ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿಶ್ವ ಮಟ್ಟದಲ್ಲಿ ದೊಡ್ಡವರಿಗಿರುವ ಸಾಹಿತ್ಯದ ತುಲನೆಯಲ್ಲಿ ನೋಡುವಾಗ ಬಹು ನಿಧಾನದ, ಅನುಮಾನದಿಂದ ಹೆಜ್ಜೆ ಇಟ್ಟ, ತನ್ನ ಅಸ್ಮಿತೆಗಾಗಿ ಬಹು ದೀರ್ಘದ ಸಮಯ ಕಳೆದ ಇತಿಹಾಸವನ್ನ ನೋಡುತ್ತೇವೆ. ಅಷ್ಟಾಗಿಯೂ ಅದರ ಪ್ರತ್ಯೇಕ ಪ್ರಾಶಸ್ತ್ಯಕ್ಕೆ ಇನ್ನೂ ಬಿಡುಬೀಸಾದ ವಾತಾವರಣ ಅನೇಕ ದೇಶಗಳಲ್ಲಿ ಕಂಡುಬಂದಿಲ್ಲ. ಒಟ್ಟು ಸಾಹಿತ್ಯದ ವಾತಾವರಣದಲ್ಲಿ ಇದೂ ಹತ್ತರಕೂಡ ಹನ್ನೊಂದು ಎಂದು ಗಣನೆಯಾದುದರಿಂದ ಅಲಕ್ಷ್ಯಕ್ಕೆ ಒಳಗಾದುದೇ ಹೆಚ್ಚು. ಇದಕ್ಕೆ ನೀಡಬಹುದಾದ ಬಲುದೊಡ್ಡ ಕಾರಣ ಮತ್ತಿನ್ನೇನೂ ಆಗಿರದೆ ಮಕ್ಕಳು ಈ ಸಾಹಿತ್ಯದ ಓದುಗ ವರ್ಗವಾಗಿರುವುದೂ, ಆದರೆ ನಿರ್ಧಾರದ, ಅವರ ಜವಾಬುದಾರಿಯ ಹೊಣೆ ಹೊರುವವರು ದೊಡ್ಡವರಾಗಿರುವುದರಿಂದ, ಅವರ ಮರ್ಜಿಯನ್ನ ಅದು ನಿರೀಕ್ಷಿಸುವುದಾಗಿರುತ್ತದೆ ಎನ್ನುವುದೇ ಆಗಿದೆ. ಬಾಲ್ಯಕ್ಕೆ ಇಳಿದು ರಚನೆಗಿಳಿಯುವ ಹಂಬಲ, ಮಕ್ಕಳಿಗಾಗಿ ಪ್ರತ್ಯೇಕವಾಗಿ ಪ್ರಕಟನೆಗಿಳಿಯುವ ಅಗತ್ಯ, ಅದರ ಮಾರಾಟದ ಜವಾಬುದಾರಿ, ಇದಕ್ಕೆಲ್ಲ ಹಣದ ಹೂಡಿಕೆ ಮುಂತಾಗಿ ಎಲ್ಲದರಲ್ಲೂ ಓದುಗರಿಂದ ಪ್ರತ್ಯೇಕವಾದ ವಯೋವರ್ಗ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಈ ದ್ವಂದ್ವಗಳು ಕಾಣುವುದು ಸಹಜ. ಮಕ್ಕಳ ಸಾಹಿತ್ಯದ ಇತಿಹಾಸ ಈ ದ್ವಂದ್ವದ ಇತಿಹಾಸವೇ ಆಗಿದೆ.

ಹದಿನೆಂಟನೆಯ ಶತಮಾನದ ಉತ್ತರಾರ್ಧದವರೆಗೂ ಒಂದು ಬಗೆಯಲ್ಲಿ ಭ್ರೂಣಾವಸ್ಥೆಯಲ್ಲಿಯೇ ಇದ್ದ ಮಕ್ಕಳಿಗಾಗಿನ ಓದಿನ ಸಾಮಗ್ರಿ ಇಪ್ಪತ್ತನೆ ಶತಮಾನದ ಹೊತ್ತಿಗೆ ಅಚ್ಚರಿ ಪಡುವಂತೆ ತನ್ನ ಸಾಧ್ಯತೆಗಳನ್ನ ತೋರಿಸಿಕೊಂಡಿತು. ಎರಡು ಶತಮಾನಗಳ ಸಾಧನೆ ನಿಜಕ್ಕೂ ಮಕ್ಕಳ ಸಾಹಿತ್ಯದ ಅಸ್ತಿತ್ವವನ್ನ ಪ್ರತ್ಯೇಕವಾಗಿ ಒಪ್ಪಿಕೊಳ್ಳುವ ವಾತಾವರಣ ನಿರ್ಮಾಣಗೊಂಡಿತು. ಅಪರೂಪದ ಕೃತಿಗಳು ಕಾಣಿಸಿಕೊಂಡು ಅಚ್ಚರಿ ಪಡುವಂತಹ ಸಾಧನೆ ಕಾಣಿಸಕೊಂಡಿತು.

ಇಂಗ್ಲಿಷರ ಕುರಿತಾಗಿ ಒಂದು ಮಾತಿದೆ. ಅವರು ಬಾಲ್ಯಕ್ಕೆ ವಿದಾಯ ಹೇಳುವುದಿಲ್ಲ ಎಂಬುದನ್ನ ಒಪ್ಪಿಕೊಂಡವರು. ಮಕ್ಕಳ ಮನೋರಂಗವನ್ನ ನಾನಾಬಗೆಯಲ್ಲಿ ಅವರಿಗೆ ನೋಡಲು ಇದೇ ಕಾರಣಕ್ಕೆ ಸಾಧ್ಯವಾಗಿರಬಹುದು. ಹೀಗಾಗಿಯೇ ಮಕ್ಕಳ ಸಾಹಿತ್ಯದ ಕ್ಷೇತ್ರದಲ್ಲಿ ಇಂಗ್ಲೀಷಿನವರದೇ ಸಿಂಹಪಾಲಿನ ಸಾಧನೆ. ವೈವಿಧ್ಯದಲ್ಲಿ, ಸೃಷ್ಟಿಗೊಂಡ ಪ್ರಮಾಣದಲ್ಲಿ, ಆ ಕುರಿತ ವಿಚಾರ ವಿಮರ್ಶೆಗಳಲ್ಲಿ, ಎಲ್ಲದರಲ್ಲೂ ಇಂಗ್ಲೀಷಿನ ಜನ ಇದನ್ನ ಸಾಬೀತು ಗೊಳಿಸಿದ್ದಾರೆ. ವಸಾಹತು ಶಾಹಿಯ ಬಲದಿಂದ ವಿಸ್ತಾರವಾದ ಮಾರುಕಟ್ಟೆಯೂ ಇಂಗ್ಲೀಷಿಗೆ ಲಭ್ಯವಾದುದೊಂದು ಬಲವಾದ ಪುಷ್ಟಿಯನ್ನ ನೀಡಿತು. ೨೦೦೩ರಲ್ಲಿ Arts council England ಸಂಸ್ಥೆಯ ಮೂಲಕ ಬೃಹತ್ ಪ್ರಮಾಣದಲ್ಲಿ ಮಕ್ಕಳ ಸಾಹಿತ್ಯ ಕುರಿತು ಸಮೀಕ್ಷೆಯನ್ನ ನಡೆಸಿ ಮುಂದಿನ ಬೆಳವಣಿಗೆಗಾಗಿ ಕ್ರಮಗಳಿಗೆ ಸಂಬಂಧಿಸಿದ ಹಾಗೆ ಯೋಜನೆಯೊಂದನ್ನ ಕೈಗೊಳ್ಳಲಾಯಿತು. ರಾಷ್ಟ್ರದುದ್ದಕ್ಕೂ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ರಂಗದವರು, ಶಿಕ್ಷಕರು, ಮಕ್ಕಳು, ಆಸಕ್ತರು, ವಿದ್ವಾಂಸರು ಎಲ್ಲರ ಅಭಿಪ್ರಾಯಗಳನ್ನ ಕಲೆ ಹಾಕಲಾಯಿತು, ಚರ್ಚೆಗಿಳಿಯಲಾಯಿತು. ಆ ಮೂಲಕ ಮುಂದಿನ ವ್ಯವಸ್ಥಿತವಾದ ಬೆಳವಣಿಗೆಗೆ ನಿರ್ದೇಶನಗಳನ್ನು ನೀಡಲಾಯಿತು. ಇದೊಂದು ಗಮನಿಸಬೇಕಾದ, ಮಕ್ಕಳ ಸಾಹಿತ್ಯ ಕುರಿತ ರಾಷ್ಟ್ರಮಟ್ಟದ ಬಹುದೊಡ್ಡ ಪ್ರಯತ್ನ, ಕಾಳಜಿ ಎನ್ನಬಹುದು. ಈ ಸಮೀಕ್ಷೆಯ ಸಂದರ್ಭದಲ್ಲಿ ಅಲ್ಲಿನ ಸಂಬಂಧಪಟ್ಟ ಸಚಿವರ ಹೇಳಿಕೆಯಲ್ಲಿ ‘Children literature is an integral part of (Briton’s literature)tradition and it is absolutely right that it should be promoted and developed just as seriously and energetically as literature for adults’ ಎನ್ನುವ ಮಾತುಗಳಿರುವುದನ್ನ ಇಲ್ಲಿ ಉಲ್ಲೇಖಿಸಬಹುದು.

ಬಹು ಮುಖ್ಯವಾದ ಸಂಗತಿ ಎಂದರೆ ಈ ರಂಗದಲ್ಲಿ ಕಾಣಿಸಿಕೊಂಡ ಹಲವು ಕೃತಿಗಳು ತಮ್ಮ ಅಚ್ಚ ಹೊಸತಿನಿಂದ, ಹೊಸ ಸಾಧ್ಯತೆಗಳಿಂದ ಮಕ್ಕಳ ಸಾಹಿತ್ಯದ ಆಕಾರಕ್ಕೆ ಪುಷ್ಟಿ ನೀಡುವಂತಾದುದು. ಸಿ. ಎಸ್. ಲುಯಿಸ್‌ನ ‘ಕ್ರಾನಿಕಲ್ಸ್ ಆಫ್ ನರ್ನಿಯಾ’ ಸರಣಿ, ಲುಯಿಸ್‌ಕೆರೋಲ್‌ನ ‘ಆಯಲಿಸ್ ಇನ್‌ಒಂಡರ್ ಲ್ಯಾಂಡ್’, ಎಡ್ವರ್ಡ್ ಲಿಯರ್‌ನ ‘ನಾನ್ಸೆನ್ಸ್’ಪದ್ಯಗಳು, ರುಡ್‌ಯಾರ್ಡ್ ಕಿಪ್ಲಿಂಗ್‌ನ ‘ಜಂಗಲ್ ಬುಕ್‌’, ಗ್ರೆಹ್ಯಾಮ್ ಕೆನೆತ್‌ನ ‘ವಿಂಡ್‌ಇನ್ ದ ವಿಲ್ಲೋಸ್’, ಜೇ. ಎಮ್. ಬೆರ‍್ರಿಯ ‘ಪೀಟರ್‌ಪ್ಯಾನ್’, ಬಾಉಮ್ ಎಲ್ ಫ್ರ‍್ಯಾಂಕ್‌ನ ‘ದಿ ಒಂಡರ್ ಫುಲ್ ವಿಝಾರ್ಡ್ ಆಫ್ ಓಝೆಡ್’, ಎ. ಎ. ಮಿಲ್ನೆಯ ‘ವಿನ್ನಿ ಮತ್ತು ಪೂಹಾ’, ಹೀಗೆ ಹಲವಾರು ಕೃತಿಗಳನ್ನ ಹೆಸರಿಸುತ್ತ ಹೋಗಬಹುದು. ಇವು ಸಾರಸ್ವತ ಲೋಕವನ್ನ ತಮ್ಮದೇ ಆದ ಪ್ರತ್ಯೇಕತೆಯ ವಿಶೇಷಗಳಿಂದ ಗುರುತಿಸಲು ಆಗ್ರಹಿಸಿದುದು ಮಕ್ಕಳ ಸಾಹಿತ್ಯದ ಮಾನದಂಡಗಳ ನಿಷ್ಕರ್ಷೆಯಲ್ಲಿ ಹೊಸ ಸಂಗತಿಗಳನ್ನ ಗುರುತಿಸಲು ಕಾರಣವಾಯಿತು.

ಇಂದು ಮಕ್ಕಳ ಸಾಹಿತ್ಯವನ್ನ ಪ್ರತಿಷ್ಠೆಯ ಸಂಗತಿಯಾಗಿ ಗುರುತಿಸಲು ಅನೇಕ ಪ್ರಶಸ್ತಿಗಳು ಕಾಣಿಸಿಕೊಂಡಿವೆ. ಸಿ ಝೆಡ್ ಎನ್ನುವ ಪ್ರಶಸ್ತಿಗೆ ಸಂಬಂಧಿಸಿದ ಹಾಗಿನ ಅಂತರ್ಜಾಲ ತಾಣದಲ್ಲಿ ಅದರ ವಿವರಗಳನ್ನ ಕೊಡುವಾಗ ಪ್ರಾರಂಭಿಸಲಾದ Every field has its equivalent of the Oscars or the Grammys ಎನ್ನುವ ವಾಕ್ಯ ಮಕ್ಕಳ ಸಾಹಿತ್ಯದ ಕುರಿತು ಒಂದು ಬಗೆಯ ಹಟದ, ಹಾಗೆಯೆ ಗಮನಿಸಬೇಕಾದ ಅಗತ್ಯವಿರುವ ಅರಿಕೆಯನ್ನ ಸೂಚಿಸುವ ಹಾಗಿದೆ. ಲಿಟಲ್ ನೊಬೆಲ್ ಎಂದು ಖ್ಯಾತಿಯಾಗಿರುವ ಹ್ಯಾನ್ಸ್ ಕ್ರಿಶ್ಚಿಯನ್ ಆಯಂಡರ್‌ಸನ್ ಪ್ರಶಸ್ತಿಯನ್ನ ಒಳಗೊಂಡಂತೆ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಕಾಣಿಸಿಕೊಂಡಿವೆ. ವಿಶ್ವದ ಅನೇಕ ಕಡೆಗಳಲ್ಲಿ ಮಕ್ಕಳ ಸಾಹಿತ್ಯವನ್ನ ಗಂಭೀರವಾಗಿ ಪರಿಗಣಿಸಿರುವ ಪ್ರತಿಷ್ಠಿತ ಸಂಸ್ಥೆಗಳು ಕಾಣಿಸಿಕೊಂಡಿವೆ. ಗಂಭೀರವಾದ ಅಧ್ಯಯನಕ್ಕೆ, ವಿಮರ್ಶೆಗೆ ಪತ್ರಿಕೆಗಳು ಕಾಣಿಸಿಕೊಂಡಿವೆ. ಈ ರಂಗದಲ್ಲಿಯೇ ತಮ್ಮನ್ನ ವಿಶೇಷವಾಗಿ ತೊಡಗಿಸಿಕೊಂಡ ವಿದ್ವಾಂಸರು ಅನೇಕರು ಇಂದು ಕಾಣಿಸಿಕೊಂಡಿದ್ದಾರೆ.

ಇಪ್ಪತ್ತನೆಯ ಶತಮಾನ ಮಕ್ಕಳ ಸಾಹಿತ್ಯ ಅನೇಕ ಹೊಸ ಹೊರಳಿಗೆ ಹೊರಳಿದ ಕಾಲ. ವಿಕ್ಟೋರಿಯನ್ ಸಮಯದ ಮಕ್ಕಳ ಸಾಹಿತ್ಯದಲ್ಲಿ ಹುಡುಗರು ಮತ್ತು ಹುಡುಗಿಯರ ನಡುವಿನ ಪ್ರತ್ಯೇಕತೆ ಪ್ರಖರವಾಗಿದ್ದುದು ಇಪ್ಪತ್ತನೆಯ ಶತಮಾನದ ಹೊತ್ತಿಗೆ ಕಡಮೆಯಾಗುತ್ತ ಬಂತು. ಬಹಳಷ್ಟು ಖ್ಯಾತ ಕೃತಿಗಳಲ್ಲಿ (Joel Chandler Harris’s Uncle Remus, His Songs and His Sayings (1880); Helen Bannerman’s The Story of Little Black Sambo (1899); Hugh Lofting’s The Story of Dr. Dolittle (1920); Jean de Brunhoff’s Historie de Babar, le petit elephant (1931), translated by Merle Haas from the French as The Story of Babar, The Little Elephant (1933); and Roald Dahl’s Charlie and the Chocolate Factory (1964)) ಜನಾಂಗೀಯ ಭಾವನೆಗಳ ಹಿನ್ನೆಲೆಯನ್ನ ಗುರುತಿಸಲಾಯಿತು. ಇಪ್ಪತ್ತನೆಯ ಶತಮಾನದ ಪೂರ್ವದ ಬಹಳಷ್ಟು ಸಾಹಿತ್ಯದಲ್ಲಿ ಹಾಗೂ ಅವುಗಳಿಗೆ ಸಿದ್ಧಪಡಿಸಿದ ಚಿತ್ರಗಳಲ್ಲಿ ಬಿಳಿಯರ ಪರವಾದ ಭಾವನೆ ಇರುವುದನ್ನ ಗುರುತಿಸಲಾಯಿತು. ಆದಷ್ಟೂ ವಿಭಿನ್ನ ಸಾಂಸ್ಕೃತಿಕ ಪರಿಸರದ ಸಾಹಿತ್ಯದ ಕಡೆಗೆ ಒಲವು ಕಾಣಿಸಿತು. ೧೯೨೦-೧೯೨೧ ರಲ್ಲಿ ಬಂದ W. E. B. Du Bois ಎನ್ನುವವನ The Brownies Book ಎನ್ನುವ ಪತ್ರಿಕೆ ಮೊದಲ ಆಫ್ರಿಕನ್-ಅಮೇರಿಕನ್ ಮಕ್ಕಳ ಪತ್ರಿಕೆ ಎಂದು ಗುರುತಿಸಲಾಗಿದೆ. ಆಫ್ರಿಕನ್ ಅಮೇರಿಕನ್ ಗಮನಾರ್ಹ ಲೇಖಕರಾದ Arna Bontemps, Lucille Clifton, Mildred Taylor, Virginia Hamilton, and John Steptoe ಮೊದಲಾದವರು, ಹಾಗೆಯೆ ಏಶಿಯನ್ ಅಮೇರಿಕನ್ ಆದ ಅನೇಕ ಮಹತ್ವದ ಲೇಖಕರು. (Laurence Yep, Allen Say, and Ken Mochizuki) ಬಿಳಿಯರ ವಾತವರಣವನ್ನ ಇಲ್ಲವಾಗಿಸಿ ಮುಕ್ತ ವಾತವರಣವನ್ನ ಮೂಡಿಸಲು ಕಾರಣರಾದರು. The Council on interratial Books for Children and the World of children’s books ಎನ್ನುವ ಸಂಸ್ಥೆ ಇಂಥ ಜನಾಂಗೀಯ ವಿಭಿನ್ನತೆಯ ಆಧ್ಯಯನದ ಹಿನ್ನೆಲೆಯಲ್ಲಿಯೇ ರೂಪಿತವಾದ ಸಂಸ್ಥೆ ಇಂದು ಕೆಲಸ ಮಾಡುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳಿಗಾಗಿರುವ ಸಾಹಿತ್ಯದಲ್ಲಿ ಜನಾಂಗೀಯ ವಿಭಿನ್ನತೆಯಲ್ಲಿ ಗೌರವ ಮೂಡಿಸುವ, ಶೋಷಣೆಯನ್ನ ಅಳಿಸಿ ಹಾಕುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಗಮನಿಸಬೇಕಾದ ಇನ್ನೊಂದು ಮಹತ್ವದ ಸಂಗತಿ ಎಂದರೆ ಮಕ್ಕಳಿಗಾಗಿ ಎಂದು ಸೃಷ್ಟಿಗೊಳ್ಳುತ್ತಿರುವ ಕೃತಿಗಳನ್ನ ದೊಡ್ಡವರೂ ಆಸ್ಥೆಯಿಂದ ಓದತೊಡಗಿರುವುದು. ಹ್ಯಾರಿ ಪಾಟರ್ ವಿಷಯದಲ್ಲಿ ಇದರ ಅನುಭವವನ್ನ ಪುಸ್ತಕ ಮಾರಾಟ ವಲಯ ವಿಶೇಷವಾಗಿಯೇ ಕಂಡುಕೊಂಡಿತು. ಬಾಲ್ಯದ ಕುರಿತ ಅನನ್ಯವಾದ ಅನುಭವಗಳನ್ನ ಹೊಂದಿ ಬಂದ ಕೃತಿಗಳು ಮಕ್ಕಳಿಗೆ ಆಗುವಂತೆ ದೊಡ್ಡವರನ್ನೂ ತೀವೃವಾಗಿ ಸೆಳೆಯುವಂಥ ಅಪರೂಪದ ಕೃತಿಗಳು ಅನೇಕ ಬಂದಾಗಿ ಮಕ್ಕಳ ಸಾಹಿತ್ಯದ ಪುಸ್ತಕ ಲೋಕ ತನ್ನದೇ ಆದ ಲೋಕವನ್ನ ಸೃಷ್ಟಿಸಿಕೊಂಡಿದೆ ಈಗ. ಜೊತೆಗೇ ಗಮನಿಸಬೇಕಾದ ಸಂಗತಿ ಎಂದರೆ ದೊಡ್ಡವರಿಗಾಗಿ ಬರೆಯುತ್ತ ಯಶಸ್ವಿಯಾದ ಅನೇಕ ಲೇಖಕರು ಮಕ್ಕಳಿಗಾಗಿಯೂ ಬರೆಯಲು ಹಂಬಲಿಸುತ್ತಿರುವುದು.

ಇಷ್ಟೆಲ್ಲ ಆಗಿಯೂ ಸಾರಸ್ವತ ಪ್ರಪಂಚದ ಮುಖ್ಯ ವಾಹಿನಿ ಮಕ್ಕಳ ಸಾಹಿತ್ಯವನ್ನ ತನ್ನೊಟ್ಟಿಗೆ ಗಣನೀಯವಾಗಿ ಗುರುತಿಸಿಲ್ಲ ಎನ್ನುವದೂ ಅಷ್ಟೇ ಸತ್ಯ. ಮಕ್ಕಳ ಸಾಹಿತ್ಯದ ವಿಶೇಷದ ಸಾಧನೆಯ ಇಂಗ್ಲೀಷಿನ ವಾತಾವರಣದಲ್ಲಿಯೂ ಈ ಮಾತು ಹೇಳಬೇಕಾದುದೇ. ಈ ನಿಟ್ಟಿನಲ್ಲಿ ehow_com ಎನ್ನುವ ಅಂತರ್ಜಾಲ ತಾಣದಲ್ಲಿ ಮಕ್ಕಳ ಸಾಹಿತ್ಯದ ಅಧ್ಯಯನ ಹೇಗೆ ಎನ್ನುವುದರ ಕುರಿತು ಚರ್ಚೆಯ ಸಂದರ್ಭದಲ್ಲಿ ನೀಡಿದ ಕೆಲ ಸಾಲುಗಳು ವಿಶೇಷವಾಗಿ ಕಂಡುವು ನನಗೆ. ಅವನ್ನಿಲ್ಲಿ ನೀಡುತ್ತಿದ್ದೇನೆ:

  1. Many people within and outside academia consider the study of children’s literature a light subject. However, anyone who has spent time studying children’s literature will tell you that it is an intensive and complicated process.
  2. Be ready to defend your interest in children’s literature. Anyone serious about the study of the field will fall prey to naysayers at some point. If you wish to defend your choice, you should be able to express the complicated nature of the genre.
  3. Teaching children’s literature is a great way to learn as students can often shed new light on a text with their fresh approach to the material.

ಮೂನಿಚ್‌ನ Tel Aviv University ವಿಶ್ವ ವಿದ್ಯಾಲಯದಲ್ಲಿ Department of Poetics and Comparative Literature ವಿಭಾಗದಲ್ಲಿರುವ Zohar Shavit ಎನ್ನುವವರು ಬರೆದ ಸಂಶೋಧನ ಪ್ರಬಂಧ ‘Poetics of children literature’ ಮಕ್ಕಳ ಸಹಿತ್ಯವನ್ನ ಬಹು ಆಸಕ್ತಿಯಿಂದ, ಯಾವುದೇ ಉದಾರ ಭಾವನೆಯನ್ನ ಇರಿಸಿಕೊಳ್ಳದೆ, ವಿಚಕ್ಷಕವಾಗಿ ಪರಿಸೀಲಿಸಿದ ಒಂದು ವಿಶೇಷದ ಕೃತಿ. ‘In this study I relate this newly developed field to the latest achievements of poetics and semiotics, areas that are quite new to the English-speaking world’ ಎಂದು ಲೇಖಕಿ ಹೇಳಿರುವುದನ್ನ ಗಮನಿಸಬಹುದು. ಈ ಪ್ರಬಂಧದಲ್ಲಿ ಮಕ್ಕಳ ಸಾಹಿತ್ಯದ ಅಧ್ಯಯನ ಕುರಿತ ಲೇಖಕಿಯ ಗಟ್ಟಿಯಾದ ಮಾತುಗಳು ಇವು

scholars must indicate their readiness to accept children’s literature as a legitimate field of research; secondly, they must be ready to regard children’s literature as literature per se, that is, to regard it as a part of the literary system, I believe that the time has arrived to extricate children’s literature from the narrow boundaries of the past and to place it in the foreground of literary scholarship, facing the future. (ವಿದ್ವಾಂಸರು ಮಕ್ಕಳ ಸಾಹಿತ್ಯ ಸಂಶೋಧನೆಯ ಅಗತ್ಯವಿರುವ ವಿಷಯ ಎನ್ನುವುದನ್ನ ಒಪ್ಪಿಕೊಳ್ಳಬೇಕು. ಎರಡನೆಯದಾಗಿ ಮಕ್ಕಳ ಸಾಹಿತ್ಯ ಒಟ್ಟು ಸಾಹಿತ್ಯದ ಭಾಗ ಎಂಬುದನ್ನ ಗಣಿಸಬೇಕು ಈ ಹಿಂದಿನ ಸಂಕುಚಿತ ಮೇರೆಗಳಿಂದ ಅದನ್ನ ಬಿಡುಗಡೆಗೊಳಿಸುವ, ವಿದ್ವಾಂಸರ ವಾತಾವರಣದಲ್ಲಿ ಅದನ್ನ ಗುರುತಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ)

ಈ ಎಲ್ಲದರ ಹಿನ್ನೆಲೆಯಲ್ಲಿ ಭಾರತದ, ಕನ್ನಡದ ಪರಿಸರದ ಮಕ್ಕಳ ಸಾಹಿತ್ಯವನ್ನ ನೋಡುವ ಅಗತ್ಯವಿದೆ. ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಏನೆಲ್ಲ ಬಂದಿದೆ ಪರಸ್ಪರ ತಿಳಿಯುತ್ತಿಲ್ಲ. ಆ ಬಗೆಯ ಕೊಡುಕೊಳ್ಳುವಿಕೆ ನಮ್ಮಲ್ಲಿ ನಡೆಯುತ್ತಲೇ ಇಲ್ಲ. ಹೀಗಾಗಿ ಎಲ್ಲೆಲ್ಲಿ ಎಂಥ ರಚನೆಗಳು ಬರತ್ತಿವೆ ಅಂದಾಜೇ ಸಿಗುವುದಿಲ್ಲ. ಅನೇಕ ಪ್ರತಿಭಾವಂತ ಲೇಖಕರು ಪರಂಪರೆಯ ಹಿಂದಿನ ಸರಕನ್ನ ಬಿಟ್ಟು ಇಂದಿನ ಮಕ್ಕಳು ಸ್ಪಂದಿಸಬಹುದಾದ ಹೊಸ ಉಣಿಸನ್ನ ನೀಡುತ್ತಿರಬಹುದು, ಕಾದಂಬರಿ, ಕತೆ, ಪದ್ಯಗಳು, ಪುಟಾಣಿಗಳಿಗಾಗಿ ಪದ್ಯಗಳು, ಪ್ರವಾಸ ಕತೆಗಳು ನಾನಾ ಬಗೆಯಲ್ಲೆಲ್ಲ ರಚನೆಗಿಳಿದಿರಬಹುದು. ಈ ಕುರಿತ ಮಾಹಿತಿ ಸಂಗ್ರಹಿಸುವುದೂ ಕಷ್ಟದ ಕೆಲಸವಾಗಿದೆ. ಅಂತರ್ಜಾಲವನ್ನೂ ಈ ನಿಟ್ಟಿನಲ್ಲಿ ಅಷ್ಟಾಗಿ ಯಾರೂ ಬಳಸಿಕೊಳ್ಳುತ್ತಿಲ್ಲ. ವಿಸ್ತ್ರತವಾಗಿ ಹಬ್ಬಿರುವ ಹಿಂದಿಯಂಥ ಭಾಷೆಯ ವಿಷಯದಲ್ಲೂ ಇದು. ಹೊರದೇಶಗಳ ಇಂಥ ಮಾಹಿತಿಸಂಗ್ರಹದಲ್ಲಿ ಭಾರತೀಯ ಕೆಲ ಹೆಸರುಗಳನ್ನ ನೋಡುವ ವಿಪರ್ಯಾಸದ ಪರಿಸ್ಥಿತಿ ಇದೆ. ಬಹುಶಃ ಇದೇ ಕಾರಣಕ್ಕೆ ಭಾರತೀಯ ಇಂಗ್ಲೀಷಿನ ಬರವಣಿಗೆಗೆ ಹೋಲಿಸಿ ಈ ಪ್ರಾದೇಶಿಕ ಬರವಣಿಗೆಯನ್ನ ಗಣಿಸುವುದು ಸಾಧ್ಯವೇ ಆಗುತ್ತಿಲ್ಲ. ನಮ್ಮ ಇಂಗ್ಲೀಷಿನ ಬರಹಗಾರರಿಗೆ ನಮ್ಮವರೆ ಆದ ವಿಭಿನ್ನ ಭಾಷೆಯ ಲೇಖಕರ ಕುರಿತು ತಿಳಿದಿರುವುದಿಲ್ಲ.

ಕಳಪೆ ಮಟ್ಟದ, ಚರ್ವಿತ ಚರ್ವಣ ಸಾಮಗ್ರಿ ದಂಡಿಯಾಗಿ ಬರುತ್ತಿರುವುದನ್ನೇ, ಹೊರಗಡೆ ಏನೇನೆಲ್ಲ ನಡೆಯುತ್ತಿದೆ ಎಂಬುದರ ಕಡೆಗೆ ಕಿಂಚಿತ್ತೂ ಗಮನ ಹರಿಸದೆ ತಮ್ಮದೇ ಕೂಪ ಮಂಡೂಕ ವೃತ್ತಿಯಲ್ಲಿ ಉಳಿದುದನ್ನೇ ಇಂದು ನಮ್ಮ ಸುತ್ತ ವಿಶೇಷವಾಗಿ ಕಾಣುತ್ತಿದ್ದೇವೆ. ಕನ್ನಡದ ಬಗೆಗೇ ಹೇಳುವುದಾದರೆ ಇಂಥ ಸರಕೇ ಅಪಾರ ಸಂಖ್ಯೆಯಲ್ಲಿ ಕಾಣುತ್ತಿದೆ. ಗುಣಮಟ್ಟವಿಲ್ಲದ ಈ ಬಗೆಯ ಪುಸ್ತಕಗಳನ್ನ ಲೇಖಕರ ದೊಡ್ಡ ದಂಡು ಬಿಟ್ಟೂಬಿಡದೆ ಪ್ರಕಾಶಿಸುತ್ತಲೇ ಇದ್ದಾರೆ, ಗ್ರಂಥಾಲಯದ ಸಗಟು ಖರೀದಿಗಾಗಿ ಒತ್ತಾಯಿಸುತ್ತಲೇ ಇದ್ದಾರೆ. ಇಂಥದರ ನಡುವೆ ಇತ್ತೀಚೆ ಒಂದಿಷ್ಟು ಉಸಿರಾಡುವ ವಾತಾವರಣ ಕಾಣಿಸಿಕೊಂಡಿದೆ. ಕುವೆಂಪು, ಜಿ ಪಿ ರಾಜರತ್ನಂ, ದಿನಕರ ದೇಸಾಯಿ, ಪಂಜೆ ಮಂಗೇಶರಾಯ ಅಂಥವರು ನಾಂದಿ ಹಾಡಿದುದನ್ನ ಇಂದು ಎಚ್ ಎಸ್ ವೆಂಕಟೇಶಮೂರ್ತಿ, ಸುಮತೀಂದ್ರ ನಾಡಿಗ, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ, ನಾ ಡಿಸೋಜ, ಎನ್ ಶ್ರೀನಿವಾಸ ಉಡುಪ, ರಾಧೇಶ ತೋಳ್ಪಾಡಿ, ಭಾಗೀರಥಿ ಹೆಗಡೆ, ರಾಜಶೇಖರ ಬೂಸನೂರಮಠ, ಶಶಿಧರ ವಿಶ್ವಾಮಿತ್ರ ಅಂಥವರು ಮುಂದುವರಿಸುತ್ತ ಭರವಸೆ ಮೂಡಿಸಿದ್ದಾರೆ.

ಅಧ್ಯಯನ, ವಿಮರ್ಶೆಗಳ ಲೋಕವಂತೂ ಮಕ್ಕಳ ಸಾಹಿತ್ಯದ ವಿಷಯದಲ್ಲಿ ತೆರೆದುಕೊಳ್ಳಲೇ ಇಲ್ಲ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಮಕ್ಕಳ ಸಾಹಿತ್ಯ ಇನ್ನೂ ಅಷ್ಟಾಗಿ ಅಧ್ಯಯನದ ವಿಷಯವಾಗಿ ಗಣನೆಗೇ ಒಳಗಾಗಲಿಲ್ಲ. ದೊಡ್ಡವರ ಸಾಹಿತ್ಯದ ಸಮೀಕ್ಷೆ, ವಿಮರ್ಶೆ, ಅಧ್ಯಯನಕ್ಕಾಗಿ ಬರುವ ಪತ್ರಿಕೆಗಳಂತೆ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೊಳ್ಳುವ ಪ್ರಯತ್ನಗಳೂ ನಡೆಯಲಿಲ್ಲ. ಕೆ. ಶಂಕರ ಪಿಳ್ಳೆ ಅವರು ೧೯೮೧ರಲ್ಲಿ ಹುಟ್ಟು ಹಾಕಿದ, IBBY (The International Board on Books for Young People) ಸಂಸ್ಥೆಯ ಭಾರತೀಯ ಅಂಗಸಂಸ್ಥೆ Assosiation of writers and illustrators for Children ತರುತ್ತಿರುವ ಪತ್ರಿಕೆ Writers and Illustrators ಇಡೀ ಭಾರತದಲ್ಲಿ ಎದ್ದು ಕಾಣುವ ಒಂದೇಒಂದಾದ ಪತ್ರಿಕೆ. ಹಿಂದಿಯಲ್ಲಿ ಮಕ್ಕಳ ಸಾಹಿತ್ಯದ ಕುರಿತು ಮೊದಲ ಪಿ ಎಚ್ ಡಿ ಮಾಡಿದ ಡಾ. ಹರಿಕೃಷ್ಣ ದೇವಸರೆ ಅವರು ಸಾಕಷ್ಟು ವಿಸ್ತೃತವಾಗಿಯೇ ಈ ರಂಗದಲ್ಲಿ ಅಧ್ಯಯನ ಕೈಗೊಂಡಿದ್ದಾರೆ. ಹಾಗೆಯೆ ಓರಿಸಾದ ಪ್ರೊ. ಜಗನ್ನಾಥ ಮೊಹಂತಿ ಅಲ್ಲಿನ ಮಕ್ಕಳ ಸಾಹಿತ್ಯದ ಕುರಿತು ಅಧ್ಯಯನಪೂರ್ಣ ಪ್ರಬಂಧವನ್ನ ಇಂಗ್ಲೀಷಿನಲ್ಲಿ ಬರೆಯುವ ಸಾರ್ಥಕ ಕೆಲಸ ಮಾಡಿದುದಲ್ಲದೆ ಈ ನಿಟ್ಟಿನಲ್ಲಿ ಅವಿರತವಾಗಿ ಬಹುವರ್ಷದಿಂದ ತೊಡಗಿಕೊಂಡವರಾಗಿದ್ದಾರೆ. ಹೀಗೆ ಬೇರೆ ಬೇರೆ ಭಾಷಾ ವಲಯಗಳಲ್ಲಿ ಅನೇಕರು ಸಿಗಬಹುದೇನೊ.

ಮಾರುಕಟ್ಟೆಯ ಅನನುಕೂಲ ಈ ಎಲ್ಲ ಪ್ರಾದೇಶಿಕ ವಲಯದಲ್ಲಿ ಲೇಖಕರನ್ನ, ಪ್ರಕಾಶಕರನ್ನ ಕಾಡುತ್ತದೆ. ಒಂದು ಪುಸ್ತಕದ ೧೦೦೦ ಪ್ರತಿಗಳನ್ನ ಮುದ್ರಿಸಿದರೆ ಅದೇ ದೊಡ್ಡ ಮಾತು. ಗ್ರಂಥಾಲಯದ ಸಗಟು ಖರೀದಿಗಾಗಿ ಕಾಯುತ್ತ ಕೂರಬೇಕು. ಹೀಗಿರುವಾಗ ಪುಸ್ತಕ ಮುದ್ರಣ ಹೇಗೆಲ್ಲ ಇರಬೇಕೊ ಹಾಗೆ ಇರಲು ಸಾಧ್ಯವೇ ಇಲ್ಲ, ಅದನ್ನ ಊಹಿಸಿಕೊಳ್ಳಲೇ ಸಾಧ್ಯವಿಲ್ಲ. ಇಂಗ್ಲೀಷಿನ, ಹೊರದೇಶದ ಪುಸ್ತಕಗಳಿಗೆ ಇಲ್ಲಿನವನ್ನ ತುಲನೆ ಮಾಡುವ ಹಾಗೆಯೇ ಇಲ್ಲ. ಮುಖಪುಟವೊಂದು ಬಣ್ಣದಲ್ಲಿ ಆದರೆ ಆಯಿತು, ಒಳಗಡೆ ರೇಖಾಚಿತ್ರಗಳು ಕಪ್ಪು ಬಿಳುಪನ್ನ ಆಶ್ರಯಿಸುವುದು ಅನಿವಾರ್ಯ, ಮಕ್ಕಳ ಪುಸ್ತಕಗಳಿಗಾಗಿ ಅಂತ ಚಿತ್ರಕಾರರ ಪ್ರತ್ಯೇಕ ವಿಶೇಷದ ಪರಿಣತಿಯ ವರ್ಗ ಇನ್ನೂ ಊಹೆಗೇ ದೂರ. ರಾಷ್ಟ್ರ ಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಬಗೆಯ ಪ್ರಾದೇಶಿಕ ಭಾಷೆಯೊಂದರಲ್ಲಿನ ಕೃತಿ ಗುರುತಿಸಿಕೊಳ್ಳುವುದೇ ದೊಡ್ಡದೊಂದು ಸಮಸ್ಯೆಯಾಗಿಬಿಡುತ್ತದೆ. ಮಕ್ಕಳ ಸಾಹಿತ್ಯ ಸಾಕಷ್ಟು ವಿಪುಲವಾಗಿ ಬರುತ್ತಿದೆ ಎಂದುಕೊಳ್ಳುವ ಮರಾಠಿ, ಬೆಂಗಾಲಿಯಂಥ ಭಾಷೆಗಳಲ್ಲಿಯೂ ಕಳೆದ ಎರಡು ದಶಕಗಳಲ್ಲಿ ಹೇಳಿಕೊಳ್ಳುವಂಥ ಯಾವ ಪ್ರಗತಿಯೂ ಆಗಿಲ್ಲ. ಬೆಂಗಾಲಿಯ ಮಕ್ಕಳ ಪುಸ್ತಕಗಳ ಪ್ರಕಾಶಕ(ದೇವ್ ಸಾಹಿತ್ಯ ಕುಟೀರ್)ಜಗನ್ನಾಥ ಚಕ್ರವರ್ತಿ ಹೇಳುವ ಹಾಗೆ ‘ಹೊಸ ಪುಸ್ತಕಗಳನ್ನ ಕನಿಷ್ಟ ಪ್ರಮಾಣದಲ್ಲಿ ಹೊರತರಲಾಗುತ್ತಿದೆ, ಮಕ್ಕಳ ಪುಸ್ತಕಗಳ ವಿಷಯ ಜಾಗರೂಕವಾಗಿರಬೇಕಾದುದು.’ ಬೆಂಗಾಲಿಯ ಖ್ಯಾತ ಲೇಖಕ ಬುಧಾದೇವ್ ಹೇಳುವಂತೆ ‘ಇಂಗ್ಲೀಷು ಉಳ್ಳವರ ಭಾಷೆ. ಶ್ರೀಮಂತ ಓದುಗರು ತಮ್ಮ ಮಾತೃಭಾಷೆಯನ್ನ ಲೆಕ್ಕಕ್ಕಿಟ್ಟುಕೊಳ್ಳುವುದಿಲ್ಲ.’ ಮುಂಬಯಿಯ ಮೆಜಸ್ಟಿಕ್ ಪ್ರಕಾಶನದ ಅಶೋಕ ಕೋಠಾವಾಲೆ ಹೇಳುವಂತೆ ‘ಪ್ರಸಿದ್ಧ ಇಂಗ್ಲೀಷ್ ಕೃತಿಗಳು ಮರಾಠಿಗೆ ಭಾಷಾಂತರಗೊಳ್ಳುತ್ತವೆ, ಆದರೆ ಮರಾಠಿ ಕೃತಿಗಳು ಇಂಗ್ಲೀಷಿಗೆ ತರ್ಜುಮೆಗೊಳ್ಳುವುದಿಲ್ಲ. ಇಂಗ್ಲೀಷಿಗೆ ಭಾಷಂತರಗೊಳ್ಳುವ ಮರಾಠಿ ಲೇಖಕರಲ್ಲಿ ತೀವೃ ಪೈಪೋಟಿ.’

ಕನ್ನಡ ಮಕ್ಕಳ ಸಾಹಿತ್ಯ, ನವೋದಯ ಎಂದು ಗುರುತಿಸಿರುವ ಕನ್ನಡ ಸಾಹಿತ್ಯದ ಹೊಸ ಯುಗದ ಹೊಸತಿನ ಮರೆಯಲ್ಲಿ ತನ್ನ ಹುಟ್ಟನ್ನೂ ಪಡೆದುಕೊಂಡುದು. ಗ್ರಾಮೀಣ ಪರಂಪರೆಯಲ್ಲಿ ಮಕ್ಕಳ ಬಾಯಲ್ಲಿ ಮೊದಲಿನಿಂದಲೂ ಇದ್ದ ಸಾಹಿತ್ಯವನ್ನ ಮರೆಯುವಂತಿಲ್ಲವಾದರೂ, ಮುದ್ರಣದ ಸೌಲಭ್ಯ ಕಂಡು ಓದಿನ ಸಾಮಗ್ರಿಯಾಗಿ ಮಕ್ಕಳ ಸಾಹಿತ್ಯ ಹೊಸ ಮಗ್ಗಲುಗಳನ್ನ, ಹೊಸ ಅಗತ್ಯಗಳನ್ನ ಕಂಡುಕೊಂಡಿತು. ಶಾಲೆಯ ವ್ಯವಸ್ಥೆ ಹೊಸದಾಗಿ ಕಾಣಿಸಿಕೊಂಡು ಮಕ್ಕಳ ಲೋಕ ಹೊಸ ಓದಿಗೆ ತೆರೆದುಕೊಂಡಿತು. ಶಿಕ್ಷಣದ ಅಗತ್ಯವಾಗಿ, ಇಂಗ್ಲೀಷಿನ ಹೊರಗಿನ ಪ್ರಭಾವದಿಂದಾಗಿ ಮಕ್ಕಳಿಗಾಗಿ ಪ್ರತ್ಯೇಕ ಬರವಣಿಗೆಗೆ ತೊಡಗಿಕೊಂಡುದರ ಮರೆಯಲ್ಲಿಯೇ ಕನ್ನಡದ ಹಿರಿಯ ಸಾಹಿತಿಗಳು ತಮ್ಮ ಗಂಭೀರ ಸಾಹಿತ್ಯ ಕೃಷಿಯ ಒಟ್ಟಿಗೆ ಮಕ್ಕಳಿಗಾಗಿಯೂ ಬರೆದರು. ಪ್ರತಿಭಾವಂತ, ಹಿರಿಯ ಮನಸ್ಸುಗಳ ಈ ಕೃಷಿ ಸಹಜವಾಗಿಯೇ ಗಮನಾರ್ಹವಾದುದಾಯಿತು. ಹಿರಿಯರ ಸಾಹಿತ್ಯ ನವೋದಯದ ನಂತರ ನವ್ಯವಾಗಿ ಹೊಸತಿಗೆ ಹೊರಳಿದಾಗ ಮಕ್ಕಳಿಗಾಗಿನ ಬರವಣಿಗೆ ಅವಗಣನೆಗೆ ಗುರಿಯಾಯಿತು. ಸಾರಸ್ವತ ಪ್ರಪಂಚ ಮಕ್ಕಳ ಲೋಕದೆಡೆಗೆ ಹೊರಳಿನೋಡಲೇ ಇಲ್ಲ. ಆದರೆ ಈ ಸಮಯದಲ್ಲಿ ಶಿಕ್ಷಕರ ದೊಡ್ಡದೊಂದು ಸಮೂಹ ಮಕ್ಕಳ ಸಾಹಿತ್ಯದ ತೇರನ್ನ ಅಕ್ಕರೆಯಿಂದ, ತನ್ನದೊಂದು ಹಿರಿಯ ಕರ್ತವ್ಯ ಎನ್ನುವ ಹಾಗೆ ಉತ್ಸಾಹದಿಂದ ಎಳೆಯಿತು. ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ತೊಡಗಿಕೊಂಡ ಬರಹಗಾರರ ಬಳಗ ಇದು. ಇಲ್ಲಿ ವಿಪುಲವಾದ ಕೃಷಿ ಕಂಡರೂ, ಕಾಳಜಿ ಕಂಡರೂ ಗುಣಮಟ್ಟದಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಸಾಮರ್ಥ್ಯ ಪಡೆಯಲಿಲ್ಲ. ಆದರೆ ಈ ಘಟ್ಟದ ನಂತರ ನಾವು ಗುರುತಿಸುವ ಮಕ್ಕಳ ಸಾಹಿತ್ಯದ ಕೃಷಿ ಹಲವಾರು ಹೊಸತುಗಳಿಗೆ ಸ್ಪಂದಿಸಿತು.

ಈ ಮೂರನೆಯ ಹಂತದ ಕೃಷಿಯಲ್ಲಿ ಕೇವಲ ಶಿಕ್ಷಕರು ಮಾತ್ರ ಭಾಗವಹಿಸದೆ, ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಕೊಂಡವರು ಕಾಣಿಸಿಕೊಂಡರು. ಈ ಮೊದಲು ಶಿಕ್ಷಕ ಸಮುದಾಯ ಆದಷ್ಟೂ ಶಿಕ್ಷಣದ ಮನೋಭಾವದಲ್ಲಿ ತೊಡಗಿಕೊಂಡುದನ್ನ ನೋಡಿದರೆ, ಇಲ್ಲಿ ವಿಭಿನ್ನ ಮನೋಧರ್ಮದ ಜನರಿಂದ ವಿಭಿನ್ನ ರುಚಿಗಳನ್ನ ಸಾಹಿತ್ಯ ಕಂಡಿತು. ಇಲ್ಲಿಯವರೆಗೆ ಬಂದ ಮಕ್ಕಳ ಸಾಹಿತ್ಯ ಪದ್ಯ ಕೃಷಿಯಲ್ಲಿ ತೋರಿದ ಉತ್ಸಾಹ, ತೀರ ಹೆಚ್ಚಲ್ಲವಾದರೂ ಇಲ್ಲಿ ಗದ್ಯದಲ್ಲೂ ಕಂಡಿತು.

ಈ ಹೊಸತಿನಲ್ಲಿ ನವೋದಯದ ಸಂದರ್ಭದಲ್ಲಿ ಆದಂತೆ ದೊಡ್ಡವರಿಗಾಗಿ ಬರೆಯುತ್ತ ಬಂದ ಖ್ಯಾತನಾಮರು ಹಲವರು ಮಕ್ಕಳಿಗಾಗಿಯೂ ಹೊಸ ಉತ್ಸಾಹದಿಂದ ಬರೆದುದಲ್ಲದೆ, ಒಂದು ರೀತಿಯಲ್ಲಿ ಹೊಸ ಹೊರಳನ್ನ ಸೂಚಿಸಿದರು, ಹೊಸ ಹೊಳಹನ್ನ ಹಾಕಿದರು. ಸಾರಸ್ವತ ಪ್ರಪಂಚದಲ್ಲಿ ಇವರ ಮಕ್ಕಳ ಕೃಷಿಯನ್ನೂ ತಟಕ್ಕನೆ ಗುರುಗಿಸಲಾಯಿತು, ಹಿರಿಯ ವಿಮರ್ಶಕರು ಹಲವಾರು ಕಡೆಯಲ್ಲಿ ಈ ಕುರಿತು ಮಾತನಾಡಿದರು. ಹಾಗಾಗಿ ಮಕ್ಕಳ ಸಾಹಿತ್ಯ ಮತ್ತೆ ತನ್ನ ಪ್ರತ್ಯೇಕ ಅಸ್ತಿತ್ವವನ್ನ ಗುರುತಿಸಲು ಸಾಧ್ಯವಾಯಿತು. ಎಚ್. ಎಸ್. ವೆಂಕಟೇಶಮೂರ್ತಿ, ಲಕ್ಷ್ಮೀನಾರಾಯಣ ಭಟ್ಟ, ಸುಮತೀಂದ್ರ ನಾಡಿಗ ಈ ನಿಟ್ಟಿನಲ್ಲಿ ಪ್ರಮುಖರಾದರೆ, ಕೆ. ವಿ. ತಿರುಮಲೇಶ ಸದ್ದುಗದ್ದಲವಿಲ್ಲದೆ ನೂರಾರು ಪದ್ಯ ಬರೆದು, ತಮ್ಮದೆ ಛಾಪಿನಿಂದ ಈಚೆಗೆ ಕಾಣಿಸಿಕೊಂಡಾಗಿದೆ.

ಇವರೆಲ್ಲ ಬೆಂಗಳೂರಿನಂಥ ಶಹರದಲ್ಲಿದ್ದು, ಅಲ್ಲಿನ ಮಕ್ಕಳ ಪರಿಸರದಲ್ಲಿ ಬರೆದರಾದುದರಿಂದ, ಶಹರದ ಭಾಷೆ, ಶಹರದ ಮಕ್ಕಳ ನಡುವಿನ ಸಂದರ್ಭಗಳು, ಅಲ್ಲಿನ ಅನುಭವ ಪ್ರಪಂಚ ಕಾಣಿಸಿಕೊಂಡುದು ಸಹಜ. ಆದರೆ ಈ ಮೊದಲು ಶಿಕ್ಷಕ ಸಾಹಿತಿಗಳಿಂದ ಕಂಡ ಮಡಿವಂತಿಕೆ ಮರೆಯಾಗಿ, ಮಕ್ಕಳಿಗೆ ಹತ್ತಿರವಾದ, ಅವು ತಮ್ಮದಾಗಿ ಸ್ಪಂದಿಸುವ ಲೋಕದ ಅನಾವರಣವಾಯಿತು. ಇದು ಭಾಷೆಯ ಬಳಕೆಯಿಂದ ಹಡಿದು, ಆಯ್ದುಕೊಳ್ಳುವ ವಸ್ತು, ಅವನ್ನ ನಿಭಾಯಿಸುವ ಬಗೆ, ಮಕ್ಕಳ ಮನೋವ್ಯಾಪಾರದ ತಾಜಾ ತಾಜಾ ಅನುಭವ ಎಲ್ಲ ಎಲ್ಲ ನಿಟ್ಟಿನಲ್ಲೂ ನಡೆಯಿತು. ಆದರ್ಶದ ಹಂಬಲ ಆಗ್ರಹವಾಗದೆ, ದಿನನಿತ್ಯದ ಸಹಜತೆ, ಮಾನವೀಯ ನೆಲೆಯಲ್ಲಿ ಏನೆಲ್ಲವನ್ನ ಹರವಿಕೊಳ್ಳಲಾಯಿತು. ಮಕ್ಕಳಿಗೆ ಬಲು ಪ್ರಿಯವಾದ ತುಂಟತನ, ಹಾಸ್ಯ, ಕುಣಿತ ಮಣಿತ, ಕುತೂಹಲದಿಂದ ಏನೇನೆಲ್ಲ ಕೇಳಿ ತಿಳಿಯುವ ಹಂಬಲ, ಬೆರಗು ಎಲ್ಲವೂ ಪ್ರಖರವಾಗಿ ಕಾಣಿಸಿಕೊಂಡವು. ಒಟ್ಟಾರೆ ಮಕ್ಕಳ ಸಾಹಿತ್ಯ ಹೆಚ್ಚು ಹೆಚ್ಚು ಲವಲವಿಕೆಯಿಂದ, ಜೀವಂತಿಕೆಯಿಂದ ನಳನಳಿಸಿತು. ಅದು ಕೇವಲ ಶಾಲಾ ವಾತಾವರಣದಿಂದ ಬಿಡುಗಡೆಗೊಂಡು ಮಕ್ಕಳದೇ ಖಾಸಾ ಸಮಯವನ್ನ ಅಪೇಕ್ಷಿಸಿತು. ಅನೇಕ ಹಾಡುಗಳು ಧ್ವನಿಸುರುಳಿಗಳಾಗಿ ಖ್ಯಾತಗಾಯಕರಿಂದ, ಸೃಷ್ಟಿಸಿತು.

ಈ ಖ್ಯಾತನಾಮರ ಜೊತೆಜೊತೆಗೇ ಹಲವು ಪ್ರತಿಭಾವಂತರ ಕೃಷಿ ಕಾಣಿಸಿಕೊಂಡು ಮಕ್ಕಳ ಪದ್ಯ ಸಾಹಿತ್ಯದ ವಾತಾವರಣ ಮುಂದುವರೆದುದು ಗಮನಾರ್ಹವಾದುದು. ಎನ್. ಶ್ರೀನಿವಾಸ. ಉಡುಪ ಈ ನಿಟ್ಟಿನಲ್ಲಿ ಬಹು ಮುಖ್ಯವಾಗಿ ಕಾಣುವ ಹೆಸರು. ಅವರೊಟ್ಟಿಗೆ ಎಸ್. ರಾಧೇಶ ತೋಳ್ಪಾಡಿ, ಭಾಗೀರಥಿ ಹೆಗಡೆ, ಜೀನಹಳ್ಳಿ ಸಿದ್ಧಲಿಂಗಪ್ಪ, ಬಿಳಿಗೆರೆ ಕೃಷ್ಣಮೂರ್ತಿ, ಸಿ. ಎಂ. ಗೋವಿಂದ ರೆಡ್ಡಿ, ಆನಂದ ಮುಂತಾದವರು ತಮ್ಮದೇ ಆದ ನಿಟ್ಟಿನಲ್ಲಿ ಪ್ರಯೋಗಕ್ಕಿಳಿದಿರುವುದು ಕಾಣುತ್ತದೆ.

ಮಕ್ಕಳ ಮುಗ್ಧ ಮನೋಲೋಕದ ಅನಾವರಣ

ಮಕ್ಕಳ ಸಾಹಿತ್ಯದ ಜೀವಾಳವೇ ಇದಾಗಿದ್ದರೂ ಕನ್ನಡದಲ್ಲಿ ನವೋದಯದ ನಂತರದ ಕಂಡ ಕೃಷಿಯಲ್ಲಿ ಈ ಗುಣ ಹರವಾಗಿ, ವಿಪುಲವಾಗಿ ತೆರೆದುಕೊಂಡಿರಲಿಲ್ಲವೆಂದೇ ನನ್ನ ಅಭಿಮತ. ನವೋದಯದ ಸಮಯದಲ್ಲಿನ ಹಿರಿಯ ಸಾಹಿತಿಗಳಲ್ಲಿ ಕಾಣಿಸಿಕೊಂಡ ಮುಗ್ಧ ಲೋಕ ಅವರವರ ವಿಭಿನ್ನ ವ್ಯಕ್ತಿತ್ವದ ನೆರಳಿನಲ್ಲಿ ತನ್ನ ಆಕಾರಗಳನ್ನ ರೂಪಿಸಿಕೊಂಡಿತ್ತು. ಕುವೆಂಪುವೆ ಒಂದು ಬಗೆಯಲ್ಲಿ ಇದನ್ನ ಕಂಡರಿಸಿದರೆ, ದಿನಕರ ದೇಸಾಯಿಯವರು ಇನ್ನೊಂದೇ ಬಗೆಯಲ್ಲಿ, ರಾಜರತ್ನಂ ಇನ್ನೊಂದೇ ಬಗೆಯಲ್ಲಿ ಕಂಡಿದ್ದರು.

ಮುಗ್ಧತೆಯ ಭಾವಲೋಕದ ನಾನಾ ಬಗೆಯ ಒಳಗನ್ನ ಕಾಣುವ, ಅವನ್ನ ಶಬ್ದಗಳಲ್ಲಿ ಹಿಡಿಯುವ ಪ್ರಯತ್ನಗಳು ಸಾಕಷ್ಟು ಮುಂದುವರೆದುದನ್ನ ಈ ಮೂರನೆಯ ಘಟ್ಟದಲ್ಲಿ ಕಾಣುತ್ತೇವೆ. ಅಲ್ಲಿನ ಸುಕುಮಾರ ಭಾವಗಳು, ಸುಕೋಮಲ ಸ್ಪಂದನೆಗಳು, ಕುತೂಹಲಗಳು, ಅಚ್ಚರಿಗೊಳಿಸುವ ತಾಜಾ ತಾಜಾ ಹೊಸ ಹೊಮ್ಮುಗಳು, ಬೆರಗಿನ ಕಣ್ಣೋಟಗಳು, ಅನುಭವಿಸುವ ಬೇಸರಗಳು, ಅನುಮಾನಗಳು ಮುಂತಾಗಿ ತೆರೆದುಕೊಳ್ಳುವ ಸಾಧ್ಯತೆಯ ಕಡೆಗೆ ಬರವಣಿಗೆ ಹೊರಳಿದುದು ಈ ಘಟ್ಟದಲ್ಲಿಯೇ. ಮಕ್ಕಳ ನಾನಾ ಬಗೆಯ ಭಾವ ಸಂದೋಹದ ಫೋಟೋ ಅಲ್ಬಮ್ಮಿನ ಹಾಗೆ ಇದು ಎಂದರೆ ತಪ್ಪಲ್ಲ. ಇನ್ನೂ ಸ್ವಚ್ಛಂದವಾಗಿ ತೆರೆದುಕೊಳ್ಳುವ ಅಗತ್ಯ ಇದೆಯಾದರೂ, ಆ ಕಡೆಗಿನ ಸ್ಪಷ್ಟ ಹೊರಳನ್ನ ಹೇಳಿತು ಕವಿತೆ ಎನ್ನಬಹುದು. ಮಕ್ಕಳ ಮನೋಲೋಕವನ್ನ ಸ್ವತಂತ್ರವಾಗಿ ವೀಕ್ಷಿಸತೊಡಗಿದುದೇ ಈ ಬದಲಾವಣೆಗೆ ಕಾರಣ ಎನ್ನಬಹುದೇನೋ. ಶಾಲಾವಾತಾವರಣದ ಕಲಿಕೆಗೆ ಹಚ್ಚುವ, ಭಾಷೆಗೆ ಸಜ್ಜುಗೊಳಿಸುವ, ಜ್ಞಾನ ನೀಡುವ ಮುಂತಾದ ಹಂಬಲಗಳಿಂದ ಆದಷ್ಟೂ ಬಿಡಿಸಿಕೊಂಡುದು ಇಲ್ಲಿನ ಬಹು ದೊಡ್ಡ ಸಂಗತಿ. ಮಕ್ಕಳ ಲೋಕವನ್ನ ಕೆಲ ಸಿದ್ಧ ಗ್ರಹಿಕೆಗಳಿಂದ ನೋಡದೆ ಹೊಸ ಕಣ್ಣಿಂದ ನೋಡತೊಡಗಿದುದೂ, ಮಕ್ಕಳ ಭಾವ ಕೋಶದೊಳಗೆ ಇಳಿದು ಹೊಸ ಹೊಸ ಹೊರಳುಗಳನ್ನ ಅನುಭವಿಸುತ್ತ ಅಭಿವ್ಯಕ್ತಿಗೆ ತವಕಿಸಿದುದು, ಹಾಗೆಯೇ ಮಕ್ಕಳ ಹತ್ತಿರ ಸಹಜವಾಗಿಯೇ ಸುಳಿಯಬಲ್ಲ ಸಂಗತಿಗಳಿಂದ ಸಮೃದ್ಧವಾದುದು ಈ ಹೊಸ ನೀರಿನ ಗೆಲುವಿನ ಅಂಶಗಳು ಎನ್ನಬಹುದು.

ಊಹೆ ಮಾಡಲಾಗದ ಪರಿಯಲ್ಲಿ ಮಕ್ಕಳು ನೋಡುವ ಬಗೆ ಇಲ್ಲಿನ ರಚನೆಗಳಲ್ಲಿ ಕಂಡು ವಿಸ್ಮಯಗೊಳಿಸಿದುವು. ಕನ್ನಡ ಮಕ್ಕಳ ಸಾಹಿತ್ಯ ಲೋಕದಲ್ಲಿ ಈ ಬಗೆಯಲ್ಲಿ ಮಕ್ಕಳ ಮನಸ್ಸನ್ನ ಹೊಕ್ಕಾಡಿದುದು ಇಲ್ಲಿಯವರೆಗೆ ಅಷ್ಟಾಗಿ ನಡೆದಿರಲಿಲ್ಲ. ಮಕ್ಕಳಿಗೆ ಏನೆಲ್ಲ ಕೊಡಬೇಕು, ಏನೇನೆಲ್ಲ ಹೇಳಬೇಕು, ಮುಂತಾಗಿ ಬರವಣಿಗೆಗೆ ತೊಡಗಿಕೊಳ್ಳದೆ ಮಕ್ಕಳದೇ ಆದ ಸೊಗಸಿನ ಲೋಕ ತೆರೆದಿಟ್ಟು ಅವು ಅನುಭವಿಸುವಂತೆ ಮಾಡುವ ಹಂಬಲ ಕಾಣಿಸಿತು. ಹಾಗಾಗಿಯೇ ಹೊಸ ಜೀವಂತಿಕೆ ಇಲ್ಲಿ ಕಾಣಿಸಿತು. ಮಕ್ಕಳ ಮನೋಲೋಕದ ವಿಸ್ತ್ರತಿಗಳಿಗೆ ಒಡ್ಡಿಕೊಂಡಂತೆ ಅಲ್ಲಿನ ಬೆರಗನ್ನೆಲ್ಲ ಹಿಡಿದಿಡುವುದಕ್ಕೆ ಹೊಸ ಸಾಧ್ಯತೆಗಳೆಡೆಗೆ ತುಡಿದುದು ಕಂಡಿತು. ಸಾಮಾನ್ಯವಾಗಿ ಸಂಭಾಷಣೆ, ಪ್ರಶ್ನೋತರ, ಹಿರಿಯರೊಡನೆ ಮಕ್ಕಳ ಮಾತು, ಸ್ವಗತಗಳು, ನೆನಪುಗಳು ಮುಂತಾಗಿ ಈ ಬಗೆಯವು ಇಲ್ಲಿನ ಅಭಿವ್ಯಕ್ತಿಗೆ ದಾರಿಮಾಡಿಕೊಟ್ಟುದು ಕಾಣುತ್ತದೆ. ಹಾಗಾಗಿಯೆ ಆಡು ಮಾತು, ಪುಟ್ಟ ಬಾಯಲ್ಲರಳುವ ಬಾಲ ಭಾಷೆ ಹೆಚ್ಚು ಹೆಚ್ಚು ಅಭಿವ್ಯಕ್ತಿಯ ಪರಿಕರವಾಯಿತು.

ಮಕ್ಕಳಲ್ಲಿನ ಕುತೂಹಲ, ಏನೆಲ್ಲ ತಿಳಿದುಕೊಳ್ಳುವ ಬಯಕೆ, ವಾಸ್ತವದ ಅನುಭವಕ್ಕೆ ಇನ್ನೂ ತೆರೆದುಕೊಳ್ಳದ, ಹಾಗಾಗಿಯೇ ಹೊಚ್ಚಹೊಸದಾಗಿ ಯೋಚಿಸುವ, ಹಾಗೆ ಯೋಚಿಸುತ್ತಲೇ ದೊಡ್ಡವರ ಯೋಚನಾ ಲಹರಿಗೆ ಸವಾಲೊಡ್ಡುವ, ಅನಿವಾರ್ಯತೆಯ ಬೇಸರ ಮೂಡಿಸುವ ದ್ವಂದಗಳಿಗೆ ಕನ್ನಡಿ ಹಿಡಿಯುವ ಡಾ. ಎಚ್ ಎಸ್ ವಿ ಅವರ ಗುಬ್ಬಿಮರಿ ಪದ್ಯಗಳು ಈ ದಿಸೆಯಲ್ಲಿ ಗಮನಾರ್ಹವಾಗಿವೆ.

ನೋಡು ಪುಟ್ಟ ಕಾಗೆ ಮರಿ ಕಾಳ್ಗಪ್ಪು ನೀನು ಬಿಳಿ
ಅದರ ಜೊತೆ ಆಡ್ತಾ ಇದ್ರೆ ನೀನು ಕೂಡ ಕರ್ರಗೆ
ಕರಿ ಕೊರಮ ಆಗ್ತಿ ನೋಡು
ಎಂದು ತಾಯಿ ಎಚ್ಚರಿಕೆ ಹೇಳಿದರೆ, ಮರಿ ಕೊಡೊ ಉತ್ತರ ಇದು :
ಹೌದಲ್ಲಮ್ಮ ನಾನು ಬಿಳಿ ಕಾಗೆ ಮರಿ ಕಾಳಗಪ್ಪು
ನನ್ನ ಜೋಡಿ ಆಡ್ತಾ ಇದ್ರೆ ಕಾಗೆ ಮರಿ ಮಲ್ಲಿಗೆ
ಹೂವಿನ ಹಾಗೆ ಬೆಳ್ಳಗೆ
ಆಗತ್ ನೋಡು

ಇಲ್ಲಿನ ಮಾತುಕತೆ ದೊಡ್ಡವರ ಮತ್ತು ಮಕ್ಕಳ ನಡುವಿನ ವಿಭಿನ್ನ ಮನೋಸ್ಥಿತಿಯನ್ನ ತೆರೆದಿಡುತ್ತದೆ. ಹಿರಿಯರು ತಾವು ಕಂಡುಂಡ ವಾಸ್ತವಗಳ ಹಿನ್ನೆಲೆಯಲ್ಲಿ ಸಿದ್ಧಗೊಳಿಸಿಕೊಂಡ ಉತ್ತರಗಳಲ್ಲಿಯೇ ಇದ್ದರೆ, ಮಕ್ಕಳ ಉತ್ತರಗಳು ಮುಗ್ಧತೆಯಲ್ಲಿ ಹೊಚ್ಚ ಹೊಸದಾಗಿ, ಅಚ್ಚರಿ ಮೂಡಿಸುವಂತೆ ಹೊಮ್ಮುವಂಥವು. ಹಿರಿಯರು ಬೆರಗಿನಿಂದ ಈ ಬಾಲ್ಯದ ಸಂಗತಿಗಳನ್ನ ನೋಡುವ ಮಗ್ಗಲು ಒಂದಾದರೆ, ಮಕ್ಕಳು ತಮ್ಮದೇ ಆದ ಮುಗ್ಧ ಸಹಜತೆಗಳಲ್ಲಿ ತಮ್ಮನ್ನೇ ಕಾಣುವ ಇನ್ನೊಂದು ಮಗ್ಗಲು ಇಲ್ಲಿ ಸಾಧ್ಯವಾಗುವಂಥದು. ಹಾಗಾಗಿ ಕೇವಲ ಮಕ್ಕಳಿಗಾಗಿ ಈ ಬಗೆಯ ರಚನೆಗಳು ಇರದೆ ಹಿರಿಯರ ಕಣ್ಣಲ್ಲೂ ತೆರೆದುಕೊಳ್ಳುವುದು ಕಂಡುಬರುತ್ತದೆ. ಹಿರಿಯರು ಬಾಲ್ಯದ ಕಳೆದು ಹೋದ ಲೋಕವನ್ನ ನೆನಪಿಸಿಕೊಳ್ಳುತ್ತ ಮುಗ್ಧತೆಯ ಸೊಗಸನ್ನ, ಅದು ಅಳಿಯಲೇ ಬೇಕಾದ ಅನಿವಾರ್ಯತೆಗಳ ಹಳಹಳಿಕೆಗಳನ್ನ ತಮ್ಮ ಮುಂದೆ ಹರವಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ಒಗ್ಗಿಹೋದ ಅಸ್ವಾಸ್ಥ್ಯದ ಸಾಮಾಜಿಕ ಸಂಗತಿಗಳ ನಿಲುವಿಗೆ ಸ್ವಚ್ಛ ಮನಸ್ಸು ಕೊಡುವ ಒಂದು ಬಗೆಯ ಶಾಕ್ ಟ್ರೀಟ್‌ಮೆಂಟನ್ನೂ ಅನುಭವಿಸಬಹುದಾಗಿದೆ., ಮಕ್ಕಳಿಗೆ ತಾವು ಅನುಭವಿಸುತ್ತಿರುವ ವಾತಾವರಣದ ಮಧ್ಯೆ ಸಹಜವಾಗಿ ಹೊಮ್ಮುವ ವಿಚಾರಗಳಿಗೆ ಸಿಗುವ ಪ್ರತಿಕ್ರಿಯೆಗಳು, ಹಿರಿಯರ ಅನುಭವಗಳು ಗೊಂದಲಕ್ಕೀಡು ಮಾಡುವುದು, ಹೌದೇ ಅಂತ ಚಿಂತಿಸ ಹತ್ತುವುದು ಮುಂತಾಗಿ ತಮ್ಮ ಮುಂದಿರುವ ಕನ್ನಡಿಯ ಹಾಗೆ ಇವು ಕಾಣುತ್ತವೆ.

ಅಮ್ಮ ಅಮ್ಮ ನೀರ್ಯಾಕಿದೆ?
ಕುಕ್ಕಿ ಕುಡಿಯೋಕೆ!’
ಅಲ್ಲ ಕನ್ನಡಿ ಹಿಡಿಯೋಕೆ!’
ಅಮ್ಮ ಅಮ್ಮ ಮರ ಏಕಿದೆ?
ಗೂಡು ಕಟ್ಟೋಕೆ
ಅಲ್ಲ ನೀಲಿ ಮುಟ್ಟೋಕೆ!’
ಅಮ್ಮ ಅಮ್ಮ ಹುಲ್ಲು ಏಕಿದೆ?
ಹೊಟ್ಟೆಗೆ ಹಾಕೋಕೆ
ಅಲ್ಲ ಇಟ್ಟು ಸಾಕೋಕೆ!’

ಇಷ್ಟೆಲ್ಲ ನಮ್ಮನ್ನ ಕಿವಿಯಾಲಿಸುವಂತೆ ಮಾಡುವ ಮರಿ ಗುಬ್ಬಿ ಅಮ್ಮನ ಮಾತುಗಳನ್ನ ಮರೆಮಾಚುವಂತಿಲ್ಲ ಎನ್ನುವುದರ ಕಡೆಗೂ ಕವಿ ಕೈ ಮಾಡುತ್ತಾರೆ…

ನೋಡು ಪುಟ್ಟಾ ನೀನೂ ಹಾಗೇ
ಇದ್ದೀ ಅಂತ್ಕೋ ಏನಾಗಿತ್ತು?
ನಿನ್ ತೊಟ್ಲಲ್ಲಿ ಮರಿ ಪಾರಿವಾಳ
ತಾನೇ ಬಂದು ಮಲಕ್ಕಂಡ್ ಬಿಟ್ರೆ?
ನಿಮ್ಮಪ್ಪಾಜಿ ಅದರ ಕೊಕ್ಕಲ್ಲೆ
ಹಾರ್ಕಬಂದು ತಿಂಡಿ ಇಟ್ರೆ?

ಅಂತ ಹೇಳೋ ಅಮ್ಮ ಗುಬ್ಬಿ ಮಾತು ಮರಿಗೆ ದಿಗಿಲು ಹಿಡಿಸುತ್ತದೆ, ಹೌದಲ್ಲ ಅಂತ ಅದು ಲೆಕ್ಕ ಹಾಕತೊಡಗುತ್ತದೆ…

ನಾನು ನನ್ಹಾಗೆ ಇರ್ಬೇಕಪ್ಪ
ನಾನು ನಾನೇ ಅಂತ ನಮ್ಮ
ಅಪ್ಪ ಅವ್ಮಂಗ್ ತಿಳೀಬೇಕಪ್ಪ
ಕನ್ನಡಿ ಗಿನ್ನಡಿ ನೋಡ್ಕೊಂಡಾಗ
ನನ್ನ ಮುಖಾನೇ ಉಳೀಬೇಕಪ್ಪ

ಹಾವಿನ ಕುರಿತ ಮಗುವಿನ ಮುಗ್ಧ ಭಾವಗಳಲ್ಲಿ ಅರಳಿರುವ ಇನ್ನೊಂದು ಕವಿತೆಯಲ್ಲಿ, ಹಾವು ಹಕ್ಕಿಯ ಮೊಟ್ಟೆಯನ್ನ ನುಂಗಿಬಿಟ್ಟರೆ ‘ಹಕ್ಕಿ ಮರಿ ಹುಟ್ಕೊಳ್ಳತ್ತೆ ಹಾವಿನ ಹೊಟ್ಟೇಲಿ’ ಅಂತ ಸಂತಸ ಪಡೋ ಮರಿಗೆ ಅಮ್ಮನ ಲೋಕಜ್ಞಾನ ಭಯ ಉಂಟುಮಾಡೋ ಹಾಗಿದೆ.

ನಿಟ್ಟುಸಿರಿಡ್ತು ಅಮ್ಮ ಗುಬ್ಬಿ ಇಲ್ಲ ಚಿನ್ನಾರಿ
ಇನ್ನೂ ನಿನಗೆ ತಿಳೀದಮ್ಮ ಹಾವಿನ ಹುನ್ನಾರ
ಹಾವಿನ ಹೊಟ್ಟೆ ಸೇರಿದ್ಮೇಲೆ ಹೇಳೋದಿನ್ನೇನು ?
ಹಾವನ ಮೊಟ್ಟೆ ಆಗ್ಬಿಡತ್ತೆ ಹಕ್ಕಿ ಮೊಟ್ಟೇನು !

ಹೀಗೆ ಮಕ್ಕಳೊಂದಿಗೆ ಹಿರಿಯರ ಬಗೆಗಳನ್ನೂ ವೆಂಕಟೇಶಮೂರ್ತಿ ಆಯ್ದುಕೊಳ್ಳುತ್ತಾರೆ. ಮಕ್ಕಳು ಆ ವಾಸ್ತವದಿಂದ ದಿಗಿಲುಗೊಳ್ಳುವುದನ್ನ, ಚಿಂತೆಗೊಳಗಾಗುವುದನ್ನ ನಾವು ಕಾಣುತ್ತೇವೆ. ಜೊತೆಗೇ ಮಕ್ಕಳಿಗಾಗಿರುವ ಆಯಾಮದೊಂದಿಗೆ ಹಿರಿಯರಿಗೂ ಒದಗಬಲ್ಲ ಆಯಾಮಕ್ಕೂ ಕವಿತೆ ಸಿದ್ಧವಾಗುವ ಬಗೆ ಇದು ಎನ್ನಬಹುದು.