ವಿಚಾರ ಚಿಂತನೆ – ವಿಮರ್ಶೆ – ಅಧ್ಯಯನಗಳ ಟಕ್ಕಾಟಿಕ್ಕಿ – ಅಪ್ಲೈಡ್ ಯೋಚನೆಗಳು

ನಮ್ಮ ಅಧ್ಯಯನವು ವಿಮರ್ಶಾತ್ಮಕ ಅಧ್ಯಯನವಾಗಿ; ಸಂಶೋಧನಾತ್ಮಕ ಅಧ್ಯಯನವಾಗಿ ರೂಪಾಂತರಗೊಂಡಿರುವ ವಿಚಾರವನ್ನು ಈಗಾಗಲೇ ಹೇಳಲಾಗಿದೆ. ಇನ್ನೊಂದೆರಡು ಉದಾಹರಣೆಗಳ ಮೂಲಕ ವಿಚಾರಸಾಹಿತ್ಯ, ವಿಮರ್ಶಾಸಾಹಿತ್ಯ ಮತ್ತು ಅಧ್ಯಯನ ಸಂಕಥನಗಳು ಕಲಸಿಕೊಳ್ಳುವ ಅಂಶವನ್ನು ಸ್ಪಷ್ಟ ಪಡಿಸುತ್ತೇನೆ.

‘ಜಾಗತೀಕರಣದ ಐಡಿಯಾಲಜಿ ಮತ್ತು ಮಾನವ ಹಕ್ಕುಗಳು’ (೨೦೦೭) ಎಂಬ ಕೃತಿಯಲ್ಲಿ ಡಾಮಿನಿಕ್ ಅವರು ಧರ್ಮ, ಜಾತಿ, ಚಳವಳಿಗಳು ಮತ್ತು ಇಂದಿನ ನಮ್ಮ ಸಾಮಾಜಿಕ ಸಂಸ್ಥೆಗಳು ಜಾಗತೀಕರಣದಿಂದ ಪಡೆದು ಕೊಳ್ಳುತ್ತಿರುವ ರೂಪಾಂತರಗಳನ್ನು ಚರ್ಚಿಸಿದ್ದಾರೆ. ಶಿಕ್ಷಣ ಹಕ್ಕು, ಉದ್ಯೋಗದ ಹಕ್ಕು, ನೀರಿನ ಹಕ್ಕು, ಆರೋಗ್ಯದ ಹಕ್ಕು, ಜೀವಭದ್ರತೆಯ ಹಕ್ಕು, ಹೀಗೆ ಹಲವು ಹಕ್ಕುಗಳ ಮೇಲಿನ ಜಾಗತೀಕರಣದ ಪ್ರಭಾವಗಳನ್ನು ಈ ಕೃತಿ ಶೋದಿಸುತ್ತದೆ. ಈ ಜಗತ್ತು ಮಾರಾಟಕ್ಕಿಲ್ಲ ಎಂಬ ನಿಲುವಿಗೆ ಈ ಕೃತಿ ಅಂತಿಮವಾಗಿ ತಲುಪುತ್ತದೆ. ಹಾಗೆಯ ಜಾಗತೀಕರಣದಿಂದ ಉಂಟಾಗಿರುವ ಸ್ಥಳೀಯ ಜನತೆಗಳ ಅಧೀನತೆ, ಪರಕೀಯತೆ ಮತ್ತು ಪರಾವಲಂಬಿತನಗಳನ್ನು ಈ ಕೃತಿ ಪರಿಶೀಲಿಸುತ್ತದೆ.

ಬಹುಮುಖಿ (೨೦೦೫) ಕೆ. ಕೇಶವ ಶರ್ಮ ಅವರ ಕಾರಂತರ ಕಾದಂಬರಿಗಳ ಕುರಿತ ಅಧ್ಯಯನ. ವಸಾಹತುಶಾಹಿ ಅನುಭವದ ಹಿನ್ನೆಲೆಯಲ್ಲಿ ಸಾಮಾಜಿಕ ಚರಿತ್ರೆಯ ಭಾಗವಾಗಿ ಕಾರಂತರ ಕಾದಂಬರಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಅಲ್ಲದೆ ಜಾತಿ, ಕುಟುಂಬ, ಬಂಧುತ್ವ ಇತ್ಯಾದಿ ಸಾಮಾಜಿಕ ಸಂಸ್ಥೆಗಳ ನಿರ್ವಚನದ ಹಿನ್ನೆಲೆಯಲ್ಲಿ; ಪ್ರಭುತ್ವ ಮತ್ತು ರಾಷ್ಟ್ರೀಯತೆಗಳ ಚರ್ಚೆಯ ಸಾಧನವಾಗಿ ದೇಶೀಯೆತೆ – ಪ್ರಾದೇಶಿಕತೆಗಳ ನಿರ್ವಚನದ ಸಾಮಗ್ರಿಯಾಗಿ ಹೀಗೆ ಭಿನ್ನ ನೆಲೆಗಳಿಂದ ಕಾರಂತರ ಕಥನಗಳನ್ನು ಅಧ್ಯಯನಕ್ಕೆ ಇಲ್ಲಿ ಗುರಿಪಡಿಸಲಾಗಿದೆ. ಡಾಮಿನಿಕ್ ಅವರ ಕೃತಿ ವಿಚಾರಸಾಹಿತ್ಯ ಮತ್ತು ಸಂಶೋಧನೆಗಳ ನಡುವಿನ ಅಳಿಸಿ ಹೋದ ಗೆರೆಗಳಿಗೆ ಉದಾಹರಣೆಯಾದರೆ; ಶರ್ಮರ ಕೃತಿ ಸಾಹಿತ್ಯವಿಮರ್ಶೆ ಮತ್ತು ಸಂಶೋಧನೆಗಳ ನಡುವಿನ ಗೆರೆಗಳು ಕಲಸಿಕೊಂಡಿರುವುದಕ್ಕೆ ಉದಾಹರಣೆಯಾಗಿದೆ. ಡಾಮಿನಿಕ್ ಕೃತಿ ಸಾಹಿತ್ಯೇತರ – ಸಾಮಾಜಿಕ ಚರಿತ್ರೆಯನ್ನು ಚಿಕಿತ್ಸಕ ವಿವೇಕದಿಂದ ವಿಮರ್ಶಿಸಿ ಜಾಗತೀಕರಣದ ಭಿನ್ನ ಪರಿಣಾಮಗಳನ್ನು ಚರ್ಚಿಸುತ್ತದೆ. ಎರಡನೆ ಕೃತಿ ಸಾಹಿತ್ಯವನ್ನು ಸಾಮಾಜಿಕ ಚರಿತ್ರೆಯ ಆಕರವೆಂದು ಭಾವಿಸಿ ಅದೇ ಕೆಲಸವನ್ನು ಮಾಡುತ್ತದೆ. (ವಸಾಹತುಶಾಹಿ ಅನುಭವದ ಚರ್ಚೆಯು ಜಾಗತೀಕರಣದ ಚರ್ಚೆಯೆ ಅಲ್ಲವೆ?) ಅಲ್ಲದೆ ಸಾಹಿತ್ಯದಲ್ಲಿ ಸಮಾಜದ ರೋಗಗಳನ್ನು ಗುಣಪಡಿಸಬಲ್ಲ ಮದ್ದುಗಳು ಇರುತ್ತವೆ ಎಂಬುದು ಇವರ ಧೋರಣೆಯಾಗಿದೆ.

[1]

ವಿಚಾರ ಚಿಂತನೆ, ಸಂಪಾದನೆ, ಸಂಶೋಧನೆ ಎಂಬ ಸಾಹಿತ್ಯದ ಪ್ರಾಕಾರಿಕ ವರ್ಗೀಕರಣಗಳು ಎಲ್ಲಾ ಬರವಣಿಗೆಯಲ್ಲೂ ಪಾಲನೆಯಾಗುವುದಿಲ್ಲ. ಈ ರೀತಿಯ ಪ್ರಕಾರಿಕ ವರ್ಗಿಕರಣಗಳು ಎಷ್ಟೋ ವೇಳೆ ಮುರಿದು ಹೋಗುತ್ತವೆ. ಮಹದೇವ ಶಂಕನಪುರ ಅವರ ‘ಮಾರಿಹಬ್ಬಗಳು’ (೨೦೦೧), ರಹಮತ್ ಅವರು ಸಂಪಾದಿಸಿರುವ ಬಾಬಾ, ದತ್ತ ವಿವಾದದ ಸುತ್ತ, ಎಸ್.ಆರ್.ಭಟ್ – ಜಿ.ರಾಜಶೇಖರ್ – ಕೆ.ಫಣಿರಾಜ್ ಬರೆದಿರುವ ‘ಕೋಮುವಾದದ ಕರಾಳ ಮುಖಗಳು’ (೨೦೦೫), ದು. ಸರಸ್ವತಿ ಅವರು ಸಂಪಾದಿಸಿರುವ ಕರ್ನಾಟಕ ಸಂದರ್ಭದಲ್ಲಿ ಕೋಮುವಾದ (೨೦೦೬), ಫಾದರ್ ಚಸರಾ ಮತ್ತು ಸಿ.ಜಿ. ಲಕ್ಷ್ಮೀಪತಿ ಅವರು ಸಂಪಾದಿಸಿರುವ ‘ಮಂತಾತರ ಸತ್ಯಾನ್ವೇಷಣೆ’ (೨೦೦೯), ಪಿ.ಸಂಗೀತ ಅವರ ‘ಗಣಿಗಾರಿಕೆ ಮತ್ತು ಪರಿಸರ’ (೨೦೦೭), ಎಂ.ಭಾಗ್ಯಲಕ್ಷ್ಮಿ ಸಂಪಾದಿತ ‘ಗಣಿಗಾರಿಕೆ ಮತ್ತು ಅಭಿವೃದ್ಧಿ’ (೨೦೦೭), ಸಿ.ಜಿ.ಲಕ್ಷ್ಮೀಪತಿಯವರ ‘ಕ್ಯಾಸ್ಟ್ ಕೆಮಿಸ್ಟ್ರಿ’ (೨೦೦೭), ಮುಜಾಫರ್ ಅಸ್ಸಾದಿ ಅವರ ಲೇಖನ ಸಂಕಲನಗಳಾದ ಇನ್ನೊಂದು ಮುಖ (೨೦೦೯), ಮತ್ತು ಕರ್ನಾಟಕದಲ್ಲಿ ಐಡೆಂಟಿಟಿ ರಾಜಕೀಯ, ರೈತ, ರೈತಹೋರಾಟ ಹಾಗೂ ಸಾಮಾಜಿಕ ಚಳವಳಿ, (೨೦೧೦) ಪ್ರಸನ್ನ ಅವರ ಯಂತ್ರಗಳನ್ನು ಕಳಚೋಣ ಬನ್ನಿ (೨೦೦೯) ಮೊದಲಾದ ಪುಸ್ತಕಗಳು ಇವೆಲ್ಲವೂ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಸಾಮಾಜಿಕ ಚಿಂತನೆ ಎಂಬಿತ್ಯಾದಿ ಪ್ರಕಾರಿಕ ವರ್ಗೀಕರಣಗಳನ್ನು ಮುರಿದು ಹಾಕಿವೆ. ಅಷ್ಟೆ ಅಲ್ಲ ಸಾಹಿತ್ಯ ಮತ್ತು ಸಾಹಿತ್ಯೇತರ ಎಂಬ ವರ್ಗೀಕರಣಗಳನ್ನೂ ಮುರಿದು ಹಾಕಿವೆ. ಸಾಹಿತ್ಯವೆಂಬ ಪರಿಕಲ್ಪನೆಯನ್ನೆ ವಿಸ್ತರಿಸಿವೆ.

ನಮ್ಮ ಇಂದಿನ ವರ್ತಮಾನದ ಜ್ವಲಂತ ಸಮಸ್ಯೆಗಳಾದ ಭಯೋತ್ಪಾದನೆ, ಕೋಮುವಾದ, ಮತಾಂತರ, ಮಕ್ಕಳು – ಮಹಿಳೆ – ದಲಿತ – ಬುಡಕಟ್ಟು ಇತ್ಯಾದಿ ಅಲಕ್ಷಿತರ ಮೇಲಿನ ದೌರ್ಜನ್ಯಗಳು, ಭೂ ಸ್ವಾಧೀನ, ರೈತರ ಆತ್ಮಹತ್ಯೆ, ನೀರು – ಬೀಜಗಳ ಕುರಿತ ಸ್ವಾತಂತ್ರ್ಯ, ಯಂತ್ರನಾಗರೀಕತೆಯ ಕರಾಳತೆ, ಮೀಸಲಾತಿಯ ಅಪಹರಣ, ಪರಿಸರವಾದ, ಪರಿಸರಸ್ತ್ರೀವಾದ (ಇಕೊಫೆಮಿನಿಸಂ) ಇತ್ಯಾದಿಗಳ ಕುರಿತು ತೀವ್ರವಾಗಿ ಈ ಕೃತಿಗಳು ಚರ್ಚಿಸುತ್ತವೆ. ಸಂಶೋಧನೆಯ – ಅಧ್ಯಯನದ ಒತ್ತಾಸೆ ಇಲ್ಲದೆ ಇಂತಹ ಕೃತಿಗಳನ್ನು ಕಟ್ಟಲು ಆಗುವುದಿಲ್ಲ. ಅಸಮಾನತೆಯ ಭಿನ್ನ ಕಾರಣ ಪರಿಣಾಮಗಳು, ಯಾಜಮಾನ್ಯದ ನವೀನ ಸ್ವರೂಪಗಳು, ಒಳಗೊಳ್ಳುವ ಮತ್ತು ಹೊರಗಿಡುವ ರಾಜಕಾರಣಗಳು, ಅಭಿವೃದ್ಧಿ ಮೀಮಾಂಸೆ ಮತ್ತು ಬಂಡವಾಳಶಾಹಿ ರಾಜಕಾರಣ ಇವೆಲ್ಲವು ಜಾಗತೀಕರಣದಿಂದ ಪಡೆದುಕೊಂಡಿರುವ ಹೊಸ ಅವತಾರಗಳನ್ನು ಮತ್ತು ಅವುಗಳನ್ನು ಎದುರಿಸಬಹುದಾದ ಮಾರ್ಗಗಳನ್ನು ಈ ಕೃತಿಗಳು ಚರ್ಚಿಸುತ್ತವೆ. ಸಾಹಿತ್ಯ ಮತ್ತು ಸಾಹಿತ್ಯೇತರ ಎಂಬ ವರ್ಗಿಕರಣವನ್ನು ಒಡೆದು ಹಾಕುವ ಸಾಮಾಜಿಕ – ಸಾಂಸ್ಕೃತಿಕ ಅಧ್ಯಯನಗಳ ಈ ರೀತಿಯ ಬಹು ದೊಡ್ಡ ಧಾರೆಯೇ ಈ ದಶಕದಲ್ಲಿ ಬರವಣಿಗೆಯಲ್ಲಿ ಬೆಳೆದಿದೆ. ಸಾಹಿತ್ಯವಿಮರ್ಶೆ – ಅಧ್ಯಯನವು ಸಾಹಿತ್ಯ ಸಂಕಥನವಾಗಿ; ಅದು ಸಂಸ್ಕೃತಿ ಸಂಕಥನವಾಗಿ ಹೊರಳಿಕೊಳ್ಳುತ್ತಿರುವುದು ಈ ದಶಕದ ಲಕ್ಷಣವಾಗಿದೆ. ಸಾಹಿತ್ಯ ವಿಮರ್ಶೆ – ವಿಶ್ಲೇಷಣೆಗಳು ಕೇವಲ ಕೃತಿವಿಶ್ಲೇಷಣೆ, ಮೌಲ್ಯಮಾಪನಗಳಿಗೆ ನಿಲ್ಲದೆ ಅವುಗಳ ಸಾಮಾಜಿಕ ಉಪಯುಕ್ತತೆ ಏನು ಎಂಬ ಪ್ರಶ್ನೆಗೆ ಚಲಿಸುತ್ತವೆ.

ವಿಜ್ಞಾನದಲ್ಲಿ ಅಪ್ಲೈಡ್ ಸೈನ್ಸ್ ಇರುವಂತೆ ಮಾನವಿಕಗಳಲ್ಲು ಅಪ್ಲೈಡ್ ಸೋಶಾಲಜಿ, ಅಪ್ಲೈಡ್ ಸೈಕಾಲಜಿ, ಅಪ್ಲೈಡ್ ಎಕನಾಮಿಕ್ಸ್ ಇತ್ಯಾದಿಗಳು ಇವೆ. ಹಾಗೆಯೆ ಸಂಶೋಧನೆಯಲ್ಲು ಅಪ್ಲೈಡ್ ಸಂಶೋಧನೆ ಹೆಚ್ಚು ಉಪಯುಕ್ತ ಎಂಬ ಗ್ರಹಿಕೆಯೊಂದು ನಮ್ಮಲ್ಲಿ ಚಾಲ್ತಿಯಾಗುತ್ತಿದೆ. ಸಮಾಜದ ಸಮಸ್ಯೆಗಳಿಗೆ ಪರಿಹಾರಗಳನ್ನು ಸಂಶೋಧನೆಯಲ್ಲಿ (ಸಾಹಿತ್ಯ ವಿಶ್ಲೇಷಣೆಯಲ್ಲಿ) ಕಂಡುಕೊಳ್ಳಬಹುದು ಎಂಬ ನಂಬಿಕೆ ಬೆಳೆಯುತ್ತಿರುವುದು ಇಂತಹ ಕೃತಿಗಳಿಂದ ತಿಳಿಯುತ್ತದೆ. ಮಡಿವಾಳೆಪ್ಪ ದೋಂಡಿಬಾ ವಕ್ಕುಂದ ಅವರ ‘ಆಧುನಿಕ ಕನ್ನಡ ಕಾವ್ಯದಲ್ಲಿ ಧಾರ್ಮಿಕ ಹಿಂಸೆ ಹಾಗೂ ಸೌಹಾರ್ದತೆಯ ಸ್ವರೂಪ’ ಎಂಬ ಅಪ್ರಕಟಿತ ಅಧ್ಯಯನ ಮತ್ತು ಎಂ ಜಯಶಂಕರ ಅವರ ‘ಕನ್ನಡ ಸಂಸ್ಕೃತಿ ಚಿಂತನೆಯಲ್ಲಿ ಕೋಮುಸೌಹಾರ್ಧದ ನೆಲೆಗಳು’ ಎಂಬ ಅಪ್ರಕಟಿತ ಎಂಫಿಲ್ ಅಧ್ಯಯನ ಹಾಗೂ ಸಿ.ಜಿ.ಲಕ್ಷ್ಮೀಪತಿ ಅವರ ‘ಕರ್ನಾಟಕದ ಸಾಮಾಜಿಕ ಬದಲಾವಣೆ ಸಮಾಜಶಾಸ್ತ್ರ ಹಾಗೂ ಸಾಹಿತ್ಯ ನೋಡಿರುವ ಬಗೆ’ ಎಂಬ ಅಪ್ರಕಟಿತ ಪಿಎಚ್.ಡಿ. ಅಧ್ಯಯನ, ಬಿ.ಸಿ.ಕುಶಾಲ  ಅವರ ‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ’ ಇತ್ಯಾದಿ ಅಧ್ಯಯನಗಳು ಇಂಥದ್ದಕ್ಕೆ ಉದಾಹರಣೆಗಳು. ಇವು ಸಾಹಿತ್ಯವನ್ನು ಹೊರಗಿನಿಂದ ನೋಡುತ್ತವೆ. ಸಾಮಾಜಿಕ ಸಮಸ್ಯೆಗಳ ಚರ್ಚೆಗೆ ಸಾಹಿತ್ಯವು ಹೇಗೆ ತೊಡಗುತ್ತದೆ? ಇಂದಿನ ಸಾಮಾಜಿಕ ಸಮಸ್ಯೆಗಳನ್ನು ಸಾಹಿತ್ಯದ ಅಧ್ಯಯನದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವೆ? ಸಾಹಿತ್ಯವು ಅನ್ಯಶಿಸ್ತು ಅನ್ಯಧರ್ಮಗಳನ್ನು ಹೇಗೆ ಪರಿಭಾವಿಸಿದೆ? ನಾವು ಅನುಸರಿಸಬಹುದಾದ ಮೌಲ್ಯಗಳನ್ನು ಸಾಹಿತ್ಯವು ಒದಗಿಸಬಲ್ಲುದೆ ಎಂಬಿತ್ಯಾದಿ ಪ್ರಶ್ನೆಗಳಿಂದ ಸಾಹಿತ್ಯವನ್ನು ನೋಡಿವೆ. ಇಲ್ಲೆಲ್ಲ ಸಮಾಜವಿಜ್ಞಾನ, ಮಾನವಿಕಗಳಲ್ಲಿ ಬಳಕೆಯಾಗುವ ಅಧ್ಯಯನ ವಿಧಾನಗಳನ್ನು ಅನ್ವಯಿಸುವ ಕೆಲಸವನ್ನು ಮಾಡಲಾಗಿದೆ. ಸಾಹಿತ್ಯದ ಅಧ್ಯಯನದಲ್ಲಿ ವಿಜ್ಞಾನದ ಮತ್ತು ಮಾನವಿಕಗಳ ಅಧ್ಯಯನ ವಿಧಾನಗಳನ್ನು ಅನ್ವಯೀಕರಿಸುವುದು ಕೂಡ (ಹಾಗೇ ವೈಸ್ ವರ್ಸಾ) ಈ ದಶಕದ ಸಂಶೋಧನೆಯ ಒಂದು ಮುಂದುವರಿದ ಲಕ್ಷಣವಾಗಿದೆ.[2] (ಜೊತೆಗೆ ನೋಡಿ ಸಿದ್ಧ ದೃಷ್ಟಿಕೋನಗಳ ಅನ್ವಯ)

ಲಿಪ್ಯಂತರ – ಏಕರೂಪೀಕರಣ ಪ್ರಕ್ರಿಯೆ

ಮಾತು ಮತ್ತು ಬರಹಗಳಲ್ಲಿ ಬರಹದ ಅಧಿಕೃತತೆ ಹೆಚ್ಚಾಗುತ್ತಿರುವುದು ಜಾಗತೀಕರಣದ ಬಹು ದೊಡ್ಡ ಪರಿಣಾಮವೇ ಆಗಿದೆ. ಹೀಗಾಗಿ ಜನಪದವನ್ನು – ಮೌಖಿಕ ಸಾಹಿತ್ಯವನ್ನು ಅಕ್ಷರಕ್ಕೆ ಇಳಿಸುವ ಬಹು ದೊಡ್ಡ ಉದ್ಯೋಗದಲ್ಲಿ ನಾವಿಂದು ತೊಡಗಿದ್ದೇವೆ. ಜನಪದ ಕಥೆ, ಗಾದೆ, ಒಗಟು, ಮೌಖಿಕ ಮಹಾಕಾವ್ಯ, ಲಾವಣಿ, ತತ್ವಪದ.. ಇತ್ಯಾದಿಗಳನ್ನು ಜನರಿಂದ ಕೇಳಿ ಧ್ವನಿಮುದ್ರಿಸಿಕೊಂಡು ಅವನ್ನು ಲಿಪ್ಯಂತರ ಮಾಡುವುದನ್ನು ಜನಪದ ಸಂಶೋಧನೆ ಎಂದೇ ನಾವು ತಿಳಿದಿದ್ದೇವೆ. ಇತ್ತೀಚೆಗೆ ತಾನೆ ನಾಡೋಜ ದರೋಜಿ ಈರಮ್ಮ ಹಾಡಿದ ಮೌಖಿಕ ಮಹಾಕಾವ್ಯ ‘ಮಾರ್ವಾಡಿ ಶೇಠ್’ (೨೦೧೦) ಪ್ರಕಟವಾಗಿದೆ. ಬೂದಾಳು ನಟರಾಜ್ ತುಮಕೂರು ಜಿಲ್ಲೆಯ ತತ್ವಪದಗಳನ್ನು (೨೦೧೦) ಸಂಗ್ರಹಿಸಿ ಪ್ರಕಟಿಸಿದ್ದಾರೆ. ಇವು ಒಂದೆರಡು ಉದಾಹರಣೆಗಳು ಮಾತ್ರ. ತಾವು ಬದುಕುವ ಪರಂಪರೆಗಳನ್ನು ಜನ ತಮ್ಮ ಸಮುದಾಯದ ನೆನಪುಗಳಾಗಿಯೆ ಭಾವಿಸುತ್ತಾರೆ ಹಾಗೂ ಬಹುರೂಪಿಯಾಗಿ ಅವನ್ನು ಸದಾ ಕಾಪಿಡುತ್ತ, ರವಾನಿಸುತ್ತ ಬರುತ್ತಾರೆ. ಅವರ ಪಠ್ಯಗಳಿಗೆ ಕರ್ತೃತ್ವ – ಒಡೆತನದ ಹಂಗು ಇಲ್ಲ. ಆದರೆ ಈ ಲಿಪ್ಯಂತರಿತ ಮುದ್ರಣಗಳು ಪಠ್ಯ ಚಲನಶೀಲತೆ ಮತ್ತು ಬಹುಮುಖತೆಗಳನ್ನು ಒಡೆದು ಏಕರೂಪಿ ಪಠ್ಯವನ್ನು ಮಾನ್ಯ ಮಾಡುತ್ತವೆ. ಪಠ್ಯದ ಅಧಿಕೃತೀಕರಣ, ಮಾನಕೀಕರಣ, ಪ್ರಮಾಣೀಕರಣಗಳನ್ನು ಮಾಡುತ್ತವೆ. ಜೊತೆಗೆ ಪಠ್ಯದ ಕರ್ತೃತ್ವ – ಒಡೆತನಗಳನ್ನು ಸ್ಥಾಪಿಸುತ್ತವೆ. ಹೀಗೆ ಮಾಡಿದ ಪಠ್ಯಗಳನ್ನೆ ಮತ್ತೆ ವಿದ್ವಾಂಸರು ಅಧ್ಯಯನಕ್ಕು ಗುರಿಪಡಿಸುತ್ತಾರೆ.[3]

ಏಕರೂಪೀಕರಣ ಮತ್ತು ಖಾಸಗಿ ಒಡೆತನ ನಿರ್ಮಾಣಗಳು ಜಾಗತೀಕರಣ – ಪಶ್ಚಿಮೀ ಆಧುನೀಕರಣದ ಚಹರೆಗಳೇ ಆಗಿವೆ. ಇನ್ನೊಂದೆರಡು ಉದಾಹರಣೆಗಳಿಂದ ಇದನ್ನು ವಿಸ್ತರಿಸಬಹುದು. ಮೀರಾಸಾಬಿಹಳ್ಳಿ ಶಿವಣ್ಣ ಅವರ ಕಾಡುಗೊಲ್ಲ ಬುಡಕಟ್ಟು ವೀರರು (೨೦೦೬) ಮತ್ತು ಇಂದಿರಾ ಶ್ರೀಧರ್ ಅವರ ಬುಡಕಟ್ಟು ವೈದ್ಯ ಸಂಸ್ಕೃತಿ (೨೦೦೮) ಇವೆರಡೂ ವಿಸ್ತಾರವಾದ ಕ್ಷೇತ್ರಕಾರ್ಯದಿಂದ ರಚಿತವಾಗಿರುವ ಕೃತಿಗಳು. ಜಾನಪದ ಅಧ್ಯಯನಗಳ ಫಲಿತಗಳ ಸಾಮಾಜಿಕ ಉಪಯುಕ್ತತೆ ಬಗ್ಗೆ ನಾವು ಏನೇ ಶಂಖ ಊದಿದರೂ ಸ್ಥಳೀಯ ಬದುಕಿನ ವಿನ್ಯಾಸಗಳು – ಸಂಸ್ಕೃತಿಗಳು ಸಮಾಜದಲ್ಲಿ ಅಲಕ್ಷ್ಯಕ್ಕೆ ಈಡಾಗುತ್ತಿರುವುದು ಮತ್ತು ರೂಪಾಂತರ ಹೊಂದುತ್ತಿರುವುದು ಮಾತ್ರ ನಿಜ. ಇಂತಹ ಪ್ರಕ್ರಿಯೆಯ ಎದುರು ಅದು ಅಳಿದು ಹೋಗುವ ಬದುಕು – ಸಂಸ್ಕೃತಿ ಅದನ್ನು ಅಕ್ಷರ ರೂಪದಲ್ಲಿ ಸಂಗೋಪಿಸಬೇಕು ಎಂಬ ಆಚಾರವೇ ಸಂಶೋಧನೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಜಾನಪದ ಸಂಸ್ಕೃತಿಯ ಅಧ್ಯಯನ ಇರುವುದು ಆಚರಣೆಗಲ್ಲ ಸಂಗೋಪನೆಗೆ – ಸಂರಕ್ಷಣೆಗೆ – ಮ್ಯೂಸಿಯಮೀಕರಣಕ್ಕೆ ಎಂಬ ತಿಳುವಳಿಕೆಯೆ ಇತ್ತೀಚಿನ ಅಧ್ಯಯನಗಳಲ್ಲಿ ಕಂಡುಬರುತ್ತಿದೆ. ಈ ಮ್ಯೂಸಿಯಮೀಕರಣ ಕೂಡ ನಾವು ಪಶ್ಚಿಮದಿಂದ ಕಡ ತಂದಿರುವ ಆಚಾರ. ಯಾವ ಕ್ಷಣಗಳು – ಕಾಲದೇಶಗಳು ನಿತ್ಯ ಗತಿಶೀಲವೋ ಅವುಗಳ ತುಣುಕುಗಳನ್ನು ಲಿಪ್ಯಂತರ ಮಾಡಿ; ಬಹುರೂಪತೆಗಳನ್ನು ಏಕರೂಪಿ ಮಾಡಿ ಮ್ಯೂಸಿಯಮ್‌ಗಳಲ್ಲಿ ಇಡುವುದು ಜಾಗತೀಕರಣದ ಫಲವೂ ಹೌದು. ಕನ್ನಡದಾದ್ಯಂತ ಅದೊಂದು ಜಾಗತೀಕರಣ ಆಗುತ್ತಿರುವ ಪ್ರವೃತ್ತಿಯೂ ಹೌದು.

ಈ ಕ್ರಿಯೆ ಇವಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ನಮ್ಮ ಆಧುನಿಕ ಗ್ರಂಥ ಸಂಪಾದನಾಶಾಸ್ತ್ರ ೧೮ – ೧೯ನೆ ಶತಮಾನದಿಂದಲೆ ಪ್ರಾರಂಭವಾಯಿತು. ಹಲವು ಹಸ್ತಪ್ರತಿಗಳಲ್ಲಿ ಇರುತ್ತಿದ್ದ ಬಹು ಪಠ್ಯಗಳನ್ನು, ಪಾಠಾಂತರಗಳನ್ನು ಪರಿಷ್ಕರಿಸಿ ‘ಶುದ್ಧಪಠ್ಯ’ವನ್ನು ನಿರ್ಣಯಿಸಿ, ಸಂಪಾದಿಸಿ, ಮುದ್ರಿಸುವ ಕೆಲಸ ಕೂಡ ಸಂಶೋಧನೆಯೇ. ಇದು ಈಗಲೂ ಕೂಡ ನಡೆಯುತ್ತಿದೆ. ಇದುವರೆಗೆ ಮುದ್ರಣವಾಗದ, ಹಸ್ತಪ್ರತಿ – ತಾಳೆಪ್ರತಿಗಳಲ್ಲೆ ಉಳಿದಿದ್ದ ಪಠ್ಯಗಳು ಮುದ್ರಿತ ಪಠ್ಯಗಳಾಗಿ ಪರಿವರ್ತಿತವಾಗುತ್ತಿವೆ. ‘ಶುದ್ಧಪಠ್ಯ’ ಏಕರೂಪಿ ಪಠ್ಯಗಳಾಗಿ ಪರಿವರ್ತಿತವಾಗುತ್ತಿವೆ. ಇವುಗಳ ಜೊತೆಯಲ್ಲೆ ಕವಿಯ ಕಾಲ, ದೇಶ, ಧರ್ಮ, ಜಾತಿ, ಆಶ್ರಯದಾತ ಇತ್ಯಾದಿ ವಿವರಗಳನ್ನೆಲ್ಲ ಕುರಿತು ಬರೆಯುವುದೂ ಕೂಡ ಸಂಶೋಧನೆ ಆಗಿದೆ. ಇದೊಂದು ಪ್ರವೃತ್ತಿಯೂ, ಧಾರೆಯೂ ಆಗಿದೆ. ಇದು ಚರಿತ್ರೆಯ ಬರವಣಿಗೆ ಎಂಬುದು ಆಗಿಹೋದ ಸಂಗತಿಯಲ್ಲ. ಅದು ಸದಾ ಆಗುತ್ತಿರುವ ಸಂಗತಿ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತದೆ. ಹಾಗೆಯೇ ಈ ಕೆಲಸಗಳೆಲ್ಲವೂ ಸಂಶೋಧನೆಯ ಸಾಮಗ್ರಿ ನಿರ್ಮಾಣದ ಕೆಲಸಗಳೂ ಹೌದು. ಹಾಗೆಯೆ ಸ್ವತಃ ಸಂಶೋಧನೆಗಳೂ ಹೌದು. ಹಾಗೆಯ ಈ ಏಕರೂಪೀಕರಣ ಎಂಬುದು ಕೇವಲ ಜಾಗತೀಕರಣದ ಪರಿಣಾಮ ಮಾತ್ರ ಅಲ್ಲ ಅದೊಂದು ಪಶ್ಚಿಮದ ಚರಿತ್ರೆ ರಚನೆಯ ವಿನ್ಯಾಸವಾಗಿ ನಮ್ಮಲ್ಲಿ ಬಹು ಹಿಂದಿನಿಂದ ಚಾಲ್ತಿಯಲ್ಲಿದೆ.

ಯುಗಧರ್ಮ – ಅದರ ಹಿಂದಿನ ತಾತ್ವಿಕತೆಯ ಹುಡುಕಾಟ

ಹಿಂದಣ ಚರಿತ್ರೆಯನ್ನು ಕಟ್ಟಿಕೊಳ್ಳುವುದು ಒಂದು ಬಗೆಯ ನಡೆಯಾದರೆ ಆ ಚರಿತ್ರೆಯು ಹಾಗೆಯೆ ರೂಪಗೊಳ್ಳಲು ಕಾರಣಗಳೇನಿರಬಹುದು ಎಂದು ಗುರ್ತಿಸಿಕೊಳ್ಳುವುದು ಇನ್ನೊಂದು ಬಗೆ. ಜ್ಞಾನಚರಿತ್ರೆಯ ಹಿಂದಣ ತತ್ವಜ್ಞಾನ, ಯಾವುದು ಎಂದು ತಿಳಿದು ಅದನ್ನು ಎದುರ್ಗೊಳ್ಳಲು ಸಜ್ಜಾಗುವುದು ನಿರ್ವಸಾಹತೀಕರಣ, ನಿರ್ಜಾಗತೀಕರಣ ಯತ್ನವೂ ಹೌದು. ಇಂತಹ ಅಧ್ಯಯನಗಳು ಮಾಹಿತಿಯ ಕ್ರೋಡೀಕರಣ – ಜೋಡಣೆಗೆ ನಿಲ್ಲುವುದಿಲ್ಲ. ಅವುಗಳ ವ್ಯಾಖ್ಯಾನ ಮತ್ತು ಕಾರಣ – ಪರಿಣಾಮಗಳನ್ನು ವಿಶ್ಲೇಷಿಸುತ್ತವೆ. ಆ ಮೂಲಕ ಸಂಸ್ಕೃತಿ ಚರಿತ್ರೆಯು ರೂಪಗೊಂಡುದರ ಹಿಂದಿನ ಒತ್ತಡಗಳು ಮತ್ತು ಅದನ್ನು ನಿಭಾಯಿಸುವಲ್ಲಿ ಅಥವಾ ಅದಕ್ಕೆ ಅಧೀನಗೊಳ್ಳುವುದರಲ್ಲಿ ಸಂಸ್ಕೃತಿಯು ಅನುಸರಿಸಿದ ದಾರಿಗಳಾವುವು ಎಂಬುದನ್ನು ಶೋಧಿಸುತ್ತವೆ. ವಿಜಯಕುಮಾರ ಬೋರಟ್ಟಿ ಅವರ ‘ಹಿರಿಯರ ಹಿರಿತನ ಹಿಂದೇನಾಯಿತು?’ (೨೦೧೧) ಪುಸ್ತಕ ಇಂತಹ ಒಂದು ಸಂಶೋಧನೆ. ೧೯ – ೨೦ನೆ ಶತಮಾನದ ಜ್ಞಾನ ಮೀಮಾಂಸೆ – ಆಚಾರಸಂಹಿತೆ – ಸಂಸ್ಕೃತಿ ಚರಿತ್ರೆಗಳು ಹೇಗೆ ರೂಪಗೊಂಡವು ಮತ್ತು ಹಾಗೆ ರೂಪಗೊಳ್ಳುವುದರ ಹಿಂದೆ ಯಾವೆಲ್ಲ ಒತ್ತಡಗಳಿದ್ದವು ಎಂದು ಈ ಕೃತಿಯು ಲಿಂಗಾಯತ ಪಠ್ಯಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತದೆ. ಏನೆಂದರೂ ಇಂತಹ ಸಂಶೋಧನೆಗಳು ವಸ್ತುಸ್ಥಿತಿಯ ವ್ಯಕ್ತಿನಿಷ್ಠ ವ್ಯಾಖ್ಯಾನಗಳೇ ಆಗಿ ಕಾಣುತ್ತವೆ. ಹೀಗೆ ತಾವು ಕಂಡ ವಾಸ್ತವದ ಕಾರಣ – ಪರಿಣಾಮಗಳನ್ನು ಶೋಧಿಸುವುದು ಕೂಡ ಈ ದಶಕದ ವಿಮರ್ಶೆ – ಸಂಶೋಧನೆಯ ಒಂದು ಮುಖ್ಯ ಪ್ರವೃತ್ತಿಯಾಗಿದೆ. ಮನುದೇವದೇವನ್ ಅವರ ಕೃತಿ ಕೂಡ (೨೦೦೯) ಸಾವಿರಾರು ವರ್ಷಗಳ ಭೂತವನ್ನು ಹೀಗೆಯೆ ವಿಶ್ಲೇಷಣೆಗೆ ಗುರಿಪಡಿಸುತ್ತದೆ. ಹೀಗೆ ವಿವರಣೆ ಮತ್ತು ಮಂಡನೆಗಳಲ್ಲೆ ಚರಿತ್ರೆಯನ್ನು ಹರಡುವುದು ಕೂಡ ಚರಿತ್ರೆ ಸಂಶೋಧನೆಯ ಒಂದು ಲಕ್ಷಣವಾಗಿ ವ್ಯಕ್ತವಾಗಿದೆ. ಇಂತಹ ಸಂಶೋಧನೆಗಳಲ್ಲಿ ಪರೋಕ್ಷವಾಗಿ ಚರಿತ್ರೆಯು ವರ್ತಮಾನದ ಒತ್ತಡಗಳಿಂದ ಪುನಾರಚನೆಗೆ ಗುರಿಯಾಗುತ್ತಿರುತ್ತದೆ ಕೂಡ.

ಕೊನೆಗೆ ಮೊದಲು

ನಮ್ಮಲ್ಲಿ ಸಂಶೋಧನೆಗಳು ಹತ್ತು ಹಲವು ರೀತಿಯಲ್ಲಿ ನಡೆಯುತ್ತಿವೆ. ಆದರೆ ಅವೆಲ್ಲವೂ ಹೆಚ್ಚು ಕಡಿಮೆ ಏಕವ್ಯಕ್ತಿ ಸಂಶೋಧನೆಗಳೇ ಆಗಿವೆ. ತಂಡಸಂಶೋಧನೆಗಳು ನಮ್ಮಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಹಾಗೆ ನೋಡಿದರೆ ಆಕರಶಾಸ್ತ್ರೀಯ ಸಂಶೋಧನೆಗಳನ್ನು ಹೊರತುಪಡಿಸಿದರೆ ಸಂಶೋಧನೆಯಲ್ಲಿ ಸ್ಪಷ್ಟವಾದ ಮತ್ತು ನಿರ್ಧಿಷ್ಟವಾದ ಪಂಥಗಳು ಪರಂಪರೆಗಳೊ ಎಂಬಂತೆ ಸ್ಥಾಪಿತವಾಗಿಲ್ಲ. ನಮ್ಮಲ್ಲಿ ಸಂಶೋಧನೆಯು ವಿಷಯವಾರು ಆಗಿ ಹಂಚಿಹೋಗಿದೆ. ಜಾತಿ – ಜನಾಂಗೀಯ – ಧಾರ್ಮಿಕವಾದ ಕೆಲವು ಅಧ್ಯಯನಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಅಧ್ಯಯನಗಳೂ ಶೈಕ್ಷಣಿಕ ಆದುವೇ ಆಗಿವೆ. ಆಯುಧ, ಔಷಧ, ದಿನಬಳಕೆಯ ಅನಿವಾರ್ಯಗಳಲ್ಲದ ಆದರೆ ಜಾಹೀರಾತುಗಳ ಮೂಲಕ ಅನಿವಾರ್ಯಗಳೆಂದು ಬಿಂಬಿತವಾಗಿರುವ ಸೋಪು, ಬ್ರಶ್ಶು, ಪೇಸ್ಟು, ಡಿಯೋಡರೆಂಟು, ಕಾಸ್ಮೆಟಿಕ್ಸು, ಇತ್ಯಾದಿ ಗ್ರಾಹಕ ವಸ್ತುಗಳ ಕೈಗಾರಿಕೆಗಳಲ್ಲಿ, ಟಿ.ವಿ. ಚಾನೆಲ್ಲುಗಳ ವೀಕ್ಷಕರ ಸಮೀಕ್ಷೆಗಳಲ್ಲಿ, ಹೀಗೆ ಅನೇಕ ವಲಯದಲ್ಲಿ ಶೈಕ್ಷಣಿಕತೆಯ ಆಚೆಗೂ ಸಂಶೋಧನೆ ನಡೆಯುತ್ತಲೆ ಇದೆ. ಆದರೆ ಇವನ್ನೆಲ್ಲ ನಮ್ಮ ಶೈಕ್ಷಣಿಕ ವಲಯ ಗಂಭೀರವಾಗಿ ಪರಿಗಣಿಸಿಲ್ಲ. ಮಾನ್ಯ ಮಾಡಿಲ್ಲ. (ಇವರ ಮಾನ್ಯತೆಗೆ ಯಾರೂ ಕಾಯುವುದಿಲ್ಲ ಎಂಬುದು ಬೇರೆ ಮಾತು) ಅನೇಕ ವಿಷಯಗಳು ಕೇವಲ ಶೈಕ್ಷಣಿಕ ಶಿಸ್ತುಗಳಾಗಿ ಮಾತ್ರವೆ ಅಸ್ತಿತ್ವದಲ್ಲಿ ಇರುವುದರಿಂದ ಮತ್ತು ಅವುಗಳಿಗು ಸಾಮಾಜಿಕ ಜೀವನಕ್ಕು ಅಂತಃಸಂಬಂಧ ಸರಿಯಾಗಿ ಏರ್ಪಟ್ಟಿಲ್ಲದ ಕಾರಣಕ್ಕೆ ಆ ವಿಷಯವಲಯಗಳಲ್ಲಿ ನಡೆಯುವ ಸಂಶೋಧನೆಗಳನ್ನು ಕೇಲವ ಶೈಕ್ಷಣಿಕವಾಗಿ ಮಾತ್ರ ಭಾವಿಸುವ ಮತ್ತು ಮಾನ್ಯೀಕರಿಸುವ ಪರಿಪಾಠ ಇದೆ. ಹಾಗೆ ನೋಡಿದರೆ ಕನ್ನಡ ವಿಶ್ವವಿದ್ಯಾಲಯವನ್ನು ಹೊರತುಪಡಿಸಿದರೆ ಮಿಕ್ಕಂತೆ ಮಾನವಿಕಗಳಲ್ಲಾಗಲೀ, ವಿಜ್ಞಾನಗಳಲ್ಲಾಗಲೀ ಸಂಶೋಧನೆಗಳು ಕನ್ನಡದಲ್ಲಿ ನಡೆಯುವುದು ಇಲ್ಲವೆಂಬಷ್ಟು ಕಡಿಮೆ. ಬಹುಶಃ ಜೀವನಕ್ಕು ಮತ್ತು ಶೈಕ್ಷಣಿಕ ಸಂಶೋಧನೆಗಳಿಗು ಕಂದರ ಉಂಟಾಗಲು ಭಾಷೆಯೂ ಒಂದು ಕಾರಣ ಇರಬಹುದು.

ಸಂಶೋಧನಾ ಪದವಿ ಅಧ್ಯಯನಗಳ ವಸ್ತುವಿನ್ಯಾಸ

೧. ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಾಹಿತ್ಯ ಸಂಶೋಧನೆಗಳು ಕಳಪೆ ಗುಣಮಟ್ಟದವು ೨. ಅಲ್ಲಿ ಅದದೇ ಅಧ್ಯಯನಗಳನ್ನು ಮತ್ತೆ ಮತ್ತೆ ನಡೆಸಲಾಗುತ್ತದೆ. ೩. ಅಲ್ಲಿ ತಾಂತ್ರಿಕವಾಗಿ ಪದವಿ ಪಡೆಯುವ ಉದ್ದೇಶಕ್ಕಾಗಿ ಸಿದ್ಧ ಮಾದರಿಯ ಸೂತ್ರಗಳನ್ನು ಇಟ್ಟುಕೊಂಡು ತಿಪ್ಪೆ ಸಾರಿಸುವ ಅದ್ಯಯನಗಳೆ ಹೆಚ್ಚು ನಡೆಯುತ್ತವೆ ೪. ಪದವಿ ಪಡೆಯುವುದು ಉದ್ದೇಶವಾದಾಗ ಸಾಮಾಜಿಕ ಅನ್ವಯಿಕತೆ (ಅಪ್ಲೈಡ್ ಗುಣ) ಇಲ್ಲಾವಾಗುತ್ತಿದೆ. ಇತ್ಯಾದಿ ಇತ್ಯಾದಿ ನಂಬಿಕೆಗಳು ಮತ್ತು ತಪ್ಪುಕಲ್ಪನೆಗಳು ವಿಶ್ವವಿದ್ಯಾಲಯಗಳ ಪಿಎಚ್.ಡಿ. ಎಂ.ಫಿಲ್. ಮತ್ತು ಡಿ.ಲಿಟ್. ಅಧ್ಯಯನಗಳ ಬಗ್ಗೆ ಪ್ರಚಾರದಲ್ಲಿ ಇವೆ. ಇವೆಲ್ಲವೂ ಸತ್ಯವಲ್ಲ ಮತ್ತು ಇವೆಲ್ಲವೂ ಸಂಪೂರ್ಣವಾಗಿ ಸುಳ್ಳಲ್ಲ. ಅಲ್ಲದೆ ಪಿಎಚ್.ಡಿ. ಮಾರ್ಗದರ್ಶಕರು ಅಧ್ಯಯನಕಾರರಿಗೆ ಇಲ್ಲದ ಕಿರುಕುಳ ನೀಡುತ್ತಾರೆ. ಮನೆ ಆಳಿನಂತೆ ನೋಡುತ್ತಾರೆ. ಲಂಚ ಕೇಳುತ್ತಾರೆ. ಗುತ್ತಿಗೆ ಆಧಾರದಲ್ಲಿ ಪಿಎಚ್.ಡಿ. ಥೀಸೀಸುಗಳನ್ನು ಬರೆದು ಕೊಡುವವರು (ಔಟ್‌ಸೋರ್ಸಿಂಗ್?) ಮತ್ತು ಬರೆಸಿ ಕೊಡುವವರು ಇದ್ದಾರೆ. ಅನೇಕ ವಿದ್ಯಾರ್ಥಿಗಳೂ ಯಾರ‍್ಯಾರದ್ದೋ ಥೀಸೀಸುಗಳನ್ನು ಕದ್ದು ಎತ್ತಿಹಾಕಿ ತಮ್ಮದೇ ಅಧ್ಯಯನ ಎಂಬಂತೆ ಪದವಿ ಪಡೆಯುತ್ತಾರೆ. ಈ ಪದವಿ ಅಧ್ಯಯನಗಳಲ್ಲಿ ಜಾತಿ ರಾಜಕೀಯ ಜಾಸ್ತಿ ಇದೆ. ಇಂತಹ ಹತ್ತಾರು ನಂಬಿಕೆಗಳೂ ನಮ್ಮ ಸುತ್ತ ಗಾಳಿಯಲ್ಲಿವೆ. ಇವೂ ಕೂಡ ಸಂಪೂರ್ಣ ಸುಳ್ಳಲ್ಲ ಮತ್ತು ಸತ್ಯವಲ್ಲ. ಇದೇನೇ ಇರಲಿ ಇದೆಲ್ಲ ಈ ಪ್ರಬಂಧದ ವ್ಯಾಪ್ತಿಗೆ ಹೊರತು. ಹಾಗಾಗಿ ಇದನ್ನೆಲ್ಲ ಇಲ್ಲಿ ಚರ್ಚಿಸುವುದಿಲ್ಲ.

ನಮ್ಮ ವಿಶ್ವವಿದ್ಯಾಲಯಗಳ ಸಂಶೋಧನಾ ಪದವಿ ಅಧ್ಯಯನಗಳ ವಸ್ತುವಿನ್ಯಾಸ ಹೇಗಿದೆ ಎಂದು ನೋಡಿದರೆ ಸಾಹಿತ್ಯ ಸಂಶೋಧನೆ ಈಗಾಗಲೇ ಹೇಳಿರುವಂತೆ ಸಾಹಿತ್ಯ ಮತ್ತು ಸಾಹಿತ್ಯೇತರ ಎಂಬಂತೆ ಎರಡು ಮುಖ್ಯ ಕವಲಾಗಿ ಒಡೆದುಕೊಂಡಿದೆ. ಇಲ್ಲಿ ಸಾಹಿತ್ಯ ತನ್ನ ಪ್ರಾಚೀನ ಶಾಸನ, ಹಸ್ತಪ್ರತಿ, ಹಳೆಗನ್ನಡ ಅಧ್ಯಯನಗಳನ್ನು ಸಂಪೂರ್ಣ ಬಿಟ್ಟುಕೊಡದೆ ಹೊಸ ಸ್ವರೂಪವನ್ನೂ ಪಡೆಯುತ್ತಿದೆ. ಆಧುನಿಕತೆ, ಜಾಗತೀಕರಣ, ವ್ಯಾಪಾರೀಕರಣ, ಉದಾರೀಕರಣ, ವಸಾಹತೋತ್ತರವಾದ ಮತ್ತು ಇತರ ವಾದಗಳೆಲ್ಲವನ್ನೂ ನಮ್ಮ ಸಂಶೋಧನೆಯು ತನ್ನ ಪರಿಶೀಲನೆಯಲ್ಲಿ ಒಳಗೊಳ್ಳುತ್ತಿದೆ. ಅಲ್ಲದೆ ಸಂಶೋಧನೆಯು ಅಂತರಶಿಸ್ತೀಯತೆಯನ್ನು ಮತ್ತು ಬಹುಶಿಸ್ತೀಯತೆಯನ್ನು ಮೈಗೂಡಿಸಿಕೊಳ್ಳುತ್ತಿದೆ. ಆಧುನಿಕ ಸಾಹಿತ್ಯ ಮತ್ತು ಆಧುನಿಕ ಪೂರ್ವ ಸಾಹಿತ್ಯ ಎಂದು ಸಾಹಿತ್ಯವನ್ನು ಮುಖ್ಯವಾಗಿ ಎರಡು ಕಾಲಘಟ್ಟಗಳಾಗಿ ಒಡೆದುಕೊಂಡು ಅಧ್ಯಯನಕ್ಕೆ ಗುರಿಪಡಿಸುವ ಪರಿಪಾಠ ಬೆಳೆಯುತ್ತಿದೆ. ಹಾಗಾಗಿ ಸಾಹಿತ್ಯದಲ್ಲಿ ಕಾಲಘಟ್ಟಗಳನ್ನು ಅಧ್ಯಯನದ ಗಡಿಗೆರೆಗಳನ್ನಾಗಿ ಇಟ್ಟುಕೊಳ್ಳುವ ಪರಿಪಾಠ ಕೂಡ ಇದೆ. ಸಾಹಿತ್ಯದ ಪ್ರಕಾರಗಳನ್ನು ಕೇಂದ್ರವಾಗಿ ಇಟ್ಟುಕೊಂಡ ಅಧ್ಯಯನಗಳು ಕೂಡ ಸಾಕಷ್ಟು ಇವೆ. ಕಾವ್ಯ ಇವುಗಳಲ್ಲಿ ಮುಖ್ಯವಾದುದು. ೫ನೇ ಅನುಬಂಧದಲ್ಲಿ ನೀಡಿರುವ ಅಧ್ಯಯನಗಳ ಪಟ್ಟಿಯಂತೆ ಒಟ್ಟಾರೆ ಸಾಹಿತ್ಯಕ ಅಧ್ಯಯಗಳಲ್ಲಿ ಅರ್ಧದಷ್ಟು ಭಾಗ ಸಾಹಿತ್ಯ ಪ್ರಕಾರಗಳನ್ನೆ ಕೇಂದ್ರೀಕರಿಸಿವೆ. ೨೦೦೧ರಿಂದ ೨೦೦೫ರ ನಡುವೆ ೭೫ಕ್ಕು ಹೆಚ್ಚು ಕಾವ್ಯಕೇಂದ್ರಿತ ಅಧ್ಯಯನಗಳು, ೪೫ಕ್ಕು ಹೆಚ್ಚು ಕಾದಂಬರಿ ಮತ್ತು ಕಥನಕೇಂದ್ರಿತ ಅಧ್ಯಯನಗಳು, ೨೫ಕ್ಕು ಹೆಚ್ಚು ನಾಟಕ ಕೇಂದ್ರಿತ ಅಧ್ಯಯನಗಳು ನಡೆದಿವೆ. ಪ್ರವಾಸ, ಆತ್ಮಕತೆ, ಮಹಾಕಾವ್ಯಗಳನ್ನು ಕುರಿತ ಅಧ್ಯಯನಗಳು ಸ್ವಲ್ಪ ಕಡಿಮೆಯಾಗಿವೆ. ಇನ್ನು ಮಿಕ್ಕಂತೆ ವ್ಯಕ್ತಿಕೇಂದ್ರಿತ ಅಧ್ಯಯನಗಳು (ಬದುಕು ಬರಹದ ಅಧ್ಯಯನಗಳು), ಕೃತಿಕೇಂದ್ರಿತ ಅಧ್ಯಯನಗಳು,  ವಸ್ತುಕೇಂದ್ರಿತ ಅಧ್ಯಯನಗಳು ಮುಖ್ಯವಾಗಿ ಇವೆ.

ತೌಲನಿಕ ಅಧ್ಯಯನಗಳು, ಸಾಂಸ್ಕೃತಿಕ ಅಧ್ಯಯನಗಳು, ಜಾನಪದೀಯ ಅಧ್ಯಯನಗಳು, ಪ್ರಾದೇಶಿಕ ಅಧ್ಯಯನಗಳು, ಅಂತರ್‌ಶಿಸ್ತೀಯ ಅಧ್ಯಯನಗಳು, ಚಾರಿತ್ರಿಕ ಸಮೀಕ್ಷೆಗಳು, ಭಾಷಿಕ ಅಧ್ಯಯನಗಳು, ಆಧುನಿಕತೆ – ವಾಸಾಹತೀಕರಣ – ವಸಾಹತೋತ್ತರತೆ, ನಿರ್ವಸಾಹತೀಕರಣ, ಅನ್ಯಪ್ರಭಾವಗಳ ಅಧ್ಯಯನಗಳು, ಪರಿಸರಮಾಲಿನ್ಯ ಸಮಸ್ಯೆ, ಕೋಮುವಾದ, ಭಯೋತ್ಪಾದನೆ, ಜಾತೀಯತೆ ಇತ್ಯಾದಿ ಸಾಮಾಜಿಕ ಸಮಸ್ಯೆಗಳನ್ನು ಕೇಂದ್ರವಾಗಿ ಇಟ್ಟುಕೊಂಡ ಅಧ್ಯಯನಗಳು ಹೀಗೆ ಸಾಹಿತ್ಯ ಸಂಶೋಧನೆಯು ವಿಭಿನ್ನ ನೆಲೆಗಳಲ್ಲಿ ನಡೆಯುತ್ತಿದೆ. ಜಾನಪದ ಅಧ್ಯಯನವು ಬೇರೊಂದೇ ಶಾಖೆಯಾಗಿಯೂ ಬೆಳೆದಿದೆ. ಅಲ್ಲಿ ಸ್ಥಳಗಳ ಅಧ್ಯಯನ, ಮೌಖಿಕ ಸಾಹಿತ್ಯಗಳ ಅಧ್ಯಯನ, ಜಾತ್ರೆ – ಮದುವೆ – ಹಬ್ಬ – ಹರಿದಿನ – ಆರಾಧನೆ – ಸಂಪ್ರದಾಯಗಳು ಇತ್ಯಾದಿ ಆಚರಣೆಗಳ ಅಧ್ಯಯನ, ಜನಾಂಗೀಯ ಅಧ್ಯಯನ, ಸಾಂಸ್ಕೃತಿಕ ನಾಯಕರು – ವೀರರ ಅಧ್ಯಯನ, ಒಗಟು, ಸೊಲ್ಲು, ಗಾದೆ, ಮೌಖಿಕ ಮಹಾಕಾವ್ಯ ಇತ್ಯಾದಿ ಸಾಹಿತ್ಯ ಪ್ರಕಾರಗಳ ಅಧ್ಯಯನ, ಊರುಗಳ ಸಾಂಸ್ಕೃತಿಕ ಅಧ್ಯಯನ, ಜಾತಿ – ಧರ್ಮ – ಜನಾಂಗಗಳ ಅಧ್ಯಯನ, ಬಯಲಾಟ – ಯಕ್ಷಗಾನ – ತೊಗಲುಗೊಂಬೆಯಾಟ ಇತ್ಯಾದಿ ಪ್ರದರ್ಶನ ಕಲೆಗಳ ಅಧ್ಯಯನ, ಜನಪದ ಆಟಗಳ – ಚಿತ್ರಕಲೆಗಳ – ಶಿಲ್ಪಕಲೆ – ಸಂಗೀತ – ವಾದ್ಯ – ನೃತ್ಯಗಳ ಅಧ್ಯಯನ, ಅಂತರ್‌ಶಿಸ್ತೀಯ ಮತ್ತು ತೌಲನಿಕ ಅಧ್ಯಯನಗಳು ಹೀಗೆ ಈ ಕ್ಷೇತ್ರದಲ್ಲಿ ಅನೇಕ ಬಗೆಯ ಮತ್ತು ದೃಷ್ಟಿಯ ಅಧ್ಯಯನಗಳು ನಡೆಯುತ್ತಿವೆ.[4]

ಸಾಹಿತ್ಯವನ್ನು, ಸಂಸ್ಕೃತಿಯನ್ನು ಅಧ್ಯಯನ ಮಾಡುವಾಗ ಸರ್ವಜ್ಞನ ವಚನಗಳ ಜಾನಪದೀಯ ಅಧ್ಯಯನ, ಕುವೆಂಪು ಸಾಹಿತ್ಯ ಒಂದು ಜೀವಪರಿಸರ ಅಧ್ಯಯನ, ಕನ್ನಡ ಕಾದಂಬರಿಗಳಲ್ಲಿ ಪರ‍್ಯಾವರಣ ಒಂದು ಅಧ್ಯಯನ, ಪ್ರಾಚೀನ ಕನ್ನಡ ಗದ್ಯ ಕೃತಿಗಳ ಸಾಂಸ್ಕೃತಿಕ ಅಧ್ಯಯನ, ಗುಲ್ಬರ್ಗ ಜಿಲ್ಲೆಯ ಬೈಲು ಪತ್ತಾರರ ಸಮಾಜಶಾಸ್ತ್ರೀಯ ಅಧ್ಯಯನ, ಪಾರ‍್ಧಿ ಬುಡಕಟ್ಟು: ಒಂದು ಮಾನವಶಾಸ್ತ್ರೀಯ ಅಧ್ಯಯನ, ವಿಜಯನಗರೋತ್ತರ ಕಾಲೀನ ಬೇಡ ಜನಾಂಗದಲ್ಲಾದ ಸ್ಥಿತ್ಯಂತರಗಳು: ಚಾರಿತ್ರಿಕ ಅಧ್ಯಯನ, ಚನ್ನಪಟ್ಟಣ ತಾಲ್ಲೂಕು ಗ್ರಾಮದೇವತೆ: ಸಮಾಜೋ ಸಾಂಸ್ಕೃತಿಕ ಅಧ್ಯಯನ, ಸ್ವಾಂತ್ರ್ಯೋತ್ತರ ಕನ್ನಡ ನಾಟಕಗಳು: ಪೌರಾಣಿಕ, ಚಾರಿತ್ರಿಕ ಮತ್ತು ಜಾನದಪದೀಯ ಅಧ್ಯಯನ ಹೀಗೆ ಹತ್ತಾರು ಅಧ್ಯಯನಗಳ ಟೈಟಲ್‌ಗಳನ್ನು ನೋಡಿದರೆ ಸಾಕು ಅವುಗಳಲ್ಲಿ  ಜಾನಪದೀಯವಾಗಿ ಚಾರಿತ್ರಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಇತ್ಯಾದಿಯಾಗಿ ಮಾನವಿಕ ಶಿಕ್ಷಣಶಿಸ್ತುಗಳನ್ನು ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನಗಳಲ್ಲಿ ಒಗ್ಗೂಡಿಸಿಕೊಳ್ಳುವ ಮತ್ತು ಅಂತರಶಿಸ್ತೀಯವಾಗಿ ಅಧ್ಯಯನವನ್ನು ರೂಪಿಸಿಕೊಳ್ಳುವ ಪರಿಪಾಠ ಕಾಣುತ್ತದೆ. ಸಮಾಜದ ಸಂಕೀರ್ಣತೆ ಮತ್ತು ಶೈಕ್ಷಣಿಕತೆಗಳೆರಡೂ ನಮ್ಮ ವಿಶ್ವವಿದ್ಯಾಲಯ ಸಂಶೋಧನೆಗಳನ್ನು ಇನ್ನಿಲ್ಲದಂತೆ ಪ್ರಭಾವಿಸಿವೆ ಎನ್ನುವದರಲ್ಲಿ ಎರಡು ಮಾತಿಲ್ಲ.

ಸುಮ್ಮನೆ ಕುತೂಹಲಕ್ಕೆ ನಮ್ಮಲ್ಲಿ ಪ್ರಕಟವಾಗಿರುವ ಪಿಎಚ್.ಡಿ. ಥೀಸೀಸುಗಳನ್ನು ನೀವು ಗಮನಿಸಿ. ನೀವು ಗಮನಿಸುವ ಯಾವ ಗ್ರಂಥಗಳಲ್ಲು ಅಂತರ್ಜಾಲದ ಅಡಿ ಟಿಪ್ಪಣಿ ಇರದಿದ್ದರೆ ಅಚ್ಚರಿಪಡಬೇಕಿಲ್ಲ. ನಮ್ಮ ಬಹುಪಾಲು ಸಂಶೋಧಕರು ಕಂಪ್ಯೂಟರ್ ಅನಕ್ಷರಿಗಳು. ಅಷ್ಟೆ ಅಲ್ಲ ಕನ್ನಡ ಸಾಹಿತ್ಯ – ಸಂಸ್ಕೃತಿಯಾದರೂ ಎಷ್ಟರಮಟ್ಟಿಗೆ ಅಂತರ್ಜಾಲಕ್ಕೆ ತುಂಬಲ್ಪಟಿದೆ? ಅಂತರ್ಜಾಲದಲ್ಲಿ ಎಷ್ಟು ಸಾಮಗ್ರಿ ಸಿಗುತ್ತದೆ. ಏನೇ ಆಗಲಿ ಪದವಿಯಿಂದ ಸಿಗುವ ಲೌಕಿಕವಾದ (ವೈಯಕ್ತಿಕವಾದ) ಪ್ರತಿಫಲಗಳು ಸಾಕಷ್ಟು ಇರುವುದರಿಂದ ನಮ್ಮಲ್ಲಿ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಹಾಗೆ ನೋಡಿದರೆ ನಮ್ಮಲ್ಲಿ ಯಾರೂ ಸಂಶೋಧನೆಯ ಪ್ರಯೋಜನ ಕುರಿತು ಮಾತನಾಡುವಾಗ ತಮ್ಮ ವೈಯಕ್ತಿಕವಾದ ಪ್ರಯೋಜನಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ಅವೇ ಹೆಚ್ಚು ಪ್ರಮುಖವಾದುವು. ಸಾಮಾಜಿಕತೆ ಅಥವಾ ಸಂಶೋಧನೆಯ ಸಾಮಾಜಿಕ ಜವಾಬ್ದಾರಿ ಅನಂತರದ್ದು. ಅದಕ್ಕಾಗಿಯೆ ನಮ್ಮ ಸಾರ್ವಜನಿಕರು ಸಂಶೋಧನೆಯ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ವಿಶೇಷವಾಗಿ ಸಾಹಿತ್ಯ ಮತ್ತು ಮಾನವಿಕಗಳ ಸಂಶೋಧನೆಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಇರುವುದೇ ಇಲ್ಲ. ವಿಜ್ಞಾನದ ಸಂಶೋಧನೆಗಳು ಮಾತ್ರ ಸಾಕು ಮಿಕ್ಕ ಸಂಶೋಧನೆಗಳು ಅನಗತ್ಯ. ಸರ್ಕಾರಿ ವೆಚ್ಚದ ದುರ್ಬಳಕೆ ಎಂಬಂತೆಲ್ಲ ಮಾತಾಡುತ್ತಾರೆ. ಇದಕ್ಕೆ ಸೊಪ್ಪು ಹಾಕದಂತೆ ಮತ್ತು ಉಪ್ಪು ಸವರುವಂತೆ ಈ ಎರಡೂ ಬಗೆಯಲ್ಲಿ ನಮ್ಮ ಸಾಕಷ್ಟು ಸಂಶೋಧನಾ ಅಧ್ಯಯನಗಳು ಇವೆ.

ನಮ್ಮ ವಿಶ್ವವಿದ್ಯಾಲಯದ ಸಂಶೋಧನೆಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ನಾಲ್ಕು ಪ್ರಶ್ನೆಗಳನ್ನು ಕೇಳಿಕೊಂಡು ಈ ಲೇಖನವನ್ನು ಮುಗಿಸುತ್ತೇನೆ. ೧. ನಮ್ಮ ಪಿ.ಎಚ್.ಡಿ. ಅಧ್ಯಯನಗಳ ತಲೆಬರಹ – ನಾಮಕರಣ ವಿನ್ಯಾಸ ಹೇಗಿದೆ? ೨. ಸಿದ್ಧವಿಧಾನ, ಸಿದ್ಧ ಸೂತ್ರಗಳ ಅನುಸರಣೆ ಆಗುತ್ತಿದೆಯೋ? ಹೊಸ ವಿಧಾನಗಳ ಸೃಷ್ಟಿ ಆಗುತ್ತಿದೆಯೋ? ೩. ಅಧ್ಯಯನಗಳು ಕಾಲಕಾಲಕ್ಕೆ ಯಾವ ಸ್ವರೂಪ ಪಡೆಯುತ್ತಿವೆ? ಅಥವಾ ಸಾಹಿತ್ಯ ಅಧ್ಯಯನಗಳು ಕಡಿಮೆಯಾಗಿ ಸಾಹಿತ್ಯೇತರ ಅಧ್ಯಯನಗಳು ಹೆಚ್ಚಾಗುತ್ತಿವೆಯೋ? (ನೋಡಿ ಅನುಬಂಧ – ೫, ಕಾಲ ಆಕಾರಾದಿ) ೪. ವಿಶ್ವವಿದ್ಯಾಲಯವಾರು ಅಧ್ಯಯನಗಳಿಗೆ ಭಿನ್ನ ಚಹರೆಗಳಿವೆಯೇ? (ಅನುಬಂಧ – ೫ರಲ್ಲೆ ವಿಶ್ವವಿದ್ಯಾಲಯವಾರು ಗಮನಿಸಿ)

ಒಂದು ಅಧ್ಯಯನ ಎಂಬ ಪರಿಕಲ್ಪನೆಯಿಂದ ನಾವಿನ್ನೂ ಬಿಡುಗಡೆಗೊಂಡಿಲ್ಲ. ಇವುಗಳದ್ದೆ ಯಜಮಾನಿಕೆ ಜಾಸ್ತಿಯಾಗಿದೆ. ಹಲವಾರು ಅಧ್ಯಯನಗಳ ತಲೆಬರಹವೇ ಒಂದು, ಒಳಹೂರಣವೇ ಇನ್ನೊಂದು ಎಂಬಂತೆ ಇವೆ. ಸಂಶೋಧನೆಯಲ್ಲಿ ಸಿದ್ಧ ಸೂತ್ರಗಳ ಅನ್ವಯ ಹೆಚ್ಚು. ಹೊಸ ವಿಧಾನಗಳ ಸಂಶೋಧನೆ ಕಡಿಮೆ. ಒಂದು ಅಧ್ಯಯನಗಳನ್ನು ಬಿಟ್ಟರೆ ನಮ್ಮಲ್ಲಿ ವ್ಯಕ್ತಿಕೇಂದ್ರಿತ ಅಧ್ಯಯನಗಳೇ ಜಾಸ್ತಿ, ಇವನ್ನು ಬಿಟ್ಟರೆ ಸಾಂಸ್ಕೃತಿಕ ಅಧ್ಯಯನಗಳದ್ದು ಕೂಡ ಸಿಂಹಪಾಲು ಇದೆ. ಸಾಹಿತ್ಯ ಅಧ್ಯಯನಗಳು ಕೂಡ ಸಾಂಸ್ಕೃತಿಕ ನೆಲೆಯಿಂದ ಇತ್ತೀಚೆಗೆ ಹೆಚ್ಚು ಹೆಚ್ಚು ನಡೆಯುತ್ತಿವೆ. ಅಲ್ಲದೆ ಸಾಹಿತ್ಯ ಅಧ್ಯಯನಗಳು – ಸಾಹಿತ್ಯೇತರ ಅಧ್ಯಯನಗಳು ಕಲಸಿಕೊಳ್ಳುತ್ತಿವೆ. ಕನ್ನಡ ಅಧ್ಯಯನಗಳಾಗಿ ರೂಪ ಪಡೆಯುತ್ತಿವೆ. ಒಂದೊಂದು ವಿಶ್ವವಿದ್ಯಾಲಯಗಳೂ ಅಲ್ಲಿನ ಗೈಡುಗಳ ಸಂವೇದನೆಗಳಿಗೆ ತಕ್ಕಂತೆ ಹೆಚ್ಚು ಅಧ್ಯಯನಗಳನ್ನು ಉತ್ಪಾದಿಸುತ್ತಿವೆಯೇನೋ ಎಂಬ ಗುಮಾನಿ ಟೈಟಲ್ಲುಗಳನ್ನು ನೋಡಿದರೆ ಬರುತ್ತದೆ. ಅಧ್ಯಯನಗಳ ನಾಮಾಂಕಿತಗಳಲ್ಲಿ ಅಭಿಮಾನ ಹೆಚ್ಚು ಢಾಳಾಗಿ ಕಾಣುತ್ತದೆ. ಬೆಂಗಳೂರಲ್ಲಿ ವಾಲೀಕಾರರು ಅಧ್ಯಯನ ಯೋಗ್ಯರಲ್ಲ. ಗುಲ್ಬರ್ಗದಲ್ಲಿ ಅಡಿಗರು ಅಧ್ಯಯನಕ್ಕೆ ಅರ್ಹರಲ್ಲ ಎಂಬುದು ವಿ.ವಿ.ವಾರು ಅಧ್ಯಯನಗಳನ್ನು ನೋಡಿದರೆ ತಿಳಿಯುತ್ತದೆ. ಇನ್ನು ಆಯಾಯಾ ವಿಶ್ವವಿದ್ಯಾಲಯಗಳ ವಿದ್ವಾಂಸರ ಬದುಕು ಬರಹಗಳ ಭಟ್ಟಂಗಿ ಅಧ್ಯಯನಗಳೂ ಆಯಾಯಾ ವಿ.ವಿ.ಗಳಲ್ಲಿ ಜಾಸ್ತಿಯಾಗಿವೆ.

ಇತ್ತೀಚಿನ ಸಾಹಿತ್ಯಕ ಸಂಶೋಧನೆಗಳು ಹೆಚ್ಚು ಹೆಚ್ಚು ಸಾಂಸ್ಕೃತಿಕ ಆಗುತ್ತಿವೆ. ಒಟ್ಟಾರೆ ಸಮಾಜವನ್ನು ಒಳಗೊಳ್ಳುವ ಕಡೆಗೆ ಚಲಿಸುತ್ತಿವೆ. ವಸ್ತುನಿಷ್ಟತೆ, ಮೌಲ್ಯನಿರಪೇಕ್ಷತೆ, ಪೂರ್ವಾಗ್ರಹ ಮುಕ್ತತೆ ಎಲ್ಲವೂ ಪ್ರಶ್ನಿತಗೊಂಡಿವೆ. ಅಲ್ಲದೆ ಪಿಎಚ್.ಡಿ. ಪದವಿ ಅಧ್ಯಯನಗಳು ವಿಶ್ಲೇಷಣೆ, ಮರುನಿರೂಪಣೆ, ಸಂಯೋಜನೆಗಳಿಂದ ವಿಮರ್ಶೆಯ ರೂಪವನ್ನೆ ತಾಳುತ್ತಿವೆ. ಹಲವಾರು ಸಾಹಿತ್ಯ ಅಧ್ಯಯನಗಳಲ್ಲಿ ಸಂಶೋಧನಾ ಅಧ್ಯಯನ ಮತ್ತು ವಿಮರ್ಶಾತ್ಮಕ ಅಧ್ಯಯನಗಳ ನಡುವಿನ ಗೆರೆಗಳು ಅಳಿಸಿ ಹೋಗುತ್ತಿವೆ. ಪದವಿಗಳ ಆಚೆಗಿನ ಸಂಶೋಧನೆಗಳೆ ಹೆಚ್ಚು ವ್ಯಾಪಕತೆಯನ್ನು ಪಡೆದಿವೆ. ಪದವಿ ಅಧ್ಯಯನಗಳು ಸಂಶೋಧಕರನ್ನು ಸಂಶೋಧನೆಯ ಮೆಟ್ಟಿಲಿಗೆ ತಂದು ಬಿಡಬಹುದು. ಆದರೆ ಪದವಿ ನಂತರವೂ ಅವರು ಅದೇ ಕ್ಷೇತ್ರದಲ್ಲಿ ಉಳಿದರೆ ಏನಾದರೂ ಮೌಲಿಕ ಕೊಡುಗೆ ನೀಡಬಲ್ಲರು. ಇಲ್ಲವಾದರೆ ಇಲ್ಲ. ಪದವಿ ಪಡೆಯುವುದು ಮಾತ್ರವೆ ಉದ್ದೇಶ ಆಗಿರುವವರು ಸಂಶೋಧನೆಯನ್ನು ಪದವಿಗಾಗಿ ಮಾತ್ರ ತಯಾರು ಮಾಡುತ್ತಾರೆ. ಆಗ ಅದು ಸಂಶೋಧನೆ ಆಗುವುದಕ್ಕಿಂತ ಪದವಿ ಪ್ರಬಂಧ ಮಾತ್ರ ಆಗಿ ಇರುತ್ತದೆ. ನಮ್ಮಲ್ಲಿನ ಬಹುತೇಕ ಪದವಿ ನಿಮಿತ್ತ ಸಂಶೋಧನೆಗಳು ತಾಂತ್ರಿಕವಾಗಿ ಪದವಿಗೆ ಬೇಕಾದ ಅಗತ್ಯಗಳನ್ನು ಹೊಂದಿರುತ್ತವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಹಲವಾರು ಅಧ್ಯಯನಗಳು ಮೂಡಿಬಂದಿವೆ ಕೂಡ.

[ಈ ಲೇಖನದಲ್ಲಿ ೨೦೦೧ ರಿಂದ ೨೦೧೧ರವರೆಗಿನ ಸಂಶೋಧನೆಯನ್ನು ಆಮೂಲಾಗ್ರವಾಗಿ ಸಮೀಕ್ಷಿಸುವುದಾಗಲೀ, ಮೌಲ್ಯಮಾಪನಕ್ಕೆ ಗುರಿಪಡಿಸುವುದಾಗಲೀ ಮಾಡಿಲ್ಲ. ಹಾಗೆ ಮಾಡಲು ಇನ್ನಷ್ಟು ಅಧ್ಯಯನ ಮತ್ತು ವ್ಯಾಪ್ತಿ ಬೇಕಾಗುತ್ತದೆ. ಹಾಗೆ ನೋಡಿದರೆ ಇಲ್ಲಿ ಖಚಿತವಾಗಿ ಕೇವಲ ಈ ಕಾಲಘಟ್ಟಕ್ಕೆ ಮಾತ್ರ ಸೀಮಿತಗೊಂಡೂ ಇಲ್ಲ. ಅದರಾಚೆಗೂ ಅಲ್ಲಲ್ಲಿ ಜಿಗಿಯಲಾಗಿದೆ. ಹಾಗೆ ಕಾಲವನ್ನು ಕತ್ತರಿಸಿಕೊಂಡಂತೆ ಸಂವೇದನೆಗಳನ್ನು ಕತ್ತರಿಸಿಕೊಳ್ಳಲು ಆಗುವುದಿಲ್ಲವಲ್ಲ. ಹಾಗಾಗಿ ಇಲ್ಲಿ ಕೆಲವೆಡೆ ಆಚೀಚೆ ಕೂಡ ಸರಿಯಲಾಗಿದೆ. ಇಲ್ಲಿ ಈ ಕಾಲಘಟ್ಟದ ಸಾಹಿತ್ಯ ಅಧ್ಯಯನದ ಕೆಲವು ಟ್ರೆಂಡುಗಳನ್ನು ಮತ್ತು ಲಕ್ಷಣಗಳನ್ನು ಮಾತ್ರ ಗುರ್ತಿಸಿಕೊಳ್ಳಲು ಯತ್ನಿಸಲಾಗಿದೆ. ಇದೂ ಕೂಡ ಸಮಗ್ರವಲ್ಲ. ಅಲ್ಲದೆ ಸಂಶೋಧನೆಯಲ್ಲಿ ಪ್ರಕಟವಾಗಿರುವ ಕೆಲವು ಗ್ರಂಥಗಳನ್ನು ಮಾತ್ರ ಇಲ್ಲಿ ಗಮನಿಸಲಾಗಿದೆ. ಈ ನೆಲೆಯಲ್ಲಿ ಬಂದಿರುವ ಲೇಖನಗಳನ್ನು ಆಮೂಲಾಗ್ರವಾಗಿ ಗಮನಿಸಲು ಆಗಿಲ್ಲ. (ಸಂಗಮೇಶ ಸವದತ್ತಿಮಠ ಅವರು ಸಂಪಾದಿಸುತ್ತಿರುವ ಸಂಶೋಧನಾ ವ್ಯಾಸಂಗ ಪತ್ರಿಕೆಯನ್ನು ಬಿಟ್ಟರೆ ಸಂಶೋಧನೆಗೇ ಮೀಸಲಾದ ಇನ್ನೊಂದು ಪತ್ರಿಕೆ ಕನ್ನಡದಲ್ಲಿ ಇಲ್ಲ. ಕನ್ನಡ ವಿ.ವಿ.ಯೂ ಒಳಗೊಂಡಂತೆ ಎಲ್ಲ ವಿ.ವಿ.ಗಳಲ್ಲು ಕನ್ನಡ ಅಧ್ಯಯನ ಕೇಂದ್ರಗಳಲ್ಲಿ ಪತ್ರಿಕೆಗಳು ಹೊರಡುತ್ತಿವೆ. ಸಂಶೋಧನಾ ಲೇಖನಗಳು ಆಗೀಗ ಅಲ್ಲಿಯೂ ಪ್ರಕಟವಾಗುತ್ತಿವೆ. ಆದರೂ ಅವೆಲ್ಲವೂ ಅನಿಯತಕಾಲಿಕಗಳೇ ಆಗಿವೆ.) ಅಲ್ಲದೆ ಕನ್ನಡಕ್ಕೆ ಅನ್ಯ ಭಾಷೆಗಳಿಂದ ಅನುವಾದ ಆಗಿ ಬಂದಿರುವ ಸಂಶೋಧನೆಗಳನ್ನು ಕೂಡ ಇಲ್ಲಿ ಗಮನಿಸಲು ಆಗಿಲ್ಲ. ಹಾಗಾಗಿ ಇದೂ ಕೂಡ ಈ ಲೇಖನದ ಒಂದು ಮಿತಿಯಾಗಿದೆ. ಅಷ್ಟೆ ಅಲ್ಲ ಇಲ್ಲಿ ನೀಡಿರುವ ವಿ.ವಿ.ವಾರು ಪಿಎಚ್.ಡಿ. ಅಧ್ಯಯನಗಳ ಪಟ್ಟಿಯಲ್ಲಿ ೨೦೧೧ರವರೆಗೆ ನಡೆದಿರುವ ಎಲ್ಲ ಅಧ್ಯಯನಗಳ ಪಟ್ಟಿಯನ್ನು ಸಮಗ್ರವಾಗಿ ನೀಡಲು ಸಾಧ್ಯವಾಗಿಲ್ಲ. ಕಾಲಮಿತಿಯಲ್ಲಿ ಈ ಲೇಖನವನ್ನು ಸಿದ್ಧಪಡಿಸಬೇಕಾದ್ದರಿಂದ ವಿಶ್ವವಿದ್ಯಾಲಯಗಳನ್ನು ಖುದ್ದಾಗಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲು ಆಗಲಿಲ್ಲ. ಅಲ್ಲದೆ ಮಂಗಳೂರು ವಿ.ವಿ. ಬಿಟ್ಟರೆ ಮತ್ತಾವ ವಿ.ವಿ.ಯೂ ತಮ್ಮ ವೆಬ್‌ಸೈಟುಗಳನ್ನು ಅಪ್‌ಡೇಟು ಮಾಡಿಲ್ಲ. ಹಂಪಿಯವರು ೨೦೦೫ಕ್ಕೆ ನಿಂತುಬಿಟ್ಟಿದ್ದಾರೆ. ಹಂಪಿಯ ಸಂಶೋಧನಾ [ಪದವಿ ವಿವರಗಳನ್ನು ೨೦೦೫ರವರೆಗೆ ಮಾತ್ರ ಡೌನ್‌ಲೋಡು ಮಾಡಿಕೊಳ್ಳಲಾಗಿದೆ. ಹಾಗಾಗಿ ಈ ಲೇಖನಕ್ಕೆ ಹಲವು ಮಿತಿಗಳಿವೆ.[5] ]


[1] ಪ್ರಾಯೋಗಿಕ ವಿಮರ್ಶೆ ಮತ್ತು ಆಯ್ದ ಕವಿತೆಗಳ ಗದ್ಯರೂಪಿ ನಿರೂಪಣೆಗಳನ್ನೆ ಅಧ್ಯಯನ ಎಂದು ಕರೆದುಕೊಂಡಿರುವ ಪುಸ್ತಕ ಮಲ್ಲೇಪುರಂ ಅವರದ್ದು. ನೋಡಿ: ಕಾವ್ಯಕಥನ; ಆಧುನಿಕ ಕಾವ್ಯದ ಕಥನಾತ್ಮಕ ಅಧ್ಯಯನ – ಸಪ್ನ ಬುಕ್ ಹೌಸ್, ೨೦೦೮. ಇಲ್ಲಿ ಕವಿತೆಗಳನ್ನು ದೀರ್ಘವಾಗಿ, ಇಡಿಇಡಿಯಾಗಿ ಉಲ್ಲೇಖಿಸಲಾಗಿದೆ.

[2] ಸಾಹಿತ್ಯ ವಿಮರ್ಶೆ ಮತ್ತು ಸಂಶೋಧನೆಯ ಭೇದ ಅಳಿಸಿಯೇ ಹೋಗಿರುವುದಕ್ಕೆ ಒಂದು ಉತ್ತಮ ಉದಾಹರಣೆಯಾಗಿ ನೋಡಿ; ಶ್ರೀರಂಗ: ರಂಗಸಾಹಿತ್ಯ – ಡಾ.ವಿಜಯಾ, ೨೦೦೨. ಈ ಅಧ್ಯನದ ಮುಖ್ಯ ಭಾಗ ನಾಟಕಗಳ ಪ್ರಾಯೋಗಿಕ ವಿಮರ್ಶೆಯೇ ಆಗಿದೆ.

[3] ಎಂ.ಡಿ.ವಕ್ಕುಂದ ಅವರ ಅಪ್ರಕಟಿತ ಅಧ್ಯಯನದ ವಿಮರ್ಶೆಗೆ ನೋಡಿ: ಕನ್ನಡ ಸಂಶೋಧನೆ ಧರ್ಮ ಮತ್ತು ಮತೀಯತೆ – ಡಾ.ಮಾಧವ ಪೆರಾಜೆ, ಅರುಹು ಕುರುಹು ಪತ್ರಿಕೆ, ಸಂ.ಎಚ್.ಎಸ್.ಉಮೇಶ, ಅಕ್ಟೋ – ಡಿಸೆಂ – ೨೦೧೧.

[4] ಹೊಸ ಮಡಿಯ ಮೇಲೆ ಚದುರಂಗ – ಸಿ.ಎನ್. ರಾಮಚಂದ್ರನ್, ಸಪ್ನ ಬುಕ್ಸ್, ಬೆಂಗಳೂರು, ೨೦೦೭.

[5] ವಿವಿಧ ವಿಶ್ವವಿದ್ಯಾಲಯಗಳಿಗೆ ಅಲ್ಲಿಕೆಯಾಗಿರುವ ೨೦೦೫ರವರೆಗಿನ ಮಹಾಪ್ರಬಂಧಗಳ ಪಟ್ಟಿಗೆ ನೋಡಿ; ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸಂಶೋಧನೆ – ಸಂ.ಆರ್.ವಿ.ಎಸ್.ಸುಂದರಂ. ಮತ್ತು ಇತರರು, ತಾರಾ ಪ್ರಿಂಟಿಂಗ್ ಅಂಡ್ ಪಬ್ಲಿಶಿಂಗ್ ಹೌಸ್, ೨೦೦೬. ಹಾಗೆಯೆ ನೋಡಿ; ಸಂಗಮೇಶ ಸವದತ್ತಿಮಠ ಅವರ ಸಂಶೋಧನಾ ವ್ಯಾಸಂಗ ದ್ವೈಮಾಸಿಕ.