ಮಗು ಆನುವಂಶಿಯತೆ ಮತ್ತು ಪರಿಸರದ ಪ್ರಭಾವದಿಂದ ಸಮುದಾಯದ ಭಾಷೆಯನ್ನು ರೂಢಿಸಿಕೊಳ್ಳುತ್ತದೆ. ಮಗು ತನ್ನ ಸಮುದಾಯದ ಭಾಷೆಯ ಪದರಚನೆಯ ಹಾಗೂ ಇತರ ಸಮುದಾಯಗಳ ಪದರಚನೆಯ ಅಂತರವನ್ನು ಗುರುತಿಸಲು ಸಮರ್ಥವಾಗುತ್ತದೆಯೋ ಆಗ ಭಾಷೆಯನ್ನು ಅರ್ಥಮಾಡಿಕೊಳ್ಳಲು (ಗ್ರಹಿಸಲು) ಪ್ರಾರಂಭಿಸುತ್ತದೆ. ಭಾಷೆಯ ಪದಗಳ ಅರ್ಥ ಮೊದಮೊದಲು ಆಗದಿದ್ದರೂ ಕ್ರಮೇಣ ಅರ್ಥವಾಗುತ್ತ ಹೋಗುತ್ತದೆ. ನಂತರ ಪದರಚನೆಗೆ ಯಾವ ಅರ್ಥವಿದೆ ಎಂಬುದನ್ನು ಅರಿಯುವ, ಕಲ್ಪಿಸುವ ಸಾಮರ್ಥ್ಯ ಕಂಡುಬರುತ್ತದೆ. ಆದ್ದರಿಂದಲೇ ಭಾಷೆಯ ಕಲಿಕೆಯಲ್ಲಿ ಗ್ರಹಿಕೆ, ಮಾತು, ಓದು ಮತ್ತು ಬರೆಹ ಈ ಕೌಶಲ್ಯಗಳಿಗೆ ಮಹತ್ವದ ಸ್ಥಾನವಿದೆ.

ಈ ಅಧ್ಯಾಯದಲ್ಲಿ ಮುಖ್ಯವಾಗಿ ೪ ರಿಂದ ೧೨ ವಯಸ್ಸಿನ ಮಕ್ಕಳ ಶಬ್ದಸಂಗ್ರಹ ಹಾಗೂ ಆ ಹಂತದ ಕೋಶ ರಚನೆಯನ್ನು ಕುರಿತು ಸಂಕ್ಷಿಪ್ತವಾಗಿ ವಿವೇಚಿಸಲಾಗಿದೆ. ನಾಲ್ಕನೆಯ ವಯಸ್ಸಿನಲ್ಲಿ ಮಗು ಸರಳವಾದ ಪದ ಜೋಡಣೆಯನ್ನು ಕಲಿತುಕೊಳ್ಳುತ್ತದೆ. ಉದಾ: ಮರ, ಅರಸ, ಅಕ್ಕ, ಅಮ್ಮ ಮುಂತಾದವು. ಆರನೆಯ ವಯಸ್ಸು ಧಾಟಿದ ನಂತರ ಮಕ್ಕಳಲ್ಲಿ ಸಾದೃಶ್ಯ ಸೃಷ್ಟಿ ಹೆಚ್ಚಾದಂತೆ ಮಕ್ಕಳು ಸಹಪಾಠಿಗಳನ್ನು ನೋಡಿ ಕಲಿಯುತ್ತಾರೆ. ಈ ಹಂತದಲ್ಲಿ ಶಿಕ್ಷಕರ ಹಾಗೂ ಪಾಲಕರ ಭಾಷಾ ಪರಿಸರ ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ೯ ರಿಂದ ೧೨ ವರ್ಷದ ಹಂತದಲ್ಲಿ ಪದಬಳಕೆಯಲ್ಲಿ ಸರಿ ತಪ್ಪುಗಳ ವಿವೇಚನೆ ಬಂದಿರುತ್ತದೆ.

ಮಕ್ಕಳ ಕೋಶವನ್ನು ಸಿದ್ಧಪಡಿಸುವಾಗ ಕೋಶಕಾರ ಮಗುವಿನ ತೊದಲು ನುಡಿ ಹಂತದಿಂದ (ಹುಟ್ಟಿನಿಂದ ೨ ವರ್ಷ) ಬಾಲ್ಯಾವಸ್ಥೆವರೆಗಿನ (೩ ರಿಂದ ೧೨ ವರ್ಷ) ಮಗು ಬಳಸುವ ಮತ್ತು ಈ ಹಂತದಲ್ಲಿ ಬಳಸಬೇಕಾದ (ಕಲಿಯಬೇಕಾದ) ಎಲ್ಲ ಪದಗಳನ್ನು ಸಂಗ್ರಹಿಸಬೇಕು. ಪದಗಳನ್ನು ಸಂಗ್ರಹಿಸುವಾಗ ಹಿಂದೆ ಹೇಳಿದ ಕೋಶ ರಚನೆಯ ತತ್ವಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕೋಶಕಾರ ೧ ರಿಂದ ೧೨ ವಯಸ್ಸಿನ ಈ ಹಂತದಲ್ಲಿ ಮಕ್ಕಳು ನಿತ್ಯ ಬದುಕಿನಲ್ಲಿ ಬಳಸುವ ಹಾಗೂ ಹೆಚ್ಚು ಪುನರಾವೃತ್ತಿಯಾಗುವ ಏಕಾಕ್ಷರ, ಎರಡಕ್ಷರ, ಮೂರಕ್ಷರ ಹಾಗೂ ದ್ವಿತ್ವಾಕ್ಷರ ಪದಗಳನ್ನು ಕಲೆಹಾಕುವುದು ಭಾಷಾ ಕಲಿಕೆಯ ದೃಷ್ಟಿಯಿಂದ ಸೂಕ್ತ. ಮಕ್ಕಳ ಕೋಶ ರಚನೆಗೆ ಪದಗಳನ್ನು ಸಂಗ್ರಹಿಸುವಾಗ ಈ ಕೆಳಗಿನ ಅಂಶಗಳನ್ನು ಕೋಶಕಾರ ಅನುಸರಿಸಬೇಕು.

೧. ತಿಳಿದಿರುವ ವಿಷಯಗಳಿಂದ ತಿಳಿಯದಿರುವ ವಿಷಯಗಳ ಕಡೆಗೆ

೨. ಸುಲಭ ವಿಷಯಗಳಿಂದ ಕಠಿಣ ವಿಷಯಗಳ ಕಡೆಗೆ (ಸರಳತೆಯಿಂದ ಸಂಕೀರ್ಣಕ್ಕೆ)

೩. ಮೂರ್ತದಿಂದ ಅಮೂರ್ತದ ಕಡೆಗೆ (ಸ್ಥೂಲದಿಂದ ಸೂಕ್ಷ್ಮದ ಕಡೆಗೆ)

೪. ನಿರ್ದಿಷ್ಟತೆಯಿಂದ ಸಾಮಾನ್ಯದೆಡೆಗೆ

ಮಕ್ಕಳು ಪೂರ್ವ ಬಾಲ್ಯಾವಧಿಯಲ್ಲಿ (೨ ರಿಂದ ೬ ವರ್ಷ) ಅಪ್ಪ, ಅಮ್ಮ, ಅಜ್ಜ ಮುಂತಾದ ಶಬ್ದಗಳನ್ನು ಉಚ್ಚರಿಸುತ್ತಾರೆ. ಉತ್ತರ ಬಾಲ್ಯಾವಧಿಯಲ್ಲಿ (೭ – ೧೨) ಅವುಗಳನ್ನು ಓದಲು, ಬರೆಯಲು ರೂಢಿಸಿಕೊಳ್ಳುತ್ತಾರೆ. ಮಕ್ಕಳ ಕೋಶರಚನೆಯಲ್ಲಿ ಮೂರು ಅಂಶಗಳನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕಾಗುತ್ತದೆ.

೧. ನಿರೂಪಣೆ: ಕೋಶಕಾರ ಮುಖ್ಯ ನಮೂದಿನ ವಿವರವನ್ನು ಸರಳವಾದ ಭಾಷೆಯಲ್ಲಿ ನೇರವಾಗಿ ಮತ್ತು ಸಂಕ್ಷಿಪ್ತವಾಗಿ ನಿರೂಪಿಸಬೇಕು.

೨. ಚಿತ್ರಗಳಿಂದ ಕೂಡಿದ ವಿವರಣೆ: ಚಿತ್ರಗಳ ಮೂಲಕ ನಮೂದುಗಳ ವಿವರಣೆಯನ್ನು ಕೊಡುವುದರಿಂದ ಮಕ್ಕಳಿಗೆ ಸ್ಪಷ್ಟತೆ ಬರುತ್ತದೆ. ಇದರಿಂದ ಮಕ್ಕಳ ವೀಕ್ಷಣಾಶಕ್ತಿ ಹೆಚ್ಚುವುದಲ್ಲದೆ ಭಾಷೆಯ ಕಲಿಕೆವಾಗುತ್ತದೆ.

೩. ಮೂಲ ರೂಪ ಹಾಗೂ ಸಜಾತಿಯ ದ್ವಿತ್ವಾಕ್ಷರಗಳನ್ನು ಮಾತ್ರ ಮುಖ್ಯ ನಮೂದುಗಳನ್ನಾಗಿ ಕೊಡಬೇಕು. ಚಿತ್ರಗಳ ಮೂಲಕ ಅವುಗಳ ವಿವರಣೆ ಇರಬೇಕು. ಇದರಿಂದ ಪದಗಳ ಖಚಿತವಾದ ಅರ್ಥ ಸ್ಪಷ್ಟವಾಗುತ್ತದೆಯಲ್ಲದೆ ನಿಘಂಟನ್ನು ಪರಾಮರ್ಶಿಸಲು ಆಸಕ್ತಿ ಕೆರಳಿಸುತ್ತದೆ.

ತಂಬೂರಿ : ಒಂದು ಬಗೆಯ ತಂತಿ ವಾದ್ಯ. ಭಜನೆ ಇಲ್ಲವೆ ಹಾಡುವ ಸಂದರ್ಭದಲ್ಲಿ ಇದನ್ನು ಉಪಯೋಗಿಸುತ್ತಾರೆ. (ತಂಬೂರಿಯ ಚಿತ್ರ ಇರಬೇಕು).

ಪಠನ  ವಾಚನ; ಓದು. ‘ನಮ್ಮ ತಂದೆಯವರು ದಿನಾಲೂ ಮಂತ್ರವನ್ನು ಪಠನ ಮಾಡುತ್ತಾರೆ’ (ಪಠನ ಮಾಡುವ ಚಿತ್ರ).
ಬೆನಕ  ಗಣಪತಿ; ವಿನಾಯಕ. ‘ಗಣಪತಿಯ ಮುಖ ಆರನೆಯ ಮುಖದಂತಿರುತ್ತದೆ’ (ಗಣಪತಿಯ ಚಿತ್ರ).
ಮನೆ  ವಾಸಸ್ಥಳ; ಆಶ್ರಯಸ್ಥಾನ. ‘ನಮ್ಮ ಮನೆ ದೊಡ್ಡದಿದೆ’ (ಮನೆಯ ಚಿತ್ರ).
ಯಾಚನೆ  ಬೇಡಿಕೆ; ಭಿಕ್ಷೆ. ‘ಬಸ್‌ನಿಲ್ದಾಣದಲ್ಲಿ ಯಾಚಿಸಿಕೊಳ್ಳುವವರಿರುತ್ತಾರೆ. (ಭಿಕ್ಷೆ ಬೇಡುವವನ ಚಿತ್ರ).

ಹೀಗೆ ಮಕ್ಕಳ ನಿಘಂಟುಗಳಲ್ಲಿ ನಮೂದುಗಳು ಸರಳ ಮತ್ತು ಸುಲಭವಾಗಿರಬೇಕು. ವಿವರಣೆಯೂ ಅಷ್ಟೇ ಸುಲಭವಾಗಿರಬೇಕು. ವಿವರಣೆಯ ಸಂದರ್ಭದಲ್ಲಿ ಚಿತ್ರ ಮತ್ತು ಪ್ರಯೋಗಗಳು ಕಡ್ಡಾಯವಾಗಿ ದಾಖಲಾಗಬೇಕು.

ಉಪಯುಕ್ತತೆ

೧. ಮಕ್ಕಳ ಭಾಷಾ ಕೌಶಲ್ಯಗಳು ಅಭಿವೃದ್ಧಿಯಾಗುತ್ತವೆ.

೨. ಮಕ್ಕಳಿಗೆ ಕಲಿಯುವ ವಿಷಯದ ಸ್ಪಷ್ಟ ಜ್ಞಾನ ಮೂಡಿಸುತ್ತದೆ.

೩. ಸ್ವಯಂ ಕಲಿಕೆ, ಸ್ವಯಂ ಅಭಿವ್ಯಕ್ತಿ ಹಾಗೂ ಸ್ವಯಂ ಆಲೋಚನೆಯ ಶಕ್ತಿ ಹೆಚ್ಚಿಸುತ್ತದೆ.

೪. ‘ನೋಡಿಕಲಿ’ ತತ್ವಕ್ಕೆ ಆದ್ಯತೆ ನೀಡಲಾಗುತ್ತದೆ.

೫. ಮಕ್ಕಳಲ್ಲಿ ಶಬ್ದ ಸಂಪತ್ತು (ಪದ ಭಂಡಾರ) ಹೆಚ್ಚುತ್ತದೆ.

೬. ಮಕ್ಕಳಲ್ಲಿ ಅಧ್ಯಯನದ ಬಗ್ಗೆ ವಿಶ್ವಾಸ ಮೂಡಿಸುತ್ತದೆ.

೭. ಶಿಕ್ಷಕರ ಬೋಧನೆ ಸರಳ, ಸ್ಪಷ್ಟ ಹಾಗೂ ಪರಿಣಾಮಕಾರಿಯಾಗುತ್ತದೆ.

ಹೀಗೆ ಮಕ್ಕಳ ನಿಘಂಟುಗಳು ಮಕ್ಕಳ ಶಬ್ದ ಸಂಪತ್ತನ್ನು ಹೆಚ್ಚಿಸಿ ಭಾಷಾ ಬೆಳವಣಿಗೆಗೆ ಪೋಷಕವಾಗುತ್ತವೆ. ಅವುಗಳ ಮಹತ್ವವನ್ನು ಅರಿತು ಕನ್ನಡದಲ್ಲಿ ಮಕ್ಕಳ ನಿಘಂಟುಗಳು ಸಿದ್ಧವಾಗಬೇಕಾಗಿವೆ. ಅಂತಹ ಕೋಶರಚನೆಗೆ ಈ ಲೇಖನ ಪ್ರೇರಣೆ ಕೊಡುತ್ತದೆಂದು ಭಾವಿಸಿದ್ದೇನೆ.