ಒಂದು ಭಾಷೆಯ ಶಬ್ದಗಳಿಗೆ ಇನ್ನೊಂದು ಭಾಷೆಯಲ್ಲಿ ಅರ್ಥ ವಿವರಣೆಯನ್ನು ನೀಡುವ ನಿಘಂಟುಗಳಿಗೆ ‘ದ್ವಿಭಾಷಿಕ ನಿಘಂಟು’ಗಳೆಂದು ಕರೆಯುತ್ತಾರೆ. ಒಂದು ಭಾಷೆಯ ಭಾಷಿಕ ಘಟಕಗಳನ್ನು ಇನ್ನೊಂದು ಭಾಷೆಯ ಘಟಕಗಳೊಂದಿಗೆ ಹೊಂದಿಸಿ ನಿರೂಪಿಸುವುದೇ ದ್ವಿಭಾಷಿಕ ನಿಘಂಟಿನ ಉದ್ದೇಶ. ಯಾವ ಭಾಷೆಯ ನಮೂದುಗಳನ್ನು ಇನ್ನೊಂದು ಭಾಷೆಯ ನಮೂದುಗಳೊಂದಿಗೆ ಹೊಂದಿಸಿ ನಿರೂಪಿಸುತ್ತಾರೆಯೊ ಆ ಭಾಷೆಯನ್ನು ಆಕರ ಭಾಷೆ (Source Language) ಎಂದೂ ಎರಡನೆಯ ಭಾಷೆಯನ್ನು ಉದ್ದಿಷ್ಟ ಭಾಷೆ (Target Language) ಎಂದು ಕರೆಯುತ್ತಾರೆ.

ದ್ವಿಭಾಷಿಕ ನಿಘಂಟನ್ನು ರಚಿಸುವಾಗ ಕೋಶಕಾರ ಕೆಲವು ಉದ್ದೇಶಗಳನ್ನಿಟ್ಟುಕೊಂಡಿರಬೇಕು. ಎರಡು ಭಾಷೆಗಳ ನಡುವೆ ಪರಸ್ಪರ ವಿಚಾರ ವಿನಿಮಯ, ವ್ಯಕ್ತಿತ್ವ ವಿಕಾಸ, ಜೀವನ ನಿರ್ವಹಣೆ, ಸಾಂಸ್ಕೃತಿಕ ಚೇತನದ ವಿಕಾಸ, ಸೃಜನಾತ್ಮಕ ಪ್ರತಿಭೆಯ ವಿಕಾಸ ಇವು ದ್ವಿಭಾಷಿಕ ನಿಘಂಟು ರಚನೆಗೆ ನೆಲೆಯಾಗಿರಬೇಕು. ಮುಖ್ಯ ನಮೂದುಗಳ ಸ್ವರೂಪವನ್ನು ಅನುಲಕ್ಷಿಸಿ ಅಲ್ಲಿಯ ಶಬ್ದಾರ್ಥಗಳ ವಿವರ, ಪಠ್ಯ ಸಂದರ್ಭ, ಪ್ರಯೋಗ, ಉದಾಹರಣೆ ಇತ್ಯಾದಿಗಳ ಪ್ರಮಾಣವನ್ನು ನಿರ್ದಿಷ್ಟ ಪಡಿಸಿಕೊಳ್ಳಬೇಕಾಗುತ್ತದೆ. ಗಾತ್ರದ ದೃಷ್ಟಿಯಿಂದ ದ್ವಿಭಾಷಿಕ ನಿಘಂಟು ಅತಿ ಚಿಕ್ಕದಾಗಿರಬಾರದು ಕೋಶ ರಚನೆಯ ಉದ್ದೇಶಕ್ಕೆ ತಕ್ಕಂತೆ ದತ್ತಗಳು ಸೇರಿಸಬೇಕಲ್ಲದೆ ಪ್ರತಿ ನಮೂದಿನ ಕೆಳಗೆ ಹೆಚ್ಚಿನ ಪ್ರಮಾಣದಲ್ಲಿ ವಿವರಗಳಿರಬೇಕು. ದ್ವಿಭಾಷಿಕ ನಿಘಂಟು ರಚಿಸುವಾಗ ಮೂರು ಮುಖ್ಯ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ.

ಅ. ಭಾಷಾ ಕ್ಷೇತ್ರಕಾರ್ಯ
ಆ. ನಮೂದುಗಳ ಆಯ್ಕೆ
ಇ. ನಮೂದುಗಳ ಸಂಯೋಜನೆ

ಅ. ಭಾಷಾಕ್ಷೇತ್ರ ಕಾರ್ಯ : ಕೋಶಕಾರ ತಾನು ಸಿದ್ಧಪಡಿಸುವ ನಿಘಂಟುವಿನ ಸ್ವರೂಪಕ್ಕೆ ತಕ್ಕಂತೆ ನಮೂದುಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆ ಕ್ರಿಯೆಗೆ ‘ಕ್ಷೇತ್ರ ಸ್ಥಿತಿ’ ಎನ್ನುತ್ತಾರೆ. ಲಿಖಿತ ಮತ್ತು ಅಲಿಖಿತ ಆಧಾರಗಳಿಂದ ದತ್ತಗಳನ್ನು ಸಂಗ್ರಹಿಸಬೇಕಾಗುತ್ತದೆ. ಕ್ಷೇತ್ರ ಸ್ಥಿತಿಯಲ್ಲಿ ಕೋಶಕಾರ ನಿರೂಪಕರಿಂದ ಭಾಷಾ ವಿವರಗಳನ್ನು ಸಂಗ್ರಹಿಸುವಾಗ ಪ್ರಶ್ನಾವಳಿ, ಸಂದರ್ಶನ, ಮಾದರಿ, ತಪಶೀಲು ಪಟ್ಟಿ ಇಂತಹ ಸಾಧನ ತಂತ್ರಗಳಿಂದ ಉದ್ದೇಶಿಸಿದ ಭಾಷಾ ನಮೂದುಗಳನ್ನು ಕಲೆ ಹಾಕುತ್ತಾನೆ.

ಆ. ನಮೂದುಗಳ ಆಯ್ಕೆ : ಇದು ನಿಘಂಟುವಿನ ಸ್ವರೂಪ ಹಾಗೂ ಅದರ ಉದ್ದೇಶವನ್ನು ಅವಲಂಬಿಸಿದೆ. ‘ಆಕರ ಭಾಷೆ ಮಾತನಾಡುವವನ ಉದ್ದಿಷ್ಟ ಭಾಷೆಯ ಪಠ್ಯಗಳನ್ನು ಉತ್ಪಾದಿಸಲು ಅನುಕೂಲ ಮಾಡಿಕೊಡುವುದು ನಿಘಂಟು ರಚನೆಯ ಉದ್ದೇಶವಾಗದರೆ, ಉದ್ದಿಷ್ಟ ಭಾಷೆಯ ಪಠ್ಯಗಳ ನಿಘಂಟಿಮಗಳನ್ನು ನಿಘಂಟು ರಚನೆಗೋಸ್ಕರ ಆರಿಸುವುದು ಬಹುಮುಖ್ಯ’ (ಮಾಡ್ತ ೧೯೯೪; ೩೧ – ೨). ನಮೂದುಗಳನ್ನು ಸಂಗ್ರಹಿಸುವಾಗ ನಿರೂಪಕ ಉಚ್ಚರಿಸಿದ ಭಾಷಾ ಘಟಕಗಳನ್ನು ಅಂತಾರಾಷ್ಟ್ರೀಯ ಆಲೇಖದ ಮೂಲಕ ದಾಖಲಿಸಬೇಕಾಗುತ್ತದೆ. ಆನಂತರ ಸಂಗ್ರಹಿಸಿದ ದತ್ತವನ್ನು ವಿಶ್ಲೇಷಣೆಗೆ ಸಹಾಯವಾಗುವಂತೆ ಯೋಜಿಸಲಾಗುತ್ತದೆ.

ಇ. ನಮೂದುಗಳ ಸಂಯೋಜನೆ: ನಮೂದುಗಳ ಆಯ್ಕೆ ನಡೆದಿರುವಂತೆಯೇ ಕೋಶಕಾರನ ಮನಸ್ಸಿನಲ್ಲಿ ಸಂಯೋಜನೆಯ ವಿಚಾರಗಳು ಬರುತ್ತಿರುತ್ತವೆ. ಆಗ ಸಂಗ್ರಹಿತ ದತ್ತ ಸಂಯೋಜನೆ ಮಾಡಿ ಮತ್ತೆ ದತ್ತ ಸಂಗ್ರಹಿಸಬೇಕಾಗುತ್ತದೆ. ನಮೂದುಗಳನ್ನು ಅದರ ನಿಯಮಕಾಲಿತ ರೂಪ (Cannonical Form)ದಲ್ಲಿ ನಮೂದಿಸಬೇಕು. ಅದರ ವಿವಿಧ ವ್ಯಾಕರಣ ವರ್ಗ ಹಾಗೂ ರೂಪ ವ್ಯತ್ಯಾಸಗಳನ್ನು ಸೂಚಿಸಬೇಕು.

ಉದಾ: ತಿನ್ನು : ತಿಂದ (ಭೂತಕಾಲ) ನಮೂದಿನ ಉಚ್ಚಾರವನ್ನು ತಿಳಿಸಬೇಕಾಗುತ್ತದೆ.

ಉದಾ: Cough

[k>f]; ಫಲ [fala/phala]

ನಂತರ ಅವುಗಳ ವಿಭಿನಾರ್ಥ, ವ್ಯಾಕರಣ ವರ್ಗಗಳನ್ನು ದಾಖಲಿಸಬೇಕಾಗುತ್ತದೆ. ಕೋಶಕಾರ ತನ್ನ ಭಾಷೆಯ ಅಂಶಗಳು ಇದರಲ್ಲಿ ಸೇರದಂತೆ ಎಚ್ಚರಿಕೆ ವಹಿಸಬೇಕು.

ಕಾಗುಣಿತ ಮತ್ತು ಉಚ್ಚಾರಣೆ

ಧ್ವನಿಗಳ ಉಚ್ಚಾರಣೆಗಳಿಗನುಗುಣವಾಗಿ ಜಗತ್ತಿನ ಯಾವುದೇ ಭಾಷೆಗೆ ಅನ್ವಯಿಸುವಂತಹ ಲಿಪಿಯನ್ನು ನಿರ್ಮಿಸುವ ಸಲುವಾಗಿ ಭಾಷಾವಿಜ್ಞಾನಿಗಳು ಪ್ರಯತ್ನ ಮಾಡುತ್ತಲೇ ಇದ್ದುದು ಕಾಲಾನಂತರದಲ್ಲಿ ಒಂದು ವರ್ಣಮಾಲೆ ಹೊರಬರಲು ಕಾರಣವಾಯಿತು. ಉಚ್ಚರಿಸಿದ ಧ್ವನಿಗಳನ್ನು ಅಂತೆಯೇ ಬರೆದಿಡುವ ವಿಧಾನ. ಉದಾಹರಣೆಗೆ ಎರಡೂ ತುಟಿಗಳಿಂದ ಉತ್ಪತ್ತಿಯಾದ ಅಘೋಷಧ್ವನಿ ಅದು ಯಾವುದೇ ಭಾಷೆಗೆ ಸೇರಿರಲಿ ‘ಪ್‌’ ಆಗಿರುತ್ತದೆ. ಅದಕ್ಕೆ ಒದಗಿದ ಸಂಕೇತ (P). ಇದೇ ರೀತಿ ಪ್ರತಿಯೊಂದು ಧ್ವನಿಗೂ ಅದು ಯಾವುದೇ ಭಾಷೆಗೆ ಸಂಬಂಧಿರಲಿ ಅದನ್ನುಚ್ಚರಿಸುವಾಗ ಬಳಸಿದ ಕಾರಣ, ಸ್ಥಾನ ಹಾಗೂ ಅದರ ಉತ್ಪಾದನಾ ರೀತಿಯನ್ನು ಆಧರಿಸಿ ಸಂಕೇತ ಕೊಡಲಾಗುತ್ತದೆ. ಅಂತಾರಾಷ್ಟ್ರೀಯ ಧ್ವನಿವರ್ಣಮಾಲೆ ಈ ದಿಶೆಯಲ್ಲಿ ಅತ್ಯಂತ ಸಮರ್ಪಕವಾದ ವರ್ಣಮಾಲೆಯಾಗಿದೆ.

ಭಾಷೆ ಬದಲಾಗುತ್ತಲೇ ಇರುವುದು ಅದರ ಸಹಜ, ಅಂತೆಯೇ ಜೀವಂತಿಕೆಯ ಲಕ್ಷಣ. ಭಾಷೆ ಬದಲಾಗುವಷ್ಟು ತೀವ್ರವಾಗಿ ಲಿಪಿ ಬದಲಾವಣೆ ಹೊಂದುವುದಿಲ್ಲ. ಆದ್ದರಿಂದ ಭಾಷೆಗೂ ಲಿಪಿಗೂ ಅಂತರ ಹೆಚ್ಚಾಗುತ್ತಾ ಹೋಗುತ್ತದೆ. ಉದಾಹರಣೆಗೆ ಇಂಗ್ಲಿಷ್‌Knight, Knifeಗಳ ಉಚ್ಚಾರ ನೈಟ್‌, ನೈಫ್‌ಆಗಿದೆ ಅಂದರೆ K ಧ್ವನಿಯ ಉಚ್ಚಾರ ಬಿಟ್ಟುಹೋಗಿದೆ Cup, Cut ಗಳಲ್ಲಿ u ಇದ್ದಲ್ಲಿ aa aaಸ್ವರ ಉಚ್ಚರಿತವಾಗುತ್ತದೆ. ಅದೇ ರೀತಿ ಕನ್ನಡದಲ್ಲಿ ಹಂಸ, ಹಂತಿ, ಅಂಟು, ಅಂಚೆ, ಅಂಗಿ ಇವುಗಳಲ್ಲಿಯ ಅನುನಾಸಿಕದ ಸಂಕೇತ ಒಂದೇ ಇದ್ದರೂ ಧ್ವನಿ ಬೇರೆಯಾಗಿದೆ. ಇತ್ತೀಚೆಗೆ ಕನ್ನಡದಲ್ಲಿ f, z ವ್ಯಂಜನಗಳು ಸೇರಿವೆಯಾದರೂ ಅವುಗಳನ್ನು ಸೂಚಿಸಲು, ರೂಢಿಗತ ಲಿಪಿಯಲ್ಲಿ ಸಂಕೇತಗಳಿಲ್ಲ. ಇಂತಹ ವೈಷಮ್ಯಗಳನ್ನು ಹೋಗಲಾಡಿಸಲು ಅಲ್ಲದೇ ಉಚ್ಚಾರಕ್ಕೂ ಲಿಪಿಗೂ ಅನುರೂಪತೆಯನ್ನು ತರಲು ಕೋಶ ರಚನೆಯಲ್ಲಿ ಅಂತಾರಾಷ್ಟ್ರೀಯ ಧ್ವನಿಲಿಪಿ ತುಂಬ ಅನುಕೂಲವಾಗುತ್ತದೆ.

ಕಾಗುಣಿತವನ್ನು ದಾಖಲಿಸುವಾಗ ಧ್ವನ್ಯಾಲೇಖನವನ್ನು ಬಳಸಬೇಕೋ ಅಥವಾ ಧ್ವನಿಮಾಲೇಖನವನ್ನು ಬಳಸಬೇಕೋ ಎಂಬುದರ ಬಗೆಗೆ ಕೋಶಶಾಸ್ತ್ರಜ್ಞರಲ್ಲಿ ಭಿನ್ನಾಭಿಪ್ರಾಯಗಳಿವೆ. ಧ್ವನಿಮಾ ಯಾವಾಗಲೂ ಉಪಧ್ವನಿಗಳ ಮೂಲಕ ಉಚ್ಚಾರಣೆಗೊಳ್ಳುವುದರಿಂದ ಧ್ವನ್ಯಾಲೇಖದಲ್ಲಿ ದಾಖಲಿಸಬೇಕೆಂಬುದು ಕೆಲವರ ವಾದ. ಧ್ವನ್ಯಾಲೇಖದಲ್ಲಿ ಉಚ್ಚಾರದ ಪ್ರತಿಯೊಂದು ಸೂಕ್ಷ್ಮ ಅಂಶಕ್ಕೂ ಮಹತ್ವವನ್ನು ಕೊಟ್ಟು ಅದನ್ನು ಇದ್ದಕ್ಕಿದ್ದಂತೆಯೇ ಆಲೇಖಿಸಲಾಗುತ್ತದೆ. ಆದರೆ ಅನೇಕ ಪ್ರಸಂಗಗಳಲ್ಲಿ ಇದು ಅಸಾಧ್ಯ ಮತ್ತು ಅನವಶ್ಯ. ಧ್ವನ್ಯಾಲೇಖದಲ್ಲಿ ದಾಖಲಿಸುವುದರಿಂದ ಕೋಶವನ್ನು ಬಳಸುವವರಿಗೆ ತೊಂದರೆಯಾಗುತ್ತದೆ. ಏಕೆಂದರೆ ಒಂದು ಧ್ವನಿಮಾ ಎರಡು ಅಥವಾ ಮೂರು ಉಪಧ್ವನಿಗಳ ಮೂಲಕ ಉಚ್ಚಾರಣೆಗೊಳ್ಳುವುದರಿಂದ ಅವುಗಳ ಸಂಕೇತಗಳನ್ನು ತಿಳಿದುಕೊಳ್ಳುವುದು ಕಷ್ಟಸಾಧ್ಯ. ಆದ್ದರಿಂದ ಭಾಷೆಯ ಮಹತ್ವದ ಧ್ವನಿಗಳನ್ನು ಅಂದರೆ ಧ್ವನಿಮಾಗಳನ್ನು ಅಂತಾರಾಷ್ಟ್ರೀಯ ಧ್ವನಿ ಪಟ್ಟಿಯ ಸಂಕೇತಗಳ ಸಹಾಯದಿಂದ ಆಲೇಖಿಸಬಹುದು. ಇದನ್ನು ಸ್ಥೂಲ ಆಲೇಖ ಎನ್ನುವರು. ದ್ವಿಭಾಷಿಕ ಮತ್ತು ಬಹುಭಾಷಿಕ ಕೋಶ ರಚನೆಯಲ್ಲಿ ಅದು ಮಹತ್ವದ ಪಾತ್ರವಹಿಸುತ್ತದೆ.

ಮಿಶನರಿ ಕೋಶಕಾರರು ಕಾಗುಣಿತಗಳನ್ನು ದಾಖಲಿಸುವಾಗ ಸ್ಥೂಲ ಆಲೇಖನವನ್ನು ಬಳಸಿದರು. ಭಾರತೀಯ ಭಾಷೆಗಳಲ್ಲಿ ಈ ವಿಧಾನವನ್ನು ಅನುಸರಿಸಿದವರು ಬಹುಶಃ ಮಿಶನರಿಗಳೇ ಮೊದಲಿಗರು.

ರೀವ್‌ಕೋಶದಲ್ಲಿ

ಅಟ್ಟು aTT ಮುಂಡ MuNDa
ಅರೆಗಂಟು Are – ganTu ಸಾಮೀಪ್ಯ Samipya
ಕೇಸರಿ Kesari ಹೈರಾಣ Heirana
ಬಿಡುಪು biDupu    

ಕಿಟೆಲ್‌ಕೋಶದಲ್ಲಿ

ಅಮೆರಿಕ Amerike ನೆಮ್ಬುಗೆ Nembuge
ಆರ್ತು artu ಪೊರ್ಕುಳಿ porkuLi
ಅಳ್ಳು aLLu ಮಿಂಚು Mincu
ಆದಿತ್ಯ Aditya ಮಿಟ್ಟು miTTu
ಉತ್ತಣ್ಡ uttanDa ಮಿಣ್ಟೆ minTe

ಮುಖ್ಯ ನಮೂದುಗಳನ್ನು ರೋಮನ್‌ಲಿಪಿಯಲ್ಲಿ ಲಿಪ್ಯಂತರ ಮಾಡುವಾಗ ಅಂತಾರಾಷ್ಟ್ರೀಯ ಧ್ವನಿಪಟ್ಟಿಯ ಸಂಕೇತಗಳನ್ನು ಬಳಸಿದ್ದಾರೆ. ಅವರು ಲಿಪ್ಯಂತರ ಮಾಡಿಕೊಂಡು ಧ್ವನಿಗಳು ಇಂತಿವೆ (ಕಿಟೆಲ್ ಕೋಶವನ್ನು ಅನುಲಕ್ಷಿಸಿ).

ಕನ್ನಡ ಲಿಪ್ಯಂತರ ಕನ್ನಡ ಲಿಪ್ಯಂತರ
a ಕ್‌ k
^a ಖ್‌ kh
i ಗ್‌ g
Ùi ಘ್‌ gh
u ಙ್‌ nÙ
Ùu ಚ್‌ c
ri ಛ್‌ ch
Ùri ಜ್‌ j
ri ಝ್‌ jh
Ùri ಞ್‌ N
e ಟ್‌ T
Ùe ಠ್‌ th
Ùai, ei ಡ್‌ D
o ಢ್‌ Dh
Ùo ಣ್‌ NÙ
Ùou ತ್‌ t
m ಥ್‌ th
h ದ್‌ d
    ದ್‌ Th
    ನ್‌ N
    ಕನ್ನಡ ಲಿಪ್ಯಂತರ
    ‌ಪ್‌ P
    ‌ಫ್‌ ph
    ಬ್‌ b
    ಭ್‌ bh
    ಮ್‌ n
    ಯ್‌ y
    ರ್‌ r
    R
    ಲ್‌ I
    ವ್‌ v
    ಶ್‌ s
    ಷ್‌ sh
    ಸ್‌ s
    ಹ್‌ h
    ಳ್‌ I
    IÙ

ಬರೆಹಕ್ಕೂ ಉಚ್ಚಾರಣೆಗೂ ಸಾಮ್ಯತೆಯನ್ನು ತರಲು ಮಿಶನರಿಗಳು ರೋಮನ್‌ಲಿಪಿ ಸಂಕೇತಗಳನ್ನು ಬಳಸಿದರು. ನಂತರ ಭಾರತೀಯ ಕೋಶಕಾರರು ಇದನ್ನು ಅನುಸರಿಸಿದರು. ಇದರಿಂದ ಕನ್ನಡೇತರರಿಗೆ ಕನ್ನಡ ಭಾಷೆಯ ರಚನೆಯನ್ನು ತಿಳಿದುಕೊಳ್ಳಲಿಕ್ಕೆ ತುಂಬ ಅನುಕೂಲವಾಯಿತು.

ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್‌ – ಕನ್ನಡ ನಿಘಂಟುವಿನ (ಪರಿಷ್ಕೃತ ಆವೃತ್ತಿ – ೧೯೮೯) ರಚನೆಯ ವೈಶಿಷ್ಟ್ಯಗಳನ್ನು ಹೀಗೆ ಕಲೆ ಹಾಕಬಹುದು.

೧. ನಾಮಪದ, ಕ್ರಿಯಾಪದ ಮೊದಲಾದ ವ್ಯಾಕರಣ ವರ್ಗಗಳನ್ನು ಅವುಗಳಿಂದ ನಿಷ್ಪತ್ತಿಯಾದ ಪದಗಳನ್ನೂ ಪ್ರಧಾನ ಪದಗಳಾಗಿ ನಮೂದಿಸಿದೆ.

೨. ಮುಖ್ಯ ನಮೂದಿನ ನಂತರ ಅದರ ಉಚ್ಚಾರಣೆ (ಗುಣವಾಚಕ, ನಾಮಪದ ಮೊದಲಾದ) ವಾಚಕ ಸೂಚನೆ ವಿದೇಶಿ ಪದವಾದರೆ ಅದರ ಮೂಲ (ಉದಾ:ಲ್ಯಾಟಿನ್‌ದಾದರೆ L), ಆಮೇಲೆ ಅರ್ಥಗಳು, ಅನಂತರ ಆ ಪದಕ್ಕೆ ಸಂಬಂಧಿಸಿದ ಪದ ಗುಚ್ಚಗಳು ಮತ್ತು ನುಡಿಗಟ್ಟುಗಳು – ಈ ಕ್ರಮವನ್ನು ಅನುಸರಿಸಲಾಗಿದೆ.

Await ಅವೇಟ್‌ಸಕ್ರಿ : ೧. ಕಾಯು : ಎದುರು ನೋಡು : ನಿರೀಕ್ಷಿಸು
೨. (ವಸ್ತುವಿನ . ವಿ) ಕಾದಿರು : ಸಿದ್ಧವಾಗಿರು : Adinner~s them ಔತಣ ಅವರಿಗಾಗಿ ಕಾದಿದೆ.
ಅಕ್ರಿ : ಕಾದಿರು : Please – outside ದಯವಿಟ್ಟು ಹೊರಗೆ ಕಾದಿರು.

೩. ಕ್ರಿಯಾಪದಗಳ ಸಕರ್ಮಕ ಮತ್ತು ಆಕರ್ಮಕ ಪ್ರಯೋಗಗಳನ್ನು ಬೇರ್ಪಡಿಸಿ, ಪ್ರತ್ಯೇಕವಾಗಿ ದಾಖಲೆ ಮಾಡಿ ಅರ್ಥಕೊಟ್ಟಿದೆ. ಒಂದೇ ವಿವರಣೆ ಎರಡಕ್ಕೂ ಅನ್ವಯಿಸಿದರೆ ಕಂಸಗಳಲ್ಲಿ ‘ಅಕ್ರಿ’ ಅಥವಾ ‘ಸಕ್ರಿ’ ಎಂದು ಕೊಟ್ಟಿದೆ (ಮೇಲಿನ ನಮೂದನ್ನು ಗಮನಿಸಿ).

೪. ಏಕ ಪದದಂತೆ ಪ್ರಯೋಗವಾಗುವ ಅರೆ ಸಮಸ್ತ ಪದಗಳನ್ನೂ ಅಸಮಸ್ತ ಪದಪುಂಜಗಳನ್ನೂ ಸ್ವತಂತ್ರ ಪದಗಳಾಗಿ ಪರಿಗಣಿಸಿ ನಮೂದಿದೆ.

Air – minded; back up : cock – and – bull story; dry law

೫. i. ಪದಪುಂಜಗಳನ್ನು ಮತ್ತು ನುಡಿಗಟ್ಟುಗಳನ್ನು ಪದದ ಅರ್ಥಗಳನ್ನು ನೀಡಿದ ತರುವಾಯ ಪ್ರತ್ಯೇಕವಾಗಿ ಕೊಟ್ಟಿದೆ. ಅವುಗಳಿಗೂ ಪ್ರಯೋಗಗಳನ್ನು ಕೊಡಲಾಗಿದೆ. ಗಾದೆಗಳನ್ನು ನುಡಿಗಟ್ಟುಗಳಲ್ಲೇ ಸೇರಿದೆ.

ii. ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಉದಾಹರಣೆ ಮತ್ತು ಪ್ರಯೋಗ ವಾಕ್ಯಗಳನ್ನು ಕನ್ನಡ ಅನುವಾದ ಸಹಿತವಾಗಿ ನೀಡಲಾಗಿದೆ.

iii. ಒಂದೇ ಅರ್ಥಕ್ಕೋ ಪದಪುಂಜಕ್ಕೋ ಎರಡು ಮೂರು ಪ್ರಯೋಗ ವಾಕ್ಯಗಳನ್ನು ಕೊಡುವಾಗ ಒಂದರ ಕನ್ನಡ ಅರ್ಥ ಕೊಟ್ಟ ನಂತರ ಪೂರ್ಣ ವಿರಾಮ ಬಳಸಿ ಅನಂತರ ಇನ್ನೊಂದು ಪ್ರಯೋಗ ವಾಕ್ಯ ಕೊಡಲಾಗಿದೆ.

Awkward ಆಕ್ಟರ್ಡ್‌ಗು. ೧. ಎಡವಟ್ಟಾದ ಕೆಲಸಕ್ಕೆ ಅಳವಡದ; ಕೆಲಸಕ್ಕಾಗದ person ಕೆಲಸಕ್ಕೆ ಆಗದ ವ್ಯಕ್ತಿ.
೨. ಒರಟಾದ: ಕೌಶಲವಿಲ್ಲದ; ನಾಜೂಕಿಲ್ಲದ; ನಯವಿಲ್ಲದ; ಅಕುಶಲ; ಅಚತುರ; ವಕ್ರ
೩. ಅಂದವಿಲ್ಲದ; ವಿಕಾರವಾದ
೪. ಹೊತ್ತಲ್ಲದ ; ಅವೇಳೆಯ; ಅಕಾಲದ : ಅಸಂದರ್ಭದ
೫. ಇಕ್ಕಟ್ಟಿನ; ತೊಡಕಿನ; ಸಂದಿಗ್ಧದ – situation ಸಂದಿಗ್ಧ ಪರಿಸ್ಥಿತಿ
೬. ಪೇಚಿನ; ಮುಜುಗರದ; felft – about

Awaken ಅವೇಕನ್‌ಸಕ್ರಿ (ಅಕ್ರಿ, ಸಹ) ೧. Awake ೨. (ಮು.ರೂಪ) ಎಚ್ಚರಗೊಳಿಸು: ಅರಿವು ಮೂಡಿಸು; ಗಮನಿಸುವಂತೆ ಮಾಡು.

೬. ಒಂದೇ ಅರ್ಥದಲ್ಲಿ ಪರ್ಯಾಯವಾಗಿ ಕೊಡುವ ಭಿನ್ನ ಭಿನ್ನ ಪದಗಳ ನಡುವಣ ವಿಭಾಗವನ್ನು ೧. ಅರೆ ಕೋಲನ್‌(;) ಮೂಲಕ ಸೂಚಿಸಿದೆ. ಉದಾ – alert ಹುಷಾರಿ; ಎಚ್ಚರಿಕೆ; ಅಪಾಯ ಸೂಚಕ ಧ್ವನಿ.

ಉಚ್ಚಾರಣೆಯ ವಿಷಯದಲ್ಲಿ ೧. ಎಲ್ಲ ಪ್ರಧಾನ ಪದಗಳಿಗೂ ಉಚ್ಚಾರಣೆ ಕೊಡಲಾಗಿದೆ. ೨. ಅಸಮಸ್ತ ಪದಗುಚ್ಚಗಳಿಗೆ ಉಚ್ಚಾರಣೆ ನೀಡಿಲ್ಲ; ಏಕೆಂದರೆ ಅವುಗಳ ಅಂಗಪದಗಳಿಗೆ ಬೇರೆಡೆ ತಿಳಿಸಿರುತ್ತದೆ. ೩. ಅಸಮಸ್ತ ಪದಪುಂಜದ ಯಾವುದಾದರೂ ಅಂಗಪದ ಎಲ್ಲೂ ಪ್ರಧಾನ ಪದವಾಗಿ ಉಲ್ಲೇಖವಾಗಿರದ ಸಂದರ್ಭದಲ್ಲಿ ಮಾತ್ರ ಅಸಮಸ್ತ ಪದಕ್ಕೆ ಉಚ್ಚಾರಣೆ ಕೊಡಲಾಗಿದೆ : Boyle’s law : Dundreary whiskers. ಇಂಗ್ಲಿಷ್‌ಪದಗಳಿಗೆ ಸ್ಟ್ಯಾಂಡರ್ಡ್‌ಉಚ್ಚಾರಣೆಯನ್ನು ಕೊಟ್ಟಿದೆ. ಅದರ ವಿವರಣೆಯಲ್ಲಿ ಕನ್ನಡದಲ್ಲಿ ಬಳಕೆಯಲ್ಲಿರುವ ಉಚ್ಚಾರಣೆಯ ರೂಪವನ್ನು ಇಟ್ಟುಕೊಂಡಿದೆ. ಉದಾ: budget, badge ಎಂಬ ಪದಗಳಿಗೆ ಬಜೆಟ್‌, ಬ್ಯಾಜ್‌ಎಂಬ ಉಚ್ಚಾರಣೆ ಕೊಟ್ಟು ವಿವರಣೆಯಲ್ಲಿ ಬಡ್ಜಟ್ಟು, ಬ್ಯಾಡ್ಜು ಎಂಬ ಕನ್ನಡ ರೂಪಗಳನ್ನು ಇಟ್ಟುಕೊಂಡಿದೆ. ಹಾಗೆಯೇ dharma ಎಂಬ ಪದಕ್ಕೆ ಡಾರ್ಮ, ಡರ್ಮ ಎಂಬ ಇಂಗ್ಲಿಷ್‌ಉಚ್ಚರಣಾ ರೂಪಗಳನ್ನು ಕೊಟ್ಟು ವಿವರಣೆಯಲ್ಲಿ ‘ಧರ್ಮ’ ಎಂದು ಕೊಡಲಾಗಿದೆ. ಆಧುನಿಕ ಕೋಶ ರಚನೆಯ ತತ್ವಗಳ ಹಿನ್ನೆಲೆಯಲ್ಲಿ ಸಿದ್ಧವಾದ ಈ ನಿಘಂಟು ಅಖಿಲ ಕರ್ನಟಕದ ಜನರಿಗೆ ಅಂಗೀಕಾರ್ಹವಾಗಿದೆ.

ಕನ್ನಡದಲ್ಲಿರುವ ಇನ್ನೊಂದು ಮಹತ್ವದ ದ್ವಿಭಾಷಿಕ ನಿಘಂಟು ಕಿಟೆಲ್ಲರ ‘ಕನ್ನಡ – ಇಂಗ್ಲಿಷ್‌ನಿಘಂಟು’ (೧೮೯೪). ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತದ ಭಾಷೆಗಳಿಗೆ ತಯಾರಾಗಿದ್ದ ನಿಘಂಟುಗಳೆಲ್ಲಾ ಕಿಟೆಲ್ಲರ ನಿಘಂಟು ತಂತ್ರ, ವಿನ್ಯಾಸ; ವಿಧಾನ, ಉಪಯುಕ್ತತೆ ಮತ್ತು ಸಮಗ್ರತೆ ಈ ದೃಷ್ಟಿಗಳಿಂದ ಅತ್ಯುತ್ತಮವಾಗಿದೆ. ಕನ್ನಡದಲ್ಲಿ ಮೂಡಿಬಂದ ಮೊದಲ ವೈಜ್ಞಾನಿಕ ನಿಘಂಟುಯಿದಾಗಿದೆ.

ಕಿಟೆಲ್‌ಅವರು ತಮ್ಮ ನಿಘಂಟುವಿನಲ್ಲಿ ಅನುಸರಿಸುವ ವಿಧಾನ ತುಂಬ ಶಾಸ್ತ್ರೀಯವಾದುದು. ದೇಶ್ಯ, ಸಂಸ್ಕೃತ, ಅನ್ಯದೇಶಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ತೋರಿಸಿಕೊಟ್ಟಿದ್ದಾರೆ. ದೇಶ್ಯ ಶಬ್ದಗಳಿಗೆ ಮೊದಲು ಅರ್ಥಗಳನ್ನೂ ಆ ಮೇಲೆ ಕಾವ್ಯ ಪ್ರಯೋಗಗಳ ಆಕರಗಳನ್ನೂ ಇತರ ನಿಘಂಟುಗಳಲ್ಲಿ ಸಿಕ್ಕುವ ಅರ್ಥಗಳನ್ನೂ ಕೊಟ್ಟಿದ್ದಾರೆ. ಅದಾದ ಮೇಲೆ ಕನ್ನಡದ ಸೋದರ ಭಾಷೆಗಳಾದ ತಮಿಳು, ತುಳು, ತೆಲುಗು ಭಾಷೆಗಳಿಂದ ಜ್ಞಾತಿ ಶಬ್ದಗಳನ್ನು ಸೂಚಿಸಿದ್ದಾರೆ. ಕೊನೆಯಲ್ಲಿ ಉಪಲಬ್ದವಿದ್ದ ಗಾದೆಗಳನ್ನೂ ನುಡಿಗಟ್ಟುಗಳನ್ನೂ ಉಲ್ಲೇಖಿಸಿದ್ದಾರೆ. ಸಂಸ್ಕೃತ ಶಬ್ದಗಳಿಗೆ ಅರ್ಥಗಳನ್ನು ಸೂಚಿಸಿ ಉಪಲಬ್ದವಿದ್ದ ಆಕರಗಳನ್ನು ಅಲ್ಲಲ್ಲಿ ಕೊಟ್ಟಿದ್ದಾರೆ. ಅನ್ಯದೇಶ್ಯ ಶಬ್ದಗಳಿಗೆ ಅರ್ಥಗಳನ್ನು ಕೊಟ್ಟ ಮೇಲೆ ಅದು ಯಾವ ಭಾಷೆಯಿಂದ ಬಂದಿದೆ ಎಂಬುದನ್ನು ಸೂಚಿಸಿದ್ದಾರೆ. ಒಂದು ಶಬ್ದ ಬೇರೆ ಬೇರೆ ಮೂಲಗಳಿಂದ ಬಂದದ್ದಾಗಿದ್ದು ಪ್ರತ್ಯೇಕ ನಿಷ್ಪತ್ತಿ ಹೊಂದಿದ್ದಾರೆ. ಆ ಶಬ್ದವನ್ನು ಒಂದು, ಎರಡು, ಮೂರು ಎಂದು ಪ್ರತ್ಯೇಕ ಮುಖ್ಯ ಉಲ್ಲೇಖವಾಗಿ ಕೊಟ್ಟಿದ್ದಾರೆ.

ಕಿಱಚು Kiracu  ಕಿಱಿಚು, ಕಿಱುಚು, ಕಿರ್ಚು To cry, to shout, to scream (T. ಕಿಱೂ ಕಿಱೂ, ಕಿಱುವು Mhr. ಕಿರ್ರ)
ಕಿರಿ Kiri ೧  ಕೆರೆ To shave
ಕಿರಿ Kiri ೨  To display or show the teeth to grin

ಕಣ್ಣ ಕಣ್ಣವರಿಗೆಲ್ಲಾ ಹಲ್ಲು ಕಿರಿದರೂ ಗಣ್ಡ ಸತ್ತ ಮುಂಡೆಗೆ ಬೋಱಿಸದೇ ಬಿಡರು (prv)

ಈ ಕ್ರಮ ಅತ್ಯಂತ ಉಪಯುಕ್ತವಾದುದು. ಕಿಟೆಲ್‌ಅವರ ಸಮಕಾಲೀನ ಯಾವ ನಿಘಂಟಿನಲ್ಲಿಯೂ ಈ ವಿಧಾನ ಕಂಡುಬರುವುದಿಲ್ಲ. ಮೇಲಿನ ಎರಡೂ ಬಗೆಯ ನಿಘಂಟುಗಳು ದ್ವಿಭಾಷಿಕ ಕೋಶ ರಚನೆಗೆ ಮಾದರಿಗಳಾಗಿವೆ.

ದ್ವಿಭಾಷಿಕ ನಿಘಂಟು ರಚನೆಯ ಸಮಸ್ಯೆಗಳು

೧. ದ್ವಿಭಾಷಿಕ ನಿಘಂಟುವಿನಲ್ಲಿ ಒಂದು ಭಾಷೆಯ ನಮೂದುಗಳನ್ನು ಇನ್ನೊಂದು ಭಾಷೆಯ ನಮೂದುಗಳಿಗೆ ಹೊಂದಿಸಿ ನಿರೂಪಿಸಬೇಕಾಗುತ್ತದೆ. ಆದರೆ ಈ ಕೆಲಸ ಕಷ್ಟಸಾಧ್ಯ. ಪರಸ್ಪರ ವಾಂಶಿಕವಲ್ಲದ ನಮೂದುಗಳನ್ನು ಹುಡುಕುವುದು ಬಹು ಕಠಿಣವಾದುದು. ಉದಾ: ಪಾನಕ, ತಾಲಿ (ತಾಳಿ), ಕುಂಕುಮ ಮುಂತಾದ ನಮೂದುಗಳಿಗೆ ಕನ್ನಡ ಸಮಾನಾರ್ಥಕಗಳು ಸಿಗುವುದಿಲ್ಲ. ಇಂತಹ ಭಾಷಿಕ ಸಂದರ್ಭದಲ್ಲಿ ಉದ್ದಿಷ್ಟ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ವಿವರಣೆ ಕೊಡಬೇಕಾಗುತ್ತದೆ.

ಉದಾ :

ಪಾನಕ :  A beverage made of Jaggery, Sugar etc. and water and drunk as sherbet.
ತಾಲಿ : (ತಾಳಿ) :  A small round plate of gold worn at the neck, as a marrageage badge answering to the marriage ring.

೨. ಆಕರಭಾಷೆಯ ಕೆಲವು ಭಾಷಿಕ ಸಂದರ್ಭದಲ್ಲಿ ನಮೂದುಗಳಿಗೆ ವಿವರಣೆ ಕೊಡುವುದು ಸಾಧ್ಯವಿಲ್ಲದಾಗ ಅದರ ಭಾಷಿಕ ಕ್ರಿಯೆಯನ್ನು ಸೂಚಿಸಬೇಕಾಗುತ್ತದೆ.

ಅಯ್ಯೋ : An interjection, expression grief, alas : astonishment aha! Aha! Compassion : ah! Alas!

೩. ಯಾವುದೇ ಪದಕ್ಕೆ ಅರ್ಥ ಬರೆಯುವಾಗ ನಾವು ಯಾವ ನಿಘಂಟನ್ನು ಆಧಾರವಾಗಿಟ್ಟುಕೊಂಡಿದ್ದೇವೆಯೋ ಅದರಲ್ಲಿರುವ ವಿವರಣೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಉದಾ: Concise oxford dictionaryಯಲ್ಲಿ Alsace ಎಂಬ ಪದಕ್ಕೆ dry white wine ಎಂದು ಅರ್ಥಕೊಡಲಾಗಿದೆ. ಇದಕ್ಕೆ ಕನ್ನಡದಲ್ಲಿ ‘ಒಣ ಬಿಳಿಯ ವೈನು’ ಎಂದು ಅರ್ಥ ಬರೆದರೆ ತಪ್ಪಾಗುವುದಲ್ಲದೆ ಅಸಂಬದ್ಧವೂ ಹಾಸ್ಯಾಸ್ಪದವೂ ಅಗುತ್ತದೆ. ಇದರ ಅರ್ಥ ‘ಸಿಹಿಯಲ್ಲದ ಬಿಳಿಯ ವೈನು’ ಎಂದು. Dry ಎಂಬ ಪದಕ್ಕೆ ‘ಒಣ’ ಎಂಬ ಅರ್ಥವಿದ್ದರೂ ಮಧ್ಯಕ್ಕೆ ಸಂಬಂಧಿಸಿದಂತೆ ಅದಕ್ಕೆ ‘ಸಿಹಿಯಲ್ಲದ’ ಎಂಬರ್ಥವೇ ಸಂಗತವಾದದ್ದು. ಅಂತೆಯೇ, ನಾವು ಆಕರವಾಗಿಟ್ಟುಕೊಂಡು ನೋಡುವ ಇಂಗ್ಲಿಷ್‌ – ಇಂಗ್ಲಿಷ್‌ನಿಘಂಟಿನಲ್ಲಿ ಕೆಲವು ವೇಳೆ ಕೊಟ್ಟಿರುವ ವಿವರಣೆ ತಪ್ಪು ಗ್ರಹಿಕೆಗೆ ಎಡೆಮಾಡಿ ಕೊಡುತ್ತದೆ. ಆಗ ನಿಘಂಟುಕಾರ ಇತರ ಬೃಹತ್‌ನಿಘಂಟುಗಳನ್ನು ನೋಡಿ ಪದದ ಸರಿಯಾದ ಅರ್ಥವನ್ನು ನಿಷ್ಕರ್ಷಿಸಬೇಕಾಗುತ್ತದೆ.

೪. ಆಕರ ಭಾಷೆಯ ಕೆಲವು ಸಾಂಸ್ಕೃತಿಕ ಪದಗಳಿಗೆ ಉದ್ದಿಷ್ಟ ಭಾಷೆಯಲ್ಲಿ ಸಮಾನಾರ್ಥಕಗಳಿದ್ದರೂ ಅವುಗಳ ಸಮಾನತೆ ಸಂಪೂರ್ಣವಾಗಿರದೇ ಕೇವಲ ಸಂಕ್ಷಿಪ್ತವಾಗಿರುತ್ತದೆ. ಉದಾ: ಕನ್ನಡದ ‘ದೇವರು’ ಎಂಬುದಕ್ಕೆ ಇರುವ ಅರ್ಥ ವ್ಯಾಪ್ತಿ ಇಂಗ್ಲಿಶಿನಲ್ಲಿ ಸಮಾನಾರ್ಥಕ ರೂಪ ‘God’ ಎಂಬ ಪದಕ್ಕೆ ಇಲ್ಲ. ಇಂತಹ ಸಾಂಸ್ಕೃತಿಕ ಪದಗಳಿಗೆ ಸಮಾನಾರ್ಥಕಗಳನ್ನು ಕೊಡುವುದು. ಕಠಿಣವಾದಾಗ ಅದಕ್ಕೆ ಸೂಕ್ತವಾಗುವಂತೆ ಅರ್ಥವಿವರಣೆ ಕೊಟ್ಟು ನಿಘಂಟುಕಾರ ತೃಪ್ತನಾಗಬೇಕು.

ದ್ವಿಭಾಷಿಕ ನಿಘಂಟು ರಚನೆ ಸರಳವಾದ ಕೆಲಸವಲ್ಲ. ಕೋಶಕಾರನಿಗೆ ತಾನು ಸಿದ್ಧಪಡಿಸುವ ಕೋಶದ ಎರಡು ಭಾಷೆಯ ಮೇಲೆ ಹಿಡಿತವಿರಬೇಕು. ಯಾವುದೇ ಸಮಸ್ಯೆ ಉದ್ಭವಿಸಿದಾಗ ನಿಘಂಟುವಿನ ಸ್ವರೂಪ, ಗುರಿ ಹಾಗೂ ಗಾತ್ರ ಇವುಗಳನ್ನು ಗಮನದಲ್ಲಿಟ್ಟುಕೊಂಡು ಪರಿಣಿತರ ಅಭಿಪ್ರಾಯ ಪಡೆದು ಅದನ್ನು ಕೂಡಲೇ ನಿವಾರಿಸಿಕೊಳ್ಳಬೇಕು. ತನಗೆ ತಿಳಿಯದ ಅರ್ಥದಲ್ಲಿ ಅಥವಾ ತನಗೆ ತಿಳಿದಿರುವ ಅರ್ಥಗಳಲ್ಲೇ ಬೇರೊಂದು ಛಾಯೆಯಲ್ಲಿ ಒಂದು ಪದ ಏಕೆ ಬಳಕೆಯಾಗಿರಬಾರದು ಎಂಬ ಸಂಶಯ ಸದಾ ನಿಘಂಟುಕಾರನನ್ನು ಕಾಡಬೇಕು.

ಒಟ್ಟಿನಲ್ಲಿ, ದ್ವಿಭಾಷಿಕ ನಿಘಂಟುಗಳು ಎರಡೂ ಭಾಷೆಗಳ (ಆಕರ ಭಾಷೆ ಮತ್ತು ಉದ್ದಿಷ್ಟ ಭಾಷೆ) ವೈಜ್ಞಾನಿಕ ಅಧ್ಯಯನಕ್ಕೆ ಮಹತ್ವದ ಭಾಷಿಕ ಸಾಮಗ್ರಿಗಳನ್ನು ಕೊಡುವುದರಿಂದ ಅವು ಅತ್ಯುತ್ತಮ ಆಕರ ಗ್ರಂಥಗಳಾಗುತ್ತವೆ.