ಕರ್ನಾಟಕದಲ್ಲಿರುವ ಉರ್ದುಭಾಷಿಕ ಮಕ್ಕಳು ಕನ್ನಡ ಭಾಷೆಯನ್ನು ಓದುವಾಗ ಮತ್ತು ಬರವಣಿಗೆ ಮಾಡುವಾಗ ಏನೆಲ್ಲ ವ್ಯತ್ಯಾಸಗಳನ್ನು ಮಾಡುತ್ತಿವೆ ಎಂದರೆ ನಿಜವಾದ ಕಾರಣಗಳನ್ನು ಹುಡುಕುವ ಪ್ರಯತ್ನ ಆಗಬೇಕಾಗಿದೆ. ಆವೊಂದು ಪ್ರಯತ್ನವನ್ನು ಪ್ರಸ್ತುತ ಕೃತಿಯಲ್ಲಿ ಪ್ರಯತ್ನಿಸಲಾಗಿದೆ. ಉರ್ದುಭಾಷಿಕ ಮಕ್ಕಳು ಕನ್ನಡ ಬರವಣಿಗೆಯನ್ನು ಉರ್ದು ಬರವಣಿಗೆಯ ರೀತಿಯಲ್ಲಿ ಬರೆಯುತ್ತಾರೆ. ಕೇವಲ ಬರವಣಿಗೆಯ ವಿಧಾನದಲ್ಲಿ ವ್ಯತ್ಯಾಸ ಮಾಡದೆ: ಒಂದು ಧ್ವನಿಗೆ ಇನ್ನೊಂದು ಧ್ವನಿಯನ್ನು ಬರೆಯುವ ಕ್ರಮ ಹೆಚ್ಚಿನದಾಗಿದೆ. ಘನ ಸರ್ಕಾರ ಕಲಿಕೆಗೆ ಸಂಬಂಧಪಟ್ಟ ಹಾಗೆ ನೂರಾರು ಕೋಟಿ ರೂಪಾಯಿಗಳನ್ನು ಪ್ರತಿ ವರ್ಷ ತೊಡಗುಸುತ್ತಿದೆ. ಆದರೂ ನಾವು ನಿರೀಕ್ಷಿಸುವ ಮಟ್ಟಕ್ಕೆ ಕಲಿಕೆ ಪರಿಣಾಮಕಾರಿ ಆಗುತ್ತಿಲ್ಲ. ಉದಾಹರಣೆಗೆ: ಮೂಲ ಪದಗಳನ್ನು ಸರಿಯಾಗಿ ಗುರುತಿಸುತ್ತಾರೆ. ಆದರೆ ರಚನೆ ಮತ್ತು ಉಚ್ಚಾರಣೆ ನೆಲೆಯಲ್ಲಿ ಸಾಮ್ಯತೆಯಿರುವ ರಚನೆಗಳಲ್ಲಿ ಗೊಂದಲದಿಂದ ತಪ್ಪುಮಾಡುತ್ತಾರೆ. ಇವುಗಳ ನಡುವೆ ಇರುವ ವ್ಯತ್ಯಾಸವನ್ನು ಶಿಕ್ಷಕರು ಸರಿಯಾಗಿ ಅರ್ಥ ಮಾಡಿಸಿಕೊಡಬೇಕಾಗುತ್ತದೆ. ಹೀಗೆ ಅರ್ಥಮಾಡಿಸಿಕೊಡ ಬೇಕೆಂದರೆ ಶಿಕ್ಷಕರು ಮೊದಲು ಪರಿಣಿತರಿರಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಪಠ್ಯ ಇರಬೇಕು. ಪ್ರಸ್ತುತದಲ್ಲಿರುವ ಪಠ್ಯವಂತೂ ನಿರ್ದೇಶನ ಸಹಿತ ಸಮರ್ಥವಾಗಿದೆ. ಅಂದರೆ ಭಾಷಾಶಾಸ್ತ್ರದ ವೈಜ್ಞಾನಿಕ ತತ್ವಗಳ ಹಿನ್ನಲೆಯಲ್ಲಿ ರೂಪಿತವಾಗಿರುವ ಈ ಪಠ್ಯ ಕನ್ನಡ ಭಾಷೆಯ ಕಲಿಕೆಗೆ ಪೂರಕವಾಗಿದೆ.

ಉರ್ದುಭಾಷಿಕ ಮಕ್ಕಳು ಒಂದೇ ನಿಯಮವನ್ನು ಎಲ್ಲ ಸಂದರ್ಭಕ್ಕೂ ಅನ್ವಯಿಸಿ ಓದುವ ಮತ್ತು ಬರೆಯುವ ಕೆಲಸ ಮಾಡುತ್ತಾರೆ. ಉದಾಹರಣೆಗೆ: ಕನ್ನಡದಲ್ಲಿ ಸಂಖ್ಯಾವಾಚಕ ‘ಒಂದು’ ಮತ್ತು ಸಂಖ್ಯಾವಾಚಕ ಸರ್ವನಾಮ ‘ಒಬ್ಬ’ ರೂಪಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬಳಕೆಯಲ್ಲಿವೆ. ಹಾಗೆಯೆ ‘ಒಂದು’ ರೂಪ ಬೇರೆ ಬೇರೆ ಸಂದರ್ಭ ಗಳಲ್ಲಿ ಬಳಕೆಯಲ್ಲಿದೆ. ‘ಒಂದು’ ರೂಪ ಮಾನವೇತರ ಸಂದರ್ಭದಲ್ಲಿ ಬಳಕೆಯಲ್ಲಿದ್ದರೆ, ‘ಒಬ್ಬ’ ಮುಖ್ಯವಾಗಿ ಮಾನವ ಜೀವ ಸಂದರ್ಭದಲ್ಲಿ ಬಳಕೆಯಲ್ಲಿದೆ. ಆದರೆ ಈ ಮಕ್ಕಳು ಎರಡು ಸಂದರ್ಭಕ್ಕೂ ‘ಒಂದು’ ಸಂಖ್ಯಾವಾಚಕವನ್ನೆ ಬಳಕೆ ಮಾಡುತ್ತಾರೆ. ಇದನ್ನೆ ಅತಿ ಸಾಮಾನ್ಯೀಕರಣ (Over generalization) ಎನ್ನುವರು. ಅಂದರೆ ಇಲ್ಲಿ ಮಕ್ಕಳು ಈ ಮಾದರಿ ತಪ್ಪು ಮಾಡುತ್ತವೆ ಎಂದರೆ ಕನ್ನಡ ಭಾಷೆಯ ರಚನೆಯಲ್ಲಿರುವ ಗೊಂದಲ ದಿಂದಲ್ಲ. ಅವರ ಮನೆ ಮಾತಿನ ಒತ್ತಡದಿಂದ ಈ ಮಾದರಿ ವ್ಯತ್ಯಾಸ ಮಾಡುತ್ತಿವೆ. ಇದನ್ನು ಸರಿಪಡಿಸಬೇಕಾದರೆ ಶಿಕ್ಷಕರಿಗೆ ಕಲಿಕಾರ್ಥಿಗಳ ಮನೆಮಾತಿನ ರಚನೆಗಳು ತಿಳಿದಿದ್ದರೆ ಒಳ್ಳೇಯದು. ಇಲ್ಲವಾದಲ್ಲಿ ಕಲಿಯುವ ಭಾಷೆಯಲ್ಲಿರುವ ರಚನೆ ಮತ್ತು ಉಚ್ಚಾರಣೆ ನೆಲೆಯಲ್ಲಿ ಕಂಡುಬರುವ ಇಂತಹ ಅಲ್ಪ ಸಾಮ್ಯತೆಯಿಂದ ಕೂಡಿರುವ ರಚನೆಗಳನ್ನು ಸ್ಪಷ್ಟ ಪಡಿಸುವ ಉಪಾಯವನ್ನಾದರೂ ತಿಳಿದಿರಬೇಕಾಗುತ್ತದೆ. ಕಲಿಕಾರ್ಥಿಗಳು ಮಾಡುವ ಎಲ್ಲ ಮಾದರಿ ವ್ಯತ್ಯಾಸಗಳಿಗೂ ಅವರ ಮನೆ ಮಾತಿನ ಪ್ರಭಾವ ಎಂಬ ನಿರ್ಣಯಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ಕೆಲವು ಸಂದರ್ಭದಲ್ಲಿ ಸಾದೃಶ್ಯತೆಯಿಂದ ತಪ್ಪುಗಳು ಆಗುತ್ತವೆ. ಉದಾ ಹರಣೆಗೆ: ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತಪದ ರಚಿಸಿ ಬರೆಯಿರಿ ಎಂಬ ಪ್ರಶ್ನೆ ಹೀಗಿದೆ.

ಮಾದರಿ ೧ :       ತವರೂರು > ತವರು+ಊರು
ಕಾಲೂರು > –
ನಮ್ಮೂರು > –
ನನ್ನೂರು > –

ಮೇಲಿನ ಪ್ರಶ್ನೆಯಲ್ಲಿ ಮಾದರಿಯಲ್ಲಿ ನೀಡಿರುವ ರೂಪಸಾದೃಶ್ಯತೆಯಂತೆ ಉಳಿದ ರೂಪ ಗಳನ್ನು ಬರೆಯಬೇಕು ಎಂಬುದು ಈ ಪ್ರಶ್ನೆಯ ಹಿಂದಿರುವ ಅಪೇಕ್ಷೆ. ಆದರೆ ಉರ್ದುಭಾಷಿಕ ಮಕ್ಕಳು ಮಾದರಿಯಲ್ಲಿ ನೀಡಿರುವ ರೂಪಗಳ ಜತೆಗೆ ಕೆಳಗಿನ ರೂಪಗಳನ್ನು ಸೇರಿಸಿಕೊಂಡು ಬರೆಯುವರು. ಹಾಗೆಯೇ ಕನ್ನಡದಲ್ಲಿ ಉಚ್ಚಾರಣೆಗೂ ಮತ್ತು ಬರವಣಿಗೆಗೂ ತುಂಬ ಅಂತರವಿದೆ. ಈ ಹಿನ್ನೆಲೆಯಿಂದ ಸೂರ್ಯ/ಸೂರ್ಯ ರೂಪಗಳನ್ನು ಹೇಳಿ ಬರೆಯಲು ಕೇಳಿದಾಗ ‘ರ್ಸೂಯ್‌ಅ’ ಎಂದು ಬರೆಯುತ್ತಾರೆ.

ಗುಣಿತಾಕ್ಷರ ಮತ್ತು ಒತ್ತಕ್ಷರಗಳನ್ನು ಸರಿಯಾಗಿ ಗುರತಿಸಲಾರರು. ಒತ್ತಕ್ಷರದಲ್ಲೂ ಭಿನ್ನರೂಪದ ಒತ್ತಕ್ಷರಗಳನ್ನು ಹೆಚ್ಚು ವ್ಯತ್ಯಾಸ ಮಾಡಿ ಓದುತ್ತಾರೆ ಮತ್ತು ಬರೆಯುತ್ತಾರೆ. ಇನ್ನೂ ವ್ಯಾಕರಣಾಂಶಗಳು ಈ ಮಕ್ಕಳಿಗೆ ತುಂಬ ಕಠಿಣವಾಗಿದೆ. ನಮ್ಮ ಶಾಲೆಯ ವ್ಯಾಕರಣ ಗಳು ಹೆಚ್ಚು ಕ್ರಿಯಾತ್ಮಕವಾಗಿರದೆ ಕಂಠಪಾಠದಿಂದ ಕೂಡಿದೆ. ಹಾಗಾಗಿ ವ್ಯಾಕರಣ ನಮ್ಮ ನೆನಪಿನಲ್ಲಿ ಉಳಿಯುತ್ತಿಲ್ಲ. ಇದಕ್ಕೆ ಕಾರಣ ಮಕ್ಕಳು ಮನೆಯ ಪರಿಸರದಲ್ಲಿ ಒಂದು ಮಾದರಿ ಕನ್ನಡವನ್ನು ಬಳಸಿದರೆ ಶಾಲೆಯ ಆವರಣದಲ್ಲಿ ಅದಕ್ಕಿಂತ ಭಿನ್ನವಾದ ಕನ್ನಡವನ್ನು ಬಳಕೆ ಮಾಡಲಾಗುತ್ತಿದೆ. ಅಂದರೆ ಬಳಕೆ ಕನ್ನಡಕ್ಕೂ, ಬರಹದ ಕನ್ನಡಕ್ಕೂ ಅಗಾಧವಾದ ವ್ಯತ್ಯಾಸವಿದೆ. ಈ ಅಂಶಗಳನ್ನು ಗಮನಿಸಿ ಇತ್ತೀಚಿಗೆ ತಜ್ಞರು ಬಳಕೆ ಕನ್ನಡ ಬರಹದ ಕನ್ನಡವಾಗಿ ರೂಪುಗೊಳ್ಳಬೇಕಾಗಿದೆ ಎಂದು ಚಿಂತನೆ ಮಾಡುತ್ತಿದ್ದಾರೆ. ಆಗ ಆದಾಗ ವಿದ್ಯಾರ್ಥಿಗಳು ಸುಲಭವಾಗಿ ಗುರುತಿಸುತ್ತಾರೆ. ಯಾವುದೇ ವ್ಯಾಕರಣ ವಿಚಾರಗಳು ಹೊಸ ಪದಗಳನ್ನು ಸೃಷ್ಟಿಸುವ ಸಾಮಾರ್ಥ್ಯ ಬರುವಂತೆ ಮಾಡಬೇಕಾಗಿದೆ. ಕಂಠ ಪಾಠ ವಿಧಾನ ಕಲಿಕೆಯ ಪ್ರಕ್ರಿಯೆಯಲ್ಲಿ ಒಂದು ವಿಧಾನ ಅಷ್ಟೆ. ಅದೆ ಪ್ರಧಾನವಲ್ಲ. ಒಂದು ವೇಳೆ ಅದೆ ಪ್ರಧಾನವಾದರೆ ಹೆಚ್ಚು ಹೆಚ್ಚು ತಪ್ಪುಗಳಾಗುತ್ತವೆ. ಘನ ಸರ್ಕಾರ ಕರ್ನಾಟಕದಲ್ಲಿರುವ ಭಾಷಾ ಅಲ್ಪಸಂಖ್ಯಾತರ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು. ಅಂತಹ ಅಲ್ಪಸಂಖ್ಯಾತರ ಮಕ್ಕಳು ಕನ್ನಡ ಭಾಷೆಯನ್ನು ಕಲಿಯುವಾಗ ಏನೆಲ್ಲ ಸಮಸ್ಯೆಗಳು ತಲೆದೊರುತ್ತಿವೆ ಎಂಬುದರ ಕಡೆಗೆ ಪ್ರಸ್ತುತ ಅಧ್ಯಯನ ಬೆಳಕು ಚೆಲ್ಲಿದರೆ ಅಧ್ಯಯನ ಸಾರ್ಥಕ ಎಂದು ಭಾವಿಸಲಾಗಿದೆ.