.. ಓದು ಮತ್ತು ಬರವಣಿಗೆ ಸಂದರ್ಭದಲ್ಲಿ ಕಂಡುಬರುವ ವ್ಯತ್ಯಾಸಗಳು

ಉರ್ದುಭಾಷಿಕ ಮಕ್ಕಳು ಶಾಲೆಯ ಆವರಣದಲ್ಲಿ ಕನ್ನಡ ಭಾಷೆಯನ್ನು ಓದುವಾಗ  ಮತ್ತು ಬರವಣಿಗೆ ಮಾಡುವಾಗ ಯಾವ ಮಾದರಿ ವ್ಯತ್ಯಾಸಗಳನ್ನು ಮಾಡುತ್ತಾರೆ ಎಂಬುದು ಗಮನಿಸುವಂತಹ ಅಂಶ. ಕನ್ನಡದಲ್ಲಿ ಓದಿನ ಕ್ರಮದ ಬಗೆಗೆ ಶಾಲಾ ಶಿಕ್ಷಣದಲ್ಲಿ ರೇಖಾತ್ಮಕವಾಗಿ ಓದಲು ಸೂಚಿಸುತ್ತಾರೆ. ಓದಿನ ಬಗೆಗೆ ರಾಬರ್ಟ್ ಲ್ಯಾಡೋ (೧೯೬೪, ಪು.೧೩೨) ಅವರು  ‘To read is to grasp Language patterns form their written Represatation’  ಎಂದಿದ್ದಾರೆ. Mackey (೧೯೬೫, ಪು.೨೭೮) ಅವರು ಓದಿನ ಕೌಶಲಗಳು ಎರಡು ಅಂಶಗಳನ್ನು ಒಳಗೊಂಡಿರುತ್ತದೆ ಎಂದಿದ್ದಾರೆ. ಅವು ಇಂತಿವೆ.

1. The visual Recognition of words, and

2. Comprehension of their Content.

ಕರ್ನಾಟಕದ ಉರ್ದು ಭಾಷಿಕ ಮಕ್ಕಳು ತರಗತಿಯಲ್ಲಿ ಕನ್ನಡದ ಬರವಣಿಗೆ ಮತ್ತು ಓದಿನ ಸಮಸ್ಯೆಗಳನ್ನು ಎರಡು ನೆಲೆಗಳಲ್ಲಿ ಅಧ್ಯಯನ ಮಾಡಲಾಗಿದೆ.

ಅ. ಸ್ವರಗಳ ನೆಲೆ

ಆ. ವ್ಯಂಜನಗಳ ನೆಲೆ

ಇ. ವ್ಯಾಕರಣಾಂಶಗಳು

ಈ ಎರಡು ನೆಲೆಗಳ ಧ್ವನಿಗಳನ್ನು ವಿವಿಧ ಪರಿಸರಗಳಲ್ಲಿ (ಪದದ ಮೊದಲು, ನಡುವೆ   ಮತ್ತು ಕೊನೆ) ಗುರುತಿಸಿ ವ್ಯತ್ಯಾಸವಾಗುವ ಪರಿಸರವನ್ನು ಮಾತ್ರ ವಿಶ್ಲೇಷಣೆಗೆ ತೆಗೆದುಕೊಳ್ಳಲಾಗಿದೆ.

ಬರವಣಿಗೆ ಸಂದರ್ಭದಲ್ಲಿ ಮಾಡುವ ವ್ಯತ್ಯಾಸಗಳು

ಕನ್ನಡ ಭಾಷೆಯ ಬರವಣಿಗೆ ಚರಿತ್ರೆ ಸುಮಾರು ೧,೫೦೦ ವರ್ಷಗಳ ಹಳೆಯದು. ಇದಕ್ಕೆ ನಮಗೆ ಸಾಕಷ್ಟು ಆಧಾರಗಳು ಇವೆ. ಲಿಖಿತ ಆಧಾರಗಳ ಮೂಲಕ ಕನ್ನಡ ಭಾಷೆ ಹೇಗೆ ವಿವಿಧ ಹಂತಗಳಲ್ಲಿ ತನ್ನ ಬರವಣಿಗೆಯ ಸ್ವರೂಪದಲ್ಲಿ ವ್ಯತ್ಯಾಸ ಪಡೆದುಕೊಂಡು ಬಂದಿದೆ ಎಂಬುದು ಗಮನಿಸುವಂತಹ ಅಂಶವಾಗಿದೆ. ಹೆಚ್ಚು ಕಡಿಮೆ ಕನ್ನಡದಲ್ಲಿ ಮಾತಿನಂತೆ ಬರವಣಿಗೆ ಮಾಡಲಾಗುವುದು. ಕನ್ನಡ ಬರವಣಿಗೆ ಪದ್ಧತಿ ಶೂನ್ಯ(ಂ) ಮಾದರಿಯಲ್ಲಿ ಇದೆ. ಈ ಹಿನ್ನಲೆಯಿಂದ ಕೈ ಚಲನೆಯ ಆಧಾರದ ಮೇಲೆ ಎರಡು ವರ್ಗಗಳಲ್ಲಿ ವರ್ಗೀಕರಿಸ ಬಹುದು.

ಅ. ಗಡಿಯಾರದ ಮಾದರಿ

ಆ. ಗಡಿಯಾರದ ವಿರುದ್ಧ ಮಾದರಿ.

ಮೇಲಿನ ಎರಡು ಮಾದರಿಗಳನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಆದರೆ ಉರ್ದುಭಾಷೆಯನ್ನು ಬಲದಿಂದ ಎಡಕ್ಕೆ ಬರೆಯಲಾಗುತ್ತದೆ. ಈ ಹಿನ್ನಲೆಯಿಂದ ಉರ್ದು ಭಾಷಿಕ ಮಕ್ಕಳು ಕನ್ನಡ ಬರಹವನ್ನು ಉರ್ದುವಿನ ಕ್ರಮದಲ್ಲೇ ಬರೆಯುತ್ತಾರೆ. ಎಷ್ಟರ ಮಟ್ಟಿಗೆ ಅವರ ಮನೆ ಮಾತಿನ ಪ್ರಭಾವ ಇದೆ ಎಂದರೆ ತಮ್ಮ ನೋಟ್ ಪುಸ್ತಕದಲ್ಲಿ ಬರೆಯುವಾಗ ಎಡದ ಕಡೆಯಿಂದ ಆರಂಭಿಸದೆ ಬಲಗಡೆಯಿಂದ ಎಡದ ಕಡೆಗೆ ಬರೆಯು ತ್ತಾರೆ. ಕನ್ನಡ ಬರವಣಿಗೆ ಮಾಡುವುದಕ್ಕೆ ಯಾವ ವಿಧಾನವನ್ನು ಅನುಸರಿಸಿದರೂ ಸಹ ಮನೆ ಮಾತಿನ ಬರವಣಿಗೆಯ ನಿಯಮವೊಂದು ಇರುತ್ತದೆ ಎಂಬುದನ್ನು ಮರೆಯಬಾರದು. ಕನ್ನಡ ಮನೆಮಾತುಳ್ಳ ಮಕ್ಕಳು ಈ ಸುಲಭವಾದ ವಿಧಾನವನ್ನು ಅನುಸರಿಸಬಹುದು. ಏಕೆ ಅಂತಹದೊಂದು ವಿಧಾನವನ್ನು ಅನುಸರಿಸಿದ್ದಾರೆ ಎಂಬುದನ್ನು ಶೋಧಿಸಬೇಕಾಗುತ್ತದೆ.

ಉರ್ದುಭಾಷಿಕ ಮಕ್ಕಳು ಕನ್ನಡ ಬರವಣಿಗೆಯನ್ನು ಮಾಡುವಾಗ ವಿವಿಧ ಹಂತಗಳಲ್ಲಿ ವ್ಯತ್ಯಾಸ ಮಾಡುವರು. ಇದಕ್ಕೆ ಕಾರಣಗಳು ಇಲ್ಲದೆ ಇಲ್ಲ. ಅಂತಹ ವ್ಯತ್ಯಾಸಗಳನ್ನು  ಬೇರೆ ಬೇರೆ ಹಂತಗಳಲ್ಲಿ ಅಧ್ಯಯನ ಮಾಡಬಹುದು.

ಅ. ಬರವಣಿಗೆ ಕ್ರಮದಲ್ಲಿನ ವ್ಯತ್ಯಾಸ.

ಆ. ಒಂದು ಧ್ವನಿಗೆ ಮತ್ತೊಂದು ಧ್ವನಿ ಬಳಕೆ

ಇ. ಆಡುಮಾತಿನ ರೂಪಗಳನ್ನು ಬರವಣಿಗೆಗೆ ತರುವುದು.

ಈ. ಕಾಗುಣಿತದಲ್ಲಿ ವ್ಯತ್ಯಾಸಗಳು.

ಉ. ರಚನೆ ನೆಲೆಯ ಸಾದೃಶ್ಯತೆಯಿಂದ ವ್ಯತ್ಯಾಸ ಮಾಡುವುದು.

ಬರಹ ಪೂರಕ ಚಟುವಟಿಕೆಯಲ್ಲಿನ ಬರಹ ವಿಧಾನಗಳು

ಒತ್ತಕ್ಷರಗಳ ಚಿಹ್ನೆಗಳನ್ನು ಬರೆಯುವ ವಿಧಾನ

‘ರ’ ಕಾರಕ್ಕೆ ಎರಡು ಬಗೆಯ ಒತ್ತಕ್ಷರಗಳ ಚಿಹ್ನೆಗಳಿವೆ.

ಅ. ͜  (ಆ).

͜ ಈ ಚಿಹ್ನೆಯನ್ನು ಕನ್ನಡ ಮನೆ ಮಾತುಳ್ಳ ಮಕ್ಕಳು ಬಲಗಡೆಯಿಂದ ಎಡಗಡೆಗೆ ಬರವಣಿಗೆ ಮಾಡಿದರೆ, ಉರ್ದುಭಾಷಿಕ ಮಕ್ಕಳು ಬಲಗಡೆಯಿಂದ ಆರಂಭಿಸಿ ಬಲಗಡೆಗೆ ನಿಲ್ಲಿಸುತ್ತಾರೆ. ಏಕೆಂದರೆ ಉರ್ದು ಭಾಷೆಯಲ್ಲಿ ‘  ’ ಈ ಚಿಹ್ನೆಯನ್ನು ‘ಅಲೀಪ್ ಮಖ್‌ಸೂರ್’ ಎಂದು ಕರೆಯುತ್ತಾರೆ. ಇದು ಕನ್ನಡದಲ್ಲಿ ರ ಎಂದು ಉಚ್ಚಾರಣೆಯಲ್ಲಿದೆ.

ಈ ಚಿಹ್ನೆಯನ್ನು ಕನ್ನಡ ಮನೆಮಾತುಳ್ಳ ಮಕ್ಕಳು ಕೆಳಗಡೆಯಿಂದ ಆರಂಭಿಸಿ ಬಲಗಡೆಗೆ ತಿರುಗಿ ಮೇಲೆ ಹೋಗಿ ಎಡಗಡೆಗೆ ನಿಲ್ಲಿಸುತ್ತಾರೆ. ಆದರೆ ಉರ್ದುಭಾಷಿಕರ ಮಕ್ಕಳು ಎಡಗಡೆಯಿಂದ ಆರಂಭಿಸಿ ಕೆಳಗೆ ಬಂದು ಮೇಲೆ ಹೋಗಿ ಕೆಳಗೆ ಬಂದು ನಿಲ್ಲಿಸುತ್ತಾರೆ.

ಮೂರನೆ ತರಗತಿ ಮಕ್ಕಳು ರೇಖಾಭ್ಯಾಸ=೧ರಲ್ಲಿ (ಬರಹ ಪೂರಕ ಚಟುವಟಿಕೆ) ದಾಖಲಾಗಿರುವ ಚಿಹ್ನೆಗಳು.

ಚಿಹ್ನೆಯನ್ನು ಬಲ ಭಾಗದ ಮೇಲಿಂದ ಆರಂಭಿಸಿ ಕೆಳಗೆ ಬಂದು ಮೇಲೆ ಹೋಗಿ ನಿಲ್ಲಿಸುವ ಬದಲು ಎಡಭಾಗದ ಮೇಲಿಂದ ಆರಂಭಿಸಿ ಕೆಳಗೆ ಬಂದು ಮೇಲೆ ಹೋಗಿ ನಿಲ್ಲಿಸುವ ಪರಿಪಾಠವಿದೆ.

ಚಿಹ್ನೆಯನ್ನು ಬಲಭಾಗದ ಕೆಳಗಿನಿಂದ ಆರಂಭಿಸಿ ಮೇಲೆ ಹೋಗಿ ಕೆಳಗೆ ಬಂದು ಎಡಭಾಗದಲ್ಲಿ ನಿಲ್ಲಿಸುವ ಬದಲು ಎಡಭಾಗದ ಕೆಳಗಿನಿಂದ ಆರಂಭಿಸಿ ಮೇಲೆ ಹೋಗಿ ಕೆಳಗೆ ಬಂದು ಬಲಭಾಗದಲ್ಲಿ ಕೊನೆಗೊಳಿಸುತ್ತಾರೆ.

‘U’ ಚಿಹ್ನೆಯನ್ನು ಬಲಭಾಗದ ಮೇಲಿನ ಭಾಗದಿಂದ ಆರಂಭಿಸಿ ಕೆಳಗೆ ಬಂದು ಮೇಲೆ ಹೋಗಿ ಎಡಭಾಗದಲ್ಲಿ ನಿಲ್ಲಿಸುವ ಬದಲು, ಎಡಭಾಗದ ಮೇಲಿನ ಭಾಗದಿಂದ ಆರಂಭಿಸಿ ಕೆಳಗೆ ಬಂದು ಮೇಲೆ ಹೋಗಿ ಬಲ ಭಾಗದಲ್ಲಿ ನಿಲ್ಲಿಸುವ ಬದಲು, ಬಲ ಭಾಗದಲ್ಲಿ ನಿಲ್ಲಿಸುತ್ತಾರೆ.

‘C’ ಈ ರೇಖೆಯನ್ನು ಮೇಲ್ಭಾಗದಿಂದ ಆರಂಭಿಸಿ ಕೆಳಗೆ ಬಂದು ಬಲಭಾಗದಿಂದ ಎಡಭಾಗದಲ್ಲಿ ನಿಲ್ಲಿಸುವ ಬದಲು ಕೆಳಭಾಗದಿಂದ ಆರಂಭಿಸಿ ಮೇಲೆ ಹೋಗಿ ಬಲಭಾಗ ದಿಂದ ಎಡ ಭಾಗದಲ್ಲಿ ನಿಲ್ಲಿಸುತ್ತಾರೆ.

ͻ ಈ ರೇಖಾಭ್ಯಾಸವನ್ನು ಮೇಲಿನ ಭಾಗದಿಂದ ಆರಂಭಿಸಿ ಕೆಳಗೆ ಬಂದು ಎಡಭಾಗದಿಂದ ಬಲಭಾಗಕ್ಕೆ ನಿಲ್ಲಿಸುವುದರ ಬದಲು ಕೆಳಭಾಗದಿಂದ ಆರಂಭಿಸಿ ಮೇಲೆ ಹೋಗಿ ಎಡಭಾಗದಿಂದ ಬಲಭಾಗಕ್ಕೆ ನಿಲ್ಲಿಸುವುದು ಅಭ್ಯಾಸವಾಗಿದೆ.

‘S’ ಈ ರೇಖಾಭ್ಯಾಸವನ್ನು ಮಾತ್ರ ಕನ್ನಡ ಬರವಣಿಗೆಯ ನಿಯಮದಂತೆ ಬರೆಯುತ್ತಾರೆ.

ಈ ರೇಖಾಬ್ಯಾಸವನ್ನು ಮೇಲುಗಡೆಯಿಂದ ಆರಂಭಿಸಿ ಮೇಲಕ್ಕೆ ಹೋಗಿ ಕೆಳಕ್ಕೆ ಬಂದು ಮೇಲಕ್ಕೆ ಹೋಗಿ ನಿಲ್ಲುವುದು. ಆದರೆ ಉರ್ದುಭಾಷಿಕರ ಮಕ್ಕಳು ಎಡಗಡೆಯಿಂದ ಮೇಲುಗಡೆಯಿಂದ ಆರಂಭಿಸಿ ಕೆಳಕ್ಕೆ ಬಂದು ಸ್ವಲ್ಪ ಮೇಲಕ್ಕೆ ಹೋಗಿ ನಿಲ್ಲಿಸುತ್ತಾರೆ.

‘   ’ ಈ ರೇಖಾಭ್ಯಾಸವನ್ನು ಬಲಗಡೆಯಿಂದ ಆರಂಭಿಸಿ ಮೇಲಕ್ಕೆ ಹೋಗಿ ಕೆಳಕ್ಕೆ ಬಂದು ಎಡಗಡೆಯಲ್ಲಿ ನಿಲ್ಲಿಸುತ್ತಾರೆ. ಆದರೆ ಉರ್ದುಭಾಷಿಕ ಮಕ್ಕಳು ಎಡಗಡೆಯಿಂದ ಆರಂಭಿಸಿ ಮೇಲಕ್ಕೆ ಹೋಗಿ ಕೆಳಕ್ಕೆ ಬಂದು ಬಲಗಡೆಯಲ್ಲಿ ನಿಲ್ಲಿಸುತ್ತಾರೆ.

‘   ’ ಈ ರೇಖ್ಯಾಭ್ಯಾಸವನ್ನು ಬಲಗಡೆಯಿಂದ ಆರಂಭಿಸಿ ಸ್ವಲ್ಪ ಮೇಲೆ ಹೋಗಿ ಕೆಳಕ್ಕೆ ಬಂದು ಮತ್ತೆ ಮೇಲೆ ಹೋಗಿ ಕೊನೆಗೊಳಿಸುವುದು. ಇದಕ್ಕೆ ವಿರುದ್ಧವಾಗಿ ಅಂದರೆ ಎಡಗಡೆಯಿಂದ ಆರಂಭಿಸಿ ಸ್ವಲ್ಪಕೆಳಕ್ಕೆ ಬಂದು ಮತ್ತೆ ಮೇಲೆ ಹೋಗಿ ಕೆಳಕ್ಕೆ ಬಂದು ಮೇಲಕ್ಕೆ ಕೊನೆಗೊಳಿಸುವರು.

ಈ ರೇಖಾಭ್ಯಾಸವನ್ನು ಬಲಗಡೆಯ ಮೇಲಿನ ಭಾಗದಿಂದ ಆರಂಭಿಸಿ ಕೆಳಗೆ ಬಂದು ಅದರ ವಿರುದ್ಧ ದಿಕ್ಕಿನಲ್ಲಿ ಮೇಲೆ ಹೋಗಿ ನಿಲ್ಲುವುದು. ಆದರೆ ಉರ್ದುಭಾಷಿಕ ಮಕ್ಕಳು ಎಡಗಡೆಯ ಮೇಲಿನ  ಭಾಗದಿಂದ ಆರಂಭಿಸಿ ಕೆಳಗೆ ಬಂದು ಅದರ ವಿರುದ್ಧ ದಿಕ್ಕಿನಲ್ಲಿ ಮೇಲೆ ಹೋಗಿ ಸುರುಳಿ ಆಕಾರದಲ್ಲಿ ನಿಲ್ಲುವುದು.

‘   ’ ಈ ರೇಖಾಭ್ಯಾಸವನ್ನು ಮೇಲಿನಭಾಗದ ಎಡಭಾಗದಿಂದ ಆರಂಭಿಸಿ ಬಲಭಾಗಕ್ಕೆ ತಿರುಗಿ ಕೆಳಗೆ ಬಂದು ಬಲಭಾಗಕ್ಕೆ ತಿರುಗಿ ಕೆಳಗೆ ಬಂದು ಬಲಭಾಗದಿಂದ ಎಡಭಾಗಕ್ಕೆ ನಿಲ್ಲಿಸುವ ಬದಲು ಕೆಳಭಾಗದಿಂದ ಆರಂಭಿಸಿ ಮೇಲೆ ಹೋಗಿ ಬಲಭಾಗಕ್ಕೆ ತಿರುಗಿ ಮೇಲೆ  ಬಲಭಾಗದಿಂದ ಎಡಭಾಗಕ್ಕೆ ನಿಲ್ಲಿಸುತ್ತಾರೆ.

‘    ’ ಈ ರೇಖಾಭ್ಯಾಸವನ್ನು ಮೇಲಿನಭಾಗದ ಬಲಭಾಗದಿಂದ ಆರಂಭಿಸಿ ಕೆಳಗೆ ಬಂದು ಎಡಗಡಗೆ ತಿರುಗಿ ಪುನ ಬಲಭಾಗಕ್ಕೆ ಚಲಿಸಿ ಕೆಳಗೆ ಬಂದು ಎಡಭಾಗದಿಂದ ಬಲಭಾಗಕ್ಕೆ ಚಲಿಸಿ ಕೊನೆಗೊಳಿಸಲಾಗುವುದು. ಆದರೆ ಉರ್ದುಭಾಷಿಕರು ಎಡಗಡೆಯಿಂದ ಆರಂಭಿಸಿ ಬಲಗಡೆಗೆ ಚಲಿಸಿ ಮೇಲಿನ ಭಾಗಕ್ಕೆ ಚಲಿಸಿ ಎಡಗಡಗೆ ತಿರುಗಿ ಮೇಲಕ್ಕೆ ಹೋಗಿ ಎಡಭಾಗಕ್ಕೆ ನಿಲ್ಲಿಸುವುದು ರೂಢಿಯಲ್ಲಿದೆ.

‘   ’ ಈ ರೇಖಾಭ್ಯಾಸವನ್ನು ಕೆಳಗಡೆಯಿಂದ ಆರಂಭಿಸಿ ಮೇಲಕ್ಕೆ ಚಲಿಸಿ ಕೆಳಕ್ಕೆ ಬಂದು ಕೊನೆಗೊಳಿಸಲಾಗುತ್ತದೆ. ಆದರೆ ಉರ್ದು ಭಾಷಿಕ ಮಕ್ಕಳು ಎಡಗಡೆಯ ಕೆಳಗಡೆಯಿಂದ ಆರಂಭಿಸಿ ಮೇಲಕ್ಕೆ ಚಲಿಸಿ ಕೆಳಕ್ಕೆ ಬಂದು ಬಲಗಡೆಯಲ್ಲಿ ಕೊನೆಗೊಳಿಸಲಾಗುತ್ತದೆ.

‘  ’ ಈ ರೇಖಾಭ್ಯಾಸವನ್ನು ಮೇಲಿನಿಂದ ಆರಂಭಿಸಿ ಕೆಳಗಡೆಯಿಂದ ಬಂದು ಮತ್ತೆ ಮೇಲುಗಡೆಯಲ್ಲಿ ಕೊನೆಗೊಳ್ಳುವುದು. ಆದರೆ ಉರ್ದು ಭಾಷಿಕ ಮಕ್ಕಳು ಎಡಗಡೆಯ ಮೇಲಿನಿಂದ ಆರಂಭಿಸಿ ಕೆಳಗಡೆಗೆ ಬಂದು ಮತ್ತೆ ಮೇಲುಗಡೆಗೆ ಕೊನೆಗೊಳ್ಳುತ್ತದೆ.

‘…………..’ ಈ ರೇಖಾಭ್ಯಾಸವನ್ನು ಕನ್ನಡ ಬರವಣಿಗೆಯ ನಿಯಮದಂತೆ ಬರೆಯುತ್ತಾರೆ.

‘…………..’ ಈ ರೇಖಾಭ್ಯಾಸವನ್ನು ಬಲಗಡೆಯಿಂದ ಆರಂಭಿಸಿ ಎಡಗಡೆಗೆ ನಿಲ್ಲಿಸಿದರೆ, ಉರ್ದುಭಾಷಿಕ ಮಕ್ಕಳು ಎಡಗಡೆಯಿಂದ ಆರಂಭಿಸಿ ಬಲಗಡೆಗೆ ನಿಲ್ಲಿಸುತ್ತಾರೆ.

‘…………..’ ಈ ರೇಖಾಭ್ಯಾಸವನ್ನು ಬಲಗಡೆಯಿಂದ ಆರಂಭಿಸಿ ಎಡಗಡೆಗೆ ಬಂದು ಮೇಲುಗಡೆಗೆ ಹೋಗಿ ಕೊನೆಗೊಳಿಸಲಾಗುವುದು. ಆದರೆ ಉರ್ದುಭಾಷಿಕರ ಮಕ್ಕಳು ಮೇಲುಗಡೆಯಿಂದ ಆರಂಭಿಸಿ ಕೆಳಗೆ ಬಂದು ಎಡಗಡೆಯಿಂದ ಬಲಗಡೆಗೆ ಬಂದು ನಿಲ್ಲಿಸುವರು.

ಕನ್ನಡದಲ್ಲಿ ಬರವಣಿಗೆ ಕ್ರಮ ಪ್ರಾದೇಶಿಕ ಮತ್ತು ಸಾಮಾಜಿಕವಾಗಿ ಬೇರೆ ಬೇರೆ ಆಗಿವೆ. ಅವು ಬರವಣಿಗೆ ಮಾಡುವ ಕ್ರಮದಲ್ಲಿ ವ್ಯತ್ಯಾಸವಾಗುತ್ತಿರಬಹುದು. ಆದರೆ ಕನ್ನಡ ಬರವಣಿಗೆಯ ಕ್ರಮಕ್ಕೆ ವಿರುದ್ಧವಾಗಿರುವುದಿಲ್ಲ. ಈ ಮಾತು ಕನ್ನಡ ಮನೆಮಾತುಳ್ಳ ಮಕ್ಕಳಿಗೂ ಅನ್ವಯಿಸುತ್ತದೆ. ವಿನಹ ಕನ್ನಡೇತರ ಮಕ್ಕಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಕರ್ನಾಟಕದಲ್ಲಿ ಉರ್ದುಭಾಷಿಕ ಮಕ್ಕಳು ಕನ್ನಡ ಬರವಣಿಗೆಯನ್ನು ವಿಶಿಷ್ಟವಾಗಿ ಬರೆಯುತ್ತಾರೆ. ಅದಕ್ಕೆ ಕಾರಣಗಳಿವೆ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ ಕನ್ನಡ ಮನೆಮಾತುಳ್ಳ ಮಕ್ಕಳು ಕನ್ನಡ ಬರವಣಿಗೆ ಕ್ರಮದ ಬಗ್ಗೆ ಮಾಡುವ ವ್ಯತ್ಯಾಸಗಳಿಗೆ ಕಾರಣಗಳಿಲ್ಲ ಎಂದಲ್ಲ. ಉದಾ: ‘ಕ’ ಅಕ್ಷರವನ್ನು ಬರವಣಿಗೆ ಮಾಡುವಾಗ ಒಂದು ದೊಡ್ಡ ಸೊನ್ನೆ, ಒಂದು ಚಿಕ್ಕ ಸೊನ್ನೆಗಳೆರೆಡನ್ನು ಬಳಸಿ ಬರವಣಿಗೆ ಮಾಡುತ್ತಾರೆ. ಕೆಲವರು ಒಂದೇ ಸೊನ್ನೆಯನ್ನು ಬಳಸಿ ಅದರ ಮೇಲೆ ಅಡ್ಡ ರೇಖೆಯೊಂದನ್ನು ಬರೆದು ನಂತರ ಉದ್ದವಾದ ರೇಖೆಯೊಂದನ್ನು ಬಳಕೆ ಮಾಡಿ ಅದಕ್ಕೆ ತಲೆಕಟ್ಟನ್ನು ಸೇರಿಸಿ ಬರೆಯುತ್ತಾರೆ. ಇಲ್ಲಿ ಕನ್ನಡ ಬರವಣಿಗೆ ಕ್ರಮ ಏನು? ಎಂಬುದು ಅಧ್ಯಾಪಕರಿಗೆ ತಿಳಿದಿರಬೇಕು. ಆಗ ಮಾತ್ರ ಬರವಣಿಗೆ ಕ್ರಮದಲ್ಲಿನ ವ್ಯತ್ಯಾಸವನ್ನು ತಿದ್ದುವುದಕ್ಕೆ ಸಾಧ್ಯ. ಇಲ್ಲವಾದಲ್ಲಿ ಪರೀಕ್ಷೆಯ ದೃಷ್ಟಿಯಿಂದ ಸದ್ಯಕ್ಕೆ ಕಲಿ ನಂತರ ನೋಡೋಣ ಎಂಬ ಅಭಿಪ್ರಾಯವನ್ನು ತಾಳುವ ಅಧ್ಯಾಪಕರಿಗೇನು ಕೊರತೆಯಿಲ್ಲ. ಯಾವ ಮಾದರಿಯಲ್ಲಾದರೂ ಮಕ್ಕಳು ಬರವಣಿಗೆ ಮಾಡಿದರೆ ಆಯ್ತು ಎಂಬ ಮನೋಭಾವುಳ್ಳ ಅಧ್ಯಾಪಕರು ಇದ್ದಾರೆ.

ಅಕ್ಷರವನ್ನು ಕನ್ನಡ ಮನೆಮಾತುಳ್ಳ ಮಕ್ಕಳು ಮೂರು ಬರೆದು ಅದರ ಮೇಲೆ ತಲೆಕಟ್ಟು ಹಾಕುವರು. ಉರ್ದು ಭಾಷಿಕರ ಮಕ್ಕಳು ‘ತ’ ಅಕ್ಷರವನ್ನು ಮೂರು ಬರೆದು ಮೇಲಿಂದ ಪ್ರಾರಂಭಿಸಿ ಕೆಳಗೆ ಬಂದು ಎಡಕ್ಕೆ ನಿಲ್ಲಿಸುತ್ತಾರೆ. ಕನ್ನಡ ಭಾಷೆಯನ್ನು ಬೋಧಿಸುವ ಅಧ್ಯಾಪಕರು ಇದು ತಪ್ಪು ಎಂದು ಹೇಳಿ ತಿದ್ದುವಂತಹ ಕೆಲಸ ಮಾಡಬೇಕಾಗಿದೆ. ಕನ್ನಡ ಬರವಣಿಗೆಯ ಸರಿಯಾದ ಕ್ರಮದ ಬಗ್ಗೆ ತಿಳಿಹೇಳಬೇಕಾಗಿದೆ.

ಅ:        ‘ಅ’ ಕಾರವನ್ನು ಎಡ ಭಾಗದಿಂದ ಆರಂಭಿಸಿ ಸ್ವಲ್ಪ ಮೇಲೆ ಹೋಗಿ ಕೆಳಗೆ ಬಂದು ಮೇಲೆ ಹೋಗಿ ಕೆಳಗೆ ಬಂದು ಮೇಲೆ ಹೋಗಿ ಬಲದಿಂದ ಎಡಕ್ಕೆ ಬರೆಯಲಾಗುತ್ತದೆ. ಆದರೆ ಕರ್ನಾಟಕದ ಉರ್ದುಭಾಷಿಕ ಮಕ್ಕಳು ಬಲಗಡೆಯಿಂದ ಆರಂಭಿಸಿ ಸ್ವಲ್ಪ ಮೇಲೆ ಹೋಗಿ ಕೆಳಗೆ ಬಂದು ಮೇಲೆ ಹೋಗಿ ಬಲದಿಂದ ಎಡಕ್ಕೆ ನಿಲ್ಲಿಸುತ್ತಾರೆ. ಈ ವಿಧಾನವನ್ನು ಎಲ್ಲ ತರಗತಿಯ ಮಕ್ಕಳು ಅನುಸರಿಸುತ್ತಾರೆ.

*ಸ್ವರಗಳ ನೆಲೆ

*ಪದಾದಿ, ಪದಮಧ್ಯ ಪರಿಸರದಲ್ಲಿ ಕೇಂದ್ರ, ಮಧ್ಯ ಆಗೋಳ ದೀರ್ಘಸ್ವರವಾದ ‘ಆ’ ಬದಲು ನಿಮ್ನ ಕೇಂದ್ರ ಆಗೋಳ ಹ್ರಸ್ವ ಸ್ವರವಾದ ‘ಅ’ ಧ್ವನಿಯನ್ನು ಓದುತ್ತಾರೆ ಮತ್ತು ಬರೆಯುತ್ತಾರೆ. ಈ ಒಂದು ವ್ಯತ್ಯಾಸವನ್ನು ಎಲ್ಲಾ ತರಗತಿಯ ಮಕ್ಕಳು ಮಾಡುತ್ತಾರೆ.

ಪದಾದಿ ಪರಿಸರ ಪದಮಧ್ಯ ಪರಿಸರ
ಆಲ > ಅಲ ಗಾಳಿಪಟ > ಗಲಿಪಟ
ಆನೆ > ಅನೆ ಬಾಲ > ಬಲ
ಆಲಯ > ಅಲಯ ನಗಾರಿ > ನಗರಿ
ಆಭರಣ > ಅಬರನ ಬಾನು > ಬನು

ಕರ್ನಾಟಕದ ಉರ್ದುಭಾಷಿಕ ಮಕ್ಕಳು ಏಕೆ ಈ ಮಾದರಿ ವ್ಯತ್ಯಾಸ ಮಾಡುತ್ತಾರೆ ಎಂದರೆ ಅವರ ಮನೆಮಾತಿನಲ್ಲಿ ಕೇಂದ್ರಮಧ್ಯ ಅಗೋಳ ದೀರ್ಘಸ್ವರ ಧ್ವನಿಯಾದ ‘ಆ’ ಇಲ್ಲದೆ ಇರುವುದರಿಂದ ಅದರ ಕೆಲಸವನ್ನು ನಿಮ್ನ ಕೇಂದ್ರ ಆಗೋಳ ಹ್ರಸ್ವಸ್ವರ ‘ಅ’ ನಿರ್ವಹಿಸುತ್ತದೆ. ಇದು ಒಂದು ಕಾರಣವಾದರೆ ಮತ್ತೊಂದು ಕಾರಣ ‘ಅ’ ಮತ್ತು ‘ಆ’ ಧ್ವನಿಗಳ ಅಲ್ಪ ಸಾಮ್ಯತೆಯ ಗೊಂದಲದಿಂದ ‘ಅ’ ಧ್ವನಿಗೆ ಬದಲು ‘ಆ’ ಎಂದು ಓದುತ್ತಾರೆ ಮತ್ತು ಬರೆಯುತ್ತಾರೆ. ಅಂದರೆ ಮೊದಲನೆಯ ವ್ಯತ್ಯಾಸ ಅವರ ಮನೆಮಾತಿನ ಒತ್ತಡದಿಂದ ಪ್ರಭಾವಿತವಾಗಿದ್ದರೆ; ಎರಡನೆಯ ಮಾದರಿ ವ್ಯತ್ಯಾಸ ಕನ್ನಡ ಭಾಷೆಯಲ್ಲಿರುವ ಸ್ವರ ಮತ್ತು ವ್ಯಂಜನಗಳ ನಡುವೆ ಇರುವ ಅತ್ಯಂತ ಅಲ್ಪ ಸಾಮ್ಯೆತೆಯಿಂದ ಧ್ವನಿಗಳಿಂದ ಕಂಡುಬರುತ್ತದೆ.

ಉದಾ:

ಅವಮಾನ > ಆವಮಾನ
ಅವಕಾಶ > ಆವಕಾಶ
ಜನಕ > ಜನಾಕಾ
ಕಸ > ಕಸಾ

*ಪದಾದಿ ಪರಿಸರದಲ್ಲಿ ಅಗ್ರ ಅಗೋಳ ದೀರ್ಘಸ್ವರವಾದ ‘ಈ’ ಗೆ ಬದಲು ನಿಮ್ನೋನ್ನತ ಅಗ್ರಗೋಳ ಹ್ರಸ್ವ ಸ್ವರವಾದ ‘ಇ’ ಧ್ವನಿಯನ್ನು ಓದುತ್ತಾರೆ. ಈ ವ್ಯತ್ಯಾಸವನ್ನು ಎಲ್ಲಾ ತರಗತಿಯ ಮಕ್ಕಳು ಮಾಡುವರು.

ಪದಾದಿ ಪರಿಸರ

ಈಚಲ > ಇಚಲ ಜೀತ > ಜಿತ ನೀ > ನಿ
ಈತ > ಇತ ಕಿರೀಟ > ಕಿರಿಟ ಇಡೀ > ಇಡಿ
ಈಶ > ಇಸ            
ಈರ > ಇರ            
ಈಗ > ಇಗ            

ಈ ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ ವ್ಯತ್ಯಾಸಕ್ಕೆ ಕಾರಣ ಉರ್ದು ಭಾಷೆಯಲ್ಲಿ ಅಗ್ರಆಗೋಳ ದೀರ್ಘಸ್ವರ ಧ್ವನಿಯಾದ ‘ಈ’ ಇಲ್ಲದೆ ಇರುವುದರಿಂದ ‘ಈ’ ಧ್ವನಿ ಓದುವ ಕಡೆಗಳೆಲ್ಲ ‘ಇ’ ಧ್ವನಿಯನ್ನೇ ಓದುತ್ತಾರೆ. ಮತ್ತು ಬರೆಯುತ್ತಾರೆ. ಕೆಲವು ಸಂದರ್ಭದಲ್ಲಿ ನಿಮ್ನೋನ್ನತ ಅಗ್ರ ಆಗೋಳ ಹ್ರಸ್ವಸ್ವರದ ‘ಇ’ ಗೆ ಬದಲಾಗಿ ಅಗ್ರಗೋಳ ದೀರ್ಘಸ್ವರ ‘ಈ’ ಧ್ವನಿಯನ್ನು ಓದುವರು. ಕಾರಣ ಈ ಎರಡು ಧ್ವನಿಗಳ ಉಚ್ಚಾರಣೆಯ ಅಲ್ಪಸಾಮ್ಯತೆಯ ಗೊಂದಲದಿಂದ ಈ ಮಾದರಿ ವ್ಯತ್ಯಾಸ ಮಾಡುತ್ತಿದ್ದಾರೆ.

*ಪದಾದಿ ಮತ್ತು ಪದಾಂತ್ಯ ಪರಿಸರದಲ್ಲಿ ಉನ್ನತ ಪಶ್ಚಗೋಳ ದೀರ್ಘಸ್ವರ ‘ಊ’ ಧ್ವನಿಯ ಬದಲು ನಿಮ್ನ ಮಧ್ಯ ಪಶ್ಚಗೋಳ ಹ್ರಸ್ವಸ್ವರ ‘ಉ’ ಧ್ವನಿಯನ್ನಾಗಿ ಎಲ್ಲ ತರಗತಿಯ ಮಕ್ಕಳು ಓದುತ್ತಾರೆ ಮತ್ತು ಬರೆಯುತ್ತಾರೆ.

ಪದಾದಿ

ಊಟ > ಉಟ ಕೂಸು > ಕುಸು ಹೂ > ಹು
ಊರು > ಉರು ಮೂರು > ಮುರು      
ಊಷರ > ಉಷರ            

ಈ ಮಾದರಿ ವ್ಯತ್ಯಾಸಕ್ಕೆ ಕಾರಣ ಉರ್ದುಭಾಷೆಯಲ್ಲಿ ಪದಾದಿ ಮತ್ತು ಪದಾಂತ್ಯ ಪರಿಸರದಲ್ಲಿ ‘ಊ’ ಧ್ವನಿ ಬಳಕೆಯಲ್ಲಿ ಇಲ್ಲ. ಅದರ ಕೆಲಸವನ್ನು ‘ಉ’ ಧ್ವನಿ ನಿರ್ವಹಿಸಬೇಕಾಗಿದೆ. ಆ ಹಿನ್ನೆಲೆಯಿಂದ ಮಕ್ಕಳು ಈ ವ್ಯತ್ಯಾಸವನ್ನು ಓದುವ ಮತ್ತು ಬರೆಯುವ ಸಂದರ್ಭದಲ್ಲಿ ಮಾಡುತ್ತಿದ್ದಾರೆ. ಈ ಪ್ರಕ್ರಿಯೆಗೆ ವಿರುದ್ಧವಾಗಿ ‘ಉ’ ಧ್ವನಿಗೆ ಬದಲಾಗಿ ‘ಊ’ ಧ್ವನಿಯನ್ನು ಓದುತ್ತಾರೆ. ಇದಕ್ಕೆ ಕಾರಣ ಈ ಎರಡು ಧ್ವನಿಗಳ ನಡುವೆ ಇರುವ ಧ್ವನಿ ಸಾಮ್ಯತೆಯಿಂದ ಈ ಮಾದರಿ ವ್ಯತ್ಯಾಸ ಮಾಡುತ್ತಿದ್ದಾರೆ. ಉದಾಹರಣೆಗೆ:

ಉಡ > ಊಡ
ಉದಯ > ಊದಯ
ಉದರ > ಊದರ

* > ರು

ಪದಾದಿ ಮತ್ತು ಪದಮಧ್ಯ ಪರಿಸರದಲ್ಲಿ ‘ಋ’ ಧ್ವನಿಗೆ ಬದಲು ವರ್ತ್ಸ್ಯಕಂಪಿತ ವ್ಯಂಜನ ಧ್ವನಿಯಾದ ‘ರ’ವನ್ನು ಓದುತ್ತಾರೆ.

ಋತು > ರುತು ವೃತ್ತಿ > ರುತ್ತಿ  
ಋಷಿ > ರುಸಿ ವೃತ್ತ > ರುತ್ತ  
ಋಜು > ರುಜು        
ಋಣ > ರುನ        

ಈ ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ ಉಚ್ಚಾರಣೆಯಲ್ಲಿ ಈ ಎರಡು ಧ್ವನಿಗಳ ನಡುವೆ ವ್ಯತ್ಯಾಸ ಇಲ್ಲ. ಈ ಲಕ್ಷಣ ಕನ್ನಡ ಮನೆಮಾತುಳ್ಳವರಲ್ಲಿ ಕಂಡುಬರುತ್ತದೆ. ಆದರೆ ಕನ್ನಡ ಭಾಷೆಯನ್ನು ಎರಡನೆ ಭಾಷೆಯಾಗಿ ಕಲಿಯುವವರಲ್ಲಿ ಈ ಸಮಸ್ಯೆ ಸಹಜ ವಾದುದು. ಬರವಣಿಗೆ ಸಂದರ್ಭದಲ್ಲಿ ಹೇಳಿ ಬರೆಯುವಾಗ ಮಾತ್ರ ‘ಋ’ಗೆ ‘ರು’ ಬರೆಯುತ್ತಾರೆ. ಪರೀಕ್ಷೆ ಉತ್ತರ ಪತ್ರಿಕೆಗಳಲ್ಲಿ ‘ಋ’ ಧ್ವನಿಯನ್ನೇ ಬರೆಯುತ್ತಾರೆ.

*ಪದಾದಿ ಮತ್ತು ಪದಮಧ್ಯ ಪರಿಸರದಲ್ಲಿ ಉನ್ನತ ಮಧ್ಯ ಅಗ್ರಆಗೋಳ ಹ್ರಸ್ವಸ್ವರವಾದ ‘ಎ’ ಬದಲಾಗಿ ಉನ್ನತ ಮಧ್ಯ ಅಗ್ರಆಗೋಳ ದೀರ್ಘಸ್ವರ ‘ಏ’ ಧ್ವನಿ ಯನ್ನು ಎಲ್ಲ ತರಗತಿಯ ಮಕ್ಕಳು ಓದುವರು. ಮತ್ತು ಬರೆಯುತ್ತಾರೆ.

ಪದಾದಿ ಪರಿಸರ ಪದಮಧ್ಯ ಪರಿಸರ ಪದಾಂತ್ಯ ಪರಿಸರ
ಎಲೆ > ಏಲೆ ಬೆಳೆ > ಬೇಲೆ ಮರೆ> ಮರೇ
ಎಳೆ > ಏಲೆ ಬೆಲೆ > ಬೇಲೆ ಗರೆ> ಗಾರೇ
ಎತ್ತು > ಏತು ಕೆರೆ > ಕೇರೆ ತೆರೆ> ತೆರೇ
ಎದುರು > ಏದುರು ಕೆಡು > ಕೇಡು  

ಈ ಮೇಲಿನ ವ್ಯತ್ಯಾಸಕ್ಕೆ ಕಾರಣ ಉರ್ದುಭಾಷೆಯಲ್ಲಿ ಉನ್ನತ ಮಧ್ಯ ಅಗ್ರಗೋಳ ಹ್ರಸ್ವಸ್ವರ ಧ್ವನಿಯಾದ ‘ಎ’ ಇಲ್ಲದೆ ಇರುವುದರಿಂದ ಅದರ ಕೆಲಸವನ್ನು ಉನ್ನತಮಧ್ಯ ಅಗ್ರಗೋಳ ದೀರ್ಘಸ್ವರ ‘ಏ’ ನಿರ್ವಹಿಸುತ್ತದೆ. ಆದರೆ ‘ಏ’ ಧ್ವನಿಗೆ ಬದಲು ‘ಎ’ ಧ್ವನಿ ಯಾಗಿ ಓದುವುದಿಲ್ಲ ಮತ್ತು ಬರೆಯುವುದಿಲ್ಲ.

*ಪದಾದಿ ಮತ್ತು ಪದಮಧ್ಯ ಪರಿಸರದಲ್ಲಿ ಉನ್ನತ ಮಧ್ಯ ಪಶ್ಚಅಗೋಳ ದೀರ್ಘ ಸ್ವರವಾದ ‘ಓ’ ಬದಲಾಗಿ ನಿಮ್ನತರ ಮಧ್ಯ ಪಶ್ಚಗೋಳ ಹ್ರಸ್ವ, ‘ಒ’ ಧ್ವನಿಯನ್ನು ಎಲ್ಲ ತರಗತಿಯ ಮಕ್ಕಳು ಓದುತ್ತಾರೆ ಮತ್ತು ಬರೆಯುತ್ತಾರೆ.

ಪದಾದಿ ಪರಿಸರ ಪದಮಧ್ಯ ಪರಿಸರ
ಓಟ > ಒಟ ಗೋಲಿ > ಗೊಲಿ
ಓಣಿ > ಒನಿ ಗೋರಿ > ಗೊರಿ
ಓಡು >ಒಡು ತೋಟ > ತೊಟ
  ತೋಡು > ತೊಡು

ಮೇಲಿನ ವ್ಯತ್ಯಾಸಕ್ಕೆ ಕಾರಣ ಉರ್ದು ಭಾಷೆಯಲ್ಲಿ ಉನ್ನತ ಮಧ್ಯ ಪಶ್ಚಗೋಳ ಹ್ರಸ್ವಸ್ವರ ‘ಒ’ ಧ್ವನಿ ಬಳಕೆಯಲ್ಲಿ ಇಲ್ಲ. ಅದರ ಕೆಲಸವನ್ನು ಉನ್ನತ ಮಧ್ಯ ಪಶ್ಚಗೋಳ ದೀರ್ಘಸ್ವರ ‘ಒ’ ಧ್ವನಿ ನಿರ್ವಹಿಸುತ್ತದೆ. ಈ ಹಿನ್ನೆಲೆಯಿಂದ ಉರ್ದುಭಾಷಿಕ ಮಕ್ಕಳು ಕನ್ನಡವನ್ನು ಓದುವಾಗ ಈ ಮಾದರಿ ವ್ಯತ್ಯಾಸವನ್ನು ಮಾಡುತ್ತಾರೆ. ಈ ವ್ಯತ್ಯಾಸಕ್ಕೆ ಅವರ ಮನೆಮಾತಾದ ಉರ್ದು ಭಾಷೆ ಎರಡನೆಯ ಭಾಷೆಯಿಂದ ಕನ್ನಡವನ್ನು ನಿಯಂತ್ರಿಸುತ್ತಿದೆ. ಆದರೆ ಈ ಎರಡು ಧ್ವನಿಗಳ ನಡುವೆ ಇರುವ ರಚನೆಯ ಸಾಮ್ಯತೆಯಿಂದ ‘ಓ’ ಗೆ ಬದಲು ‘ಒ’ ಧ್ವನಿಯನ್ನು ಓದುತ್ತಾರೆ ಮತ್ತು ಬರೆಯುತ್ತಾರೆ.

*ಪದಾದಿ. ಪದಮಧ್ಯ ಮತ್ತು ಪದಾಂತ್ಯ ಪರಿಸರಗಳಲ್ಲಿ ಸಂಧ್ಯಕ್ಷರವಾದ ‘ಐ’ ಧ್ವನಿಯ ಬದಲು ‘ಅಯ್’ ಎಂದು ಎಲ್ಲ ತರಗತಿಯ ಮಕ್ಕಳು ಓದುತ್ತಾರೆ. ಈ ಮಾದರಿ ವ್ಯತ್ಯಾಸಕ್ಕೆ ಎರಡು ಧ್ವನಿಗಳ ನಡುವೆ ಇರುವ ಅಲ್ಪ ಸಾಮ್ಯತೆಯ ಉಚ್ಚಾರಣೆ ಕಾರಣವಾಗಿದೆ.

ಪದಾದಿ ಪದಮಧ್ಯ ಪದಾಂತ್ಯ
ಐದಳ > ಆಯ್ದಿಲ ತೈಲ > ತೇಯ್‌ಲ ಕೈ > ಕಯಿ
ಐಲ > ಅಯ್‌ಲ ಮೈದ > ಮೆಯ್ದ ಬೈ > ಬಯಿ
    ಪೈರ್ > ಪೆಯ್‌ರ್

ಕನ್ನಡದಲ್ಲಿ ಎರಡು ಸ್ವರಗಳು ಸೇರಿ ಉಚ್ಚಾರಣೆ ಆಗುವುದಕ್ಕೆ ಸ್ವರಗುಚ್ಚ ಅಥವಾ ಸಂಧ್ಯಾಕ್ಷರ ಎಂದು ಕರೆಯುತ್ತಾರೆ. ಇದು ಕನ್ನಡದಲ್ಲಿ ‘ಅ’ ಮತ್ತು ‘ಇ’ ಸ್ವರಗಳಿಂದ ಸೇರಿಕೊಂಡು ಉಚ್ಚಾರಣೆಯಲ್ಲಿದೆ. ಈ ಸ್ವರ ಹಿಂದಿ ಉರ್ದು ಮತ್ತು ಮರಾಠಿ ಭಾಷೆಗಳ ಬರಹದಲ್ಲಿ ‘ಐ’ ಸ್ವರದಿಂದ ಉಚ್ಚಾರಣೆಯಲ್ಲಿದೆ. (ಕನ್ನಡ, ಸ್ವೀಚ್ ಸೌಂಡ್ಸ್ ಪಾರ್ ಸೆಕೆಂಡ್ ಲಾಂಗ್ವೇಜ್ ಲರ್ನರ್, ಕಿಕ್ಕೇರಿ ನಾರಾಯಣ, ಪು.೮೨, ೧೯೯೪) ಕನ್ನಡದಲ್ಲಿ ಈ ಸ್ವರ ಗುಚ್ಚ ಪದಾದಿ ಪದಮಧ್ಯ ಮತ್ತು ಪದಾಂತ್ಯ ಪರಿಸರದಲ್ಲಿ ಬಳಕೆಯಲ್ಲಿದೆ. ಆದರೆ ದಿನನಿತ್ಯ ವ್ಯವಹಾರದಲ್ಲಿ ಕನ್ನಡಿಗರ ಸಂಪರ್ಕ ಕಡಿಮೆ ಇರುವ ಉರ್ದುಭಾಷಿಕ ಕನ್ನಡ ಓದಿನಲ್ಲಿ ಪದಮಧ್ಯ ಪರಿಸರದಲ್ಲಿ ‘ಎಇ’ ಆಗಿ ಉಚ್ಚಾರಣೆಯಲ್ಲಿದೆ. ಇದೇ ರೀತಿ ಉರ್ದುಭಾಷಿಕ ಮಕ್ಕಳು ಇಂಗ್ಲಿಶ್ ಮಾತಿನ ರಚನೆಗಳಲ್ಲಿ ‘ಎಇ’ ಧ್ವನಿಯನ್ನು ಪದಮಧ್ಯ ಪರಿಸರದಲ್ಲಿ ಉಚ್ಚಾರಣೆ ಮಾಡಿ ಓದುತ್ತಾರೆ. ಈ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಬರಹದ ರೂಪ   ಉರ್ದು ಭಾಷಿಕ ಮಕ್ಕಳು
ರೈಲ್ > ರೆಯಿಲ್
ಜೈಲ್ > ಜೆಯಿಲ್
ಸೈಟ್ > ಸೆಯಿಟ್
ಚೈನ್ > ಚೆಯನ್

ಮೇಲಿನ ವ್ಯತ್ಯಾಸಕ್ಕೆ ಉರ್ದುಭಾಷಿಕರ ಮನೆಮಾತೆ ಹೊರತು; ಕನ್ನಡ ಭಾಷೆಯ ಪ್ರಭಾವವಲ್ಲ. ಆದರೆ ಉರ್ದುವಿನಲ್ಲಿ ಬಿಡಿ ಬಿಡಿಯಾಗಿ ಧ್ವನಿಗಳನ್ನು ಉಚ್ಚರಿಸುವ ಮಾದರಿಯಲ್ಲೆ ಪೈ, ಬೈ, ಕೈ ಮತ್ತು ಮೈ ಧ್ವನಿಗಳನ್ನು ಪಯ್, ಬಯ್, ಕಯ್ ಮತ್ತು ಮಯ್ ಎಂದು ಬಿಡಿ ಬಿಡಿಯಾಗಿ ಓದುವರು.

*ಪದಾದಿ ಮತ್ತು ಪದಮಧ್ಯ ಪರಿಸರದಲ್ಲಿ ಸಂಧ್ಯಕ್ಷರವಾದ ‘ಔ’ ಧ್ವನಿಯ ಬದಲು ‘ಅವ್’ ಎಂದು ಓದುತ್ತಾರೆ ಮತ್ತು ಬರೆಯುತ್ತಾರೆ. ಈ ವ್ಯತ್ಯಾಸವನ್ನು ಎಲ್ಲ ತರಗತಿಯ ಮಕ್ಕಳು ಮಾಡುತ್ತಾರೆ.

ಪದಾದಿ ಪರಿಸರ ಪದಮಧ್ಯ ಪರಿಸರ
ಔಷದ > ಅವ್‌ಷದ ಪೌರ > ಪವ್‌ರ
ಔಡಲ > ಅವ್‌ಡಲ ಕೌಶಿಕ > ಕವ್‌ಸಿಕ
ಔತಣ > ಅವ್‌ತನ ಕೌಮೌದಿ > ಕವ್‌ಮುದಿ

ಮುಖ್ಯವಾಗಿ ವ್ಯತ್ಯಾಸಕ್ಕೆ ಕಾರಣ ಈ ಎರಡು ಧ್ವನಿಗಳ ನಡುವಿನ ಅಲ್ಪ ಸಾಮ್ಯತೆಯ ಉಚ್ಚಾರಣೆ ಎಂದು ಹೇಳಬಹುದು.

*ಅನುಸ್ವರವನ್ನು (೦) ಲೋಪ ಮಾಡಿ ಓದುತ್ತಾರೆ ಮತ್ತು ಬರೆಯುತ್ತಾರೆ. ಜತೆಗೆ ಅನುಸ್ವರವನ್ನು ಕನ್ನಡ ಭಾಷೆಯ ನಿಯಮದಂತೆ ಬರೆಯದೆ ಪಲ್ಲಟಗೊಳಿಸುತ್ತಾರೆ.

ಖಂಡ > ಖಡ
ಕಂದ > ಕದ
ಮಂದ > ಮದ
ಪಂಚಮಿ > ಪಚಮಿ

ಹಾಗೆಯೇ ವಿಸರ್ಗವನ್ನು (ಃ) ಸಹ ಲೋಪ ಮಾಡಿ ಓದುವರು ಮತ್ತು ಬರೆಯುವರು. ಉದಾ:

ದುಃಖ > ದುಕ್ಕ
ಅಂತಃಕಲಹ > ಅಂತಕಲಹ
ಅಂತಃಪುರ > ಅಂತಪುರ

ಈ ವ್ಯತ್ಯಾಸಕ್ಕೆ ಕಾರಣ ಉರ್ದುಭಾಷೆಯಲ್ಲಿ ವಿಸರ್ಗ ಇಲ್ಲದೆ ಇರುವುದರಿಂದ ಈ ಮಾದರಿ ವ್ಯತ್ಯಾಸ ಮಾಡಿ ಓದುತ್ತಾರೆ ಮತ್ತು ಬರೆಯುತ್ತಾರೆ.