ಇನ್ನಷ್ಟು ವಿವರ

‘ಮಂಗಳೂರ ಸಮಾಚಾರ’ ಪತ್ರಿಕೆ ವೈವಿಧ್ಯಮಯ ಸುದ್ದಿಸಮಾಚಾರಗಳನ್ನಲ್ಲದೆ ವಿವಿಧ ವಿಷಯಗಳನ್ನು ಸಹಪ್ರಕಟಿಸುತ್ತಿತ್ತು. ಓದುಗರ ಮನರಂಜನೆಗೆ ಬೇಕಾಗುವಂತಹ ಸೃಜನಶೀಲ ಚಟುವಟಿಕೆ, ಸಾಹಿತ್ಯ ಪ್ರಾಕಾರಗಳ ಪ್ರಕಟನೆಗೂ ಗಮನಕೊಟ್ಟಿದ್ದರು. ಪತ್ರಿಕೆಯ ಸಂಚಿಕೆಗಳಲ್ಲಿ ಐದಾರು ಸಣ್ಣ ದೊಡ್ಡ ಕತೆಗಳು ವರ್ಷಾವಧಿಯಲ್ಲಿ ಪ್ರಕಟವಾಗಿವೆ. ಪುಟಸಂಖ್ಯೆಯ ಪರಿಮಿತಿಯಿಂದಾಗಿ ಅದಕ್ಕೂ ಹೆಚ್ಚು ಲಲಿತವಾಙ್ಮಯವನ್ನು ಪ್ರಕಟಿಸುವುದು ಸಾಧ್ಯವಾಗಿಲ್ಲ.

[1] ಕಿಟಿಲರೂ ಈ ಪತ್ರಿಕೆಯಲ್ಲಿ ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿದ್ದರು. ಈ ಪತ್ರಿಕೆಯ ಎಲ್ಲ ಸಂಚಿಕೆಗಳು ದೊರೆಯದ ಕಾರಣ ಈ ಲೇಖನಗಳು ಅನುಪಲಬ್ಧವಾಗಿದೆ. [2] ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಇನ್ನೊಂದು ವಿಶೇಷತೆಯನ್ನು ಗಮನಿಸಬೇಕು. ಅದೆಂದರೆ ತುಳುವರ ಧ್ವನಿಗೆ ಕೊರಳಾಗಿ ಕೆಲಸಮಾಡಿರುವುದು. ಈ ವಿಚಾರವನ್ನು ಗ್ರಹಿಸಿರುವ ಕುದ್ದಾಡಿ ವಿಶ್ವನಾಥ ರೈಃ ಅವರು, “‘ಮಂಗಳೂರ ಸಮಾಚಾರ’ದ ತುಳು ಅಂಕಣದಲ್ಲಿ ಕೆಲವು ಸುದ್ದಿಗಳು ಮತ್ತು ವಿಚಾರಗಳು ತುಳುವಿನಲ್ಲಿ ಪ್ರಕಟವಾಗುತ್ತಿದ್ದವು. ಸ್ಥಳೀಯ ತುಳುಮಾತನಾಡುವ ಜನರನ್ನು ಆಕರ್ಷಿಸುವುದು ಅದರ ಹಿಂದಿನ ಉದ್ದೇಶವಾಗಿತ್ತು”. [3] ಎಂದು ಅಭಿಪ್ರಾಯಪಟ್ಟಿದ್ದಾರೆ. ತುಳುಭಾಷೆಗೆ ಲಿಪಿಯಿಲ್ಲ ಆದರೆ ಈ ಆಷೆಯ ಪತ್ರಿಕೋದ್ಯಮಕ್ಕೆ ಒಂದು ಇತಿಹಾಸವಿದೆ. ವಸಂತಕುಮಾರ ಪೆರ್ಲ ಅವರು ಇದರ ಮೊದಲ ಘಟ್ಟದ ಬಗ್ಗೆ ಗಮನಸೆಳೆಯುತ್ತಾ, “ಕನ್ನಡ ಪತ್ರಿಕೋದ್ಯಮದಲ್ಲಿ ಮೊದಲ ಪತ್ರಿಕೆಯೆಂದು ಗುರುತಿಸುವುದರ ಮೂಲಕ ‘ಮಂಗಳೂರ ಸಮಾಚಾರ’ದ ಮೂಲಕವೇ ತುಳು ಪತ್ರಿಕೋಧ್ಯಮದ ಆರಂಭವನ್ನೂ ಗುರುತಿಸಬಹುದು” ಎಂದು ಅಭಿಪ್ರಾಯಪಡುತ್ತಾರೆ. [4] ಮೌಖಿಕ ಪರಂಪರೆಯ ತುಳುಸಾಹಿತ್ಯವು ಕನ್ನಡದ ಲಿಪಿಯನ್ನು ಆಶ್ರಯಿಸಿ ತುಳುಸಾಹಿತ್ಯ ಚರಿತ್ರೆಯನ್ನು ನಿರ್ಮಿಸಿಕೊಳ್ಳುವುದಾದಲ್ಲಿ ತುಳುಪತ್ರಿಕೋದ್ಯಮ ತನ್ನ ಚರಿತ್ರೆ ಕಟ್ಟಿಕೊಳ್ಳುವುದಕ್ಕೆ ಈ ದಿಸೆಯಲ್ಲಿ ಯಾಕೆ ಮುಂದಾಗಬಾರದು. ಅಂತೆಯೇ ಈ ಪಥದ ಮೊದಲ ಮೈಲಿಗಲ್ಲಾಗಿ ‘ಮಂಗಳೂರ ಸಮಾಚಾರ’ವನ್ನು ಗುರುತಿಸಿಕೊಳ್ಳಬಹುದಾಗಿದೆ.

ಕಂನಡ ಸಮಾಚಾರವು

ರಾಜ್ಯದಲ್ಲಿ ಪತ್ರಿಕೋದ್ಯಮ ಶಿಕ್ಷಣಕ್ಕೆ ಒತ್ತು ನೀಡಿ, ಕಾರ್ಯರೂಪಕ್ಕೆ ತಂದವರಲ್ಲಿ ಆದ್ಯರೆನಿಸಿದ ಡಾ. ನಾಡಿಗ ಕೃಷ್ಣಮೂರ್ತಿಯವರು ತಮ್ಮ ‘ಭಾರತೀಯ ಪತ್ರಿಕೋದ್ಯಮ’ ಮಹಾಪ್ರಬಂಧದ ಮೂಲಕ ಕನ್ನಡದ ಪ್ರಥಮ ಪತ್ರಿಕೆ ‘ಕಂನಡ ಸಮಾಚಾರ’ ಎಂದು ಪ್ರತಿಪಾದಿಸಿದರು. ಹಲವು ಕಾಲದ ತನಕ ಅವರು ತಮ್ಮ ವಾದಕ್ಕೆ ಅಂಟಿಕೊಂಡಿದ್ದರು. ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಪ್ರಥಮಗಳ ಶೋಧನೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಡಾ. ಶ್ರೀನಿವಾಸ ಹಾವನೂರ ಅವರು ವಿದೇಶಗಳಿಗೂ ಹೋಗಿ ಕಲೆಹಾಕಿದ ಅಪಾರ ಮಾಹಿತಿಗಳಲ್ಲಿ ‘ಮಂಗಳೂರು ಸಮಾಚಾರ’ವು ಒಂದೆಂಬುದನ್ನು ನಾವು ಗಮನಿಸಬೇಕು. ಆ ಪತ್ರಿಕೆಯ ಕೊನೆಯ ಸಂಚಿಕೆಯಲ್ಲಿ ಸಂಪಾದಕ ಮೋಗ್ಲಿಂಗ್‌ ರೇ ಈ ಪತ್ರಿಕೆಯ ಸ್ಥಳಾಂತರ ಮತ್ತು ಹೆಸರು ಬದಲಾಯಿಸಿದ ಸಂಗತಿಯನ್ನು ಸ್ಪಷ್ಟಪಡಿಸಿರುವುದನ್ನು ಆಧರಿಸಿ, ಹಾವನೂರ ಅವರು ‘ಮಂಗಳೂರು ಸಮಾಚಾರ’ವೇ ಪ್ರಥಮ ಪತ್ರಿಕೆಯೆಂದು, ನಂತರದ್ದು ‘ಕಂನಡ ಸಮಾಚಾರ’ ಪತ್ರಿಕೆಯೆಂದು ಸಾಬೀತುಪಡಿಸಿಬಿಟ್ಟರು. ಹೀಗಾಗಿ ‘ಮಂಗಳೂರು ಸಮಾಚಾರ’ ಪತ್ರಿಕೆ ಕನ್ನಡ ಪತ್ರಿಕೋದ್ಯಮದ ಮೊದಲ ಮೆಟ್ಟಿಲಾಗಿ ನಿಲ್ಲುತ್ತದೆ.

‘ಮಂಗಳೂರು ಸಮಾಚಾರ’ ಪತ್ರಿಕೆಯನ್ನು ಯಾಕೆ ಸ್ಥಳಾಂತರಿಸಲಾಯಿತು? ಪತ್ರಿಕೆಗಿದ್ದ ಮೊದಲ ಹೆಸರನ್ನು ಏತಕ್ಕೆ ಬದಲಾಯಿಸಿತು? ಇತ್ಯಾದಿ ಕಾರಣಗಳನ್ನು ಈ ಎರಡು ಪತ್ರಿಕೆಗಳ ಜನ್ಮದಾತ, ಸಂಪಾದಕರಾದ ಹೆರ್ಮನ್‌ ಮೋಗ್ಲಿಂಗ್‌ ರೇ ಮಂಗಳೂರು ಸಮಾಚಾರದ ಕೊನೆಯ ಸಂಚಿಕೆಯಲ್ಲಿ ಬಿಚ್ಚಿಕೊಂಡಿದ್ದಾನೆ: “ಮಂಗಳೂರು, ಮೈಸೂರು, ತುಮ್ಕೂರು, ಬಳ್ಳಾರಿ, ಶಿವಮೊಗ್ಗ, ಹುಬ್ಬಳ್ಳಿ, ಶಿರಸಿ, ಹೊಂನಾವರ ಮೊದಲಾದ ಸ್ಥಳಗಳಲ್ಲಿ ಕೆಲವು ನೂರು ಮಂದಿ ಈ ಕಾಗದವನ್ನು ಈವರೆಗೆ ತೆಗೆದುಕೊಳ್ಳುತ್ತಾ ಬಂದರು. ಮೊದಲಿನ ನಂಬ್ರದ ಕಾಗದಗಳನ್ನು ಛಾಪಿಸಿ ಪ್ರಕಟನ ಮಾಡುವಾಗ್ಯೆ ನಾವು ಮಾಡಿದ ಆಲೋಚನೆ ಈ ಕಾಲದಲ್ಲಿ ಈ ದೇಸಸ್ಥರೊಳಗೆ ನಡಿಯುವುದೋ ಎಂದು ಸ್ವಲ್ಪ ಸಂದೇಹಪಡುತ್ತಿದ್ದೆವು. ಈಗ ಈ ದೇಸಸ್ಥರಲ್ಲಿ ಅನೇಕರಿಗೆ ಕನಡು ಭಾಷೆಯಲ್ಲಿ ಬರೆದ ಒಂದು ಸಮಾಚಾರ ಕಾಗದವನ್ನು ಓದುವುದರಲ್ಲಿ ಮತಿ ಆಗುವುದೆಂದು ನೋಡಿ ಸಂತೋಷದಿಂದ ಅದಂನು ವೃದ್ಧಿಮಾಡುವ ಪ್ರಯತ್ನದಿಂದ ಯಿಂನು ಮುಂದೆ ಅದಂನು ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿ ಇರುವ ಅಕ್ಷರ ಛಾಪಾಖಾನೆಯಲ್ಲಿ ಅಚ್ಚುಪಡಿ ಮಾಡಲಿಕ್ಕೆ ನಿಶ್ಚೈಸಿದ್ದೇವೆ. ಆಮೇಲೆ ಕನಡ ಶೀಮೆಯ ನಾಲ್ಕು ದಿಕ್ಕುಗಳಲ್ಲಿ ಯಿರುವವರು ಶುದ್ಧವಾದ ಮೊಳೆ ಅಚ್ಚುಗಳಿಂದಲಾಗುವ ಬರಹವಂನು ಶುಲಭವಾಗಿ ವೋದಬಹುದು, ಯಿದಲ್ಲದೆ ….. ವರ್ತಮಾನವನ್ನೂ ಚರಿತ್ರೆಗಳನ್ನು ವಿದ್ಯಾಪಾಠಗಳನ್ನು ಬುದ್ಧಿಮಾತುಗಳಂನೂ ಬರಿಯುವುದಕ್ಕೆ ಸ್ಥಳ ಶಿಕ್ಕುವುದು.”4

ಮೋಗ್ಲಿಂಗ್‌ ಅವರ ಇರಾದೆ ಮೇಲಿನ ಪ್ರಸ್ತಾಪದಲ್ಲಿ ನಿಚ್ಚಳಗೊಂಡಿದೆ. ಸಂಪಾದಕರಾಗಿ ತಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಪ್ರೋತ್ಸಾಹ ದೊರೆಯಿತು. ಆ ಕನ್ನಡದ ಜನರು ಪತ್ರಿಕೆಯನ್ನು ಓದಲು ಆಸಕ್ತಿಯನ್ನು ತೋರಿದ್ದರಿಂದ ಆ ಪತ್ರಿಕೆ ಮುದ್ರಣದಲ್ಲಿ ಅಭಿವೃದ್ಧಿ ಬಯಸಿ ಕಲ್ಲಚ್ಚಿನ ಬದಲು ಅಚ್ಚುಮಳೆಯ ಸೌಕರ್ಯವಿದ್ದ ಬಳ್ಳಾರಿಯಲ್ಲೇ ಹೆಚ್ಚಿನ ಅನುಕೂಲ ಲಭಿಸಿದ್ದರಿಂದ ಮಂಗಳೂರಿನಿಂದ ಬಳ್ಳಾರಿಗೆ ಬದಲಾಯಿಸಲಾಯಿತು. ಕನ್ನಡ ಭಾಷೆಯನ್ನಾಡುವ ಸಕಲ ಜನರಿಗೆ ಪತ್ರಿಕೆಯನ್ನು ತಲುಪಿಸಿ ಚಿಂತನೆಗೆ ಹಚ್ಚುವುದೇ ಆತನ ಉದ್ದೇಶವಾಗಿದೆ. ಈ ಮೂಲಕ ‘ಕನ್ನಡ ಸೀಮೆ’ಯ ನಾಲ್ಕು ದಿಕ್ಕುಗಳ ವ್ಯಾಪ್ತಿಯನ್ನು ತಿಳಿಸುತ್ತಾ ಅಖಂಡತೆಯ ಕನಸು ಕಂಡ ಮೊದಲಿಗರಾಗಿದ್ದಾರೆ. “ಹೀಗೆ ಪತ್ರಿಕೆ ಬಳ್ಳಾರಿಗೆ ಸ್ಥಳಾಂತರವಾಯಿತು. ಮಾರ್ಚ್ ೧೮೪೪ ರಿಂದ ‘ಕಂನಡ ಸಮಾಚಾರವು’ ಎಂಬ ಹೆಸರಿನಿಂದ ಪ್ರಕಟವಾಗತೊಡಗಿತು. ಆದರೆ ಬಳ್ಳಾರಿಯಲ್ಲಿ ರೀಡ್‌ ತೀರಿಕೊಂಡ ಮೇಲೆ (೧೮೪೨) ಕರ್ತೃತ್ವ ಮಿಶನರಿ ಇರಲಿಲ್ಲ. ದೂರದ ಮಂಗಳೂರಲ್ಲಿ ಕುಳಿತು ಮೋಗ್ಲಿಂಗ್‌ ವ್ಯವಸ್ಥಿತವಾಗಿ ಸುದ್ಧಿಗಳ, ಲೇಖನಗಳ, ಸಂಪಾದನೆಯ ಹೊಣೆಯನ್ನು ನಿರ್ವಹಿಸಲಾಗಲಿಲ್ಲ. ಆ ವಷ್ಯಾಂತ್ಯದವರೆಗೆ ಪತ್ರಿಕೆಯು ನಡೆದು ನಿಂತುಹೋಯಿತು” ಎಂದು ಡಾ. ಹಾವನೂರರು ಅದರ ಕಥೆಯನ್ನು ಅಲ್ಲಿಗೆ ಮುಗಿಸಿಬಿಟ್ಟಿದ್ದಾರೆ.

ಆದರೆ ‘ಮಂಗಳೂರ ಸಮಾಚಾರ’ದಷ್ಟೇ ಪ್ರಮುಖವಾದ ಮತ್ತು ಅದರ ವಿಸ್ತೃತ ಹೊಸ ರೂಪವಾದ ‘ಕಂನಡ ಸಮಾಚಾರವು’ ಪತ್ರಿಕೆಯ ಒಳನೋಟಗಳನ್ನು ಕಾಣುವ ಕಡೆಗೆ ಡಾ. ಹಾವನೂರರು ಹೆಚ್ಚಿನ ಗಮನ ನೀಡಿದಂತೆ ಕಾಣಲಿಲ್ಲ. ಡಾ. ನಾಡಿಗರು ಸಹ ಈ ಎರಡು ಪತ್ರಿಕೆಗಳನ್ನು ಖುದ್ದು ನೋಡಿದಂತೆ ಇಲ್ಲ; ಅದಕ್ಕೆ ಹೆಚ್ಚಿನ ವಿವರ ನೀಡುವುದಕ್ಕೆ ಅವರೂ ಹೋಗಲಿಲ್ಲ. ಹೀಗಾಗಿ ಮೋಗ್ಲಿಂಗ್‌ನ ಮಹತ್ವಾಕಾಂಕ್ಷೆಯ ‘ಕಂನಡ ಸಮಾಚಾರ’ವು ಪತ್ರಿಕೆಯು ಬೆಳಕಿಗೆ ಬರಲಾಗಲಿಲ್ಲ.

ಡಾ. ನಾಡಿಗ ಮತ್ತು ಡಾ. ಹಾವನೂರ ಇವರೀರ್ವರೊಂದಿಗೆ ಪತ್ರ ವ್ಯವಹಾರ ಸಂಪರ್ಕವಿಟ್ಟುಕೊಂಡಿದ್ದ ಈ ಲೇಖಕನಿಗೆ ಬಳ್ಳಾರಿಯಿಂದ ಪ್ರಕಟವಾದ ‘ಕಂನಡ ಸಮಾಚಾರ’ ಪತ್ರಿಕೆಗಾಗಿ ಹಲವು ವರ್ಷಗಳ ಕಾಲ ಅಲೆದಾಡಿ ಶೋಧನೆಯ ಜಾಡಿನಲ್ಲೇ ಸಾಗಿದಾಗ ಅದರ ಸುಳಿವು ಸಿಕ್ಕಿತು. ಡಾ. ಹಾವನೂರ ಅವರು ನೀಡಿದ ಮಾಹಿತಿ ಮತ್ತು ಮಾರ್ಗದರ್ಶನ ಹಾಗೂ ಕನ್ನಡ ವಿಶ್ವವಿದ್ಯಾಲಯದ ಸಹಕಾರದಿಂದ ಅಲಭ್ಯವಾಗಿದ್ದ ‘ಕಂನಡ ಸಮಾಚಾರ’ ಪತ್ರಿಕೆಯ ೧೨ ಸಂಚಿಕೆಗಳನ್ನು ಲಂಡನ್ನಿನ ಬ್ರಿಟಿಷ್‌ ಲೈಬ್ರರಿಯಿಂದ (ಓರಿಯಂಟಲ್‌ ಅಂಡ್‌ ಇಂಡಿಯಾ ಆಫೀಸ್‌ ಕಲಕ್ಷನ್ಸ್‌ ನಿಂದ) ತರಿಸಿಕೊಳ್ಳಲಾಗಿದೆ. ಕನ್ನಡ ಪತ್ರಿಕೋದ್ಯಮ ಇತಿಹಾಸದ ೨ನೇ ಮೈಲುಗಲ್ಲಾದ ‘ಕಂನಡ ಸಮಾಚಾರವು’ (CANARESE NEWSPAPER) ಬಳ್ಳಾರಿಯ ಮಿಶನ್‌ ಪ್ರೆಸ್‌ನಲ್ಲಿ ಪ್ರಕಟವಾಗಿದೆ (Printed at the Bellary Mission Press). ಇದರ ಮುದ್ರಕ ಆರ್. ಸಾಮ್ಸನ್‌ಮತ್ತು ಸಂಪಾದಕ ಎಂ. ಮೋಗ್ಲಿಂಗ್‌ (R.SAMPSON, PRINTER-H. MOEGLING, EDITOR) ಆವರ ಹೆಸರುಗಳು ಪತ್ರಿಕೆಯ ನಾಲ್ಕನೇ ಪುಟದ ಕೊನೆಯಲ್ಲಿ ೧೨ ಸಂಚಿಕೆಗಳಲ್ಲೂ ಪ್ರಕಟವಾಗಿವೆ. ಪತ್ರಿಕೆ ನಾಲ್ಕು ಪುಟಗಳನ್ನು ಹೊಂದಿದೆ. ಪ್ರತಿ ಸಂಚಿಕೆಗೆ ‘ಅಂಕೆ’ ಎಂದೂ, ಸಂಪುಟಕ್ಕೆ ‘ಪುಸ್ತಕ’ ವೆಂದೂ ಛಾಪಿಸಲಾಗಿದೆ. ಟಪಾಲು ದಸ್ತೂರಿ ಕೂಡಿ (ಅಂಚೆ ವೆಚ್ಚ ಸೇರಿ) ಪತ್ರಿಕೆಯ ಕ್ರಯ (ಬೆಲೆ) ೨ ದುಡ್ಡು ಎಂದು ನಿಗದಿಪಡಿಸಲಾಗಿದೆ.

ಈ ಪತ್ರಿಕೆ ೧೫ ದಿನಗಳಿಗೊಮ್ಮೆ (ಪಾಕ್ಷಿಕವಾಗಿ) ಪ್ರಕಟವಾಗುತ್ತಾ ಬಂದಿದೆ. ನನಗೆ ಲಭ್ಯವಾದ ೧೨ ಸಂಚಿಕೆಗಳು ಅನುಕ್ರಮವಾಗಿ ೧ನೇ ಜೂನ್‌ ೧೮೪೪ ರಿಂದ (೧ನೇ ಪುಸ್ತಕ, ೭ನೇ ಅಂಕೆಯಿಂದ ೧೫ನೇ ನವೆಂಬರ್ ೧೮೪೪ರ ೧೮ನೆ ಅಂಕೆವರೆಗೆ) ಒಟ್ಟು ೧೨ ಸಂಚಿಕೆಗಳು ಮುದ್ರಿತಗೊಂಡಿವೆ. ಪತ್ರಿಕೆಯ ಲಿಪಿಶೈಲಿಯು ಕನ್ನಡ ಮತ್ತು ತೆಲುಗಿನ ಮಿಶ್ರಣವಾಗಿದೆ. ಅಕ್ಷರಗಳು ತುಂಬಾ ಸುಂದರವಾಗಿವೆ. ಅಕ್ಷರದ ಕೊಂಬುಗಳು (ತಲೆಕಟ್ಟುಗಳು) ತೆಲುಗು ಲಿಪಿಯ ಲಕ್ಷಣಗಳನ್ನು ಬಹುತೇಕ ಹೋಲುತ್ತವೆ. ಇದರಿಂದ ಪತ್ರಿಕೆಯನ್ನು ನೋಡಿದಾಕ್ಷಣ ತೆಲುಗು ಪತ್ರಿಕೆಯಂತೆ ಕಾಣುತ್ತದೆ. ಆದರೆ ಎಲ್ಲಾ ಸಂಚಿಕೆಗಳನ್ನು ಕೂಲಂಕುಷವಾಗಿ ಓದಿ ನೋಡಿದಾಗ ಲಿಪಿಯು ಹೊರನೋಟಕ್ಕೆ ಥೇಟ್‌ ತೆಲುಗಿನಂತೆ ಕಂಡರೂ ಪದರಚನೆ, ವಾಕ್ಯರಚನೆಗಳು ಕನ್ನಡ ಭಾಷೆಯ ಜಾಯಮಾನವನ್ನು ಹೆಚ್ಚಾಗಿ ಕಾಪಾಡಿಕೊಂಡಿವೆ. ‘ಮಂಗಳೂರ ಸಮಾಚಾರ’ ಪತ್ರಿಕೆಗಿಂತ ‘ಕಂನಡ ಸಮಾಚಾರ’ದ ಪುಟ ವಿನ್ಯಾಸ ಹೆಚ್ಚು ಅಚ್ಚುಕಟ್ಟಾಗಿದೆ. ಪತ್ರಿಕೆಯ ಪ್ರಸಾರ ವ್ಯಾಪ್ತಿಯ ಹಿನ್ನೆಲೆಯಲ್ಲಿ ಈ ಪತ್ರಿಕೆಗಿಟ್ಟ ಹೆಸರು ಮತ್ತು ಉದ್ದೇಶ ಸಹ ಔಚಿತ್ಯಪೂರ್ಣವಾಗಿದೆ. ಕನ್ನಡ ಮಾತನಾಡುವ ಎಲ್ಲ ಜನರಲ್ಲೂ ಇದು ಹೆಚ್ಚು ಪ್ರಸಾರ ಹೊಂದಲಿ ಎಂಬ ಸದಾಶಯ ಹೊಂದಿದೆ. ಈ ರೀತಿಯಾಗಹಿ ೧೮೪೩-೪೪ರ ಹೊತ್ತಿಗೆ ಒಂದು ಅಖಂಡ ಕರ್ನಾಟಕದ ಕಲ್ಪನೆಯನ್ನು ಕಂಡ ಮೊದಲ ಕನಸುಗಾರ ಅವರೆಂಬುದನ್ನು ಅದು ಸೂಚಿಸುತ್ತದೆ.

01_231_KPRM-KUH

02_231_KPRM-KUH

ಒಳಪ್ರವೇಶ

ಕನ್ನಡ ಲೋಕಕ್ಕೆ ಹೊಸದಾಗಿ, ಪ್ರಥಮವಾಗಿ ‘ಮಂಗಳೂರ ಸಮಾಚಾರ’ವನ್ನು ಪರಿಚಯಿಸಿಕೊಟ್ಟ ಮೋಗ್ಲಿಂಗ್‌ ತನ್ನ ಉದ್ದೇಶಕ್ಕೆ ತಕ್ಕಂತೆ ‘ಕಂನಡ ಸಮಾಚಾರ’ವನ್ನು ಹೇಗೆ ಸಿದ್ಧಪಡಿಸಿದ್ದಾನೆ, ಅದರ ನಿರ್ಮಿತಿಯ ಮಿತಿಗಳು, ವಿಸ್ತಾರಗಳು ಯಾವುವು? ಇದನ್ನು ತಿಳಿಯಲು ಒಳಹೊಕ್ಕು ನೋಡಬೇಕಾಗಿದೆ. ಹೀಗಾಗಿ ಪತ್ರಿಕೆಯಲ್ಲಿ ದಾಖಲಾಗಿರುವ ಹೆಚ್ಚಿನ ವಿಷಯಗಳು ಮೊದಲ ಬಾರಿಗೆ ಈಗಿನ ಓದುಗರಿಗೆ ದೊರೆಯುತ್ತಿವೆ.

ಲಭ್ಯವಾಗಿರುವ ಮೊದಲ ಸಂಪುಟ (ಪುಸ್ತಕ)ದ ೭ನೆ ಅಂಕೆ(ಸಂಚಿಕೆ)ಯನ್ನುನೋಡಿದಾಗ, ‘ಕಂನಡ ಸಮಾಚಾರ’ಕ್ಕೆ ಸೇರಿದ ಇನ್ನೂ ೬ ಸಂಚಿಕೆಗಳು ಈ ಹಿಂದೆ ಪ್ರಕಟವಾಗಿರಬೇಕು ಎಂದು ಅನ್ನಿಸುತ್ತದೆ. ಈ ಸಂಚಿಕೆಯಲ್ಲಿ ಪ್ರಕಟವಾದ ‘ಹಿಂದು ದೇಶವನ್ನು ಕುರಿತು ವಿಲಾಯತಿಯವರು ಪೂರ್ವದಲ್ಲಿ ಕೇಳಿದ ವರ್ತಮಾನಗಳು’ ಎಂಬ ಪ್ರಧಾನ ಲೇಖನವನ್ನು (An Account of Hindostan-Chapter Second) ೨ನೇ ಅಧ್ಯಾಯವೆಂದು ಕಾಣಿಸಿದ್ದಾನೆ. ಮತ್ತು ತಲೆಬರೆಹದ ಮೇಲೆ ‘ಮೊದಲನೆ ಪುಸ್ತಕ ಯಿಪ್ಪತ್ತನೆ ಪುಟದಲ್ಲಿ ತೀರದೆಯಿದ್ವದ್ದು’ ಎಂದು ನಮೂದಿಸಿದ್ದಾನೆ. ಇದರಿಂದ ಈ ಲೇಖನವು ಹಿಂದಿನ ಸಂಚಿಕೆಯಿಂದ, ೧ನೇ ಅಧ್ಯಾಯದಿಂದ ಆರಂಭವಾಗಿದೆಯೆಂಬುದರ ಕುರಿತು ಸುಳಿವು ನೀಡುತ್ತದೆ. ಅಂತೆಯೇ ಇದೇ ಸಂಚಿಕೆಯಲ್ಲಿ ಪ್ರಕಟವಾದ ‘ಕೊನ್‌ಫೂಚೆಯನ ಚರಿತ್ರೆ’ (The Life of Confutse Continued) ಲೇಖನವು ‘ಮೊದಲನೆ ಪುಸ್ತಕದ ಹದಿನಾರನೇ ಪುಟದಲ್ಲಿ ತೀರದೆಯಿದ್ದ’ ಮುಂದುವರಿದ ಭಾಗವೆಂದು ತಿಳಿಯುತ್ತದೆ. ಇದೇ ರೀತಿ ಭೂಗೋಳಕ್ಕೆ ಸಂಬಂಧಿಸಿದ ಲೇಖನವು ‘ಯಿಪ್ಪತ್ತೊಂದನೆ ತೀರದೆಯಿದ್ದ ಭೂಗೋಳ ಪಾಠದ ಮುಂದುವರಿಕೆ’ಯದ್ದಾಗಿದೆ. ಇದು ಹಿಂದಿನ ಸಂಚಿಕೆಗಳನ್ನು ನೆನಪಿಸುತ್ತದೆ. ಅಲ್ಲದೆ ಈ ೭ನೇ ಸಂಚಿಕೆಯ ಪುಟಸಂಖ್ಯೆಯು ಅನುಕ್ರಮವಾಗಿ ೨೫ ರಿಂದ ೨೮ರವರೆಗೆ ಮುದ್ರಿತವಾಗಿರುವುದನ್ನು ಆಧಾರವಾಗಿಟ್ಟು ನೋಡಿದಾಗ, ಪತ್ರಿಕೆಯ ಅದರ ಹಿಂದಿನ ಸಂಚಿಕೆಗಳು ಮತ್ತು ಉಳಿದ ೨೪ ಪುಟಗಳನ್ನು ಇದು ಹೊಂದಿತ್ತೆಂದು ತಿಳಿಯುತ್ತದೆ. ಬ್ರಿಟಿಷ್‌ ಲೈಬ್ರರಿಯಿಂದ ಕೈಗೆಟುಕಿರುವ ಸಂಚಿಕೆಗಳು ೧೨ ಮಾತ್ರ ಇವೆ (ಸಂಚಿಕೆ ೭-೧೮). ಆದರೆ, ಅದರ ಹಿಂದಿನ ಸಂಚಿಕೆಗಳು ಏನಾದವೆಂಬುದು ತಿಳಿಯದು. ಇವು ನಾಶವಾಗಿರಬಹುದೇ ಅಥವಾ ಮತ್ತೆಲ್ಲಿಯಾದರೂ ಉಳಿದಿರಬಹುದೇ ಎಂದು ಇತ್ಯರ್ಥಕ್ಕೆ ಬರಬಹುದಾಗಿದೆ.

ವಿಷಯಗಳ ವಿಂಗಡನೆವಿಶ್ಲೇಷಣೆ

‘ಕಂನಡ ಸಮಾಚಾರ’ ಪತ್ರಿಕೆಯಲ್ಲಿ ಹಲವಾರು ವಿಷಯಗಳು ಪ್ರಕಟವಾಗಿವೆ. ಪತ್ರಿಕೆಯ ೧೨ ಸಂಚಿಕೆಗಳ ನೆರಳಚ್ಚು ಪ್ರತಿಗಳು ಇದೇ ಮೊದಲ ಬಾರಿ ಲಭ್ಯವಾಗಿರುವ ಕಾರಣ ವಿವಿಧ ವಿಷಯಗಳನ್ನು ಅಧ್ಯಯನ ಮಾಡುವ ದೃಷ್ಟಿಯಿಂದ ೧. ಅಂಕರಣಗಳು, ೨. ದೇಶ-ವಿದೇಶಗಳ ವರ್ತಮಾನಗಳು, ೩. ಕೆಲವು ವಿಶೇಷ ಸಂಗತಿಗಳು ಎಂದು ವಿಂಗಡಿಸಿಕೊಂಡು, ವಿಶ್ಲೇಷಣೆ ಮಾಡಲಾಗಿದೆ.

. ಅಂಕಣಗಳು

ಪತ್ರಿಕೆ ಹೊಸದಾಗಿ ಕೆಲವು ಅಂಕಣಗಳನ್ನು ಸೇರಿಸಿಕೊಂಡಿದೆ. ಓದುಗರಿಗೆ ಕೆಲವು ಮುಖ್ಯವಾದ ವಿಷಯಗಳನ್ನು ವಿವರವಾಗಿ ನೀಡುವ ಸಲುವಾಗಿ ನಿರ್ದಿಷ್ಟ ಶೀರ್ಷಿಕೆಯ ಅಡಿಯಲ್ಲಿ ಲೇಖನವನ್ನು ಮುಂದುವರಿಸಿರುವುದನ್ನು ಕಾಣುತ್ತೇವೆ. ಆದ್ದರಿಂದ ಈ ಪ್ರಕಟಣೆಯ ಹೊಸ ವಿಧಾನವನ್ನು ‘ಸ್ಥಿರ ಶೀರ್ಷಿಕೆಯ ಲೇಖನಮಾಲೆ’ ಎಂದು ಕರೆಯಬಹುದೇ ಅಥವಾ ಅಂಕಣವೆಂದು ತಿಳಿಯುವುದೇ ಇದನ್ನು ಓದುಗರು ನಿರ್ಧರಿಸಬೇಕು. ಆಧುನಿಕ ಪತ್ರಿಕಾ ಪರಿಭಾಷೆಯಲ್ಲಿ ಅಂಕಣಕ್ಕೆ ನಿರ್ದಿಷ್ಟವಾದ ಕೆಲವು ಲಕ್ಷಣಗಳಿವೆ. ಆದರೆ ಇಂತಹ ವಿಶೇಷತೆಗಳು ಇಲ್ಲಿಲ್ಲ. ಲೇಖಕನ ಹೆಸರು ನಮೂದಾಗಿರುವುದಿಲ್ಲ. ಆದರೆ ನಿರ್ದಿಷ್ಟ ಶೀರ್ಷಿಕೆಯ ಅಡಿಯಲ್ಲಿ ವಿಷಯದ ವಿವರ ಸಂಚಿಕೆಯಿಂದ ಸಂಚಿಕೆಗೆ ಮುಂದುವರೆಯುತ್ತಾ ಹೋಗಿರುವುದನ್ನು ಲಕ್ಷಿಸಿ, ಅಂಕಣಗಳೆಂದು ತಾತ್ಕಾಲಿಕವಾಗಿ ಗುರುತಿಸಿಕೊಳ್ಳಲಾಗಿದೆ. ಅವು ಇಂತಿವೆ:

ಅ. ಹಿಂದುದೇಶವನ್ನೂ ಕುರಿತು (An Account of Hindostan)
. ಜೀವನ ಚರಿತ್ರೆಗಳು
ಇ. ಹಿಂದುದೇಶದ ಸಂಚಾರದ ಕಥೆ (The Indian Traveller-letters)
ಈ. ಭೂಗೋಳದ ಪಾಠಗಳು (Geography Lessons)
ಉ. ಯಿಂಗ್ಲಾಂಡ್‌ ರಾಜ್ಯದ ಪೂರ್ವ ಚರಿತ್ರೆ (History of England)
ಊ. ಜಗದುತ್ಪತ್ತಿಯೂ ನರೋತ್ಪತ್ತಿಯೂ
ಋ. ಹಿಂದುಸ್ಥಾನ ದೇಶದ ವರ್ತಕವಂನು ಕುರಿತು (Trade of Hindostan)
ಎ. ಲೋಕದ ಚರಿತ್ರೆ (History of the World)
ಏ. ಯೇಸುಕ್ರಿಸ್ತನ ಸಭೆಯ ಚರಿತ್ರೆಯು (History of the Christian Church)

. ಹಿಂದುದೇಶವನ್ನು ಕುರಿತು

ಈ ದೇಶದ ಚರಿತ್ರೆಗೆ ಸಂಬಂಧಿಸಿದ ದೀರ್ಘ ಲೇಖನ ಸರಮಾಲೆಯಿದು. ಸಂಚಿಕೆ ೭ ರಿಂದ ೧೭ ರ ತನಕ ಒಟ್ಟು ೮ ಅಧ್ಯಾಯಗಳಲ್ಲಿ ಇದರ ಹವು ಇದೆ. ಪ್ರಾಚೀನ ಭಾರತ ಮತ್ತು ಮಧ್ಯಕಾಲೀನ ಭಾರತದ ಚರಿತ್ರೆಯ ಘಟನೆಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಕ್ರೋಢೀಕರಿಸಲಾಗಿದೆ. ಪ್ರತಿ ಅಧ್ಯಾಯದ ಬರೆಹ, ಶೈಲಿ ಸರಳವಾಗಿದೆ. ಆ ಕಾಲದ ಘಟನೆಗಳು, ರಾಜ್ಯಗಳ ಮೇಲಿನ ಅಧಿಕಾರ ಸ್ಥಾಪನೆ, ಯುದ್ಧಗಳು, ನಾಶ-ವಿನಾಶಗಳನ್ನಷ್ಟೇ ಹಿಡಿದಿಟ್ಟಿವೆ. ಈ ಬರೆಹಕ್ಕೆ ಲೇಖಕ ಚರಿತ್ರೆಯ ಯಾವ ಗ್ರಂಥವನ್ನು ಅನುಸರಿಸಿದ್ದಾನೆಂಬುದು ತಿಳಿಯದು. ಭಾರತ ದೇಶವನ್ನು ಆತ ಹಿಂದುದೇಶ, ಹಿಂದುಸ್ಥಾನವೆಂದು ಉಲ್ಲೇಖಿಸುತ್ತಾ ಬಂದಿರುವುದನ್ನು ಗಮನಿಸಬೇಕು.

ಪತ್ರಿಕೆಯ ೭ನೇ ಸಂಚಿಕೆಯ ಮುಖಪುಟದಿಂದ ‘ಹಿಂದುದೇಶವನ್ನು ಕುರಿತು ವಿಲಾಯತಿಯವರು ಪೂರ್ವದಲ್ಲಿ ಕೇಳಿದ ವರ್ತಮಾನಗಳು’ ಎಂಬ ತಲೆಬರೆಹದೊಂದಿಗೆ ಈ ಲೇಖನಸರಣಿ ಆರಂಭವಾಗುತ್ತದೆ: “ಹಿಂದುದೇಶದ ಸ್ವಭಾವವನ್ನು ಕುರಿತು ಪಶ್ಚಿಮ ದೇಶಸ್ಥರಿಗೆ ಪೂರ್ವದಲ್ಲಿ ನಿಶ್ಚಯೊ ವರ್ತಮಾನಯಿರಲಿಲ್ಲ. ಆದರೆ ವ್ಯಾಪಾರದಿಂದಲೂ ಯುದ್ಧಗಳಿಂದಲೂ ಯೀ ದೇಶವನ್ನು ಕುರಿತಂಥಾ ಅನೇಕ ಮಾತುಗಳು ಬಹುಪೂರ್ವ ಕಾಲದಲ್ಲಿ ಪಶ್ಚಿಮ ದೇಶದಾಗೆ ಬಂದವು. ಅನೇಕ ವ್ಯಾಪಾರಗಳ ಹೆಸರುಗಳು ಸಂಸ್ಕೃತ ಮಾತಿನಿಂದ ವಿಲಾಯಿತಿನ ಮಾತುಗಳಿಗೆ ಸೇರಿದವು. ಅದರ ಉದಾಹರಣೆಗಳು ಹ್ಯಾಗಂದರೆ ಹತ್ತಿಗೆ ಸಂಸ್ಕೃತದಿಂದ ಕಾರ್ಪಾನ (ಸ) ಹೇಳುತ್ತಾರೆ. ಯೀ ಮಾತು ಯೆಹೂದಿಯರ ಮಾತಿನಲ್ಲಿಯೂ ಲಾತಿನ್‌ ಭಾಷೆಯಲ್ಲಿಯೂ ಸೇರಿತು. ತವರಕ್ಕೆ ಸಂಸ್ಕೃತ ಮಾತಿನಿಂದ ಕಸ್ತಿರ, ಅದೇ ಮಾತು ಗ್ರೀಕ್‌ ಅರಬ್ಬಿ ಭಾಷೆಗಳಲ್ಲಿ ಸೇರಿತು. ಯಿದಕ್ಕೆ ಯವನೇಷ್ಟಯೆಂಬ ಹೆಸರು ಉಂಟಾದುದರಿಂದ ಪೂರ್ವದಲ್ಲಿ ಅದು ಯವನರಾದ ಗ್ರೀಕರು ಹಿಂದು ಜನರಿಂದ ತಂದಿದ್ದಾರೆಂದು ತೋಚುತ್ತದೆ. ಮೆಣಸಿಗೆ ರೂಢಿಯಾಗಿ ಸಿಪ್ಪಲಿಯೆಂಬ ಹೆಸರು ಸಂಸ್ಕೃತದಲ್ಲಿರುತ್ತದೆ. ಸಮಸ್ತ ವಿಲಾಯಿತಿಯವರ ಭಾಷೆಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿ ಅದೇ ಮಾತು ನಡೆಯುತ್ತದೆ.” ಪ್ರಾಚೀನ ಭಾರತದ ಚರಿತ್ರೆ ಕಾಲದಲ್ಲಿ ನಡೆದಿರುವ ವ್ಯಾಪಾರಕ್ಕೆ ಸಂಬಂಧಿಸಿದ ಕೊಡುಕೊಳು ವಹಿವಾಟು, ಸಮುದ್ರಯಾನದ ಸಂಕ್ಷಿಪ್ತ ವಿವರವನ್ನು ನೀಡುತ್ತದೆ.

೮ನೇ ಅಂಕೆ (ಸಂಚಿಕೆ) ಯ ೩ನೇ ಅಧ್ಯಾಯ ಯೇಸುಕ್ರಿಸ್ತನ ಮುಂಚೆ (ಕ್ರಿ,ಪೂ.) ಮತ್ತು ಯೇಸುಕ್ರಿಸ್ತನ ಮೇಲೆ (ಕ್ರಿ.ಶ.) ಎಂದು ಕಾಲವಿಭಜನೆಯನ್ನು ಮಾಡಿಕೊಂಡು “ಅಲೆಕ್ಸಾಂದ್ರನ ಮೇಲೆ ಜಯವುಳ್ಳವನಾದ ಸೆಲೈಕನು ಯೇಸುಕ್ರಿಸ್ತನ ಮುಂಚೆ ೩೧೨ನೇ ವರ್ಷದಲ್ಲಿ ಚಂದ್ರಗುಪ್ತನಿಗೆ ವಿರೋಧವಾಗಿ ತಧ್ರು ನದಿಯಂನು ದಾಟಿ ಯಿವನ ಹತ್ರ ದೂತನಾಗಿ ಮೆಗಾಸ್ಥಿನನಂನು ಯಿರಿಸಿದನು” ಇಲ್ಲಿಂದ ಆರಂಭಗೊಳ್ಳುವ ಚರಿತ್ರೆಯು ಮೆಗಾಸ್ಥಿನನು ಈ ದೇಶದ ಬಗ್ಗೆ ನೀಡಿದ ವಿವರಗಳನ್ನು ಕೊಡುತ್ತಾ, ಚಂದ್ರಗುಪ್ತನ ಆಳ್ವಿಕೆ, ಅಲೆಕ್ಸಾಂದ್ರನ ಸಾವು, ವಿಕ್ರಮಾದಿತ್ಯನ ಆಳ್ವಿಕೆ, ವಿಕ್ರಮಾದಿತ್ಯ ಶಕೆ ಆರಂಭ, ದಕ್ಷಿಣ ದೇಶದ ಶಾಲಿವಾಹನ ಕೈಯಲ್ಲಿ ವಿಕ್ರಮಾದಿತ್ಯನ ಸಾವಿನ ತನಕ ಸಂಕ್ಷಿಪ್ತವಾಗಿ ಸಾಗುತ್ತದೆ. ಶಂಕರಾಚಾರ್ಯರ ದೇಶ ಪರ್ಯಟನೆ, ಬೌದ್ಧಮತ, ಜೈನಮತಗಳ ಪ್ರಭಾವವನ್ನು ಉಲ್ಲೇಖಿಸುತ್ತದೆ.

ಇದೇ ಅಧ್ಯಾಯದ ೩ನೇ ಪ್ಯಾರಾವು – ಪ್ರಾಚೀನ ಭಾರತದ ಸೀಮೆ, ಪಟ್ಟಣ, ಪರ್ವತಗಳು, ನದಿಗಳ ಹೆಸರನ್ನು ಉಲ್ಲೇಖಿಸುತ್ತಾ ಹೋಗಿದೆ. ಇಲ್ಲಿ ಹಿಂದುದೇಶವನ್ನು ಹಿಂದುಸ್ಥಾನವೆಂದು ಕರೆದಿರುವುದನ್ನು ಕಾಣಬಹುದು. ಜಂಬುದ್ವೀಪದಿಂದ ಹಿಡಿದು ಇಂದ್ರಪ್ರಸ್ಥ, ಮಥುರಾ, ಪ್ರಯಾಗ, ಕನೋಜ, ತ್ರಿಪುರಾ, ಬಂಗಾಲ, ಶ್ರೀನಗರ ಇತ್ಯಾದಿ ಉತ್ತರ ಭಾಗದ ಪ್ರದೇಶಗಳವರೆಗೆ ಹಾಗೂ ದಕ್ಷಿಣದ ಮಲಯಾಳ, ಕೊಂಕಣ, ಕೇರಳ, ಮಹಿಷಾಪುರವೆಂಬ ಈಗಿನ ಮಹಿಸೂರುವರೆಗೆ ಉಲ್ಲೇಖಗಳು ಬರುತ್ತವೆ. ಭಾರತದ ಸ್ಥಳ ವಿಶೇಷಗಳನ್ನು ಕ್ರೋಢೀಕರಿಸಿರುವ ಪತ್ರಿಕೆಯ ಶೈಲಿ ವಿಶಿಷ್ಟ ಎನಿಸಿದೆ.

೮ನೇ ಅಂಕೆಯ ೩ನೇ ಅಧ್ಯಾಯನ ಪ್ರಾಚೀನ ಭಾರತಕ್ಕೆ ಸಂಬಂಧಿಸಿದ್ದರೆ, ೯ನೇ ಅಂಕೆಯ ೪ನೇ ಅಧ್ಯಾಯವು ಮಧ್ಯಕಾಲೀನ ಭಾರತ ಚರಿತ್ರೆಯ ಪ್ರಾರಂಭದ ವಿವರಗಳಿಗೆ ಸಂಬಂಧಿಸಿದ್ದಾಗಿದೆ. ಈ ಅಧ್ಯಾಯವು “ಯೇಸುಕ್ರಿಸ್ತನ ಮೇಲೆ ಸುಮಾರು ೫೦೦ನೇ ವರ್ಷದಲ್ಲಿ ಚತುರಂಗವೆಂಬ ಆಟವೂ ಪಂಚತಂತ್ರವೆಂಬ ಪುಸ್ತಕವೂ ಮೊದಲು ಫಾರ್ಶಿ ದೇಶಕ್ಕೆ ಅಲ್ಲಿಂದ ಸಮಸ್ತ ವಿಲಾಯಿತಿಗೆ ಸಹ ಬಂತು.. ಅದೇ ಪ್ರಕಾರ ಲೆಖ್ಖ ಗಣಿತ, ವೈದ್ಯಾದಿ ಹಿಂದು ವಿದ್ಯೆಗಳು ಫಾರ್ಶಿಸ್ಥಾನ ಅರೇಬಿಯಾಯೆಂಬ ದೇಶಗಳಿಗೆ ಬಂದವು” ಎಂದು ನಮ್ಮ ದೇಶದ ಚಿಂತನೆಗಳು ವಿದೇಶಿಗಳಿಗೆ ಹೋಗಿರುವ ವಿಚಾರವನ್ನು ಪ್ರಸ್ತಾಪಿಸುತ್ತಾ ಆರಂಭವಾಗಿ, ಭಾರತಕ್ಕೆ ಮುಸ್ಲಿಮರ ಆಗಮನ, ಘಸ್ನಿ ಮಹಮ್ಮದನ ರಾಜ್ಯ ವಿಸ್ತರಣೆ, ದಂಡಯಾತ್ರೆಗಳು, ಹಿಂಸಾಚಾರಗಳನ್ನು ತಿಳಿಸುತ್ತಾ ಒಂದು ಮುಖ್ಖಾಲು ಪುಟದಷ್ಟು ವ್ಯಾಪಿಸಿಕೊಂಡಿದೆ.

೯ನೇ ಸಂಚಿಕೆಯಿಂದ ೧೩ನೇ ಸಂಚಿಕೆಯವರೆಗೆ ಮುಂದುವರಿದ ಈ ಚರಿತ್ರೆ ಲೇಖನವು ಮುಸ್ಲಿಮ್‌ಅರಸು ಮನೆತನಗಳಾದ ಘೋರಿ, ಖಿಲ್ಜಿ, ತೊಗಲಕ್‌ ಹಾಗೂ ಲೋದಿ ವಂಶಸ್ಥರ ಆಳ್ವಿಕೆಯನ್ನು ೧೪, ೧೫, ೧೬ ಸಂಚಿಕೆಗಳ ತನಕ ಚಾಚಿಕೊಂಡಿದೆ. ಇಲ್ಲಿ ಬರೀ ಯುದ್ಧಗಳು, ಹಿಂಸಾಚಾರ, ಲೂಟಿ, ವಿನಾಶಗಳನ್ನಷ್ಟೇ ಚಿತ್ರಿಸಲಾಗಿದೆ. ಅವರ ಆಡಳಿತದ ಒಳ್ಳೆಯ ಸಾಧನೆಗಳು ಅಷ್ಟಾಗಿ ಗಣನೆಗೆ ಬಂದಿಲ್ಲ. ಹೀಗಾಗಿ ಮಧ್ಯಕಾಲೀನ ಭಾರತದ ಮುಸ್ಲಿಮ್‌ಅರಸು ಮನೆತನಗಳ ಆಳ್ವಿಕೆಯು ಒಂದು ಬರ್ಬರ ಅಧ್ಯಾಯವೆನ್ನುವಂತೆ ಚಿತ್ರಿತವಾಗಿರುವುದರಿಂದ, ಒಂದು ಮಗ್ಗುಲನ್ನೇ ನೋಡಿದಂತಿದೆ.

. ಜೀವನ ಚರಿತ್ರೆಗಳು.

ಮೋಗ್ಲಿಂಗ್‌ ರು ‘ಕಂನಡ ಸಮಾಚಾರ’ದ ಮೂಲಕ ಜಗತ್ತಿನ ದಾರ್ಶನಿಕರ ಜೀವನ ಚರಿತ್ರೆಗಳ ಸರಣಿ ಲೇಖನಮಾಲೆ ಪ್ರಕಟಿಸುವ ಗುರಿಯನ್ನು ಹಾಕಿಕೊಂಡಂತಿದೆ. ಈ ಸರಣಿಯ ಆರಂಭದ ಪ್ರಯತ್ನವೇ ಕೊನ್‌ಫೂಚೆ (The Life of Confutse) ಮತ್ತು ಪ್ರವಾದಿ ಮಹಮ್ಮದ್‌ (The Life of Mohammad) ಇವರೀರ್ವರ ಜೀವನಸಾಧನೆಗಳು. ಸಂಚಿಕೆ ೭ ಮತ್ತು ೧೨ ರಲ್ಲಿ ಚೈನಾ ದೇಶದ ಮಹಾನ್‌ ತತ್ವಜ್ಞಾನಿ ಕೊನ್‌ಫೂಚೆಯು ತೀವ್ರ ವಿರೋಧ ಮತ್ತು ವಿರೋಧಿಗಳ ನಡುವೆ ಜನರಿಗೆ ನೀತಿ ಬೋಧನೆಗಳನ್ನು ಮಾಡಿ ಸಮಾಜದ ಪರಿವರ್ತನೆಗೆ ಹೇಗೆ ಕಾರಣನಾದ ಎಂಬುದನ್ನು ತಿಳಿಸಲಾಗಿದೆ. ಜನರು ಭೋಗ ಲಾಲಸೆ, ವಂಚಕತನಗಳಲ್ಲಿ ಮುಳುಗಿದ್ದಾಗ ಅವರನ್ನು ಎಚ್ಚರಿಸುತ್ತಾನೆ: “ಮಿತಭೋಗದಲ್ಲಿಯೂ ನ್ಯಾಯದಲ್ಲಿಯೂ ಮೊದಲಾದ ಸದ್ಧರ್ಮಗಳಲ್ಲಿ ನಡೆದುಕೊಂಡು ದ್ರವ್ಯಾಶೆಯಂನೂ ಡಂಬಕತನವಂನೂ ವಿಸರ್ಜಿಸಿ ವಂಚನೆಯಿಲ್ಲದ ಸತ್ಯಮಾರ್ಗವಂನು ಕೈಗೊಳ್ಳಬೇಕು”. ಆತನ ಚಿಂತನೆಗಳು ಚೈನಾದಲ್ಲಿ ಮಾತ್ರವಲ್ಲ ಇತರ ದೇಶಗಳಿಗೂ ತಲುಪಿ ಸರ್ವಪ್ರಿಯನಾಗುವಂತೆ ಮಾಡಿತು.

ಈ ಬರೆಹದ ಎರಡನೆಯ ಚಿತ್ರಣವೇ ಪ್ರವಾದಿ ಮಹಮ್ಮದರ ಜೀವನ ಚರಿತ್ರೆ. ಸಂಚಿಕೆ ೧೧ ರಲ್ಲಿ ಅದು ಬಿತ್ತರಗೊಂಡಿದೆ. ಹಿಂದಿನ ಸಂಚಿಕೆಗಳಿಂದ (ಅವು ಅಲಭ್ಯ) ಇದು ಮುಂದುವರೆದಿದೆ. ತಾವು ಕಂಡುಕೊಂಡ ಇಸ್ಲಾಂ ಧರ್ಮ ಪ್ರಸಾರಕ್ಕೆ ಮಹಮ್ಮದರು ತೊಡಗಿದಾಗ ಎದುರಿಸಿದ ಅನೇಕ ಸಂಕಟ, ವಿರೋಧಗಳನ್ನು ಗುರುತಿಸಲಾಗಿದೆ. ಈ ಮೂಲಕ ಮೋಗ್ಲಿಂಗರು ಕನ್ನಡ ಸಾಹಿತ್ಯ ಲೋಕಕ್ಕೆ ಜೀವನ ಚರಿತ್ರೆಗಳ ಪ್ರವೇಶಿಕೆಯನ್ನು ದೊರಕಿಸಿ ಕೊಟ್ಟಿದ್ದಾರೆ.

[1] ಹೊಸಗನ್ನಡದ ಅರುಣೋದಯ, (೧೯೭೪), ಪು. ೪೮೫.

[2] ಕನ್ನಡಕ್ಕೆ ಕ್ರೈಸ್ತಮಿಶನರಿಗಳ ಕೊಡುಗೆ, ಪು. ೨೨೩.

[3] ಕುದ್ಕಾಡಿ ವಿಶ್ವನಾಥ ರೈ, ತುಳುತುಳು ಗಾದೆಗಳಿಗೊಂದು ಭಾಷ್ಯ, ಭಾಗ, ಸಹಕಾರಿ ಪ್ರಕಾಶನ, ಪುತ್ತೂರು, ೧೯೯೦.

[4] ತುಳುಸಾಹಿತ್ಯ ಚರಿತ್ರೆ, ಪು. ೯೮೩.