ಪದವಿ ನಿಮಿತ್ತದ ಮತ್ತು ಇತರೆ ಎಂದು ಸಂಶೋಧನೆಗಳನ್ನು ಎರಡು ಬಗೆಯಾಗಿ ವರ್ಗೀಕರಿಸಿಕೊಳ್ಳಬಹುದು. ಇವೆರಡೂ ಬಗೆಯ ಸಂಶೋಧನೆಗಳನ್ನು ಇಲ್ಲಿ ಒಟ್ಟಿಗೇ ಗಮನಿಸಲು ಉದ್ದೇಶಿಸಲಾಗಿದೆ. ಮೊದಲಲ್ಲಿ ಈ ದಶಕದಲ್ಲಿ (೨೦೦೧ – ೧೦) ಬಂದಿರುವ ಸಂಶೋಧನೆಗಳಲ್ಲಿ ಯಾವುದಾದರೂ ಪಂಥಗಳು – ಧಾರೆಗಳು – ಒಲವುಗಳು ರೂಪಿತಗೊಂಡಿವೆಯೇ? ಇದ್ದರೆ ಅವು ಯಾವುವು? ಎಂಬ ಭಾಗ ಮತ್ತು ನಂತರದಲ್ಲಿ ಇಲ್ಲಿನ ಸಂಶೋಧನೆಗಳ ಲಕ್ಷಣಗಳು, ಇತಿಮಿತಿಗಳು, ಉಪಯುಕ್ತತೆಗಳು ಮತ್ತು ಸಾಧ್ಯತೆಗಳು ಯಾವುವು ಇರಬಹುದು ಎಂಬ ಎರಡನೆ ಭಾಗ ಹೀಗೆ ಇಲ್ಲಿನ ವಿಚಾರಗಳನ್ನು ಎರಡು ಭಾಗಗಳಾಗಿ ಮಂಡಿಸಲು ಉದ್ದೇಶಿಸಲಾಗಿದೆ. ಈ ೨೦೦೧ – ೨೦೧೧ರ ದಶಕದ ಸಂಶೋಧನೆಯನ್ನು ಕುರಿತು ಮಾತನಾಡುವಾಗ ಗೆರೆಕೊರೆದಂತೆ ಇದಿಷ್ಟೆ ಕಾಲಕ್ಕೆ ಬದ್ಧವಾಗಿ ಮಾತನಾಡಲು ಆಗುವುದಿಲ್ಲ ಎಂಬುದು ಕೂಡ ನಿಜವೆ. ಹಾಗೆ ಯಾವ ಕಾಲವೂ ನಮ್ಮ ಅಳತೆಗಳಿಗೆ ತಕ್ಕಂತೆ ಕತ್ತರಿಸಿಕೊಂಡು ಸಂಭವಿಸುವುದಿಲ್ಲವಲ್ಲ. ಹಾಗಾಗಿ ಅಲ್ಲಲ್ಲಿ ಒಂಚೂರು ಆಚೀಚೆ ಜಿಗಿಯಬಹುದು. ಇರಲಿ ಇದಕ್ಕೆ ಮುಂಚೆ ಪೀಠಿಕೆ ರೂಪದಲ್ಲಿ ಒಂದೆರಡು ವಿಚಾರಗಳನ್ನು ಹೇಳಲಿಕ್ಕಿದೆ.

ಇಂದು ಸಂಶೋಧನೆ ಎಂಬುದೇ ಒಂದು ಮಿಥ್ಯಾಕಲ್ಪನೆಯಾಗಿದೆ. ಸಾಹಿತ್ಯದ ಸಂಶೋಧನೆ ಎಂದರೆ ಇಲ್ಲದ್ದನ್ನು ಹುಡುಕುವುದು; ಕಂಡುಹಿಡಿಯುವುದು; ಹೊಸದಾಗಿ ಏನನ್ನೋ ಹೊರಕ್ಕೆ ತೆಗೆಯುವುದು ಎಂಬುದೆಲ್ಲ ಸುಳ್ಳು. ಇಲ್ಲಿ ಅದೇನಿದ್ದರೂ ಸಂಯೋಜನೆಯಾಗಿ, ವ್ಯಾಖ್ಯಾನವಾಗಿ, ಕಟ್ಟುವಿಕೆ ಅಥವಾ ರಚನೆಯಾಗಿ, ವಿಶ್ಲೇಷಣೆ, ವಿವರಣೆ, ಸಂಕಲನ, ನಿರಚನೆ ಇತ್ಯಾದಿ ಕ್ರಿಯೆಗಳಿಂದ ನಡೆಯುವ ಒಂದು ಕಟ್ಟಾಣಿಕೆಯಾಗಿ ಸಂಭವಿಸಬೇಕು ಅಷ್ಟೆ. ಸಂಶೋಧನೆಯಲ್ಲಿ ಪೂರ್ವಾಗ್ರಹ ಇಲ್ಲದಿರುವಿಕೆ (ಮುಕ್ತತೆ) ಎಂಬುದು ಹೇಗೆ ಒಂದು ಆದರ್ಶವೋ ಹಾಗೆಯೇ ವಸ್ತುನಿಷ್ಟತೆ – ಸಮಗ್ರತೆ – ವೈಜ್ಞಾನಿಕತೆಗಳೂ ಕೂಡ ಆದರ್ಶಗಳೇ ಆಗಿವೆ. ಸಂಶೋಧಕ – ಗ್ರಾಹಕ (ಕೇಳುಗ – ಓದುಗ) – ಸಂಶೋಧನೆಗಳ ನಡುವೆ ಹಲವು ಸಾಂದರ್ಭಿಕ, ಚಾರಿತ್ರಿಕ ಒತ್ತಡಗಳು ಕೆಲಸ ಮಾಡುತ್ತಿರುತ್ತವೆ. ಹೀಗಾಗಿ ಎಲ್ಲ ಸಂಶೋಧನೆಗಳೂ ಸಾಪೇಕ್ಷ ಮತ್ತು ತಾತ್ಕಾಲಿಕ ಆದುವೇ ಅಲ್ಲವೆ? ಯಾವುದೂ ಶಾಶ್ವತ ಅಲ್ಲ. ಎಲ್ಲವೂ ನಿರಂತರ ಗತಿಶೀಲ ಎಂಬ ಪ್ರಕ್ರಿಯಾಮೀಮಾಂಸೆಯೂ ನಮ್ಮಲ್ಲಿ ಈಗಾಗಲೆ ಬಲವಾಗಿ ಮಂಡಿತವಾಗಿದೆ. ಯಾವತ್ತೂ ಶಾಶ್ವತ ಎಂಬುದು ಕೂಡ ಒಂದು ಮಿಥ್ಯಾಕಲ್ಪನೆಯೆ ಅಲ್ಲವೆ? ಎಲ್ಲ ಕೇಂದ್ರಗಳೂ ಛಿದ್ರಗೊಳ್ಳುತ್ತಿವೆ. ಏಕರೂಪೀಕರಣಗಳು, ಏಕಾಕಾರಿ ಚಿಂತನೆಗಳು ಪ್ರಶ್ನಿತಗೊಳ್ಳುತ್ತಿವೆ. ಬಹುಮುಖತೆ – ಪ್ಲೂರಲಿಸಂ ಹೆಚ್ಚು ಸ್ವೀಕಾರಾರ್ಹ ಆಗುತ್ತಿದೆ. ಏಕಸತ್ಯದ ಕಲ್ಪನೆ ಒಡೆದುಹೋಗಿ ಹಲವು ಸತ್ಯಗಳು – ಅರೆಸತ್ಯಗಳು ಇರುತ್ತವೆ ಎಂಬುದು ಈ ದಶಕದ ಮುಂಚೆಯೆ ಮಂಡನೆಯಾಗಿದೆ.

ಸಾಹಿತ್ಯ ಎಂಬುದು ಒಂದು ವಿಶಿಷ್ಟವಾದ ಭಾಷಿಕ ರಚನೆ ಎಂಬ ನಿಲುವಿನಿಂದ ದೂರ ಸರಿದು ಎಲ್ಲ ಅಕ್ಷರ ಪಠ್ಯಗಳೂ ಸಾಹಿತ್ಯಗಳೇ ಎಂಬ ನಿಲುವಿಗೆ ನಾವಿಂದು ಬರುತ್ತಿದ್ದೇವೆ. ಅಥವಾ ಸಾಹಿತ್ಯ ಎಂಬ ವಿಶಿಷ್ಟ ಲಿಪಿರಚನೆ ಶ್ರೇಷ್ಠ; ಮಿಕ್ಕೆಲ್ಲವೂ ಕಡಿಮೆ ಎಂಬ ತಿಳುವಳಿಕೆ ಇಂದು ಪ್ರಶ್ನಿತಗೊಳ್ಳುತ್ತಿದೆ. ನಮ್ಮ ಭಾಷಾಶಾಸ್ತ್ರೀಯ ಅಧ್ಯಯನಗಳು ಸೂಚಕ ಮತ್ತು ಸೂಚಿತಗಳ ನಡುವಣ ಸಂಬಂಧಗಳು ಸದಾ ಬದಲಾಗುತ್ತ ಇರುತ್ತವೆ ಎಂಬ ತಿಳುವಳಿಕೆಯನ್ನು ನಮಗೆ ನೀಡಿವೆ. ಅಲ್ಲದೆ ಪಠ್ಯದ ನಿರಚನೆಯಿಂದ ಎಲ್ಲ ರಚನೆಗಳೂ ಬೃಹತ್ ಸಂಕಥನದ ಎಳೆಗಳು ಎಂಬ ತಿಳುವಳಿಕೆ ನಮಗಿಂದು ಮೂಡಿದೆ. ಹೀಗಿರುವಾಗ ಎಲ್ಲ ಸಂಶೋಧನೆಗಳೂ ಸಂಕಥನಗಳೇ ಆಗಿವೆ. ಬೃಹತ್ ಡಿಸ್ಕೋರ್ಸಿನ ಭಾಗಗಳೇ ಆಗಿವೆ.

ಕನ್ನಡ ಸಂಶೋಧನೆ ಮತ್ತು ಕನ್ನಡ ಸಾಹಿತ್ಯ ಸಂಶೋಧನೆಗಳ ನಡುವೆ ಸ್ಪಷ್ಟವಾದ ವ್ಯತ್ಯಾಸಗಳು ಇಂದು ಉಂಟಾಗಿವೆ. ನಮ್ಮ ಸಂಶೋಧನೆಯನ್ನು ಸಾಹಿತ್ಯ ಮತ್ತು ಸಾಹಿತ್ಯೇತರ ಎಂದು ಎರಡಾಗಿ ವರ್ಗೀಕರಿಸಿಕೊಳ್ಳಲು ಇಂದು ಸಾಧ್ಯವಿದೆ. (ನೋಡಿ ಅನುಬಂಧ – ೫) ಕನ್ನಡ ಮತ್ತು ಕನ್ನಡ ಸಾಹಿತ್ಯ ಸಂಶೋಧನೆಗಳು ಎರಡೂ ಕಲಸಿಕೊಂಡ ಸಂಶೋಧನೆಗಳು ನಮ್ಮಲ್ಲಿವೆ ಎಂಬುದು ಕೂಡ ನಿಜವೆ. ಅನುಬಂಧ – ೫ನ್ನು ನೋಡಿದರೆ ನಿಧಾನಕ್ಕೆ ನಮ್ಮ ಸಂಶೋಧನೆ ಸಾಹಿತ್ಯದಿಂದ ಆಚೆಗೂ ವಿಸ್ತರಣೆ ಆಗುತ್ತಿರುವುದು ಕಾಣುತ್ತದೆ. ಅಥವಾ ಸಂಶೋಧನೆಯು ಸಾಹಿತ್ಯದ ಯಾಜಮಾನ್ಯದಿಂದ ಬಿಡಿಸಿಕೊಳ್ಳತೊಡಗಿದೆ ಎಂದೇ ಹೇಳಬಹುದು. ಕನ್ನಡ ಸಂಶೋಧನೆ ಒಂದು ತುಂಬಾ ವಿಶಾಲವಾದ ಶಿಸ್ತು. ಅದರ ಒಂದು ಕವಲಾಗಿ ಸಾಹಿತ್ಯ ಸಂಶೋಧನೆ ಇದೆ. ಸಾಹಿತ್ಯೇತರ ಸಂಶೋಧನೆಗಳು ಇತರೆಲ್ಲ ಸಾಮಗ್ರಿಗಳಂತೆ ಸಾಹಿತ್ಯವನ್ನೂ ಒಂದು ಸಾಮಗ್ರಿಯಾಗಿ ಬಳಸಬಹುದು. ಆಕರವಾಗಿಯೂ ಬಳಸಬಹುದು. ಹಾಗೆ ಸಾಮಗ್ರಿಯಾಗಿ – ಆಕರವಾಗಿ ಸಾಹಿತ್ಯವು ಬಳಕೆಯಾದಾಗ ಅವುಗಳನ್ನು ಸಾಹಿತ್ಯ ಸಂಶೋಧನೆಗಳು ಎನ್ನಲು ಬರುವುದಿಲ್ಲ.

ಇಂದಿನ ತೀವ್ರ ಜಾಗತೀಕರಣದ ಕಾಲದಲ್ಲಿ ಸಂಶೋಧನೆಯು ವಿಜ್ಞಾನ – ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೇರೆ ಬೇರೆ ರೀತಿಯಲ್ಲೆ ಬೆಳೆಯುತ್ತಿದೆ. ಔಷಧ ಉದ್ಯಮ, ಆಯುಧ ಉದ್ಯಮಗಳು, ಮನರಂಜನಾ ಉದ್ಯಮ, ವಿವಿಧ ಸರಕು ಉತ್ಪಾದನಾ ಮತ್ತು ಮಾರಾಟ ಕೈಗಾರಿಕೆಗಳು ಕಾಲಕಾಲಕ್ಕೆ ತಮಗೆ ಬೇಕಾದ ಸಂಶೋಧನೆಗಳನ್ನು ನಡೆಸುತ್ತಿವೆ. ಹೀಗಾಗಿ ಇಂದು ವ್ಯಾಪಾರೀಕರಣ ಮತ್ತು ಸಂಶೋಧನೆಗಳ ನಡುವೆ ಬಿಡಿಸಿಲಾಗದ ಸಂಬಂಧ ಉಂಟಾಗಿದೆ. ಪ್ರತಿಯೊಂದು ಸಂಶೋಧನೆಗಳೂ ವ್ಯಾಪಾರ ವೃದ್ಧಿಗಾಗಿ, ಹಣ ಸಂಪಾದನೆಗಾಗಿ ನಡೆಯುತ್ತಿವೆ. ಜಾಗತಿಕ ಬಂಡವಾಳಶಾಹಿ ತನಗೆ ಬೇಕಾದಂತೆ ಎಲ್ಲ ಅಪ್ಲೈಡ್ ಸಂಶೋಧನೆಗಳನ್ನೂ ನಿಯಂತ್ರಿಸುತ್ತಿದೆ. ಕೇವಲ ಶೈಕ್ಷಣಿಕ ಸಂಶೋಧನೆಗಳು ಮತ್ತು ಕೆಲವು ಸರ್ಕಾರಿ ಸಂಶೋಧನೆಗಳು ಮಾತ್ರ ಈ ಜಾಗತಿಕ ಬಂಡವಾಳಶಾಹಿಯಿಂದ ತಪ್ಪಿಸಿಕೊಂಡಂತೆ ಕಾಣಬಹುದು. ಆದರೆ ವಾಸ್ತವ ಹಾಗಿಲ್ಲ. ನಮ್ಮ ಶೈಕ್ಷಣಿಕ ಸಂಶೋಧನೆಗಳು ವ್ಯಾಪಾರಲೋಕವನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲವಷ್ಟೆ.

[1]

ಇಲ್ಲೆ ಇನ್ನೊಂದು ವಿಚಾರ ಸ್ಪಷ್ಟಪಡಿಸಬೇಕು. ಇಂದು ಸಾಹಿತ್ಯದಲ್ಲಿ ಪ್ರಕಾರಗಳೂ ಕಲಸಿಕೊಳ್ಳುತ್ತಿವೆ. ಶುದ್ಧ ಪ್ರಕಾರಗಳು ಇಲ್ಲವಾಗುತ್ತಿವೆ. ಸಂಕರತೆಯೆ ವಾಸ್ತವ ಆಗುತ್ತಿದೆ. ಹಾಗಾಗಿ ಸಂಶೋಧನೆಯಲ್ಲಿ ವಿಮರ್ಶೆ, ವಿಚಾರಚಿಂತನೆ, ಸಂಪಾದನೆ, ಅನುವಾದ, ತತ್ವಶಾಸ್ತ್ರ ಚಿಂತನೆಗಳು ಒಳನುಗ್ಗುತ್ತಿವೆ. ಸಂಶೋಧನೆಯೇ ರೂಪಾಂತರಗೊಳ್ಳುತ್ತಿದೆ. ಮಾ ನಿಷಾದದಿಂದ ಹಿಡಿದು ಮದುವೆ ಆಲ್ಬಮ್‌ವರೆಗೆ ಕಾರ್ನಾಡರ ೧೨ ನಾಟಕಗಳನ್ನು ಅಧ್ಯಯನ ಮಾಡಿರುವ ಜಿ.ಎಸ್.ಆಮೂರ ತಮ್ಮ ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ ಎಂಬ ಕೃತಿಯಲ್ಲಿ ಅವರ ಅಧ್ಯಯನವನ್ನು ವಿಮರ್ಶಾತ್ಮಕ ಅಧ್ಯಯನ ಎಂದು ಕರೆದುಕೊಂಡಿದ್ದಾರೆ. ಇಂದಿನ ಸಾಹಿತ್ಯ ಸಂಶೋಧನೆಯು ಬಹುಪಾಲು ವಿಮರ್ಶಾತ್ಮಕ ಅಧ್ಯಯನವಾಗಿಯೆ ರೂಪಾಂತರಗೊಂಡಿದೆ. ನಮ್ಮ ಇತ್ತೀಚಿನ ಯಾವ ಸಾಹಿತ್ಯ ಸಂಶೋಧನೆಯನ್ನು ನೋಡಿದರೂ ಹೀಗೆ ಅನ್ನಿಸುತ್ತದೆ. ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಈಗಾಗಲೇ ಅಧ್ಯಯನ ಎಂಬ ಪರಿಭಾಷೆಯು ಸಾಕಷ್ಟು ವ್ಯಾಪಕವಾಗಿ ಬಳಕೆಯಾಗುತ್ತಿದೆ. ಈ ಬರೆಹದ ಕೊನೆಗಿರುವ ಅನುಬಂಧದಲ್ಲಿನ (ಪದನಿಮಿತ್ತ) ಪಿಎಚ್.ಡಿ. ಪ್ರಬಂಧಗಳ ತಲೆಬರಹಗಳನ್ನು ನೋಡಿದರೇನೆ ಇದು ಹೇಗೆಲ್ಲ ಬಳಕೆ ಆಗುತ್ತಿದೆ ಎಂದು ಕಾಣಬಹುದು. ಒಂದು ಅಧ್ಯಯನ, ಸಾಂಸ್ಕೃತಿಕ ಅಧ್ಯಯನ, ತೌಲನಿಕ ಅಧ್ಯಯನ, ಸಾಮಾಜಿಕ ನೆಲೆಗಳ ಅಧ್ಯಯನ ಹೀಗೆ ಹಲವು ಕವಲುಗಳಲ್ಲಿ ಸಂಶೋಧನೆಯು ಅಧ್ಯಯನವಾಗಿ ಹೊರಳಿಕೊಂಡಿದೆ. ಕೆಲವು ಟೈಟಲ್ಲುಗಳಲ್ಲಿ ಅಧ್ಯಯನ ಎಂಬ ಪದ – ಪರಿಕಲ್ಪನೆ ಬಳಸದಿದ್ದರೂ; ಅವುಗಳ ಒಳಗಡೆ ಇದರ ಬಳಕೆ ಸಾಕಷ್ಟು ಆಗಿರುವುದನ್ನು ಕಾಣಬಹುದು. ಇಷ್ಟಕ್ಕು ಯಾವುವು ಒಂದು ಅಧ್ಯಯನಗಳಲ್ಲ? ಯಾವುವು ಸಾಂಸ್ಕೃತಿಕ ಅಧ್ಯಯನಗಳಲ್ಲ? ತೌಲನಿಕತೆಯನ್ನೆ ಬಳಸದ ಅಧ್ಯಯನಗಳಾದರೂ ನಮ್ಮಲ್ಲಿ ಇರುವವೆ? ಇರಲಿ ಮೊದಲಿಗೆ ನಮ್ಮ ಈ ದಶಕದ ಸಂಶೋಧನೆಯಲ್ಲಿನ ಧಾರೆಗಳು – ಒಲವುಗಳು ಯಾವುವೆಂದು ನೋಡೋಣ;* ಈ ಲೇಖನವು ಹಲವು ಕಂಪಾರ್ಟ್‌ಮೆಂಟುಗಳಿಗೆ ಅಧ್ಯಯನಗಳನ್ನು ಹಾಕಲು ಪ್ರಯತ್ನಿಸಿರುವಂತೆ ಕಾಣಬಹುದು. ಅವುಗಳು ಖಚಿತವಾಗಿ ಚರ್ಚಿಸಿರುವ ಆಯಾ ಚೀಲಗಳಲ್ಲೆ ಸೇರಬೇಕು, ಸೇರುತ್ತವೆ ಎಂದೇನಿಲ್ಲ. ಇಲ್ಲಿನ ಕೆಲವು ಅಧ್ಯಯನಗಳನ್ನು ನೋಡಿದಾಗ ಅರೆ ಇವು ಬೇರೆಡೆ (ಬೇರೆ ಧಾರೆಯ ಅಡಿ) ಚರ್ಚಿತವಾಗಬೇಕಿತ್ತಲ್ಲ ಎನ್ನಿಸಬಹುದು. ಇಂಥವು ಕೆಲವು ಏಕಕಾಲಕ್ಕೆ ಬಿನ್ನ ಚಹರೆಗಳನ್ನು ಹೊಂದಿರುವ ಅಧ್ಯಯನಗಳೂ ಆಗಿವೆ. ಹಾಗೆ ನೋಡಿದರೆ ಯಾವ ಅಧ್ಯಯನಗಳೂ ಒಂದೆ ಧಾರೆಗೆ ಸಂಪೂರ್ಣವಾಗಿ ಸೇರುವುದಿಲ್ಲ. ಹಲವು ಧಾರೆಗಳ ಚಹರೆಗಳನ್ನು ಹೊಂದಿರುವುದೇ ನಮ್ಮ ಅಧ್ಯಯನಗಳ ಒಂದು ಲಕ್ಷಣವಾಗಿದೆ.

[1] ಹೆಚ್ಚಿನ ವಿವರಗಳಿಗೆ ನೋಡಿ: ಸಂಶೋಧನೆ: ಪರಿಕಲ್ಪನೆ (ಲೇಖನ) – ಕೆ.ವಿ.ನಾರಾಯಣ, ತೊಂಡುಮೇವು ಕಂತೆ ಒಂದು, ಬರಹ ಪಬ್ಲಿಶಿಂಗ್ ಹೌಸ್, ಬೆಂಗಳೂರು, ೨೦೧೦.