ಪ್ರವೇಶ

ಕಾದಂಬರಿ ಆಧುನಿಕ ಸಾಹಿತ್ಯದ ಪ್ರಮುಖ ಪ್ರಕಾರ. ಕಥನಾತ್ಮಕತೆ ಮತ್ತು ಸೊಭಗತೆಗಳಿಂದಾಗಿ ಅತ್ಯಂತ ಜನಪ್ರಿಯ ರೂಪವೂ ಹೌದು. ಒಂದು ಶತಮಾನದ ಇತಿಹಾಸವುಳ್ಳ ಕನ್ನಡ ಕಾದಂಬರಿಯಲ್ಲಿ ಸಾಮಾಜಿಕ, ಐತಿಹಾಸಿಕ, ಪತ್ತೇದಾರಿ ಮುಂತಾಗಿ ವಿವಿಧ ವಸ್ತುಗಳನ್ನಾಧರಿಸಿದ ಕೃತಿಗಳಿವೆ. ಪೌರಾಣಿಕ ಕಾದಂಬರಿ ಎಂಬ ವಿಭಾಗವೊಂದು ಕನ್ನಡದಲ್ಲಿ ಇದೆಯಾದರೂ ಈಚಿನವರೆಗೂ ಅದು ವಿಮರ್ಶಕರ ಪರಿಗಣನೆಗೆ ಬಂದಿರಲಿಲ್ಲವೆನ್ನಬೇಕು. ಈಚೆಗೆ ಪೌರಾಣಿಕ ಕಾದಂಬರಿಗಳನ್ನು ಪ್ರತ್ಯೇಕವಾಗಿ ಗುರಿತಿಸಲಾಗುತ್ತಿದೆ.

ಪರಂಪರೆಯಲ್ಲಿ ಬಳಕೆಯಲ್ಲಿದ್ದ ಪ್ರಸಿದ್ಧ ಪುರಾಣಗಳಿಂದ ವಸ್ತುಗಳನ್ನಾಯ್ದುಕೊಂಡು ಅದಕ್ಕೆ ಆಧುನಿಕ ಕಾದಂಬರಿಯ ಸ್ವರೂಪವನ್ನು ನೀಡಿ ಬರೆದ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಈಗ್ಗೆ ಸುಮಾರು ಐವತ್ತು ವರ್ಷಗಳಿಂದ ಪ್ರಕಟವಾಗುತ್ತಾ ಬಂದಿವೆ. ನವೋದಯ ಕಾಲದಲ್ಲಿ ಇಂಗ್ಲಿಷ್ ಅನುಸರಣೆಯಾಗಿ ಕಾದಂಬರಿ ಕನ್ನಡಕ್ಕೆ ಬಂತು. ಮೊದಲ ಹಂತದಲ್ಲಿ ಅನುವಾದಿತ ಕಾದಂಬರಿಗಳು ಕಾಣಿಸಿಕೊಂಡು ನಂತರ ಸ್ವತಂತ್ರ ಸಾಮಾಜಿಕ ಕಾದಂಬರಿಗಳ ಸೃಷ್ಟಿಗೆ ಕನ್ನಡ ಲೇಖಕರು ತೊಡಗಿಕೊಂಡರೆಂಬುದನ್ನು ಸಾಹಿತ್ಯಾಭ್ಯಾಸಿಗಳು ಬಲ್ಲರು. ಕಾದಂಬರಿಯ ಉದಯ ಕಾಲದಲ್ಲಿ ಪೌರಾಣಿಕ ಕಾದಂಬರಿ ಎಂದು ಕರೆಸಿಕೊಳ್ಳುವ ಯಾವುದೇ ಕೃತಿ ಕನ್ನಡದಲ್ಲಿ ರಚನೆಯಾಗಲಿಲ್ಲ. ಅಷ್ಟೇಕೆ ಕಾದಂಬರಿ ಬೆಳವಣೆಗೆಯ ಹಂತದಲ್ಲೂ ಇವು ಕಾಣಿಸಿಕೊಳ್ಳಲಿಲ್ಲ. ಆದಾಗ್ಯೂ ಆ ಮೊದಲೇ ಅಂದರೆ ನವೋದಯ ಕಾಲದಲ್ಲೇ ಹತ್ತೊಂಬತ್ತನೇ ಶತಮಾನದ ಆದಿಭಾಗದಲ್ಲಿ-ಪರಂಪರೆಯಲ್ಲಿದ್ದ ಕಾಲ್ಪನಿಕ ಕಥಾನಕಗಳನ್ನು ಆಯ್ದುಕೊಂಡು ಅದ್ಭುತ ರಮ್ಯ ಘಟನಾವಳಿಗಳನ್ನು ಹೆಣೆದು ರಚಿಸಿದ ಯಾದವ ಕವಿ ವಿರಚಿತ ‘ಕಲಾವತಿ ಪರಿಣಯ’ (೧೮೧೫) ಮುಮ್ಮಡಿ ಕೃಷ್ಣರಾಜ ಒಡೆಯ ಕೃತ ‘ಸೌಗಂಧಿಕಾ ಪರಿಣಯ’ (೧೮೨೦) ಕೆಂಪುನಾರಾಯಣನ ‘ಮುದ್ರಾ ಮಂಜೂಷ’ (೧೮೨೩) ಎಂಬ ಮೂರು ಕೃತಿಗಳು ಸೃಷ್ಟಿಯಾದವು. ಇವುಗಳಲ್ಲಿ ಪೌರಾಣಿಕ ಕಾದಂಬರಿಗಳ ಸ್ಥೂಲ ಲಕ್ಷಣಗಳನ್ನು ಕಾಣಬಹುದಾಗಿದೆ. ಇವುಗಳ ಬೆನ್ನಿಗೇ ಸ್ಪಷ್ಟ ರೂಪದಲ್ಲಿ ಕಾದಂಬರಿ ಹುಟ್ಟಿ ಬರದಿದ್ದರೂ ಪುರಾಣ ಕಥಾನಕಗಳು ಹೇರಳವಾಗಿ ಹೊಮ್ಮಿಬಂದವು. ೧೯೫೦ರಲ್ಲಿ ದೇವುಡು ನರಸಿಂಹ ಶಾಸ್ತ್ರೀಗಳು ‘ಮಹಾಬ್ರಾಹ್ಮಣ’ವನ್ನು ಪ್ರಕಟಿಸುವವರೆಗೆ ಪೌರಾಣಿಕ ಕಾದಂಬರಿ ಎಂಬ ಪ್ರತ್ಯೇಕ ರೂಪ ಇರಲಿಲ್ಲವಾದರೂ ಆಂಗ್ಲ ಭಾಷೆಯ ಪ್ರಭಾವ ಮತ್ತು ಅನುಕರಣೆಗೆ ಹೊರತಾದ (ಇಂಗ್ಲಿಷಿನಲ್ಲಿ ಇಂಥ ರೂಪವೊಂದು ಇದ್ದಂತೆ ತೋರುವುದಿಲ್ಲ) ಭಾರತೀಯ ಪರಂಪರೆಯ ಕೊಡುಗೆ ಎನ್ನಬಹುದಾದ ಪೌರಾಣಿಕ ಕಾದಂಬರಿ ರೂಪ ನವೋದಯ ಪೂರ್ವಕಾಲದಲ್ಲೇ ಮೊಳಕೆಯೊಡೆದಿದ್ದು ಇಪ್ಪತ್ತನೇ ಶತಮಾನದ ಮಧ್ಯಕಾಲದವರೆಗೆ ಪುರಾಣ ಕಥಾನಕಗಳ ರೂಪದಲ್ಲಿ ಗುಪ್ತಗಾಮಿನಿಯಾಗಿದ್ದು ಭಾರತ ಸ್ವಾತಂತ್ರ್ಯಾ ನಂತರ ದಾಂಗುಡಿಯಿಟ್ಟು ಚಿಗುರೊಡೆಯಿತೆಂದು ಹೇಳಬಹುದಾಗಿದೆ.

ಯಾವುದೇ ಭಾಷೆಯ ಸಾಹಿತ್ಯಕ್ಕೆ ಪುರಾಣಗಳು ಆಕರ ರೂಪದ ಸಾಹಿತ್ಯವಾಗಿರುತ್ತವೆ. ಪುರಾಣಗಳ ಪ್ರಸಂಗ, ವ್ಯಕ್ತಿಗಳನ್ನು ಪ್ರತಿಮೆ, ಪ್ರತಿಕೃತಿ, ರೂಪಕಗಳಾಗಿ ಬಳಸಿಕೊಂಡು ಹೆಣೆದ ಕಾವ್ಯ, ಕವಿತೆ, ನಾಟಕಗಳು ಇರುವಂತೆಯೇ ಕತೆ, ಕಾದಂಬರಿಗಳೂ ಎಲ್ಲ ಭಾಷೆಗಳಲ್ಲಿರುತ್ತವೆ. ಕನ್ನಡದಲ್ಲಿಯೂ ಈ ಎಲ್ಲ ಪ್ರಸಿದ್ಧ ಸಾಹಿತ್ಯ ಪ್ರಕಾರಗಳಿಗಾಗಿ ಪುರಾಣಗಳನ್ನು ಬಳಸಿಕೊಳ್ಳಲಾಗಿದೆ. ಪುರಾಣಾಧಾರಿತ ಕನ್ನಡ ಕಾದಂಬರಿಗಳದೇ ಒಂದು ಪುಟ್ಟ ಪರಂಪರೆ ಇದೆ.

ಇದೊಂದು ವಿಶಿಷ್ಟ ಪ್ರಕಾರ. ರಾಮಾಯಣ, ಮಹಾಭಾರತ, ಭಾಗವತ ಪುರಾಣ ಕಥೆಗಳನ್ನೂ ವೇದೋಪನಿಷತ್ ಕಥಾಪ್ರಸಂಗಗಳನ್ನೂ ಇಡಿ ಇಡಿಯಾಗಿ ಅಥವಾ ಬಿಡಿ ಘಟನೆಗಳಾಗಿ ಕಾದಂಬರಿಗೆ ವಸ್ತುವಾಗಿರಿಸಿಕೊಂಡು ಆ ಕಥಾಭಿತ್ತಿಯಲ್ಲಿ ಕಾದಂಬರಿ ತಂತ್ರಮುಖೇನ ಸಮಕಾಲೀನ ಮೌಲ್ಯಗಳನ್ನೂ ಸಮಸ್ಯೆಗಳನ್ನೂ ಬಿಂಬಿಸುವ ಅಥವಾ ಪ್ರಾಚೀನ ಮೌಲ್ಯಗಳನ್ನು ಪುನಾ ಪ್ರತಿಪಾದಿಸುವ ಅಥವಾ ಪ್ರಾಚೀನ, ಆಧುನಿಕ ಸಮಾಜ ಹಾಗೂ ಸಾಮಾಜಿಕರನ್ನು ವಿಡಂಬಿಸುವ ಕೃತಿಗಳನ್ನು ಪೌರಾಣಿಕ ಕಾದಂಬರಿಗಳು ಎನ್ನಬಹುದು.

ಕನ್ನಡದಲ್ಲಿ ಬಹುಸಂಖ್ಯಾತರ ವೈದಿಕ ಪರಂಪರೆಯ ವೈಷ್ಣವ ಪುರಾಣಗಳನ್ನಾಧರಿಸಿದ ಕಾದಂಬರಿಗಳಲ್ಲದೆ ಜೈನ, ಬೌದ್ಧ ಮುಂತಾಗಿ ಇತರ ಧರ್ಮಗಳ ಪುರಾಣಗಳನ್ನಾಧರಿಸಿದ ಕಾದಂಬರಿಗಳೂ, ಇತರ ಭಾಷೆಗಳಿಂದ ಅನುವಾದಿಸಿದ ಕಾದಂಬರಿಗಳೂ ಇವೆ. ವೈದಿಕ ಪುರಾಣ ಮೂಲಕ ಕೃತಿಗಳೇ ಸಂಖ್ಯೆಯಲ್ಲಿ ಹೆಚ್ಚಾಗಿವೆ.

ಈ ಬಗೆಯ ಕೃತಿಗಳನ್ನು ರಚಿಸ ಹೊರಟವರಲ್ಲಿ ಧಾರ್ಮಿಕ ಶ್ರದ್ಧೆಭಕ್ತಿಗಳಿಂದ ಪುರಾಣಗಳನ್ನು ಪುನಾರಚಿಸಿ ಧರ್ಮ ಪ್ರಚಾರಕ್ಕೆ, ಸನಾತನ ಧರ್ಮಗಳ ಪುನರುದ್ದಾರಕ್ಕೆ, ಪ್ರಾಚೀನ ಮೌಲ್ಯಗಳ ಪ್ರತಿಪಾದನೆಗೆ ಪಣತೊಟ್ಟವರು ಕೆಲವರು. ವೈಚಾರಿಕ ದೃಷ್ಟಿ ವೈಜ್ಞಾನಿಕ ಮನೋಭಾವಗಳಿಂದ ಪುರಾಣಗಳನ್ನು ಪರಿಶೀಲಿಸಿ ಅವುಗಳನ್ನು ಭಂಜಿಸಿ ಪುನಾ ಸೃಷ್ಟಿಸಿ, ಆಧುನಿಕ ಮೌಲ್ಯಗಳನ್ನೂ ಪ್ರಗತಿಗಾಮಿ ಆಲೋಚನೆಗಳನ್ನೂ ಬಿತ್ತರಿಸಲು ಯತ್ನಿಸುವವರು ಕೆಲವರು. ಪುರಾಣಗಳನ್ನು ಸಂಶೋಧನಾತ್ಮಕವಾಗಿ ಬಗೆದವರು ಕೆಲವರು. ವ್ಯಂಗ್ಯಕ್ಕೆ ಸಾಮಗ್ರಿಯಾಗಿಸಿಕೊಂಡವರು ಮತ್ತೆ ಕೆಲವರು. ಇಂಥ ಭಿನ್ನ ಮನೋಧರ್ಮದ ಲೇಖಕರಿಂದಾಗಿ ಪೌರಾಣಿಕ ಕಾದಂಬರಿಗಳು ವೈವಿಧ್ಯದಿಂದ ಕೂಡಿವೆ. ಈ ಪ್ರಕಾರದ ಇಪ್ಪತ್ತೈದು ಮುವತ್ತು ಸಂಖ್ಯೆ ಮೀರದ ಸಾಹಿತಿಗಳ ಚರಿತ್ರೆ ಚಾರಿತ್ರಗಳೂ ಕುತೂಹಲಕಾರಿಯಾಗಿವೆ.

ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳಿಂದಾಗಿಯೇ ಪ್ರಸಿದ್ಧರಾದವರು ದೇವುಡು ಮತ್ತು ಸತ್ಯಕಾಮರು ಮಾತ್ರ. ಅವರೂ ಕೂಡ ಈ ಬಗೆಯ ಕೃತಿಗಳಿಗೇ ಸೀಮಿತರಾದವರಾಗಲಿ ಮೀಸಲಾದವರಾಗಲಿ ಅಲ್ಲ, ಅಂಥವರು ಯಾರೂ ಕನ್ನಡದಲ್ಲಿಲ್ಲ. ಇತರ ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡುತ್ತ ಅಥವಾ ಕಾದಂಬರಿಯದೇ ಇತರ ವಿಭಾಗಗಳಲ್ಲಿ ಪ್ರಮುಖವಾಗಿ ಕೃಷಿ ಮಾಡುತ್ತ ಆನುಷಂಗಿಕವಾಗಿ ಒಂದೋ ಎರಡೋ ಪೌರಾಣಿಕ ಕಾದಂಬರಿ ಬರೆದವರೇ ಎಲ್ಲ. ಇವರಲ್ಲಿ ಕೆಲವರು ಸಿದ್ಧಹಸ್ತರು, ಸುಪ್ರಸಿದ್ಧರು. ಮತ್ತೆ ಕೆಲವರು ಅಷ್ಟೊಂದು ಪ್ರಸಿದ್ಧರಲ್ಲದ ಪ್ರಯತ್ನಶೀಲರು. ಒಬ್ಬಿಬ್ಬರು ಪೌರಾಣಿಕ ಕಾದಂಬರಿಗಳ ಮೂಲಕವೇ ಬರವಣಿಗೆ ಆರಂಭಿಸಿದವರು. ಈ ನಮ್ಮ ಸಾಹಿತಿಗಳ ವ್ಯಕ್ತಿತ್ವ ಸಾಧನೆಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಯತ್ನವನ್ನು ಈ ಕಿರುಹೊತ್ತಿಗೆಯಲ್ಲಿ ಮಾಡಲಾಗಿದೆ.

ದೇವುಡು ನರಸಿಂಹಶಾಸ್ತ್ರಿ

ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳ ಪರಂಪರೆಯನ್ನು ಪ್ರಾರಂಭಿಸಿದ ಖ್ಯಾತಿ ದೇವುಡು ಎಂಬ ಸಂಕ್ಷಿಪ್ತ ನಾಮದಿಂದ ಪ್ರಸಿದ್ಧರಾಗಿರುವ ನರಸಿಂಹಶಾಸ್ತ್ರಿಗಳಿಗೆ ಸಲ್ಲುತ್ತದೆ. ತಮ್ಮ ಮಹಾ ಬ್ರಾಹ್ಮಣ ಕಾದಂಬರಿಯ ಮೂಲಕ (೧೯೫೨) ಈ ಶತಮಾನದ ಮಧ್ಯದಲ್ಲಿ ಹೊಸ ಸಾಹಿತ್ಯ ಪ್ರಕಾರವೊಂದರ ಹುಟ್ಟಿಗೆ ಕಾರಣರಾದವರು ದೇವುಡು. ನಂತರ ತಮ್ಮ ಇನ್ನೆರಡು ಮಹಾನ್ ಕಾದಂಬರಿಗಳ ಮೂಲಕ ಮಹಾಕ್ಷತ್ರಿಯ (೧೯೬೨) ಮಹಾದರ್ಶನ (೧೯೬೭) ಆ ಪರಂಪರೆಗೆ ಭದ್ರಬುನಾದಿಯನ್ನು ಹಾಕಿದರು. ಪೌರಾಣಿಕ ಕಾದಂಬರಿಗಳ ವಿಚಾರಕ್ಕೆ ದೇವುಡು ಪ್ರಾತಃ ಸ್ಮರಣೀ ಯರೆಂದೇ ಹೇಳಬಹುದು.

ಆಂಧ್ರ ಮೂಲದ ವೈದಿಕ ಸಂಪ್ರದಾಯಸ್ಥ ಮನೆತನವೊಂದರಲ್ಲಿ ಮೈಸೂರಿನಲ್ಲಿ ೧೮೯೬ರ ಡಿಸೆಂಬರ್ ೨೬ರಂದು ನರಸಿಂಹಶಾಸ್ತ್ರಿಗಳ ಜನನವಾಯಿತು. ತಾಯಿ ಸುಬ್ಬಮ್ಮ, ತಂದೆ ಕೃಷ್ಣಶಾಸ್ತ್ರಿಗಳು. ವಿದ್ವತ್ ಪರಿಸರ ದೇವುಡು ಅವರಿಗೆ ಬಾಲ್ಯದಲ್ಲೇ ದೊರಕಿತು. ವೈದಿಕ ಸಾಹಿತ್ಯದಲ್ಲಿ ಪರಿಣತರಾಗಿದ್ದ ತಂದೆಯವರ ಮಾರ್ಗದರ್ಶನ, ಸಂಸ್ಕೃತ ಪಾಂಡಿತ್ಯವುಳ್ಳ ಹಿರಿಯರ ಒಡನಾಟ ದೊರಕಿತ್ತಾಗಿ, ಚಿಕ್ಕಂದಿನಲ್ಲೇ ರಾಮಾಯಣಾದಿ ಪುರಾಣಗಳನ್ನು ಓದಿಕೊಂಡಿದ್ದರು. ನಂತರದಲ್ಲಿ ಆಂಗ್ಲಭಾಷೆ-ಸಾಹಿತ್ಯಗಳನ್ನು ಅರಗಿಸಿಕೊಂಡರು. ಮನೆಮಾತು ತೆಲುಗೂ ಸೇರಿದಂತೆ ಹಲವು ಭಾಷೆಗಳನ್ನು ಬಲ್ಲವರಾಗಿದ್ದ ದೇವುಡು ಕಳೆದ ಶತಮಾನದ ಎರಡನೇ ದಶಕದಲ್ಲೇ ಎಂ.ಎ. ಪದವಿ ಪಡೆದಿದ್ದರು. ಸಂಸ್ಕೃತ, ತತ್ವಶಾಸ್ತ್ರಗಳು ಇವರ ಉನ್ನತ ಶಿಕ್ಷಣದ ವಿಷಯಗಳಾಗಿದ್ದವು. ನಿಶಿತಮತಿಗಳಾಗಿದ್ದ ಶಾಸ್ತ್ರಿಗಳಿಗೆ ಡಾ. ಎಸ್. ರಾಧಾಕೃಷ್ಣನ್ ರಂಥ ಗುರುಗಳು ದೊರಕಿದ್ದರು.

ಇಷ್ಟೆಲ್ಲ ಯೋಗ್ಯತೆಗಳಿದ್ದೂ ದೇವುಡು ಸರ್ಕಾರಿ ಅಥವಾ ಖಾಸಗಿ ನೌಕರಿಗೆ ಸೇರಿಕೊಳ್ಳಲಿಲ್ಲ. ಹಂಗಿನ ಬದುಕನ್ನು ಒಪ್ಪದ ಸ್ವತಂತ್ರ ಪ್ರವೃತ್ತಿ ಅವರದು. ತಾನಾಗಿ ಬಂದ ಅವಕಾಶಗಳನ್ನು ಈ ಕಾರಣಕ್ಕಾಗಿಯೇ ಬಿಟ್ಟುಕೊಟ್ಟು, ಸ್ವತಂತ್ರವಾಗಿ ದುಡಿಮೆಗೆ ತೊಡಗಿದರು. ಅಕ್ಷರ ಪ್ರಚಾರ, ವಯಸ್ಕರ ಶಿಕ್ಷಣ, ಅಧ್ಯಾಪನ, ಪತ್ರಿಕೋದ್ಯಮ, ನಾಟಕ ರಚನೆ, ನಟನೆ, ಚಲನಚಿತ್ರ ನಿರ್ಮಾಣ ಮತ್ತು ನಟನೆ, ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚನೆ, ಚಿತ್ರಕಲೆ, ಸಂಗೀತ, ರಾಜಕಾರಣ ಹೀಗೆ ತಮ್ಮ ಪ್ರವೃತ್ತಿಗಳಿಗನುಗುಣವಾಗಿ ವೃತ್ತಿಗಳನ್ನು ಬದಲಾಯಿಸುತ್ತ ಹೋದರು. ಬದುಕಿನಲ್ಲಿ ಈ ಬಗೆಯ ಪ್ರಯೋಗಶೀಲತೆಗೆ, ಸಾಹಸಕ್ಕೆ ಹೆಸರಾದ ಡಾ. ಶಿವರಾಮ ಕಾರಂತರಂತೆ. ಆದರೆ ಅವರಿಗಿಂತ ಮೊದಲೇ ದೇವುಡು ಇಂಥ ದುರ್ಗಮ ದಾರಿಯಲ್ಲಿ ಸಾಗಿದ್ದರು. ಮನುಷ್ಯ ತನ್ನ ಸರ್ವಶಕ್ತಿಗಳನ್ನೂ ಒರೆಗೆ ಹಚ್ಚಿ ಬೆಳೆಸಬೇಕು ಎಂಬ ಗುರಿಗೆ ಮಾದರಿಯಾಗಿತ್ತು ಅವರ ಜೀವನ. ಕಾರಂತ ಮತ್ತು ದೇವುಡು ಅವರಿಬ್ಬರ ಕಾರ್ಯಕ್ಷೇತ್ರಗಳೂ ಬಹುತೇಕ ಒಂದೇ ಆಗಿವೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಇಬ್ಬರದೂ ದೈತ್ಯ ಪ್ರತಿಭೆಯೇ. ಇದ್ದ ಮುಖ್ಯ ವ್ಯತ್ಯಾಸ ಅವರ ನಂಬಿಕೆಗಳಿಗೆ ಸಂಬಂಧಿಸಿದ್ದು. ದೇವುಡು ಸಂಪ್ರದಾಯ ಶ್ರದ್ಧೆಯುಳ್ಳ ವೈದಿಕ ಧರ್ಮಾನುಯಾಯಿ ಮತ್ತು ಅದರ ಪುನರುದ್ಧಾರಕ್ಕೆ ಪ್ರಯತ್ನಿಸಿದವರು. ಪ್ರಾಚೀನ ಜೀವನ ಕ್ರಮದ ಪ್ರಬಲವಾದ ಪ್ರತಿಪಾದಕರು. ಇದಕ್ಕೆ ವಿರುದ್ಧವಾಗಿ ಕಾರಂತರು ಶುದ್ಧ ವಿಚಾರವಾದಿಗಳು. ಧರ್ಮ, ದೇವರ ಕುರಿತ ಅಶ್ರದ್ಧೆಯುಳ್ಳ ವೈಜ್ಞಾನಿಕ ದೃಷ್ಟಿಯಿಂದ ಸಮಾಜದ ಪ್ರಗತಿಯನ್ನು ಬಯಸಿದವರು.

ದೇವುಡು ನಿಷ್ಠುರ ಸಂಪ್ರದಾಯವಾದಿ. ಪ್ರಾಚೀನ ಸಂಸ್ಕೃತಿಯನ್ನು ಕುರಿತ ಅವರ ಶ್ರದ್ಧೆ ಯಾವ ಮಟ್ಟದ್ದೆಂದರೆ ಆಧ್ಯಾತ್ಮಿಕ ಆಚರಣೆಗಳನ್ನು ಆಮೂಲಾಗ್ರ ಅಧ್ಯಯನ ಮಾಡಿದರಷ್ಟೇ ಅಲ್ಲ ತನ್ಮಯತೆಯಿಂದ ಸಾಧನೆಗಳನ್ನು ಮಾಡಿ ಸಿದ್ಧಿಗಳನ್ನು ಪಡೆದಿದ್ದರೆನಿಸುತ್ತದೆ. ದಿವ್ಯ ಚೈತನ್ಯದ ಬಗೆಗೆ ಕೇವಲ ನಂಬಿದ್ದರಷ್ಟೇ ಅಲ್ಲ ಪವಾಡ ಸದೃಶ್ಯ ಶಕ್ತಿಗಳನ್ನು ಅವರೇ ಹೊಂದಿದ್ದರು. ಅವರ ಮಿತ್ರರಲ್ಲಿ ಒಬ್ಬರಾದ ಬೆಳಗೆರೆ ಕೃಷ್ಣಶಾಸ್ತ್ರಿಗಳು ತಮ್ಮ ಒಂದು ಲೇಖನದಲ್ಲಿ[1] ದೇವುಡು ರೋಗಿಯ ಶರೀರವನ್ನು ಮುಟ್ಟುವ ಮೂಲಕ ರೋಗ ನಿವಾರಣೆ ಮಾಡಿದ್ದನ್ನೂ, ತಮ್ಮ ಅಂಗೈಲಿದ್ದ ಗುಂಡುಕಲ್ಲು ಚಟುವಟಿಕೆಯನ್ನು ಪಡೆದಿದ್ದನ್ನು ಪ್ರತ್ಯಕ್ಷದರ್ಶಿಗಳಾಗಿ, ಸ್ವಾನುಭವಿಗಳಾಗಿ ವರ್ಣಿಸಿದ್ದಾರೆ.[2] ಮನುಷ್ಯ ದೇಹದಲ್ಲಿ ವಿಶೇಷ ಸಂವಹನ ಶಕ್ತಿ ಇದೆ ಎಂದೂ ಚೇತನಾ ಚೇತನಗಳು ಬೇರಲ್ಲವೆಂದೂ ದೇವುಡು ಸಾಧಿಸಿ ತೋರಬಲ್ಲವರಾಗಿದ್ದಿರಬೇಕು. ಸನಾತನಿಗಳಾಗಿದ್ದರೂ ದೇವುಡು ಮಡಿವಂತರಾಗಿರಲಿಲ್ಲ. ಅನ್ಯಧರ್ಮಗಳನ್ನೂ ಧರ್ಮೀಯರನ್ನೂ ಗೌರವಿಸುತ್ತಿದ್ದರೆಂಬುದಕ್ಕೆ ಉತ್ತಂಗಿ ಚೆನ್ನಪ್ಪನವರ ಭೇಟಿ ಪ್ರಸಂಗ, ದಂತಕತೆಯಂತೆ ಸಾಕ್ಷಿಯಾಗಿ ನಿಂತಿದೆ. ಅವರ ಚಿಂತನೆಯ ಬೇರುಗಳು ಸನಾತನ ಧರ್ಮದಲ್ಲಿದ್ದರೂ ಸಮಾಜದ ಅನಿಷ್ಟ ಪದ್ಧತಿಗಳಿಗೆ ಸಂಬಂಧಿಸಿದಂತೆ ಅವರ ದೃಷ್ಟಿ ಪ್ರಗತಿಪರವಾಗಿತ್ತು.

ದೃಢಕಾಯರೂ ಸುಂದರವದನರೂ ಆದ ದೇವುಡು ಅವರದು ಹಾಸ್ಯ ಪ್ರವೃತ್ತಿ. ಹೊಟ್ಟೆಬಾಕತನವೂ ಸೇರಿದಂತೆ ಅವರ ವರ್ಣಮಯ ವ್ಯಕ್ತಿತ್ವ ಅತ್ಯಂತ ಆಕರ್ಷಕವಾದದ್ದು. ಬಡತನ, ಪ್ರಾಮಾಣಿಕತೆ, ಸ್ವಾಭಿಮಾನಗಳಿಂದಾಗಿ ಬದುಕಿಗೆ ಬಹಳಷ್ಟು ಕಷ್ಟನಿಷ್ಟುರಗಳನ್ನು ಆಹ್ವಾನಿಸಿಕೊಂಡು ಅವುಗಳನ್ನು ಛಲದಿಂದ ಎದುರಿಸಿ ಗೆದ್ದ ಸಾಹಸಿ. ಮಧುಮೇಹದಿಂದಾಗಿ (ಕತ್ತರಿಸಲ್ಪಟ್ಟ) ಕಾಲಿಲ್ಲದ ಸ್ಥಿತಿಯಲ್ಲೇ ಮಹಾದರ್ಶನದಂಥ ಕಾದಂಬರಿಯನ್ನು ರಚಿಸಿದರೆಂಬುದು ಅವರ ಹೋರಾಟ ಪ್ರವೃತ್ತಿಗೆ ನಿದರ್ಶನವಾಗಿದೆ. ಅಂತೆಯೇ ಕರ್ಮತಃ ಬ್ರಾಹ್ಮಣನಾಗಿದ್ದು. ಆಧ್ಯಾತ್ಮಿಕ ಲೋಕದಲ್ಲಿ ಸಂಚರಿಸುತ್ತಲೇ ಅತ್ಯಾಧುನಿಕ ಭ್ರಮಾಲೋಕದಲ್ಲೂ-ಚಲನಚಿತ್ರ ನಟನೆ ನಿರ್ಮಾಣ-ವಿಹರಿಸಿದ್ದು ಅವರ ಅಭಿರುಚಿಯ ವೈವಿಧ್ಯ ಮತ್ತು ವೈಚಿತ್ರ‍್ಯಗಳಿಗೆ ಹಿಡಿದ ಕನ್ನಡಿಯಾಗಿದೆ.

ಸಮಾಜಸೇವೆ, ವೇದಾಂತ ಮತ್ತಿತರ ಕ್ಷೇತ್ರಗಳಿಗೆ ಅವರಿಂದ ಸಂದಿರುವ ಕಾಣಿಕೆ ಚಿಕ್ಕದಲ್ಲವಾದರೂ ದೇವುಡು ಸಾಹಿತಿಯಾಗಿಯೇ ಹೆಸರು ಗಳಿಸಿದವರು. ನವೋದಯ ಕಾಲದ ಇತರ ಹಿರಿಯ ಸಾಹಿತಿಗಳಂತೆ ಬೇರೆ ಬೇರೆ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಮೂರು ಪ್ರಸಿದ್ಧ ಪೌರಾಣಿಕ ಕಾದಂಬರಿಗಳಲ್ಲದೆ ಐತಿಹಾಸಿಕ, ಸಾಮಾಜಿಕ, ಪತ್ತೇದಾರಿ ಮುಂತಾದ ವಿವಿಧ ಗುಂಪಿಗೆ ಸೇರಿದ ೧೨ ಕಾದಂಬರಿಗಳನ್ನು ನಾಲ್ಕು ಕಥಾ ಸಂಕಲನಗಳನ್ನೂ ನಾಲ್ಕು ನಾಟಕಗಳನ್ನೂ ಸೃಷ್ಟಿಸಿದ್ದಾರೆ. ಕರ್ನಾಟಕ ಸಂಸ್ಕೃತಿ ಎಂಬ ಅತ್ಯಮೂಲ್ಯವಾದ ಕೃತಿಯೊಂದನ್ನು ಜಾನಪದ ಕ್ಷೇತ್ರಕ್ಕೆ ನೀಡಿದ್ದಾರೆ. ಸಂಸ್ಕೃತ ಸಾಹಿತ್ಯವನ್ನು ಕುರಿತಂತೆ, ಆಧ್ಯಾತ್ಮಿಕ ವಿಚಾರಗಳನ್ನು ಕುರಿತಂತೆ ವಿಮರ್ಶೆಗಳನ್ನು ಬರೆದಿದ್ದಾರೆ. ಹಲವಾರು ಸಂಗ್ರಹ ಗ್ರಂಥಗಳೂ ಅನುವಾದ ಗ್ರಂಥಗಳೂ ಅವರ ಸಾಹಿತ್ಯ ರಾಶಿಯಲ್ಲಿವೆ. ಪತ್ರಿಕೆಗಳ ಸಂಪಾದನೆಯ ಅನುಭವ ಎಂದೂ ಅವರಿಗಿದೆ. ಎಲ್ಲಕ್ಕಿಂತ ಮಕ್ಕಳ ಸಾಹಿತ್ಯಕ್ಕೆ ದೇವುಡು ಅವರ ಕಾಣಿಕೆ ಹಿರಿದಾಗಿದೆ. ಸುಮಾರು ೧೪ ಕಥಾ ಸಂಕಲನಗಳನ್ನು ಮಕ್ಕಳಿಗೆ ಅವರು ನೀಡಿದ್ದಾರೆ. ಒಟ್ಟಾರೆ ಗಾತ್ರದಲ್ಲಿಯೂ ದೇವುಡು ಸಾಹಿತ್ಯ ದೊಡ್ಡದು.

ಎಲ್ಲೆಲ್ಲೂ ದೊಡ್ಡದನ್ನೇ ಸಾಧಿಸುವ ಗುರಿ ಹೊಂದಿದ್ದ ಕನ್ನಡದ ಈ ದೊಡ್ಡಣ್ಣ ಸಾಹಿತ್ಯ ಕ್ಷೇತ್ರದಲ್ಲಿ ಸಾಧಿಸಿದ್ದು ಸಣ್ಣದಲ್ಲ. ಪ್ರಶಸ್ತಿ, ಗೌರವಗಳು ಜೀವಂತವಾಗಿದ್ದಾಗ ಅವರಿಗೆ ಹೆಚ್ಚಾಗಿ ದೊರೆಯಲಿಲ್ಲ. ಅವರ ಮರಣಾನಂತರ (೧೯೬೨) ಮಹಾಕ್ಷತ್ರಿಯ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತು. ಸಾಹಿತ್ಯ ಪರಿಷತ್ತಿನಲ್ಲಿ ದುಡಿದಿದ್ದರಾದರೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ್ದು ಅವರನ್ನು ಅರಸಿ ಬರಲಿಲ್ಲ. ಆದಾಗ್ಯೂ ಈಚಿನ ದಿನಗಳಲ್ಲಿ ವಿಶೇಷವಾಗಿ ಶತಮಾನೋತ್ಸವದ ನಂತರ, ಅವರನ್ನು ಕುರಿತು ಸಾಹಿತ್ಯ ಸಂಸ್ಕೃತಿಯ ಅಭಿಮಾನಿಗಳು ಕಾಳಜಿ ತೋರುತ್ತಿದ್ದಾರೆ. ಅವರ ಸಾಹಿತ್ಯದ ಗಂಭೀರ ಅಧ್ಯಯನಗಳನ್ನು ಕೈಗೊಳ್ಳುತ್ತಿದ್ದಾರೆ. ಕೃತಿಗಳು ಮರು ವಿಮರ್ಶೆಗೊಳಪಡುತ್ತಿವೆ ಎಂಬುದು ಸಮಾಧಾನದ ಸಂಗತಿಯಾಗಿದೆ.

ತ.ರಾ.ಸು.

ತಳುಕಿನ ರಾಮಸ್ವಾಮಯ್ಯ ಸುಬ್ಬರಾಯ ಆಧುನಿಕ ಕನ್ನಡ ಸಾಹಿತ್ಯದ ದೊಡ್ಡ ಹೆಸರುಗಳಲ್ಲೊಂದು. ಚಿತ್ರದುರ್ಗ ಜಿಲ್ಲೆಯಲ್ಲಿ ಹುಟ್ಟಿ (೧೯೨೦) ಬೆಳೆದು ಬೆಂಗಳೂರು ಮೈಸೂರುಗಳಲ್ಲಿ ನೆಲೆಸಿದ್ದ ತ.ರಾ.ಸುಬ್ಬರಾಯರು ಕನ್ನಡದ ಅತ್ಯಂತ ಜನಪ್ರಿಯ ಮತ್ತು ಸುಪ್ರಸಿದ್ದ ಕಾದಂಬರಿಕಾರರು. ಸಂಪ್ರದಾಯ ನಿಷ್ಠ ಮನೆತನದಲ್ಲಿ ಹುಟ್ಟಿಯೂ ಚಿಕ್ಕಂದಿನಿಂದಲೂ ಬಂಡಾಯ ಪ್ರವೃತ್ತಿಯನ್ನು ಹೊಂದಿದ್ದವರು. ಅವರಲ್ಲಿದ್ದ ಈ ಸಿಡಿದೇಳುವ ಸ್ವಭಾವ ಅವರನ್ನೊಬ್ಬ ಪ್ರಗತಿಶೀಲ ಸಾಹಿತಿಯನ್ನಾಗಿಸಿತು. ತರಗತಿಯ ಓದಿನಲ್ಲಿ ಹೆಚ್ಚು ಆಸಕ್ತಿ ತೋರದ, ಮನೆಬಿಟ್ಟು ಹೊರಗೇ ಸ್ನೇಹಿತರು, ನಾಟಕ, ಸಿನಿಮಾ ಎಂದು ಅಡ್ಡಾಡುವ ಈ ಹುಡುಗನ ಉಡಾಳ ಗುಣ ತಂದೆಯಾದಿಯಾಗಿ ಮನೆಯವರ್ ಯಾರಿಗೂ ಇಷ್ಟವಾಗುತ್ತಿರಲಿಲ್ಲ. ತಾಯಿಯ ಪ್ರೀತಿ ದೊರೆಯುವಂತಿರಲಿಲ್ಲವಾಗಿ ಬಾಲ್ಯದ ಅಗತ್ಯವಾದ ವಾತ್ಸಲ್ಯದಿಂದ ತ.ರಾ.ಸು. ವಂಚಿತರಾಗಿದ್ದರು. ಆದರೂ ಅವರ ಮನೆತನದ ಪರಿಸರ ಮಾತ್ರ ಸಾಹಿತಿಯಾಗಿ ಬೆಳೆಯುವುದಕ್ಕೆ ಹೇಳಿ ಮಾಡಿದಂತಿತ್ತು. ಅವರ ತಾತ ದೊಡ್ಡ ಸುಬ್ಬಣ್ಣನವರು ಆಶುಕವಿಗಳು. ಬಯಲು ನಾಟಕಗಳನ್ನು ಬರೆದವರು. ದೊಡ್ಡಪ್ಪ ಟಿ.ಎಸ್. ವೆಂಕಣ್ಣಯ್ಯನವರು ಕನ್ನಡ ನವೋದಯ ಕಾಲದ ಶ್ರೇಷ್ಠಸಾಹಿತಿಗಳಲ್ಲೊಬ್ಬರು. ಕನ್ನಡವನ್ನು ಕಟ್ಟಿದ ಕೀರ್ತಿಗೆ ಬಾಜನರಾದವರು. ಚಿಕ್ಕಪ್ಪ ತ.ಸು.ಶಾಮರಾಯರು ಸ್ವತಃ ಸಾಹಿತಿಗಳಾಗಿದ್ದಿದ್ದಲ್ಲದೆ ಶಿಷ್ಯ ವತ್ಸಲರಾಗಿದ್ದು ಹಲವಾರು ಸಾಹಿತಿಗಳನ್ನು ಸಾಕಿ ಬೆಳೆಸಿದ ಗುರುಗಳು. ಅವರ ತಂದೆ, ಮಾವಂದಿರೂ ಸಾಹಿತ್ಯ ಕ್ಷೇತ್ರದಲ್ಲಿ ಕೈಯಾಡಿಸಿದವರೇ. “ಕನ್ನಡದ ಯಾವ ಬರಹಗಾರನಿಗೂ ಇಷ್ಟೊಂದು ಪ್ರಬುದ್ಧ ಸಾಹಿತಿಗಳ ಶ್ರೀಮಂತ ಸಂಪರ್ಕ ದೊರೆತಿರುವುದು ಕನ್ನಡ ಸಾಹಿತ್ಯೇತಿಹಾಸದಲ್ಲಿ ಕಾಣದೊರೆಯದು”[3] ಎಂಬ ಮಾತು ಸತ್ಯವಾಗಿದೆ. ಮನೆಯ ಹೊರಗೂ ಇಂಥದೇ ಪರಿಸರ ಅವರಿಗೆ ದೊರೆತದ್ದು ವಿಶೇಷ. ಚಿಕ್ಕಂದಿನಿಂದ ಸಿದ್ದವ್ವನಹಳ್ಳಿ ನಿಜಲಿಂಗಪ್ಪ, ಕೃಷ್ಣಶರ್ಮ, ಹುಲ್ಲೂರು ಶ್ರೀನಿವಾಸ ಜೋಯಿಸರಂಥವರ ಮಾರ್ಗದರ್ಶನ, ನಂತರ ಅ.ನ.ಕೃ. ಅಂಥ ಸಾಹಿತಿಗಳ ಸ್ನೇಹ, ನಾಯಕತ್ವ, ಹಲವು ಮಂದಿ ಅಧ್ಯಾಪಕರು ಪತ್ರಿಕೋದ್ಯಮಿಗಳ ಮಿತ್ರತ್ವ ಎಲ್ಲ ತ.ರಾ.ಸು.ಗೆ ದೊರೆತವು. ಈ ಎಲ್ಲ ಪ್ರಭಾವಿ ಶಕ್ತಿಗಳು ಅವರನ್ನು ಒಬ್ಬ ಸ್ವಾತಂತ್ರ್ಯಾ ಹೋರಾಟಗಾರನನ್ನಾಗಿ, ಪತ್ರಿಕೋದ್ಯಮಿಯನ್ನಾಗಿ ಎಲ್ಲಕ್ಕಿಂತ ಹೆಚ್ಚಾಗಿ ಶ್ರದ್ಧೆಯಿಂದ ಓದಿ ಬರೆಯುವ ಸಾಹಿತಿಯನ್ನಾಗಿ ರೂಪಿಸಿದವು.

ಬರಹದಿಂದಲೇ ಬದುಕಿದ್ದ (ಮರಣ ೧೯೮೪) ಬೆರಳೆಣಿಕೆಯಷ್ಟು ಮಂದಿ ಕನ್ನಡ ಸಾಹಿತಿಗಳಲ್ಲಿ ತ.ರಾ.ಸು. ಒಬ್ಬರು. ಆರ್ಥಿಕವಾಗಿ ಬಹುವಾಗಿ ಏಳುಬೀಳು ಕಂಡ ಅವರ ಬದುಕು ಅತ್ಯಂತ ವರ್ಣಮಯವೂ ಆಗಿತ್ತು. ತೀವ್ರವಾಗಿ ಬೆಳೆಯುತ್ತಿದ್ದ ಆಧುನಿಕ ಸಾಹಿತ್ಯಕ್ಕೆ ತ.ರಾ.ಸು. ಕಾಣಿಕೆ ಬಹಳ ದೊಡ್ಡದು. ಗದ್ಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಷ್ಟೇ ಅಲ್ಲದ ಅ.ನ.ಕೃ. ಅವರೊಂದಿಗೆ ಕನ್ನಡ ಓದುಗರ ಬಳಗವನ್ನೂ ಅವರು ಬೆಳೆಸಿದರೆಂಬುದನ್ನು  ಮರೆಯುವಂತಿಲ್ಲ. ಹಾಗೆಂದು ಬದುಕಿಗಾಗಿ, ಭಾಷೆಗಾಗಿ ಬೇಕಾಬಿಟ್ಟಿ ಬರೆದವರಲ್ಲ. ಗಂಭೀರ ಓದಿಗೆ ಗ್ರಾಸವಾದ ಎಲ್ಲ ಗಹನತೆಗಳು ಅವರ ಕೃತಿಗಳಲ್ಲಿವೆ. ಇಂಗ್ಲಿಷ್ ಸಾಹಿತ್ಯದ ಮತ್ತು ದೇಶೀಯ ಇತಿಹಾಸದ ಶ್ರಮಪೂರ್ಣ, ಶ್ರದ್ಧಾಪೂರ್ಣ ಅಧ್ಯಯನವನ್ನು ಅವರು ಮಾಡಿದ್ದರು. ಅವರಿಗಿದ್ದ ಶ್ರೇಷ್ಠವಾಗ್ಮಿತೆಯೂ ಅವರ ಪ್ರತಿಭೆಯ ಇನ್ನೊಂದು ಮುಖವಾಗಿದ್ದು ಖ್ಯಾತಿ ತಂದುಕೊಟ್ಟಿತು.

ಪ್ರಗತಿಶೀಲ ಚಳವಳಿಯೊಂದಿಗೇ ಗುರುತಿಸಿಕೊಂಡು ಅದರ ಬಹು ಮುಖ್ಯ ಲೇಖಕರಲ್ಲಿ ಒಬ್ಬರಾದ ತ.ರಾ.ಸು. ಸುಮಾರು ನೂರು ಕೃತಿಗಳನ್ನು ರಚಿಸಿದ್ದಾರೆ-ನೂರಕ್ಕೆ ಮೂರು ಮಾತ್ರ ಕಡಿಮೆ. ಅವುಗಳಲ್ಲಿ ಸುಮಾರು ೭೦ ಕಾದಂಬರಿಗಳೇ ಆಗಿವೆ. ಕಾದಂಬರಿಯಲ್ಲದೆ ಸಣ್ಣಕತೆ ಮತ್ತು ನಾಟಕ ಪ್ರಕಾರಗಳಲ್ಲೂ ಅವರು ಸೃಜನಶೀಲ ಕೃತಿಗಳನ್ನು ರಚಿಸಿದ್ದಾರೆ. ಇವಲ್ಲದೆ ಭಾಷಾಂತರಗಳು, ಜೀವನಚರಿತ್ರೆಗಳು, ಸಂಪಾದನೆಗಳು ಅವರ ಕೃತಿ ರಾಶಿಯಲ್ಲಿವೆ. ಆದಾಗ್ಯೂ ತ.ರಾ.ಸು. ನಮ್ಮ ಮೊದಲ ಸಾಲಿನ ಕಾದಂಬರಿಕಾರರಾಗಿಯೇ ಗೌರವಿಸಲ್ಪಡುತ್ತಿದ್ದಾರೆ.

ಬಹುಸಂಖ್ಯೆಯಲ್ಲಿ ಅವರು ರಚಿಸಿರುವ ಕಾದಂಬರಿಗಳಲ್ಲಿ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳು ಮುಖ್ಯವಾಗಿವೆ. ಸಾಮಾಜಿಕ ಕಾದಂಬರಿಗಳು ಸಾಂಪ್ರದಾಯಿಕತೆಯನ್ನು ವಿರೋಧಿಸುತ್ತಾ ಹೊಸ ಸಮಾಜ ನಿರ್ಮಾಣದ ಹಂಬಲ ಹೊತ್ತಿದ್ದರೆ, ಐತಿಹಾಸಿಕ ಕೃತಿಗಳು ಪೂರ್ವಿಕರ ಜೀವನವನ್ನು ಅವರ ಶೌರ್ಯ ಸಾಹಸಗಳನ್ನು, ಅಂದಿನ ಸಮಾಜವನ್ನು ಸಹಜವಾಗಿ ಕಟ್ಟಿಕೊಡುವ ಉದ್ದೇಶವನ್ನು ಹೊಂದಿವೆ. ತಮ್ಮ ಹುಟ್ಟೂರು ಚಿತ್ರದುರ್ಗದ ಇಡಿಯ ಇತಿಹಾಸಕ್ಕೆ ಜೀವ ನೀಡಿರುವ ಅವರ ಐತಿಹಾಸಿಕ ಕಾದಂಬರಿ ಸರಣಿ ನಮ್ಮ ಸಾಹಿತ್ಯ ಇತಿಹಾಸಗಳಿಗೆ ನೀಡಿರುವ ಬೆಲೆಯುಳ್ಳ ಕೊಡುಗೆಯಾಗಿದೆ. ಈಚಿನ ಬೃಹತ್ಕೃತಿ ದುರ್ಗಾಸ್ತಮಾನ ಇವುಗಳಿಗೆಲ್ಲ ಕಿರೀಟ ಪ್ರಾಯವಾಗಿದೆ. ಅವರ ಹಲವಾರು ಕಾದಂಬರಿಗಳು ಚಲನಚಿತ್ರಗಳಾಗಿ ಅತ್ಯಂತ ಯಶಸ್ವಿಯಾಗಿವೆ.

ಪೌರಾಣಿಕ ಕಾದಂಬರಿ ಪ್ರಕಾರದಲ್ಲಿ ಅವರು ಬೆಳಕು ತಂದ ಬಾಲಕ ಮತ್ತು ನಾಲ್ಕು x ನಾಲ್ಕು = ಒಂದು ಎಂಬ ಎರಡು ಕೃತಿಗಳನ್ನು ರಚಿಸಿ ಕಾದಂಬರಿ ರಚನೆಯಲ್ಲಿ ವಸ್ತು ವೈವಿಧ್ಯವನ್ನು ಮೆರೆದಿದ್ದಾರೆ.

ಕನ್ನಡ ಸಾಹಿತ್ಯ ಪ್ರೇಮಿಗಳು ತ.ರಾ.ಸು. ಅವರಿಗೆ ಹಲವು ಬಗೆಯಲ್ಲಿ ತಮ್ಮ ಕೃತಜ್ಞತೆಗಳನ್ನು ಸೂಚಿಸಿದ್ದಾರೆ. ಚಿತ್ರದುರ್ಗ, ಪಾಂಡವಪುರ, ಹುಬ್ಬಳ್ಳಿ ಮುಂತಾದ ಕಡೆಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಅವರನ್ನು ಅಭೂತ ಪೂರ್ವವಾಗಿ ಸನ್ಮಾನಿಸಲಾಗಿದೆ. ಅಭಿನಂದನಾ ಗ್ರಂಥ ಅರ್ಪಿಸಲಾಗಿದೆ. ಅವರ ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು, ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿಗಳ ಪುರಸ್ಕಾರಗಳು ದೊರೆತಿವೆ. ೧೯೬೯ರಲ್ಲಿ ಪಶ್ಚಿಮ ಜರ್ಮನಿ ಮತ್ತು ಸೋವಿಯತ್ ರಷ್ಯಾ ದೇಶಗಳ ಪ್ರವಾಸವನ್ನೂ ಅವರು ಕೈಗೊಂಡಿದ್ದರು. ಹಿಂದಿ ಮತ್ತಿತರ ಭಾಷೆಗಳಲ್ಲಿ ಅವರ ಕಾದಂಬರಿಗಳು ಚಲನಚಿತ್ರಗಳಾಗುವ ರಾಷ್ಟ್ರಮಟ್ಟದ ಖ್ಯಾತಿಯನ್ನು ಅವರಿಗೆ ತಂದು ಕೊಟ್ಟವು-ಹಂಸಗೀತೆ (ಹಿಂದಿ) ನಾಗರಹಾವು (ಹಿಂದಿ, ತಮಿಳು, ತೆಲಗು). ಆದರೂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಯ ಪಟ್ಟದಂಥ ಗೌರವ ಅವರಿಗೆ ಸಲ್ಲಲ್ಲಿಲ್ಲವೆಂಬುದು ಕನ್ನಡಿಗರಿಂದಾದ ಕರ್ತವ್ಯ ಚ್ಯುತಿಯೆಂದೇ ತಿಳಿಯಬಹುದು.

ಅನುಪಮ ನಿರಂಜನ

ಕನ್ನಡದ ಲೇಖಕಿಯರಲ್ಲಿ ಶ್ರೇಷ್ಠರೂ ಅತಿ ಜನಪ್ರಿಯರೂ ಆಗಿದ್ದರು. ಇಂದಿಗೂ ಆ ಸ್ಥಾನದಲ್ಲೇ ಇರುವವರು ಅನುಪಮಾ ನಿರಂಜನರು ಎಂಬ ಮಾತಿಗೆ ಎರಡಿಲ್ಲವೆನಿಸುತ್ತದೆ ಸಾಹಿತ್ಯಿಕ ಗುಣದಲ್ಲಾಗಲಿ ಕೃತಿಗಳ ಸಂಖ್ಯೆಯಲ್ಲಾಗಲಿ ಅವರನ್ನು ಮೀರುವ ಲೇಖಕಿ ಇನ್ನೂ ಬಂದಿಲ್ಲವೆಂದೇ ಹೇಳಬಹುದು. ಬಹುಶಃ ಬದುಕಿನಲ್ಲಿ ‘ಸಿಹಿ ಕಹಿ’ಗಳನ್ನು ಅವರಂತೆ ದಟ್ಟವಾಗಿ ಅನುಭವಿಸಿರುವ ಮತ್ತೊಬ್ಬ ಲೇಖಕಿ (ಮಹಿಳೆಯರಿದ್ದಾರು) ಇಲ್ಲವೆಂಬುದೂ ಉತ್ಪ್ರೇಕ್ಷೆಯಾಗಲಾರದು.

೧೯೩೪ರಲ್ಲಿ ಶಿವರಾಮಯ್ಯ ಮತ್ತು ಲಕ್ಷ್ಮಿ ದಂಪತಿಗೆ ಮೊದಲ ಮಗಳಾಗಿ ತೀರ್ಥಹಳ್ಳಿಯಲ್ಲಿ ಜನ್ಮ ತಳೆದ ಅನುಪಮಾ ಕುಟುಂಬದವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ವೈದ್ಯಕೀಯ ಶಿಕ್ಷಣ ಪಡೆದ ಅನುಪಮಾ (ನಿಜನಾಮಧೇಯ-ವೆಂಕಟಲಕ್ಷ್ಮಿ) ವೃತ್ತಿಯಿಂದ ವೈದ್ಯರಾಗಿ ಜನರ ಅನುರಾಗ ಗಳಿಸಿದರು. ಆಗಲೇ ಪ್ರಸಿದ್ದ ಸಾಹಿತಿಯಾಗಿದ್ದ ನಿರಂಜನ ಅವರನ್ನು ಪ್ರೀತಿಸಿ ಮದುವೆಯಾದರು. ೧೯೫೬ರಷ್ಟು ಹಿಂದೆಯೇ ನಡೆದ ಈ ವಿವಾಹ, ಪ್ರೇಮ ವಿವಾಹ ಅಂತರ್ ಜಾತೀಯ ವಿವಾಹ ಎಂಬ ಕ್ರಾಂತಿಯ ಕಿಡಿಗಳನ್ನು ಹೊಂದಿತ್ತು. ಚಿಕ್ಕಂದಿನಲ್ಲೇ ಸಂಪ್ರದಾಯಸ್ಥ ಸಮಾಜವನ್ನು ಎದುರಿಸಿದ ಈ ‘ವೀರ ವನಿತೆ’ ಮುಂದೆ ತಮ್ಮ ಸಂಸಾರದ ಕೋಟಲೆಗಳನ್ನು ಎದುರಿಸಬೇಕಾಯಿತು. ಅವರ ದಾಂಪತ್ಯದ ಬಹುಭಾಗ ಪತಿಯ ಮತ್ತು ತಮ್ಮ ಮಾರಕ ವ್ಯಾಧಿಗಳೊಂದಿಗಿನ ಸೆಣಸಾಟದ, ಬಳಲಿಕೆಯ ಪರ್ವವಾಯಿತು. ಈ ನೋವಿನ ನಂಜನ್ನೆಲ್ಲ ನುಂಗಿ ನುಡಿಯ ಅಮೃತ ಸೇಚನೆಯನ್ನು ಅನುಪಮಾ ಮಾಡುತ್ತಲೇ ಬಂದರು. ನಿಜವಾದ ಅರ್ಥದಲ್ಲಿ ಅವರದೊಂದು ಮಾದರಿಯ ಬದುಕಾಯಿತು.

೧೯೯೧ರಲ್ಲಿ ತೀರಿಕೊಂಡ ಅನುಪಮಾ ನಿರಂಜನ ಅವರು ಅಷ್ಟರಲ್ಲೇ ೬೦ ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದರು. ಹದಿಮೂರರ ಎಳೆ ಹರೆಯದಿಂದಲೇ ತೊಡಗಿದ ಅವರ ಬರವಣಿಗೆ ‘ಧಾರಾವಾಹಿ’ಯಾಗಿ ಸಾಗಿತು. ಒಬ್ಬ ಜವಾಬ್ದಾರಿಯುತ ವೈದ್ಯೆಯಾಗಿ ಅನುಪಮಾ ಅತ್ಯುಪಯುಕ್ತ ವೈದ್ಯಕೀಯ ಸಾಹಿತ್ಯ ರಚಿಸಿದ್ದಾರೆ. ‘ವಧುವಿಗೆ ಕಿವಿಮಾತು’, ‘ದಾಂಪತ್ಯ ದೀಪಿಕೆ’, ‘ತಾಯಿ ಮಗು’, ೧೦ ಕ್ಕಿಂತ ಹೆಚ್ಚು ಬಾರಿ ಮುದ್ರಣಗೊಂಡಿರುವ ಅತ್ಯಂತ ಜನಪ್ರಿಯ ವೈದ್ಯಕೀಯ ಬರಹಗಳು. ಅಂತೆಯೇ ದಿನಕ್ಕೊಂದು ಕಥೆ ಎಂಬ ಸಾಹಿತ್ಯ ಮಾಲಿಕೆಯ ಮೂಲಕ ಶಿಶು ಸಾಹಿತ್ಯ ರಚನೆಯಲ್ಲಿಯೂ ದಾಖಲೆ ನಿರ್ಮಿಸಿದ್ದಾರೆ. ಮಹಿಳೆಯಾಗಿ ಈ ಎರಡೂ ಕ್ಷೇತ್ರಗಳಲ್ಲಿ ಅವರಂತೆ ಕೀರ್ತಿ ಗಳಿಸಿದವರು ಮತ್ತಿಲ್ಲ. ಶುದ್ಧ ಸಾಹಿತ್ಯ ಕೃತಿಗಳಾಗಿ ಅವರ ಅನೇಕ ಕಾದಂಬರಿಗಳು ಕಥೆಗಳು ಪ್ರಸಿದ್ಧವಾಗಿವೆ. ಕಾದಂಬರಿಕಾರ್ತಿಯಾಗಿಯೇ ಅನುಪಮಾ ಗುರುತಿಸಲ್ಪಡುತ್ತಾರೆ. ‘ಕಣ್ಮಣಿ’, ‘ಹೃದಯ ಸಮುದ್ರ’, ‘ಒಂದು ಗಿಣಿಯ ಕಥೆ’ ಮುಂತಾದವು ಅವರ ಕಥಾ ಸಂಕಲನಗಳು, ‘ಹೃದಯ ವಲ್ಲಭ’, ‘ಹಿಮದ ಹೂ’, ‘ಋಣಿ’, ‘ಅನಂತಗೀತ’, ‘ಶ್ವೇತಾಂಬರಿ’, ‘ಎಳೆ’, ‘ಘೋಷ’ ಮುಂತಾದವು ಅವರ ಕಾದಂಬರಿಗಳು. ನಾಟಕ, ಕಾವ್ಯ ಕ್ಷೇತ್ರಗಳಲ್ಲೂ ಕೈಯಾಡಿಸಿದ್ದಾರೆ. ಅವರ ಕಾದಂಬರಿಗಳು ನಾಲ್ಕಾರು ಆವೃತ್ತಿಗಳನ್ನು ಕಂಡು ಇತರ ಭಾಷೆಗಳಿಗೆ ಅನುವಾದಗೊಂಡು ತಮ್ಮ ಜನಪ್ರಿಯತೆಯನ್ನು ಸಾಬೀತು ಮಾಡಿವೆ.

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (ಮುಂಬೈ ೧೯೭೮)ಯೂ ಸೇರಿದಂತೆ ಹಲವು ಮನ್ನಣೆಗಳು ಅವರಿಗೆ ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಂಜನಗೂಡು ತಿರುಮಲಾಂಬಾ ಪ್ರಶಸ್ತಿಗಳನ್ನು ಅವರಿಗೆ ನೀಡಲಾಗಿದೆ. ‘ಅನುಪಮಾ ಅಭಿನಂದನ’ ಎಂಬ ಒಂದು ಗ್ರಂಥವನ್ನು ಅವರಿಗೆ ಸಮರ್ಪಿಸಲಾಗಿದೆ. ಮಹಿಳಾ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗಾಗಿ ಅವರ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇವೆಲ್ಲ ನಾಡು ಅವರಿಗೆ ತೋರಿದ ಪ್ರೀತಿ ಗೌರವಗಳಿಗೆ ಸಾಕ್ಷಿಯಾಗಿವೆ.

ಅವರ ಕೃತಿಗಳಲ್ಲಿ ಮಾಧವಿಯೊಂದೇ ಪುರಾಣ ಕಥೆಯನ್ನು ಆಧರಿಸಿದ್ದು ಕ್ರಾಂತಿಯ ಕಿಡಿ ಇಲ್ಲಿ ಉರಿಯಾಗಿ ಪ್ರಜ್ವಲಿಸಿದೆ. ಓದುಗ ವಿಮರ್ಶಕರಿಬ್ಬರ ಮೆಚ್ಚುಗೆಯನ್ನು ಪಡೆದ ವಿಶಿಷ್ಟ ಕೃತಿ ಇದಾಗಿದೆ. ಈ ಕಾರಣಕ್ಕಾಗಿ ಪೌರಾಣಿಕ ಕಾದಂಬರಿಕಾರರ ಜೊತೆಯಲ್ಲಿ ಅನುಪಮಾ ಮುಖ್ಯವಾಗಿ ಪರಿಗಣಿಸಲ್ಪಡುತ್ತಾರೆ.

ಸತ್ಯಕಾಮ

ಕನ್ನಡ ಪೌರಾಣಿಕ ಕಾದಂಬರಿ ಎಂದರೆ ದೇವುಡು ನರಸಿಂಹಶಾಸ್ತ್ರಿ ಎಂಬ ಹೆಸರು ಕೇಳಿ ಬರುತ್ತಿತ್ತು. ನಂತರ ಆ ಕ್ಷೇತ್ರವನ್ನು ಆಕ್ರಮಿಸಿಕೊಂಡು ಅನಭಿಷಿಕ್ತ ದೊರೆಯಾಗಿ ಆಳಿದವರು ಸತ್ಯಕಾಮ. ಅವರ ನಿಜ ನಾಮಧೇಯ ಅನಂತಾಚಾರ್ಯ ಕೃಷ್ಣಾಚಾರ್ಯ ಶಹಾಪೂರ. ಈ ವ್ಯಕ್ತಿಯ ಜೀವನ ಎಲ್ಲರಂತಲ್ಲ. ವಿಲಕ್ಷಣ, ವಿಚಿತ್ರ, ವಿಸ್ಮಯಕರ, ಮುಂದೊಂದು ಕಾಲಕ್ಕೆ ಪುರಾಣ ಪ್ರಪಂಚಕ್ಕೆ ಸೇರಬಹುದಾದಷ್ಟು ಸ್ವಾರಸ್ಯಕರವಾದದ್ದು.

ಅನಂತ ಕೃಷ್ಣಾಚಾರ್ಯರು (ಬಾಬು) ಹುಟ್ಟಿದ್ದು ಉತ್ತರ ಕರ್ನಾಟಕದ ಜಮಖಂಡಿ ಹತ್ತಿರ ಮೈಗೂರು ಎಂಬಲ್ಲಿ. ಅವರ ಊರು ಬಿಜಾಪುರ ಜಿಲ್ಲೆಯ ಕೃಷ್ಣಾನದಿ ದಡದ ಗಲಗಲಿ ಎಂಬ ಪ್ರಸಿದ್ಧ ಅಗ್ರಹಾರ. ತಂದೆ ತಾಯಿಗಳು ಸಾತ್ವಿಕ ವೈಷ್ಣವ ಬ್ರಾಹ್ಮಣರಾದ ಕೃಷ್ಣಾಚಾರ್ಯ ಮತ್ತು ರುಕ್ಮಣೀಬಾಯಿ. ಇವರ ಅಷ್ಟ ಸಂತಾನದಲ್ಲಿ ಮೊದಲಿಗರೇ ಅನಂತ ಕೃಷ್ಣಾಚಾರ್ಯ. ಹುಟ್ಟಿದ್ದು ೧೯೨೦ರ ಏಪ್ರಿಲ್ ೧೬ರಂದು. ಬಡತನದ ಮಡಿಲಲ್ಲೇ ಬೆಳೆದರೂ ಸತ್ಯಕಾಮರದ್ದು ಹುಟ್ಟಾ ಗಟ್ಟಿಮುಟ್ಟಾದ ಶರೀರ. ಮನಸ್ಸೂ ಗಟ್ಟಿ. ಹಸಿವನ್ನು ಯಾರಿಗೂ ಹೇಳದೆ ತಡೆದುಕೊಳ್ಳುವ ಹಟ. ಹನ್ನೊಂದು ದಿನದ ಉಪವಾಸವನ್ನು ಬಾಲ್ಯದಲ್ಲೇ ಕಟ್ಟುನಿಟ್ಟಾಗಿ ಮಾಡಿದ್ದರು. ಅಲ್ಲೇ ಅವರಲ್ಲಿ ಸಾಧಕನ ಲಕ್ಷಣಗಳು ಕಾಣಿಸಿಕೊಂಡವು. ಹುಡುಗನದು ತುಂಟ ಸ್ವಭಾವ. ಓದಿದ್ದು ಆಗಿನ ಮುಲ್ಕಿ ಪರೀಕ್ಷೆ (೧೯೩೪) ಬಾಗಲಕೋಟೆಯ ಪ್ರೌಢಶಾಲೆಗೆ ಸೇರಿಸಿದರೂ ಇರದೆ ಹಿಂದಿರುಗಿದರು. ಆದರೆ ಕೇಶವಶರ್ಮ ಎಂಬುವವರಿಂದ ಕನ್ನಡ ಕಾವ್ಯಗಳನ್ನೂ ಸಂಸ್ಕೃತ ಸುಭಾಷಿತಗಳನ್ನು ಮನೆಪಾಠದಲ್ಲಿ ಹೇಳಿಸಿಕೊಂಡು ಕಲಿತಿದ್ದರು. ಹದಿಹರೆಯದಲ್ಲಿ ಬೇಂದ್ರೆ, ಪುಟ್ಟಪ್ಪನವರ ಕವನಗಳನ್ನು ಓದಿದ್ದರು. ಬಾಳೂ ಎಂಬ ಗೆಳೆಯ ಅವುಗಳನ್ನು ಹಾಡಿದ್ದನ್ನು ಕೇಳಿದ್ದರು. ‘ಜೀವನ ನಾಟ್ಯ ವಿಲಾಸೀ ಸಂಘ’ ಸ್ಥಾಪಿಸಿ ಶೀರಂಗ, ಪುಟ್ಟಪ್ಪ ಎನ್ಕೆ, ಬೇಂದ್ರೆ ಮುಂತಾದವರ ನಾಟಕಗಳನ್ನು ಆಡಿದ್ದರು. ೧೯೪೧ರ ಹೊತ್ತಿಗೆ ಸ್ವತಃ ಆಶು ನಾಟಕವೊಂದನ್ನು ರಚಿಸಿಯೂ ಇದ್ದರು. ಈ ಎಲ್ಲ ಚಟುವಟಿಕೆಗಳು ಸತ್ಯಕಾಮರಲ್ಲಿದ್ದ ಕುಶಲ ಕಲಾಕಾರನನ್ನು ಬಯಲಿಗೆಳೆಯುತ್ತಲೇ ಅವರ ಸಾಹಿತ್ಯ ರಚನಾ ಶಕ್ತಿಯನ್ನೂ ಪ್ರೇರಿಸಿದ್ದವು.

ಹುಟ್ಟೂರಿನ ಇದೇ ವಾತಾವರಣ ಅನಂತಕೃಷ್ಣಾಚಾರ್ಯ ದೇಶಭಕ್ತಿಯನ್ನೂ ಪ್ರೇರಿಸಿತ್ತು. ಆ ಕಾಲಕ್ಕೆ ಗಲಗಲಿ ಸ್ವಾತಂತ್ರ್ಯಾ ಹೋರಾಟದ ಜ್ವಾಲೆ ಉರಿಯುತ್ತಿದ್ದ ಊರು. ಅಸಹಕಾರ ಚಳುವಳಿ, ವಿದೇಶೀ ವಸ್ತ್ರದಹನ, ಉಪ್ಪಿನ ಸತ್ಯಾಗ್ರಹ ಎಲ್ಲದರಲ್ಲೂ ಮುಂದಿದ್ದ ನಾಯಕರು ಆ ಪರಿಸರದವರೇ ಆಗಿದ್ದರು. ಬಾಬೂರಾಯರು, ಕೌಜಲಗಿ ಹನುಮಂತರಾಯರು (ಕರ್ನಾಟಕದ ಗಾಂಧಿ) ಕಾಕಾ ಕಾರಖಾನೀಸ, ಕಾಂಖಂಡಕಿ ರಾಮಾಚಾರ್ಯ ಮುಂತಾದ ಹೋರಾಟಗಾರರ ಪ್ರಭಾವದಿಂದಾಗಿ ಸತ್ಯಕಾಮ ಶಾಲಾದಿನಗಳಲ್ಲೇ ಸ್ವಾತಂತ್ರ‍್ಯ ಚಳುವಳಿಯಲ್ಲಿ ಧುಮುಕಿದರು. ಈ ಉಜ್ವಲ ರಾಷ್ಟ್ರಭಕ್ತನ ಹೋರಾಟದ್ದೇ ಒಂದು ಪ್ರತ್ಯೇಕ ಕಥೆ. ಘೋಷಣೆ ಕೂಗುವುದು, ಟಪ್ಪಾಲು ಒಡೆಯುವುದು, ಚಾವಡಿ, ಸ್ಟೇಷನ್ ಸುಡುವುದು, ನೋಟೀಸ್ ಹಚ್ಚುವುದು ಇತ್ಯಾದಿ ಹಿಂಸಾತ್ಮಕ ಕ್ರಿಯೆಗಳಲ್ಲೂ ತೊಡಗುತ್ತಿದ್ದ ಇವರು ಅಂಚೆ ರನ್ನರನನ್ನು ಹಿಡಿಯುವ ಯತ್ನದಲ್ಲಿ ಒಮ್ಮೆ ಪೋಲೀಸರ ಕೈಗೆ ಸಿಕ್ಕಿ ಬಿದ್ದರು. (೧೯೪೩). ಮಿತ್ರನೊಬ್ಬ ಪೋಲೀಸರ ಗುಂಡೇಟು ತಿಂದು ಸೆರೆಯಾದ. ಇವರು ವೇಷ ಮರೆಸಿ ಪೋಲೀಸರಿಂದ ತಪ್ಪಿಸಿಕೊಂಡು ಕಣ್ಮರೆಯಾದರು.

ಇಲ್ಲಿಂದ ತೊಡಗಿತು ಸತ್ಯಕಾಮರ ಅಜ್ಞಾತವಾಸ. ಅನ್ನ, ಬಟ್ಟೆ, ಕಾಣದೆ ಕರ್ನಾಟಕ, ಹೈದರಾಬಾದ್, ಮುಂಬಯಿ ಪ್ರಾಂತಗಳನ್ನೆಲ್ಲ ಅಲೆದರು. ಊರಿಗೊಂದು ರೂಪ, ಹೆಸರು ಹಚ್ವಿಕೊಂಡರು. ಜಂಗಮ ವೇಷದಲ್ಲಿ ಗುಲ್ಬರ್ಗಾದ ಶೈವ ಸಂಸಾರವೊಂದರಲ್ಲಿ ಕೆಲವು ದಿನ ತಂಗಿದ್ದು ಸತ್ಕರಿಸಿಕೊಂಡದ್ದು, ಉಡುಪಿಗೆ ಹೋಗಿ ಮಾಧ್ವ ಮಠದಲ್ಲಿ ಸಂಸ್ಕೃತ ಕಲಿತದ್ದು ಇದೇ ಅವಧಿಯಲ್ಲಿ. ಮಿತ್ರರ ಮದುವೆಗಾಗಿ ಊರಿಗೆ ಬಂದಾಗ ಪೋಲೀಸರ ಕಣ್ಣಿಗೆ ಬಿದ್ದು ಕೈಗೆ ಸಿಕ್ಕಾಗ ತಪ್ಪಿಸಿಕೊಂಡದ್ದು ಉಡುಪಿಯಲ್ಲಿ ಕಲಿತ ತುಳು ಮಾಡನಾಡಿಯೇ. ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹಲವು ಬಾರಿ ಜೇಲುವಾಸ ಅನುಭವಿಸಿದ್ದರು. ಆದಾಗ್ಯೂ ಈ ಸಾಹಸೀ ವೀರ ಬ್ರಿಟಿಷರಿಗೊಂದು ಸವಾಲಾಗಿಯೇ ಉಳಿದಿದ್ದರು. ಅವರನ್ನು ಹುಡುಕಿ ಕೊಟ್ಟವರಿಗೆ ಸರಕಾರ ಬಹುಮಾನ ಘೋಷಿಸಿತ್ತಂತೆ.

ಇಂಥ ಸ್ವಾತಂತ್ರ್ಯಾ ಸಂಗ್ರಾಮವೀರ ಸ್ವಾತಂತ್ರ್ಯಾ ನಂತರ ರಾಜಕೀಯ ಕ್ಷೇತ್ರದಲ್ಲಿ ನಾಪತ್ತೆಯೇ ಆದರು. ಯಾವ ಪಕ್ಷವನ್ನೂ ಕಟ್ಟಿ ಅಧಿಕಾರ ಪಡೆದು ಆಳಿ ಋಣಕ್ಕೆ ಪ್ರತಿಫಲ ಪಡೆಯುವ ಗೋಜಿಗೆ ಹೋಗಲಿಲ್ಲ. ಸ್ವತಂತ್ರ ಸರಕಾರವೇ ಅವರ ಹೋರಾಟವನ್ನು ಗೌರವಿಸಿ ಮೈಸೂರಿನಲ್ಲಿ ಅವರಿಗಷ್ಟು ಜಮೀನು ಕೊಟ್ಟು ಋಣ ತೀರಿಸಿತು.

ಸತ್ಯಕಾಮ ಎಂಬುದು ಉಪನಿಷತ್ತುಗಳಿಂದ ಅವರು ಆಯ್ದುಕೊಂಡು ಹೆಸರು. ಅವರ ಬದುಕು ಹೆಸರನ್ನು ಅನ್ವರ್ಥವಾಗಿಸಿದೆ. ಸತ್ಯವನ್ನು ಅರಸುತ್ತ ಅವರು ಸಾಧಕರಾದರು. ದೇಶದಲ್ಲಿ ಅದರಲ್ಲೂ ಕನ್ನಡ ಸಾಹಿತಿಗಳಲ್ಲಿ ಉಳಿದವರು ಹಿಡಿಯದ ಹಾದಿಯಲ್ಲಿ ನಡೆದು ಸತ್ಯ ಶೋಧನೆಯಲ್ಲಿ ತೊಡಗಿದರು. ಯಾರೂ ಒಳ್ಳೆಯ ಭಾವನೆ ಹೊಂದಿರದ ತಂತ್ರ ಪ್ರಪಂಚವನ್ನು ಅವರು ಹೊಕ್ಕರು. ಅಲೆಮಾರಿಯಾದರು, ಗುಹೆಗಳಲ್ಲಿ ಹುದುಗಿದರು. ಸ್ಮಶಾನಗಳಲ್ಲಿ ಹೆಣಗಳೊಂದಿಗೆ ಹೆಣಗಿದರು. ‘ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ’ ಎಂಬಂಥ ಬದುಕು ನಡೆಸಿದರು. ಸಂನ್ಯಾಸಿಯಾಗಿದ್ದೇ ಸ್ತನ ಪೂಜೆ ನಡೆಸಿದರು. ಮದ್ಯ, ಮಾಂಸ, ಮೈಥುನ, ಮಂತ್ರ, ಮುದ್ರಾ ಈ ಪಂಚ ‘ಮ’ಗಳ ಒಡನಾಡಿದರು. ಸಾಮಾನ್ಯನಿಗೆ ನಿಗೂಢವಾಗಿ ಕಾಣುವ ನಿರ್ಭಯದ ಸಾಹಸಗಳನ್ನು ಮಾಡಿ ವಿಶೇಷ ಸಿದ್ಧಿಗಳನ್ನು ಪಡೆದಿದ್ದರು. ಸ್ವಾತಂತ್ರ್ಯಾವನ್ನು ಹೊಂದಿ ಸಂತೋಷವನ್ನು ಅನುಭವಿಸಿದರು. ಈ ಸಂತೋಷ ಮತ್ತು ಅಭಯ ತಂತ್ರ ಸಾಧನೆಯ ಗುರಿಯಾಗಿತ್ತು ಅವರಿಗೆ. ತಂತ್ರವನ್ನು ಅವರೆಂದೂ ವಾಮಾಚಾರಕ್ಕೆ ಬಳಸಿಕೊಳ್ಳಲಿಲ್ಲ. ಸಾಮಾಚಾರಿಯಾಗಿಯೇ ಇದ್ದರು. ಸಂಪ್ರದಾಯಸ್ಥರಿಗಾಗಲೀ ವಿಚಾರವಾದಿಗಳಿಗಾಗಲಿ ಉಭಯತ್ರರಿಗೂ ಮೆಚ್ಚುಗೆಯಾಗದ ಆದರೆ ತಮಗೇ ಸರಿ ಎನಿಸಿದ, ಸಂತೋಷ ನೀಡಿದ, ವಿಚಿತ್ರ ವಿಶೇಷ ತಂತ್ರಲೋಕದ ಬದುಕು ನಡೆಸಿದವರು ಸತ್ಯಕಾಮ. ಸತ್ಯಕಾಮನೆಂಬ ಮಾತು ಕೃಷ್ಣನಿಗೆ ಸಲ್ಲುತ್ತದಾಗಿ ಅವರ ಅಂಕಿತನಾಮ (ಕೃಷ್ಣಾಚಾರ್ಯ)ಕ್ಕೆ ಅದೊಂದು ಪರ್ಯಾಯವೂ ಆಗಿದೆ.

ಅಜ್ಜ ಅಣ್ಣಾಚಾರ್ಯರಿಂದ ಪಡೆದಿದ್ದ ಅಂಡಲೆಯುವ ಸ್ವಭಾವ ಅವರನ್ನು ಯಾವ ಸ್ಥಳದಲ್ಲಿಯೂ ನಿಲ್ಲಗೊಡದಂತೆ ಯಾವ ವಿಷಯಕ್ಕೂ ಅಂಟಿಕೊಳ್ಳಲು ಬಿಡಲಿಲ್ಲವೆನಿಸುತ್ತದೆ. ಅಜ್ಞಾತರಾಗಿರದಿದ್ದ ಕಾಲದಲ್ಲಿ ಕೆಲವು ಕಾಲ ಅವರು ಪತ್ರಿಕೋದ್ಯಮವನ್ನು ಆತುಕೊಂಡದ್ದುಂಟು. ಮೊಹರೆ ಹನುಮಂತರಾಯರ ಸಂಯುಕ್ತ ಕರ್ನಾಟಕ, ಶ್ರೀ ಎಂಬ ಸ್ವಂತ ಪತ್ರಿಕೆ, ಕಲ್ಕಿ, ಕಲ್ಯಾಣ ಹೀಗೆ ಬೇರೆ ಬೇರೆ ಪತ್ರಿಕೆಗಳಲ್ಲಿ ದುಡಿದು, ಬರೆದು ಸಂಪಾದಿಸಿದ ಅನುಭವ ಅವರದಾಯಿತು. ಮತ್ತೆ ಇಲ್ಲೆಲ್ಲಿಯೂ ನೆಲೆ ನಿಲ್ಲಲಿಲ್ಲ.

ಸತ್ಯಕಾಮರು ನೆಲೆ ನಿಂತಿದ್ದರೆಂದು ಹೇಳಬಹುದಾಗಿದ್ದರೆ ಒಂದು ಸಾಹಿತ್ಯ ಕ್ಷೇತ್ರದಲ್ಲಿ, ಇನ್ನೊಂದು ಕೃಷಿ ಕ್ಷೇತ್ರದಲ್ಲಿ ಎನ್ನಬೇಕು. ಹುಟ್ಟಿದೂರಿನಲ್ಲಿ ಸರಕಾರ ೧೯೫೭-೫೮ರಲ್ಲಿ ಅವರಿಗೆ ನಾಲ್ಕು ಎಕರೆ ಭೂಮಿ ಕೊಟ್ಟತ್ತಷ್ಟೆ. ಈ ನೆಲ ಫಲವತ್ತಾಗಿರಲಿಲ್ಲ. ಇದನ್ನು ಬೀಗರಿಗೆ ಬದಲಾಯಿಸಿ ಕಲ್ಲಳ್ಳಿಯಲ್ಲಿ ಬೀಗರ ಹೊಲ ಪಡೆದುಕೊಂಡರು. ಮಿತ್ರ ಹಬ್ಬು ಅವರೊಂದಿಗೆ ಅತ್ಯಂತ ಶ್ರದ್ಧೆ ಶ್ರಮದಿಂದ ದುಡಿದರು. ಒಟ್ಟು ಹನ್ನೊಂದು ಎಕರೆಗಳಿಗೆ ಜಮೀನು ವಿಸ್ತರಿಸಿದರು. ಅವರ ಮಾದರಿ ತೋಟದಲ್ಲಿ ಟೊಮೆಟೊ, ಅರಿಷಿಣ, ಗೋಧಿ, ಗೋವಿನಜೋಳ, ಸೂರ್ಯಪಾನ, ತೆಂಗು, ನಿಂಬೆ ಹೀಗೆ ಎಲ್ಲ ಬೆಳೆಗಳನ್ನು ದಾಖಲೆಯ ಗರಿಷ್ಠ ಪ್ರಮಾಣದಲ್ಲಿ ತೆಗೆದರು. ಕೃಷಿ ಪಂಡಿತರೆನಿಸಿದರು. ಹಸು, ಕರು ಸಾಕಿ ಹೈನುಗಾರರಾದರು. ಬಂಧುಗಳಿಗೆ ಉಪಕಾರ ಮಾಡಿದರು. ಕಿರಿಯರಿಗೆ ಮಾರ್ಗದರ್ಶಕರಾದರು. ಹೀಗೆ ಮುವತ್ತು ವರ್ಷಗಳ ಕಾಲ ಒಕ್ಕಲುತನ ನಡೆಸಿ ಆದರ್ಶ ರೈತರಾದರು. ಮದುವೆಯಾಗದೆಯೂ ದೊಡ್ಡ ಸಂಸಾರ ನಡೆಸಿ ಸಂತೃಪ್ತಿಯಿಂದಲೇ ೧೯೯೮ರಲ್ಲಿ ಪುತಿನ, ಚದುರಂಗರೊಂದಿಗೇ ದೀಪಾವಳಿಯ ಸಂದರ್ಭದಲ್ಲಿ ಇಹಲೋಕದಿಂದ ಕಣ್ಮರೆಯಾಗಿ ತಾರಾಲೋಕದಲ್ಲಿ ಬೆಳಗಿದರು. ವಿಸ್ಮಯಕರ ಅಸಹಜ ಜಗತ್ತಿನ ಜೀವನದ ಸಾದನೆಯಂತೆಯೇ ವಾಸ್ತವ ಲೋಕದ ಜೀವದಲ್ಲಿಯೂ ಅವರು ಯಶಸ್ಸನ್ನು ಸಾಧಿಸಿ ತೋರಿಸಿ ಸಾಧನೆಯಲ್ಲಿ ಸವ್ಯಸಾಚಿ ಎಂಬುದನ್ನು ಪ್ರಮಾಣೀಕರಿಸಿದ್ದಾರೆ.

ಸತ್ಯಕಾಮ ಮೊದಲು ಬರೆದದ್ದು ಪದ್ಯ. ‘ಶಾಂತ’ ಎಂಬ ಕಾವ್ಯನಾಮದಿಂದ ಹದಿಹರೆಯದಲ್ಲಿ (೨೯೩೯-೪೦) ಕವನಗಳನ್ನು ಬರೆಯುತ್ತಿದ್ದರಂತೆ. ‘ವೀಣೆ’ ಅವರು ಮೊದಲು ಪ್ರಕಟಿಸಿದ ಕನವಸಂಕಲನ. ಶಂಕರಾಚಾರ್ಯರ ಸಂದರ್ಯ ಲಹರಿಯ ಪದ್ಯಗಳನ್ನು ಅನುವಾದಿಸಿದ್ದರಂತೆ. ಮಾತೃ ಮಂದಿರ ಎಂಬ ಚಿಕ್ಕ ಕಾವ್ಯ ಅವರ ತಾಯಿಯನ್ನು ಕುರಿತಂತೆ ರಚಿತವಾಗಿದೆ. ಉಡುಪಿಯ ಅಜ್ಞಾತವಾಸ ಅವರಲ್ಲಿ ಸಾಹಿತ್ಯ ಶಕ್ತಿಯನ್ನು ಬೆಳೆಸಿತಲ್ಲದೆ ಅವರನ್ನು ಗದ್ಯದ ಕಡೆಗೂ ತಿರುಗಿಸಿತು. ‘ಅನಂತ ಜೀವನ’ವೆಂಬ ಅವರ ಸ್ವಾನುಭವದ ಕಥನ ಆಗಲೇ ಪ್ರಕಟವಾಯಿತು (೧೯೪೭). ಆ ಹೊತ್ತಿಗೆ ಸತ್ಯಕಾಮರಿಗೊಂದು ಶೈಲಿ ಸಿದ್ಧವಾಗಿತ್ತೆಂದು ಹೇಳಲಾಗಿದೆ. ಆಗಲೇ ಅವರು ‘ಸತ್ಯಕಾಮ’ರಾದದ್ದು. ‘ಋಷಿ ಪಂಚಮಿ’ ಎಂಬ (ಐವರು) ಋಷಿಗಳನ್ನು ಕುರಿತ ಕೃತಿ ನಂತರ ಪ್ರಕಟವಾಯಿತು. ಓತಪ್ರೋತವಾಗಿ ಅವರಿಂದ ಗದ್ಯಕೃತಿಗಳು ರಚನೆಗೊಂಡಿವೆ. ತ್ರಿಸುಪರ್ಣ, ಚಂಡಪ್ರಚಂಡ, ಕೃಷ್ಣಾರ್ಪಣ, ಶೃಂಗಾರತೀರ್ಥ, ಅರ್ಧನಾರಿ, ಪುರುಷ ಸೂಕ್ತ, ಮನ್ವಂತರ, ಮನೆಮಾರು, ನಾಯಿಮೂಗು ಹೀಗೆ ಇವುಗಳಲ್ಲಿ ಸಾಮಾಜಿಕ, ರಾಜಕೀಯ ವಿಡಂಬನೆಗಳಿವೆ. ಬಹುತೇಕ ಪೌರಾಣಿಕ ವಸ್ತುಗಳನ್ನೊಳಗೊಂಡ ಸಣ್ಣಕಥೆಗಳಿವೆ. ಸಾಮಾಜಿಕ ಕಾದಂಬರಿಗಳಿವೆ. ಪಂಚ ‘ಮ’ಗಳ ನಡುವೆ ಮತ್ತು ತಂತ್ರಯೋನಿ ತಂತ್ರ ಪ್ರಪಂಚವನ್ನು ಪರಿಚಯಿಸುವ ವೈವಿಧ್ಯ ಪೂರ್ಣವಾದ ವಿಶಿಷ್ಟ ಕೃತಿಗಳಾಗಿವೆ. ಒಟ್ಟು ಐವತ್ತಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ವೈವಿಧ್ಯ ಪೂರ್ಣವಾದ ಅವರ ಕೃತಿ ರಾಶಿಯಲ್ಲಿ ಪೌರಾಣಿಕ ಕಾದಂಬರಿಗಳದೇ ಒಂದು ಭಾಗ. ಬೆಂಕಿಯ ಮಗಳು, ವಿಪ್ರಯೋಗ, ಆಹುತಿ, ರಾಜಕ್ರೀಡೆ, ರಾಜಬಲಿ, ವಿಚಿತ್ರವೀರ್ಯ, ನಾಗರನಂಜು, ಇವು ಸತ್ಯಕಾಮರ ಸಾರ್ಥಕ ಕಾದಂಬರಿಗಳು. ಅತಿ ಹೆಚ್ಚು ಪೌರಾಣಿಕ ಕಾದಂಬರಿಗಳನ್ನು ರಚಿಸಿದ ಖ್ಯಾತಿ ಸತ್ಯಕಾಮರಿಗೇ ಸಲ್ಲುತ್ತದೆ.

ಎಸ್.ಎಲ್. ಭೈರಪ್ಪ

ಕನ್ನಡ ಸಮಕಾಲೀನ ಸಾಹಿತ್ಯದ ಅತ್ಯಂತ ಮಹತ್ವದ ಲೇಖಕರು ಎಸ್.ಎಲ್.ಭೈರಪ್ಪ. ಶಿವರಾಮ ಕಾರಂತರು ಮತ್ತು ಅ.ನ.ಕೃಷ್ಣರಾಯರ ನಂತರ ಪೂರ್ಣ ಪ್ರಮಾಣದ ಕಾದಂಬರಿಕಾರರಾಗಿ ಅತ್ಯಂತ ಪ್ರಭಾವೀ ಬರಹಗಾರರು. ಸುಪ್ರಸಿದ್ಧರು ಮತ್ತು ಜನಪ್ರಿಯರು. ತ.ರಾ.ಸು., ಪುರಾಣಿಕ ಕೃಷ್ಣಮೂರ್ತಿ, ಕಟ್ಟೀಮನಿ, ಇನಾಂದಾರ್ ಮುಂತಾದ ಹಲವು ಕಾದಂಬರಿಕಾರರು ಆಗಿ ಹೋಗಿದ್ದಾರಾದರೂ ಕನ್ನಡ ಕಾದಂಬರೀ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಒಂದು ಚಾರಿತ್ರಿಕ ಘಟ್ಟವಾದವರು ಭೈರಪ್ಪನವರೇ. ಮೇಲಿನ ಯಾರಿಗೂ ಸಿಗದಿದ್ದ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದ ಮಾನ್ಯತೆ ಇವರಿಗೆ ಸಿಕ್ಕಿದೆ. ತಕ್ಕಯೋಗ್ಯತೆಯೂ ಅವರಿಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು ಸಂತೆಶಿವರ ಭೈರಪ್ಪನವರ ಹುಟ್ಟೂರು. ತಿಪಟೂರು ಪರಿಸರದಲ್ಲಿ ಬಡಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ (೧೯೩೪) ಕಡು ಬಡತನದಲ್ಲೇ ಬೆಳೆದವರು. ನುಗ್ಗೇಹಳ್ಳಿ, ಬಾಗೂರು, ಗೊರೂರು ಮುಂತಾದ ಹಳ್ಳಿಗಳು ಮತ್ತು ಮೈಸೂರಿನಲ್ಲಿ ಅವರ ಶಿಕ್ಷಣ ನಡೆಯಿತು. ಸ್ವಂತ ದುಡಿದು ಭಿಕ್ಷಾನ್ನ (ವಾರಾನ್ನ) ಮಾದಿ  ಓದಿದ ಅವರ ವಿದ್ಯಾರ್ಥಿ ಜೀವನ ತುಂಬ ದಾರುಣವಾಗಿತ್ತು. ಹೋಟೆಲ್ ಸಪ್ಲೈಯರ್, ಸಿನೆಮಾ ಗೇಟ್ ಕೀಪರ್, ರೈಲ್ವೆ ಕೂಲಿ ಹೀಗೆ ಹಲವು ಅವತಾರಗಳಲ್ಲಿ ಅವರು ದುಡಿದು ಗಳಿಸಬೇಕಾಗಿ ಬಂತು. ಎಲ್ಲೆಲ್ಲೋ ಅಲೆಯಬೇಕಾಯಿತು. ಆತ್ಮಹತ್ಯೆಗೆ ಪ್ರಯತ್ನಿಸುವಷ್ಟು ನಿರಾಶರಾಗಬೇಕಾಯಿತು. ಬದುಕಿನ ಆರಂಭದಲ್ಲೇ ಹೋರಾಟ ಮಾಡಿದ ಸಾಹಸಿ ಕೊನೆಗೂ ಯಶಸ್ವಿಯಾದರು. ಸಂಸಾರದ ಸಾವು ನೋವುಗಳ ಬೆಂಕಿಯಲ್ಲಿ ಬೆಂದು ಪುಟಗೊಂಡರು. ಮೈಸೂರು ವಿಶ್ವವಿದ್ಯಾನಿಲಯದ ಬಿ.ಎ. ಆನರ್ಸ್ ಮತ್ತು ಎಂ.ಎ., ಬರೋಡ ವಿಶ್ವವಿದ್ಯಾನಿಲಯದ ಪಿಎಚ್ .ಡಿ. ಪದವಿಗಳನ್ನು ಪಡೆದ ಭೈರಪ್ಪ ಹುಬ್ಬಳ್ಳಿ, ಮೈಸೂರು ಮುಂತಾಗಿ ರಾಜ್ಯದೊಳಗಿನ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ದುಡಿದದ್ದಲ್ಲದೆ ದೂರದ ದೆಹಲಿ, ಗುಜರಾತಗಳಲ್ಲಿಯೂ ಉದ್ಯೋಗ ಮಾಡಿದರು. ಕಳೆದ ಕೆಲವು ವರ್ಷಗಳಿಂದ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ.

ಪ್ರವಾಸಿ ಪ್ರಿಯರಾದ ಭೈರಪ್ಪನವರು ಚಿಕ್ಕಂದಿನಿಂದಲೂ ಊರೂರು ಸುತ್ತುವ ಸ್ವಭಾವ. ದೊಡ್ಡವರಾದ ಮೇಲೆ ಉದ್ಯೋಗದ ಕಾರಣಕ್ಕಷ್ಟೇ ಅಲ್ಲದೆ ನೋಡಿ ತಿಳಿಯಬೇಕೆಂಬ ಕುತೂಹಲವನ್ನು ತಣಿಸಿಕೊಳ್ಳುವುದಕ್ಕಾಗಿ ಉತ್ತರ ಭಾರತದ ಅನೇಕ ಊರುಗಳಿಗೆ, ಹಿಮಾಲಯ, ಕೇದಾರ, ಮಾನಸ ಸರೋವರಗಳಿಗೆ, ಮಲೆನಾಡಿನ ಬೆಟ್ಟ ಕಾಡುಗಳಿಗೆ ಹಲವು ಬಾರಿ ಭೇಟಿ ಕೊಟ್ಟಿದ್ದಾರೆ. ಜಪಾನ್, ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ಈಜಿಪ್ಟ್, ಜರ್ಮನಿ ಮುಂತಾದ ವಿದೇಶಗಳ ಪ್ರವಾಸ ಕೈಗೊಂಡಿದ್ದಾರೆ.

ಸ್ವಾನುಭವ ಮತ್ತು ಲೋಕಾನುಭವಗಳಿಂದ ಶ್ರೀಮಂತರಾಗಿರುವ ಭೈರಪ್ಪ ತಮ್ಮ ಅನುಭವವನ್ನು ಸಾಹಿತ್ಯ ಕೃತಿಗಳಾಗಿ ಪರಿವರ್ತಿಸಿದ್ದಾರೆ. ತತ್ವಶಾಸ್ತ್ರ, ಇತಿಹಾಸ ಮುಂತಾದ ಹಲವು ಶಾಸ್ತ್ರಗಳ ಜ್ಞಾನ, ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳ ಪಾಂಡಿತ್ಯ ಇವರ ಕೃತಿಗಳಲ್ಲಿ ವ್ಯುತ್ಪತ್ತಿಯಾಗಿ ಕೆಲಸ ಮಾಡಿವೆ. ಅವರ ಸೌಂದರ್ಯ ದೃಷ್ಟಿ ಮತ್ತು ಪ್ರತಿಭೆಗಳು ಇವುಗಳೊಂದಿಗೆ ಸೇರಿ ಸುಂದರವಾದ ಕಾದಂಬರಿಗಳು ಸಾಲುಗಟ್ಟಿ ಸೃಷ್ಟಿಯಾಗಿವೆ.

ಭೈರಪ್ಪನವರು ಧರ್ಮಶ್ರೀ ಯಿಂದ ಸಾರ್ಥದ ವರೆಗೆ ಹದಿನೆಂಟು ಬೃಹದ್ ಗಾತ್ರದ ಉತ್ತಮ ಗುಣದ ಕಾದಂಬರಿಗಳನ್ನು ಸೃಷ್ಟಿಸಿದ್ದಾರೆ. ವಂಶವೃಕ್ಷ, ದಾಟು, ಸಾಕ್ಷಿ, ಗೃಹಭಂಗ ಮುಂತಾದವು. ಇವುಗಳಲ್ಲಿ ಮುಖ್ಯವಾದವು ಸತ್ಯ ಮತ್ತು ಸೌಂದರ್ಯ, ಕಥೆ ಮತ್ತು ಕಥಾವಸ್ತು ಮುಂತಾಗಿ ನಾಲ್ಕೈದು ಸೃಜನೇತರ ವೈಚಾರಿಕ ಕೃತಿಗಳನ್ನು ಕೆಲವು ಕಥೆಗಳನ್ನೂ ಬರೆದಿದ್ದಾರೆ. ಅವರ ಬಹುತೇಕ ಕಾದಂಬರಿಗಳು ಹಲವು ಭಾಷೆಗಳಿಗೆ ಅನುವಾದಗೊಂಡು ಭಾರತೀಯ ಸಾಹಿತ್ಯದಲ್ಲಿಯೇ ಭೈರಪ್ಪನವರಿಗೆ ಮುಖ್ಯ ಸ್ಥಾನಗಳಿಸಿಕೊಟ್ಟಿವೆ. ೧೯೯೬ರಲ್ಲಿ ಪ್ರಕಟವಾದ ಭಿತ್ತಿ ಅವರ ಜೀವನಚರಿತ್ರೆ, ಅವರ ಸಾಹಸಮಯ ಬದುಕಿನ ಕುತೂಹಲಕಾರಿ ಘಟನೆಗಳನ್ನು ಒಳಗೊಂಡು ಕಾದಂಬರಿಯಷ್ಟೇ ಆಕರ್ಷಕವಾಗಿದೆ. ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, ರಾಜ್ಯೋತ್ಸವ ಪ್ರಶಸ್ತಿಗಳೂ ಸೇರಿದಂತೆ ಹಲವಾರು ಮನ್ನಣೆಗಳು ಅವರಿಗೆ ಸಂದಿವೆ. ೧೯೯೯ರ ಕನಕಪುರ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವ ದೊರೆತಿದೆ. ಸದ್ಯದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಹೆಚ್ಚು ಓದುಗರನ್ನು ಹೊಂದಿರುವ, ಮೌಲಿಕ ಕೃತಿಗಳ ಕೊಡುಗೆಯಿಂದಾಗಿ ಬಹುಚರ್ಚಿತ ವಿಸ್ಮಯಕರ ಸೃಜನಶೀಲ ಪ್ರತಿಭೆಯ ಕಾರಣಕ್ಕೆ ಗೌರವಾನ್ವಿತರಾಗಿರುವ ಲೇಖಕ ಭೈರಪ್ಪನವರು. ಅವರ ಕೃತಿ ರಾಶಿಗಳಲ್ಲಿ ಒಂದೇ ಒಂದು ಪೌರಾಣಿಕ ಕಾದಂಬರಿ ‘ಪರ್ವ’ ತನ್ನ ಪ್ರಕಾರದಲ್ಲಿ ಅತ್ಯಂತ ಮಹತ್ವದ್ದಾಗಿದೆ.

 

[1]ಬೆಳಗೆರೆ ಕೃಷ್ಣಶಾಸ್ತ್ರಿ – ನೆನಪ ಬುತ್ತಿಯ ಗಂಟು – ದೇವುಡು ದರ್ಶನ – ೧೯೯೭ ಪುಟ ೫೦, ೫೧, ೫೮,೫೯

[2]ರುದ್ರ ಪ್ರತ್ಯಕ್ಷನಾಗುವುದು. ದೇವತೆಗಳು ಬಂದು ಮಾತನಾಡುವುದು, ಇವೆಲ್ಲ ಸ್ವಾನುಭವ ಎಂದು ಮಹಾಬ್ರಾಹ್ಮಣದ ಮುನ್ನುಡಿಯಲ್ಲಿ ದೇವುಡು ಹೇಳುವ ಮಾತನ್ನು ಗಮನಿಸಬೇಕು.

[3]ಡಾ. ಎಂ.ಎಸ್. ಪಾಟೀಲ – ತ.ರಾ.ಸು. ಅವರ ಕಾದಂಬರಿಗಳು – ೧೯೯೩ ತ.ರಾ.ಸು. ಹಾಗೂ ಅವರ ಪರಿಸರ ಪುಟ ೩೩.