ಕನ್ನಡೇತರರ ಶಾಲೆಗಳಲ್ಲಿ ಕನ್ನಡದ ಕಡ್ಡಾಯ ಕಲಿಕೆ

ಸಮಾಜದಲ್ಲಿ ಪ್ರತಿಯೊಂದು ಮಗುವು ತಾನು ವಾಸಿಸುವ ಸಮಾಜದ ಅಥವಾ ತಂದೆ ತಾಯಿಗಳು ಆಡುವ ಭಾಷೆಯನ್ನು ಪ್ರಥಮ ಭಾಷೆಯೆಂದು ಪರಿಗಣಿಸಿ ಬಳಕೆ ಮಾಡುತ್ತಿವೆ. ಕರ್ನಾಟಕದಲ್ಲಿರುವ ಹಲವು ಅಲ್ಪಸಂಖ್ಯಾತ ಸಮುದಾಯದವರು ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಎರಡನೆ ಭಾಷೆಯಾಗಿ ಸ್ವೀಕರಿಸಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿರುವ ಉರ್ದುಭಾಷಿಕರು ಶಿಕ್ಷಣವನ್ನು ಉರ್ದುಭಾಷೆಯಲ್ಲಿ ಕಲಿಯುತ್ತಿದ್ದಾರೆ. ಕರ್ನಾಟಕದಲ್ಲಿ ಜಾರಿಯಲ್ಲಿರುವ ತ್ರಿಭಾಷಾ ನೀತಿಯಿಂದಾಗಿ ಉರ್ದುಭಾಷಿಕರು ಫ್ರೆಮರಿ ಮತ್ತು ಹೈಯರ್ ತರಗತಿಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಓದಬೇಕಾಗಿದೆ. ಹೆಚ್ಚಾಗಿ ಉದ್ಯೋಗ ಅರಸುವ ದೃಷ್ಟಿಯಿಂದ ಉರ್ದುಭಾಷಿಕರು ಉರ್ದುಭಾಷೆಯನ್ನು ಮೊದಲನೆಯ ಭಾಷೆಯಾಗಿ ೩ನೇ ತರಗತಿಯಿಂದ ಅಭ್ಯಾಸ ಮಾಡುತ್ತಿದ್ದಾರೆ. ಇಂಗ್ಲಿಶ್ ಭಾಷೆಯನ್ನು ಎರಡನೆಯ ಭಾಷೆಯಾಗಿ ಕಲಿಯುತ್ತಿದ್ದಾರೆ. ಕನ್ನಡವನ್ನು ಹೆಚ್ಚಿನ ಪ್ರಮಾಣದಲ್ಲಿ ಮೂರನೆಯ ಭಾಷೆಯಾಗಿ ಅಭ್ಯಾಸ ಮಾಡುತ್ತಿದ್ದಾರೆ.

ಉರ್ದುಭಾಷಿಕರು ಶಾಲೆಯ ಆವರಣದಲ್ಲಿ ದಿನವೊಂದಕ್ಕೆ ೪೫ ನಿಮಿಷಗಳ ಮಾತ್ರ ಕನ್ನಡ ಭಾಷೆಯನ್ನು ಕಲಿಯುತ್ತಿದ್ದಾರೆ. ಉಳಿದಂತೆ ಉರ್ದುಭಾಷೆಯಲ್ಲೆ ಕಲಿಯುತ್ತಿದ್ದಾರೆ. ಕರ್ನಾಟಕದಲ್ಲಿರುವ ಉರ್ದುಭಾಷಿಕರು ಮನೆ ಆವರಣದಲ್ಲಿ ಉರ್ದುಭಾಷೆಯನ್ನು ಸಾರ್ವಜನಿಕ ಅಥವಾ ಉದ್ಯೋಗದಲ್ಲಿ ಕನ್ನಡ ಭಾಷೆಯನ್ನು, ಸಂಪರ್ಕಭಾಷೆಯಾಗಿ ಇಂಗ್ಲಿಶ್‌ನ್ನು ಬಳಕೆ ಮಾಡುತ್ತಿದ್ದಾರೆ.

ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಮಾಧ್ಯಮಕ ಶಿಕ್ಷಣವನ್ನು ಗುಣಪಡಿಸಲು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮಕ್ಕಳ ಬೌದ್ದಿಕ ಪರಿಸರವನ್ನು ಅಭಿವೃದ್ದಿಪಡಿಸಲು, ಮತ್ತು ಮೂಲ ಸೌಲಭ್ಯಗಳನ್ನು ಅಭಿವೃದ್ದಿ ಪಡಿಲು ಹಲವಾರು ಕಲಿಕೆಯ ಯೋಜನೆಗಳನ್ನು ಕೈಗೊಂಡಿದೆ. ಆ ಕಲಿಕೆಯ ಯೋಜನೆಗಳು ಇಂತಿವೆ:

ಅ. ಕಪ್ಪು ಹಲಗೆ ಕಾರ್ಯಕ್ರಮ
ಆ. ಡಿ.ಪಿ.ಇ.ಪಿ.
ಇ. ಸರ್ವಶಿಕ್ಷಣ ಅಭಿಯಾನ

ಇದೆ ರೀತಿ  ಮಕ್ಕಳ ಕಲಿಕೆಯ ಸಾಮಾರ್ಥ್ಯವನ್ನು ಹೆಚ್ಚಿಸಲು ಸಹ ಹಲವಾರು ಅಭಿವೃದ್ದಿ ಕಲಿಕಾ ಮಾದರಿಗಳನ್ನು (ರೂಪ ಸಾಮ್ಯ ಮತ್ತು ಧ್ವನಿಸಾಮ್ಯ) ಅಳವಡಿಸಿ ಜಾರಿಗೊಳಿಸ ಲಾಗಿದೆ. ಅವು ಇಂತಿವೆ:

ಅ. ಚಿಣ್ಣರ ಅಂಗಳ
ಆ. ಕಲಿ-ನಲಿ
ಇ. ನಲಿ-ಕಲಿ
ಈ. ಕಲಿಕಾ-ಖಾತರಿ
ಉ. ಶಿಕ್ಷಕರಿಗೆ ವಿಷಯವಾರು ಪುನರ್ ಶಿಬಿರಗಳು
ಊ. ವಿವಿಧ ತರಬೇತಿಗಳು

ಈ ಎಲ್ಲ ವಿಧಾನಗಳನ್ನು ಕರ್ನಾಟಕದ್ಯಾಂತ ಪ್ರಯೋಗಮಾಡಿ ನಂತರ ಪಠ್ಯದ ರೂಪದಲ್ಲಿ ಅಳವಡಿಸಲಾಗಿದೆ. ಇವುಗಳನ್ನು ಸಮರ್ಪಕ ರೀತಿಯಲ್ಲಿ ಮೂಲ ಉದ್ದೇಶವನ್ನು ಅರಿತುಕೊಂಡು ಬೋಧನೆ ಮಾಡಬೇಕಾಗಿರುವುದು ಅಧ್ಯಾಪಕರ ಕರ್ತವ್ಯವಾಗಿದೆ. ಶಿಕ್ಷಣದ ಸಾರ್ವತ್ರೀಕರಣದ ಹಿನ್ನಲೆಯಲ್ಲಿ ಹಲವಾರು ಶಿಕ್ಷಣ ನೀತಿಯ ಕಾರ್ಯಕ್ರಮಗಳು ಜಾರಿ ಯಲ್ಲಿವೆ. ಅಂತಹ ಶಿಕ್ಷಣ ನೀತಿಯಲ್ಲಿ ಅತ್ಯಂತ ಮಹತ್ತರವಾದ ಕಾರ್ಯಕ್ರಮವೆಂದರೆ ನಲಿ-ಕಲಿ ಬೋಧನಾ ವಿಧಾನವು ಒಂದು. ಆಂಧ್ರಪ್ರದೇಶದ ರಿಷಿವ್ಯಾಲಿಯಲ್ಲಿರುವ ಸ್ಯಾಟ್‌ಲೈಟ್ ಶಾಲೆಗಳಲ್ಲಿ ಪಠ್ಯಪುಸ್ತಕ ಇಲ್ಲದೆ, ಪಠ್ಯ ವಿಷಯವನ್ನು ಕಲಿಸುವ ಪ್ರಾಯೋಗಿಕ ವಿಧಾನವನ್ನು ಜಾರಿಗೊಳಿಸಲಾಗಿದೆ. ೧೯೯೪-೯೫ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಕನ್ನಡ ಶಾಲೆಗಲ್ಲಿ ಈ ವಿಧಾನವನ್ನು ಜಾರಿಗೊಳಿಸ ಲಾಗಿದೆ. ವಿಶೇಷ ಎಂದರೆ ಪ್ರಾಥಮಿಕ ಶಾಲಾ ಶಿಕ್ಷಕರ ಭಾಗಿತ್ವ ಸಾಂಕಿತ್ಯ ತಯಾರಿ ಮತ್ತು ತರಬೇತಿ ನೀಡುವಲ್ಲಿ ಇದು ಯಶಸ್ವಿಯಾಗಿದೆ. ಪ್ರಾಥಮಿಕ ಶಾಲಾ ಮಕ್ಕಳ ಮಟ್ಟಕ್ಕೆ ತಕ್ಕಂತೆ ರೂಪಿಸಿದಂತಹ ಮೊಟ್ಟಮೊದಲ ಸಾಹಿತ್ಯ ಇದಾಗಿದೆ. ಕನ್ನಡೇತರ ಮನೆಮಾತುಳ್ಳ ಮಕ್ಕಳಿಗೆ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಯಾದ ಕನ್ನಡವನ್ನು ಕಲಿಸುವುದು ಅಗತ್ಯವಾಗಿದೆ. ಏಕೆಂದರೆ ಕರ್ನಾಟಕದಲ್ಲಿರುವ ಕನ್ನಡೇತರರು ಕನ್ನಡವನ್ನು ಪ್ರಾಥಮಿಕ ಹಂತದಿಂದಲೇ ಒಂದು ಭಾಷೆ ಯಾಗಿ ಕಲಿಯದಿದ್ದರೆ ವ್ಯವಹಾರಿಕವಾಗಿ ಕಷ್ಟವೆನಿಸುತ್ತದೆ. ಅದು ಎಷ್ಟಮರಮಟ್ಟಿಗೆ ಎಂದರೆ ಕರ್ನಾಟಕದ ಸಾರ್ವಜನಿಕ ಮತ್ತು ಸರ್ಕಾರಿ ವಲಯದಲ್ಲಿ ಗುಣಾತ್ಮಕವಾಗಿ ತೊಡಗಿಸಿ ಕೊಳ್ಳುವುದು ಅಸಾಧ್ಯವಾಗುತ್ತದೆ. ತಂತಮ್ಮ ಮನೆಮಾತನ್ನು ಉಳಿಸಿಕೊಂಡೇ ಸಾರ್ವಜನಿಕ ಬದುಕಿನಲ್ಲಿ ಪ್ರಾದೇಶಿಕ ಭಾಷಾ ಕಲಿಕೆ ಅನಿವಾರ್ಯವಾದುದು ಮತ್ತು ಪ್ರಜಾಸತ್ತಾತ್ಮಕ ವಾದುದು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಪ್ರಾಥಮಿಕ ಮೂರನೇ ತರಗತಿಯಿಂದ ಕನ್ನಡೇತರ ಮನೆಮಾತುಳ್ಳ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಲು ಆರಂಭಿಸಲಾಗಿದೆ. ಈ ಅಭಿಪ್ರಾಯಕ್ಕೆ ನ್ಯಾಯಾಲಯದ ತೀರ್ಪಿನ ಬೆಂಬಲವೂ ಇದೆ. ಕರ್ನಾಟಕದ ಉಚ್ಚನ್ಯಾಯಾಲಯದ ಪೂರ್ಣ ಪೀರವು ೨೫-೧-೧೯೮೯ರಂದು ಗೋಕಾಕ್ ಭಾಷಾ ಸೂತ್ರದ ಬಗ್ಗೆ ಈ ರೀತಿ ತೀರ್ಪು ನೀಡಿತು. “ಸಾಮಾನ್ಯವಾಗಿ ಪ್ರಾಥಮಿಕ ಶಾಲೆಯ ತರಗತಿಯಿಂದ ಕನ್ನಡ ವಿದ್ಯಾರ್ಥಿಗಳು ಯಾವಾಗ ಎರಡನೇ ಭಾಷೆಯನ್ನು ಕಲಿಯುತ್ತಾರೋ ಆ ತರಗತಿಯಿಂದ ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯ ಮಾಡಲು ಅಧಿಕೃತವಾಗಿ ಒಪ್ಪಿಗೆ ನೀಡಿತು.” ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಕನ್ನಡ ವಿದ್ಯಾರ್ಥಿಗಳಿಗೆ ಮೂರನೇ ತರಗತಿಯಿಂದ ಎರಡನೇ ಭಾಷೆಯಾಗಿ ಇಂಗ್ಲಿಶ್ ಅಥವಾ ಯಾವುದೇ ಭಾರತೀಯ ಭಾಷೆಯನ್ನು ಕಲಿಯಲು ಅವಕಾಶ ಕಲ್ಪಿಸಬಹುದು ಎಂದು ಶಿಕ್ಷಣ ಮತ್ತು ಮಾಧ್ಯಮ ಕುರಿತು ನೀತಿ ನಿರೂಪಣಾ ವರದಿಯಲ್ಲಿ ದಾಖಲಿಸಲಾಗಿದೆ. ಆದರೆ ಇತ್ತೀಚಿಗೆ ದಲಿತರ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಇಂಗ್ಲಿಶ್ ಕಲಿಕೆ ಕಡ್ಡಾಯ ಮಾಡಬೇಕು ಎಂಬ ಬೇಡಿಕೆ ಮತ್ತು ಒತ್ತಡ ಸರ್ಕಾರ ಮುಂದೆ ಇದೆ. ಇದು ಸಾಮಾಜಿಕ ನ್ಯಾಯವು ಕೂಡ. ದಲಿತ ಮಕ್ಕಳಿಗೆ ಒಂದನೇ ತರಗತಿಯಿಂದ ಇಂಗ್ಲಿಶ್ ಕಲಿಕೆ ಆರಂಭ ಅಗತ್ಯವಾಗಿದೆ. ಮುಂದುವರೆದು ಕನ್ನಡೇತರ ಮನೆ ಮಾತುಳ್ಳ ಶಾಲೆಗಳಲ್ಲಿ ಕನ್ನಡವನ್ನು ಎರಡನೇ ಅಥವಾ ಮೂರನೇ ಭಾಷೆಯಾಗಿ ಕಲಿಸುವ ಭಾಷಾ ನೀತಿಯೂ ಜಾರಿಯಲ್ಲಿದೆ.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪ್ರೊ. ಬರಗೂರು ರಾಮಚಂದ್ರಪ್ಪನವರ ಕಾಲದಲ್ಲಿ (ಈಗ ಮಾನ್ಯ ಮುಖ್ಯಮಂತ್ರಿ ಚಂದ್ರು ಅವರು) “ಕನ್ನಡೇತರರ ಶಾಲೆಗಳಲ್ಲಿ ಕನ್ನಡದ ಕಡ್ಡಾಯದ ಕಲಿಕೆ” ವಿಷಯಕ್ಕೆ ಸಂಬಂಧಿಸಿದಂತೆ ಶಿಫಾರಸು ೪ರಲ್ಲಿ (ಪು:೧೬) ಸಮಿತಿಯು ಎರಡು ನಿರ್ಣಯಗಳನ್ನು ಮಂಡಿಸಿದೆ.

ಅ. ಪ್ರಾಥಮಿಕ ಶಿಕ್ಷಣದ ಮೂರನೇ ತರಗತಿಯಿಂದ ಎರಡನೇ ಭಾಷೆಯ ಕಲಿಕೆಯನ್ನು ಪ್ರಾರಂಭಿಸಿ ಆಂಗ್ಲೊಇಂಡಿಯನ್ನರನ್ನೂ ಒಳಗೊಂಡಂತೆ ಕನ್ನಡೇತರ ಮಾಧ್ಯಮದ ವಿದ್ಯಾರ್ಥಿಗಳಿಗೆ ಮೂರನೇ ತರಗತಿಯಿಂದ ಕನ್ನಡವನ್ನು ಎರಡನೇ ಭಾಷೆಯಾಗಿ ಕಲಿಸುವುದು ಕಡ್ಡಾಯವಾಗಬೇಕು. ಇದಕ್ಕೆ ಉಚ್ಚನ್ಯಾಯಾಲಯವು ೨೫.೧.೧೯೮೯ರಂದು ಕೊಟ್ಟಿರುವ ತೀರ್ಪಿನ ಸಹಮತಿ ಇರುವುದನ್ನು ಮನಗಾಣಬೇಕು.

ಆ. ಉರ್ದು ಶಾಲೆಗಳನ್ನು ಒಳಗೊಂಡಂತೆ ಅಲ್ಪಸಂಖ್ಯಾತರ ಶಾಲೆಗಳಿಗೆ ಕಡ್ಡಾಯವಾಗಿ ಪೂರ್ಣಾವಧಿ ಕನ್ನಡ ಅಧ್ಯಾಪಕರನ್ನು ನೇಮಿಸಲು ಕೂಡಲೆ ಕ್ರಮಕೈಗೊಳ್ಳಬೇಕು.