ನಮ್ಮ ಬಹುಪಾಲು ಹೊಸಬರಿಗೆ ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ನೊಂದಣಿ ಮಾಡಿಸಿಕೊಂಡಾಗ ಹೇಗೆ ಅಧ್ಯಯನ ಮಾಡಬೇಕೆಂಬ ತಾತ್ವಿಕ ತಿಳುವಳಿಕೆ ಇರುವುದಿಲ್ಲ. ಪ್ರಾಥಮಿಕ ತಿಳುವಳಿಕೆ ಕೂಡ ಇರುವುದಿಲ್ಲ. ಆಗ ಸಾಮಾನ್ಯವಾಗಿ ಅವರು ಈಗಾಗಲೆ ಬಂದಿರುವ ಪಿ.ಎಚ್.ಡಿ ಗ್ರಂಥಗಳನ್ನು ಮಾದರಿಯಾಗಿ ಇಟ್ಟುಕೊಳ್ಳುತ್ತಾರೆ. ಹಾಗೆ ಇಟ್ಟುಕೊಂಡಾಗ ಕುಮಾರವ್ಯಾಸನ ಕಾವ್ಯದಲ್ಲಿ ಜಾನಪದೀಯ ಅಂಶಗಳು ಒಂದು ಅಧ್ಯಯನ ಎಂಬ ಕೃತಿಯೊಂದು ಅದಾಗಲೇ ಪಿಎಚ್.ಡಿ. ಪಡೆದ ಗ್ರಂಥ ಸಿಗುತ್ತದೆ ಎಂದುಕೊಳ್ಳೋಣ. ಆಗ ಅದನ್ನೆ ಮಾದರಿಯಾಗಿ ಮಾಡಿಕೊಂಡು ಸ್ವಲ್ಪ ಮಾರ್ಪಡಿಸಿ ಪಂಪನ ಕಾವ್ಯದಲ್ಲಿ ಜಾನಪದೀಯತೆ ಎಂದು ತಮ್ಮದೆ ಒಂದು ವಿಷಯ ರೂಪಿಸಿಕೊಳ್ಳುತ್ತಾರೆ. ಆಗ ವಸ್ತು, ವಿಧಾನ ಎಲ್ಲವೂ ಸಿದ್ಧ ಮಾದರಿಯ ಅನ್ವಯೀಕರಣ – ಅನುಕರಣೆಯೇ ಆಗುತ್ತದೆ. ಎಲ್ಲ ಪದವಿಗಳಂತೆ ಪಿ.ಎಚ್.ಡಿ.ಯನ್ನು ಕೂಡ ಟೆಕ್ನಿಕಲ್ಲಾಗಿ ಒಂದು ಪದವಿ ಎಂದು ಭಾವಿಸಿದಾಗ ಹೊಸ ವಿಧಾನಗಳ ಶೋಧನೆ ಆಗುವುದಿಲ್ಲ. ವಿಧಾನಗಳು – ದಾರಿಗಳು ನಮ್ಮನ್ನು ಎಲ್ಲಿಗೆ ಕರೆದೊಯ್ಯಬಹುದು ಎಂಬ ಅರಿವು ಇಲ್ಲದಾಗಂತು ಅದದೇ ಸ್ಟೀರಿಯೋ ಟೈಪ್ ಆದ ಒಂದು ಅಧ್ಯಯನಗಳು – ಸಾಂಸ್ಕೃತಿಕ ಅಧ್ಯಯನಗಳು ಸೃಷ್ಟಿಯಾಗುತ್ತವೆ. ವಸ್ತುವನ್ನು ಹೇಗೆ ಆಯ್ದುಕೊಳ್ಳಬೇಕು, ತಲೆಬರಹವನ್ನು ಹೇಗೆ ರೂಪಿಸಿಕೊಳ್ಳಬೇಕು, ತಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಮತ್ತು ತಿಳುವಳಿಕೆ ಇದೆ ಎಂಬ ವಿಚಾರಗಳೇ ಹಲವು ವಿದ್ಯಾರ್ಥಿಗಳಿಗೆ ತಿಳಿದಿರುವುದಿಲ್ಲ. ಅದಕ್ಕಾಗೆ ಪ್ರಿ ಪಿಎಚ್.ಡಿ. ಪರೀಕ್ಷೆಗಳು ಇದ್ದರೂ ಅದಕ್ಕಾಗಿ ಪ್ರಾಥಮಿಕ ವಿವರಗಳನ್ನು ನೀಡುವ ಗ್ರಂಥಗಳು ನಮ್ಮಲ್ಲಿಲ್ಲ. ಹಾಗಾಗಿ ನಮ್ಮ ಹಲವಾರು ಪದವಿ ಅಧ್ಯಯನಗಳು ಅವಸರದ ಮತ್ತು ಸಂತೆ ಹೊತ್ತಿಗೆ ಮೂರು ಮೊಳ ನೇಯ್ದ ಅಧ್ಯಯನಗಳೇ ಆಗಿವೆ. ಕೆಲವಂತೂ ಅತಿ ಮಹತ್ವಾಕಾಂಕ್ಷಿ ಅಧ್ಯಯನಗಳಾಗಿ ಕಾಣುತ್ತವೆ. ಆದರೆ ಹೂರಣದಲ್ಲಿ ಸೋತಿರುತ್ತವೆ. ಕ್ಷೇತ್ರಾಧ್ಯಯನ ಮಾಹಿತಿ ಅಪಾರವಾಗಿ ಸಂಗ್ರಹಿಸಲ್ಪಟ್ಟು ವ್ಯಾಖ್ಯಾನವೆ ಇಲ್ಲದೆ ಕೇವಲ ಮಾಹಿತಿಗಳ ಚೀಲಗಳಂತೆ ಹಲವು ಅಧ್ಯಯನಗಳು ಇರುತ್ತವೆ.

ಅಧ್ಯಯನದ ವಿಧಾನ, ಅಧ್ಯಯನದ ಸ್ವರೂಪ ಮತ್ತು ವ್ಯಾಪ್ತಿಗಳ ಬಗೆಗೆ ಖಚಿತವಾದ ತಿಳುವಳಿಕೆ ಇಲ್ಲದೆ ಇರುವಾಗ ಕೆಲವೊಮ್ಮೆ ಮಾಹಿತಿಗಳ ಸಂಗ್ರಹ ಅಪಾರವಾಗುತ್ತದೆ. ಏನೇನು ಸಿಗುತ್ತದೋ ಅದೆಲ್ಲವನ್ನೂ ಗುಡ್ಡೆ ಹಾಕಿಕೊಳ್ಳೋಣ. ಯಾವುದು ಹೇಗೆ ಬೇಕಾಗುತ್ತದೋ ಎಂಬ ಮನಸ್ಥಿತಿಯೇ ಬಹುವೇಳೆ ಅಧ್ಯಯನಕಾರರಲ್ಲಿ ಇರುತ್ತದೆ. ಆಗ ಪರಿಶ್ರಮ ಎದ್ದು ಕಾಣುವಂತೆ ಬೇಕಾದ ಮತ್ತು ಬೇಕಿಲ್ಲದ ಎಲ್ಲ ಮಾಹಿತಿ ಅಪಾರವಾಗಿ ಸುರಿಯಲ್ಪಟ್ಟಿರುತ್ತದೆ. ಆದರೆ ಮಾಹಿತಿಯ ವಿಶ್ಲೇಷಣೆ, ಪರಿಕಲ್ಪನೀಕರಣ, ತಾತ್ವೀಕರಣ ಮತ್ತು ಸಿದ್ಧಾಂತಗಳ ಮಂಡನೆಗಳಲ್ಲಿ ಕೃತಿಯು ಸೋತಿರುತ್ತದೆ. ಕ್ಷೇತ್ರಕಾರ‍್ಯಾಧಾರಿತ ಅಧ್ಯಯನದ ನೇರ ಸಾಮಗ್ರಿ ಮತ್ತು ಉಪಉತ್ಪನ್ನಗಳ ಖಚಿತ ಭೇದದ ತಿಳುವಳಿಕೆ ಇಲ್ಲದಾಗಲು ಅಧ್ಯಯನದ ವ್ಯಾಪ್ತಿ ಅಸ್ವಷ್ಟವಾಗುವುದುಂಟು. ಆಗ ಉತ್ಪನ್ನ ಮತ್ತು ಉಪ ಉತ್ಪನ್ನಗಳು ಕಲಸಿಕೊಳ್ಳುತ್ತವೆ. ಯಾವುದನ್ನು ಹೇಗೆ ಎಷ್ಟು ಬಳಸಬೇಕು ಎಂಬ ಸ್ಪಷ್ಟತೆ ಇಲ್ಲದಿರುವಾಗಲು ಹೀಗಾಗುವುದುಂಟು.

ಕ್ಷೇತ್ರದ ಅಜಮಾಸು ತಿಳುವಳಿಕೆ ಇಲ್ಲದೆ; ಅಧ್ಯಯನದ ವಿಧಾನಗಳ ಚಾರಿತ್ರಿಕ ತಿಳುವಳಿಕೆ ಇಲ್ಲದೆ ದಿಢೀರನೆ ಕೈಗೊಂಡ ಅಧ್ಯಯನಗಳಲ್ಲಿ ಪರಿಕಲ್ಪನೀಕರಣ ಮತ್ತು ತಾತ್ವೀಕರಣಗಳೆ ಇರುವುದಿಲ್ಲ. ತಾವು ಹೇಳುತ್ತಿರುವ ವಿಷಯವನ್ನು ನೂರಾರು ಪದಗಳಲ್ಲಿ ವಿವರಿಸುವುದಕ್ಕಿಂತ ಒಂದು ಪರಿಕಲ್ಪನೆಯ ಮೂಲಕ ಮಂಡಿಸಬಹುದಾಗಿರುತ್ತದೆ. ಆದರೆ ನಮ್ಮ ಅನೇಕ ಅಧ್ಯಯನಗಳಲ್ಲಿ ಪ್ರಮೇಯಗಳನ್ನು ಮಂಡಿಸಿ ಸಿದ್ಧಾಂತಗಳನ್ನು ರೂಪಿಸುವುದಾಗಲೀ; ಹೊಸಹೊಸ ಪರಿಕಲ್ಪನೆಗಳನ್ನು ಸೃಷ್ಟಿಸುವುದಾಗಲೀ, ನವೀನ ಪರಿಭಾಷೆಯನ್ನು ನಿರ್ಮಾಣ ಮಾಡುವುದಾಗಲೀ ತುಂಬಾ ಕಡಿಮೆ. ಜಾಡಿಗೆ ಬಿದ್ದ ಸ್ಥಾಪಿತ ಪರಿಭಾಷೆಗಳು, ಕಡತಂದ ವಿಧಾನಗಳು, ಪರಿಕಲ್ಪನೆಗಳನ್ನೇ ನಮ್ಮ ಬಹುಪಾಲು ಅಧ್ಯಯನಗಳು ಬಳಸುತ್ತವೆ. ಹಾಗೆ ಬಳಸುವಾಗ ಈ ಹಿಂದಿನ ಪಿಎಚ್.ಡಿ. ಪದವಿ ಪಡೆದ ಅಧ್ಯಯನಗಳನ್ನೆ ಮಾದರಿಯಾಗಿ ಇಟ್ಟುಕೊಳ್ಳಲಾಗಿರುತ್ತದೆ.

ಕೋಟು ಜೋರು ಷರಟೇ ಇಲ್ಲ !

ತೆಲುಗಿನಲ್ಲಿ ಥೀಸೀಸಂಟೆ ತೀಸಿ ತೀಸಿ ರಾಸೇದಿ ಎಂಬ ಮಾತೊಂದಿದೆ. ಅಂದರೆ ಅಲ್ಲಿಂದ ಇಲ್ಲಿಂದ ತೆಗೆದು ತೆಗೆದು, ಕಟ್ ಅಂಡ್ ಪೇಸ್ಟ್ ಮಾಡಿ ಬರೆಯುವುದು. ‘ನಾಲೆಜ್ ಈಸ್ ಕನೆಕ್ಟಿವಿಟಿ’ ಅನ್ನುವುದನ್ನು ವಿಪರೀತಾರ್ಥಕ್ಕೆ ತೆಗೆದುಕೊಂಡು ಥೀಸೀಸ್ ಎಂದರೆ ಕತ್ತರಿಸುವುದು ಮತ್ತು ಜೋಡಿಸುವುದು ಎಂದೇ ಹಲವರು ಭಾವಿಸಿದ್ದಾರೆ. ಇದು ಇತ್ತೀಚಿನ ಟ್ರೆಂಡೇನೂ ಅಲ್ಲ. ಇದೊಂದು ಹಳೆಯ ರೋಗ. ನಾವು ವಿದ್ಯಾರ್ಥಿಗಳಾಗಿದ್ದಾಗ ಬರಗೂರರು ಇಂತಹ ವಿಮರ್ಶಕರ ಬಗ್ಗೆ ಒಂದು ಜೋಕ್ ಮಾಡುತ್ತಿದ್ದರು. ಬೇರೆಯವರನ್ನೇ ಅತಿಯಾಗಿ ಪದೇ ಪದೇ ಕೋಟು ಮಾಡುವವರಿಗೆ ಒಳಗೆ ಷರಟೇ ಇರುವುದಿಲ್ಲ ಎಂದು. ಹಾಗೇ ನಮ್ಮ ಬಹುಪಾಲು ಅಧ್ಯಯನಗಳಲ್ಲಿ ಒಂದೋ ಎರಡೋ ಸಾಲು ವಿವರಣೆ ಇರುತ್ತದೆ. ಪುಟಗಟ್ಟಲೆ ಕೋಟುಗಳು ಇರುತ್ತವೆ. ಕೆಲವೊಂದು ಅಧ್ಯಯನಗಳಂತು ಸಾರಾಂಶೀಕರಣ ಮತ್ತು ಗದ್ಯರೂಪಿ ಮರುನಿರೂಪಣೆಗಳನ್ನೆ ಸಂಶೋಧನೆ ಎಂದು ಭಾವಿಸಿರುತ್ತವೆ. ಕಾವ್ಯಗಳ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ಹೀಗಾಗುವುದುಂಟು. ಕೆಲವೆಡೆಯಂತು ಪುಟಗಟ್ಟಲೆ ಕಾವ್ಯ – ಕಾದಂಬರಿಯ ಆಯ್ದ ಭಾಗಗಳನ್ನು ಕೋಟು ಮಾಡಿ ಒಂದೊ ಎರಡೊ ಸಾಲಿನ ವಿವರಣೆ ನೀಡುವ ಹಾಗೆಯೆ, ಕಾವ್ಯ, ಕಾದಂಬರಿಯ ಆಯ್ದ ಭಾಗದ ಮರುನಿರೂಪಣೆಗಳೆ ಪುಟಗಟ್ಟಲೆ ಇರುತ್ತವೆ. ಹೇಳಬೇಕಾದುದು ಕಡಿಮೆ ಇದ್ದು ಪುಟಗಳನ್ನು ತುಂಬಿಸಬೆಕಾದ ಅನಿವಾರ್ಯತೆ ಇದ್ದಾಗ ಕೆಲವರು ಉದ್ದೇಶಪೂರ್ವಕವಾಗಿ ಹೀಗೆ ಮಾಡುವುದುಂಟು. ಕೆಲವು ಅಧ್ಯಯನಗಳಲ್ಲಿ ಕೋಟುಗಳನ್ನು ಮತ್ತು ತತ್ಸಂಬಂಧಿ ಅಡಿಟಿಪ್ಪಣಿಗಳನ್ನು ಕತ್ತರಿಸಿದರೆ ಥಿಸೀಸೇ ಅಳ್ಳಕವಾಗಬಹುದು. ಆಧಾರ ಗ್ರಂಥಗಳನ್ನು ಮತ್ತು ಅಡಿಟಿಪ್ಪಣಿಗಳನ್ನು ತೆಗೆದರೆ ಅಡಿಪಾಯ ತೆಗೆದ ಕಟ್ಟಡಗಳಂತೆ ಕೆಲವು ಥೀಸೀಸುಗಳು ಕುಸಿದುಬಿಡಬಹುದು.

ತಾತ್ವಿಕತೆಗಿಂತ ಬಹುತೇಕ ಅಧ್ಯಯನಗಳಲ್ಲಿ ವಿವರಣಾತ್ಮಕ ನಿರೂಪಣೆಗಳೇ ಅಧಿಕವಾಗಿರುತ್ತವೆ. ಕವಿ – ಕೃತಿಗಳ ಅಧ್ಯಯನಗಳಲ್ಲಿ ಬದುಕು ಬರಹಗಳ ಅಧ್ಯಯನಗಳಲ್ಲಿ ಇಂಥವು ಹೆಚ್ಚು; ಅನೇಕ ವೇಳೆ ಪರಿಚಯಾತ್ಮಕವಾದ ಬರವಣಿಗೆಯಲ್ಲೆ ಅಧ್ಯಯನ ಮುಗಿಸುವವರೂ ಇದ್ದಾರೆ. ವಿಮರ್ಶಾತ್ಮಕ ಅಧ್ಯಯನಗಳಲ್ಲಿ ಇದು ಹೆಚ್ಚು. ಡಯಕ್ರಾನಿಕ್ ಅಪ್ರೋಚಿಗಿಂತ (ಬಿಡಿ ವಿಧಾನ) ಸಿಂಕ್ರಾನಿಕ್ ಅಪ್ರೋಚೇ (ಇಡಿ ವಿಧಾನ) ಇಂಥ ಅಧ್ಯಯನಗಳಲ್ಲಿ ಮೇಲುಗೈ ಸಾಧಿಸಿದೆ. ಹಕ್ಕಿ ನೋಟ, ಸಿಂಹಾಲೋಕನ ದೃಷ್ಟಿಗಿಂತ ಬಿಡಿ ಬಿಡಿ ವಿಶ್ಲೇಷಣೆಗಳನ್ನು ಒಟ್ಟು ಸೇರಿಸಿ ಅಧ್ಯಯನ ಮುಗಿಸುವ ಲಕ್ಷಣವೂ ಇಲ್ಲುಂಟು. ಉದಾಹರಣೆಗೆ ಕುವೆಂಪು ನಾಟಕಗಳನ್ನು ಅಧ್ಯಯನ ಮಾಡುವಾಗ ಒಂದೊಂದೇ ನಾಟಕವನ್ನು ವಿವರಿಸುತ್ತಾ ಹೋಗುವುದು. ಕಾವ್ಯವನ್ನು ಅಧ್ಯಯನ ಮಾಡುವಾಗ ಅದನ್ನೇ ಗದ್ಯದಲ್ಲಿ ನಿರೂಪಿಸುತ್ತಾ ಹೋಗುವುದು ಹೀಗೆ ವಿವರಪೂರ್ಣ ನಿರೂಪಣೆಗಳೂ ನಮ್ಮಲ್ಲಿವೆ. ಸಮಗ್ರವಾಗಿ ಅಥವಾ ಇಡಿಯಾಗಿ ಒಬ್ಬ ಲೇಖಕನ ಸಾಹಿತ್ಯವನ್ನು ಜೀರ್ಣಿಸಿಕೊಂಡು ವಿಚಾರಗಳನ್ನು ಮಂಡಿಸುವುದಕ್ಕಿಂತ ಬಿಡಿಬಿಡಿಯಾಗಿ ಒಂದೊಂದೆ ಕೃತಿಯನ್ನು ವಿವರಿಸುತ್ತ ಹೋಗುವ ವಿವರಣಾತ್ಮಕ ನಿರೂಪಣೆಗಳನ್ನೆ ಸಂಶೋಧನೆ – ಅಧ್ಯಯನ ಎಂಬ ಹೆಸರಿನಲ್ಲಿ ನಮ್ಮಲ್ಲಿ ಪ್ರಕಟಿಸಿರುವುದೂ ಉಂಟು. (ಇದಕ್ಕೆ ಉದಾಹರಣೆಯಾಗಿ ನೋಡಿ; ನರಹಳ್ಳಿ ೨೦೦೨ ಮತ್ತು ೨೦೦೪. ಹಾಗೆಯೆ ಮಲ್ಲೇಪುರಂ ೨೦೦೮)

[1]

ಭಿತ್ತಿ ನಿರ್ಮಾಣ – ಸಾತತ್ಯವೊಂದರ ಹುಡುಕಾಟ

ಚರಿತ್ರೆಯಿಂದ ವರ್ತಮಾನಕ್ಕೆ ಬರುವುದು ಅಥವಾ ವರ್ತಮಾನವನ್ನು ತಿಳಿಯುವ ಮೊದಲು ಭೂತವನ್ನು ತಿಳಿಯುವುದು ಅಥವಾ ಸಾತತ್ಯವೊಂದನ್ನು ಹುಡುಕುವುದು ನಮ್ಮ ಅಧ್ಯಯನಗಳಲ್ಲಿ ಒಂದು ಸಾಮಾನ್ಯವಾದ ವಿಧಾನವಾಗಿದೆ. ಉದಾಹರಣೆಗೆ ‘ಕರ್ನಾಟಕದ ದಲಿತ ಚಳವಳಿಗಳಲ್ಲಿ ಮಹಿಳೆ’ ಎಂಬ ಕೃತಿಯಲ್ಲಿ ಹಾಲತಿ ಸೋಮಶೇಖರ್ ನೇರವಾಗಿ ದಲಿತ ಚಳುವಳಿಗಳಲ್ಲಿನ ಮಹಿಳೆಯರ ಪಾತ್ರವನ್ನು ಚರ್ಚಿಸದೆ ವಚನ ಚಳುವಳಿಯ ಮಹಿಳೆಯರು, ಸುಧಾರಣಾವಾದಿ ಕಾಲಘಟ್ಟದ ಮಹಿಳೆಯರನ್ನೆಲ್ಲ ಚರ್ಚಿಸಿ ಆನಂತರ ದಲಿತ ಚಳುವಳಿಗೆ ಬರುತ್ತಾರೆ. ಅಂದರೆ ನಮ್ಮ ಬಹುಪಾಲು ಅಧ್ಯಯನಗಳಲ್ಲಿ ವರ್ತಮಾನವನ್ನು ಚರ್ಚಿಸಲು ಚರಿತ್ರೆಯನ್ನು ಕಟ್ಟಿಕೊಳ್ಳಲಾಗುತ್ತದೆ. ಇದೊಂದು ಸ್ಥಾಪಿತ ಆಚಾರ ಎಂಬಷ್ಟು ವ್ಯಾಪಕವಾಗಿ ಚಾಲ್ತಿಯಲ್ಲಿದೆ. ಅಧ್ಯಯನ ವಿಚಾರಕ್ಕೆ ತಕ್ಕ ಸಶಕ್ತ ಪರಂಪರೆಯನ್ನು ಕಟ್ಟುವ ಕ್ರಿಯೆಯಿದು. ಇದನ್ನು ಭಿತ್ತಿ ನಿರ್ಮಾಣ ಎಂತಲೂ ಕರೆಯಬಹುದು.

ಬಹುಪಾಲು ಅಧ್ಯಯನಗಳು ತಮ್ಮ ಅಧ್ಯಯನ ವಿಷಯಕ್ಕೆ ಒಂದು ಪೂರ್ವಭಿತ್ತಿಯನ್ನು ನಿರ್ಮಿಸಿಕೊಳ್ಳುತ್ತವೆ. ಉದಾಹರಣೆಗೆ ಶ್ರೀಧರ ಹೆಗಡೆ ಭದ್ರನ್ ಅವರ ಆಧುನಿಕ ಕನ್ನಡ ಮಹಾಕಾವ್ಯಗಳು ಎಂಬ ಅಧ್ಯಯನದಲ್ಲಿ ಸಂಸ್ಕೃತ ಕನ್ನಡ ಪಾಶ್ಚಾತ್ಯ ಈ ಮೂರೂ ಮೀಮಾಂಸಕರ ದೃಷ್ಟಿಯಲ್ಲಿನ ಮಹಾಕಾವ್ಯದ ಸ್ವರೂಪ ಚರ್ಚೆಗಳನ್ನು ಕ್ರೋಡೀಕರಿಸಿಕೊಳ್ಳಲಾಗಿದೆ. ಈ ಮೂಲಕ ವಿಷಯದ ಚರ್ಚೆಗೆ ಒಂದು ತಕ್ಕ ಪೂರ್ವಭೂಮಿಕೆಯನ್ನು ಸಿದ್ಧ ಪಡಿಸಿಕೊಳ್ಳಲಾಗಿದೆ. ಈ ಪೂರ್ವ ಭಿತ್ತಿಯು ಕೆಲವೊಂದು ಅಧ್ಯಯನಗಳಲ್ಲಿ ತಲೆಗಿಂತ ಗಡ್ಡವೇ ಭಾರ ಎಂಬಂತೆ ದೊಡ್ಡದೂ ಆಗಿರಬಹುದು.

ಎಲ್ಲ ಅಧ್ಯಯನಗಳಲ್ಲಿ ಆಯಾ ವಿಷಯದ ಅಧ್ಯಯನಕ್ಕೆ ನೇರವಾಗಿ ಪ್ರವೇಶಿಸುವುದಕ್ಕಿಂತ ಆ ಕ್ಷೇತ್ರದಲ್ಲಿ ಇದುವರೆಗೆ ಏನೆಲ್ಲ ಅಧ್ಯಯನಗಳು ನಡೆದಿವೆಯೊ ಅದನ್ನು ಸಮೀಕ್ಷಿಸುವ ಆಚಾರವೊಂದು ಕಡ್ಡಾಯ ಎಂಬಂತೆ ಚಾಲ್ತಿಯಲ್ಲಿದೆ. ಅಧ್ಯಯನದ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೆ ಆಗಿರುವ ಅಧ್ಯಯನಗಳ ಸಮೀಕ್ಷೆ ಎಂಬ ಒಂದು ಸಾಮಾನ್ಯ ಅಧ್ಯಾಯದಲ್ಲು ಈ ಪೂರ್ವಭಿತ್ತಿ ನಿರ್ಮಾಣವು ಆಗುವುದುಂಟು. ಆದರೆ ಎಲ್ಲ ಸಮೀಕ್ಷೆಗಳಲ್ಲು ಈ ನಿರ್ಮಾಣ ಆಗೇ ಆಗುತ್ತದೆ ಎಂದೇನಿಲ್ಲ. ಇಂತಹ ಭಿತ್ತಿ ನಿರ್ಮಾಣ ಕಾರ್ಯ ಒಂದು ಸಾಮಾನ್ಯ ಆಚಾರವೆಂಬಂತೆ ಹಲವು ಅಧ್ಯಯನಗಳಲ್ಲಿ ಪಾಲಿತವಾಗಿರುವುದುಂಟು. ಹಲವೊಮ್ಮೆ ಇಂತಹ ನಿರ್ಮಾಣಗಳು ತಮ್ಮ ವಿಷಯ ಚರ್ಚೆಗೊಂದು ಪಾರಂಪರಿಕ ಸಾತತ್ಯ ಇರುತ್ತದೆ ಎಂದು ಭಾವಿಸುತ್ತವೆ ಮತ್ತು ಸ್ಥಾಪಿಸುತ್ತವೆ. ಹಾಗೆ ಯಾವುದೆ ವಿಷಯದಲ್ಲಿ ಪಾರಂಪರಿಕವಾದ ಒಂದು ಸಾತತ್ಯ ಇರುತ್ತದೆ ಎಂದು ಎಲ್ಲ ಅಧ್ಯಯನಕಾರರೂ ನಂಬುತ್ತಾರೆ ಎಂದಲ್ಲ. ಅಧ್ಯಯನಕ್ಕೆ ಒಂದು ಸೂತ್ರ ಅಥವಾ ವಿಧಾನವನ್ನು ಸ್ವೀಕರಿಸಿದಾಗ ಅದು ಹೇಗೆ ವರ್ತಿಸುತ್ತದೆ ಎಂಬ ತಿಳುವಳಿಕೆ ಇಲ್ಲದಿದ್ದರೂ ವಿಧಾನವೇ ನಮ್ಮನ್ನು ಎಲ್ಲಿಗೆ ಒಯ್ಯಬೇಕೋ ಅಲ್ಲಿಗೆ ಒಯ್ಯುತ್ತದೆ. ಹಾಗಾಗಿ ಈ ಮಾರ್ಗವು ಸಾತತ್ಯವನ್ನಂತು ಸ್ಥಾಪಿಸುತ್ತದೆ.

ಸಿದ್ಧ ಸಿದ್ಧಾಂತಗಳ ಅನ್ವಯೀಕರಣ.

ಕನ್ನಡ ನಾಟಕಗಳಲ್ಲಿ ಯಾಜಮಾನ್ಯದ ಸಂಕಥನ (ಟಿ. ವೆಂಕಟೇಶಮೂರ್ತಿ), ಮಹಿಳೆ ಅಸ್ತಿತ್ವದ ಸಂಕಥನ (ಕವಿತಾ ರೈ) ಇಂತಹ ಅಧ್ಯಯನಗಳು ಸಾಹಿತ್ಯವನ್ನು ಒಂದು ಡಿಸ್ಕೋರ್ಸ್ ಎಂದು ಭಾವಿಸುತ್ತವೆ. ಹಾಗೆಯೆ ಸಂಶೋಧನೆಯನ್ನು ಕೂಡ ಅದರ ಪರಿಶೀಲನೆಯ ಮತ್ತೊಂದು ಡಿಸ್ಕೋರ್ಸ್ ಎಂದೇ ಭಾವಿಸುತ್ತವೆ. ಹೀಗೆ ಸಾಹಿತ್ಯವನ್ನು ಯಾಜಮಾನ್ಯ ಮತ್ತು ಅಧೀನತೆಗಳ ಸಂಕಥನ ಎಂದು ನೋಡುವುದು ಒಂದು ಗ್ರಹಿಕೆ ಮಾತ್ರವಲ್ಲ ದೃಷ್ಟಿಕೋನ ಕೂಡ. ಡಿಸ್ಕೋರ್ಸ್ ಫ್ಯುಕೋನ ಒಂದು ತತ್ವ. ಅದನ್ನು ಇಲ್ಲಿ ಕನ್ನಡದಲ್ಲಿ ಪ್ರಯೋಗಿಸಲಾಗಿದೆ. ಮಾರ್ಕ್ಸ್‌ವಾದಿ ದೃಷ್ಟಿಕೋನ, ಡೆರಿಡಾನ ನಿರಚನವಾದಿ ದೃಷ್ಟಿಕೋನ, ಬಾರ್ತನ ವಾಚಕ ಸ್ವಂದನ ಸಿದ್ಧಾಂತ (ರೀಡರ್ಸ್ ರೆಸ್ಪಾನ್ಸ್ ಥಿಯರಿ) ಸೈದನ ಓರಿಯಂಟಲಿಸಂ, ಗ್ರಾಂಶಿಯ ಯಾಜಮಾನ್ಯ ಪರಿಕಲ್ಪನೆ ಹೀಗೆ ಪಶ್ಚಿಮದ ಹಲವು ಓದಿನ ದಾರಿಗಳು ಕನ್ನಡ ವಿಮರ್ಶೆಯನ್ನು ಹೇಗೋ ಹಾಗೆಯೇ ಸಂಶೋಧನೆಯನ್ನು ಪ್ರವೇಶಿಸಿವೆ, ಪ್ರಭಾವಿಸುತ್ತಿವೆ. ಅನ್ಯ ತತ್ವಗಳ ಸ್ವೀಕರಣ ಮತ್ತು ಅನ್ವಯೀಕರಣ ಪ್ರವೃತ್ತಿ ಎಂದು ಇದನ್ನು ಕರೆಯಬಹುದು. ಅನ್ಯ ಸಿದ್ಧಾಂತಗಳ ಮೂಲಕ ನಮ್ಮ ಸ್ಥಳೀಯ ಸಾಹಿತ್ಯವನ್ನು ಪರಿಶೀಲಿಸುವುದು ನಮ್ಮ ವಿಮರ್ಶೆಯ ಯಾವತ್ತಿನ ಒಂದು ಪ್ರವೃತ್ತಿಯಾಗಿದೆ. ಹಾಗೆಯೆ ಇದು ಸಂಶೋಧನೆಗು ತಗಲಿಕೊಂಡಿದೆ.

ಅನ್ಯತತ್ವ, ಸಿದ್ಧಾಂತಗಳ ಅನ್ವಯೀಕರಣ ಮಾತ್ರವಲ್ಲ ಕನ್ನಡದ್ದೆ ಸಿದ್ಧ ಸಿದ್ಧಾಂತಗಳನ್ನು ಕೂಡ ಯಾವುದಕ್ಕೆ ಆಗಲಿ ಅನ್ವಯಿಸುವುದು ಹೊರಗಿನಿಂದ ಹೇರಿದ ಅಥವಾ ಡಿಡಕ್ಟಿವ್ ಕ್ರಮ ಆಗುತ್ತದೆಯೆ ವಿನಾ ಅದರಿಂದ ಇನ್ನೇನೂ ಹೊಸದು ಸಾಧಿತವಾಗುವುದಿಲ್ಲ. ಸಂಶೋಧನೆ ಎಂದರೆ ಕೇವಲ ವಸ್ತುವಿಚಾರದ ವಿಮರ್ಶೆ ಅಥವಾ ವಿಶ್ಲೇಷಣೆ ಮಾತ್ರವಲ್ಲ, ವಿಧಾನದ ಸಂಶೋಧನೆ ಕೂಡ ಅಲ್ಲವೆ? ಹೀಗಿರುವಾಗ ಸಿದ್ಧ ಸೂತ್ರಗಳನ್ನು, ದೃಷ್ಟಿಕೋನಗಳನ್ನು ಅನ್ವಯಿಸಿದರೆ ಅದು ಹೊಸದು ಹೇಗಾಗುತ್ತದೆ? ಸಿದ್ಧಾಂತಗಳನ್ನು ಅನ್ಯವೆಂದು ಕರೆದು ಅಥವಾ ಅನ್ಯವೆಂದ ಮಾತ್ರಕ್ಕೆ ಅವನ್ನು ಅಸ್ಪೃಶ್ಯ ಎಂಬಂತೆ ಹೊರಗೆ ಇಡಬೇಕೆಂದಿಲ್ಲ. ಸಂಶೋಧನೆಯನ್ನು ಕೈಗೊಳ್ಳುವಾಗ ಸಿದ್ಧಾಂತ, ದೃಷ್ಟಿಕೋನ, ತತ್ವಗಳು ಕೂಡ ಸಂಶೋಧನೆಯ ಫಲಿತಗಳಾಗಿ; ಅಧ್ಯಯನದ ಫಲಿತಗಳಾಗಿ ಉದಯಿಸಬೇಕಲ್ಲವೆ? ಆದರೆ ನಮ್ಮಲ್ಲಿ ವಿಮರ್ಶೆಯಲ್ಲಿ ಅಥವಾ ಸಾಹಿತ್ಯದ ಓದಿನಲ್ಲಿ ಸಿದ್ಧ ವಿಧಾನ ಅಥವಾ ಸಿದ್ಧಾಂತಗಳನ್ನು ಅನ್ವಯಿಸುವ ಮತ್ತು ಬಳಸುವ ಕೆಲಸವು ಸಂಶೋಧನೆಯಲ್ಲು ಚಾಲ್ತಿಗೆ ಬಂದಿರುವುದೆ ಸಂಶೋಧನೆಯು ವಿಮರ್ಶೆಯಾಗಿ ಹೊರಳಿಕೊಳ್ಳುತ್ತಿರುವುದರ ಒಂದು ಲಕ್ಷಣವಾಗಿದೆ.

ಕ್ರೋಡೀಕರಣ – ತಾತ್ವೀಕರಣ ; ಆಯ್ದು ಕಟ್ಟುವುದು.

ಸಂಶೋಧನೆ ಎಂದರೆ ಆಯ್ದು ಕಟ್ಟುವುದು: ಹಲವು ಕಡೆ ಚದುರಿ ಬಿದ್ದಿರುವ ಚೂರುಗಳನ್ನು ಕ್ರೋಡೀಕರಿಸಿ ಅವುಗಳ ನಡುವೆ ಒಂದು ಸಂಬಂಧ ಏರ್ಪಡಿಸಿ ಆಕಾರ ನೀಡುವುದು ಎಂಬುದು ನಮ್ಮ ಸಂಶೋಧನೆಯ ಒಂದು ಮುಖ್ಯ ಲಕ್ಷಣವಾಗಿದೆ. ಮತ್ತು ಹಾಗೆ ಆಕಾರ ನೀಡಿದುದನ್ನು ತಾತ್ವೀಕರಿಸುವುದು ಕೂಡ ನಮ್ಮ ಸಂಶೋಧನೆಯ ಇನ್ನೊಂದು ಪ್ರವೃತ್ತಿ (ಲಕ್ಷಣ). ಇದಕ್ಕೊಂದು ಉದಾಹರಣೆ ನೀಡುವುದಾದರೆ ಎಸ್. ಎಸ್. ಹಿರೇಮಠ ಅವರ ಲೋಕಾಯತ ದರ್ಶನ ಕೃತಿಯಲ್ಲಿ ೧. ಕನ್ನಡ ಲಿಖಿತ ಪರಂಪರೆಯಲ್ಲಿ ಲೋಕಾಯತ ೨. ಕನ್ನಡ ಶಾಸನಗಳಲ್ಲಿ ಲೋಕಾಯತ ಎಂಬ ಎರಡು ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಇವರು ವಡ್ಡಾರಾಧನೆಯಿಂದ ಹಿಡಿದು ಶಿವತತ್ವ ಚಿಂತಾಮಣಿಯವರೆಗೆ ಲೋಕಾಯತ ವಿಚಾರಗಳು ಎಲ್ಲೆಲ್ಲಿ ಮುಖ್ಯವಾಗಿ ಪ್ರಸ್ತಾಪವಾಗಿವೆಯೋ ಅವನ್ನೆಲ್ಲ ಕ್ರೋಡೀಕರಿಸಿ ಕಟ್ಟುತ್ತಾರೆ. ಅಂದರೆ ಮೊದಲಿಗೆ ಮಾಹಿತಿಯನ್ನು ಆರಿಸಿ – ಕ್ರೋಡೀಕರಿಸಿ ಅದನ್ನು ಒಂದು ಆಕೃತಿಯಾಗಿ ಇಲ್ಲಿ ಕಟ್ಟಲಾಗಿದೆ. ಆನಂತರ ಹಾಗೆ ಕಟ್ಟಿದ ಪಠ್ಯಾಕೃತಿಯನ್ನೆ ತಾತ್ವೀಕರಿಸಿ ತಮ್ಮದೇ ಪ್ರಮೇಯ – ಸಿದ್ಧಾಂತಗಳನ್ನು ಮಂಡಿಸಲಾಗಿದೆ. ಹೀಗೆ ಕ್ರೋಡೀಕರಿಸಿ ಕಟ್ಟುವುದು ಮತ್ತು ತಾತ್ವೀಕರಿಸುವುದು ಸಂಶೋಧನೆಯ ಕೆಲಸ ಎಂಬ ತತ್ವ ಇಲ್ಲಿದೆ.

ಹೀಗೆ ಕ್ರೋಡೀಕರಿಸಿ ಕಟ್ಟುವಾಗ ಮತ್ತು ತಾತ್ವೀಕರಿಸುವಾಗ ಸಂಶೋಧಕ ತನ್ನ ದೃಷ್ಟಿಕೋನದ ಮೂಲಕ ಮತ್ತು ವರ್ತಮಾನದ ಹಲವು ಸಾಮಾಜಿಕ ಒತ್ತಡಗಳಿಂದಾಗಿ ತನ್ನ ಆಕೃತಿಯನ್ನು ಕಟ್ಟುತ್ತಿರುತ್ತಾನೆ. ಇಂತಹ ಕಡೆ ಫಲಿತಗಳಿಗಿಂತ ದೃಷ್ಟಿಕೋನಗಳು ಮತ್ತು ಒತ್ತಡಗಳೇ ಹೆಚ್ಚು ಮುಖ್ಯವಾದುವು. ಶಂಬಾ ಅವರ ಹಾಲುಮತ ದರ್ಶನಕ್ಕೂ ಹಿರೇಮಠರ ಲೋಕಾಯತ ದರ್ಶನ ಮತ್ತು ರಹಮತರ ಕರ್ನಾಟಕ ನಾಥಪಂಥ ಇಂತಹ ಅಧ್ಯಯನಗಳಿಗೂ ಇಲ್ಲಿ ಸ್ಪಷ್ಟ ವ್ಯತ್ಯಾಸಗಳಿವೆ. ಶಂಬಾ ಭಾಷಾಶಾಸ್ತ್ರೀಯ ನೆಲೆಯಲ್ಲಿ ಕರ್ನಾಟಕದ ಅಸ್ಮಿತೆಗಳನ್ನು ಹುಡುಕಾಡಿದರೆ; ರಹಮತ್ ಮತ್ತು ಹಿರೇಮಠರಿಬ್ಬರಿಗೂ ಪಾಂಥಿಕ ಧಾರೆಗಳನ್ನು ಮಂಡಿಸುವ ಮತ್ತು ಕರ್ನಾಟಕತ್ವದ ಬಹುಮುಖಿ ಚಹರೆಗಳನ್ನು ಮಂಡಿಸುವ ಇರಾದೆ ಇದೆ. ಇದಕ್ಕಿಂತ ಮುಖ್ಯವಾಗಿ ಇಂದಿನ ನಮ್ಮ ಸಮಾಜ ಎದುರಿಸುತ್ತಿರುವ ಕೋಮುವಾದ, ಭಯೋತ್ಪಾದನೆ, ಜನಾಂಗೀಯ ಘರ್ಷಣೆ ಮೊದಲಾದ ಬಿಕ್ಕಟ್ಟುಗಳಿಗೆ ಚರಿತ್ರೆಯ ಮೂಲಕ ಹೊರದಾರಿಗಳನ್ನು ಶೋಧಿಸಿಕೊಳ್ಳುವ ಒತ್ತಡಗಳಿವೆ. ವರ್ತಮಾನದ ತಲ್ಲಣಗಳಿಗೆ ಸಾಹಿತ್ಯಧಾರೆ ಮತ್ತು ಪಾಂಥಿಕ ಧಾರೆಗಳಲ್ಲಿ ಶಾಕ್ ಅಬ್ಸಾರ್ಬರ್ಸ್‌ ಇರುತ್ತವೆ. ಎಂಬ ನಂಬಿಕೆಯಿಂದ ಕೂಡ ಇಂತಹ ಅಧ್ಯಯನಗಳು ನಡೆಯುತ್ತವೆ.

ಇನ್ನೊಂದು ಸಂಗತಿ; ಅಂದರೆ ಚದುರಿದ ಚೂರುಗಳೆಲ್ಲ ಒಟ್ಟುಗೂಡಿಸಿದರೆ ಅಷ್ಟು ಮಾತ್ರಕ್ಕೆ ಅದು ಸಮಶೋಧನೆ ಆಗುತ್ತದೋ? ಇಲ್ಲ. ಇಂದಿರಾ ಕೃಷ್ಣಪ್ಪ ಅವರ ‘ಬಯಲು ಬೆತ್ತಲೆ ಚಂದ್ರಗುತ್ತಿ’ ಕೃತಿಯನ್ನು ಇದಕ್ಕೆ ಉದಾಹರಣೆಯಾಗಿ ಗಮನಿಸಬಹುದು. ಪತ್ರಿಕಾವರದಿಗಳು, ಲೇಖನಗಳು, ಛಾಯಾಚಿತ್ರಗಳು, ಜನರ ಅಭಿಪ್ರಾಯಗಳು, ವಿದ್ವಾಂಸರ ಲೇಖನಗಳು ಹೀಗೆ ಎಲ್ಲವನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ. ಆದರೆ ಹೀಗೆ ಒಟ್ಟುಗೂಡಿಸಿದರೆ ಸಾಲದು. ಅದನ್ನು ವ್ಯಾಖ್ಯಾನಿಸಬೇಕು. ಮಾಹಿತಿ ಸಂಗ್ರಹ ಮತ್ತು ಒಟ್ಟೈಸುವಿಕೆಗೆ ಇದು ನಿಂತುಹೋಗುತ್ತದೆ. ಹೀಗೆ ನಿಂತರೆ ಅದು ಸಂಪಾದನೆ ಅನ್ನಿಸಿಕೊಳ್ಳುತ್ತದೆ ಮಾತ್ರ. ಅಧ್ಯಯನ ಅನ್ನಿಸಿಕೊಳ್ಳುವುದಿಲ್ಲ. ಗ್ರಂಥ ಸಂಪಾದನೆ – ಸಂಶೋಧನೆಯ ಸೂಕ್ಷ್ಮ ವ್ಯತ್ಯಾಸ ಕಂಡುಕೊಳ್ಳಲು ಈ ಉದಾಹರಣೆ ಗಮನಿಸಬಹುದು. ಅಂದರೆ ನಮ್ಮ ಎಷ್ಟೋ ಸಂಶೋಧನೆಗಳು ಹೀಗೆ ಸಂಪಾದನೆಗಳ ಹಂತಕ್ಕೆ ನಿಂತುಹೋಗುತ್ತವೆ ಎಂಬುದು ನಿಜ. ಆದರೆ ಹೇಮಾ ಪಟ್ಟಣಶೆಟ್ಟಿ ಅವರ ‘ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ’ ಎಂಬುದು ಹೀಗಲ್ಲ. ಇದು ‘ಕೇವಲ ಸಂಪಾದನೆ’ಯನ್ನು ಮೀರುವ ಕೃತಿ. ಇವರು ಹಲವು ಸಂದರ್ಭಗಳಲ್ಲಿ ಮಾಡಿದ ಭಾಷಣಗಳ ಲೇಖನರೂಪಗಳು ಮತ್ತು ಹಲವು ಸಂದರ್ಭಗಳಿಗಾಗಿಯೆ ಬರೆದ ಲೇಖನಗಳ ಸಂಕಲನ. ಇದೊಂದು ವಿಮರ್ಶಾ ಲೇಖನಗಳ ಸಂಕಲನವೂ ಹೌದು; ಸ್ತ್ರೀಲೋಕವನ್ನು ಪುರುಷ ನಾಟಕಲೋಕವು ಹೇಗೆ ಪ್ರತಿನಿಧಿಸಿದೆ ಎಂಬ ವ್ಯಕ್ತಿಕೇಂದ್ರಿತ (ನಾಟಕಕಾರ ಕೇಂದ್ರಿತ) ಸಂಶೋಧನಾ ಲೇಖನಗಳ ಸಂಕಲನವೂ ಹೌದು. ಚಂದ್ರಮತಿ ಸೋಂದಾ ಅವರ ‘ಶಬ್ದದೊಳಗಣ ನಿಶ್ಯಬ್ದ’ ಕೂಡ ಇಂಥದೇ ಒಂದು ಸಂಕಲನ. ಹಲವು ಸಭೆ – ಸಮಾರಂಭ – ವಿಚಾರಸಂಕಿರಣ – ಅಭಿನಂದನಾ ಗ್ರಂಥಗಳಿಗಾಗಿ ಬರೆದ ಲೇಖನಗಳು ಇಲ್ಲಿವೆ. ಕಾಲದಿಂದ ಕಾಲಕ್ಕೆ ಬದಲಾದ ದೃಷ್ಟಿಕೋನಗಳೂ ಹಲವು ಲೇಖನಗಳಲ್ಲಿ ಇವೆ. ಆದರೆ ಇವೆಲ್ಲವೂ ಮಹಿಳಾ ದೃಷ್ಟಿಯ ಬರಹಗಳೇ ಆಗಿದ್ದು ಸಂಶೋಧನೆ, ಅಧ್ಯಯನ ಸ್ವರೂಪಿ ಬರಹಗಳೇ ಆಗಿವೆ. ಹೀಗೆ ಕೆಲವು ಸಂಕಲನಗಳು ಸಂಪಾದನೆಯ ಹಂತಕ್ಕೆ ನಿಲ್ಲದೆ ಸಂಶೋಧನೆಗಳೇ ಆಗಿ ಬೆಳೆದಿವೆ.

ಸ್ಥಾಪಿತ ವರ್ಗೀಕರಣಗಳ ನಿರಾಕರಣೆ

ಸಾಹಿತ್ಯದ ಮೂಲಕ ಸಮಾಜವನ್ನು ಅಧ್ಯಯನ ಮಾಡುವಾಗ ಸ್ಥಾಪಿತ ಸಾಹಿತ್ಯ ಚರಿತ್ರೆಯ ವರ್ಗೀಕರಣ ಮತ್ತು ನಾಮಕರಣ ವಿನ್ಯಾಸಗಳನ್ನು ಪಾಲಿಸಿದರೆ ಅದೇ ಹಳೆಯ ಫಲಿತಗಳನ್ನೆ ಪಡೆಯುತ್ತೇವೆ ಎಂಬುದು ಖಚಿತ. ಸ್ಥಾಪಿತ ವರ್ಗೀಕರಣಗಳು ನಮಗೆ ಕೆಲವು ದೃಷ್ಟಿಕೋನಗಳನ್ನು ನೀಡಿ ನಿರ್ಬಂಧಿಸುತ್ತವೆ. ಉದಾಹರಣೆಗೆ ಆಧುನಿಕ ಸಂದರ್ಭದಲ್ಲಿ ಕನ್ನಡ ಸಾಹಿತ್ಯವನ್ನು ನವೋದಯ ಪೂರ್ವ, ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಹೀಗೆ ವರ್ಗೀಕರಿಸಿ ನಾಮಕರಣ ಮಾಡಿಕೊಂಡಿದ್ದೇವೆ. ಈ ವರ್ಗೀಕರಣ ಶೈಕ್ಷಣಿಕ ಅಧ್ಯಯನದ ದೃಷ್ಟಿಯಿಂದ ಅನುಕೂಲ ಹೇಗೋ ಹಾಗೆಯೇ ಮಿತಿ ಕೂಡ. ಈ ವರ್ಗೀಕರಣಗಳನ್ನೆ ಒಪ್ಪಿ ಅಧ್ಯಯನಗಳನ್ನು ಕೈಗೊಂಡರೆ ಈ ಚೌಕಟ್ಟುಗಳ ಮಿತಿಯಲ್ಲೆ ಇರಬೇಕಾಗುತ್ತದೆ. ಮಹಿಳಾ ನವೋದಯ ಕಾವ್ಯ, ಮಹಿಳಾ ನವ್ಯಕಾವ್ಯ ಎಂದು ಈ ವರ್ಗೀಕರಣಗಳನ್ನು ಬೇರೆ ಕಡೆಗೂ ಅನ್ವಯಿಸಲು ಬರುವುದಿಲ್ಲ. ಈ ವರ್ಗೀಕರಣಗಳು ಪುರುಷಮುಖಿಯಾದವು, ಇವನ್ನು ಸ್ತ್ರೀ ಸಾಹಿತ್ಯ ಸಂಕಥನಕ್ಕೆ ಅನ್ವಯಿಸಲು ಆಗುವುದಿಲ್ಲ ಎಂದೇ ಹಲವು ಮಹಿಳಾ ಸಾಹಿತ್ಯ ಅಧ್ಯಯನಗಳು ಭಾವಿಸುತ್ತವೆ. ಕವಿತಾ ರೈ ಅವರ ‘ಮಹಿಳೆ ಅಸ್ತಿತ್ವದ ಸಂಕಥನ’ ಅಧ್ಯಯನವು ಈ ಸ್ಥಾಪಿತ ವರ್ಗೀಕರಣಗಳನ್ನು ನಿರಾಕರಿಸುತ್ತದೆ. ಕುಟುಂಬ, ದಾಂಪತ್ಯ, ವಿವಾಹ, ಸಂಸ್ಥೆಗಳ ಸಾಹಿತ್ಯ ಸಂಕಥನಕ್ಕೆ ಇದು ಆಧುನಿಕ ಕಥನ ಸಾಹಿತ್ಯವನ್ನು ೧. ಉದಾರವಾದಿ ಸಾಂಸ್ಕೃತಿಕ ನೆಲೆ ೨. ಸ್ಥಿತ್ಯಂತರ ಸಾಂಸ್ಕೃತಿಕ ನೆಲೆ ೩. ಅನನ್ಯ ಸಾಂಸ್ಕೃತಿಕ ನೆಲೆ ಎಂದು ವರ್ಗೀಕರಿಸಿಕೊಳ್ಳುತ್ತದೆ. ಈ ವರ್ಗೀಕರಣಕ್ಕು ಇದರದ್ದೆ ಆದ ಮಿತಿಯಿದೆ. ಆದರೆ ಹಳೆಯ ಸ್ಥಾಪಿತ ವರ್ಗೀಕರಣದ ಮಿತಿಗಳನ್ನು ಮೀರಲು ನವೀನ ವರ್ಗೀಕರಣಗಳಿಂದ ಮಾತ್ರ ಸಾಧ್ಯ ತಾನೆ?

ಇಲ್ಲಿ ಇನ್ನೊಂದು ಉದಾಹರಣೆಯನ್ನು ಚರ್ಚಿಸಬೇಕು. ಸಾಮಾನ್ಯವಾಗಿ ನಮ್ಮಲ್ಲಿ ಪ್ರಕಾರ ಕೇಂದ್ರಿತ ಅಧ್ಯಯನಗಳಲ್ಲಿ ಮತ್ತು ತೌಲನಿಕ ಅಧ್ಯಯನಗಳಲ್ಲಿ ಒಂದೊಂದೇ ಕೃತಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಕೊನೆಯಲ್ಲಿ ಉಪಸಂಹಾರ ಎಂದು ಒಂದೆರಡು ಪುಟಗಳಲ್ಲಿ ತಿಪ್ಪೆ ಸಾರಿಸುವುದುಂಟು. ಇಂಥ ಸಂದರ್ಭದಲ್ಲಿ ಸಂಶೋಧನೆಯು ಕೇವಲ ಕೃತಿ ವಿಮರ್ಶೆ ಮಾತ್ರ ಆಗುತ್ತದೆ. ನವೀನ ರೀತಿಯ ವರ್ಗೀಕರಣದಿಂದ ಇವನ್ನು ಮೀರಲು ಸಾಧ್ಯ. ಹೊಸ ವರ್ಗೀಕರಣವೆಂಬುದು ಒಂದು ಹೊಸ ಅಧ್ಯಯನ ವಿಧಾನ ಕೂಡ ಹೌದು. ಶ್ರಿಧರ ಹೆಗಡೆ ಭದ್ರನ್ ತಮ್ಮ ರಾಮಾಯಣಗಳ ಅಧ್ಯಯನದಲ್ಲಿ (ಆಧುನಿಕ ಕನ್ನಡ ಮಹಾಕಾವ್ಯಗಳು) ಈ ಕೆಲಸ ಮಾಡಿದ್ದಾರೆ. ಕನ್ನಡ ರಾಮಾಯಣಗಳನ್ನು ಒಂದೊಂದಾಗಿ ಪರಿಶೀಲಿಸದೆ; ವಸ್ತು ವಿನ್ಯಾಸ, ಪಾತ್ರವಿನ್ಯಾಸ, ಅಭಿವ್ಯಕ್ತಿ, ವಿನ್ಯಾಸ, ದರ್ಶನ ವಿನ್ಯಾಸ ಎಂಬುದಾಗಿ ತಮ್ಮ ಅಧ್ಯಯನದ ನೆಲೆಗಳನ್ನು ಇವರು ಗುರ್ತಿಸಿಕೊಂಡಿದ್ದಾರೆ. ಇದರಿಂದ ಒಂದು ಕಡೆ ಸಂಶೋಧನೆಯು ಕೃತಿ ವಿಮರ್ಶೆಯ ಲೇಖನ ಸಂಕಲನ ಆಗುವ ಅಪಾಯದಿಂದ ತಪ್ಪಿಸಿಕೊಂಡಿದೆ. ಆದರೆ ಅದೇ ಸಂದರ್ಭದಲ್ಲಿ ತರತಮ ತುಲನೆಯ ಅಪಾಯಕ್ಕೆ ಈಡಾಗಿದೆ. ಇರಲಿ; ನಮ್ಮ ಇತ್ತೀಚಿನ ಸಂಶೋಧನಾ ಅಧ್ಯಯನಗಳಲ್ಲಿ ಸ್ಥಾಪಿತ ವರ್ಗೀಕರಣಗಳ ನಿರಾಕರಣೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಪಾಲನೆ ಕೂಡ ಯಥೇಚ್ಛವಾಗಿ ಇದೆ ಎಂಬುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ ಸಂಶೋಧನೆ ಕೆಲವೆಡೆ ನಿಂತ ನೀರಾಗಿದ್ದರೆ ಕೆಲವೆಡೆ ಹರಿಯುತ್ತಿದೆ.

ಪರಂಪರೆಗಳ ನಿರ್ಮಾಣ

ನಮ್ಮ ಹಲವಾರು ಅಧ್ಯಯನಗಳು ಪಾಂಥಿಕ ಪರಂಪರೆಗಳನ್ನು – ದರ್ಶನ ಪರಂಪರೆಗಳನ್ನು ಕಟ್ಟಿಕೊಟ್ಟರೆ; ಇನ್ನು ಹಲವಾರು ಅಧ್ಯಯನಗಳು ದಲಿತ ಪರಂಪರೆ, ಸ್ತ್ರೀಸಾಹಿತ್ಯ ಪರಂಪರೆ, ಅಲಕ್ಷಿತ ಜನಸಮುದಾಯಗಳ, ಅಲೆಮಾರಿ – ಅರೆ ಅಲೆಮಾರಿ ಬುಡಕಟ್ಟುಗಳ ಸಾಂಸ್ಕೃತಿಕ ಪರಂಪರೆಗಳನ್ನು ಕಟ್ಟಿಕೊಡುವ ಯತ್ನಗಳನ್ನು ಮಾಡಿವೆ. ಕೆಲವು ಉದಾಹರಣೆಗಳ ಮೂಲಕ ಇದನ್ನು ವಿವರಿಸುತ್ತೇನೆ. ಸಿದ್ಧಲಿಂಗಯ್ಯನವರ ‘ಉರಿಕಂಡಾಯ’ ದಲಿತ ಸಾಹಿತ್ಯ ಪರಂಪರೆ – ದಲಿತ ಚಿಂತನಾ ಪರಂಪರೆಯೊಂದನ್ನು ಕಟ್ಟಿಕೊಡುತ್ತದೆ. ಹತ್ತಾರು ವರ್ಷಗಳಿಂದ ತಾವು ಬರೆದ ಲೇಖನಗಳಲ್ಲಿ ಕೆಲವನ್ನು ಆರಿಸಿ ಸಿದ್ಧಲಿಂಗಯ್ಯ ಇಲ್ಲಿ ಸಂಕಲಿಸಿದ್ದಾರೆ. ಸಂಪಾದಿತ ವಿಮರ್ಶಾಲೇಖನಗಳ ಸಂಕಲನದಂತೆ ಈ ಕೃತಿ ಇದ್ದರು ದಲಿತ ಚಿಂತನೆ – ದಲಿತ ಸಾಹಿತ್ಯದ ಪರಂಪರೆಯನ್ನು ಹುಡುಕುವ ಮತ್ತು ಕಟ್ಟುವ ಯತ್ನ ಇಲ್ಲಿದೆ.

ಶಾಂತಾ ಇಮ್ರಾಪುರ ಅವರ ‘ಧರ್ಮ, ಮಹಿಳೆ ಮತ್ತು ಸಮಾಜ’ ಕೃತಿ ೧೫೦೦ ವರ್ಷಗಳ ಇತಿಹಾಸದಲ್ಲಿ ಆಗಿಹೋದ ಮಹಿಳಾ ಅನುಭಾವಿಗಳ ಚರಿತ್ರೆಯೊಂದನ್ನು ಕಟ್ಟಿಕೊಡುತ್ತದೆ. ಇಲ್ಲಿ ರಾಬಿಯಾ, ಅಕ್ಕ, ಆಂಡಾಳ್ ಹೀಗೆ ಜಾಗತಿಕ ಮಹಿಳಾ ಅನುಭಾವಿಗಳ ಪರಿಚಯಾತ್ಮಕ ಮತ್ತು ವಿಶ್ಲೇಷಣಾತ್ಮಕ ಮಂಡನೆ ಇದೆ. ಇದರ ಜೊತೆಗೇ ಹಂಪಿ ವಿಶ್ವವಿದ್ಯಾಲಯದ ಮಹಿಳಾ ಸಾಹಿತ್ಯ ಚರಿತ್ರೆ, ಬಿಜಾಪುರ ವಿಶ್ವವಿದ್ಯಾಲಯದಲ್ಲಿ ಆಗುತ್ತಿರುವ ಮಹಿಳಾ ಸಾಹಿತ್ಯ ಚರಿತ್ರೆ, ಪುಸ್ತಕ ಪ್ರಾಧಿಕಾರದಲ್ಲಿ ಆದ ಅಲೆಮಾರಿ ಬುಡಕಟ್ಟುಗಳ ಅಧ್ಯಯನ ಮಾಲಿಕೆ, ಹಂಪಿಯಲ್ಲಿ ಆಗುತ್ತಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳ ಅಧ್ಯಯನ ವರದಿಗಳು (ಗ್ರಂಥಗಳು) ಹೀಗೆ ಇದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು. ನಮ್ಮ ಸಂಶೋಧನೆಯು ಚಲಿಸುತ್ತಿರುವ ದಿಕ್ಕುಗಳನ್ನು ಕೂಡ ಈ ಅಧ್ಯಯನಗಳು ಸೂಚಿಸುತ್ತಿವೆ. ದಲಿತ, ಅಲಕ್ಷಿತ, ಅಲೆಮಾರಿ, ಬುಡಕಟ್ಟು, ಮಹಿಳಾ, ಪಾಂಥಿಕ ದರ್ಶನ, ಅವಧೂತ – ಅನುಭಾವಿ ಪರಂಪರೆಗಳನ್ನು ಕಟ್ಟಿಕೊಳ್ಳುವ ಮತ್ತು ಆ ಮೂಲಕ ಅಪೂರ್ಣ ಸಾಂಸ್ಕೃತಿಕ ಚರಿತ್ರೆಗಳನ್ನು ಮರುಕಟ್ಟುವ ಕೆಲಸ ನಮ್ಮ ಸಂಶೋಧನೆಯ ವಲಯದಲ್ಲಿ ಆಗುತ್ತಿದೆ. ಸಂಶೋಧನೆಯು ಕನ್ನಡ ಸಾಹಿತ್ಯದ ಆಚೆಗೂ ಚಾಚಿಕೊಳ್ಳುತ್ತಿರುವ ಲಕ್ಷಣವಿದು.

ಹಂಪಿ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಮುಖಾಮುಖಿ ಧಾರೆಯನ್ನು ಈ ಹಿನ್ನೆಲೆಯಲ್ಲೆ ಗಮನಿಸಬೇಕು. ಆಯ್ದ ಕೃತಿ, ಕೃತಿಕಾರರನ್ನು ಭಿನ್ನ ಕೋನಗಳಿಂದ ಅಧ್ಯಯನಕ್ಕೆ ಗುರಿಪಡಿಸುತ್ತ ಸಾಹಿತ್ಯ ಚರಿತ್ರೆ – ಪರಂಪರೆಯನ್ನು ಹೊಸದಾಗಿ ಕಟ್ಟಿಕೊಳ್ಳುವ ಯತ್ನವಿದು. ಅಲಕ್ಷಿತ ಸಾಹಿತ್ಯ ಕೃತಿಗಳನ್ನು ಹೊಸ ಓದಿಗೆ ಗುರಿಪಡಿಸುವ ಮತ್ತು ಅವುಗಳನ್ನು ಆಧುನಿಕ ಜಗತ್ತಿನಲ್ಲಿ ಪ್ರಸ್ತುತಗೊಳಿಸುವ ಜೊತೆಗೆ ಯಾವು ಯಾವನ್ನು ಚರಿತ್ರೆಯಿಂದ ಆಚೆ ಇಡಲಾಗಿತ್ತೋ ಅವನ್ನು ಒಳಕ್ಕೆ ಒಳಗೊಳ್ಳುವ ಕೆಲಸ ಈ ಧಾರೆಯಿಂದ ಆಗುತ್ತಿದೆ. ನಮ್ಮ ಒಳಗೊಳ್ಳುವ ಮತ್ತು ಹೊರಗಿಡುವ ಆದಿ ಪ್ರಾಚೀನ ಮತ್ತು ನಿತ್ಯನೂತನ ರಾಜಕಾರಣವನ್ನು ಈ ಧಾರೆಯು ಛಿದ್ರಿಸುತ್ತಿದೆ. ನಮ್ಮ ಚರಿತ್ರೆಯಲ್ಲಿ ಸಿರಿಕಾವ್ಯ, ಮಂಟೆಕಾವ್ಯಗಳು ಇರಲಿಲ್ಲ. ಈ ಮುಖಾಮುಖಿಯಲ್ಲಿ ಇವೆ. ಸಾಹಿತ್ಯ ಸಂಶೋಧನೆ ಎನ್ನುವುದು ವಿಮರ್ಶಾತ್ಮಕ ಅಧ್ಯಯನ ಆಗಿರುವ ಸ್ಪಷ್ಟ ಲಕ್ಷಣಗಳು ಈ ಸಾಂಸ್ಕೃತಿಕ ಮುಖಾಮುಖಿ ಧಾರೆಯಲ್ಲೂ ಇವೆ. ಸಾಹಿತ್ಯವನ್ನು ಕೇವಲ ಕೃತಿನಿಷ್ಟ ವಿಮರ್ಶಾ ನೆಲೆಯಲ್ಲಿ ಮಾತ್ರ ಓದದೆ, ಭಿನ್ನ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿಂದ ಓದುವ ಮತ್ತು ಮೌಲ್ಯೀಕರಿಸುವ ಕೆಲಸ ಈ ಮುಖಾಮುಖಿಯಿಂದ ಆಗುತ್ತಿದೆ.

ಇಲ್ಲೆ ಇನ್ನೊಂದು ಮಾತು; ಇದು ಡಿ. ಆರ್. ನಾಗರಾಜ್ ಸ್ಕೂಲಿನ ಲಿಟ್ಲ್ ಟ್ರಡಿಶನ್ – ಗ್ರೇಟ್ ಟ್ರಡಿಶನ್ ಹುಡುಕಾಟ ಅಲ್ಲ. ಇದು  ಪ್ರಧಾನ – ಅಧೀನ ಎಂಬ ಬೈನರಿಯಿಂದ ಹೊರಬಂದ ನಮ್ಮ – ಅನ್ಯ ಎಂಬ ತಿಳುವಳಿಕೆಯ ಕಡೆಗಿನ ಚಲನೆ. ಹೇಳಿ ಕೇಳಿ ಹಂಪಿ ವಿಶ್ವವಿದ್ಯಾಲಯ ‘ವಿದ್ಯೆಯನ್ನು ಸೃಷ್ಟಿಸಲೆಂದೆ’ ಸ್ಥಾಪಿತವಾಗಿರುವ ಸಂಸ್ಥೆ. ಬೋಧನೆಗಿಂತ ಸಂಶೋಧನೆಯನ್ನು ಸೃಷ್ಟಿಸಲೆಂದೆ ಇರುವ ಸಂಸ್ಥೆ. ಹೀಗಾಗಿ ಇಲ್ಲಿ ಕನ್ನಡ ಭಾಷೆ, ಸಾಹಿತ್ಯವಲ್ಲದೆ ಇತರ ಮಾನವಿಕ – ಜಾನಪದ, ವಿಜ್ಞಾನ, ಸಂಗೀತ, ನೃತ್ಯ ಮತ್ತು ಕಲೆಗಳ ವಲಯದಲ್ಲು ಸಂಶೋಧನೆಗಳು ನಡೆಯುತ್ತಿವೆ. ಹಾಗೆ ನೋಡಿದರೆ ನಮ್ಮ ಕನ್ನಡ ಸಾಹಿತ್ಯದ ಅಧ್ಯಯನಗಳಿಗಿಂತ ಇತರ ಅಧ್ಯಯನಗಳೆ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿವೆ. ಕನ್ನಡದಲ್ಲಿ ಅವೆಲ್ಲ ನಡೆಯುತ್ತಿವೆ ಎಂಬುದು ಕನ್ನಡದ ಪ್ರಗತಿಯ ಲಕ್ಷಣವೆ ಆಗಿದೆ.

ಏಕರೂಪಿ ಪರಂಪರೆಯ ವಿಸರ್ಜನೆ

ಯಾವುದೇ ಒಂದು ಹೊಸ ಪರಂಪರೆಯ ನಿರ್ಮಾಣ – ಮರುರಚನೆ ಎಂಬುದು ಹಳೆಯ ಪರಂಪರೆಗಳ ವಿಸರ್ಜನೆಯೂ ಆಗಿರುತ್ತದೆ. ಪ್ರತಿಷ್ಠಿತ – ಸ್ಥಾಪಿತ ಪರಂಪರೆಗಳನ್ನು ನಮ್ಮ ಶಿಕ್ಷಣ ವಲಯದಲ್ಲಿ ಬಲವಂತವಾಗಿ ಹೇರುತ್ತ ಬರಲಾಗಿದೆ. ಮತ್ತೆ ಮತ್ತೆ ಶಿಕ್ಷಣ ಕಲಿಕೆಯಲ್ಲಿ ಮತ್ತು ಸಂಶೋಧನಾ ಅಧ್ಯಯನಗಳಲ್ಲಿ ನಮ್ಮ ಪ್ರತಿಷ್ಠಿತ ಸಾಹಿತ್ಯ ಪರಂಪರೆಯನ್ನು ಹೇರುತ್ತ ಬರಲಾಗಿದೆ. ಒಂದು ಪರಂಪರೆಯನ್ನು ಅವರದಲ್ಲದ ಹಲವು ಜನಸಮುದಾಯಗಳ ಮೇಲೆ ಹೇರುವ ಪ್ರವೃತ್ತಿ ನಮ್ಮ ಶಿಕ್ಷಣ ಪಠ್ಯಗಳ ಚರಿತ್ರೆಯನ್ನು ನೋಡಿದರೆ ತಿಳಿಯುತ್ತದೆ. ಎಂಪಿರಿಸಿಸ್ಟ್ ಧೋರಣೆಯ ಚರಿತ್ರೆರಚನಾಶಾಸ್ತ್ರದ ಕಲ್ಪನೆಯನ್ನೆ ಸರಿಯಾದ ಚರಿತ್ರೆಯ ಕಲ್ಪನೆಯೆಂದು ತಿಳಿದು ನಮ್ಮಲ್ಲಿ ‘ಒಂದು’ ಸಾಹಿತ್ಯ ಚರಿತ್ರೆಯನ್ನು ‘ಸಂಶೋಧಿಸಿ’, ಸಂಪಾದಿಸಿ ಕಟ್ಟುತ್ತ ಬರಲಾಗಿದೆ. ಬಹುಮುಖಿ ಚರಿತ್ರೆಗಳನ್ನು ನಿರಾಕರಿಸುವ ಮತ್ತು ಏಕರೂಪಿಯಾದ ಚರಿತ್ರೆಯೆ ಯಾವತ್ತಿನ ಸತ್ಯವೆಂದು ಸ್ಥಾಪಿಸುವ ಯತ್ನಗಳನ್ನು ನಮ್ಮ ಹಲವರ ಸಾಹಿತ್ಯ ಚರಿತ್ರೆ ರಚನೆಗಳು ಮಾಡುತ್ತ ಬಂದಿವೆ. ಅಲ್ಲದೆ ಚರಿತ್ರೆಯನ್ನು ಸಾಮಾಜಿಕ – ರಾಜಕೀಯ – ಸಾಂಸ್ಕೃತಿಕ ಹೀಗೆ ಒಳವಿಭಾಗಗಳಲ್ಲಿ ಒಡೆದು ಕಟ್ಟಿಕೊಳ್ಳಲಾಗಿದೆ. ಇಲ್ಲೆ ಸಾಂಸ್ಕೃತಿಕ ಎಂಬ ಚೀಲದಲ್ಲೆ ಸಾಹಿತ್ಯ ಮತ್ತು ಕಲೆಗಳನ್ನು ಸೇರಿಸುವ ಕೆಲಸವನ್ನೂ ಮಾಡುತ್ತ ಬರಲಾಗಿದೆ. ಆದರೆ ನವಚಾರಿತ್ರಿಕವಾದವು ಇದನ್ನು ತಿರಸ್ಕರಿಸಿ ಹಲವು ಚರಿತ್ರೆಗಳನ್ನು ಮಾನ್ಯಮಾಡಿದೆ. ಮೌಖಿಕ ಚರಿತ್ರೆಗಳನ್ನು ಕೂಡ ಇಂದು ಕಟ್ಟಿಕೊಳ್ಳಲಾಗುತ್ತಿದೆ. ಉದಾಹರಣೆಗೆ ಎಂ. ವಿ. ವಸು ಅವರು ತಮ್ಮ ಮೌಖಿಕ ಇತಿಹಾಸ (೨೦೦೪) ಕೃತಿಯಲ್ಲಿ ಮೌಖಿಕ ಚರಿತ್ರೆಯನ್ನು ಒಂದು ಚರಿತ್ರೆ ಕಟ್ಟಾಣಿಕೆಯ ಕ್ರಮವಾಗಿಯೂ ಒಂದು ಸಂಶೋಧನಾ ಕ್ರಮವಾಗಿಯೂ ಪರಿಚಯಿಸಿದ್ದಾರೆ. ಅಲ್ಲದೆ ಕನ್ನಡದಲ್ಲಿ ಈ ಬಗ್ಗೆ ಆಗಿರುವ ಪ್ರಯತ್ನಗಳ ಉಲ್ಲೇಖಗಳನ್ನೂ ಮಾಡಿದ್ದಾರೆ. ಕೆ.ಸಾವಿತ್ರಿಯವರು ತಮ್ಮ ‘ನಂಬಿದ ಸತ್ಯಗಳು’ (೨೦೦೬) ಕೃತಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೌಖಿಕ ಇತಿಹಾಸದ ಕ್ರೋಡೀಕರಣದ ಮೂಲಕವೆ ಸಿರಿ, ಕಲ್ಲುರ್ಟಿ, ತನ್ನಿಮಾನಿಗ, ಮಾಯಂದಾಲ್, ಜುಮಾದಿ ಈ ಎಲ್ಲ ಹೆಣ್ಣು ಭೂತಗಳ ಚರಿತ್ರೆಯನ್ನು ಕಟ್ಟಲು ಯತ್ನಿಸಿದಾರೆ. ಹೊಸ ಚರಿತ್ರೆಗಳ ಇಲ್ಲವೆ ಸಾಹಿತ್ಯ ಚರಿತ್ರೆಗಳ ಕಟ್ಟಾಣಿಕೆ ಎನ್ನುವುದು ಹಲವು ಪರಂಪರೆಗಳ ಇರುವಿಕೆಯನ್ನೆ ಸ್ಥಾಪಿಸುತ್ತದೆ. ದಲಿತ ಸಾಹಿತ್ಯ ಚರಿತ್ರೆ, ಮಹಿಳಾ ಸಾಹಿತ್ಯ ಚರಿತ್ರೆ, ಜಾನಪದ – ಮೌಖಿಕ ಸಾಹಿತ್ಯ ಚರಿತ್ರೆ, ಅಲಕ್ಷಿತ ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟುಗಳ ಸಾಹಿತ್ಯ ಚರಿತ್ರೆ, ಛಂದಸ್ಸು, ಮೀಮಾಂಸೆ, ಭಾಷೆ, ವಿಮರ್ಶೆಗಳ ಚರಿತ್ರೆ ಹೀಗೆ ಹತ್ತು ಹಲವು ಪರಂಪರೆಗಳನ್ನೆ ಚರಿತ್ರೆಗಳನ್ನಾಗಿ ಕಟ್ಟಿಕೊಳ್ಳುವ ಅಗತ್ಯಗಳನ್ನು ಇತ್ತೀಚೆಗೆ ಪರಿಭಾವಿಸಲಾಗುತ್ತಿದೆ. ಆ ಕಡೆಗೆ ಯತ್ನಗಳೂ ನಡೆಯುತ್ತಿವೆ. ಇವೆಲ್ಲವೂ ಸ್ಥಾಪಿತ ಒಂದು ಪರಂಪರೆಯ ವಿಸರ್ಜನೆ ಮತ್ತು ಬಹುಮುಖಿ ಹಲವು ಪರಂಪರೆಗಳ ಆಹ್ವಾನವೆ ಆಗಿವೆ.

ಇಲ್ಲಿ ಇನ್ನೆರಡು ಸಾಹಿತ್ಯಕ ಉದಾಹರಣೆಗಳನ್ನು ನೋಡಬಹುದು. ನಟರಾಜ ಬೂದಾಳು ಅವರ ನಾಗಾರ್ಜುನ ಅಲ್ಲಮಪ್ರಭು ಒಂದು ತೌಲನಿಕ ಅಧ್ಯಯನ (೨೦೧೦)ವು ಅಲ್ಲಮನ ದರ್ಶನದ ಪರಂಪರೆಯನ್ನು ಕಟ್ಟಿಕೊಳ್ಳುವುದಕ್ಕಿಂತ ಅದನ್ನು ವಿಸರ್ಜಿಸುತ್ತದೆ. ಹಾಗೆಯೇ ಅಲ್ಲಮ ದಾರ್ಶನಿಕತೆಯ ಮೂಲವು ಬೌದ್ಧ ಎಂಬ ಅಥವಾ ಇನ್ನೇನೋ ಎಂಬ ಮೂಲವ್ಯಾಧಿಯಿಂದಲೂ ತಪ್ಪಿಸಿಕೊಂಡಿದೆ. ಹಾಗೆಯೇ ಪ್ರಕ್ರಿಯಾ ಮೀಮಾಂಸೆಯ ಮಂಡನೆಯ ಮೂಲಕ ಸ್ಥಾಪಿತ (ಸಂಸ್ಕೃತ) ಕಾವ್ಯ ಮೀಮಾಂಸೆಯನ್ನು ವಿಸರ್ಜಿಸಿದೆ. ಆರ್. ಚಲಪತಿಯವರ ‘ಪಠ್ಯಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ’ (೨೦೧೦) ಕೃತಿಯು ನಮ್ಮ ಪಠ್ಯ ಚರಿತ್ರೆಯಲ್ಲಿ ಹೇಗೆ ಏಕಮುಖಿ ಪಠ್ಯಗಳನ್ನು ಹೇರುತ್ತ ಬರಲಾಗಿದೆ. ಯಾಜಮಾನ್ಯ ಮೌಲ್ಯಗಳನ್ನು ಒಪ್ಪಿಸುತ್ತ ಬರಲಾಗಿದೆ ಎಂದು ಚರ್ಚಿಸುತ್ತದೆ. ಹಾಗೆ ಚರ್ಚಿಸುತ್ತಲೆ ಪ್ರತಿಷ್ಠಿತ ಪರಂಪರೆಯನ್ನು ವಿಸರ್ಜಿಸುತ್ತದೆ. ಹೊಸದಾದ ತನ್ನದೆ ಪರಂಪರೆಯನ್ನು ಇದು ಕಟ್ಟುವುದಿಲ್ಲವಾದರು ಹಳೆಯ ಪರಂಪೆರಯನ್ನು ಇದು ವಿಸರ್ಜಿಸುತ್ತದೆ.[1] ಕಪಟರಾಳ ಕೃಷ್ಣರಾಯರು ಕರ್ನಟಕ ಲಾಕುಳ ಶೈವರ ಇತಿಹಾಸ (೧೯೫೫) ಎಂಬ ಕೃತಿಯನ್ನು ಬಹಳ ಹಿಂದೆಯೆ ಬರೆದಿದ್ದಾರೆ. ರಾ.ಚಿಂ.ಢೇರೆಯವರ ‘ನಾಥ ಪಂಥದ ಇತಿಹಾಸ’ (೨೦೦೩) ಎಂಬ ಕೃತಿಯನ್ನು ಚಂದ್ರಕಾಂತ ಪೋಕಳೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಆದರೆ ರಹಮತರು ತಮ್ಮ ನಾಥಪಂಥ ಕೃತಿಯಲ್ಲಿ ಸೈದ್ಧಾಂತಿಕತೆಯ ಜೊತೆಗೆ ವರ್ತಮಾನದ ಮಠಗಳು ಮತ್ತು ಅಲ್ಲಿನ ಆಚಾರಗಳನ್ನೂ ವಿವರಿಸಿದ್ದಾರೆ. ನೋಡಿ: ಕರ್ನಾಟಕದ ನಾಥಪಂಥ; ಕನ್ನಡ ವಿ.ವಿ. ೨೦೦೭, ಪು – ೩೩೬ – ೩೪೦.