ಒಂದು ಭಾಷಾ ಸಮುದಾಯಕ್ಕೆ ಸೇರಿದ ಜನರು ಆಡುವ ನಾನಾ ವೈವಿಧ್ಯಗಳಿಂದ ಕೂಡಿರುವ ಭಾಷಾ ಪ್ರಬೇಧವನ್ನೇ ಉಪಭಾಷೆಯೆಂದು ಕರೆಯಲಾಗುತ್ತದೆ. ಒಂದು ಭಾಷಿಕ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ಆಡು ರೂಪಗಳ ಧ್ವನಿ ಉಚ್ಚಾರ, ಪದ, ಅರ್ಥ ಹಾಗೂ ಅವುಗಳ ವಾಕ್ಯ ಮುಂತಾದವುಗಳನ್ನು ಅನುಲಕ್ಷಿಸಿ ಸಂಕಲಿಸಿದ ನಿಘಂಟುಗಳಿಗೆ ಉಪಭಾಷಾ ನಿಘಂಟು ಎಂದು ಕರೆಯಲಾಗುತ್ತದೆ.

ಏಕಭಾಷಿಕ, ದ್ವಿಭಾಷಿಕ ಮತ್ತು ಬಹುಭಾಷಿಕ ನಿಘಂಟುಗಳ ವೈಧಾನಿಕತೆಯುಮೊದಲು ನೋಟಕ್ಕೆ ಭಿನ್ನವಾಗಿ ಕಂಡುಬಂದರೂ ಅವುಗಳ ರಚನೆಯ ಶಿಲ್ಪ ಹೆಚ್ಚು ಕಡಿಮೆ ಒಂದೇ ರೀತಿಯದಾಗಿರುತ್ತದೆ. ಇದಕ್ಕೆ ಆಡುಭಾಷೆಯ ನಿಘಂಟುಗಳು ಹೊರತಲ್ಲ. ಭಾಷೆ ಪರಿವರ್ತನ ಶೀಲವುಳ್ಳದ್ದು ಅದು ಪ್ರದೇಶದಿಂದ ಪ್ರದೇಶಕ್ಕೆ, ಕಾಲದಿಂದ ಕಾಲಕ್ಕೆ ಪರಿವರ್ತನೆ ಹೊಂದುತ್ತದೆ. ಭೌಗೋಳಿಕ ಪರಿಸರದಿಂದ ಭಾಷೆಯಲ್ಲಿ ಬದಲಾವಣೆಯಾದರೆ ಪ್ರಾದೇಶಿಕ ಉಪಭಾಷೆಗಳುಂಟಾಗುತ್ತವೆ. ಮತ, ವರ್ಗ, ವೃತ್ತಿ ಈ ಅಂಶಗಳಿಂದ ಭಾಷೆಯಲ್ಲಿ ಬದಲಾವಣೆಯಾದರೆ ಸಾಮಾಜಿಕ ಭುಪಭಾಷೆಗಳು ಉಂಟಾಗುತ್ತವೆ.

ಒಂದು ಭಾಷಿಕ ರೂಪ ಭೌಗೋಳಿಕ ಅಂಶಗಳ ಪ್ರಭಾವದಿಂದ ವಿಭಿನ್ನ ರೂಪದಲ್ಲಿ ಬಳಕೆಯಾಗುವುದುಂಟು. ಉದಾ: ಕರ್ನಾಟಕದಾದ್ಯಂತ ‘ನೆಲಕಡಲೆ ಕಾಯಿ’ ಎಂಬ ಶಬ್ದಕ್ಕೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಶೇಂಗಾ, ಸೇಂಗಾ, ಬೈಮಂಗ್‌ಎಂದೂ ದಕ್ಷಿಣ ಕರ್ನಾಟಕದಲ್ಲಿ ನೆಲಕಡಲೆ, ಕಡ್ಲೆಕಾಯಿ, ನೆಲಕಡಲೆಕಾಯಿ ಮುಂತಾದ ರೂಪಭೇದಗಳಿವೆ. ‘ತಾಯಿ’ ಎಂಬರ್ಥ ಕೊಡುವ ಬಂಧು ಸೂಚಕಕ್ಕೆ ದಕ್ಷಿಣ ಕರ್ನಾಟಕದಲ್ಲಿ ‘ಅಮ್ಮ’ ಎಂದು ಕರೆದರೆ, ಉತ್ತರ ಭಾಗದಲ್ಲಿ ‘ಅವ್ವ’ ಎಂದು ಕರೆಯಲಾಗುತ್ತದೆ. ಬಳ್ಳಾರಿ ಪ್ರದೇಶದಲ್ಲಿ ‘ಅವ್ವ’ ಎಂದರೆ ‘ಅಜ್ಜಿ’ ಎಂದರ್ಥ. ಪದ ಬಳಕೆಯಲ್ಲಿ ಈ ರೀತಿ ಅರ್ಥ ವ್ಯತ್ಯಾಸಗಳಿರುತ್ತವೆ. ಪ್ರತಿಯೊಂದು ಭಾಷೆಯು ತನ್ನದೇ ಆದ ಭಾಷಾ ವೈಶಿಷ್ಟತೆಯನ್ನು ಸಂಪಾದಿಸಿಕೊಂಡಿರುತ್ತದೆ. ಉದಾ: ಬೆಳಗಾವಿ ಕನ್ನಡದಲ್ಲಿ ಸ್ವರಗಳ ಉಚ್ಚಾರದಲ್ಲಿ ಅನುನಾಸಿಕತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಅವನು ಅವ ಇವನು ಈ ಇವ ಹಾಗೂ ಮಹಾಪ್ರಾಣಗಳ ಉಚ್ಚಾರಣೆಯಿದೆ. ಖಣ (ಕಣ), ಧನಿ (ದಣಿ). ಎ>ಇ ಧ್ವನಿ ಬದಲಾವಣೆಯಾಗಿದೆ. ಮನೆ>ಮನಿ, ಶಾಲೆ>ಶಾಲಿ ಮುಂತಾದವು.

ಆಧುನಿಕ ಭಾಷಾತಜ್ಞರು ಬರೆಹದ ಭಾಷೆಯ ಅಧ್ಯಯನಗಿಂತ ಆಡು ಭಾಷೆಗಳ ಅಧ್ಯಯನ ಹೆಚ್ಚು ಉಪಯುಕ್ತವಾದುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇದರಿಂದ ಉಪಭಾಷೆಗಳ ಅಧ್ಯಯನಕ್ಕೆ ಹೆಚ್ಚಿನ ಮಾನ್ಯತೆ ದೊರೆಯಿತು. ಹೀಗಾಗಿ ಆಡುಭಾಷೆಯ ಕೋಶಗಳು ಸಿದ್ಧವಾಗತೊಡಗಿದವು. ಈಗಾಗಲೇ ಕನ್ನಡದಲ್ಲಿ ಕೆಲವು ಉಪಭಾಷಾಕೋಶಗಳು, ಜನಪದ ನಿಘಂಟುಗಳು ಬಂದಿವೆ. ಪುಣೆ ಡೆಕ್ಕನ್‌ಕಾಲೇಜು ಹೊರತಂದಿರುವ ಕನ್ನಡ ಉಪಭಾಷೆಗಳಿಗೆ ಸಂಬಂಧಿಸಿದ ಕೆಲವು ಗ್ರಂಥಗಳು ಇಂಗ್ಲಿಷ್‌ನಲ್ಲಿ ಪ್ರಕಟವಾಗಿವೆ. ಉಪಭಾಷೆಗಳ ಮೇಲೆ ಎಂ.ಫಿಲ್‌, ಪಿಎಚ್‌.ಡಿ. ನಿಬಂಧಗಳು ಪ್ರಕಟವಾಗಿವೆ. ಅವುಗಳ ಕೊನೆಗೆ ಅನುಬಂಧ ರೂಪದಲ್ಲಿ ಆಡು ರೂಪಗಳ ಪದಪಟ್ಟಿಯನ್ನು ಕೊಡಲಾಗಿದೆ. ಜನಪದ ಹಾಡು, ಕತೆಗಳ ಸಂಕಲನ ಗ್ರಂಥಗಳಲ್ಲಿ ಆಯಾ ಸಂಗ್ರಹಕಾರರು ಅವುಗಳ ಕೊನೆಯ ಭಾಗದಲ್ಲಿ ಆಡುರೂಪಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕನ್ನಡದಲ್ಲಿ ಆಡುಭಾಷೆಯನ್ನು ಅನುಲಕ್ಷಿಸಿ ಪ್ರತ್ಯೇಕ ನಿಘಂಟುಗಳು ಸಿದ್ಧವಾಗಿವೆ. ಅವುಗಳಲ್ಲಿ ಕೆಲವು ನಿಘಂಟುಗಳ ಸ್ವರೂಪವನ್ನು ಇಲ್ಲಿ ಗಮನಿಸಲಾಗಿದೆ. ಕ್ಯಾತನಹಳ್ಳಿ ರಾಮಣ್ಣನವರು ‘ಜನಪದ ನಿಘಂಟ’ನ್ನು ರಚಿಸಿದ್ದಾರೆ. (೧೯೮೭). ಅರ್ಥ ವ್ಯತ್ಯಾಸವಿರುವ ಹಾಗೂ ಉಚ್ಚಾರಣಾ ವ್ಯತ್ಯಾಸವಿರುವ ಶಬ್ದಗಳು ಅದರಲ್ಲಿ ಸಂಕಲಿತವಾಗಿವೆ. ಅದರಲ್ಲಿ ಒಂದು ಶಬ್ದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥಗಳು ಬಂದಾಗ ಸಮಾನಾರ್ಥಕಗಳ ನಡುವೆ ಅಲ್ಪವಿರಾಮವನ್ನು, ಭಿನ್ನಾರ್ಥ ಸೂಚಿಸುವಾಗ ಅರ್ಧ ವಿರಾಮವನ್ನು ಬಳಸಲಾಗಿದೆ.

ಅಕ್ರ – ಅಕ್ಕರೆ, ಪ್ರೀತ್ಯಾದರ
ಕುವಾಡ – ಪರಿಹಾಸ್ಯ, ಅಣಕಿಸುವಿಕೆ
ಘಟ – ವೇಳೆ, ಅಡವಿ~ವಾಣಿ ಮಡಕೆಯ ಬಾಯಿಯಂತೆ ಶಬ್ದಮಾಡು.

ಈ ನಿಘಂಟು ಜನಪದ ಅಧ್ಯಯನಕಾರರಿಗೆ ಕೈಪಿಡಿಯಾಗಿದೆ. ಈಗಾಗಲೇ ಪ್ರಕಟವಾದ ಜನಪದ ಸಂಗ್ರಹಗಳಿಂದ ಪದಗಳನ್ನು ಸಂಗ್ರಹಿಸಿ ಕೋಶಕಾರರು ಅರ್ಥಕೊಟ್ಟಿದ್ದಾರೆ.

ಮುದೇನೂರ ಸಂಗಣ್ಣ ಅವರು ಬಳ್ಳಾರಿ ಜಿಲ್ಲೆಯ ಚಿಗಟೇರಿಯನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಮುತ್ತಣ ಪ್ರದೇಶದಲ್ಲಿ ಲಭ್ಯವಾದ ಆಡುರೂಪಗಳನ್ನು ಹಾಗೂ ಸಮಸ್ತ ಪದಗಳನ್ನು ಕಲೆಹಾಕಿ ‘ಚಿಗಟೇರಿ ಪದಕೋಶ’ ಎಂಬ ಶೀರ್ಷಿಕೆಯಡಿ ಪ್ರಕಟಿಸಿದ್ದಾರೆ. (೧೯೯೭). ಪದಗಳ ಅರ್ಥ ವೈವಿಧ್ಯವನ್ನು ಗುರುತಿಸಿದ್ದಾರೆ. ಉದಾ: ‘ಗಡಿ’ ಒಂದು ಮನೆತನದ ಹೆಸರು (ಚಿಗಟೇರಿ ಪದಕೋಶ), ‘ಗಡ್ಡಿ’ – ಮರದ ತೇರು (ಸಾಮಾನ್ಯ ನಿಘಂಟು) ಅದರಂತೆ ನುಡಿಗಟ್ಟುಗಳ ಅರ್ಥ ವೈವಿಧ್ಯತೆಯ ಪದಗಳನ್ನು ಕಲೆಹಾಕಿ ವಿವರಿಸಿದ್ದಾರೆ. ಉದಾ: ನಾಲಗಿ ಕಳಕೊ – ಕೊಟ್ಟ ಮಾತಿಗೆ ತಪ್ಪು. ಕೆಲವು ಪದಗಳ ವಿವರಣೆಯಲ್ಲಿ ಪ್ರಯೋಗಗಳನ್ನು ಕೊಟ್ಟಿದ್ದಾರೆ.

ಅಡರಾಡು ೧. ಅಲೆದಾಡು ೨. ಸಿಕ್ಕಸಿಕ್ಕವರನ್ನು ಯಾಚಿಸು (ರೊಕ್ಕಕ್ಕಾಗಿ ಅವನು ಭಯಂಕರವಾಗಿ ಅಡರಾಡಿದ).
ತಪಾತರ ಭಾರೀ; ಪ್ರಕಾಂಡ (ಇವನ ಮಗ ತಪಾತರ ಪಂಡಿತ). ಕೆಲವು ಪದಗಳಿಗೆ ವಿವರಣೆಯನ್ನು ಕೊಡುತ್ತಾರೆ.
ಕಾಲುಶನಿ ಹರಿಜನರಲ್ಲಿ ರೂಢಿಯಲ್ಲಿರುವ ಒಂದು ನಂಬಿಕೆ. (ಶವ ಹೂಳಿದ ಮೂರು ದಿನಗಳ ಅನಂತರ ಗುದ್ದಿನ ಹತ್ತಿರ ಹಿಂಡಿಕೊಳ್ಳು (ಪಿಂಡ?) ಇಡುತ್ತಾರೆ. ಅದನ್ನು ತಿನ್ನಲು ಬಂದ ಹಾಗೆ ಶವದ ಕಾಲು ಕಡೆಗೆ ಗುದ್ದಿನ ಮೇಲೆ ಕುಳಿತರೆ ಸತ್ತವನ ಶನಿ ಹರಿದಿಲ್ಲ. ಆಶೆ ತೀರಿಲ್ಲ ಎಂದು ಭಾವಿಸಲಾಗುವುದು).
ತಲೆಮುಂಬು ಹೊಲದ ನಾಲ್ಕು ಬದಿಗಳಲ್ಲಿ ಎಂಟ್ಹತ್ತು ಅಡಿ ಅಗಲಕ್ಕೆ ಅಡ್ಡಲಾಗಿ ಬಿತ್ತಿದ ಬೆಳೆಯ ಸಾಲುಗಳು. (ಈ ಭಾಗದಲ್ಲಿ ತುಡುಗು ದನಗಳ ಕಾಟ ತಪ್ಪಿಸಲಿಕ್ಕೆ ಕುಸಬಿ, ಅಗಸಿಗಳಂತಹ ಬೆಳೆಗಳನ್ನು ಬೆಳಯಲಾಗುತ್ತದೆ. ಒಮ್ಮೊಮ್ಮೆ ಇವುಗಳ ಬದಲಾಗಿ ದನಗಳು ಹಸಿರು ಮೇವಿಗಾಗಿ ಜೋಳ ಬಿತ್ತುವುದೂ ಉಂಟು).
  ಇಂತಹ ವಿವರಣೆಯಿಂದ ಆ ಭಾಷಾ ಸಮುದಾಯದ ಸ್ವರೂಪವನ್ನು ತಿಳಿಯಬಹುದು. ವಿಪುಲವಾದ ಕ್ಷೇತ್ರಕಾರ್ಯದಿಂದ ಕೂಡಿದ ಈ ಕೋಶದ ರಚನೆ ಸ್ತುತ್ಯಾರ್ಹವಾಗಿದೆ. ಈ ಕೋಶದ ನಮೂದುಗಳನ್ನು ಓದುತ್ತಾ ಕುಳಿತರೆ ಒಮ್ಮೆ ಬಳ್ಳಾರಿ ಪ್ರದೇಶದತ್ತ ಸುತ್ತಾಡಿದ ಅನುಭವವಾಗುತ್ತದೆ.

ನಾವಾಡುವ ಮಾತಿನಲ್ಲಿ ಪ್ರಾದೇಶಿಕತೆ, ಸಾಮಾಜಿಕತೆ, ಸ್ಥಳೀಯತೆ ಮತ್ತು ವ್ಯಕ್ತಿ ವಿಶಿಷ್ಟತೆಗಳಿರುತ್ತವೆ. ಸಾಮಾನ್ಯ ನಿಘಂಟುಗಳಲ್ಲಿ ಇಲ್ಲದೆ ಇದ್ದರೂ ಅನ್ಯಾರ್ಥವನ್ನು ಧ್ವನಿಸುವ ಶಬ್ದಗಳು ಜನಪದ ನಿಘಂಟುಗಳಲ್ಲಿರುತ್ತವೆ. ‘ಹಂಗ’ ಎಂಬ ರೂಪ ಬೆಳಗಾವಿ ಪ್ರದೇಶದಲ್ಲಿ ಬೇರೆ ಬೇರೆ ಅರ್ಥವನ್ನು ಪಡೆಯುತ್ತದೆ. ೧. ಪುಕ್ಕಟ್ಟೆ (ಟೆಂಗಿನ ಕಾಯಿಗಳನ್ನು ಹಂಗ ಕೊಡುತ್ತೇವೆ). ೨. ಅದೇ ರೀತಿ, ಹಾಗೆ (ಅವು ಹಂಗ) ೩. ಸುಮ್ಮನೆ (ಹಂಗಬನ್ನಿ) ೪. ಯಥಾಸ್ಥಿತಿ (ಮಲ್ಲಪ್ಪ ಕಸಾರಕಿ ಬಂದಾಗಿನಿಂದ ಹೆಂಗ ಅದಾನ ಹಲಗ ಅದಾನ್‌). ಬಳಕೆಯ ವಲಯ ಹಾಗೂ ಭಾಷಿಕ ಸಂದರ್ಭವನ್ನು ಅನುಲಕ್ಷಿಸಿ ಅವು ಪ್ರಯೋಗವಾಗುತ್ತವೆ.

ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಭಿವೃದ್ಧಿ ವಿಭಾಗದಿಂದ ಪ್ರಕಟವಾಗುತ್ತಿರುವ ‘ನಮ್ಮ ಕನ್ನಡ’ ಸಂಪತ್ರಿಕೆಯ ‘ನಿದಾನ’ ಎಂಬ ಭಾಗವು ಕನ್ನಡ ಉಪಭಾಷೆಗಳಿಂದ ಆಯ್ದ ಶಬ್ದಾರ್ಥ ವಿವೇಚನೆಗೆ ಸಂಬಂಧಪಟ್ಟಿದೆ. ಅದರಲ್ಲಿಯ ಪ್ರಕೃತ ಲೇಖಕ ಚರ್ಚಿಸಿದ ಕೆಲವು (ಬೆಳಗಾವಿ ಪ್ರದೇಶದ) ನಮೂದುಗಳನ್ನು ಇಲ್ಲಿ ಕೊಡಲಾಗಿದೆ.

ಕಬರಗೇಡಿ  ಅರಿವು ಇಲ್ಲದ ವ್ಯಕ್ತಿ. ಇದು ಬೈಗುಳದ ಸಂದರ್ಭದಲ್ಲಿ ಬಳಕೆಯಾಗುತ್ತದೆ. ಖಬರ್‌>ಕಬರ್‌ಅರ್ಯಾಬಿಕ್‌ಪದಕ್ಕೆ ಕೇಡು ಎಂಬ ನಿಷೇಧ ರೂಪ ಹತ್ತಿ ಈ ರೂಪ ಸಿದ್ಧವಾಗಿದೆ.
ತಲಬ್‌  (ಕೆಟ್ಟ) ಚಟ, ಗೀಳು. ‘ಮಲ್ಲಪ್ಪನಿಗೆ ನೂರಾಎಂಟು ತಲಬುಗಳಿವೆ’ ಅರ್ಯಾಬಿಕ್‌ಮೂಲದ ನೇರ ಸ್ವೀಕರಣವಿದು.
ನಗ್ಗೇಡು  ೧. ನಮಗೆ ಆಗದವರು ನಗುವಂತೆ ಆಗುತ್ತದೆ. ೨. ಅಸಹ್ಯವಾಗು ‘ಜಗಳಾಡಬಾರದು ನಗುವವರ ಮುಂದೆ ನಗ್ಗೇಡಾಗುತ್ತದೆ’ (ರೂಢಿ). ನಗೆ+ಈಡು>ನಗೆಗೇಡು> ನಗ್ಗೇಡು.
ಉಣಕಿ  ವರ್ತಮಾನ ಕಾಲದ ಪ್ರತ್ಯಯ. ಸಂಭಾಷಣೆಯ ಸಂದರ್ಭದಲ್ಲಿ ಇನ್ನೊಬ್ಬರ ಕ್ರಿಯೆಯನ್ನು ಗಮನಿಸಿ ಹೇಳುವಾಗ ಈ ರೂಪ ಬಳಕೆಯಾಗುತ್ತದೆ. ಕ್ರಿಯಾ ರೂಪಗಳಿಗೆ ಈ ಪ್ರತ್ಯಯ ಬಳಕೆಯಾಗುತ್ತದೆ. ಕ್ರಿಯಾ ರೂಪಗಳಿಗೆ ಈ ಪ್ರತ್ಯಯ ಹತ್ತುತ್ತದೆ. ‘ಏನ್‌ನಗುಣಿಕಿ ಹಂಗ ನಗಬಾರದು’ (ರೂಢಿ). ನಗುಣಿಕಿ – ನಗುವುದು, ಮಾಡುಣಿಕಿ – ಮಾಡುವುದು.

ಕರ್ನಾಟಕದ ವಿವಿಧ ಭಾಗದಲ್ಲಿ ಬಳಕೆಯಲ್ಲಿರುವ ಆಡುರೂಪಗಳನ್ನು ಸಂಗ್ರಹಿಸಿ ಅವುಗಳ ಪ್ರಯೋಗ – ವ್ಯಾಕರಣಾಂಶ, ನಿಷ್ಪತ್ತಿ ಸಾಧ್ಯವಾದ ಕಡೆ ವಿವರಣೆಯನ್ನು ‘ನಿದಾನ’ ಭಾಗದಲ್ಲಿ ಚರ್ಚಿಸಲಾಗುತ್ತದೆ. ಇಲ್ಲಿ ಚರ್ಚಿಸಲಾದ ಪದರೂಪಗಳು ಕನ್ನಡದ ಯಾವ ನಿಘಂಟುವಿನಲ್ಲಿಯೂ ದಾಖಲಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಕರ್ನಾಟಕದಲ್ಲಿ ಬಂದಂತಹ ಆಡುಭಾಷೆಯ ನಿಘಂಟುಗಳಲ್ಲಿ ಅತ್ಯಂತ ಶ್ರೇಷ್ಠವಾದುದು. ಕರ್ನಾಟಕದ. ಜಾನಪದ ಪರಿಷತ್ತು ಸಿದ್ಧಪಡಿಸಿದ ‘ಕನ್ನಡ ಜಾನಪದ ಕೋಶ’ (೧೯೯೮). ಇದೊಂದು ಸಾಂಸ್ಥಿಕ ಪ್ರಯತ್ನದ ಫಲ. ವ್ಯಾಪಕವಾದ ಕ್ಷೇತ್ರ ಕಾರ್ಯದಿಂದ ಕೂಡಿದ ಶಬ್ದ ಸಂಗ್ರಹ, ಕ್ರಮಬದ್ಧ ಜೋಡಣೆ, ಪ್ರಯೋಗ, ನಿಷ್ಪತ್ತಿ, ಅರ್ಥವಿವರಣೆ ಹೀಗೆ ಈ ಕೋಶವು ಶಾಸ್ತ್ರೀಯವಾಗಿ ಸಂಪಾದಿಸಲ್ಪಟ್ಟಿದೆ. ಈ ಕೋಶದ ಪ್ರತಿ ಹಂತದಲ್ಲಿಯೂ ವ್ಯವಸ್ಥಿತ ಶಿಸ್ತುವಿದೆ; ಶ್ರಮವಿದೆ.

ಜನಪದ ಸಾಹಿತ್ಯವು ವಿಪುಲವೂ ವಿಶಿಷ್ಟವೂ ಆದ ಶಬ್ದ ಸಂಪತ್ತಿನಿಂದ ಕೂಡಿದೆ. ಜನರ ಆಡುಮಾತಿನಲ್ಲಿ ನಾಡಿನ ವಿವಿಧ ಪ್ರದೇಶದಲ್ಲಿ ಬಳಕೆಯಾಗುತ್ತಿರುವ ವಿಶಿಷ್ಟವಾದ ಪ್ರಾದೇಶಿಕತೆಯ ಸೊಗಡುಳ್ಳ ಪದಗಳು ಸಾಕಷ್ಟಿವೆ. ಇದರ ಜೊತೆಗೆ ಹಳ್ಳಿಗಳಲ್ಲಿರುವ ವಿವಿಧ ವೃತ್ತಿಯವರು ನಿತ್ಯವು ಬಳಸುವ ವೃತ್ತಿ ಪದಗಳು ತಮ್ಮದೇ ಆದ ಸತ್ವದಿಂದ ಕೂಡಿ ಬಳಕೆಯಾಗುತ್ತಿವೆ. ಇಷ್ಟೆಲ್ಲ ಇರುವ ಶಬ್ದ ಸಾಗರದಲ್ಲಿ ದಾಖಲಾಗಿರುವುದು ತುಂಬ ಕಡಿಮೆ. ಸಮಾಜ ಬದಲಾದಂತೆ ಭಾಷೆಯೂ ಬದಲಾಗುತ್ತದೆ. ತತ್ಪರಿಣಾಮವಾಗಿ ಪದಗಳೂ ಕಣ್ಮರೆಯಾಗುತ್ತವೆ. ಅಥವಾ ಭಿನ್ನಾರ್ಥದಲ್ಲಿ ಬಳಕೆಯಾಗುತ್ತವೆ. ಇಂತಹ ಸನ್ನಿವೇಶದಲ್ಲಿ ಜನಪದ ಶಬ್ದಗಳಿಗೆ ಸರಿಯಾದ ಅರ್ಥ ಹೇಳಿ ವಿವರಿಸುವ ಬೃಹತ್‌ಕೋಶದ ಅಗತ್ಯವಿತ್ತು. ಆ ಕೊರತೆಯನ್ನು ಕರ್ನಾಟಕ ಜಾನಪದ ಪರಿಷತ್ತು ಹೋಗಲಾಡಿಸಿದೆ.

ಈ ಕೋಶದಲ್ಲಿ ಶಬ್ದಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಮತ್ತು ಅವುಗಳ ಅರ್ಥಗಳನ್ನು ಉಲ್ಲೇಖಿಸುವಾಗ ಅವುಗಳ ಜನಪದ ಹಿನ್ನೆಲೆಯನ್ನು ಮುಖ್ಯವಾಗಿ ಗಮನಿಸಲಾಗಿದೆ. ಅದು ಪ್ರಾದೇಶಿಕ ಭಿನ್ನತೆ ಇರಬಹುದು; ಉಚ್ಚಾರಣಾ ವ್ಯತ್ಯಾಸ ಇರಬಹುದು; ಗ್ರಾಮ್ಯರೂಪ ಇರಬಹುದು. ಆ ಎಲ್ಲ ಶಬ್ದಗಳನ್ನು ನಿಘಂಟುಶಾಸ್ತ್ರದ ತೆಕ್ಕೆಯಲ್ಲಿ ತಂದು ಈ ಕೋಶದಲ್ಲಿ ವಿವರಣಾತ್ಮಕ ಟಿಪ್ಪಣಿಯೊಡನೆ ದಾಖಲಿಸಲಾಗಿದೆ. ಇದರಿಂದ ಆಡುಮಾತಿನ ವಿವಿಧ ಭಾಷಾರೂಪಗಳು ಅರ್ಥ ವೈವಿಧ್ಯದೊಡನೆ ಇಲ್ಲಿ ನಮೂದಿಸಲಾಗಿದೆ. ಸಾಮಾನ್ಯವಾಗಿ ಪ್ರತಿ ಉಲ್ಲೇಖಗಳಿಗೂ ಗ್ರಂಥ ಪ್ರಯೋಗಗಳನ್ನು ಕೊಟ್ಟಿದೆ. ಕೆಲವು ಕಡೆ ಗ್ರಂಥ ಪ್ರಯೋಗಗಳು ದೊರಕದ ಕಡೆ ರೂಢಿ ಪ್ರಯೋಗಗಳನ್ನು ಉಲ್ಲೇಖಿಸಲಾಗಿದೆ. ಶಬ್ದಾರ್ಥ ಸ್ಪಷ್ಟತೆಗೆ ರೇಖಾಚಿತ್ರಗಳನ್ನು ಕೆಲವು ಸಂದರ್ಭದಲ್ಲಿ ಬಿಡಿಸಿದ್ದಾರೆ. ಈ ಕೋಶದ ಶಿಲ್ಪ ರಚನೆ ಹೀಗಿದೆ. ಮೊದಲು ನಮೂದು ನಂತರ ಅದರ ವ್ಯಾಕರಣ ವರ್ಗಗಳನ್ನು ಕೊಟ್ಟು ಅನಂತರ ಅದರ ಅರ್ಥ ಪ್ರಯೋಗಗಳನ್ನು ಕೊಡಲಾಗಿದೆ.

ಕುಟ್ಟೆ (ನಾ) ೧. ಮರವನ್ನು ಕೊರೆದು ಪುಡಿ ಮಾಡುವ ಹುಳು ‘ತೊಲೆಗೆ ಕುಟ್ಟಿ ಹಿಡಿದು ಹಾಳಾಗಿದೆ. (ರೂಢಿ) ೨. (ಅ) ಕೂಡ : ಒಬ್ಬರ ಕುಟ್ಟೆ ಒಂದು ಮಾತು ಕೇಳಿಸಿ ಕೊಂಡೋಳಲ್ಲ (ಸೋಬಾನಿ ಚಿಕ್ಕಮ್ಮನ ಪದಗಳು).
ಕುರುಬು (ಕ್ರಿ) ೧. (ಬಟ್ಟೆ ಮೊದಲಾದವನ್ನು) ಕುಕ್ಕು; ಕಸಕು : ‘ಬಟ್ಟೆ ಚೆನ್ನಾಗಿ ಕುರುಬಿ ಒಗಿ’ (ರೂಢಿ). (ನಾ) ೨. (ಬಂಬಲೂ ಇಲ್ಲದ) ಎಳೆಯ ತೆಂಗಿನ ಕಾಯಿ ‘ಇನ್ನೂ ಕಾಯಿ ಬಲಿತಿಲ್ಲ. ಬರಿ ಕುರುಬು’ (ರೂಢಿ).

ತಮ್ಮ ಭಾವನೆಗಳ ಅಭಿವ್ಯಕ್ತಿಗೆ ರೂಢಿಯಲ್ಲಿರುವ ಶಬ್ದಗಳು ಅಸಮರ್ಥವೆಂದು ಕಂಡಾಗ ಜನಪದರು ತಮ್ಮ ಪ್ರತಿಭೆಯ ಟಂಕ ಶಾಲೆಯಲ್ಲಿ ಹೊಸ ಶಬ್ದ ನಾಣ್ಯಗಳನ್ನು ಟಂಕಿಸಿ ಬಳಸುತ್ತಾರೆ. ನಿರ್ಬಂಜ – (ನಾ) ಮಕ್ಕಳಿಲ್ಲದವ. ಮಕ್ಕಳಿಲ್ಲದವಳಿಗೆ ಬಂಜೆ ರೂಪ (ಸ್ತ್ರೀ ವಾಚಿ) ಬಳಕೆಯಲ್ಲಿದೆ. ಮಕ್ಕಳಿಲ್ಲದ ಪುಲ್ಲಿಂಗ ರೂಪಕ್ಕೆ ನಿರ್ಬಂಜ ರೂಪವನ್ನು ಜನಪದರು ಸೃಷ್ಟಿಸಿದ್ದಾರೆ. ‘ನಾನು ಮಕ್ಕಳಿಲ್ದೆ ನಿರ್ಬಂಜ ನಾಗಿನಿ’ (ಕರ್ನಾಟಕ ಜನಪದ ಕಥೆಗಳು ಪು. ೨೮೫).

ಒಂದು ಶಬ್ದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥಗಳಿದ್ದಲ್ಲಿ ಅವುಗಳನ್ನು ಸಂಖ್ಯಾನುಕ್ರಮದಲ್ಲಿ ಕೊಟ್ಟು ಅರ್ಥ ಸ್ಪಷ್ಟತೆಗಾಗಿ ಪ್ರಯೋಗಗಳನ್ನು ಆಧಾರ ಸಮೇತವಾಗಿ ಉದ್ಧರಿಸಲಾಗಿದೆ.

ಉದಾ:

ಎಟ್ಟ (ನಾ) ೧. ಹಟಮಾರಿ; ಮೊಂಡ. ‘ಅವನೊಬ್ಬ ಎಟ್ಟ ಹೇಳಿದ ಮಾತು ಕೇಳೊಲ್ಲ’ (ರೂಢಿ). ೨. ಅಪ್ರಮಾಣಿಕ ‘ಎಟ್ಟ ಗಂಡನಿಗೆ ಖೊಟ್ಟಿ ಹೇಡ್ತಿ’ (ಗಾದೆ).
ತುಂಟ (ನಾ) ೧. ಧೂರ್ತ; ನೀಚ. ‘ತುಂಟನ ಕೈಯಲ್ಲಿ ಗಂಟು ಕೊಟ್ಟರೆ ಬಂಟವಾಗಿರುತ್ತಾನೆಯೇ (ಗಾದೆ). ೨. ಪೋಲಿ : ಪೋಕರಿ ೩. ಕೀಟಲೆ ಮಾಡುವವನು ; ಕುಚ್ಯೋದಗಾರ ೪. ಚೇಷ್ಟೆಯಿಂದ ಕೂಡಿದ ; ಕುಚ್ಯೋದದ

ಒಂದು ಶಬ್ದಕ್ಕೆ ಆಡುಮಾತಿನಲ್ಲಿ ಅನೇಕ ರೂಪಗಳಿರುವುದು ಸಹಜ. ಅಂತಹುಗಳನ್ನು ಒಂದೇ ಉಲ್ಲೇಖದಡಿ ಜೊತೆ ಶಬ್ದಗಳಾಗಿ ಕೊಡಲಾಗಿದೆ. ಅಂತಹುಗಳಲ್ಲಿ ಹೆಚ್ಚು ಆವೃತ್ತಿ ಹೊಂದಿದ ರೂಪಗಳನ್ನು ಮುಖ್ಯ ಉಲ್ಲೇಖವನ್ನಾಗಿ ಕೊಡಲಾಗಿದೆ. ವಿಕ್ಕವುಗಳನ್ನು ಅದರ ಮುಂದೆಯೇ ಕೊಡಲಾಗಿದೆ.

ಉದಾ:

ಒಡ್ಯಾಣ ಒಡವಾಣ, ಒಡುವಾಣ, ಒಡಿವಾಣ, ಒಡ್ಡುವಾಣ, ವಡ್ಡಿವಾನ, ವಡ್ಯಾನ, ೧. ಸೊಂಟಕ್ಕೆ ಧರಿಸುವ ಬೆಳ್ಳಿ ಅಥವಾ ಚಿನ್ನಪದ ಪಟ್ಟಿ ೨. ಸೊಂಟಪಟ್ಟಿ.
ಬೂವ ಬುವ್ವ, ಭೂವ (ನಾ)ಭೂಮ : ವಿಶೇಷವಾದ ಊಟ; ಮದುಮಕ್ಕಳು ಒಟ್ಟಿಗೆ ಕುಳಿತು ಮಾಡುವ ಭೋಜನ.

ಮುಖ್ಯ ಉಲ್ಲೇಖದಡಿಯಲ್ಲಿಯೇ ಅದಕ್ಕೆ ಸಂಬಂಧಿಸಿದ ನುಡಿಗಟ್ಟುಗಳನ್ನು ಅವುಗಳ ವಿವರವನ್ನು ಪ್ರಯೋಗದೊಡನೆ ಕೊಡಲಾಗಿದೆ. ಉದಾ: ಕಣ್ಣು – ನೇತ್ರ, ಲೋಚನ. ಕಣ್ಣಿಗೆ ಮಣ್ಣೆರಚು – ಮೋಸ ಮಾಡು ಕೋಶದ ಉದ್ದಕ್ಕೂ ಮೂಲರೂಪ ಮತ್ತು ಸಮಸ್ತ ರೂಪಗಳನ್ನು ಮುಖ್ಯ ನಮೂದುಗಳನ್ನಾಗಿ ಕೊಟ್ಟಿದೆ.

ಹಾಡುವಾಗ ರಾಗಕ್ಕಾಗಿ ಎಳೆದು ಉಚ್ಚರಿಸುವ ದೀರ್ಘ ರೂಪಗಳನ್ನು ಇಲ್ಲಿ ಹ್ರಸ್ವವೆಂದೇ ಉದ್ಧರಿಸಲಾಗಿದೆ. ಪ್ರಯೋಗದಲ್ಲಿ ಮಾತ್ರ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಉದಾ: ಅಂಕೂಸ – ಅಂಕುಸ, ಅಂತಾರ – ಅಂತರ. ಗ್ರಾಮೀಣರಲ್ಲಿ ಬಳಕೆಯಲ್ಲಿರುವ ಆಡಳಿತ, ಹುದ್ದೆ, ವ್ಯವಸಾಯ ಮೊದಲಾದವುಗಳಿಗೆ ಸಂಬಂಧಿಸಿದ ಅನ್ಯದೇಶ್ಯ ಪದಗಳು ಮುಖ್ಯ ಉಲ್ಲೇಖಗಳನ್ನಾಗಿ ಕೊಟ್ಟಿದೆ. ಉದಾ: ಅರ್ಜಿ, ದವಾಖಾನೆ ಮುಂತಾದವು. ಇಂಗ್ಲಿಶ್‌ಭಾಷೆಯಿಂದ ರೂಪುಗೊಂಡ ಗ್ರಾಮ್ಯರೂಪಗಳನ್ನು ಇಂಗ್ಲಿಷ್‌ಮೂಲದೊಡನೆ ಕೊಡಲಾಗಿದೆ. ಉದಾ: ಟೀಮು (Time), ಟೇಸನ್ನು (Station) ಶಬ್ದಗಳ ಪ್ರಾದೇಶಿಕ ಭಿನ್ನತೆಯನ್ನು ದುಂಡು ಕಂಸದಲ್ಲಿ ಕೊಟ್ಟಿದ್ದಾರೆ. (ದ.ಕ. – ದಕ್ಷಿಣ ಕರ್ನಾಟಕ, ಉ.ಕ. – ಉತ್ತರ ಕರ್ನಾಟಕ, ಕ. ರಾ. – ಕರಾವಳಿ ಕರ್ನಾಟಕ). ಉದಾ: ಕಷ್ಟ – ೧ ತೊಂದರೆ (ದ.ಕ) ೨. ಕ್ಷೌರ (ಉ. ಕ).

ಈ ಕೋಶದಲ್ಲಿ ಆಡುಮಾತಿನ ದೇಶ್ಯ – ಅನ್ಯದೇಶ್ಯ ರೂಪಗಳನ್ನು ಸೇರಿಸುವ ಪ್ರಯತ್ನ ಮಾಡಲಾಗಿದೆ. ಆಡುರೂಪಗಳನ್ನು ಸಂಗ್ರಹಿಸಿ ಶಾಸ್ತ್ರೀಯವಾಗಿ ಸಂಯೋಜಿಸಿ ಅರ್ಥಕೊಡುವ ಪ್ರಯತ್ನದಲ್ಲಿ ಈ ಕೋಶ ಮೊದಲನೆಯದು. ಹೀಗಾಗಿ ಕನ್ನಡ ನಿಘಂಟು ಕ್ಷೇತ್ರದಲ್ಲಿ ಇದು ಹೊಸ ದಾರಿ ತುಳಿಯಿತು. ಈ ಕೋಶದಲ್ಲಿ ಬರುವ ಕೆಲವು ಉಲ್ಲೇಖಗಳಿಗೆ ಗ್ರಾಂಥಿಕ ಪ್ರಯೋಗಗಳು ಸಿಗದಿರುವಾಗ ಬಳಕೆಯ ರೂಢಿ ಪ್ರಯೋಗಗಳನ್ನು ಕೊಡಲಾಗಿದೆ. ಪ್ರಾದೇಶಿಕವಾಗಿ ಎಲ್ಲ ಶಬ್ದಗಳನ್ನು, ಶಬ್ದಗಳಿಗಿರುವ ಅರ್ಥಭೇದಗಳನ್ನು ಇಲ್ಲಿ ಸೇರಿಸಲಾಗಿದೆ. ವಿದ್ವತ್‌ಕ್ಕೆ ನಿಕರ್ಷವನ್ನೊದಗಿಸಿದ ಈ ಪದಕೋಶ ಕನ್ನಡ ನಿಘಂಟು ಕ್ಷೇತ್ರಕ್ಕೆ ಹೊಸ ಬೆಳಕನ್ನು ನೀಡುತ್ತದೆ.

ಆಡುಭಾಷೆ ನಿಘಂಟುಗಳು ಉಪಯುಕ್ತತೆ

೧. ಉಪಭಾಷೆಗಳ ಮೂಲಕ ಮೂಲರೂಪ ಮತ್ತು ಸಮಸ್ತರೂಪಗಳ ಸಹಾಯದಿಂದ ಅವುಗಳ ಮೂಲಭಾಷೆಯನ್ನು ಪುನರ್ರಚಿಸಬಹುದು. ಹಾಗೆಯೇ ಬೇರೆ ಬೇರೆ ಜ್ಞಾತಿ ಭಾಷೆಗಳ ಮೂಲರೂಪಗಳನ್ನು ಪುನರ್ರಚಿಸಬಹುದು. ಅದರಂತೆ ಬೇರೆ ಬೇರೆ ಭಾಷೆಗಳು ಬೆಳೆದು ಬಂದ ವಿಧಾನವನ್ನು ಚಾರಿತ್ರಿಕವಾಗಿ ವಿವರಿಸಿ ತೋರಿಸಬಹುದು. ಪದಗಳು ಕಾಲದಿಂದ ಕಾಲಕ್ಕೆ ಪಲ್ಲಟವಾಗುವ ಕ್ರಿಯೆಯನ್ನು ಅರಿಯಬಹುದು.

೨. ಒಂದು ಭಾಷೆಯನ್ನಾಡುವ ಭಾಷಿಕರ ಸಮಾಜ – ಸಂಸ್ಕೃತಿ ಮುಂತಾದವುಗಳನ್ನು ಅರಿಯಬೇಕಾದರೆ ಆ ಭಾಷಾಸಮುದಾಯದ ಆಡುರೂಪಗಳು ತುಂಬ ನೆರವಾಗುತ್ತವೆ. ಉದಾ: ಬೆಳಗಾವಿ ಪ್ರದೇಶದ ವ್ಯಾವಹರಿಕ ಕನ್ನಡದಿಂದ ಸಂಗ್ಯಾಬಾಳ್ಯಾ, ಬಲವಂತ ಬಸವಂತ – ಇಂತಹ ಜಾನಪದ ಗೀತ ರೂಪಕಗಳ ಸ್ವರೂಪ ಗೊತ್ತಾಗುತ್ತದೆ. ಇದರಿಂದ ಭಾಷಾ ಸಂಕೀರ್ಣತೆ ದೂರವಾಗಿ ನಾಟಕದ (ಕೃತಿಯ) ಆಶಯ ಸುಲಭವಾಗಿ ಜನರಿಗೆ ಅರ್ಥವಾಗುತ್ತದೆ.

೩. ಒಂದು ಭಾಷೆಯ ಪ್ರಾಚೀನ ಮತ್ತು ಅರ್ವಾಚೀನ ಸಾಹಿತ್ಯ ಗ್ರಂಥಗಳಲ್ಲಿ ಆ ಕೃತಿ ರಚನೆಯಾದ ಪರಿಸರದ ಪ್ರಾದೇಶಿಕವಾದ ರೂಪಗಳು ಉಳಿದುಕೊಂಡು ಬಂದಿರುತ್ತವೆ. ಅಂತಹ ಗ್ರಂಥಗಳನ್ನು ಅಧ್ಯಯನ ಮಾಡುವಾಗ ಆ ಸಾಹಿತ್ಯ ಕೃತಿಯ ರಚನೆ, ಕಾಲ, ದೇಶ ಮುಂತಾದ ಅಂಶಗಳು ಸರಿಯಾಗಿ ಗೊತ್ತಿಲ್ಲದಿರುವಾಗ ಈ ಬಗೆಯ ನಿಘಂಟುಗಳು ನೆರವಾಗುತ್ತವೆ.

೪. ಭಾಷಾ ಬೋಧಕರಿಗೆ ಉಪ ಭಾಷಾಕೋಶಗಳಿಂದ ಹೆಚ್ಚು ಪ್ರಯೋಜನವಿದೆ. ಮೈಸೂರು ಕಡೆಯ ಶಬ್ದಗಳು ಬೆಳಗಾವಿ ಕಡೆಯವರಿಗೆ, ಬೆಳಗಾವಿ ಕಡೆಯ ರೂಪಗಳು ಮೈಸೂರಿನ ಕಡೆಯವರಿಗೆ ಬೇಗನೆ ಅರ್ಥವಾಗುವುದಿಲ್ಲ. ಪ್ರಾದೇಶಿಕ ನಿಘಂಟುಗಳಿದ್ದರೆ ಪಾಠ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಉಂಟಾಗುವುದು ತುಂಬ ಕಡಿಮೆಯಾಗುತ್ತವೆ. ಮಕ್ಕಳಲ್ಲಿ ಶಬ್ದ ಶಕ್ತಿಯ ವಿಕಾಸಕ್ಕೂ ನೆರವಾಗುತ್ತದೆಯಲ್ಲದೆ, ಪರಸ್ಪರ ಅರಿವು ಉಂಟಾಗಲಿಕ್ಕೆ ನೆರವಾಗುತ್ತದೆ. ತತ್ಪರಿಣಾಮವಾಗಿ ಶಿಕ್ಷಕರು ಕಲಿಕೆ ಮತ್ತು ಬೋಧನೆಯ ಪ್ರಕ್ರಿಯೆಯಲ್ಲಿ ಯಶಸ್ವಿಯಾಗುತ್ತಾರೆ. ಮಕ್ಕಳ ಕಲಿಕೆಯು ಪರಿಣಾಮಕಾರಿಯಾಗುತ್ತದೆ.

೫. ಭಾಷಾವಿಜ್ಞಾನಿಗಳಿಗೆ ಇಂತಹ ಕೋಶಗಳಿಂದ ಆಗುವ ಪ್ರಯೋಜನ ಅಪಾರ. ಉಪಭಾಷಾ ಅಧ್ಯಯನಕ್ಕೆ, ಉಪಭಾಷೆಗಳ ವಿವಿಧ ಬಗೆಯ ನಕ್ಷೆಗಳನ್ನು ತಯಾರಿಸಲಿಕ್ಕೆ, ಒಂದು ಭಾಷಾ ಸಮುದಾಯದ ಸಮಾಜ – ಸಂಸ್ಕೃತಿಯ ಹಿನ್ನೆಲೆಯನ್ನು ಅರಿಯಲು ಇಂತಹ ಹಲವಾರು ಸಂದರ್ಭಗಳಲ್ಲಿ ಉಪಭಾಷಾ ನಿಘಂಟುಗಳು ಭಾಷಾ ಅಧ್ಯಯನಕಾರರಿಗೆ ನೆರವಾಗುತ್ತವೆ.

ಭಾಷೆ – ಸಮಾಜ – ಸಂಸ್ಕೃತಿ ಇವುಗಳಿರುವ ಪರಸ್ಪರ ಸಂಬಂಧವನ್ನು ವಿವರಿಸಿ ತೋರಿಸಲು ಭಾಷಾ ಪ್ರಭೇದಗಳ ಅಧ್ಯಯನ ಅತ್ಯಗತ್ಯವಾಗಿ ನಡೆಯಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಆಡುಭಾಷೆಯ ನಿಘಂಟುಗಳಿಂದಾಗುವ ಪ್ರಯೋಜನ ಅಪಾರವಾದದ್ದು ಹಾಗೂ ಹೆಚ್ಚು ಉಪಯುಕ್ತವಾದದ್ದು.