲಿಪಿಯೊಂದಿಗೆ ರೋಮನ್‌ಲಿಪಿಯನ್ನೂ ಬಳಸಬೇಕು. ಪದಗಳಿಗೆ ಅರ್ಥವನ್ನು ದೇಶೀಯ ಭಾಷೆಯಲ್ಲೂ ಅಂತರರಾಷ್ಟ್ರೀಯ ಭಾಷೆಗಳಲ್ಲಿಯೂ ಕೊಡಬೇಕು. ಈ ರೀತಿಯಾಗಿ ರಚಿಸಿದ ಕೋಶವೇ ಸಂಪೂರ್ಣ ಹಾಗೂ ಸರ್ವ ಸಂಗ್ರಹಾಕವಾಗಬಲ್ಲದು.[5]

ನಿಘಂಟುಗಳ ಗಾತ್ರ, ಸ್ವರೂಪ ಹಾಗೂ ವೈವಿಧ್ಯತೆಯನ್ನು ಗಮನಿಸಿ ನಿಘಂಟಿಮಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಪ್ರಾಚೀನ ಸಾಹಿತ್ಯ ಗ್ರಂಥಗಳನ್ನು ಆಧರಿಸಿ ರಚಿತಗೊಳ್ಳುವ ನಿಘಂಟುಗಳಲ್ಲಿ ಸಾಮಾನ್ಯ ನಿಘಂಟುಗಳ ಜೊತೆಗೆ ಕ್ವಚಿತ್ತಾಗಿ ಕಂಡುಬರುವ ಪ್ರಯೋಗಗಳು, ಪುರಾತನ ರೂಪಗಳು, ಲುಪ್ತರೂಪಗಳು ಇತ್ಯಾದಿಗಳಿಗೆ ಸ್ಥಾನ ಸಿಗುತ್ತದೆ. ಸಾಮಾನ್ಯವಾಗಿ ನಿಘಂಟುಗಳಲ್ಲಿ ದೈನಂದಿನ ವ್ಯವಹಾರದಲ್ಲಿ ಬರುವ ಗಾದೆ, ಒಗಟು, ನುಡಿಗಟ್ಟುಗಳ ಸಂಗ್ರಹ, ಆ ಭಾಷೆಯ ಬಗೆಗೆ ಈವರೆಗೆ ಬಂದಂತಹ ಪ್ರಕಟಿತ ಪುಸ್ತಕಗಳಿಂದ ಶಬ್ದಗಳ ಹಾಗೂ ಉದ್ದರಣೆಗಳ ಸಂಗ್ರಹಣೆ ಹಾಗೂ ಬೇಸಾಯ, ತೋಟಗಾರಿಕೆ, ಮೀನುಗಾರಿಕೆ, ಬೇಟೆ, ಗಾಣ, ಕುಂಬಾರಿಕೆ, ಬಡಿಗ, ಕಂಬಾರಿಕೆ,ಬುಟ್ಟಿ ಮಾಡುವಿಕೆ ಮುಂತಾದ ವಿವಿಧ ವೃತ್ತಿ ಕಸುಬುಗಳು ಅವು ನಡೆಯುವ ಸ್ಥಳದಲ್ಲಿ ಮಾಹಿತಿದಾರರನ್ನು ಸಂದರ್ಶಿಸಿ ಮಾಡಿಕೊಂಡ ದಾಖಲಾತಿ. ಮದುವೆ, ಮೈನೆರೆಯುವುದು, ಅಂತ್ಯಕ್ರಿಯೆ ಮುಂತಾದ ಸಾಮಾಜಿಕ, ಧಾರ್ಮಿಕ ಆಚರಣೆಗಳನ್ನು ಹಬ್ಬ ಹರಿದಿನಗಳ ಆಚರಣೆಗಳನ್ನೂ ಆಯಾ ಸ್ಥಳದಲ್ಲಿಯೇ ವೀಕ್ಷಣೆ ಮಾಡಿದ ಪದ ಸಂಗ್ರಹ. ಹಂತಿ, ಕೋಲುಪದ, ಒನಕೆ ಹಾಡು, ಬೀಸುವ, ಕುಟ್ಟುವ ಹಾಡುಗಳಿಗೆ ಸಂಬಂಧಪಟ್ಟ ವಿವಿಧ ಸಂಪ್ರದಾಯಗಳ, ಆಚರಣೆಗಳ, ಜನಪದರ ನಂಬಿಕೆ, ವಿಧಿನಿಷೇಧಗಳು, ಬಾಲ ಭಾಷೆ, ವಿನೋದಗಳು, ಬೈಗುಳುಗಳು, ಸಂಬೋಧನೆಗಳು, ಕುಲನಾಮಗಳು, ವ್ಯಕ್ತಿನಾಮಗಳು, ಸ್ಥಳನಾಮ ಘಟಕಗಳು, ಗಿಡ, ಮರ, ಪ್ರಾಣಿಗಳಿಗೆ ಸಂಬಂಧಿಸಿದ ಶಬ್ದಗಳು ಮುಂತಾದವುಗಳ ಬಗೆಗೆ ಶಬ್ದಗಳ ಹಾಗೂ ವಿವರಣೆಗಳ ಸಂಗ್ರಹ. ಈ ಎಲ್ಲ ಪದರಚನೆಗಳು ನಿಘಂಟಿನಲ್ಲಿರಬೇಕು. ನಿಘಂಟುವಿನಲ್ಲಿ ಸೇರಿಸಬಹುದಾದ ಎಲ್ಲ ರೂಪಗಳೂ ನಿಘಂಟಿಮಗಳೇ ಆಗಿವೆ.

ನಿಘಂಟಿಮಗಳು ಭಾಷಿಕ ರಚನೆಯ ಸ್ವಾಭಾವಿಕ ಅಂಶಗಳನ್ನು ಒಳಗೊಂಡಿರಬೇಕು. ಅಂದರೆ ನಿರೂಪಕರು ಹೇಳಿದ ಹಾಗೆ, ಉಚ್ಚರಿಸಿದ ಹಾಗೆ ನಿಘಂಟಿಮಗಳು ಇರಬೇಕಾಗುತ್ತದೆ. ನಿಘಂಟಿಮಗಳು ಒಂದು ಭಾಷೆಯ ಬೇರೆ ಬೇರೆ ಉಪಭಾಷೆಯ ಕ್ಷೇತ್ರಗಳನ್ನು ಭಾಷಾ ಸಮುದಾಯಗಳನ್ನು ಪ್ರತಿನಿಧಿಸುತ್ತಿರಬೇಕು. ‘ಸಮುದಾಯದಲ್ಲಿ ಭಾಷಾ ಬಳಕೆಯ ಔಪಚಾರಿಕ, ಅನೌಪಚಾರಿಕ ಸನ್ನಿವೇಶಗಳ ವಿವಿಧ ಸಂದರ್ಭಗಳಲ್ಲಿಯ ನಿಘಂಟಿಮಗಳನ್ನು ಸಂಗ್ರಹಿಸುವುದು ಬಹಳ ಮುಖ್ಯವಾದುದು’.[6] ಆ ಸಂದರ್ಭ ಭಾಷಿಕರ ವಯಸ್ಸು ಮತ್ತು ಲಿಂಗ, ಆವೇಶದ ಸನ್ನಿವೇಶಗಳಲ್ಲಿಯ ಭಾಷೆ, ವೇಗೋಚ್ಚಾರಣೆಯ ಸಂದರ್ಭ ಮುಂತಾದವುಗಳನ್ನು ಕೋಶಕಾರ ಗಮನದಲ್ಲಿಟ್ಟುಕೊಳ್ಳಬೇಕು. ಕೋಶಕಾರ ಸಮುದಾಯದ ಭಾಷಾ ಬಳಕೆಯ ಯಾವ ಸಂದರ್ಭವನ್ನು ಬಿಡಬಾರದು. ನಿಘಂಟನ್ನು ರಚಿಸುವಾಗ ಅವು ಒಂದಿಲ್ಲ ಒಂದು ರೀತಿಯಲ್ಲಿ ಕೋಶಕಾರನಿಗೆ ನೆರವಾಗುತ್ತವೆ.

ಇ. ನಿಘಂಟಿಮಗಳ ರಚನೆ : ಕ್ಷೇತ್ರಕಾರ್ಯದಿಂದ ನಿಘಂಟಿಮಗಳನ್ನು ಸಂಗ್ರಹಿಸಿದ ನಂತರ ಅವುಗಳನ್ನು ವ್ಯವಸ್ಥಿತವಾಗಿ, ಕ್ರಮಬದ್ಧವಾಗಿ ಸಂಯೋಜಿಸಬೇಕಾಗುತ್ತದೆ. ಈ ಕ್ರಿಯೆ ಮೂರು ರೀತಿಯಾಗಿ ನಡೆಯುತ್ತದೆ.

– ಆಲೇಖಿಸುವುದು ಮತ್ತು ಪ್ರಧಾನ ಪದ ಗುರುತಿಸುವುದು
– ನಿಘಂಟಿಮಗಳ ಅರ್ಥ ಮತ್ತು ವೈವಿಧ್ಯತೆಯನ್ನು ಗುರುತಿಸುವುದು
– ನಿಘಂಟಿಮಕ್ಕೆ ವಿವರಣೆ ಕೊಡುವುದು

ಆಲೇಖಿಸುವುದು ಮತ್ತು ಪ್ರಧಾನ ಪದ ಗುರುತಿಸುವುದು

ನಿರೂಪಕರು ಉಚ್ಚರಿಸಿದ ಹಾಗೆ ನಿಘಂಟಿಮಗಳನ್ನು ಅಂತರರಾಷ್ಟ್ರೀಯ ಧ್ವನಿಪಟ್ಟಿಯ ಸಂಕೇತಗಳ ಸಹಾಯದಿಂದ ಆಳೇಖಿಸಿಕೊಳ್ಳಬೇಕು. ನಿಘಂಟಿಮಗಳನ್ನು ಮೊದಲು ನೋಟ್‌ಬುಕ್‌ದಲ್ಲಿ ಪೆನ್ಸಿಲ್‌(ಸೀಸ)ದ ಸಹಾಯದಿಂದ ಬರೆದಿಟ್ಟುಕೊಳ್ಳುವುದು ಉತ್ತಮ. ನಂತರ ಒಂದೊಂದು ದತ್ತಾಂಶದ ಬಗ್ಗೆ ಪ್ರತ್ಯೇಕವಾಗಿ ಕಾರ್ಡ್‌(ಪಟ್ಟಿ)ಗಳಲ್ಲಿ ಬರೆಯುತ್ತಾ ಹೋಗಬೇಕು.

ಅ. ನಂ. ಧ್ವನ್ಯಾಲೇಖ[Mani] ಧ್ವನಿಮಾಲೇಖ
/ [Mani] /
೧. ಧ್ವನ್ಯಾಲೇಖ[Phin] ಧ್ವನಿಮಾಲೇಖ
/ Pin/

ಸಾಂಪ್ರದಾಯಿಕ ಲಿಪಿಯಿಂದ ಬೇರ್ಪಡಿಸಿ ತೋರಿಸಲು ಧ್ವನ್ಯಾಲೇಖಕ್ಕೆ [] ಈ ರೀತಿ, ಧ್ವನಿಮಾಲೇಖಕ್ಕೆ / / ಈ ರೀತಿಯ ಗೆರೆಗಳನ್ನು ಉಪಯೋಗಿಸಬೇಕು. ಆ ಪಟ್ಟಿಗಳ ಹಿಂದೆ ಆ ಪದಗಳು ಎಷ್ಟು ಸಾರಿ ಬಂದಿವೆ, ಎಂಬುದನ್ನು ರೋಮನ್‌ಸಂಖ್ಯೆಯಲ್ಲಿ ಬರೆಯಬೇಕು. ಪಟ್ಟಿಗಳು ಸಾಮಾನ್ಯವಾಗಿ ೫.೫x೩.೫ಅಥವಾ ೪x೬ ಅಳತೆಯಲ್ಲಿರಬೇಕು. ಆ ಪಟ್ಟಿಯ ಹಿಂದೆ ದಾಖಲಿಸಿದ ಪದ/ವಾಕ್ಯ ಯಾವ ಆಕರದಿಂದ ತೆಗೆದುಕೊಂಡಿದ್ದೇವೆ ಎಂಬುದನ್ನು ಗುರುತಿಸಿಕೊಳ್ಳಬೇಕು.

ಶಬ್ದ ಅರ್ಥ
ಆಕರ ವಿಶೇಷಾಂಶ
ಪ್ರಯೋಗ (ಗ್ರಂಥ/ಆಡುನುಡಿ) ಆವೃತ್ತಿ

ಈ ಅಂಶಗಳ ಹಿನ್ನೆಲೆಯಲ್ಲಿ ನಿಘಂಟಿಮಗಳ ಸ್ವರೂಪವನ್ನು ಗುರುತಿಸಬೇಕು. ನಿಘಂಟು ಸಿದ್ಧತೆಯಲ್ಲಿ ಪ್ರಧಾನ ಪದವನ್ನು ಕಲೆಹಾಕುವುದು ಬಹುಮುಖ್ಯವಾದುದು. ಅದು ನಿಘಂಟಿಮದ ರೂಪ ವರ್ಗವನ್ನು ಸೂಚಿಸುತ್ತದೆಯಲ್ಲದೆ ಅದರ ಕೆಳಗೆ ಬರುವ ಇತರ ಮಾಹಿತಿಗಳಿಗೆ ಅದು ಆಧಾರವಾಗಿ ನಿಲ್ಲುತ್ತದೆ. ಪ್ರಧಾನ ಪದದ ನಂತರ ಅದರ ವ್ಯಾಕರಣ ಮಾಹಿತಿಯನ್ನು ನೀಡಬೇಕು. ಒಂದು ಭಾಷಾ ಸಮುದಾಯದಲ್ಲಿ ಹೆಚ್ಚು ಬಳಕೆಯಾಗುವ, ಹೆಚ್ಚು ಜನರು ಉಪಯೋಗಿಸುವ ರೂಪಗಳು ಪ್ರಧಾನಪದಗಳಾಗುತ್ತವೆ.[7] ಪ್ರಧಾನ ಪದಗಳಲ್ಲಿರುವ ನಾಮಪದ, ಕ್ರಿಯಾಪದ, ವಿಶೇಷಣಗಳು ಮುಂತಾದ ವ್ಯಾಕರಣ ವರ್ಗಗಳಿಗೆ ಸಂಬಂಧಪಟ್ಟಂತೆ ಬಣ್ಣದ ಕಾರ್ಡುಗಳನ್ನು ಉಪಯೋಗಿಸುವುದು ಒಳ್ಳೆಯದು. ಮುಂದೆ ಕೋಶಕಾರನಿಗೆ ನಿಘಂಟಿಮಗಳನ್ನು ವರ್ಗೀಕರಿಸಲಿಕ್ಕೆ, ಸಯೋಜಿಸಲಿಕ್ಕೆ ಅನುಕೂಲವಾಗುತ್ತದೆ.

ನಿಘಂಟಿಮಗಳ ಅರ್ಥ ವೈವಿಧ್ಯತೆಯನ್ನು ಗುರುತಿಸುವುದು

ಇದು ನಿಘಂಟು ರಚನೆಯಲ್ಲಿ ಮುಖ್ಯವಾದ ಹಂತ. ಶಬ್ದಾರ್ಥವನ್ನು ತಿಳಿಸುವ ಕೆಲವು ಬೇರೆ ಬೇರೆ ಮಾರ್ಗಗಳಿವೆ.

೧. ವಿವರಿಸುವುದು ಮತ್ತು ಸೂತ್ರಪ್ರಾಯವಾಗಿ ನಿರೂಪಿಸುವುದು.

೨. ನಿಘಂಟುವಿನಲ್ಲಿರುವ ಇತರ ಶಬ್ದಗಳನ್ನು ಸಮಾನಾರ್ಥಕವಾಗಿ ಸೂಚಿಸುವುದು.

೩. ಅರ್ಥ ಸ್ಪಷ್ಟತೆಗೆ ದೃಷ್ಟಾಂತಗಳನ್ನು ನೀಡುವುದು.

ಶಬ್ದಾರ್ಥ ವಿವರಣೆ ಓದುಗರಿಗೆ ಸಂಪೂರ್ಣವಾಗಿ ತಿಳಿಯುವಂತಿರಬೇಕು. ಅರ್ಥ ನಿರ್ಧಾರವೆಂದರೆ ಆ ಶಬ್ದಕ್ಕೆ ಕವಿಗಳು, ವಿದ್ವಾಂಸರು ಹಾಗೂ ಆ ಸಮುದಾಯದ ಭಾಷಿಕರು ಒಂದು ಶಬ್ದಕ್ಕೆ ಏನು ಅರ್ಥವಿದೆಯೆಂದು ತಿಳಿದು ಆ ಪದವನ್ನು ಉಪಯೋಗಿಸಿದ್ದಾರೆಯೋ ಅದನ್ನು ನಿರ್ಧಾರವಾಗಿ ಹೇಳುವುದು ಎಂದು ಅರ್ಥ. ಇದರ ಅರ್ಥ ಹೀಗಿರಬೇಕು ಎಂದು ತೀರ್ಮಾನ ಮಾಡುವುದಲ್ಲ. ಸಮಾಜ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಶಬ್ದಗಳು ಬಂದರೆ ಉದಾ: ಮೈಲಿಗೆ, ಸೂತಕ, ಸೀಮಂತ, ನೈವೇದ್ಯ, ಇವುಗಳ ವಿವರಣೆಯನ್ನು ಬಳಕೆ ಸಂದಂರ್ಭವನ್ನು ಗಮನದಲ್ಲಿಟ್ಟುಕೊಂಡು ಕೊಡಬೇಕಾಗುತ್ತದೆ.

ಸಾಮಾಜಿಕ ಪರಿಸರಕ್ಕೆ ಅನುಗುಣವಾಗಿ ನಿಘಂಟಿಮಗಳ ಅರ್ಥ ವ್ಯತ್ಯಾಸ ಹೊಂದುತ್ತವೆ. ಒಂದು ಭಾಷೆಯಲ್ಲಿ ನಿಘಂಟಿಮಗಳನ್ನು ಬಳಸುವಾಗ ಅದಕ್ಕೆ ಬಾಹ್ಯ ಜಗತ್ತಿನಲ್ಲಿರುವ ವಸ್ತುಗಳೊಂದಿಗೆ ಸಂಬಂಧವಿರುತ್ತದೆ. ಅದು ನಿಘಂಟಿನ ನಿರ್ದೇಶಕಾರ್ಥ. ಒಂದು ವಸ್ತು ಇನ್ನೊಂದು ವಸ್ತುವಿಗಿಂತ ಭಿನ್ನವೆಂದು ತೋರಿಸುವ ಲಕ್ಷಣಗಳಿರುತ್ತವೆ. ಉದಾ: ‘ಹುಡುಗ’ ಎಂದು ಹೇಳುವಲ್ಲಿ ಅದು ಹುಡುಗಿಗಿಂತ ಭಿನ್ನವೆಂಬ ಅಂಶ ಇರುತ್ತದೆ, ನಿಘಂಟಿನಲ್ಲಿ ವಾಚ್ಯಾರ್ಥಕ್ಕಿಂತ ವಿಶೇಷಾರ್ಥವಿದ್ದರೆ ಅದು ಸೂಚ್ಯಾರ್ಥ. ಉದಾ: ಸಾಯು, ದೈವಾದೀನನಾಗು, ಕೈಲಾಸವಾಸಿಯಾಗು, ಲಿಂಗೈಕ್ಯನಾಗು, ವೈಕುಂಠವಾಸಿಯಾಗು ಎಂಬ ರೂಪಗಳ ವಾಚ್ಯಾರ್ಥ ಒಂದೇ ಆದರೂ ಜೊತೆಗೆ ವಿಶೇಷ ಅರ್ಥಗಳೂ ಅವುಗಳಿಗೆ. ನಿರ್ದೇಶಕಾರ್ಥಗಳಿಗಿಂತ ಈ ಸೂಚ್ಯಾರ್ಥಗಳು ಕಾಲ, ಪ್ರದೇಶ ಹಾಗೂ ಸಾಮಾಜಿಕ ಗುಂಪುಗಳನ್ನವಲಂಬಿಸಿ ಬದಲಾಗುತ್ತವೆ. ನಿಘಂಟಿಮಗಳ ಬಳಕೆಯನ್ನವಲಂಬಿಸಿ ಅದರ ವ್ಯಾಪ್ತಿ ಇರುತ್ತದೆ. ಕನ್ನಡದಲ್ಲಿ ‘ಕಾಣಿಕೆ’ ಹಾಗೂ ‘ಪ್ರಸಾದ’ ಇವುಗಳಿಗೆ ನಿರ್ದೇಶಕಾರ್ಥ ಒಂದೇ ಆದರೂ ‘ಪ್ರಸಾದ’ ಎಂಬ ರೂಪ ದೇವರ ಸಂದರ್ಭದಲ್ಲಿ ‘ಕಾಣಿಕೆ’ ಎಂಬ ರೂಪ ಇತರ ಸಂದರ್ಭದಲ್ಲಿ ಬಳಕೆಯಾಗುತ್ತದೆ.

ಭಾಷೆಗಳಲ್ಲಿ ಮೂಲಭೂತವೆನಿಸಿದ ಶಬ್ದಗಳಿಗೂ ಅರ್ಥವನ್ನು ವಿವರಿಸುವುದು ಸುಲಭದ ಕೆಲಸವಲ್ಲ. ಅಂತಹ ಪದಗಳಿಗೂ ಪ್ರಾದೇಶಿಕ ನುಡಿಗಳಲ್ಲಿ ಗಣನೀಯವಾದ ಅರ್ಥ ಭೇದಗಳಿರುತ್ತವೆ. ಉದಾ: ‘ತಲೆ’ ಎನ್ನುವ ಅರ್ಥವನ್ನು ಸೂಚಿಸುವ ಕನ್ನಡ ಶಬ್ದ ಕೆಲವು ಸೀಮಿತ ಸಂದರ್ಭಗಳಲ್ಲಿ ಮಾತ್ರ ತಲೆ ಎಂದರ್ಥದಲ್ಲಿ ಪ್ರಯೋಗವಾಗುತ್ತದೆ. ಇತರ ಸಂದರ್ಭಗಳಲ್ಲಿ ಕೂದಲು, ತಲೆಮಾರು, ಬುದ್ಧಿಶಕ್ತಿ, ತುದಿ, ವ್ಯಕ್ತಿ, ಗಮನ ಮುಂತಾದ ಅರ್ಥಗಳನ್ನು ಸೂಚಿಸುತ್ತದೆ. ಇಂತಹ ಹಲವಾರು ಶಬ್ದಗಳಿಗೆ ಅರ್ಥ ಭೇದಗಳಿವೆ. ಒಂದು ಪದಕ್ಕೆ ಒಂದು ಪ್ರದೇಶದಲ್ಲಿ ಒಂದು ರೀತಿಯ ಅರ್ಥಗಳಿದ್ದರೆ, ಇನ್ನೊಂದು ಪ್ರದೇಶದಲ್ಲಿ ಅದೇ ಪದಕ್ಕೆ ಇನ್ನೊಂದು ರೀತಿಯ ಅರ್ಥಗಳಿರುವುದೂ ಸಾಧ್ಯವಿದೆ. ಉದಾ ಕನ್ನಡದಲ್ಲಿ ‘ತಿಂಡಿ’ ಎಂಬ ಪದಕ್ಕೆ ತಿನಿಸು, ಉಪಹಾರ ಎನ್ನುವ ಅರ್ಥ ಒಂದು ಪ್ರದೇಶದಲ್ಲಿದ್ದರೆ ಇನ್ನೊಂದು ಪ್ರದೇಶದಲ್ಲಿ ಬೆದೆ, ತುರಿಸು ಎನ್ನುವ ಅರ್ಥವಿದೆ. ಪ್ರದೇಶ ಭೇದದಿಂದ ಅರ್ಥ ವ್ಯತ್ಯಾಸವಾಗುವುದು. ಪ್ರಾದೇಶಿಕ ಪರಿವೀಕ್ಷಣೆ ಇಂತಹ ಸಂದರ್ಭಗಳಲ್ಲಿ ಕೋಶಕಾರನಿಗೆ ಬಹಳ ಮುಖ್ಯ. ಕೋಶಕಾರ ಒಂದು ಪದಕ್ಕಿರುವ ಗೌಣಾರ್ಥ, ಸಾದೃಶ್ಯಾರ್ಥ, ಸಂದರ್ಭಾರ್ಥ, ಸೂಚ್ಯಾರ್ಥ, ಅಲಂಕಾರಿಕಾರ್ಥ, ನಿಂದ್ಯಾರ್ಥ, ಸಾಂಕೇತಿಕಾರ್ಥಗಳಲ್ಲಿ ಯಾವುದನ್ನು ಕಡೆಗಣಿಸುವುದು ಸಾಧ್ಯವಿಲ್ಲ. ಉಪಭಾಷಾ ಸಾಮಗ್ರಿಗಳಲ್ಲಿ ಕೋಶಕಾರರಿಗೆ ಸಾಧಿತ ಪದಗಳು, ನುಡಿಗಟ್ಟುಗಳು ಸಿಕ್ಕುತ್ತವೆ. ಅವುಗಳಲ್ಲಿ ಸಂಸ್ಕೃತಿ ಸಮಾಜ, ವೃತ್ತಿಗಳಿಗೆ ಸಂಬಂಧಿಸಿದ ಅರ್ಥ ವಿಶೇಷಗಳು ಅಭಿವ್ಯಕ್ತಗೊಳ್ಳುತ್ತವೆ. ಉದಾ: ಕನ್ನಡದ ‘ಅಕ್ಕಿ’ ಇದಕ್ಕೆ ಸಂಬಂಧಿಸಿದಂತೆ ಉಡಿಯಕ್ಕಿ, ಹಿಟ್ಟಕ್ಕಿ ಮುಂತಾದ ಪದಪುಂಜಗಳು ಬೇರೆ ಬೇರೆ ಸಾಂಸ್ಕೃತಿಕ ಸಂದರ್ಭಗಳಲ್ಲಿ ದೊರೆಯುತ್ತವೆ. ಕೋಶಕಾರ ಅವುಗಳನ್ನು ಗಮನಿಸಬೇಕಾಗುತ್ತದೆ.

ಭಾಷೆಯಲ್ಲಿ ಹಲವಾರು ಪದಸಮುಚ್ಚಯಗಳಿರುತ್ತವೆ. ಹಸಿಗಡಿಗೆ, ಅಡಕಲುಗಡಿಗೆ ಇವು ಸಮಾಸಗಳಲ್ಲ ಒಂದೇ ರೀತಿಯಲ್ಲಿ ಬರಬಹುದಾದ ಸಾಮಾನ್ಯ ಪದಪುಂಜಗಳೂ ಅಲ್ಲ. ಇಂತಹ ಸಮುಚ್ಚಯಗಳು ನಿಘಂಟಿಮಗಳ ನಿಗದಿತ ಸಂಯೋಜನೆಯಿಂದ ಉಂಟಾಗುತ್ತವೆ. ಇವುಗಳನ್ನು ನಿಘಂಟಿನಲ್ಲಿ ಸೂಚಿಸಬೇಕು. ನುಡಿಗಟ್ಟುಗಳು ಒಂದು ಬಗೆಯ ನಿಘಂಟಿಮಗಳ ಸಂಯೋಜನೆಯೇ ಸರಿ. ನುಡಿಗಟ್ಟಿನ ಘಟಕಗಳ ಅರ್ಥಗಳಿಗಿಂತ ನುಡಿಗಟ್ಟಿನ ಅರ್ಥ ಭಿನ್ನವಾಗಿರುತ್ತದೆ. ಉದಾ: ಕಾಲಿಗೆ ಬುದ್ಧಿ ಹೇಳು – ಪಲಾಯನ ಮಾಡು, ಕಿವಿಕಚ್ಚು – ಚಾಡಿ ಹೇಳು ಮುಂತಾದವು. ಇದೇ ರೀತಿಯಲ್ಲಿ ಉದ್ಧರಣೆಗಳನ್ನು, ಸೂಕ್ತಿಗಳನ್ನು ಗಾದೆಗಳನ್ನು ಸಹ ನಿಘಂಟಿಮಗಳೆಂದು ಪರಿಗಣಿಸಬಹುದು.

ನಿಘಂಟಿಮದ ವ್ಯಾಖ್ಯೆಯನ್ನು ಓದುವಾಗ ಅದು ಸಾಮಾನ್ಯ ಭಾಷಿಕನಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು. ಉದಾ: ಆನೆ; ‘ಮೊರದಂತೆ ದೊಡ್ಡದಾದ ಕಿವಿಗಳಿರುವ, ಕಂಬದಂತೆ ಕಾಲುಗಳಿರುವ ಪ್ರಾಣಿಗಳಲ್ಲೆಲ್ಲ ದೊಡ್ಡದಾದ ಪ್ರಾಣಿ’ ಎಂದು ಹೇಳಬೇಕೇ ವಿನಹ ‘ದೊಡ್ಡ ಪ್ರಾಣಿ’ ಎಂಬ ವ್ಯಾಖ್ಯೆಯನ್ನು ಕೊಡುವುದು ಅಲ್ಲ. ‘ಕಹಿ’ ಎನ್ನುವ ಶಬ್ದಕ್ಕೆ ಎಷ್ಟು ವಿವರಣೆ ಕೊಟ್ಟರೂ ‘ಬೇವಿನ ಎಲೆಯನ್ನಾಗಲಿ, ಕಾಯಿಯನ್ನಾಗಲಿ, ಬಾಯಲ್ಲಿ ಅಗಿದಾಗ ನಾಲಗೆಗೆ ಕಂಡುಬರುವ ಒಂದು ರುಚಿ’ ಎಂದು ಹೇಳಿದಷ್ಟು ಅರ್ಥ ಸ್ಪಷ್ಟವಾಗುವುದಿಲ್ಲ. ನಿಘಂಟುಕಾರರು ಇಂಥ ಉಪಾಯಗಳನ್ನೆಲ್ಲ ಉಪಯೋಗಿಸಬೇಕಾಗುತ್ತದೆ.

ನಿಘಂಟುಗಳಲ್ಲಿ ನಿಘಂಟಿಮಗಳ ಸಮನಾರ್ಥಕ ರೂಪಗಳನ್ನು ಕೊಡುವುದು ತುಂಬ ಅವಶ್ಯಕ. ಅವುಗಳನ್ನು ನಿಘಂಟಿಮಾತ್ಮಕ ವ್ಯಾಖ್ಯೆಯನ್ನು ಕೊಟ್ಟ ಬಳಿಕ ಕೊಡಬಹುದು. ಉದಾ: ಹೊಲ – ವ್ಯವಸಾಯಕ್ಕೆ ಬಳಸುವ, ಮಣ್ಣಿನಿಂದ ಕೂಡಿದ ಪ್ರದೇಶ. ಗದ್ದೆ; ಭೂಮಿ; ನೆಲ. ಈ ರೀತಿ ಸಮಾನಾರ್ಥಕ ರೂಪಗಳನ್ನು ಕೊಡುವುದರಿಂದ ನಿಘಂಟಿಮದ ಅರ್ಥವ್ಯಾಪ್ತಿ ಸ್ಫುಟಗೊಳ್ಳುತ್ತದೆಯಲ್ಲದೇ ನಿಘಂಟು ಬಳಸುವವರಿಗೆ ತಮಗೆ ಬೇಕಾದ ಅರ್ಥವನ್ನು ಆರಿಸಿಕೊಳ್ಳುವುದು ಸುಲಭ ಸಾಧ್ಯವಾಗುತ್ತದೆ. ಸಮಾನಾರ್ಥಕ ರೂಪಗಳಂತೆ ಅನೇಕಾರ್ಥ ರೂಪಗಳನ್ನು ನಿಘಂಟುಗಳಲ್ಲಿ ಕೊಡಬೇಕು. ಅನೇಕಾರ್ಥಗಳಲ್ಲಿ ಅರ್ಥ ಭಿನ್ನತೆ ಇರುವುದರಿಂದ ಭಿನ್ನ ನಿಘಂಟಿಮಗಳೆಂದು ಪರಿಗಣಿಸಲಾಗುತ್ತದೆ.

ಉದಾ:

ಕಲೆ : ಲಲಿತ ವಿದ್ಯೆ
ಕಲೆ : ಗುರುತು
ಅಲೆ : ತಿರುಗಾಡು
ಅಲೆ : ತೆರೆ, ತರಂಗ

ಕೋಶಕಾರ ಆಯಾ ಶಬ್ದಗಳ ಮೂಲವನ್ನು, ಬೇರೆ ಬೇರೆ ಸಂದರ್ಭದಲ್ಲಿ ಅದು ಕೊಡುವ ಅರ್ಥ ಛಾಯೆಯನ್ನು ಗಮನಿಸಿ ಬೇರೆ ಬೇರೆಯಾಗಿ ನಿರೂಪಿಸಬೇಕು.

ನಿಘಂಟಿಮದ ವಿವರಣೆ ಕೊಡುವುದು

‘ನಿಘಂಟಿಮದ ವಿವರಣೆ ಅದರ ಅರ್ಥದಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಸೂಚಿಸಲಾದ ನಿಘಂಟಿಮದ ಸ್ವರೂಪವೇನು? ಅದು ಬರಹದ ರೂಪಕ್ಕೆ ಸೇರಿದ್ದೇ, ಆಡುಮಾತಿಗೆ ಸೇರಿದ್ದೇ, ಪ್ರಾದೇಶಿಕ ರೂಪವೇ, ಪ್ರಾಚೀನ ರೂಪವೇ, ಪಾರಿಭಾಷಿಕ ಪದವೇ ಈ ಮೊದಲಾದ ವಿವರಗಳನ್ನು ನಿಘಂಟಿಮದ ಜೊತೆಯಲ್ಲಿಯೇ ನಮೂದಿಸಬೇಕು. ಅವುಗಳನ್ನು ಹೆಚ್ಚಾಗಿ ಸಂಕ್ಷಿಪ್ತ ರೂಪದಲ್ಲಿ ಸೂಚಿಸಬೇಕು.

ಉದಾ:

ಗ್ರಾಂ (= ಗ್ರಾಂಥಿಕ)
ಆ. ಮಾ. (= ಆಡುಮಾತು)
ಗ್ರಾ. (=ಗ್ರಾಮ್ಯ)
ಪ್ರಾ. ರೂ. (=ಪ್ರಾಚೀನ ರೂಪ)
ಸ. ಶಾ. (=ಸಸ್ಯಶಾಸ್ತ್ರ)
ಪ್ರಾ. ಶಾ. (= ಪ್ರಾಣಿಶಾಸ್ತ್ರ)

ವಿದ್ವಾಂಸರು ಒಪ್ಪಿಕೊಂಡು ಬಳಕೆಯಾದ ರೂಪಗಳನ್ನೇ ಈ ವಿವರ ಕೊಡಲು ಬಳಸಬೇಕೇ ವಿನಃ ಮನಸ್ಸಿಗೆ ಬಂದಂತೆ ಅವುಗಳನ್ನು ಬದಲಾಯಿಸಿಕೊಳ್ಳಬಾರದು. ಸಾಧಿತ ರೂಪಗಳನ್ನು ನಿಘಂಟಿಮಗಳನ್ನಾಗಿ ಆರಿಸಿಕೊಳ್ಳಬಹುದು. ಆದರೆ ಆಗ ಅವುಗಳ ಮೂಲ ರೂಪಗಳನ್ನು ಅಲ್ಲಿಯೇ ಸೂಚಿಸಬೇಕು. ಹುಡುಗ (<ಹುಡಿಗಿ) ಇತ್ಯಾದಿ. ನಿಘಂಟಿನಲ್ಲಿ ನಿಘಂಟಿಮಗಳ ಪ್ರಯೋಗಗಳನ್ನು ಕಾಲಾನುಕ್ರಮದಲ್ಲಿ ಜೋಡಿಸುವುದು ಬಹುಮುಖ್ಯ. ಕೋಶಕಾರರು ಒಂದು ನಿಘಂಟುವಿಗೆಂದು ಗ್ರಂಥಗಳಿಂದ, ಶಾಸನಗಳಿಂದ, ಆಡುನುಡಿಗಳಿಂದ ಸಾವಿರಾರು ನಿಘಂಟಿಮಗಳನ್ನು ಸಂಗ್ರಹಿಸಿರುತ್ತಾರೆ. ಅವುಗಳು ಅಕಾರಾದಿಯಾಗಿ ಜೋಡಣೆಗೊಂಡಾಗ ಒಂದೊಂದು ಶಬ್ದಕ್ಕೆ ನೂರಾರು ಪೆಟ್ಟಿಕೆಗಳು ದೊರಕಬಹುದು. ಪರ್ಯಾಯ ರೂಪಗಳ ಪಟ್ಟಿಕೆಗಳನ್ನು ಒಟ್ಟು ಸೇರಿಸಿದರೆ ಅವು ಇನ್ನೂ ಹೆಚ್ಚಬಹುದು. ನಿಘಂಟಿನಲ್ಲಿ ಅವುಗಳೆಲ್ಲವನ್ನೂ ಉಲ್ಲೇಖ ಮಾಡುವುದು ಅಸಾಧ್ಯದ ಕೆಲಸ. ಆದರೆ ಎಲ್ಲ ಪಟ್ಟಿಕೆಗಳ ಪ್ರಯೋಜನವನ್ನು ನಾವು ಪಡೆಯುತ್ತೇವೆ. ಆದುದರಿಂದ ಒಂದು ಶಬ್ದಕ್ಕೆ ಎಷ್ಟು ಅರ್ಥಗಳಿವೆ ಎಂಬುದನ್ನು ಮೊದಲು ನಿರ್ಧರಿಸಿ ಅವುಗಳನ್ನು ತಾರ್ಕಿಕವಾದ ಕ್ರಮದಲ್ಲಿ ಅಳವಡಿಸಬೇಕು. ಪ್ರತಿಯೊಂದು ಪರ್ಯಾಯ ರೂಪಕ್ಕೂ ಇರುವ ಪಟ್ಟಿಕೆಗಳನ್ನು ಆ ಬಳಿಕ ಕಾಲಾನುಕ್ರಮದಲ್ಲಿ ಜೋಡಿಸಬೇಕು. ನಂತರ ಒಂದೊಂದು ಶತಮಾನಕ್ಕೆ ಒಂದರಂತೆ ಪ್ರಯೋಗಗಳನ್ನು ಆರಿಸಬೇಕು. ಪ್ರತಿಯೊಂದು ಪರ್ಯಾಯ ರೂಪಕ್ಕೂ ಶತಮಾನಗಳ ಅನುಸಾರವಾಗಿ ಪಟ್ಟಿಕೆಗಳನ್ನು ಜೋಡಿಸಬೇಕು. ಪಟ್ಟಿಕೆಗಳನ್ನು ಜೋಡಿಸುವಾಗ ಕೋಶಕಾರ ಗಣಕಯಂತ್ರವನ್ನು ಬಳಸಿದರೆ ಸಮಯ ಉಳಿತಾಯವಾಗುವುದಲ್ಲದೆ ಕೆಲಸವು ಅಚ್ಚುಕಟ್ಟಾಗುತ್ತದೆ.

ನಿಘಂಟಿಮಗಳನ್ನು ಕೊಡುವಾಗ ಅನುಸರಿಸಬೇಕಾದ ಕ್ರಮಗಳನ್ನು ಕುರಿತು ತುಳು ಹೇಳಿದ್ದಾರೆ.[8] ಅವು ಇಂತಿವೆ.

೧. ಶಬ್ದವನ್ನು ಮೊದಲು ಕನ್ನಡ ಲಿಪಿಯಲ್ಲಿಯೂ, ಆಮೇಲೆ ಅಂತಾರಾಷ್ಟ್ರೀಯ ಧ್ವನಿ ಲಿಪಿಯ ಆಧಾರದ ಮೇಲೆ ಅಳವಡಿಸಿಕೊಂಡು ರೋಮನ್‌ಲಿಪಿಯಲ್ಲಿಯೂ ಕೊಡುವುದು.

೨. ಶಬ್ದದ ಕೊನೆಯಲ್ಲಿ ಆ ಶಬ್ದ ಯಾವ ಪ್ರಾದೇಶಿಕಮತ್ತು ಸಾಮಾಜಿಕ ಪ್ರಭೇದಗಳಲ್ಲಿ ಅಥವಾ ಜನಪದ ಸಾಹಿತ್ಯದಲ್ಲಿ ಕಂಡುಬರುತ್ತದೆ, ಯಾವ ಲಿಪಿ ಮೂಲದಲ್ಲಿ ಕಂಡುಬರುತ್ತದೆ ಎಂದು ಸಂಕೇತಾಕ್ಷರದ ಮೂಲಕ ತಿಳಿಸುವುದು.

೩. ಆ ಶಬ್ದಕ್ಕೆ ಸಂವಾದಿಯಾಗಿ ಇತರ ಆಡುನುಡಿಗಳಲ್ಲಿ ಕಂಡುಬರುವ ಪದಗಳನ್ನು ಉಲ್ಲೇಖಿಸುವುದು.

೪. ಅಂತಾರಾಷ್ಟ್ರೀಯ ಲಿಪಿಸಂಕೇತದಲ್ಲಿ (ಪರಿಷ್ಕೃತ ರೋಮನ್‌ಲಿಪಿಯಲ್ಲಿ) ನಿಘಂಟು ರಚನೆ ಮಾಡುವ ಭಾಷೆಯ ಧ್ವನಿಮಾಗಳನ್ನು ಮಾತ್ರ ಸೂಚಿಸುವ ಸಂಕೇತಗಳನ್ನು ಬಳಸಿಕೊಳ್ಳುವುದು.

೫. ಬೇರೆ ಬೇರೆ ಆಡುನುಡಿಗಳಲ್ಲಿ ಬಳಕೆಯಲ್ಲಿರುವ ಬೇರೆ ಬೇರೆ ರೂಪಗಳೆಲ್ಲವನ್ನು ಅಕಾರಾದಿ ಪಟ್ಟಿಯಲ್ಲಿ ಸೇರಿಸುವುದು. ಆದರೆ ಒಂದು ಕಡೆ ಮಾತ್ರ ಆ ಶಬ್ದದ ಅರ್ಥ ಮತ್ತು ಅದರ ವಿವಿಧ ಪ್ರಯೋಗಗಳನ್ನು ತೋರಿಸಿ ಬೇರೆ ಕಡೆ ವಿಸ್ತಾರವಾಗಿ ವಿವರಿಸಿದ ಉಲ್ಲೇಖಗಳನ್ನು ‘ನೋಡಿ’ ಎಂದು ಸೂಚಿಸುವುದು.

೬.ಸಾಮಾನ್ಯವಾಗಿ ಮೂಲ ತುಳುವಿಗೆ ಸಮೀಪವೆಂದು ಕಂಡುಬಂದ ರೂಪವನ್ನು ಅಕಾರಾದಿಯಲ್ಲಿ ಕೊಡುವಾಗ ಅದರ ಅರ್ಥ ವಿವರಣೆಗಳನ್ನು ಕೊಟ್ಟು ಮೂಲ ರೂಪ ಬೇರೆ ಬೇರೆ ಆಡುನುಡಿಗಳಲ್ಲಿ ಬೇರೆ ಬೇರೆ ರೀತಿ. ವ್ಯತ್ಯಾಸಗೊಂಡಾಗ ಹೆಚ್ಚಿನ ಪ್ರದೇಶದಲ್ಲಿ ಬಳಕೆಯಲ್ಲಿರುವ ಸಾಮಾನ್ಯ ತುಳು ಪ್ರಭೇದದ ಶಬ್ದವನ್ನು ಕೊಡುವಾಗ ಅರ್ಥ ವಿವರಣೆ ಕೊಟ್ಟು ಇತರ ಕಡೆಗಳಲ್ಲಿ ಉಲ್ಲೇಖಕ್ಕೆ ಸೂಚನೆ ಕೊಡುವುದು. ವಿಶಿಷ್ಟ ಗಾದೆ, ಪ್ರಯೋಗ, ಉಕ್ತಿಗಳನ್ನು ಕೊಡುವಾಗಲೂ ಸಾಮಾನ್ಯ ಪ್ರಭೇದವನ್ನೇ ಬಳಸಿಕೊಳ್ಳುವುದು.

೭. ವಿವಿಧ ಪ್ರಭೇದಗಳಲ್ಲಿ ಕಂಡುಬರುವ ರೂಪಗಳನ್ನು ಸೂಚಿಸಿದ ಮೇಲೆ ಆ ಶಬ್ದದ ವ್ಯಾಕರಣ ಸಂಜ್ಞೆಯನ್ನು n, Va, Vn, Adj.ಮುಂತಾದ ಸಂಕೇತಗಳಿಂದ ಸೂಚಿಸುವುದು. ಮೂಲಧಾತು ಪ್ರತ್ಯಯಗಳೊಂದಿಗೆ ಸೇರಿದಾಗ ರೂಪ ಭೇದ ಹೊಂದಿದ್ದರೆ ಅದನ್ನೂ ಸೂಚಿಸುವುದು.

೮. ಶಬ್ದದ ವಿವಿಧ ಅರ್ಥ ಪ್ರಕಾರಗಳನ್ನು ೧.೨.೩ ಮುಂತಾದ ಸಂಖ್ಯೆಗಳೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನಿರೂಪಿಸುವುದು.

೯. ಆ ಮೂಲಪದದಿಂದ ಸಾಧಿತವಾದ ಶಬ್ದಗಳನ್ನು, ಸಮಸ್ತ ಪದಗಳನ್ನು ಉಲ್ಲೇಖಿಸಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಅವುಗಳ ಅರ್ಥವನ್ನು ವಿವರಿಸುವುದು ಮತ್ತು ಆ ಪದದ ಪ್ರಯೋಗ ವೈಶಿಷ್ಟ್ಯಗಳನ್ನು ಸೂಚಿಸುವಂತಹ ವಾಕ್ಯಾಂಶಗಳನ್ನು ಅವುಗಳ ಅರ್ಥಗಳನ್ನೂ ಲಿಖಿತ ಸಾಹಿತ್ಯದಿಂದ ತೆಗೆದ ಉದ್ಧರಣೆಗಳನ್ನೂ ಕೊಡುವುದು.

೧೦. ಆ ಪದಗಳನ್ನು ಬಳಸಿಕೊಂಡು ಉಪಯೋಗಿಸುವ ಗಾದೆಮಾತುಗಳನ್ನು ವಿಶಿಷ್ಟ ಹೇಳಿಕೆಗಳನ್ನು ಉಲ್ಲೇಖಿಸುವುದು. ಅವುಗಳ ಅರ್ಥ ಕೊಡುವಾಗ ಕನ್ನಡದಲ್ಲಿ ತುಳುರೂಪಗಳ ಸರಳಾನುವಾದವನ್ನು ಕೊಡುವುದು.

೧೧. ತೌಲನಿಕ ಅಧ್ಯಯನಕ್ಕೆ ಸಹಾಯಕವಾಗುವಂತೆ ಇತರ ದ್ರಾವಿಡ ಭಾಷೆಗಳಲ್ಲಿ ಕಂಡುಬರುವ ಜ್ಞಾತಿ ಪದಗಳನ್ನು ಕೊಡುವುದು.

೧೨. ಶಬ್ದವು ಸಂಸ್ಕೃತ, ಅರಾಬಿಕ್‌, ಆಂಗ್ಲ ಇತ್ಯಾದಿ ಭಾಷೆಗಳಿಂದ ಎರವಲು ಪಡೆದಿದ್ದಾದರೆ ಅದರ ಮೂಲಭಾಷೆಯನ್ನು ಸೂಚಿಸಿ ಮೂಲರೂಪವನ್ನು ಉಲ್ಲೇಖಿಸುವುದು.

೧೩. ಸಮಸ್ತ ಪದಗಳು ಸ್ವತಂತ್ರ ಶಬ್ದಗಳಾಗಿ ಬಂದಾಗಿ ಪ್ರತ್ಯೇಕವಾಗಿ ಉಲ್ಲೇಖ ಮಾಡುವುದು.

೧೪. ಜನಪದ ಸಾಹಿತ್ಯದಲ್ಲಿ ಕಂಡುಬರುವ ವಿಶಿಷ್ಟ ಪದಗಳನ್ನು ವಿವರಿಸುವಾಗ ಅವುಗಳ ಉಪಯೋಗಗಳನ್ನು ಮೂಲ ಪಾಡ್ಡನಗಳಿಂದ ಉದ್ಧರಿಸಿ ಕೊಡುವುದು.

೧೫. ಎರಡು ಶಬ್ದಗಳ ರೂಪ ಒಂದೇ ಆಗಿದ್ದರೂ ಅರ್ಥ ಬೇರೆ ಬೇರೆಯಾಗಿದ್ದರೆ ಅವುಗಳನ್ನು ಪ್ರತ್ಯೇಕವಾಗಿ ಉಲ್ಲೇಖಿಸುವುದು.

೧೬. ತುಂಬಿಲ, ಕೋಲ ಮುಂತಾದ ವಿಶಿಷ್ಟ ಧಾರ್ಮಿಕ ಕರ್ಮಗಳಿಗೆ ಅರ್ಥ ಕೊಡುವಾಗ ಆ ಕ್ರಿಯೆಗಳ ಸಂಕ್ಷಿಪ್ತ ವಿವರಣೆ ನೀಡುವುದು.

೧೭.ತುಳುನಾಡಿನ ಅಥವ ನಿಘಂಟನ್ನು ರಚನೆ ಮಾಡುವ ಪ್ರದೇಶದ ವಿಶಿಷ್ಟ ವ್ಯಕ್ತಿನಾಮಗಳನ್ನೂ ಕುಟುಂಬನಾಮಗಳನ್ನೂ ಹಬ್ಬ ಹರಿದಿನಗಳ ಹೆಸರುಗಳನ್ನೂ ಉಲ್ಲೇಖಿಸುವುದು.

೧೮.ಸ್ಥಳನಾಮಗಳನ್ನು ಸೂಚಿಸುವ ಘಟಕಗಳನ್ನು ಮಾತ್ರ ಕೊಟ್ಟು ಆ ಘಟಕಗಳಿಂದ ಪ್ರಾರಂಭವಾಗುವ ಅಥವಾ ಕೊನೆಗೊಳ್ಳುವ ಸ್ಥಳನಾಮಗಳನ್ನು ಉದಾಹರಣೆಗಾಗಿ ಕೊಡುವುದು,

ಪದಗಳನ್ನು ಸಂಗ್ರಹಿಸಿದ ನಂತರ ಪಟ್ಟಿಗಿಳಿಸುವ ಹಾಗೂ ಅವುಗಳನ್ನು ವಿಷಯಗಳಿಗನುಸಾರವಾಗಿ ವರ್ಗೀಕರಣ ಮಾಡುವ ಕಾರ್ಯ ನಡೆಯಬೇಕು. ಪ್ರತಿಯೊಂದು ಶಬ್ದದ ಪ್ರಾದೇಶಿಕ ಹಾಗೂ ಸಾಮಾಜಿಕ ಪ್ರಭೇದಗಳ ರೂಪಗಳನ್ನು ಒಂದೆಡೆ ಕಲೆಹಾಕಿ ಒಂದು ನಿಶ್ಚಿತ ಸರಣಿಯಲ್ಲಿ ಅವುಗಳನ್ನು ಬರೆದಿಡಬೇಕು.

ಒಂದು ಭಾಷೆಯ ಸ್ವರೂಪ, ಬೆಳವಣಿಗೆ ಮತ್ತು ಸಾಮಾಜಿಕ ಸ್ಥಾನಮಾನಗಳನ್ನು ಅವಲಂಬಿಸಿ ಆ ಭಾಷೆಯ ನಿಘಂಟು ರಚನೆಯ ಯೋಜನೆಯನ್ನು ರೂಪಿಸಿಕೊಳ್ಳಬೇಕು. ಅದಕ್ಕೆ ಸಂಪಾದಕ ಮಂಡಳಿ ಇರಬೇಕು. ಪ್ರಧಾನ ಸಂಪಾದಕರು ಹಾಗೂ ಸಲಹಾ ಸಮಿತಿ ಇರಬೇಕು. ತಿಂಗಳಿಗೊಮ್ಮೆಯಾದರೂ ಅವರು ಒಂದೆಡೆ ಸಭೆ ಸೇರಿ ನಿಘಂಟಿಮಗಳ ರೂಪ, ಅರ್ಥ ಹಾಗೂ ಇತರ ವಿಷಯಗಳ ಬಗೆಗೆ ಚರ್ಚಿಸಬೇಕು. ಆಗ ಕೋಶದಲ್ಲಿ ನುಸುಳಿದ ಅಥವಾ ನುಸುಳಬಹುದಾದ ದೋಷಗಳು ನಿವಾರಣೆಯಾಗುತ್ತವೆ. ಕರಡು ಪ್ರತಿ ತಿದ್ದುವಲ್ಲಿ ವಿಶೇಷ ನಿಗಾ ವಹಿಸಬೇಕು. ನಿರೂಪಕರು ಹಾಗೂ ಸಂಪಾದಕ ಮಂಡಳಿಯ ಸದಸ್ಯರು ಎಲ್ಲರೂ ಏಕಾಗ್ರತೆಯಿಂದ ದುಡಿದಾಗ ಸಿಗುವ ಆನಂದವೇ ನಿಘಂಟುಗಾರನಿಗೆ ದೊರಕುವ ಪ್ರಯೋಜನವಾಗಿದೆ.

 

[1] ಡಾ. ವಿಲ್ಯಂಮಾಡ್ತಮತ್ತುಆರ್‌. ವೈ. ಕುಲಕರ್ಣಿ (೧೯೯೪) ‘ನಿಘಂಟುರಚನಾವಿಜ್ಞಾನ’ ಪು. ೨೨.

[2] ಡಾ. ವಿಲ್ಯಂಮಾಡ್ತಮತ್ತುಆರ್‌. ವೈ. ಕುಲಕರ್ಣಿಪೂರ್ವೋಕ್ತಪು. ೨೧-೨೨.

[3] ಭಾಷಾಸಂಶೋಧಕನೇರವಾಗಿಭಾಷಾಕ್ಷೇತ್ರಕ್ಕೆಹೋಗಿ, ನಿರೂಪಕರನ್ನುಆರಿಸಿಕೊಂಡುಅವರನೆರವಿನಿಂದಭಾಷಾಸಾಮಗ್ರಿಗಳನ್ನುಪ್ರತ್ಯಕ್ಷವಾಗಿಸಂಗ್ರಹಿಸುವವೈಜ್ಞಾನಿಕಕ್ರಮವೇಭಾಷಾಕ್ಷೇತ್ರಕಾರ್ಯ – ಎಸ್‌. ಎಸ್‌. ಅಂಗಡಿ, ಭಾಷಾಕ್ಷೇತ್ರಕಾರ್ಯ (೧೯೯೫), ಪು. ೨.

[4] ಭಾಷಾಸಮುದಾಯದಲ್ಲಿಕ್ಷೇತ್ರಕರ್ತನಿಗೆಭಾಷಾಸಾಮಗ್ರಿಗಳನ್ನುಒದಗಿಸುವವ್ಯಕ್ತಿಗೆನಿರೂಪಕರೆಂದುಕರೆಯುತ್ತಾರೆ. ಕ್ಷೇತ್ರಕಾರ್ಯದಲ್ಲಿನಿರೂಪಕರುಪ್ರಮುಖಪಾತ್ರವಹಿಸುತ್ತಾರೆ. ಕ್ಷೇತ್ರಾಧ್ಯಯನದಲ್ಲಿಕ್ಷೇತ್ರಕರ್ತಬಾಹ್ಯವಾಗಿಕೆಲಸಮಾಡಿದರೆನಿರೂಪಕಸಮುದಾಯದಒಳಗಿದ್ದುಕ್ಷೇತ್ರಕರ್ತನಿಗೆಸಹಾಯಮಾಡುತ್ತಾನೆ. – ಎಸ್‌. ಎಸ್‌. ಅಂಗಡಿಪೂರ್ವೋಕ್ತಪು. ೧೨.

[5] ಡಾ. ಉಪಾಧ್ಯಾಯ, ಯು. ಪಿ. ೧೯೯೭, ‘ತುಳುನಿಘಂಟುಯೋಜನೆಮತ್ತುನಿರ್ವಹಣೆ’ ರಾಷ್ಟ್ರಕವಿಗೋವಿಂದಪೈಸಂಶೋಧನಕೇಂದ್ರ, ಉಡುಪಿ. ಪು. ೨೩

[6] ZGWSTA. L. 1971 MANUAL LEXICORPHY PP. 25

[7] Singh. R. A. (1991) AN Introduction to Lexicography PP. III, CIIL.

[8] ಡಾ.ಉಪಾಧ್ಯಾಯಯು. ಪಿ. ಪೂರ್ವೋಕ್ತಪು. ೨೭-೨೮.