ಪ್ರಸ್ತುತ ಅಧ್ಯಯನದ ಸಮಸ್ಯೆಗಳನ್ನು ಗಮನಿಸಿ ಕೆಲವರು ಇದು ಎಲ್ಲ ವಯೋಮಾನದ ಉರ್ದುಭಾಷಿಕರ ಕನ್ನಡದ ಲಕ್ಷಣ ಎಂದು ಹೇಳಬಹುದು. ಇದು ವಾಸ್ತವ ಎನಿಸಿದ್ದರೂ ಹೇಗೆ ಔಪಚಾರಿಕ ಮತ್ತು ಅನೌಪಚಾರಿಕ ನೆಲೆಯ ಕನ್ನಡವನ್ನು ಉರ್ದು ನಿಯಂತ್ರಿಸುತ್ತದೆ ಎಂಬುದು ಮುಖ್ಯ. ಇದರಿಂದ ಕನ್ನಡ ಮತ್ತು ಉರ್ದುಭಾಷೆಯ ಜಾಯಮಾನ ಏನು ಎಂಬುದು ತಿಳಿದುಬರುತ್ತದೆ. ಮೊದಲು ಉರ್ದು ಮಕ್ಕಳು ಔಪಚಾರಿಕ ನೆಲೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ, ನಂತರ ಅವುಗಳಿಗೆ ಕನ್ನಡ ಮತ್ತು ಉರ್ದು ಭಾಷೆಗಳೆರಡು ಭಾಷೆಗಳಿಂದ ಪರಿಹಾರಗಳನ್ನು ಸೂಚಿಸಲಾಗಿದೆ.

ಕರ್ನಾಟಕದಲ್ಲಿರುವ ಮುಸ್ಲಿಂರೆಲ್ಲರು ಉರ್ದು ಭಾಷೆಯನ್ನು ಮಾತನಾಡಲಾರರು. ಕೆಲವರು ಕನ್ನಡ ಭಾಷೆಯನ್ನು ಮನೆ ಮಾತುಳ್ಳವರಾಗಿದ್ದಾರೆ. ರಾಜ್ಯದಾದ್ಯಂತ ಯಾವ ಪ್ರಮಾಣದಲ್ಲಿ ನೆಲೆಸಿದ್ದಾರೆ ಎಂಬುದನ್ನು ಮುಂದಿನ ಭಾಗದಲ್ಲಿ ವಿವರಿಸಲಾಗಿದೆ. ಕರ್ನಾಟಕದಲ್ಲಿ ಕನ್ನಡದ ನಂತರ ಬಹುಸಂಖ್ಯಾತರು ಮಾತನಾಡುವ ಭಾಷೆ ಉರ್ದು. ಕನ್ನಡ ದ್ರಾವಿಡ ಕುಟುಂಬಕ್ಕೆ ಸೇರಿದ ಭಾಷೆಯಾದರೆ, ಉರ್ದು ಇಂಡೋ ಆರ್ಯನ್ ಭಾಷಾವರ್ಗಕ್ಕೆ ಸೇರಿದ ಭಾಷೆಯಾಗಿದೆ. ಆದುದರಿಂದ ಕನ್ನಡ ಮತ್ತು ಉರ್ದುವಿನ ಭಾಷಿಕ ರಚನೆಗಳಲ್ಲಿ ಸಾಮ್ಯೆಗಳು ತುಂಬ ಕಡಿಮೆ ಪ್ರಮಾಣದಲ್ಲಿದೆ.

ಪ್ರಸ್ತುತ ಕೃತಿಯಲ್ಲಿ ಗ್ರಹಿಸುವ ಮತ್ತು ಮಾತನಾಡುವ ಕೌಶಲಗಳ ಬಗೆಗೆ ಅಧ್ಯಯನ ಮಾಡಿಲ್ಲ. ಏಕೆಂದರೆ ಉರ್ದು ಭಾಷಿಕರ ಮಕ್ಕಳು ಸಾರ‍್ವಜನಿಕ ಆವರಣದಲ್ಲಿ ಕನ್ನಡ ಮಾತನಾಡಿದರೂ ಶಾಲೆಯ ಆವರಣದಲ್ಲಿ ಬೇರೆಯಾದ ಕನ್ನಡದ ರಚನೆಯನ್ನು ತಿಳಿಯಬೇಕಾಗಿದೆ. ಈ ಹಿನ್ನೆಲೆಯಿಂದ ಮಕ್ಕಳು ಗ್ರಹಿಸಿಕೊಳ್ಳುತ್ತಾ ಮನಸ್ಸಿನಲ್ಲಿ ಓದಿಕೊಳ್ಳುತ್ತಾ ಬರವಣಿಗೆ ಮಾಡುವ ಪರಿಪಾಠವಿದೆ. ಆದ್ದರಿಂದ ಪ್ರಸ್ತುತ ಕೃತಿಯಲ್ಲಿ ಮಾತು ಬರವಣಿಗೆಯನ್ನು ಜೊತೆಜೊತೆಗೆ ವಿಶ್ಲೇಷಣೆ ಮಾಡಲಾಗಿದೆ.

ದಿನಾಂಕ ೨೦.೦೧.೨೦೦೬ರಂದು ಸ್ವಯಂಸೇವಾ ಸಂಘಟನೆ ಪ್ರಥಮ್ ಸಂಪನ್ಮೂಲ ಕೇಂದ್ರ ಮೈಸೂರು, ಇವರು ನಡೆಸಿದ ಅಧ್ಯಯನದಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ೬ ರಿಂದ ೧೪ ವರ್ಷದೊಳಗಿನವರ ಪೈಕಿ ಶೇ. ೯೮ರಷ್ಟು ಮಕ್ಕಳು ಶಾಲೆಗೆ ಹೋಗುತ್ತಾರೆ. ಆದರೆ ಅವರಲ್ಲಿ ಶೇ. ೪೫ರಷ್ಟು ಚಿಣ್ಣರು ಗಣಿತದ ಸರಳ ಸಮಸ್ಯೆಗಳನ್ನು ಪರಿಹರಿಸಲು ಶಕ್ತರಲ್ಲ. ಕಳೆಯುವ ಮತ್ತು ಭಾಗಿಸುವ ಲೆಕ್ಕಗಳಂತೂ ಅವರಿಗೆ ಬರುವುದೇ ಇಲ್ಲ. ೭ ರಿಂದ ೧೦ ವರ್ಷದೊಳಗಿನ ಶೇ. ೫೩ರಷ್ಟು ಮಕ್ಕಳಿಗೆ ಸಣ್ಣ ಸಣ್ಣ ವಾಕ್ಯಗಳನ್ನು ಓದಲು ಬರುವುದಿಲ್ಲ.

ಎರಡನೆ ತರಗತಿಯಲ್ಲಿ ಓದುವ ಶೇ.೭೨ರಷ್ಟು ಮಕ್ಕಳಿಗೆ ದೀರ್ಘವಾಕ್ಯಗಳನ್ನು ಓದುವ ಸಾಮಾರ್ಥ್ಯ ಇಲ್ಲ ಎನ್ನುವುದು ಈ ಅಧ್ಯಯನದಿಂದ ತಿಳಿದುಬಂದಿದೆ. ಈ ಸಮಸ್ಯೆ ಕರ್ನಾಟಕದಲ್ಲಿ ಒಂದೇ ಸಮನಾಗಿರದೆ, ಏರುಪೇರಿನಿಂದ ಕೂಡಿದೆ. ಉಡುಪಿ, ದಕ್ಷಿಣ ಕನ್ನಡ, ಹಾಸನ, ಕೊಪ್ಪಳ ಮತ್ತು ಕೊಡಗು, ಧಾರವಾಡ, ಬೆಳಗಾವಿ, ಹಾವೇರಿ, ಕೋಲಾರ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ ಎಂದಿದೆ.

ಈ ವರದಿ ಬಂದ ಮಗ್ಗುಲಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿದ ಸಚಿವರೊಬ್ಬರು ದೀಡರನೆ ಒಂದು ಶಾಲೆಗೆ ಭೇಟಿ ನೀಡಿ ಕರ್ನಾಟಕದ ಮುಖ್ಯಮಂತ್ರಿ ಯಾರು ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಎಂದು ಬರೆಯಿರಿ ಎಂದು ಕೇಳಿದ್ದಾರೆ. ಅದಕ್ಕೆ ಮಕ್ಕಳು ಮೊದಲನೆಯ ಪ್ರಶ್ನೆಗೆ ಕುಮಾರಸ್ವಾಮಿ ಎಂತಲೂ, ಎರಡನೆಯ ಪ್ರಶ್ನೆಯನ್ನು ಕಾಗುಣಿತದಲ್ಲಿ ವ್ಯತ್ಯಾಸ ಮಾಡಿ ಬರೆದಿದ್ದಾರೆ. ಈ ಘಟನೆಯನ್ನು  TV 9 ನವರು ಆ ದಿನ ಸಾಯಂಕಾಲ ವಾರ್ತೆಯಲ್ಲಿ ಪ್ರಸಾರಮಾಡಿದರು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಮೊದಲನೆಯ ಪ್ರಶ್ನೆ ಜ್ಞಾನಕ್ಕೆ ಸಂಬಂಧಿಸಿದ್ದು, ಎರಡನೆಯ ಪ್ರಶ್ನೆ ಕನ್ನಡ ಭಾಷೆಯ ರಚನೆಯಲ್ಲಿ ಕಾಗುಣಿತಕ್ಕೆ ಸಂಬಂಧಿಸಿದ್ದು ಮುಂದುವರಿದು ಇದು ಕೇವಲ ವಿದ್ಯಾರ್ಥಿಗಳಿಗೆ ಪರೀಕ್ಷಿಸದೆ, ಅಲ್ಲಿನ ಶಿಕ್ಷಕರನ್ನು ಪರೀಕ್ಷಿಸಲಾಗಿದೆ. ಅವರು ಸಹ ವಿಸ್ವೇಸ್ವರ ಹೆಗಡೆ ಕಾಗೇರಿ ಎಂಬ ವ್ಯಕ್ತಿನಾಮವನ್ನು ತಪ್ಪಾಗಿ ಬರೆಯಲಾಗಿದೆ. ಅಂದರೆ ಇದು ಏನನ್ನು ಸೂಚಿಸುತ್ತದೆ ಎಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿರುವ ಭಾಷಾನೀತಿ ಮತ್ತು ಶಿಕ್ಷಣನೀತಿ ಸ್ವರೂಪವನ್ನು ಸ್ಪಷ್ಟಪಡಿಸುತ್ತದೆ.

ಮೇಲಿನ ಎರಡು ಘಟನೆಯನ್ನು ಇಲ್ಲಿ ಏಕೆ ದಾಖಲಿಸಿದೇನೆಂದರೆ ಕನ್ನಡ ಮನೆಮಾತುಳ್ಳ ಮಕ್ಕಳಿಗೆ ಈ ಸಮಸ್ಯೆ ಇದೆ ಎಂದರೆ ಇನ್ನು ಕನ್ನಡ ಮನೆ ಮಾತಲ್ಲದ ವಿದ್ಯಾರ್ಥಿಗಳ ಗತಿಯೇನು? ಎಂಬುದನ್ನು ಚಿಂತಿಸುವುದಕ್ಕೆ ಮೇಲಿನ ಎರಡು ಘಟನೆಯನ್ನು ನೀಡಲಾಗಿದೆ. ಕನ್ನಡೇತರ ಮಕ್ಕಳು ಮನೆಯಲ್ಲಿ ಒಂದು ಭಾಷೆಯನ್ನು ಸಾರ್ವಜನಿಕ ವಲಯದಲ್ಲಿ ಮತ್ತೊಂದು ಭಾಷೆಯನ್ನು, ಶಾಲೆಯ ಆವರಣದಲ್ಲಿ ಮಗದೊಂದು ಭಾಷೆಯನ್ನು ಬಳಕೆ ಮಾಡಬೇಕಾದ ಸಾಮಾಜಿಕ ಸಂದರ್ಭಗಳು ಇವೆ. ಕೆಲವು ಸಮುದಾಯ ಮತ್ತು ಧಾರ್ಮಿಕ ವರ‍್ಗದ ಮಕ್ಕಳು ಕನ್ನಡ ಭಾಷೆಯನ್ನು ಶಾಲೆಯ ಪರಿಸರದಲ್ಲಿ ಮಾತ್ರ ಬಳಕೆ ಮಾಡುತ್ತಾರೆ. ಉಳಿದಂತೆ ಕನ್ನಡ ಭಾಷೆಯನ್ನು ಬಳಸುವ ಸಂದರ್ಭ ಇಲ್ಲ. ಅಂದಾಗ ಕನ್ನಡ ಭಾಷೆಯ ಕಲಿಕೆಯಲ್ಲಿ ವ್ಯತ್ಯಾಸವಾಗದೆ; ಬೇರೆ ದಾರಿ ಇಲ್ಲ ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಮನೆಮಾತುಳ್ಳ ಮಕ್ಕಳು ಮತ್ತು ಕನ್ನಡವಲ್ಲದ ಮಕ್ಕಳು ಮಾಡುವ ಕನ್ನಡ ಭಾಷಿಕ ವ್ಯತ್ಯಾಸಗಳು ಒಂದೇ ರೀತಿಯಲ್ಲಿ ಕಾಣಿಸಿಕೊಳ್ಳದೆ; ಏರುಪೇರಿನಿಂದ ಕೂಡಿದೆ ಎಂದೆನಿಸುತ್ತದೆ. ಇದರ ಬಗೆಗೆ ಖಚಿತವಾದ ವಿಧಾನಗಳಿಂದ ಅಧ್ಯಯನ ಮಾಡಬೇಕಾಗಿದೆ.

ಕರ್ನಾಟಕದಲ್ಲಿರುವ ಉರ್ದುಭಾಷಿಕರ ಮಕ್ಕಳು ಕನ್ನಡ ಭಾಷೆಯನ್ನು ೨ನೇ ತರಗತಿಯಿಂದ ಎರಡನೇ ಭಾಷೆಯಾಗಿ ಕಲಿಯುತ್ತಾರೆ. ಅಂದರೆ ೨ ಮತ್ತು ೪ನೇ ತರಗತಿಯ ಉರ್ದು ಭಾಷಿಕರ ಮಕ್ಕಳು ಕನ್ನಡ ಮನೆಮಾತುಳ್ಳ ಮಕ್ಕಳ ೧ನೇ ಮತ್ತು ೨ನೇ ತರಗತಿಯ ಪಠ್ಯ ಪುಸ್ತಕವನ್ನೇ ಅಭ್ಯಾಸ ಮಾಡಬೇಕಾಗಿದೆ. ಅವರಿಗೆ ಪ್ರತ್ಯೇಕವಾದ ಪಠ್ಯಪುಸ್ತಕವಿಲ್ಲ. ಅದೆ ರೀತಿ ೫,೬,೭ನೇ ತರಗತಿಯ ಉರ್ದು ಭಾಷಿಕರ ಮಕ್ಕಳು ತಿಳಿಗನ್ನಡ ೧,೨,೩, ಎಂದು ಪ್ರತ್ಯೇಕವಾದ ಕನ್ನಡ ಪಠ್ಯಪುಸ್ತಕಗಳನ್ನು ಅಭ್ಯಾಸ ಮಾಡುವರು.

ಉರ್ದು ಭಾಷಿಕರ ಮಕ್ಕಳು ಕನ್ನಡವನ್ನು ಹೆಚ್ಚಿನ ಪ್ರಮಾಣದಲ್ಲಿ ಉರ್ದುವಿನ ಮೂಲಕ ಕಲಿಯುತ್ತಿದ್ದಾರೆ. ಭಾಷೆಯಲ್ಲಿ ಕಲಿಕೆ ಸಿದ್ಧಾಂತದ ಪ್ರಕಾರ ಎರಡನೆ ಭಾಷೆಯನ್ನು ಅಥವಾ ಮನೆ ಮಾತನ್ನು ಬಿಟ್ಟಂತೆ ಉಳಿದ ಭಾಷೆಗಳನ್ನು ಅವರವರ ಮನೆಮಾತಿನ ಮೂಲಕ ಕಲಿಯುತ್ತಾರೆ ಎಂಬ ಮಾತನ್ನು ನಿಜ ಮಾಡುತ್ತಿದ್ದಾರೆ. ಉದಾಹರಣೆಗೆ ‘ಕೋಳಿ’ ಪದವನ್ನು ಚಿತ್ರರಹಿತ ಸಂದರ್ಭದಲ್ಲಿ ಅಥವಾ ಕೋಳಿ ಚಿತ್ರ ನೋಡಿ ಅವರ ಮನೆಮಾತಿನ ಮೂಲಕ ‘ಮುರ‍್ಗಿ’ ಎಂದು ಓದುತ್ತಾರೆ. ನಂತರ ಅಧ್ಯಾಪಕರ ಸಹಾಯದಿಂದ ‘ಕೋಳಿ’ ಎಂದು ಓದುವರು. ಅಂದರೆ ಹೆಚ್ಚಿನ ಪ್ರಮಾಣದಲ್ಲಿ ಕನ್ನಡದ ಎಲ್ಲಾ ಅಕ್ಷರ ರಚನೆಗಳನ್ನು ಅವರ ಮನೆಮಾತಿನ ಮೂಲಕವೆ ಗುರುತಿಸುವ ಪ್ರಯತ್ನದಲ್ಲಿದ್ದಾರೆ.

ಹಾಗೆಯೇ ಉರ್ದು ಭಾಷಿಕರ ಮಕ್ಕಳು ಕನ್ನಡವನ್ನು ಬಳಕೆ ಮಾಡುವಾಗ ಕನ್ನಡ ಪದ ತಿಳಿಯದಿದ್ದ ಜಾಗಕ್ಕೆ ಉರ್ದು ಪದಗಳನ್ನು ಬಳಕೆ ಮಾಡುವರು. ಉದಾಹರಣೆಗೆ: ಕನ್ನಡದ ಒಳ್ಳೇಯ, ಕೊಡೆ ಮತ್ತು ರವಿವಾರ ಪದಗಳ ಬದಲು ಉರ್ದುವಿನ ದೋಸ್ತ, ಛತ್ರಿ ಮತ್ತು ಅಯ್‌ತವಾರ ಪದಗಳನ್ನು ಬಳಕೆಮಾಡುವರು. ಹಾಗೆಯೇ ದಾರಿಗೆ ಬದಲು ರಸ್ತಾ ಅಥವಾ ರೋಡ್ ಎಂದು ಬಳಕೆ ಮಾಡುವರು. ಅಶಿಕ್ಷಿತ ಉರ್ದುಭಾಷಿಕರು ಹೆಚ್ಚು ರಸ್ತಾ ಪದವನ್ನು ಬಳಕೆ ಮಾಡಿದರೆ, ಶಿಕ್ಷಿತ ಉರ್ದುಭಾಷಿಕರು ‘ರೋಡ್’ ಪದವನ್ನು ಹೆಚ್ಚು ಬಳಕೆಮಾಡುವರು. ‘ಶಿವ ಮಾಡ್ದಾಗೆ ಆಗ್ತೆ’ ಎನ್ನುವ ಜಾಗದಲ್ಲಿ ‘ಅಲ್ಲ ಮಾಡ್ದಾಗೆ ಆಗ್ತೆ’ ಎಂದು ಬಳಕೆ ಮಾಡುವರು. ಈ ಅಂಶಗಳನ್ನು ಗಮನಿಸಿದಾಗ ಕರ್ನಾಟಕದಲ್ಲಿರುವುದು ಉರ್ದುವೋ ಅಥವಾ ದಖನಿ ಉರ್ದು ಎಂಬುದರ ಕುರಿತು ಚರ್ಚಿಸಬೇಕಾಗಿದೆ. ನಂತರ ಉರ್ದುಭಾಷಿಕರ ಕನ್ನಡ ಮತ್ತು ದಖನಿ ಉರ್ದು ಭಾಷಿಕರ ಕನ್ನಡ ಬೇರೆ ಬೇರೆ ಎಂಬ ನಿರ್ಧಾರಕ್ಕೆ ಬರಬೇಕಾಗಿದೆ.

ಉರ್ದು ಭಾಷಿಕರ ಮಕ್ಕಳು ಕನ್ನಡ ಭಾಷೆಯನ್ನು ಎರಡನೇ ಭಾಷೆಯಾಗಿ ಕಲಿಯುತ್ತಿರುವುದರಿಂದ ಬರವಣಿಗೆ ತುಂಬ ನಿಧಾನಗತಿಯಲ್ಲಿ ಸಾಗುತ್ತದೆ. ಬರವಣಿಗೆ ವಿಧಾನ ಕನ್ನಡ ಮತ್ತು ಉರ್ದು ಬೇರೆ ಬೇರೆ ಆಗಿರುವುದರಿಂದ ಬಳಪ ಅಥವಾ ಪೆನ್ಸಿಲ್ ಅನ್ನು ಬೆರಳಿನಿಂದ ಹಿಡಿಯುವ ಅಭ್ಯಾಸ ಬರೆಯುವಾಗ ಮಗುವಿನ ಬೆರಳು ಮತ್ತು ಮಣಿಕಟ್ಟು ಸರಳವಾಗಿ ತಿರುಗುವ ಅಭ್ಯಾಸ ಸಾಕಷ್ಟು ಆಗಬೇಕಾಗಿರುವುದರಿಂದ ಕನ್ನಡದ ಬರವಣಿಗೆ ಕ್ರಮ ತುಂಬ ನಿಧಾನಗತಿಯಲ್ಲಿದೆ. ಕನ್ನಡದ ಬರವಣಿಗೆಯ ಕ್ರಮವನ್ನು ಪರೀಕ್ಷೆ ದೃಷ್ಟಿಯಿಂದ ಮಾತ್ರ ಅಭ್ಯಾಸ ಮಾಡುತ್ತಿರುತ್ತಾರೆ. ಶಾಲೆಯ ಪರಿಸರವನ್ನು ಉಳಿದಂತೆ ಬೇರೆ ಎಲ್ಲೂ ಕನ್ನಡದ ಬರವಣಿಗೆ ಮಾಡುವುದಿಲ್ಲ. ಇವರಿಗೆ ಅದರ ಅಗತ್ಯವು ಇದ್ದಂತೆ ಕಾಣುವುದಿಲ್ಲ.

ಪ್ರಸ್ತುತ ಯೋಜನೆಯನ್ನು ತೆಗೆದುಕೊಳ್ಳುವುದಕ್ಕೆ ಸ್ಫೂರ್ತಿ ಡಾ. ಕೆ. ನಾರಾಯಣ ಅವರು. ಒಂದು ಸಲ ಅವರು ನೀವು ಈ ಯೋಜನೆಯನ್ನು ಜಲ್ದಿ ಮುಗಿಸಿ ಅದರ ಮೌಲ್ಯ ನಿಮಗೆ ತಿಳಿದಿಲ್ಲವೆನಿಸುತ್ತದೆ ಎಂಬ ಅಭಿಪ್ರಾಯಪಟ್ಟದ್ದುಂಟು. ತಮ್ಮ ಭಾಷಣದಲ್ಲಿ ಎರಡು ಭಾರಿ ಈ ಯೋಜನೆಯನ್ನು ಪ್ರಸ್ತಾಪಮಾಡಿದ್ದುಂಟು. ಅವರಿಗೆ ನಾನು ಅಭಾರಿಯಾಗಿದ್ದೇನೆ. ಈ ಯೋಜನೆಯನ್ನು ಮೆಚ್ಚಿ ಮಾಡಲು ಅನುವು ಮಾಡಿಕೊಟ್ಟ ಅಂದಿನ ಮಾನ್ಯ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಅವರಿಗೆ. ಯೋಜನೆಯ ಸ್ವರೂಪವನ್ನು ಗಮನಿಸಿ ಸಲಹೆ ಸೂಚನೆಗಳನ್ನು ನೀಡಿದ ನಾಡಿನ ಭಾಷಾಶಾಸ್ತ್ರಜ್ಞರಾದ ಇಂದಿನ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಮಾನ್ಯ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ.

ಈ ಯೋಜನೆಯ ಮಹತ್ವ ತಿಳಿಯಲು ನೆರವಾದ ಡಾ.ಮಾರುತಿ ಆರ್ ತಳವಾರ ಅವರಿಗೆ, ಶ್ರೀಯುತರು ಕರ್ನಾಟಕದಾದ್ಯಂತ ಕನ್ನಡ ಭಾಷಾ ತರಬೇತಿ ಶಿಬಿರವನ್ನು ಕನ್ನಡ ಶಿಕ್ಷಕರಿಗೆ ಏರ್ಪಡಿಸಿದ ಸಂದರ್ಭದಲ್ಲಿ ನನ್ನನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿದರು. ಆ ಸಂದರ್ಭದಲ್ಲಿ ಈ ಯೋಜನೆಯನ್ನು ಬಿಡಿಬಿಡಿ ವಿಷಯಗಳನ್ನಾಗಿ ಮಾಡಿಕೊಂಡು ಮಂಡಿಸಿದ್ದೇನೆ. ಆಗ ಶಿಕ್ಷಕರಿಂದ ಮೆಚ್ಚುಗೆ ಅಭಿಪ್ರಾಯಗಳು ಬಂದಿವೆ. ಆ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ತಿದ್ದುಪಡಿ ಮಾಡಲಾಯಿತು. ಅದಕ್ಕಾಗಿ ಶಿಕ್ಷಕ ಸಮೂಹಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ವಿಭಾಗದ ಮಿತ್ರರಾದ ಡಾ. ಅಶೋಕ್‌ಕುಮಾರ ರಂಜೇರೆ, ಡಾ. ಸಾಂಬಮೂರ್ತಿ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ.

ಈ ಯೋಜನೆ ಸ್ವರೂಪದ ಬಗೆಗೆ ಸಲಹೆ ಸೂಚನೆ ನೀಡಿದ ಡಾ.ಸಿ.ಎಸ್.ರಾಮಚಂದ್ರ, ಪ್ರೊ.ಲಿಂಗದೇವರು ಹಳೆಮನೆ, ಡಾ.ಎಸ್.ಎಸ್.ಯದುರಾಜನ್, ಡಾ.ಮಲ್ಲಿಕಾರ್ಜುನ ಮೇಟಿ, ಡಾ.ಸಿ.ಪಿ.ನಾಗರಾಜ್, ಡಾ. ಆರ್. ಸುಬ್ಬುಕೃಷ್ಣ, ಡಾ.ನಟರಾಜ್ ಹುಳಿಯಾರ್, ಡಾ. ಎಚ್.ಕೆ. ನಾಗೇಶ್, ಶ್ರೀ ಎನ್.ಗುರುಲಿಂಗಯ್ಯ, ಶ್ರೀ ಎಚ್. ದಂಡಪ್ಪ, ಡಾ. ಬಸವರಾಜ ಕಲ್ಗುಡಿ, ಡಾ. ಸೋಮಶೇಖರಗೌಡ, ಡಾ. ಪದ್ಮಶೇಖರ್ ಅವರಿಗೆ.

ಈ ಕೃತಿಯನ್ನು ಪ್ರಕಟಿಸುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎ. ಮೋಹನ ಕುಂಟಾರ್ ಅವರನ್ನು, ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಡಿ. ಪಾಂಡುರಂಗ ಬಾಬು ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನೆಯುತ್ತೇನೆ. ಹಾಗೆಯೇ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿಯವರಿಗೆ, ಮುಖಪುಟ ಬರೆದುಕೊಟ್ಟಿರುವ ಶ್ರೀ ಕೆ.ಕೆ. ಮಕಾಳಿಯವರಿಗೆ, ಅಕ್ಷರ ಸಂಯೋಜಿಸಿದ ವಿದ್ಯಾರಣ್ಯ ಗಣಕ ಕೇಂದ್ರದ ಜೆ. ಶಿವಕುಮಾರ ಅವರಿಗೆ ಹಾಗೂ ಮುದ್ರಕರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಪಿ.ಮಹಾದೇವಯ್ಯ