ಜ್ಞಾನದಲ್ಲಿ ಎರಡು ವಿಧ. ಒಂದು ವಿಷಯವನ್ನು ಸ್ವತಃ ತಿಳಿದುಕೊಳ್ಳುವುದು ಮತ್ತೊಂದು ವಿಷಯಕ್ಕೆ ಸಂಬಂಧಿಸಿದ ಮಾಹಿತಿ ದೊರೆಯುವ ಆಕರಗಳ ಮಾಹಿತಿ ಇಲ್ಲದೆ ವಿಷಯ ಜ್ಞಾನ ದುಸ್ತರ. ಮಾಹಿತಿ ಕೋಶಗಳು ಹಲವಾರು ಕೈಪಿಡಿಗಳು, ನಿಘಂಟುಗಳು, ಶಾಸನಗಳು, ಗ್ಯಾಜೆಟರುಗಳು, ಗ್ರಂಥ/ಲೇಖಸೂಚಿಗಳು ಇತ್ಯಾದಿ. ಇಂತಹ ಆಕರಗಳ ಸಮೃದ್ಧವಾಗಿರುವುದೇ ಒಂದು ಭಾಷೆಯ ವಾಙ್ಮಯದ ಶ್ರೀಮಂತಿಕೆಯನ್ನು ಸೂಚಿಸುತ್ತದೆ. ಜ್ಞಾನಾಭಿವೃದ್ಧಿಗೆ ಇಂತಹ ಆಕರಗಳು ತೋರು ದೀಪಗಳು. ಇಂತಹ ಆಕರಗಳಲ್ಲಿ ವಿಶ್ವಕೋಶಗಳು ಪ್ರಮುಖವಾದವು. ಆಕರ ಸಂಪತ್ತಿನಲ್ಲಿ ವಿಶ್ವಕೋಶಗಳಿಗೆ ಮಹತ್ವದ ಸ್ಥಾನವಿದೆ. ವಿಶ್ವಕೋಶ ಎಂದರೆ ಲೋಕಜ್ಞಾನವನ್ನು ಅಥವಾ ಲೋಕಜ್ಞಾನದ ತಿರುಳನ್ನು ಸಂಗ್ರಹಿಸಿ, ನಿಖರವಾಗಿ ಆಕಾರಾದಿ ಕ್ರಮದಲ್ಲಿ ಹೊಂದಿಸಿರುವ ಗ್ರಂಥವಾಗಿದೆ. ಲೋಕದ ಜ್ಞಾನವನ್ನು ಸ್ಥೂಲವಾಗಿಯಾದರೂ ಒಂದೆಡೆ ಒದಗಿಸಿಕೊಡುವುದು ವಿಶ್ವಕೋಶದ ಉದ್ದೇಶವಾಗಿದೆ.

ಶ್ರೀ ಸಾಮಾನ್ಯರು ತಮ್ಮ ಜ್ಞಾನವನ್ನು ವೃದ್ಧಿಪಡಿಸಿಕೊಳ್ಳುವುದಕ್ಕೆ ಹಾಗೂ ತಮ್ಮ ದೃಷ್ಟಿಕೋನವನ್ನು ರೂಪಿಸುವುದಕ್ಕೆ ವಿಶ್ವಕೋಶಗಳು ಉಪಯುಕ್ತವಾಗಿವೆ. ವಿಶ್ವಕೋಶಗಳು ಸಮಕಾಲೀನ ಜೀವನದ ಪ್ರತಿಬಿಂಬವಾಗಿ, ರಾಷ್ಟ್ರೀಯ ಸಂಸ್ಕೃತಿಯ ವಾಹಕವಾಗಿ, ಲೋಕದ ಜ್ಞಾನವನ್ನು ಭಟ್ಟಿ ಇಳಿಸಿದ ಸಂಗ್ರಹವಾಗಿ, ಜ್ಞಾನ ಪ್ರಸಾರದ ಮಾಧ್ಯಮವಾಗಿರುತ್ತವೆ. ಯಾವುದೇ ಭಾಷೆಯ ಭಾಷಿಕರು ಎಷ್ಟೇ ಪರಿಣತಿ ಹೊಂದಿದರೂ ಬೇರೆ ವಿಷಯಗಳ ಬಗ್ಗೆ ಅಷ್ಟಿಷ್ಟಾದರೂ ಮಾಹಿತಿಯನ್ನು ಪಡೆದಿರಬೇಕು. ವಿಜ್ಞಾನದ ವಿದ್ಯಾರ್ಥಿ ಅಲ್ಪಸ್ವಲ್ಪ ಮಾನವಿಕ ಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿದಿರಬೇಕು. ಅದೇ ರೀತಿ ಮಾನವಿಕ ಶಾಸ್ತ್ರದ ವಿದ್ಯಾರ್ಥಿ ಅಲ್ಪಸ್ವಲ್ಪ ವಿಜ್ಞಾನದ ವಿಷಯ ಜ್ಞಾನ ಹೊಂದಿರಬೇಕು. ಈಗ ಲೋಕಜ್ಞಾನದ ವೈವಿಧ್ಯಮಯ ವಿಷಯಗಳನ್ನು ಜ್ಞಾನಾಭಿವೃದ್ಧಿಯ ದೃಷ್ಟಿಯಿಂದ ಓದುಗರು ತಿಳಿಯುವುದು ಅತ್ಯಂತ ಜರೂರಾಗಿದೆ. ನಮ್ಮ ತಿಳಿವಳಿಕೆಯ ಪರಿಧಿಯನ್ನು ಹೆಚ್ಚಿಸುವಲ್ಲಿ ವಿಶ್ವಕೋಶಗಳು ಮಹತ್ವ ಪಾತ್ರ ವಹಿಸುತ್ತದೆ.

ವಿಶ್ವಕೋಶದ ರಚನೆಯನ್ನು ಕುರಿತು ಡಾ. ಎಂ. ಚಿದಾನಂದಮೂರ್ತಿ ಅವರು ಹೀಗೆ ಹೇಳುತ್ತಾರೆ. ‘ವಿಶ್ವಕೋಶದಲ್ಲಿಯ ಲೇಖನಗಳು ತಾಂತ್ರಿಕತೆವಾಗಿರಬೇಕೆಂದಲ್ಲ. ವಿಶ್ವಕೋಶ ಸಂಶೋಧನ ಲೇಖನಗಳಿಗೆ ಸ್ಥಳ ಅಲ್ಲವೇ ಅಲ್ಲ. ಈಗಾಗಲೇ ಪ್ರಕಟವಾಗಿರುವ ಜ್ಞಾನವನ್ನು ಸಾರವತ್ತಾಗಿ, ತಿಳಿಯಾಗಿ, ಸ್ಪಷ್ಟವಾಗಿ ನಿರೂಪಿಸುವುದು ಅದರ ಉದ್ದೇಶ. ಲೇಖನದಲ್ಲಿ ಸಾಧ್ಯವಾದಷ್ಟು ವಿವರಗಳಿರಬೇಕು. ಸಾಮಾನ್ಯ ಬಳಕೆಯಲಿಲ್ಲದ ಪಾರಿಭಾಷಿಕ ಪದವೊಂದು ಬಳಸಿದಾಗ ಅದನ್ನು ವಿವರಿಸಬೇಕು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ವಿಶ್ವಕೋಶದ ಎಲ್ಲ ಲೇಖನವನ್ನೂ ಎಲ್ಲರೂ ಓದುವುದಿಲ್ಲ. ಯಾವುದೋ ಸಂಗತಿಯ ಬಗ್ಗೆ ತಿಳಿಯಲಪೇಕ್ಷೆಸುವವರಿಗೆ ತಕ್ಕಮಟ್ಟಿನ ವಿವರಗಳನ್ನು ಕೊಟ್ಟು ಹೆಚ್ಚಿನ ಅಧ್ಯಯನಕ್ಕೆ ಸೂಚನೆಗಳಿರಬೇಕು. ಭಾಷೆ ಮಕ್ಕಳ ಪುಸ್ತಕದ ಭಾಷೆಯಂತೆ ಪ್ರಾಥಮಿಕವಾಗಿರಬಾರದು; ಸ್ವತಂತ್ರ ಲೇಖನಗಳಷ್ಟು ಪ್ರೌಢವು ಆಗಿರಬಾರದು. ವಿಶ್ವಕೋಶ ಯಾವುದೇ ನಿರ್ದಿಷ್ಟ ವಯಸ್ಸಿನ ಶಿಕ್ಷಣದ ವ್ಯಕ್ತಿಗಳನ್ನೂ ಗಮನದಲ್ಲಿಟ್ಟುಕೊಳ್ಳುವುದಿಲ್ಲವಾದ್ದರಿಂದ ಭಾಷೆ ಮತ್ತು ನಿರೂಪಣಾ ವಿಧಾನಗಳು ಸುವರ್ಣ ಮಾಧ್ಯದಲ್ಲಿರುವುದು ಯಾವಾಗಲೂ ಅಪೇಕ್ಷಣೀಯವಾಗಿರುತ್ತದೆ.* ವಿಶ್ವಕೋಶದ ನಮೂದುಗಳನ್ನು ಅನುಲಕ್ಷಿಸಿ ಹೇಳುವುದಾದರೆ ಹೆಚ್ಚು ಚರ್ಚೆಗೆ ಹೋಗದೆ ಅದನ್ನು ಸೂಚಿಸಿ ಬಹುಜನ ಸಮ್ಮತ ಅಭಿಪ್ರಾಯವನಷ್ಟನ್ನೇ ನಿರೂಪಿಸುವುದು ವಿಶ್ವಕೋಶ ನಮೂದುಗಳ ಸಾಮಾನ್ಯ ಲಕ್ಷಣವಾಗಿರುತ್ತದೆ. ಸಾಮಾನ್ಯವಾಗಿ ವಿಶ್ವಕೋಶಗಳು ಏಕರ್ಕೃತ್ವವಾಗಿರುದಿಲ್ಲ. ವಿಶ್ವಕೋಶ ಅನೇಕರ ಬರೆಹಗಳ ಸಂಗ್ರಹ ಅವುಗಳಲ್ಲಿ ಗ್ರಂಥಸೂಚಿ, ರೇಖಾಚಿತ್ರ, ವಿಷಯಸೂಚಿ – ಇವೆಲ್ಲವೂ ವ್ಯವಸ್ಥಿತ ಜೋಡಣೆ ಹೊಂದಿರುತ್ತವೆ.

ವಿಶ್ವಕೋಶಗಳ ಸ್ವರೂಪವನ್ನು ಅನುಲಕ್ಷಿಸಿ ವಿಶ್ವಕೋಶಗಳನ್ನು ಮಕ್ಕಳ ವಿಶ್ವಕೋಶ, ವಿಷಯ ವಿಶ್ವಕೋಶ ಮತ್ತು ಸಾಮಾನ್ಯ ವಿಶ್ವಕೋಶವೆಂದು ಮೂರು ರೀತಿಯಾಗಿ ವಿಂಗಡಿಸಬಹುದು. ‘ಮಕ್ಕಳ ವಿಶ್ವಕೋಶ’ದ ಭಾಷೆ ಮಕ್ಕಳಿಗೆ ಅರ್ಥವಾಗುವಂತಿರಬೇಕು. ವಸ್ತು/ವಿಷಯದ ಮೂರ್ತ ಕಲ್ಪನೆ ಬರಬೇಕಾಗಿರುವುದರಿಂದ ಆ ವಸ್ತುವಿನ ರೇಖಾಚಿತ್ರ ಇರಲೇಬೇಕಾಗುತ್ತದೆ. ನಿರೂಪಣೆಯೂ ಮಿತವಾಗಿರಬೇಕು. ಉದಾ: ಶಿವರಾಮ ಕಾರಂತರು ಸಿದ್ಧಪಡಿಸಿದ ‘ಪ್ರಾಣಿ ಪ್ರಪಂಚ’ (೧೯೯೧) ನಮೂದುಗಳನ್ನು ಗಮನಿಸಬಹುದು. ಆಮೆ (Tortoise) : ‘ನಮ್ಮ ಭೂಮಿಯ ಇತಿಹಾಸದಲ್ಲಿ ಸುಮಾರು ೨೦೦ ಮಿಲಿ ವರ್ಷಗಳ ಪೂರ್ವದಲ್ಲಿ ಕಾಣಿಸಿಕೊಂಡ ಉಭಯ ಚರಿಗಳು ಇವು. ಅವುಗಳಲ್ಲಿ ಚಲಿಸಲು ಕಾಲಿನ ಬದಲು ಈಜಬಲ್ಲ ತೊಳೆಗಾಲುಗಳಿರುವ ಕಡಲಾಮೆಗಳು ಇರುವಂತೆಯೇ ನೆಲದ ಮೇಲೆಯೂ ಓಡಾಡಿಕೊಂಡಿರುವ ಇಷ್ಟ ಬಂದಾಗಲೆಲ್ಲಾ ಮಾತ್ರ ಕೆರೆ ಕುಂಟೆಗಳಲ್ಲಿ ವಾಸಿಸುವ ಆವೆ ಜಾತಿಗಳಿವೆ. ಅವುಗಳ ಬೆನ್ನಿನ ಮೇಲೆ ಡುಬ್ಬುದಂತೆ ಉಬ್ಬಿರುವ ಕೊಂಬಿನಂಥ ವಸ್ತುವಿನ ಹೊದಿಕೆಯಿದೆ. ಹೊಟ್ಟೆಯ ಕೆಳಗಡೆ ಅದಕ್ಕೆ ತುಸು ಮಿದುವಾದ ಹೊದಿಕೆಯಿದೆ. ಇವೆರಡರ ಜೋಡಣೆಯಲ್ಲಿ ಕತ್ತು, ಮೊಲೆ, ಬಾಲಗಳನ್ನು ಕಾಲುಗಳನ್ನು ಹೊರಕ್ಕೆ ಚಾಚ ಬಲ್ಲಂತಹ ತೂತುಗಳಿವೆ. ಭಯವಾದಾಗ ಅಥವಾ ಅಡಗಿಕೊಳ್ಳಬೇಕೆನಿಸಿದಾಗ ಅವು ತಮ್ಮ ಕಾಲು ಕತ್ತುಗಳನ್ನು ಮೈ ಚಿಪ್ಪು ಗೂಡಿನ ಒಳಕ್ಕೆ ಸೆಳೆದುಕೊಳ್ಳುತ್ತವೆ. ಹೀಗೆ ಆಮೆಯ ಆಕಾರ, ಅಂಗಾಂಗಗಳು ಒಟ್ಟು ಅದರ ಸ್ವರೂಪವನ್ನು ಹೇಳಲಾಗಿದೆ. ನಿರೂಪಣೆಯ ಪಕ್ಕದಲ್ಲಿ ಆಮೆಯ ಚಿತ್ರವಿದೆ. ಇದರಿಂದ ಮಕ್ಕಳಿಗೆ ಆ ಪ್ರಾಣಿಯ ಸ್ವರೂಪ ಸ್ವಷ್ಟವಾಗುತ್ತದೆ. ಅದರಂತೆ ಇರುವೆ, ಇಂದ್ರಿ, ಹಂದಿ ಮುಂತಾದ ಉಲ್ಲೇಖಗಳ ವಿವರಣೆಯೂ ಮೇಲಿನಂತೆ ಸಾಗಿದೆ.

ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ವ್ಯವಸ್ಥಿತವಾಗಿ ಕೊಡುವ ವಿಶ್ವಕೋಶಗಳು ವಿಷಯ ವಿಶ್ವಕೋಶದ ಕಕ್ಷೆಗೆ ಬರುತ್ತವೆ. ಕನ್ನಡದಲ್ಲಿ ಈ ಬಗೆಯ ವಿಶ್ವಕೋಶಗಳು ಬಂದಿವೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ‘ಕನ್ನಡ ಜಾನಪದ ವಿಶ್ವಕೋಶ’ ಜಾನಪದಕ್ಕೆ ಮಾತ್ರ ಸಂಬಂಧಿಸಿದ ವಿಷಯ ವಿಶ್ವಕೋಶವಾಗಿದೆ. ಆ ಕೋಶದ ಒಂದೊಂದು ಪುಟವು ಕನ್ನಡ ನಾಡಿನ ನಂಬಿಕೆ, ಹಾಡು, ಸಂಪ್ರದಾಯ, ಕಥೆ, ಪುರಾಣ, ಐತಿಹ್ಯ, ಗಾದೆ, ಒಗಟು, ಬಯಲಾಟ, ಆಚರಣೆ, ಹಬ್ಬ, ಜಾತ್ರೆ, ಗೀತ ರೂಪಕಗಳು, ಆಹಾರ ಸಂಪ್ರದಾಯಗಳು, ವಿವಿಧ ಜನಾಂಗಗಳು ಮುಂತಾದ ಅನೇಕ ಅಂಶಗಳನ್ನು ಕುರಿತ ಲೇಖನಗಳು ಆ ಕೋಶದಲ್ಲಿವೆ. ಇಲ್ಲಿ ಸೇರಿದ ಎಲ್ಲ ಅಂಶಗಳು ಸಾಂಸ್ಕೃತಿಕ ಪರಿಧಿಯೊಂದರ ತಾತ್ವಿಕ ಅಂಶಗಳನ್ನು ಒಳಗೊಂಡಿವೆ. ಸರಳವಾದ ಭಾಷೆಯಲ್ಲಿ, ನೇರವಾದ ನಿರೂಪಣೆಯಲ್ಲಿ ವಿವರಿಸುವ ಈ ವಿಶ್ವಕೋಶ ಕನ್ನಡ ಭಾಷಿಕರ ಬುದ್ಧಿ ವಿಕಾಸದ ಬೆಲೆಯುಳ್ಳ ಆಸ್ತಿಯಾಗಿದೆ. ಉದಾಹರಣೆಗೆ ಒಂದು ನಮೂದನ್ನು ಪರಿಶೀಲಿಸಬಹುದು.

ತಣಿಗೆ ಶಾಸ್ತ್ರ – ೧: ‘ತಣಿಗೆ’ ಎಂದರೆ ಕಂಚಿನಿಂದ ಮಾಡಿದ ತಟ್ಟೆ. ತಣಿಗೆಯನ್ನೇ ಪ್ರಧಾನ ವಸ್ತುವನ್ನಾಗಿ ಮಾಡಿಕೊಂಡು ಮಾಡುವ ಶಾಸ್ತ್ರಕ್ಕೆ ‘ತಣಿಗೆ ಶಾಸ್ತ್ರ’ ಎಂದು ಕರೆಯುತ್ತಾರೆ. ಯಾರಾದಾದರೂ ಮನೆಯಲ್ಲಿ ಏನಾದರೂ ವಸ್ತು ಕಾಣೆಯಾಗಿ, ಅದನ್ನು ಯಾರೋ ಕದ್ದಿದ್ದಾರೆನ್ನುವ ಸಂದೇಹ ಬಂದಾಗ ಈ ಶಾಸ್ತ್ರ ಮಾಡಲಾಗುತ್ತದೆ. ತಮ್ಮ ವಸ್ತು ಕಳುಹವಾಗಿರುವುದನ್ನು ಖಚಿತ ಪಡಿಸಿಕೊಂಡು ಕಳ್ಳನನ್ನು ಕಂಡು ಹಿಡಿಯುವಂತೆ ಹಳ್ಳಿಯ ದೇವರಲ್ಲಿ ಮೊರೆ ಹೋಗುತ್ತಾರೆ. ಸಾಮಾನ್ಯವಾಗಿ ಈ ದೇವತೆ ಉಗ್ರ ಅಥವಾ ಕ್ಷುದ್ರ ದೇವತೆಯಾಗಿರುತ್ತದೆ. ವಸ್ತುವನ್ನು ಕಳೆದುಕೊಂಡವರು ಕಳ್ಳರನ್ನು ಪತ್ತೆ ಹಚ್ಚುವಂತೆ ಬೇಡಿಕೆ ಸಲ್ಲಿಸಿದಾಗ ದೇವರ ಪೂಜಾರಿಯು (ಗುಡ್ಡ) ದೇವತೆಗೆ ಪದ್ಧತಿಯಂತೆ ಪೂಜೆ ನೆರವೇರಿಸಿ ಕಳ್ಳರನ್ನು ಕಂಡು ಹಿಡಿಯಲು ನೆರವಾಗುವಂತೆ ಭಕ್ತಿಯಿಂದ ಬೇಡಿಕೊಳ್ಳುತ್ತಾನೆ. ನಂತರ ಕಂಚಿನ ತಟ್ಟೆಯನ್ನು ಊಟಕ್ಕಿರಿಸಿಕೊಳ್ಳುವಂತೆ ನೆಲದ ಮೇಲಿರಿಸಿ, ತನ್ನೆರಡೂ ಕೈಗಳನ್ನೂ ಅದರೊಳಗಿರಿಸಿ ತನ್ನ ಬಲವನ್ನೆಲ್ಲಾ ಅದರ ಮೇಲೆ ಬಿಡುತ್ತಾನೆ. ಆ ಸಮಯದಲ್ಲಿ ಅವನ ಮೇಲೆ ದೇವರು ಆವೇಶಿತವಾಗಿರುತ್ತದೆಂದು ಹೇಳಲಾಗುತ್ತದೆ. ಆಗ ತಟ್ಟೆ ಚಲಿಸಲು ಶುರುಮಾಡಿ ಮುಳ್ಳು, ಕಲ್ಲು, ಮಣ್ಣು ಮೊರಡಿಯನ್ನೆಲ್ಲಾ ಹಾಯ್ದು ಯಾವುದೋ ಮನೆಯೊಂದರ ಬಳಿ ನಿಂತು ಬಿಡುತ್ತದೆ. ಮತ್ತೇನು ಸಾಹಸ ಮಾಡಿದರೂ ತಟ್ಟೆ ಅಲ್ಲಿಂದ ಮುಂದೆ ಚಲಿಸುವುದಿಲ್ಲ. ವಸ್ತುವನ್ನು ಕಳುವು ಮಾಡಿದ ವ್ಯಕ್ತಿ ಆ ಮನೆಗೆ ಸೇರಿದವನು ಕಳುವಾದ ವಸ್ತು ಆ ಮನೆಯಲ್ಲಿದೆ ಎಂದು ಅದರ ಅರ್ಥ. ‘ತಣಿಗೆ ಶಾಸ್ತ್ರ ೨’ ಮದುವೆ ಸಂದರ್ಭದಲ್ಲಿ ನಡೆಯುವ ಒಂದು ಶಾಸ್ತ್ರ. ಕರ್ನಾಟಕದ ಮಂಡ್ಯ, ಬೆಂಗಳೂರು ಮುಂತಾದ ಜಿಲ್ಲೆಗಳಲ್ಲಿ ಈ ಶಾಸ್ತ್ರ ನಡೆಯುವ ರೂಢಿಯಿದೆ. ಈ ಕೋಶದಲ್ಲಿ ಕನ್ನಡಿಗರ ಬದುಕಿನ ಎಲ್ಲ ಮುಖಗಳನ್ನು ಇದ್ದ ಹಾಗೆ ದಾಖಲಿಸಲಾಗಿದೆ. ಈ ಕೋಶವು ವಿಪುಲ ಸಾಮಗ್ರಿಯಿಂದ ತುಂಬಿದೆಯಲ್ಲದೆ ಸ್ವಾರಸ್ಯಕರ ನಿರೂಪಣೆಯಿಂದಲೂ ಕೂಡಿದೆ. ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಭಾಷೆ, ಧರ್ಮ, ಕರುಕುಶಲ ಕಲೆ, ಜೀವಜಗತ್ತು ಈ ಕೋಶಗಳು ವಿಷಯ ವಿಶ್ವಕೋಶದ ಕಕ್ಷೆಗೆ ಬರುತ್ತವೆ.

ಒಂದು ವಿಷಯಕ್ಕೆ ಸಂಬಂಧಿಸಿದ ಸಾಮಾನ್ಯ ಮಾಹಿತಿಯನ್ನು ಕೊಡುವ ವಿಶ್ವಕೋಶಗಳೇ ಸಾಮಾನ್ಯ ವಿಶ್ವಕೋಶಗಳು. ಅಂತಹ ವಿಶ್ವಕೋಶಗಳು ಕನ್ನಡದಲ್ಲಿ ಬಂದಿವೆ. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದ ವಿಶ್ವಕೋಶಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಆ ವಿಶ್ವಕೋಶಗಳು ಅಕಾರಾದಿಯಲ್ಲಿದ್ದು ಆಯಾ ನಮೂದಿಗೆ ತಕ್ಕಂತೆ ಚಿತ್ರಗಳನ್ನು ರೇಖಿಸಲಾಗಿದೆ. ಕನ್ನಡ ವಿಶ್ವಕೋಶದ ಹನ್ನೊಂದನೆಯ ಸಂಪುಟದ ಕೆಲವು ನಮೂದುಗಳನ್ನು ನೋಡಬಹುದು. ‘ಪಾರಿವಾಳ – ಕೊಂಬಿಡೀ’ ಕುಟುಂಬಕ್ಕೆ ಸೇರಿದ ಈ ಪಕ್ಷಿ ಉಷ್ಣ ಸಮ ಮತ್ತು ಶೀತೋಷ್ಣ ವಲಯಗಳಲ್ಲಿ ವಾಸಿಸುತ್ತದೆ. ಅದರ ೨೯೦ ಪ್ರಭೇದಗಳನ್ನು ಹೇಳಿ ಅದರ ಸ್ವಭಾವ ಅದು ಮರಿಗಳನ್ನು ಲಾಲನೆ – ಪಾಲನೆ ಮಾಡುವ ರೀತಿ, ಜೀವನ ಕ್ರಮ ಇತ್ಯಾದಿಗಳ ಮಾಹಿತಿಯಿದೆ. ಆ ನಮೂದಿನ ಪಕ್ಕದಲ್ಲಿ ಪಾರಿವಾಳದ ಚಿತ್ರವಿರುವುದರಿಂದ ವಿಷಯ ಮನದಟ್ಟಾಗುತ್ತದೆ. ಅದರಂತೆ ‘ಪಾಸ್ತರ್ ಲೂಯಿ’ (೧೮೨೨ – ೧೮೯೫) ಪ್ರಾನ್ಸಿನ ಸೂಕ್ಷ್ಮಾ ಜೀವ ವಿಜ್ಞಾನಿ. ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಅದ್ಭುತವಾದ ಕೆಲಸ ಮಾಡಿ ಇತಿಹಾಸ ನಿರ್ಮಿಸಿದ ಪ್ರವರ್ತಕ. ಲೂಯಿಯ ಜೀವನ ವಿಧಾನ, ವಿದ್ಯಾಭ್ಯಾಸ, ಪ್ರಾದ್ಯಾಪಕ ವೃತ್ತಿ, ಈತನ ಮಹತ್ವದ ಶೋಧಗಳು ಇಲ್ಲಿ ನಿರೂಪಿಸಲ್ಪಟ್ಟಿವೆ. ಆ ನಮೂದಿನ ಪಕ್ಕದಲ್ಲಿ ಅವನ ಚಿತ್ರವಿದೆ.

ಕನ್ನಡ ವಿಶ್ವಕೋಶದಲ್ಲಿ ಕನ್ನಡಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಬಂದಿವೆ. ಸಾಮಾನ್ಯಮಟ್ಟದ ವಿದ್ಯಾವಂತರಿಗೆ ಸುಲಭವಾಗಿ ಅರ್ಥವಾಗುವ ಭಾಷಾ ಶೈಲಿಯಿದೆ. ಪುಸ್ತಕವನ್ನು ಹೊರತಂದಿರುವ ರೀತಿ ಕನ್ನಡ ಪ್ರಕಟಣಾ ಪ್ರಪಂಚದಲ್ಲಿ ಒಂದು ಮೈಲುಗಲ್ಲಾಗಿದೆ. ಕನ್ನಡ ಭಾಷೆಯನ್ನು ಬಲ್ಲವರಿಗೆ ಜ್ಞಾನ ಮತ್ತು ಮಾಹಿತಿಯನ್ನು ಜನ ಭಾಷೆಯಲ್ಲಿ ಒದಗಿಸುವ ಮಹತ್ವರ ಆಕರ ಇದಾಗಿದೆ.

ಒಂದು ಜ್ಞಾನ ಕ್ಷೇತ್ರದ ಇಲ್ಲೆಯನ್ನು ವಿಸ್ತರಿಸಲಿಕ್ಕೆ ವಿಶ್ವಕೋಶಗಳ ರಚನೆ ನಿರಂತರವಾಗಿ ನಡೆಯಬೇಕಾಗಿದೆ. ಜೊತೆಗೆ ಅಗಾಗ್ಗೆ (ಕಾಲದಿಂದ ಕಾಲಕ್ಕೆ) ನವೀಕರಣ ಹಾಗೂ ಪರಿಷ್ಕರಣ ಪ್ರಕ್ರಿಯೆಯೊಂದಿಗೆ ಇಂತಹ ಯೋಜನೆಗಳು ತೃಪ್ತಿಕರಮಟ್ಟ ತಲುಪಬೇಕಾಗಿದೆ. ಇಂಗ್ಲಿಶ್ ಭಾಷೆಯಲ್ಲಿರುವ ವಿಶ್ವಕೋಶಗಳ ಸಂಖ್ಯೆ, ವಿವಿಧತೆ ಮತ್ತು ವಿಷಯ ಗಾತ್ರದ ವ್ಯಾಪ್ತಿಯನ್ನು ಅವಲೋಕಿಸಿದಾಗ ನಡೆಯಬೇಕಾದ ಕೆಲಸ ಬೆಟ್ಟದಷ್ಟಿದೆ. ಕರ್ನಾಟಕದಲ್ಲಿ ಬಂದಿರವು ವಿಶ್ವಕೋಶಗಳ ಸಮೀಕ್ಷೆಯನ್ನು ಈ ಸಂದರ್ಭದಲ್ಲಿ ಮಾಡಬಹುದು. ಕನ್ನಡದಲ್ಲಿ ವಿಶ್ವಕೋಶಕ್ಕೆ ಐದು ನೂರು ವರ್ಷಗಳ ಇತಿಹಾಸವಿದೆ. ನಿಜಗುಣ ಶಿವಯೋಗಿಯವರ ‘ವಿವೇಕ ಚಿಂತಾಮಣಿ’ (ಸು. ೧೫೦೦) ಕೃತಿಯಿಂದಲೇ ಕನ್ನಡ ವಿಶ್ವಕೋಶ ಆರಂಭವಾಯಿತು. ನಂತರ ೧೯೩೬ರಲ್ಲಿ ಬಂದ ಶಿವರಾಮ ಕಾರಂತರ ‘ಬಾಲ ಪ್ರಪಂಚ’ ೧೯೫೯ – ೬೪ರಲ್ಲಿ ಬಂದ ‘ವಿಜ್ಞಾನ ಪ್ರಪಂಚ’ ಇವು ವಿಶ್ವಕೋಶ ಶಾಖೆಯ ಮಹತ್ತರ ಘಟ್ಟಗಳೆನಿಸಿದವು. ನಂತರ ಜ್ಞಾನ ಗಂಗೋತ್ರಿ, ಕನ್ನಡ ವಿಶ್ವಕೋಶ, ಕರ್ನಾಟಕ ವಿಷಯ ಕೋಶ, ಕನ್ನಡ ವಿಶ್ವವಿದ್ಯಾಲಯದ ವಿಶ್ವಕೋಶಗಳು ಇತ್ಯಾದಿಗಳು ಹೊರಬಂದವು.

ನಿಜಗುಣ ಶಿವಯೋಗಿಯವರ ‘ವಿವೇಕ ಚಿಂತಾಮಣಿ’ ಕನ್ನಡದ ಮೊದಲನೆಯ ವಿಶ್ವಕೋಶವಾಗಿದೆ. ಈ ಕೋಶದಲ್ಲಿ ಹತ್ತು ಅಧ್ಯಾಯಗಳಿವೆ. ವೇದ, ಉಪಾಂಗ, ವೈಶ್ಯ ಕರ್ಮ, ಶೂದ್ರ ಕರ್ಮ, ಜೈನಶಾಸ್ತ್ರ, ಬೌದ್ಧಶಾಸ್ತ್ರ, ಆತ್ಮಸಿದ್ಧಿ, ಆಗಮಭೇದಗಳು, ವಿಭೂತಿಧಾರಣ, ತ್ರಿವಿಧ ಗುರುಲಿಂಗ ಶುದ್ಧಧ್ವ ತತ್ವಗಳು, ಮಿಶ್ರಧ್ವತತ್ವಗಳು, ವಾಯು ಅಗ್ನಿ ಪಂಚೀಕರಣ, ದಶವಿಧ ಪಾತಕಗಳು, ಭೂಲೋಕ, ಚತುರ್ದಶ ಮನುಗಳು, ಭರತಖಂಡ, ಜಂಬೂದ್ವೀಪ, ಶಾಕದ್ವೀಪ, ಕ್ಷೀರಸಮುದ್ರ, ಕಾಲಸ್ವರೂಪದ ಭೇದಗಳು, ರಾಶಿ, ನಕ್ಷತ್ರ, ಕಲೆಗಳು, ಸಂಗೀತ ಮುಂತಾಗಿ ವಿವಿಧ ಕ್ಷೇತ್ರಗಳಲ್ಲಿ ಮಾಹಿತಿಗಳನ್ನು ಒದಗಿಸುವು ಗದ್ಯ ಕೃತಿಯಿಂದಾಗಿದೆ. ‘ವಿವೇಕ ಚಿಂತಾಣಿ’ ಕನ್ನಡದ ಮೇರು ಕೃತಿ: ಕನ್ನಡ ಸಂಸ್ಕೃತಿಯ ಹಿರಿಮೆಯನ್ನು ತೋರಿಸುವ ಕೃತಿ ರತ್ನ. ಹದಿನೈದನೆಯ ಶತಮಾನದಲ್ಲಿ ಒಂದು ವಿಶ್ವಕೋಶವನ್ನು ಸಿದ್ಧಪಡಿಸುವುದು ಸಾಮಾನ್ಯ ವಿಷಯವಲ್ಲ. ಅದು ನಿಜಗುಣ ಶಿವಯೋಗಿಗಳ ಬಹುಶತ್ರುತ್ವದ ಕೈಗನ್ನಡಿಯಾಗಿದೆ.

ಶಿವರಾಮ ಕಾರಂತರ ಬಾಲ ಪ್ರಪಂಚ ಸಂಪುಟ ೧, ೨, ೩ ಮತ್ತು ೪ – ಇವುಗಳನ್ನು ಕನ್ನಡದ ಪ್ರಥಮ ಕಿರಿಯರ ವಿಶ್ವಕೋಶ ಹಾಗೂ ಹೊಸಗನ್ನಡದ ಪ್ರಥಮ ವಿಶ್ವಕೋಶಗಳೆಂದೂ ಹೇಳಬಹುದು. ಈ ಕೋಶಗಳು ವಿಭಜನೆ ಈ ರೀತಿಯಿದೆ. ಪ್ರಕೃತಿ ವಿಜ್ಞಾನ, ನಾಡು, ನೆಲೆವೀಡು, ಸಾಹಿತ್ಯ, ಕಲೆ, ಕ್ರೀಡಾವನ, ಇತಿಹಾಸ ರಂಗ, ಭೌತವಿಜ್ಞಾನ, ಯಂತ್ರಯುಗ, ವಿಶ್ವಕರ್ಮ ಸಾಧನ, ಜೀವನ ಚರಿತ್ರೆ, ಉದ್ಯೋಗ ಮತ್ತು ಸಮಾಜ ಜ್ಞಾನ, ದೇಶ ವಿದೇಶಗಳಿಂದ ಸಾವಿರಕ್ಕೆ ಮಿಕ್ಕ ಛಾಯಾ ಚಿತ್ರಗಳನ್ನು ಸಂಪಾದಿಸಿ ಮುದ್ರಿಸಲಾಗಿದೆ. ಕಾರಂತರೇ ಬಿಡಿಸಿದ ಚಿತ್ರಗಳಿವೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಸರಳವಾದ ಭಾಷೆಯಲ್ಲಿ ವಿಷಯ ನಿರೂಪಣೆಯಾಗಿದೆ. ವಿಷಯದ ಸ್ಪಷ್ಟತೆಗೆ ಸುಂದರವಾದ ಚಿತ್ರಗಳಿವೆ.

‘ಬಾಲ ಪ್ರಪಂಚ’ ಪ್ರಕಟಗೊಂಡ ಸುಮಾರು ಇಪ್ಪತ್ತು ವರ್ಷಗಳ ತರುವಾಯ ಕಾರಂತರು ಅಂತಹ ಮತ್ತೊಂದು ಸಾಹಸಕ್ಕೆ ಕೈ ಹಾಕಿದರು. ‘ವಿಜ್ಞಾನ ಪ್ರಪಂಚ’ ಎಂಬ ವಿಷಯ ವಿಶ್ವಕೋಶವು ನಾಲ್ಕು ಸಂಪುಟಗಳಲ್ಲಿ ೧೯೫೬ – ೬೪ರ ಅವಧಿಯಲ್ಲಿ ಪ್ರಕಟವಾಯಿತು. ಶಾಲೆ ದಾಟಿದ ಆದರೆ ಕಾಲೇಜು ಮೆಟ್ಟಲು ಹತ್ತದ ಓದುಗರಿಗಾಗಿ ವಿಜ್ಞಾನಕ್ಕೆ ಮಿಸಲಾದ ವಿಶ್ವಕೋಶ ಪ್ರಕಟಿಸುವ ಯೋಜನೆಯನ್ನು ಹಾಕಿಕೊಂಡರು.

‘ಬಾಲ ಪ್ರಪಂಚ’ಕ್ಕೆ ‘ದಿ ಬುಕ್‌ಆಪ್‌ನಾಲೇಜ್‌’ ಮಾದರಿಯಾದಂತೆ ಬಹುಶಃ ವಿಜ್ಞಾನ ಪ್ರಪಂಚಕ್ಕೆ ‘ಆಕ್ಸ್‌ಫರ್ಡ್ ಜೂನಿಯರ್‌ಎನ್‌ಸೈಕ್ಲೊಪೀಡಿಯ’ ಮಾದರಿಯಾಗಿರುವಂತೆ ತೋರುತ್ತದೆ. ವಿಷಯದ ವಿಗಂಡಣೆ ಹೆಚ್ಚು ಕಡಿಮೆ ಅದೇ ಮಾದರಿಯನ್ನು ಅನುಸರಿಸಿದೆ. ಮೊದಲನೆಯ ಸಂಪುಟ ‘ಈ ಜಗತ್ತು’. ಇದರಲ್ಲಿ ವಿವಿಧ ವಿಶ್ವಗಳ ಹುಟ್ಟು ಮತ್ತು ವಿಕಾಸಗಳ ಪರಿಚಯ, ಖಗೋಳ ವಿಜ್ಞಾನ, ಸಾಗರ ವಿಜ್ಞಾನ, ವಾತಾವರಣ ವಿಜ್ಞಾನ, ಭೂ ಭೌತವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಿವೆ. ಎರಡನೆಯ ಸಂಪುಟ ‘ಜೀವ ಜೀವನ’ ಇದರಲ್ಲಿ ಜೀವ ವಿಜ್ಞಾನ, ಸಸ್ಯಶಾಸ್ತ್ರ, ಜೀವನ ವಿಕಾಸ, ಪ್ರಾಗ್ಜೀವ ಜೀವನ, ಆರೋಗ್ಯ ಪ್ರಾಣಿಶಾಸ್ತ್ರ, ಮನಃಶಾಸ್ತ್ರ ಮತ್ತು ಪ್ರಕೃತಿ ವಿಜ್ಞಾನಕ್ಕೆ ಸಂಬಂಧಿತ ವಿಷಯಗಳಿವೆ.

ಮೂರನೆಯ ಸಂಪುಟ ‘ವಸ್ತು – ಚೈತನ್ಯ’. ಈ ಸಂಪುಟದಲ್ಲಿ ವಿಜ್ಞಾನದ ಇತಿಹಾಸ, ಭೌತ ವಿಜ್ಞಾನ, ಅಜೀವಕ ರಸಾಯನ, ವಿಜ್ಞಾನ ಅದ್ಭುತ ಪರಮಾಣು, ಸಾಪೇಕ್ಷ ಸಿದ್ಧಾಂತ ಮೊದಲಾದ ವಿಷಯಗಳಿವೆ. ನಾಲ್ಕನೆಯ ಸಂಪುಟ ‘ವಿಜ್ಞಾನ ಸಾಧನ’. ಈ ಸಂಪುಟದಲ್ಲಿ ಎಂಜಿನ್‌ಗಳು, ವಾಹನಗಳು, ಇಲೆಕ್ಟ್ರಾನಿಕ್‌, ಎಂಜಿನಿಯರಿಂಗ್‌, ಬದುಕಿನ ಸಮಸ್ಯೆಗಳು ಇತ್ಯಾದಿ ವಿಷಯಗಳಿವೆ.

ಈ ವಿಶ್ವಕೋಶಗಳ ವ್ಯಾಪ್ತಿ ಬೆರಗುಗೊಳಿಸುವಷ್ಟು ವಿಸ್ತಾರವಾದದ್ದು ಹಾಗೂ ವಿಷಯಗಳು ವಿವಿಧ ಮೂಲಗಳಿಂದ ಕಲೆ ಹಾಕಿದವುಗಳು. ಆದರೆ ತಿಳಿದುಕೊಳ್ಳಬೇಕಾದ ವಿಷಯಗಳು ಇಂತಹವು. ಸಾಮಾನ್ಯ ಓದುಗನಿಗೆ ಅವು ಇಂತಹ ಮೂಲಗಳಲ್ಲಿ ದೊರೆಯುತ್ತವೆ ಎಂದು ನಿಶ್ಚಯಿಸಲು ಆ ಮೂಲಗಳಿಂದ ಸಂಗ್ರಹಿಸಿದ ವಿಷಯಗಳನ್ನು ನಿರ್ದುಷ್ಟವಾಗಿ ಮತ್ತು ನಿಷ್ಕೃಷ್ಟವಾಗಿ ಗ್ರಹಿಸಲು ಪೂರ್ವಭಾವಿಯಾಗಿ ಮಾಡಬೇಕಾದ ಕೃಷಿಯ ಪ್ರಮಾಣವು ಅಗಾಧವಾದುದು. ಎರಡನೆಯದಾಗಿ ಕನ್ನಡದಲ್ಲಿ ಅದು ಸಾಮಾನ್ಯರಿಗೆ ಅರ್ಥವಾಗಬಹುದುದಾದ ತಿಳಿಯಾದ ಭಾಷೆಯಲ್ಲಿ ಚಿತ್ರಗಳ ಮೂಲಕ ವಿಷಯ ವಿವರಣೆ ಈ ವಿಷಯವನ್ನು ತಿಳಿಸುವುದು ಕಠಿಣ ಕೆಲಸ ಅಂತಹ ಸಾಹಿತ್ಯದ ಮಾದರಿ ವಿರಳವಾಗಿರುವಾಗ, ಪಾರಿಭಾಷಿಕ ಪದಗಳು ಒಂದೊಂದನ್ನು ಸಂಧಿಸಿದಾಗಲೂ ಅವುಗಳಿಗೆ ಅಪಚಾರವೆಸಗದಂತೆ ಕನ್ನಡ ಸಮಾನ ಪದಗಳನ್ನು ಹುಡುಕುವ ಇಲ್ಲವೇ ಸೃಷ್ಟಿಸುವ ಕೆಲಸವನ್ನು ಮಾಡಿಕೊಂಡು ಕನ್ನಡದಲ್ಲಿ ಏಕಾಂಗಿಯಾಗಿ ಇಷ್ಟು ವಿಷಯಗಳನ್ನು ಬರೆಯುವುದು ಸಾಹಸದ ಕೆಲಸ. ಇಂತಹ ಕಾರ್ಯ ಕೈ ಕೊಳ್ಳುವ ಧೈರ್ಯ, ಕೈಕೊಂಡ ನಂತರ ಅದನ್ನು ನಿರ್ವಹಿಸಿ ಕೊನೆಮುಟ್ಟಿಸಲು ಅಗತ್ಯವಾದಷ್ಟು ಹಟ ಮತ್ತು ಚೈತನ್ಯಗಳನ್ನು ಕಾರಂತರ ಹೊರತು ಬೇರೆಯವರಲ್ಲಿ ನೋಡುವುದು ಕಷ್ಟ.

ಕಾರಂತರ ಎರಡೂ ವಿಶ್ವಕೋಶಗಳಿದ್ದರೂ ಇನ್ನೂ ವ್ಯಾಪಕವಾದ ವಿಶ್ವಕೋಶದ ಅವಶ್ಯಕತೆ ಇದ್ದೇ ಇದೆಯೆಂದು ಪರಿಗಣಿಸಿ ೧೯೫೪ ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಕುವೆಂಪು ಅವರ ಸಲಹೆಯ ಮೇರೆಗೆ ಕನ್ನಡ ಅಧ್ಯಯನ ಸಂಸ್ಥೆಯ ಮೂಲಕ ವಿಶ್ವಕೋಶದ ಯೋಜನೆಯನ್ನು ಕಾರ್ಯಗತ ಮಾಡುತ್ತಿದೆ. ಹದಿನಾಲ್ಕು ಸಂಪುಟಗಳ ಯೋಜನೆಯಲ್ಲಿ ಈಗಾಗಲೇ ಹನ್ನೆರಡು ಸಂಪುಟಗಳು ಪ್ರಕಟವಾಗಿದ್ದು ಇನ್ನೆರಡು ಸಂಪುಟಗಳು ಪ್ರಕಟವಾಗಬೇಕಾಗಿವೆ. ಪ್ರಕಟವಾದ ಕನ್ನಡ ವಿಶ್ವಕೋಶ ಸಂಪುಟಗಳ ಒಂದು ಪಕ್ಷಿ ನೋಟವನ್ನು ಇಲ್ಲಿ ನೀಡಲಾಗಿದೆ. ಸಂಪುಟ ಒಂದರಲ್ಲಿ ‘ಅ’ ದಿಂದ ‘ಅರ್ಸೆನಿಕ್‌ ವಿಷಯ ಬಾಧೆ’ ವರೆಗೆ ಸಂಪುಟ ಎರಡರಲ್ಲಿ ‘ಆಲ, ಅರಳಿ ಜಾತಿಯ ಮರಗಳು’ ದಿಂದ ‘ಎರಾಟಾಸ್ಥೆನೀಸ್’ ವರಗೆ ಲೇಖನಗಳು ಹಬ್ಬಿವೆ.

ಸಂಪುಟ ಮೂರರಲ್ಲಿ ‘ಎರಟೋ’ದಿಂದ ‘ಕರೀಲಿಯ’ವರಗೆ ಅಕಾರಾದಿಯಾಗಿ ಲೇಖನಗಳು ಅಡಕವಾಗಿವೆ. ಈ ಸಂಪುಟದಲ್ಲಿ ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳಿಗೆ ಸಂಬಂಧಿಸಿದ ಲೇಖನಗಳು ವಿಪುಲ ಸಾಮಗ್ರಿಯಿಂದ ಕೂಡಿದ್ದು ಸರಳ ನಿರೂಪಣೆ ಹಾಗೂ ಚಿತ್ರಗಳಿಂದ ಆಕರ್ಷಕವಾಗಿವೆ. ಸಂಪುಟ ನಾಲ್ಕರಲ್ಲಿ ‘ಕರೀಷಕ’ದಿಂದ ‘ಕೂಡಲ ಸಂಗಮ’ದವರೆಗಿನ ಲೇಖನಗಳು ಇವೆ. ಕರ್ನಾಟಕವನ್ನು ಕುರಿತು ನೂರಕ್ಕಿಂತ ಹೆಚ್ಚು ಪುಟಗಳಿರುವುದು ಈ ಸಂಪುಟದ ವಿಶೇಷ. ಕರ್ನಾಟಕ ಶಬ್ದದ ನಿಷ್ಪತ್ತಿ, ಕರ್ನಾಟಕದ ಇತಿಹಾಸ, ಸಂಸ್ಕತಿ, ರಾಜಕೀಯ, ಕಲೆ, ಸಾಹಿತ್ಯ, ಜನಸಂಖ್ಯೆ, ಕೈಗಾರಿಕೆ, ಅಡಳಿತ, ಶಿಕ್ಷಣ ಸಂಸ್ಥೆಗಳು, ಹವಾಮಾನ, ಅಂಕಿ – ಅಂಶ, ಇತ್ಯಾದಿ ಮಾಹಿತಿಗಳು ನಕ್ಷೆ ಹಾಗೂ ಚಿತ್ರ ಸಹಿತವಾಗಿ ಮೂಡಿಬಂದಿವೆ. ಸಂಪುಟ ಐದರಲ್ಲಿ ‘ಕೂಡಲಿ’ಯಿಂದ ‘ಗಣ’ದವರೆಗಿನ ಲೇಖನಗಳಿವೆ. ಈ ನಾಲ್ಕು ಮತ್ತು ಐದನೆಯ ಸಂಪುಟಗಳಲ್ಲಿ ಕರ್ಣಾಟಕವನ್ನು ಕುರಿತು ಕರ್ಣಾಟಕದ ಅನೇಕ ಸಾಹಿತಿಗಳನ್ನು ಕುರಿತು ಲೇಖನಗಳು ಸೇರ್ಪಡೆಯಾಗಿವೆ.

ಸಂಪುಟ ಆರರಲ್ಲಿ ‘ಗಣಕ’ದಿಂದ ಹಿಡಿದು ‘ಗ್ವಾಡ್ಲೂಪ್’ವರೆಗೆ ನೂರಾರು ವಿಷಯಗಳನ್ನು ಕುರಿತ ಬರಹೆಗಳಿವೆ. ಕನ್ನಡ ಸಾಹಿತ್ಯದ ದೃಷ್ಟಿಯಿಂದ ಗಮನದಲ್ಲಿಟ್ಟು ಕೊಳ್ಳಬೇಕಾದ ಗದಗ, ಗುಬ್ಬಿ, ಗೂಳೂರು ಇತ್ಯಾದಿ ಸ್ಥಳಗಳನ್ನು ಕುರಿತ ವಿಚಾರಗಳು. ಗಳಗನಾಥ ಗೋವಿಂದ ಪೈ, ಡಿ.ವಿ.ಗುಂಡಪ್ಪ, ಗೋಕಾಕ ಮೊದಲಾದ ಸಾಹಿತಿಗಳನ್ನು ಕುರಿತ ಸಂಗತಿಗಳು, ಗದ್ಯ ಸಾಹಿತ್ಯ, ಗಾದೆಗಳು, ಗೀತರೂಪಕಗಳು, ಗಮಕ ಕಲೆ ಮೊದಲಾದ ವಿಷಯಗಳನ್ನು ಕುರಿತ ಬರೆಹಗಳು. ಗುಜರಾತಿ ಸಾಹಿತ್ಯ, ಗ್ರೀಕ್ ಸಾಹಿತ್ಯದ ಪರಿಚಯ, ಗಮಟೆ, ಗಾರ್ಕಿ, ಗೋಲ್ಡ್‌ಸ್ಮಿತ್‌, ಗುಂಡರ್ಟ್ ಮೊದಲಾದ ವಿದೇಶಿ ವಿದ್ವಾಂಸರನ್ನು ಕುರಿತು ಲೇಖನಗಳು ಹೀಗೆ ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ಲೇಖನಗಳು ಈ ಸಂಪುಟದಲ್ಲಿ ಸೇರಿವೆ. ಸಂಪುಟ ಏಳರಲ್ಲಿ ‘ಗ್ವಾನಾಕೋ’ ಎಂಬ ಪದದಿಂದ ‘ಜಲಸಸ್ಯಗಳು’ ಎಂಬ ಶಬ್ದದವರೆಗೆ ವಿವಿಧ ವಿಷಯಗಳನ್ನು ಕುರಿತ ಲೇಖನಗಳು ಹರಡಿವೆ. ಇವುಗಳಲ್ಲಿ ಸುಮಾರು ಮೂವತ್ತಕ್ಕಿಂತ ಹೆಚ್ಚಿನ ಬರೆಹಗಳು ಕನ್ನಡ ಹಾಗೂ ವಿವಿಧ ಭಾಷಾ ಸಾಹಿತ್ಯಗಳಿಗೆ ಸಂಬಂಧಪಟ್ಟವುಗಳಾಗಿವೆ. ಜನಪದ ಸಾಹಿತ್ಯ ಕುರಿತು ಬರೆಹಗಳು ಸುಮಾರು ಐವತ್ತು ಪುಟಗಳಷ್ಟು ಇದೆ.

ಸಂಪುಟ ಎಂಟರಲ್ಲಿ ‘ಜಲಾಂತರ್ಗಾಮಿ’ಯಿಂದ ‘ಡೇಲಿಯ’ದವರೆಗೆ ಹಲವಾರು ವ್ಯಕ್ತಿ, ಪ್ರಾಣಿ, ಸಂಗತಿಗಳನ್ನು ಕುರಿತು ಲೇಖನಗಳಿವೆ. ಡಾಂಟೆ, ಟೆನಿಸನ್‌ಮೊದಲಾದ ಶ್ರೇಷ್ಠ ಕವಿಗಳನ್ನು ಕುರಿತು ಉತ್ತಮ ಬರೆಹಗಳಿವೆ. ಡಾಂಟೆಯನ್ನು ಕುರಿತ ಬರೆಹ ವ್ಯಾಪಕವಾಗಿದ್ದು ಸಾಕಷ್ಟು ವಿವರಗಳನ್ನು ಒದಗಿಸುತ್ತದೆ. ಸಂಪುಟದ ಕೊನೆಯಲ್ಲಿ ವಿಷಯ ಸೂಚಿಯನ್ನು ನೀಡಲಾಗಿದೆ. ಸಂಪುಟ ಒಂಬತ್ತರಲ್ಲಿ ‘ಡೇವಿಡ್‌’ ಎಂಬ ಪದದಿಂದ ‘ಧ್ವನಿ ಶೋಧಕ’ ಎಂಬ ಪದದವರೆಗೆ ಹಲವಾರು ವಿಷಯಗಳನ್ನು ಕುರಿತು ಲೇಖನಗಳಿವೆ. ತಮಿಳು ಲಿಪಿ, ತಮಿಳು ಛಂದಸ್ಸು, ತಮಿಳು ಸಾಹಿತ್ಯದ ಪರಿಚಯದ ಜೊತೆಗೆ ದ್ರಾವಿಡ ಭಾಷೆಗಳ ಕುರಿತ ಪರಿಚಯವೂ ನಮಗೆ ದೊರೆಯುತ್ತದೆ.

ಹತ್ತನೆಯ ಸಂಪುಟವು ‘ನ’ ದಿಂದ ಪ್ರಾರಂಭವಾಗಿದೆ. ಕಡೆಯ ಪದ ‘ಪಾರಿಜಾತ’ ನಕ್ಷತ್ರವನ್ನು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಕುರಿತ ಲೇಖನಗಳಿವೆ. ಇದರಂತೆ ನದಿ, ನರ, ನಾಟಕ, ನಾಯಿ, ನಿದ್ರೆ, ನೃತ್ಯ, ನೀರು, ನೀರಾವರಿ, ಪತ್ರಿಕೆ, ಮುಂತಾದ ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿವೆ. ‘ಪಾರಿವಾಳ’ದಿಂದ ಆರಂಭವಾಗಿ ‘ಬಳ್ಳಿಗಾವೆ’ಗೆ ಮುಗಿಯುವ ಹನ್ನೊಂದನೆಯ ಸಂಪುಟದಲ್ಲಿ ಪುರಾತನ ಶಿಲಾಯುಗ, ಪೆಟ್ರೋಲಿಯಂ, ಪೊಲೀಸ್‌, ಪ್ರಾಕೃತ ಭಾಷೆಘಳು ಮುಂತಾದ ಲೇಖನಗಳಿವೆ. ಹನ್ನೆರಡನೆಯ ಸಂಪುಟದ ಮೊದಲ ಲೇಖನ ‘ಬಾಂಗ್ಲಾದೇಶ’, ಕೊನೆಯದು ‘ಮಣಿಪುರ.’ ಈ ಸಂಪುಟದಲ್ಲಿ ಭಾರತ ಮತ್ತು ಅದಕ್ಕೆ ಸಂಬಂಧಿಸಿದ ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿ ಇನ್ನೂರು ಪುಟಗಳಷ್ಟಿದೆ. ಬುದ್ಧ, ಬೌದ್ಧಧರ್ಮ, ಬ್ರಹ್ಮಾಂಡ ವಿಜ್ಞಾನ, ಬ್ರಹ್ಮಾಂಡ ಸೃಷ್ಟಿ ವಿಜ್ಞಾನ ಮೊದಲಾದುವನ್ನು ಕುರಿತ ಲೇಖನಗಳಿವೆ. ಬೇಂದ್ರೆ, ಬಾನುಲಿ, ಬೀಜಗಣಿತ, ಬೆಂಗಳೂರು, ಬ್ಯಾಂಕಿಂಗ್‌ವ್ಯವಸ್ಥೆ, ಭರತನಾಟ್ಯ, ಭಾವಗೀತೆ, ಭಾಷಾಂತರ ಕಲೆ, ಭೂವಿಜ್ಞಾನ ಮತ್ತು ಭೌತವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳಿವೆ.

ಕನ್ನಡದಲ್ಲಿ ಆಧನಿಕ ಅರ್ಥದಲ್ಲಿ ‘ಬ್ರಿಟಾನಿಕಾ ವಿಶ್ವಕೋಶ’ದ ಮಾದರಿಯಲ್ಲಿ ವಿಶ್ವಕೋಶ ರೂಪುಗೊಳ್ಳುತ್ತಿದ್ದು ಅದರಿಂದ ಕನ್ನಡಿಗರಿಗೆ ಆಗುತ್ತಿರುವ, ಆಗಲಿರುವ ಪ್ರಯೋಜ ಅಪಾರ. ಇಂತಹ ಬೃಹತ್‌ಕಾರ್ಯದಲ್ಲಿ ಅಲ್ಲೊಂದು ಇಲ್ಲೊಂದು ಕೊರತೆಗಳಿರಲು ಸಾಧ್ಯ. ಆದರೂ ಅದು ಆ ದಿಕ್ಕಿನಲ್ಲಿ ನಡೆಯುತ್ತಿರುವ ಪ್ರಥಮ ಪ್ರಯತ್ನವೆನ್ನುವುದನ್ನು ಗಮನಿಸಿದಾಗ ನಡೆಯುತ್ತಿರುವ ಕೆಲಸ ಬಹಳ ಮಹತ್ವದ್ದು. ಜ್ಞಾನದ ಪ್ರಮುಖ ಲಕ್ಷಣವೆಂದರೆ ಅದರ ನಿರಂತರ ಬೆಳವಣಿಗೆ. ಜ್ಞಾನದ ಆಕರಗಳಾದ ವಿಶ್ವಕೋಶಗಳು ಕಾಲಕಾಲಕ್ಕೆ ನವೀಕರಣಗೊಳ್ಳುತ್ತಾ ಹೋಗಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಈಗಾಗಲೇ ನುಸುಳಿರುವ ಹಲವಾರು ದೋಷಗಳನ್ನು ತಿದ್ದಲು ಅವಕಾಶವಿರುತ್ತದೆ. ಏನೇ ಇರಲಿ ಇಂತಹ ಬೃಹತ್‌ಯೋಜನೆಯನ್ನು ಕೈಗೊಂಡು ಕನ್ನಡಿಗರು ವಿಶ್ವಕೋಶವನ್ನು ಕಾಣುವಂತೆ ಮಾಡಿದ್ದಕ್ಕಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಹೃತ್ಫೂರ್ವಕ ಅಭಿನಂದನೆಗಳು ಸಲ್ಲುತ್ತವೆ.

ಕನ್ನಡದಲ್ಲಿ ಶಿವರಾಮ ಕಾರಂತರಿಂದ ರಚಿತವಾದ ‘ಬಾಲ ಪ್ರಪಂಚ’ದ ನಂತರ ಹೊರಬಂದ ಕಿರಿಯರ ವಿಶ್ವಕೋಶವೇ ‘ಜ್ಞಾನ ಗಂಗೋತ್ರಿ’. ಬಾಲ ಪ್ರಪಂಚ ಏಕವ್ಯಕ್ತಿ ಸಾಹಸದ ಫಲವಾದರೆ ಜ್ಞಾನಗಂಗೋತ್ರಿಯು ಹಲವು ಕೈಗಳು ಕೂಡಿ ನಿರಂಜನರ ಪ್ರಧಾನ ಸಂಪಾದಕತ್ವದಲ್ಲಿ ಹೊರಬಂದ ವ್ಯವಸ್ಥಿತ ಕಿರಿಯ ಕೋಶ. ಜ್ಞಾನಗಂಗೋತ್ರಿಯ ಮುಂದೆ ನಾಲ್ಕು ಉದ್ದೇಶಗಳಿವೆ. ಏನು? ಏಕೆ? ಎಲ್ಲಿ? ಎತ್ತ? ಇಂತಹ ಪ್ರಶ್ನೆಗಳನ್ನೆತ್ತಿ ಮಕ್ಕಳಿಗೆ ಉತ್ತರ ನೀಡಲು ಹೆತ್ತವರಿಗೆ ಜ್ಞಾನಗಂಗೋತ್ರಿ ನೆರವಾಗುತ್ತದೆ. ವಿದ್ಯಾರ್ಥಿಯ ಮನಸ್ಸನ್ನು ಸೆರೆ ಹಿಡಿದು ಅವರ ಜ್ಞಾನ ದಾಹವನ್ನು ತಣಿಸಿ ಹೆಚ್ಚಿನ ವಿಷಯಗಳಿಗಾಗಿ ಆಕರ ಗ್ರಂಥಗಳತ್ತ ಶಿಕ್ಷಕರನ್ನು , ಪಾಲಕರನ್ನು ಪ್ರಚೋದಿಸುತ್ತದೆ. ಶಿಕ್ಷಕರನ್ನು ಪಾಲಕರನ್ನು ಗಮನದಲ್ಲಿಟ್ಟುಕೊಂಡು ಲೇಖನಗಳಲ್ಲಿ ಸರಳವೂ ಆಕರ್ಷಕವೂ ಆದ ಶೈಲಿಯನ್ನು ಬಳಸಲು ಯತ್ನಿಸಲಾಗಿದೆ.

‘ಜ್ಞಾನ ಗಂಗೋತ್ರಿ’ಯ ಮೊದಲ ಸಂಪುಟ ‘ಮನುಕುಲದ ಕಥೆ’ಯಲ್ಲಿ ಬರುವ ಸುಮಾರು ೬೦೦ ಲೇಖನಗಳಿವೆ. ಗವಿ ಜೀವನದಿಂದ ಚಂದ್ರಯಾನದ ತನಕ ಬರುವ ಧರ್ಮಗಳು ತತ್ವಜ್ಞಾನಗಳು, ರಾಜ್ಯಗಳ ಉದಯ, ರಾಜಕೀಯ ವ್ಯವಸ್ಥೆ, ವ್ಯಾಪಾರ, ವಾಣಿಜ್ಯ, ಕೈಗಾರಿಕೆ, ಭೂಗೋಳ, ಇತಿಹಾಸ ಪ್ರಸಿದ್ಧ ಸ್ತ್ರೀ – ಪುರುಷರ ಕುರಿತ ಲೇಖನಗಳಿವೆ. ಭಾರತವನ್ನೊಳಗೊಂಡು ಮಾನವ ಲಕ್ಷಾಂತರ ವರ್ಷಗಳಲ್ಲಿ ಮಾಡಿದ ಮಹತ್ಸಾಧನೆಗಳ ಚಿತ್ರಣಗಳು ಈ ಲೇಖನಗಳಲ್ಲಿ ಸಿಗುತ್ತವೆ. ಅವನು ಕಟ್ಟಿದ, ಕೆಡವಿದ ಸಾಮ್ರಾಜ್ಯಗಳ, ರೂಪಿಸಿದ ರಾಷ್ಟ್ರಗಳ ಪರಿಚಯ ಇಲ್ಲಿದೆ. ಸಂಪುಟ ಎರಡು ‘ಜೀವ ಜಗತ್ತು’. ಇದರಲ್ಲಿ ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ, ಶರೀರ ವಿಜ್ಞಾನ, ಮನೋವಿಜ್ಞಾನ, ವೈದ್ಯ, ಶಸ್ತ್ರ ಚಿಕಿತ್ಸೆ, ಕೃಷಿ, ಮತ್ಸೋದ್ಯಮ, ತೋಟಗಾರಿಕೆ, ಪ್ರಖ್ಯಾತ ವಿಜ್ಞಾನಿಗಳನ್ನು ಕುರಿತು ಲೇಖನಗಲೀವೆ. ಸಂಪುಟ ಮೂರರಲ್ಲಿ ಭೌತ ಜಗತ್ತು, ಭೌತವಿಜ್ಞಾನ, ರಸಾಯನ ವಿಜ್ಞಾನ, ಖಗೋಲ ವಿಜ್ಞಾನ, ಗಣಿತ, ಭೂವಿಜ್ಞಾನ ಹಾಗೂ ಈ ಕ್ಷೇತ್ರಗಳ ಪ್ರಸಿದ್ಧ ವಿಜ್ಞಾನಿಗಳನ್ನು ಕುರಿತು ಲೇಖನಗಳಿವೆ.

ಸಂಪುಟ ನಾಲ್ಕು ‘ಯಂತ್ರ ಜಗತ್ತು’. ಇದರಲ್ಲಿ ಇಂಜಿನಿಯರಿಂಗ್‌, ತಾಂತ್ರಿಕತೆ, ಲಘು ಮತ್ತು ಬೃಹತ್ಪ್ರಮಾಣದ ಕೈಗಾರಿಕೋದ್ಯಮಗಳು, ದೂರಸಂಪರ್ಕ ಸಾಧನ, ಎಲೆಕ್ಟ್ರಾನಿಕ್‌ಹಾಗೂ ಈ ಕ್ಷೇತ್ರಗಳ ಕೀರ್ತಿ ಶಾಲಿಗಳನ್ನು ಕುರಿತು ಬರೆಹಗಳಿವೆ. ಸಂಪುಟ ಐದು ‘ಕಲೆ ಸಾಹಿತ್‌ಉ’. ಇದರಲ್ಲಿ ಪ್ರಖ್ಯಾತ ಕಲಾವಿದರ, ಸಾಹಿತಿಗಳ ಪರಿಚಯವಿದೆ. ಅದರಂತೆ ಭಾರತೀಯ ಮತ್ತುಇ ಗ್ರೀಕ್‌ಮಹಾಕಾವ್ಯಗಳು, ನೃತ್ಯ, ಸಂಗೀತ, ನಾಟಕ, ಚಿತ್ರಕಲೆ, ಶಿಲ್ಪಕಲೆ ಹಾಗೂ ವಾಸ್ತುಶಿಲೆಯನ್ನು ಕುರಿತ ಲೇಖನಗಳಿವೆ. ಈ ಸಂಪುಟದ ಅರವತ್ತೆರಡು ಪುಟಗಳ ಸಮೀಕ್ಷೆ ತುಂಬ ಹೃದ್ಯಯವಾಗಿದ್ದು ನಿರೂಪಣೆಯ ಶೈಲಿ ಆಕರ್ಷಕವಾಗಿದೆ. ಅಚ್ಚರಿ ತರುವ ವಿಷಯ ವ್ಯಾಪ್ತಿ, ಆಕರ್ಷಕ ಚಿತ್ರಗಳು ಇವು ಕಿರಿಯರಿಗೆ ಮಾತ್ರವಲ್ಲದೆ ಎಲ್ಲರಿಗೂ ಸವಿಯಲರ್ಹವಾಗಿವೆ. ಸಂಪುಟ ಆರು ‘ಕ್ರೀಡೆ – ಮನೋಲ್ಲಾಸ’. ಇದರಲ್ಲಿ ಜಗತ್ತಿನ ಕ್ರೀಡೆಗಳು, ಆಟಗಳು, ಶರೀರ ಶಿಕ್ಷಣ, ಪ್ರಸಿದ್ಧ ಕ್ರೀಡಾ ಪಟುಗಳು, ಒಲಂಪಿಕ್‌ವೀರರು, ಹವ್ಯಾಸಗಳು, ಮನರಂಜನೆ ಕುರಿತ ಲೇಖನಗಳಿವೆ. ಸಂಪುಟ ಏಳು ‘ಭಾರತದ ಕಥೆ ಇದರಲ್ಲಿ ಚರಿತ್ರೆ ಕಾಲಾವಧಿಯಿಂದ ಗಾಂಧಿಯುಗದ ತನಕ ಭಾರತ ನಡೆದು ಬಂದ ದಾರಿಯನ್ನು ಚಿತ್ರಿಸುತ್ತದೆ. ಪ್ರವಾಸಿಗರು ಕಂಡ ಭಾರತ, ಪ್ರಾಚೀನ ಭಾರತದಲ್ಲಿ ವಿಜ್ಞಾನ, ಸಾಹಿತ್ಯ, ಪುರಾಣ, ವ್ಯಕ್ತಿಗಳು,ಧರ್ಮೋಪದೇಶಕರು, ರಾಷ್ಟ್ರ ನಿರ್ಮಾಪಕರು, ಆಡಳಿತಗಾರರು, ಭಾರತದ ಭೂಗೋಳ, ಕೃಷಿ, ಕೈಗಾರಿಕೋದ್ಯಮ ಕುರಿತು ಸಚಿತ್ರ ಲೇಖನಗಳಿವೆ. ಒಟ್ಟಿನಲ್ಲಿ ಈ ಕಿರಿಯರ ವಿಶ್ವಕೋಶ ಕಿರಿಯರಿಗಷ್ಟೇ ಅಲ್ಲದೆ ದೊಡ್ಡವರಿಗೂ ತುಂಬ ಉಪಯುಕ್ತವಾದ ಕೃತಿ. ಇದರ ಸಂಪಾದಕರು ಹಾಗೂ ಪ್ರಕಾಶಕರಾದ ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ ಅಭಿನಂದನಾರ್ಹರಾಗಿದ್ದಾರೆ.

ಮೈಸೂರು ವಿಶ್ವವಿದ್ಯಾಲಯವು ಕನ್ನಡ ವಿಶ್ವಕೋಶ ಜೊತೆಯಲ್ಲಿಯೇ ‘ಕರ್ನಾಟಕ ವಿಷಯ ವಿಶ್ವಕೋಶ’ ಯೋಜನೆಯನ್ನು ತೆಗೆದುಕೊಂಡು ೧೯೭೯ರಲ್ಲಿ ಮುಗಿಸಿದೆ. ಈ ಸಂಪುಟದಲ್ಲಿ ಒಟ್ಟು ೧೯೭೯ ಲೇಖನಗಳಿವೆ. ಅಲ್ಲದೆ ೮೦೭ರಲ್ಲಿ ಛಾಯಾಚಿತ್ರಗಳು, ೪೧ ರೇಖಾಚಿತ್ರಣಗಳು, ೩೩ ಭೂಪಟ ಹಾಗೂ ನಕ್ಷೆಗಳು ಸೇರಿವೆ. ಈ ಸಂಪುಟದಲ್ಲಿ ಕ್ರೀಡೆ, ಕಲೆ, ಸಾಹಿತ್ಯ, ರಾಜಕೀಯ ಮೊದಲಾದ ಕ್ಷೇತ್ರಗಳ ಆತುಲವಾದ ಕೆಲಸ ಮಾಡಿದ ಗಣ್ಯ ವ್ಯಕ್ತಿಗಳ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕುರಿತ ಬರೆಹಗಳಿವೆ. ಕರ್ನಾಟಕದ ಪ್ರತಿ ಜಿಲ್ಲೆ, ತಾಲ್ಲೂಲುಗಳಿಗೆ ಸಂಬಂಧಿಸಿದ ಲೇಖನಗಳಿವೆ. ಮುಖ್ಯ ಗ್ರಾಮಗಳನ್ನು ಕುರಿತು ಲೇಖನಗಳೂ ಇವೆ. ಪ್ರಮುಖ ನದಿ, ಬೆಟ್ಟ, ಬೆಳೆ ಇಂತಹ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಲೇಖನಗಳಿವೆ. ಪ್ರಮುಖ ರಾಜವಂಶಗಳಿಗೆ ಸಂಬಂಧಿಸಿದ ಮುಖ್ಯ ಚಾರಿತ್ರಿಕ ವ್ಯಕ್ತಿಗಳ ಬಗೆಗೆ ಬೇರೆ ಬೇರೆ ಲೇಖನಗಳಿವೆ. ಭಾಷೆ, ಸಾಹಿತ್ಯ, ಪತ್ರಿಕೋದ್ಯಮ ಮುಂತಾದ ವಿಷಯಗಳಲ್ಲಿ ಸಮೀಕ್ಷಾ ಲೇಖನಗಳಲ್ಲದೆ ಗಮನಾರ್ಹ ವಿಷಯಗಳಿಗೆಲ್ಲ ಪ್ರತ್ಯೇಕ ನಮೂದುಗಳಿರುತ್ತದೆ. ಈ ಪ್ರಕಟಣೆ ಕನ್ನಡ ವಿಶ್ವಕೋಶ ಕ್ಷೇತ್ರದಲ್ಲಿ ಒಂದು ಮೈಲು ಗಲ್ಲೆಂದು ಧಾರಾಳವಾಗಿ ಹೇಳಬಹುದು.

ಕನ್ನಡ ಸಾಹಿತ್ಯ ಪರಿಷತ್ತು ಡಾ. ಚಂದ್ರಶೇಖರ ಕಂಬಾರರ ಸಂಪಾದಕತ್ವದಲ್ಲಿ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ‘ಕನ್ನಡ ಜಾನಪದ ವಿಶ್ವಕೋಶ’ ಎಂಬ ಎರಡು ಸಂಪುಟಗಳನ್ನು ಪ್ರಕಟಿಸಿದೆ. ಈ ಸಂಪುಟಗಳಲ್ಲಿ ಕನ್ನಡ ನಾಡಿನ ಸಂಪ್ರದಾಯ, ಕಥೆ, ಹಾಡು, ಗಾದೆ, ಬಯಲಾಟ, ಜನಪದ ಆಚರಣೆ – ನಂಬಿಕೆ, ಜನಪದ ಆಟಗಳು, ಶಿಶು ಪ್ರಾಸಗಳು, ಐತಿಹ್ಯಗಳು, ಶಕುನಗಳು, ಪುರಾಣ ವ್ಯಕ್ತಿಗಳು, ಪ್ರಾಣಿ – ಪಕ್ಷಿಗಳು, ಮಳೆ – ಗಾಳಿ – ನಕ್ಷತ್ರ, ನೃತ್ಯ, ಲಾವಣಿಗಳು, ಹಬ್ಬ – ಜಾತ್ರೆ, ಆಹಾರ ಸಂಪ್ರದಾಯಗಳು, ಶವಸಂಸ್ಕಾರ ಪದ್ಧತಿಗಳು, ಸಾಹಿತಿ ಕಲಾವಿದರು ಮೊದಲಾದವನ್ನು ಕುರಿತ ಬರಹೆಗಳಿವೆ. ಈ ಕೋಶ ಜಾನಪದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಜನಪದ ಸಾಹಿತ್ಯದಲ್ಲಿ ಆಸಕ್ತಿಯಿದ್ದವರನ್ನೂ ಗಮನದಲ್ಲಿಟ್ಟುಕೊಂಡಿರುವುದರಿಂದ ಜನಪದ ಶಾಸ್ತ್ರಕ್ಕೆ ಸಂಬಂಧಪಟ್ಟ ಲೇಖನಗಳನ್ನು, ಕಲ್ಪನೆಗಳನ್ನು, ಥಿಯರಿಗಳನ್ನು, ವಿದೇಶಗಳ ಜಾನಪದ ಸ್ವರೂಪವನ್ನು ಅವುಗಳ ಅಧ್ಯಯನ ಸಾಧನೆಗಳನ್ನು ತುಸು ದೀರ್ಘವಾಗಿಯೇ ಹೇಳಿದ್ದಾರೆ. ಈ ಕೋಶಕ್ಕೆ ಮಾರಿಯಾ ಲೀಟ್‌ಅವರ ‘ಸ್ಟ್ಯಾಂಡಡ್‌ಡಿಕ್ಷನರಿ ಆಫ್‌ಪೋಕ್‌ಲೋರ್‌’ ‘ಮೈಥಾಲಜಿ ಅಂಡ್‌ಲೆಜೆಂಡ್‌’ ಮಾದರಿಯಾಗಿದೆ. ಇಂತಹ ಜಾನಪದ ವಿಶ್ವಕೋಶವನ್ನು ಪ್ರಕಟಿಸಿದ ಕನ್ನಡ ಸಾಹಿತ್ಯ ಪರಿಷತ್ತು ಸ್ತುತ್ಯಕಾರ್ಯವೆಸಗಿದೆ. ಗೊ. ರು. ಚನ್ನಬಸಪ್ಪನರು ‘ಕರ್ನಾಟಕ ಜನಪದ ಕಲೆಗಳ ಕೋಶ’ವನ್ನು ರಚಿಸಿದ್ದಾರೆ. (೧೯೭೭).

ಹಂಪಿಯ ಕನ್ನಡ ವಿಶ್ವವಿದ್ಯಾಲಯವು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ‘ವಿಶ್ವಕೋಶ ಮಾಲೆ’ಯನ್ನು ಕೈಗೆತ್ತಿಕೊಂಡಿತು. ಈ ಮಾಲೆಯ ಮೊದಲನೆಯ ಕೋಶವಾಗಿ ‘ಭಾಷೆ’ ವಿಶ್ವಕೋಶ ಪ್ರಕಟವಾಯಿತು. ಕನ್ನಡ ಭಾಷಾಧ್ಯಯನವನ್ನು ಕೇಂದ್ರವಾಗಿಟ್ಟುಕೊಂಡು ಸಾಮಾನ್ಯ ಭಾಷಾಶಾಸ್ತ್ರ, ಐತಿಹಾಸಿಕ, ತೌಲನಿಕ, ಸಾಮಾಜಿಕ ಭಾಷಾಶಾಸ್ತ್ರದ ಎಲ್ಲ ವಿವರಗಳು ಈ ವಿಶ್ವಕೋಶದಲ್ಲಿ ಸೇರ್ಪಡೆಯಾಗಿರುವುದು ಮೆಚ್ಚಬೇಕಾದ ಅಂಶ. ಸಂಪಾದಕರು ಈ ವಿಶ್ವಕೋಶ ರಚನೆಯಲ್ಲಿ ಡೇವಿಡ್‌ಕ್ರಿಸ್ಟಲ್‌ಅವರ ‘ದ ಕೇಂಬಿಡ್ಜ್‌ಎನ್‌ಸೈಕ್ಲೋಪಿಡಿಯಾ ಆಫ್‌ಲ್ಯಾಂಗ್ವೇಜ್‌’ ಕೃತಿಯನ್ನು ಮಾದರಿಯಾಗಿಟ್ಟುಕೊಂಡಿದ್ದಾರೆ. ಈ ವಿಶ್ವಕೋಶದಲ್ಲಿ ನಮ್ಮ ತಿಳಿವಿನಲ್ಲಿ ಭಾಷೆ, ಭಾಷೆಯೆಂಬ ಕನ್ನಡಿ, ಭಾಷೆಯ ರಚನೆ, ಮಾತಾಡುವುದು ಮತ್ತು ಕೇಳಿಸಿಕೊಳ್ಳುವುದು, ಓದು, ಬರೆಹ, ಸಂಕೇತ ಭಾಷೆ, ಭಾಷೆಯ ಕಲಿಕೆ, ಮೆದುಳು, ವಿಕಲತೆ, ಲೋಕದ ಭಾಷೆಗಳು, ಲೋಕದಲ್ಲಿ ಭಾಷೆಗಳು ಎಂಬ ಹತ್ತು ಅಧ್ಯಾಯಗಳಿವೆ. ಪ್ರತಿ ಅಧ್ಯಾಯದಲ್ಲಿಯೂ ಗ್ರಂಥಾಧ್ಯಯನಕ್ಕೆ ಅನುಕೂಲಾಗುವಂತೆ ಐದು ಅನುಬಧಗಳಿವೆ.

‘ಕರಕುಶಲ ಕಲೆಗಳು’ ಎಂಬುದು ಕನ್ನಡ ವಿಶ್ವ ವಿದ್ಯಾಲಯದ ಎರಡನೆಯ ವಿಶ್ವಕೋಶವಾಗಿದೆ. ಪಾರಂಪರಿಕ ಮತ್ತು ಆಧುನಿಕ ಕರಕುಶಲ ಕಲೆಗಳ ಸ್ವರೂಪವನ್ನು ಈ ವಿಶ್ವಕೋಶದ ನಮೂದದಲ್ಲಿ ಚರ್ಚಿಸಲಾಗಿದೆ. ಈ ಕೋಶದಲ್ಲಿ ಆರು ಅಧ್ಯಾಯಗಳಿವೆ. ಕರಕುಶಲ ಕಲೆಗಳ ಪರಂಪರೆ ಮತ್ತು ಇತಿಹಾಸ, ಅಲಂಕಾರ ಸಂಬಂಧಿ ಕರಕುಶಲ ಕಲೆಗಳ ಪರಂಪರೆ ಮತ್ತು ಇತಿಹಾಸ, ಅಲಂಕಾರ ಸಂಬಂಧಿ ಕರಕುಶಲ ಕಲೆಗಳು, ಆರಾಧನಾ ಸಂಬಂಧಿ ಕರಕುಶಲ ಕಲೆಗಳು, ಗೃಹೋಪಯೋಗಿ ಕರಕುಶಲ ಕಲೆಗಳು, ಮನರಂಜನಾ ಸಂಬಂಧಿ ಕರಕುಶಲ ಕಲೆಗಳು, ವ್ಯವಸಾಯ ಸಂಬಂಧಿ ಕರಕುಶಲ ಕಲೆಗಳು. ಪ್ರತಿಯೊಂದು ಅಧ್ಯಾಯದಲ್ಲೂ ಉಪವಿಭಾಗಗಳಿವೆ. ಪ್ರತಿಯೊಂದು ನಮೂದು ಕರಕುಶಲ ಕಲೆಯ ಜನರ ಬದುಕಿನ ವಿವರವನ್ನು ನೀಡಿದೆ ಎಂಬುದು ಮೆಚ್ಚಬೇಕಾದ ಅಂಶ.

‘ಧರ್ಮ’ ಇದು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಮೂರನೆಯ ವಿಶ್ವಕೋಶವಾಗಿದೆ. ಇಲ್ಲಿಯ ನಮೂದುಗಳು ಎಲ್ಲ ಧರ್ಮಕ್ಕೂ ಸಂಬಂಧಪಟ್ಟಂತೆ ವಿಷಯಾನುಸಾರಿಯಾಗಿವೆ. ಇದರಲ್ಲಿ ಅನುಭಾವ, ಅಪಾಂಥಿಕತೆ, ಅರ್ಥ ವ್ಯವಸ್ಥೆ, ಅವತಾರ ಮತ್ತು ಪುನರುತ್ಥಾನ, ಆದರ್ಶರಾಜ್ಯ, ಆಧುನಿಕ ಚಿಂತಕರು, ಆಧುನಿಕ ಧಾರ್ಮಿಕ ಪಂಥಗಳು, ಆಸ್ತಿಕತೆ ಮತ್ತು ನಾಸ್ತಿಕತೆ, ಏಕ ಮತ್ತು ಬಹುದೇವತಾವಾದ, ಕಾನೂನು, ಜನಪದಧರ್ಮ, ದೇವ ಮಾನವರು ಇಂತಹ ೬೩ ಉಲ್ಲೇಖಗಳಿವೆ. ಆಯಾ ಲೇಖನದ ಅಡಿಯಲ್ಲಿಯೇ ಗ್ರಂಥಸೂಚಿಯನ್ನು ಕೊಡಲಾಗಿದೆ.

‘ಚರಿತ್ರೆ’ ‘ವಿಶ್ವಕೋಶ’ ಕನ್ನಡ ವಿಶ್ವವಿದ್ಯಾಲಯದ ನಾಲ್ಕನೆಯ ವಿಶ್ವಕೋಶವಾಗಿದೆ. ಏಕೀಕರಣಗೊಂಡ ದಿನದಿಂದ ಇಂದಿನವರೆಗೆ ಕರ್ನಾಟಕವು ತನ್ನ ಅನನ್ಯತೆಯನ್ನು ಮತ್ತಷ್ಟು ಸ್ಪಷ್ಟಪಡಿಸಿಕೊಂಡಿದೆ. ಪ್ರಸ್ತುತ ವಿಶ್ವಕೋಶವು ಪ್ರಾಚೀನ ಮತ್ತು ಮಧ್ಯಯುಗದ ಚರಿತ್ರೆಗೆ ಸಂಬಂಧಿಸಿದ ಅನೇಕ ವಿವರಗಳನ್ನು ಚರ್ಚಿಸಿದರೂ ಬಹುತೇಕ ಆಧುನಿಕ ಚರಿತ್ರೆಯನ್ನು ವಿಶ್ಲೇಷಿಸಿದ ಅನೇಕ ವಿವರಗಳನ್ನು ಚರ್ಚಿಸಿದರೂ ಬಹುತೇಕ ಆಧುನಿಕ ಚರಿತ್ರೆಯನ್ನು ವಿಶ್ಲೇಷಿಸಿದ ಪ್ರಸ್ತುತ ವಿಶ್ವಕೋಶದಲ್ಲಿ ಒಂಬತ್ತು ಅಧ್ಯಾಯಗಳಿವೆ. ಚರಿತ್ರೆ ರಚನಾಶಾಸ್ತ್ರ ಸಿದ್ಧಾಂತ ಮತ್ತು ಅಧ್ಯಯನದ ಹೊಸ ಆಯಾಮಗಳು, ಭೂಮಿಯ ಚರಿತ್ರೆ, ಏಷ್ಯಾ, ಆಫ್ರಿಕಾ, ಯುರೋಪ್‌, ಅಮೆರಿಕಾ, ಆಸ್ಟ್ರೇಲಿಯಾ – ಶಾಂತ ಮಹಾಸಾಗರದ ದ್ವೀಪಗಳು – ಒಸೆನಿಯಾ, ಭಾರತದ ಉಪಖಂಡ, ಕರ್ನಾಟಕ ಹೀಗೆ ಪ್ರಪಂಚದ ಚರಿತ್ರೆಗೆ ಸಂಬಂಧಿಸಿದ ಮುಖ್ಯ ಅಂಶಗಳು ಈ ವಿಶ್ವಕೋಶದಲ್ಲಿ ಅಡಕವಾಗಿವೆ.

‘ಜೀವ ಜಗತ್ತು’ ಕನ್ನಡ ವಿಶ್ವವಿದ್ಯಾಲಯದ ಐದನೆಯ ವಿಶ್ವಕೋಶವಾಗಿದೆ. ಇದರಲ್ಲಿ ಜೀವದ ಉಗಮ ಮತ್ತು ವಿಕಾಸ, ಜೀವಕೋಶ, ಜೀವಜಗತ್ತಿನ ವೈಶಾಲ್ಯ, ಪ್ರಾಣಿಜೀವ ಕ್ರಿಯೆಗಳು, ಮಾನವರಲ್ಲಿ ಜೀವನ ಚಕ್ರ ಮತ್ತು ರೋಗ ನಿರೋಧ ಆನುವಂಶೀಯತೆ, ಪರಿಸರಶಾಸ್ತ್ರ, ಅನ್ವಯಿಕ ಜೀವಶಾಸ್ತ್ರ ಇಂತಹ ಹತ್ತು ಅಧ್ಯಾಯಗಳಿವೆ. ಪ್ರತಿ ನಮೂದುಗಳು ಸರಳವಾದ ಶೈಲಿಯಲ್ಲಿದ್ದು ಆಕರ್ಷಕವಾದ ಚಿತ್ರಗಳಿಂದ ಕೂಡಿವೆ.

ಕನ್ನಡ ವಿಶ್ವವಿದ್ಯಾಲಯವು ಇನ್ನು ಕೆಲವು ವಿಷಯ ವಿಶ್ವಕೋಶಗಳನ್ನು ರಚಿಸಿದೆ. ಅಂತಹುಗಳಲ್ಲಿ ‘ವೈದ್ಯ ವಿಶ್ವಕೋಶ’ವೂ ಒಂದಾಗಿದೆ. ಜನಸಾಮಾನ್ಯರು ದಿನನಿತ್ಯ ಎದುರಿಸಬೇಕಾಗಿರುವ ಸಾಮಾನ್ಯ ಕಾಯಿಲೆಗಳಿಗೆ, ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪ್ರಥಮ ಚಿಕಿತ್ಸೆಗೆ ಕೈಕೊಳ್ಳಬೇಕಾದ ಕ್ರಮಗಳನ್ನು ಕುರಿತು ಈ ಕೋಶ ತುಂಬ ಉಪಯುಕ್ತವಾಗಿದೆ. ಇದರಲ್ಲಿ ಜೀವದ ಉಗಮ ಮತ್ತು ಬೆಳವಣಿಗೆ, ದೇಹ ರಚನೆ ಮತ್ತು ಕಾರ್ಯ, ವೈದ್ಯಕೀಯ ಉಪಕರಣಗಳು, ಪ್ರಸೂತಿ, ಸ್ತ್ರೀರೋಗಗಳು, ಮನೋರೋಗ, ಚರ್ಮಕೋಶ, ಕಿವಿ, ಮೂಗು, ಗಂಟಲು ರೋಗ ಇಂತಹ ೨೪ ಅಧ್ಯಾಯಗಳಿವೆ. ಆಯಾ ನಮೂದುಗಳಿಗೆ ಸಂಬಂಧಿಸಿದಂತೆ ಆಕರ್ಷಕವಾದ ರೇಖಾಚಿತ್ರಗಳಿವೆ. ಇದು ಆರೋಗ್ಯಕ್ಕೆ ಸಂಬಂಧಿಸಿದಂತೆ ಬಹುದೊಡ್ಡ ಮಾಹಿತಿ ಕೋಶವಾಗಿದೆ.

ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಇನ್ನೊಂದು ಮಹತ್ವದ ವಿಶ್ವಕೋಶವೆಂದರೆ ‘ಕರ್ನಾಟಕ ಜನಪದ ಕಲೆಗಳ ಕೋಶ’. ನಾಡಿನಲ್ಲಿಯ ಎಲ್ಲ ಜನಪದ ಕಲೆಗಳಿಗೆ ಸಂಬಂಧಿಸಿದ ಸಚಿತ್ರ ನಮೂದುಗಳಿವೆ. ಮಾರಿಯ ಆರಾಧನೆ, ಭೂತಾರಾಧನೆ, ನಾಗಾರಾಧನೆ, ವೀರಭದ್ರನ – ಆರಾಧನೆ ಹಾಗೂ ಯಲ್ಲಮ್ಮನ ಆರಾಧನೆ, ಮೈಲಾರಲಿಂಗ, ಮಂಟೇಸ್ವಾಮಿ, ಮಲೆ ಮಾದೇಶ್ವರ ಆರಾಧನೆ, ಮೋಹರಂ ಆರಾಧನೆಗೆ ಸಂಬಂಧಿಸಿದ ಕಲೆಗಳು, ಸಮೃದ್ಧಿ ಹಾಗೂ ಫಲವಂತಿಕೆಯ ಆಚರಣೆಯ ಕಲೆಗಳು ವಿಶೇಷ ಜನವರ್ಗಗಳ ಹಾಗೂ ಬುಡಕಟ್ಟುಗಳ ಕೆಲವು ಕಲೆಗಳು, ಜನಪದ ರಂಗಭೂಮಿ ಕಲೆಗಳು, ಸಂಕೀರ್ಣ ಕಲೆಗಳೆಂದು ಒಟ್ಟು ೧೩ ಅಧ್ಯಾಯಗಳಲ್ಲಿ ನಾಡಿನ ಎಲ್ಲ ಕಲೆಗಳಿಗೆ ಸಂಬಂಧಿಸಿದ ವಿಷಯವನ್ನು ಸಂಗ್ರಹಿಸಿ ಆ ಕಲೆಗಳ ಸ್ವರೂಪವನ್ನು ದಾಖಲಿಸಲಾಗಿದೆ.

‘ಭಾರತ ಸಮಾಜ ಕಾರ್ಯ ವಿಶ್ವಕೋಶ’ವನ್ನೂ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದೆ. ಭಾರತೀಯ ವಿಷಯಗಳಲ್ಲಿ ಸಮಾಜ ಕಾರ್ಯ ವಿಶ್ವಕೋಶವು ಮೊಟ್ಟ ಮೊದಲು ಪ್ರಕಟವಾಗುತ್ತಿರುವುದು ಕನ್ನಡದಲ್ಲಿಯೇ. ಇದರಲ್ಲಿ ಅನುದಾನ, ಅಪರಾಧ, ಆತ್ಮಹತ್ಯೆ, ಆರೋಗ್ಯ ಧೋರಣೆ, ಆರೋಗ್ಯ ಶಿಕ್ಷಣ, ಕುಟುಂಬಯೋಜನೆ ಇಂತಹ ನಲವತ್ತು ಅಧ್ಯಾಯಗಳಿವೆ. ಕನ್ನಡ ವಿಶ್ವವಿದ್ಯಾಲಯವು ರಾಜ್ಯಕೋಶ ಮಾಲೆಯಲ್ಲಿ ‘ಸಸ್ಯ ಸಂಪುಟ’ವನ್ನು ಪ್ರಕಟಿಸಿದೆ. ಕರ್ನಾಟಕದ ನೆಲದಲ್ಲಿ ಕಾಣಿಸಿದ ಎಲ್ಲ ಸಸ್ಯಗಳನ್ನು ನಾಡಿಗರಿಗೆ ಪರಿಚಯಿಸಲಾಗಿದೆ. ಮುಖ್ಯ ನಮೂದು ಕನ್ನಡ ಮತ್ತು ಇಂಗ್ಲಿಶಿನಲ್ಲಿದೆ. ಇದೊಂದು ಅಪೂರ್ವ ಮಾಹಿತಿ ಕೋಶವಾಗಿದೆ.

ಕರ್ನಾಟಕದಲ್ಲಿ ಮೇಲೆ ಸಮೀಕ್ಷಿಸಿದ ವಿಶ್ವಕೋಶಗಳಲ್ಲಿ ಇನ್ನು ಕೆಲವು ವೈಯಕ್ತಿಕ ಪ್ರಯತ್ನದಿಂದ ಮೂಡಿಬಂದ ವಿಶ್ವಕೋಶಗಳಿವೆ. ಕೆ. ಗಣಪತಿಭಟ್‌ಅವರು ‘ಶ್ರೀ ಸಾಮಾನ್ಯರ ಕನ್ನಡ ಸಂಕ್ಷಿಪ್ತ ವೈವಿಧ್ಯಮಯ ಪದ ಜ್ಞಾನಕೋಶ’ ಎಂಬ ಕೋಶವನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಪಡೆನುಡಿ – ನಾಣ್ಣುಡಿಗಳ ನಿಘಂಟು, ಜನಸಾಮಾನ್ಯರ ಕನ್ನಡ – ಹಿಂದಿ ಪದಕೋಶ, ಕನ್ನಡ – ಸಂಸ್ಕೃತಿ – ಹಿಂದಿ ಒಗಟುಕೋಶ. ಇಂತಹ ೨೪ ಭಾಗಗಳಿವೆ. ಎ. ಡಿ. ವಝೆ ಅವರು ‘ಜ್ಞಾನಕೋಶ’ವನ್ನು ರಚಿಸಿದ್ದಾರೆ. ಇದರಲ್ಲಿ ಕರ್ನಾಟಕದ ಸಂಕ್ಷಿಪ್ತ ಪರಿಚಯ, ಶಕ್ತಿ ಸಾಧನೆಗಳು ಮತ್ತು ಖನಿಜ ಸಂಪತ್ತು, ಜಗತ್ತಿನ ರಾಷ್ಟ್ರಗಳ, ಭಾರತದ ಮಹಾವ್ಯಕ್ತಿಗಳ, ಕ್ರೀಡಾರಂಗ ಇತ್ಯಾದಿ ಅಂಶಗಳಿವೆ. ಕೆ. ಎಸ್‌. ರಾಮಕೃಷ್ಣಮೂರ್ತಿ ಅವರು ‘ಜ್ಞಾನಕೋಶ ಭಾಗ – ೧’ ಭೂಮಿ, ಆಕಾಶ; ಸಸ್ಯ, ಪ್ರಾಣಿ, ದೇಹ ಮತ್ತು ನಿರ್ಮಾಣ ಅನ್ವೇಷಣೆ ಎಂಬ ೭ ಭಾಗಗಳನ್ನೊಳಗೊಂಡ ಜ್ಞಾನಕೋಶವಾಗಿದೆ. ಕೆ. ವಿ. ರಾಮರಾವ್‌ಅವರ ‘ವಿಶ್ವ ವಿಜ್ಞಾನ’ ಇದರಲ್ಲಿ ರಾಜಕೀಯ, ಸಾಮಾಜಿಕ, ವೈಜ್ಞಾನಿಕ, ಭೌಗೋಲಿಕ, ಐತಿಹಾಸಿಕ, ಶೈಕ್ಷಣಿಕಾದಿ ವಿಷಯಗಳನ್ನು ಕುರಿತಾದ ಮಾಹಿತಿಗಳಿವೆ.

ಪಾಟೀಲ ಪುಟ್ಟಪ್ಪ ಅವರ ‘ಪ್ರಪಂಚ ಜ್ಞಾನ’ವು ಲೋಕದ ವಿಪುಲ ವೈವಿಧ್ಯತೆಯ ಒಂದು ಅಪೂರ್ವ ಸಂಗ್ರಹ. ಇದರಲ್ಲಿ ವಿಜ್ಞಾನ, ಕಲೆ, ಭೂಗೋಳ, ಖಗೋಳ, ಕ್ರೀಡಾರಂಗ, ಮಾನವ ದೇಹ ಮುಂತಾದ ಹತ್ತಾರು ವಿಷಯಗಳ ವಿವರಗಳಿವೆ. ಚಂದ್ರರಾಜ ಶೆಟ್ಟಿ ತೋದಾರು ಅವರ ‘ವಿವಿಧ ವಿಷಯ ಕೋಶ’ ಇದರಲ್ಲಿ ವಿಜ್ಞಾನದ ವಿವಿಧ ವಿಷಯಗಳನ್ನು ಕುರಿತು ಚುಟುಕು ಬರೆಹಗಳಿವೆ. ಸಜ್ಜನ ಶೆಟ್ಟಿ ವೀರಭದ್ರಪ್ಪನವರ ‘ಗೃಹದೀಪಿಕೆ’ ಎಂಬ ವಿಶ್ವಕೋಶವು ದೈನಂದಿನ ಜೀವನಕ್ಕೆ ಸಂಬಂಧಿಸಿದ ಉಪಯುಕ್ತ ಲೇಖನಗಳಿವೆ ಇದರಲ್ಲಿ ಗೃಹ ಸ್ವಚ್ಛತೆ, ಆರೋಗ್ಯ, ಅಡುಗೆ, ಧಾನ್ಯ ಸಂಗ್ರಹ, ಬಟ್ಟೆ ಸಂರಕ್ಷಣೆ ಮುಂತಾದ ವಿಷಯಗಳ ಬಗ್ಗೆ ಉಲ್ಲೇಖಗಳಿವೆ.

ಕರ್ನಾಟಕದಲ್ಲಿ ವಿಶ್ವಕೋಶ ಕ್ಷೇತ್ರದಲ್ಲಿ ಆಗಬೇಕಾದ ಕೆಲಸ ಅಪಾರವಾಗಿದೆ. ವಿಜ್ಞಾನ ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿಸಿದ ವಿಶ್ವಕೋಶಗಳು ಸಿದ್ಧವಾಗಬೇಕಾಗಿವೆ. ವಿಶ್ವಕೋಶಗಳು ಕೇವಲ ಮಾಹಿತಿ ಕೋಶವಾಗದೆ ಸಾಮಾಜಿಕ ಅಧ್ಯಯನಕ್ಕೆ ಯಾವ ರೀತಿಯಾಗಿ ಸ್ಪಂದಿಸುತ್ತವೆ ಎಂಬುದರ ಬಗ್ಗೆ ಗಮನಹರಿಸುವುದು ಬಹಳ ಮುಖ್ಯವಾಗಿದೆ. ಇದರಿಂದ ದೇಶಿಯ ಜ್ಞಾನ ವ್ಯವಸ್ಥೆಯನ್ನು ಸಂಗೋಪನೆ ಮಾಡಿದಂತಾಗುತ್ತದೆ.

 

* ಎಂ. ಚಿದಾನಂದಮೂರ್ತಿ, ಸಾಹಿತ್ಯವಾರ್ಷಿಕ ‘೧೯೭೧, ಪು. ೨೩೧-೨ಬೆಂಗಳೂರುವಿಶ್ವವಿದ್ಯಾಲಯಬೆಂಗಳೂರು.