ಭಾಷಾ ಕಲಿಕೆ ಮತ್ತು ಬಳಕೆ ಒಂದು ನಾಡಿನ ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಐತಿಹಾಸಿಕ ಮತ್ತು ಸಾಂಪ್ರದಾಯಿಕ ಬದುಕಿನ ಪ್ರತೀಕಗಳು. ಜ್ಞಾನಶಾಖೆಗಳಲ್ಲಿ ಒಂದಾದ ಶಿಕ್ಷಣ ಆಧರಿಸಿರುವುದು ಭಾಷಾ ಕಲಿಕೆ ಮತ್ತು ಬೋಧನೆ ಮೇಲೆ. ಹಾಗಾಗಿ ಭಾಷಾ ಕಲಿಕೆ, ಬೋಧನೆ ಮತ್ತು ಶಿಕ್ಷಣ ಪರಸ್ಪರ ಸಂಬಂಧ ಹೊಂದಿವೆ. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಬೋಧನೆಗೆ ಮಹತ್ತರವಾದ ಸ್ಥಾನವಿದೆ. ಮಕ್ಕಳು ಯಾವುದೇ ವಿಷಯವನ್ನು ಕಲಿಯುವುದು ಅಥವಾ ಗ್ರಹಿಸುವುದು ಅವರವರ ಮನೆಮಾತಿನ ಮೂಲಕವೇ. ಹಾಗಾಗಿ ಭಾಷಾ ಕಲಿಕೆಗೆ ಉತ್ತಮ ಪರಿಸರ ಮುಖ್ಯ. ಜತೆಗೆ ಮಕ್ಕಳಿಗೆ ಮನೆಮಾತು ಮತ್ತು ಅನ್ಯಭಾಷೆ ಕಲಿಕೆಯಲ್ಲಿ ಪರಿಪೂರ್ಣತೆ ಮೂಡಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಗುರುತರವಾದುದು. ಹಾಗೆಯೇ ಒಂದು ನಾಡಿನ ಸಾಂಸ್ಕೃತಿಕ ಚರಿತ್ರೆ ಅರಿಯುವಲ್ಲಿ ಪಠ್ಯಗಳ ಪಾತ್ರ ಮಹತ್ವದ್ದು. ಕಲಿಕೆ ಮತ್ತು ಬೋಧನೆ ಪರಿಣಾಮಕಾರಿಯಾಗಬೇಕಾದರೆ ಪಠ್ಯ ಸಾಮಾಗ್ರಿ ಅತ್ಯವಶ್ಯ. ಶಾಲೆಯ ಆವರಣದಲ್ಲಿ ಪಠ್ಯಗಳೇ ಬೋಧನೆ ಸಾಮಾಗ್ರಿ. ಇಂತಹ ಪಠ್ಯಗಳ ಆಧಾರಿತ (ಕಲಿಕೆ ಮಾಡುವ) ಸಂದರ್ಭದಲ್ಲಿ ಮನೆಮಾತು ಮತ್ತು ಅನ್ಯಭಾಷೆ ಕಲಿಕಾರ್ಥಿಗಳಲ್ಲಿ ವ್ಯತ್ಯಾಸ ಕಂಡುಬರುವುದು.

ಕರ್ನಾಟಕದ ಉರ್ದುಭಾಷಿಕರ ಮಕ್ಕಳು ಶಾಲೆಯ ಆವರಣದಲ್ಲಿ ಕನ್ನಡವನ್ನು ಎರಡನೆಯ ಭಾಷೆಯಾಗಿ ಅಭ್ಯಾಸಮಾಡುವರು. ಮನೆವಲಯದಲ್ಲಿ ಕನ್ನಡವನ್ನು ಬಳಕೆ ಮಾಡುವುದಿಲ್ಲ. ಆದರೆ ಕನ್ನಡದ ಮಾತುಗಳು ಮಕ್ಕಳ ಕಿವಿಯ ಮೇಲೆ ಬಿದ್ದಿರುತ್ತದೆ. ಅಂದರೆ ಮಾತನಾಡುವ ಮತ್ತು ಗ್ರಹಿಸುವ ಕೌಶಲಗಳು ಪರೋಕ್ಷವಾಗಿ ಬಂದಿರುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬೋಧಕರಿಂದಲೇ ಬರಹದ ಕನ್ನಡವನ್ನು ಕಲಿಯ ಬೇಕಾಗಿದೆ. ಅಂದರೆ ಅವರ ಮನೆಮಾತಾದ ಉರ್ದುವಿನ ಪ್ರಭಾವ ಕಲಿಯುವ ಕನ್ನಡ ಭಾಷೆಯ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಿದೆ ಎಂಬುದು ಗಮನಿಸುವಂತಹ ಅಂಶ. ಕರ್ನಾಟಕದಲ್ಲಿರುವ ಉರ್ದು ಭಾಷಿಕ ಮಕ್ಕಳು ಶಾಲೆಯಲ್ಲಿ ಕನ್ನಡ ಭಾಷೆಯನ್ನು ಕಲಿಯ ಬೇಕೆಂಬ ಕಡ್ಡಾಯದಿಂದ ಕನ್ನಡ ಭಾಷೆಯನ್ನು ಓದುವಾಗ ಮತ್ತು ಬರೆಯುವಾಗ ಅನೇಕ ವ್ಯತ್ಯಾಸಗಳನ್ನು ಮಾಡುತ್ತಾರೆ ಎಂಬ ಮಾತಿದೆ.

ಇಂಗ್ಲಿಶಿನ Errorsಗೆ ಸಂವಾದಿಯಾಗಿ ಕನ್ನಡದಲ್ಲಿ ‘ದೋಷಗಳು’ ಎಂದು ಬಳಕೆ ಮಾಡಲಾಗುತ್ತಿದೆ. ನಿಘಂಟಿನಲ್ಲಿ ‘ದೋಷ’ ಎಂದರೆ ಅನೇಕ ಅರ್ಥಗಳನ್ನು ದಾಖಲಿಸ ಲಾಗಿದೆ. ಒಂದು ಮಗು ತನಗೆ ಅಪರಿಚಿತವಾದ ಭಾಷೆಯೊಂದನ್ನು ಶಾಲೆಯ ಆವರಣದಲ್ಲಿ ಮಾತ್ರ ಕಲಿಯುತ್ತದೆ. ಹಾಗೆ ಕಲಿಯುವಾಗ ಅನೇಕ ವ್ಯತ್ಯಾಸಗಳನ್ನು ಮಾಡುತ್ತದೆ. ಈ ಪ್ರಕ್ರಿಯೆಯನ್ನು ದೋಷ, ನ್ಯೂನ್ಯತೆ, ಕೊರತೆ, ತಪ್ಪುಗಳು ಎಂದು ನಮ್ಮ ಅಧ್ಯಯನಗಳು ಕರೆದಿವೆ. ಹೊಸದಾದ ಭಾಷೆಯೊಂದನ್ನು ಕಲಿಯುವಾಗ ಉಂಟಾಗುವ ಏರುಪೇರುಗಳನ್ನು ತಪ್ಪುಗಳು, ನ್ಯೂನ್ಯತೆ, ಕೊರತೆ ಅಥವಾ ದೋಷಗಳೆಂದು ಕರೆಯುವುದು ಸರಿಯಾದ ಕ್ರಮ ವಲ್ಲ ಅನಿಸುತ್ತದೆ. ಏಕೆಂದರೆ ನಮ್ಮ ದೇಹದ ಮೇಲೆ ಹಲ್ಲಿ ಬಿದ್ದರೆ ಸ್ನಾನ ಮಾಡಿ ಅರಳಿ ಮರ ಸುತ್ತುತ್ತೇವೆ. ಹಾಗೆ ಮಾಡಿದಾಗ ಮಾತ್ರ ದೋಷ ಪರಿಹಾರ ಆಗುತ್ತದೆ ಎಂದು ನಮ್ಮ ನಿಘಂಟುಗಳಲ್ಲಿ ದಾಖಲಾಗಿದೆ. ಸಾರ್ವಜನಿಕವಾಗಿಯೂ ನಂಬಿಕೆಯಲ್ಲಿದೆ. ಆದರೆ ಭಾಷೆ ಕಲಿಕೆಯಲ್ಲಿನ ‘ಶ’, ‘ಷ’ ಧ್ವನಿಗಳಿಗೆ ಬದಲಾಗಿ ‘ಸ’ ಧ್ವನಿ ಬಳಸುವುದು ದೋಷ ಆಗುವುದಿಲ್ಲ. ಅದನ್ನು ವ್ಯತ್ಯಾಸವಾಗುತ್ತದೆ. ಮಗು ಕನ್ನಡದಲ್ಲಿ ‘ಮರ’ವನ್ನು ‘ಮಡ’ ಎಂದು ಉಚ್ಚಾರಣೆ ಮತ್ತು ಬರವಣಿಗೆ ಮಾಡಿದರೆ ಅಶ್ಚರ್ಯ ಪಡಬೇಕು. ಅದು ಎರಡು ಸಂಬಂಧವಿರುವ ಸಾಮಿಪ್ಯ ಧ್ವನಿಗಳ ನಡುವೆ ವ್ಯತ್ಯಾಸ ಮಾಡುತ್ತಿರುತ್ತದೆ ಅದನ್ನು ಗಮನಿಸಿ ತಿದ್ದಬೇಕು. ಇದನ್ನು ‘ವ್ಯತ್ಯಾಸ’ ಎಂದು ಕರೆಯಬಹುದಲ್ಲವೆ. ಗುರಿ ಅಥವಾ ಉದ್ದೇಶಿತ ಭಾಷೆಯ ಜ್ಞಾನದ ಕೊರತೆಯಿಂದಾಗಿ ಈ ಮಾದರಿ ವ್ಯತ್ಯಾಸ ಕಂಡುಬರುತ್ತದೆ ವಿನಹ, ದೋಷ, ನ್ಯೂನ್ಯತೆ ಕಲಿಯುವ ಭಾಷೆಯ ಪದ ಸಂಪತ್ತಿನ ಕೊರತೆಯಿಂದ ಮಾತ್ರ ಅಲ್ಲ. ಕಲಿಕೆಯಲ್ಲಿ ಉಂಟಾಗುವ ವ್ಯತ್ಯಾಸಗಳು ಒಂದು ಸಾಮಾಜಿಕ ಪ್ರಕ್ರಿಯೆ ಆದರೆ, Mistake ಎನ್ನುವುದು ವ್ಯಕ್ತಿಗತ ನೆಲೆಯಲ್ಲಿ ಕಾಣಿಸಿಕೊಳ್ಳುವ ಪ್ರಕ್ರಿಯೆ. ಈ ಹಿನ್ನಲೆಯಲ್ಲಿ ಕರ್ನಾಟಕ ದಲ್ಲಿರುವ ಉರ್ದುಭಾಷಿಕ ಮಕ್ಕಳು ಕನ್ನಡ ಕಲಿಯುವಾಗ ಕಂಡುಬರುವ ವ್ಯತ್ಯಾಸಗಳು ಅವರ ಸಾಮಾಜಿಕ ಚಹರೆಯಾಗಿದೆ. ಅದು ಎಷ್ಟರಮಟ್ಟಿಗೆ ಎಂದರೆ ಧ್ವನಿ, ಪದ, ವಾಕ್ಯ ಮತ್ತು ವ್ಯಾಕರಣದ ಹಂತಗಳಲ್ಲಿ ಉರ್ದುಭಾಷಿಕ ಕನ್ನಡ ಮಾದರಿಯೊಂದು ಬಳಕೆಯಲ್ಲಿದೆ. ಅದು ಅನುಕರಣೀಯ ಯೋಗ್ಯವಾದ ಮಾದರಿಯಾಗಿದೆ. ಕರ್ನಾಟಕದಲ್ಲಿರುವ ಮುಸ್ಲಿಂರೆಲ್ಲ ಉರ್ದು ಭಾಷೆಯನ್ನು ಮಾತನಾಡುವುದಿಲ್ಲ. ಹಾಗೆಯೇ ಎಲ್ಲ ಉರ್ದು ಮಾತೃಭಾಷಿಕ ಕನ್ನಡದ ರಚನೆ ಒಂದೇ ಮಾದರಿಯಲ್ಲಿ ಇಲ್ಲ. ಹಾಗಾಗಿ ಆಯಾ ಪ್ರಾದೇಶಿಕ ಕನ್ನಡದ ಪ್ರಭಾವದಿಂದ ಉರ್ದುಭಾಷಿಕ ಕನ್ನಡ ತನ್ನ ಅನನ್ಯತೆಯನ್ನು ಉಳಿಸಿಕೊಂಡಿದೆ. ಕರ್ನಾಟಕ ದಲ್ಲಿ ಉರ್ದುಭಾಷಿಕ ಮಕ್ಕಳು ಕನ್ನಡ ಭಾಷೆಯನ್ನು ಶಾಲಾ ಆವರಣದಲ್ಲಿ ದ್ವಿತೀಯ ಭಾಷೆಯಾಗಿ ಕಲಿಯುತ್ತಿದ್ದಾರೆ. ಅಂದರೆ ಕರ್ನಾಟಕದಲ್ಲಿ ಉರ್ದುಭಾಷಿಕ ಮಕ್ಕಳು ತ್ರಿಭಾಷಾ ಸೂತ್ರದ ಅನ್ವಯ ೩ನೇ ತರಗತಿಯಿಂದ ೭ನೇ ತರಗತಿವರೆಗೆ ಕನ್ನಡ ಭಾಷೆಯನ್ನು ಕಡ್ಡಾಯ ವಾಗಿ ಕಲಿಯಬೇಕಾಗಿದೆ.

ಉರ್ದುಭಾಷಿಕ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಕೆಯ ಕೌಶಲಗಳಾದ ಆಲಿಸುವುದು, ಓದುವುದು, ಬರೆಯುವುದು ಮತ್ತು ಮಾತನಾಡುವುದರ ಮೂಲಕ ಕಲಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಂಡುಬರುವ ಭಾಷಿಕ ವ್ಯತ್ಯಾಸಗಳನ್ನು ಗುರುತಿಸಿ ಅವುಗಳಿಗೆ ಸಾಧ್ಯವಾಗಿರುವ ಕಾರಣಗಳನ್ನು ಶೋಧಿಸುವ ಪ್ರಯತ್ನ ಮಾಡಲಾಗಿದೆ. ಪ್ರಸ್ತುತ ಅಧ್ಯಯನಕ್ಕೆ ವ್ಯಕ್ತಿಗತ ನೆಲೆಯಲ್ಲಿ ಕಾಣಿಸಿಕೊಳ್ಳುತ್ತಿರುವ ವ್ಯತ್ಯಾಸಗಳನ್ನು ಮಾತ್ರ ಗಮನಿಸದೆ ಸಾರ್ವತ್ರಿಕವಾಗಿ ಕಾಣಿಸಿಕೊಳ್ಳುತ್ತಿರುವ ಭಾಷಿಕ ವ್ಯತ್ಯಾಸಗಳನ್ನು ಕುರಿತು ಅಧ್ಯಯನ ಮಾಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಆನ್ವಯಿಕ ಭಾಷಾಧ್ಯಯನದಲ್ಲಿ ಸಾಮಾಜಿಕ ಭಾಷಾಧ್ಯಯನಕ್ಕೆ ಹೆಚ್ಚು ಮೌಲ್ಯಯುತ ಸ್ಥಾನವಿದೆ. ಅದರ ಪರಿಧಿಯೊಳಗೆ ಬರುವ ಭಾಷಾ ಕಲಿಕೆ ಮತ್ತು ಬೋಧನೆ ಕುರಿತು ಕನ್ನಡದಲ್ಲಿ ಅಷ್ಟೊಂದು ಅಧ್ಯಯನಗಳು ಆಗಿಲ್ಲ. ಕಲಿಕೆ ಎಂದರೆ ‘ಒಂದು ಹೊಸ ಭಾಷೆಯನ್ನು ಗಳಿಸುವುದು ಎಂದರ್ಥ. ‘ಭಾಷಾಗಳಿಕೆ’ ಎಂದರೆ ಭಾಷಾಜ್ಞಾನ ವನ್ನು ಪಡೆದುಕೊಳ್ಳುವುದು ಅಥವಾ ಶಕ್ತಿಸಾಮಾರ್ಥ್ಯದಿಂದ ಗಳಿಸಿಕೊಳ್ಳುವುದು. ಮಕ್ಕಳು ಯಾವಾಗಲೂ ಎರಡನೆ ಭಾಷೆಯನ್ನು ಕಲಿಯುವುದು ಅವರವರ ಮೊದಲನೆಯ ಭಾಷೆ ಮೂಲಕ ಎಂಬುದು ಭಾಷಾಶಾಸ್ತ್ರಜ್ಞರ ಅಭಿಪ್ರಾಯ. ಹಾಗಾಗಿ ಉರ್ದುಭಾಷಿಕರ ಮಕ್ಕಳು ಶಾಲೆಯ ಆವರಣದಲ್ಲಿ ಕನ್ನಡ ಭಾಷೆಯನ್ನು ಉರ್ದುವಿನ ಮೂಲಕ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ. ಏಕೆಂದರೆ ಕನ್ನಡ ಭಾಷೆ ದ್ರಾವಿಡ ಭಾಷಾವರ‍್ಗಕ್ಕೆ ಸೇರಿದರೆ: ಉರ್ದುಭಾಷೆ ಇಂಡೋ ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಯಾಗಿದೆ. ಆದುದರಿಂದ ಈ ಎರಡು ಭಾಷೆಗಳ ರಚನೆ ಭಿನ್ನವಾಗಿದೆ. ಪ್ರಸ್ತುತ ಕೃತಿಯಲ್ಲಿ ಉರ್ದುಭಾಷೆಯನ್ನು ಮೊದಲ ನೆಯ ಭಾಷೆಯಾಗಿಯುಳ್ಳ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕಲಿಯುವಾಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವು ಯಾವುವು? ಅವುಗಳ ಸಾಮ್ಯತೆ ಮತ್ತು ಭಿನ್ನತೆಗಳ ಬಗ್ಗೆ ಇಲ್ಲಿ ಚರ್ಚಿಸುವ ಪ್ರಯತ್ನ ಮಾಡಲಾಗಿದೆ. ಎರಡನೆಯ ಭಾಷೆಯನ್ನು ಕಲಿಯುವಾಗ ಶುದ್ಧ ಮತ್ತು ಅಶುದ್ಧ ರೂಪಗಳನ್ನು ಬೇರೆ ಮಾಡಿ ಬಳಕೆ ಮಾಡುವ ಭಾಷಾಜ್ಞಾನ ಇರುವು ದಿಲ್ಲ. ಆದರೆ ಭಾಷಾ ಬಳಕೆ ಕ್ರಮ ಮಾತ್ರ ಭಿನ್ನ. ಕರ್ನಾಟಕದಲ್ಲಿರುವ ಉರ್ದುಭಾಷಿಕ ಮಕ್ಕಳಿಗೆ ಇಂಗ್ಲಿಶ್ ಮೂರನೆ ಭಾಷೆಯಾಗಿದೆ. ಜತೆಗೆ ಸಂಪರ್ಕಭಾಷೆಯಾಗಿದೆ. ಇವರು ಕನ್ನಡ ಭಾಷೆಯನ್ನು ೩ ರಿಂದ ೭ನೇ ತರಗತಿವರೆಗೆ ಕಡ್ಡಾಯವಾಗಿ ಕಲಿಯುತ್ತಿದ್ದಾರೆ. ೩ ಮತ್ತು ೪ನೇ ತರಗತಿಯ ಉರ್ದುಭಾಷಿಕ ಮಕ್ಕಳು ಕನ್ನಡ ಮೊದಲನೆ ಭಾಷೆಯುಳ್ಳ ಮಕ್ಕಳು ಕಲಿಯುವ ೧ನೇ ಮತ್ತು ೨ನೇ ತರಗತಿಯ ಮಕ್ಕಳು ಅಭ್ಯಾಸ ಮಾಡುವ ಪಠ್ಯವನ್ನು, ೫ನೇ ತರಗತಿ ಮಕ್ಕಳು ‘ತಿಳಿಗನ್ನಡ’ ಎಂಬ ಪ್ರತ್ಯೇಕ ಪಠ್ಯವನ್ನು ಅಭ್ಯಾಸ ಮಾಡುವ ಕ್ರಮವಿದೆ.

ಭಾಷಾ ಕಲಿಕೆಯಲ್ಲಿ ಮೊದಲನೆಯ ಭಾಷೆಯ ನಿಯಮಗಳು ಕಲಿಯುವ ಭಾಷೆ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದು ಗಮನಿಸುವಂತಹ ಅಂಶ. ಪ್ರಸ್ತುತ ಅಧ್ಯಯನ ದಲ್ಲಿ ಭಾಷಿಕ ವ್ಯತ್ಯಾಸಗಳಿಗೆ ಕಾರಣಗಳು ಕೆಲವೊಮ್ಮೆ ಖಚಿತವಾಗಿದ್ದರೆ; ಮತ್ತೆ ಕೆಲವೊಮ್ಮೆ ಸಾಧ್ಯತೆಯಿಂದ ಕೂಡಿರುತ್ತದೆ. ಇನ್ನು ಕೆಲವೊಮ್ಮೆ ಮಕ್ಕಳ ಕಲಿಕೆಯ ಸಾಮಾರ್ಥ್ಯದಿಂದಲೂ ವ್ಯತ್ಯಾಸಗಳ ಪ್ರಮಾಣ ಹೆಚ್ಚು ಕಡಿಮೆ ಆಗುತ್ತದೆ. ಏನೆ ಆಗಲಿ ಎರಡನೆಯ ಭಾಷೆ ಕಲಿಕೆಗಳ ಮೊದಲನೆಯ ಭಾಷೆ ಕಲಿಕೆಗಿಂತ ಬೇರೆಯಾಗಿರುತ್ತದೆ.

ಹೆಚ್ಚು ಭಾಷೆಗಳನ್ನು ಕಲಿಯುವುದರಿಂದ ಜ್ಞಾನ ವೃದ್ದಿಯಾಗುತ್ತದೆ ಎನ್ನುವುದಕ್ಕಿಂತ ಅದರಿಂದ ಕಲಿಯುವಾಗ ತಲೆದೂರುವ ಸಮಸ್ಯೆಗಳನ್ನು ಕುರಿತು ಮನೋಭಾಷಾವೈಜ್ಞಾನಿಕ ನೆಲೆಯಲ್ಲಿ ಅಧ್ಯಯನಗಳು ಸಾಕಷ್ಟು ಆಗಿವೆ. ಮೇಲ್ನೋಟಕ್ಕೆ ಕಲಿಕೆ ಪ್ರಕ್ರಿಯೆ ಸರಳವಾಗಿ ಕಂಡರೂ ಆಳದಲ್ಲಿ ಅದರ ಕೌಶಲಗಳು ಸಂಕೀರ್ಣವಾಗಿರುತ್ತವೆ. ಕಲಿಕಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಸಮರ್ಥವಾಗಿ ಅವರವರ ಮೊದಲನೆಯ ಭಾಷೆಯ ಮೂಲಕ ಅಭಿವ್ಯಕ್ತಿ ಸುವ ಸಾಮಾರ್ಥ್ಯ ಪಡೆದಿರುತ್ತಾರೆ. ಅಂತಹ ಸಾಮಾರ್ಥ್ಯವನ್ನು ಎರಡನೆಯ ಭಾಷೆಯನ್ನು ಕಲಿಯುವ ಸಂದರ್ಭದಲ್ಲಿ ಪ್ರದರ್ಶನ ಮಾಡುತ್ತಾರೆ.

ಕಲಿಕೆಯನ್ನು ಕುರಿತು ರಾಬರ್ಟ ಲ್ಯಾಡೋ ಅವರು ಈ ರೀತಿ ಅಭಿಪ್ರಾಯಪಡುತ್ತಾರೆ. ‘Leavning a second Language is desined as acquiring the ability to use its structure with in a general vocabulary under essentially the conditions of normal communication Among native speakers of conversational speed’. ಎಂದಿದ್ದಾರೆ. ಔಪಚಾರಿಕ ನೆಲೆಯಲ್ಲಿ ದ್ವಿಭಾಷಿಕ ಕಲಿಕೆಯ ಹಿನ್ನಲೆ ಬಹಳ ಮುಖ್ಯವಾದುದು. ಮೊದಲನೆಯ ಭಾಷಾ ಕಲಿಕೆ ಪರಿಸರದಂತೆ ಎರಡನೆ ಭಾಷೆಯ ಕಲಿಕೆ ಪರಿಸರ ನೈಸರ್ಗಿಕವಾಗಿರಬೇಕಾಗುತ್ತದೆ. ಸಾಮಾನ್ಯ ಕಲಿಕೆಯ ಸಿದ್ಧಾಂತಗಳ ಕಾರ್ಯ ಸ್ವರೂಪದ ಆಧಾರದ ಮೇಲೆ ಪ್ರಮುಖವಾಗಿ ಎರಡು ವರ್ಗಗಳಲ್ಲಿ ವರ್ಗೀಕರಿಸಲಾಗಿದೆ.

ಅ. ಪ್ರಚೋದನೆ ಮತ್ತು ಪ್ರತಿಕ್ರಿಯೆ ಸಿದ್ಧಾಂತ

ಆ. ಜ್ಞಾತಿ ಭಾಷಾನಿಯಮ ಸಿದ್ಧಾಂತ.

ಪ್ರಚೋದನೆ ಮತ್ತು ಪ್ರತಿಕ್ರಿಯೆ ಸಿದ್ದಾಂತಕ್ಕೆ ಶ್ರವ್ಯ-ದೃಶ್ಯ ಮಾಧ್ಯಮ ಪೂರಕವಾಗಿದೆ. ದೃಶ್ಯಮಾಧ್ಯಮ ಶಾಬ್ದಿಕ ಮಾಧ್ಯಮವಾಗಿದ್ದರೆ. ಶ್ರವ್ಯ ಮಾಧ್ಯಮ ಅಶಾಬ್ದಿಕ ಮಾಧ್ಯಮ. ಈ ಎರಡು ಮಾಧ್ಯಮದಲ್ಲಿ ಡ್ರಿಲ್ ಮತ್ತು ಅಭ್ಯಾಸ ಮಾದರಿ ಪ್ರಮುಖವಾದುದು. ಇದಕ್ಕೆ ಸಂಬಂಧಿಸಿದಂತೆ ಕೆಲವು ಭಾಷಿಕ ಪಂಥಗಳೆ ಕಾರ್ಯನಿರ್ವಹಿಸುತ್ತಿವೆ. ಭಾಷಾ ಬೋಧನೆ ವಿಧಾನ ಗಳನ್ನು ಕುರಿತು ಬ್ಲೂಮ್‌ಪ್ಲೀಡಿಯನ್ ಮತ್ತು ನ್ಯೂಬ್ಲೂಮ್‌ಪ್ಲೀಡಿಯನ್ ಪಂಥದ ಭಾಷಾವಿಜ್ಞಾನಿಗಳು ಸಾಕಷ್ಟು ಕೆಲಸ ಮಾಡಿದ್ದಾರೆ. ಇವರು ಬೋಧನಾ ವಿಧಾನಗಳಲ್ಲಿ ಅನುಸರಿಸುವ ಕ್ರಮಗಳ ಬಗೆಗೆ, ಊಹೆಗಳನ್ನು ದೃಶ್ಯ-ಶ್ರವ್ಯ ಅಭ್ಯಾಸ ಮಾದರಿಯಲ್ಲಿ ಹೇಗೆ ಅಳವಡಿಸಬೇಕು ಎಂಬುದಾಗಿ ಹೇಳಿದ್ದಾರೆ. ಆದರೆ ಜ್ಞಾತಿ ಭಾಷಾನಿಯಮ ಸಿದ್ಧಾಂತ ಕಾರರು ಕಲಿಕೆ ಸಿದ್ಧಾಂತದ ಬಗೆಗೆ ಪರಿವರ್ತನಾ ಉತ್ಪಾದಕ ವಿಧಾನವನ್ನು ಅನುಸರಿಸಿದ್ದಾರೆ. Congnitive code ಸಿದ್ಧಾಂತಕಾರರು ಮಕ್ಕಳು ಭಾಷೆಯನ್ನು ಗಳಿಸುತ್ತಾರೆ ವಿನಹ ಅನುಕರಣೆ ಯಿಂದ ಕಲಿಯುವುದಿಲ್ಲ ಎಂದು ಅಭಿಪ್ರಾಯಪಡುತ್ತಾರೆ. ಆದರೆ ಪ್ರಸಿದ್ಧ ಭಾಷಾವಿಜ್ಞಾನಿ ನೋಮ್ ಚಾಮ್‌ಸ್ಕಿ (೧೯೬೫) ಅವರ ಪ್ರಕಾರ “ಭಾಷಾ ಬೆಳವಣಿಗೆ ಮಕ್ಕಳಲ್ಲಿ ಹುಟ್ಟಿ ನಿಂದಲೇ ಪ್ರತಿಮಾ ರೂಪದಲ್ಲಿ ಅಂತಸ್ಥವಾಗಿರುತ್ತದೆ. ಅದು ವಿವಿಧ ವ್ಯಾಕರಣ ಮಾದರಿಗಳ ರೂಪದಲ್ಲಿದ್ದು; ಅವು ಕಲಿಕೆಯಿಂದ ಸಂದರ್ಭದಿಂದ ಹೆಚ್ಚು ಫಲಸೃತಿಯಾಗುತ್ತವೆ. ಹೊರತು; ಅನುಕರಣೆಯಿಂದ ಅಲ್ಲ ಎಂದು ಅಭಿಪ್ರಾಯಪಡುತ್ತಾರೆ. ಸಾಮಾನ್ಯವಾಗಿ ಮಕ್ಕಳು ಮನೆಮಾತಿನಲ್ಲಿ ಎಂತಹ ಸಂಕೀರ್ಣವಾಕ್ಯಗಳನ್ನಾದರೂ ಅರ್ಥಮಾಡಿಕೊಳ್ಳುವ ಸಾಮಾರ್ಥ್ಯ ಹೊಂದಿರುತ್ತಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಇಂತಹ ಸಂಕೀರ್ಣ ವಾಕ್ಯಗಳನ್ನು ಹಿಂದೆ ಎಲ್ಲೂ ಕೇಳಿರುವುದಿಲ್ಲ ಅಷ್ಟರ ಮಟ್ಟಿಗೆ ನವೀನವಾಗಿರುತ್ತದೆ. ಹಾಗಾಗಿ ಭಾಷೆ ಕಲಿಕೆಯಿಂದ ಬರುವಂತಹದು ಹೂರತು; ಅನುಕರಣೆಯಿಂದ ಅಲ್ಲ ಎಂದು ಅಭಿಪ್ರಾಯಪಡುತ್ತಾರೆ.

ಭಾಷಾಶಾಸ್ತ್ರದ ಆನ್ವಯಿಕ ಶಾಖೆಗಳಲ್ಲಿ ವೈದೃಶ್ಯಾತ್ಮಕ ಭಾಷಾಶಾಸ್ತ್ರವು ಒಂದು. ಇದು ಎರಡು ಅಥವಾ ಎರಡಕ್ಕಿಂತ ಹೆಚ್ಚು ಭಾಷೆಗಳ ರಚನೆಗಳಲ್ಲಿನ ವ್ಯತ್ಯಾಸವನ್ನು ಕುರಿತು ಅಧ್ಯಯನ ಮಾಡುತ್ತದೆ. ಈ ಮಾದರಿ ವ್ಯತ್ಯಾಸಗಳನ್ನು ಊಹಿಸಿಕೊಂಡು ಎರಡನೆ ಭಾಷೆ ಯನ್ನು ಕಲಿಯುವುದು ತುಂಬಾ ಕಷ್ಟದಾಯಕವಾದ ಕೆಲಸ. ಹಾಗಾಗಿ ಮಕ್ಕಳ ಭಾಷಾ ಕಲಿಕೆ ಯಲ್ಲಿ ವೈದೃಶ್ಯಾತ್ಮಕ ವಿಶ್ಲೇಷಣೆ ಸಹಾಯ ಮಾಡುತ್ತದೆ. ಹೇಗೆಂದರೆ ಕಲಿಕಾರ್ಥಿಗಳು ಯಾವಾಗಲೂ ಅವರವರ ಮನೆಮಾತಿನ ಮೂಲಕ ಎರಡನೆಯ ಭಾಷೆಯನ್ನು ಕಲಿಯುತ್ತಾರೆ. ಹಾಗಾಗಿ ಕಲಿಕೆಯ ಸಂದರ್ಭದಲ್ಲಿ ಕಲಿಕಾರ್ಥಿಗಳ ಮನೆಮಾತಿನ ಘಟಕಗಳು ಅಡ್ಡಿಪಡಿ ಸುತ್ತವೆ. ಉದಾಹರಣೆಗೆ: ಉರ್ದುಭಾಷಿಕರ ಮಕ್ಕಳು ಶಾಲೆಯ ಆವರಣದಲ್ಲಿ ಕನ್ನಡ ಭಾಷೆಯನ್ನು ಉರ್ದುವಿನ ಮೂಲಕ ಕಲಿಯುತ್ತಿದ್ದಾರೆ. ‘ಕೋಳಿ’ ಮತ್ತು ಹುಂಜ ಪದವನ್ನು ಚಿತ್ರರಹಿತ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳುವುದು ಅವರ ಮನೆಮಾತಿನ ಉರ್ದುವಿನ ‘ಮುರ‍್ಗ’ ಮುರ‍್ಗಿ ಪದಗಳ ಮೂಲಕ. ಹಾಗಾಗಿ ಉರ್ದು ಮನೆಮಾತಿನ ಮಕ್ಕಳಿಗೆ ಕನ್ನಡ ಬೋಧಿಸುವವರು ಕನ್ನಡ ಭಾಷೆಯಷ್ಟು ಸಾಮಾರ್ಥ್ಯವನ್ನು ಉರ್ದುಭಾಷೆಯಲ್ಲೂ ಇರಬೇಕಾ ಗುತ್ತದೆ. ಆಗ ಮಾತ್ರ ಕನ್ನಡ ಬೋಧನೆ ಪರಿಣಾಮಕಾರಿಯಾಗುವುದರಲ್ಲಿ ಎರಡು ಮಾತಿಲ್ಲ. ಇಲ್ಲವಾದಲ್ಲಿ ಕನ್ನಡ ಭಾಷೆ ಕಲಿಕೆ ಕಷ್ಟವಾಗುತ್ತದೆ ಎನ್ನುತ್ತಾರೆ ಕನ್ನಡ ಭಾಷಾ ಬೋಧಕರು. ಸಾಮಾನ್ಯವಾಗಿ ಸರ್ಕಾರಿ ಉರ್ದುಶಾಲೆಯಲ್ಲಿ ಅತ್ಯಂತ ಬಡತನದಿಂದಿರುವ ಮಕ್ಕಳೆ ಹೆಚ್ಚಾಗಿ ಪ್ರವೇಶ ಪಡೆಯುತ್ತಾರೆ ವಿನಹ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಉತ್ತಮ ಸ್ಥಿತಿಯಲ್ಲಿರುವ ಶಾಲೆಗಳನ್ನು ಸೇರಿಕೊಳ್ಳುತ್ತಾರೆ. ಅಂದರೆ ಭಾಷಾ ಕಲಿಕೆಯಲ್ಲಿ ಆರ್ಥಿಕ ಮಟ್ಟವು ಪ್ರಮುಖ ಪಾತ್ರವಹಿಸುತ್ತದೆ ಎಂದರೆ ಆಶ್ಚರ್ಯವೇನಿಲ್ಲ.

ದೋಷ ವಿಶ್ಲೇಷಣೆಯಲ್ಲಿ ಜ್ಞಾತಿ ಭಾಷೆಗಳ ಕಲಿಕೆಯ ಸಿದ್ಧಾಂತ ಮತ್ತು ರೂಪಾಂತರ ಸಿದ್ದಾಂತಗಳು ಪ್ರಮುಖಪಾತ್ರವಹಿಸುತ್ತವೆ. ಇವುಗಳ ಜತೆಗೆ ಕಲಿಕಾರ್ಥಿಗಳ ಮನೆಮಾತಿನ ಪ್ರಭಾವ ಇದ್ದೇ ಇರುತ್ತದೆ. ಇದು ಹೆಚ್ಚಾಗಿ ಎರಡನೆಯ ಭಾಷೆಯ ಕಲಿಕೆಯ ಸಂದರ್ಭದಲ್ಲಿ ಕಂಡುಬರುತ್ತದೆ. ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಅನ್ಯಭಾಷಿಕರು ಕನ್ನಡ ಭಾಷಾಕಲಿಕೆಯ ಸಂದರ್ಭದಲ್ಲಿ ತಲೆದೂರುವ ಭಾಷಿಕ ವ್ಯತ್ಯಾಸಗಳಿಗೆ ಕಾರಣಗಳನ್ನು ಕೆಳಗಿನಂತೆ ಪಟ್ಟಿಮಾಡ ಬಹುದು.

ಅ. ಒಂದೇ ನಿಯಮಗಳನ್ನು ಎಲ್ಲಕ್ಕು ಅನ್ವಯಿಸುವುದು.
ಆ. ಗುರಿ ಭಾಷಾ ನಿಯಮಗಳ ಪ್ರಭಾವ
ಇ. ಸಂಪರ್ಕ ಭಾಷೆಯ ಪ್ರಭಾವ
ಈ. ಮನೆಮಾತಿನ ಪ್ರಭಾವ
ಉ. ಸಾದೃಶ್ಯತೆ ಪ್ರಕ್ರಿಯೆ
ಊ. ವ್ಯಕ್ತಿಗತ ನೆಲೆಯ ವ್ಯತ್ಯಾಸಗಳು
ಋ. ಸರಿಯಾಗಿ ಆಲಿಸದೆ ಇರುವುದು ಮತ್ತು ಕಲಿಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇರುವುದು.

ಎ. ಕಂಠಪಾಠ ವಿಧಾನ

ಎರಡನೆಯ ಭಾಷೆಯನ್ನು ಕಲಿಯುವ ಮಗು ತನ್ನ ಮನೆಮಾತಿನ ಪ್ರಭಾವದಿಂದ ತನ್ನ ಮನೆ ಮಾತಿನ ಭಾಷೆಯ ರಚನಾ ನಿಯಮಗಳನ್ನು ಕಲಿಯುವ ಭಾಷೆಗೆ ಅನ್ವಯಿಸಿ ಓದುವ ಮತ್ತು ಬರೆಯುವ ಪ್ರಕ್ರಿಯೆಯಲ್ಲಿ ತೊಡಗುತ್ತದೆ. ಹಾಗೆಯೇ ಕಲಿಯುವ ಭಾಷೆಯ ನಿಯಮ ಗಳು ಮಗುವಿಗೆ ತುಂಬ ಅಪರಿಚಿತವಾದುದ್ದರಿಂದ ಅನೇಕ ತಪ್ಪುಗಳು ಉಂಟಾಗುತ್ತವೆ. ಇದರ ನಡುವೆ ಮನೆಯಲ್ಲಿ ಬಳಕೆಯಾಗುವ ಭಾಷೆ ಶಾಲೆಯಲ್ಲಿ ಬಳಕೆಯಾಗುವ ಭಾಷೆ ಮತ್ತು ಈ ಎರಡು ಪರಿಸರಕ್ಕೆ ಭಿನ್ನವಾಗಿರುವ ಭಾಷೆಯ ಪ್ರಭಾವವು ಕೂಡ ಕಲಿಯುವ ಭಾಷೆಯ ಮೇಲೆ ಪರಿಣಾಮ ಉಂಟುಮಾಡುತ್ತದೆ. ಕಲಿಕೆಯಲ್ಲಿ ಹಿಂದುಳಿದಿರುವುದಕ್ಕೆ ಮತ್ತೊಂದು ಕಾರಣವೆಂದರೆ ತರಗತಿಯ ಅವಧಿಯಲ್ಲಿ ಸರಿಯಾಗಿ ಆಲಿಸದೆ ಇರುವುದು. ಜತೆಗೆ ಕಲಿಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇರುವುದು. ಇತ್ಯಾದಿ ಕಾರಣಗಳಿಂದ ಎರಡನೆ ಭಾಷೆಯನ್ನು ಕಲಿಯುವ ಮಗು ಕಲಿಯುವ ಭಾಷೆಯಲ್ಲಿ ವ್ಯತ್ಯಾಸ ಮಾಡುತ್ತಾ ಹೋಗುತ್ತದೆ. ಅಂತಿಮವಾಗಿ ಭಾಷಾ ಕಲಿಕೆಯಲ್ಲಿ ಕಾಣಿಸಿಕೊಳ್ಳುವ ವ್ಯತ್ಯಾಸಗಳಿಗೆ ಮೂರು ಮಾದರಿ ಭಾಷೆಗಳ ಪ್ರಭಾವ ಇರುತ್ತದೆ.

ಅ. ಗುರಿ ಭಾಷೆ ಪ್ರಭಾವ
ಆ. ಸಂಪರ್ಕ ಭಾಷೆ ಪ್ರಭಾವ
ಇ. ಮನೆಮಾತಿನ ಪ್ರಭಾವ

ಇವಲ್ಲದೆ ಅಕಲಿಕೆಯ ಪ್ರಕ್ರಿಯೆಯೂ ಒಂದು ಪ್ರಮುಖವಾದ ಕಾರಣ ಎಂದು ಕೆಲವರ ವಾದ. ಇನ್ನೂ ಕೆಲವು ಸಂದರ್ಭದಲ್ಲಿ ಆಡುನುಡಿ ರಚನೆಗಳ ಪ್ರಭಾವದಿಂದಲೂ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಉರ್ದು ಭಾಷಿಕ ಮಕ್ಕಳು ಸಾರ್ವಜನಿಕ ಆವರಣದಲ್ಲಿ ಕನ್ನಡ ಭಾಷೆ ಯನ್ನು ವ್ಯವಹಾರಿಕವಾಗಿ ಕಲಿಯಬೇಕಾಗಿರುವುದರಿಂದ ಅನಿವಾರ್ಯವಾಗಿ ಕನ್ನಡ ಭಾಷೆಯನ್ನು ಕಲಿಯಬೇಕಾಗಿದೆ. ಶಾಲೆಯ ಆವರಣದಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ವಾಗಿರುವುದು. ಉರ್ದುಭಾಷಿಕ ಮಕ್ಕಳಿಗೆ ಕನ್ನಡ ಭಾಷೆಯ ಆಡುನುಡಿ ಮತ್ತು ಬರಹದ ರೂಪಗಳ ಪರಿಚಯ ಅನಿವಾರ್ಯವಾಗಿದೆ.