. ಹಿಂದುದೇಶದ ಸಂಚಾರದ ಕಥೆಯು

‘ಕಂನಡ ಸಮಾಚಾರ’ ಪತ್ರಿಕೆಯ ಮೂಲಕ ಮೋಗ್ಲಿಂಗರು ಪ್ರವಾಸ ಕಥನದ ಒಂದು ಹೊಸ ಪ್ರಯೋಗವನ್ನು ಕನ್ನಡದಲ್ಲಿ ಮುಂದುವರಿಸಬೇಕೆಂಬ ಗುರಿಯನ್ನು ಹೊಂದಿದ್ದರೆಂದು ಮೇಲಿನ ಶೀರ್ಷಿಕೆಯಿಂದ ವ್ಯಕ್ತವಾಗುತ್ತದೆ. ನಿಜಕ್ಕೂ ಕನ್ನಡಕ್ಕೆ ಇದೊಂದು ಹೊಸ ಸೇರ್ಪಡೆ, ಕುತೂಹಲಕರ ಬರೆಹ. ನಮ್ಮ ದೇಶದ ಒಂದು ನಗರದಿಂದ ಮತ್ತೊಂದು ನಗರಕ್ಕೆ ಸಮುದ್ರ ಮೂಲಕ ಹಡಗಿನಲ್ಲಿ ಪಯಣಿಸಿದಾಗ ದೊರೆಯುವ ಅನುಭವ, ಚಟುವಟಿಕೆಗಳ ಚಿತ್ರಣ ಈ ಬರವಣಿಗೆಯಲ್ಲಿ ಒಡಮೂಡಿದೆ. ಸಂಚಾರದ ಕಥೆಯು ಪತ್ರಗಳ ರೂಪದಲ್ಲಿ ಪತ್ರಿಕೆಯಲ್ಲಿ ಕಾಣಿಸಿಕೊಂಡಿದೆ. ಇದಕ್ಕಾಗಿ ಮೋಗ್ಲಿಂಗ್‌ರು ತಮ್ಮ ಪತ್ರಿಕೆಯ ಕಡೆಯಿಂದ ಬಾತ್ಮೀದಾರನನ್ನು ಇಟ್ಟಿದ್ದರೇ ಅಥವಾ ಸ್ವತಃ ತಾವೇ ಕಲೆಹಾಕಿದ ಸಂಗತಿಗಳನ್ನು ಬೇರೊಬ್ಬರ ಹೆಸರಿನಲ್ಲಿ ಪ್ರಕಟಿಸುತ್ತಿದ್ದರೇ ಎಂಬುದು ನಿಚ್ಚಳವಾಗಿ ತಿಳಿಯದು. ಆದರೆ ಈ ಪತ್ರ ಲೇಖನವನ್ನು ಓದಿದಾಗ ದಾಖಲಿಸಿರುವ ಸಂಗತಿಗಳು ಕಲ್ಪನೆಯಾಗಿರದೆ ನೇರವಾಗಿ ಕಂಡ ಅನುಭವಗಳೆಂದು ಪಕ್ಕಾ ಗೊತ್ತಾಗುತ್ತದೆ. ಸಂಚಿಕೆ ೭ರಲ್ಲಿ ಸುಮಾರು ಒಂದೂವರೆ ಪುಟದಲ್ಲಿ ಈ ೨ನೇ ಪತ್ರ ಪ್ರಕಟವಾಗಿದೆ. ಭಾರತೀಯ ಪಯಣಿಗೆ (The Indian traveller) ನಾದ ಕೃಷ್ಣ ಎಂಬಾತನು ತನ್ನ ಎರಡನೇ ಪತ್ರದ (The Letter Second) ಮೂಲಕ, ‘ಪ್ರಿಯ ರಾಮರಾಯನೇ’ ಎಂದು ಸಂಬೋಧಿಸಿ, ಸಂಚಾರದ ಅನುಭವವನ್ನು ಆರಂಭಿಸಿದ್ದಾನೆ.

“ಮಛ್ಲಿ ಬಂದ್ರದಿಂದ ನಾನು ನಿನಗೆ ಬರೆದ ಕಾಗದವು ಯಿಷ್ಟುವರೆಗೆ ಮುಟ್ಟಿದ್ದೀತು. ಯೀ ಹತ್ತು ದಿವಸಗಳಲ್ಲಿ ಘಾಳಿಯೂ ತೆರೆಗಳೂ ನಂಮ ಶತೃಗಳಂತೆ ನಂಮ ಮೇಲೆ ಬಿದ್ದದರಿಂದ ಹಡಗವು ಒಡೆದುಹೋಗಿ ನಾವೆಲ್ಲರು ಮುಣಿಗಿ ಮೀನುಗಳ ಬಾಯಲ್ಲಿ ಬೀಳುವ ಭಯದಲ್ಲಿದ್ದೆವು. ಯೀಗ ಸಮುದ್ರವು ಪ್ರಶಾಂತವಾಗಿ ನಾವು ಹುಗಲಿ ನದಿಯ ಬಾಯಲ್ಲಿ ಸೇರಿ ವೊಂದು ಶೆಖೆ ಹಡಗದ ಸಹಾಯದಿಂದ ಕಲ್ಕತ್ತಾ ಪಟ್ಟಣದ ಕಡೆಗೆ ಯೇರಿ ಹೋಗುತ್ತಾಯಿದ್ದೇನೆ. ಗೂಹೆ ಮರಗಳೆಲ್ಲಾ ಮುರಿದು ಬಾಗಿಲಿನ ಹಲಿಗೆಗಳು ವೊಡೆದು ಹೋಗಿ ಅವೆ. ನಂನ ಮೇಜಂನು ತಿರುಗಿ ಕಟ್ಟಿ ಸಮಾಧಾನವಾಗಿ ಅದರ ಮುಂದೆ ಕೂತು ಕೊಂಡು ಯೀಗ ಕಳದ ಸಂಕಟದ ದಿವಸಗಳ ಚರಿತ್ರತೆಯಂನು ವಿವರವಾಗಿ ಬರೆಯುತ್ತೇನೆ”.

ಹಡಗ ಮದ್ರಾಸಿನಿಂದ ಕಲ್ಕತ್ತೆಗೆ ಹೊರಟಿದೆ. ಪಯಣಿಗರಲ್ಲಿ ಸೈನ್ಯಾಧಿಕಾರಿಗಳು, ಧರ್ಮ ಪ್ರಚಾರಕರು, ನಿವೃತ್ತ ಅಧಿಕಾರಿಗಳು, ಹಡಗಿನ ಕಫ್ತಾನರು, ಕೆಲಸಗಾರರು ಹೀಗೆ ವಿವಿಧ ಜನರಿದ್ದಾರೆ. ಸಮಯ ಕಳೆಯುವುದಕ್ಕೆ ಅಲ್ಲಲ್ಲಿ ಹರಟಿಗಳು, ಚರ್ಚೆಗಳು ನಡೆದಿವೆ. ಅಂತಹ ಒಂದು ಗುಂಪಿನ ಹಿಂಭಾಗದಲ್ಲಿ ಕುಳಿತ ಲೇಖಕ ಅವರು ಮಾತುಕತೆಗಳನ್ನು ಆಲಿಸುತ್ತಾನೆ, ವಿಷಯಗಳನ್ನು ಗ್ರಹಿಸುತ್ತಾನೆ.

ಆಫಗಾನಿಸ್ಥಾನದ ಮೇಲೆ ಯುದ್ಧ ಸಾರುವ ವಿಷಯವು ಚರ್ಚೆಗೆ ಒಳಗಾಗಿದೆ. ಸಂಭಾಷಣೆಯ ಸ್ವಾರಸ್ಯದ ಕೆಲವು ತುಣುಕುಗಳು ಇಂತಿವೆ:

ಅದು ಅನ್ಯಾಯವಾದ ಯುದ್ಧವೆಂದೂ ಸರ್ಕಾರದವರಿಗೆ ಅದರಿಂದ ನಷ್ಟವೇ ಹೊರ್ತುಯೇನು ಪ್ರಯೋಜನ ಆಗುವುದಿಲ್ಲ.”

ಆಫ್ಗಾನ್‌ದೇಶವು ಇಂಗ್ಲಿಷ್ಜನರಿಗೆ ವಶವಾದರೆ ಯೇಸುಕ್ರಿಸ್ತನ ಭಕ್ತರಿಗೆ ದೇಶದಲ್ಲಿ ಸಹ ಶುಭಸಮಾಚಾರವಂನು ಪ್ರಸಂಗಿಸುವುದಕ್ಕೂ ದೇಶಸ್ಥರಿಗೆ ಜೀವನ ಮಾರ್ಗವಂನು ತಿಳಿಸುವುದಕ್ಕೂ ಮಾರ್ಗವಾದೀತು.”

ಯಿದು ಯಂಥಾ ಮಾತು. ಆಫ್ಗಾನ್‌ಜನರಿಗೆ ಮುಸಲ್ಮಾನರ ಮತ ಉಂಟು. ಅವರು ತಂಮ ಮತದ ಪ್ರಕಾರ ಸನ್ಮಾರ್ಗದಲ್ಲಿ ನಡೆದರೆ ಅವರಿಗೆ ಸಾಕು. ದೇವರು ಪಕ್ಷಾಪರಿಪಕ್ಷ ನೋಡುವವನಲ್ಲ. ಸಕಲ ಜನರಲ್ಲಿ ನೀತಿಯಂನು ಅನುವರ್ತಿಸುವವನು.” “ನೀವು ಕ್ರೈಸ್ತರಲ್ಲವೋ, ಯೇಸುಕ್ರಿಸ್ತನ ನಾಮವಂನು ಹೊರ್ತಾಗಿ ಮನುಷ್ಯರು ವಿಶ್ವಾಸಿಸಿ ರಕ್ಷಣೆಯಂನು ಹೊಂದುವ ಹಾಗೆ, ಆಕಾಶದ ಕೆಳಗೆ ಬೇರೊಂದು ನಾಮವು ಯಿಲ್ಲವೆಂದು ದೇವರ ವಾಕ್ಯದಲ್ಲಿ ಬರೆದದೆ. ನೀವು ಮಾತನ್ನು ನಂಬುವುದಿಲ್ಲವೋ.”

ಯುದ್ಧ ಕಾಲದಲ್ಲಿ ಸಂಸ್ಥಾನದ ತ್ರಾಣವು ದಂಡಿನಲ್ಲುಂಟೆಂದು ತಿಳಿದುಕೊಂಡು ನಮಗೆ ಮಾನ ಮಾಡುತ್ತಾರೆ. ಆದರೆ ಆಫ್ಗಾನವಂನು ಜೈಸಿ ಅವರ ದೇಶವಂನು ತೆಗೆದುಕೊಂಡರೆ ನಮಗೆ ಸಾಕು. ಅವರ ಸನ್ಮಾರ್ಗ ದುರ್ಮಾರ್ಗಗಳಿಗೋಸ್ಕರ ಚಿಂತೆಪಡುವುದು ಯಾಕೆ. ಯಿದು ಅವರೆ ನೋಡತಕ್ಕದ್ದು

ದೊರೆಯೇ ನೀವು ಕಾಯೀನನ ಹಾಗೆ, ನಾನು ನಂಮ ಸಹೋದರನ ಕಾವಲಿಯವನೋಯೆಂದು ಹೇಳಲಿಕ್ಕೆ ನಾಚಿಕೆಯೂ ಭಯವೂ ಪಡುವುದಿಲ್ಲವೋ

ನಾನು ಸೋಲ್ಜರನಾಗಿದ್ದೇನೆ. ಖಡ್ಗವಂನು ಹಿಡಿದುಕೊಂಡು ಶತ್ರುಗಳ ತಲೆಗಳಂನು ಹಾರಿಸುವದು ನಂಮ ಕೆಲಸ. ಪ್ರಾರ್ಥಿಸುವದೂ ಪ್ರಸಂಗಿಸುವುದೂ ನಿಂಮದು. ನೀವು ನಿಂಮ ಕೆಲಸಕ್ಕೆ ನಾವು ನಂಮ ಕೆಲಸಕ್ಕೆ ನೋಡಿಕೊಳ್ಳುವಾ

ಹೀಗೆ ಮಾತಿನ ಸರಣಿ ಸಾಗುತ್ತದೆ. ಇದನ್ನೆಲ್ಲ ಹಿಂದೆ ಕುಳಿತು ಕೇಳುತ್ತಿದ್ದ ಲೇಖಕ ಕೃಷ್ಣ, “ನೋಡು ರಾಮರಾಯನೆ ಕ್ರೈಸ್ತರಲ್ಲಿಯೂ ಯಿಂಥವರಿದ್ದಾರೆ” ಎಂದು ಪತ್ರದಲ್ಲಿ ತಿಳಿಸುತ್ತಾನೆ.

ಅಷ್ಟರಲ್ಲಿ ಹಡಗಿನ ಕಫ್ತಾನ್‌ ಬಂದು ತೂಫಾನು ಬರುವ ಮುನ್ಸೂಚನೆ ನೀಡಿ, ಅವರವರ ಕ್ಯಾಬೀನುಗಳಿಗೆ ಹೋಗುವಂತೆ ವಿನಂತಿಸಿ, ಖಲಾಶಿಗಳಿಗೆ ಸಿದ್ಧರಾಗುವಂತೆ ಸೂಚಿಸುತ್ತಾನೆ. ಪಯಣಿಕರಿಗೆ ಆತಂಕ, ಭಯ, ಗಲಿಬಿಲಿ ಉಂಟಾಗುತ್ತದೆ. ಆಗ ಲೇಖಕ, “ಘಾಳಿಯೇನೂಯಿಲ್ಲದೇ ಶೆಖೆ ಹುಟ್ಟಿ ಪ್ರಯಾಸದಿಂದ ಕೂತುಕೊಂಡು ಯಿದೇನು ಯಿಂದು ಸಮುದ್ರ ಶಾಂತವಾಗಿ ಘಾಳಿ ನಿರ್ಮಲವಾಗಿದೆ. ಯೀ ಭಯವೂ ಗೌಜಿಯೂ ಯಾಕೆ” ಎಂದು ಯೋಚಿಸುವಷ್ಟರಲ್ಲಿ ತುಫಾನಿನ ಅನುಭವ ತಟ್ಟುತ್ತದೆ. “ದೂರದಿಂದ ಮಿಂಚು ಝಳಿಕಿಸಿತು. ಚಂದ್ರ ಅಸ್ತಮಾನವಾದಾಗಲೇ ನೀರಿನಲ್ಲಿ ಝೇಂಕಾರ ಹುಟ್ಟಿ ಹಡಗಕ್ಕೆ ಘಾಳಿಯು ಗುಂಡು ಹೊಡೆದ ಹಾಗಾಗಿ ಹಡಗನೆಲ್ಲಾ ನಡಿಗಿಸಿತು. ಕಫ್ತಾನರು ಖಲಾಶಿಗಳಿಗೆ ಕೂಗಿ ತಂಮ ತಂಮ ಸ್ಥಳದಲ್ಲಿ ನಿಲ್ಲಿರಿಯೆಂದು ಆಜ್ಞಾಪಿಸಿದರು. ಸ್ವಲ್ಪ ಕಾಲದ ಮೇಲೆ ಘಾಳಿಯು ಪಶ್ಚಿಮ ದಿಕ್ಕಿನಿಂದಲಾರಂಭಿಸಿ ಕ್ರಮದಿಂದ ತಿರಿಗಿ ನಾಲ್ಕು ದಿಕ್ಕುಗಳಿಂದ ಬೀಸಲಾರಂಭಿಸಿತು. ಕಫ್ತಾನರು ಹಡಗವಂನು ತಂಮಿಂದಲಾಗುವಷ್ಟು ಹೊರಗೆ ನಡಿಸಲಿಕ್ಕೆ ಪ್ರಯತ್ನ ಮಾಡಿದರು. ಕೆಲವು ತಾಸುಗಳ ಮೇಲೆ ಆಗ್ಞೆಯ ದಿಕ್ಕಿನಿಂದ ಪ್ರಚಂಡ ವಾಯು ಬಂದು ಸಮುದ್ರವು ಬೇಯುವ ನೀರಿನಂತೆ ಉಕ್ಕಿ ಹಡಗವು ಚೆಂಡಿನ ಹಾಗೆ ತೆರೆಗಳ ಮೇಲೆ ಹಾರ್ಯಾಡುತ್ತಾಯಿತ್ತು” ಎಂದು ತಿಳಿಸುತ್ತಾನೆ.

ತೂಫಾನಿನ ಚಿತ್ರಣ ಕಾಲ್ಪನಿಕವಲ್ಲ, ನೇರ ಅನುಭವದಿಂದ ಬರೆಹಕ್ಕೆ ಬಂದಿದೆ. ತನ್ನ ಯಾತ್ರೆಯ ಅನುಭವಗಳನ್ನು ವಿವರಿಸುತ್ತಾ ಬಂದ ಲೇಕಕ “ಬಹಳ ಬರದೆ ಆದರೂ ನಂನ ಕಥೆ ಮುಗಿಯಲಿಲ್ಲ. ಯೀ ಕಾಗದ ಲಕೋಟೆ ಮಾಡಿ ಮಿಕ್ಕದದ್ದು ಕಲ್ಕತ್ತಾದಲ್ಲಿ ಮುಟ್ಟಿದ ತರುವಾಯ ಮೂರನೆ ಕಾಗದಲ್ಲಿ ವಿರಮಿಸುವೆನು. ಯೀ ಸಮಾಚಾರವಂನು ನಂಮ ಸ್ನೇಹಿತರಿಗೆ ತಿಳಿಸಿ ನಂನ ನಮಸ್ಕಾರ ಸಲಾಮುಗಳಂನು ಹೇಳಬೇಕು” ಎಂದು ಪತ್ರ ಮುಕ್ತಾಯ ಮಾಡಿದ್ದಾನೆ.

ಸಮುದ್ರ ಯಾನದ ಕುರಿತು ಆತ ಬರೆದ ಮೊದಲ ಪತ್ರ, ಪ್ರಕಟವಾದ ಪತ್ರಿಕೆಯ ಸಂಚಿಕೆ ದೊರೆತಿಲ್ಲ. ಮುಂದಿನ ಸಂಚಿಕೆಗಳಲ್ಲೂ ಮೂರನೇ ಪತ್ರ ಪ್ರಕಟವಾಗಿಲ್ಲ. ಹೀಗಾಗಿ ಪ್ರವಾಸ ಕಥನದ ನಡಿಗೆ ಮುಂದುವರೆಯಲಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಪ್ರವಾಸ ಕಥನದ ಮೊಟ್ಟಮೊದಲ ಪರಿಚಯ ನೀಡಿದ ಈ ಪತ್ರದ ಬರವಣಿಗೆ, ಶೈಲಿ ಸ್ವಾರಸ್ಯಕರವಾಗಿದೆ.

ಭೂಗೋಳದ ಪಾಠಗಳು

ಭೂನಿವಾಸಿಗಳಿಗೆ, ಮೀನುಗಾರರಿಗೆ, ನಾವಿಕರಿಗೆ ಭೂಗೋಳದ ಕುರಿತು ತಿಳಿವಳಿಕೆ ಇರಬೇಕೆನ್ನುವ ಆಶಯದಿಂದ ಈ ಲೇಖನ ಮಾಲಿಕೆಯನ್ನು ಮೋಗ್ಲಿಂಗ್‌ರು ಪ್ರಕಟಿಸುತ್ತಾ ಬಂದಿದ್ದಾರೆ. ೭ನೇ ಸಂಚಿಕೆಯಿಂದ ಆರಂಭವಾಗುವ ಸಮುದ್ರದ ಭರತೆಗಳ ಲೇಖನವು ಸಮುದ್ರದಲ್ಲಿ ಯಾವ ಯಾವ ಕಾಲಕ್ಕೆ ಏರಿಳಿತಗಳು ಉಂಟಾಗುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ವಿವೇಚಿಸಿದೆ. ಅದೇ ರೀತಿ ಭೂಮಿಯ ಖಂಡಗಳೊಳಗಿರುವ ನೀರು (ಸಂ.೯), ಆಕಾಶವು ಮತ್ತು ಘಾಳಿಯ ಚಲನೆಗಳು (ಸಂ.೧೩), ಆಕಾಶದ ಉತ್ಪಾತಗಳು (ಸಂ.೧೪) – ಈ ಕುರಿತು ಲೇಖನಗಳು ಪ್ರಕಟವಾಗಿವೆ.

. ಯಿಂಗ್ಲಾಂಡ್ ರಾಜ್ಯದ ಪೂರ್ವಚರಿತ್ರೆ

ನಮ್ಮ ದೇಶದ ಪ್ರಾಚೀನ, ಮಧ್ಯಕಾಲೀನ ಚರಿತ್ರೆಗಳನ್ನು ಸಂಕ್ಷಿಪ್ತವಾಗಿ ‘ಕಂನಡ ಸಮಾಚಾರ’ದ ಮೂಲಕ ತಿಳಿಸಿಕೊಟ್ಟ ಮೋಗ್ಲಿಂಗ್‌ ರು, ನಮ್ಮನ್ನು ಆಳುತ್ತಿದ್ದ ಬ್ರಿಟಿಷರು ಮತ್ತು ಅವರ ಇಂಗ್ಲೆಂಡ್‌ (ಬ್ರಿಟನ್‌) ದೇಶದ ಬಗ್ಗೆಯೂ ವಿವರ ನೀಡುತ್ತಾರೆ. ಆ ದೇಶದಲ್ಲಿ ಅಧಿಕಾರ ಸತ್ತೆಗಾಗಿ ನಡೆದ ಕಲಹಗಳು, ಯುದ್ಧಗಳು, ಅಧಿಕಾರ ವಿಸ್ತರಣೆಯ ಆಕಾಂಕ್ಷೆಗಳ ಚರಿತ್ರೆಯು ಸಂಚಿಕೆ ೮ ರಿಂದ ಆರಂಭವಾಗಿ ೧೦ ಮತ್ತು ೧೪ ಸಂಚಿಕೆಗಳ ತನಕ ಚಾಚಿಕೊಂಡಿದೆ. ಈ ಬರೆಹದ ಸರಣಿ ಮುಂಚೆಯೇ ಶುರುವಾಗಿದೆ ಎಂದೂ ತಿಳಿಯುತ್ತದೆ.

. ಜಗದುತ್ಪತ್ತಿಯೂ ನರೋತ್ಪತ್ತಿಯೂ

ಇದು ಅಂಕಣದ ಬರೆಹವಲ್ಲ. ಈ ಲೋಕದ ರಚನೆ, ಮಾನವ ಸೃಷ್ಟಿಗಳ ಕುರಿತು ದಾರ್ಶನಿಕರು ತಿಳಿದಿರುವ-ತಿಳಿಸಿರುವ ಚಿಂತನೆಗಳ ಸಂಗ್ರಹ ಇಲ್ಲಿದೆ. ಇಂತಹ ಚಿಂತನೆಗಳು ಯಾವ ಯಾವ ಗ್ರಂಥಗಳಿಂದ ದೊರೆಯುತ್ತವೆಯೋ ಅವನ್ನು ಇಲ್ಲಿ ಕ್ರೋಢೀಕರಿಸುವ ಪ್ರಯತ್ನವನ್ನು ಮೋಗ್ಲಿಂಗ್‌ರು ಮಾಡಿದ್ದಾರೆ. ೧೧ ಮತ್ತು ೧೨ನೇ ಸಂಚಿಕೆಗಳು ಒಟ್ಟು ೩೦ ಸಂಸ್ಕೃತದ ಶ್ಲೋಕಗಳನ್ನು ಮತ್ತು ತಾತ್ಪರ್ಯಗಳನ್ನು ಒಳಗೊಂಡಿವೆ. ಮನುಧರ್ಮ ಶಾಸ್ತ್ರದಿಂದ ಇವನ್ನು ಪಡೆಯಲಾಗಿದೆ ಎಂದು ೧೧ನೇ ಸಂಚಿಕೆಯಿಂದ ಗೊತ್ತಾಗುತ್ತದೆ.

. ಹಿಂದುಸ್ಥಾನ ದೇಶದ ವರ್ತಕವಂನು ಕುರಿತು

ವ್ಯಾಪಾರ ವಹಿವಾಟಿಕೆಗೆ ಸಂಬಂಧಿಸಿದ ಲೇಖನ ಸರಣಿಯಿದು. ನಮ್ಮ ದೇಶಕ್ಕೆ ಬ್ರಿಟಿಷರು ಸೇರಿದಂತೆ ಹೊರಗಿನವರು ಬಂದಿದ್ದೇ ವ್ಯಾಪಾರಕ್ಕೋಸ್ಕರ. ಹೀಗಾಗಿ ತಮ್ಮ ಕಾಲಕ್ಕೆ ನಡೆದಿದ್ದ ವಾಣಿಜ್ಯ ವ್ಯವಹಾರವನ್ನು ಮೋಗ್ಲಿಂಗರು ಓದುಗರಿಗೆ ತಿಳಿಸಲು ಪ್ರಯತ್ನಿಸಿದ್ದಾರೆ.

ನಮ್ಮ ದೇಶದ ಕಚ್ಚಾವಸ್ತುಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆಯಿತ್ತು. ಸಂಚಿಕೆ ೧೨, ೧೩, ೧೪ ಸಂಚಿಕೆಗಳಲ್ಲಿ ಈ ಸಂಬಂಧಿ ಮಾಹಿತಿಗಳನ್ನು ನೀಡಲಾಗಿದೆ. “ಹಿಂದುಸ್ಥಾನ ದೇಶದಲ್ಲಿ ಉತ್ಪತ್ತಿಯಾಗುವ ವಸ್ತುಗಳು ಇತರ ದೇಶಸ್ಥರಿಗೆ ಬಹಳ ಉಪಯೋಗವಾಗಿ ಇದ್ದುದರಿಂದ ಅದು ಅದರ ವೈಭವಕ್ಕೆ ಮುಖ್ಯಕಾರಣವಾಗಿದೆ” (ಸಂಚಿಕೆ ೧೨) ಎಂದು ಆರಂಭಿಸಿ, “ಯೀ ದೇಶಸ್ಥರಿಗೆ ಯೀ ದೇಶದೊಳಗೆ ಉತ್ಪತ್ತಿಯಾಗುವ ವಸ್ತುಗಳು ಅತ್ಯವಶ್ಯಕವಾಗಿ ಇದ್ದುದರಿಂದ ಅವುಗಳಂನು ಕುರಿತು ಪ್ರತಿ ಸಂವತ್ಸರವು ವಿಸ್ತಾರವಾದ ಧನವಂನು ಯೀ ದೇಶಕ್ಕೆ ಬರುವ ಹಾಗೆ ಮಾಡುವರು” ಎಂದು ದೇಶಕ್ಕೆ ಬರುತ್ತಿದ್ದ ವರಮಾನವನ್ನು ಉಲ್ಲೇಖಿಸಿದ್ದಾನೆ.

ನಮ್ಮ ದೇಶದ ನೀಲಿಮದ್ದು, ಹತ್ತಿ, ಅಫೀಮು, ಶೆಲ್ಲೆಗಳು, ರೇಶಿಮೆ ಹಾಗೂ ಸೋರುಪ್ಪು- ಈ ವಸ್ತುಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆಯಿತ್ತು, ಅವು ರವಾನೆಯಾಗುತ್ತಿದ್ದವು. ಫಿರಂಗಿ ಮದ್ದು ತಯಾರಿಕೆಗೆ ಮುಖ್ಯವಾಗಿದ್ದ ಸೋರುಪ್ಪನ್ನು ಕುಂಪಣಿಯವರು ಅಧಿಕವಾಗಿ ಸಂಗ್ರಹಿಸಿ, ಇಂಗ್ಲೆಂಡಿಗೆ ಕಳುಹಿಸುತ್ತಿದ್ದರು. ಅಲ್ಲಿಂದ ಇತರ ದೇಶಗಳಿಗೆ ಮಾರುತ್ತಿದ್ದರ. ಹೀಗೆ ಈ ಆರು ವಸ್ತುಗಳ ವಹಿವಾಟಿನ ಸಂಕ್ಷಿಪ್ತ ವಿವರ ಇಲ್ಲಿ ದೊರೆಯುತ್ತದೆ.

. ಲೋಕದ ಚರಿತ್ರೆ

ಮೋಗ್ಲಿಂಗ್‌ರಿಗೆ ಇತಿಹಾಸದ ಬಗ್ಗೆ ತೀವ್ರ ಆಸಕ್ತಿ, ಒಲವು ಇದ್ದಂತೆ ಕಾಣುತ್ತದೆ. ಅದಕ್ಕೆ ಅವರು ಚರಿತ್ರೆಯನ್ನು ತಿಳಿಸುವುದಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ‘ಕಂನಡ ಸಮಾಚಾರ’ ಮೂಲಕ ಹಿಂದುಸ್ಥಾನದ ಚರಿತ್ರೆ, ಇಂಗ್ಲೆಂಡಿನ ಚರಿತ್ರೆಗಳನ್ನು ಸಂಕ್ಷಿಪ್ತವಾಗಿ ಓದುಗರಿಗೆ ಉಣಬಡಿಸಿದ ಅವರು, ‘ಪ್ರಪಂಚದ ಇತಿಹಾಸ’ದ ಬುತ್ತಿಯನ್ನು ಬಿಚ್ಚಟ್ಟಿದ್ದಾರೆ. ರೆವರೆಂಡ್‌ ಬಿ. ರೈಸ್‌ ಅವರ `History of the World’ ಗ್ರಂಥವು ‘ಈ ಲೋಕದ ಚರಿತ್ರೆ’ ರಚನೆಗೆ ಮುಖ್ಯ ಆಧಾರವಾಗಿದೆ. ‘ಕಂನಡ ಸಮಾಚಾರ’ದ ಮೂರು ಸಂಚಿಕೆಗಳಲ್ಲಿ (೧೫, ೧೬, ೧೭) ಈ ಚರಿತ್ರೆ ಬಿಚ್ಚಿಕೊಂಡಿದೆ.

“ಲೋಕದ ಚರಿತ್ರೆಯು ಮನುಷ್ಯರಲ್ಲಿ ಸಂಭವಿಸಿರುವ ಮುಖ್ಯವಾದ ಕಾರ್ಯಗಳನ್ನು ತಿಳಿಯ ಮಾಡುತ್ತದೆ” ಎಂದು ಅದರ ಮಹತ್ವವನ್ನು ಈ ಗ್ರಂಥದ ಪೀಠಿಕೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, “ಲೋಕದ ಚರಿತ್ರೆಯನ್ನು ತಿಳಿಯುವುದರಿಂದ ೧. ಮನಸ್ಸಿಗೆ ಸಂತೋಷವಾಗುವುದು, ೨. ಜ್ಞಾನ ಹೆಚ್ಚಾಗುವುದು, ೩. ಮನಸ್ಸು ವಿಸ್ತಾರವಾಗುವುದು, ೪. ಶಕ್ತಿ ಅಧಿಕವಾಗುವುದಕ್ಕೆ ಸಹಾಯವಾಗುವುದು.” ಆದ್ದರಿಂದ “ತಿಳಿವಳಿಕೆಯನ್ನು ಪ್ರಯೋಜನವನ್ನು ವೊಂದುದಕ್ಕೆ ಲೋಕದ ಚರಿತ್ರೆ ವೋದಬೇಕು” ಎಂದು ಒತ್ತಾಯಿಸಿದ್ದಾರೆ.

ಲೋಕದ ಚರಿತ್ರೆ ಮತ್ತು ಇತರ ಅಧ್ಯಯನ ಶಿಸ್ತುಗಳ ನಡುವಿನ ಸಂಬಂಧಗಳು, ಲೋಕದ ಸೃಷ್ಠಿ ಮೊದಲುಗೊಂಡು ಜಲಪ್ರಳಯದವರೆಗಿನ ವಿವರಗಳನ್ನು, ಭೂ ರಚನೆಯ ವೈವಿಧ್ಯಗಳನ್ನು ೧೬ ಮತ್ತು ೧೭ನೇ ಸಂಚಿಕೆಗಳಲ್ಲಿ ನೀಡಲಾಗಿದೆ. ರೆ.ಬಿ. ರೈಸ್‌ ಅವರ ಲೋಕ ಚರಿತ್ರೆಯನ್ನು ಕನ್ನಡಿಗರಿಗೆ ‘ಕಂನಡ ಸಮಾಚಾರ’ ಪತ್ರಿಕೆಯ ಮೂಲಕ ಮೊದಲು ಒದಗಿಸಿಕೊಡಲು ಮುಂದಾದ ಮೋಗ್ಲಿಂಗ್‌ ರು ಇದನ್ನು ಪೂರ್ಣಗೊಳಿಸಿದರೆ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ. ಈ ಚರಿತ್ರೆ ರಚನೆಯ ಗದ್ಯಶೈಲಿ ಹೃದ್ಯವಾಗಿದೆ. ಈವರೆಗೆ ಒತ್ತಾಕ್ಷರಗಳ ಬದಲಿಗೆ ಸೊನ್ನೆಯ ಸಹಾಯ ಪಡೆಯುತ್ತಿದ್ದ ಮೋಗ್ಲಿಂಗ್‌ ರು ಪತ್ರಿಕೆಯ ಕೊನೆಯ ಸಂಚಿಕೆ ಸಿದ್ಧಪಡಿಸುವ ಹೊತ್ತಿಗೆ ಒತ್ತಾಕ್ಷರಗಳನ್ನು ರೂಪಿಸಿಕೊಂಡಿರುವುದು ಗಮನಾರ್ಹ (ಉದಾ: ವಂನು-ವನ್ನು).

. ಯೇಸು ಕ್ರಿಸ್ತನ ಸಭೆಯ ಚರಿತ್ರೆಯು

“ಯೇಸು ಕ್ರಿಸ್ತನ ಸಭೆಯ ಚರಿತ್ರೆಯನ್ನು ತಿಳಿಯುವುದರಿಂದ ನಮಗೆ ಯೇನು ಪ್ರಯೋಜನಗಳುಂಟೆಂದು ಯಾರಾದರೂ ಕೇಳಿದರೆ, ಲೋಕದ ಚರಿತ್ರೆಯನ್ನು ತಿಳಿಯುವುದರಿಂದ ಯಾವ ಪ್ರಯೋಜನಗಳುಂಟೋ ಅದೇ ಪ್ರಯೋಜನಗಳುಂಟೆಂದು ಹೇಳಬಹುದು” (ಸಂ.೧೭)

ಯೇಸುಕ್ರಿಸನ ಅಧ್ಯಯನದ ಪ್ರಾಮುಖ್ಯತೆಗೆ ಮೇಲಿನದು ಸ್ಪಷ್ಟ ವಿವರಣೆ. ಈ ಚರಿತ್ರೆಯು “ಕ್ರಿಸ್ತನ ಮತ ವಿಸ್ತರಿಸುವ ರೀತಿಯನ್ನು, ಯೇಸುವಿನ ಶಿಷ್ಯರಲ್ಲಿ ಸಂಭವಿಸಿರುವ ಮುಖ್ಯವಾದ ಕಾರಣಗಳನ್ನು ತಿಳಿಸುತ್ತದೆ.” ಕಂನಡ ಸಮಾಚಾರ’ದ ೧೭ ಮತ್ತು ೧೮ರ ಸಂಚಿಕೆಗಳು ಕ್ರಿಸ್ತ ಸಭೆಯ ಬೆಳವಣಿಗೆಯ ಚಾರಿತ್ರಿಕ ಘಟ್ಟಗಳನ್ನು ತುಂಬಿಕೊಂಡಿವೆ. ಪ್ರಕಟಣೆಯ ಅನುಕೂಲಕ್ಕಾಗಿ ಏಳು ವಿಭಾಗಗಳನ್ನು ಮಾಡಿಕೊಂಡಂತಿದೆ. ಮೊದಲ ಅಧ್ಯಾಯ ಅಪೋಸ್ತಲರ ಕಾಲಕ್ಕದ ಸಂಬಂಧಿಸಿದ ಘಟನೆಗಳನ್ನು ವಿವರಿಸುತ್ತದೆ. ಸದ್ಯಕ್ಕೆ ಇದೊಂದೇ ಅಧ್ಯಾಯ ಪತ್ರಿಕೆಯಲ್ಲಿ ಪ್ರಕಟವಾಗಿರುವುದು. ಈ ಬರೆಹದ ಮೂಲಕ ಕ್ರೈಸ್ತ ಧರ್ಮದ ವಿಚಾರವು ಅಂಶಿಕವಾಗಿ ಪ್ರಸ್ತಾಪವಾಗಿದೆ.

. ದೇಶ, ವಿದೇಶದ ವರ್ತಮಾನಗಳು

‘ಮಂಗಳೂರ ಸಮಾಚಾರ’ಕ್ಕಿಂತ ‘ಕಂನಡ ಸಮಾಚಾರ’ದಲ್ಲಿ ಕುತೂಹಲಕರ ಸಂಗತಿಗಳು, ಸರ್ಕಾರಿ ಆದೇಶಗಳು, ಅಪರಾಧಿಗಳಿಗೆ ನೀಡಿದ ಸಜೆಗಳು – ಹೀಗೆ ದೇಶ-ವಿದೇಶದ ವರ್ತಮಾನಗಳು ಸ್ವಲ್ಪ ಹೆಚ್ಚಾಗಿ ಸೇರಿಕೊಂಡಿವೆ. ಸಂಪಾದಕ ಮೋಗ್ಲಿಂಗ್‌ರು ನಮ್ಮ ದೇಶದೊಳಗಿನ ಮತ್ತು ವಿದೇಶಗಳಲ್ಲಿನ ಆಗುಹೋಗುಗಳನ್ನು ಜನರಿಗೆ ತಿಳಿಸಲು ಆಸಕ್ತರಾಗಿದ್ದಾರೆ. ತಮಗೆ ದೊರೆತ ದೇಶೀಯ ಮತ್ತು ವಿದೇಶಿಯ ಆಂಗ್ಲ ವರ್ತಮಾನ ಪತ್ರಿಕೆಗಳಿಂದ ಸುದ್ದಿಗಳನ್ನು ಸ್ವಾರಸ್ಯಕರ ವಿಚಾರಗಳನ್ನು ಹೆಕ್ಕಿಕೊಂಡು ಓದುಗರಿಗೆ ತಿಳಿಸುತ್ತಾ ಬಂದಿದ್ದಾರೆ. ಕನ್ನಡ ಪತ್ರಿಕೆಗಳು ಶುರುವಾಗುವ ಮೊದಲು ವಿದೇಶಿ ಪತ್ರಿಕೆಗಳು ಇಲ್ಲಿಗೆ ಬರುತ್ತಿದ್ದುದು ಇದರಿಂದ ವಿಧಿತವಾಗುತ್ತದೆ. ಒಟ್ಟು ಪ್ರಕಟವಾದ ೧೨ ಸಂಚಿಕೆಗಳಲ್ಲಿ ಬಂದಿರುವ ಕೆಲವು ಸುದ್ದಿಗಳನ್ನು ಸಂಕ್ಷಿಪ್ತವಾಗಿ ನೋಡಬಹುದು.

ರೇಶಿಮೆ, ಅರಳೆ: ಬ್ರಿಟಿಷರು ಈ ದೇಶದಿಂದ ಖರೀದಿಸುತ್ತಿದ್ದ ಕಚ್ಚಾವಸ್ತುಗಳಲ್ಲಿ ರೇಶಿಮೆ ಮತ್ತು ಹತ್ತಿಗೆ ಪ್ರಮುಖ ಸ್ಥಾನವಿತ್ತು. ಕೃಷಿಕರಿಗೆ ಈ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹವನ್ನು ಸಂಪಾದಕರಾದ ಮೋಗ್ಲಿಂಗ್‌ ಪ್ರಚಾರಪಡಿಸಿದ್ದಾರೆ. ಮದ್ರಾಸಿನ ಸುದ್ದಿಯೊಂದು ಹೀಗೆ ತಿಳಿಸುತ್ತದೆ: “ಗವರ್ನರ್ ಬಹದೂರ್ ಬರುವ ಜನವರಿ ತಿಂಗಳಲ್ಲಿ ಉತ್ತಮ ಶುದ್ಧ ಬಿಳುಪಾದ ರೇಶಿಮೆಯ ಇಪ್ಪತ್ತು ಪೌಂಡ್‌ ಭಾರವಂನು ಕಳುಹಿಸಿ ತೋರಿಸುವಂತೆ ಮುಂನೂರು ರೂಪಾಯಿಯ ಯಿನಾಮು ಸಿಕ್ಕುವುದೆಂದು ಪ್ರಕಟ ಮಾಡಿದ್ದಾರೆ. ಒಂದು ಪೌಂಡ್‌ನಾಲ್ವತ್ತು ರೂಪಾಯಿ ತೂಕವಾಗಿದೆ. ಯೀ ಯಿನಾಮು ಹೊಂದಬೇಕೆಂದಿರುವವರು ಶುದ್ಧ ಬಿಳುಪಾದ ರೇಶಿಮೆಯ ಹೊರ್ತು ಬೇರೆ ಯಾವ ವರ್ನದ ಉತ್ತಮ ರೇಶಿಮೆಯನ್ನಾದರೂ ಕಳುಹಿಸಿ ತೋರಿಸಿದರೆ ವ್ಯರ್ಥವಾಗಿದೆ” (ಸಂ.೮).

ಸಂಚಿಕೆ ೧೪ರಲ್ಲಿ ‘ಹತ್ತಿಯಂನು ಹಸನ ಮಾಡುವ ವಿಷಯ’ಕ್ಕೆ ಮುಖಪುಟದಲ್ಲಿ ಪ್ರಧಾನಸ್ಥಾನ ನೀಡಲಾಗಿದೆ. ಇಂಗ್ಲೆಂಡ್‌ ದೇಶವು ೧೮೦೧ರಲ್ಲಿ ಮತ್ತು ೧೮೩೪ರಲ್ಲಿ ಬೇರೆ ಬೇರೆ ದೇಶಗಳಿಂದ ಎಷ್ಟೆಷ್ಟು ಅರಳೆಯನ್ನು ತರಿಸಿಕೊಂಡಿದೆ ಎಂಬ ಯಾದಿಯನ್ನು ಕೊಟ್ಟು “ಬೇರೆ ಬೇರೆ ದೇಶಗಳಿಂದ ಯಿಂಗ್ರೇಜಿ ದೇಶಕ್ಕೆ ತಂದು ಅಲ್ಲಿ ಜವಳಿ ಮಾಡಿದಂಥ ಅರಳಿ ಕೂಡಿ ೧೬೦೭೫೫೦ ಬಂಡಿಗಳಾದವು. ಮತ್ತು ಯಿ ಸಕಲರಿಂದ ಹಿಂದೂ ದೇಶದಿಂದ ತಂದ ಅರಳೆ ಅಗದಿ ೩೩೦೩೪೧ ಬಂಡಿಗಳಾದವು” (೧೮೩೪ರ ಪಟ್ಟಿ). ಅರಳೆಯ ರಪ್ತು ಬೇರೆ ಬೇರೆ ದೇಶಗಳಿಂದ ಹೆಚ್ಚಾಗುತ್ತಾ ಬಂದರೂ ಹಿಂದೂಸ್ಥಾನದಿಂದ ಈ ಪ್ರಮಾಣ ಹೆಚ್ಚಾಗದಿರುವ ಬಗ್ಗೆ ಚಿಂತೆ ವ್ಯಕ್ತವಾಗಿದೆ. ಉತ್ತಮವಾದ ಹತ್ತಿಯನ್ನು ಬೆಳೆಯದಿರುವುದು ಮತ್ತು ಉತ್ತಮವಾಗಿ ಹಸನು ಮಾಡದಿರುವುದು ಇದಕ್ಕೆ ಕಾರಣವಾಗಿದೆ. ಅದಕ್ಕಾಗಿ ಉತ್ತಮ ತಳಿಯ ಹತ್ತಿಯನ್ನು ಬೆಳೆಯಬೇಕು, ಚೆನ್ನಾಗಿ ಹಸನು ಮಾಡಬೇಕಾದುದು ಅಗತ್ಯವೆಂದು ಸೂಚಿಸಿದ್ದಾರೆ. ಸುಮಾರು ಒಂದು ಮುಕ್ಕಾಲು ಪುಟವನ್ನು ಈ ವಿಷಯಕ್ಕೆ ಬಳಸಿಕೊಂಡಿದ್ದಾರೆ. ಹಾಗೂ ಧಾರವಾಡ ಸೀಮೆಯ ಹತ್ತಿಯ ಬೆಳೆಯನ್ನು ಪ್ರತ್ಯಕ್ಷವಾಗಿ ಕಂಡು ಪರೀಕ್ಷಿಸಿ, ಹಲವು ಸಲಹೆಗಳನ್ನು ಸೂಚಿಸಿದ್ದಾರೆ.

ಗವರ್ನರ್ ಜನರಲ್ ಬರ್ತರಫ್

೧೮೪೪ರ ೧ನೇ ಜುಲೈ ತಿಂಗಳ ‘ಕಂನಡ ಸಮಾಚಾರ’ದ ೯ನೇ ಸಂಚಿಕೆಯ ಮುಖಪುಟದಲ್ಲಿ ‘ಲೋರ್ದ್ ಆಯಾಲೆನ್‌ಬೊರೊ ಯೆಂಬ ಲೋರ್ದ್ ಬಹದೂರರವರ ಬರ್ತರಫ್‌ (Dismissal of Lord Ellecnborough)’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾದ ಸುದ್ದಿಯು ಅತ್ಯಂತ ಪ್ರಧಾನವಾಗಿ ಗಮನ ಸೆಳೆದಿದೆ. ಹಿಂದೂಸ್ಥಾನದ ಗವರ್ನರ್ ಜನರಲ್‌ನನ್ನು ಅಧಿಕಾರದಿಂದ ಕಿತ್ತಿ ಹಾಖಿದ ಸುದ್ದಿಯೆಂದರೆ ಸಾಮಾನ್ಯವೇ? ಅದು ಎಲ್ಲರನ್ನು ಚಕಿತಗೊಳಿಸುವ ಘಟನೆಯೇ ಆಗಿದೆ. ಅದನ್ನು ಸಂಪಾದಕರ ಮಾತಿನಲ್ಲೇ ನೋಡುವಾ, “ಮೊನ್ನೆ ಬಂದ ಆವೆ ಹಡಗದಿಂದ ವೊಂದು ಆಶ್ಚರ್ಯವಾದ ವಿಲಾಯಿತಿ ವರ್ತಮಾನ ಬಂತು. ಯೇನೆಂದರೆ ಕೋರ್ತ್ ಆಫ್‌ ದಿರೆಕ್ತರ್ಸ್‌ಯೆಂಬ ಇಪ್ಪತ್ತುನಾಲ್ಕು ಮಂದಿ ಕುಂಪಣೀ ಹಿರೇಸಭೆಯವರು ಇಂಗ್ಲಾಂದ್‌ ದೇಶದ ರಾಣಿಯ ಮುಖ್ಯಪ್ರಧಾನಿಯಾದ ಸರ್ ರೊಬರ್ತ್ ಫೀಲವರೂ ಬಹುಮಾನಪಟ್ಟಿರುವ ಸೈನ್ಯಾಧಿಪತಿಯಾದ ದ್ಯೂಕ್‌ ಆಫ್‌ ವೆಲ್ಲಿಜ್ತುನ್‌ಧೊರೆಗಳೂ ಯೀ ಯಿಬ್ಬರ ಚಿತ್ತಕ್ಕೆ ವಿರೋಧವಾಗಿ ಯೀಗಿನ ಗವರ್ನರ್ ಜನರಲವರಿಗೆ ಬರ್ತರಫ್‌ಮಾಡಿದರು.”

ಎರಡು ವರ್ಷಗಳ ಹಿಂದೆ ಲಾರ್ಡ್ ಹ್ಯಾಲನ್‌ಬೊರೊ ಅವರನ್ನು ಹಿಂದೂಸ್ಥಾನದ ಗವರ್ನರ್ ಜನರಲ್‌ ಆಗಿ ನೇಮಿಸಿ, ಕಳುಹಿಸಲಾಗಿತ್ತು. ಆತ ಇಂಗ್ಲೆಂಡ್‌ ಬಿಡುವುದಕ್ಕೆ ಮುಂಚೆ “ಹಿಂದುದೇಶದಲ್ಲಿಯೂ ಸುತ್ತಲಿನ ಸಮಸ್ತ ದೇಶಗಳಲ್ಲಿಯೂ ಯುದ್ಧಾಗ್ನಿಯಂನು ಆರಿಸಿ ಸಮಾಧಾನವಂನು ಸ್ಥಾಪಿಸಿ, ನಂನ ಕೈಕೆಳಗಿರುವ ಜನಗಳಂನು ಸುಖಪಡಿಸುವುದಕ್ಕಾಗಿ ಹಿಂದುದೇಶಕ್ಕೆ ಹೋಗುತ್ತೇನೆ” ಎಂದು ಪ್ರಮಾಣ ಮಾಡಿ ಹೋಗಿದ್ದ. ಆದರೆ, ಎರಡು ವರ್ಷಗಳಲ್ಲಿ ಆತ ಮಾಡಿದ್ದೇನು? ಯುದ್ಧಗಳು ಹೇಗಾದವು? ಎಲ್ಲೆಲ್ಲೂ ಅಸಮಾಧಾನ, ಅಶಾಂತಿ ಹೇಗೆ ತಲೆದೋರಿತು? ಇತ್ಯಾದಿ ವಿಷಯಗಳ ಬಗ್ಗೆ ಕುಂಪಣಿ ಹಿರೇಸಭೆಯಲ್ಲಿ ಬಿಸಿಬಿಸಿ ಚರ್ಚೆ ಆಗಿದೆ. ಅಷ್ಟೆಲ್ಲಾ ವಿವರಗಳನ್ನು ಸಂಪಾದಕ ಮೋಗ್ಲಿಂಗ್‌ ಕನ್ನಡಿಗರ ಮುಂದೆ ಇಟ್ಟಿದ್ದಾನೆ. ಈ ಸಭೆಯಲ್ಲಾದ ಪ್ರಮುಖ ತೀರ್ಮಾನವನ್ನು ಪ್ರಧಾನಿ ಸರ್ ರಾಬರ್ಟ್ ಫೀಲ್‌ ಅವರ ಬಾಯಿಂದ ಹೊರಡಿಸಿದ್ದಾನೆ: “ಕುಂಪಣೀ ಹಿರೇಸಭೆಯವರು ನಂಮ ಮಾತಿಗೆ ಕಿವಿಗೊಡದೆ ನಂಮ ಸ್ನೇಹಿತರಾದ ಲೋರ್ದ್ ಹ್ಯಾಲ್ಲೆನ್‌ ಬೊರೊ ದೊರೆಗಳಿಗೆ ಬರ್ತರಫ್‌ ಮಾಡಿದ್ದಾರೆ. ಇದರಿಂದ ನಮಗೆ ಉಪದ್ರವವಾಯಿತು. ಆದರೆ ಇಂಥಾ ಅಧಿಕಾರವು ಕುಂಪಣಿಯವರಿಗೆ ಉಂಟೆಂಬುದು ಸರಿ. ಅವರು ಮಾಡಿದದರಲ್ಲಿ ಅನ್ಯಾಯವಿಲ್ಲ. ಅದುಕಾರಣ ನಾವು ಯೇನೂ ಮಾಡಕೂಡದು. ಹೊಸ ಗವರ್ನರ ಜನರಲ್‌ ಆರಿಸಿ ತೆಗೆದುಕೊಂಡು ಹಿಂದುದೇಶಕ್ಕೆ ಕಳುಹಿಸಬೇಕಾದ್ದದಾಯಿತು. ಸರ್ ಜನರಲ್‌ ಗವರ್ನರ್ ರಾದ ಸರ್ ಹೆನ್ರಿ ಹೂರ್ದಿಂಗ್‌ ಉತ್ತಮ ಸೈನ್ಯಾಧಿಪತಿಯೂ ರಾಜಿ ಕೆಲಸಗಳಂನು ಚೆನ್ನಾಗಿ ತಿಳಿದುಕೊಳ್ಳುವ ಬುದ್ಧಿಯುಳ್ಳ ದೊರೆಯಾಗಿದ್ದಾರೆಂದು ಎಲ್ಲರಿಗೆ ತಿಳಿಯುವುದು. ಅದುಕಾರಣ ಕುಂಪಣೀ ಹಿರೇಸಭೆಯವರು ಕೊಟ್ಟ ಅಪ್ಪಣೆಯಿಂದ ಹಿಂದುದೇಶಸ್ಥರಿಗೆ ನಷ್ಟವಲ್ಲ ಕ್ಷೇಮವಾಗುವುದೆಂದು ಕಾಣುವುದು”.

ಗಂಭೀರಕ್ರಮ ಎಂಬುವುದು ಯಾವ ಮುಲಾಜು, ಕೃಪಾಶೀವಾದ ಪ್ರಭಾವಗಳನ್ನು ನೋಡದು ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ. ಈ ರಾಜಕೀಯ ಪರಿವರ್ತನೆಯನ್ನು ಅರ್ಥವತ್ತಾಗಿ ಸಂಗ್ರಹಿಸಿ, ಪ್ರಕಟಿಸಿದ ಮೋಗ್ಲಿಂಗ್‌ ಒಬ್ಬ ಸಂಪಾದಕನ ಜವಾಬ್ಧಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅಷ್ಟುಸ ಮಾತ್ರವಲ್ಲ, ಹೊಸ ಗವರ್ನರ್ ಜನರಲ್‌ಆಗಿ ನೇಮಕವಾದ ಸರ್ ಹೆನ್ರಿ ಹಾರ್ದಿಜ್‌ ಅವರು ಇಂಗ್ಲೆಂಡ್‌ ಬಿಟ್ಟು, ಕಲ್ಕತ್ತಾಗೆ ಬಂದು, ಅಧಿಕಾರ ಗದ್ದುಗೆ ಏರುವ ತನಕ ಸುದ್ಧಿಯ ಬೆನ್ನತ್ತಿ ಬಂದಿದ್ದಾರೆ (ಸಂಚಿಕೆ ೧೦, ೧೧, ೧೨, ೧೩).

ಇಂಗ್ಲಿಷರ ಆಯವ್ಯಯ: ಇಂಗ್ಲಿಷ್‌ ಸರ್ಕಾರದವರು ಒಂದು ವರ್ಷಕ್ಕೆ ಎಷ್ಟು ಆದಾಯವನ್ನು ಗಳಿಸುತ್ತಾರೆ ಮತ್ತು ಎಷ್ಟು ಖರ್ಚನ್ನು ಮಾಡುತ್ತಾರೆ? ಇಂತಹ ವರ್ತಮಾನವು ದೇಶಸ್ಥರಿಗೆ ತಿಳಿದಿರಬೇಕು. ಅದಕ್ಕಾಗಿ ಮೋಗ್ಲಿಂಗ್‌ ರು ೧೮೪೩-೪೪ನೇ ಸಾಲಿನ ಇಂಗ್ಲಿಷ್‌ ಸರ್ಕಾರದ ಆಯವ್ಯಯ (ಬಜೆಟ್‌) ವನ್ನು ಪ್ರಕಟಿಸಿದ್ದಾರೆ (ಸಂ.೯). ಈ ಸಾಲಿನಲ್ಲಿ ಸರ್ಕಾರಕ್ಕೆ ೫೨, ೭೩, ೫೧, ೨೪೦ ರೂಪಾಯಿಗಳ ವರಮಾನದ ನಿರೀಕ್ಷೆಯಿದ್ದು ಸುಮಾರು ೪೮,೦೦,೦೦,೦೦೦ ರೂಪಾಯಿಗಳ ವೆಚ್ಚ ಬರಲಿದೆ. ದಂಡಿಗೆ, ಯುದ್ಧದ ಹಡಗುಗಳಿಗೆ ಬಾರೂಜು ಇತ್ಯಾದಿ ಯುದ್ಧ ಸಾಹಿತ್ಯಕ್ಕೆ ಅತ್ಯಧಿಕ ಮೊತ್ತವನ್ನು ಖರ್ಚಿಗೆಂದು ನಿಗದಿ ಪಡಿಸಲಾಗಿದೆ.

ಇದಲ್ಲದೆ, ಪತ್ರಿಕೆಯಲ್ಲಿ ಮುಂಬೈ ಬ್ಯಾಂಕಿನ ಲಾಭ ಗಳಿಕೆ ಸಮಾಚಾರ (ಸಂ.೧೧), ಧಾರವಾಡದ ಪಟಾಲಾಮ್‌ ಸಿದ್ಧತೆ (ಸಂ.೧೦), ವಿಕ್ಟೋರಿಯಾ ರಾಣಿಯ ಜೊತೆ ಯುರೋಪಿನ ಸಂಬಂಧಗಳು (ಸಂ.೧೨), ಸಿಂಧ್‌, ಮದ್ರಾಸ್‌ನಲ್ಲಿ ರಾಮಾನುಜುಲು ನಾಯಿಡುಗೆ ಕ್ರೈಸ್ತ ದೀಕ್ಷೆ (ಸಂ.೧೩), ಇಂಗ್ಲೆಂಡ್‌ನಿಂದ ಮುಂಬೈಗೆ ಬಂದ ಹೊಸ ಆವೆ ಹಡಗುಗಳು (ಸಂ.೧೩), ಇಂಗ್ಲೆಂಡ್‌ನಿಂದ ಮುಂಬೈಗೆ ಬಂದ ಹೊಸ ಆವೆ ಹಡಗುಗಳು(ಸಂ.೧೩), ಸಿಂಧುದೇಶ, ಲಾಹೋರ್, ಬಂಗಾಳ, ಕಾಬೂಲ್‌ನಲ್ಲಿನ ರಾಜಕೀಯ ಆಗುಹೋಗುಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ಸಮಾಚಾರಗಳು ಪ್ರಕಟವಾಗಿವೆ.

ಶಿಕ್ಷೆಯ ಕುರಿತ ವರ್ತಮಾನಗಳು: ಕಂಣೂರಿನಲ್ಲಿ ಕೊಟ್ಟ ಮರಣ ಶಿಕ್ಷೆ – “ಮಳೆ ಕಾಲದ ಮುಂಚೆ ಸರ್ಕಾರದವರು ೪೭ನೆ ಮದ್ರಾಸ್‌ ನೆಟಿವ್‌ ಇನ್‌ಫೆಂಟ್ರಿ ಪಟಾಲಮು ಮದ್ರಾಸ್‌ ಬಂದ್ರದಲ್ಲಿ ಜಾನ ‌ಲ್ವಾನ್‌ಯೆಂಬ ಹಡಗದಲ್ಲಿ ಯೇರಿಸಿ ಮುಂಬೈಗೆ ಕಳುಹಿಸಿದರು. ಯೀ ಹಡಗವು ಸಮುದ್ರದಲ್ಲಿರುವಾಗ ಶಿಪ್ವಾ ಜನರಲ್ಲಿ ಕೆಲವರು ತಂಮೊಳಗೆ ಗುಣಗುಟ್ಟಿ ತಂಮ ಸರ್ದಾರರ ಆಜ್ಞೆಗಳಂನು ಅಲಕ್ಷಿಸಿ ದ್ರೋಹ ಮಾಡಿದರು. ಯಿದಂನು ಹುಟ್ಟಿಸಿದವನಾದ ವೀರಸ್ವಾಮಿ ಯೆಂಬವನಿಗೆ ಸರ್ದಾರರು ನ್ಯಾಯ ತೀರಿಸಿ ಅವನ ಅಪರಾಧವಂನು ಕಂಡು ಅವನಂನು ಹದಿನೇಳನೆ ಜೂನಿನಲ್ಲಿ ಕಂಣೂರಿನ ಕೋಟೆಯಲ್ಲಿ ಶಿಪಾಯರ ಕೈಯಿಂದ ಬಂದೂಕಿನ ಗೋಲಿಗಳಿಂದ ಕೊಂದು ಹಾಕಿದರು” (ಸಂ.೧೧).

ಫಾರ್ಶೀಖೂನಿಯವರು: ಮುಂಬೈನ ಪತ್ರಕರ್ತನೊಬ್ಬನ ಕೊಲೆಗೆ ಸಂಬಂಧಿಸಿದ ವರದಿಯೊಂದು ಸಂ.೧೩ ರಲ್ಲಿ ಪ್ರಕಟವಾಗಿದೆ. “ಕೆಲವು ತಿಂಗಳುಗಳ ಹಿಂದೆ ಮುಂಬೈಯಲ್ಲಿ ಫಾರ್ಶೀ ಜನರ ಗುಂಪು ಕೂಡಿಕೊಂಡು ವರ್ತಮಾನ ಕಾಗದವಂನು ಬರೆಯುವವನಾದ ಮನ್ಚರ್ಜಿಹೊಮಸ್ಜಿಯೆಂಬ ವೊಬ್ಬನಂನು ಬೀದಿಯಲ್ಲಿ ಹೊಡೆದು ಕತ್ತಿಗಳಿಂದ ತಿವಿದು ಕೊಂದುಹಾಕಿದರೆಂದು ಹೇಳಿದೆವು. ಆ ಖೂನಿ ಮಾಡಿದವರಂನು ಸರಕಾರದವರು ಹಿಡಿದು ಪಂಚಾಯತರಂನು ಕರಿಸಿ ಬಹು ಜಾಗ್ರತೆಯಿಂದ ವಿಚಾರಣೆ ಮಾಡಿ ಜೂಲೈ ತಾರೀಖು ೨೬ನೆಯಲ್ಲಿ ನಾಲ್ಕು ಜನರಿಗೆ ಸಾಯುವ ಶಿಕ್ಷೆಯಂನು ನೇಮಿಸಿದರು. ಆರು ಜನರಿಗೆ ದ್ವೀಪಾಂತರ ಶಿಕ್ಷೆಯಂನು ನಿಶ್ಚೈಸಿದರು”.

ಬ್ರಿಟಿಷರ ಸರ್ಕಾರ ಅಪರಾಧಿಗಳನ್ನು ಸುಮ್ಮನೆ ಬಿಡುತ್ತಿರಲಿಲ್ಲ ಎನ್ನುವುದಕ್ಕೆ ಈ ಎರಡು ಪ್ರಕರಣಗಳು ಸಾಕ್ಷಿಯಾಗುತ್ತವೆ. ಮಿಲಿಟರಿ ವ್ಯವಸ್ಥೆಯಲ್ಲಿ ಅವರು ಅಶಿಸ್ತನ್ನು, ಬಂಡೇಳುವುದನ್ನು ಸಹಿಸುತ್ತಿರಲಿಲ್ಲ. ಮದ್ರಾಸಿನ ಸಿಪಾಯಿ ವೀರಸ್ವಾಮಿ ತಮಗೆ ದ್ರೋಹ ಬಗೆದಿದ್ದಾನೆಂದು ತೀರ್ಮಾನಿಸಿ ಅವನಿಗೆ ಮರಣ ಶಿಕ್ಷೆ ಕೊಟ್ಟಿದ್ದಾರೆ. ಆದರೆ ಮುಂಬೈ ಪತ್ರಕರ್ತನ ಕೊಲೆ ಇದಕ್ಕೆ ಭಿನ್ನವಾಗಿದೆ. ಕೊಲೆಗೀಡಾದ ಮನ್ಚರ್ಜಿ ಹೋಮ್‌ಸ್ಜಿ ಹೆಸರಿನಿಂದ ಫಾರಶಿ ಯವನೆಂದೇ ಗೊತ್ತಾಗುತ್ತದೆ. ಆತ ಪತ್ರಕರ್ತನಾಗಿ ಫಾರಶಿ ಜನಾಂಗದ ವಿರುದ್ಧ ಏನು ಮಾಡಿದ ಅಥವಾ ಅವರನ್ನು ಅಸಮಾಧಾನವಾಗುವಂತಹ ಇಲ್ಲವೆ ಉದ್ರೇಕಿಸುವಂತಹ ಯಾವ ವರ್ತಮಾನವನ್ನು ಬರೆದನೆಂಬುದು ತಿಳಿಯದು. ಆದರೆ ಆ ಜನಾಂಗದ ಗುಂಪು ಆತನನ್ನು ಬೀದಿಯಲ್ಲಿ ಅಟ್ಟಾಡಿಸಿ, ಹೊಡೆದು ಕತ್ತಿಗಳಿಂದು ಕೊಚ್ಚಿ ಹಾಕಿದ್ದು ಒಂದು ಬರ್ಬರ ಕೃತ್ಯವೇ ಆಗಿದೆ. ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಿದೆ. ಪತ್ರಕರ್ತರ ಮೇಲೆ ಇವತ್ತಿನವರಿಗೆ ಒಂದಲ್ಲ ಒಂದು ವಿಧವಾಗಿ ಹಲ್ಲೆಗಳು, ದೌರ್ಜನ್ಯಗಳು ನಡೆಯುತ್ತಲೇ ಇವೆ. ಅಮಾನುಷ ಕೊಲೆಗಳೂ ಆಗಿವೆ. (ಉದಾ. ಗುಲ್ಬರ್ಗಾದ ಕ್ರಾಂತಿ ಪತ್ರಿಕೆಯ ಸಂಪಾದಕ ಸಿದ್ರಾಮೇಶರ ಕೊಲೆ.) ಆದರೆ ಇಂತಹ ಅಪರಾಧವೆಸಗಿದವರಿಗೆ ಬಹುತೇಕ ಕಠಿಣ ಶಿಕ್ಷೆಗಳು ಆಗಿಲ್ಲ!