ಎರಡು ಭಾಷೆಗಳಿಗಿಂತ ಹೆಚ್ಚು ಭಾಷೆಗಳನ್ನು ಉಪಯೋಗಿಸಿಕೊಂಡು ರಚಿಸುವ ನಿಘಂಟುಗಳನ್ನು ಬಹುಭಾಷಿಕ ನಿಘಂಟುಗಳೆಂದು ಕರೆಯುತ್ತಾರೆ. ಕನ್ನಡದಲ್ಲಿ ಬಹುಭಾಷಾ ನಿಘಂಟುಗಳು ಬಹಳ ಕಡಿಮೆ. ನಮಗೆ ತಿಳಿದಿರುವ ಮಟ್ಟಿಗೆ ಮೊದಲು ಬಹುಭಾಷಾ ನಿಘಂಟವನ್ನು ಕನ್ನಡಕ್ಕೆ ಕೊಟ್ಟವರು ಶ್ರೀ ಎಲ್‌. ಎಸ್‌. ಚಿಟಗುಪ್ಪಿಯವರು. ಈ ನಿಘಂಟಿನ ಶೀರ್ಷಿಕೆ ‘ಆಧುನಿಕ ಹಿಂದಿ – ಕನ್ನಡ – ಇಂಗ್ಲಿಷ್‌ಶಬ್ದಕೋಶ’ ನಂತರ ಯು. ಪಿ. ಉಪಾಧ್ಯಾಯರ ನೇತೃತ್ವದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಪ್ರಕಟಿಸಿದ ‘ತುಳು – ಕನ್ನಡ – ಇಂಗ್ಲಿಷ್‌ನಿಘಂಟು’ ಏಕಭಾಷಿಕ ಮತ್ತು ದ್ವಿಭಾಷಿಕ ನಿಘಂಟು ರಚನೆಯಲ್ಲಿ ಅಳವಡಿಸುವ ಹಾಗೂ ಈ ಮೊದಲೇ ವಿವರಿಸಲಾದ ಕ್ಷೇತ್ರಕಾರ್ಯ, ನಿಘಂಟಿಮಗಳ ಆಯ್ಕೆ, ನಿಘಂಟಿಮಗಳ ರಚನೆಯ ವಿಧಾನವನ್ನೇ ಇಲ್ಲಿ ಅಳವಡಿಸಬಹುದು. ಬಹುಭಾಷಿಕ ನಿಘಂಟುವಿಗೆ ಮಾದರಿಯಾದ ಯು. ಪಿ. ಉಪಾಧ್ಯಾಯ ಅವರ ಸಂಪಾದಕತ್ವದಲ್ಲಿ ಪ್ರಕಟವಾದ ‘ತುಳು ನಿಘಂಟು ಸಂಪುಟ’ಗಳ ರಚನೆಯನ್ನು ಈ ಅಧ್ಯಾಯದಲ್ಲಿ ವಿವೇಚಿಸಲಾಗಿದೆ.

ಆಧುನಿಕ ಭಾಷಾವಿಜ್ಞಾನದ ಬೆಳಕಿನಲ್ಲಿ ತುಳುನಾಡಿನ ಎಲ್ಲ ಸಾಂಸ್ಕೃತಿಕ ಮಹತ್ವಗಳಿಂದ ಕೂಡಿದ ಬೃಹತ್‌ಕೋಶವೊಂದರ ಕನಸನ್ನು ತುಳು ಭಾಷಿಕರು ಬಹುದಿನಗಳಿಂದ ಕಾಯುತ್ತಿದ್ದರು. ಅದೀಗ ನನಸಾಗಿದೆ. ಈ ನಿಘಂಟುವಿನ ರಚನೆ ಬಹಳ ಶ್ರಮದಿಂದಲೂ ವಿಚಾರ ಪೂರ್ವಕವಾಗಿಯೂ ನಡೆದಿರುವುದು ಆ ನಿಘಂಟುಗಳ ಪರಿಶೀಲನೆದಿಂದ ಯಾರಿಗಾದರೂ ಹೊಳೆಯದಿರದು. ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಯಾವ ಭಾಷೆಗಳಿಗೂ (ಶಿಷ್ಟಭಾಷೆ/ಆಡುಭಾಷೆ) ಇಂತಹ ನಿಘಂಟುಗಳು ಸಿದ್ಧವಾಗಿಲ್ಲ. ಭಾರತದ ಇತರ ಕಡೆಗಳಲ್ಲೂ ಇಂತಹ ಪ್ರಯತ್ನಗಳು ನಡೆದಿಲ್ಲವೆಂದೇ ಹೇಳಬೇಕು. ತುಳುನಿಘಂಟು ಇಂತಹ ಕಾರ್ಯಕ್ಕೆ ಮಾದರಿಯಾಗಿದೆ.

ತುಳು ನಿಘಂಟು ರಚನೆಯ ಉದ್ದೇಶಗಳು ಇಂತಿವೆ.

೧. ತುಳುವಿನ ಸಾಮಾಜಿಕ, ಪ್ರಾದೇಶಿಕ ನೆಲೆಗಳಲ್ಲಿ ಬಳಕೆಯಲ್ಲಿರುವ ಎಲ್ಲ ಆಡು ಭಾಷೆಗಳ ಪ್ರಕಾರಗಳನ್ನು ಗುರುತಿಸುವುದು.

೨. ತುಳುವಿನ ಆಡುಭಾಷೆಗಳಲ್ಲಿರುವ ಶಬ್ದಗಳನ್ನು, ವೃತ್ತಿರೂಪಗಳನ್ನು ಸಂಗ್ರಹಿಸಿ ಅವುಗಳನ್ನು ಕನ್ನಡ ಹಾಗೂ ಅಂತಾರಾಷ್ಟ್ರೀಯ ಕ್ರೋಢಿಕರಿಸಿ ಅವುಗಳ ಅರ್ಥವನ್ನು ಇಂಗ್ಲಿಶ್ ಹಾಗೂ ಕನ್ನಡದಲ್ಲಿ ಕೊಡುವುದು.

೩. ಈ ಶಬ್ದಕೋಶವು ತುಳುವಿನ ಅಧಿಕೃತ ವ್ಯಾಕರಣ ರಚನೆಗೆ ಸಹಾಯ ಮಾಡುವುದು.

೪. ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆ ತುಳುವನ್ನು ಶಿಕ್ಷಣ ಮಾಧ್ಯಮವಾಗಿ ಉಪಯೋಗಿಸುವ ನಿಟ್ಟಿನಲ್ಲಿ ರಚಿಸಬೇಕಾದ ಪ್ರಾಥಮಿಕ ಪಠ್ಯ ಪುಸ್ತಕ ಹಾಗೂ ಇತರ ಪುಸ್ತಕಗಳಿಗೆ ಅಗತ್ಯವಿರುವ ಮೂಲ ಶಬ್ದ ಭಂಡಾರವನ್ನು ಈ ಕೋಶ ಒದಗಿಸುತ್ತದೆ.

೫. ತುಳು ಭಾಷೆಗೆ ಒಂದು ಪ್ರಾತಿನಿಧಿಕ ರೂಪದ ರಚನೆ ಈ ಪ್ರಾಥಿನಿಧಿಕ ರೂಪ ಸಾಹಿತ್ಯ ಸೃಷ್ಟಿಗೆ, ಆಕಾಶವಾಣಿ, ವಾರ್ತಾಪ್ರಸಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಪತ್ರಿಕಾ ಪ್ರಕಟಣೆ, ಸಿನೆಮಾ, ನಾಟಕ ಇತ್ಯಾದಿಗಳಿಗೆ ಒಂದು ನಿರ್ದಿಷ್ಟವಾದ ರೂಪವನ್ನು ಕೊಡುತ್ತದೆ.

ಈ ನಿಘಂಟುವಿನ ವೈಶಿಷ್ಟ್ಯತೆಗಳನ್ನು ಹೀಗೆ ಕಲೆ ಹಾಕಬಹುದಾಗಿದೆ. ಶಿಷ್ಟ ಸಾಹಿತ್ಯ, ಜಾನಪದ ಹಾಗೂ ಉಪಭಾಷೆಗಳ ಬಳಕೆ ಎಲ್ಲ ವರ್ಗದ ಆಡುನುಡಿಗಳಿಗೂ ಸಮಾನಸ್ಥಾನ, ಪ್ರಾಚೀನ ಸಾಹಿತ್ಯ, ಪಾಡ್ಡನ ಸಾಹಿತ್ಯ ಹಾಗೂ ಆಧುನಿಕ ಸಾಹಿತ್ಯದಿಂದ ಉದ್ಧರಣೆ, ಗಾದೆ, ಒಗಟು, ನುಡಿಗಟ್ಟುಗಳ ಉಲ್ಲೇಖ ಕನ್ನಡ ಲಿಪಿಯೊಂದೆಗೆ ಪರಿಷ್ಕೃತ ರೋಮನ್‌ಲಿಪಿಯ ಬಳಕೆ, ಇಂಗ್ಲಿಶ್‌ಮತ್ತು ಕನ್ನಡದಲ್ಲಿ ಅರ್ಥ ವಿವರಣೆ, ವಾಚ್ಯಾರ್ಥ, ವ್ಯಂಗ್ಯಾರ್ಥ, ವಿಶೇಷಾರ್ಥ, ಹೀನಾರ್ಥ, ಅನ್ಯಾರ್ಥ ಮುಂತಾದ ಹಲವಾರು ಅರ್ಥಗಳ ಉಲ್ಲೇಖ, ವೃತ್ತಿ, ಕಲೆ, ವಿನೋದ, ನಂಬಿಕೆ, ಆಚರಣೆಗಳ ಬಗ್ಗೆ ವಿವರಣೆಗಳು, ವ್ಯಾಕರಣ ಸಂಬಂಧಿ ವಿವರಗಳು, ಪದಗಳ ಸಾಂದರ್ಭಿಕ ರೂಪಭೇದಗಳು, ಸಮಾನಾರ್ಥಕ ಪದಗಳು ಮುಂತಾದವುಗಳ ಉಲ್ಲೇಖ. ಪ್ರತ್ಯಯಗಳು, ಭಾವೋದ್ಗಾರಗಳು – ಬಾಲ ಭಾಷೆಯ ಪದಗಳು, ಗುಪ್ತ ಭಾಷೆಯ ಪದಗಳು ಮುಂತಾದವುಗಳ ಉಲ್ಲೇಖ. ಹಾಗೂ ಸಮಾನ ಪದಗಳು, ಸಾಧಿತ ಪದಗಳು, ನುಡಿಗಟ್ಟುಗಳು ಇವುಗಳ ವಿವರಣೆಗಳನ್ನು ಉದಾಹರಣೆಗಳೊಂದಿಗೆ ಉಲ್ಲೇಖಿಸಲಾಗಿದೆ.

ನಿಘಂಟುಗಳಲ್ಲಿ ಸಾಮಾನ್ಯವಾಗಿ ಮೂಲಧಾತುಗಳನ್ನು, ಸಮಸ್ತ ಪದಗಳನ್ನು ಮಾತ್ರ ಕೊಡುತ್ತಾರೆ. ಆದರೆ ಈ ನಿಘಂಟಿನಲ್ಲಿ ತುಳುಭಾಷೆಯ ಪ್ರತ್ಯಯಗಳನ್ನೂ ಬೇರೆ ಉಪಭಾಷೆಗಳಲ್ಲಿ ಕಂಡುಬರುವ ಆ ಪ್ರತ್ಯಯಗಳ ರೂಪಭೇದಗಳನ್ನೂ ಅವುಗಳ ಕನ್ನಡ ಮತ್ತು ಇಂಗ್ಲಿಶ್‌ಅರ್ಥ, ಪ್ರಯೋಗಗಳನ್ನು ಕೊಡಲಾಗಿದೆ. ಮುಖ್ಯ ಉಲ್ಲೇಖಗಳ ಉಪ ಉಲ್ಲೇಖಗಳಾಗಿ ಸಾಧಿತ ಪದ, ಸಮಾಸ ಪದಗಳು ಮಾತ್ರವಲ್ಲದೆ ಆ ಪದದಿಂದ ಸಾಧಿತವಾದ ವಾಗ್ರೂಢಿ, ನುಡಿಗಟ್ಟುಗಳನ್ನು ಕೊಡಲಾಗಿದೆ.

ಅಟ ata Nchtj ಆಟೊ ato schtj. Cf ಹಟ hata ೧. ಮೊಂಡುತನ : ಹಠ obsti nacy ೨.ಹೇಗೆ : ಪ್ರತೀಕಾರ Retaliation, revenge. SKT. Hatha

 

ಇದರ ಅಡಿಯಲ್ಲಿ

ಅಟತಾಯೆ aTataaye ಹಟಗಾರ. An obstinate person
ಅಟಮಾರಿ aTamaari ಹಟಮಾರಿ. An obstinate person
ಅಟವಾದಿ aTyaadi ಹಟವಾದಿ. An extremely obstinate person

‘ಅಟ’ ಹಾಗೂ ಅದರಿಂದ ನಿಷ್ಪನ್ನವಾದ ಸಾಧಿತ ರೂಪಗಳು ಅದರ ಅಡಿಯಲ್ಲಿ ಕೊಟ್ಟಿದ್ದಾರೆ. ಅದರಂತೆ ‘ಬೆಲ್ಲ’ ಎಂಬ ಪದದ ಉಪ ಉಲ್ಲೇಖವಾಗಿ ಅರಿಬೆಲ್ಲ, ಅಚ್ಚಿಬೆಲ್ಲ, ಊರಬೆಲ್ಲ, ನೀರ್‌ಬೆಲ್ಲ, ಪಾತ್ರೆಬೆಲ್ಲ್ ಮುಂತಾದ ವಾಗ್ರೂಢಿಗಳನ್ನು ಕೊಟ್ಟು ನಂತರ ‘ಬೆಲ್ಲ್‌ತಾರಾಯಿ’ (ತೆಂಗಿನ ಕಾಯಿಯ ತುರಿ ಮತ್ತು ಬೆಲ್ಲದ ಮಿಶ್ರಣ), ‘ಬೆಲ್ಲತೆರವು’ (ಬೆಳ್ತಿಗೆ ಅಕ್ಕಿಯೊಂದಿಗೆ ಬೆಲ್ಲದ ತೆಂಗಿನ ತುರಿಯನ್ನು ಬೆರಸಿ ರುಬ್ಬಿ ಮಾಡಿದ ದೋಸೆ). ಬೆಲ್ಲದಿಂದ ನಿಷ್ಟನ್ನವಾದ ನುಡಿಗಟ್ಟುಗಳನ್ನು ಒಂದೆಡೆ ಕೊಡಲಾಗಿದೆ. ಇದರಿಂದ ತುಳುಭಾಷೆಯಲ್ಲಿ ಬಳಕೆಯಲ್ಲಿರುವ ವಾಕ್ಯಾಂಶಗಳನ್ನೂ ಶೈಲಿಯ ವೈಶಿಷ್ಟ್ಯಗಳನ್ನೂ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಮುಖ್ಯ ನಮೂದುಗಳ ಅರ್ಥವನ್ನು ಅತ್ಯಂತ ಸರಳವಾಗಿ ಕನ್ನಡ ಮತ್ತು ಇಂಗ್ಲಿಶಿನಲ್ಲಿ ನಿರೂಪಿಸಿದ್ದಾರೆ.

ಅಡ್ಡದೇರುನಿ – aDDa deeruni (ಅಡ್ಡಲಾಗಿ ಉಳಲಿಕ್ಕೆ ಎತ್ತುಗಳನ್ನು) ಒಂದು ಪಕ್ಕಕ್ಕೆ ಹೊಡೆಯುವುದು; ಅಡ್ಡಕ್ಕೆ .    ಅಟ್ಟುವುದು. Driving to bullocks cross – wise when pioghing.
ಅಡ್ಡನಲಿಕೆ – aDDa nalike ಅಡ್ಡಕುಣಿತ; ಅಡ್ಡ ಅಡ್ಡವಾಗಿ ಕುಣಿಯುವ ಭೂತ ನೃತ್ಯದ ಒಂದು ವಿಧಾನ A type of cross – dance performed by the Bhuta impersonator.

ಭಾಷೆಯಲ್ಲಿ ಪದಗಳು ಬೇರೆ ಬೇರೆ ಸಂದರ್ಭದಲ್ಲಿ ವಿಶೇಷ ಅರ್ಥ ಹೊಂದಿರುತ್ತವೆ. ಪದಗಳಿಗೆ ಕೇವಲ ವಾಚ್ಯಾರ್ಥ, ಅಲಂಕಾರಿಕಾರ್ಥ, ಗೌಣಾರ್ಥಗಳು ಮಹತ್ವಪೂರ್ಣವೆನಿಸುತ್ತವೆ. ತುಳು ನಿಘಂಟುವಿನಲ್ಲಿ ಪದಗಳು ಕೊಟ್ಟು ವಿವರಿಸಲಾಗಿದೆ. ಉದಾ – ಕುಳ (kula) ಎನ್ನುವ ಅರ್ಥವನ್ನು ಕೊಡುವ ತುಳು ಶಬ್ದ ಕೆಲವು ಸೀಮಿತ ಸಂದರ್ಭದಲ್ಲಿ ಮಾತ್ರ ಕುಳ ಎಂಬರ್ಥದಲ್ಲಿ ಪ್ರಯೋಗವಾಗುತ್ತದೆ. ಇತರ ಸಂದರ್ಭಗಳಲ್ಲಿ ರಸವನ್ನು ಕುದಿಸಿ ಪಾಕಕ್ಕೆ ಬರಿಸಿದ ಸ್ಥಿತಿ, ಗಣ್ಯ ವ್ಯಕ್ತಿತ್ವ, ಕೆರೆ, ತಗ್ಗುಪ್ರದೇಶ, ಹೆರಿಯಾದ ಸ್ಥಳ, ಭೂಮಾಲೀಕ, ತೆರಿಗೆ ಇಂತಹ ಅರ್ಥಗಳನ್ನು ಸೂಚಿಸುತ್ತದೆ. ರೂಪಸಾಮ್ಯ ಹೊಂದಿದ ಅರ್ಥ ವ್ಯತ್ಯಾಸವಿರುವ ಮೂಲರೂಪಗಳನ್ನು ಪ್ರತ್ಯೇಕ ಮುಖ್ಯ ನಮೂದುವನ್ನಾಗಿಸಿದೆ.

೧. ಅಡೆಕೆ/ಅಡಕ adeka/adaka, N : ಅಡೆಕ್ಕೊ adekko, s adj. ೧. ಅಗಲ ಕಿರಿದಾದ; ಇಕ್ಕಟ್ಟಾದ Narrow; close ೨. ಚಿಕ್ಕ; ಅಡಕ small; short; brief Ka,. Adaka. ಆನೆಡ್ದ್‌ಅಡಕಾಯಿ ಕುದುರೆಡ್ಡ್‌ಬಲವಾಯಿ ಮೀನ್‌ adneDdu aDakaayi KudureDdu balavaayi miinU, pad ಆನೆಗಿಂತ ಕಿರಿದಾದ ಕುದುರೆಗಿಂತ ಬಲಶಾಲಿಯಾದ ಮೀನು.
೨. ಅಡೆಕ/ಅಡಕ aDeka/aDaka,N. adj. ೧. ಒಪ್ಪವಾದ; ಸರಿಹೊಂದುವ Appropriate; Suitable ೨. ವಿಧೇಯ, ವಿನಯಶೀಲ Loy modest.

ಒಂದು ಪದಕ್ಕೆ ಒಂದು ಪ್ರದೇಶದಲ್ಲಿ ಒಂದು ರೀತಿಯ ಅರ್ಥಗಳಿದ್ದರೆ ಇನ್ನೊಂದು ಪ್ರದೇಶದಲ್ಲಿ ಇನ್ನೊಂದು ರೀತಿಯ ಅರ್ಥಗಳಿರುವುದು ಸಾಧ್ಯವಿದೆ. ತುಳುವಿನಲ್ಲಿ ‘ಮಡಿ’ ಎಂಬ ಪದಕ್ಕೆ ಕಡಲೆಬೇಳೆಗೆ ಸಕ್ಕರೆ ಅಥವಾ ಬೆಲ್ಲ ಬೆರಸಿ ತಯಾರಿಸಿದ ಸಿಹಿ ತಿಂಡಿ ಎನ್ನುವ ಅರ್ಥ ಒಂದು ಪ್ರದೇಶದಲ್ಲಿದ್ದರೆ ಇನ್ನೊಂದು ಪ್ರದೇಶದಲ್ಲಿ ದನಗಳ ಆಹಾರ ಎನ್ನುವ ಅರ್ಥವಿದೆ. ಒಂದೇ ವಸ್ತುವನ್ನು ನಿರ್ದೇಶಿಸಲು ಬೇರೆ ಬೇರೆ ಪಂಗಡದವರು ಬೇರೆ ಬೇರೆ ಪದಗಳನ್ನು ಉಪಯೋಗಿಸುವರು. ‘ಮನೆ’ ಎಂಬ ಅರ್ಥಕ್ಕೆ ತುಳುವಿನಲ್ಲಿ ಇಲ್‌, ಗುಡಿಲ್‌, ಕೊಟ್ಟಿ ಮುಂತಾದ ಪದಗಳಿವೆ. ಇವು ಬೇರೆ ಬೇರೆ ಪಂಗಡದವರು ಬಳಸುವ ಪದಗಳಾಗಿವೆ. ಇವೆಲ್ಲವೂ ಈ ನಿಘಂಟುವಿನಲ್ಲಿ ದಾಖಲಾಗಿವೆ ಎಂಬುದನ್ನು ಗಮನಿಸಬೇಕು. ಉಪಭಾಷಾ ಸಾಮಗ್ರಿಗಳಲ್ಲಿ ಕೋಶಕಾರರಿಗೆ ವಿಶಿಷ್ಟ ರೀತಿಯ ಸಮಾಸಗಳು, ಸಾಧಿತ ಪದಗಳು ಸಿಕ್ಕುತ್ತವೆ. ಅವುಗಳಲ್ಲಿ ಸಂಸ್ಕೃತಿ, ಸಮಾಜ, ವೃತ್ತಿಗಳಿಗೆ ಸಂಬಂಧಿಸಿದ ಅರ್ಥ ವಿಶೇಷವಾಗಿ ಅಭಿವ್ಯಕ್ತವಾಗಿದೆ. ಉದಾ: ತುಳುವಿನಲ್ಲಿ ‘ಅರಿ’ ಎಂದರೆ ‘ಅಕ್ಕಿ’ ಇದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಪದಪುಂಜಗಳನ್ನು ಕಾಣಬಹುದು.

ಅರಿಕುರ್ಕುನಿ (ಮೃತನ ಪತ್ನಿಯು ಒಂದು ಬುಟ್ಟಿ ಅಕ್ಕಿಯನ್ನು ತೊಳೆಯುವುದು)
ಅರಿ ಪಾರುವುನಿ (ಅಕ್ಕಿಯನ್ನು ತಲೆಯ ಮೇಲೆ ಎರಚಿ ಆಶೀರ್ವದಿಸುವುದು)
ಅರಿಪಣವು (ಕನ್ಯಾಶುಲ್ಕ)

ಪದಗಳ ಬಳಕೆಯ ಸಂದರ್ಭವನ್ನು ಅನುಲಕ್ಷಿಸಿ ಸಾಂಸ್ಕೃತಿಕ ಟಿಪ್ಪಣಿಗಳೊಂದಿಗೆ ಅವುಗಳನ್ನು ದಾಖಲಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಶಬ್ದಗಳಿಗೆ ಅರ್ಥವನ್ನು ಕೊಡುವಾಗ ಆಯಾ ಸಂದರ್ಭಕ್ಕೆ ತಕ್ಕಂತೆ ಸುಂದರವಾದ ದೃಷ್ಟಾಂತಗಳನ್ನು, ಉಪಮೆಯಗಳನ್ನು ಕೊಟ್ಟಿದ್ದಾರೆ. ಉದಾ: ಪತ್‌(ಹತ್ತು) ಪದವನ್ನು ವಿವರಿಸುವಾಗ ಸಂದರ್ಭಕ್ಕನುಗುಣವಾಗಿ ‘ಪತ್ತ್‌ಬಿರಲ್‌ಪಂದ್‌ಂಡ್ ಆಯಿನ್‌ಬಿರೆಲ್‌ಬಾಯಿಂಗ್‌ಪೋವು’ (ಹತ್ತು ಬೆರಳು ಅಲ್ಲಾಡಿಸಿದರೆ ಐದು ಬೆರಳು ಬಾಯಿಗೆ ಹೋದೀತು). ಅಂದರೆ ‘ಕಷ್ಟಪಟ್ಟರೆ ಫಲ ಸಿಕ್ಕಿತು’. ಇಂತಹ ನುಡಿಮುತ್ತುಗಳು ಪದಾರ್ಥ ವಿವೇಚನೆಗೆ ಅಡ್ಡಿಯಾಗುವ ಬದಲು ಅದನ್ನು ಸ್ವಾದುಗೊಳಿಸಬಲ್ಲಂದೆಂಬುದಕ್ಕೆ ಅಲ್ಲಲ್ಲಿ ನುಸುಳಿ ಬಂದಿರುವ ಇಂತಹ ಉಪಮೆಗಳು ಸಾಕ್ಷಿಯಾಗಿವೆ. ಕೋಶದ್ದುದಕ್ಕೂ ತುಳು ಪ್ರದೇಶದಲ್ಲಿಯ ಮೀನುಗಳ, ಭೂತಗಳ ಹೆಸರುಗಳು, ಸ್ಥಳನಾಮ, ವ್ಯಕ್ತಿನಾಮ, ಕುಲನಾಮಗಳು ದಾಖಲಾಗಿರುವುದರಿಂದ ತುಳು ಪ್ರದೇಶದ ಸಂಸ್ಕೃತಿಯ ಅಧ್ಯಯನಕ್ಕೂ ಇದು ಆಕರವಾಗಿದೆ. ತುಳುವಿನಲ್ಲಿ ಮುಖ್ಯ ಶಬ್ದ ಜ್ಞಾತಿರೂಪಗಳು ಇತರ ದ್ರಾವಿಡ ಭಾಷೆಗಳಲ್ಲಿ ಯಾವ ರೂಪದಲ್ಲಿವೆಯೆಂಬುದನ್ನು ಪ್ರತ್ಯೇಕವಾಗಿ ನಿರೂಪಿಸಲಾಗಿದೆ.

ಅಲೆಪು alepu – ಬಳಲು : ಆಯಾಸಗೊಳ್ಳು Ta; alu; Ma : alyauku, alasuka, almpu Ka Ko: alv Ka : alasu ; Te : alayu; Kol : alay.
ಅಡೆ aDe Vn. ೧. ಸೇರು: ತಲುಪು Join; reach ೨. ಒದಗಿಬರು Come to hand; be of use Ta. aTai; Ma. aTa; Ka. aDe; Te. Ada.

ತುಳುಭಾಷೆಯ ಚಾರಿತ್ರಿಕ ಪುನರ್‌ನಿರ್ಮಾಣ ಮಾಡುವವರಿಗೂ ತುಳು ಹಾಗೂ ಇತರ ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನ ಮಾಡುವವರಿಗೂ ತುಳು ಸಂವಾದಿ ಜ್ಞಾತಿ ರೂಪಗಳು ಸಾಕಷ್ಟು ಮಾಹಿತಿ ನೀಡುತ್ತದೆ. ಹಳಗನ್ನಡದ ಅನೇಕ ರೂಪಗಳನ್ನು ನಾವು ತುಳುವಿನಲ್ಲಿ ಕಾಣಬಹುದು. ಉದಾ: ಬರ್ಪೆ, ಪೊಪೆ. ಕನ್ನಡದಂತೆ ತುಳುವಿನಲ್ಲಿ ಪ>ಹ ಆಗಿಲ್ಲ. ಉದಾ – ಪತ್ತ/ಹತ್ತು, ಪರಕೆ/ಹರಕೆ, ಪುಲ್‌/ಹುಲ್ಲು ತುಳುವಿನಲ್ಲಿ ‘ಎ’ ಸ್ವರ ಎರಡು ಬಗೆಯಲ್ಲಿದೆ. ಉದಾ: ಆಯೆಬತ್ತಿ (ಅರಸುಬಂದನು), ಯಾನ್‌ಬತ್ತೆ (ನಾನು ಬಂದೆನು) ತುಳುಭಾಷೆಯ ಧ್ವನಿರಚನೆಯ ಸ್ವರೂಪವನ್ನು ನಿಘಂಟುವಿನಲ್ಲಿ ದಾಖಲಿಸಲಾಗಿದೆ. ತುಳುವಿನ ಉಪಭಾಷಾ ವೈಶಿಷ್ಟ್ಯಗಳನ್ನು ಅರಿಯಲಿಕ್ಕೆ ಇದು ನೆರವಾಗುತ್ತದೆ. ಒಂದೊಂದು ಪದಕ್ಕೆ ಅನುಗುಣವಾಗಿ ಅರ್ಥವಿವರಣೆಯನ್ನು ಕೊಡಲಾಗಿದೆ. ಅನಗತ್ಯ ವಿವರಣೆಗಳಾಗಲಿ, ಉದಾಹರಣೆಗಳಾಗಲಿ ಎಲ್ಲಿಯೂ ಬಂದಿಲ್ಲ. ಒಂದು ಪದಕ್ಕೆ ನಾನಾರ್ಥಗಳಿದ್ದರೆ ೧, ೨, ೩ ಎಂದು ಉಲ್ಲೇಖಿಸಿ ಅರ್ಥ ಮತ್ತು ಉದಾಹರಣೆಗಳನ್ನು ಕೊಟ್ಟಿರುವುದರಿಂದ ಗೊಂದಲಕ್ಕೆ ಅವಕಾಶವಿಲ್ಲ.

ಈ ಬಹುಭಾಷಿಕ ನಿಘಂಟು ಸರ್ವ ಸಂಗ್ರಾಹವಾಗಿದ್ದು ತುಳುಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನಕ್ಕೆ ಆಕರ ಗ್ರಂಥವಾಗಿದೆ. ಈ ಕೋಶದ ಹಿಂದಿರುವ ಶ್ರಮ, ಶಿಸ್ತು ಯಾರೂ ಮೆಚ್ಚಬೇಕಾಗಿದೆ. ಕನ್ನಡದಲ್ಲಿ ಅಥವಾ ಭಾರತೀಯ ಭಾಷೆಗಳಲ್ಲಿ ಇಷ್ಟೊಂದು ಶ್ರದ್ಧೆಯಿಂದ ಏಕಪ್ರಕಾರದ ಮಟ್ಟವನ್ನು ಕಾಯ್ದುಕೊಂಡ ನಿಘಂಟುಗಳ ಮತ್ತೊಂದು ಉದಾಹರಣೆ ದೊರಕಲಾರದು ಒಂದು ಪ್ರದೇಶದ ವಿವಿಧ ಜನಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಬಿಂಬಿಸುವ ಈ ತೆರನಾದ ನಿಘಂಟು ಇತರ ಭಾರತೀಯ ಭಾಷೆಗಳಿಗೂ ರಚಿತವಾಗಬೇಕಾಗಿದೆ. ನಿಘಂಟುಗಳ ರಚನೆ ಮತ್ತು ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರಿಗೆ ತುಂಬ ತೃಪ್ತಿಯನ್ನು ತರುವ ಈ ಸಂಪುಟಗಳ ಪ್ರಧಾನ ಸಂಪಾದಕರಿಗೂ ಹಾಗೂ ಪ್ರಕಟಿಸಿದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು ಅಭಿನಂದನಾರ್ಹವಾಗಿದೆ. ಈ ಸಂಪುಟಗಳ ಪ್ರಕಟಣೆಯಿಂದ ನಿಘಂಟು ಶಾಸ್ತ್ರಕ್ಕೆ ಹೊಸತಿರುವು ಪ್ರಾಪ್ತವಾಗಿದೆ. ಕನ್ನಡದಲ್ಲಿ ಬಂದಂತಹ ಇನ್ನೊಂದು ಬಹುಭಾಷಿಕ ನಿಘಂಟು ವಿ. ಗೋಪಾಲಕೃಷ್ಣರಾವ್‌ಸಂಪಾದಿಸಿದ ‘A Multilingual Dictionary of Kannada Kannada – English – Tamil – Japancese’ (೧೧೧೫)ದ ಮೊದಲ ಸಂಪುಟ ಮಾತ್ರ ಪ್ರಕಟವಾಗಿದೆ. ದ್ವಿಭಾಷಿಕ ನಿಘಂಟು ರಚನೆಯಲ್ಲಿ ಎದುರಾಗುವ ಸಮಸ್ಯೆಗಳೇ ಬಹುಭಾಷಿಕ ನಿಘಂಟು ರಚನೆಯಲ್ಲಿಯೂ ಕಂಡುಬರುತ್ತದೆ. ಬಹುಭಾಷಿಕ ನಿಘಂಟುಗಳು ಎರಡಕ್ಕಿಂತ ಹೆಚ್ಚು ಭಾಷೆಗಳ ರಚನೆ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಗ್ರಹಿಸಲು ಆಕರಗಳಾಗುತ್ತವೆ.