ಪ್ರವೇಶ

೧೯ನೇ ಶತಮಾನದ ಹೊಸಗನ್ನಡದ ಕಾಲಘಟ್ಟಕ್ಕೆ ಹೊಸ ಆಯಾಮಗಳು ಬಂದವು. ಆಧುನಿಕ ಶಿಕ್ಷಣದಿಂದಾಗಿ ಕನ್ನಡ ಭಾಷೆ ಮತ್ತು ರಚನೆಯಲ್ಲಿ ವೈವಿಧ್ಯತೆಗಳು ಕಾಣಿಸಿಕೊಂಡವು. ಹೊಸಗನ್ನಡದ ಗದ್ಯ ಮತ್ತು ಪದ್ಯ ಪ್ರಕಾರಕ್ಕೆ ಹೊಸ ಸೇರ್ಪಡೆಗಳಾದವು. ಕಾದಂಬರಿ, ಸಣ್ಣ ಕಥೆ, ಪ್ರವಾಸ ಕಥನ, ಜೀವನ ಚರಿತ್ರೆ, ಪ್ರಬಂಧ ರಚನೆ, ನವೋದಯ ಕಾವ್ಯ ಮುಂತಾದ ಸಾಹಿತ್ಯ ಪ್ರಾಕಾರಗಳ ಜೊತೆಗೆ ಕನ್ನಡಕ್ಕೆ ಪತ್ರಿಕೋದ್ಯಮ ಪ್ರಾಕಾರವೂ ಬಂದು ಸೇರಿತು. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕೆಲವು ಹೊಸ ಮಾರ್ಪಾಡುಗಳನ್ನು ತಂದುಕೊಟ್ಟು ಹೊಸ ಗನ್ನಡದ ಕಾಲಘಟ್ಟಕ್ಕೆ ಪೀಠಿಕೆ ಹಾಕಿಕೊಟ್ಟವರಲ್ಲಿ ರೆವರೆಂಡ್‌ ಹೆರ್ಮನ್‌ ಮೋಗ್ಲಿಂಗ್‌ ಕೂಡ ಒಬ್ಬರು. ಇವರು ಕನ್ನಡದ ಅಧ್ಯಯನಕ್ಕೆ ಹೊಸ ದಾರಿಗಳನ್ನು ಹಾಕಿಕೊಟ್ಟು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿದ್ದಾರೆ. ಇವರ ಬಹುಮುಖ ಸಾಧನೆಯ ಒಂದು ಭಾಗವಾದ ಕನ್ನಡ ಪತ್ರಿಕೋದ್ಯಮದ ಆರಂಭದ ಪರಿಚಯ ಇಲ್ಲಿದೆ.

ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ‘ಮಂಗಳೂರ ಸಮಾಚಾರ’(೧೮೪೩), ‘ಕಂನಡ ಸಮಾಚಾರವು’ (೧೮೪೪) ಎಂಬ ಎರಡು ವರ್ತಮಾನ ಪತ್ರಿಕೆಗಳು ಅತ್ಯಂತ ಪ್ರಮುಖವಾಗಿವೆ. ಇವು ಕನ್ನಡ ಪತ್ರಿಕೋದ್ಯಮ ಆರಂಭದ ಮೊದಲ ಘಟ್ಟದ ಮುಖ್ಯ ಮೈಲುಗಲ್ಲುಗಳಾಗಿವೆ. ಬ್ರಿಟಿಷರ ಆಡಳಿತ ಕಾಲದಲ್ಲಿ ಕನ್ನಡಿಗರಿಗೆ ಹೊಸದಾಗಿ ಪತ್ರಿಕಾ ಕ್ಷೇತ್ರವನ್ನು ಇವು ಪರಿಚಯಿಸಿಕೊಟ್ಟವು. ಮಾಹಿತಿಯನ್ನು ತಿಳಿದುಕೊಳ್ಳುವ, ಹಂಚಿಕೊಳ್ಳುವ ತಿಳಿವಳಿಕೆಯನ್ನು ವಿಸ್ತರಿಸಿಕೊಟ್ಟವು. ಆಗಿನಿಂದ ಪತ್ರಿಕಾ ವ್ಯವಸಾಯಕ್ಕೆ ತೊಡಗುವಂತೆ ಪ್ರೇರೇಪಿಸಿಕೊಟ್ಟವು.

ಈ ಎರಡೂ ಪತ್ರಿಕೆಗಳ ಲೇಖಕ, ಸಂಪಾದಕರೇ ಹೆರ್ಮನ್‌ ಮೋಗ್ಲಿಂಗ್‌ . ಇವರ ಪೂರ್ಣ ಹೆಸರು ಹೆರ್ಮನ್‌ ಫ್ರೆಡ್ರಿಕ್‌ಮೋಗ್ಲಿಂಗ್‌ . ಕನ್ನಡ ಪತ್ರಿಕೋದ್ಯಮದ ಪಿತಾಮಹನೆಂದು ಅವರನ್ನು ಗೌರವದಿಂದ ಉಲ್ಲೇಖಿಸುತ್ತಾರೆ. ಮೂಲತಃ ಜರ್ಮನಿ ದೇಶದವರಾದ ಅವರು ಬಾಸೆಲ್‌ಮಿಷನ್‌ ದವರ ಕ್ರೈಸ್ತಧರ್ಮ ಪ್ರಚಾರಕರಾಗಿ (ಮಿಷನರಿಯಾಗಿ) ಕ್ರಿ.ಶ. ೧೮೩೬ರ ಹೊತ್ತಿಗೆ ನಮ್ಮ ನಾಡಿಗೆ ಬಂದರು. ಇಲ್ಲಿನ ಜನಜೀವನ, ವಿವಿಧ ಜಾತಿಧರ್ಮಗಳ ಪ್ರಭಾವ, ರೀತಿ-ನೀತಿಗಳನ್ನು ಅರಿಯಲು ಒಂದು ಕಡೆ ನಿಲ್ಲದೆ ಸುತ್ತಾಡಿದರು. ಅವರ ಬಹುಮುಖ ಕಾರ್ಯಸಾಧನೆಯನ್ನು ಗಮನಿಸಿ ಧಾರವಾಡ (೧೮೩೭-೧೮೩೮), ಮಂಗಳೂರು (೧೮೩೯-೧೮೫೧), ಕೊಡಗು (೧೮೫೨-೧೮೬೦) – ಈ ಮೂರು ಪ್ರದೇಶಗಳ ವ್ಯಾಪ್ತಿಯಲ್ಲಿ ಸುಮಾರು ೨೪ ವರ್ಷಗಳ ಕಾಲ ಇವರ ಜೀವನ ಸುತ್ತಾಟ ನಡೆದಿದೆಯೆಂದು ವಿದ್ವಾಂಸರು ಗುರುತಿಸಿದ್ದಾರೆ. ಧರ್ಮ ಪ್ರಸಾರ, ಶಿಕ್ಷಣ, ಸಾಹಿತ್ಯ, ಸಂಶೋಧನೆ-ಪ್ರಕಟಣೆ, ಕನ್ನಡಲಿಪಿ ಸುಧಾರಣೆ, ಕನ್ನಡ ಪತ್ರಿಕೆಗಳ ಆರಂಭ ಇತ್ಯಾದಿ ಕ್ಷೇತ್ರಗಳಲ್ಲಿ ಅನುಪಮ ಸೇವೆಸಲ್ಲಿಸಿದ್ದಾರೆ. ಕೇವಲ ಬಾಸೆಲ್‌ ಮಿಷನರಿಯಾಗಿ ಧರ್ಮ ಪ್ರಚಾರದ ಕೆಲಸದಲ್ಲೇ ಆತ ಉಳಿದಿದ್ದರೆ ನಮ್ಮ ನಾಡು ಮತ್ತು ಸಂಸ್ಕೃತಿಯು ಅಪರೂಪದ ಕೊಡುಗೆಯಿಂದ ವಂಚಿತವಾಗುತ್ತಿತ್ತು.

ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’

ಕನ್ನಡದ ಮೊಟ್ಟಮೊದಲ ಪತ್ರಿಕೆ ಯಾವುದು? ಅದು ಯಾವಾಗ ಮತ್ತು ಎಲ್ಲಿ ಸ್ಥಾಪನೆಯಾಯಿತು ಎಂಬುದರ ಬಗೆಗೆ ಈ ಮೊದಲು ಭಿನ್ನಾಭಿಪ್ರಾಯಗಳಿದ್ದವು. ಕನ್ನಡ ಪತ್ರಿಕೋದ್ಯಮ ಶಿಕ್ಷಣದ ವಿದ್ವಾಂಸರಾದ ಡಾ. ನಾಡಿಗ ಕೃಷ್ಣಮೂರ್ತಿಯವರು ‘ಭಾರತೀಯ ಪತ್ರಿಕೋದ್ಯಮ’ ಎಂಬ ತಮ್ಮ ಮಹಾಪ್ರಬಂಧದಲ್ಲಿ ಈ ಬಗ್ಗೆ ಜಿಜ್ಞಾಸೆ ವ್ಯಕ್ತಪಡಿಸಿ, ಇದಕ್ಕೆ ಸಮಾಧಾನವೆಂಬಂತೆ “ಕನ್ನಡ ಪತ್ರಿಕೆಯನ್ನು ಪ್ರಥಮವಾಗಿ ಪ್ರಕಟಿಸಿ, ಮುದ್ರಿಸಿದ ಕೀರ್ತಿಯು ಬಳ್ಳಾರಿಯ ಜರ್ಮನ್‌ ಪಾದ್ರಿಗಳಿಗೆ ಸೇರಿದುದು. ‘ಕನ್ನಡ ಸಮಾಚಾರ’ ಎಂಬ ಪ್ರಥಮ ಕನ್ನಡ ಪತ್ರಿಕೆಯನ್ನು ೧೮೧೨ನೇ ಇಸವಿಯಲ್ಲಿ ಧರ್ಮಪ್ರಚಾರಕ್ಕೋಶ್ಕರ ಪ್ರಕಟಿಸಿದರು. ಬಳ್ಳಾರಿಯಲ್ಲಿ ಅಚ್ಚಾದ ‘ಕನ್ನಡ ಸಮಾಚಾರ’ವೇ ಕನ್ನಡ ನಾಡಿನ ಪ್ರಥಮ ಪತ್ರಿಕೆಯೆಂದು ಘಂಟಾಘೋಷವಾಗಿ ಹೇಳಬಹುದು. ಬಳ್ಳಾರಿಯಿಂದ ಕೆಲವು ಜರ್ಮನ್‌ ಪಾದ್ರಿಗಳು ಮಂಗಳೂರಿಗೆ ಹೋಗಿ ನೆಲೆಸಿದಾಗ, ಆ ಪತ್ರಿಕೆಯನ್ನು ತೆಗೆದುಕೊಂಡು ಹೋದರು. ೧೮೪೨ರಲ್ಲಿ ಬಾಸೆಲ್‌ ಮಿಷನ್‌ ಪ್ರೆಸ್‌ನಲ್ಲಿ ಈ ಪತ್ರಿಕೆಯನ್ನು ಅಚ್ಚು ಮಾಡಿದಾಗ ಅದರ ಹೆಸರನ್ನು ಕನ್ನಡ ಸಮಾಚಾರವೆಂದೇ ಮುಂದುವರಿಸಿದರು. ಕೆಲವು ಕಾಲನಂತರ ಅದರ ಹೆಸರನ್ನು ಮಂಗಳೂರು ಸಮಾಚಾರ, ಕನ್ನಡ ಸುವಾರ್ತಿಕ, ಕರ್ನಾಟಕ ಪತ್ರಿಕೆ, ಬಾಲಪತ್ರ, ಸತ್ಯದೀಪಿಕೆ ಮತ್ತು ಕ್ರೈಸ್ತ ಸಭಾಪತ್ರವಾಗಿ ಬದಲಾಯಿಸಲಾಯಿತು” ಎಂದು ತಿಳಿಸಿದ್ದಾರೆ.[1]

ಕನ್ನಡದಲ್ಲಿ ಪ್ರಾರಂಭವಾದ ಪ್ರಥಮ ಪತ್ರಿಕೆ ‘ಮಂಗಳೂರ ಸಮಾಚಾರ’ವೇ ಹೊರತು ‘ಕನ್ನಡ ಸಮಾಚಾರ’ವಲ್ಲ. ‘ಕನ್ನಡ ಸಮಾಚಾರ’ ಕನ್ನಡದ ಎರಡನೇ ಪತ್ರಿಕೆ, ಮಂಗಳೂರು ಸಮಾಚಾರದ ಬದಲಾದ ಇನ್ನೊಂದು ರೂಪವೆಂಬ ಶೋಧನೆಯನ್ನು ಡಾ. ಶ್ರೀನಿವಾಸ ಹಾವನೂರ ಅವರು ೧೯೬೫ ರ ಹೊತ್ತಿಗೆ ಮಾಡಿದರು. ಇದನ್ನು ‘ಕಸ್ತೂರಿ (ಮೇ ೧೯೬೫) ನಿಯತಕಾಲಿಕೆಯಲ್ಲಿ ಪ್ರಕಟಿಸಿದ ಮೇಲೂ, ಡಾ. ನಾಡಿಗರು ಬಿತ್ತಿಹೋಗಿದ್ದ ಅನುಮಾನ ತಿಳಿಯಾಗಲಿಲ್ಲ. ೧೯೭೪ರಲ್ಲಿ ಪ್ರಕಟವಾದ ‘ಹೊಸಗನ್ನಡದ ಅರುಣೋದಯ’ ಎಂಬ ತಮ್ಮ ಮಹಾಪ್ರಬಂಧದಲ್ಲಿ ಡಾ. ಶ್ರೀನಿವಾಸ ಹಾವನೂರರವರು ಕನ್ನಡದ ಪ್ರಥಮ ಪತ್ರಿಕೆ ‘ಮಂಗಳೂರ ಸಮಾಚಾರ’ ಎಂಬ ಅಭಿಪ್ರಾಯವನ್ನು ಮತ್ತೊಮ್ಮೆ ಆಧಾರಗಳ ಸಮೇತ ಬಲಪಡಿಸಿದರು. “ಬಳ್ಳಾರಿಯಲ್ಲಿ ಜರ್ಮನ್‌ ಮಿಷನರಿಗಳು ನೆಲೆಸಲೇ ಇಲ್ಲ! ಮಂಗಳೂರು ಇವರ ಮೊದಲ ನೆಲೆಯಾಗಿತ್ತು; ಮತ್ತು ಬಳ್ಳಾರಿಯಲ್ಲಿ ನಿಂತವರು ಲಂಡನ್‌ ಮಿಷನ್ನಿನವರು. ಇದುವರೆಗೆ ಅಲಭ್ಯವಿದ್ದ ‘ಮಂಗಳೂರ ಸಮಾಚಾರ’ ಪತ್ರಿಕೆಯ ಪ್ರಥಮ ಸಂಪುಟವನ್ನು ವಿದೇಶದಿಂದ ತರಿಸಲಾಗಿದ್ದು, ಅದರ ಮೊದಲ ಸಂಚಿಕೆಯಿಂದ ಆ ಪತ್ರಿಕೆಯು ೧೮೪೩ ರಲ್ಲಿ ಆರಂಭವಾದ ವಿಷಯ ಮತ್ತು ಅದರ ಕೊನೆಯ ಸಂಚಿಕೆಯಿಂದ, ಅದು ‘ಕಂನಡ ಸಮಾಚಾರ’ ಎಂಬ ಹೆಸರನ್ನು ತಳೆದು ೧೮೪೪ ರಿಂದ ಬಳ್ಳಾರಿಯಿಂದ ಹೊರಡತೊಡಗಿತು”.[2] ಆ ಮೂಲಕ ಪ್ರಥಮ ಪತ್ರಿಕೆಯ ಬಗ್ಗೆ ಇದ್ದ ತಪ್ಪು ಅಭಿಪ್ರಾಯಗಳು ನಿಚ್ಚಳವಾಗಿ ಬದಲಾಗಿವೆ.

ಪತ್ರಿಕೆಯ ಉದ್ದೇಶ

ಕನ್ನಡದ ಚೊಚ್ಚಲ ಪತ್ರಿಕೆ ‘ಮಂಗಳೂರ ಸಮಾಚಾರ’ವು ಕಲ್ಲಚ್ಚಿನಲ್ಲಿ ಹದಿನೈದು ದಿನಗಳಿಗೊಮ್ಮೆ (ಪಾಕ್ಷಿಕ) ಮಂಗಳೂರಿನಿಂದ ಪ್ರಕಟವಾಗುತ್ತಿತ್ತು. ನಾಲ್ಕು ಪುಟಗಳನ್ನೊಳಗೊಂಡ ಪತ್ರಿಕೆಯ ಬೆಲೆ ಕೇವಲ ಒಂದು ದುಡ್ಡು. ಇದರಲ್ಲಿ ಪತ್ರಿಕೆ ರವಾನೆಗೆ ಸಂಬಂಧಿಸಿದ ಅಂಚೆ ವೆಚ್ಚವೂ ಸೇರಿತ್ತು. ಮಂಗಳೂರಿನಲ್ಲಿ ಕೊತ್ವಾಲ ಕಟ್ಟೆಯೆದುರು ಮತ್ತು ತಾಲೂಕು ಕಚೇರಿಯ ಹತ್ತಿರವಿದ್ದ ಅವರ ಇಂಗ್ಲಿಷ್‌ ಶಾಲೆಯಲ್ಲಿ ಪತ್ರಿಕೆ ಮಾರಾಟಕ್ಕೆ ದೊರೆಯುತ್ತಿತ್ತು. ಇವ್ಯಾಂಜೆಲಿಕಲ್‌ (ಬಾಸೆಲ್‌) ಮಿಷನ್‌ ದವರು ತರಿಸಿದ್ದ ಮುದ್ರಣ ಯಂತ್ರಕ್ಕೆ ಕಲ್ಲಚ್ಚನ್ನು ಜೋಡಿಸಿ ಪ್ರಕಟಿಸುತ್ತಿದ್ದರು. ಕಲ್ಲಚ್ಚಿನ ಮುದ್ರಣ ಸ್ವರೂಪ ಸುಂದರವಾಗಿತ್ತು. ಪತ್ರಿಕೆಯ ಒಡೆತನ ಬಾಸೆಲ್‌ಮಿಷನವರಿಗೆ ಸೇರಿದ್ದರೂ ಎಲ್ಲಿಯೂ ಅದರ ಪ್ರಸ್ತಾಪವಿಲ್ಲ. ಆದರೆ ಪ್ರತಿ ಸಂಚಿಕೆಯ ಕೊನೆಯಲ್ಲಿ ಪತ್ರಿಕಾ ಸಂಪಾದಕರಾದ ಹೆರ್ಮನ್‌ ಮೋಗ್ಲಿಂಗ್‌ ಅವರ ಹೆಸರು ಪ್ರಕಟಗೊಂಡಿದೆ (H. Moegling, Editor).

ಈ ಪತ್ರಿಕೆಯ ಉದ್ದೇಶವೇನು? ಅದು ಏನನ್ನು ಒಳಗೊಂಡಿರಬೇಕು? ಇತ್ಯಾದಿ ವಿಷಯಗಳ ಸ್ವರೂಪವನ್ನು ಮೊದಲ ಸಂಚಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ: “ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಇಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮರ್ಯಾದೆಗಳಂನು ತಿಳಿಯದೇ ಕಿಟಕಿಯಿಲ್ಲದ ಬಿಡಾರದಲ್ಲಿ ವುಳಕೊಳ್ಳುವವರ ಹಾಗೆಯಿರುತ್ತಾ ಬಂದರು. ಅದು ಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ವೊಳಗೆ ಸ್ವಲ್ಪ ಬೆಳಕು ಬೀರುವ ಹಾಗೆಯೂ ನಾಲ್ಕು ದಿಕ್ಕಿಗೆ ಕಿಟಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷಕ್ಕೆ ವೊಂದು ಸಾರಿ ಸಿದ್ಧಮಾಡಿ ಅದನ್ನು ಓದಬೇಕೆಂದಿರುವರೆಲ್ಲರಿಗೆ ಕೊಟ್ಟರೆ ಕಿಟಕಿಗಳನ್ನು ಮಾಡಿದ ಹಾಗಾಗಿರುವುದು.”[3]

ಕನ್ನಡದ ಓದುಗರು ಈ ಪತ್ರಿಕೆಯ ಮೂಲಕ ಪ್ರಪಂಚವನ್ನು ಅರಿತುಕೊಳ್ಳಬೇಕೆಂಬ ಸ್ಪಷ್ಟ ಉದ್ದೇಶ ಇಲ್ಲಿದೆ. ಜಗತ್ತಿನ ನಾಲ್ಕು ದಿಕ್ಕಿನ ವರ್ತಮಾನಗಳನ್ನು ಈ ನಾಡಿನ ಜನರಿಗೆ ತಲುಪಿಸುವ ತನ್ನ ಗುರಿಗೆ ಸುಂದರವಾದ ಹೋಲಿಕೆಯನ್ನು ಸಂಪಾದಕರು ನೀಡಿರುವುದು ಗಮನಾರ್ಹ.

ಪತ್ರಿಕೆಯ ಹರವುಆರೋಗ್ಯಕರ ನಿಲುವು

ಪತ್ರಿಕೆಯು ಏನೆಲ್ಲಾ ಸುದ್ದಿಸಂಗ್ರಹ ಹೊಂದಿರಬೇಕೆಂಬುದನ್ನು ಈ ರೀತಿ ಸೂಚಿಸಲಾಗಿದೆ:

೧. ವೂರ ವರ್ತಮಾನಗಳು
೨. ಸರಕಾರ ಈ ನಿರೂಪಗಳು ಕಾನೂನು
೩. ಸುಬುದ್ಧಿಯನ್ನು ಹೇಳುವ ಸಾಮತಿಗಳು, ಹಾಡುಗಳು
೪. ಕಥೆಗಳು
೫. ಸರ್ವರಾಜ್ಯ ವರ್ತಮಾನಗಳು

ವಿದೇಶದಿಂದ ತರಿಸಿಕೊಳ್ಳಲಾದ ಪತ್ರಿಕೆಯ ಪ್ರಥಮ ಸಂಪುಟದ ಹಲವು ಸಂಚಿಕೆಗಳ ಸಾರಸಂಗ್ರಹವನ್ನು ಡಾ. ಶ್ರೀನಿವಾಸ ಹಾವನೂರ ಅವರು ತಮ್ಮ ‘ಹೊಸಗನ್ನಡದ ಅರುಣೋದಯ’ ಗ್ರಂಥದಲ್ಲಿ ಹಿಡಿದಿಟ್ಟಿದ್ದಾರೆ (ಪು. ೪೮೨-೪೮೮). ಹಲವು ವಿಷಯಗಳ ಅಧ್ಯಯನಕ್ಕೆ ಇದು ಆಧಾರವಾಗಿದೆ. ಪತ್ರಿಕೆಯ ಸುಮಾರು ೧೦೦ ಪ್ರತಿಗಳು ಪ್ರಕಟವಾಗುತ್ತಿದ್ದವು. ಮಂಗಳೂರು, ಮೈಸೂರು, ತುಮಕೂರು, ಬಳ್ಳಾರಿ, ಶಿವಮೊಗ್ಗ, ಹುಬ್ಬಳ್ಳಿ, ಶಿರಸಿ, ಹೊನ್ನಾವರ ಈ ಮೊದಲಾದ ಸ್ಥಳಗಳಿಗೆ ಹೋಗುತ್ತಿದ್ದವು. ಸುದ್ದಿಯ ಹರವು ವ್ಯಾಪಕವಾಗಿತ್ತಲ್ಲದೆ, ಇಂದಿನ ಪತ್ರಿಕೆಗಳ ಕ್ರಮವನ್ನು ಅನುಸರಿಸಲಾಗುತ್ತಿತ್ತು. ಸುದ್ಧಿಯನ್ನು ಎಲ್ಲಿಂದಲೇ ಬಳಸಿಕೊಂಡಿರಲಿ ಅದು ಎತ್ತುಗಡೆಯಾಗಿರದೆ ಆಧುನಿಕ ಪತ್ರಿಕೋದ್ಯಮದ ಅನೇಕ ಲಕ್ಷಣಗಳನ್ನು ಒಳಗೊಂಡಿದೆಯೆಂದು ವಿಶ್ಲೇಷಿಸಲಾಗಿದೆ.

ಪತ್ರಿಕೆಯ ಹರವುಆರೋಗ್ಯಕರ ನಿಲುವು

‘ಮಂಗಳೂರು ಸಮಾಚಾರ’ ಪತ್ರಿಕೆಗಿಟ್ಟ ಈ ಹೆಸರು, ಅದರ ಪುಟಗಳು, ಮುದ್ರಣಗೊಳ್ಳುವ ಅವಧಿ, ಬೆಲೆ, ಅದು ಒಳಗೊಳ್ಳಬೇಕಾದ ವಿಷಯಗಳು, ಉದ್ದೇಶ ಇತ್ಯಾದಿ ವಿಚಾರಗಳನ್ನು ಗಮನಿಸಿದಾಗ – ಮೋಗ್ಲಿಂಗ್‌ ಅವರಿಗೆ ಪತ್ರಿಕೆಯ ಸ್ವರೂಪ, ಅದು ನಿಭಾಯಿಸಬೇಕಾಗಿರುವ ಜವಾಬ್ದಾರಿ ಕುರಿತ ಒಂದು ನಿರ್ದಿಷ್ಟವಾದ ಮುನ್ನೋಟ ಇತ್ತೆಂದು ತೋರುತ್ತದೆ. “ಯುರೋಪದಲ್ಲಿ ಪತ್ರಿಕೆಗಳು ಜನಜೀವನದ ಭಾಗವಾಗಿರುವುದನ್ನು ಬಾಸೆಲ್‌ಮಿಶನರಿಗಳು ಕಂಡುಕೊಂಡಿದ್ದರು. ಆದ್ದರಿಂದಲೇ ಅವರು ಕನ್ನಡದಲ್ಲಿ ಸ್ವತಂತ್ರವಾದ ಪತ್ರಿಕೆಗಳು ಬರಬೇಕೆಂದು ಬಯಸಿದರು.” [4]

ಈ ಪತ್ರಿಕೆಯಲ್ಲಿ ಮಂಗಳೂರು ನಗರದ, ಜಿಲ್ಲೆಯ, ರಾಜ್ಯ ಹಾಗೂ ಇತರ ರಾಜ್ಯಗಳ ಸುದ್ದಿಗಳು ಇರುತ್ತಿದ್ದವು. ಗಾಳಿಸುದ್ದಿ (ಸುಳ್ಳು ಸುದ್ದಿ)ಗಳಿಗೆ ಅವಕಾಶ ನೀಡುತ್ತಿರಲಿಲ್ಲ. ಅಪರಾಧಗಳನ್ನು ಮಾಡಿದರೆ ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ ಎಂಬ ತಿಳಿವಳಿಕೆ ಜನರಲ್ಲಿ ಉಂಟಾಗಬೇಕೆಂಬ ಉದ್ದೇಶದಿಂದ ಕೋರ್ಟಿನ ಪ್ರಕರಣಗಳಿಗೆ ಸಂಬಂಧಿಸಿದ ಸಮಾಚಾರಗಳನ್ನು ಹೆಚ್ಚಾಗಿ ಪ್ರಕಟಿಸಲಾಗುತ್ತಿತ್ತು.

ಬೇರೆ ಊರಿನವರಿಗೂ, ತಮ್ಮ ಊರಿನ ವರ್ತಮಾನಗಳನ್ನು ಕಳುಹಿಸಲು ಈ ಪತ್ರಿಕೆ ಅನುವು ಮಾಡಿಕೊಟ್ಟಿತ್ತು. ಮೈಸೂರಿನಿಂದ ಕಳುಹಿಸಲಾಗಿದ್ದ ಪತ್ರವೊಂದರಲ್ಲಿ ವರ್ತಮಾನ ಕಳಿಸಿದವರ ಹೆಸರಿಲ್ಲದಿರುವುದನ್ನು ಗಮನಿಸಿದ ಸಂಪಾದಕರು, ಅದರ ಔಚಿತ್ಯವನ್ನರಿತು ವರ್ತಮಾನವನ್ನು ಪ್ರಕಟಿಸಿದರಲ್ಲದೆ, ಇನ್ನು ಮುಂದೆ ವರ್ತಮಾನ ಕಳುಹಿಸಿಕೊಡುವವರು ತಮ್ಮ ಊರು, ಹೆಸರು ಮುಂತಾದ ಮಾಹಿತಿಗಳನ್ನು ತಿಳಿಸಬೇಕೆಂದು ಸೂಚಿಸುತ್ತಾರೆ. ಹೆಸರು ಪ್ರಕಟಿಸಬಾರದೆಂದು ತಿಳಿಸಿದಲ್ಲಿ, ಅದನ್ನು ಗೋಪ್ಯವಾಗಿಡಲಾಗುವುದೆಂದು ತಿಳಿಸುತ್ತಾರೆ.

ಅಂದ ಹಾಗೆ ಮೈಸೂರಿನಿಂದ ಬಂದ ವರ್ತಮಾನವಾದರೂ ಯಾವುದು? ಅದರಲ್ಲಿರುವ ವಿಷಯವಾದರೂ ಏನು:

“ಜೂನ್‌ ತಿಂಗಳಲ್ಲಿ ಈ ಊರು ದೊರೆಗಳವರ ಮಕ್ಕಳ ವಿವಾಹ ಮಹೋತ್ಸವು ಆಯಿತು. ಯೀ ಪ್ರಸ್ತದಲ್ಲಿ ದೊರೆಗಳವರ ಬ್ರಾಂಹ್ಮರೇ ಮೊದಲಾದ ಸಮಸ್ತ ಜಾತಿಯವರಲ್ಲಿ ಅಬಾಲ ಉರದ್ಧರಿಗೆ ಭೋಜನವನ್ನು ಮಾಡಿಸಿ, ಅವರವರ ಯೋಗ್ಯತಾನುಸಾರವಾಗಿ ಶಾಲು, ವಲ್ಲಿ, ಧೋತ್ರ ಮೊದಲಾದ ಉಡುಗೊರೆಗಳನ್ನು ಕೊಟ್ಟು ಸಮಸ್ತರನ್ನು ತೃಪ್ತಿಪಡಿಸಿದರು. ಆ ಉಡುಗೊರೆಗಳು ಈ ಊರಲ್ಲಿ, ಎಲ್ಲಾ ಕಡೆಯಲ್ಲಿಯೂ ಭರಿತವಾಗಿರುವ ಕಾರಣ ಯಾವ ಸ್ಥಳದಲ್ಲಿ ನೋಡಿದರೂ ಅವರ ಉದಾರ ಕ್ಷಮಾ ಕೊಂಡಾಡಲ್ಪಟ್ಟಿದೆ. ಇದಲ್ಲದೆ ಅತ್ಯಂತ ಶ್ರಮೆಯನ್ನು ಅನುಭವಿಸುತ್ತಿದ್ದ ಕೆಲವು ಜನರಿಗೆ ಸಂಬಳ ಮಾಡಿಸಿಕೊಟ್ಟು ಇನ್ನೂ ಕೆಲವರ ಸಂಬಳವನ್ನು ಹೆಚ್ಚು ಮಾಡಿಸಿದರು. ಯಿದೇ ಪ್ರಕಾರವಾಗಿ ಈ ದೊರೆಯವರು ಅನೇಕರನ್ನು ಸಂರಕ್ಷಿಸಿ ಅವರ ಪುತ್ರ ಪಾತ್ರ ಅವರ ಉಪಕಾರ ಸ್ಮರಿಸುವ ಹಾಗೆ ಮಾಡಿದ್ದಾರೆ. ಯಿವರ ದಾತೃತ್ವದ ನಿದರ್ಶನಗಳು ಅನೇಕವಾಗಿವೆ – ಕಣ್ಣಿಂದ ಕಂಡವರು” (೬ನೇ ಸಂಚಿಕೆ).[5]

ಈ ಮೇಲಿನ ವರ್ತಮಾನದ ವಿಶೇಷತೆಯೆಂದರೆ, ಅರಮನೆಯ ಮದುವೆಯ ಔತಣ. ಇದನ್ನು ಕಳುಹಿಸಿದವರ ಹೆಸರಿಲ್ಲದಿದ್ದರೂ ಔತಣಕೂಟದಲ್ಲಿ ಭಾಗವಹಿಸಿದವರೇ ಕಳಿಸಿರುವ ಸಾಧ್ಯತೆಯಿರುವುದರಿಂದ, ಸುದ್ದಿಯ ಔಚಿತ್ಯವನರಿತು ಪ್ರಕಟಿಸಲಾಗಿದೆ. ಎಲ್ಲ ವರ್ಗಗಳ ಜನರು ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು, ಬಹುಮಾನಗಳನ್ನು ಪಡೆದಿದ್ದಾರೆ. ಅರಮನೆಯಲ್ಲದ ಈ ಘಟನೆಯು ಸಮಕಾಲೀನ ಮೈಸೂರು ಇತಿಹಾಸಕ್ಕೆ ಒಂದು ನಿದರ್ಶನವಾಗುತ್ತದೆ.

ತಮ್ಮ ಕಾಲದಲ್ಲಿ ನಡೆದಿರುವಂತಹ ದೇಶೀಯ ಅರಸರ ಯುದ್ಧಗಳನ್ನು ಮೋಗ್ಲಿಂಗರು ಪತ್ರಿಕೆಯಲ್ಲಿ ದಾಖಲಿಸಿದ್ದಾರೆ. ಹಿಂದೂಸ್ತಾನದ ಗ್ವಾಲಿಯರ್, ಲಾಹೋರ್, ಸಿಂಧ್‌ ಮುಂತಾದ ಪ್ರಾಂತಗಳ ಅರಸರು ಬ್ರಿಟಿಷರೊಡನೆ ಹೋರಾಡಿ, ಒಂದೊಂದಾಗಿ ಅಸ್ತಂಗತವಾಗುತ್ತಿದ್ದುದರ ಚಿತ್ರಣ ಅಲ್ಲಿದೆ. ಅಲ್ಲದೆ ಕಾಬೂಲ್‌, ಚೀನಾ ದೇಶಗಳಲ್ಲಿ ನಡೆದ ಯುದ್ಧಗಳಿಗೆ ಸಂಬಂಧಿಸಿದ ಘಟನೆಗಳು ಪ್ರಕಟವಾಗಿವೆ. ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಮಂಗಳೂರು ಸಮಾಚಾರ’ ಪತ್ರಿಕೆಯು ಮಂಗಳೂರು ಸುತ್ತಮುತ್ತಲಿನ ವರ್ತಮಾನಗಳನ್ನಲ್ಲದೆ ರಾಜ್ಯಗಳ, ವಿವಿಧ ದೇಶಗಳಲ್ಲಿನ ಆಗುಹೋಗುಗಳ ಬಗ್ಗೆಯೂ ಜನರಿಗೆ ಮಾಹಿತಿಯನ್ನು ಒದಗಿಸಿಕೊಡುತ್ತಿತ್ತು. ಈ ರೀತಿಯಾಗಿ ಪತ್ರಿಕೆ ತನಗೆ ಲಭ್ಯವಾದ ಘಟನೆಗಳನ್ನು ದಾಖಲಿಸುವುದರ ಮೂಲಕ ೧೯ನೆಯ ಶತಮಾನದ ಇತಿಹಾಸ ರಚನೆಗೆ ಸಹಕಾರಿಯಾಗಿದೆ.

ಪತ್ರಿಕೆಯು ಸಾಮಾಜಿಕವಾಗಿ ರಾಜಕೀಯವಾಗಿ ತನ್ನ ಇತಿಮಿತಿಗಳನ್ನು ಗೊತ್ತುಪಡಿಸಿ ಕೊಂಡಿರುವುದರಿಂದ ಯಾರನ್ನೂ ಎದಿರುಹಾಕಿಕೊಳ್ಳುವ ಗೋಜಿಗೆ ಹೋಗಿಲ್ಲ. ಸಮಕಾಲೀನ ಸಮಾಜದಲ್ಲಿ ನಡೆಯುತ್ತಿರುವ ಸಂಗತಿಗಳಿಗೆ ಬದಲಾವಣೆಗಳಿಗೆ ಕನ್ನಡಿ ಹಿಡಿದು, ಜನರಿಗೆ ತೋರಿಸಿಕೊಟ್ಟಿದೆ.

ಧಾರ್ಮಿಕ ವಿಚಾರಗಳಲ್ಲಿ ‘ಮಂಗಳೂರ ಸಮಾಚಾರ’ ಪತ್ರಿಕೆಯು ಯಾರನ್ನೂ ಎತ್ತಿ ಕಟ್ಟಲು ಹೋಗಿಲ್ಲ. ಇತರ ಮತೀಯ ಜನರ ಧಾರ್ಮಿಕ ಆಚಾರ-ವಿಚಾರಗಳಲ್ಲಿ ಅನಗತ್ಯವಾಗಿ ತೊಡಗಿಸಿಕೊಳ್ಳಲು ಹೋಗಿಲ್ಲ. ಪತ್ರಿಕೆಯ ಒಡೆತನ ಕ್ರೈಸ್ತ ಧರ್ಮದ ಬಾಸೆಲ್‌ಮಿಷನರಿ ಸಂಸ್ಥೆಗೆ ಸೇರಿದ್ದರೂ ಸಂಪಾದಕ ಮೋಗ್ಲಿಂಗ್‌ ಅದರ ಹಿರಿಯ ಪ್ರತಿನಿಧಿ(ಮಿಷನರಿ)ಯಾಗಿದ್ದರೂ, ಪತ್ರಿಕೆಯನ್ನು ಸ್ವಧರ್ಮ ಪ್ರಚಾರಕ್ಕಾಗಲಿ, ಪರಧರ್ಮನಿಂದನೆಗಾಗಲಿ ಬಳಸಿಕೊಂಡಿಲ್ಲ. ಪತ್ರಿಕೆಯಲ್ಲಿ ಪ್ರಕಟವಾದ ವೈವಿಧ್ಯಮಯವಾದ ಸಂಗತಿಗಳನ್ನು ಗಮನಿಸಿದಾಗ, ಯಾರನ್ನೂ ನೋಯಿಸುವ ಅಥವಾ ಹೊಗಳುವ ಗೋಜಿಗೆ ಹೋಗಿಲ್ಲ. ಅಲ್ಲದೆ ಎಲ್ಲ ಧಾರ್ಮಿಕ ಚಿಂತನೆಗಳಿಗೆ ಅಲ್ಲಿ ಸಮಾನ ಅವಕಾಶ ಕಲ್ಪಿಸಿಕೊಡಲಾಗಿದೆ. ಕನ್ನಡದಲ್ಲಿ ಪ್ರಕಟವಾದ ಮೊದಲ ಪತ್ರಿಕೆಯು ಈ ರೀತಿಯಾಗಿ ಸೌಹಾರ್ದತೆಯ ನಡೆಯನ್ನು ಕಾಪಾಡಿಕೊಂಡಿರುವುದು ಗಮನಾರ್ಹ ಎನಿಸಿದೆ.

ಅಂದರೆ ಪತ್ರಿಕೆಯ ಸಂಪಾದಕರು ತಮ್ಮ ಸಮಕಾಲೀನ ಸಂದರ್ಭದಲ್ಲಿ ಯಾವುದೇ ಕೋಮು ಘಟನೆಗಳನ್ನು ನೋಡಲಿಲ್ಲ ಅಥವಾ ಕೇಳಲಿಲ್ಲ ಎಂದು ಭಾವಿಸಲಾಗದು. ಕೋಮು ಭಾವನೆಗಳನ್ನು ಉದ್ರೇಕಿಸಿ, ಸಂಘರ್ಷಕ್ಕೆ ದಾರಿ ಮಾಡಿಕೊಡಬಹುದಾದ ವರ್ತಮಾನಗಳು ಪತ್ರಿಕಾ ಕಚೇರಿಗೆ ಬಂದಾಗ, ಸಂಪಾದಕರು ತುಂಬಾ ಸಂಯಮ ವಹಿಸಿ, ಸಮಾಜಕ್ಕೆ ಒಳಿತಾಗುವಂತಹ ವಾತಾವರಣ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಇದಕ್ಕೆ ನಿದರ್ಶನವಾಗಿ ಎರಡು ಸಂದರ್ಭಗಳನ್ನು ಗಮನಿಸಬಹುದಾಗಿದೆ:

ಒಂದನೇ ನಿದರ್ಶನ = ಆನಂದರಾವ್‌ ಕೌಂಡಿಣ್ಯ ಹಾಗೂ ಕೌಶಿಕ ಬಂಧುಗಳ ಮತಾಂತರ ಸಂದರ್ಭ. ಸಮಾಜದ ಮೇಲ್ವರ್ಗಕ್ಕೆ ಸೇರಿದ ಇವರ ಮತಾಂತರ ಕಾರ್ಯವು ಮೋಗ್ಲಿಂಗರ ನೇತೃತ್ವದಲ್ಲೇ ನಡೆದಿತ್ತು. ಆಗ ಊರಲ್ಲಿ ಒಂದಷ್ಟು ಗಲಭೆಯಾಗಿ, ಅವರನ್ನು ಮತ್ತೇ ಹಿಂದೂ ಧರ್ಮಕ್ಕೆ ಕರೆದುಕೊಳ್ಳುವ ಪ್ರಯತ್ನವೂ ನಡೆಯಿತು. ಆದರೆ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ ಎಂದಷ್ಟೇ ಸುದ್ದಿ ಪ್ರಕಟವಾಯಿತು. ಇಂತಹ ಸನ್ನಿವೇಶವನ್ನು ‘ಮಂಗಳೂರ ಸಮಾಚಾರ’ದಲ್ಲಿ ಅತಿರಂಜಿತವಾಗಿ ಪ್ರಕಟಮಾಡಿಕೊಳ್ಳದೆ ತೇಲಿಸಿ ಬಿಡಲಾಗಿದೆ.

ಎರಡನೇ ನಿದರ್ಶನ – “ಊರಿನ ದುಷ್ಟ ಜನರು ಏನಾದರೂ ಗುಬಾರು ಯೆಬ್ಬಿಸಬೇಕೆಂಬ ಉಮೇದಿಯಿಂದ ಮುಸಲಮಾನರ ಜುಮಾ ಮಹಜೀದಿಯ ಕೆರೆಯಲ್ಲಿ ಹಂದಿಯನ್ನು ರಾತ್ರಿ ಹೊತ್ತಿನಲ್ಲಿ ಕೊಂದು ಹಾಕಿದರಂತೆ. ಆಗ ಜಿಲ್ಲಾ ಮೆಜಿಸ್ಟ್ರೇಟನು ಕೂಡಲೇ ಈ ರೀತಿಯ ಪ್ರಕಟನೆ ಹೊರಡಿಸಿದನಂತೆ”.

“ಮುಸಲಮಾನರ ಜನರಿಗೆ ಚಾಳಿಸುವ ಇರ್ಯಾದೆಯಿಂದ ಈ ಕೆಟ್ಟ ಕೃತ್ಯ ಮಾಡಿರುತ್ತಾರೆ ಎಂಬುದರಲ್ಲಿ ಏನು ಅನುಮಾನವಿಲ್ಲ. ಈ ವಿಷಯದಲ್ಲಿ ಕುಲಂಕಶ ತನಿಖಿ ಕೂಡ್ಲೆ ಮಾಡಲಾದೀತು. ಈ ದುಸ್‌ಕೃತ್ಯಾ ನಡೆಸಿದ ವಾ ತಲಾಶಿಗೆ ಸಾಕಾಗುವ ವರ್ತಮಾನ ಯಾರಾದರೂ ಕೊಟ್ಟಿದ್ದಾದರೆ ಅಂಥ ಮನುಷ್ಯನಿಗೆ ಐದು ನೂರು ರೂಪಾಯಿ ಕೊಡಲಾದೀತು. ಆದುದರಿಂದ ಮುಸಲ್ಮಾನ್‌ ಜಾತಿ ಯಾವತ್ತೂ ಜನರು ದುರಾಲೋಚನೆ ಜನರ ಬೋಧನೆಗೆ ಒಳಗಾಗದೆ ನಿಧಾನದಲ್ಲಿ ಇರಬೇಕುಯಂತ ಅಪೇಕ್ಷಿಸುತ್ತೇವೆ. ಆ ಪ್ರಕಾರ ಸಮಾಧಾನ ಮಾಡದೆ ತಂಟೆ ಏನಾದರೂ ನಡೆಸಿದ್ದಾದರೆ ವ್ಯರ್ಥ ಬಹಳ ದಣಕೊಳ್ಳಬೇಕಾದೀತು”![6]

ಮೆಜಿಸ್ಟ್ರೇಟರು ಮುಸಲ್ಮಾನರ ಹಾಗೂ ಮಾಪಿಳ್ಳೆಯವರ ಮುಖಂಡರನ್ನು ಕರೆಯಿಸಿ ಆಶ್ವಾಸನವಿತ್ತುದಲ್ಲದೆ ಕೆರೆಯನ್ನು ಸರಕಾರದ ವತಿಯಿಂದ ‘ಸಾಪು’ ಮಾಡಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಈ ವಿಧವಾಗಿ ಸಂಪಾದಕರು ಈ ಮೇಲಣ ಘಟನೆಯ ವರದಿಯನ್ನು ಅಂತಿಮಘಟ್ಟಕ್ಕೆ ತಲುಪಿಸುತ್ತಾ “ಆ ಮಾತುಗಳನ್ನು ಅವರು ಬುದ್ಧಿಯಾಗಿ ತಿಳುಕೊಂಡು ಅಂಗೀಕರಿಸಿ ವೊಡಂಬಟ್ಟರು. ಆ ಹಂದಿ ಕಡಿದು ಹಾಕಿದ ಮನುಷ್ಯನು ಯೀಗ ಸಿಕ್ಕಿದ್ದಾನೆಂಬ ವರ್ತಮಾನಯಿರುತ್ತದೆ” ಎಂದು ಸಮಾರೋಪ ಮಾಡಿದ್ದಾರೆ.

ಈ ಮೇಲಿನ ಎರಡು ಘಟನಗೆಳಿಗೆ ಸಂಬಂಧಿಸಿದ ಸಂಗತಿಗಳು ಆ ಪ್ರದೇಶದಲ್ಲಿ ಹರಡಬಹುದಾಗಿದ್ದ ಕೋಮುದಳ್ಳುರಿಯನ್ನು ಪ್ರತಿಬಿಂಬಿಸುವಂಥವು. ಸಂಪಾದಕರು ಇಂತಹ ವರದಿಗಳನ್ನು ಪ್ರಕಟಿಸುವಲ್ಲಿ ವ್ಯಕ್ತಿಗತ ಆಸಕ್ತಿ ತೋರಿ, ವೈಭವೀಕರಿಸಿ ಹಬ್ಬಿಸಿದ್ದರೆ ಏನಾಗುತ್ತಿತ್ತು? ಆದರೆ, ಅವರು ಹಾಗೆ ಮಾಡಿಲ್ಲ. ಸಾಮಾಜಿಕವಾಗಿ ಎಚ್ಚರವಹಿಸಿ ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ; ಸಮಯ ಹಾಗೂ ಸಮಯಪ್ರಜ್ಞೆಯನ್ನು ಪ್ರದರ್ಶಿಸಿದ್ದಾರೆ. ಪತ್ರಿಕೆಯಲ್ಲಿ ಪ್ರಕಟವಾಗಿರುವ ಇಂತಹ ಘಟನೆಗಳನ್ನು ಅವಲೋಕಿಸಿದಾಗ ‘ಮಂಗಳೂರ ಸಮಾಚಾರ’ ನಿಷ್ಪಕ್ಷಪಾತವಾಗಿ ನಡೆದುಕೊಂಡಿರುವುದಲ್ಲದೆ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಬಹು ಎಚ್ಚರದಿಂದ ನಿಭಾಯಿಸಿಕೊಂಡು ಹೋಗಿದೆ ಎಂದು ಹೇಳಬಹುದು.

ಅಭಿಪ್ರಾಯಗಳು

‘ಮಂಗಳೂರ ಸಮಾಚಾರ’ ಪತ್ರಿಕೆಯ ಪ್ರಕಟಣೆ, ಧೋರಣೆ ಹಾಗೂ ಅದರ ಇತಿಮಿತಿಗಳು ಏನಿದ್ದವು ಎಂಬುದರ ಹಿನ್ನೆಲೆಯಲ್ಲಿ ಹಲವು ವಿದ್ವಾಂಸರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಐ.ಮಾ. ಮುತ್ತಣ್ಣ ಅವರು ಹೆರ್ಮನ್‌ ಮೋಗ್ಲಿಂಗ್‌ರ ಕನ್ನಡ ಪತ್ರಿಕೆಯ ಕುರಿತು ಹೇಳುತ್ತಾ “…. ಪತ್ರಿಕೆಗಳನ್ನು ಹೊರಡಿಸಿದಾಗ ಅವನ ಧ್ಯೇಯವೇನಿತ್ತೆಂದರೆ ತನ್ನ ಮತ ಪ್ರಚಾರ ಕಾರ್ಯಕ್ಕೆ ಅನುಕೂಲತೆಯನ್ನು ಒದಿಗಿಸುವುದೇ ಆಗಿತ್ತು….. ಆದರೆ ಅದರ ಬರವಣಿಗೆಗಳೆಲ್ಲವೂ ತಮ್ಮ ಮತದ ಮೇಲ್ಮೈಯನ್ನು ಪ್ರಭಾವವನ್ನೂ ಮೇಲೆತ್ತಿ ಜನಕ್ಕೆ ತಿಳಿಸುವುದರಲ್ಲೇ ಕೇಂದ್ರೀಕೃತವಾಗಿತ್ತೆಂಬುದನ್ನು ನೆನಪಿಡಬೇಕಾಗಿದೆ” ಎಂದಿದ್ದಾರೆ.[7]

ಡಾ. ನಾಡಿಗ ಕೃಷ್ಣಮೂರ್ತಿಯವರು ಕನ್ನಡ ಪತ್ರಿಕೆಗಳ ಪ್ರಾರಂಭದ ಬಗ್ಗೆ ಪ್ರಸ್ತಾಪಿಸುತ್ತಾ, “ಜರ್ಮನ್‌ ಧರ್ಮಗುರುಗಳು ಮತ್ತು ಪಂಡಿತರು ಧರ್ಮ ಪ್ರಚಾರ ಮಾಡಲು ಮೊದಲು ಪತ್ರಿಕೆಗಳನ್ನು ಪ್ರಾರಂಭಿಸಿದರು ‘ಕನ್ನಡ ಸಮಾಚಾರ’ ಎಂಬ ಪತ್ರಿಕೆಯನ್ನು ಧರ್ಮ ಪ್ರಚಾರಕ್ಕೋಸರವೇ ಪ್ರಕಟಿಸಿದರು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[8]

‘ಮಂಗಳೂರ ಸಮಾಚಾರ’ ಪತ್ರಿಕೆಯ ವಿಶೇಷತೆಗಳನ್ನು ಉಲ್ಲೇಖಿಸುತ್ತಾ ಸುಮುಖಾ ನಂದ ಜಲವಳ್ಳಿಯವರು, “ಮಂಗಳೂರ ಸಮಾಚಾರ ಕನ್ನಡದ ಮೊದಲ ಪತ್ರಿಕೆ. ಮುಂದೆ ಅದು ಕನ್ನಡ ಸಮಾಚಾರ ಎಂದು ನಾಮಾಂತರಗೊಂಡು ಸ್ಥಾನಾಂತರಗೊಂಡಿತು. ಧಾರ್ಮಿಕ ಚಿಂತನೆ ಇದರ ಪ್ರಧಾನೋದ್ದೇಶವಾಗಿದ್ದರೂ ದೇಶವಿದೇಶಗಳ ಸುದ್ದಿವಿಶೇಷಗಳನ್ನು ಅದು ಒಳಗೊಂಡಿರುತ್ತಿತ್ತು” ಎಂದು ಹೇಳಿದ್ದಾರೆ.[9]

“ಮಂಗಳೂರ ಸಮಾಚಾರ ಪತ್ರಿಕೆಯ ಹಿಂದೆ ಧರ್ಮಪ್ರಸಾರ ಮತ್ತು ಸ್ಥಳೀಯರ ಮತಾಂತರ ಉದ್ದೇಶ ಮುಖ್ಯವಾಗಿದ್ದರೂ ಐತಿಹಾಸಿಕವಾಗಿ ಅದು ಪತ್ರಿಕೋಧ್ಯಮಕ್ಕೆ ಸಲ್ಲಿಸಿದ ಕಾಣಿಕೆಯನ್ನು ಮರೆಯುವಂತಿಲ್ಲ” ಎಂದು ವಸಂತಕುಮಾರ ಪೆರ್ಲ ಅವರು ಬರೆದಿದ್ದಾರೆ.[10]

ಮೋಗ್ಲಿಂಗ್‌  ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಕನ್ನಡ ಪತ್ರಿಕೆಗಳನ್ನು ಉಲ್ಲೇಖಿಸುತ್ತಾ ಡಾ. ಕೆ.ಎಚ್‌. ಕಟ್ಟಿ ಅವರು, “ಮಂಗಳೂರ ಸಮಾಚಾರ ಪತ್ರಿಕೆ ೧೮೪೪ರ ಸುಮಾರಿಗೆ ಬಳ್ಳಾರಿಗೆ ಬಂದು ಸೇರಿ ಕನ್ನಡ ಸಮಾಚಾರವಾಗಿ ಕಾಣಿಸಿಕೊಂಡಿತು. ಮತ್ತೆ ಎರಡು ವರ್ಷಗಳ ಬಳಿಕ ಮಂಗಳೂರು ಸೇರಿತು. ಕ್ರೈಸ್ತಮತ ಪ್ರಚಾರ ಈ ಪತ್ರಿಕೆಯ ಮುಖ್ಯ ಉದ್ದೇಶವಾಗಿತ್ತು. ಧರ್ಮ ಪ್ರಚಾರದಲ್ಲಿ ಪತ್ರಿಕೆಗಳ ಪಾತ್ರ ಬಹಳ ದೊಡ್ಡದಿದೆ” ಎಂದಿದ್ದಾರೆ.[11]

‘ಮಂಗಳೂರ ಸಮಾಚಾರ’ ಪತ್ರಿಕೆಯ ಉದ್ದೇಶ ಮತ್ತು ವಿಷಯವಾಪ್ತಿಯ ಬಗೆಗೆ ಈ ಮೇಲಿನಂತೆ ವ್ಯಕ್ತವಾಗಿರುವ ವಿವಿಧ ವಿದ್ವಾಂಸರ ಅಭಿಪ್ರಾಯಗಳನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡ ಭಾಷೆಯಲ್ಲಿ ವರ್ತಮಾನ ಪತ್ರಿಕೆಗಳೇ ಇಲ್ಲದ ಕಾಲದಲ್ಲಿ ಕನ್ನಡಿಗರಿಗಾಗಿ ‘ಮಂಗಳೂರ ಸಮಾಚಾರ’ ಪತ್ರಿಕೆಯನ್ನು ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಮೋಗ್ಲಿಂಗರು ಮೊದಲ ಪತ್ರಿಕೆಯಾಗಿ ಪ್ರಾರಂಭಿಸಿ, ಬಲು ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ನಡೆಸಿಕೊಂಡು ಬಂದಿದ್ದಾರೆ. ಅತ್ಯಂತ ಮುಖ್ಯವಾದ ಈ ಅಂಶವನ್ನು ವಿದ್ವಾಂಸರು ಸರಿಯಾಗಿ ಗ್ರಹಿಸಿಕೊಂಡಿಲ್ಲ. ೧೯ನೇ ಶತಮಾನದ ಕರಾವಳಿಯ ನೆಲದಲ್ಲಿ ನಿಂತು ಆ ಕಾಲದ ಅವಶ್ಯಕತೆಗನುಗುಣವಾಗಿ ‘ಲೋಕದ ತಿಳಿವಳಿಕೆಯನ್ನು ಸಂಗ್ರಹಿಸಿ ಲೋಕಕ್ಕೆ ಮರಳಿಕೊಡುವ’ ಪ್ರಯೋಗವನ್ನು ಸಂಪಾದಕರು ಮಾಡಿದ್ದಾರೆ. ಪತ್ರಿಕೆಯ ಮೊದಲ ಸಂಚಿಕೆಯಲ್ಲೇ (೧೮೪೩ರಲ್ಲೇ) ಈ ಉದ್ದೇಶವನ್ನು ಅವರು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ಯಾವ ಯಾವ ವಿಷಯಗಳು ಪತ್ರಿಕೆಯಲ್ಲಿ ಪ್ರಕಟವಾಗಬೇಕೆನ್ನುವ ಬಗೆಗೆ ಒಂದು ಚೌಕಟ್ಟನ್ನು ಅವರು ಕಟ್ಟಿಕೊಂಡಿದ್ದಾರೆ. ಅದೇ ಪ್ರಕಾರವಾಗಿ ನಿರ್ದಿಷ್ಟಪಡಿಸಿಕೊಂಡ ಗುರಿಯಂತೆ ನಡೆದುಕೊಂಡಿದ್ದಾರೆ, ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದಾರೆ.

ಕನ್ನಡದ ಓದುಗರ ವಲಯಕ್ಕೆ ಲಭ್ಯವಾಗಿರುವ ‘ಮಂಗಳೂರ ಸಮಾಚಾರ’ ಪತ್ರಿಕೆಯ ಸಂಚಿಕೆಗಳನ್ನು ಮತ್ತು ಅಲ್ಲಿ ಪ್ರಕಟಗೊಂಡಿರುವ (ಹೊಸಗನ್ನಡದ ಅರುಣೋದಯ, ೧೯೭೪, ಪು. ೪೭೮ರಿಂದ ೪೮೮ರವರೆಗಿನ) ವಿಷಯಗಳನ್ನು ವಿಶ್ಲೇಷಿಸಿ ನೋಡಿದಾಗ, ಈ ಪತ್ರಿಕೆಗೆ ಆರೋಪಿಸಿರುವ ಮತೀಯ ಅಭಿಪ್ರಾಯಗಳು ನಿರಾಧಾರವೆಂದೂ ಸತ್ಯಕ್ಕೆ ದೂರವಾದವು ಎಂದು ಹೇಳಬಹುದು. ಈ ಪತ್ರಿಕೆ ಅನ್ಯಧರ್ಮಗಳ ನಿಂದನೆಯನ್ನಾಗಲಿ ಅಥವಾ ಸ್ವಧರ್ಮದ ಮೇಲ್ಮೆಯನ್ನು ಸಾರಿಕೊಳ್ಳುವ ಭರಾಟಿಯನ್ನಾಗಲಿ ಮಾಡಿಲ್ಲ ಎನ್ನುವುದು ಸ್ಪಷ್ಟ.

ಡಾ. ಶ್ರೀನಿವಾಸ ಹಾವನೂರ ಅವರ ‘ಮಂಗಳೂರು ಸಮಾಚಾರ’ ಪತ್ರಿಕೆಯ ಮತೀಯ ಧೋರಣೆ ಹೇಗಿತ್ತು ಎಂಬುದನ್ನು ಉಲ್ಲೇಖಿಸುತ್ತಾ, “ಮಿಶನರಿಗಳು ಸ್ವಮತ ಪ್ರಸಾರಕ್ಕಾಗಿ ಈ ಪತ್ರಿಕೆಯನ್ನು ಬಳಸಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಅದರಿಂದ ಇದು ಜಾತ್ಯತೀತ (Socular) ಎನ್ನಬಹುದಾದ ಮತ್ತು ಎಲ್ಲ ವರ್ಗದ ಕನ್ನಡಿಗರನ್ನು ಉದ್ದೇಶಿಸಿದ ಪತ್ರಿಕೆಯಾಗಿದೆ” ಎಂದು ಹೇಳಿರುವುದನ್ನು ಒಪ್ಪಬಹುದಾಗಿದೆ. ಹಾಗೆ ನೋಡಿದರೆ, ಈ ಪತ್ರಿಕೆಯಲ್ಲಿ ಕ್ರೈಸ್ತಮತೀಯ ವಿಚಾರಗಳು ಪ್ರಕಟವಾಗಿರುವ ಸಂದರ್ಭಗಳೆಂದರೆ ದಾಸರ ಪದಗಳು ಇಲ್ಲವೇ ಸಂಸ್ಕೃತ ಶ್ಲೋಕಗಳನ್ನು ಕೊಡುತ್ತಾ ಅದಕ್ಕೆ ಸಮಾನ ಅರ್ಥಕೊಡುವಂತಹ ಬೈಬಲ್‌ ಉಕ್ತಿಗಳನ್ನು ಜೊತೆಯಲ್ಲಿ ಪೋಣಿಸಿ ವಿವರಿಸಿದಾಗ ಮಾತ್ರ. ಈ ರೀತಿಯಲ್ಲಾದರೂ ಪುರಂದರದಾಸರ ಮೂರ್ನಾಲ್ಕು ಪದಗಳು ಕನ್ನಡದ ಮೊದಲ ಪತ್ರಿಕೆಯ ಮೂಲಕ ಮೊತ್ತ ಮೊದಲ ಬಾರಿಗೆ ಬೆಳಕಿಗೆ ಬಂದಿರುವುದು ಗಮನಾರ್ಹವೆನಿಸಿದೆ.

ಮೋಗ್ಲಿಂಗ್‌ ಅವರ ವೈಯಕ್ತಿಯ ಬದುಕಿನಲ್ಲಾಗಲಿ, ಪತ್ರಿಕಾರಂಗದಲ್ಲಾಗಲಿ ಮತೀಯ ದ್ವೇಷ, ಅಸಹನೆ ಇತ್ಯಾದಿ ಭಾವನೆಗಳನ್ನು ಕಾಣಲಾರೆವು. ಮೋಗ್ಲಿಂಗ್‌ ಅವರು “ಈ ಪತ್ರಿಕೆಯನ್ನು ಸ್ವಮತ ಪ್ರಚಾರಕ್ಕೆ ಬಳಸದೆ ಎಲ್ಲ ವರ್ಗದವರನ್ನು ಉದ್ದೇಶಿಸಿದ ಪತ್ರಿಕೆಯನ್ನಾಗಿ ಮಾಡಿದ್ದರಿಂದಲೇ ಈತನನ್ನು ಪತ್ರಿಕೋದ್ಯಮದ ಆದ್ಯನನ್ನಾಗಿ ಮಾಡಿತು.”[12]

ಧರ್ಮನಿರಪೇಕ್ಷತೆ ವಿಷಯದಲ್ಲಿ ‘ಮಂಗಳೂರ ಸಮಾಚಾರ’ ಪತ್ರಿಕೆಯನ್ನು ಮೋಗ್ಲಿಂಗರು ತುಂಬಾ ಎಚ್ಚರಿಕೆಯಿಂದ, ಜವಾಬ್ದಾರಿಯುತವಾಗಿ ನಡೆಸಿಕೊಂಡು ಬಂದರೆಂಬ ವಿಚಾರವನ್ನು ಸಮರ್ಥಿಸುವ ಸೆಲಿನ್‌ ವಾಸ್‌ ಅವರು, “ಮೋಗ್ಲಿಂಗ್‌ ಅವರು ಓರ್ವ ಕ್ರೈಸ್ತ ಮಿಷನರಿಯಾಗಿದ್ದರೂ ಅವರೆಂದೂ ಕ್ರೈಸ್ತಧರ್ಮ ಬೆಳೆಸುವುದಕ್ಕಗಿ ಈ ಪತ್ರಿಕೆಯನ್ನು ಬಳಸಿಕೊಳ್ಳಲಿಲ್ಲ. ಎಲ್ಲ ಧರ್ಮಗಳ ಬಗೆಗಿನ ಚಿಂತನೆಗಳು ಅದರಲ್ಲಿ ಪ್ರತಿಬಿಂಬಿತವಾಗಿವೆ” ಎಂಬು ಅಭಿಪ್ರಾಯಪಟ್ಟಿದ್ದಾರೆ.[13] ಇದು ಸಮಂಜಸವಾದ ಅಭಿಪ್ರಾಯವಾಗಿದೆ. ಕನ್ನಡದ ಆದ್ಯ ಪತ್ರಿಕೆ ‘ಮಂಗಳುರು ಸಮಾಚಾರ’ದ ಬಗ್ಗೆ ವ್ಯಕ್ತವಾಗಿರುವ ವಿದ್ವಾಂಸರ ವಲಯದ ನಿಲುವುಗಳನ್ನು ಮತ್ತು ಪತ್ರಿಕೆಯಲ್ಲಿ ದಾಖಲೆಗೊಂಡಿರುವ ವಿಷಯಗಳನ್ನು ವಿಶ್ಲೇಷಿಸಿ ನೋಡಿದ ಬಳಿಕ ಈ ಕೆಳಗಿನಂತೆ ನಿರ್ಧಾರಕ್ಕೆ ಬರಬಹುದು;

೧. ‘ಮಂಗಳೂರು ಸಮಾಚಾರ’ ಪತ್ರಿಕೆಯು ಕನ್ನಡದ ಮೊಟ್ಟಮೊದಲ ಪತ್ರಿಕೆಯಾಗಿದೆ. ಇದರ ಸಂಪಾದಕ, ಲೇಖಕ ಹೆರ್ಮನ್‌ ಮೋಗ್ಲಿಂಗ್‌ ಅವರು.

೨. ಮೋಗ್ಲಿಂಗರು ಕ್ರೈಸ್ತಧರ್ಮದ ಪ್ರೊಟಿಸ್ಟೆಂಟ್‌ಸಿದ್ಧಾಂತದ ಬಾಸೆಲ್‌ಮಿಶನರಿಯಾಗಿದ್ದು, ತಮ್ಮ ಸ್ವಮತ ಪ್ರಚಾರಕ್ಕಾಗಲಿ ಅಥವಾ ಅನ್ಯಮತಗಳ ನಿಂದನೆಗಾಗಲಿ ಅಥವಾ ಮತಾಂತರ ಪ್ರಚೋದನೆಗಾಗಲಿ ಈ ಪತ್ರಿಕೆಯನ್ನು ಬಳಸಿಕೊಂಡಿಲ್ಲ.

೩. ಕನ್ನಡದ ಜನರು ‘ಲೋಕದ ತಿಳಿವಳಿಕೆ’ಯ ಜೊತೆಗೆ ಧರ್ಮನಿರಪೇಕ್ಷತೆಯ ಗುಣವನ್ನು ಬೆಳೆಸಿಕೊಳ್ಳಬೇಕು. ಕನ್ನಡದ ಮನಸ್ಸು ಈ ಎರಡೂ ಅಂಶಗಳನ್ನು ಒಳಗೊಳ್ಳಬೇಕೆಂಬ ಅಪೇಕ್ಷೆಯನ್ನು ಅವರು ಹೊಂದಿದ್ದರು.

೪. ಧಾರ್ಮಿಕ ಚಿಂತನೆಗಳನ್ನು ಕನ್ನಡ ಭಾಷೆಯ ಮೂಲಕ ಪ್ರಕಟಪಡಿಸಬೇಕು ಮತ್ತು ಅವನ್ನು ಜನರಿಗೆ ತಲುಪಿಸಬೇಕು. ಇದಕ್ಕಾಗಿ ಪ್ರತ್ಯೇಕ ವೇದಿಕೆಯ (ಮಾಧ್ಯಮದ) ಸಹಾಯ ಪಡೆಯಬೇಕು. ಮೋಗ್ಲಿಂಗ್‌ ಅವರ ಅಂತರಂಗದಲ್ಲಿ ಇಂತಹ ನಿರೀಕ್ಷೆಯೊಂದು ಇತ್ತೆಂದು ತೋರುತ್ತದೆ.

೫. ಸಂಪಾದಕರು ತಮ್ಮ ಸಮಕಾಲೀನ ಜನರನುಡಿಗೆ ಮುದ್ರಣದ ರೂಪಕೊಟ್ಟು, ಹೊಸಗನ್ನಡ ಗದ್ಯವನ್ನು ದಾಖಲಿಸಿದ್ದಾರಲ್ಲದೆ ಅದರ ಬೆಳವಣಿಗೆಗೆ ಪತ್ರಿಕೆಯ ಮೂಲಕ ನೆರವಾಗಿದ್ದಾರೆ.

[1] ಡಾ. ನಾಡಿಗ ಕೃಷ್ಣಮೂರ್ತಿ, ಭಾರತೀಯ ಪತ್ರಿಕೋದ್ಯಮ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೬೯, ಪು. ೩೮೮-೩೯೦.

[2] ಡಾ. ಶ್ರೀನಿವಾಸ ಹಾವನೂರ, ಹೊಸಗನ್ನಡದ ಅರುಣೋದಯ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೭೪, ಪು. ೪೮೦.

[3] ಅದೇ, ಪುಟ ೪೮೨.

[4] ಡಾ. ಗೀತಾ ಎಸ್‌. ನಂದಿಹಾಳ, ಕನ್ನಡಕ್ಕೆ ಬಾಸೆಲ್‌ಮಿಶನರಿಗಳ ಕೊಡುಗೆ, ಕಿಟೆಲ್‌ಕಾಲೇಜ್‌, ಧಾರವಾಡ, ೨೦೦೩, ಪು. ೨೨೭.

[5] ಹೊಸಗನ್ನಡದ ಅರುಣೋದಯ (೧೯೭೪), ಪು. ೪೮೫.

[6] ಅದೇ, ಪು. ೪೮೪.

[7] ಐ.ಮಾ. ಮುತ್ತಣ್ಣ, ೧೯ನೆಯ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ, ಮೈಸೂರು ೧೯೭೩, ಪು. ೩೦೮/

[8] ಭಾರತೀಯ ಪತ್ರಿಕೋದ್ಯಮ (೧೯೬೯), ಪು. ೩೮೭-೩೮೮.

[9] ಸುಮಾಖಾನಂದ ಜಲವಳ್ಳಿ, ಕನ್ನಡ ಸಾಹಿತ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕೊಡುಗೆ, ಪು. ೫-೬.

[10] ಪ್ರೊ. ಬಿ.ಎ. ವಿವೇಕ ರೈ (ಸಂ), ತುಳುಸಾಹಿತ್ಯ ಚರಿತ್ರೆ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೪೮೩ ೨೭೭, ಪು. ೯೮೩.

[11] ಸಾಹಿತ್ಯ ಸಂಸ್ಕೃತಿ ಪಥ: ಸುವರ್ಣ ಕರ್ನಾಟಕ: ಸಂಪುಟ , ಪು. ೧೪೭.

[12] ಬಿ.ಎಸ್‌. ತಲ್ವಾಡಿ, ಕರ್ನಾಟಕ ಕ್ರೈಸ್ತರ ಇತಿಹಾಸ, ಕನ್ನಡ ಕೆಥೊಲಿಕರ ಸಂಘ, ಬೆಂಗಳೂ*ರು. ೧೯೮೯, ಪು. ೧೧೨.

[13] Celinevas, The contribution of Christian Missionaries to Journalism in south Kanara, Mangalore University, 1992 Page No. 29.