ತೌಲನಿಕ ಧಾರೆ (ಅಂತರ್‌ಶಿಸ್ತೀಯತೆ – ಬಹುಶಿಸ್ತೀಯತೆ)

ಸಂಶೋಧನೆಯಲ್ಲಿ ತೌಲನಿಕ ಅಧ್ಯಯನದ್ದು ಒಂದು ಬಹು ದೊಡ್ಡ ಧಾರೆ. ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕತೆ, ಮಾರ್ಕ್‌ವಾದ ಮತ್ತು ಕನ್ನಡ ವಿಮರ್ಶೆ, ಆ ಪೂರ್ವ ಈ ಪಶ್ಚಿಮ, ಕಾಡು – ಕಡಲು (ಕಾರಂತ – ಕುವೆಂಪು ಕಾದಂಬರಿಗಳ ತೌಲನಿಕ ಅಧ್ಯಯನ), ಬಸವೇಶ್ವರ – ಅಂಬೇಡ್ಕರ್ ಒಂದು ತೌಲನಿಕ ಅಧ್ಯಯನ, ನಾಗಾರ್ಜುನ ಮತ್ತು ಅಲ್ಲಮ, ಯಕ್ಷಗಾನ ಮತ್ತು ಮಹಿಳೆ ಹೀಗೆ ಈ ಧಾರೆಯಲ್ಲಿ ಹಲವು ಮಾದರಿಗಳಿವೆ. ಕೃತಿಗಳ ತುಲನೆ, ಕಾಲಘಟ್ಟಗಳ ತುಲನೆ, ವ್ಯಕ್ತಿಗಳ ತಾತ್ವಿಕ ದರ್ಶನಗಳ ತುಲನೆ, ಸಾಹಿತ್ಯಕ ಸಂವೇದನೆ – ಅಭಿವ್ಯಕ್ತಿ ವಿಧಾನಗಳ ತುಲನೆ, ಪ್ರದೇಶಗಳ ತುಲನೆ, ಸಾಹಿತ್ಯ ಪರಂಪರೆಗಳ ತುಲನೆ, ಆಧುನಿಕತೆ – ಪರಂಪರೆಗಳ ತುಲನೆ ಹೀಗೆ ಇಲ್ಲಿ ಅನೇಕ ಮಾದರಿಗಳಿವೆ. ಬೈನರಿ ವಿಧಾನದ ಮೂಲಕ ತರತಮ ಶ್ರೇಣೀಕರಣಕ್ಕೆ ತೊಡಗುವುದು ಇಲ್ಲಿನ ಒಂದು ಮುಖ್ಯ ತೊಡಕು. ಅಂತಃಸಂಬಂಧಗಳನ್ನು ಕಂಡುಕೊಳ್ಳುವುದು, ಸ್ವೀಕಾರ – ಪ್ರೇರಣೆ – ಪ್ರಭಾವ – ಮರು ನಿರೂಪಣೆಗಳ ವಿನ್ಯಾಸಗಳನ್ನು ಕಂಡುಕೊಳ್ಳುವುದು ಈ ಧಾರೆಯ ಸಾಧ್ಯತೆಗಳು.

ಕನ್ನಡ ಕಾವ್ಯಮೀಮಾಂಸೆ, ಕನ್ನಡ ಛಂದಸ್ಸು, ಕನ್ನಡ ವಿಮರ್ಶೆ, ಕನ್ನಡ ವ್ಯಾಕರಣಗಳು ಇರುವ ಹಾಗೆ ಕನ್ನಡ ಸಂಶೋಧನಾಶಾಸ್ತ್ರ ಎಂಬುದು ಒಂದು ಇದೆಯೆ? ನಮ್ಮ ಈ ದಶಕದ ಸಾಹಿತ್ಯ ಸಂಶೋಧನೆಗಳು ಹಲವು ಧಾರೆಗಳಲ್ಲಿ ಮುಂದುವರೆದಿರುವುದರಿಂದ, ರೂಪಾಂತರಗೊಂಡಿರುವುದರಿಂದ ಅವನ್ನೆಲ್ಲ ಸಂಶೋಧನಾಶಾಸ್ತ್ರ ಎಂಬ ಒಂದು ಚೌಕಟ್ಟಿಗೆ ತುರುಕಲು ಆಗುವುದಿಲ್ಲ. ಸಾಹಿತ್ಯ ಸಂಶೋಧನೆ ಎಂಬುದು ಅತ್ತ ಶಾಸ್ತ್ರದ ಲಕ್ಷಣಗಳನ್ನೂ ಇತ್ತ ಸಾಹಿತ್ಯದ (ವಿಮರ್ಶೆಯ) ಲಕ್ಷಣಗಳನ್ನೂ ಒಳಗೊಂಡಿರುವ ವಾಜ್ಞಯ. ವಿಜ್ಞಾನ, ಕಲೆ, ಸಾಹಿತ್ಯ, ಶಾಸ್ತ್ರ ಇತ್ಯಾದಿಗಳೆಲ್ಲ ವರ್ಗೀಕರಣಗಳೂ ಸಂಶೋಧನೆಯ ವಲಯಗಳೇ ಆಗಿರುವಾಗ ಇದನ್ನೊಂದು ಶಾಸ್ತ್ರವನ್ನಾಗಿ ಮಾತ್ರ ಹೇಗೆ ನಾವು ನಿರ್ವಚಿಸಲು ಆದೀತು? ಏನೆಂದರೂ ನಮ್ಮಲ್ಲಿ ಸಾಹಿತ್ಯ, ಮಾನವಿಕ, ಜಾನಪದ, ರಾಜಕೀಯ, ಆರ್ಥಿಕ ಎಂಬ ಭೇದಗಳು ಉನ್ನತ ಅಧ್ಯಯನದಲ್ಲಿ ದೃಷ್ಟಿಕೋನಗಳಾಗಿ, ಸಂವೇದನೆಗಳಾಗಿ ಇರುತ್ತವೆಯೆ ವಿನಾ ಸ್ಪಷ್ಟ ಗಡಿಗೆರೆಗಳು ಇರುವ ಪ್ರತ್ಯೇಕ ದ್ವೀಪಗಳಾಗಿ ಅಲ್ಲ. ಇವುಗಳೆಲ್ಲವು ಒಂದು ಹಂತ ದಾಟಿದ ಮೇಲೆ ಕಲಸಿಕೊಂಡೆ ಕಲಸಿಕೊಳ್ಳುತ್ತವೆ. ಹಾಗಾಗಿ ಇವೆಲ್ಲ ವರ್ಗೀಕರಣಗಳಲ್ಲಿ ಸಂಶೋಧನೆ ಇರುತ್ತದೆ ಮತ್ತು ಈ ಎಲ್ಲ ರೂಪಗಳಲ್ಲು ಸಂಭವಿಸುತ್ತದೆ ಮತ್ತು ಇವೆಲ್ಲ ದೃಷ್ಟಿಕೋನಗಳನ್ನೂ ಇದು ಬಳಕೆ – ಧಾರಣೆ ಮಾಡಬಲ್ಲದು. ಹೀಗಾದಾಗ ಸಹಜವಾಗಿ ಸಂಶೋಧನೆ ಎಂಬುದು ಬಹುಶಿಸ್ತೀಯ ಆಗುತ್ತದೆ. ಅಂತರ್‌ಶಿಸ್ತೀಯ ಆಗುತ್ತದೆ.

ಹಾಗೆ ನೋಡಿದರೆ ಸಾಹಿತ್ಯ ಸಂಶೋಧನೆ ಎಂಬುದು ಅನ್ಯ ಜ್ಞಾನಗಳನ್ನು ಇಲ್ಲವೆ ಅನ್ಯಜ್ಞಾನ ಮಾರ್ಗಗಳನ್ನು ಒಳಗೊಳ್ಳದಿದ್ದರೆ ಅದಕ್ಕೆ ಬಹುದೃಷ್ಟಿಯ ವಿಸ್ತರಣೆಯೆ ಸಾಧ್ಯವಾಗುವುದಿಲ್ಲ. ಅಂತರ್‌ಶಿಸ್ತೀಯತೆ – ಬಹು ಶಿಸ್ತೀಯತೆ – ಅನ್ಯಕಣ್ಣಿನ ದೃಷ್ಟಿಗಳಿಂದ ಸಾಹಿತ್ಯವನ್ನು ನೋಡುವ ಕ್ರಮವು ಮೊದಲಿನಿಂದಲೂ ನಮ್ಮಲ್ಲಿ ಚಾಲ್ತಿಯಲ್ಲಿ ಇದೆ. ನಮ್ಮಲ್ಲಿ ಸಾಹಿತ್ಯವನ್ನು ಅಧ್ಯಯನ ಮಾಡುವಾಗ ಅದನ್ನು  ಜಾನಪದೀಯ ದೃಷ್ಟಿಯಿಂದ, ಇಲ್ಲವೆ ಜನಾಂಗೀಯ ದೃಷ್ಟಿಯಿಂದ ಇಲ್ಲವೆ ಸಮಾಜಶಾಸ್ತ್ರೀಯ ದೃಷ್ಟಿಯಿಂದ ಅಧ್ಯಯನ ಮಾಡುವಂತೆಯೇ; ಜನಪದ, ಜನಾಂಗೀಯ ಶಾಸ್ತ್ರ, ಮಾನವ ಶಾಸ್ತ್ರ, ಸಮಾಜಶಾಸ್ತ್ರಾದಿ ಕ್ಷೇತ್ರಗಳಲ್ಲೂ ಕನ್ನಡದಲ್ಲಿ ಸ್ವತಂತ್ರ ಅಧ್ಯಯನಗಳು ನಡೆಯುತ್ತಿವೆ. ಹೀಗಾಗಿಯೇ ನಮ್ಮ ಬಹುಪಾಲು ಅಧ್ಯಯನಗಳು ಕನ್ನಡ ಪ್ರಾಚೀನ ಕಾವ್ಯಗಳಲ್ಲಿ ಜನಪದೀಯತೆ, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಜನಾಂಗದ ಪ್ರತಿನಿಧೀಕರಣ, ಕನ್ನಡ ಸಾಹಿತ್ಯವು ಸಮಾಜಶಾಸ್ತ್ರವನ್ನು ನೋಡಿರುವ ಬಗೆ, ಕುಮಾರವ್ಯಾಸನಲ್ಲಿ ಜಾನಪದೀಯತೆ, ಜೈಮಿನಿ ಭಾರತದಲ್ಲಿ ಜಾನಪದೀಯತೆ, ಕನ್ನಡ ನಾಟಕಗಳಲ್ಲಿ ಪುರಾಣಪ್ರಜ್ಞೆ ಒಂದು ಅಧ್ಯಯನ, ಮೌಖಿಕ ಕಾವ್ಯಗಳಲ್ಲಿ ಮಹಿಳಾ ಸಂವೇದನೆ ಒಂದು ಅಧ್ಯಯನ ಇತ್ಯಾದಿಯಾಗಿ ನಡೆದಿವೆ. ಹೀಗಾಗಿ ಅಂತರ್‌ಶಿಸ್ತೀಯತೆ ಮತ್ತು ಬಹುಶಿಸ್ತೀಯತೆಗಳು ನಮ್ಮ ಸಂಶೋಧನೆಯಲ್ಲಿ ಯಾವತ್ತು ಇದ್ದೇ ಇವೆ.

ಅಂತರ್‌ಶಿಸ್ತೀಯ ಅಧ್ಯಯನದ ಬಗ್ಗೆ ಮಾತನಾಡುವಾಗ ಕನ್ನಡದಲ್ಲಿನ ಇತಿಹಾಸ ಕ್ಷೇತ್ರದ ಸಂಶೋಧಕರನ್ನು ಮರೆಯುವಂತಿಲ್ಲ. ಹಳಬರಾದ ಎಂ.ಎಚ್.ಕೃಷ್ಣ, ಪಿ.ಬಿ.ದೇಸಾಯಿ, ಅ.ಸುಂದರ, ಜಿ.ಎಸ್.ಗಾಯಿ, ಶ್ರೀಕಂಠಶಾಸ್ತ್ರಿ, ಬಾ.ರಾ.ಗೋಪಾಲ ಮೊದಲಾದವರು ಇತಿಹಾಸ – ಸಾಹಿತ್ಯ – ಶಾಸನಗಳ ನಡುವೆ ಅಂತರ್‌ಶಿಸ್ತೀಯವಾಗಿ ದುಡಿದು ಒಂದು ಪರಂಪರೆಯನ್ನೆ ನಿರ್ಮಿಸಿದ್ದಾರೆ. ಈ ಪರಂಪರೆಗೆ ಆನಂತರದಲ್ಲಿ ಹಲವರ ಕೊಡುಗೆ ಸೇರ್ಪಡೆಯಾಗುತ್ತ ಬಂದಿದೆ. ಸೂರ್ಯನಾಥ ಕಾಮತ್, ಷ.ಶೆಟ್ಟರ್, ಕೆ.ವಿ.ರಮೇಶ, ಎಸ್.ಚಂದ್ರಶೇಖರ್, ಎಂ.ಜಿ.ನಾಗರಾಜ್, ಲಕ್ಷ್ಮಣ ತೆಲಗಾವಿ, ಕೆಳದಿ ಗುಂಡಾಜೋಯಿಸ, ದೇವರ ಕೊಂಡಾರೆಡ್ಡಿ, ರಾಜಾರಾಮ ಹೆಗಡೆ, ಎಚ್.ಎಸ್. ಗೋಪಾಲರಾವ್, ಎನ್.ಎಸ್. ತಾರಾನಾಥ, ಬಿ. ರಾಜಶೇಖರಪ್ಪ, ಎಂ.ವಿ. ವಸು, ಮನು ವಿ. ದೇವದೇವನ್ ಮೊದಲಾದವರು ಈ ಪರಂಪರೆಗೆ ಸೇರುತ್ತಾರೆ. ಸಾಹಿತ್ಯ ಚರಿತ್ರೆಯ ಜೊತೆಜೊತೆಗೆ ಲಿಖಿತ ಆಕರಗಳು ಮತ್ತು ಮೌಖಿಕ ಆಕರಗಳ ಮೂಲಕ ಸಂಸ್ಕೃತಿ ಚರಿತ್ರೆಯನ್ನು ಪುನಾರಚಿಸುವಲ್ಲಿ ಇವರೆಲ್ಲರೂ ಇಂದಿಗೂ ಅಂತರ್‌ಶಿಸ್ತೀಯವಾಗಿ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.

ಸಂಪಾದನೆ, ಚರಿತ್ರೆರಚನೆ, ಸಂಶೋಧನೆ, ಈ ಮೂರೂ ಕ್ಷೇತ್ರಗಳ ಅಂತರ್‌ಶಿಸ್ತೀಯ ಅಧ್ಯಯನ ಕೃತಿಗೆ ಒಂದು ಉದಾಹರಣೆಯಾಗಿ ಎಂ.ವಿ.ವಸು ಅವರು ಸಂಪಾದಿಸಿರುವ ಕನ್ನಡದೊಳ್ ಭಾವಿಸಿದ ಜನಪದಂ ಕೃತಿಯನ್ನು ನೋಡಬಹುದು. ಸಾಹಿತ್ಯ ಮತ್ತು ಚರಿತ್ರೆ, ಪ್ರಾಕ್ತನ ಚರಿತ್ರೆ, ದಲಿತ ಮತ್ತು ಹೆಣ್ಣಿನ ಪ್ರಶ್ನೆಗಳು ಹೀಗೆ ಹಲವು ಬಹುಶಿಸ್ತೀಯ ನೆಲೆಯ ಲೇಖನಗಳನ್ನು ಇಲ್ಲಿ ಸಂಪಾದಿಸಿ ಸಯೋಜಿಸಲಾಗಿದೆ. ‘ಸ್ಪ್ಯಾರೋ’ (ಸೌಂಡ್ ಅಂಡ್ ಪಿಕ್ಚರ್ ಆರ‍್ಕೈವ್ಸ್ ಫಾರ್ ರಿಸರ‍್ಚ್ ಆನ್ ವಿಮೆನ್) ಇವರು ದೃಶ್ಯ ಮತ್ತು ಮೌಖಿಕ ಚರಿತ್ರೆಗಳ ಮೇಲೆ ಕಮ್ಮಟ ನಡೆಸಿ ಹಲವು ದೃಶ್ಯ, ಶಿಲ್ಪ, ನೃತ್ಯ, ಚಿತ್ರ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮತ್ತು ಪ್ರಧಾನ ಧಾರೆಯ ಚರಿತ್ರೆಯಲ್ಲಿ ದಾಖಲಾಗದೆ ಹೋಗಿರುವ ಮಹಿಳೆಯರ ಮೌಖಿಕ ಚರಿತ್ರೆಗಳನ್ನು ದಾಖಲಿಸಿದ್ದಾರೆ. ಕಮ್ಮಟದಲ್ಲಿ ಮಾತಾಡಿದ ಚಾರಿತ್ರಿಕ ಮತ್ತು ಆತ್ಮಚಾರಿತ್ರಿಕ ಸಂಗತಿಗಳನ್ನು ಬರಹಕ್ಕೆ ಇಳಿಸಿ ಅನುವಾದಿಸಿ, ಸಂಪಾದಿಸಿ ನೀಡಿದ್ದಾರೆ. ‘ಬೊಗಸೆಯಲ್ಲಿಷ್ಟು ಬೆಳಕು ತುಂಬಿ’ ಮತ್ತು ‘ಮುಗಿಲು ಮಲ್ಲಿಗೆಯ ಎಟಕಿಸಿ’ (೨೦೦೨) ಎಂಬ ಈ ಎರಡು ಹೊತ್ತಿಗೆಗಳು ಭಾರತೀಯ ಸ್ತ್ರೀ ವ್ಯಕ್ತ ಆಕರಗಳಾಗಿವೆ. ಇವನ್ನು ಕೂಡ ಮೌಖಿಕ ಚರಿತ್ರೆ, ಆತ್ಮಚರಿತ್ರೆ, ಸಂಪಾದನೆ, ಅನುವಾದ, ಮಹಿಳಾ ಅಧ್ಯಯನ ಇತ್ಯಾದಿ ಬಹುಶಿಸ್ತೀಯ ಕೃತಿಗಳೆಂದೇ ಕರೆಯಬೇಕು.

ಬಾನಂದೂರು ಕೆಂಪಯ್ಯ ಅವರ ಕರ್ನಾಟಕ ದಲಿತ ಜನಪದ ಸಂಗೀತ (೨೦೦೮), ಕುರುವ ಬಸವರಾಜ್ ಅವರ ಜನೊದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು (೨೦೧೧), ನಿಂಗಣ್ಣ ಸಣ್ಣಕ್ಕಿ ಅವರ ಕರ್ನಾಟಕ ಗೊಂದಲಿಗರು ಹಾಗೂ ಅವರ ಸಾಹಿತ್ಯ ಒಂದು ಅಧ್ಯಯನ (೨೦೦೮) ಹೀಗೆ ಹಲವಾರು ಅಧ್ಯಯನಗಳು ಅಲಕ್ಷಿತ, ಮೌಖಿಕ, ಸಾಹಿತ್ಯ – ಸಂಗೀತ – ಸಂಸ್ಕೃತಿಗಳನ್ನು ವಿಮರ್ಶಾತ್ಮಕವಾಗಿ, ಮಾನವಶಾಸ್ತ್ರೀಯವಾಗಿ, ಜಾನಪದೀಯವಾಗಿ ಅಧ್ಯಯನ ಮಾಡಿರುವ ಯತ್ನಗಳಾಗಿವೆ. ಇವನ್ನೂ ಬಹುಶಿಸ್ತೀಯ ಅಧ್ಯಯನಗಳೆನ್ನಬಹುದು. ಇದೇ ನೆಲೆಯಲ್ಲಿ ರಾಹು ಅವರು ಅನುವಾದಿಸಿರುವ ಅಂಬೇಡ್ಕರ್ (ಕಾಸ್ಟ್ ಇನ್ ಇಂಡಿಯಾ ಮತ್ತು ಅನಿಹಿಲೇಶನ್ ಆಫ್ ಕಾಸ್ಟ್) ಜಾತಿ ವ್ಯವಸ್ಥೆ ಉಗಮ ವಿಕಾಸ ನಾಶ (೨೦೧೦) ಹಾಗೂ ಇವರೇ ಅನುವಾದಿಸಿರುವ ಆನಂದ ತೇಲ್‌ತುಂಬ್ಡೆ ಅವರ (ಅಂಬೇಡ್ಕರ್ ಇನ್ ಅಂಡ್ ಫಾರ್ ಪೋಸ್ಟ್ ಅಂಬೇಡ್ಕರ್ ದಲಿತ್ ಮೂಮೆಂಟ್) ಅಂಬೇಡ್ಕರೋತ್ತರ ದಲಿತ ಸಂಘರ್ಷ ದಾರಿ ದಿಕ್ಕು (೨೦೦೯) ಈ ಕೃತಿಗಳನ್ನು ಗಮನಿಸಬಹುದು. ತೇಲ್‌ತುಂಬ್ಡೆ ೧೯೯೭ರಲ್ಲಿ ಪ್ರಕಟಿಸಿದರೂ ಅಂಬೇಡ್ಕರ್ ೧೯೩೬ರಲ್ಲಿ (೧೯೩೨) ಬರೆದಿದ್ದರೂ ಈ ದಶಕದಲ್ಲಿ ಇವನ್ನು ಕನ್ನಡಕ್ಕೆ ತಂದುಕೊಂಡಿರುವುದರಿಂದ; ಇವುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಆಕರಗಳು ಯಾವಾಗ ರಚನೆಯಾದವು ಎನ್ನುವುದು ಮುಖ್ಯವಲ್ಲ. ಅವು ಕನ್ನಡಕ್ಕೆ ಯಾವಾಗ, ಏಕೆ ಬಂದುವು ಎನ್ನುವುದು ಮುಖ್ಯ. ದಲಿತ ಕಾಯಕ ಜೀವಿಗಳ ಚಿಂತನೆಯನ್ನು ಕ್ರೋಡೀಕರಿಸಿಕೊಳ್ಳುವ; ದಲಿತ ಜನಪದ ಸಾಹಿತ್ಯ ಸಂಗೀತವನ್ನು ಅಧ್ಯಯನಕ್ಕೆ ಗುರಿಪಡಿಸುವ; ಪಾತರದವರು, ಗೊಂದಲಿಗರು, ಹರದೇಶಿ – ನಾಗೇಶಿಗಳನ್ನು ಅಧ್ಯಯನಕ್ಕೆ ಗುರಿಪಡಿಸುವ ಹಲವು ಅಧ್ಯಯನಗಳು ಒಂದು ಕಡೆ ಜಾನಪದೀಯ ಅಧ್ಯಯನಗಳೂ, ಮಾನವಶಾಸ್ತ್ರೀಯ ಅಧ್ಯಯನಗಳೂ, ಅಳಿಯುತ್ತಿರುವ ಮೌಖಿಕ ಸಾಹಿತ್ಯ ಸಂಗೀತ ಕಲೆಗಳ ದಾಖಲೀಕರಣ ನೆಲೆಯ ಅಧ್ಯಯನಗಳೂ ಆಗಿರುವಂತೆಯೆ ದಲಿತ, ಅಲಕ್ಷಿತ ಜನಸಮುದಾಯಗಳ ಸಂಸ್ಕೃತಿ ಚರಿತ್ರೆಯ ಪುನಾರಚನೆಯ ನೆಲೆಯ ಅಧ್ಯಯನಗಳೂ ಆಗಿವೆ. ಇದು ಕೇವಲ ಸ್ಥಳೀಯ ಮಾತ್ರ ಅಲ್ಲ; ಭಾರತೀಯ ಮತ್ತು ಜಾಗತಿಕ ಮಟ್ಟದಲ್ಲಿ ತಮ್ಮದೇ ಆದ ಪರಂಪರೆಯನ್ನು ಮರುನಿರ್ವಚಿಸುವ ಪ್ರಯತ್ನವೂ ಹೌದು; ಹಾಗೆಯೆ ಇಲ್ಲಿ ವರ್ತಮಾನದ ದಲಿತ, ಅಲಕ್ಷಿತ, ಮಹಿಳಾ ಹೋರಾಟದ ದಿಕ್ಕುದೆಸೆಗಳನ್ನು ಕಂಡುಕೊಳ್ಳುವ ಮತ್ತು ಇದುವರೆಗಿನ ಹೋರಾಟದ ಆತ್ಮವಿಮರ್ಶೆ ನಡೆಸುವ ಪ್ರಯತ್ನವೂ ಹೌದು.

ಅಲಕ್ಷಿತ ಅಧ್ಯಯನಗಳು (ದಲಿತ – ಮೌಖಿಕ – ಮಹಿಳಾ ಇತ್ಯಾದಿ.)

ಕನ್ನಡ ಸಂಶೋಧನೆಯಲ್ಲಿ ದಲಿತ ಅಧ್ಯಯನ, ಮಹಿಳಾ ಅಧ್ಯಯನ, ಅಲಕ್ಷಿತ ಅಧ್ಯಯನ, ಬುಡಕಟ್ಟು ಅಧ್ಯಯನ, ಜಾನಪದ ಅಧ್ಯಯನ – ಮೌಖಿಕ ಸಾಹಿತ್ಯದ ಅಧ್ಯಯನ ಹೀಗೆ ಭಿನ್ನ ಭಿನ್ನ ಧಾರೆಗಳಿವೆ. ಇವುಗಳಲ್ಲಿ ಹಲವು ಬಗೆಯ ಅಧ್ಯಯನಗಳು ಸಂಭವಿಸುತ್ತ ಬಂದಿವೆ. ಇವೆಲ್ಲವನ್ನೂ ಒಂದೇ ಧಾರೆಯಾಗಿ ಅಲಕ್ಷಿತ ಅಧ್ಯಯನಗಳು ಎಂದು ಗುರ್ತಿಸಿಕೊಳ್ಳಬಹುದು. ೧. ದಲಿತ – ಅಕ್ಷರವಂಚಿತ ಪರಂಪರೆಗಳನ್ನು ಕಟ್ಟಿಕೊಳ್ಳುವ ಅಧ್ಯಯನಗಳು. ೨. ಸ್ಥಾಪಿತ – ಪ್ರತಿಷ್ಟಿತ ಸಾಹಿತ್ಯ ಪರಂಪರೆಯಲ್ಲಿ ಮಹಿಳಾ – ದಲಿತ – ಅನಕ್ಷರಸ್ಥ – ಅಲಕ್ಷಿತರ ಪ್ರತಿನಿಧೀಕರಣ ಹೇಗಾಗಿದೆ ಎಂಬ ಅಧ್ಯಯನಗಳು ೩. ದಲಿತ ಅಧ್ಯಯನ, ಅಲಕ್ಷಿತ ಅಧ್ಯಯನ, ಮೌಖಿಕ ಅಧ್ಯಯನಗಳೆಂಬ ಹೊಸ ಅಧ್ಯಯನ ಶಿಸ್ತುಗಳನ್ನೆ ಕಟ್ಟುವ ಅಧ್ಯಯನಗಳು ೪. ಸದರಿ ಅಧ್ಯಯನಗಳ ತಾತ್ವಿಕತೆ ಹೇಗಿರಬೇಕೆಂಬ ಅಧ್ಯಯನಗಳು. ೫. ಮಹಿಳಾ – ದಲಿತ – ಅಲಕ್ಷಿತ ಚಿಂತನೆ, ತತ್ವಜ್ಞಾನ, ಮೀಮಾಂಸೆ – ವಿಮರ್ಶೆಗಳನ್ನು ಸ್ಥಾಪಿಸುವ ಮತ್ತು ರೂಪಿಸುವ ಅಧ್ಯಯನಗಳು ೬. ಚಳುವಳಿಗಳು – ಅಭಿವೃದ್ಧಿ ಮೀಮಾಂಸೆಯ ಹಿನ್ನೆಲೆಯ ಅಧ್ಯಯನಗಳು ೭. ಸಮಾಜ, ಸಾಹಿತ್ಯಗಳನ್ನು, ವಿವಿಧ ಶಿಸ್ತುಗಳನ್ನು ಪರಿಶೀಲಿಸುವ ಭಿತ್ತಿಗಳನ್ನು, ದೃಷ್ಟಿಗಳನ್ನು ಇಲ್ಲವೆ ವಿಧಾನಗಳನ್ನು ರೂಪಿಸುವ ಮತ್ತು ಬಳಸುವ ಅಧ್ಯಯನಗಳು ೮. ಅನುವಾದಗಳು – ಅನುವಾದದ ಅಧ್ಯಯನಗಳು ೯. ತೌಲನಿಕ ಅಧ್ಯಯನಗಳು ೧೦. ಪ್ರದೇಶ, ಸಂಸ್ಕೃತಿ, ಆಚರಣೆಗಳ ಅಧ್ಯಯನಗಳು ೧೧.ಪರಂಪರೆಯ ಮರುನಿರ್ವಚನ ಧಾಟಿಯ ಅಧ್ಯಯನಗಳು ಹೀಗೆ ಈ ಧಾರೆಯಲ್ಲಿ ಹಲವು ಮಾದರಿಗಳಿವೆ, ಇಲ್ಲಿಯೂ ಸ್ಪಷ್ಟವಾಗಿ ಸಾಹಿತ್ಯ ಮತ್ತು ಸಾಹಿತ್ಯೇತರ ಎಂಬ ಭಿನ್ನ ಅಧ್ಯಯನಗಳಿವೆ. ಪಿಎಚ್.ಡಿ. ಪ್ರಬಂಧಗಳು, ಅನುವಾದಗಳು, ಸಂಪಾದನೆ – ವಿಚಾರಸಂಕಿರಣ ಸಂಪಾದನೆಗಳು ಇತ್ಯಾದಿ ರೂಪಗಳಿವೆ. ಹೊಸಮಡಿಯ ಮೇಲೆ ಚದುರಂಗ (ಸಿ.ಎನ್.ರಾಮಚಂದ್ರನ್), ಕಾಡುಗೊಲ್ಲ ಬುಡಕಟ್ಟು ವೀರರು (ಮೀರಾಸಾಬಿಹಳ್ಳಿ ಶಿವಣ್ಣ), ದಲಿತ ಚಳವಳಿ ಮತ್ತು ಸಾಹಿತ್ಯ (ಮುನಿವೆಂಕಟಪ್ಪ), ಹಾಲುಮತ ವ್ಯಾಸಂಗ (ಎಫ್.ಟಿ.ಹಳ್ಳಿಕೇರಿ), ಕೋಮುವಾದ ಮತ್ತು ಮಹಿಳೆ (ಮಾಧವಿ ಎಸ್.ಭಂಡಾರಿ),  ಹೀಗೆ ಇದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು. ಹೀಗೆ ಚಿಂತನೆಯ ಜಾಗತೀಕರಣದಿಂದಾಗಿ ಅಂಚುಗಳು ಮುನ್ನೆಲೆಗೆ ಬರುತ್ತಿರುವುದು ಕೂಡ ಒಂದು ಧನಾತ್ಮಕ ಬೆಳವಣಿಗೆಯಾಗಿದೆ. (ಪ್ರತ್ಯೇಕವಾದ ಜನಪದ ಅಧ್ಯಯನದ ಜೊತೆಗೆ ಸಾಹಿತ್ಯದಲ್ಲಿ ಜಾನಪದೀಯತೆಯ ಅಧ್ಯಯನ ಎಂಬುದೊಂದು ನಮ್ಮ ಸಂಶೋಧನೆಯ ದೊಡ್ಡ ವಲಯ. ಅದನ್ನಿಲ್ಲಿ ವಿಸ್ತೃತವಾಗಿ ಗಮನಿಸಿಲ್ಲ)

ನಮ್ಮ ಬಹುಪಾಲು ಸಾಹಿತ್ಯಗಳು ಲಿಂಗನ್ಯಾಯವನ್ನು ಬದಿಗೆ ಸರಿಸಿವೆ ಎಂಬ ನಿಲುವಿಗೆ ಹಲವು ಹೆಣ್ಣು ನೋಟದ ಅಧ್ಯಯನಗಳು ಈಗಾಗಲೇ ತಲುಪಿವೆ. ೭೦ರ ದಶಕದ ನಂತರ ನಮ್ಮ ನಾಡಿನ ಆಲೋಚನಾ ಕ್ರಮದಲ್ಲಿ ದೊಡ್ಡ ಪಲ್ಲಟಗಳು ಸಂಭವಿಸಿವೆ. ರೈತ ಚಳುವಳಿ, ದಲಿತ – ಬಂಡಾಯ ಚಳುವಳಿ, ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು, ಮಹಿಳಾ ಚಳುವಳಿ, ಮಹಿಳಾ ಮತ್ತು ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗಳು ಹೀಗೆ ಹಲವು ಚಳುವಳಿಗಳು ಮತ್ತು ರಾಜಕೀಯ ನಡೆಗಳು ನಮ್ಮ ಆಲೋಚನಾ ಕ್ರಮಗಳನ್ನು ಬದಲಾಯಿಸಿವೆ. ಮಹಿಳಾ ಅಧ್ಯಯನದ್ದೆ ಒಂದು ಪ್ರಧಾನ ಧಾರೆ ನಮ್ಮ ಮಾನವೀಯತೆಯ ಪ್ರಶ್ನೆಗಳನ್ನು ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ತೀವ್ರವಾಗಿ ಪ್ರಶ್ನಿಸತೊಡಗಿದೆ. ದಲಿತ ಚಳವಳಿ ಮತ್ತು ಮಹಿಳಾ ಚಳವಳಿಗಳ ಭಾಗವಾಗಿಯೆ ಬರವಣಿಗೆಯೂ ಸಂಭವಿಸುತ್ತಿದೆ. ದಲಿತ ಸಂಘರ್ಷ ಸಮಿತಿ, ಕಲಾವಿದ ಲೇಖಕರ ಬಳಗ, ಕರ್ನಾಟಕ ಲೇಖಕಿಯರ ಸಂಘ, ಉತ್ತರ ಕರ್ನಾಟಕ ಲೇಖಕಿಯರ ಸಂಘ, ಹುಬ್ಬಳಿಯ ಮಹಿಳಾ ಸಾಹಿತ್ಯಿಕಾ ಹೀಗೆ ಹಲವು ಸಂಘಟನೆಗಳು ಸಾಂಸ್ಥಿಕ ರೂಪ ಪಡೆದು ಏಕಕಾಲಕ್ಕೆ ಸಾಮಾಜಿಕ ಮತ್ತು ಸಾಹಿತ್ಯಕ ಚಳಚಳಿ ಎರಡನ್ನೂ ನಡೆಸುತ್ತಿವೆ. ಇವುಗಳ ಇತಿಮಿತಿಗಳು ಏನೇ ಇರಲಿ; ಇವು ತಮ್ಮದೇ ದೃಷ್ಟಿಕೋನಗಳನ್ನಂತೂ ರೂಪಿಸಿವೆ. ಈ ದೃಷ್ಟಿಕೋನಗಳು ಅಧ್ಯಯನಗಳನ್ನೂ ಪ್ರಭಾವಿಸಿವೆ. ಸಂಶೋಧನೆಯಲ್ಲಿ ಇವು ತಮ್ಮದೇ ಧಾರೆಗಳನ್ನೂ ಸ್ಥಾಪಿಸಿಕೊಂಡಿವೆ.

ನಮ್ಮ ಚರಿತ್ರೆಯಲ್ಲಿ ನಮಗೆ ಯಾಕೆ ಜಾಗವಿಲ್ಲ ಎಂಬ ಪ್ರಾಥಮಿಕ ಪ್ರಶ್ನೆಯಿಂದ ಹಿಡಿದು ನಿಮ್ಮ ಮಾನವೀಯತೆ – ಮನುಷ್ಯತ್ವಗಳು ಯಾರ ಮಾನವೀಯತೆ, ಮನುಷ್ಯತ್ವಗಳು? ನಿಮ್ಮ ಸಾಮಾಜಿಕ ನ್ಯಾಯ ಯಾರ ಸಾಮಾಜಿಕ ನ್ಯಾಯ? ಎಂಬ ಗಂಭೀರ ಪ್ರಶ್ನೆಗಳನ್ನು ಮಹಿಳಾ ಅಧ್ಯಯನಗಳು ಕೇಳಿವೆ. ಮಹಿಳಾ ಪರಂಪರೆಯ ನಿರ್ಮಾಣದ; ಮಹಿಳಾ ಅಧ್ಯಯನ ಸಾಮಗ್ರಿಯ ನಿರ್ಮಾಣದ ಜೊತೆಜೊತೆಗೇ ಸಾಮಾಜಿಕ ನ್ಯಾಯದ ಪ್ರಶ್ನೆಗಳಿಗೆ ಲಿಂಗನ್ಯಾಯದ ಆಯಾಮಗಳನ್ನು ನಮ್ಮ ಮಹಿಳಾ ಅಧ್ಯಯನ ಧಾರೆ ಸೇರಿಸಿದೆ. ಎಚ್. ಎಸ್. ಶ್ರೀಮತಿ, ಎನ್. ಗಾಯಿತ್ರಿ, ನೇಮಿಚಂದ್ರ, ವಿಜಯಾ ದಬ್ಬೆ, ಬಿ.ಎನ್.ಸುಮಿತ್ರಾಬಾಯಿ, ಗಾಯತ್ರಿ ನಾವಡ, ಶಾಂತಾ ಇಮ್ರಾಪುರ, ಮೀನಾಕ್ಷಿ ಬಾಳಿ, ಎಚ್.ಎಸ್.ಪಾರ್ವತಿ, ಎಲ್.ಸಿ.ಸುಮಿತ್ರ, ಪ್ರೀತಿ ಶುಭಚಂದ್ರ, ಮಲ್ಲಿಕಾ ಘಂಟಿ, ಸಬೀಹಾ, ಷರೀಫಾ, ವಿಜಯಾ, ಎಂ.ಎಸ್.ಆಶಾದೇವಿ, ಎಂ. ಉಷಾ, ದು. ಸರಸ್ವತಿ, ಧರಣಿದೇವಿ, ಚಂದ್ರಮತಿ ಸೋಂದಾ, ಶೈಲಜಾ ಹಿರೇಮಠ, ಕವಿತಾ ರೈ, ತಾರಿಣಿ ಶುಭದಾಯಿನಿ, ಎಂ.ವಿ.ವಸು, ಬಿ.ಯು.ಸುಮ, ರೂಪ ಹಾಸನ, ವೀಣಾ ಬನ್ನಂಜೆ ಮೊದಲಾದ ಮಹಿಳಾ ಚಿಂತಕಿಯರ ಬಹುದೊಡ್ಡ ಪರಂಪರೆಯೆ ಇಂದು ನಿರ್ಮಾಣವಾಗಿದೆ.

ಇಲ್ಲಿ ಕನ್ನಡ ಸಾಹಿತ್ಯವನ್ನು ಪುರುಷ ಸಾಹಿತ್ಯ ಮತ್ತು ಮಹಿಳಾ ಸಾಹಿತ್ಯ ಎಂದು ಎರಡಾಗಿ ಸೀಳಿನೋಡುವ ಬೈನರಿ ದೃಷ್ಟಿಯೊಂದು ಪ್ರಧಾನವಾಗಿ ಇದೆ. ಮಹಿಳಾ ಅಧ್ಯಯನ ಎಂದರೆ ಮಹಿಳೆಯರು ರಚಿಸಿದ ಸಾಹಿತ್ಯದ ಅಧ್ಯಯನ ಮತ್ತು ಮಹಿಳೆಯರ ಬಗ್ಗೆ ಮಹಿಳೆಯರು ನಡೆಸಿದ ಅಧ್ಯಯನ ಎಂಬಂತೆ ಈ ಅಧ್ಯಯನವು ಗೈನೋಕ್ರಿಟಿಸಿಸಮ್ಮಿನ ಮಿತಿಗು ಸಿಲುಕಿದೆ. ಇಡೀ ಅಧ್ಯಯನವನ್ನೆ ಮಹಿಳಾ ಅಧ್ಯಯನ ಮತ್ತು ಇತರ ಅಧ್ಯಯನ ಎಂದು ಒಡೆದುಕೊಂಡು ನೋಡುವ; ಸ್ವ – ಅನ್ಯವೆಂಬ ಬೈನರಿ ದೃಷ್ಟಿಯಿಂದ ಶೋಷಕ – ಶೋಷಿತ ಎಂಬ ತಿಳುವಳಿಕೆಯ ಕಡೆಗೆ ಸಾಗುವ ಲಕ್ಷಣಗಳೂ ಈ ವಲಯಕ್ಕೆ ಉಂಟಾಗಿವೆ. ಇದರ ಒಳಗೇ ಉನ್ನತಜಾತಿ – ವರ್ಗದ ಮಹಿಳಾ ಸಂವೇದನೆಗಳಿಗಿಂತ ಅಲಕ್ಷಿತ, ಅಸಂಘಟಿತ ಕೂಲಿ ಮಹಿಳೆಯರ, ದಲಿತ ಮಹಿಳೆಯರ ಪ್ರಶ್ನೆಗಳು ಪ್ರತ್ಯೇಕವಾಗಿ ಗಮನ ಸೆಳೆಯಬೇಕಿದೆ ಎಂಬ ದನಿಗಳು ಕೂಡ ಹುಟ್ಟಿವೆ. ಈ ಕಡೆಗೆ ಸಂಶೋಧನೆಗಳ ಗಮನ ಕೂಡ ಹರಿಯುತ್ತಿದೆ.

ದಲಿತ, ಅಲಕ್ಷಿತ ಮತ್ತು ಮಹಿಳಾ ಅಧ್ಯಯನಗಳ ಕುರಿತೇ ಒಂದು ಪ್ರತ್ಯೇಕ ಪ್ರಬಂಧ ಬರೆಯಬೇಕು. ಅಷ್ಟು ದೊಡ್ಡದಾಗಿ ಈ ಶಾಖೆಗಳು ಬೆಳೆದಿವೆ. ಎಲ್ಲವನ್ನೂ ಪುರುಷ ದೃಷ್ಟಿಯಿಂದ ನೋಡುವುದಕ್ಕಿಂತ ಭಿನ್ನವಾದ ಮಹಿಳಾ ದೃಷ್ಟಿಗಳು, ದಲಿತ – ಬುಡಕಟ್ಟು ದೃಷ್ಟಿಗಳು (ಅಲಕ್ಷಿತ ದೃಷ್ಟಿಗಳು) ಇಲ್ಲಿ ರೂಪಗೊಂಡಿವೆ. ಮೇಲೆ ಹೆಸರಿಸಿದ ಸ್ತ್ರೀವಾದಿ ಮತ್ತು ದಲಿತ ಚಿಂತನಾ ಪರಂಪರೆಗಳೆ ನಮ್ಮಲ್ಲಿ ನಿರ್ಮಾಣವಾಗಿವೆ. ಶೈಲಜಾ ಹಿರೇಮಠ ಅವರ ಹರದೇಶಿ ನಾಗೇಶಿ (೨೦೧೧) ಎಂಬ ಕ್ಷೇತ್ರ ಕಾರ್ಯಾಧಾರಿತ ಲಿಂಗಸಂಬಂಧಿ ಅಧ್ಯಯನ, ಕೆ.ಷರೀಫಾ ಅವರ ಮುಸ್ಲಿಂ ಮಹಿಳಾ ಸಂವೇದನೆ (೨೦೧೧) ಎಂಬ ಡಿ.ಲಿಟ್. ಅಧ್ಯಯನ, ಜ್ಯೋತಿ ಶಶಿಕುಮಾರ್ ಅವರ ಮಹಿಳಾ ಸಾಮಾಜಿಕತೆ (೨೦೦೬) ಎಂಬ ಅಧ್ಯಯನ, ಶಾಂತಾ ಇಮ್ರಾಪುರ ಅವರ ಧರ್ಮ ಮಹಿಳೆ ಮತ್ತು ಸಮಾಜ (೨೦೦೧), ರಹಮತ್ ತರೀಕೆರೆ ಅವರ ಕರ್ನಾಟಕದ ಮಹಿಳಾ ಸೂಫಿಗಳು ಎಂಬ ಲೇಖನ (೨೦೦೯) ಹೀಗೆ ಹಲವಾರು ಅಧ್ಯಯನಗಳನ್ನು ಈ ಹಿನ್ನೆಯಲ್ಲಿ ಉಲ್ಲೇಖಿಸಬಹುದು. ಇಲ್ಲೆಲ್ಲ ಮಹಿಳೆಯನ್ನು ಕುರಿತಾಗಿ ಆಕೆ ಸಮಾಜದ ಎಲ್ಲ ರಂಗಗಳಲ್ಲಿ ಅಲಕ್ಷಿತೆ ಎಂಬ ನೆಲೆಯಿಂದ ಅಧ್ಯಯನಗಳನ್ನು ಕೈಗೊಳ್ಳಲಾಗಿದೆ. ಹಾಗೆಯೆ ಸಾಹಿತ್ಯದ ಮಹಿಳೆಯ ಮತ್ತು ಮಹಿಳಾ ಸಂವೇದನೆಯ ಪ್ರತಿನಿಧೀಕರಣ ಹೇಗಾಗಿದೆ ಎಂಬ ಅಧ್ಯಯನಗಳೂ ನಡೆದಿವೆ. ದಲಿತ, ಮುಸ್ಲಿಂ, ಬುಡಕಟ್ಟು, ಸೂಫಿ, ದೇವದಾಸಿ ಮಹಿಳೆಯರ ಕುರಿತಾಗಿ ಅಲಕ್ಷಿತ ಮಹಿಳೆಯರ ಅಧ್ಯಯನ ಎಂಬ ನೆಲೆಯಲ್ಲಿಯೂ ಇಲ್ಲಿ ಅಧ್ಯಯನಗಳು ನಡೆದಿವೆ.

ಸಾಹಿತ್ಯದಲ್ಲಿ ಮಹಿಳೆಯ ಪ್ರತಿನಿಧೀಕರಣದ ಕುರಿತು ನಡೆದಿರುವ ಅಧ್ಯಯನಗಳಲ್ಲಿ ಪ್ರಾಚೀನ ಸಾಹಿತ್ಯ – ಪುರಾಣ – ಆಧುನಿಕ ಸಾಹಿತ್ಯ ಹೀಗೆ ಭಿನ್ನ ಕಾಲಘಟ್ಟದ ಸಾಹಿತ್ಯಗಳ ಮತ್ತು ಆ ಸಾಹಿತ್ಯಗಳು ಸೃಷ್ಟಿಸಿರುವ ಮಹಿಳಾ ಪಾತ್ರಗಳ ಅಧ್ಯಯನಗಳು ಒಂದು ಕಡೆಯಾದರೆ; ಮಹಿಳೆಯು ಪಾತ್ರಧಾರಿ ಆಗಿರುವ ವಿವಾಹ, ಕುಟುಂಬ, ದಾಂಪತ್ಯ, ತಾಯ್ತನ ಇತ್ಯಾದಿ ಸಾಮಾಜಿಕ ಸಂಸ್ಥೆ, ಸಂಗತಿ, ಮಹಿಳೆಯ ಚಹರೆಗಳನ್ನು ಕೇಂದ್ರವಾಗಿ ಇರಿಸಿಕೊಂಡ ಅಧ್ಯಯನಗಳು ಇನ್ನೊಂದು ಕಡೆ ನಡೆದಿವೆ. ಲತಾ ಅಭಯ್ ಅವರ ಕಲ್ಲು ಬೆಂಕಿಗಳಿಂದ ನಲಿವು ನೆಳಕಿನೆಡೆಗೆ (೨೦೦೮), ಗೀತಾ ಪ್ರಸಾದ್ ಅವರ ಆಧುನಿಕ ಮಹಿಳಾ ಅಭಿವ್ಯಕ್ತಿ (೨೦೦೯) ಇವುಗಳನ್ನು ಮೊದಲ ವರ್ಗಕ್ಕೆ ಉದಾಹರಣೆಗಳಾಗಿ ನೋಡಿದರೆ ಕವಿತಾ ರೈ ಅವರ ಮಹಿಳೆ ಅಸ್ತಿತ್ವದ ಸಂಕಥನ (೨೦೦೫) ಇಂತಹ ಅಧ್ಯಯನಗಳನ್ನು ಎರಡನೆ ವರ್ಗಕ್ಕೆ ಸೇರಿಸಬಹುದು. ಮೀನಾಕ್ಷಿ ಬಾಳಿ ಅವರ ಮನದ ಸೂತಕ ಹಿಂಗಿದೊಡೆ (೨೦೧೦) ಕೃತಿಯು ಈ ಎರಡೂ ಬಗೆಯ ಬರಹಗಳನ್ನು ಒಳಗೊಂಡಿದೆ.

ಮಹಿಳಾ ಸಾಹಿತ್ಯ ಚರಿತ್ರೆಗಳನ್ನು ಕಟ್ಟಿಕೊಳ್ಳುವ ಮತ್ತು ಚರಿತ್ರೆ ರಚನಾಶಾಸ್ತ್ರವನ್ನು ವಿಶ್ಲೇಷಿಸುವ ಹಾಗೂ ಮಹಿಳಾ ಅಧ್ಯಯನದ, ಸ್ತ್ರೀವಾದಿ ವಿಮರ್ಶೆಯ ಮತ್ತು ಸ್ತ್ರೀವಾದದ ತಾತ್ವಿಕತೆಗಳನ್ನು ಚರ್ಚಿಸುವ ಅಧ್ಯಯನಗಳೂ, ಅನುವಾದಗಳೂ ನಮ್ಮಲ್ಲಿ ಸಾಕಷ್ಟು ಆಗಿವೆ. ಸಾಮಾಜಿಕ ಬೆಳವಣಿಗೆಯಲ್ಲಿ ಸ್ತೀಯರ ಪಾತ್ರಗಳ ಕುರಿತ ಚಾರಿತ್ರಿಕ ಅವಲೋಕನ ಧಾಟಿಯ ಅಧ್ಯಯನಗಳೂ ಆಗಿವೆ. ಎಂ.ಉಷಾ ಅವರ ಸಂಸ್ಕೃತಿ ಚಿಂತನೆ ಮತ್ತು ಭಾರತೀಯ ಸ್ತ್ರೀವಾದ (೨೦೦೧) ಎಂಬ ಅಧ್ಯಯನ, ಇವರದೇ ಮಹಿಳಾ ಸಾಹಿತ್ಯದ ಚರಿತ್ರೆ ರಚನಾ ಕ್ರಮ ಎಂಬ ಲೇಖನ (೨೦೦೯), ಲೀಲಾ ಪಾಟೀಲ ಅವರ ಭಾರತೀಯ ಸ್ತ್ರೀ ಜೀವನ ಎಂಬ ಕೃತಿಯ ಅನುವಾದ (ಅನು: ವಿಠ್ಠಲರಾವ ಗಾಯಕ್‌ವಾಡ (೨೦೦೯), ಅಶ್ವಿನಿ ಧೋಂಗಡೆ ಅವರ ಅನುವಾದ – ಸ್ತ್ರೀವಾದಿ ವಿಮರ್ಶೆ: ಸ್ವರೂಪ ಮತ್ತು ಪರಿಕಲ್ಪನೆಗಳು ಅನು: ವಿಠಲರಾವ್ ಗಾಯಕವಾಡ್ (೨೦೦೧), ಎಚ್.ಎಸ್.ಶ್ರೀಮತಿ ಅವರ ಸ್ತ್ರೀವಾದ (೨೦೦೩), ಇವರದೇ ಬೆಟ್ಟಿ ಫ್ರೀಡನ್ನಳ ದಿ ಫೆಮಿನಯನ್ ಮಿಸ್ಟಿಕ್ ಕೃತಿಯ ಅನುವಾದ ಹೆಣ್ಣುತನ ಎಂಬ ಕಣ್ಕಟ್ಟು (೨೦೧೦), ಜೆರಾಲ್ಡಿನ್ ಫೋರ್ಬ್ಸ್ ಅವರ ದಿ ವಿಮೆನ್ ಇನ್ ಇಂಡಿಯಾ ಕೃತಿಯ ಅನುವಾದ ಆಧುನಿಕ ಭಾರತದಲ್ಲಿ ಮಹಿಳೆ (೨೦೦೧), ಸಿಮೊನ್ ದ ಬೊವ ಅವರ ದಿ ಸೆಕೆಂಡ್ ಸೆಕ್ಸ್ ಕೃತಿಯ ಅನುವಾದ (೨೦೦೯), ಹೀಗೆ ಈ ಧಾರೆಗೆ ಹಲವಾರು ಕೃತಿಗಳನ್ನು ಹೆಸರಿಸಬಹುದು. ಜಾಗತಿಕವಾಗಿ ಸ್ತ್ರೀವಾದಿ ಅಧ್ಯಯನದಲ್ಲಿ ಏನೆಲ್ಲ ಆಗುತ್ತಿದೆ, ಅಖಿಲ ಭಾರತೀಯವಾಗಿ ಆಧುನಿಕತೆಯನ್ನು ಕಟ್ಟುವಲ್ಲಿ ಭಾರತೀಯ ಮಹಿಳೆಯರ ಪಾತ್ರ ಎಂಥದ್ದು, ಲಿಂಗ ತಾರತಮ್ಯದ ನೆಲೆಗಳು ಯಾವುವು ಎಂಬಿತ್ಯಾದಿ ತಿಳುವಳಿಕೆಯನ್ನು ಸ್ಥಳೀಯ ಭಾಷೆಯೊಂದು ಅನುವಾದದ ಮೂಲಕ ಪಡೆಯುತ್ತಲೆ ಸ್ಥಳೀಯ ಮಹಿಳಾವಾದವು ತನ್ನದೇ ಆದ ತಾತ್ವಿಕತೆಯನ್ನು ರೂಪಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅನುವಾದಗಳ ಪಾತ್ರ ಮಹತ್ವದ್ದು. ಅದರಲ್ಲು ಶ್ರೀಮತಿ ಅವರ ಅನುವಾದಗಳ ಪಾತ್ರ ದೊಡ್ಡದು. ತೇಜಸ್ವಿನಿ ನಿರಂಜನ, ಎನ್.ಗಾಯತ್ರಿ, ಸುಮಿತ್ರಾಬಾಯಿ, ಸ್ಪಾರೋ ಮಿತ್ರೆಯರು ಮಾಡಿರುವ ಕೆಲಸ ಕೂಡ ಇಲ್ಲಿ ಗಮನಾರ್ಹವಾದುದು.

ಇಲ್ಲೆ ಎಚ್.ಎಸ್.ಶ್ರೀಮತಿಯವರು ಅನುವಾದಿಸಿ, ಸಂಪಾದಿಸಿರುವ ‘ಸ್ತ್ರೀವಾದಿ ಭಾಷಾಶಾಸ್ತ್ರ ಪ್ರವೇಶಿಕೆ’ (೨೦೦೯) ಕೃತಿ ಕೂಡ ಉಲ್ಲೇಖಾರ್ಹ. ಜಗತ್ತಿನ ಬೇರೆ ಬೇರೆ ೧೨ – ೧೩ ಜನ ಲೇಖಕಿಯರು ಬರೆದ ಭಿನ್ನ ಲೇಖನ, ಪುಸ್ತಕ ಭಾಗಗಳನ್ನು ಆಯ್ಕೆ ಮಾಡಿ (ಹೆಣ್ಣು ಭಾಷೆಯೊಂದರ ತಾತ್ವಿಕತೆ – ಕಟ್ಟಾಣಿಕೆಗಳನ್ನು ಕುರಿತ ಸ್ತ್ರೀವಾದಿ ಭಾಷಾಶಾಸ್ತ್ರೀಯ ನೆಲೆಯ ಬರಹಗಳನ್ನು) ಇಲ್ಲಿ ಅನುವಾದಿಸಿ ನೀಡಲಾಗಿದೆ. ಹೆಣ್ಣು ಭಾಷೆಯೊಂದರ ಕುರಿತ ಕನ್ನಡದ ಚರ್ಚೆಗೆ ಜಾಗತಿಕ ಚಿಂತನೆಗಳ ಒತ್ತಾಸೆಯನ್ನು ಒದಗಿಸಲಾಗಿದೆ. ಈ ಕುರಿತಂತೆ ಸುದೀರ್ಘವಾದ ೩೨ ಪುಟಗಳ ಪ್ರಸ್ತಾವನೆಯನ್ನೂ ಬರೆಯಲಾಗಿದೆ. (ಇವರ ಎಲ್ಲ ಅನುವಾದಗಳಿಗು ಪ್ರಸ್ತಾವನೆಗಳಿವೆ) ಪಾರಿಭಾಷಿಕ ಪದಕೋಶವೊಂದನ್ನು ಕಡೆಗೆ ನೀಡಲಾಗಿದೆ. ಇವನ್ನೂ ಒಳಗೊಂಡಂತೆ ಈ ಬರಹದಲ್ಲಿ ಉಲ್ಲೇಖಿಸಲಾಗಿರುವ ಹಲವು ಪುಸ್ತಕಗಳು ಅನುವಾದಗಳು ಎಂಬ ಕಾರಣಕ್ಕೆ ಅವನ್ನು ಕನ್ನಡ ಸಂಶೋಧನೆಗಳು, ಕನ್ನಡ ಅಧ್ಯಯನಗಳು ಎಂದು ಕರೆಯಬಹುದೆ? ಎಂಬ ಪ್ರಶ್ನೆ ಏಳಬಹುದು. ಬಿ.ಎಂ.ಶ್ರೀ ಅವರ ಇಂಗ್ಲಿಶ್ ಗೀತೆಗಳನ್ನು ಒಂದು ಆಚಾರ್ಯ ಕೃತಿ ಎಂದು ಕರೆಯುವಾಗ ನಮ್ಮ ಬೌದ್ಧಿಕ ಚರ್ಚೆಗಳನ್ನು ಬೆಳೆಸುವ ಈ ಕೃತಿಗಳನ್ನು ಯಾಕೆ ಅಧ್ಯಯನಗಳೆಂದು ಪರಿಗಣಿಸಬಾರದು. ಅಲ್ಲದೆ ಅವು ಆಕರಭಾಷೆಯಲ್ಲಿ ಯಾವಾಗಲಾದರೂ ರಚೆನೆಯಾಗಿರಲಿ. ಕನ್ನಡದಲ್ಲಿ ಅವು ಯಾವಾಗ, ಏಕೆ, ಹೇಗೆ ಬರುತ್ತಿವೆ ಎಂಬುದೇ ಮುಖ್ಯ ಅಲ್ಲವೆ? ಅಪಾರವಾದ ಪರಿಶ್ರಮ, ಸಂಶೋಧನಾ ಅಧ್ಯಯನ ಇರುವ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿಕೊಂಡರೆ ಅವು ಅಧ್ಯಯನಗಳು ಹೇಗಾಗುವುದಿಲ್ಲ?

ಮಹಿಳಾ ಸಾಹಿತ್ಯ (೨೦೦೬) ಸಂ.ಸಬೀಹಾ ಭೂಮಿಗೌಡ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹಿಳಾಪರ ಕಾಳಜಿಗಳು (೨೦೦೭) ಸಂ.ಎಂ.ಎಸ್.ಶೇಖರ್, ಇಂತಹ ಹಲವಾರು ಪುಸ್ತಕಗಳು (ಇವು ಕೆಲವು ಉದಾಹರಣೆಗಳು ಮಾತ್ರ) ಬೇರೆ ಬೇರೆ ಸಂದರ್ಭಗಳಲ್ಲಿ ನಡೆಸಿದ ವಿಚಾರಸಂಕಿರಣಗಳ ಉತ್ಪನ್ನಗಳಾಗಿವೆ. ವಿಮರ್ಶಾಲೇಖನಗಳ ಸಂಕಲನಗಳಂತೆ ಕಾಣುವ ಇವುಗಳನ್ನು ಅಧ್ಯಯನಗಳೆಂದೇ ನಾವು ಕರೆಯಬೇಕು. ಇವುಗಳು ಪೂರ್ಣ ಪ್ರಮಾಣದಲ್ಲಿ ಒಂದೇ ವಿಚಾರ ವಸ್ತುವಿನ ಬಗೆಗೆ ನಡೆವ ಅಧ್ಯಯನಗಳಾಗಿರದೆ ಬೇರೆ ಬೇರೆಯವರು ಭಿನ್ನ ಆಯಾಮಗಳಲ್ಲಿ ಚಿಂತಿಸಿದ – ವಿಶ್ಲೇಷಿಸಿದ – ಮಂಡಿಸಿದ ಹಲವು ಭಾಷಣಗಳ ಲೇಖನಗಳಾಗಿವೆ. ಹಾಗಾಗಿ ಇವನ್ನು ಕಿರು ಅಧ್ಯಯನಗಳ ಸಂಕಲನಗಳು ಎನ್ನಬಹುದು. ಭಿನ್ನ ಸಂದರ್ಭಗಳಲ್ಲಿ ಬರೆದ – ಮಾತಾಡಿದ ಲೇಖನಗಳ ವೈಯಕ್ತಿಕ ಸಂಕಲನಗಳೂ ಹಲವಾರಿವೆ. ಇಂತಹ ಕೃತಿಗಳಿಗೆ ಸಾರಾ ಅಬೂಬಕ್ಕರ್ ಅವರ ಸಾಹಿತ್ಯ ಸಂಸ್ಕೃತಿ ಮತ್ತು ಮಹಿಳೆ (೨೦೦೭), ವೀಣಾ ಶಾಂತೇಶ್ವರ ಅವರ ಇಲ್ಲಿಂದ ಮುಂದೆಲ್ಲಿಗೆ? (೨೦೦೯), ಎಂ.ಎಸ್.ಆಶಾದೇವಿ ಅವರ ನಡುವೆ ಸುಳಿವಾ ಆತ್ಮ (೨೦೧೧) ಇಂಥವನ್ನು ಒಂದೆರಡು ಉದಾಹರಣೆಗಳಾಗಿ ನೋಡಬಹುದು. ಇಂತಹ ವಿಚಾರಸಂಕಿರಣ ಸಂಕಲಿತ, ವ್ಯಕ್ತಿ ಸಂಕಲಿತ ಎರಡೂ ಬಗೆಯ ಕೃತಿಗಳು ಎಲ್ಲ ಧಾರೆಗಳಲ್ಲೂ ಪ್ರಕಟವಾಗಿವೆ. ಹಾಗೆ ನೋಡಿದರೆ ಇವುಗಳ ಸಂಖ್ಯೆಯೆ ಅಪಾರ. ಇತ್ತೀಚೆಗೆ ಇಂತಹ ಸಾಂದರ್ಭಿಕ ಬರಹಗಳ (ಅಧ್ಯಯನಗಳ) ಸಂಕಲನಗಳೇ ಹೆಚ್ಚಾಗುತ್ತಿವೆ.

ಜಾತಿ – ಜನಾಂಗ – ವ್ಯಕ್ತಿಕೇಂದ್ರಿತ ಅಧ್ಯಯನಗಳು: ಮಾನವಶಾಸ್ತ್ರೀಯ, ಸಾಹಿತ್ಯಕ ಮತ್ತು ಜಾನಪದಗಳ ಮಿಶ್ರಣ

ಅಸಾಧಾರಣ ಸಾಧಕರನ್ನು ನಮ್ಮಲ್ಲಿ ಅವರ ಹುಟ್ಟಿನ ಜಾತಿ – ಜನಾಂಗದ ಪರಿವಾರದವರು ಇವರು ನಮ್ಮಜಾತಿಯವರು ಎಂಬ ಮಾತ್ರಕ್ಕೆ ಪ್ರೀತಿಸುವುದು ಮತ್ತು ಅನ್ಯರನ್ನು ಅದೇ ಕಾರಣಕ್ಕೆ ದ್ವೇಷಿಸುವುದು ಯಾವತ್ತಿನಿಂದಲು ಇದ್ದದ್ದೆ. ಇದು ಕೇವಲ ಪ್ರೀತಿಯಷ್ಟೆ ಅಲ್ಲ. ಗುತ್ತಿಗೆ ಎಂಬಂತೆಯು ಆಗಿದೆ. ಬಸವಣ್ಣನನ್ನು ಲಿಂಗಾಯಿತರು, ಮಾಚಯ್ಯನನ್ನು ಮಡಿವಾಳರು, ಕನಕದಾಸನನ್ನು ಕುರುಬರು, ವಾಲ್ಮೀಕಿಯನ್ನು ಬೇಡರು, ಕುವೆಂಪುವನ್ನು ಒಕ್ಕಲಿಗರು ಈಗಾಗಲೆ ಕ್ಲೇಮು ಮಾಡಿದ್ದಾರೆ. ಈ ರೀತಿ ಜಾತಿಗಳು ತಮ್ಮ ಐಕಾನುಗಳನ್ನು ಖಾಸಗಿ ಆಸ್ತಿಯೆಂದು ಅಭಿಮಾನದಿಂದ ಕ್ಲೇಮು ಮಾಡುವುದು ಉಗ್ರಜಾತೀಯತೆಯೆ ಅಲ್ಲದೆ ಇನ್ನೇನು? ಇಂತಹ ಜಾತೀಯ ವಾತಾವರಣ ಇರುವ ಕಡೆ ಮಾದಿಗರೇನಾದರೂ ಬಸವಣ್ಣನನ್ನು ನಮ್ಮವನು ಎಂದರೆ (ಆನು ದೇವಾ ಹೊರಗಣವನು – ಬಂಜಗೆರೆ) ಇಲ್ಲಿ ದೊಡ್ಡ ಗಲಭೆಗಳೇ ಆಗುತ್ತವೆ. ಅಂತಹ ವ್ಯಾಖ್ಯಾನ – ವಾದಗಳನ್ನು ಜಾತಿಪ್ರೇಮಿಗಳು ‘ತಲೆಕೆಟ್ಟ ಸಂಶೋಧನೆ’ ಎಂದೆ ಕರೆಯುತ್ತಾರೆ.

ಸಾಹಿತ್ಯ – ಸಂಸ್ಕೃತಿ ಸಾಧಕರನ್ನು ಜಾತಿ ಸಮುದಾಯಗಳು ಇವ ನಮ್ಮವ ಎಂದು ಗುತ್ತಿಗೆ ಹಿಡಿಯುವಂತೆಯೆ; ಜಾತಿ – ಜನಾಂಗ ಕೇಂದ್ರಿತವಾದ ಸಂಶೋಧನಾ ಕಾರ್ಯಗಳೂ ನಮ್ಮಲ್ಲಿ ‘ನಮ್ಮ’ ‘ನಮ್ಮದು’ ಎಂಬಂತೆ ಪೋಷಿಸಲ್ಪಡುತ್ತವೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದಲ್ಲಿ ವ್ಯಕ್ತಿ ಕೇಂದ್ರಿತವಾದ ಟ್ರಸ್ಟ್‌ಗಳೂ – ಪೀಠಗಳೂ ಇವೆ. ಅಂಬೇಡ್ಕರ್ ಅಧ್ಯಯನ ಪೀಠ, ಕನಕ ಪೀಠ, ಪುರಂದರ ಪೀಠ, ಕುವೆಂಪು ಟ್ರಸ್ಟ್, ಬೇಂದ್ರೆ ಟ್ರಸ್ಟ್, ಪು.ತಿ.ನ. ಟ್ರಸ್ಟ್, ಬೆಸಗರಹಳ್ಳಿ ಟ್ರಸ್ಟ್ ಇತ್ಯಾದಿ ಇತ್ಯಾದಿಗಳು ಆಯಾಯ ವ್ಯಕ್ತಿ ಕೇಂದ್ರಿತವಾದ ಮತ್ತು ಸಾಹಿತ್ಯ ಕೇಂದ್ರಿತವಾದ ಅಧ್ಯಯನಗಳನ್ನೆ ನಡೆಸುತ್ತವೆ. ಕೆಲವೊಮ್ಮೆ ತೌಲನಿಕ ಅಧ್ಯಯನಗಳಿಗು ಅವಕಾಶ ನೀಡುತ್ತವೆ. ಇನ್ನು ನಮ್ಮಲ್ಲಿ ಹಿಂದೆ ವಚನ ಸಾಹಿತ್ಯ ಕೀರ್ತನ – ದಾಸ ಸಾಹಿತ್ಯ, ಜೈನ ಸಾಹಿತ್ಯ ಎಂದು ಸಾಹಿತ್ಯಗಳನ್ನು ಒಡೆದು ನೋಡುತ್ತಿದ್ದಂತೆ ಇಂದು ದಲಿತ – ಬಂಡಾಯ ಸಾಹಿತ್ಯ, ಮುಸ್ಲಿಂ ಸಾಹಿತ್ಯ, ಮಹಿಳಾ ಸಾಹಿತ್ಯ ಎಂಬಂತೆ ಹಲವಾಗಿ ಒಡೆದುಕೊಂಡಿದ್ದೇವೆ. ಇವಲ್ಲದೆ ಭಾಷಿಕವಾಗಿಯೂ ತುಳುವ ಸಾಹಿತ್ಯ, ಮೌಖಿಕ ಸಾಹಿತ್ಯ, ಕೊಡವ ಸಾಹಿತ್ಯ, ಕೊಂಕಣಿ ಸಾಹಿತ್ಯ, ಬ್ಯಾರಿ ಸಾಹಿತ್ಯ ಇತ್ಯಾದಿಗಳಿವೆ. ಇವು ಇನ್ನಷ್ಟು ಹೆಚ್ಚಾಗುವ ಲಕ್ಷಣಗಳೂ ಇವೆ. ಇಂದು ಇವೆಲ್ಲವೂ ಒಡಕಿನ ಲಕ್ಷಣಗಳೆಂದು ಭಾವಿತವಾಗುತ್ತಿಲ್ಲ. ಭಿನ್ನತೆ ಬಹುತ್ವದ ಲಕ್ಷಣಗಳು, ಬಹು ದೃಷ್ಟಿಕೋನದ ಲಕ್ಷಣಗಳು ಎಂದು ಭಾವಿತವಾಗುತ್ತಿವೆ.

ಕುವೆಂಪು ಮೇಲೆ ಇದುವರೆಗೆ ೫೦ಕ್ಕು ಹೆಚ್ಚು ಪಿಎಚ್.ಡಿ. ಅಧ್ಯಯನ ಕೃತಿಗಳು ಪ್ರಕಟವಾಗಿವೆ. ಬರಿ ಕುವೆಂಪು ಬದುಕು – ಬರಹದ ಮೇಲೆ ೪೦೦ಕ್ಕು ಹೆಚ್ಚು ಕೃತಿಗಳು ಪ್ರಕಟವಾಗಿವೆ. (ನೋಡಿ; ಅನುಬಂಧ – ೪) ಆದರೆ ಕುವೆಂಪು ಮೇಲೆ ಬಂದಿರುವ ಎಲ್ಲಾ ಅಧ್ಯಯನಗಳನ್ನು ಒಕ್ಕಲಿಗರು ಮಾತ್ರ ಮಾಡಿಲ್ಲ ಎಂಬುದು ಕನ್ನಡ ವಾಜ್ಞಯ ಪೂರ್ತಾ ಜಾತ್ಯಂಧ ಆಗಿಲ್ಲದೆ ಇರುವುದರ ಕುರುಹಾಗಿದೆ. ನಮ್ಮಲ್ಲಿನ ಸಂಶೋಧನಾ ಅಧ್ಯಯನಗಳಲ್ಲಿನ ‘ಒಂದು ಅಧ್ಯಯನ’ಗಳನ್ನು ಬಿಟ್ಟರೆ ನಂತರದ ಬಹು ಸಂಖ್ಯೆಯ ಅಧ್ಯಯನಗಳೆಂದರೆ ವ್ಯಕ್ತಿಕೇಂದ್ರಿತ ಅಧ್ಯಯನಗಳು. ಬೀಚಿ ಅವರ ಬದುಕು ಬರಹ, ಸಿದ್ಧಲಿಂಗಯ್ಯನವರ ಜೀವನ ಹಾಗೂ ಸಾಹಿತ್ಯ, ದೇಜಗೌ ಬದುಕು – ಬರಹ, ಚಿಗಟೇರಿ ನಾರಪ್ಪ ಒಂದು ಅಧ್ಯಯನ, ಕೊಡೇಕಲ್ಲು ರಾಚಪ್ಪಯ್ಯ ಒಂದು ಅಧ್ಯಯನ, ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿ ಒಂದು ಅಧ್ಯಯನ ಹೀಗೆ ವ್ಯಕ್ತಿ ಕೇಂದ್ರಿತವಾಗಿ ನೂರಾರು ಅಧ್ಯಯನಗಳು ನಡೆದಿವೆ. ಜಾತಿ ಮತ್ತು ಜನಾಂಗ ಕೇಂದ್ರಿತವಾಗಿ, ಲಿಂಗ ಕೇಂದ್ರಿತವಾಗಿಯೂ ಹಲವಾರು ಅಧ್ಯಯನಗಳು ನಡೆದಿವೆ. ವ್ಯಕ್ತಿ ಕೇಂದ್ರಿತ ಅಧ್ಯಯನಗಳು ಮತ್ತು ಜಾತಿ ಜನಾಂಗ ಕೇಂದ್ರಿತ ಅಧ್ಯಯನಗಳಿಗು ನಮ್ಮಲ್ಲಿ ಅಂತಹ ವ್ಯತ್ಯಾಸಗಳಿಲ್ಲ. ಇವುಗಳದ್ದು ಅನಾದಿಯಿಂದಲೂ ನಮ್ಮಲ್ಲಿ ಸಿಂಹಪಾಲೇ ಆಗಿದೆ. ಈ ದಶಕದಲ್ಲು ಇಂತಹ ಅಧ್ಯಯನಗಳ ಧಾರೆ ಸಮೃದ್ಧವಾಗಿಯೆ ಮುಂದುವರೆದಿದೆ. (ವ್ಯಕ್ತಿಕೇಂದ್ರಿತ ಅಧ್ಯಯನಗಳಿಗೆ ಮತ್ತು ಇನ್ನಿತರ ವರ್ಗೀಕರಣಗಳಿಗೆ ನೋಡಿ; ಅನುಬಂಧ – ೬)

ಜಿ.ಎಸ್.ಸಿದ್ಧಲಿಂಗಯ್ಯನವರ ‘ಅಲ್ಲಮಪ್ರಭು’ (೨೦೦೯), ಶಾಂತಾ ಇಮ್ರಾಪುರ ಅವರ ‘ಅಕ್ಕಮಹಾದೇವಿ’ (೨೦೦೧), ಸಿ.ಎಸ್.ದ್ವಾರಕಾನಾಥ್ ಅವರ ಕೈವಾರ ತಾತಯ್ಯನವರ ಕುರಿತ  ಅಧ್ಯಯನ ‘ಮಣ್ಣ ಬಳೆ ನಾದ’ (೨೦೧೦), ಸುರೇಶ್ ನಾಗಲಮಡಿಕೆ ಅವರ ಕನಕದಾಸರ ಕುರಿತ ಅಧ್ಯಯನ ‘ಮುತ್ತು ಬಂದಿದೆ ಕೇರಿಗೆ’ (೨೦೧೧), ಕೋಡಂಬಲ್ ಈಶ್ವರಯ್ಯ ಅವರ ‘ಐನೆಲೆ ಕರಿಬಸವಾರ್ಯರ ಜೀವನ ಮತ್ತು ಸಾಹಿತ್ಯ ಒಂದು ಅಧ್ಯಯನ’ (೨೦೦೯), ಶಿವಾಜಿ ಜ್ಯೋತಿ ಅವರ ದಲಿತ ವಚನಕಾರರ ಚಿಂತನೆಗಳ ಅಧ್ಯಯನವಾದ ‘ಕಾಯಕಜೀವಿಗಳ ಸಾಮಾಜಿಕ ಚಿಂತನೆ’ (೨೦೧೧) ಎಂಬಿವೇ ಮೊದಲಾದ ಅಧ್ಯಯನಗಳು ಪ್ರಾಚೀನ ಸಂತ – ಲೇಖಕರ ಬದುಕು, ಬರಹ, ತತ್ವಜ್ಞಾನ, ಜೀವನಮೌಲ್ಯಗಳನ್ನು ಚರ್ಚಿಸಿರುವ ಅಧ್ಯಯನಗಳಾಗಿವೆ. ಇಲ್ಲೆಲ್ಲ ಸಾಹಿತ್ಯ ಮತ್ತು ಸಂತರ ಬದುಕಿನ ಮೌಲ್ಯಮಾಪನಕ್ಕಿಂತ ಅವರ ಬದುಕು ಬರಹಗಳನ್ನು ಇಂದಿಗೆ ಪ್ರಸ್ತುತಪಡಿಸುವ, ಇಂದಿನ ಓದುಗರಿಗೆ ಪರಿಚಯಿಸುವ, ಇಂದಿನ ಸಾಮಾಜಿಕ ನ್ಯೂನತೆಗಳಿಗೆ ಇವರಲ್ಲಿ ಪರಿಹಾರಗಳನ್ನು ಕಂಡಕೊಳ್ಳುವ ಅಧ್ಯಯನಗಳಾಗಿವೆ.

ಸಂಸ್ಕೃತಿ ಇಲಾಖೆಯವರು ಸಂಪಾದಿಸಿ ಪ್ರಕಟಿಸಿರುವ ಸಮಗ್ರ ವಚನ ಸಂಪುಟಗಳು ಮತ್ತು ಸಮಗ್ರ ಕೀರ್ತನ (ದಾಸ ಸಾಹಿತ್ಯ) ಸಂಪುಟಗಳು ಹಾಗೂ ಕನ್ನಡ ವಿ.ವಿ. ಪ್ರಕಟಿಸಿರುವ ಜೈನ ಸಾಹಿತ್ಯ ಮಾಲೆಯ ಇಪ್ಪತ್ತು ಕೃತಿಗಳು ಇವೆಲ್ಲವನ್ನು ಇಲ್ಲಿಯೆ ಉಲ್ಲೇಖಿಸಬೇಕು. ಇವುಗಳನ್ನು ಶುದ್ಧಾಂಗವಾಗಿ ಸಂಶೋಧನೆ ಎನ್ನಲು ಬರುವುದಿಲ್ಲ. ಇವೆಲ್ಲ ಸಂಪಾದನೆಗಳು. ಆದಾಗ್ಯೂ ಇವೆಲ್ಲವೂ ನಮ್ಮ ಹಿಂದಿನವರ ಸಂಪಾದನೆ ಸಂಶೋಧನೆಗಳ ಫಲಿತಗಳೇ ಆಗಿವೆ. ಆಕರ ನಿರ್ಮಾಣ ಮತ್ತು ಸಂಯೋಜನೆಯ ಕೆಲಸಗಳೂ ಕೂಡ ಸಂಶೋಧನೆಯ ಕಾರ್ಯಗಳೇ ತಾನೆ? ಹಾಗಾಗಿ ಈ ಮಾಲಿಕೆಗಳು ಸಂಶೋಧನೆಗಳೂ ಆಗಿವೆ. ವೀರಶೈವ – ವೈಷ್ಣವ – ಜೈನ ಹೀಗೆ ಮೂರು ಮುಖ್ಯ ಜಾತೀಯ (ಧಾರ್ಮಿಕ) ಹಿನ್ನೆಲೆಯ ಪ್ರಕಟಣೆಗಳಿವು. ಮುಖ್ಯ ಜಾತಿ ಸಮುದಾಯಗಳ ಸಾಹಿತ್ಯವನ್ನು ಮಾತ್ರವೆ ಸರ್ಕಾರದ ಸಂಸ್ಥೆಗಳು ಪ್ರಕಟಿಸಿದರೆ ಮಿಕ್ಕ ಸಾಹಿತ್ಯಗಳ ಗತಿ ಏನಾಗಬೇಕು? ಪ್ರಬಲ ಕೋಮಿನ ಬೆಂಬಲವಿಲ್ಲದ ಸಾಹಿತ್ಯಗಳು ಇದರಿಂದ ಸೊರಗುವುದಿಲ್ಲವೆ? ಆದರೆ ನಮ್ಮಲ್ಲಿ ಹಾಗಾಗಿಲ್ಲ ಎಂಬುದು ನಿಜ. ಸರ್ಕಾರಿ ಸಂಸ್ಥೆಗಳೂ ಸೇರಿದಂತೆ ಇತರ ವ್ಯಕ್ತಿಗಳಿಂದ ದಲಿತ, ಬುಡಕಟ್ಟು, ಮಹಿಳಾ, ಅಲಕ್ಷಿತ ಅಧ್ಯಯನಗಳು ಇತ್ತೀಚೆಗೆ ವ್ಯಾಪಕವಾಗಿ ನಡೆಯುತ್ತಿವೆ. (ಜೊತೆಗೆ ನೋಡಿ: ಅಲಕ್ಷಿತ ಅಧ್ಯಯನ) ಅದಕ್ಕಾಗಿ ಸರ್ಕಾರಿ ಸವಲತ್ತುಗಳೂ ಸಿಗುತ್ತಿವೆ. ಹಾಗೆಯೆ ವೀರಶೈವ, ಜೈನ, ವೈಷ್ಣವಗಳ ಆಚೆಗಿನ ಆಧುನಿಕ ಪೂರ್ವ ಸಾಹಿತ್ಯಗಳು ಸಂಶೋಧನೆ – ಸಂಪಾದನೆ – ಪ್ರಕಟಣೆ – ವಿಶ್ಲೇಷಣೆ – ಅಧ್ಯಯನಗಳ ಆಚೆಗೆ ಸಾಕಷ್ಟು ಉಳಿದಿವೆ ಎಂಬುದು ಕೂಡ ನಿಜ.

ದರ್ಶನ – ಪಾಂಥಿಕ ಧಾರೆ

ಈ ಧಾರೆ ಕೂಡ ಹೆಚ್ಚು ಕಡಿಮೆ ಅಲಕ್ಷಿತ ಧಾರೆಯೇ. ಈ ಧಾರೆಯಲ್ಲಿ ಎಸ್.ಎಸ್. ಹಿರೇಮಠರ ಪಾಶುಪತ ದರ್ಶನ, ಲಾಕುಳ ದರ್ಶನ, ಕಾಳಾಮುಖ ದರ್ಶನ, ಲೋಕಾಯತ ದರ್ಶನ, ಸಾಂಖ್ಯದರ್ಶನ, ಕರ್ನಾಟಕದ ಜಾತ್ರೆಗಳು – ಹಬ್ಬಗಳು, ರಹಮತ್ ತರೀಕೆರೆಯವರ ಕರ್ನಾಟಕ ಸೂಫಿಗಳು (೧೯೯೮) ಕರ್ನಾಟಕದ ನಾಥಪಂಥ, ಕರ್ನಾಟಕ ಧರ್ಮಗಳು, ಬೂದಾಳರ ನಾಗಾರ್ಜುನ ಮತ್ತು ಅಲ್ಲಮ, ನಾಗಾರ್ಜುನನ ಕೃತಿಗಳು ಮತ್ತು ತಾತ್ವಿಕತೆ, ಜಿ.ರಾಮಕೃಷ್ಣರ ಯೋಗಪ್ರವೇಶ, ಅಬ್ದುಲ್ ಹಮೀದರ ಸೂಫಿಪಥ ಮತ್ತು ಶರಣ ಪಥಗಳ ತೌಲನಿಕ ಅಧ್ಯಯನ, ಸಿದ್ಧಲಿಂಗ ಸ್ವಾಮಿಗಳ ಅಲ್ಲಮ ಪ್ರಭುವಿನ ದಾರ್ಶನಿಕ ಮೀಮಾಂಸೆ ಹೀಗೆ ಹಲವಾರು ಅಧ್ಯಯನಗಳು ಬಂದಿವೆ. ಪಾಂಥಿಕ ದರ್ಶನಗಳನ್ನು ಪ್ರೋಡೀಕರಿಸಿಕೊಳ್ಳುವುದು, ಪಂಥಗಳನ್ನು ಪರಿಚಯಿಸುವುದು, ಭಿನ್ನ ಪಂಥಗಳ ತೌಲನಿಕತೆಯ ಮೂಲಕ ಸಾಮ್ಯ – ಸಂಘರ್ಷಗಳ ಚರಿತ್ರೆಯನ್ನು ನಿರೂಪಿಸುವುದು, ಇಂದಿನ ವರ್ತಮಾನಕ್ಕೆ ಬೇಕಾದ ಕೋಮುಸೌಹಾರ್ದೀಯ, ಜನಾಂಗೀಯ ಸಾಮರಸ್ಯದ ನಡೆಗಳನ್ನು ಹುಡುಕುವುದು, ಕರ್ನಾಟಕದ ಸ್ಥಳಿಯತೆಯ ವೈವಿಧ್ಯತೆ ಮತ್ತು ಸಾಮರ್ಥ್ಯಗಳನ್ನು ಕಂಡುಕೊಳ್ಳುವುದು, ಜ್ಞಾನಮೀಮಾಂಸೆಯ ವರಸೆಗಳನ್ನು ವಿಶ್ಲೇಷಿಸುವುದು ಹೀಗೆ ಇಲ್ಲಿ ಹಲವು ಕ್ರಮಗಳಿವೆ.

ಈ ಪಾಂಥಿಕ ಧಾರೆಯಲ್ಲಿ ಮೊದಮೊದಲಿಗೆ ಕಪಟರಾಳ ಕೃಷ್ಣರಾಯ, ಶಂ.ಬಾ. ಜೋಷಿ, ಚಿದಾನಂದಮೂರ್ತಿ, ಕಲಬುರ್ಗಿ ಇವರೆಲ್ಲ ಬರುತ್ತಾರೆ. ಇವರ ಹಲವಾರು ಲೇಖನಗಳನ್ನು ಈ ಲೇಖನಕ್ಕೆ ತನ್ನದೆ ಕಾಲಮಿತಿ ಹಾಕಿಕೊಂಡಿರುವುದರಿಂದ ಇಲ್ಲಿ ಚರ್ಚಿಸಲು ಆಗುತ್ತಿಲ್ಲ. ಈ ದಶಕದಲ್ಲಿ ಈ ಧಾರೆಯಲ್ಲಿ ಬರುವ ಬಹು ಮುಖ್ಯವಾದ ಹೆಸರು ಎಸ್.ಎಸ್. ಹಿರೇಮಠರದ್ದು. ಇವರು ದೇಬಿಪ್ರಸಾದ ಚಟ್ಟೋಪಾಧ್ಯಾಯ, ಡಿ.ಡಿ.ಕೋಸಾಂಬಿ, ಹಿರಿಯಣ್ಣ ಇವರ ತತ್ವಶಾಸ್ತ್ರ ಮತ್ತು ಭಾರತೀಯ ದರ್ಶನಗಳ ಅಧ್ಯಯನದ ಹಿನ್ನೆಲೆಯಲ್ಲಿ ತಮ್ಮ ತಾತ್ವಿಕತೆಯನ್ನು ರೂಪಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಅಧ್ಯಯನಕ್ಕೆ ಕನ್ನಡ ಸಾಹಿತ್ಯ, ಶಾಸನ ಮತ್ತು ಮೌಖಿಕ (ಜಾನಪದ) ಆಕರಗಳೆಲ್ಲವನ್ನೂ ಬಳಸಿಕೊಂಡಿದ್ದಾರೆ. ಚಿದಾನಂದಮೂರ್ತಿ, ಶಂಬಾ, ಕಲಬುರ್ಗಿ ಇವರ ಹಲವಾರು ನಿಲುವುಗಳ ಬಗ್ಗೆ ತಮ್ಮದೇ ಭಿನ್ನಮತಗಳನ್ನು ಇವರು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ದರ್ಶನಗಳಿಗೆ ಅಲಕ್ಷಿತ, ದ್ರಾವಿಡ ಮತ್ತು ದಲಿತ ಹಿನ್ನೆಲೆ ಇರುವುದನ್ನು ಸಾಧಾರವಾಗಿ ಮಂಡಿಸಿದ್ದಾರೆ. ಸಾಂಸ್ಕೃತಿಕ ಏಕರೂಪೀಕರಣದ ದಾಳಿಗೆ ಎದುರಾಗಿ ನಿರಂತರವಾಗಿ ನಮ್ಮ ಸಮಾಜದಲ್ಲಿ ನಡೆದು ಬಂದ ಬಹುಸಂಸ್ಕೃತಿ ಮತ್ತು ಸೌಹಾರ್ದಗಳ ಬಾಳೆ ದರ್ಶನಗಳಾಗಿ ಅಭಿವ್ಯಕ್ತಿ ಪಡೆದಿರುವುದನ್ನು ಇವರು ತಮ್ಮೆಲ್ಲ ಕೃತಿಗಳಲ್ಲಿ ಕಂಡರಿಸಿದ್ದಾರೆ.

ಹಿರೇಮಠರದ್ದು ದರ್ಶನಗಳನ್ನು ಗಣೇಶ ಪ್ರಜ್ಞೆಯಿಂದ ನೋಡುವ ದೃಷ್ಟಿಯಾದರೆ ರಹಮತರದ್ದು ಮುರುಗ ಪ್ರಜ್ಞೆಯಿಂದ ನೋಡುವ ದೃಷ್ಟಿಯಾಗಿದೆ. ಅಪಾರವಾದ ಚಾರಣ, ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳ ಮೂಲಕ ರಹಮತ್ ವರ್ತಮಾನ ಮತ್ತು ಗತಗಳೆರಡನ್ನೂ ತಮ್ಮ ಕೃತಿಗಳಲ್ಲಿ ಬೆಸೆದಿದ್ದಾರೆ. ಇವರ ಸೂಫಿ ಮತ್ತು ನಾಥಪಂಥಗಳ ಅಧ್ಯಯನಗಳು ಹೀಗೆ ಚಾರಣ ಮತ್ತು ಅಧ್ಯಯನಗಳೆರಡರ ಫಲಿತಗಳಾಗಿವೆ. ಇವರ ನಾಥಪಂಥ ಕೃತಿಯಲ್ಲಿ ಅನೇಕ ವಕ್ತೃಗಳನ್ನು ಮಾತನಾಡಿಸಿ ಮಾಹಿತಿ ಪಡೆದು ಮೌಖಿಕ ಆಕರಗಳ ಮೂಲಕವೂ ಪಾಂಥಿಕ ವರ್ತಮಾನವನ್ನು ಕಥಿಸಲಾಗಿದೆ.

[1]

ಸಿದ್ಧ ಸಾಹಿತ್ಯ, ಸೂಫಿ ಪ್ರೇಮಕಾವ್ಯಗಳನ್ನು ರಚಿಸಿರುವ ಮ.ಸು.ಕೃಷ್ಣಮೂರ್ತಿಯವರು ‘ಉತ್ತರದ ಸಂತ ಪರಂಪರೆ’ (೨೦೦೩) ಎಂಬ ಕೃತಿಯನ್ನು ರಚಿಸಿದ್ದಾರೆ. ಗಾಂಧೀಜಿಯನ್ನೂ ಒಳಗೊಂಡಂತೆ ಇಲ್ಲಿ ಉತ್ತರಭಾರತ ಭಾಗದ ೫೨ ಜನ ಸಂತರನ್ನು ಚರ್ಚಿಸಲಾಗಿದೆ. ಆದಿಕಾಲೀನ ಸಂತರು, ಮಧ್ಯಕಾಲೀನ ಸಂತರು ಮತ್ತು ಆಧುನಿಕ ಸಂತರು ಎಂದು ಸಂತರನ್ನು ಇಲ್ಲಿ ಮೂರು ವರ್ಗಗಳನ್ನಾಗಿ ವರ್ಗೀಕರಿಸಿಕೊಳ್ಳಲಾಗಿದೆ. ಈ ಕೃತಿಯ ಮೊದಲಿಗೆ ಅನುಭಾವಿಕತೆ, ಸಂತತನ ಮತ್ತು ಭಕ್ತಿಪಂಥಗಳ ನಡುವಣ ಸಂಬಂಧ, ಸಂತರು ಮತ್ತು ಸಂಗೀತದ ನಡುವಣ ಸಂಬಂಧ, ಸಂತಸಾಹಿತ್ಯದ ಸ್ವರೂಪ ವಿನ್ಯಾಸಗಳು ಹೀಗೆ ಹಲವು ತಾತ್ವಿಕ ವಿಚಾರಗಳನ್ನು ಚರ್ಚಿಸಲಾಗಿದೆ. ಜಿ.ಬಿ.ಹರೀಶರ ತಂತ್ರಶಾಸ್ತ್ರ ಕೃತಿಯು (೨೦೦೬) ತಂತ್ರಗಳ ಉಗಮ, ಅವುಗಳ ೬೪ ಬಗೆಗಳು ಮತ್ತು ಅವುಗಳು ಭಿನ್ನ ಭಿನ್ನ ಪಂಥ ಪಂಗಡಗಳಲ್ಲಿ ಬಳಕೆಯಾಗುವ ಕ್ರಮವಿಧಿಗಳನ್ನು ವಿವರಿಸುತ್ತದೆ ಮತ್ತು ವಿಶ್ಲೇಷಿಸುತ್ತದೆ. ತಂತ್ರದ ಪರಿಚಯ, ವಿಶ್ಲೇಷಣೆ ಮತ್ತು ಅದರ ಕುರಿತು ಇದುವರೆಗೆ ಬಂದಿರುವ ಬರವಣಿಗೆಯ ಚರ್ಚೆ ಈ ಮೂರನ್ನೂ ಈ ಕೃತಿಯು ಒಳಗೊಂಡಿದೆ. ತಂತ್ರಾಚಾರಗಳನ್ನು ವಿವರಿಸುತ್ತ ಅದೊಂದು ಸಾಧನೆಯ ದಾರಿ ಮತ್ತು ತತ್ವದರ್ಶನ ಎರಡೂ ಆಗಿದೆ ಎಂದು ಇಲ್ಲಿ ಪ್ರತಿಪಾದಿಸಲಾಗಿದೆ.

ಕೆ.ಜಿ.ನಾಗರಾಜಪ್ಪ ಅವರು ನಮ್ಮಲ್ಲಿ ಸಾಕಷ್ಟು ತಂತ್ರ, ಸಿದ್ಧ, ನಾಥಪರಂಪರೆಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಲೆಖನಗಳನ್ನು ಬರೆದಿದ್ದಾರೆ. ಆದರೆ ಕೃತಿ ರೂಪದ ಅಧ್ಯಯನಗಳು ಇವರಿಂದ ಪ್ರಕಟವಾಗಿಲ್ಲ. ಈ ಧಾರೆಯಲ್ಲಿ ಡಾ.ಜಿ.ರಾಮಕೃಷ್ಣ ಅವರ ‘ಲೋಕಾಯತ’ (೨೦೧೧) ದೇಬಿಪ್ರಸಾದ ಚಟೋಪಾದ್ಯಾಯರ ಅನುವಾದ ಒಂದು ಮುಖ್ಯವಾದ ಕೃತಿಯಾಗಿದೆ. ಲೋಕಾಯತ, ಸಾಂಖ್ಯ, ತಂತ್ರ, ಬೌದ್ಧ, ವೈದಿಕ, ಹರಪ್ಪ ಇತ್ಯಾದಿ ಚಿಂತನಾಕ್ರಮ, ಜೀವನಕ್ರಮಗಳಲ್ಲಿ ಇರುವ ಭೌತವಾದ – ಭಾವನಾವಾದಗಳನ್ನು ಈ ಕೃತಿ ವಿಸ್ತೃತವಾಗಿ ಚರ್ಚಿಸುತ್ತದೆ. ಆದಿ ಭಾರತೀಯ ಸಂಸ್ಕೃತಿ ಚರಿತ್ರೆಯನ್ನೆಲ್ಲ ತತ್ವಜ್ಞಾನೀಯ ನೆಲೆಯಲ್ಲಿ ವಿಶ್ಲೇಷಣೆಗೆ ಇಲ್ಲಿ ಗುರಿಪಡಿಸಲಾಗಿದೆ. ದೇಬಿಪ್ರಸಾದರ ವಿಸ್ತೃತ ಅಧ್ಯಯನವಾದ ಆಕರ ಬರಹವನ್ನು ಇಲ್ಲಿ ರಾಮಕೃಷ್ಣ ಅವರು ಸಂಗ್ರಹಾನುವಾದ ಮಾಡಿ ನೀಡಿದ್ದಾರೆ.

ಭಾರತೀಯ ಸಂತರು, ಚಿಂತಕರ ಚಿಂತನೆಗಳನ್ನು ತತ್ವಜ್ಞಾನಗಳನ್ನು ಕ್ರೋಡೀಕರಿಸಿರುವ, ವಿಶ್ಲೇಷಿಸಿರುವ, ತೌಲನಿಕವಾಗಿ ಅಧ್ಯಯನ ಮಾಡಿರುವ ಅಧ್ಯಯನಗಳು; ಟ್ಯಾಗೋರ್, ಕುವೆಂಪು, ನಾರಾಯಣಗುರು, ಗಾಂಧಿ, ಅಂಬೇಡ್ಕರ್, ಲೋಹಿಯಾ, ಜೆ.ಪಿ, ಹೀಗೆ ವ್ಯಕ್ತಿಕೇಂದ್ರಿತವಾದ ಅಧ್ಯಯನಗಳೂ ಈ ಧಾರೆಯಲ್ಲಿ ಸಾಕಷ್ಟು ನಡೆದಿವೆ. ಇವುಗಳಿಗೆ ಉದಾಹರಣೆಯಾಗಿ ಡಿ.ಎಸ್.ನಾಗಭೂಷಣ ಅವರ ‘ಜಯಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ’ (೨೦೦೩), ಬಿ.ಯು.ಸುಮಾ ಅವರು ಸಂಪಾದಿಸಿರುವ ಡಾ.ಬಿ.ಆರ್.ಅಂಬೇಡ್ಕರ್: ವರ್ತಮಾನದೊಂದಿಗೆ ಮುಖಾಮುಖಿ (೨೦೦೮), ಲೋಹಿಯಾ ಬರಹಗಳ ಸಂಪಾದಿತ ಅನುವಾದಿತ ಕೃತಿಗಳು (ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಿತ) ಮೊದಲಾದುವನ್ನು ನೋಡಬಹುದು. ಇವಲ್ಲದೆ ವಿದೇಶೀ ಚಿಂತಕರಾದ ಎಡ್ವರ್ಡ್ ಸೈದ್, ಡೆರಿಡಾ, ಆಂಟೋನಿಯೋ ಗ್ರಾಂಶಿ, ನೀಷೆ, ಸಾರ್ತ್ರ್, ಚಾಮ್‌ಸ್ಕಿ ಮೊದಲಾದವರ ಚಿಂತನೆಗಳನ್ನು, ಬದುಕು ಬರಹಗಳ ತಾತ್ವಿಕತೆಗಳನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡುವ, ಅವರ ಸಿದ್ಧಾಂತಗಳನ್ನು ಕನ್ನಡದಲ್ಲಿ ಮರುನಿರೂಪಿಸುವ ಅನುವಾದ, ಸಂಪಾದನೆ, ಅಧ್ಯಯನಗಳು ಕೂಡ ಸಾಕಷ್ಟು ನಡೆದಿವೆ. ಇದಕ್ಕೆ ಉದಾಹರಣೆಯಾಗಿ ಮಾಧವ ಪೆರಾಜೆ ಅವರ ಡೆರಿಡಾ, ಕೆ.ಫಣಿರಾಜ್ ಅವರ ಗ್ರಾಂಶಿ, ನ.ರವಿಕುಮಾರ್ ಸಂಪಾದಿಸಿರುವ ನೋಮ್ ಚಾಮ್‌ಸ್ಕಿ, ಟಿ.ಎನ್.ವಾಸುದೇವಮೂರ್ತಿ ಅವರ ಹುಚ್ಚುತನವೇ ಅನುಗ್ರಹ: ನೀಷೆ, ಎಂ.ಬಸವಣ್ಣನವರ ಕಾರ್ಲ್ ಯೂಂಗ್, ರಾಮಲಿಂಗಪ್ಪ ಟಿ.ಬೇಗೂರು ಅನುವಾದಿಸಿರುವ ಶೆಲ್ಲಿ ವಾಲಿಯಾ ಅವರ ಎಡ್ವರ್ಡ್ ಸೈದ್, ಸಿ.ಎನ್.ರಾಮಚಂದ್ರನ್ ಅವರ ಎಡ್ವರ್ಡ್ ಸೈದ್ ಮೊದಲಾದ ಕೃತಿಗಳನ್ನು ನೋಡಬಹುದು. ಹಾಗೆಯೆ ಇಂಗ್ಲಿಶಿನ ರೀಡರ್ ಮಾದರಿಯನ್ನು ಅನುಸರಿಸಿ ಕನ್ನಡದಲ್ಲೂ ಹಲವಾರು ರೀಡರ್‌ಗಳು – ವಾಚಿಕೆಗಳು ಪ್ರಕಟವಾಗಿವೆ. ಅವುಗಳನ್ನು ಕೂಡ ಅಧ್ಯಯನಗಳ ವ್ಯಾಪ್ತಿಗೇ ಸೇರಿಸಬಹುದು. ಸಂಪಾದನೆ – ಸಂಯೋಜನೆ, ಅನುವಾದ, ಸ್ವತಂತ್ರ ರಚನೆ ಹೀಗೆ ಇಲ್ಲು ಅದೇ ಮಾದರಿಗಳಿವೆ.

ದರ್ಶನ ಎಂಬ ಪಂಥವನ್ನು ಕುರಿತು ಮಾತನಾಡುವಾಗ ನಮ್ಮಲ್ಲಿ ಇತ್ತೀಚೆಗೆ ೨೦ – ೩೦ ವರ್ಷಗಳಿಂದ ನಡೆಯುತ್ತಿರುವ ಸ್ತ್ರೀವಾದಿ ಚಿಂತನೆ, ದಲಿತ ಚಿಂತನೆ, ಅಲಕ್ಷಿತ ಚಿಂತನೆಗಳನ್ನು ಕೂಡ ಸ್ತ್ರೀದರ್ಶನ, ದಲಿತ ದರ್ಶನ, ಅಲಕ್ಷಿತ ದರ್ಶನ ಎಂದು ಪರಿಭಾವಿಸಲು ಅವಕಾಶವಿದೆ. ಭಾರತೀಯ ಷಡ್ದರ್ಶನಗಳು, ದ್ವೈತ ಅದ್ವೈತ ವಿಶಿಷ್ಟಾದ್ವೈತಾದಿ ಮತಗಳು, ಸೂಫಿ, ನಾಥ, ಆರೂಢ, ಶಾಕ್ತ, ತಂತ್ರ ಇತ್ಯಾದಿ ಪಂಥಗಳಂತೆ ಇವುಗಳನ್ನೂ ಪಾಂಥಿಕವಾಗಿ ನೋಡುವ ಸಾಧ್ಯತೆಯಿದೆ. ಇಂದು ಇವು ಏಕಕಾಲಕ್ಕೆ ತತ್ವಜ್ಞಾನಗಳಾಗಿರುವಂತೆಯೆ ಪ್ರಕ್ರಿಯೆಗಳೂ ಆಗಿವೆ. ಹಾಗಾಗಿ ಇವುಗಳನ್ನು ದರ್ಶನಗಳನ್ನಾಗಿ ಮಂಡಿಸಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಅಷ್ಟೆ. ಎಲ್ಲ ಲಿವಿಂಗ್ ಫಿಲಾಸಫಿಗಳಿಗು ಈ ಮಾತು ಅನ್ವಯಿಸುತ್ತದೆ.

ಸಂಶೋಧನೆಯ ತಾತ್ವಿಕ ಧಾರೆ – ಸಂಶೋಧನಾ ಮೀಮಾಂಸೆಯ ಧಾರೆ

ಸಂಶೋಧನೆ ಎಂದರೇನು? ಉತ್ತಮ ಸಂಶೋಧನೆಯ ಲಕ್ಷಣಗಳು ಯಾವುವು? ಸಂಶೋಧನೆಯನ್ನು ಯಾಕೆ ನಡೆಸಬೇಕು? ಅದರ ಪ್ರಯೋಜನಗಳು ಯಾವುವು? ಸಂಶೋಧನೆಯು ಕನ್ನಡದಲ್ಲಿ ಹೇಗೆಲ್ಲ ನಡೆಯುತ್ತ ಬಂದಿದೆ? ಸಂಶೋಧನೆಯ ವಿಧಾನ ಮತ್ತು ತಾತ್ವಿಕತೆಗಳು ಯಾವುವು? ಎಷ್ಟು ಬಗೆಯ ಸಂಶೋಧನೆಗಳು ನಮ್ಮಲ್ಲಿ ಇವೆ? ಇತ್ಯಾದಿ ಪ್ರಶ್ನೆಗಳನ್ನು ಉತ್ತರಿಸುವ ಮತ್ತು ಮಾದರಿ ಸಂಶೋಧನೆ ಒಂದನ್ನು ನಿರೂಪಿಸುವ ತತ್ವಮಂಡನೆಯ ಬರವಣಿಗೆಗಳೂ ನಮ್ಮಲ್ಲಿ ಸಾಕಷ್ಟು ಬಂದಿವೆ. ಇವೆಲ್ಲವೂ ಬಹುಪಾಲು ಸಂಶೋಧನಾ ಪದವಿಗಾಗಿ ಅಧ್ಯಯನ ಕೈಗೊಳ್ಳಲು ಹೊಸದಾಗಿ ಬರುವ ವಿದ್ಯಾರ್ಥಿಗಳನ್ನು ಗಮನದಲ್ಲಿ ಇರಿಸಿಕೊಂಡ ಬರವಣಿಗೆಗಳೆ ಆಗಿವೆ. ಇವುಗಳನ್ನೆಲ್ಲ ಒಟ್ಟಾರೆಯಾಗಿ ತತ್ವಧಾರೆ ಎನ್ನಬಹುದು.

ಚಂದ್ರಪೂಜಾರಿಯವರ ‘ಸಂಶೋಧನೆ ಏನು ಏಕೆ ಹೇಗೆ?’ (೨೦೦೯) ಎಂಬ ಕೃತಿಯು ಮಾನವಿಕ ಸಂಶೋಧನೆಗಳ ರೂಪುರೇಷೆಗಳನ್ನು ಚರ್ಚಿಸುವ ಕೃತಿ. ಸಂಶೋಧನೆಯ ವಸ್ತು ಮತ್ತು ವಿಧಾನಗಳು ಹೇಗಿವೆ ಮತ್ತು ಹೇಗಿರಬೇಕು, ಪಾಸಿಟಿವಿಸ್ಟ್ ಧೋರಣೆ – ಹರ್ಮನ್ಯೂಟಿಕಲ್ ತಿಳುವಳಿಕೆಗಳು ಸಂಶೋಧನೆಯನ್ನು ನಿಯಂತ್ರಿಸುವ ಬಗೆಗಳು, ಸಂಶೋಧನೆಯಲ್ಲಿ ಒಳಗೊಳ್ಳುವ ಮತ್ತು ಹೊರಗಿಡುವ ಪ್ರಶ್ನೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ವಿವರಗಳು ಇವರ ಕೃತಿಯಲ್ಲಿ ಚರ್ಚಿತವಾಗಿವೆ. ಅಲ್ಲದೆ ಸಂಶೋಧನೆಯಲ್ಲಿ ಆಕರಗಳನ್ನು ನೀಡುವ ಪ್ರಾಥಮಿಕ ವಿಚಾರಗಳು ಮತ್ತು ಅವುಗಳ ಪ್ರಮಾಣ ಹಾಗೂ ಗುಣ, ಆಕರಗಳ ಸದ್ಯಃಪರತೆ ಮತ್ತು ಸಾರ್ವಕಾಲಿಕತೆಗಳು, ಸಂಶೋಧನೆಯ ಸಾಮಾಜಿಕ ಉಪಯುಕ್ತತೆಯ ಪ್ರಶ್ನೆಗಳು, ಸಾಮಾಜಿಕ ನ್ಯಾಯದ ಒಳಗೇ ಬರುವ ಲಿಂಗನ್ಯಾಯದ ಪ್ರಶ್ನೆಗಳು, ಫೀಲ್ಡ್‌ವರ್ಕ್ ಮತ್ತು ಟೇಬಲ್‌ವರ್ಕ್‌ಗಳನ್ನು ಸಮನ್ವಯಗೊಳಿಸುವ ಬಗೆಗಳು ಹೀಗೆ ಹತ್ತು ಹಲವು ಸಂಗತಿಗಳನ್ನು ಇವರ ಕೃತಿಯು ಮಾನವಿಕ ಶಿಸ್ತುಗಳ ಹಿನ್ನೆಲೆಯಲ್ಲೆ ಚರ್ಚಿಸುತ್ತದೆ. ಸಂಶೋಧನೆಯನ್ನು ಸಾಹಿತ್ಯ ಸಂಶೋಧನೆ, ಜಾನಪದ ಸಂಶೋಧನೆ, ಮಾನವಿಕಗಳ ಸಂಶೋಧನೆ, ವಿಜ್ಞಾನ ಸಂಶೋಧನೆ ಹೀಗೆ ಮುಖ್ಯವಾಗಿ ನಾಲ್ಕು ಪಂಗಡಗಳಲ್ಲಿ ವಿಂಗಡಿಸಿ ನೋಡುವ ಗ್ರಹಿಕೆ ನಮ್ಮಲ್ಲಿದೆ. ಈ ವರ್ಗಗಳಲ್ಲಿ ಒಂದೊಂದಕ್ಕು ಬೇರೆ ಬೇರೆ ರೀತಿಯ ತಾತ್ವಿಕತೆಗಳು – ವಿಧಾನಗಳು ಇರುತ್ತವೆ ಎಂಬ ಗ್ರಹಿಕೆಯೂ ನಮ್ಮಲ್ಲಿ ಮಂಡಿತವಾಗಿದೆ. ಆಚಾರವೂ ಇದೆ. (ಸಮಾಜ ಸಂಶೋಧನೆ??)

ರವೀಂದ್ರನಾಥ್ ಸಂಪಾದಿಸಿರುವ ‘ಅಧ್ಯಯನ ವಿಧಿವಿಧಾನಗಳು’ (೨೦೦೮) ಕೃತಿಯಲ್ಲಿ ಅನ್ವಯಿಕ, ಪ್ರಾಯೋಗಿಕ ಮತ್ತು ವೈಧಾನಿಕ ಎಂಬ ಮೂರು ಭಾಗಗಳಲ್ಲಿ ಬೇರೆ ಬೇರೆ ವಿದ್ವಾಂಸರು ಮಾಡಿದ ಭಾಷಣಗಳ ಲೇಖನರೂಪಗಳನ್ನು ಸಂಕಲಿಸಲಾಗಿದೆ. ಕನ್ನಡ ಸಂಶೋಧನೆಯ ಅಜಮಾಸು ನೆನ್ನೆ ಇಂದು ಮತ್ತು ನಾಳೆಗಳು ಇಲ್ಲಿ ಚರ್ಚಿತವಾಗಿವೆ. ಅಲ್ಲದೆ ಗೋವಿಂದ ಪೈ, ಎಂ.ಎನ್.ಶ್ರೀನಿವಾಸ್, ಕಪಟರಾಳ, ಶಂಬಾ ಇವರ ಸಂಶೋಧನಾ ವಿಧಾನಗಳನ್ನು ಮಾದರಿಗಾಗಿ ಇಲ್ಲಿ ಚರ್ಚಿಸಲಾಗಿದೆ. ವಿಶೇಷವೆಂದರೆ ಸಾಹಿತ್ಯ ಮತ್ತು ಮಾನವಿಕಗಳೆರಡನ್ನು ಇಲ್ಲಿ ಒಟ್ಟಿಗೆ ಗ್ರಹಿಸಲಾಗಿದೆ. ಕೆ.ಜಿ.ಭಟ್. ಸೂರಿ ಅವರು ಸಂಪಾದಿಸಿರುವ ‘ಕರ್ನಟಕ ಶಾಸನ ಸಂಶೋಧನೆ’ (೨೦೦೯) ಕೃತಿಯಲ್ಲಿ ಬೇರೆ ಬೇರೆಯವರು ಬರೆದ ಹದಿನಾರು ಭಿನ್ನ ಲೇಖನಗಳಿವೆ. ೨೦೦೪ರಲ್ಲಿ ಕನ್ನಡ ವಿ.ವಿ.ಯಲ್ಲಿ ನಡೆದ ಕಮ್ಮಟದಲ್ಲಿ ಮಂಡಿತವಾದ ವಿಚಾರಗಳನ್ನು ಲೇಖನರೂಪದಲ್ಲಿ ಸಂಗ್ರಹಿಸಿ ಇಲ್ಲಿ ಪ್ರಕಟಿಸಲಾಗಿದೆ. ನಾಣ್ಯಶಾಸ್ತ್ರ, ಲಿಪಿಶಾಸ್ತ್ರ, ಪುರಾತತ್ವ, ಚರಿತ್ರೆ, ಭಾಷೆ, ಶಿಲ್ಪಶಾಸ್ತ್ರ, ಪ್ರಾದೇಶಿಕತೆ, ಸಂಸ್ಕೃತಿ ಹೀಗೆ ಭಿನ್ನ ನೆಲೆಗಳಿಂದ ಶಾಸನಗಳನ್ನು ಇಲ್ಲಿ ಚರ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತ ಇಂಗ್ಲಿಶಿನಲ್ಲಿ ನಡೆದಿರುವ ಕೆಲವು ಮುಖ್ಯ ಅಧ್ಯಯನಗಳ ಸಮೀಕ್ಷೆ, ಅವಲೋಕನ, ವಿಮರ್ಶೆ ಮತ್ತು ಮುಂದಿನ ಅಧ್ಯಯನಗಳ ಸಾಧ್ಯತೆಗಳ ಚರ್ಚೆಯನ್ನು ನಡೆಸಲಾಗಿದೆ. ಕನ್ನಡ ಶಾಸನ ಸಂಶೋಧನೆಯ ಚಾರಿತ್ರಿಕ ಸಮೀಕ್ಷೆ, ವಿಧಾನ, ಸಮಸ್ಯೆ, ಸವಾಲು, ಸಾಧ್ಯತೆಗಳನ್ನು ಇನ್ನಷ್ಟು ವ್ಯಾಪಕವಾದ ನೆಲೆಯಲ್ಲಿ ನಡೆಸಬಹುದಿತ್ತು.

‘ಸಂಶೋಧನೆ ತಾತ್ವಿಕ ಆಯಾಮಗಳು’ (೨೦೧೦) ಎಂಬ ಬಿ.ಎಂ.ಪುಟ್ಟಯ್ಯನವರ ಕೃತಿಯು ಸಾಹಿತ್ಯದ ಗ್ರಹಿಕೆಗಳು, ಇಂದಿನ ಸಾಹಿತ್ಯ ಸಂಶೋಧನೆಯ ತಾತ್ವಿಕತೆಗಳು ಹಾಗೂ ಅವುಗಳ ಬದಲಾಗುತ್ತಿರುವ ನೆಲೆಗಳನ್ನು ಕುರಿತು ಚರ್ಚಿಸುತ್ತದೆ. ಅಲ್ಲದೆ ಇಲ್ಲಿ ಸಾಹಿತ್ಯ ಸಂಶೋಧನೆಯ ವಸ್ತು ಮತ್ತು ವಿಧಾನದ ಸಂಬಂಧಗಳು, ಸಾಹಿತ್ಯ ಸಂಶೋಧನೆ ಮತ್ತು ಜಾಗತೀಕರಣ, ಕೋಮುವಾದ, ದೇಸೀಯತೆ, ಸಂಸ್ಕೃತಿ, ಅಸ್ಪೃಶ್ಯತೆ ಇತ್ಯಾದಿಗಳ ನಡುವಣ ಸಂಬಂಧಗಳನ್ನು ತರ್ಕಬದ್ಧವಾಗಿ ಮತ್ತು ತಾತ್ವಿಕವಾಗಿ ಮಂಡಿಸಲಾಗಿದೆ. ಅಲ್ಲಲ್ಲಿ ಕೆಲವು ದೃಷ್ಟಾಂತ ಮತ್ತು ಉದಾಹರಣೆಗಳ ಮೂಲಕ ಈ ಕೃತಿಯು ಸಮಸ್ಯೀಕರಣವನ್ನು ಚರ್ಚಿಸುತ್ತಲೆ ಸಂಶೋಧನೆಯ ತಾತ್ವಿಕತೆಯನ್ನು/ಗಳನ್ನು ಸಮಸ್ಯೀಕರಿಸುತ್ತದೆ.

ಕಲಬುರ್ಗಿಯವರ ‘ಕನ್ನಡ ಸಂಶೋಧನಾಶಾಸ್ತ್ರ’ (೨೦೦೯) ಕೃತಿಯು ೧೯೯೧ರಲ್ಲೆ ಪ್ರಕಟವಾಗಿದ್ದರೂ ಮತ್ತೆ ಇದು ಹಲವು ಬಾರಿ ಮರುಮುದ್ರಣಗಳನ್ನು ಕಂಡಿದೆ. ಕನ್ನಡದ್ದೆ ಆದ ಒಂದು ಶಾಸ್ತ್ರಶಾಖೆಯಾಗಿ ಸಂಶೋಧನೆಯನ್ನು ಸ್ಥಾಪಿಸುವ ಕೆಲಸವನ್ನು ಈ ಕೃತಿಯು ಮಾಡಹೊರಟಿದೆ. ಸಂಶೋಧನೆಯ ಅರ್ಥ, ಆಕರಗಳು, ಪ್ರಕಾರಗಳು, ಸಂಶೋಧಕನ ಅರ್ಹತೆ, ಮಾದರಿ ಸಂಶೋಧನಾ ಮಹಾಪ್ರಬಂಧವನ್ನು ಬರೆಯುವ ಬಗೆ ಇತ್ಯಾದಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಸಂಶೋಧನಾ ವಿದ್ಯಾರ್ಥಿಗಳನ್ನೆ ಮುಖ್ಯವಾಗಿ ಉದ್ದೇಶಿಸಿ ಈ ಕೃತಿಯನ್ನು ಬರೆಯಲಾಗಿದೆ. ಆದರೂ ಇಲ್ಲಿ ಕನ್ನಡ ಸಂಶೋಧನೆಯ ಭೂತ ಮತ್ತು ಭವಿಷ್ಯತ್ತು ಎರಡನ್ನು ಕುರಿತೂ ವಿಶ್ಲೇಷಣೆ ನಡೆಸಲಾಗಿದೆ. ತಮ್ಮ ಜೀವಿತಾವಧಿಯ ಸಂಶೋಧನಾ ಅನುಭವಗಳನ್ನೆ ಆಧರಿಸಿ ಕಲಬುರ್ಗಿ ಈ ಕೃತಿಯನ್ನು ರಚಿಸಿದ್ದಾರೆ. ವೈಯಕ್ತಿಕವಾಗಿ ಕಲಬುರ್ಗಿಯವರು ಗ್ರಂಥಸಂಪಾದನಾ ಶಾಸ್ತ್ರ, ಹಸ್ತಪ್ರತಿ ಶಾಸ್ತ್ರಗಳಲ್ಲಿ ಅಲ್ಲದೆ ಪ್ರಾಚೀನ ಸಾಹಿತ್ಯ ಚರಿತ್ರೆಯ ಸಂಶೋಧನೆಯಲ್ಲಿ (ಕಾಲ – ದೇಶ – ಮತ ವಿಚಾರಗಳಲ್ಲಿ) ಹೆಚ್ಚು ಪರಿಶ್ರಮ ಉಳ್ಳವರು. ಪದಾರ್ಥ ಚಿಂತನೆ, ನಾಮವಿಜ್ಞಾನ, ಸ್ಥಳನಾಮ, ಛಂದಸ್ಸು, ವೀರಶೈವ ಸಾಹಿತ್ಯ ಇತ್ಯಾದಿಗಳಲ್ಲಿ ಹೆಚ್ಚು ಪರಿಶ್ರಮ ಉಳ್ಳವರು. ಪ್ರಾಚೀನ ಸಾಹಿತ್ಯದ ‘ಹಳೆಯ’ ಸ್ಥಾಪಿತ ‘ಸಂಶೋಧನೆ’ಯ ಮಾದರಿಯನ್ನೆ ಹೆಚ್ಚಾಗಿ ಮೆಚ್ಚಿ ಅನುಸರಿಸುತ್ತ ಇರುವವರು. ಹೀಗಾಗಿ ಇವರ ವಯಕ್ತಿಕ ಅನುಭವದ ಮಿತಿ ಮತ್ತು ವ್ಯಾಪ್ತಿಗಳೇ ಇವರ ಈ ಸಂಶೋಧನಾಶಾಸ್ತ್ರ ಕೃತಿಗೂ ತಗಲಿಕೊಂಡಿವೆ.

ಸಂಗಮೇಶ ಸವದತ್ತಿಮಠ ಅವರ ‘ಕನ್ನಡ ಸಂಶೋಧನೆ: ಮಾರ್ಗ ಮತ್ತು ಇತಿಹಾಸ’ (೨೦೦೬) ಎಂಬ ಕೃತಿಯು ಕನ್ನಡ ಸಾಹಿತ್ಯ ಸಂಶೋಧನೆಯ ತಾತ್ವಿಕತೆಯನ್ನು ಮೊದಲ ಭಾಗದಲ್ಲಿಯೂ ಮತ್ತು ಸಂಶೋಧನೆಯ ಸಂಕ್ಷಿಪ್ತ ಇತಿಹಾಸವನ್ನು ಎರಡನೆ ಭಾಗದಲ್ಲಿಯೂ ನಿರೂಪಿಸುತ್ತದೆ. ೧೯೯೫ರಲ್ಲಿ ಪ್ರಕಟವಾದ ಕನ್ನಡ ಸಾಹಿತ್ಯ ಸಂಶೋಧನ ಮಾರ್ಗ ಮತ್ತು ೨೦೦೩ ರಲ್ಲಿ ಪ್ರಕಟವಾದ ಕನ್ನಡ ಸಂಶೋಧನೆಯ ಇತಿಹಾಸ ಎಂಬ ಎರಡೂ ಕೃತಿಗಳನ್ನು ಈ ಕೃತಿಯಲ್ಲಿ ಸಂಗಮೇಶರು ಒಟ್ಟಿಗೆ ಸೇರಿಸಿ ಪ್ರಕಟಿಸಿದ್ದಾರೆ. ಹಲವು ಕಡೆ ಹಲವಾರು ಆಕರ ಗ್ರಂಥಗಳನ್ನು ಬಳಸಿ ಗ್ರಂಥವನ್ನು ರಚಿಸಿದ್ದರೂ ಎಲ್ಲಿಯೂ ಅಡಿಟಿಪ್ಪಣಿಗಳನ್ನಾಗಲೀ, ಆಕರ ವಿವರಗಳನ್ನಾಗಲೀ, ಪರಾಮರ್ಶನ ಗ್ರಂಥ ವಿವರವನ್ನಾಗಲೀ ಸಂಗಮೇಶರು ನೀಡಿಲ್ಲ. ಮದ್ಯಭಾಗದಲ್ಲಿ ತಮ್ಮದೇ ಸಂಶೋಧನಾ ಪತ್ರಿಕೆಯಾದ ಸಂಶೋಧನಾ ವ್ಯಾಸಂಗದಲ್ಲಿ ಪ್ರಕಟಿಸಿದ ಕೆಲವು ಕಿರು ಬರಹಗಳನ್ನು ಇಲ್ಲಿ ಸೇರಿಸಿ ಪ್ರಕಟಿಸಿದ್ದಾರೆ. ಅಲ್ಲದೆ ಮುಖ್ಯವಾದ ಸಂಶೋಧಕರ ಬರವಣಿಗೆಯ ಕಿರುಪರಿಚಯಗಳನ್ನು ವ್ಯಕ್ತಿಕೇಂದ್ರಿತವಾಗಿ ಮಾಡಿಕೊಟ್ಟಿದ್ದಾರೆ. ಕನ್ನಡ ಸಂಶೋಧನೆಯಲ್ಲಿ ರೂಪಿತಗೊಂಡಿರುವ ಧಾರೆಗಳನ್ನಾಗಲೀ, ಪಂಥಗಳನ್ನಾಗಲೀ, ಒಲವುಗಳನ್ನಾಗಲೀ ಗುರ್ತಿಸಿಲ್ಲ. ಇತಿಹಾಸವನ್ನು ಕೆಲವು ಕಾಲಘಟ್ಟಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಕನ್ನಡ ಸಂಶೋಧನೆಯ ಲಕ್ಷಣಗಳನ್ನು ಕೂಡ ಈ ಕೃತಿಯು ಚರ್ಚೆಗೆ ಎತ್ತಿಕೊಂಡಿಲ್ಲ. ಅಲ್ಲಲ್ಲಿ ಆಯಾ ಕಾಲಘಟ್ಟಗಳ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆಯಾದರೂ ಇದು ಎತ್ತಗೂ ಸಾಲುವುದಿಲ್ಲ. ಇತಿಹಾಸ ಭಾಗ ಮತ್ತು ತಾತ್ವಿಕತೆಯ ಭಾಗಗಳೆರಡನ್ನೂ ಒಟ್ಟಿಗೆ ಅಕ್ಕ ಪಕ್ಕ ಇಟ್ಟು ಪ್ರಕಟಿಸಿಲಾಗಿದೆಯಾಗಿ ಒಂದಕ್ಕೊಂದಕ್ಕೆ ಅಂತಃಸಂಬಂಧ ಇಲ್ಲಿ ಏರ್ಪಟ್ಟಿಲ್ಲ. ಎರಡೂ ಭಾಗಗಳನ್ನು ಸೇರಿಸಿ ಕನ್ನಡ ಸಂಶೋಧನೆಯ ಬಗ್ಗೆ ಮರುಬರವಣಿಗೆ ಮಾಡಬಹುದಾದ ಹೊಳವುಗಳು ಈ ಕೃತಿಯಲ್ಲಿ ಸಿಗುತ್ತವೆ. ಕನ್ನಡ ಸಂಶೋಧನೆಯಲ್ಲಿ ಪ್ರಕಟವಾಗಿರುವ ಕೆಲವು (ಇವರ ಪ್ರಕಾರ ಮುಖ್ಯವೆನಿಸಿದ) ಮುಖ್ಯ ಕೃತಿಗಳನ್ನು ಮತ್ತು ಸಂಶೋಧಕರ ವಿವರಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಹೀಗಾಗಿ ಸಂಶೋಧನೆಯ ಬಗ್ಗೆ ಪ್ರಾಥಮಿಕವಾಗಿ ತಿಳಿಯಬಯಸುವ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನ ಆದೀತು.

ರಹಮತರ ‘ಸಾಂಸ್ಕೃತಿಕ ಅಧ್ಯಯನ’ (೨೦೦೪) ಕೃತಿಯು ನಮ್ಮಲ್ಲಿ ಸಾಂಸ್ಕೃತಿಕ ಅಧ್ಯಯನ ಎಂಬ ಹೆಸರಿನಲ್ಲಿ ನಡೆದಿರುವ ಅಧ್ಯಯನಗಳನ್ನು ಹಾಗೂ ಕನ್ನಡದ ಸಂಸ್ಕೃತಿ ಅಧ್ಯಯನದ ವ್ಯಾಪ್ತಿ, ಲಕ್ಷಣ ಮತ್ತು ಬಗೆಗಳನ್ನು ಸಮೀಕ್ಷಾತ್ಮಕವಾಗಿ ಚರ್ಚಿಸುತ್ತದೆ. ಸಂಸ್ಕೃತಿ ಅಧ್ಯಯನವು ಹೇಗೆ ಅಂತರ್‌ಶಿಸ್ತೀಯ ಮತ್ತು ಬಹುಶಿಸ್ತೀಯ ನೆಲೆಗಳನ್ನು ಪಡೆದಿದೆ ಎಂಬ ವಿವರಗಳು ಇಲ್ಲಿವೆ. ನಮ್ಮಲ್ಲಿ ಚಾಲ್ತಿಯಲ್ಲಿ ಇರುವ ಸಂಸ್ಕೃತಿಯ ಪರಿಕಲ್ಪನೆಗಳು ಮತ್ತು ಸಂಸ್ಕೃತಿ ಅಧ್ಯಯನದ ಭಿನ್ನ ಮಾದರಿಗಳ ಚರ್ಚೆಯು ಇಲ್ಲಿದೆ. ‘ಕನ್ನಡದ ಅಭಿಜಾತ ಸಾಹಿತ್ಯ: ಅಧ್ಯಯನದ ಅವಕಾಶಗಳು, ಆಹ್ವಾನಗಳು’ (೨೦೦೯) ಎಂಬ ಕೃತಿಯಲ್ಲಿ ಟಿ.ವಿ.ವೆಂಕಟಾಚಲಶಾಸ್ತ್ರಿಗಳು ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಯಾವ ಯಾವ ವಲಯಗಳನ್ನು ಅಧ್ಯಯನಕ್ಕೆ ಎತ್ತಿಕೊಳ್ಳಬಹುದು ಎಂಬ ಸೂಚಿ ವಿವರಗಳನ್ನು ನೀಡಿದ್ದಾರೆ. ಈ ಕೃತಿಯಲ್ಲಿ ಗ್ರಂಥಸಾಹಿತ್ಯ ಮತ್ತು ಶಾಸನಸಾಹಿತ್ಯ ಎಂಬ ಎರಡು ವಲಯಗಳಲ್ಲಿ ಇರಬಹುದಾದ ಸಂಶೋಧನೆಯ ಅವಕಾಶ ಮತ್ತು ಸಾಧ್ಯತೆಗಳನ್ನು ಉಲ್ಲೇಖಿಸಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಪ್ರಾಚೀನ ಸಾಹಿತ್ಯದಲ್ಲಿ ಸಂಶೋಧನಾ ಪದವಿಗಾಗಿ ಅಧ್ಯಯನ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಇದು ಸಬ್ಜೆಕ್ಟ್‌ಗೈಡ್ ಆಗಿ ಸಹಾಕಾರಿಯಾದ ಕೃತಿಯಾಗಿದೆ.

‘ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ’ (ಆರ‍್ವಿಯೆಸ್ ಸುಂದರಂ, ಅಕ್ಕಮಹಾದೇವಿ, ಬಿ.ಪಿ.ಆಶಾಕುಮಾರಿ) ಕೃತಿಯು (೨೦೦೫) ಪದವಿಗಾಗಿ ವಿಶ್ವವಿದ್ಯಾಲಯಗಳಲ್ಲಿ ನಡೆದಿರುವ ಕನ್ನಡದ ಸಶೋಧನೆಗಳನ್ನು ಸಮೀಕ್ಷಾತ್ಮಕವಾಗಿ ಚರ್ಚಿಸುತ್ತದೆ. ಇಲ್ಲಿ ಸಂಶೋಧನೆ – ಅಧ್ಯಯನಗಳ ಸ್ವರೂಪ, ವಿಧಾನ, ಲಕ್ಷಣಗಳು, ಧಾರೆಗಳ ಕ್ವಚಿತ್ತಾದ ಚರ್ಚೆಯಿದೆ. ಆದರೆ ಇದರಲ್ಲಿ ಮುಖ್ಯವಾಗಿ ವಿಶ್ವವಿದ್ಯಾಲಯಗಳಲ್ಲಿ ನಡೆದಿರುವ ಸಂಶೋಧನಾ ಅಧ್ಯಯನಗಳ ಪಟ್ಟಿಕೆ (ಸೂಚಿ)ಯೊಂದನ್ನು ವಿಷಯವಾರು ವಿಂಗಡಿಸಿ ನೀಡಲಾಗಿದೆ. ಇದರಿಂದ ನಮ್ಮ ವಿಶ್ವವಿದ್ಯಾಲಯಗಳ ಸಂಶೋಧನೆಗಳ ಹೆಸರು, ವ್ಯಾಪ್ತಿ, ವಸ್ತುಗಳ ಅಜಮಾಸು ಪರಿಚಯ ಆಗುತ್ತದೆ. ನಮ್ಮ ಪದವಿ ಉದ್ದೇಶಿತ ಸಂಶೋಧನೆಗಳ ಅಜಮಾಸು ದಿಕ್ಕುದೆಸೆಗಳನ್ನು ಈ ಕೃತಿಯ ಅವಲೋಕನದಿಂದ ತಿಳಿಯಬಹುದಾಗಿದೆ.

‘ಸಂಶೋಧನೆಯ ಹಾದಿ’ (೨೦೦೪) ಬಂಗಾಳಿಯಲ್ಲಿ ದೇಬಿಪ್ರಸಾದ ಚಟ್ಟೋಪಾಧ್ಯಾಯರು ಬರೆದಿರುವ ಕೃತಿ. ಇದನ್ನು ಕನ್ನಡಕ್ಕೆ ಜಿ.ಕುಮಾರಪ್ಪ ಅನುವಾದಿಸಿದ್ದಾರೆ. ಇದು ಜಗತ್ತಿನಾದ್ಯಂತ ವೈಜ್ಞಾನಿಕ ಮನೋಭಾವ ಮತ್ತು ಸಂಶೋಧನೆ ನಡೆದು ಬಂದ ಹಾದಿಯ ಮೈಲಿಗಲ್ಲುಗಳನ್ನು ವಿವರಿಸುವ ಕೃತಿಯಾಗಿದೆ. ಇಲ್ಲಿ ಸಂಶೋಧನೆಯ ಚಾರಿತ್ರಿಕ ಸಮೀಕ್ಷೆ ಇಲ್ಲ. ಬದಲಿಗೆ ಇಲ್ಲಿ ಮಕ್ಕಳಿಗು ಅರ್ಥವಾಗುವಂತೆ ಸುಲಲಿತವಾಗಿ ವಿಜ್ಞಾನಿಕತೆ ಮತ್ತು ಸಾಂಪ್ರದಾಯಿಕತೆಗಳ ನಡುವಣ ಸಂಘರ್ಷದ ಕಥೆಯನ್ನು ನಿರೂಪಿಸಲಾಗಿದೆ. ಇಂದಿನ ಟರ್ಕಿಯ ನಗರವಾದ ಮಿಲ್ಲಟ್ಸ್‌ನಲ್ಲಿದ್ದ ಖ್ಯಾಲಿಸ್ (ಕ್ರಿ.ಪೂ.೫೮೫), ಇದೇ ನಗರದಲ್ಲಿದ್ದ ಹೆಕ್‌ಡ್ಯೂಸ್ (ಕ್ರಿ.ಪೂ.೫೦೦), ಸರಿಸುಮಾರು ಇವರ ಸಮಕಾಲೀನರಾದ ಭಾರತದ ಚಾರ್ವಾಕರು, ಗ್ರೀಸಿನಲ್ಲಿದ್ದ ಅರಿಸ್ಟಾಟಲ್ (ಕ್ರಿ.ಪೂ.೩೮೫), ಈಜಿಪ್ಟಿನಲ್ಲಿ ಬದುಕಿದವಳಾದ ಹಿಪಾಟಿಯಾ (ಕ್ರಿ.ಶ.೧೦೦), ರೋಮಿನ ಗ್ಲಾಡಿಯೇಟರುಗಳ ಶರೀರವಿಜ್ಞಾನಿಯಾದ ಗ್ಯಾಲನ್ (ಕ್ರಿ.ಶ.೧೫೦), ರೋಮಿನಲ್ಲಿ ಮಧ್ಯಕಾಲದಲ್ಲಿದ್ದ ವೆಸಿಲ್ಯೂಸ್ (ಕ್ರಿ.ಶ.೧೫೪೦), ಆನಂತರ ಇಟಲಿಯಲ್ಲಿ ಬದುಕಿದ್ದ ವಿಜ್ಞಾನಿ ಗೆಲಿಲಿಯೊ (ಕ್ರಿ.ಶ.೧೫೬೪), ಇವನ ಸಮಕಾಲೀನನಾಗಿದ್ದ ಕೊಪರ್ನಿಕಸ್ (ಕ್ರಿ.ಶ.೧೫೪೦) ಹೀಗೆ ಜಗತ್ತಿನಾದ್ಯಂತ ನೂರಾರು ಜನ ಹೇಗೆ ಪುರೋಹಿತಶಾಹಿ ಮತ್ತು ಪ್ರಭುತ್ವಗಳ ಎದುರು ತಮ್ಮ ವೈಜ್ಞಾನಿಕ ಸಂಶೋಧನೆಗಳನ್ನು ಮಂಡಿಸಲು ಹೆಣಗಿದರು ಎಂಬ ಐತಿಹಾಸಿಕ ಪಕ್ಷಿನೋಟವನ್ನು ವೈಚಾರಿಕ ಹಿನ್ನೆಲೆಯಲ್ಲಿ ಇಲ್ಲಿ ಮಂಡಿಸಲಾಗಿದೆ.

ಹೀಗೆ ಕನ್ನಡ ಸಂಶೋಧನೆಯ ತಾತ್ವಿಕ ಧಾರೆಯಲ್ಲಿ ಮಾದರಿ ಸಂಶೋಧನೆಯ ಸ್ವರೂಪವೊಂದು ಹೇಗಿರಬೇಕೆಂಬ ಚರ್ಚೆಗಳು, ಕನ್ನಡ ಸಂಶೋಧನೆ ನಡೆದು ಬಂದ ದಾರಿಯ ಚರ್ಚೆಗಳು, ಸಂಶೋಧನೆಯ ವೈಧಾನಿಕತೆ ಮತ್ತು ತಾತ್ವಿಕತೆಯ ಚರ್ಚೆಗಳು, ವಿಧಾನ ಮತ್ತು ವಸ್ತುವಿನ ಅಂತಃಸಂಬಂಧಗಳ ಚರ್ಚೆಗಳೆಲ್ಲ ನಡೆದಿವೆ. ಅಷ್ಟೆ ಅಲ್ಲ ನಮ್ಮ ಸಂಶೋಧನೆಯು ಕನ್ನಡ ಸಾಹಿತ್ಯ ಸಂಶೋಧನೆ; ಮಾನವಿಕಗಳ ಸಂಶೋಧನೆ; ಸಾಂಸ್ಕೃತಿಕ ಸಂಶೋಧನೆ; ಜಾನಪದ ಸಂಶೋಧನೆ; ವೈಜ್ಞಾನಿಕ ಸಂಶೋಧನೆ; ಹೀಗೆ ನಾಲ್ಕೈದು ಮುಖ್ಯ ಕವಲುಗಳಾಗಿ ಒಡೆದುಕೊಂಡಿರುವುದನ್ನು ಕಾಣಬಹುದು. ಇವುಗಳಲ್ಲು ಸಾಹಿತ್ಯ ಸಂಶೋಧನೆ – ಮಾನವಿಕ ಮತ್ತು ವೈಜ್ಞಾನಿಕ ಸಂಶೋಧನೆ ಎಂಬಂತೆ ಸಂಶೋಧನೆಯಲ್ಲಿ ಮೂರು ಸ್ಪಷ್ಟ ಕವಲುಗಳು ಉಂಟಾಗಿರುವುದನ್ನು ಗುರುತಿಸಿಕೊಳ್ಳಬಹುದು. ಇವುಗಳ ನಡುವಿನ ಗೆರೆಗಳು ಭಿನ್ನವಾಗಿ ಢಾಳಾಗಿ ಕಾಣುತ್ತಲೂ ಆಗಾಗ ಕಲಸಿಕೊಳ್ಳುತ್ತಲೂ ಇರುವುದನ್ನು ಕೂಡ ನಮ್ಮ ತಾತ್ವಿಕ ಧಾರೆಯು ಕಾಣಿಸಿದೆ. ಹಾಗೆ ನೋಡಿದರೆ ಕಲಬುರ್ಗಿ ಮಾತ್ರವಲ್ಲ ಪುಟ್ಟಯ್ಯ, ಚಂದ್ರ ಪೂಜಾರಿ, ರಹಮತ್ ಹೀಗೆ ಎಲ್ಲರೂ ತಮ್ಮ ತಮ್ಮ ಅನುಭವಗಳನ್ನೆ ಆಧರಿಸಿ ಬರೆದಿರುವುದರಿಂದ ಇವರ ಕೃತಿಗಳು ಅನುಭವಜನ್ಯ ಕೃತಿಗಳಾಗಿಯೂ ವೈಯಕ್ತಿಕ ಕಾಣ್ಕೆಗಳನ್ನೆ ಸಾರ್ವತ್ರಿಕ ಸಂಗತಿಗಳೆಂಬಂತೆ ಬಿಂಬಿಸುವ ಕೃತಿಗಳಾಗಿಯೂ ಇವೆ. ರವೀಂದ್ರನಾಥ, ಅಮರೇಶರ ಕೃತಿಗಳು ಸಂಪಾದಿತ ಕೃತಿಗಳಾಗಿದ್ದಾಗ್ಯೂ ಅಲ್ಲು ಕೂಡ ಬೇರೆ ಬೇರೆಯವರ ವ್ಯಕ್ತಿನಿಷ್ಟ ದೃಷ್ಟಿಗಳೇ ಮಂಡಿತವಾಗಿವೆ. ವ್ಯಕ್ತಿನಿಷ್ಟತೆ, ವಸ್ತುನಿಷ್ಟತೆ, ಸಾಮಾಜಿಕತೆಗಳನ್ನು ಹೇಗೆ ಬೇರ್ಪಡಿಸಲಾಗದು ಮತ್ತು ಇವೆಲ್ಲವು ಹೇಗೆ ಒಂದರೊಳಗೊಂದು ನುಡಿಗೊಂಡಿರುತ್ತವೆ ಎಂಬುದಕ್ಕೆ ಈ ಎಲ್ಲ ಕೃತಿಗಳೂ ಉದಾಹರಣೆಗಳಾಗಿವೆ. ಇವೆಲ್ಲ ಕೃತಿಗಳೂ ನಮ್ಮ ಕನ್ನಡ ಸಂಶೋಧನಾ ಕ್ಷೇತ್ರದ ಅರ್ಥ, ವ್ಯಾಪ್ತಿಗಳು ನಿಜವಾಗಿಯೂ ಆಚರಣೆಯಲ್ಲಿ ಹೇಗೆ ಬಹುಮುಖಿಯಾಗಿವೆ ಎಂಬುದನ್ನು ಅಭಿವ್ಯಕ್ತಿಸುತ್ತಿವೆ. (ನೋಡಿ; ತತ್ವಧಾರೆಯ ಕೃತಿಗಳ ಪಟ್ಟಿಗೆ ಅನುಬಂಧ – ೨)

ರಾಜ್ಯಶಾಸ್ತ್ರ, ಇತಿಹಾಸ, ಭೌತಶಾಸ್ತ್ರ, ರಸಾಯನಶಾಸ್ತ್ರ, ಅರ್ಥಶಾಸ್ತ್ರ ಎಂಬಂತೆ ಸಂಶೋಧನೆ ಎನ್ನುವುದು ಕೂಡ ಒಂದು ಶಾಸ್ತ್ರ. ಒಂದು ಶಿಸ್ತು ಎಂದು ನಮ್ಮಲ್ಲಿ ಭಾವಿಸಲಾಗಿದೆ. ಹಾಗೆಯೆ ಇದು ಎಲ್ಲ ಶಿಸ್ತುಗಳಲ್ಲಿಯೂ ಇರಬಹುದಾದ ಒಂದು ವಿಶಿಷ್ಟ ಪರಿಶೀಲನಾ ಕಾರ್ಯ ಅಥವಾ ಶಿಸ್ತೀಯವಾದ ವಲಯ ಎಂದೂ ಭಾವಿಸಲಾಗಿದೆ. ಹೀಗಾಗಿ ಒಂದೊಂದು ಶಿಸ್ತುಗಳ ಸಂಶೋಧನೆಯಲ್ಲಿಯೂ ಇದರ ತಾತ್ವಿಕತೆ ಮತ್ತು ವೈಧಾನಿಕತೆಗಳು ಭಿನ್ನವಾಗಿರುತ್ತವೆ. ಮತ್ತು ಸಾಮಾನ್ಯವಾದ ಲಕ್ಷಣ – ತತ್ವಗಳನ್ನು ಇದರಲ್ಲಿ ಗುರ್ತಿಸಬಹುದು ಎಂಬ ಎರಡೂ ತೆರನ ನಂಬಿಕೆಗಳು ಇದರ ಕುರಿತು ಇವೆ. ಹಾಗೆಯೆ ಸಂಶೋಧನೆಯಲ್ಲಿ ಸೈದ್ಧಾಂತಿಕ ಸಂಶೋಧನೆ ಮತ್ತು ಅನ್ವಯಿಕ ಸಂಶೋಧನೆ ಎಂದು ಸ್ಥೂಲವಾಗಿ ಎರಡು ಬಗೆಗಳಿವೆ. ಮತ್ತು ಕಲೆ, ಮಾನವಿಕ, ವೈಜ್ಞಾನಿಕ ಎಂದು ಸಂಶೋಧನೆಗಳನ್ನು ಸ್ಥೂಲವಾಗಿ ಮೂರಾಗಿ ವರ್ಗೀಕರಿಸಿಕೊಳ್ಳಬಹುದು ಎಂಬ ನಂಬಿಕೆಗಳೂ ಇಲ್ಲಿ ಚಾಲ್ತಿಯಲ್ಲಿವೆ. ಇಷ್ಟೇ ಅಲ್ಲದೆ ಸಂಶೋಧನೆಯನ್ನು ಅ)ಕ್ಷೇತ್ರವಾರು ಆಗಿ (ಇತಿಹಾಸ, ಸಾಹಿತ್ಯ, ವಿಜ್ಞಾನ, ಸಂಖ್ಯಾಶಾಸ್ತ್ರ, ಭೌಗೋಳಿಕ ಸಂಶೋಧನೆಗಳು ಎಂಬಂತೆ) ಮತ್ತು ಆ)ವೈಧಾನಿಕವಾರು ಆಗಿ (ವಿವರಣಾತ್ಮಕ, ಕೋಷ್ಟಕೀಯ – ಸಂಖ್ಯಾಶಾಸ್ತ್ರೀಯ, ತೌಲನಿಕ, ಆಕರಶೋಧೀಯ, ಅನ್ವಯಿಕ, ತಾತ್ವಿಕ – ಸೈದ್ಧಾಂತಿಕ ಸಂಶೋಧನೆಗಳು ಎಂಬಂತೆ) ಇ)ಅಂತರ್‌ಶಿಸ್ತೀಯವಾರು ಆಗಿ ಹೀಗೆ ಕೂಡ ಸಂಶೋಧನೆಗಳನ್ನು ವರ್ಗೀಕರಿಸಿಕೊಳ್ಳುವ ಪದ್ಧತಿಯೂ ಈ ತಾತ್ವಿಕ ಧಾರೆಯಲ್ಲಿ ಇದೆ. ಇದೆಲ್ಲದರ ಆಚೆಗೆ ಕನ್ನಡದ ಸಂಶೋಧನಾ ಕ್ಷೇತ್ರದಲ್ಲಿ ಯಾವ ಯಾವ ಪಂಥ – ಧಾರೆಗಳು, ಒಲವುಗಳು ನಿಜವಾದ ಆಚರಣೆಯಲ್ಲಿ ಮೈತಳೆದಿವೆ ಎಂಬ ಶೋಧನೆ ನಮ್ಮಲ್ಲಿ ತೀರಾ ಕಡಿಮೆ.

ಕನ್ನಡ ಸಂಶೋಧನೆಯ ಐತಿಹಾಸಿಕ ವಿಶ್ಲೇಷಣೆಯನ್ನು ನಡೆಸಿರುವ ಸವದತ್ತಿಮಠ ಅವರು ಈ ಚರಿತ್ರೆಯನ್ನು ೧. ಆರಂಭಕಾಲ (೧೮೫೦ರಿಂದ ೧೯೫೦) ೨. ಮಧ್ಯಕಾಲ (೧೯೫೦ ರಿಂದ ೧೯೭೫) ೩. ಆಧುನಿಕ ಕಾಲ (೧೯೭೬ರಿಂದ ೨೦೦೦) ಎಂದು ಮೂರು ಬಗೆಯಾಗಿ ವಿಂಗಡಿಸಿಕೊಂಡರೆ ಶತಮಾನದ ಸಂಶೋಧನೆ ಕೃತಿಯಲ್ಲಿ ಎನ್.ಎಸ್. ತಾರಾನಾಥರು ೧. ಸಾಮಗ್ರಿ ಸಂಗ್ರಹ ಕಾಲ (೧೯ನೇಶ.) ೨. ಆಕರ ನಿರ್ಮಾಣ ಕಾಲ (೧೯೦೦ರಿಂದ೧೯೨೬) ೩. ಸಾಮಗ್ರಿ ವಿಶ್ಲೇಷಣಾ ಕಾಲ (೧೯೨೭ರಿಂದ ೧೯೫೯) ೪. ಸಂಸ್ಕೃತಿ ಶೋಧನ ಕಾಲ (೧೯೬೦ರಿಂದ ಮುಂದೆ) ಹೀಗೆ ನಾಲ್ಕು ಕಾಲಘಟ್ಟಗಳಲ್ಲಿ ವಿಂಗಡಿಸಿಕೊಂಡಿದ್ದಾರೆ. ಯಾವುದೇ ವಲಯದ ಚಾರಿತ್ರಿಕ ಅವಲೋಕನ ಮಾಡುವಾಗ ಅದನ್ನು ಆರೋಹಣ ನೆಲೆಯಲ್ಲಿ ಭಿನ್ನ ಕಾಲಘಟ್ಟಗಳನ್ನಾಗಿ ವರ್ಗೀಕರಿಸಿಕೊಳ್ಳುವುದು ಇಂಗ್ಲಿಶ್ ಪ್ರಣೀತ ವಿಕಾಸವಾದಿ ಇತಿಹಾಸ ಕಲ್ಪನೆಯ ಆಗಿದೆ. ಯಾವುದೇ ಚರಿತ್ರೆ ಕಾಲದಿಂದ ಕಾಲಕ್ಕೆ ಏರುಗತಿಯಲ್ಲಿ ವಿಕಾಸ ಹೊಂದುತ್ತ ಹೋಗುತ್ತದೆ ಎಂಬುದೇ ಒಂದು ಭ್ರಮಾತ್ಮಕ ಕಲ್ಪನೆ. ಹಾಗೆಯೆ ಒಂದು ಕಾಲಘಟ್ಟದ ಚಟುವಟಿಕೆಗಳು ಇನ್ನೊಂದು ಕಾಲಘಟ್ಟದಲ್ಲಿ ಇಲ್ಲವಾಗುತ್ತವೆ ಅಥವಾ ಗುಣಾತ್ಮಕ ಬೆಳವಣಿಗೆ ಕಾಣುತ್ತವೆ ಎಂಬುದು ಕೂಡ ಒಂದು ಮಿಥ್ಯಾಕಲ್ಪನೆ. ಇಂತಹ ಕಲ್ಪನೆಗಳಿಂದಲೆ ತಾರಾನಾಥ ಮತ್ತು ಸವದತ್ತಿಮಠರು ಚಾರಿತ್ರಿಕ ಸಮೀಕ್ಷೆಗಳನ್ನು ಮಾಡಿದ್ದಾರೆ.[2]

ಮಾನವಿಕ ಎಂಬ ಒಂದು ವಿಶಾಲವಾದ ಚೀಲದಲ್ಲೆ ಸಾಹಿತ್ಯವನ್ನೂ ಈ ಧಾರೆಯಲ್ಲಿ ತುರುಕಲಾಗಿದೆ. ಆದರೆ ಮಾನವಿಕಗಳ ಅಧ್ಯಯನ ತಾತ್ವಿಕತೆ ಮತ್ತು ವೈಧಾನಿಕತೆಗಳು ಎಷ್ಟೋ ವೇಳೆ ಸಾಹಿತ್ಯದ ನೆಲೆಯಲ್ಲಿ ಕೆಲಸಕ್ಕೆ ಬರುವುದಿಲ್ಲ ಎಂಬುದು ನಮ್ಮ ಹಲವಾರು ಸಂಶೋಧನೆಗಳಿಂದಲೆ ಸಾಬೀತಾಗಿದೆ. ಅಲ್ಲದೆ ಈ ವಿಜ್ಞಾನ ಮತ್ತು ಮಾನವಿಕ ಎಂಬ ಬೈನರಿಯೆ ವೈಜ್ಞಾನಿಕ – ಅವೈಜ್ಞಾನಿಕ ಎಂಬ ಅರ್ಥದಲ್ಲಿ ಚಾಲ್ತಿಯಲ್ಲಿ ಇರುವುದರಿಂದ; ಈ ಬೈನರಿಯೇ ಒಂದು ಅಸಮರ್ಪಕ ಕಲ್ಪನೆ ಆಗಿದೆ. ಅಷ್ಟೆ ಅಲ್ಲ ಸಾಹಿತ್ಯ ಎಂಬ ಒಂದೇ ವರ್ಗದ ಅಡಿಯಲ್ಲಿ ಜಾನಪದ, ಶಾಸನಶಾಸ್ತ್ರ, ಛಂದಸ್ಸು, ಮೀಮಾಂಸೆ, ಭಾಷಾಶಾಸ್ತ್ರ ಎಲ್ಲವನ್ನೂ ಒಟ್ಟಿಗೇ ಒಂದೇ ಚೀಲದಲ್ಲಿ ಹಾಕುವ ಕೆಲಸವೂ ನಡೆದಿದೆ. ಆದರೆ ಸೈದ್ಧಾಂತಿಕತೆಯನ್ನು ಚರ್ಚಿಸುವಾಗ ಇದರಿಂದಾಗಿ ಅತಿವ್ಯಾಪ್ತತೆ ಮತ್ತು ಅನಿರ್ಧಿಷ್ಟತೆಗಳು ಹೆಚ್ಚು ಕಾಣಿಸಿಕೊಂಡಿವೆ.

ಇಲ್ಲಿ ಸಂಶೋಧನಾ ಮೀಮಾಂಸೆಯ ಧಾರೆಯನ್ನು ಕುರಿತು ಚರ್ಚಿಸುವಾಗ ಈ ಕುರಿತ ಗ್ರಂಥಗಳನ್ನು ಮಾತ್ರ ಅವಲೋಕಿಸಲಾಗಿದೆ. ಈ ಕುರಿತ ಲೇಖನಗಳನ್ನು ಚರ್ಚಿಸಿಲ್ಲ. ಚೆದುರಿದಂತೆ ಅಲ್ಲಲ್ಲಿ ಹಲವರು ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಅನ್ನೆಲ್ಲ ಕ್ರೋಡೀಕರಿಸಿ ಬೇರೆಯದೊಂದು ಸಂಗ್ರಹವನ್ನು ಮಾಡಬಹುದಾದ ಸಾಧ್ಯತೆಯೂ ಇದೆ. ಇಲ್ಲಿನ ಹಲವಾರು ಕೃತಿಗಳು ಭಿನ್ನ ಲೇಖನಗಳ ಸಂಕಲನಗಳೇ ಆಗಿವೆ ಎಂಬುದೂ ನಿಜವೆ. ಆದರೂ ಇವುಗಳ ಆಚೆಗೂ ಸಾಕಷ್ಟು ಲೇಖನಗಳು ಉಳಿದುಕೊಂಡಿವೆ. ಇಲ್ಲೆಲ್ಲ ಇರುವ ಲೇಖನಗಳಲ್ಲಿ ಸಂಶೋಧನೆಯ ವಿಧಾನಗಳು, ಸಂಶೋಧನೆಯ ಹಾದಿಯ ಸಮಸ್ಯೆಗಳು, ಪ್ರಬಂಧ ರಚನೆಯ ತಾಂತ್ರಿಕ ಸಂಗತಿಗಳು ಹೀಗೆ ಹಲವು ವಿಷಯಗಳನ್ನು ಚರ್ಚಿಸಿರುವಂತೆಯೆ ಸಂಸೋಧನೆ ಎಂದರೆ ಏನು ಎಂಬ ಬಗೆಗೂ ಚರ್ಚಿಸಲಾಗಿದೆ. ಕೆಲವರು ಈ ಬಗೆಗೇ ಹೆಚ್ಚು ಚರ್ಚಿಸಿದ್ದಾರೆ. ಇದನ್ನು ಸಂಶೋಧನೆಯ ತತ್ವ ಎನ್ನುವುದಕ್ಕಿಂತ ಸಂಶೋಧನೆಯ ತತ್ವಜ್ಞಾನ (ಫಿಲಾಸಫಿ ಆಫ್ ರಿಸರ್ಚ್) ಎನ್ನುವುದೇ ಸೂಕ್ತ. (ಕೆ.ವಿ.ನಾರಾಯಣ ಅವರ ಚಿಂತನೆಗಳು ಹೆಚ್ಚು ಈ ನೆಲೆಯವು)

ಇಲ್ಲಿ ಕೆಲವು ಧಾರೆಗಳನ್ನು ಮಾತ್ರ ಗುರ್ತಿಸಲಾಗಿದೆ. ಇದು ಈ ದಶಕದ ಸಂಶೋಧನೆಗೆ ಮಾತ್ರ ಅನ್ವಯಿಸುವ ಸಂಗತಿಯೂ ಅಲ್ಲ. ಕನ್ನಡದ ಸಂಶೋಧನೆಗೆಲ್ಲ ಅನ್ವಯವಾಗುವ ಸಂಗತಿಯೂ ಅಲ್ಲ. ಒಂದು ನಿರ್ದಿಷ್ಟ ಕಾಲಘಟ್ಟವನ್ನು ಮಾತ್ರ ಆಯ್ಕೆ ಮಾಡಿಕೊಂಡಾಗ ಅದು ಅಧ್ಯಯನದ ಅನುಕೂಲವೂ ಹೌದು ಹಾಗೆಯೆ ಮಿತಿಯೂ ಹೌದು. ಅಲ್ಲದೆ ಇಲ್ಲಿ ಹೇಳಿರುವ ಕೆಲವು ಧಾರೆಗಳು ಸ್ವತಂತವೂ ಅಲ್ಲ ಹಾಗೆಯೆ ಕಂಪಾರ್ಟ್‌ಮೆಂಟೀಕೃತವೂ ಅಲ್ಲ. ಇವೆಲ್ಲವೂ ಒಂದೊಂದೂ ಇನ್ನೊಂದರ ಜೊತೆ ಅಂತಃಸಂಬಂಧ ಹೊಂದಿರುವವೇ ಆಗಿವೆ. ಉದಾಹರಣೆಗೆ ಸಾಹಿತ್ಯ ಚರಿತ್ರೆ ಚರ್ಚೆಯು ಆಕರಶಾಸ್ತ್ರದಲ್ಲೂ ಬರಬಹುದು; ಚಾರಿತ್ರಿಕ ಧಾರೆಯೆಂದು ಅದನ್ನೆ ಒಂದು ಪ್ರತ್ಯೇಕ ಧಾರೆಯಾಗಿಯೂ ಗುರ್ತಿಸಿಕೊಂಡು ಚರ್ಚಿಸಬಹುದು. ಹಾಗಾಗಿ ಇಲ್ಲಿನ ಧಾರೆ – ಪಂಥ – ಒಲವುಗಳ ಚರ್ಚೆ ಅಂತಿಮ ಅಲ್ಲ. ಸಮಗ್ರವೂ ಅಲ್ಲ. ಇನ್ನು ಇಲ್ಲಿನ ಕೆಲವು ಲಕ್ಷಣಗಳನ್ನು ನೋಡೋಣ;[1] ಕಪಟರಾಳ ಕೃಷ್ಣರಾಯ, ಕೆ.ಜಿ.ನಾಗರಾಜಪ್ಪ, ಡಿ.ಆರ್.ನಾಗರಾಜ, ಎಂ.ಚಿದಾನಂದಮೂರ್ತಿ, ಎಂ.ಎಂ.ಕಲಬುರ್ಗಿ, ಬಿ.ರಾಜಶೇಖರಪ್ಪ, ಹೀಗೆ ಹಲವಾರು ಜನ ಈ ಧಾರೆಯಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲರ ಬರವಣಿಗೆಯನ್ನು ಇಲ್ಲಿ ಈ ದಶಕದ ಮಿತಿಯ ಕಾರಣಕ್ಕೆ ಚರ್ಚಿಸಲು ಆಗಿಲ್ಲ.

[2] ಕನ್ನಡ ಸಂಶೋಧನೆಯ ಮಾರ್ಗ ಮತ್ತು ಇತಿಹಾಸ – ಸಂಗಮೇಶ ಸವದತ್ತಿಮಠ, ರೂಪರಶ್ಮಿ ಪ್ರಕಾಶನ, ಧಾರವಾಡ, ೨೦೦೬, ಪು: ೧೩ – ೧೫.