*ಗುಣಿತಾಕ್ಷರ ರಚನೆಗಳನ್ನು ಉರ್ದುಭಾಷಿಕ ಮಕ್ಕಳು ಓದು ಮತ್ತು ಬರಹ ಎರಡೂ ನೆಲೆಗಳಲ್ಲೂ ವ್ಯತ್ಯಾಸ ಮಾಡುತ್ತಾರೆ. ಸ್ವರದ ಸಹಾಯದಿಂದ ಉಚ್ಚಾರವಾಗುವ ಅಕ್ಷರಗಳನ್ನು ಗುಣಿತಾಕ್ಷರ ಎಂದು ಕರೆಯುತ್ತಾರೆ. ವ್ಯಂಜನಕ್ಕೆ ಸ್ವರ ಸೇರಿ ಉಚ್ಚಾರವಾಗುವ ಅಕ್ಷರ ವ್ಯಂಜನಕ್ಷರ. ಇಂತಹ ರಚನೆಗಳೇ ಗುಣಿತಾಕ್ಷರಗಳು. ಪಠ್ಯ ಪುಸ್ತಕದಲ್ಲಿ ಬಳಕೆಯಲ್ಲಿ ರುವ ಗುಣಿತಾಕ್ಷರಗಳನ್ನು ಮಾತ್ರ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

*ಪದಾದಿ ಪರಿಸರದಲ್ಲಿ ಕಾ. ಕೆ, ಕೈ ಗುಣಿತಾಕ್ಷರಗಳ ಬದಲು ಖಾ, ಖೆ, ಖೈ ಎಂದು ಓದುತ್ತಾರೆ ಮತ್ತು ಬರೆಯುತ್ತಾರೆ.

ಕಾಕಂಬಿ > ಖಾಕಬಿ

ಕೆಚ್ಚದೆ    > ಬೆಚೆದೆ

ಕೈಕಸಬು > ಖೈಕಸಬು

*ಪದಾದಿ ಪರಿಸರದಲ್ಲಿ ಗುಣಿತಾಕ್ಷರವಾದ ‘\’ ಧ್ವನಿಗೆ ‘ಗೀ’ ಎಂದು ಓದುತ್ತಾರೆ ಮತ್ತು ಬರೆಯುತ್ತಾರೆ.

ಘೀಳಿಡು             ಗಿಲಿಡು/ಗಿಲಿದು

*ಪದಾದಿ ಪರಿಸರದಲ್ಲಿ ಠೀ, ಠೇ, ಗುಣಿತಾಕ್ಷರಗಳಿಗೆ ಬದಲು ಟೀ, ಟೀ ಎಂದು ಓದುವರು ಮತ್ತು ಬರೆಯುವರು.

ಠೀವಿ     > ಟಿವಿ

ಠೇವಣೆ   > ಟೆವನಿ

*ಪದಾದಿ ಪರಿಸರದಲ್ಲಿ ಚೀ, ಚು ಮತ್ತು ಚೆ ಗುಣಿತಾಕ್ಷರಗಳಿಗೆ ಬದಲು ಸೀ, ಸು ಮತ್ತು ಸೆ ಎಂದು ಓದುತ್ತಾರೆ ಮತ್ತು ಬರೆಯುತ್ತಾರೆ.

ಚೀರು    > ಸಿರು

ಚುರುಕು > ಸುರುಕು

ಚೆಂಬು   > ಸೆಬು/ಸೆಂಬು

*ಪದಾದಿ ಪರಿಸರದಲ್ಲಿ ‘ಗಿ’ ಧ್ವನಿಗೆ ಬದಲು ‘ಕಿ’ ಧ್ವನಿಯನ್ನು ಓದುವರು ಮತ್ತು ಬರೆಯುವರು.

ಗಿಡ       > ಕಿಡ

*ಪದಾದಿ ಪರಿಸರದಲ್ಲಿ ಡ, ಡಾ, ಡಿ,ಡೋ ಧ್ವನಿಗಳಿಗೆ ಬದಲು ದ, ದಾ, ದಿ, ದೋ ಎಂದು ಓದುತ್ತಾರೆ ಮತ್ತು ಬರೆಯುತ್ತಾರೆ.

ಡಕಾಯಿ > ದಕಾಯತ

ಡಾಕ್ಟರ್ > ದಾಕ್ಟ್ರು/ದಾಕ್ಟರು

ಡಾಬು   > ದಾಬು

ಡಿಪೊ    > ದಿಪೊ

ಡೋಂಗಿ> ದೋಂಗಿ

*ಉರ್ದುಭಾಷಿಕ ಮಕ್ಕಳು ಗುಣಿತಾಕ್ಷರಗಳನ್ನು ಓದುವಾಗ ‘ಕಾ’ ಮತ್ತು ‘ಕು’ ಧ್ವನಿಗಳಿಗೆ ಬದಲಾಗಿ ‘ಕ’ ಧ್ವನಿ ಓದುತ್ತಾರೆ. ಹಾಗೆಯೇ ‘ಕೂ’ ಮತ್ತು ‘ಕೋ ಧ್ವನಿಗಳಿಗೆ ‘ಕು’ ಧ್ವನಿಯನ್ನು ಹೆಚ್ಚು ಓದುತ್ತಾರೆ. ಈ ನಿಯಮವನ್ನು ಎಲ್ಲಾ ಕಾಗುಣಿತ ಅಕ್ಷರಗಳಿಗೂ ಅನ್ವಯಿಸುತ್ತಾರೆ.

*ಕನ್ನಡ ಮತ್ತು ಉರ್ದುವಿನಲ್ಲಿ ಕಾಗುಣಿತ ಕ್ರಮ ಬೇರೆ ಬೇರೆ ಕನ್ನಡದಲ್ಲಿ ಅ, ಆ, ಇ, ಈ, ಉ, ಊ, ಮುಂತಾದ ಸ್ವರಗಳನ್ನು ವ್ಯಂಜನಾಕ್ಷರಗಳಿಗೆ ಸೇರಿಸಿ ಕಾ, ಕಿ, ಕೀ, ಕು, ಕೂ ಎಂದೂ ಕಾಗುಣಿತಗಳನ್ನು ರಚಿಸಿ ಉಚ್ಚಾರಣೆ ಮಾಡಲಾಗುವುದು. ಆದರೆ ಉರ್ದುವಿ ನಲ್ಲಿ ಆಲೀಫ ಅನ್ನು ಬಳಸಿ ಇದೇ ರೀತಿ ರಚಿಸಿ ಉಚ್ಚಾರಣೆ ಮಾಡಲಾಗುವುದು. ಆದರೆ ಉರ್ದು ಭಾಷಿಕರ ಮಕ್ಕಳು ಕಕ್ಕೆ ದೀರ್ಘ, ಕಕ್ಕೆಗುಣಿಸು ‘ಕಿ’ ಎಂದು ಬರೆಯುತ್ತಾರೆ. ಆದರೆ ಅದೆ ರೀತಿ ಓದಲಾರರು. ಎರಡು ಅಕ್ಷರ-ಗುಣಿತಾಕ್ಷರಗಳಲ್ಲಿರುವ ದೀರ್ಘ ಸ್ವರವನ್ನು ಹ್ರಸ್ವಗೊಳಿಸಿ ಓದುತ್ತಾರೆ. ಈ ವ್ಯತ್ಯಾಸವನ್ನು ಎಲ್ಲತರಗತಿಯ ಮಕ್ಕಳು ಮಾಡುವರು.

ಬರಹದ ಕನ್ನಡ  ಉರ್ದು ಭಾಷಿಕರ ಮಕ್ಕಳು ಓದುವ ಮತ್ತು ಬರೆಯುವ ರೂಪ

ಕಾಗೆ > ಕಗೆ

ಕಾಲು > ಕಲು

ಕಾಳು > ಕಲು

ಕುಣಿ >  ಕುನಿ

ಗಾಜು >            ಗಜು

ಗೂಡು > ಗುಡು

ಘಂಟಿ > ಪಟಿ

ಚೀಲ >  ಚಿಲ

ಜಾಣ > ಜನ

ಜಾಡು > ಜಡು

ತಿಂಡಿ > ತಿಡಿ

ತುಂಟ > ತುಟ

ತೋಟ > ತುಟ

ದಾರಿ > ದರಿ

ದುಃಖ >            ದುಕ

ನಾಕು >            ನಕು

ನೀತಿ >  ನಿತಿ

ಪೇಟ > ಪಟ

ಬಾನು > ಬನು

ಬಾಲ > ಬಲ

ಮುರಿ > ಮರಿ

ಮೂಟೆ > ಮಟ

ಯಾವ > ಯವ

ರಂಗು > ರಗು

ರಾಗ >  ರಗ

ಲಂಗ > ಲಗ

ಹಾಕು > ಅಕು

ಪ್ರಮುಖವಾಗಿ ಈ ವ್ಯತ್ಯಾಸಕ್ಕೆ ಕಾರಣ ಹ್ರಸ್ವ ಮತ್ತು ದೀರ್ಘಸ್ವರಗಳ ನಡುವಿನ ಗೊಂದಲದಿಂದ ಈ ಮಾದರಿ ವ್ಯತ್ಯಾಸ ಮಾಡುತ್ತಿದ್ದಾರೆ ಎಂದು ಊಹಿಸಬಹುದು.

*ಮೂರು ಅಕ್ಷರ ಗುಣಿತಾಕ್ಷರಗಳಲ್ಲಿರುವ ದೀರ್ಘಸ್ವರವನ್ನು ಹ್ರಸ್ವಗೊಳಿಸಿ ಓದುತ್ತಾರೆ ಮತ್ತು ಬರೆಯುತ್ತಾರೆ. ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವರು.

ಆಕಳು > ಅಕಲು/ಅಕಲ

ಆಕಾಶ > ಅಕಸ

ಇಣುಕಿ > ಇನುಕಿ

ಇರುಳು > ಇರಲು

ಉಪಾಯ > ಉಪಯ

ಎಳೆಯ > ಎಲಯ

ಕದಲು > ಕದಲ

ಕಮಾನು > ಕಮನು

ಕಾಪಾಡು > ಕಪಡು

ಕಾಗದ > ಕಗದ

ಗಡಿಗೆ > ಗಡಿಗ

ಜೂಜಾಟ > ಜುಟಟ

ತಾಯಿತ > ತಯಿತ

ತಿಗಣಿ > ತಿಗನಿ

ನಗಾರಿ > ನಗರಿ

ನಡುವೆ > ನಡವ

ನಾಯಕಿ > ನಯಕಿ

ನಾಚಿಕೆ > ನಚಕ

ಭಾಷಣ > ಬಸನ

ಮದುವೆ > ಮದವ

ಮಾವುತ > ಮಉತ

ಮೆದುಳು > ಮಿದ್ಲು

ಮುಂದೆ > ಮಂದೆ

ಮೂಗುತಿ > ಮುಗತಿ

ಸೇವಕ > ಸವಕ

ಹಲವು > ಅಲವ

ಮೊಣಕೈ > ಮೆನಕಯ್ಯಿ

ಮೇಲಿನ ಮೂರು ಅಕ್ಷರಗಳ ರಚನೆಯಲ್ಲೂ ಹ್ರಸ್ವ ಸ್ವರ ಮತ್ತು ದೀರ್ಘಗಳ ನಡುವಿನ ಗೊಂದಲದಿಂದ ಈ ಮಾದರಿ ವ್ಯತ್ಯಾಸವನ್ನು ಮಾಡುತ್ತಿದ್ದಾರೆ. ಜತೆಗೆ ಉಚ್ಚಾರಣೆಯ ಸುಲಭತೆಗಾಗಿ ಈ ಮಾದರಿ ವ್ಯತ್ಯಾಸ ಮಾಡುತ್ತಿರುವುದು ಗಮನಿಸುವಂತಹ ಅಂಶವಾಗಿದೆ.

*ನಾಲ್ಕು ಅಕ್ಷರ ಗುಣಿತಾಕ್ಷರಗಳಲ್ಲಿರುವ ದೀರ್ಘಸ್ವರವನ್ನು ಹ್ರಸ್ವಗೊಳಿಸಿ ಓದುತ್ತಾರೆ ಮತ್ತು ಬರೆಯುತ್ತಾರೆ. ಈ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುವರು.

ಅಧಿಕಾರ > ಅದಿಕರ

ಆಕರ್ಷಕ > ಆರ್ಕಸಕ

ಗಾಳಿಪಟ > ಗಲಿಪಟ

ದಾಸವಾಳ > ದಸವಲ

ಪಾರಿವಾಳ > ಪರಿವಲ

ಬುಧವಾರ > ಬುದವರ

ಭಾನುವಾರ > ಬನವರ

ಶನಿವಾರ > ಸನವರ

ಸಭಾಪತಿ > ಸಬಪತ

ಹದಿನಾಲ್ಕು > ಅದಿನಾಕು

ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ ‘ಹದಿನಾಲ್ಕು’ ಎಂದು ಓದುವುದಕ್ಕೆ ‘ಅದಿನಾಕು’ ಎಂದು ಮಾತನಾಡಿದಂತೆಯ ಓದುತ್ತಾರೆ ಮತ್ತು ಬರೆಯುತ್ತಾರೆ ಅಂದರೆ ಓದುವ ಪ್ರಕ್ರಿಯೆಯಲ್ಲಿ ಆಡುಮಾತಿನ ಪ್ರಯೋಗ ಆಗುವುದು ಕಂಡುಬರುತ್ತದೆ.

*ಐದು ಅಕ್ಷರ ಗುಣಿತಾಕ್ಷರಗಳಲ್ಲಿರುವ ದೀರ್ಘಸ್ವರವನ್ನು ಹ್ರಸ್ವಗೊಳಿಸಿ ಓದುತ್ತಾರೆ ಮತ್ತು ಬರೆಯುತ್ತಾರೆ. ಈ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ತಲೆಬುರುಡೆ > ತಲೆಬುಗುಡೆ

ಬದನೆಕಾಯಿ > ಬದನೆಕಯಿ

ಮಾವಿನಹಣ್ಣು > ಮಮಿನಅನ್ನು

ಸೋದರಮಾವ > ಸದರಮವ

ಮಧುಮಗಳು > ಮದಮಗಲು

ಸಮಾಧಾನ > ಸಮದನ

ಸರೋವರ > ಸರವರ

*ಡಾ.ಕೆ.ವಿ.ನಾರಾಯಣ ಅವರು ‘ಕನ್ನಡದ ಅಕ್ಷರ ರಚನೆಯ ಒಂದು ನಿಯಮ’ (ನಮ್ಮ ಕನ್ನಡ ೫೩, ೨೦೦೪) ಲೇಖನದಲ್ಲಿ ಕನ್ನಡ ಅಕ್ಷರ ರಚನೆಯ ನಿಯಮಗಳನ್ನು ನಿದರ್ಶನ ಸಹಿತ ನಿರೂಪಿಸಿದ್ದಾರೆ. ಅವರು ಕನ್ನಡ ಅಕ್ಷರಗಳನ್ನು ಸರಳ, ಭಾರ ಮತ್ತು ಅತಿಭಾರ ಎಂದು ಮೂರು ವಿಧದಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಸರಳ ಅಕ್ಷರಗಳಲ್ಲಿ ಪ್ರಥಮ ವ್ಯಂಜನ ಬಂದರೆ ಅಲ್ಲಿ ಒಂದಕ್ಕಿಂತ ಹೆಚ್ಚು (ಬಹುಮಟ್ಟಿಗೆ ಎರಡು) ವ್ಯಂಜನಗಳು ಬರಬಹುದು ಎಂದು ಅಭಿಪ್ರಾಯಪಡುತ್ತಾರೆ. ಸಾಮಾನ್ಯವಾಗಿ ಈ ಮಾದರಿ ಅಕ್ಷರಗಳು ಬೇರೆ ಭಾಷೆಯ ಪದಗಳಾಗಿರುತ್ತವೆ.

ಉರ್ದುಭಾಷಿಕ ಮಕ್ಕಳು ಇಂತಹ ಮಾದರಿಯ ಅಕ್ಷರ ರಚನೆಯ ಮಾದರಿಗಳನ್ನು ವಿಶಿಷ್ಟವಾಗಿ ಓದುತ್ತಾರೆ.

*ಉರ್ದು ಭಾಷಿಕರ ಮಕ್ಕಳು ಘರ್ಷ ಮತ್ತು ಸ್ಪರ್ಶಧ್ವನಿ ಕೂಡಿರುವ ವ್ಯಂಜನ ದ್ವಿತ್ವಗಳುಳ್ಳ ಪದಗಳನ್ನು ಓದುವಾಗ ಪದಾದಿ ಪರಿಸರಕ್ಕೆ ‘ಇ’ ಸ್ವರ ಸೇರಿಸಿ ಓದುತ್ತಾರೆ.  ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ. ಉದಾಹರಣೆಗೆ:

ಬರಹದ ಅಂಗ್ಲಿಶ್ ಉರ್ದು ಭಾಷಿಕರ ಮಕ್ಕಳ ಇಂಗ್ಲಿಶ್ ಅರ್ಥ
ಸ್ಕೂಲ್> ಇಸ್ಕೂಲ್ ‘ಶಾಲೆ’
ಸ್ಪೇಷಲ್> ಇಸ್ಪೆಸಲ್ ‘ವಿಶೇಷ’
ಸ್ಟೌವ್> ಇಸ್ಟೌವ್ ‘ಸ್ಟೌವು’

ಮೇಲಿನ ನಿರ್ದೇಶನದಲ್ಲಿ ವ್ಯತ್ಯಾಸ ಕಂಡುಬರುವುದಕ್ಕೆ ಕಾರಣ ಉರ್ದುವಿನಲ್ಲಿ ಘರ್ಷಧ್ವನಿ ಮತ್ತು ಸ್ಪರ್ಶಧ್ವನಿ ಕೂಡಿರುವ ವ್ಯಂಜನ ದ್ವಿತ್ವಗಳು ಪದಾದಿ ಪರಿಸರದಲ್ಲಿ ಬಳಕೆಯಾಗುವುದಿಲ್ಲ. ಕೆಲವೊಂದು ಪದಗಳಿಗೆ ಪದಮಧ್ಯ ಪರಿಸರಕ್ಕೆ ‘ಇ’ ಸ್ವರ ಸೇರಿಸಿ ಓದುತ್ತಾರೆ. ಉದಾಹರಣೆಗೆ:

ಪ್ಲೇಟ್ > ಪಿಲೇಟು ‘ತಟ್ಟೆ’
ಪ್ಲಾನ್ > ಪಿಲಾನು ‘ಯೋಜನೆ’
ಪ್ಲೇಗ್ > ಪಿಲಾಗು ‘ಬಾವುಟ’
ಕ್ಲಾರ್ಕ್ > ಕಿಲಾರ್ಕು ‘ಗುಮಾಸ್ತ’

ಇದೇ ರೀತಿಯಲ್ಲಿ ಉರ್ದುಭಾಷಿಕ ಮಕ್ಕಳು ಕನ್ನಡ ಪದಗಳಿಗೆ ಪದಮಧ್ಯ ಪರಿಸರಕ್ಕೆ ‘ಇ’ ಸ್ವರವನ್ನು ಸೇರಿಸಿ ಓದುವ ಕ್ರಮವಿದೆ. ಉದಾಹರಣೆಗೆ:

ಶ್ರಮ > ಇಸ್ರಮ
ಗ್ರಹಣ > ಗಿರಾನ
ದ್ರಾಕ್ಷಿ > ಗಿರಾಕ್ಷಿ
ಗ್ರಹಚಾರ > ಗಿರಾಚರ
ಕ್ರಯಾ ಕಿರಾಯ

ಹಾಗೆಯೇ ಈ ಮಕ್ಕಳು ಪದಾಂತ್ಯ ವ್ಯಂಜನ ಮಾಡಿ ಓದುವ ಕ್ರಮ ಹೆಚ್ಚು. ಉದಾಹರಣೆಗೆ:

ನೀಚ > ನೀಚ್
ನಾಜೂಕು > ನಾಜೂಕ್
ಮೇಟು > ಮೇಜ್
ಬಂಗಲೆ > ಬಂಗಲ್

ಏಕೆ ಈ ರೀತಿ ವ್ಯಂಜನಾಂತ್ಯ ಮಾಡಿ ಓದುತ್ತಾರೆ ಎಂದರೆ ಉರ್ದುಭಾಷೆಯಲ್ಲಿ ಹೆಚ್ಚಾಗಿ ವ್ಯಂಜನಾಂತ ಪದಗಳು ಬಳಕೆಯಲ್ಲಿರುವುದರಿಂದ ಅವರು ವ್ಯಂಜನಾಂತ್ಯವಾಗಿ ಓದುತ್ತಾರೆ. ಅದರಲ್ಲೂ ‘ಅ’ ಮತ್ತು ‘ಉ’ ಕಾರದಿಂದ ಅಂತ್ಯಗೊಳ್ಳುವ ಪದಗಳನ್ನು ಹೆಚ್ಚಾಗಿ ವ್ಯಂಜನಾಂತ್ಯವಾಗಿ ಓದುವರು. ಅಲ್ಲದೆ ಇವು ಹೆಚ್ಚಾಗಿ ಉರ್ದುಭಾಷೆಯ ಪದಗಳೇ ಆಗಿವೆ. ಅದರ ಮನೆ ಮಾತಿನ ಪ್ರಭಾವದಿಂದ ಕನ್ನಡ ಪದಗಳನ್ನು ವ್ಯಂಜನಾಂತವಾಗಿ ಓದುವರು. ಅಕ್ಷರ ರಚನೆಯ ಕೇಂದ್ರ. ಸ್ವರ ದೀರ್ಘವಾಗಿದ್ದು ಕೊನೆಯ ಪರಿಸರದಲ್ಲಿ ಒಂದು ವ್ಯಂಜನ ಇದ್ದರೂ ಅಂತಹ ಪದಗಳನ್ನು ಸಹ ವ್ಯಂಜನಾಂತವಾಗಿ ಓದುವರು. ಉದಾಹರಣೆಗೆ:

ಬೂತ> ಬೂತ್
ಲೂಟಿ> ಲೂಟ್
ಗೂನ್> ಗೂನ್
ಗೊಜ್ಜು> ಗೊಜ್ ಇತ್ಯಾದಿ

*ಉರ್ದು ಭಾಷಿಕ ಮಕ್ಕಳು ಕನ್ನಡವನ್ನು ಓದುವಾಗ ಅನುನಾಸೀಕರಣ ಹೆಚ್ಚು ಬಳಸಿ ಓದುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ. ಉದಾಹರಣೆಗೆ:

ಬರಹದ ಕನ್ನಡ ಉರ್ದುಭಾಷಿಕ ಮಕ್ಕಳ ಕನ್ನಡ ಅರ್ಥ
ಕಹಿ   ~
ಕಯ್ಯಿ
‘ಕಹಿ’
ಶಾಖ    ~
ಕಾವು
‘ಶಾಖ’
ಸಿಹಿ    ~
ಸಿಯ್ಯಿ
‘ಸಿಹಿ’
ಹಾವು   ~
ಆವು
‘ಹಾವು’
ಹೂವು    ~
ಉವು
‘ಹೂವು’

ಉರ್ದುಭಾಷಿಕ ಕನ್ನಡದಲ್ಲಿ ಅನುನಾಸೀಕರಣ ಪ್ರಕ್ರಿಯೆ ಪ್ರತ್ಯೇಕವಾದ ಧ್ವನಿಮಾದ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಅನುನಾಸೀಕರಣವನ್ನು ‘~’ ಚಿಹ್ನೆಯಿಂದ ಸೂಚಿಸಲಾಗಿದೆ. ಈ ಮಾದರಿ ವ್ಯತ್ಯಾಸ ಮಾಡುವುದಕ್ಕೆ ಕಾರಣ ಉರ್ದುಭಾಷೆಯಲ್ಲಿ ಅನುನಾಸೀಕರಣ ಪ್ರಧಾನವಾದ ಲಕ್ಷಣವಾಗಿದೆ.

*ಉರ್ದುಭಾಷಿಕ ಮಕ್ಕಳು ಪದಮಧ್ಯ ಪರಿಸರದಲ್ಲಿ ಮೂರ್ಧನ್ಯ ಅನುನಾಸಿಕ ಧ್ವನಿಯಾದ ‘ಣ’ ಬದಲು ದಂತ್ಯ ಪಾರ್ಶ್ವಿಕ ವ್ಯಂಜನ ‘ಲ’ ಧ್ವನಿಯನ್ನು ಓದುವುದು ಸರ್ವೇಸಾಮಾನ್ಯವಾದ ಸಂಗತಿ. ಈವೊಂದು ಧ್ವನಿಲಕ್ಷಣ ಕೆಲವು ಕನ್ನಡ ಸಮಾಜದ ಅನಕ್ಷರಸ್ಥರಲ್ಲೂ ಕಂಡುಬರುತ್ತದೆ.

ಬರಹದ ಕನ್ನಡ ಉರ್ದುಭಾಷಿಕ ಮಕ್ಕಳು ಓದುವ ಕನ್ನಡ
ಸರಪಣಿ > ಸರ್ಪಲಿ
ಗಿಳಿ > ಗಿಲಿ

ಮೇಲಿನ ನಿರ್ದೇಶನಗಳನ್ನು ಗಮನಿಸಿದಾಗ ಉರ್ದುಭಾಷಿಕ ಮನೆಮಾತಿನಲ್ಲಿ ಮೂರ್ಧನ್ಯ ಅನುನಾಸಿಕ ಧ್ವನಿಯಾದ ‘ಣ’ ಧ್ವನಿ ಇಲ್ಲ. ಅ ಧ್ವನಿಯ ಕೆಲಸವನ್ನು ದಂತ್ಯ ಪಾರ್ಶ್ವಿಕ ಧ್ವನಿಯಾದ ‘ಲ’ ಮಾಡುತ್ತದೆ. ಆದರೆ ಕೆಲವು ಸಂದರ್ಭದಲ್ಲಿ ದಂತ್ಯ ಅನುನಾಸಿಕ ‘ನ’ವನ್ನು ಓದುವರು. ಅಂದರೆ ಉರ್ದು ಭಾಷಿಕರ ಮಕ್ಕಳು ‘ಣ’ ಧ್ವನಿಗೆ ಬದಲು ‘ನ’ ಮತ್ತು ‘ಲ’ ಧ್ವನಿಗಳನ್ನು ಓದುವರು ಎಂದಾಯ್ತು. ಆದರೆ ವಿಶೇಷವಾಗಿ ಕನ್ನಡ ಮನೆಮಾತುಳ್ಳ ಮಕ್ಕಳು ‘ಗಿಳಿ’ಗೆ ಬದಲು ‘ಗಿಣಿ’ ಅಥವಾ ‘ಗಿನಿ’ ಎಂದು ಓದುವರು. ಇದು ಕೆಲವು ಸಾಮಾಜಿಕ ವರ‍್ಗದ ಮಕ್ಕಳು ಮಾತ್ರ ಓದುವರು.

*ಉರ್ದು ಭಾಷಿಕ ಮಕ್ಕಳು ಪದಾದಿ ಮತ್ತು ಪದಮಧ್ಯ ಪರಿಸರದಲ್ಲಿ ಸ್ಪರ್ಶ ತಾಲವ್ಯ ಅಘೋಷ ವ್ಯಂಜನ ‘ಚ’ ಧ್ವನಿಗೆ ಬದಲು ವರ್ತ್ಸ್ಯ ಸಂಘರ್ಷ ಅಘೋಷ ‘ಸ’ ಧ್ವನಿಯನ್ನು ಓದುವರು. ಈವೊಂದು ಧ್ವನಿಲಕ್ಷಣ ದಿನನಿತ್ಯ ವ್ಯವಹಾರದಲ್ಲಿ ಕನ್ನಡಿಗರ ಸಂಪರ್ಕ ಕಡಿಮೆ ಇರುವ ಉರ್ದು ಭಾಷಿಕರ ಮಕ್ಕಳು ಓದುವರು.

ಬರಹದ ಕನ್ನಡ ಉರ್ದುಭಾಷಿಕ ಮಕ್ಕಳು
ಚೀಲ > ಸೀಲ
ಚಿಲಕ > ಸಿಲ್ಕ
ಪದಮಧ್ಯ ಪರಿಸರ
ಕುರ್ಚಿ ಕುರ್ಸಿ.

ಈ ಮೇಲಿನ ನಿದರ್ಶನಗಳನ್ನು ಗಮನಿಸಿದಾಗ ಉರ್ದುವಿನಲ್ಲಿ ಪದಾದಿ ಪರಿಸರದಲ್ಲಿ ‘ಚ’ ಧ್ವನಿಗೆ ‘ಸ’ ಧ್ವನಿಯನ್ನು ಓದುವರು. ಈ ಒಂದು ಧ್ವನಿ ಲಕ್ಷಣ ದ್ರಾವಿಡ ಭಾಷೆಗಳಲ್ಲೂ ಕಂಡುಬರುತ್ತದೆ. ಅಲ್ಲದೆ ಉಚ್ಚಾರಣೆಯಂತೆ ಬರವಣಿಗೆ ಮಾಡುತ್ತಾರೆ. ಅಂದರೆ ತಾವು ಮಾತನಾಡುವ ಕನ್ನಡದಂತೆ ಬರವಣಿಗೆ ಮಾಡುವುದು ವಿಶೇಷ.

ಉದಾ:

ಬರಹದ ರೂಪ

ಉರ್ದುಭಾಷಿಕ ಮಕ್ಕಳು ಓದುವ ಮತ್ತು ಬರೆಯುವ ರೂಪ

ಜನಿಸಿದನು > ಜನಿಇಸಿದನು
ಒಣಮರ > ವನಮರ
ಚಹ > ಚಅ
ಏಲಕಿ > ಯಲಕಿ
ಒಗ್ಗಟ್ಟು > ವಗ್ಗಟ್ಟು