ಎಲ್ಲ ಸಮಸ್ಯೆಗಳಿಗೆ ಪರಿಹಾರಗಳನ್ನು ರೀತಿ ಪಟ್ಟಿ ಮಾಡಬಹುದು.

೧. ಉರ್ದು ಭಾಷೆಯಲ್ಲಿ ೩೬ ಅಕ್ಷರಗಳಿವೆ. ಕನ್ನಡದಲ್ಲಿ ೪೯ ಅಕ್ಷರಗಳಿವೆ. ಉರ್ದುಭಾಷೆಗಿಂತ ಕನ್ನಡದಲ್ಲಿ ೧೩ ಅಕ್ಷರಗಳು ಹೆಚ್ಚಿವೆ. ಉರ್ದು ಭಾಷೆಯಲ್ಲಿ ಕನ್ನಡಕ್ಕಿಂತ ೧೩ ಅಕ್ಷರಗಳು ಕಡಿಮೆಯಿವೆ. ಈ ವ್ಯತ್ಯಾಸದಿಂದ ಉರ್ದುಭಾಷಿಕ ಮಕ್ಕಳು ಕನ್ನಡ ಭಾಷೆ ಯನ್ನು ಓದುವಾಗ ಮತ್ತು ಬರವಣಿಗೆ ಮಾಡುವಾಗ ಈ ಮಾದರಿ ವ್ಯತ್ಯಾಸವನ್ನು ಮಾಡು ತ್ತಾರೆ.

೨. ಉರ್ದು ಭಾಷೆಯಲ್ಲಿ ಕೆಲವು ಹ್ರಸ್ವ ಮತ್ತು ದೀರ್ಘ ಧ್ವನಿಗಳು ಇಲ್ಲದೆ ಇರುವುದರಿಂದ ಕನ್ನಡದಲ್ಲಿ ಹ್ರಸ್ವ ಮತ್ತು ದೀರ್ಘಧ್ವನಿಗಳನ್ನು ಅಭೇದವಾಗಿ ಓದುತ್ತಾರೆ ಮತ್ತು ಬರವಣಿಗೆ ಮಾಡುತ್ತಾರೆ.

೩. ಉರ್ದುವಿಗಿಂತ ಕನ್ನಡದಲ್ಲಿ ತಲೆಕಟ್ಟು ಗುಣಿತಕ್ಷರದ ರಚನೆಯ ಇಳಿ, ಗುಡಿಸು, ಗುಡಿಸಿನ ದೀರ್ಘ, ಐತ್ವ, ಒತ್ವದ ದೀರ್ಘ, ಔತ್ವ ಭಿನ್ನವಾಗಿದ್ದು, ಕನ್ನಡದ ಗುಣಿತಾಕ್ಷರಗಳ ಚಿಹ್ನೆಯನ್ನು ವ್ಯತ್ಯಾಸದಿಂದ ಓದುತ್ತಾರೆ ಮತ್ತು ಬರವಣಿಗೆ ಮಾಡುತ್ತಾರೆ.

೪. ಉರ್ದುವಿನಲ್ಲೂ ಅಲ್ಪಪ್ರಾಣ ಮತ್ತು ಮಹಾಪ್ರಾಣ ಧ್ವನಿಗಳು ಇವೆ. ಕನ್ನಡದ ಆಡುಮಾತಿನಲ್ಲಿ ಮಹಾಪ್ರಾಣ ಧ್ವನಿಗಳು ಬಳಕೆಯಲ್ಲಿ ಇಲ್ಲದೆ ಇರುವುದರಿಂದ ಬಳಕೆಯ ಕನ್ನಡ ಅನುಕರಣಿಯ ಹಿನ್ನೆಲೆಯಲ್ಲಿ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ನಡುವೆ ಉಚ್ಛಾರಣೆಯಲ್ಲಿ ಸ್ಪಷ್ಟವಾದ ವ್ಯತ್ಯಾಸ ತಿಳಿಯದೆ ಇರುವುದು.

೫. ಕನ್ನಡದ ಅಕ್ಷರಗಳು ಹುಟ್ಟುವ ಸ್ಥಾನ ಮತ್ತು ಕ್ರಮದ ಬಗೆಗೆ ಕುರಿತು ಸ್ಪಷ್ಟತೆ ಇಲ್ಲದಿರುವುದು.

೬. ಹ್ರಸ್ವ ಮತ್ತು ದೀರ್ಘ ಅಕ್ಷರಗಳ ನಡುವೆ ಇರುವ ಸ್ಪಷ್ಟ ವ್ಯತ್ಯಾಸವನ್ನು ಉಚ್ಚಾರಣೆ ಮಾಡಿ ತಿಳಿಸಬೇಕು. ಅಂದರೆ ಧ್ವನ್ಯಾಂಗದಿಂದ ಧ್ವನಿಗಳನ್ನು ಉಚ್ಚರಿಸಿ ತೋರಿಸಿಬೇಕು. ಸಾಧ್ಯವಾದರೆ ಉರ್ದುಭಾಷೆಯಲ್ಲಿನ ಹ್ರಸ್ವ ಮತ್ತು ದೀರ್ಘ ಅಕ್ಷರಗಳ ನಡುವೆ ಏನು ವ್ಯತ್ಯಾಸವಿದೆ ಎಂಬುದನ್ನು ಮಕ್ಕಳಿಗೆ ತಿಳಿಸಬೇಕು. ಡಬ್ಬದಿಂದ ಸ್ವರ ಅಕ್ಷರಗಳನ್ನು ಒಂದೊಂದಾಗಿ ತೆಗೆದು ಅವುಗಳನ್ನು ಓದುವಂತೆ ಮಕ್ಕಳಿಗೆ ಸೂಚಿಸಬೇಕು. ಈ ಮಾದರಿ ಚಟುವಟಿಕೆಯನ್ನು ಎಲ್ಲ ಮಕ್ಕಳಿಗೂ ಅನುಸರಿಸಬೇಕು. ಎಲ್ಲಿ ವ್ಯತ್ಯಾಸ ಮಾಡುತ್ತಾರೆ ಅದನ್ನು ತಿದ್ದುವುದು ಸೂಕ್ತ.

೭. ಗುಣಿತಾಕ್ಷರಗಳ ಚಿಹ್ನೆಗಳಾವುವು ಎಂಬುದನ್ನು ಸ್ಪಷ್ಟಪಡಿಸುವುದು. ವ್ಯಂಜನ ಅಕ್ಷರಗಳಿಗೆ ಗುಣಿತ ಅಕ್ಷರಗಳ ಚಿಹ್ನೆಗಳನ್ನು ಹಚ್ಚಿ ಉಚ್ಚಾರಣೆ ಮಾಡುವಂತೆ ಮಕ್ಕಳಿಗೆ ಸೂಚಿಸಬೇಕು. ಜತೆಗೆ ಬರವಣಿಗೆ ಮಾಡುವಂತೆ ಸೂಚಿಸಬೇಕು. ಹ್ರಸ್ವ ಮತ್ತು ದೀರ್ಘ ಅಕ್ಷರಗಳ ನಡುವೆ ಇರುವ (ಮಾರಿ-ಮರಿ, ಬೀಸಿ-ಬಿಸಿ, ಕೂರಿ-ಕುರಿ, ಬೀಡಿ-ಬಿಡಿ) ಉಚ್ಚಾರಣೆ ವ್ಯತ್ಯಾಸ ಮತ್ತು ಅರ್ಥವ್ಯತ್ಯಾಸವನ್ನು ಮಕ್ಕಳಿಗೆ ಸ್ಪಷ್ಟಪಡಿಸಬೇಕು. ಸಾಧ್ಯವಾದರೆ ಬೇರೆ ಬೇರೆ ಗುಂಪುಗಳನ್ನು ಮಾಡಿ ಪ್ರತಿಯೊಂದು ಗುಂಪಿಗೂ ಗುಣಿತಾಕ್ಷರದ ಪದ ಪಟ್ಟಿಯನ್ನು ಓದಿ ಬರವಣಿಗೆ ಮಾಡಿಸಿ ಅಭ್ಯಾಸ ಮಾಡಿಸಬೇಕಾಗಿದೆ.

೮. ಅಲ್ಪಪ್ರಾಣ ಮತ್ತು ಮಹಾಪ್ರಾಣ ಅಕ್ಷರಗಳ ನಡುವೆ ಇರುವ ವ್ಯತ್ಯಾಸವನ್ನು ತೋರಿಸಬೇಕು. ಉಚ್ಚಾರಣೆಯ ವ್ಯತ್ಯಾಸವನ್ನು ಉಚ್ಚರಿಸಿ ತೋರಿಸಬೇಕು. ಧ್ವಂನ್ಯಾಂಗದಿಂದ ಗಾಳಿಯನ್ನು ಮುಖ ವಿವರದಿಂದ ಬಿಡುವಾಗ ಏರುಪೇರು ಆಗುವುದನ್ನು ಪ್ರಾಯೋಗಿಕವಾಗಿ ತೋರಿಸಿ ಅಲ್ಪಪ್ರಾಣ ಮತ್ತು ಮಹಾಪ್ರಾಣ ಧ್ವನಿ ಮಿಂಚು ಪಟ್ಟಿಗಳಿಂದ ಡಬ್ಬದಿಂದ ಒಂದೊಂದನ್ನು ತೆಗೆದು ಉಚ್ಚಾರಣೆ ಮಾಡಿ ತೋರಿಸಬೇಕು. ನಂತರ ಮಕ್ಕಳ ಬಾಯಿಯಲ್ಲಿ ಓದುವಂತೆ ಸೂಚಿಸಬೇಕು. ಈ ಮಾದರಿ ಚಟುವಟಿಕೆಯನ್ನು ತರಗತಿಯ ಎಲ್ಲಾ ಮಕ್ಕಳಲ್ಲಿಯೂ ಮಾಡಿಸಬೇಕು. ವ್ಯತ್ಯಾಸ ಮಾಡುವ ವಿದ್ಯಾರ್ಥಿಗಳನ್ನು ತಕ್ಷಣ ತಿದ್ದುವುದು ಸೂಕ್ತ. ಮಹಾಪ್ರಾಣ ಅಕ್ಷರಗಳು ಎಲ್ಲಿ ಹುಟ್ಟುತ್ತವೆ. ಯಾವ ವಿಧಾನದಲ್ಲಿ ಉಚ್ಚಾರಣೆ ಆಗುತ್ತವೆ ಎಂಬುದನ್ನು ಮಕ್ಕಳಿಗೆ ಸ್ಪಷ್ಟವಾಗಿ ವ್ಯತ್ಯಾಸ ಗೊತ್ತಾಗುವಾಗೆ ಮಾಡಿ ತೋರಿಸ ಬೇಕು. ಜತೆಗೆ ಅಲ್ಪಪ್ರಾಣ ಮತ್ತು ಮಹಾಪ್ರಾಣ ಅಕ್ಷರಗಳು ಉಚ್ಚಾರಣೆಯಲ್ಲಿ ವ್ಯತ್ಯಾಸ ವಾದರೆ ಅರ್ಥದಲ್ಲೂ ಹೇಗೆ ವ್ಯತ್ಯಾಸವಾಗುತ್ತದೆ ಎಂಬುದನ್ನು (ಧನ-ದನ, ಮಧ್ಯ-ಮದ್ಯ, ಭಾನು-ಬಾನು, ಫಲ-ಪಲ) ಪದ ಪಟ್ಟಿ ಹೇಳಿ ಬರವಣಿಗೆ ಮಾಡಿಸಿ ಪರೀಕ್ಷಿಸಬೇಕು. ನಂತರ ಯಾವ ಅಕ್ಷರಗಳು ಮಕ್ಕಳಿಗೆ ಕಷ್ಟವಾಗುತ್ತದೆ. ಯಾವ ಅಕ್ಷರಕ್ಕೆ ಯಾವ ಅಕ್ಷರ ಬರೆಯು ತ್ತಾರೆ. ಎಷ್ಟು ಮಕ್ಕಳು ಈ ಮಾದರಿ ವ್ಯತ್ಯಾಸ ಮಾಡುತ್ತಾರೆ. ಇದಕ್ಕೆ ಕಾರಣವೇನು? ಎಂಬುದನ್ನು ಶೋಧಿಸಿ ಪರಿಹಾರ ಸೂಚಿಸಬೇಕು. ಈ ಮಾದರಿ ಪರೀಕ್ಷೆಯನ್ನು ಬೇರೆ ಬೇರೆ ಗುಂಪುಗಳನ್ನು ಮಾಡಿ ಪರೀಕ್ಷಿಸಿದರೆ ಉತ್ತಮ.

೯. ‘ಲ ಮತ್ತುಳ್’, ‘ಅ ಮತ್ತು’ ‘ಹ ನ’ ‘ಮತ್ತುಣ’, ‘ಸ’, ‘ಶ’ ಮತ್ತು ‘ಷ’ ಮುಂತಾದ ಅಕ್ಷರಗಳ ನಡುವೆ ಉಚ್ಚಾರಣೆ ಅಭೇದವಾಗಿದೆ. ಇದು ಕನ್ನಡ ಮನೆಮಾತುಳ್ಳ ಮಕ್ಕಳಿಗೂ ತೀರ ಸಮಸ್ಯೆಯಾಗಿದೆ. ಇನ್ನು ಕನ್ನಡವನ್ನು ಎರಡನೆಯ ಭಾಷೆಯಾಗಿ ಕಲಿಯುವ ಮಕ್ಕಳ ಸ್ಥಿತಿ ಏನು ಎಂಬುದು ಅವುಗಳನ್ನು ಹತ್ತಿರದಿಂದ ಗಮನಿಸಿದವರಿಗೆ ಮಾತ್ರ ತಿಳಿಯುತ್ತದೆ. ಈ ಮೇಲಿನ ಎಲ್ಲ ಅಕ್ಷರಗಳು ನಮ್ಮ ಧ್ವನ್ಯಂಗಗಳಲ್ಲಿ ಎಲ್ಲಿ ಹುಟ್ಟುತ್ತವೆ. ಅವುಗಳ ನಡುವೆ ಎಂತಹ ಉಚ್ಚಾರಣ ವ್ಯತ್ಯಾಸಗಳಿವೆ ಎಂಬುದನ್ನು ಮೊದಲು ಮಕ್ಕಳಿಗೆ ಸ್ಪಷ್ಟಪಡಿಸಬೇಕು. ವಿದ್ಯಾರ್ಥಿಗಳಿಗೆ ಈ ಜೋಡಿ ಅಕ್ಷರಗಳನ್ನು ಬರವಣಿಗೆ ಮಾಡಿಸಿ ಉಚ್ಚಾರಣೆ ಮಾಡಿಸಿ ತಿದ್ದಬೇಕು. ನಂತರದಲ್ಲಿ ಕಾಲು-ಕಾಳು, ಆಳು-ಆಲ, ಹಾಲು-ಹಾಳು, ಬೆಲೆ-ಬೆಳೆ, ಕಲೆ-ಕಳೆ, ಆರು-ಹಾರು, ಆಲು-ಹಾಲು, ಅಗ್ಗ-ಹಗ್ಗ, ಅಳ್ಳಿ-ಹಳ್ಳಿ, ಅಕ್ಕಿ-ಹಕ್ಕಿ, ಶಾಲೆ-ಸಾಲೆ, ಷರ-ಸರ, ಶರ-ಸರ, ಮುಂತಾದ ಪದಗಳ ಪಟ್ಟಿಯನ್ನು ಮಕ್ಕಳಿಗೆ ಬೋಧಿಸಿ ಬರವಣಿಗೆ ಮಾಡಿಸಬೇಕು. ಯಾವ ಅಕ್ಷರಕ್ಕೆ ಯಾವ ಅಕ್ಷರ ಬರವಣಿಗೆ ಮಾಡುತ್ತಾರೆ ಎಂಬುದನ್ನು ಪತ್ತೆ ಹಚ್ಚಿ, ಗುರುತಿಸಿ ಅದಕ್ಕೆ ಪರಿಹಾರ ಸೂಚಿಸಬೇಕು. ನಂತರ ವಿದ್ಯಾರ್ಥಿ ಗಳನ್ನು ಬೇರೆ ಬೇರೆ ಗುಂಪುಗಳನ್ನು ಮಾಡಿ ಪಠ್ಯಪುಸ್ತಕಗಳಲ್ಲಿರುವ ಲ, ಳ, ಅ, ಹ, ನ, ಣ, ಶ, ಷ, ಸ ಸೂಚಿತ ಪದಗಳನ್ನು ಓದಿಸಿ ಬರವಣಿಗೆ ಮಾಡಿಸಿ ಅಭ್ಯಾಸ ಮಾಡಿಸಬೇಕು.

ಸುಂಕ, ಲಂಗ, ಅಂಚೆ, ಸಂಜೆ, ಕುಂಟ, ಗಂಡ, ಸಂತೆ, ಅಂಥ, ಕೆಂಪು, ಕಂಬ ಮುಂತಾದ ಪದಗಳಲ್ಲಿರುವ ಅನುಸ್ವರಗಳು ಆಯಾ ವರ್ಗೀಯ ವ್ಯಂಜನದ ಅನುನಾಸಿಕ ಧ್ವನಿಗಳೆಂದು ತಿಳಿಸಬೇಕು. ಇಂತಹ ನೂರಾರು ಪದಗಳನ್ನು ಪಟ್ಟಿಮಾಡಿ ಮಕ್ಕಳಿಂದ ಓದಿಸಬೇಕು. ಅಂದರೆ ಅನುಸ್ವರಕ್ಕೆ ನಿರ್ದಿಷ್ಟವಾದ ಉಚ್ಚಾರಣೆ ಇಲ್ಲ. ಅನುಸ್ವರದ ನಂತರ (ಅ) ಯಾವ ವರ್ಗೀಯ ವ್ಯಂಜನ ಬರುತ್ತದೋ ಅದರ ಅನುನಾಸಿಕ ಉಚ್ಚಾರಣೆಗೆ ಬರುತ್ತದೆಂದು ಶಿಕ್ಷಕರಿಗೆ ತಿಳಿದಿರಬೇಕು. ಅನುಸ್ವರದ(೦)ದ ನಂತರ ಅವರ್ಗೀಯ ವ್ಯಂಜನ ಇದ್ದರೆ ಸಾಮಾನ್ಯವಾಗಿ (ಸಂವಹನ, ಸಂಯಮ, ಸಂರಚನೆ) ‘ಮ್’ ಉಚ್ಚಾರಣೆಯಲ್ಲಿರುತ್ತದೆ. ಸುಂಕವನ್ನು ಸುಜ್ಕಾ, ಅಂಚೆಯನ್ನು ಅಣ್ಚ, ಕುಂಟ, ಕುಣ್ಟ, ಸಂತೆಯನ್ನು ಸನ್ತೆ, ಕೆಂಪುವನ್ನು ಕೆಮ್ಪು ಮುಂತಾದ ಪದಗಳನ್ನು ಸುಂಕ, ಅಂಚೆ, ಸಂತೆ, ಕೆಂಪು ಎಂದು ಬರೆಯುವುದು ಸುಲಭವಾದ ಕ್ರಮ ಎಂದು ಶಿಕ್ಷಕರಿಗೆ ತಿಳಿದಿರಬೇಕು.

ಉರ್ದುಭಾಷಿಕರ ಮಕ್ಕಳು ಅನುಸ್ವರ ಲೋಪಮಾಡಿ ಓದುತ್ತಾರೆ. ಉದಾಹರಣೆಗೆ: ಬಂದಿ-ಬದಿ, ಭಂಟ-ಬಂಟ, ಚಿಂತೆ-ಚಿತೆ, ಸಂಜೆ-ಸಜೆ, ಇತ್ಯಾದಿ ಹೀಗೆ ಮಾಡುವುದರಿಂದ ಅರ್ಥದಲ್ಲಾಗುವ ವ್ಯತ್ಯಾಸವನ್ನು ಸ್ಪಷ್ಟಪಡಿಸಿ ತಿದ್ದಬೇಕು.

ಉರ್ದು ಭಾಷಿಕರ ಮಕ್ಕಳು ಮಾಡುವ ಭಾಷಿಕ ವ್ಯತ್ಯಾಸಗಳನ್ನು ಕುರಿತು ಬೋಧಕರ ಪ್ರತಿಕ್ರಿಯೆ.

* ಶಿಕ್ಷಕರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕನ್ನಡ ಭಾಷೆಯ ರಚನೆ ಕುರಿತು ವಿಶೇಷ ತರಬೇತಿ ನೀಡಬೇಕು. ಹಾಗೆ ನೀಡುವಾಗ ಉರ್ದುಭಾಷೆಯ ರಚನೆ ಕುರಿತು ನೀಡಿದರೆ ಇನ್ನೂ ಉತ್ತಮ. ಏಕೆಂದರೆ ಉರ್ದು ಮಕ್ಕಳು ಶಾಲೆಯ ಆವರಣದಲ್ಲಿ ಮಾಡುತ್ತಿರುವ ಲ/ಳ, ತ/ಥ, ಅ/ಹ, ನ/ಣ ಮತ್ತು ಶ, ಷ, ಸ ಧ್ವನಿಗಳ ನಡುವಿನ ಉಚ್ಚಾರಣೆಯ ಅಭೇದಕ್ಕೆ ಕಾರಣಗಳನ್ನು ಹೇಳಿ ತಿದ್ದುಪಡಿ ಮಾಡಬೇಕಾದರೆ ಅವುಗಳ ನಡುವೆ ಇರುವ ಉಚ್ಚಾರಣೆಯ ಅಲ್ಪಬೇಧ ಅಧ್ಯಾಪಕರಿಗೆ ತಿಳಿದಿರಬೇಕಾಗುತ್ತದೆ. ಅದಕ್ಕೋಸ್ಕರ ಅಧ್ಯಾಪಕರಿಗೆ ವಿಶೇಷ ತರಬೇತಿ ನೀಡಬೇಕು.

* ಕನ್ನಡ ಧ್ವನಿಗಳ ಉಚ್ಚಾರಣಾ ಕ್ರಮ ಮತ್ತು ಉಚ್ಚಾರಣಾ ವಿಧಾನ ಕುರಿತು ಪಾಠ ಅಳವಡಿಕೆ ಆಗಬೇಕಿದೆ. ಶಿಕ್ಷಕರಿಗೆ ಇದರ ತರಬೇತಿ ಅಗತ್ಯವಿದೆ.

* ಕರ್ನಾಟಕದಲ್ಲಿರುವ ಭಾಷಾ ಅಲ್ಪಸಂಖ್ಯಾತ ಮಕ್ಕಳಿಗೆ ಕನ್ನಡ ಪಠ್ಯ ಜಾಸ್ತಿಯೆನಿಸುತ್ತದೆ. ಅದು ಪ್ರತ್ಯೇಕವಾಗಬೇಕಿದೆ. ಹೇಗೆಂದರೆ ಮೂಲ ಅಕ್ಷರ, ಗುಣಿತಾಕ್ಷರ ಮತ್ತು ಒತ್ತಕ್ಷರ ಪಾಠಗಳನ್ನು ಚಿತ್ರಸಹಿತ ಪ್ರತ್ಯೇಕವಾಗಬೇಕಿದೆ. ಅದು ಸೆಮಿಸ್ಟರ್‌ಗೆ ಅನ್ವಯ ಅಳವಡಿಸಿದರೆ ಸೂಕ್ತ.

* ಮಕ್ಕಳು ಹೆಚ್ಚು ಗೈರುಹಾಜರಿ ಆಗುತ್ತಾರೆ. ಹಾಗಾಗಿ ಕಲಿಕೆಯಲ್ಲಿ ಹಿಂದುಳಿಯುತ್ತಾರೆ.

* ಚಿತ್ರಸಹಿತ ಪದರಚನೆ ಇನ್ನೂ ಜಾಸ್ತಿಯಾಗಬೇಕಿದೆ. ಜತೆಗೆ ಓದಿ ತಿಳಿ ಭಾಗ ಇನ್ನಷ್ಟು ವಿಸ್ತರಿಸಬೇಕಿದೆ ಎಂದು ಅಭಿಪ್ರಾಯಪಡುತ್ತಾರೆ.