ಒಂದು ಭಾಷೆಯ ಶಬ್ದಗಳಿಗೆ ಅದೇ ಭಾಷೆಯಲ್ಲಿಯೇ ಅರ್ಥ ವಿವರಣೆಯನ್ನು ಕೊಡುವ ನಿಘಂಟುಗಳಿಗೆ ‘ಏಕಭಾಷಿಕ ನಿಘಂಟು’ಗಳೆನ್ನುವರು. ಯಾವ ಭಾಷೆಗೆ ನಾವು ನಿಘಂಟು ರಚಿಸುತ್ತೇವೆಯೋ ಆ ಭಾಷೆಯಪೂರ್ಣ ಪರಿಜ್ಞಾನ ಕೋಶಕಾರನಿಗೆ ಇರಬೇಕಾಗುತ್ತದೆ. ಆ ಭಾಷೆಯ ಭಾಷಾ ಪ್ರಭೇದಗಳ ಸ್ವರೂಪ, ಸಂಬಂಧವನ್ನು ಕುರಿತು ಆತನಿಗೆ ಸರಿಯಾದ ಜ್ಞಾನ ಬೇಕಾಗುತ್ತದೆ. ಏಕಭಾಷಿಕ ನಿಘಂಟು ಆ ಭಾಷಿಕರ ಉದ್ದೇಶಗಳನ್ನು ಈಡೇರಿಸಬೇಕಾಗುವುದರಿಂದ ಕೋಶಕಾರ ಕೋಶರಚನೆಯಲ್ಲಿ ಕ್ಷೇತ್ರಕಾರ್ಯ, ನಮೂದುಗಳ ಆಯ್ಕೆ, ನಮೂದುಗಳ ಸಂಯೋಜನೆ ಈ ವಿಧಾನವನ್ನು ಅನುಸರಿಸಬೇಕು.

ನಿಘಂಟು ರಚನೆಯನ್ನು ಗಮನದಲ್ಲಿಟ್ಟುಕೊಂಡು ಕೋಶಕಾರ ಕ್ಷೇತ್ರ ಕಾರ್ಯ ಮಾಡಬೇಕು. ಆಡುನುಡಿಯ ಜೊತೆಗೆ ಆ ಭಾಷೆಯ ಬರೆಹದ ಸಾಹಿತ್ಯದಿಂದಲೂ ದತ್ತ ಸಂಗ್ರಹಿಸಬೇಕು. ನಮೂದುಗಳ ಅರ್ಥ ವಿವರಗಳನ್ನೂ ವ್ಯಾಕರಣಾಂಶಗಳನ್ನೂ ಸ್ಪಷ್ಟಪಡಿಸಬೇಕು. ಪದ ಬಳಕೆಯ ಸಾಮಾಜಿಕ ಸಂದರ್ಭ, ನಿಷ್ಪತ್ತಿ ಪರಿಣಿತರೊಡನೆ ಚರ್ಚಿಸಿ ದಾಖಲಿಸಬೇಕಾಗುತ್ತದೆ.

ನಿಘಂಟಿನಲ್ಲಿ ಸೇರಿಸಬಹುದಾದ ಎಲ್ಲ ಪದಗಳೂ ನಮೂದಗಳೇ ಆಗಿರುತ್ತವೆ. ಕೋಶ ಸಿದ್ಧಪಡಿಸುವ ಭಾಷೆಯ ಸ್ವರೂಪವನ್ನು ಗಮನಿಸಿ ಮೂಲರೂಪ ಹಾಗೂ ಸಮಸ್ತ ಪದಗಳನ್ನು ಮುಖ್ಯ ನಮೂದುಗಳಾಗಿ ಸ್ವೀಕರಿಸಬೇಕು. ಪ್ರಾಚೀನ ಹಾಗೂ ನಿತ್ಯ ವ್ಯವಹಾರದಲ್ಲಿ ಬಳಕೆಯಾಗುವ ಪರಿಭಾಷಿಕಗಳನ್ನು ಕೋಶದಲ್ಲಿ ಸೇರಿಸುವುದು ಅಗತ್ಯ. ನಿಘಂಟುವಿನ ಗಾತ್ರ ಮತ್ತು ಸ್ವರೂಪವನ್ನು ಗಮನಿಸಿ ನಮೂದುಗಳ ಆಯ್ಕೆ ಮಾಡಬೇಕಾಗುತ್ತದೆ. ಆದುದರಿಂದ ನಿಘಂಟಿಮಗಳನ್ನು ಆರಿಸುವಲ್ಲಿ ಒಂದೆ ರೀತಿಯ ನಿಯಮಗಳನ್ನು ವಿಧಿಸಲು ಆಗುವುದಿಲ್ಲ.

ನಮೂದುಗಳನ್ನು ದಾಖಲಿಸುವಾಗ ಏಕರೂಪತೆ ಇರಬೇಕು. ನಮೂದುಗಳ ದಾಖಲೀಕರಣ ಹಂತದಲ್ಲಿ ಸಾಮಾನ್ಯವಾಗಿ ಎರಡು ಭಾಗಗಳಿರುತ್ತವೆ. ಮೊದಲನೆಯದು ನಮೂದುಗಳನ್ನು ದಾಖಲಿಸುವುದು; ಎರಡನೆಯದು ಅದರ ರಚನೆಯ ಸ್ವರೂಪವನ್ನು ಕೊಡುವುದು. ಮೊದಲನೆಯ ಭಾಗದಲ್ಲಿ ಮುಖ್ಯ ನಮೂದು ಮುಖ್ಯವಾದುದು. ಅದು ಕೋಶದ ರೂಪವರ್ಗವನ್ನು ಸೂಚಿಸುತ್ತದೆಯಲ್ಲದೆ ಅದರ ಮುಂದೆ ಬರುವ ಇತರ ವಿವರಗಳಿಗೆ ಆಧಾರವಾಗಿ ನಿಲ್ಲುತ್ತದೆ. ಮುಖ್ಯ ನಮೂದಿನ ನಂತರ ಅದರ ವ್ಯಾಕರಣವರ್ಗ, ಅರ್ಥವಿವರಣೆ, ಪ್ರಯೋಗ, ಸಮಾನಾರ್ಥಕ ರೂಪಗಳು, ಸಮಸ್ತ ಪದವಾಗಿದ್ದರೆ ಅದರ ನಿಸ್ಪತ್ತಿ, ಜ್ಞಾತಿ ರೂಪಗಳು ಇಷ್ಟು ವಿವರಗಳು ಬರುತ್ತವೆ. ಈ ವಿವರಗಳಿಂದ ಮುಖ್ಯ ನಮೂದಿನ ಸ್ವರೂಪ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅವುಗಳ ಅನ್ಯೋನ್ಯ ಸಂದರ್ಭಗಳನ್ನು (Cross References) ಸೂಚಿಸುವುದು ಬಹಳ ಪ್ರಯೋಜನಕಾರಿ. ಮುಖ್ಯ ನಮೂದಿನ ಅರ್ಥವಿವರಣೆ ಸಾಮಾನ್ಯ ವಾಚಕನಿಗೂ ಸುಲಭವಾಗಿ ಅರ್ಥವಾಗಬೇಕು. ಈ ಹಿನ್ನೆಲೆಯಲ್ಲಿ ಏಕಭಾಷಿಕ ನಿಘಂಟುವನ್ನು ಸಿದ್ಧಪಡಿಸಬೇಕು.

ಸಾಮಾನ್ಯವಾಗಿ ಏಕಭಾಷಿಕ ನಿಘಂಟುಗಳಲ್ಲಿ ಭಾಷಾ ಘಟಕಗಳ ಅರ್ಥ ವಿಶಿಷ್ಟ್ಯತೆಯನ್ನನುಲಕ್ಷಿಸಿ ಮುಖ್ಯ ನಮೂದುಗಳನ್ನು ಕೊಡಬೇಕಾಗುತ್ತದೆ.

ಧ್ವನಿರೂಪ + ಅರ್ಥ – ಭಾಷಾಘಟಕ
ಅದೇ ಧ್ವನಿರೂಪ + ಅದೇ ಅರ್ಥ – ಅದೇ ಭಾಷಾ ಘಟಕ
ಅದೇ ಧ್ವನಿರೂಪ + ಬೇರೆ ಅರ್ಥ – ಬೇರೆ ಭಾಷಾ ಘಟಕ

ಧಾತುಗಳಿಗೆ ಹತ್ತುವ ಬದ್ಧ ಹಾಗೂ ಸ್ವತಂತ್ರ ಆಕೃತಿಮಾಗಳನ್ನು ಮುಖ್ಯ ನಮೂದದ ಅಡಿಯಲ್ಲಿ ನಿಯತಕಾಲಿಕೆ ರೂಪದಲ್ಲಿ ನಮೂದಿಸಲಾಗಿದೆ.

ಮನೆ – ಮನೆಗಳು ಸಾಲು ಮನೆ, ಹಿತ್ತಲಮನೆ
ಕಟ್ಟೆ – ಕಟ್ಟೆಯಲ್ಲಿ ಕಟ್ಟೆಮೇಲೆ

ಪದಗಳಿಗೆ ಸಾಮಾನ್ಯವಾಗಿ ಒಂದೇ ಅರ್ಥ ಇಲ್ಲಿದಿರುವುದರಿಂದ ಅವುಗಳ ವಿಭಿನ್ನ ಅರ್ಥಗಳನ್ನು ಸಂದರ್ಭಸಹಿತವಾಗಿ ಸೂಚಿಸಿ ಪ್ರಯೋಗಗಳನ್ನು ಕೊಡಬೇಕು.

ನಿಘಂಟುಗಳನ್ನು ಸಿದ್ಧಪಡಿಸುವಾಗ ಪದಗಳನ್ನು ಅರಿತರೆ ಸಾಲದು ಅವುಗಳನ್ನು ಹೊಂದಿಸುವ ಬಗೆಯನ್ನು ಅರಿತಿರಬೇಕಾಗುತ್ತದೆ. ಈ ದಿಶೆಯಲ್ಲಿ ಕೋಶಕಾರ ಘಟಕಗಳ ಜೋಡಣೆಯಲ್ಲಿರುವ ತೊಂದರೆ ಹಾಗೂ ಸಂಧಿನಿಯಮದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಉದಾ: ಕನ್ನಡ ಶಬ್ದರಚನೆಯಲ್ಲಿ ‘ಗಳು’, ‘ಅರು’ ಮುಂತಾದ ಬಹುವಚನ ಪ್ರತ್ಯಯಗಳು ಪದದ ಅಂತ್ಯದಲ್ಲಿ ಬರುತ್ತವೆ. ಮನೆಗಳು, ಕಲ್ಲುಗಳು ಮುಂತಾದುವು (ಗಳು ಮನೆ, ಗಳು ಕಲ್ಲುಗಳೆಂದಾದರೆ ಪದಭಂಗವುಂಟಾಗುತ್ತದೆ). ಪದ ಜೋಡಣೆಯ ಕ್ರಮ ಕೋಶಕಾರರಿಗೆ ತಿಳಿದಿರಬೇಕಾಗುತ್ತದೆ. ಎರಡು ಪದಗಳನ್ನು ಶಬ್ದ ನಿರ್ಮಾಣವಾಗುವಾಗ ಕೆಲವು ಸಲ ಅವುಗಳ ಮಧ್ಯ ಒಂದು ಧ್ವನಿ ಸೇರಬಹುದು ಅಥವಾ ಇದ್ದ ಧ್ವನಿಗಳಲ್ಲಿ ಒಂದು ಲೋಪವಾಗಬಹುದು. ಒಂದು ಧ್ವನಿಯ ಸ್ಥಳವನ್ನು ಮತ್ತೊಂದು ಧ್ವನಿ ಆಕ್ರಮಿಸಿಕೊಳ್ಳಬಹುದು. ಅಂದರೆ ಸಂಧಿಯಾಗಬಹುದು.

ಮರ+ಅನ್ನು – ಮರವನ್ನು (‘ವ್‌’ ಕಾರ ಆಗಮವಾಗಿದೆ)
ಊರು+ಇಂದ – ಊರಿಂದ (‘ಉ’ ಲೋಪವಾಗಿದೆ)
ನರ+ಇಂದ್ರ – ನರೇಂದ್ರ (‘ಅ’, ‘ಇ’ ಸ್ಥಾನವನ್ನು ಏ ಆಕ್ರಮಿಸಿದೆ)

ಒಂದು ಭಾಷೆಯ ಶಬ್ದ ರಚನೆಯನ್ನರಿಯುವಾಗ ಇಂತಹ ಸಂಧಿ ನಿಯಮಗಳನ್ನು ಅರಿಯಬೇಕಾಗುತ್ತದೆ. ಕನ್ನಡ ಜಾಯಮಾನಕ್ಕನುಗುಣವಾಗಿ ಭಾಷಾ ಘಟಕಗಳ ಜೋಡಣೆಯ ವಿಧಾನ ಮಿಶನರಿ ಕೋಶಕಾರರಿಗೆ ಚೆನ್ನಾಗಿಗೊತ್ತಿತ್ತು. ಪ್ರತಿಯೊಂದು ನಿಘಂಟಿಮದ ಪೂರ್ತಿ ವಿವರಗಳನ್ನು ದೇಶಿಯ ಪಂಡಿತರೊಡನೆ ಚರ್ಚಿಸಿ (ಕೃಷ್ಣಾಮಾಚಾರ್ಯ ಮುಂತಾದವರು), ತಿಳಿದುಕೊಳ್ಳುವ ಕೌಶಲ್ಯತೆ ಅವರಿಗಿತ್ತು. ಸಾಮಾಜಿಕ ಏಣಿಶ್ರೇಣಿಗಳಲ್ಲಿ ಪದಗಳ ಬಳಕೆ ಹಾಗೂ ಪದಗಳ ಜೊತೆಗೆ ಅರ್ಥದ ಸಂದರ್ಭದ ಬಗೆಗೆ ಮಿಶನರಿಗಳು ಯೋಚಿಸಿ ಅರ್ಥ ಕೊಡುವ ಬಗೆ, ಮಾದರಿಯಾಗಿದೆ.

ಶಬ್ದಕೋಶದ ರಚನೆ ಮುಗಿದ ಮೇಲೆ ಅದನ್ನು ಹೆಚ್ಚಾಗಿ ಗಮನಿಸುವವರು ಭಾಷಾಭ್ಯಾಸಿಗಳಾದುದರಿಂದ ಅದರ ಆಕೃತಿಮಾ ಬಗ್ಗೆ ಕೋಶದ ಕೆಲಸ ಆರಂಭವಾಗುವುದಕ್ಕಿಂತ ಮುಂಚೆಯೆ ನಿರ್ಧಾರಿತವಾಗುತ್ತದೆ. ಕೋಶಗಳಲ್ಲಿ ಮೂರು ಭಾಗಗಳಿರುತ್ತವೆ ಎಂದು ಸ್ಥೂಲವಾಗಿ ಹೇಳಬಹುದು. (ಆಕೃತಿಯನ್ನನುಲಕ್ಷಿಸಿ) ಮೊದಲ ಭಾಗದಲ್ಲಿ ಪ್ರಸ್ತಾವನೆ ಮತ್ತು ಓದುಗರಿಗೆ ಮಾರ್ಗದರ್ಶನ ಸೂಚನೆಗಳಿರುತ್ತವೆ. ಎರಡನೆಯ ಭಾಗದಲ್ಲಿ ಯಥಾರ್ಥವಾದ ಶಬ್ದಕೋಶ, ಮೂರನೆಯ ಭಾಗದಲ್ಲಿ ಅನುಬಂಧ, ಹೆಚ್ಚಿನ ವಿಷಯಗಳು ಮಾಹಿತಿಗಳಿರುತ್ತವೆ (ಮುಖ್ಯವಾಗಿ ಭಾಷೆಯನ್ನು ಕಲಿಯುವವರಿಗಾಗಿ). ಕೋಶದ ಶೀರ್ಷಿಕೆ ಸ್ಪಷ್ಟವಾಗಿರುತ್ತದೆ. ‘ಕನ್ನಡ – ಕನ್ನಡ ನಿಘಂಟು’, ಹೀಗೆ. ಇದು ಕೋಶದ ಉದ್ದೇಶವನ್ನು ಕುರಿತು ಸೂಚನೆ ಕೊಡುತ್ತವೆ.

ಕೋಶ ರಚನೆ ಎರಡು ಮಾರ್ಗಗಳಲ್ಲಿ ಸಾಗುತ್ತದೆ. ೧ ನಿಘಂಟಿಮಗಳ ಸಂಗ್ರಹ ೨. ನಿಘಂಟಿಮಗಳನ್ನು ದಾಖಲಿಸುವುದು. ನಿಘಂಟಿಮಗಳನ್ನು ದಾಖಲಿಸುವಾಗ ಪ್ರಧಾನ ಉಲ್ಲೇಖಗಳು, ಸಾಧಿತರೂಪಗಳು, ಉಪ ಉಲ್ಲೇಖಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿಘಂಟುವಿನಲ್ಲಿ ಬರುವ ಮುಖ್ಯ ಪದವೇ ಪ್ರಧಾನ ಉಲ್ಲೇಖ. ಇದು ನಿಘಂಟಿಮದ ರೂಪವನ್ನು ಸೂಚಿಸುತ್ತದೆಯಲ್ಲದೆ ಅದರ ಅಡಿಯಲ್ಲಿ ಬರುವ ವ್ಯಾಕರಣವರ್ಗ, ಅರ್ಥ ಮುಂತಾದ ಮಾಹಿತಿಗಳಿಗೆ ಆಧಾರವಾಗಿ ನಿಲ್ಲುತ್ತದೆ ‘ಪ್ರಧಾನ ಪದವಾಗುವ ನಿಘಂಟಿಮ ಭಾಷೆಯಲ್ಲಿ ಸಾಮಾನ್ಯವಾಗಿ ಹೆಚ್ಚು ಪ್ರಚಲಿತವಾಗಿರುತ್ತದೆ; ಬಳಕೆಯಲ್ಲಿ ಹೆಚ್ಚು ಆವೃತ್ತಿಯಾಗಿರುತ್ತದೆ; ಹೇಳಬೇಕಾದ ವಿಷಯ ವಸ್ತುವನ್ನು ಪ್ರತಿನಿಧಿಸುತ್ತದೆ. ಪ್ರಧಾನ ಪದಗಳು ಹೆಚ್ಚಾಗಿ ಭಾಷೆಯ ಧಾತು ರೂಪಗಳಾಗಿರುತ್ತವೆ. ಇವುಗಳಿಂದ ನಿಷ್ಪನ್ನವಾಗುವ ಸಾಧಿತ ರೂಪಗಳಿಗಿಂತ ಇದರ ಗಾತ್ರ ದೊಡ್ಡದಾಗಿರುತ್ತದೆ. ಕೋಶದಲ್ಲಿ ಪ್ರಧಾನ ಪದಗಳು ಹತ್ತಿಸಿಕೊಳ್ಳುವ ಪ್ರತ್ಯಯಗಳನ್ನು ಅಥವಾ ಅವುಗಳ ಸಾಧಿತ ರೂಪಗಳನ್ನು ಅವುಗಳ ಮುಂದೆಯೇ ದಾಖಲಿಸಬೇಕು. ಉದಾ: ಬರೆ – ಬರೆದನು, ಸಾಯು – ಸತ್ತನು ಮುಂ. ಪ್ರಧಾನ ಉಲ್ಲೇಖಗಳು ಭಿನ್ನಾರ್ಥದಲ್ಲಿ ಬಳಕೆಯಾದಾಗ ಅವುಗಳಿಗೆ ಸೂಕ್ತವಾದ ಉದಾಹರಣೆಗಳನ್ನು ಕೊಡಬೇಕು. ಪ್ರಧಾನ ಉಲ್ಲೇಖದ ನಂತರ ಅದರ ವ್ಯಾಕರಣಾತ್ಮಕ ಮಾಹಿತಿಯನ್ನು ಆ ಪದದ ಮುಂದೆಯೂ ಕೊಡಬಹುದು ಅಥವಾ ಪ್ರಸ್ತಾವನೆಯಲ್ಲಿ ಅಥವಾ ಅನುಬಂಧದಲ್ಲಿಯಾದರೂ ಕೊಡಬಹುದು. ಪ್ರಧಾನ ಉಲ್ಲೇಖದಲ್ಲಿ ನಾಮಪದ, ಕ್ರಿಯಾಪದ, ಲಿಂಗ, ವಚನ, ಸಮೀಕರಣ, ಉದಾಹರಣೆಗಳು: ಅನ್ಯೋನ್ಯ ಸಂಬಂಧ ವುತ್ಪತ್ತಿ ಹಾಗೂ ಜ್ಞಾತಿಪದಗಳು ಈ ಎಲ್ಲ ಬಗೆಯ ಮಾಹಿತಿಗಳಿದ್ದರೆ ಆ ಭಾಷೆಯ ರಚನೆಯು ತಿಳಿಯುತ್ತದೆ. ಮೇಲಿನ ಅಂಶಗಳನ್ನು ಆಧರಿಸಿ ಕೋಶಗಳಲ್ಲಿ ಪ್ರಧಾನ ಉಲ್ಲೇಖಗಳು ದಾಖಲಾಗಬೇಕು. ಅವು ದಾಖಲಾದ ಬಗೆಯನ್ನು ಈ ಕೆಳಗಿನಂತೆ ನಿರೂಪಿಸಬಹುದು.

ಒಂದು ಪದದ ಅರ್ಥ ಹಾಗೂ ವ್ಯಾಕರಣ ವರ್ಗ ವಿಭಿನ್ನವಾಗಿದ್ದರೆ ಅದನ್ನು ಪ್ರತ್ಯೇಕ ಮುಖ್ಯ ಪದವಾಗಿ ಪರಿಗಣಿಸಲಾಗಿದೆ (ಮಿಶನರಿ ಕೋಶಕಾರರು ಆಡುನುಡಿಯನ್ನು ಲಕ್ಷಿಸಿರಬಹುದು).

ಆಡು (ಕ್ರಿ) ಆಟ
ಆಡು (ಕ್ರಿ) ಆಟ
ಆಡು (ನಾ) ಒಂದು ಪ್ರಾಣಿಯ ಹೆಸರು (ಮೇಕೆ)
ಕತ್ತು (ನಾ) ಕೊರಳು
ಕತ್ತು (ಕ್ರಿ) ಉರಿಹತ್ತು; ಸುಡು
ಕತ್ತು (ನಾ) ಒರಟು ಕಾಗದ
ಕತ್ತು (ನಾ) ಕತ್ತೆಯೆಹಾಗೆ ಧ್ವನಿಮಾಡು

ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿರುವ ಹಾಗೂ ಹೆಚ್ಚು ವಿಶೇಷಾರ್ಥವಿರುವ ಸಂಸ್ಕೃತ ಶಬ್ದಗಳನ್ನು ಈ ನಿಘಂಟುಗಳಲ್ಲಿ ಕಾಣಬಹುದು. ಆದರೆ ಪಾರಿಭಾಷಿಕ ಶಬ್ದಗಳನ್ನು ಇಲ್ಲಿ ಸೇರಿಸಿಲ್ಲ. ವ್ಯಾಕರಣ, ಅಲಂಕಾರ, ಸಂಗೀತ, ನಾಟ್ಯ ಮುಂತಾದ ಶಾಸ್ತ್ರಗಳಿಗೆ ಸಂಬಂಧಿಸಿದ ಶಬ್ದಗಳಿಗೆ ಇತರ ಅರ್ಥಗಳೂ ಇರುವುದಾದರೆ ಅಂತಹ ಶಬ್ದಗಳನ್ನು ಸೇರಿಸಿಕೊಳ್ಳಲಾಗಿದೆ.

ಕನ್ನಡದಲ್ಲಿ ‘ಇಸು’ ಪ್ರತ್ಯಯವು ಅನೇಕ ಶಬ್ದಗಳಿಗೆ ಸೇರುತ್ತದೆ. ‘ಇಸು’ ಸೇರಿದಾಗ ಎರಡು ಬೇರೆ ಬೇರೆ ಶಬ್ದಗಳು ಒಂದೇ ರೂಪವನ್ನು ಪಡೆಯಬಹುದು. ಅಂತಹ ಸಂದರ್ಭದಲ್ಲಿ ಆ ಎರಡನ್ನೂ ಒಂದೇ ಮುಖ್ಯ ಉಲ್ಲೇಖವನ್ನಾಗಿ ಕೊಡಲಾಗಿದೆ (ಅರ್ಥ ವ್ಯತ್ಯಾಸವಿದೆ ಎಂಬುದು ಗಮನಿಸಬೇಕಾದ ಸಂಗತಿ) .

ಜೋಗರಿಸು

ಜೋಗರ್‌+ಇಸು (ಬಳಸು, ಉಪಯೋಗಿಸು)
ಜೋಗರ + ಇಸು (ಸೇರಿಸು, ಸಿದ್ಧಗೊಳಿಸು)

ಕುಪ್ಪಳಿಸು

ಕುಪ್ಪಳಿ+ಇಸು (ಹಾರು, ಜಿಗಿ)
ಕುಪ್ಪಳ+ಇಸು (ಕುಸಿ, ಜರಿ)

ಸಂಸ್ಕೃತ ಶಬ್ದಗಳಿಗೆ ‘ಇಸು’ ಪ್ರತ್ಯಯವನ್ನು ಸೇರಿಸಿದಾಗ ಆ ಶಬ್ದಗಳಲ್ಲಿ ಅಕ್ಷರ ಲೋಪವುಂಟಾಗುವುದು. ಅಂತಹುಗಳು ಸಾಧಿತ ರೂಪಗಳು. ಅವುಗಳನ್ನು ಮುಖ್ಯ ಉಲ್ಲೇಖವಾಗಿಯೇ ಕೊಡಬೇಕು. ಉದಾ: ಸಮರ್ಥ+ಇಸು ಸಮರ್ಥಿಸು. ಸಂಸ್ಕೃತದಲ್ಲಿರುವ ದೀರ್ಘ ಸ್ವರಾಂತ ಶಬ್ದಗಳನ್ನು ಸಾಮಾನ್ಯವಾಗಿ ಕನ್ನಡದಲ್ಲಿ ಅಲ್ಪ ಪರಿವರ್ತನೆಯೊಡನೆ ಉಪಯೋಗಿಸುತ್ತಾರೆ. ಅವುಗಳಿಗೆ ಸಮಸಂಸ್ಕೃತವೆಂದು ಹೆಸರು. ಅವುಗಳನ್ನು ಮುಖ್ಯ ಉಲ್ಲೇಖಗಳನ್ನಾಗಿ ಕೊಡಲಾಗಿದೆ. ಉದಾ: ಕದಲೀ – ಕದಳಿ, ಗಂಗಾ – ಗಂಗೆ ಈ ಕಾರಣದಿಂದಲೇ ಇಂತಹ ಪದಗಳೊಡನೆ ಕೂಡಿಕೊಂಡು ಆದ ಸಮಾಸ ಪದಗಳನ್ನು ಮುಖ್ಯ ಉಲ್ಲೇಖಗಳನ್ನಾಗಿಯೇ ಕೊಡಲಾಗಿದೆ. ಉದಾ: ಕದಳೀಗರ್ಭ, ಗಂಗಾಧರ ಮುಂತಾದವು.

‘ಱ’ ದಿಂದ ಕೂಡಿದ ಪದಗಳು ಕಾಲಾನುಕ್ರಮದಲ್ಲಿ ಸರೇಫವಾಗಿವೆ. ಅಂತಹ ಸಂದರ್ಭಗಳನ್ನು ಸೂಚಿಸುವುದಕ್ಕೆ ‘ಱ’ದಿಂದ ಕೂಡಿದ ಶಬ್ದಗಳಿಗೆ ಮೂಲಾರ್ಥವನ್ನು ಕೊಡಲಾಗಿದೆ. ಸಾಮಾನ್ಯ ರೇಫದ ಪದಗಳಿಗೆ ಬೇರೆ ಅರ್ಥಗಳಿದ್ದರೆ ಅವುಗಳನ್ನು ಪ್ರತ್ಯೇಕವಾಗಿ ಕೊಟ್ಟು ಅವುಗಳ ಜೊತೆಯಲ್ಲಿಯೇ ಅದರ ಸಮಾಸ ರೂಪಗಳನ್ನು ಕೊಡಲಾಗಿದೆ.

ಉದಾ:

ಕರೆ (ಕ್ರಿ) ಬರ ಹೇಳು; ಆಹ್ವಾನಿಸು; ಕೂಗು
ಕಱಿ (ಕ್ರಿ) ಹಾಲನ್ನು ಹಿಂಡು; ಸೂಸು; ಸುರಿ; ಎರಚು; ಚೆಲ್ಲು; ಕಪ್ಪು ; ಕ ತೊಗಲ್‌,ಕ ಬೋನ, ಕ ಹಟ್ಟಿ

‘ೞ’ ಮತ್ತು ‘ಳ’ ಇವುಗಳಿಗಿರುವ ಶಬ್ದಗಳಿಗೂ ಮೇಲಿನ ನಿಯಮವೇ ಅನ್ವಯವಾಗುತ್ತದೆ.

ಉದಾ:

ಬಾಳು ನಾ – ಕತ್ತಿ, ಖಡ್ಗ
ಬಾೞು ನಾ – ಜೀವನ, ಬದುಕು

ಅರ್ಥವ್ಯತ್ಯಾಸ ಕಂಡು ಬಂದ ಶಬ್ದಗಳನ್ನು ಬೇರೆ ಬೇರೆಯಾಗಿ ಕೊಟ್ಟು ಅವುಗಳಿಗಿರುವ ಸಂಬಂಧವನ್ನು ಸೂಚಿಸಲಾಗಿದೆ.

ಉದಾ:

ತಾಳ್‌ (ಕ್ರಿ) ಪಡೆ; ಹೊಂದು; ಸಹಿಸು; ಸ್ವೀಕರಿಸು; ಕಾಯು; ಬಾಳಿಕೆಬರು – ತಾಳುವಿಕೆ
ತಾಳ್‌(ನಾ) ಹಾಡುವಾಗ ನಿಯತಗತಿಯನ್ನು ಸೂಚಿಸಲುಕೈಗಳಿಂದ ಹಾಕುವ ಪೆಟ್ಟು; ಕಂಚಿನಿಂದ ಮಾಡಿದ ಜತೆ ವಾದ್ಯ ತಾಳಮದ್ದಲೆ, ತಾಳಹಾಕು.

ಞ, ಣ, ಳ, ಈ ಅಕ್ಷರಗಳಿಂದ ಮೊದಲಾಗುವ ಪದಗಳು ಕನ್ನಡದಲ್ಲಿ ಸಿಗುವುದಿಲ್ಲ ವಾದುದರಿಂದ ಈ ಅಕ್ಷರಗಳು ಬೇರೆಯಾಗಿ ಉಲ್ಲೇಖಗೊಂಡಿಲ್ಲ. ಆದರೆ ಉಳಿದ ಅಕ್ಷರಗಳು ಕನ್ನಡ ವರ್ಣಮಾಲೆಯಲ್ಲಿ ಎಷ್ಟನೆಯ ಅಕ್ಷರವಾಗುತ್ತದೆಂಬುದನ್ನು ಸೂಚಿಸುವಾಗ ಇವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ನಿಘಂಟುಗಳಲ್ಲಿ ಪದಗಳ ಅಕಾರಾದಿ ಹೀಗಿದೆ – ಸ್ವರ, ಅನುಸ್ವರ, ವರ್ಗೀಯಾಕ್ಷರಗಳು ಮತ್ತು ಅವರ್ಗಿಯಾಕ್ಷರಗಳು. ಅವರ್ಗೀಯಾಕ್ಷರಗಳನ್ನು ಕೊಡುವಾಗ ಸಾಮಾನ್ಯ ರೇಫದ ನಂತರ ಶಕಟರೇಫವನ್ನೂ ಕುಳದ ನಂತರ ‘ಕುೞ’ವನ್ನು ಕೊಡಲಾಗಿದೆ.


ಕಂ
ಕಕಲಾತೆ
ಕರೆ
ಕಱಿ
ಕವರು
ಕವರ್ತೆ
ಕಳುಹು
ಕೞು
ಕೞ್ತಲೆ

ಕೋಶಗಳಲ್ಲಿ ಮುಖ್ಯ ಉಲ್ಲೇಖಗಳಂತೆ ಸಾಧಿರೂಪಗಳು ತುಂಬ ವೈಜ್ಞಾನಿಕವಾಗಿ ಸೇರಿವೆ. ಮುಖ್ಯ ಉಲ್ಲೇಖದ ರೂಪ ವೈವಿಧ್ಯತೆಯಿಂದಾಗಿ ಅದರ ಅರ್ಥ ಬದಲಾದರೆ ಆ ಬದಲಾವಣೆಯನ್ನು ಸಾಧಿತವೆಂದು ಕರೆಯುತ್ತಾರೆ. ಅವುಗಳಿಗೆ ಪ್ರತ್ಯಯ ಮೊದಲಾದವುಗಳನ್ನು ಸೇರಿಸಿ ನಿಷ್ಪನ್ನ ಮಾಡಿದ ಪದಗಳು. ಸಾಧಿತ ಪದಗಳು ಮುಖ್ಯ ಪದದ ಅರ್ಥಕೊಟ್ಟು ಅಲ್ಲಿಯೇ ನಿಯಮಬದ್ಧವಾಗಿ ಸಂಬಂಧಪಟ್ಟ ಸಾಧಿತಗಳನ್ನು ತೋರಿಸಬೇಕು. ಸಾಧಿತಗಳು ನಿಷ್ಪನ್ನಗೊಂಡಾಗ ಕೆಲವು ವೇಳೆ ಅವುಗಳ ಘಟಕಗಳಲ್ಲಿ ಧ್ವನಿಮಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಉದಾ – ಮುಂದು+ಕೈ>ಮುಂಗೈ(ಕ್‌>ಗ್‌;ನ್‌>ಉ>ಉಂ) ಇಂತಹ ಕ್ರಿಯೆ ನಡೆಯುವಾಗ ಪದಗಳು ವಿರಾಮ ಕಳೆದುಕೊಳ್ಳಬಹುದು ಅಥವಾ ಕಳೆದುಕೊಳ್ಳದಿರಬಹುದು. ಸಾಧಿತ ಪದಗಳಿಗೂ ನುಡಿಗಟ್ಟುಗಳಿಗೂ ಸೂಕ್ಷ್ಮ ವ್ಯತ್ಯಾಸವಿದೆ. ಸಾಧಿತ ಪದಗಳಲ್ಲಿ ಪದಪುಂಜಗಳಿರುತ್ತವೆ. ನುಡಿಗಟ್ಟಿನಲ್ಲಿ ಪದ ಪುಂಜಗಳಿದ್ದರೂ ಅವು ವಿಶೇಷ ಅರ್ಥ ಸೂಚಿಸುತ್ತವೆಂಬುದು ಗಮನಿಸಬೇಕಾದ ಸಂಗತಿ.

ಆಡು ಚಲಿಸು : ಅಲುಗಾಡು, ಈಡಾಡು, ಈಸಾಡು
ಎಚ್ಚಾಡು: ಎಡೆಯಾಡು, ಒಡನಾಡು, ಒಲೆದಾಡು
ಓಲಾಡು: ಕುಣಿದಾಡು, ಕೊಟ್ಟಾಡು, ಕೊಣ್ಡಾಡು
ಕೊರಚಾಡು: ತಿರಿಗಾಡು, ತುಳಕಾಡು ನಲಿದಾಡು
ನೇತಾಡು: ಬಿಸಾಡು ಹೊರಳಾಡು
ಎಳ್ಳು ಒಂದು ಬಗೆಯ ಎಣ್ಣೆ ಬೀಜ. ಎಳ್ಳುಣ್ಣೆ, ಎಳ್ಳುಬೆಲ್ಲ, ಎರ್ಳಳುಹಿಣ್ಡೆ, ಎಳ್ಳುಹೂವು, ಎಳ್ಳೆಣ್ಣೆ
ಕತ್ತಲೆ ಕತ್ತಲು, ಇರುಳು ಕಗ್ಗತ್ತಲೆ; ಕಡುಗತ್ತಲೆ, ಕಾರ್ಗತ್ತಲೆ ಕವಿ ಗತ್ತಲೆ, ಬಲುಗುತ್ತಲೇ ಮೋಡಗತ್ತಲೆ ಹಗಲುಗತ್ತಲೆ, ಹೆಗ್ಗತ್ತಲೆ
ನಡು ನೆಡು; ಸೊಂಟ ನಡುಗಟ್ಟು, ನಡುವಗಲ್‌
ಎಳೆ ಎಳೆತುಲಸಿ ಎಳೆಬಳ್ಳಿ
ಎಳೆತಂಗು ಎಳೆಹುಲ್ಲು
ಎಳೆವನೆ ಎಳಿಸಿಲ್‌/ಬಿಸಿಲ್‌
ಎಳೆಪ್ರಾಯ ಎಲೆದೇರ್‌/ತೇರ್‌

ಕೋಶದಲ್ಲಿ ಮೂಲರೂಪಗಳಂತೆ ಸಾಧಿತ ರೂಪಗಳು ಇರಬೇಕು.

ಎಲೆಬಿಡು ನಿಂಬೆಹುಳಿಬಿಡು ಬಿಟ್ಟುಬಿಡು
ಹೂವುಬಿಡು ಗಡ್ಡಬಿಡು ಸ್ಥಳಬಿಡು
ಕಾಯಿಬಿಡು ಹಗ್ಗಬಿಡು ಕೈಬಿಡು
ನೀರುಬಿಡು ದಾರಿಬಿಡು ಮೈಬಿಡು

‘ರಾಶಿ’ ಎಂಬುದಕ್ಕೆ ಅಕ್ಕಿರಾಶಿ, ತೂರಿದರಾಶಿ, ತೂರುರಾಶಿ, ಭತ್ತದರಾಶಿ, ರಾಶಿಹಾಕು, ರಾಶಿಮಾಡು ‘ಒಪ್ಪೊತ್ತು’ ಎಂಬುದಕ್ಕೆ ಒಪ್ಪೊತ್ತುಣ್ಣ, ಒಪ್ಪೊತ್ತುಮಾಡು, ಒಪ್ಪೊತ್ತಿರುವ ಇಂತಹ ಸಾಧಿತ ರೂಪಗಳು ಬಳಕೆಯಲ್ಲಿವೆ.

ನಿಘಂಟುವಿನಲ್ಲಿ ಪ್ರಧಾನ ಉಲ್ಲೇಖಕ್ಕೆ ಪೂರಕ ಅರ್ಥವನ್ನು ಕೊಡುವ ಪದಪುಂಜಗಳು ಉಪ ಉಲ್ಲೇಖವಾಗುತ್ತವೆ. ಅವು ಮುಖ್ಯ ಪದದ ಅಡಿಯಲ್ಲಿ ಇವು ಹೆಚ್ಚಾಗಿ ದಾಖಲಾಗುತ್ತವೆ. ಉಪಉಲ್ಲೇಖಗಳು (ಹೆಚ್ಚಾಗಿ) ನುಡಿಗಟ್ಟುಗಳೋ ಅಥವಾ ಪದ ಪುಂಜಗಳೋ ಆಗಿರುತ್ತವೆ. ಕೆಲವು ಉದಾಹರಣೆಗಳನ್ನು ಗಮನಿಸಬಹುದು.

 

ಕಥೆ :
ಕಥೆ  ನಡೆದ ಅಥವಾ ಕಲ್ಪಿತವಾದ ಸಂಗತಿ
ಕಥಕ  ಕತೆ ಹೇಳುವವ : ಕತೆಗಾರ
ಕಥನ  ನಿರೂಪಣೆ
ಕಥ್ಯಯ  ಪಂಕ್ತಿ

 

ಗರ್ಭ:
ಗರ್ಭ ಹೊಟ್ಟೆ, ಬಸಿರು; ಭ್ರೂಣ; ಒಳಗು
ಗರ್ಭಗೃಹ  ಒಳಗಿನ ಕೋಣೆ; ದೇವಾಲಯದಲ್ಲಿ ಮೂಲ ವಿಗ್ರಹವನ್ನು ಇಟ್ಟಿರುವ ಒಳಭಾಗ ಅಥವಾ ಗರ್ಭಗುಡಿ
ಗರ್ಭಧಾರಣ  ಬಸಿರಾದ ಸ್ಥಿತಿ
ಗರ್ಭವತಿ  ಗರ್ಭಿಣಿ
ಗಭೀðಕರಿಸು  ಹುದುಗಿಸು; ಒಳ ಸೇರಿಸು

 

ಗಲಿ :
ಗಲಿ  ಜಾರಿದ; ಕಳಚಿದ
ಗಲಿಬಿಲಿ  ಗಲಾಟೆ ; ಗೊಂದಲ
ಗಲಿಯಿಸು  ಕೆಳಗೆ ಬೀಳು
ಗಲೀತ  ಪೆಟಟು; ಹೊಡೆತ

 

ತಾಳ್‌:
ತಾಳದ  ಒಂದು ಬಗೆಯ ವ್ಯಂಜಕ ಪದಾರ್ಥ ; ಪಲ್ಯ
ತಾಳಲು  ಉಪ್ಪಿನಕಾಯಿಗೆ ಬಳಸುವ ಒಂದು ಬಗೆಯ ಕಾಯಿ
ತಾಳವಟ್ಟ  ತಾಳೆಗರಿಯ ಬೀಸಣಿಗೆ
ತಾಳ್ದು  ಹೊಂದು, ಪಡೆ, ಧರಿಸು, ಸಹಿಸು, ತಾಳು, ಸ್ವೀಕರಿಸು

ಕೋಶ ಸಿದ್ಧತೆಯಲ್ಲಿ ನಮೂದುಗಳನ್ನು ಪ್ರಧಾನ ಉಲ್ಲೇಖ, ಸಾಧಿತರೂಪ ಹಾಗೂ ಉಪ ಉಲ್ಲೇಖಗಳನ್ನು ವ್ಯವಸ್ಥಿತವಾಗಿ ಸಂಯೋಜಿಸಿದಾಗ ಕೋಶಕ್ಕೆ ವೈಜ್ಞಾನಕಿತೆ ಪ್ರಾಪ್ತವಾಗುತ್ತದೆ. ಕೆಳಗಿನ ಕೆಲವು ಉದಾಹರಣೆಗಳ ಮೂಲಕ ಅದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬಹುದು.

೧. ದೃಶ್ಯ, ಅನ್ಯದೇಶ್ಯ, ಮೂಲವನ್ನು ಹೊಂದಿರುವ ರೂಪಗಳನ್ನು ಹಾಗೂ ರೂಪ ಸಾಮ್ಯವಿರುವ ರೂಪಗಳನ್ನು ಒಂದೇ ಮುಖ್ಯ ಉಲ್ಲೇಖವನ್ನಾಗಿ ಕೊಡಬೇಕು.

ಒಗು (ಕ್ರಿ) ೧. ಹೊರಸೂಸು; ಚೆಲ್ಲು ೨. ಹರಡು: ಆವರಿಸು (ನಾ). ೩. ಹೊರ ಹೊಮ್ಮುವಿಕೆ ೪. ಉತ್ಸಾಹ
ರಾಕ್ಷ (ನಾ) ೧. ದೈತ್ಯ : ರಕ್ಕಸ ೨. ಆರುವತ್ತು ಸಂವತ್ಸರಗಳಲ್ಲಿ ಒಂದು (ಗು) ಭಯಂಕರವಾದ

೨. ಒಂದು ಪದದ ಹೆಚ್ಚು ಪ್ರಚಲಿತವಿರುವ ರೂಪಕ್ಕೆ ಅರ್ಥವನ್ನು ಕೊಟ್ಟು ವಾಚಕರ ಅನುಕೂಲತೆಯ ದೃಷ್ಟಿಯಿಂದ ಪರ್ಯಾಯ ಪದಗಳಿಗೆ ‘=’ ಈ ಚಿಹ್ನೆಯನ್ನು ಹಾಕಿ ಆ ಎರಡೂ ಪದಗಳಿಗೂ ಭಾಷಾಶಾಸ್ತ್ರ ದೃಷ್ಟಿಯಿಂದ ಸಂಬಂಧವಿರುವುದನ್ನು ಸೂಚಿಸಬೇಕು.

ಕೊಲ್ಲಟಿಗ (ನಾ) ಡೊಂಬ; ಡೊಂಬರದನು ~ ಇತ್ತಿ =ಡೊಂಬರ ಹೆಂಗಸು.
ಕೊಲ್ಲಣ (ನಾ) ೧. ವಿನೋದ; ಕ್ರೀಡೆ ೨ = ಕೊಲ್ಲಣಿಗೆ

೩. ಒಂದು ನಮೂದಕ್ಕೆ ಅರ್ಥಗಳನ್ನು ಹೇಳುವಾಗ ಅದರ ವ್ಯಾಕರಣ ವರ್ಗವನ್ನು (ನಾಮಪದ, ಕ್ರಿಯಾಪದ, ಗುಣವಚನ, ಸರ್ವನಾಮ, ಅವ್ಯಯ) ಸೂಚಿಸಬೇಕು.

೪. ಅರ್ಥಗಳನ್ನು ಕೊಡೆವಾಗ ಅನಗತ್ಯ ಪುನರಾವರ್ತನೆಯನ್ನು ತಪ್ಪಿಸುವ ಸಲುವಾಗಿ ಅಡ್ಡಗೆರೆಯನ್ನು ( – ) ಬಳಸಬೇಕು. ಅಂತಹ ಸಂದರ್ಭದಲ್ಲಿ ಪದಗಳನ್ನು ಅಧ್ಯಾಹಾರ ಮಾಡಿ ಓದಿಕೊಳ್ಳಬೇಕು.

ಕಾಡು ಎರಳೆ, ಜಿಂಕೆ

ಎಂಬುದನ್ನು ಕಾಡು ಎರಳೆ, ಕಾಡುಜಿಂಕೆ ಎಂದು ಓದಿಕೊಳ್ಳಬೇಕು. ಸಮಾನಾರ್ಥಕ ಪದಗಳನ್ನು ಅರೆಕೋಲನ್‌ಗಳಿಂದ ಬೇರ್ಪಡಿಸಬೇಕು.

ಕಡಿ (ಕ್ರಿ) ಕಚ್ಚು; ಕುಕ್ಕು

ಕಿಸು (ನಾ) ಕೆಂಪು; ಅರುಣ

ಅಡ್ಡ ಉಲ್ಲೇಖ (Cross – references) ಕೊಡುವಾಗ ಪದದ ಎಲ್ಲ ಅಕ್ಷರಗಳನ್ನು ದೊಡ್ಡ ಅಕ್ಷರಗಳಲ್ಲಿ ಕೊಟ್ಟಿದ್ದರೆ ಆಗ ಅರ್ಥಕ್ಕಾಗಿ ಆ ದೊಡ್ಡ ಅಕ್ಷರದ ಪದವನ್ನು ನೋಡಬೇಕೆಂದರ್ಥ.

೫. ಕಾಗುಣಿತದಲ್ಲಿ ಕಂಸದೊಳಗೆ ಅಕ್ಷರಗಳನ್ನು ಕೊಟ್ಟಿದ್ದರೆ ಆ ಪದಕ್ಕೆ ಎರಡು ಕಾಗುಣಿತಗಳು ಬಳಕೆಯಲ್ಲಿವೆಯೆಂದು ಗ್ರಹಿಸಬೇಕು.

ಅರುಳ್‌(ಳು) (ನಾ) ಕರುಣೆ; ದಯೆ
ಅ (ಱಿ) ರೆ (ಕ್ರಿ)
(ನಾ)
೧. ಒಣಗು ೨. ಪೆಟ್ಟುಹಾಕು
೪. ಹೊಡೆತ ೪. ಕಲ್ಲುಬಂಡೆ.

ಕನ್ನಡದಲ್ಲಿ ‘ಇಸು’ಪ್ರತ್ಯಯ ಅನೇಕ ಶಬ್ದಗಳಿಗೆ ಸೇರುತ್ತದೆ. ‘ಇಸು’ ಸೇರಿದಾಗ ಎರಡು ಬೇರೆ ಬೇರೆ ಶಬ್ದಗಳು ಒಂದೇ ರೂಪವನ್ನು ಪಡೆಯಬಹುದು. ಇಂತಹ ಸಂದರ್ಭದಲ್ಲಿ ಆ ಎರಡನ್ನೂ ಒಂದೇ ಮುಖ್ಯ ಉಲ್ಲೇಖವನ್ನಾಗಿ ಕೊಡಬೇಕು. ಉದಾ: ಕುಪ್ಪಳಿಸು – ಕುಪ್ಪಳಿ+ಇಸು; ಕುಪ್ಪಳ+ಇಸು. ಸಂಸ್ಕೃತ ಶಬ್ದಗಳಿಗೆ ‘ಇಸು’ ಪ್ರತ್ಯಯವನ್ನು ಸೇರಿಸಿದಾಗ ಆ ಶಬ್ದಗಳಲ್ಲಿ ಅಕ್ಷರಲೋಪವುಂಟಾಗುವುದು. ಅಂತಹುಗಳು ಸಾಧಿತಧಾತುಗಳು. ಅವುಗಳಲ್ಲಿ ಮುಖ್ಯ ಉಲ್ಲೇಖಗಳನ್ನಾಗಿಯೇ ಕೊಡಲಾಗಿದೆ. ಉದಾ: ಸಮರ್ಥ+ಇಸು=ಸಮರ್ಥಿಸು.

೬. ಸಂಸ್ಕೃತದ ದೀರ್ಘ ಸ್ವರಾಂತ ಪದಗಳನ್ನು ಕನ್ನಡದಲ್ಲಿ ಸಾಮಾನ್ಯವಾಗಿ ಹ್ರಸ್ವ ಸ್ವರಾಂತವಾಗಿ ಬಳಕೆಯಾಗುತ್ತವೆ. ಅವುಗಳಿಗೆ ‘ಸಮಸಂಸ್ಕೃತ’ ಎಂದು ಹೆಸರು, ಅವುಗಳನ್ನೂ ಮುಖ್ಯ ಉಲ್ಲೇಖವನ್ನಾಗಿ ಕೊಡಲಾಗಿದೆ. ಉದಾ: ಶಾಲಾ – ಶಾಲೆ, ಮಾಲಾ – ಮಾಲೆ, ಗಂಗಾ – ಗಂಗೆ. ಇವುಗಳ ಸಮಸ್ತ ಪದಗಳನ್ನು ಮುಖ್ಯ ಉಲ್ಲೇಖವನ್ನಾಗಿ ಕೊಡಲಾಗಿದೆ. ಉದಾ; ಗಂಗಾಧರ. ಅರ್ಥ ವ್ಯತ್ಯಾಸ ಕಂಡು ಬಂದ ಶಬ್ದಗಳನ್ನು ಬೇರೆ ಬೇರೆಯಾಗಿ ಕೊಟ್ಟು ಅವುಗಳಿಗಿರುವ ಸಂಬಂಧವನ್ನು ಸೂಚಿಸಬೇಕು. ಪಾರ್‌(ಕ್ರಿ) ೧. ನಿರೀಕ್ಷಿಸು; ಎದುರುನೋಡು, ೨. ಆಶಿಸು. ಪಾರ್‌(ನಾ); ತೀರ ೩. ಸೂರಿನ ಇಳಿಜಾರು ಭಾಗ.

೭. ನಿಘಂಟುವಿನಲ್ಲಿ ಪದಗಳು ಸ್ವರ, ಅನುಸ್ವರ, ವಿಸರ್ಗ, ವರ್ಗೀಯಾಕ್ಷರಗಳು ಮತ್ತು ಅವರ್ಗೀಯಾಕ್ಷರಗಳು. ಹೀಗೆ ಅಕಾರಾದಿಯಾಗಿ ಬರಬೇಕು.

೮. ಸಾಧ್ಯವಾದೆಡೆ ಹೊಸಪದಗಳನ್ನು ರಚಿಸಬೇಕು. ಉದಾ: ಮುದ್ದಣನು ಒಂದೇ ಸಂಸ್ಕೃತ ಶಬ್ದಕ್ಕೆ ಎರಡು ಮೂರು ಬಗೆಯ ತದ್ಭವಗಳನ್ನು ರಚಿಸಿದ್ದಾನೆ.

ಸನ್ನಾಹ ಶಬ್ದಕ್ಕೆ ಸನ್ನೆಯ, ಸನ್ನಣ
ಸನ್ಮಾನ ಶಬ್ದಕ್ಕೆ ಸಮ್ಮಣ, ಸಮ್ಮಾನ

ಕ್ರಿಯಾ ಸಮಾಸಗಳಲ್ಲಿ ಅರಿ ಸಮಾಸ ದೋಷವಿಲ್ಲ ಎಂದು ಪ್ರಾಚೀನ ವ್ಯಾಕರಣಕಾರರೇ ಹೇಳಿದ್ದಾರೆ. ಅದರ ಆಧಾರದ ಮೇಲೆ ಹೊಸ ಶಬ್ದಗಳನ್ನು ಸೃಷ್ಟಿಸುವುದು, ಶಿರಕಳಚು, ಶರಮಳೆ ಇತ್ಯಾದಿ.

೯. ನಮೂದುಗಳ ಅರ್ಥ ವಿವರಣೆ ಪೂರೈಸಿದಾಗ ಪೂರ್ಣ ವಿರಾಮವನ್ನು (.), ಒಂದೇ ಬಗೆಯ ಅರ್ಥ ಛಾಯೆ ಇರುವಾಗ ಎರಡು ಅರ್ಥಗಳ ನಡುವೆ ಅರ್ಧ ವಿರಾಮವನ್ನು (;), ನಮೂದುಗಳ ವ್ಯಾಕರಣ ವರ್ಗಗಳನ್ನು ಹೇಳುವಾಗ ದುಂಡು ಕಂಸನ್ನು (), ಮುಖ್ಯ ಉಲ್ಲೇಖಕ್ಕೆ ಮತ್ತೊಂದು ಶಬ್ದ ಬಂದಾಗ – ಈ ಚಿಹ್ನೆಯನ್ನು, ಒಂದು ಶಬ್ದಕ್ಕೆ ಸಮಾನಾರ್ಥವಿರುವ ಇನ್ನೊಂದು ಶಬ್ದ ಮುಂದೆಯೂ ಪರ್ಯಾಯ ಶಬ್ದಗಳ ಮುಂದೆಯೂ ‘=’ ಈ ಚಿಹ್ನೆಯನ್ನು ಉಪಯೋಗಿಸಬೇಕು. ವಿರಾಮಚಿಹ್ನೆಗಳು ಶಬ್ದಾರ್ಥ ಖಚಿತತೆಗೆ ನೆರವಾಗುತ್ತವೆ.

ನಿಘಂಟುವಿನಲ್ಲಿ ಉದಾಹರಣೆಗಳನ್ನು ಲಭ್ಯ ಪಠ್ಯಗಳಿಂದ ಆರಿಸಿಕೊಳ್ಳಬಹುದು ಅಥವಾ ನಿಘಂಟುಕಾರನೇ ಸೃಷ್ಟಿಸಿಕೊಳ್ಳಬಹುದು. ಉದಾ: ಚಿಲುಮೆ (ನಾ) ತಂಬಾಕು ಸೇದಲು ಉಪಯೋಗಿಸುವ ಮಣ್ಣಿನ ಕೊಳವೆ (ನಳಿಕೆ), ‘ನಮ್ಮ ಅಜ್ಜನು ಚಿಲುಮೆಯ ಮೂಲಕ ತಂಬಾಕು ಸೇದುತ್ತಾನೆ. ಮುಖ್ಯ ನಮೂದಿಗೆ ಸಂಬಂಧಿಸಿದಂತೆ ಸಂದರ್ಭಕ್ಕೆ ತಕ್ಕಂತೆ ಗಾದೆ, ನುಡಿಗಟ್ಟುಗಳನ್ನು ಪ್ರಯೋಗದೊಡನೆ ಕೊಡಬೇಕು.

ದೊಣ್ಣೆ (ನಾ) ಬಡಿಗೆ; ಕೋಲು. ‘ದೊಣ್ಣೇಲಿ ಹೊಡೆದಾಗ ಇಲ್ಲ ಕಂದ್ಲಲ್ಲಿ ಕಡಿದಾಗ ಇಲ್ಲ ಹೆಣ ಹೊತ್ಕೊಂಡು ಹೋಗುವಾಗ ಕೋಣ ಬೀಳ್ತೀನಿ ಅಂತ ಹೋಗಿದ್ದು.,
ಕೊಡಲಿ (ನಾ) ಮರ ಮೊದಲಾದುದನ್ನು ಕಡಿಯುವ ಸಾಧನ. ‘ಕೊಡ್ಲಿಗೆ ಹೆದರದ ಮರ. ಕೊಡ್ಲಿ ಕಾವಿಗೆ ಹೆದರಿತಂತೆ’.
ತಲೆ (ನಾ) ೧. ಶಿರಸ್ಸು ೨. ವಂಶ ೩. ಮುಖ್ಯಸ್ಥ ೪.ತುದಿ ೫. ಅರಿವು. ತಲೆಮುಟ್ಟಸಾಲ = ತುಂಬಸಾಲ, ತಲೆ ತಲಾಂತರ = ಪೀಳಿಗೆಯಿಂದ ಪೀಳಿಗೆಗೆ, ತಲೆಗೊಂದು ಮಾತು = ಒಬ್ಬೊಬ್ಬನಿಗೊಂದೊಂದು ಮಾತು
ತಲೆಹೋಕ=ಬುದ್ಧಿ ಇಲ್ಲದವ ತಲೆ ಇಲ್ಲದವರ = ಬುದ್ಧಿ ಇಲ್ಲದವ.
ಮಯಿ (ನಾ) ೧. ಒಳ್ಳೆಯದನ್ನಾಗಲೀ ಕೆಟ್ಟದ್ದನ್ನಾಗಲೀ ಹಿಂತಿರುಗಿಸುವುದು.
೨. ಉಡುಗೊರೆ; ಕಾಣಿಕೆ. ಮುಯ್ಯಿ ತೀರಿಸು = ಸೇಡು
ತೀರಿಸು, ಮುಯ್ಯಿಗೆ ಮುಯ್ಯಿ=ಸೇಡಿಗೆ ಸೇಡು, ಮುಯ್ಯಿ ಹಾಕು=ಮರು ಉಡುಗೊರೆ ಕೊಡು, ಮರುಕಾಣಿಕೆ ಕೊಡು.

ಮುಖ್ಯ ನಮೂದಿನ ವಿವರಣೆ ಅದರ ಅರ್ಥದಷ್ಟೇ ಬಹುಮುಖ್ಯ ಪಾತ್ರವಹಿಸುತ್ತದೆ. ಮುಖ್ಯ ನಮೂದಿನ ರಚನೆಯ ವಿವರಗಳನ್ನು ಅದರ ಜೊತೆಗೆ ನಮೂದಿಸಬೇಕು. ಅವನ್ನು ಆದಷ್ಟು ಸಂಕ್ಷಿಪ್ತ ರೂಪದಲ್ಲಿ ಸೂಚಿಸಬೇಕು.

ಅಕ್ರಿ  ಅ ಕರ್ಮಕ ಕ್ರಿಯಾಪದ
ಅವ್ಯ  ಅವ್ಯಯ
ಆತ್ಮಾ  ಆತ್ಮಾರ್ಥಕ
ಆಮಾ  ಆಡುಮಾತು
ಉಪ  ಉಪಸರ್ಗ
ಏವ  ಏಕವಚನ
ಕಪ್ರ  ಕರ್ಮಣಿ ಪ್ರಯೋಗ
ಕಾಪ್ರ  ಕಾವ್ಯ ಪ್ರಯೋಗ
ಕ್ರಿ  ಕ್ರಿಯಾಪದ
ಗು  ಗುಣವಾಚಕ
ನಾ  ನಾಮಪದ
ಗ್ರಾ  ಗ್ರಾಮ್ಯಪ್ರಯೋಗ
ಗ್ರಾಂ  ಗ್ರಾಂಥಿಕ ಪ್ರಯೋಗ
ಪ್ರಾ. ರೂ ಪ್ರಾಚೀನ ರೂಪ

ಕೋಶತಜ್ಞರು ಅಥವಾ ವಿಷಯ ಪಂಡಿತರು ಒಪ್ಪಿಕೊಂಡ ರೂಪಗಳನ್ನೇ ಈ ವಿವರ ಕೊಡಲು ಬಳಸಬೇಕೇ ವಿನಃ ಮನಸ್ಸಿಗೆ ಬಂದಂತೆ ಅವುಗಳನ್ನು ಬದಲಾಯಿಸಿಕೊಳ್ಳಲಾರದು. ಸಾಧಿತ ರೂಪಗಳನ್ನು ಮುಖ್ಯ ನಮೂದುಗಳನ್ನಾಗಿ ಆರಿಸಿಕೊಳ್ಳುವಾಗ ಅರ್ಥ ವಿವರಣೆಯ ನಂತರ ಅವುಗಳ ಮೂಲರೂಪಗಳನ್ನು ಅಲ್ಲಿಯೇ ಸೂಚಿಸಬೇಕು.

ಮುಱಿಸು  (<ಮುಱಿ + ಇಸು)
ಮುದ್ರೆಯುಂಗುರ  (<ಮುದ್ರೆ + ಉಂಗುರ)
ವಿದ್ಯಾರ್ಥಿನಿ  (<ವಿದ್ಯಾರ್ಥಿ)

ಯಾವುದೇ ನಿಘಂಟು ಸರ್ವಸಂಪೂರ್ಣವಾಗಿ ಮತ್ತು ಎಲ್ಲರ ಅಪೇಕ್ಷೆಗಳನ್ನು ಪೂರೈಸುವಂತೆ ಇರಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಏಕಭಾಷಿಕ ನಿಘಂಟಿನ ವಿಷಯದಲ್ಲಿಯೂ ಕೋಶಕಾರ ಇಲ್ಲವೆ ಸಂಪಾದಕ ವರ್ಗ ಪೂರ್ಣ ಶ್ರದ್ಧೆ ಮತ್ತು ಎಚ್ಚರಗಳಿಂದ ತನ್ನ ಕೆಲಸವನ್ನು ನಿರ್ವಹಿಸಿದ್ದರೂ ಅಪರಿಹಾರ್ಯವಾಗಿ ಒದಗಿದ ಕುಂದು ಕೊರತೆಗ ಅರಿವು ಅದಕ್ಕೆ ಇವೆ. ಅವುಗಳನ್ನು ನಿವಾರಿಸುವುದು ಆಸಕ್ತ ಓದುಗರಿಗೆ ಸಾಧ್ಯವೆಂದು ಅದು ಭಾವಿಸಿದೆ.