. ಇತರೆ, ಕೌತುಕದ ವಿಶೇಷ ಸಂಗತಿಗಳು

ಓದುಗರಿಗೆ ಒಂದೇ ನಮೂನೆಯ ವರ್ತಮಾನಗಳನ್ನು ನೀಡಿ ತೃಪ್ತಿಪಡಿಸಲಾಗದು. ಪತ್ರಿಕೆಯ ನಡುನಡುವೆ ಕೆಲವು ಕುತೂಹಲಕರ ಸಂಗತಿಗಳನ್ನು ನೀಡಿ, ಅದರಿಂದ ಅವರ ಮನಗೆಲ್ಲಬಹುದು. ಈ ಮರ್ಮವನ್ನು ಮೋಗ್ಲಿಂಗ್‌ ರು ಕಂಡುಕೊಂಡಿದ್ದಾರೆ.

ಇಂಗ್ಲಾಂದ್ದೇಶದ ರಾಣಿಯು ೪ನೆ ಮಗುವಂನು ಹೆತ್ತದ್ದು: “೬ನೆ ಆಗಸ್ಟ್‌ನಲ್ಲಿ ಬೆಳಿಗ್ಗೆ ಏಳುಘಂಟೆಯ ಮೇಲೆ ಐವತ್ತು ಮಿನಿತ್ತಿನಲ್ಲಿ ವಿಕ್ತೋರಿಯ ರಾಣಿಯೂ ವೊಂದು ಗಂಡು ಮಗವಂನು ಹೆತ್ತು ತಾಯಿಯೂ ಮಗನೂ ಕ್ಷೇಮವಾಗಿದ್ದಾರೆಂದು ಏಳನೆ ಆಗಸ್ಟ್‌ನಲ್ಲಿ ಬರೆದ ವರ್ತಮಾನ ಯಿಗ ಮುಂಬೈಯಲ್ಲಿ ಮುಟ್ಟಿದ ಆವೇಹಡಗದಿಂದ ಬಂತು” (ಸಂ.೧೫, ೧ನೇ ಅಕ್ಟೋಬರ್, ೧೮೪೪). ಮಗುವನ್ನು ಯಾರು ಹೆತ್ತರೂ ಸುದ್ದಿಯಾಗದು. ಆದರೆ ಬ್ರಿಟಿಷ್‌ಸಾಮ್ರಾಜ್ಯದ ರಾಣಿಗೆ ಹೆರಿಗೆಯಾಗಿ ಗಂಡುಮಗುವಾದರೆ ಅದು ಒಂದು ಕುತೂಹಲಕರ ಸುದ್ದಿಯೆಂಬುದು ಸಂಪಾದಕರ ನಿಲುವು.

ಮಳೆಬಂತು: “ಮಂಗಳೂರಿನಲ್ಲಿ ಮಳೆಗಾಲದ ಆರಂಭದಿಂದ ಜೂನ್‌ ತಾರೀಖು ೯ನೇ ವರೆಗೆ ನಾಲ್ವತೈದು ಇಂಜ್‌ಅಥವಾ ಅಂಗುಲ ಮಳೆಬಿತ್ತು. ಅಲ್ಲಿರುವ ಪಾದ್ರಿಯವರ ಹತ್ರಯಿದಂನು ಯೆಣಿಸುವ ಪೆಟ್ಟಿಗೆಯಿರುವುದರಿಂದ ಯಿವರು ಲೆಖ್ಖ ಮಾಡಿರುತ್ತಾರೆ” (ಸಂ.೧೧, ೧ನೇ ಆಗಸ್ಟ್‌, ೧೮೪೪). ಮಂಗಳೂರಿನಲ್ಲಿ ಮಳೆಯಾಗಿದ್ದು ನಮಗೆ ವಿಶೇಷವೆನಿಸುವುದಿಲ್ಲ. ಆದರೆ ಅಲ್ಲಿ ಬಿದ್ದ ಮಳೆಯ ಪ್ರಮಾಣ ಹಾಗೂ ಅದನ್ನು ಅಳೆಯುವ ಮಾಪನಯಂತ್ರ ಚರ್ಚಿನ ಧರ್ಮಗುರುಗಳಲ್ಲಿರುವುದು ಮತ್ತು ತಂತ್ರಜ್ಞಾನದ ಉಪಯೋಗ ಗಮನಾರ್ಹ.

ಮಾರಿ ರೋಗಕ್ಕೆ ತಕ್ಕ ಔಷಧಿ: ನಮ್ಮ ದೇಶದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಮಾರಿರೋಗ (ಕಾಲೇರಾ) ಅನೇಕರನ್ನು ಬಲಿತೆಗೆದುಕೊಳ್ಳುತ್ತಿತ್ತು. ಈ ರೋಗದ ನಿವಾರಣೆಗೆ ಅನುಕೂಲವಾದ ಔಷಧ ಮತ್ತು ಅದನ್ನು ಬಳಸುವ ವಿಧಾನವನ್ನು ಜನರಿಗೆ ತಿಳಿಸಿ, ಪ್ರಯೋಜನ ದೊರೆಯಲಿ ಎಂಬ ಉದ್ದೇಶದಿಂದ ಸಂಪಾದಕ ಮೋಗ್ಲಿಂಗ್‌ ಪತ್ರಿಕೆಯಲ್ಲಿ ನೀಡಿದ್ದಾರೆ. “ಯರ್ಡು ತಂಡುಲಬಾರ ಹಿಂಗು, ಯರ್ಡು ತಂಡುಲಬಾರ ಅಫೀಮು, ಯರ್ಡು ತಂಡುಲಬಾರ ಕರಿಮೆಣಸು ಯಿಷ್ಟು ತೆಗೆದು ವೊಂದು ಗುಳಿಗೆ ಅಥವಾ ಮಾತ್ರೆ ಮಾಡಿ ರೋಗಿಷ್ಠರಿಗೆ ತಡಮಾಡದೆ ಕೊಡಬೇಕು. ಅವನು ಚಂನ್ನಾಗಿ ಅದಂನು ಬಾಯಿಯಲ್ಲಿ ಜಗಿದು ನುಂಗಬೇಕು. ಯಿಲ್ಲವೆ ವೊಂದು ಸಂಣ ಸೌಟಿನಲ್ಲಿ ಬ್ರಾಂಡಿ ಮತ್ತು ನೀರು ಕೂಡಿಸಿ ಅದರಲ್ಲಿ ಯೀ ಗುಳಿಗೆಯಂನು ಕರಗಿಸಬೇಕು. ತ್ವರೆಯಾಗಿ ಗುಣವಾಗದೆ ಯಿದ್ದರೆ ಅರ್ಧತಾಸಿನ ಮೇಲೆ ತಿರಿಗಿ ಹೀಗೆಯೇ ಕೊಡಬೇಕು” (ಸಂ.೧೧). ಇದರ ಜೊತೆಗೆ ರೋಗಿಯ ಉಪಚಾರವು ಮುಖ್ಯವಾಗಿರುತ್ತದೆ. ಈ ಮದ್ದನ್ನು ಸಿಪಾಯಿಗಳು ಬಳಸುತ್ತಿದ್ದರು. “ಯೀಗಿರುವ ಜನರೆಲ್‌ ದೊರೆಗಳಲ್ಲಿ ವೊಬ್ಬನು ತಂನ ಪಟಾಲಾಮಿನಲ್ಲಿರುವ ಅನೇಕ ಶಿಷ್ಯಾ ಜನರಿಗೆ ಯೀ ಔಷಧದಿಂದಲೇ ಮಾರಿರೋಗವಂನು ಪರಿಹರಿಸಿದನು” ಎಂದು ತಿಳಿಸಲಾಗಿದೆ.

ಕೊಟ್ಟ ಸಾಲವಂನು ತೆಗೆದುಕೊಳ್ಳುವ ಹೊಸ ಉಪಾಯ: ಅಮೇರಿಕಾದಲ್ಲಿ ಒಬ್ಬಾತ ಖಾಸಗಿ ಮೃಗಾಲಯ (ಜೂ)ವನ್ನು ಇಟ್ಟುಕೊಂಡು ಅದರಿಂದ ಬರುವ ಆದಾಯದಿಂದ ಜೀವನ ಸಾಗಿಸುತ್ತಿದ್ದ. ಈತನ ಹತ್ತಿರ ಒಬ್ಬ ದೊರೆ(ಅಧಿಕಾರಿ) ಯು ಹಣವನ್ನು ಸಾಲವಾಗಿ ತೆಗೆದುಕೊಂಡ. ಆದರೆ ಹಿಂತಿರುಗಿಸಲೇ ಇಲ್ಲ. ಅದಕ್ಕೆ ಈತ ಏನು ಮಾಡಿದನು ಗೊತ್ತೇ “ಸಾಲವಂನು ಕೊಟ್ಟ ಆ ಮೃಗಗಳ ಮನುಷ್ಯನು ಬಹಳ ಸಾರಿ ಸಾಲವಂನು ಕೇಳಿ ಹೀಗೆಯೇ ಕೇಳುವುದು ವ್ಯರ್ಥವೆಂದು ನೋಡಿ, ವೊಂದು ದಿವಸ ಸಾಕಿದ ಹುಲಿಗಳಲ್ಲಿ ವೊಂದನು ಕರೆದು ಆ ದೊರೆಯ ಮನೆಗೆ ಹೋಗಿ ಬಾಗಲು ತೆರೆದು ಆ ಹುಲಿಯ ತಲೆಯಂನು ವೊಳಗೆ ಹಾಕಿ, ದೊರೆಯೇ ಯೀಗ ಹಣವಂನು ಕೊಡಿರಿ. ಯಿಲ್ಲದಿದ್ದರೆ ನಂನ ಹುಲಿಯಂನು ವೊಳಗೆ ಶೇರಿಸಿ ಹೋಗುತ್ತೇನೆಂದು ಹೇಳಿದನು. ಆ ದೊರೆ ಹುಲಿಯ ತಲೆಯಂನು ನೋಡಿ ಬಹಳ ಹೆದರಿಕೊಂಡು ಆ ಕ್ಷಣದಲ್ಲಿ ಹಣವಂನು ಕೊಟ್ಟುಬಿಟ್ಟನು” (ಸಂ. ೧೩, ೧ನೆ ಸೆಪ್ಟಂಬರ್, ೧೮೪೪).

ಆಶ್ಚರ್ಯವಾದ ಪ್ರಾಯವು: ಇಂಗ್ಲೆಂಡ್‌ ಸ್ಕಾಟ್ಲೆಂಡ್‌ ದೇಶಗಳ ಗಡಿಸೀಮೆಯ ಶ್ವೀಧ್‌ಮುಥ್‌ಗ್ರಾಂದ ಜೇಮ್ಸ್‌ಸ್ತುಯರ್ದ್ ಎಂಬ ವ್ಯಕ್ತಿಯ ಚಿತ್ರಣವಿದು. ಈತ ಕುಳ್ಳ, ಮಹಾಪ್ರಚಂಡ. ಈತ ತೀರಿಕೊಂಡಾಗ ಸಾವಿರಾರು ಜನರು ಅಂತ್ಯಸಂಸ್ಕಾರಕ್ಕೆ ಬಂದರು. ಅಂತಹ ವಿಶೇಷತೆ ಅವನಲ್ಲೇನಿತ್ತು? ಎಂದರೆ, “ಜೇಮ್ಸ್‌ಸ್ತ್ಯುಅರ್ದ್ ಐದು ಮದುವೆ ಮಾಡಿಕೊಂಡು ೨೭ ಮಂದಿ ಮಕ್ಕಳಂನು ಹುಟ್ಟಿಸಿದನು. ಯಿವರಲ್ಲಿ ಹತ್ತು ಮಂದಿ ಗಂಡಸರು ದಂಡಿಗೆ ಹೋಗಿ ಐದು ಮಂದಿ ಹಿಂದುದೇಶದಲ್ಲಿಯೂ ಯಿಬ್ಬರು ತ್ರಪಾಲ್ಗರಿನಲ್ಲಿಯೂ ಯಿಬ್ಬರು ಆಲ್ಜೀರಿನಲ್ಲಿಯೂ ವೊಬ್ಬನು ವಾತರ್ ಲೂವಿನಲ್ಲಿಯೂ ಸತ್ತರು. ಯೀ ಸ್ತ್ಯೂಅರ್ದ್ ಎಂಬುವನು ಗಿಡ್ಡ ಮನುಷ್ಯರಾದರೂ ಬಹಳ ಶಕ್ತಿಯುಳ್ಳವನಾಗಿದ್ದನು. ಸುಮಾರು ಮುವ್ವತ್ತು ವರ್ಷಗಳ ಹಿಂದೆ ಅವನು ವೊಂದು ದಿವಸ ಹುಲ್ಲು ತುಂಬಿದ ದೊಡ್ಡಗಾಡಿ ನೋಡಿ ಅದರ ಕೆಳಗಿನಿಂದ ಬೆಂನು ಕೊಟ್ಟು ಅದಂನೆತ್ತಿದನು. ಅವನು ಬಹಳ ಮುದಕನಾದ ಮೇಲೆ ಆ ವೂರಿನಲ್ಲಿರುವ ಕೆಲವು ದೊರೆಗಳು ಪಾಲಿನಲ್ಲಿ ಹಣಕೂಡಿಸಿ ಅವನು ಸಾಯುವಪರಿಯಂತರ ಅನಾಯಾಸವಾಗಿ ಬದಕುವ ಹಾಗೆ ಅವನಿಗೆ ಕೊಟ್ಟರು. ಅವನ ಹಿರಿಯರು ಪೂರ್ವ ಕಾಲದಲ್ಲಿ ಇಂಗ್ಲಾಂದ್‌ ಸ್ಕಾಟ್ಲಂಡ್‌ ದೇಶಗಳ ಅರಸುಗಳಾಗಿದ್ದರು. ಯಿವನೇ ನೂರಹದಿನಾರು ವರ್ಷ ಪ್ರಾಯದಲ್ಲಿ ಬಡಮನುಷ್ಯನಾಗಿ ತೀರಿಹೋದನು”. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಇದು ಒಳ್ಳೆಯ ನಿದರ್ಶನವಾಗಿದೆ.

ವಯಸ್ಸಿನ ಕುರಿತ ಇನ್ನೊಂದು ನಿದರ್ಶನ ಇಲ್ಲಿದೆ: “ಆರ್ಯಲ್ಯಾಂಡ್‌ ದೇಶದ ಕ್ರೈಸ್ತ ಸಭೆಯ ಅರ್ಚ ಬಿಷಪರಲ್ಲಿ ವೊಬ್ಬನಿಗೆ ಮೊಲೆ ಕೊಟ್ಟ ದಾದಿಯು ಮೊನ್ನೆ ನೂರನಾಲ್ಕು ವರ್ಷದವಳಾಗಿ ಚಂನಾಗಿದ್ದು ದೇವಾಲಯಕ್ಕೆ ನಡಿದುಕೊಂಡು ಹೋದಳೆಂದು ಇಂಗ್ಲಿಷ್‌ ನ್ಯೂಶ್‌ ಪೇಪರ್ ಗಳಲ್ಲಿ ಬರೆದದೆ” (ಸಂ.೧೦, ೧೫ನೆ ಜೂಲಾಯಿ, ೧೮೪೪).

ಮದ್ರಾಸ್ ಹುಡುಗಿಯರ ಸಾಲೆ: “ವಿಲಾಯಿತಿಯಲ್ಲಿ ಸ್ತ್ರೀಯರಿಗೆ ಬರಹವಿಲ್ಲದೇ ಯಿರುವದು ಅಪಮಾನವು. ಅದು ಕಾರಣ ವಿಲಾಯಿತಿ ಸ್ತ್ರೀಯರು ಗಂಡಸರ ಹಾಗೆ ಬುದ್ಧಿಯುಳ್ಳವರಾಗಿ ತಂಮ ಪತಿಗಳಿಗೆ ಅವರ ಕೆಲಸಗಳಲ್ಲಿ ಸಹಾಯ ಮಾಡಿ ಆಲೋಚನೆ ಕೊಟ್ಟು ತಂಮ ಮಕ್ಕಳಿಗೆ ಬಾಲ್ಯವಾರಭ್ಯ ಬುದ್ಧಿಮಾರ್ಗವನು ತೋರಿಸುತ್ತಾರೆ. ಹಿಂದೂ ಸ್ತ್ರೀಯರು ವಿಲ್ಯಾತಿ ಸ್ತ್ರೀಯರ ಹಾಗೆ ವಿದ್ಯೆ ಜ್ಞಾನಗಳನ್ನು ಕಲಿತರೆ ಅವರ ಗಂಡಂದಿರಿಗೂ ಮಕ್ಕಳಿಗೂ ಬೇರೆ ಸಂಬಂಧಿಕರಿಗೂ ಬಹು ಉಪಯೋಗವಾಗುವದು.”

ಗೋಪಾಲಕೃಷ್ಣನಾಯುಡು, ಸುಬ್ಬರಾಯಲು ನಾಯುಡು ಮೊದಲಾದ ಹಿಂದು ಅಧಿಕಾರಿಗಳು ಸೇರಿಕೊಂಡು ಮದ್ರಾಸಿನ ಬ್ಲೆತ್‌ ಟೌನಿನಲ್ಲಿ ಆರಂಭಿಸಿದ ಹಿಂದೂ ಸ್ತ್ರೀ ಪಾಠಶಾಲೆಗೆ ಬಾಲಕಿಯರನ್ನು ಸೇರಿಸಬೇಕೆಂಬ ಆಶಯ ಸಂಪಾದಕರಲ್ಲಿದೆ. ಈ ಶಾಲೆಗೆ ಸೇರಿಸಲು ಅನೇಕ ವಿರೋಧಗಳಿದ್ದರೂ ಮುನ್ನಡೆಸಿಕೊಂಡು ಹೋಗುತ್ತಿತ್ತುದ್ದನ್ನು ಪ್ರಶಂಸಿಸಲಾಗಿದೆ. ಸ್ತ್ರೀ ಶಿಕ್ಷಣಕ್ಕೆ ‘ಕನ್ನಡ ಸಮಾಚಾರ’ ಒತ್ತು ನೀಡಿರುವುದು ಗಮನಾರ್ಹ.

ಹೀಗೆ ‘ಕನಂಡ ಸಮಾಚಾರ’ವು ಹತ್ತು ಹಲವು ವಿಷಯಗಳ, ಸಂಗತಿಗಳ ಸಂಗಮವಾಗಿದೆ. ಸ್ಥಳೀಯ, ರಾಜ್ಯದ, ದೇಶ-ವಿದೇಶಗಳ ಆ ಕಾಳದ ವರ್ತಮಾನಗಳಿಗೆ ಪ್ರತಿಬಿಂಬವಾಗಿದೆ. ಪತ್ರಿಕೆಗಳೇನೆಂದು ತಿಳಿಯದೇ ಇದ್ದ ಕನ್ನಡಿಗರಿಗೆ ಹೊಸದಾಗಿ ಈ ಮಾಧ್ಯಮವನ್ನು ಪರಿಚಯಿಸಿ ನವೋದಯಕ್ಕೆ ಮಾರ್ಗ ನಿರ್ಮಿಸಿಕೊಟ್ಟಿದೆ. ‘ಮಂಗಳೂರು ಸಮಾಚಾರ’ ಮಂಗಳೂರಿನಿಂದ ಕಲ್ಲಚ್ಚಿನಲ್ಲಿ ಪ್ರಕಟವಾದ ಕನ್ನಡದ ಪ್ರಪ್ರಥಮ ಪತ್ರಿಕೆಯಾದರೆ, ‘ಕಂನಡ ಸಮಾಚಾರ’ವು ಅಚ್ಚುಮೊಳೆ ಮುದ್ರಣಯಂತ್ರದಲ್ಲಿ ಬಳ್ಳಾರಿಯಿಂದ ಪ್ರಕಟವಾದ ಆದ್ಯ ಪತ್ರಿಕೆಯಾಗಿದೆ. ಈ ಎರಡು ಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಗಳನ್ನು ಕೂಲಂಕುಶವಾಗಿ ಓದಿನೋಡಿದಾಗ ಲಭ್ಯವಾಗುವ ವಿಶೇಷತೆ ಏನೆಂದರೆ ಸ್ವಧರ್ಮ ಪ್ರಚಾರಕ್ಕಾಗಿ, ಅನ್ಯಧರ್ಮಗಳ ನಿಂದನೆಗಾಗಲಿ ಅಥವಾ ಧರ್ಮ ಸಂಕಟಗಳನ್ನು ಹುಟ್ಟುಹಾಕಲಿಕ್ಕಾಗಲಿ ಅಥವಾ ಸ್ವಾರ್ಥ ಸಾಧನೆಗಾಗಲಿ ಇವನ್ನು ಬಳಸಿಕೊಳ್ಳದೆ ಧರ್ಮನಿರಪೇಕ್ಷತೆಯನ್ನು ಕಾಯ್ದುಕೊಂಡಿರುವುದು ಮತ್ತು ಪತ್ರಿಕಾ ಧರ್ಮವನ್ನು ಎತ್ತಿಹಿಡಿದಿರುವುದು. ಈ ಎರಡು ಪತ್ರಿಕೆಗಳ ಸ್ಥಾಪಕ, ಲೇಖಕ, ಸಂಪಾದಕರಾದ ಮೋಗ್ಲಿಂಗ್‌ ಈ ಮೂಲಕವೂ ಅಲ್ಲದೆ ಇತರ ಕ್ಷೇತ್ರಗಳಲ್ಲಿ ಸಾಕಷ್ಟು ಶ್ರಮವಹಿಸಿ ನಾಡಿಗೆ ಕೊಟ್ಟ ಕೊಡುಗೆಯು ಸ್ಮರಣೀಯವಾಗಿದೆ.

ಇತರ ಪತ್ರಿಕೆಗಳು

‘ಕಂನಡ ಸಮಾಚಾರ’ ಪಾಕ್ಷಿಕ ಪತ್ರಿಕೆಯು ಕ್ರಿ.ಶ. ೧೮೪೪ರ ನವೆಂಬರ್ ೧೫ರ ತನಕ ನಡೆಯಿತು. ಇದರ ಸಂಪಾದನೆಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಮಿಶನರಿಗಳು ಮುಂದೆ ಬಾರದ ಕಾರಣ ಹಾಗೂ ಪ್ರೋತ್ಸಾಹದ ಕೊರತೆಯಿಂದಾಗಿ ನಿಂತುಹೋಯಿತು. ಇದರ ನಂಥರ ೧೩ ವರ್ಷಗಳ ತನಕ ಮಿಶನರಿಗಳ ಪತ್ರಿಕಾರಂಗವು ಸ್ತಬ್ಧವಾಗಿ ಬಿಟ್ಟಿತು. ಮೋಗ್ಲಿಂಗರ ಹೊರತಾಗಿ ಯಾರೂ ಈ ಕಾರ್ಯಕ್ಕೆ ಕೈಹಾಕಲಿಲ್ಲ. ಮತ್ತೆ ಮೋಗ್ಲಿಂಗರೇ ಮುಂದೆ ಬಂದು ‘ಕಂನಡ ಸುವಾರ್ತಿಕಾ’ (Canarese Messenger) ಎಂಬ ಪತ್ರಿಕೆಯನ್ನು ಹೊರಡಿಸಿದರು. ಭಾರತದಲ್ಲಿ ಬ್ರಿಟಿಷ್‌ ಕಂಪನಿಯ ಆಡಳಿತ ವಿರುದ್ಧ ಸಿಪಾಯಿಗಳು ಬಂಡಾಯ ಹೂಡಿದ್ದ ಕಾಲವದು (೧೯೫೭). ಕಂಪನಿಯವರು ಇದನ್ನು ‘ಸಿಪಾಯಿ ದಂಗೆ’ ಎಂದು ಕರೆದರು. ಈ ಘಟನೆಗೆ ಸಂಬಂಧಿಸಿದ ವಾರ್ತೆಗಳನ್ನು ಪೂರೈಸುವ ಅಗತ್ಯ ಅರಿತು ಈ ಪತ್ರಿಕೆಯನ್ನು ಆರಂಭಿಸಿರಬೇಕು ಎಂದು ವಿದ್ವಾಂಸರು ಊಹಿಸುತ್ತಾರೆ. ದಂಗೆಯ ವಿಷಯವಾಗಿ ಕ್ರಿ.ಶ. ೧೮೫೭ರ ಸೆಪ್ಟೆಂಬರ್ ೧೫ರ, ೬ನೇ ಸಂಚಿಕೆಯಲ್ಲಿ ಪ್ರಕಟವಾದ ವರ್ತಮಾನ ವಿಷಯವನ್ನು ಗಮನಿಸಬಹುದು.

“ಕಾಟಕಾಯಿ ಹುಟ್ಟಿದ ಮೊದಲನೇ ತಿಂಗಳಲ್ಲಿ ಹಿಂದೂ ಜನರೂ ಮುಸಲ್ಮಾನರೂ ಆದ ಸಿಪಾಯಿಗಳು, ಕಂಪನಿ ಸರಕಾರದವರು ತಮ್ಮ ಜಾತಿಗಳನ್ನು ಕೆಡಿಸಿ ತಮ್ಮ ಪೂಜೆಗಳನ್ನು ನಿಲ್ಲಿಸಿ ತಮ್ಮನ್ನು ಅಂಕೆಯಿಂದಾ ಕ್ರೈಸ್ತಮತದಲ್ಲಿ ಸೇರಿಸುವ ಆಲೋಚನೆಯಲ್ಲಿ ಇದ್ದಾರೆಂಬ ಭಯದಿಂದ ರಾಜದ್ರೋಹದಲ್ಲಿ ಸೇರಿದವರೆಂದು ಅನೇಕರು ನೆನಸಿದರು. ಕಂಪನಿ ಸರಕಾರದವರು ಇಂಥಾ ಆಲೋಚನೆ ಮಾಡುತ್ತಾರೆಂಬ ಮಾತು ಸ್ವಸ್ಥಚಿತ್ತರಿಗೆಲ್ಲಾ ಬರೇ ಸುಳ್ಳೆಂದು ಗೊತ್ತದೆ….. ಕಂಪನಿಯವರು ನೂರು ವರುಷದಿಂದ ಹಿಂದೂ ದೇಶದಲ್ಲಿ ಧೋರೆತನ ಮಾಡುತ್ತಾ ಬಂದು ಯಾವ ಕಾಲದಲ್ಲಿಯೂ ಯಾವ ಸ್ಥಳದಲ್ಲಿಯೂ ಹಿಂದೂಸ್ಥಾನದಲ್ಲಿ ಹುಟ್ಟಿದ ಒಬ್ಬ ಮನುಷ್ಯನಂನಾದರೂ ನಯದಿಂದಾಗಲಿ ಭಯದಿಂದಾಗಲಿ ಕ್ರೈಸ್ತಮತದಲ್ಲಿ ಸೇರಿಸಿದರೆಂಬ ಸುದ್ದಿಯೇ ಹುಟ್ಟಲಿಲ್ಲಾ”.[1]

ಈ ವಾರ್ತೆಯನ್ನು ಅವಲೋಕಿಸಿದಾಗ ಒಂದಿಷ್ಟು ವಿಚಾರಗಳು ಹೊಳೆಯುತ್ತವೆ. ‘ಸಿಪಾಯಿದಂಗೆ’ ಎಂದು ಕರೆಯಲಾದ ೧೯೫೬ರ ಘಟನೆ ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯಆಂದೋಲನದ ಪ್ರಥಮ ಸಂಗ್ರಾಮ ಎಂದು ಪರಿಗಣಿತವಾಗಿದೆ. ತನ್ನ ಸಮಕಾಲೀನದ ಒಂದು ಪ್ರಮುಖ ಘಟನೆಗೆ ಸಂಪಾದಕ ಮೋಗ್ಲಿಂಗ್‌ ಅವರು ಸಾಕ್ಷಿಯಾಗುವ ಸಂದರ್ಭ. ಆ ಕಾಲಕ್ಕೆ ಅವರು ಯಾವ ರೀತಿ ಈ ಘಟನೆಗೆ ಸ್ಪಂದಿಸಿದರು? ಓರ್ವ ಕ್ರೈಸ್ತಮಿಷನರಿಯಾಗಿ, ಕನ್ನಡ ಪತ್ರಿಕೆಯೊಂದರ ಸಂಪಾದಕರಾಗಿ ಬ್ರಿಟಿಷ್‌ ಪ್ರಭುತ್ವದ ವಿರುದ್ಧ ಬಂಡೆದ್ದ ಸಿಪಾಯಿಗಳ ಹೋರಾಟವನ್ನು ಮುಕ್ತಮನಸ್ಸಿನಿಂದ ಸ್ವಾಗತಿಸಿರಬಹುದೇ ಅಥವಾ ಹಿಂಸಾಚಾರವೆಂದು ತಿಳಿದು ಅದನ್ನು ದಾಖಲಿಸಿರಬಹುದೇ? ಕ್ರೈಸ್ತಮಿಷನರಿಗಳು ಅದರಲ್ಲೂ ಪ್ರಗತಿಪರರೂ ಸ್ವಾತಂತ್ರಪ್ರಿಯರೂ ಆಗಿದ್ದ ಬಾಸೆಲ್‌ ಮಿಷನರಿಗಳು, ಭಾರತೀಯರು ಹೂಡಿದ್ದ ಬ್ರಿಟಿಷ್‌ ಆಡಳಿತಶಾಹಿ ವಿರುದ್ಧದ ಹೋರಾಟದ ವಿವಿಧ ಹಂತಗಳಲ್ಲಿ ಭಾಗವಹಿಸಿದ್ದರೆ ಅಥವಾ ನಿರ್ಲಿಪ್ತರಾಗಿದ್ದರೆ ಅನ್ನುವುದು ಪ್ರತ್ಯೇಕವಾದ ವಿಚಾರವಾಗಿದೆ.

ಆದರೆ, ಆ ಕಾಲದ ಸಂದರ್ಭದಲ್ಲಿ ಘಟಿಸಿದ ಪ್ರಮುಖ ಘಟನೆಯನ್ನು ‘ಕನ್ನಡ ಸುವಾರ್ತಿಕಾ’ ಪತ್ರಿಕೆ ಯಾವ ರೀತಿ ದಾಖಲಿಸಿದೆ ಮತ್ತು ಘಟನೆಗೆ ವೈಯುಕ್ತಿಕವಾಗಿ ಹೇಗೆ ಸ್ಪಂದಿಸಿದೆ ಅನ್ನುವುದನ್ನು ನಾವು ವಿಶ್ಲೇಷಿಸಿ ನೋಡಬಹುದು. ಒಂದು ವರ್ಷದ ಆಡಳಿತ ಕಾಲದಲ್ಲಿ ಈಸ್ಟ್‌ ಇಂಡಿಯಾ ಕಂಪನಿಯವರು ಯಾವೊಬ್ಬ ಪ್ರಜೆಯನ್ನು ನಯದಿಂದಾಗಲಿ ಇಲ್ಲವೇ ಭಯದಿಂದಾಗಲಿ ಮತಾಂತರಕ್ಕೆ ಗುರಿಪಡಿಸಿಲ್ಲ ಎನ್ನುವ ಅಭಿಪ್ರಯಾವನ್ನು, ವರದಿಯ ಸತ್ಯಾಸತ್ಯತೆಯನ್ನು ನಂಬಲು ಸಾಧ್ಯವಾಗದು. ‘ಕನ್ನಡ ಸುವಾರ್ತಿಕ’ದಲ್ಲಿ ದಾಖಲಾದ ‘ಸಿಪಾಯಿದಂಗೆ’ಯ ಒಂದಿಷ್ಟು ವಾರ್ತೆಯ ಭಾಗವನ್ನು ವಿಶ್ಲೇಷಿಸಿ ಪತ್ರಿಕೆಯ ಒಟ್ಟಾರೆ ಧೋರಣೆಯನ್ನು ಗುರುತಿಸಲು ಆಗದು. ಆದರೂ ಪ್ರಕಟವಾಗಿರುವ ವಾರ್ತೆಯಲ್ಲಿನ ವಿಶೇಷತೆಯನ್ನು ನೋಡಿದಾಗ, ಇದು ಕಂಪನಿಯವರು ಸಿದ್ಧಪಡಿಸಿ ಕಳಿಸಿದ ಪತ್ರಿಕಾ ಪ್ರಕಟಣೆಯ ಅನುವಾದವೇ ಅಥವಾ ಸಂಪಾದಕರೇ ಆಸಕ್ತಿವಹಿಸಿ ಬೇರೆ ಸುದ್ದಿಮೂಲಗಳಿಂದ ಸಂಗ್ರಹಿಸಿ ಪ್ರಕಟಿಸಿದುದೇ ಎಂಬುದು ಸ್ಪಷ್ಟವಾಗಿ ತಿಳಿಯದು. ಈ ಸುದ್ದಿಯನ್ನು ಪ್ರಕಟಿಸಿರುವ ರೀತಿಯನ್ನು ಗಮನಿಸಿದರೆ ಬಹುಶಃ ಕಂಪನಿ ಆಡಳಿತಗಾರರ ಮನವೊಲಿಕೆಗಾಗಿ ಹೀಗೆ ಮಾಡಿರಬಹುದೇ ಎಂದು ಸಂದೇಹ ಉಂಟಾಗುತ್ತದೆ. ಆದರೆ, ಸೆಲಿನ್‌ವಾಸ್ ಅವರು ಈ ಪತ್ರಿಕೆ ಮತ್ತು ಸಂಪಾದಕರ ಕುರಿತು ಬರೆಯುತ್ತಾ “He enlightened the people on all aspects of national freedoM and unity”[2] (ರಾಷ್ಟದ ಬಿಡುಗಡೆ ಮತ್ತು ಒಗ್ಗಟ್ಟಿಗೆ ಸಂಬಂಧಿಸಿದ ಎಲ್ಲ ನೋಟಗಳಲ್ಲಿ ಅವರು ಜನರನ್ನು ಜಾಗೃತಗೊಳಿಸಿದ್ದಾರೆ) ಎಂದು ಹೇಳಿರುವುದನ್ನು ಒಪ್ಪಲು ಆಧಾರಗಳು ಸಾಲವು.

‘ಕಂನಡ ಸುವಾರ್ತಿಕ’ದಲ್ಲಿ ಮಾತ್ರ ಬಾಸೆಲ್‌ ಮಿಶನ್‌ಗೆ ಸಂಬಂಧಿಸಿದ ವಾರ್ತೆಗಳು ತುಸು ಕಾಣಿಸಿಕೊಂಡವು. ಏಕೆಂದರೆ, ಆ ವೇಳೆಗೆ ಮಂಗಳೂರು ಮತ್ತು ಇತರ ಕಡೆಗಳಲ್ಲಿ ಮಿಶನ್‌ ಕೇಂದ್ರಗಳು ಚೆನ್ನಾಗಿ ನೆಲೆಗೊಂಡಿದ್ದವು. ಹೀಗೆ ಈ ಪತ್ರಿಕೆಯು ಕರ್ನಾಟಕದ ಕರಾವಳಿ ಪ್ರದೇಶದಿಂದ ಕಾರ್ಯಗತವಾಗುತ್ತಿದ್ದ ಕ್ರೈಸ್ತಮಿಶನ್‌ನ ಚಟುವಟಿಕೆಗಳನ್ನು ದಾಖಲಿಸುತ್ತಾ ಹೋಯಿತು ಅಲ್ಲದೆ ಈ ಮೂಲಕ ಅದು ಧಾರ್ಮಿಕ ಸಾಧನವಾಗಿ ಬಳಕೆಯಾಗತೊಡಗಿತು.[3]

ಮೋಗ್ಲಿಂಗರು ತಮ್ಮ ಮತೀಯ ಚಟುವಟಿಕೆಗಳಿಗೆ ‘ಮಂಗಳೂರ ಸಮಾಚಾರ’ ಮತ್ತು ‘ಕಂನಡ ಸಮಾಚಾರ’ ಪತ್ರಿಕೆಗಳನ್ನು ವೇದಿಕೆಯನ್ನಾಗಿ ಮಾಡಿಕೊಳ್ಳದೇ, ಜನಜಾಗೃತಿಯ ಮಾಧ್ಯಮವನ್ನಾಗಿ ಬಳಸಿಕೊಂಡರು. ಆದರೆ, ‘ಕಂನಡ ಸುವಾರ್ತಿಕ’ವನ್ನೂ ಆ ನಿಟ್ಟಿನಲ್ಲಿ ತೆಗೆದುಕೊಂಡು ಹೋಗಲಿಲ್ಲ. ಬದಲಾಗಿ ಅದನ್ನು ಬಾಸೆಲ್‌ ಮಿಷನ್‌ದವರ ಕೆಲಸಕಾರ್ಯಗಳನ್ನು ತಮ್ಮ ಜನರಿಗೆ ಮತ್ತು ಇತರ ಜನರಿಗೆ ತಲುಪಿಸುವ ವಾಹಕವನ್ನಾಗಿ ಮಾಡಿಕೊಂಡರು. ಪತ್ರಿಕೆಯ ಮುದ್ರಣ ಸೊಗಸು, ಸುದ್ದಿ ವಿಸ್ತರಣೆಯ ವಿಧಾನ ಹಾಗೂ ಭಾಷಾ ಶೈಲಿಯನ್ನು ನೋಡಿದರೆ ‘ಕಂನಡ ಸುವಾರ್ತಿಕ’ವು ಗಮನಾರ್ಹ ಪ್ರಗತಿಯನ್ನು ಸಾಧಿಸಿ ಕೊಂಡಿತ್ತೆಂದು ತಿಳಿಯುತ್ತದೆ. ಕೊಡಗಿನ ಶೈಕ್ಷಣಿಕ ಹಾಗೂ ಇತರ ಕೆಲಸಗಳ ಒತ್ತಡದ ನಿಮಿತ್ತ ಮೋಗ್ಲಿಂಗರರು ಈ ಪತ್ರಿಕಯೆನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಪತ್ರಿಕೆ ಒಂದು ವರ್ಷಕ್ಕಿಂತ ಹೆಚ್ಚು ಕಾಲ ನಡೆಯಲಿಲ್ಲ. ಈ ಪತ್ರಿಕೆಯಲ್ಲದೆ, ‘ಕ್ರೈಸ್ತಸಭಾಪತ್ರ’ ಎಂಬ ಕ್ರೈಸ್ತಪತ್ರಿಕೆಯ ಪ್ರಕಾಶನದಲ್ಲೂ ಮೋಗ್ಲಿಂಗರ ಸಹಾಯ[4] ಇತ್ತೆಂದು ತಿಳಿಯುತ್ತದೆ.

ಕ್ರಿ.ಶ. ೧೮೫೩ರಲ್ಲಿ ಮೋಗ್ಲಿಂಗ್‌ ಅವರು ಸಿ. ಗ್ರೈನರ್ ಮತ್ತು ಬ್ಯೂರರ್ ಇವರೊಡನೆ ಸೇರಿ ‘ಮಂಗಳೂರ ಪಂಚಾಂಗ’ (ಮಂಗಳೂರ ಅಲ್ಮನಕ್‌) ಹೊರಡಿಸಿದರು. ಇದು ಪ್ರತಿವರ್ಷ ಪ್ರಕಟವಾಗತೊಡಗಿತು. ಇದರ ಬೆಲೆ ಎರಡು ಆಣೆ. ಈ ಪಂಚಾಂಗದಲ್ಲಿ ತಾರೀಖು, ತಿಥಿ, ವಾರ, ನಕ್ಷತ್ರಗಳೂ, ಕುಜಾದಿ ಪಂಚಗ್ರಹ ವಿಚಾರವೂ, ಉದಯಾಸ್ತಮಾನವೂ ಅಲ್ಲದೆ ಸೂಕ್ಷ್ಮನೂತನ ದೃಕ್ಸಿದ್ಧಾಂತ ಪಂಚಾಂಗ ಅಂದರೆ ಮಹಾನಕ್ಷತ್ರವೆಂಬ ಸೂರ್ಯನಕ್ಷತ್ರ ಉದಯಿಸುವ ಕಾಲವೂ ಸಂಕ್ರಮಣದ ಘಳಿಗೆ, ವಿಘಳಿಗೆಗಳು, ಕುಜಾದಿಗ್ರಹಗಳು ರಾಶಿಯನ್ನು ಪ್ರವೇಶಿಸುವ ಕಾಲವೂ, ಸೂಕ್ಷ್ಮಗಣಿತದ ಮೇಲೆ ಹೇಳಲ್ಪಟ್ಟಿದೆ. ವರ್ತಮಾನ ಸಂಗ್ರಹ, ಶರೀರ ಚಿಕಿತ್ಸೆ, ಠಸ್ಸೆ ತೀರ್ವೆಯ ವಿವರ, ಟಪ್ಪಾಲಕ್ರಮಗಳು, ಸರಕಾರಿ ಉದ್ಯೋಗಸ್ಥರಪಟ್ಟಿ, ಕ್ರೈಸ್ತ, ಮುಸಲ್ಮಾನ, ಹಿಂದೂ ಜನರ ಹಬ್ಬಗಳಪಟ್ಟಿ ಮುಂತಾದ ಉಪಯುಕ್ತ ಪ್ರಸ್ತಾಪಗಳು ಪಂಚಾಂಗದಲ್ಲಿ ಅಡಕವಾಗಿವೆ ಎಂದು ಹೇಳಲಾಗಿದೆ. ಪ್ರತಿಪುಟದ ಮೇಲೆ ಬೈಬಲ್‌ ಆಧಾರಿತ ನೀತಿವಾಕ್ಯಗಳಿವೆ.[5] ಲೋಕವಾರ್ತೆ ನೀತಿಕಥೆಗಳೂ ಇಲ್ಲಿ ಕಂಡುಬರುತ್ತವೆ.

ಸೂಚನೆ:
ಸಂಖ್ಯಾಗೊಂದಲ /
ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ

[1] ಹೊಸಗನ್ನಡದ ಅರುಣೋದಯ (೧೯೭೪), ಪು. ೪೮೯.

[2] The contribution of Christian Missionaries to Journalism in South Kanara, Page No. 30-31.

[3] ಹೊಸಗನ್ನಡ ಅರುಣೋದಯ (೧೯೭೪), ಪು. ೪೮೯ ಹಾಗೂ The Contribution of Christian Missionaries to Journalism in South Kanara, Page No. 31.

[4] ರೆ. ಐವನ್‌ಅಲ್ಬರ್ಟ್ಸ್, ಹೆರ್ಮನ್‌ಫ್ರಡ್ರಿಕ್‌ಮೋಗ್ಲಿಂಗ್‌, ಕರ್ನಾಟಕ ಪತ್ರಿಕಾ ಅಕಾಡೆಮಿ, ಬೆಂಗಳೂರು, ೧೯೮೯, ಪು.೩೬.

[5] ಅದೇ, ಪು. ೩೭.