ಪ್ರಕಾರದ ಹಂಗು ತೊರೆದ ಅನನ್ಯ ಕೃತಿ
ಕೃತಿ: ದೃಶ್ಯ : ಡಾ. ಎಂ. ಎಸ್. ಮೂರ್ತಿ
ಪ್ರಕಾಶನ: ಥಿನ್ ಲೈನ್ ಪಬ್ಲಿಕೇಶನ್ಸ್, ಬೆಂಗಳೂರು
ಪುಟ: 204,
ಮೊದಲ ಮುದ್ರಣ  ; 2010
ಬೆಲೆ ರೂ. 750/-

ಮೂಲತಃ ಚಿತ್ರಕಕಾರದ, ಕುಂಚ ಹಿಡಿದ ಸೃಜನಶೀಲ ಕಲಾವಿದರಿಂದ ಡಾ. ಎಂ.ಎಸ್.ಮೂರ್ತಿಯವರು ತಮ್ಮ ಕಲಾಕೃತಿಯನ್ನು ‘ದೃಶ್ಯ’ಒಂದು ವಿನೂತನ ‘ಕಾದಂಬರಿ’ಯೆಂದು ಕರೆದುಕೊಂಡಿದ್ದಾರೆ. ಇಲ್ಲಿ ಚಿತ್ರ – ಕಲೆಯನ್ನು ಒಂದು ಆಶಯದ ಹಿನ್ನೆಲೆಯಲ್ಲಿ ಸಾಹಿತ್ಯದೊಂದಿಗೆ ಕೊಲಾಜ್ ಮಾಡುವ ಪ್ರಯತ್ನವೇನೋ ವಿನೂತನವೇ ಸರಿ. ಜೀವನದ ಸುದೀರ್ಘ ಪಯಣದ ಕತೆಯನ್ನು ಹೇಳುವುದರಿಂದಲೋ ಏನೋ ಇದನ್ನು ‘ಕಾದಂಬರಿ’ಯೆಂದು  ಕರೆದುಕೊಂಡಿದ್ದಾರೆ. ಆದರೆ ಈ ಕೃತಿಯನ್ನು ಇಡಿಯಾಗಿ, ಬಿಡಿ ಬಿಡಿಯಾಗಿ, ಹೇಗೆ ಬೇಕೆಂದರೆ ಹಾಗೆ ಓದಬಹುದು. ಇದನ್ನು ಭಾವಗೀತೆಯಂತೆ, ಖಂಡಕಾವ್ಯದಂತೆ, (ಜೀವನ) ಮಹಾಕಾವ್ಯದಂತೆ; ಕಿರುಗತೆಯಂತೆ, ಕತೆಯಂತೆ, ಪ್ರಬಂಧದಂತೆ – ಹೀಗೆ ಅನೇಕ ನೆಲೆಗಳಿಂದ ಓದಬಹುದು. ಇದು ಪ್ರಾರಂಭದಿಂದ ಅಂತ್ಯದವರೆಗೂ ಓದುವ ಕ್ರಮಬದ್ಧತೆಯನ್ನು ಬೇಡುವುದಿಲ್ಲ. ಸುಮ್ಮನೆ ಕಣ್ಣುಮುಚ್ಚಿ ತೆರೆಯುವ ಯಾವ ಪುಟದಿಂದಲಾದರೂ ಪ್ರಾರಂಭಿಸಬಹುದು. ಬಿಡುವಾದಾಗಲೆಲ್ಲಾ ಕುಳಿತು ಒಂದೊಂದೇ ಪುಟದ ಬಗ್ಗೆ ಚಿಂತಿಸುತ್ತಾ, ಅರ್ಥಮಾಡಿಕೊಳ್ಳುತ್ತಾ, ಆಳಕ್ಕಿಳಿಯುತ್ತಾ, ಆಸ್ವಾದಿಸುತ್ತಾ ಮುಂದೆ ಸಾಗಬಹುದು. ಕೇವಲ ಒಂದು ಅವಸರದ, ವೇಗದ ಓದಿಗೆ ದಕ್ಕಿದ್ದನ್ನು ಮತ್ತೆ ಮತ್ತೆ ಹೊಸದಾಗಿ ಓದುತ್ತಾ ಮೆಲುಕು ಹಾಕಬಹುದು, ಆಗ ಹೊಸ ಹೊಸ ಹೊಳಹುಗಳನ್ನು ಹೊಳೆಯಬಹುದು. ಅವರವರ ಅಭಿರುಚಿ, ಸಂಸ್ಕಾರ, ಮನೋಧರ್ಮಕ್ಕೆ ಅನುಗುಣವಾಗಿ ಕೃತಿ ಬೇರ ಬೇರೆ ರೀತಿಯಲ್ಲಿ ತಿಳಿಯುತ್ತಾ, ಮನದಾಳಕ್ಕೆ ಇಳಿಯುತ್ತಾ ಹೋಗುತ್ತದೆ. ಅನೇಕ ಓದುಗಳಲ್ಲಿ ಹೊಸ ಹೊಸ ಅರ್ಥಗಳನ್ನು ಹೊಮ್ಮಿಸುತ್ತಾ ಹೋಗುವ  ಈ ಕೃತಿ ಪ್ರತಿ ಓದಿನಿಂದಲೂ ಬೆಳೆಯುತ್ತಾ ಹೋಗುತ್ತದೆ. ಹೀಗೆ ಅನೇಕ ಸಾಧ್ಯತೆಗಳನ್ನು ಹುಟ್ಟುಹಾಕಿದ  ಈ ಕೃತಿ ಅನನ್ಯವಾದುದು.

ಕನ್ನಡದಲ್ಲಿ ಬರೀ ಛಾಯಾಚಿತ್ರಗಳ ಹಲವು ಸಂಪುಟಗಳು ಬಂದಿವೆ. ಕನ್ನಡ ಸಂಸ್ಕೃತಿಯನ್ನು ನಿರ್ವಚಿಸುವ ಟಿ.ಎಸ್. ಸತ್ಯನ್ ತಮ್ಮ ಕ್ಯಾಮರಾದಲ್ಲಿ ಚಿತ್ರಿಸಿರುವ ‘Exploring Karnataka’ ಮತ್ತು ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಿದ ‘ಚೆಲುವ ಕನ್ನಡ ನಾಡು’ ಕೃತಿಗಳಂತೆ ಈ ಕೃತಿ ತುಂಬಾ ಭಿನ್ನವಾದುದು. ಕನ್ನಡದ ಅಪೂರ್ವ ಛಾಯಾಗ್ರಾಹಕರಾದ ಎಂ.ವೈ.ಘೋರ್ಪಡೆ (ರೆಕ್ಕೆಯ ಮಿತ್ರರು, Sunlight and Shadows ಸಂಪುಟಗಳು), ಕೃಪಕರ್ – ಸೇನಾನಿ ಅವರ ‘wild Photography’ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಹಕ್ಕಿ – ಪುಕ್ಕ’ ಚಿತ್ರಸಂಪುಟದ ನೆಲೆಗಳೇ ಬೇರೆ.

ನಾವು ಓದುವ ಪ್ರತಿಸಾಹಿತ್ಯ ಕೃತಿಯೂ ನಮ್ಮ ಮನೋರಂಗದಲ್ಲಿ ದೃಶ್ಯವಾಗಿ ಪರಿವರ್ತಿತವಾಗಿಯೇ ಅಸಾಧ್ಯವಾಗುವುದು. ಹೀಗಿರುವಾಗ  ಇಲ್ಲಿ ದೃಶ್ಯವೇ ಮತ್ತೆ ಸಾಹಿತ್ಯವಾಗಿ ನಮ್ಮ ಪ್ರಜ್ಞೆಗೆ ತಟ್ಟುವ, ರಸಾನುಭವವಾಗಿ ಆನಂದಗೊಳಿಸುವ ಕೆಲಸ ಮಾಡುತ್ತದೆ.

ನೂರಾರು ಚಿತ್ರಗಳಿಂದ, ಪೆಯಿಂಟಿಂಗ್ ಗಳಿಂದ ತುಂಬಿರುವ ಈ ಕೃತಿಯಲ್ಲಿ ಏನುಂಟು ಏನಿಲ್ಲ ಎಂಬಂತಿಲ್ಲ, ಈ ಪ್ರಪಂಚದೊಳಗಿನ ಸಕಲವೂ ಇಲ್ಲಿದೆ. ಅಣುರೇಣುತೃಣಕಾಷ್ಟಗಳಲ್ಲೂ ಜೀವಚೈತನ್ಯ ಇರುವಂತೆ ಇಲ್ಲಿ ಮನುಷ್ಯ ಪ್ರಾಣಿ – ಪಕ್ಷಿ – ಸಸ್ಯ ಪ್ರಪಂಚದ ವೈವಿಧ್ಯಮಯ ನೋಟಗಳು ಕವಿಯ, ಕಲಾವಿದನ ದೃಷ್ಟಿಕೋನದ ಮೂಲಕ ಹೊಸದಾಗಿ ಕಾಣುತ್ತದೆ; ಸಾಮಾನ್ಯರೊಳಗಿನ ಅಸಾಮಾನ್ಯತೆಯನ್ನು ತೆರೆದು ತೋರಿಸುತ್ತವೆ. ಇಲ್ಲಿ ಪೂರ್ವಸ್ಥಿತಿ ಅಳಿದು ಅಪೂರ್ವವಾಗುವ, ಕಲಾವಿದನ ಮಾಂತ್ರಿಕ ಸ್ಪರ್ಶದಿಂದ ಹೊಸರೂಪು ಪಡೆಯುವುದನ್ನು ಕಾಣಬಹುದು. ನಾವು ಜೀವನದಲ್ಲಿ ನಿರ್ಲಕ್ಷಿಸಬಹುದಾದುದಕ್ಕೂ ಇಲ್ಲಿ ಮಹತ್ವ ಬಂದಿದೆ. ಒಂದು ಮಹಾಕಾವ್ಯದಲ್ಲಿ ಬದುಕಿನ ಸೂಕ್ಷ್ಮಾತಿಸೂಕ್ಷ್ಮ ವಿವರಗಳಿಗೂ ಪ್ರಾಧಾನ್ಯತೆ ಬರುವಂತೆ ಇಲ್ಲಿ ತೃಣಕ್ಕೂ, ಕ್ಷಣಕ್ಕೂ ಪ್ರಾಶಸ್ತ್ಯ ದೊರೆತಿದೆ. ಸಣ್ಣ ಸಣ್ಣ ವಿವರಗಳು, ನೋಟಗಳು ಕುಸುರಿ ಕೆಲಸದಂತೆ ಕೃತಿಯುದ್ಧಕ್ಕೂ ಇಡಿಕಿರಿದಿವೆ. ಇಲ್ಲಿ ಯಾವುದೂ ಮುಖ್ಯವಲ್ಲ. ಯಾವುದೂ ಅಮುಖ್ಯವಲ್ಲ ಎನ್ನುವುದನ್ನು ಕೃತಿ ಉದ್ದಕ್ಕೂ ಶೃತಪಡಿಸುತ್ತಾ ಹೋಗುತ್ತದೆ.

ಹೊರನೋಟಕ್ಕೆ ಈ ಕೃತಿ ಜೀವನ ಪಯಣದ ಕತೆಯನ್ನು ದ್ವನಿಸಿದರೂ ಬೇರೆ ಅರ್ಥಗಳನ್ನು ಕಾಣುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅವರವರ ಭಾವಕ್ಕೆ, ಅವರವರ ಭಕುತಿಗೆ ಸಿಕ್ಕಿದಷ್ಟು – ದಕ್ಕಿದಷ್ಟು ಪಡೆಯಬಹುದು.

ಮುಖಪುಟದ ಒಂದು ಭಾಗದಲ್ಲಿ ಚಚ್ಚಾಕಾರದ ಮುಕ್ಕಾಲು ಇಂಚಿನ ಕುಳಿಯೊಂದು ಇಟ್ಟು, ಅದು ಹಲವು ಪುಟಗಳನ್ನು ಕತ್ತರಿಸಿಕೊಂಡು ಹೋದುದು ತಳದಲ್ಲಿ ನದಿಯಲ್ಲಿ ತೇಲುತ್ತಿರುವ ತೆಪ್ಪದಲ್ಲಿ ನಿಂತಿರುವ ಗಂಡು, ಹುಟ್ಟು ಹಾಕುತ್ತಿರುವ ಹೆಣ್ಣಿನ ಚಿತ್ರ ಕಾಣುತ್ತಿದೆ. ಬಹುಶಃ ಇದು ನಾವು (ಜೀವನದಲ್ಲಿ) ಕೃತಿಯಲ್ಲಿ ತಲುಪಬೇಕಾಗಿರುವ ಗಮ್ಯ(ಗುರಿ)ವನ್ನು ಸೂಚಿಸುತ್ತದೆ ಅನಿಸುತ್ತದೆ. ಬದುಕಿನ ಮಹಾಪಯಣದ ರೂಪಕವಾಗಿಯೂ ಇದು ಗಮನ ಸೆಳೆಯುತ್ತದೆ.  ಮುಖಪುಟದ ಹಿಂಬದಿಯ ಪುಟ ಜೀವರೇಶ್ಮೇ ಹುಳು ಗೂಡುಕಟ್ಟುವ ಚಿತ್ರ ಸಾಮಾನ್ಯ ಚಿತ್ರವಲ್ಲ. ‘ತೆರಣಿಯ ಹುಳು ಗೂಡುಕಟ್ಟಿ ತನ್ನ ಸಾವು ತಾನೇ ತೆರನಂತೆ’ ಎಂಬ ಅಕ್ಕನ ಮಾತಿಗೆ, ಬದುಕಿನ ಆರಂಭ ಅಂತ್ಯವನ್ನೇ ಸೂಚಿಸುವ ಸಮರ್ಥ ಪ್ರತಿಮೆಯಾಗಿಯೂ  ಕಾಣುತ್ತದೆ.

ಕೃತಿಯ ಒಳಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ‘ಕೀಲಿ ಕೈ’ ಯೊಂದು ಕಾಣುತ್ತದೆ. ಅಂದರೆ ಕೃತಿಯ ಗರ್ಭ ಪ್ರವೇಶಿಸಲು ಅರಿವಿನ ಕೀಲಿಕೈಯೊಂದರ ಅಗತ್ಯವನ್ನು ಅದು ಹೇಳುತ್ತದೆ. ಕೃತಿಯ ಅಂತ್ಯದಲ್ಲಿ ಬಿಚ್ಚಿದ ಬೀಗದ ಚಿತ್ರ. ಕೃತಿಯ ಅಂತರ್ಯವನ್ನು ತೆರೆದಿಟ್ಟುದುದನ್ನು ಸಂಕೇತಿಸುತ್ತದೆ.

ಕಪ್ಪು ಮನೆಯ ಹನಿಯೊಂದು ಗೀಚುವ ಬರಹಗಾರರು ಅಕ್ಷರವಾಗಿ ಅರಳುವ, ಬರಹವಾಗಿ ಬೆಳೆಯುವ, ಮತ್ತೆ ಮತ್ತೆ ಚುಕ್ಕೆಯಾಗಿ ವಿವಿಧ ಅರ್ಥಗಳನ್ನು ಹೊಮ್ಮಿಸುವ, ರಂಗೋಲಿಯಾಗುವ, ಸಮಾನಾಂತರ ರೇಖೆಗಳಾಗುವ – ಹೀಗೆ ಬದುಕಿನ ಎಲ್ಲ ಏಳುಬೀಳುಗಳನ್ನು ಸಂಕೇತಿಸುವ ಚಿತ್ರ ಅನೇಕ ಅರ್ಥಗಳನ್ನು ಗರ್ಭೀಕರಿಸಿಕೊಂಡಿದೆ.

ಮುಂದಿನ ಹಂತದಲ್ಲಿ ‘ತೆರೆದ ದಾರಿ’ ಯ ಚಿತ್ರ ಸಾಗಬೇಕಾದ ಬದುಕಿನ ದಾರಿಯನ್ನು ಹೇಳುತ್ತದೆ. ದಾರಿಯುದ್ಧಕ್ಕೂ ಕೌಲೆ ಬಸವ, ಗಣೆಕಾರ, ಬುಡಬುಡಿಕೆಯವ, ವ್ಯಾಪಾರದಲ್ಲಿ ತೊಡಗಿರುವ ಅಜ್ಜಿ ಸಿಗುತ್ತಾರೆ. ಕಂಟಿನ್ಯುಟಿ (ಮುಂದುವರಿಕೆ)ಯನ್ನು ಸೂಚಿಸುವಂತೆ ಪುಟದ ಮೂಲೆಯಲ್ಲಿ ‘ಕಾಮ’ ಗಳನ್ನು ಹಾಕಿರುವುದು ಒಂದು ಬಗೆಯ ಹೊಸತನದಿಂದ ಕೂಡಿದ ಹಾಗೂ ಇದೊಂದು ಸಾಹಿತ್ಯ ಕೃತಿ ಎಂದು ಹೇಳಲು ಹೊರಟಂತಿದೆ. ಗೀಜಗದ ಗೂಡಿನ ಹತ್ತಿರದ (ಕ್ಲೋಸಪ್) ದೃಶ್ಯದಲ್ಲಿ ಅದರ ಹೆಣಿಗೆಯ ಚಿತ್ರವು ಜೀವನದ ಸಂಕೀರ್ಣತೆಗೆ ಕನ್ನಡಿ ಹಿಡಿದಂತಿದೆ.  ಹಣ್ಣು ವಯಸ್ಸನ್ನು ಸಂಕೇತಿಸುವ ಅಜ್ಜಿಯ ಚಿತ್ರ ಮಾಗಿದ ಬದುಕಿಗೆ ಸಂಕೇತವಾಗಿದೆ. ಆದರೆ ಮುಂದಿನ ಪುಟಗಳಲ್ಲಿ ಕಾಣುವ ಮೊಳಕೆ ಕಾಳು ಜೀವವಿಕಾಸದ ಸೂಚನೆಯನ್ನು ನೀಡುತ್ತದೆ. ಕೊನೆಗೆ ಅದು ಊಟಮಾಡುವ ಮುದ್ದೆಯ ಸಾರಿನಲ್ಲಿ ಬೆರೆಯುವ ಚಿತ್ರ ಅದರ ಸಾರ್ತಕತೆಯನ್ನು ಸೂಚಿಸುತ್ತದೆ. ಇದೇ ಮುಂದುವರಿದು ಬದುಕಿನ ಕೊನೆಯನ್ನು ಸೂಚಿಸುವಂತಿದ್ದು ರಸಹಿಂಡಿದ ಹಣ್ಣಿನ ತೊಗಟೆಯ ಚಿತ್ರ, ಅರ್ಧಸುಟ್ಟ ಬಾಳೆಎಲೆಯ ಚಿತ್ರ ಬದುಕಿನ ಸಮರಸತೆಯನ್ನು ಹೇಳುತ್ತದೆ.

‘ಮಕ್ಕಳ ಮನಸ್ಸಿನ ಚಿತ್ರಗಳು’ ಕುರಿತೇ (ಡಿ ಲಿಟ್) ಸಂಶೋಧನೆ ಮಾಡಿರುವ ಮೂರ್ತಿಯವರು ಅಂಥ ಅನೇಕ ಮಕ್ಕಳು ಚಿತ್ರಗಳನ್ನು ಕೃತಿಯುದ್ಧಕ್ಕೂ ಬಳಸಿಕೊಂಡಿರುವುದು ಪರಿಣಾಮಕಾರಿಯಾಗಿದೆ. ತೂಗುತಕ್ಕಡಿಯ ಚಿತ್ರ ರಕ್ತದ ಬೆಲೆಗೆ ಚಿನ್ನ ತೂಗುವ ಚಿತ್ರ ಇವತ್ತಿನ ಹೃದಯಹೀನ ಬದುಕಿನ ಕ್ರೌರ್ಯವನ್ನು ಹೇಳುವಂತಿದೆ. ಮಕ್ಕಳ ಬಣ್ಣ ಬಣ್ಣದ ಗೀಚುಗಳಿಗೂ ಅರ್ಥ ನೀಡುವ ಶಕ್ತಿ ಇದೆ.

ಬದುಕಿನ ಬಣ್ಣಗಳನ್ನು ಹೇಳುವಂತಿರುವ ಬಣ್ಣ ಬಣ್ಣದ ಕೌದಿಯ ಚಿತ್ರಗಳು, ಸೀರೆಯ ತುಣುಕೊಂದನ್ನೇ ಕತ್ತರಿಸಿ ಅಂಟಿಸಿರುವ ಅಂಚಿನ ಚಿತ್ರ, ಕೃಷಿ ಸಂಸ್ಕೃತಿಯ ನೇಗಿಲು, ಇರುವೆಯ ಸಾಲಿನ ಚಿತ್ರಗಳು, ನಮ್ಮ ಸಂಸ್ಕೃತಿಯನ್ನು ರೂಪಿಸಿದ – ಪ್ರಭಾವಿಸಿದ ರಣರಂಗದಲ್ಲಿ ಹೋರಾಡುವ ಯೋಧ, ಶಿರ್ಡಿಸಾಯಿ, ರಾಜ್, ಗಾಂಧಿ, ವಿವೇಕಾನಂದ, ರಮಣ ಮಹರ್ಷಿ, ಅಂಬೇಡ್ಕರ್, ಕಾರಂತ, ಓಷೋ ರಜನೀಶರಂತ ವ್ಯಕ್ತಿಗಳೊಂದಿಗೆ ಜನಪದ ಸಂಸ್ಕೃತಿಯ ರೂಪಕದಂತಿರುವ ಸಿರಿಯಜ್ಜಿಯ ರೇಖಾಚಿತ್ರಗಳು ಇಡೀ ಬದುಕಿನ ಸಂಘರ್ಷವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ.

ದೋರಮಾವಿನ ಚಿತ್ರವೊಂದು ಪಂಪನ ‘ಮಾಮರಂ ಸಂಸಾರ ಸಾರಫಲಂ’ ನ್ನು ನೆನಪಿಸುತ್ತದೆ. ಬ್ರೈಲ್ ಲಿಪಿಯ ಪುಟವೊಂದು ಕಲ್ಲಿದ್ದೂ ಕಾಣದ ನಮ್ಮ ಕಾಣದ ನಮ್ಮ ಪ್ರಜ್ಞೆಯನ್ನು ವಿಡಂಬಿಸುದಂತಿದೆ. ಬದುಕಿನ ಏರುಮುಖವನ್ನು ಸಂಕೇತಿಸುವ ವರ್ಣಚಿತ್ರ ಬದುಕಿನ ನಿರಂತರತೆಯನ್ನು ತಲೆಮಾರು ಗಳಿಗೆ ಕೊಂಡೊಯ್ಯುವ ಕ್ರೋಮೋಜೋಮುಗಳ ಬಾಲಗಪ್ಪೆಯ ಜೀವಜಾಲದ ಚಿತ್ರ, ಬದುಕಿನ ಸಂಲಗ್ನಕ್ಕೆ ಸಂಕೇತವಾದ ತಾಳಿಯ ಚಿತ್ರ, ಮೊಲೆಯೊಂದು ಕಾಣಿಸಿದ್ದು ಅದರ ಆಳಕ್ಕೆ ಹೋದಂತೆ ಬದುಕಿನ ಬೇರೆ ವರ್ತುಲಗಳಿಗೆ ಕೊಂಡೊಯ್ಯುವ ಚಿತ್ರ – ಹೀಗೆ ಬಹುದೊಡ್ಡ ಅರ್ಥವಿವರಣೆಗಳನ್ನು ಗರ್ಭೀಕರಿಸಿಕೊಂಡಿರುವ ಇಂಥ ನೂರಾರು ಚಿತ್ರಗಳಿ ಇಲ್ಲಿವೆ. (ನನಗೆ ಕಾಣಿಸಿದ ಅರ್ಥಗಳನ್ನು ಇಲ್ಲಿ ವಿವರಿಸಿದ್ದೇನೆ. ನನಗೆ ಕಂಡದ್ದು ಬೇರೆಯವರಿಗೆ ಕಾಣಬೇಕೆಂದೇನೂ ಇಲ್ಲ. ಆದರೆ ನನಗಿಂತ ದೊಡ್ಡ ಅರ್ಥಗಳನ್ನು ಕಾಣುವ ಸಾಧ್ಯತೆಯಂತೂ ಇದ್ದೇ ಇದೆ.

ಬದುಕಿನ ಅನೇಕ ಮುಖಗಳಿಗೆ ಕನ್ನಡಿ ಹಿಡಿಯುವ  ಪ್ರಯತ್ನದಲ್ಲಿ ಮೂರ್ತಿಯವರು ವೇದಾಂತಿಯ ತಾತ್ವಿಕತೆಯನ್ನು ಮೆರೆದಿರುವುದು ಪ್ರತಿ ಚಿತ್ರದಲ್ಲೂ ಎದ್ದು ಕಾಣುತ್ತದೆ. ಇಲ್ಲಿಯ ಚಿತ್ರಗಳು ನಮ್ಮೊಂದಿಗೆ ಮಾತನಾಡುತ್ತವೆ, ಪಿಸು ನುಡಿಯುತ್ತವೆ. ಬದುಕಿನ ಸಹನತೆಯನ್ನು ತಮ್ಮೆಲ್ಲಾ ಸಂಕೀರ್ಣತೆಯೊಂದಿಗೆ ಹಿಡಿಯುವ ಪ್ರಯತ್ನದಲ್ಲಿ ಯಶ ಸಾಧಿಸಿದೆ.

ಇಲ್ಲಿಯ ಎಲ್ಲ ಚಿತ್ರಗಳು ಮೂರ್ತಿಯವರದಲ್ಲ. ಬದುಕಿನಲ್ಲಿ ಅನೇಕರ ಕೊಡುಗೆ ಇರುವಂತೆ ಎಲ್ಲರನ್ನೂ ಇಲ್ಲಿ ಒಳಗುಮಾಡಿಕೊಂಡು ಅವುಗಳಿಗೆ ತಮ್ಮದೇ ಚಿಂತನೆಯ, ಸೃಜನಶೀಲತೆಯ ಛಾಪು ಮೂಡಿಸುವುದರೊಂದಿಗೆ ಅವನ್ನು ತಮ್ಮದನ್ನಾಗಿ ಮಾಡೊಕೊಂಡಿದ್ದಾರೆ. ಅದಕ್ಕೆ ಕೊನೆಯ ಪುಟದ ಹೆಬ್ಬೆರಳ ಗುರುತಿನೊಂದಿಗೆ ಮುಗಿದಿದೆ.

ಅತ್ಯುತ್ತಮ ಕಲಾವಿದ, ತ್ತಮ ಬರಹಗಾರನಾಗುವುದು ಕಷ್ಟ.; ಅವೆರಡೂ ಭಿನ್ನ ಮಾಧ್ಯಮಗಳು. ಆದರೆ ಮೂರ್ತಿ ತಮ್ಮ ‘ದೇಸಿ ನಗು’ ಮೂಲಕ ತಾವು ಚಿತ್ರಕಲೆಯಷ್ಟೇ ಸೊಗಸಾಗಿ ಸಾಹಿತ್ಯವನ್ನು ಬರೆಯಬಲ್ಲರೆಂಬುದನ್ನೂ ಸಾಬೀತುಪಡಿಸಿದ್ದಾರೆ. ‘ಯಶೋಧರೆ ಮಲಗಿರಲಿಲ್ಲ’ ಎಂಬ ಒಂದೇ ಒಂದು ನಾಟಕವನ್ನು ಬರೆದಿರುವ ಅವರಿಗೆ ತಮ್ಮ ಚಿತ್ರಗಳಿಗೆ ‘ನಾಟ್ಯಕತೆ’ ಯನ್ನು ತುಂಬುವ ಶಕ್ತಿಯೂ ಇದೆಯೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿಯೇ ಮೂರ್ತಿಯವರು ‘ದೃಶ್ಯ’ ಕ್ಕೆ ‘ಸಾಹಿತ್ಯ ಶಕ್ತಿ’ ಯನ್ನು ತುಂಬುವಲ್ಲಿ ಸಮನ್ವಯತೆಯನ್ನು ಸಾಧಿಸಿದ್ದಾರೆ. ಇಲ್ಲಿ ಸಾಹಿತ್ಯ – ಕಲೆಗಳ ವಿದ್ಯದಾಲಿಂಗನದಿಂದ ‘ದೃಶ್ಯ’ ಮೂಡಿದೆ. ಅದನ್ನು ಮುದ್ರಣ ತಂತ್ರಜ್ಞಾನ ಸಮರ್ಥವಾಗಿ ಅಭಿವ್ಯಕ್ತಿಸಿದೆ.