ಹೆಚ್.ವಿ. ಸಾವಿತ್ರಮ್ಮ

ಹೆಚ್.ವಿ. ಸಾವಿತ್ರಮ್ಮನವರು ಕನ್ನಡದ ಹಿರಿಯ ಬರಹಗಾರ್ತಿ. ೧೯೧೩ರಲ್ಲಿ ಜನಿಸಿದ ಸಾವಿತ್ರಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರು. ಮೈಸೂರು ವಿ.ವಿಯ ಕುಲಪತಿಗಳಲ್ಲೊಬ್ಬರು ಆಗಿದ್ದ ಸಾರಸ್ವತ ಲೋಕದ ಪ್ರಸಿದ್ಧ ವ್ಯಕ್ತಿ ಹೆಚ್.ವಿ.ನಂಜುಡಯ್ಯನವರ ಮೊಮ್ಮಗಳು. ಬೌದ್ಧಿಕವಾಗಿ ಶ್ರೇಷ್ಠ ವಾತಾವರಣದ ಜೊತೆಗೆ ಆರ್ಥಿಕವಾಗಿಯೂ ಶ್ರೀಮಂತ ಪರಿಸರದಲ್ಲಿ ಬೆಳೆದವರು. ಮನೆಯ ಹಿರಿಯರು ದೊಡ್ಡ ದೊಡ್ಡ ಹುದ್ದೆಗಳನ್ನಲಂಕರಿಸಿದ ಸುಸಂಸ್ಕೃತರು. ಪತಿ ನಾರಾಯಣರಾವ್ ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸಿದವರು. ಸಾವಿತ್ರಮ್ಮನವರು ಕೂಡ ಚಿಕ್ಕಂದಿನಿಂದ ಇಂಗ್ಲಿಷ್ ಶಿಕ್ಷಣವನ್ನು ಪಡೆದು ಅದರಲ್ಲೇ ಹೆಚ್ಚಿನ ಅಭ್ಯಾಸ ನಡೆಸಿದರು. ಇಂಗ್ಲಿಷ್ ಸಾಹಿತ್ಯದಲ್ಲೇ ಅವರಿಗೆ ಹೆಚ್ಚಿನ ಪ್ರವೇಶ. ಕನ್ನಡ ಸಾಹಿತ್ಯದ ಗಂಭೀರ ಅಧ್ಯಯನವನ್ನು ಅವರು ಲೇಖಕಿಯಾದ ಮೇಲೆ ನಡೆಸಿದರು.

ಸಾವಿತ್ರಮ್ಮನವರದು ಗಂಭೀರ ಸ್ವಭಾವ. ಎಲ್ಲರೊಡನೆಯೂ ಹೆಚ್ಚು ಬೆರೆಯದ ಮೌನಿ. ಅಂತರ್ಮುಖತೆ ಅವರಿಗೆ ಸಹಜವಾಗಿ ಬಂದಿದ್ದ ಪ್ರವೃತ್ತಿ. ಆದರೂ ನಿಕಟವಾದವರೊಂದಿಗೆ ಮನಬಿಚ್ಚಿ ಮಾತನಾಡುವ ಸರಳತೆ ಸೌಜನ್ಯಶೀಲ ಅವರಲ್ಲಿದ್ದವು.

ವಯೋಮಾನದಿಂದ ಹಿರಿಯರಾಗಿದ್ದರೂ ಮನೋಭಾವದಿಂದ ಅವರು ಅತ್ಯಂತ ಆಧುನಿಕರು. ಸಮಕಾಲೀನ ಸಮಸ್ಯೆಗಳಿಗೆ ತೀವ್ರವಾದ ಸ್ಪಂದನೆ ಅವರಿಂದ ಬಂತು. ನಾಡಿನ ಸ್ವಾತಂತ್ರ್ಯಾ, ಸ್ತ್ರೀ ಸ್ವಾತಂತ್ರ, ಕೋಮುಗಲಭೆ ಮುಂತಾದ ಸಾಮಾಜಿಕ, ರಾಜಕೀಯ ಘಟನಾವಳಿಗಳಿಗೆ ಮುಖ ತಿರುಗಿಸಿ ಸಂಪ್ರದಾಯ ನಿಷ್ಠ ಸಂಸಾರದಲ್ಲಿ ಅವರು ಮುಳುಗಿ ಹೋದವರಲ್ಲ. ಅವರೊಳಗೆ ಒಬ್ಬ ಸೌಮ್ಯ ಕ್ರಾಂತಿಕಾರಿಣಿಯ ತುಡಿತ ನಡೆದೇ ಇತ್ತು.

ಕಥಾ ಸಾಹಿತ್ಯದ ಮೂಲಕ ಬರಹಲೋಕಕ್ಕೆ ಅವರ ಪ್ರವೇಶವಾಯಿತು. ಅವರ ಸಣ್ಣಕತೆಗಳು ಕಥಾ ಸ್ಪರ್ಧೆಯಲ್ಲಿ ಬಹುಮಾನಗಳನ್ನೂ, ಹಿರಿಯ ಲೇಖಕರ ಪ್ರೋತ್ಸಾಹವನ್ನೂ ಪಡೆದವು. ‘ನಿರಾಶ್ರಿತೆ’, ‘ಮರುಮದುವೆ’, ‘ಪ್ರತೀಕ್ಷೆ’, ‘ಲಕ್ಷ್ಮಿ’, ‘ಸರಿದಬೆರಳು’ ಇವು ಅವರ ಕಥಾ ಸಂಕಲನಗಳು. ಸಹಜವಾಗಿ ಹೆಣ್ಣಿನ ಬದುಕನ್ನೇ ಇವು ವಸ್ತುವಾಗಿ ಉಳ್ಳವು. ಆದರೆ ಆ ಕಾಲದ ಆಶಯಗಳಾದ ತಾಯ್ತನ, ಪಾತಿವ್ರತ್ಯ, ದಾಸ್ಯ ಮುಂತಾದವನ್ನು ಮೀರಿ ಹೆಣ್ಣಿನ ದಿಟ್ಟತನ, ಸ್ವಂತಿಕೆ, ಪ್ರತಿಭಟನೆ ಮುಂತಾದವುಗಳನ್ನು ಅವರ ಕತೆಗಳು ಅಭಿವ್ಯಕ್ತಿಸಿದ್ದು ಅವುಗಳ ವೈಶಿಷ್ಟ್ಯ. ಈ ಸಾಹಿತ್ಯ ಕೃತಿಗಳ ಮೂಲ ಅನುಭವ ಸ್ವಂತದಲ್ಲವೆಂದು ಅವರೇ ಹೇಳಿದ್ದಾರೆ. ಅಂದರೆ ತಮ್ಮದಲ್ಲದ ಅನುಭವಗಳನ್ನು ಸ್ವಂತದವೆಂಬಂತೆಯೇ ಮೂಡಿಸಿರುವುದು ಅವರ ತನ್ಮಯತೆ ಮತ್ತು ಕೌಶಲಗಳಿಗೆ ದ್ಯೋತಕವಾಗಿದೆ.

ಸಾವಿತ್ರಮ್ಮನವರು ಅನೇಕ ಶ್ರೇಷ್ಠ ಕೃತಿಗಳನ್ನು ಅನುವಾದಿಸಿಕೊಟ್ಟು ಭಾಷಾಂತರ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಇವು ಕೇವಲ ಶುದ್ಧ ಸಾಹಿತ್ಯ ಕೃತಿಗಳಾಗಿರದೆ ಇತರ ಶಿಸ್ತುಗಳನ್ನು ಕುರಿತ ವಿದ್ವತ್ ಕೃತಿಗಳೂ ಆಗಿವೆ. ‘ಮಧ್ಯಯುಗದ ಭಾರತದ ಚರಿತೆ’, ‘ಮಹಾತ್ಮಾ ಗಾಂಧಿ : ಜಗತ್ತಿಗೆ ಅವರ ಸಂದೇಶ’, ‘ಗೋರಾ’, ‘ಮನೆ ಜಗತ್ತು’, ‘ಹಸಿವೋ ಹಸಿವು’ , ‘ಶಶಿಲೇಖಾ’, ‘ನೀಲನೇತ್ರೆ’ ಇವು ಅವರ ಮುಖ್ಯ ಅನುವಾದ ಕೃತಿಗಳು.

‘ಜೀವನ ಮತ್ತು ಕಾರ್ಯ’ ಎಂಬುದಾಗಿ ತಮ್ಮ ತಾತನ ಜೀವನ ಚರಿತ್ರೆಯನ್ನು ರಚಿಸಿರುವ ಸಾವಿತ್ರಮ್ಮನವರು ಅಜ್ಜಿಯ ಕಥೆಗಳೆಂಬ ಮಕ್ಕಳ ಸಾಹಿತ್ಯ ಕೃತಿಯನ್ನೂ ರಚಿಸಿದ್ದಾರೆ. ಅವರು ಬರೆದ ಎರಡೇ ಕಾದಂಬರಿಗಳು ಬರಹಗಾರ್ತಿಯಾಗಿ, ಪ್ರಜ್ಞಾವಂತ ಸ್ತ್ರೀಯಾಗಿ ಅವರು ಮಾಗಿನ ನಂತರ, ಅವರ ಜೀವನದ ಕೊನೆಯ ಘಟ್ಟದಲ್ಲಿ ಬಂದವು. ಸೀತೆ ರಾಮ ರಾವಣ (೧೯೮೦), ವಿಮುಕ್ತಿ (೧೯೯೦). ಇವು ಪ್ರಕಟವಾದ ನಂತರವೇ ಅವರು ಪ್ರಸಿದ್ಧರಾದರು. ಅಷ್ಟರಲ್ಲೇ ಸಲ್ಲಬೇಕಾಗಿದ್ದ ಕೆಲವು ಮನ್ನಣೆಗಳು ಅವರಿಗೆ ಸಂದಿದ್ದವಾದರೂ ಸಾಮಾನ್ಯ ಸಾಹಿತ್ಯಾಸಕ್ತರ ಗಮನವನ್ನು ಅವರು ಸೆಳೆದಿರಲಿಲ್ಲವೆನ್ನಬೇಕು. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ದೇಜಗೌ ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ಲಿಪಿ ಪ್ರಜ್ಞೆ ಪ್ರಶಸ್ತಿ ಅವರನ್ನು ಹುಡುಕಿ ಬಂದ ಗೌರವಗಳು. ಇಂಥ ಯಾವ ಸನ್ಮಾನಗಳ ಬಗೆಗೂ ಸ್ವತಃ ಸಾವಿತ್ರಮ್ಮನವರು ತಲೆಕೆಡಿಸಿಕೊಂಡವರಲ್ಲ. ನಿರ್ಲಿಪ್ತ, ಕ್ರಿಯಾಶೀಲ, ಗಂಭೀರ ವ್ಯಕ್ತಿತ್ವದಿಂದ ಎಲ್ಲರ ಗೌರವ ಆದರ ಗಳಿಸಿದ್ದ ಸಾವಿತ್ರಮ್ಮನವರು ತುಂಬು ಜೀವನದ ನಂತರ ಕಳೆದ ಶತಮಾನದ ಕಡೆಯ  ದಶಕದಲ್ಲಿ (೧೯೯೫) ಲೋಕವನ್ನೂ, ಸಾರಸ್ವತ ಲೋಕವನ್ನೂ ತ್ಯಜಿಸಿದರು.

‘ವಿಮುಕ್ತೆಯ ಹಾದಿ’ ಎಂಬ ಅವರ ಬದುಕು ಬರಹಗಳನ್ನು ವಿಮರ್ಶಿಸುವ ಗ್ರಂಥವೊಂದು ಈಚೆಗೆ (೧೯೯೮) ಜಾಗೃತಿ ಮಹಿಳಾ ಪ್ರಕಾಶನದಿಂದ ಪ್ರಕಟವಾಗಿದೆ.

ರಂ.ಶ್ರೀ. ಮುಗಳಿ

ರಂಗನಾಥ ಶ್ರೀನಿವಾಸ ಮುಗಳಿ ಕನ್ನಡ ಸಾಹಿತ್ಯ ಕ್ಷೇತ್ರದ ದೊಡ್ಡ ಹೆಸರುಗಳಲ್ಲಿ ಒಂದು. ಸುಪ್ರಸಿದ್ಧ ವಿದ್ವಾಂಸರಾಗಿರುವ ಮುಗಳಿ ಸೃಜನಶೀಲ ಲೇಖಕರಾಗಿಯೂ ಖ್ಯಾತರಾಗಿದ್ದಾರೆ. ಅವರ ಹುಟ್ಟೂರು ಧಾರವಾಡ ಜಿಲ್ಲೆ ಹೊಳೆ ಆಲೂರು, ಹುಟ್ಟಿದ್ದು ೧೯೦೯ರಲ್ಲಿ. ೧೯೯೩ರಲ್ಲಿ ನಿಧನರಾದ ಮುಗಳಿ ನಾಡಿನ ಒಳ ಹೊರಗೆ ಅಧ್ಯಾಪಕರಾಗಿ ಮತ್ತು ಇತರ ಇಲಾಖೆಗಳಲ್ಲಿ ಇತರ ಪದವಿಗಳಲ್ಲಿ ದುಡಿದಿದ್ದಾರೆ. ಶಾಲಾ ಶಿಕ್ಷಣವನ್ನು ಉತ್ತರ ಕರ್ನಾಟಕದಲ್ಲೇ ಪಡೆದ ಶ್ರೀಯುತರ ಉನ್ನತ ಶಿಕ್ಷಣ ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ನಡೆಯಿತು. ಪುಣೆ ವಿಶ್ವವಿದ್ಯಾನಿಲಯ ಅವರಿಗೆ ಡಾಕ್ಟರೇಟ್ ನೀಡಿತು. ಪ್ರೌಢಶಾಲಾ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಮುಗಳಿ ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಪ್ರಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮೊದಲ ಕನ್ನಡ ಪ್ರಾಧ್ಯಾಪಕರಾಗಿದ್ದು ವಿಭಾಗಕ್ಕೆ ತಳಹದಿ ಹಾಕಿಕೊಟ್ಟರು. ಇಂಗ್ಲೆಂಡ್, ಫ್ರಾನ್ಸ್, ಹಾಲೆಂಡ್ ಹೀಗೆ ಹಲವು ದೇಶಗಳಲ್ಲಿ ಪ್ರವಾಸ ಮಾಡಿದ ವಿಶೇಷ ಅನುಭವ ಅವರ ಸಾಂಸ್ಕೃತಿಕ ಚಟುವಟಿಕೆಗಳ ಹಿನ್ನೆಲೆಗಿತ್ತು.

‘ಕನ್ನಡ ಸಾಹಿತ್ಯ ಚರಿತ್ರೆ’ ನಮ್ಮ ಭಾಷೆಗೆ ಅವರು ನೀಡಿದ ಆಚಾರ್ಯ ಕೃತಿ. ಈಗಾಗಲೇ ೧೦ ಮುದ್ರಣಗಳನ್ನು ಕಂಡ ಅಪರೂಪದ ಶಾಸ್ತ್ರಗ್ರಂಥ. ‘ಕನ್ನಡ ಸಾಹಿತ್ಯದ ಇತಿಹಾಸ’ ಭಾಷೆಯ ಚರಿತ್ರೆಗೆ ಅವರು ನೀಡಿದ ಇನ್ನೊಂದು ಮೌಲಿಕ ಕಾಣಿಕೆ. ಈ ಕೃತಿ ಹಲವು ಭಾಷೆಗಳಿಗೆ ಅನುವಾದವಾಗಿದೆ. ಇಂಗ್ಲಿಷಿನಲ್ಲಿಯೂ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. ಒಟ್ಟಾರೆ ಐವತ್ತಕ್ಕೂ ಮಿಗುವ ಅವರ ಸಾಹಿತ್ಯ ಕೃತಿ ರಾಶಿಯಲ್ಲಿ ವಿದ್ವತ್ ಕೃತಿಗಳಲ್ಲದೆ, ಸಾಹಿತ್ಯ ವಿಮರ್ಶೆ, ಜೀವನ ಚರಿತ್ರೆ, ವೈಚಾರಿಕ ಬರಹ, ಅನುವಾದ ಇವೆಲ್ಲ ಸೇರಿವೆ. ‘ರಸಿಕರಂಗ’ ಎಂಬ ಕಾವ್ಯನಾಮದಿಂದ ಆರೇಳು ಕವನ ಸಂಕಲನಗಳನ್ನೂ, ಹಲವು ನಾಟಕಗಳನ್ನೂ ಸಣ್ಣಕತೆ, ಕಾದಂಬರಿಗಳನ್ನೂ ರಚಿಸಿದ್ದಾರೆ. ಅವರ ನಾಲ್ಕು ಕಾದಂಬರಿಗಳಲ್ಲಿ ಸಾಮಾಜಿಕ, ಐತಿಹಾಸಿಕವಲ್ಲದೆ ಪೌರಾಣಿಕ ಕೃತಿಯೂ ಸೇರಿದೆ. ‘ಅನ್ನ’ ಅವರಿಗೆ ಸಾಕಷ್ಟು ಕೀರ್ತಿ ತಂದುಕೊಟ್ಟ ಕಾದಂಬರಿ. ‘ಅಗ್ನಿವರ್ಣ’ ಉತ್ತಮ ಪೌರಾಣಿಕ ಕಾದಂಬರಿಗಳಲ್ಲಿ ಒಂದಾಗಿದೆ.

ರಾಜ್ಯ, ಕೇಂದ್ರ ಮಟ್ಟದ ಹಲವು ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿರುವ ಮುಗಳಿ ತುಮಕೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ್ದರು.

ಸಮೇತನಹಳ್ಳಿ ರಾಮರಾಯ

ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಒಬ್ಬ ವಿಶಿಷ್ಟ ಸಾಹಿತಿ ಸಮೇತನಹಳ್ಳಿಯವರು. ಈ ಕಾಲದ ಬಹುತೇಕ ಸಾಹಿತಿಗಳಂತೆ ವಿಶ್ವವಿದ್ಯಾನಿಲಯಗಳಿಗೆ ಶಿಕ್ಷಣ ರಂಗದ ಅಕಾಡೆಮಿಕ್ ವಲಯಕ್ಕೆ ಸೇರಿದವರಾಗಿರದೆ ಆರೋಗ್ಯ ಇಲಾಖೆಯ ಒಬ್ಬ ಸಾಧಾರಣ ನೌಕರನಾಗಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಸಾಧಿಸಿದರು. ಆರೋಗ್ಯ ಇಲಾಖೆಯಲ್ಲಿ ವೈದ್ಯರಾಗಿ, ಜೊತೆಗೆ ಸಾಹಿತಿಗಳಾಗಿ ಪ್ರಸಿದ್ಧರಾಗಿರುವ ಕೆಲವರಿದ್ದಾರಾದರೂ ಅದಕ್ಕಿಂತ ಕೆಳದರ್ಜೆಯ ನೌಕರನೊಬ್ಬ ಸಾಹಿತಿಯಾಗಿ ಪ್ರಸಿದ್ಧನಾದ ಉದಾಹರಣೆ ಇಲ್ಲವೆನಿಸುತ್ತದೆ. ಆಧುನಿಕ ಸಾಹಿತ್ಯದ ಎಲ್ಲ ಪ್ರಮುಖ ಪ್ರಕಾರಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಕೃತಿರಚಿಸಿ ಮೌಲಿಕ ಕೊಡುಗೆ ನೀಡಿದ್ದು ಅವರ ಹಿರಿಮೆಗೆ ಕಾರಣವಾಗಿದೆ. ಭಾಷಾ ಶೈಲಿಯ ದೃಷ್ಟಿಯಿಂದಲಂತೂ ಕನ್ನಡ ಗದ್ಯಕಾರರಲ್ಲಿ ಸಮೇತನಹಳ್ಳಿ ವಿಶೇಷ ಗಮನ ಸೆಳೆಯುತ್ತಾರೆ.

ಅವರ ಹೆಸರಿನೊಂದಿಗೆ ಶಾಶ್ವತವಾಗಿ ಅಂಟಿಕೊಂಡಿರುವ ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲ್ಲೂಕು ಸಮೇತನಹಳ್ಳಿ ಅವರ ಹುಟ್ಟೂರು. ಅದೇ ಊರಿನಲ್ಲಿ ತಲೆ ತಲಾಂತರಗಳಿಂದ  ಬಾಳುತ್ತಿದ್ದ ಎರಡು ಕುಟುಂಬಗಳ ಸದಸ್ಯರಾಗಿದ್ದ ಶ್ರೀನಿವಾಸರಾವ್ ಮತ್ತು ರುಕ್ಮಿಣಿಯಮ್ಮ ಇವರ ತಂದೆ ತಾಯಿಗಳು. ಬಡತನವನ್ನೇ ಉಂಡು ಹಾಸಿ ಹೊದೆಯುತ್ತಿದ್ದ ಕಡು ಕಷ್ಟದ ‘ಕೋಟೆಮನೆ’ಯಲ್ಲಿ ಅವರ ಬಾಲ್ಯ ಕಳೆಯಿತು. ಬಲು ಬವಣೆಯಲ್ಲಿ ಮೈಸೂರು ಬೆಂಗಳೂರುಗಳಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿ ಅಂದಿನ ಎಸ್.ಎಸ್.ಎಲ್.ಸಿ. ಪಾಸಾದರು. ಹೆಚ್ಚಿನ ಓದು ಅವರಿಗೆ ನಿಲುಕದಾಗಿತ್ತು. ವಿವಿಧ ಇಲಖೆಗಳಲ್ಲಿ ಚಾಕರಿ ಹುಡುಕಿ ಕಡೆಗೆ ಆರೋಗ್ಯ ಇಲಾಖೆಯ ಹೆಲ್ತ್ ಇನ್ಸ್ಪೆಕ್ಟರ್ ಆಗಿ ಬೆಂಗಳೂರು, ಮಧುಗಿರಿ, ಪಾಂಡವಪುರ, ಮಂಡ್ಯ ಹೀಗೆ ಹಲವಾರು ಊರುಗಳಲ್ಲಿ ಉದ್ಯೋಗದಲ್ಲಿದ್ದು ಶಿವಳ್ಳಿಯಲ್ಲಿ ನಿವೃತ್ತರಾದರು. ಈ ಉದ್ಯೋಗ ದೊರೆಯುವ ಮೊದಲು ಹೋಟೆಲ್ ಮಾಣಿಯಾಗಿ ಕೆಲಸ ಮಾಡುವ ದಾರುಣತೆಯೂ ಅವರಿಗೆ ಬಂದಿತ್ತು.

ಭೌತಿಕ ಬದುಕು ಬಡತನದ್ದಾದರೂ ಸಾಂಸ್ಕೃತಿಕವಾಗಿ ಸಮೇತನಹಳ್ಳಿ ಶ್ರೀಮಂತರು. ಕರ್ತವ್ಯ ನಿಷ್ಠೆ ಎಲ್ಲರೊಂದಿಗೆ ಬೆರೆಯುವ ಪ್ರವೃತ್ತಿಗಳು ಎಲ್ಲರೂ ಅವರನ್ನು ಪ್ರೀತಿಸುವಂತೆ ಮಾಡಿದ್ದವು. ತಮ್ಮ ಮೂವತ್ತನೆಯ ವಯಸ್ಸಿಗೇ ಮೊದಲ ಕೃತಿ ಪ್ರಕಟಿಸಿದ ರಾಮರಾಯರು ಸುಮಾರು ೫೦ ವರ್ಷಗಳ ಕಾಲ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ನಡೆಸಿದರು. ಪ್ರಕಟವಾಗಿರುವ ಸುಮಾರು ೩೦ ಕೃತಿಗಳಲ್ಲದೆ ಕೆಲವು ಅಪ್ರಕಟಿತವಾಗಿ ಉಳಿದುಕೊಂಡಿವೆ. ಮುಖ್ಯವಾಗಿ ಅವರನ್ನು ನಾಟಕಕಾರರೆಂದೇ ಗುರುತಿಸಬಹುದಾದರೂ ಹೆಚ್ಚು ಕಡಿಮೆ ಅಷ್ಟೇ ಸಂಖ್ಯೆಯಲ್ಲಿ ಕಾದಂಬರಿಗಳನ್ನೂ ರಚಿಸಿದ್ದಾರೆ. ಒಂದಿಷ್ಟು ಸಣ್ಣ ಕತೆಗಳು, ಒಂದು ಕವನ ಸಂಕಲನ (ಉದಯೋಧ್ಯಾನ) ಮತ್ತೊಂದು ಮಹಾಕಾವ್ಯ-ಇವು ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಳು. ‘ಶಾಕುಂತಲ’ ಮಹಾಕಾವ್ಯ ಹಲವು ಕಾರಣಗಳಿಂದಾಗಿ ಮಹತ್ವ ಪಡೆದಿದೆ. ಇವಲ್ಲದೆ ಜೀವನ ಚರಿತ್ರೆ, ಅನುವಾದ ಕೃತಿಗಳನ್ನು ರಚಿಸಿದ್ದಾರೆ. ‘ಕೋಟೆಮನೆ’ ಅವರ ಆತ್ಮಕಥೆ. ೧೯೯೮ರಲ್ಲಿ ಪ್ರಕಟವಾದ ‘ರಾಸದರ್ಶನ’ ಅವರ ಕುಟುಂಬ ವರ್ಗ ಮತ್ತು ಅಭಿಮಾನಿ ಮಿತ್ರು ಅರ್ಪಿಸಿದ ಅಭಿನಂದನಾಗ್ರಂಥ. ಸಮೇತನಹಳ್ಳಿಯವರು ತಮ್ಮ ನಾಟಕ, ಕಾದಂಬರಿಗಳಿಗಾಗಿ ಐತಿಹಾಸಿಕ ವಸ್ತುಗಳನ್ನೇ ಆಯ್ದುಕೊಂಡಿರುವುದೊಂದು ವಿಶೇಷ. ‘ತಲಕಾಡುಗೊಂಡ’, ‘ಸಿರಿಯಲ ದೇವಿ’ಯಂಥ ಪ್ರಸಿದ್ಧ ನಾಟಕಗಳಾಗಲಿ ‘ಸವತಿ ಗಂಧವಾರಣೆ’, ‘ಮೊನೆಗಾರ’ ದಂಥ ಕಾದಂಬರಿಗಳಾಗಲಿ ಐತಿಹಾಸಿಕಗಳೇ. ಇದು ಅವರ ಸಂಶೋಧಕ ಪ್ರವೃತ್ತಿಯ ದ್ಯೋತಕ. ಮಹಾಕಾವ್ಯಕ್ಕೆ ಮಹಾಭಾರತದ ಆಖ್ಯಾನವೊಂದನ್ನು ಆಯ್ದುಕೊಂಡಿದ್ದಾರೆ. ಕಾವ್ಯದ ಛಂದೋಬದ್ಧತೆ, ಗದ್ಯದ ಬಿಗಿತನ ಇವುಗಳಿಂದಾಗಿ ಸಾಮಾನ್ಯ ಓದುಗನನ್ನು ಸೆಳೆದುಕೊಳ್ಳುವಲ್ಲಿ ರಾಮರಾಯರು ವಿಫಲರಾಗಿದ್ದಾರೆನಿಸಿದರೂ ಪಂಡಿತವಲಯದಲ್ಲಿ ಮಾನ್ಯತೆ ಪಡೆದಿದ್ದಾರೆ. ಪದವೀಧರನಲ್ಲದ ಈ ಲೇಖಕನ ಪುಸ್ತಕಗಳು ಪದವೀ ತರಗತಿಗಳ ಪಠ್ಯಗಳಾದವು. ವಿದ್ವಾಂಸರ ಅಭಿರುಚಿಗೆ ಸಾಮಗ್ರಿಗಳಾದವು. ಸಮೇತನಹಳ್ಳಿಯವರು ಎಲೆಮರೆಯಲ್ಲಿ ಕಾಯಾಗಿ ಉಳಿದರಾದರೂ, ಪಾಂಡಿತ್ಯ ಪ್ರತಿಭೆಗಳ ಸಂಗಮಗಳಾದ ಅವರ ಕೃತಿಗಳು ಸ್ವಾದುವಾದ ರಸಭರಿತ ಹಣ್ಣಗಳಾಗಿವೆ. ಇಂಥ ಅವರ ಹಲವು ಕೃತಿಗಳಿಗೆ ಸರಕಾರ, ಸಾಹಿತ್ಯ ಪರಿಷತ್ತು, ಪ್ರಸಿದ್ಧ ಪತ್ರಿಕೆಗಳು, ಪ್ರತಿಷ್ಠಾನಗಳು ಪ್ರಶಸ್ತಿ-ಬಹುಮಾನಗಳನ್ನು ನೀಡಿ ಗೌರವಿಸಿವೆ.

ಈಚೆಗೆ ನಿಧನರಾದ (೧೯೯೯) ರಾಮರಾಯರು ಎರಡು ಪೌರಾಣಿಕ ಕಾದಂಬರಿಗಳನ್ನು ಕೊಟ್ಟು ಹೋಗಿದ್ದಾರೆ. ಅವರ ‘ಶ್ರೀ ಕೃಷ್ಣದರ್ಶನ’ ಮತ್ತು ‘ಶ್ರೀ ಪರಶುರಾಮ’ ಎಂಬ ಎರಡು ಕೃತಿಗಳು ಗುಣ, ಗಾತ್ರ ಎರಡರಲ್ಲೂ ಹಿರಿದಾಗಿದ್ದು ಕನ್ನಡ ಪೌರಾಣಿಕ ಕಾದಂಬರಿ ಪರಂಪರೆಗೆ ಮುಖ್ಯ ಕಾಣಿಕೆಯಾಗಿವೆ.

ಶಂಕರ ಮೊಕಾಶಿ ಪುಣೇಕರ

ಕನ್ನಡ ನವ್ಯ ಸಂಪ್ರದಾಯದ ಪ್ರಸಿದ್ಧ ಕವಿಗಳೂ ವಿಮರ್ಶಕರೂ ಆದ ಶ್ರೀ ಶಂಕರ ಮೊಕಾಶಿ ಪುಣೇಕರ (೧೯೨೮) ಅವರು ೧೯೮೭ ರಲ್ಲಿ ‘ಅವಧೇಶ್ವರಿ’ ಎಂಬ ಕೃತಿ ಪ್ರಕಟಿಸುವ ಮೂಲಕ ಪೌರಾಣಿಕ ಕಾದಂಬರಿಕಾರರೆನಿಸಿಕೊಂಡರು. ಮರು ವರ್ಷವೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದು ಆ ಕೃತಿ ಕನ್ನಡದ ಖ್ಯಾತಿ ಹೆಚ್ಚಿಸಿತು. ಪೌರಾಣಿಕ ಕಾದಂಬರಿ ಪರಂಪರೆಯಲ್ಲಿ ಮುಖ್ಯ ಕೃತಿಯಾಯಿತು.

ಧಾರವಾಡದಲ್ಲಿ ಹುಟ್ಟಿ ಬೆಳೆದ ಪುಣೇಕರ ಅಲ್ಲೇ ವಿದ್ಯಾಭ್ಯಾಸ ನಡೆಸಿದರು. ಇಂಗ್ಲಿಷ್ ನ ಯೇಟ್ಸ್ ಕವಿಯನ್ನು ಕುರಿತು ವಿಶೇಷ ಅಧ್ಯಯನ ಮಾಡಿ ಪಿಹೆಚ್.ಡಿ. ಪದವಿ ಪಡೆದರು. ಬಿಜಾಪುರ, ಬೆಳಗಾವಿ, ಧಾರವಾಡ, ಉಡುಪಿ, ಮುಂಬೈ, ಮೈಸೂರು, ಪುಟಪರ್ತಿ ಹೀಗೆ ಹಲವು ಕಡೆ ಶಿಕ್ಷಕರಾಗಿ ದುಡಿದರು.

ಏಕಕಾಲದಲ್ಲಿ ಆಧುನಿಕರೂ ಸಂಪ್ರದಾಯಸ್ಥರೂ ಆಗಿರುವ ವಿಕ್ಷಿಪ್ತ ವ್ಯಕ್ತಿತ್ವ ಮೊಕಾಶಿಯವರದು. ಒಮ್ಮೊಮ್ಮೆ ವಿಚಿತ್ರವಾಗಿ ವರ್ತಿಸಿ ಆಶ್ಚರ್ಯ ಹುಟ್ಟಿಸುವ ಅವರು ಸಜ್ಜನ ಪ್ರಾಜ್ಞ, ಪ್ರವಾಹದ ವಿರುದ್ಧ ಒಂಟಿಯಾಗಿ ಈಜುವುದರಲ್ಲೇ ಅವರಿಗೆ ಸಂತಸ. ನವ್ಯರಾಗಿಯೂ ನವೋದಯದವರ ಆದರ್ಶ, ಪಾಶ್ಚಾತ್ಯ ಸಂಸ್ಕೃತಿ, ಶಿಕ್ಷಣಗಳನ್ನು ಬಲ್ಲವರಾಗಿಯೂ ಭಾರತೀಯವಾದದ್ದರ ಆರಾಧನೆ ಅವರಿಗೆ ಪಥ್ಯ. ವೈಜ್ಞಾನಿಕ ಯುಗದ ಈ ಜ್ಞಾನಿಗೆ ಸಾಯಿಬಾಬ ಆರಾಧ್ಯ ದೈವ, ಇಂದಿರಾಗಾಂಧಿ ನಾಯಕಿ, ತುರ್ತುಪರಿಸ್ಥಿತಿಯೂ ಪ್ರಶಂಸನಾರ್ಹ. ಆಂತರ್ಯದಲ್ಲಿ ಅಂತಃಕರಣ ಮೃದು. ಎಲ್ಲರನ್ನೂ ಪ್ರೀತಿಸುವ, ಪೋಷಿಸುವ ಧಾರಾಳಿ ಅವರು. “ಗಂಧಕೊರಡು” ಅವರಿಗೆ ಅನ್ವರ್ಥನಾಮ. ಅದೇ ಹೆಸರಿನ ಗೌರವ ಗ್ರಂಥವೊಂದು ಈಚೆಗೆ ಕನ್ನಡ-ಇಂಗ್ಲಿಷ್ ಗಳಲ್ಲಿ ರಚಿತವಾಗಿ ಅವರಿಗೆ ಅರ್ಪಿತವಾಗಿದೆ.

ಅವರೊಬ್ಬ ಪ್ರಸಿದ್ಧ ಸಂಗೀತ ವಿಮರ್ಶಕರೂ ಆಗಿದ್ದಾರೆ. ಆಂಗ್ಲ ಮತ್ತಿತರ ಭಾಷೆಗಳಲ್ಲಿ ಪರಿಣತಿ ಪಡೆದಿದ್ದಾರೆ. ವಿದೇಶಿ ವಿಶ್ವವಿದ್ಯಾಲಯಗಳ ಆಹ್ವಾನದ ಮೇರೆಗೆ ಅನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ. ಮೊಕಾಶಿಯವರು ಕನ್ನಡ, ಆಂಗ್ಲ ಎರಡೂ ಭಾಷೆಗಳಲ್ಲಿ ಗ್ರಂಥಗಳನ್ನು ರಚಿಸಿದ್ದಾರೆ. ಇಂಗ್ಲಿಷ್ನಲ್ಲಿಯೇ ಹೆಚ್ಚು. ಭಾರತೀಯ ಇಂಗ್ಲಿಷ್ ಲೇಖಕರಲ್ಲಿ ಅವರು ಗಣ್ಯರಾಗಿದ್ದಾರೆ. ಅವರ ಕೃತಿಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ಹೆಸರಿಸಬಹುದು. ‘ಮಾಯಿಯ ಮೂರು ಮುಖಗಳು’ (ಕವನಗಳು) ‘ಗಂಗವ್ವ ಗಂಗಾಮಾಯಿ’ (ವಾಸ್ತವವಾದಿ ಕಾದಂಬರಿ), ‘ನಟನಾರಾಯಣಿ (ಪತ್ತೇದಾರಿ ಕಾದಂಬರಿ), ‘ಡೆರೆಕ್ ಡಿಸೋಜ ಮತ್ತು ಇತರ ಕಥೆಗಳು’ (ಸಣ್ಣಕತೆ), ‘ಬೇಂದ್ರೆ ಕಾವ್ಯ ಮೀಮಾಂಸೆ’ (ವಿಮರ್ಶೆ), ‘ಸಾಹಿತ್ಯ ಮತ್ತು ಅಭಿರುಚಿ’ (ವಿಮರ್ಶೆ), ‘ಯುರೋಪಿಯನ್ ವಿಮರ್ಶೆಯ ಇತಿಹಾಸ,’ The Captive (ಕವನಗಳು), The Pretender (ಕವನಗಳು), The latter poems of W.B.Yeasts (ವಿಮರ್ಶೆ), ಕುವೆಂಪು ಅವರ ‘ರಾಮಾಯಣ ದರ್ಶನಮ್’ ಅನ್ನು ಇಂಗ್ಲಿಷಿಗೆ ಅನುವಾದಿಸಿದ್ದು ಇನ್ನೂ ಪ್ರಕಟವಾಗಬೇಕಿದೆ. ಸಂಶೋಧಕ ಪ್ರವೃತ್ತಿಯ, ಪ್ರಯೋಗಶೀಲರಾದ ಶಂಕರ ಮೊಕಾಶಿಯವರ ಪ್ರವೇಶದಿಂದ ಕನ್ನಡ ಪೌರಾಣಿಕ ಕಾದಂಬರಿ ಕ್ಷೇತ್ರ ಶ್ರೀಮಂತವಾಯಿತೆನ್ನಬಹುದು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೊಂದೇ ಅಲ್ಲದೆ ರಾಜ್ಯ ಸಾಹಿತ್ಯ ಅಕಾಡೆಮಿ, ಕುವೆಂಪು ವಿದ್ಯಾವರ್ಧಕ ಸಂಘ, ಮೈಸೂರು ವಿಶ್ವವಿದ್ಯಾನಿಲಯ ಮತ್ತಿತರ ಸಂಘ ಸಂಸ್ಥೆಗಳ ಗೌರವ ಅವರಿಗೆ ಸಂದಿದೆ. ತಮ್ಮ ಮೌಲಿಕ ಕೃತಿಗಳ ಕೊಡುಗೆಯಿಂದ ಕನ್ನಡ, ಇಂಗ್ಲಿಷ್ ಎರಡೂ ಭಾಷೆಯ ಓದುಗಳ ಹೃದಯದಲ್ಲಿ ಪುಣೇಕರ್ ಗಟ್ಟಿಸ್ಥಾನ ಹಿಡಿದಿದ್ದಾರೆ.

ನಳಿನಿ ಮೂರ್ತಿ

‘ಊರ್ಮಿಳಾ’ ಮತ್ತು ‘ಪ್ರತಿಜ್ಞೆ’ ಎಂಬ ಎರಡು ಒಳ್ಳೆಯ ಪೌರಾಣಿಕ ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಪರಂಪರೆಗೆ ನೀಡಿರುವ ನಳಿನಿ ಮೂರ್ತಿಯವರು ಸುಸಂಸ್ಕೃತಿ ಮತ್ತು ಸುಶಿಕ್ಷಣದ ಹಿನ್ನೆಲೆಯನ್ನು ಹೊಂದಿರುವವರು. ಮೂಲತಃ ಅವರೊಬ್ಬ ವಿಜ್ಞಾನಿ. ಕಂಪ್ಯೂಟರ್ ವಿಜ್ಞಾನದಲ್ಲಿ ಪಿಹೆಚ್.ಡಿ. ಪಡೆದವರು. ಜಾಂಬಿಯಾ, ಎಡ್ಮಂಟನ್ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕಿಯಾಗಿ ದುಡಿದವರು. ಅತ್ಯಂತ ಪ್ರತಿಭಾವಂತೆಯಾಗಿ ಅಮೇರಿಕೆಯಂಥ ಅತ್ಯಾಧುನಿಕ ದೇಶದಲ್ಲಿ ನೆಲಸಿರುವ ಇವರ ಕನ್ನಡ ಪ್ರೇಮ ಉಲ್ಲೇಖನೀಯವಾಗಿದೆ. ತಾವು ನೆಲೆಸಿದಲ್ಲಿ ಕನ್ನಡ ವಾತಾವರಣವನ್ನು ಸೃಷ್ಟಿಸಿಕೊಂಡಿರುವುದಲ್ಲದೆ ನಿರಂತರ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಗಣಕಯಂತ್ರವನ್ನು ಕುರಿತು ಕೃತಿಗಳನ್ನು ರಚಿಸುವ ಮೂಲಕ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ತಮ್ಮ ಅತ್ತೆಯವರೂ ಕನ್ನಡದ ಹಿರಿಯ ಲೇಖಕಿಯೂ ಆದ ಹೆಚ್.ವಿ. ಸಾವಿತ್ರಮ್ಮನವರ ಪ್ರಭಾವ ನಳಿನಿಯವರನ್ನು ಪೌರಾಣಿಕ ಕಾದಂಬರಿ ರಚಿಸುವಂತೆ ಪ್ರೇರೇಪಿಸಿತು. ಈ ಕ್ಷೇತ್ರಕ್ಕೆ ಅವರ ಕೊಡುಗೆ ಸಣ್ಣದಲ್ಲ. ಬಿಸಿಲು, ಮಳೆ, ಬೀಸಿಬಂದ ಬಿರುಗಾಳಿ, ಬಂಗಾರದ ಜಿಂಕೆ, ಗಣಕದ ಕತೆ, ಗಣಕ ಎಂದರೇನು? ಇವು ನಳಿನಿ ಮೂರ್ತಿಯವರ ಪ್ರಕಟಿತ ಕೃತಿಗಳಾಗಿವೆ.

ಎ. ಪಂಕಜ

ಆಧುನಿ ಕನ್ನಡ ಸಾಹಿತ್ಯದ ಜನಪ್ರಿಯ ಲೇಖಕಿಯರಲ್ಲಿ ಎ. ಪಂಕಜ ಒಬ್ಬರು. ಪಾವಗಡದಲ್ಲಿ ಹುಟ್ಟಿ, ಬೆಳೆದು, ಬೆಂಗಳೂರಿನ ಮಲ್ಲೇಶ್ವರದ ನಿವಾಸಿಯಾಗಿರುವ ಪಂಕಜ ಅವರು ಪ್ರೌಢಶಾಲೆಯ ಅಧ್ಯಾಪಕಿಯಾಗಿದ್ದರು. ಮನೆ ಮಾತು ತಮಿಳು, ಹಿಂದಿಯಲ್ಲಿ ಪರಿಣತಿ ಹೊಂದಿದ್ದಾರೆ. ಸಮಾಜ ಸೇವೆಯ ಕೈಂಕರ್ಯವನ್ನೂ ಚಿಕ್ಕಂದಿನಿಂದ ನಡೆಸಿಕೊಂಡು ಬಂದ ಪಂಕಜ ಅವರು ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯೆಯಾಗಿದ್ದರು. ಇನ್ನು ಹಲವು ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಕರ್ನಾಟಕದಲ್ಲೇ ಮೊದಲಾಗಿ ಮಹಿಳಾ ಸಹಕಾರ ಸಂಘವನ್ನು ಸ್ಥಾಪಿಸಿದವರೆಂಬ ಹಿರಿಮೆ ಅವರಿಗೆ ಸಲ್ಲುತ್ತದೆ. ಎಪ್ಪತ್ತರ ಇಳಿಹರೆಯದಲ್ಲಿ ಈಗಲೂ ಆದರ್ಶ ಭಾರತೀಯ ಸಾಂಸ್ಕೃತಿಕ ಸಂಸತ್ ನ ಸಾಹಿತ್ಯ ಕೇಂದ್ರದ ನಿರ್ದೇಶಕರಾಗಿ ಅವರು ಕ್ರಿಯಾಶೀಲರೇ ಆಗಿದ್ದಾರೆ. ಎಳೆ ಹರೆಯದಲ್ಲಿ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿ ಸಮಾಜಕ್ಕೆ ಬಿಸಿ ಮುಟ್ಟಿಸಿದ ಧೈರ್ಯವಂತೆ.

ಬರವಣಿಗೆಯ ಹವ್ಯಾಸ ಪಂಕಜ ಅವರಿಗೆ ಚಿಕ್ಕಂದಿನಿಂದಲೇ ಅಂಟಿಕೊಂಡಿದ್ದು, ಮದುವೆಯಾದ ಮೊದಲಲ್ಲಿ ಸಾಹಿತ್ಯ ರಚನೆಗೆ ಅಂಥ ಪ್ರೋತ್ಸಾಹ ದೊರೆಯದಿದ್ದರೂ ಬರವಣಿಗೆ ಕೈಬಿಡದೆ ನಂತರದ ವರ್ಷಗಳಲ್ಲಿ ಕುಟುಂಬದ ಇತರ ಸದಸ್ಯರ ಪ್ರೋತ್ಸಾಹ ಪಡೆಯುವಲ್ಲಿ ಯಶಸ್ವಿಯಾದರು. ಕಥಾ ಸಾಹಿತ್ಯದಲ್ಲೇ, ಕಥೆ, ಕಾದಂಬರಿ-ಸಾಮಾಜಿಕ, ಪೌರಾಣಿಕ, ಪತ್ತೇದಾರಿ- ಹೀಗೆ ಭಿನ್ನ ಬಗೆಯವನ್ನು ರಚಿಸಿದ್ದಾರೆ. ಇವಲ್ಲದೆ ವಿಚಾರ ಸಾಹಿತ್ಯ, ಚರಿತ್ರೆ, ಸ್ತೋತ್ರ ಮುಂತಾಗಿ ಇತರ ಸಾಹಿತ್ಯ ಸ್ವರೂಪಗಳಲ್ಲೂ ಪಂಕಜ ಕೃಷಿ ನಡೆಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿರುವ ಅವರ ಸಾಮಾಜಿಕ ಕಾದಂಬರಿಗಳಲ್ಲಿ ‘ಸೊಗಸುಗಾತಿ’ ಮತ್ತು ‘ಕಾಗದದ ದೋಣಿ’ ಎಂಬೆರಡು ಕೇಂದ್ರ ಸರ್ಕಾರದಿಂದ ಪರಸ್ಕೃತವಾಗಿವೆ. (೧೯೭೧) ‘ಜೀವನ ಜಾಲ’, ‘ರಾಗಸುಧಾ’, ‘ಬಂಗಾರದ ಬಲೆ’, ‘ಬಯಕೆಯ ಬೆಂಕಿ’, ‘ಸ್ನೇಹ ಸಂಬಂಧ’ ಮುಂತಾದವು ಅವರ ಇತರ ಜನಪ್ರಿಯ ಕೃತಿಗಳು.

ಈಚೆಗೆ ವಯೋಧರ್ಮವನ್ನು ಅನುಸರಿಸಿ ಪಂಕಜರವರು ಅಧ್ಯಾತ್ಮದತ್ತ ತಿರುಗಿದರು. ಕೆ.ಎಸ್. ನಾರಾಯಣಾಚಾರ್ಯರ ಸಲಹೆಯಂತೆ ಪೌರಾಣಿಕ ವಸ್ತುಗಳನ್ನಾಯ್ದುಕೊಂಡು ಕಾದಂಬರಿ ಬರೆಯತೊಡಗಿದರು. ೧೯೮೯ರಲ್ಲಿ ಪ್ರಕಟವಾದ ‘ತೇಜತ್ರೇಯರು’ವಿನಿಂದ ತೊಡಗಿ ‘ಬ್ರಹ್ಮರ್ಷಿ ವಿಶ್ವಾಮಿತ್ರ’, ‘ಫಲ್ಗುಣಸಖ’, ‘ಪುರುಷೋತ್ತಮ’ ಎಂಬ ನಾಲ್ಕು ಪೌರಾಣಿಕ ಕಾದಂಬರಿಗಳು ಇಲ್ಲಿಯವರೆಗೆ ಪಂಕಜರವರ ಲೇಖನಿಯಿಂದ ಮೂಡಿ ಬಂದಿವೆ.

ಆದ್ಯ ರಾಮಾಚಾರ್ಯ

ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳನ್ನು ಧಾರ್ಮಿಕ ಶ್ರದ್ಧೆಯಿಂದ ಮತ್ತು ಧರ್ಮ ಪುನರ್ ಪ್ರತಿಷ್ಠಾಪನೆಯ ಉದ್ದೇಶದಿಂದ ಬರೆದ ಹಿರಿಯ ಲೇಖಕರು ಆದ್ಯ ರಾಮಾಚಾರ್ಯರು. ಆಸ್ತಿಕರ ವಲಯದಲ್ಲಿ ಅವರು ಅತ್ಯಂತ ಪ್ರಸಿದ್ಧರೂ ಮತ್ತು ಜನಪ್ರಿಯರೂ ಆಗಿದ್ದಾರೆ. ಹುಟ್ಟಿದ್ದು ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯಲ್ಲಾದರೂ (೨೬, ನವೆಂಬರ್ ೧೯೨೬) ನೆಲಿಸಿದ್ದು ಬೆಂಬಳೂರಿನಲ್ಲಿ. ತಂದೆ ಆದ್ಯ ಸೇತೂ ರಾಮಾಚಾರ್ಯರು ಪ್ರಸಿದ್ಧ ಪುರಾಣ ಪ್ರವಚನಕಾರರು. ಸಂಪ್ರದಾಯಸ್ಥ ಕುಟುಂಬ. ಮದ್ವ ಮತಾನುಯಾಯಿಗಳಾದ ಆದ್ಯರಿಗೆ ಮನೆಯಲ್ಲಿ ಸಂಸ್ಕೃತ ಕಾವ್ಯ ವ್ಯಾಕರಣಗಳ ಅಭ್ಯಾಸ, ಮಠಗಳಲ್ಲಿ ಧರ್ಮಶಾಸ್ತ್ರಾದಿಗಳ ಅಧ್ಯಯನವಾಯಿತು. ಆಧುನಿಕ ಶಿಕ್ಷಣ ಬಿಜಾಪುರದ ದರ್ಬಾರ್ ಹೈಸ್ಕೂಲು ಮಟ್ಟಕ್ಕೇ ಮುಗಿದು ಹೋಯಿತು. ವೇದವೇದಾಂತಗಳೇ ಮೊದಲಾದ ಧಾರ್ಮಿಕ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿರುವ ಆದ್ಯರು ಮರಾಠಿ, ಹಿಂದಿ, ಇಂಗ್ಲಿಷ್, ಸಂಸ್ಕೃತ ಹೀಗೆ ಹಲವು ಭಾಷೆಗಳನ್ನು ಬಲ್ಲರು.

ರಾಮಾಚಾರ್ಯರು ಸುಮಾರು ನಲ್ವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಹಿಂದೂ ಧರ್ಮದ ಪವಿತ್ರ ಯಾತ್ರಾಸ್ಥಳಗಳ, ಪೂಜನೀಯ ವಸ್ತುಗಳ, ವ್ಯಕ್ತಿಗಳ, ಸಂಪ್ರದಾಯ-ಆಚರಣೆಗಳ ಪರಿಚಯಾತ್ಮಕ ಕೃತಿಗಳು, ಸಂಶೋಧನಾತ್ಮಕ ಕೃತಿಗಳು, ಸೃಜನಾತ್ಮಕವಾದ ಐತಿಹಾಸಿಕ, ಪೌರಾಣಿಕ ಕಾದಂಬರಿಗಳು, ಒಂದು ಪತ್ತೇದಾರಿ ಕಾದಂಬರಿಯೂ ಸೇರಿವೆ. ಹಲವು ಅನುವಾದಿತ ಗ್ರಂಥಗಳು, ಮಕ್ಕಳಿಗಾಗಿ ಬರೆದವು-ಹೀಗೆ ಹಲವು ಬಗೆಯವಿದೆ. ಅವರ ಕೃತಿಗಳು ಹಿಂದಿ, ತೆಲಗು, ಮಲೆಯಾಳಂ ಮತ್ತು ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿವೆ. ದೊಡ್ಡ ಗಾತ್ರದ ವಿಸ್ತೃತ ಪ್ರಸಾರವನ್ನು ಪಡೆದಿರುವ ಸಾಹಿತ್ಯ ಸಂಪತ್ತು ಅವರದು.

ಹಲವು ಬಗೆಯ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಆದ್ಯರು ತಮ್ಮನ್ನು ತೊಡಗಿಸಿಕೊಂಡವರು. ಭಾರತ ಸ್ವಾತಂತ್ರ್ಯಾ  ಸಂಗ್ರಾಮ, ಕರ್ನಾಟಕ ರಾಜ್ಯ ನಿರ್ಮಾಣ, ಗಡಿ ಸಮಸ್ಯೆ ಇಂಥ ಚಳುವಳಿಗಳಲ್ಲಿ ಸಕ್ರಿಯ ಭಾಗಿಗಳಾಗಿದ್ದದ್ದಲ್ಲದೆ ಭಾರತೀಯ ಸೇವಾದಳ, ಅಖಲಭಾರತ ಕಾಂಗ್ರೆಸ್ ಸಮಿತಿ ಇವುಗಳಲ್ಲಿ ದುಡಿದಿದ್ದಾರೆ. ಹಲವಾರು ದೇವಾಲಯ ಸಮಿತಿಗಳು, ದತ್ತಿ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದರು. ದಾಸ ಸಾಹಿತ್ಯ ಸಂಸ್ಥೆಗಳ, ಮಾದ್ವಮತೀಯ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿದ್ದರು. ಉತ್ತರ ಭಾರತದ ಹಿಮಾಲಯದವರೆಗೆ ಪೌರಾಣಿಕ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಿದ್ದಾರೆ. ಇವರ ಧಾರ್ಮಿಕ ಮತ್ತು ಸಾಹಿತ್ಯಿಕ ಸೇವೆಯನ್ನು ಗೌರವಿಸಿ ಅನೇಕ ಪ್ರಶಸ್ತಿಗಳೂ ಬಿರುದಾವಳಿಗಳೂ ಅವರಿಗೆ ಸಂದಿವೆ. ಸಾಹಿತ್ಯ ಚಿಂತಾಮಣಿ, ಕನ್ನಡ ಕುಲಭೂಷಣ, ದಾಸಸಾಹಿತ್ಯ ಪ್ರದೀಪ, ದಾಸವಾಙ್ಮಯ ಭೂಷಣ, ಗುರುಸೇವಾ ಧುರೀಣ ಇವು ಅವುಗಳಲ್ಲಿ ಮುಖ್ಯವಾದವು.

ಅವರ ಪೌರಾಣಿಕವೆನಿಸಿಕೊಳ್ಳುವ ಕೃತಿಗಳನ್ನು ಗಮನಿಸಿದಾಗ ಅವುಗಳಲ್ಲಿ ಎಲ್ಲವೂ ಕಾದಂಬರಿಗಳೆನಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿಲ್ಲ. ಉದಾ : ‘ಪ್ರಸನ್ನ ವೆಂಕಟದಾಸರು’, ‘ಧನಂಜಯ’ ಜೀವನ ಚರಿತ್ರೆಗಳಾಗಿವೆ. ಧನಂಜಯವೆಂಬ ಹೆಸರಿನಡಿ ಅರ್ಜುನನ ಕಥೆಯನ್ನು ಲೌಕಿಕ ವ್ಯಕ್ತಿಯ ಜೀವನದೊಂದಿಗೆ ಬೆಸೆದು, ಜನ್ಮಾಂತರವೆಂಬಂತೆ ವರ್ಣಿಸಿರುವುದರಿಂದ ಇದನ್ನು ಕಾದಂಬರಿ ಎಂದು ಭ್ರಮಿಸುವಂತಾಗಿದೆ. ಲೇಖಕರೇ ಇದನ್ನು ಜೀವನ ಪ್ರವಾಹ ಎಂದು ಕರೆದಿದ್ದಾರೆ. ‘ರಾಧೇಯ’ ಕರ್ಣನನ್ನು ಕುರಿತ ಕಾದಂಬರಿಯೇ ಆದರೂ ಅದು ಮರಾಠಿ ಮೂಲದ ಅನುವಾದ. ಅನುವಾದ ಕೃತಿಯೆಂದೇ ಅದಕ್ಕೆ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದದ್ದು (೧೯೮೦) ಕೂಡ. ಅದು ಆದ್ಯರ ಸ್ವತಂತ್ರ ಕೃತಿ ಎಂಬಂತೆ ಪ್ರಚಾರ ಪಡೆದುಕೊಂಡಿದೆ. ಕೆಲವು ತಿರುಪತಿ, ದ್ವಾರಕಾ ಇತ್ಯಾದಿ ಸ್ಥಳ ಪುರಾಣಗಳೂ ಹೀಗೇ ತಪ್ಪಾಗಿ ಕಲ್ಪಿಸಲ್ಪಟ್ಟವೆ. ನಿಜಕ್ಕೂ ಪೌರಾಣಿಕ ಕಾದಂಬರಿಗಳಾಗಿ ಅವರ ಆಚಾರ್ಯ ದ್ರೋಣ, ರಾಜಾ ವೃಕೋದರ ಮತ್ತು ಪಾಂಚಾಲಿ ಎಂಬ ಮೂರು ಕೃತಿಗಳು ಮಾತ್ರ ಒಪ್ಪಿತವಾಗುತ್ತವೆ.

ಭೀಮಸೇನ ತೋರಗಲ್ಲ

ಕನ್ನಡಕ್ಕೊಂದು ವಿಶಿಷ್ಟ ಪೌರಾಣಿಕ ಕಾದಂಬರಿಯನ್ನು ನೀಡಿ ಖ್ಯಾತರಾದ ಭೀಮಸೇನ ತೊರಗಲ್ಲ ಅವರು ಬೆಳಗಾವಿಯವರು. ಮರಾಠಿ ಪ್ರಭಾವಕ್ಕೊಳಗಾಗಿರುವ ಬೆಳಗಾವಿಯಲ್ಲಿ ವಿವಿಧ ಬಗೆಯಲ್ಲಿ ಕನ್ನಡ ಕೈಂಕರ್ಯ ಕೈಗೊಂಡು ಕನ್ನಡ ಕಹಳೆ ಮೊಳಗಿಸುತ್ತಿರುವವರು. ಮೂಲತಃ ಭೀಮಸೇನರು ಪತ್ರಿಕೋದ್ಯಮಿ. ಬೆಳಗಾವಿಯಲ್ಲಿ ‘ಪ್ರಚಲಿತ’ ಮತ್ತು ‘ಸಮತೋಲ’ ಎಂಬ ಪತ್ರಿಕೆಗಳನ್ನು ಆರಂಭಿಸಿ, ಸಂಪಾದಿಸಿ ಯಶಸ್ವಿಯಾಗಿ ನಡೆಸಿದವರು. ಕನ್ನಡ ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರ ನಡೆಸುತ್ತಾ ಯುವ ಬರೆಹಗಾರರನ್ನು ಪ್ರೋತ್ಸಾಹಿಸುತ್ತಾ ಪ್ರೇರಕ ಶಕ್ತಿಯಾಗಿರುವವರು. ವಿಜ್ಞಾನ ಪದವೀಧರರಾಗಿ ಗಣಿತದಲ್ಲೂ ಚಾಣಾಕ್ಷರಾದ ತೊರಗಲ್ಲರು ಕಂಪ್ಯೂಟರ್ ಯಂತ್ರದ ಸಹಾಯದೊಂದಿಗೆ ಕನ್ನಡ ಪತ್ರಿಕೆಯನ್ನು ಮುದ್ರಿಸಿದ ಮೊದಲಿಗರು. ಬೆಳಗಾವಿಯಲ್ಲಿ ಮೊಳಕೆಯೊಡೆದ ಈ ಕಂಪ್ಯೂಟರ್ ಕ್ರಾಂತಿ ನಾಡಿನಾದ್ಯಂತ ಹಬ್ಬಿಕೊಂಡು ಪತ್ರಿಕಾ ಕ್ಷೇತ್ರದ ಪ್ರಗತಿಗೆ ಕಾರಣವಾಯಿತು. ಬಹುದೊಡ್ಡ ಮಿತ್ರ ಬಳಗ, ಸುಖೀ ಸಂಸಾರದೊಂದಿಗೆ ೬೨ರ ಹರೆಯದಲ್ಲಿರುವ ತೊರಗಲ್ಲರು ಬೆಳಗಾವಿ ಸಾಂಸ್ಕೃತಿಕ ರಂಗದ ಬಹುಮುಖ್ಯ ಆಸ್ತಿಯಾಗಿದ್ದಾರೆ. ಈಚೆಗೆ ಅವರ ಅಭಿಮಾನಿಗಳು ಅವರಿಗೆ ನೀಡಿದ ಅಭಿನಂದನೆ, ಪ್ರಕಟಿಸಿದ ಅಭಿನಂದನ ಗ್ರಂಥ ‘ಭೀಮಪರ್ವ’ ಅವರು ಗಳಿಸಿದ ಜನ ಪ್ರೀತಿಗೆ ದ್ಯೋತಕವಾಗಿದೆ. ಅಮೋಘ ವಾಙ್ಮಯ ಎಂಬ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿ ತನ್ಮೂಲಕ ಹಲವಾರು ಮೌಲಿಕ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ.

ಭೀಮಸೇನರು ಬರೆದ ಸೃಜನಾತ್ಮಕ ಕೃತಿಗಳು ಮೂರೇ. ಪ್ರಖರ ವಿಚಾರಪರರಾದ ಅವರ ಧೋರಣೆಗಳು ಈ ಕೃತಿಗಳ ಮುಖೇನ ಮೂರ್ತ ರೂಪ ಪಡೆದಿವೆ. ‘ಸಂಚು’ ಅವರ ಸುಪ್ರಸಿದ್ಧ ಪೌರಾಣಿಕ (ತಾರ್ಕಿಕ) ಕಾದಂಬರಿ. ಇದು ಕೇಂದ್ರ ಸಾಹಿತ್ಯ ಅಕಾಡೆಮಿಯ ಮನ್ನಣೆಯನ್ನು ಪಡೆದು ದೇಶದ ಹದಿನಾಲ್ಕು ಭಾಷೆಗಳಿಗೆ ಅನುವಾದಗೊಳ್ಳುತ್ತಿದೆಯಲ್ಲದೆ ೧೯೯೩ರಲ್ಲಿ ಪ್ರಕಟವಾದ ಇದು ಆಗಲೇ ಮೂರನೇ ಮುದ್ರಣ ಕಂಡಿದೆ. ‘ಸತ್ಯನಾರಾಯಣ ಸತ್ತ’, ‘ಅಪರಿಚಿತರು’ ಎಂಬೆರಡು ನಾಟಕಗಳನ್ನು ತೊರಗಲ್ಲರು ರಚಿಸಿದ್ದಾರೆ. ಇವುಗಳಲ್ಲಿ ಮೊದಲನೆಯದು ಸತ್ಯನಾರಾಯಣನನ್ನು ಕುರಿತ ಜನರ ಮೌಢ್ಯದ ವಿಡಂಬನೆಯಾಗಿದ್ದು ರಂಗದ ಮೇಲೂ ಯಶಸ್ವಿಯಾಗಿದೆ. ತೊರಗಲ್ಲರಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಬಹುದಾಗಿದೆ.

ಕೆ.ಎಸ್. ನಾರಾಯಣಾಚಾರ್ಯ

ಸದ್ಯಕ್ಕೆ ಕನ್ನಡ ಧರ್ಮಾಭಿಮಾನಿ. ಆಸ್ತಿಕ ಓದುಗ ಸಮುದಾಯದಲ್ಲಿ ಅತಿ ಆದರ ಗೌರವ ಪ್ರೀತಿಗಳಿಗೆ ಪಾತ್ರವಾಗಿರುವ ವ್ಯಕ್ತಿ ನಾರಾಯಣಾಚಾರ್ಯರು. ಮೂಲತಃ ದಕ್ಷಿಣ ಕನ್ನಡದವರಾದ ಆಚಾರ್ಯರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆಂಗ್ಲಭಾಷೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಕರ್ಮಠ ಮನೆತನದ ಕೊಡುಗೆಯಾದ ಸಂಸ್ಕೃತ ಕಲಿಸಲಿಕ್ಕಾಗಿ ಕಲಿತ ಇಂಗ್ಲಿಷ್, ಆಡುನುಡಿ ತುಳು, ನಾಡುನುಡಿ ಕನ್ನಡ, ಸೋದರ ಭಾಷೆ ತಮಿಳು ಹೀಗೆ ಹಲವು ಭಾಷೆಗಳಲ್ಲಿ ಪ್ರೌಢಿಮೆ ಪಡೆದಿರುವವರು. ವೇದೋಪನಿಷತ್ತುಗಳು, ತತ್ವಶಾಸ್ತ್ರ ಪುರಾಣಗಳು ಮುಂತಾದ ಆರ್ಷೇಯ ಗ್ರಂಥಗಳನ್ನು ಆಮೂಲಾಗ್ರ ಅಭ್ಯಸಿಸಿ ಸಮರ್ಥವಾಗಿ ವ್ಯಾಖ್ಯಾನಿಸುವ ಅವರ ಅಧ್ಯಾತ್ಮ ಜ್ಞಾನ ಅಪಾರವಾದದ್ದು. ಸೇವೆಯಿಂದ ನಿವೃತ್ತರಾದ ನಂತರ ಕೆಲವು ಕಾಲ ಬೆಂಗಳೂರಿನಲ್ಲಿದ್ದು ಪ್ರಸ್ತುತ ಧಾರವಾಡದಲ್ಲಿ ನೆಲೆನಿಂತಿದ್ದಾರೆ.

ಸಂಖ್ಯೆಯಲ್ಲಿ ಅರ್ಧ ಶತಕವನ್ನೂ ಮೀರಿ ಅವರು ಕೃತಿರಚನೆ ಮಾಡಿ ಕನ್ನಡ, ಇಂಗ್ಲಿಷ್ ಸಾರಸ್ವತ ಲೋಕದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಈ ಎಲ್ಲವೂ ಧಾರ್ಮಿಕ ಗ್ರಂಥಗಳೇ ಆಗಿವೆ. ವೇದಗಳು, ಭಗವದ್ ಗೀತೆ, ಭಾಗವತ, ವಿಶಿಷ್ಟಾದ್ವೈತದ ರಾಮಾನುಜರು, ರಾಮಾಯಣದ ರಾಮ, ಮಹಾಭಾರತದ ಕೃಷ್ಣ, ಇತರ ಪಾತ್ರಗಳ ಪರಿಚಯ, ಆಳ್ವಾರರು ಹರಿದಾಸರು, ವ್ಯಾಸರು- ಹೀಗೆ ಪುರಾಣ ಮತ್ತು ಅಧ್ಯಾತ್ಮ ಜಗತ್ತಿನ ಬಹುತೇಕ ವ್ಯಕ್ತಿಗಳ ತತ್ವಗಳ ಬಗೆಗೆ ಕೃತಿಗಳನ್ನು ರಚಿಸಿದ್ದಾರೆ. ಬೇಂದ್ರೆಯವರ ಕಾವ್ಯದಲ್ಲಿನ ಅಧ್ಯಾತ್ಮದ ನೆಲೆಯನ್ನು ಕಾವ್ಯ ಪ್ರಿಯರಿಗೆ ತೋರಿದ್ದಾರೆ. ಒಟ್ಟಿನಲ್ಲಿ ಈ ಅಧ್ಯಾತ್ಮಿಕ ಸಾಹಿತ್ಯದ ಅವರ ಪ್ರಗಲ್ಬತೆ ಮತ್ತು ಅದನ್ನು ಪ್ರಚುರಪಡಿಸುವ ಶ್ರದ್ಧೆ, ಶ್ರಮ, ಆಸಕ್ತಿ, ಉತ್ಸಾಹಗಳು ಬೆರಗುಗೊಳಿಸುವಂಥವು. ರಾಮ, ಕೃಷ್ಣರನ್ನು ಕುರಿತು ಅವರು ಬರೆದ ಕೃತಿಗಳನ್ನೂ, ಕೌಟಿಲ್ಯ, ಅಗಸ್ತ್ಯರನ್ನು ಕುರಿತ ಪುಸ್ತಕಗಳನ್ನೂ ಕಾದಂಬರಿಗಳೆಂದು ಕರೆಯಲಾಗಿದೆ. ಆಚಾರ್ಯರಿಂದ ಪ್ರೇರಿತರಾಗಿ ಪ್ರಭಾವಿತರಾಗಿ ಕೆಲವರು ಈ ಕಾದಂಬರಿ ಕ್ಷೇತ್ರಕ್ಕೆ ಕಾಲಿಟ್ಟರೆಂಬುದು ಮುಖ್ಯವಾದ ಅಂಶವಾಗಿದೆ.

ಎಸ್.ವಿ. ಪ್ರಭಾವತಿ

ಈಚಿನ ವರ್ಷಗಳಲ್ಲಿ ಅಂದರೆ ಇಪ್ಪತ್ತನೇ ಶತಮಾನದ ಕೊನೆಯ ದಶಕದ ಉತ್ತರಾರ್ಧದಲ್ಲಿ ಪೌರಾಣಿಕ ಕಾದಂಬರೀ ಕ್ಷೇತ್ರದಲ್ಲಿ ಆಸ್ತೆ ತಾಳಿ ಕೆಲವು ಮೌಲಿಕ ಕೃತಿಗಳನ್ನು ನೀಡಿರುವ ಲೇಖಕಿ ಎಸ್.ವಿ. ಪ್ರಭಾವತಿಯವರು. ಸ್ತ್ರೀವಾದಿ ನಿಲುವಿನಿಂದ ಪೌರಾಣಿಕ ಪಾತ್ರಗಳನ್ನು ಪುನರ‍್ರಚಿಸಿದವರಲ್ಲಿ ಹೆಚ್.ವಿ. ಸಾವಿತ್ರಮ್ಮ, ನಳಿನಿ ಮೂರ್ತಿಯವರ ನಂತರ ಪ್ರಭಾವತಿಯವರೇ ಪ್ರಮುಖರೆಂದು ಪರಿಗಣಿಸಬೇಕಾಗುತ್ತದೆ. ಬೆಂಗಳೂರಿನ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುವ ಪ್ರಭಾವತಿಯವರು ಪುರಾಣ ಪಾತ್ರವಾದ ದ್ರೌಪದಿಯ ಕುರಿತು ವಿಶೇಷ ಅಧ್ಯಯನ ನಡೆಸಿ “ಕನ್ನಡ ಸಾಹಿತ್ಯದಲ್ಲಿ ದ್ರೌಪದಿ” ಎಂಬ ಸಂಶೋಧನ ಪ್ರಬಂಧ ರಚಿಸಿದ್ದಾರೆ. ಈ ಅಧ್ಯಯನದ ತಳಹದಿಯ ಮೇಲೆ ಅವರ ಮೊದಲ ಪೌರಾಣಿಕ ಕಾದಂಬರಿ ‘ದ್ರೌಪದಿ’ ರಚನೆಯಾಗಿದೆ. ಎರಡನೇ ಕೃತಿ ಅದೇ ಮಹಾಭಾರತದ ಕುಂತಿಯ ಕಥಾನಕವನ್ನೊಳಗೊಂಡ ಅದೇ ಹೆಸರಿನ ಕಾದಂಬರಿ. ‘ಅಹಲ್ಯೆ’ ಅವರ ಮೂರನೆಯ ಕಾದಂಬರಿ. ಇವಲ್ಲದೆ ‘ಮಳೆನಿಂತ ಮೇಲಿನ ಮರ’ ಎಂಬ ಕವನ ಸಂಕಲನವೊಂದನ್ನು ಪ್ರಭಾವತಿಯವರು ಪ್ರಕಟಿಸಿ ತಮ್ಮ ಕವಿತಾ ರಚನಾ ಸಾಮರ್ಥ್ಯವನ್ನು ತೋರಿಸಿದ್ದಾರೆ. ‘ದ್ರೌಪದಿ-ಒಂದು ಅಧ್ಯಯನ’ ಇವರ ಇನ್ನೊಂದು ವಿದ್ವತ್ಪೂರ್ಣ ಕೃತಿ.

ತಮ್ಮ ದ್ರೌಪದಿ ಕಾದಂಬರಿಗಾಗಿ ಕರ್ನಾಟಕ ಲೇಖಕಿಯರ ಪರಿಷತ್ತಿನ ಪ್ರಶಸ್ತಿಯನ್ನು ಪಡೆದಿರುವ ಪ್ರಭಾವತಿಯವರು ಭರವಸೆ ಮೂಡಿಸಿರುವ ಹೊಸ ಪೀಳಿಗೆಯ ಬರಹಗಾರ್ತಿಯಾಗಿದ್ದಾರೆ. ಅಲ್ಲದೆ ಬರಿಯ ಪೌರಾಣಿಕ ಕಾದಂಬರಿಗಳನ್ನೆ ಬರೆದಿರುವ ಮೊದಲ ಸೃಜನಾತ್ಮಕ ಲೇಖಕಿಯಾಗಿದ್ದಾರೆ.

ಇತರರು

ಮಲೆನಾಡು ಪ್ರದೇಶದ ಜನಪ್ರಿಯ ಬರಹಗಾರರಲ್ಲಿ ಶ್ರೀ ಶ್ರೀನಿವಾಸ ಉಡುಪರು ಒಬ್ಬರು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನವರಾದ ಉಡುಪರು ಹುಟ್ಟಿದ್ದು ೧೯೩೩ರಲ್ಲಿ. ಹುಟ್ಟು ಹೆಸರು ಕೃಷ್ಣ. ಮಗುವನ್ನು ಜೀವಾಪಹಾರಿ ಜ್ವರದಿಂದ ತಿರುಪತಿ ತಿಮ್ಮಪ್ಪನ ಹರಕೆ ಉಳಿಸಿತು ಎಂಬ ತಂದೆತಾಯಿಗಳ ನಂಬುಗೆ ಉಡುಪರನ್ನು ಶ್ರೀನಿವಾಸ ಎಂದು ಕರೆಯುವಂತೆ ಮಾಡಿತು. ಅದೇ ಖಾಯಿಲೆ ಉಡುಪರ ಕಾಲೊಂದನ್ನು ಬಲಹೀನಗೊಳಿಸಿ ಜೀವಮಾನವೆಲ್ಲ ಕೋಲೂರಿ ನಡೆಯುವಂತೆಯೂ ಮಾಡಿತು.

ಕೃಷಿ ಕುಟುಂಬದಿಂದ ಬಂದಿದ್ದ ಉಡುಪಿಯ ಸರಕಾರಿ ನೌಕರಿಯಲ್ಲಿದ್ದುಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು. ಅರವತ್ತು ಕಾದಂಬರಿಗಳು, ಐನೂರು ಬರಹಗಳು ಎಂಟು ನಾಟಕಗಳು, ನೂರಾರು ಕವನಗಳು, ಅನೇಕಾನೇಕ ಬರಹಗಳು ಹೀಗೆ ಬಹುಸಂಖ್ಯೆಯಲ್ಲಿ ಕೃತಿ ರಚಿಸಿ ಪತ್ರಿಕೆಗಳಲ್ಲಿ, ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಒಲಿದು ಬಂದವಳು (ಕಾ) ಸಂಭಾವಿತ (ಕ) ಅಮೃತ ಹೃದಯ (ನಾ) ರೇಷ್ಮ ಸೀರೆ (ನಾ) ಮುಂತಾದವು ಇವುಗಳಲ್ಲಿ ಮುಖ್ಯವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿಗಳೂ ಸೇರಿದಂತೆ ಹಲವು ಸಂಸ್ಥೆಗಳು ಉಡುಪರನ್ನು ಸನ್ಮಾನಿಸಿವೆ. ತಮ್ಮ ೭೦ನೇ ವಯಸ್ಸಿನಲ್ಲಿ ಈಚೆಗೆ ನಿಧನರಾದ ಉಡುಪರು ವೆಂಕಟೇಶನ ಮಹಿಮೆಯನ್ನು ಭಕ್ತಿಪೂರ್ವಕವಾಗಿ ಸಾರುವ ಲಕ್ಷ್ಮೀ ಶ್ರೀನಿವಾಸ ಎಂಬ ಪೌರಾಣಿಕ ಕಾದಂಬರಿಯನ್ನು ರಚಿಸಿದ್ದಾರೆ.

ಮೈಸೂರಿನವರಾದ ಶ್ರೀ ಜನಾರ್ದನ ಗುರ್ಕಾರ್ ಕನ್ನಡದ ಪ್ರಸಿದ್ಧ ಸಾಹಿತಿಗಳಲ್ಲೊಬ್ಬರು. ಪರಾವಲಂಬಿ, ಕೈಮಾಂಸ, ಗಂಗಾವತಾರ, ದೃಷ್ಟಿಹೀನ ಮುಂತಾಗಿ ಹದಿನೈದಕ್ಕೂ ಹೆಚ್ಚು ಕಾದಂಬರಿಗಳನ್ನೂ ಸಣ್ಣಕಥೆ, ಲಲಿತ ಪ್ರಬಂಧಗಳನ್ನಲ್ಲದೆ ಅನುವಾದ ಕೃತಿಗಳನ್ನೂ ನೀಡಿರುವ ಗುರ್ಕಾರ್ ಯೋಗವಾಸಿಷ್ಠ ಪುರಾಣವನ್ನು ಆಧರಿಸಿ ಬರೆದ ‘ಚೂಡಾಲಾ’ ಎಂಬ ಪೌರಾಣಿಕ ಕಾದಂಬರಿ ಮೌಲ್ಯಯುತವಾದ ಗಂಭೀರ ಕೃತಿಯಾಗಿದೆ.

ಅದಮ್ಯ ಎಂಬೊಂದು ಕಿರು ಕಾದಂಬರಿಯನ್ನು ರಚಿಸುವ ಮೂಲಕ ಪೌರಾಣಿಕ ಕಾದಂಬರಿಕಾರರ ಸಾಲಿಗೆ ಸೇರಿದವರು ಶ್ರೀ.ಜ.ಹೊ. ನಾರಾಯಣ ಸ್ವಾಮಿ. ಹಾಸನದಲ್ಲಿ ವಕೀಲಿ ವೃತ್ತಿ ನಡೆಸುತ್ತಿರುವ ಶ್ರೀ.ಸ್ವಾಮಿ ಪ್ರಖರ ವಿಚಾರವಾದಿಗಳು, ಪ್ರಗತಿಪರ ಹೋರಾಟಗಾರರು. ‘ವೇದ ಕುರಾನ್ ಆಚೆಗೆ’, ‘ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು’ ಕೃತಿಗಳ ಮೂಲಕ ವೈಚಾರಿಕತೆಯನ್ನು ಮೆರೆದಿರುವ ಸ್ವಾಮಿ ಕವಿ, ನಾಟಕಕಾರರು ಹೌದು. ‘ಜಗದ ತೊಟ್ಟಿಲು’, ಅವರ ಕವನ ಸಂಕಲನ. ‘ನರಬಲಿ’ ನಾಟಕ. ಹರ್ಮನ್ ಹೆಸ್ ನ ‘ಸಿದ್ಧಾರ್ಥ’ ಕಾದಂಬರಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಆದಮ್ಯ ಏಕಲವ್ಯನ ದುರಂತ ಕಥೆಯನ್ನು ಒಳಗೊಂಡಿರುವ ಕಿಡಿಯಂಥ ಕಾದಂಬರಿ.

ಶ್ರೀಮತಿ ದೇವಕಿ ಮೂರ್ತಿ ಸಂಗೀತ, ಹಿಂದಿ, ಹೊಲಿಗೆ ಮುಂತಾದ ಮಹಿಳೆಯರ ಸಾಮಾನ್ಯ ಹವ್ಯಾಸಗಳೊಂದಿಗೆ ಸಾಹಿತ್ಯ ರಚನೆಯನ್ನು ರೂಢಿಸಿಕೊಂಡ ಮೈಸೂರಿನ ಲೇಖಕಿ. ಹರಟೆ, ಕಥೆ, ಕಾದಂಬರಿಗಳನ್ನು ಬರೆದಿರುವ ಇವರ ‘ಉಪಾಸನೆ’ ಕಾದಂಬರಿ ಚಲನಚಿತ್ರವಾಗಿ ಪ್ರಸಿದ್ಧಿ ಪಡೆದಿದೆ, ಒಡಕುದೋಣಿ, ಬಳ್ಳಿಚಿಗುರಿತು, ಎರಡು ದಾರಿ, ಮುಂತಾದವು ಇತರ ಕಾದಂಬರಿಗಳು, ಕೈಕೆಯ ಪಾತ್ರವೇ ಕೇಂದ್ರವಾಗುಳ್ಳ ‘ನಿರೀಕ್ಷೆ’ ಅವರು ಪೌರಾಣಿಕ ಕಾದಂಬರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ.

‘ಪರೀಕ್ಷಿತ’ದ ಕರ್ತೃ ಸಾಗರದ ಪ್ರಾಧ್ಯಾಪಕ ಎಸ್.ಜಿ.ರಘುಪತಿ ಜೋಯ್ಸ್, ‘ವಿಶ್ವರಥ’ದ ರಚನಾಕಾರ ಎಂ.ಬಲರಾಮ್, ಇನ್ನೊಂದು ‘ಅಹಲ್ಯೆ’ಯ ಸೃಷ್ಠಿಕರ್ತೆ ಶಕುಂತಲಾ ಭಟ್, ‘ಕೃಷ್ಣಾವತಾರ’ದ ಚಂದ್ರಶೇಖರ ಹರ್ಳೆ, ‘ಗೋವರ್ಧನ’, ‘ವ್ಯಾಸ’ ಎಂಬೆರಡು ಕಾದಂಬರಿಗಳ ಲೇಖಕ ಕೆ. ಗಣೇಶ ಮಲ್ಯ ‘ನೈಷದ ಚಕ್ರವರ್ತಿ’ ಯನ್ನು ಚಿತ್ರಿಸಿದ ಸಾರಂಗ, ಹುಬ್ಬಳ್ಳಿ ಕಡೆಯ ಜೋಗ, ಕಾಶೀನಾಥ ರಾಮಚಂದ್ರ ಕುರಡೀಕೇರಿ ಹೀಗೆ ಇನ್ನೂ ಕೆಲವರು ಈ ಕ್ಷೇತ್ರದಲ್ಲಿ ಕೆಲಸ ಮಾಡಿ ಕನ್ನಡ ಸಾಹಿತ್ಯ ಚರಿತ್ರೆಯ ಪುಟಗಳಲ್ಲಿ ಎಡೆ ಪಡೆದಿದ್ದಾರೆ.

ಪರಿಸಮಾಪ್ತಿ

ವ್ಯಾಪ್ತಿ, ಪ್ರಮಾಣಗಳಲ್ಲಿ ಚರಿತ್ರೆಗೆ ಬೇಕಾಗುವಷ್ಟು ವಿಸ್ತಾರವನ್ನು ಹೊಂದಿರದೆ ಇದ್ದರೂ-ಸುಮಾರು ಐವತ್ತು ವರ್ಷಾವಧಿಯಲ್ಲಿ ಅಷ್ಟೇ ಸಂಖ್ಯೆಯ ಕೃತಿಗಳು-ಕನ್ನಡ ಪೌರಾಣಿಕ ಕಾದಂಬರಿಗಳು ಗುಣ ಗಾತ್ರಗಳಲ್ಲಿ ದೊಡ್ಡವಾಗಿವೆ. ಮಹಾಕ್ಷತ್ರಿಯ, ಅವಧೇಶ್ವರಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿವೆ. ಮಾಧವಿ, ಸೀತೆ-ರಾಮ-ರಾವಣ, ಪರ್ವ, ಅದಮ್ಯ, ಸಂಚು, ದ್ರೌಪದಿಯಂಥ ಕೃತಿಗಳು ಕನ್ನಡ ಜನರ ವೈಚಾರಿಕ ಪ್ರಜ್ಞೆಯನ್ನು ಬಡಿದೆಬ್ಬಿಸಿ ಸಂಪ್ರದಾಯ ಶ್ರದ್ಧೆಗೆ ಮುಖಾಮುಖಿಯಾಗಿಸಿ ಮಥನಕ್ಕೆ ಅನುವಾಗಿಸಿವೆ. ಮಹಾ ಬ್ರಾಹ್ಮಣ, ಶ್ರೀ ಕೃಷ್ಣದರ್ಶನ, ಊರ್ಮಿಳೆ, ಅಹಲ್ಯೆ, ಅಗ್ನಿವರ್ಣ, ಪರೀಕ್ಷಿತ ಮುಂತಾದ ಕಾದಂಬರಿಗಳು ಆನಂದಸ್ವಾದನೆಯೊಂದಿಗೆ ಜ್ಞಾನೋದ್ದೀಪನಕ್ಕೂ ಅವಕಾಶ ನೀಡಿವೆ. ಹೀಗೆ ಕನ್ನಡ ಕಾದಂಬರೀ ಇತಿಹಾಸದ ಪುಟಗಳಲ್ಲಿ ಸುವರ್ಣ ರೇಖೆಯಂತೆ ಮಿರುಗುತ್ತಾ ಈ ಕೃತಿಗಳು ನಮ್ಮ ಕಥಾ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಇಂತಹ ವೈಶಿಷ್ಠ್ಯ ಪೂರ್ಣ ಮತ್ತು ಸತ್ವಪೂರ್ಣ ಕೃತಿಗಳನ್ನು ರಚಿಸುವ ಮೂಲಕ ಈ ಪ್ರಕಾರಕ್ಕೆ ಗಟ್ಟಿ ನೆಲೆಗಟ್ಟನ್ನು ಹಾಕಿಕೊಟ್ಟಿರುವ ದೇವುಡು, ಸತ್ಯಕಾಮ, ಸಮೇತನಹಳ್ಳಿ, ಭೈರಪ್ಪ, ಪುಣೇಕರ, ಸಾವಿತ್ರಮ್ಮ, ತೊರಗಲ್ಲು, ಪ್ರಭಾವತಿಯವರಂಥ ಪೌರಾಣಿಕ ಕಾದಂಬರಿಕಾರರು ಸಾಹಿತ್ಯ ಚರಿತ್ರೆಯಲ್ಲಿ ಸ್ಥಾಯಿಯಾಗಿದ್ದಾರೆ, ಕನ್ನಡಿಗರ ಕೃತಜ್ಞತೆಗೆ ಅರ್ಹರಾಗಿದ್ದಾರೆ.