ಮಕ್ಕಳ ಮುಗ್ಧತೆಯ ಚೆಂದದ ನಾನಾ ಭಾವದ ಮಗ್ಗಲುಗಳನ್ನ ಹೊಸ ಹೊಸತಾಗಿ ನೀಡಿದುದು ವೆಂಕಟೇಶಮೂರ್ತಿ ಅವರ ಬಲು ವಿಶೇಷದ ಸಂಗತಿ. ಮಕ್ಕಳಿಗಾಗಿ ರಂಜನೆ, ಹಾಸ್ಯ, ಕಿಲಾಡಿತನದ ಪ್ರಸಂಗಗಳು ಎಲ್ಲವನ್ನ ತಂದುಕೊಳ್ಳುವ ಅವರು ಎಲ್ಲ ಕಡೆಯಲ್ಲೂ ಬೆರಗು ಗೊಳಿಸುವ ಮಕ್ಕಳ ಮನಸ್ಸನ್ನ ನಮ್ಮ ಮುಂದಿಡುತ್ತಾರೆ. ಆಡು ಭಾಷೆ, ಮಕ್ಕಳ ನಡುವಿನ ಸಲಿಗೆಯ ಸ್ನೇಹದ ಶೌಲಿ ಇಂಥವುಗಳಲ್ಲೆಲ್ಲ ಅದನ್ನ ಅರಳಿಸುತ್ತ ಮಕ್ಕಳಿಗೆ ಅವರದೇ ಜಗತ್ತು ನೀಡುವಲ್ಲಿ ಸಾರ್ಥಕತೆ ಪಡೆಯುತ್ತಾರೆ.

‘ಭಾಳಾ ಒಳ್ಯೋರ್ ನಮ್‌ಮಿಸ್ಸು’ ಕ್ಯಾಸೆಟ್ ಹಾಡಿನ ಮೂಲಕ ನಾಡಿನ ತುಂಬೆಲ್ಲ ಜನಪ್ರಿಯವಾದ ಕವಿ ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಒಂದು ಕವಿತೆಯಲ್ಲಿ ಹಕ್ಕಿ ಮಾತ್ರ ಮೊಟ್ಟೆ ಇಡುತ್ತದೆಯೆ, ಗಿಡ ಮರಗಳೂ ಮೊಟ್ಟೆ ಯಾಕಿಡೋದಿಲ್ಲ ಅಂತೆಲ್ಲ ಮುಗ್ಧತೆಯ ಉತ್ತರ ಕಂಡುಕೊಳ್ಳುವ ಹುಡುಗು ಮನಸ್ಸು

ತೆಂಗಿನ ಮರಗಳು ತಲೆಯಲ್ಲಿ
ಮೊಟ್ಟೆ ಇಟ್ಟಿಲ್ವೇನಮ್ಮಾ?
ಸೇಂಗಾ ಗಿಡಗಳು ನೆಲದಲ್ಲಿ
ಕಪ್ಪನೆ ಮಣ್ಣಿನ ಬುಡದಲ್ಲಿ
ಗೊಂಚಲು ಗೊಂಚಲು ಮೊಟ್ಟೆನ
ಇಟ್ಟಿಲ್ವಾಮ್ಮಾ ಮರೆಯಲ್ಲಿ?
ಅಂತೆಲ್ಲ ಹುಡುಕಿ ಹುಡುಕಿ ಹೇಳುತ್ತ
ರಾತ್ರಿ ಹೊಳೆಯೋ ಚುಕ್ಕೀನೂ
ಚಂದ್ರನ ಮೊಟ್ಟೆ ಅನ್ಸತ್ತೆ!

ಎಂದು ಊಹಿಸುವುದು ಮಕ್ಕಳ ಅಚ್ಚರಿಗೊಳಿಸುವ, ಚೆಂದದ ಸುಕುಮಾರ ಭಾವವನ್ನ ಸೊಗಸಾಗಿ ನಮ್ಮ ಮುಂದಿಡುತ್ತದೆ.

ಅಮ್ಮ ಕೊಂಚ ಕೂತಳೋ
ಬಿರ್ಜು ಓಡಿ ಬರುವುದು
ಮಗುವಿನಂತೆ ಅಮ್ಮನ ತೊಡೆ
ಏರಿ ಕೂತು ಬಿಡುವುದು
ಅಮ್ಮನ ಕೈಯನೊತ್ತಿ
ಪಾಪನಂತೆ ಕಣ್ಣು ಮುಚ್ಚಿ
ಒರಗಿಬಿಡುವುದು
ಜೊಂಪು ಹತ್ತಿ ಮೆಲ್ಲಗೆ
ಗೊರಕೆ ಹೊಡೆವುದು !

ಈ ಬಗೆಯ ಕಣ್ಣೋಟದ ವಿವರಗಳು ಮುಗ್ಧ ಮಗುವಾಗಿ ನೋಡುವಾಗಲೇ ದಕ್ಕುವಂಥವು.

ನಾನ್ ಯಾವತ್ತೂ ಅಜ್ಜೀನ್ ಮಾತ್ರ
ಬಿಟ್ಕೊಡಲ್ಲ ಯಾರ‍್ಗೂನೂ,
ಅಜ್ಜೀನ್ ನಾನೇ ಮದ್ವೆ ಆಗಿ
ಕಥೆ ಕೇಳ್ತೀನ್ ದಿನಾನೂ !
ಬೀಜ ಮೊಳೆತು ಮರವಾಗಿ
ಹೂವು ಹೀಚು ಕಾಯಾಗಿ
ಹಣ್ಣಾದ್ಮೇಲೆ ತೆಗೆದರೆ ಒಳಗೆ
ಬೀಜ ಇರತ್ತೆ ಮಸ್ತಾಗಿ

ಹೀಗೆ ಹಲವಾರು ಬಗೆಯ ಮುಗ್ಧತೆಯ ತಾಜಾ ತಾಜಾ ಸಂಗತಿಗಳನ್ನ ಅವರ ರಚನೆಗಳಲ್ಲಿ ಕಾಣಬಹುದು.

ಕಿಟಕಿಯಿಂದ ನೋಡಿದೆ, ಸೊಂಡಿಲೊಂದೆ ಕಂಡಿತು
ಅಗಲಕಿವಿ ಪುಟ್ಟಕಣ್ಣು ಅಗಲಹಣೆ ಕಂಡಿತು
ಕಪ್ಪುಮುಖವು ಕಂಡಿತು
………….
ಸ್ಟೂಲು ಹತ್ತಿ ನೋಡಿದಾಗ
ನನ್ನ ತೋಳಿನಂಥ ಎರಡು ತೋಳು ಕಂಡವು
ನನ್ನ ಎದೆಯ ಹಾಗೆ ಒಂದು ಎದೆಯು ಕೂಡ ಕಂಡಿತು

ಅಂತೆಲ್ಲ ಕುತೂಹಲದಿಂದ ವೀಕ್ಷಿಸುವ ಮಗುವಿನ ಗಣಪತಿಯ ಸುತ್ತಲಿನ ಕುತೂಹಲದ ಚಿತ್ರಣ ಸುಮತೀಂದ್ರ ನಾಡಿಗರ ಪದ್ಯದಲ್ಲೊಂದುಕಡೆ ಇದೆ. ‘ದೊಡ್ಡ ಹೊಟ್ಟೆ ಸುತ್ತಲೂ ಬೆಲ್ಟಿನಂತೆ ಹಾವು’ ಅವನ ಹೊತ್ತ ಪುಟ್ಟ ಇಲಿ ಪಿಳೀಪಿಳಿ ನೋಡಿತು’ ಅಂತೆಲ್ಲ ಸಾಗುವ ಇಲ್ಲಿನ ಲಹರಿ, ಮಗುವಿನ ಸುತ್ತಲಿನ ವಾಸ್ತವದಲ್ಲಿ, ಸಹಜದ, ಕುತೂಹಲದ, ಮುಗ್ಧತೆಯ ಆವರಣದಲ್ಲಿ ಗಣಪತಿಯಂಥ ಪುರಾಣದ ಪಾತ್ರವನ್ನ ಹತ್ತಿರದಲ್ಲಿಯೇ ಇಳಿಸುತ್ತದೆ. ನಾಡಿಗರು ಮಕ್ಕಳ ಮುಗ್ಧತೆಯ ಹಲವು ಮುಖಗಳನ್ನ ಸೊಗಸಾಗಿ ನಮ್ಮ ಮುಂದಿಟ್ಟಿದ್ದಾರೆ.

ಬಂದ್ರೆ ಗೊತ್ತೇ ಆಗೋಲ್ವಂತೆ
ಮಂಚದ್ ಕೆಳಗೆ ಹಾರುತ್ತಂತೆ
ಚಪ್ಲಿ ಕಂಡ್ರೆ ಓಡುತ್ತಂತೆ
ಕಸ್ಬರ‍್ಗೇಗೂ ಹೆದ್ರುತ್ತಂತೆ

ಎಲ್ಲಾ ಕತೆ, ಅಲ್ವ ?
ದೆವ್ವ ಇಲ್ಲ, ಅಲ್ವ ?
ಒಳ್ಳೇ ಹುಡುಗ್ರು ಇದ್ರೆ
ಹತ್ರಕ್ಕೆ ಬರೋಲ್ವಂತೆ

ಸ್ನಾನಾ ಮಾಡ್ದೆ ಕೊಳಕಾಗಿದ್ರೆ
ಅವರ್ಮೈನಲ್ಲೇ ಸೇರುತ್ತಂತೆ
ಅಪ್ಪ ಅಮ್ಮ ಹೇಳಿದ್ಮಾತ್ನ
ಕೇಳ್ದೆ ಇದ್ರೆ ಬರುತ್ತಂತೆ
—–

ರಾತ್ರಿ ಹೊತ್ತು ಒಬ್ನೆ ಇದ್ರೆ
ದೆವ್ವ ಇದೆ ಅನಿಸ್ತಿರತ್ತೆ
ಇದ್ಕಿದ್ಹಾಗೆ ಏನೋ ಶಬ್ದ
ದೆವ್ವ ಬಂತು ಅನಿಸ್ತಿರುತ್ತೆ

ಅಂತೆಲ್ಲ ಸಾಗುವ ಪದ್ಯದ ಸಾಲುಗಳು ಮಕ್ಕಳ ಮಾತಿನಲ್ಲೇ, ಅವರದೇ ಭಾವಲೋಕದಲ್ಲೇ ಹರಿದು ಬರುವುದನ್ನ ನೋಡಬೇಕು.

ಮಗ್ಗಿ ಹೇಳೋಕ್ ಬರೋದಿಲ್ಲ
ಕಾಗುಣಿತ ಗೊತ್ತೇ ಇಲ್ಲ
ಒಂದ್ ಕತೆ ಓದ್ಲಿಕ್ ಬರೋದಿಲ್ಲ
ಸೈಕಲ್ ನಿಂಗೆ ಕೊಡಿಸೋದಿಲ್ಲ

ಓದ್ತೀನಪ್ಪ ಇವತ್ತಿನಿಂದ
ಕನ್ನಡ ಇಂಗ್ಲೀಷ್ ಹಿಂದಿ
ಲೆಕ್ಕ ಮಾಡೋದ್ ಕಲೀದಿದ್ರೆ
ಬೈಯ್ರಿ, ಕತ್ತೆ ಹಂದಿ..”

ಇದು ಅಪ್ಪ ಮಗನ ನಡುವೆ ನಡಿದಿರೋ, ಆದರೆ ಮಗುವೆ ನಾಟಕೀಯವಾಗಿ ತನ್ನ ಮುಂದಿಳಿಸಿಕೊಳ್ಳುವ ಸಂಭಾಷಣೆಯ ತುಣುಕು.

ಅಕ್ಕ ಅಕ್ಕ ಪುಟ್ಟ ಗುಬ್ಬಿ
ಐಸ್ಕ್ರೀಂ ಯಾಕೆ ತಿನ್ನೊಲ್ಲ?
ಕಡೇ ಪಕ್ಷ ತಿಂಗಳಿಗೊಂದ್ಸಲಿ
ತಿನ್ಬೇಕೂಂತ ಅನ್ಸೋಲ್ವಾ?

ಇದು ರಾಧೇಶ ತೋಳ್ಪಾಡಿ ಅವರ ಕವಿತೆಯಲ್ಲಿ ಪುಟ್ಟ ತಮ್ಮ ಅಕ್ಕನನ್ನ ಕೇಳೋ ಪ್ರಶ್ನೆ. ಅಕ್ಕ ಅವನಿಗೆ ಅದು ಯಾವತ್ತಾದ್ರೂ ಆಫೀಸಿಗೆ ಹೋಗಿ ಕೆಲಸಾ ಮಾಡಿದೆಯಾ, ಕೆಲಸಾ ಮಾಡ್ದೆ ಹಾಗೇ ಕೊಡೋಕೆ ಅಂಗಡಿಯವನು ಅದರ ಮಾವಾ ಅಲ್ವಲ್ಲಾ ಅಂತೆಲ್ಲ ಹೇಳುತ್ತಾಳೆ. ಆದರೆ ತಮ್ಮ…

ಅಕ್ಕ ಅಕ್ಕ ನಿಜ ಹೆಳು
ಗುಬ್ಬಿ ಕೆಲ್ಸ ಮಾಡೊಲ್ವಾ?
ಹಾಳು ಮೂಳು ಕಡ್ಡಿ ಕಾಳು
ಹೆಕ್ಕಿ ಕ್ಲೀನ್ ಮಾಡೋಲ್ವಾ?
ಒಳ್ಳೇ ಕ್ಲೀನರ್ ಆಗಿದ್ರೂನೂ
ಯಾರೂ ಸಂಬ್ಳ ಕೊಡ್ಸೊಲ್ಲ!
ಸಂಬ್ಳ ಸಾಯ್ಲಿ ಐಸ್ಕ್ರೀಂ ಆದ್ರೂ
ಕೊಡ್ಸೋಣಾಂತ ಅನ್ಸೋಲ್ಲ!

ಅಂತೆಲ್ಲ ಅಂದುಕೊಳ್ಳುತ್ತಾನೆ. ಕೊನೆಗೂ ಅವ ಅಂದುಕೊಳ್ಳುವುದು ‘ನಾನೂ ನೀನೂ ದೊಡ್ಡೋರಾಗಿ ಗುಬ್ಬಿಗೆ ಬೇಕಾದ್ ಕೊಡ್ಸೋಣ’ ಎಂದು.

ಎಷ್ಟೊಂದ್ ಮುದ್ ಮುದ್ದಾಗಿದೆ ಅಮ್ಮ
ನಮ್ಮೀ ಪುಟಾಣಿ ಪಾಪೂ
ನನ್ ಕಾಲಲ್ಲೂ ಇಡುಬಾರಮ್ಮ,
ಒಂದಿಷ್ಟಾದರೂ ಹೊತ್ತು

ಎಂದು ಪಾಪುವಿನ ಸುತ್ತಲಿನ ಮಗುವೊಂದರ ಏನೆಲ್ಲ ಮಾತು ಕವಿತೆಯೊಂದಕ್ಕೆ ಮಗುವಿನದೆ ಮಾದಕತೆ ಸವರಿದ ಹಾಗಾಗಿದೆ. ಇಲ್ಲಿನ ಪದ್ಯ ಪದ್ಯದ ವಿವರಗಳು ಮನಸ್ಸಿನಲ್ಲಿ ಏಳುವ ಹತ್ತಾರು ಭಾವ ಲಹರಿಗಳ ಮುಗ್ಧತೆಯನ್ನ ಹಾಗೆ ಹಾಗೆ ಹೊತ್ತು ತಂದುವು: ಜೊತೆಗೆ ಕವಿ ನಡೆಸುವ ಕುಸುರಿ ಕೆಲಸ.

ಕೆಂಪ್ ಕೆಂಪಾಗಿರೊ ಟೊಮೋಟೊ ಹಣ್ಣಿನ್
ಥರಾನೇ ಪಾಪೂ ಕೆನ್ನೆ
ತಿಂದ್ ಬಿಡಬೇಡಅನ್ನೋ ಹಾಗಿದೆ
ಗೋಲೀ ಕಣ್ಣಿನ ಸನ್ನೆ

ಅಂತ ಕೆನ್ನೆಯ ಸುತ್ತ ಹರಿಯುವ ಲಹರಿ, ಅದರ ಮೆತ್ತಗಿನ ಮೈ ಸುತ್ತ ಅರಳೋದು ಹೀಗೆ

ಮೆತ್ತಗೆ ಮೆತ್ತಗೆ ಮೈಯೋ ಆಹಾ
ಸ್ವೀಟಿನ ಕೇಕೇ ಥೇಟು
ನೆಲದಲ್ಲಿಟ್ಟರೆ ಬಂದೀತಲ್ವೆ
ಉದ್ದದ ಇರುವೆ ಗೂಡ್ಸು !

ಘಮ ಘಮ ಪೌಡರ್, ಸೋಪು ಎಲ್ಲ ತರುವ ಲಹರಿ ಇನ್ನೊಂದು ಬಗೆಯದು

ಘಮ ಘಮ ಜಾಜಿ, ಮಲ್ಲಿಗೆ ಹಾಗೆ
ಪಾಪೂ ಮೈಯಿಡೀ ಕಂಪು
ಪಾಪೂ ಸೋಪು, ಪೌಡರ್, ಕಾಡಿಗೆ
ಅಮ್ಮ ನಂಗೂ ಹಾಕು !

ಇದ್ ಕಿದ್ ಹಾಗೆ ಉಕ್ಕಿಬಿಡುವ ಮಗು ಮೊಗದ ನಗೆಯನ್ನ ಹಿಡಿದು ಹುಟ್ಟಿಕೊಳ್ಳುವ ಲಹರಿ ಹೀಗೆ

ಮೆಲ್ಲ ಕಿಲಿ ಕಿಲಿ ನಗ್ತಾನಲ್ಲ
ಎಲ್ಲಾ ಬಲ್ಲವರಂತೆ
ಪರಿಜಾತದ ಗೆಲ್ಲನು ಯಾರೋ
ಗಿಲಿ ಗಿಲಿ ಆಡಿಸಿದಂತೆ !

‘ನಾನೂ ಹೀಗೇ ಇದ್ನೇನಮ್ಮಾ ಏಳೆಂಟ್ ವರ್ಷದ ಮೊದಲು’ ಎಂದು ತನ್ನನ್ನೂ ಒಳಗು ಮಾಡಿಕೊಳ್ಳುತ್ತ ಮುಗಿಯುವ ಕವಿತೆ ಮಗುವನ್ನ, ಮಗುವಿನ ಮುಂದಿನ ಮಗುವನ್ನ ನಮ್ಮ ಮುಂದೆಯೆ ತಂದಿಟ್ಟಾಗಿದೆ.

ಹೂ ಅಂದ್ರ ಹೂ
ಹತ್ತಿ ಹಾಂಗ ಪಕಳಿ ಇಟಗೊಂಡ
ಛತ್ರಿ ಹಾಂಗ ಗಿಡದಾಗ
ಹ್ಯಾಂಗರ ಮುದ್ಯಾಗಿ ಕೂತಿತ್ತಿದು
ಹರದು ಗಿರದು ಮಾಡಿದರ
ಚಾಳಿ ಗಡ್ಡಿ ಪೂ

ತಮ್ಮ ಸುತ್ತಲಿನ ಸಂಗತಿಗಳನ್ನ ನೊಡುತ್ತ ಮಗು ಮನಸ್ಸು ಪಡುವ ಸಂಭ್ರಮ, ಬೆರಗು, ದಿಗಿಲು, ಬೇಸರ ಇಂಥವೆಲ್ಲ ಪುಟ್ಟ ಪುಟ್ಟ ರಚನೆಗಳಾಗಿ ಪುಟಾಣಿಗಳ ಭಾವಕೋಶದೊಳಗಿಂದ ಇಳಿದಿರುವುದು ನನ್ನ(ಈ ಪ್ರಬಂಧದ ಲೇಖಕ) ಪದ್ಯಗಳಲ್ಲಿ. ಮಕ್ಕಳ ಭಾವಯಾನವನ್ನ ನೋಡುವ, ಅವುಗಳ ಅವುಗಳೊಡನೆ ಬೆರೆತು ಸಮಯ ಮಾಡಿಕೊಳ್ಳುವ ಹಿರಿಯರ ಲಹರಿಗಳೂ ಸೇರಿಕೊಂಡಿವೆ. ಮಕ್ಕಳಿಗೆ ಹತ್ತಿರವಾಗುವ ಅವುಗಳ ಆಡು ಭಾಷೆಯಲ್ಲಿ ಅರಳಿರುವ, ತಮ್ಮದೆ ಸೊಗಸುಳ್ಳ ಇಂಥ ಹಲವಾರು ‘ಹೂ ಅಂದ್ರ ಹೂ’ ಸಂಕಲನದಲ್ಲಿವೆ…..

ಗುಬ್ಬಿ ಗೂಡಿನಾಗ
ಗುಬ್ಬಿ ಮರಿ ಈಗ
ಏನ ಮಾಡತಿರಬೇಕ
ನಿದ್ದಿ ?
ಊಂ ಹೂಂ
ಊಟಾ ?
ಊಂ ಹೂಂ
ಕತಿ ಕೇಳೂದಕ್ಕ
ಅವ್ವ ಬರೂ ದಾರಿ
ಕಾಯ್ತಿರಬೇಕ
*
ಪುಚ್ಚ ಬಿದ್ದಾವಲ್ಲ
ಬೆಕ್ಕ ಕೂತದಲ್ಲ !
ಕಾಲ ಮುರಕೊಂಡ ಗುಬ್ಬಿ
ಇಲ್ಲೆ ಅಡ್ಯಾಡತಿತ್ತಲ್ಲ
ನುಂಗೇ ಬಿಟ್ಟದೇನ ?
ಹಂಗ ಕಾಣತದಲ್ಲ
*
ಸದ್ದ ಇಲ್ಲ ಪುಟ್ಟವ್ವ
ಏನ ಮಾಡ್ತಾಳ ನೊಡವ್ವ
ಬರಕೋತ ಕೂತಾಳ
ಗ್ವಾಡಿತುಂಬ ಗೊಂಬವ್ವ
*
ಗುಡ್ಡ ಕಾಣವಲ್ಲವ
ಮುಳಗೇ ಹೋಗೇದ
ಬರೇ ನೀರ ನೀರ
ಗಿಡದ ಬುಡಕ ಅಯ್ಯ
ಕುರಿ ಹೆಂಗ ನಿಂತಾವ
ಸಣ್ಣ ಮರಿ ಎಲ್ಲೆವ ?
ಬ್ಯಾ ಬ್ಯಾ ಅಂತಾವ
ಕಾಣವಲ್ಲವ
*
ಬಾಲಾ ಎತ್ತಿ ಆಡಸೇದ
ಹಲ್ಲಿ ಮೆಲ್ಲಗ ಬಂದದ
*
ಕಣ್ಣ ಮ್ಯಾಲ ಇಟ್ಟದ
ಬಾಯಗಲಾ ತಗದದ
*
ಸಣ್ಣ ಹುಳ ಸುಮ್ಮನ
ಹ್ಯಂಗರ ಕೂತದ
*
ಗಪ್ ಅಂತ ಹಿಡದದ !

ತಿರುಮಲೇಶರ ಪದ್ಯಗಳಲ್ಲಿ ಮಕ್ಕಳಲ್ಲಿ ಕಾಣುವ ಮುಗ್ಧತೆಯ ಪರಿ ಬೆರಗಿನದು, ಏನೇನೆಲ್ಲ ಕಲ್ಪಸಿಕೊಳ್ಳುವಂಥದು, ಕಲ್ಪನೆಯ ಕುದುರೆಯೇರಿ ಬಗೆ ಬಗೆಯ ಊಹೆಗೆಳಸುವಂಥದು, ಅಚ್ಚರಿ ಪಡಿಸುವ ಬಗೆಯದು, ಹಿರಿಯರು ಎಲ್ಲ ಮರೆತು ಆಲಿಸುವಂಥದು

ಮಿಣು ಮಿಣೂ ಮಿಂಚುವ ಮಿಂಚುಳದೊಳಗೆ
ಬೆಳಕೆಲ್ಲಿಂದ ಪುಟ್ಟಕತ್ತಲ ಹೊತ್ತ
ಆಲದ ಮರಕೇ ಗೊತ್ತು

ಹೊದ್ದು ಮಲಗಿದ ನಿದ್ದೆಯೊಳಗೆ
ಕನಸೆಲ್ಲಿಂದ ಪುಟ್ಟಮುಚ್ಚಿದ
ಕಣ್ಣರೆಪ್ಪೆಗೇ ಗೊತ್ತು

ಸಹಜದ ಪ್ರಶ್ನೆಗೆ ಅನಿರೀಕ್ಷಿತವಾದ ಉತ್ತರವೊಂದು ಬರುವುದರ ಜೊತೆಗೇ ತನ್ನೊಡನೆ ಹೊತ್ತು ತರುವ ಭಾವ ಸಾಮಗ್ರಿ, ಬೆರಗು, ಗೂಢತೆ, ಕುತೂಹಲ ಇವೆಲ್ಲವಕ್ಕೆ ತೆರದುಕೊಳ್ಳುವ ಸಾಧ್ಯತೆಗಳು ಇಲ್ಲಿನವು.

ದೀಪಗಳ ಹಬ್ಬ ದೀಪಾವಳಿ ಬರುವುದು, ನಮ್ಮ ಬದುಕಿನಲ್ಲಿ ಹೊಸತನ್ನ ತುಂಬುವುದು ಗೊತ್ತಿರುವ ಸಂಗತಿ. ಮಕ್ಕಳಿಗಂತೂ ಹುರುಪಿನ, ಉಮೇದುತುರುವ, ಕುಣಿದಾಡುವ ಸಮಯ ಅದು. ಅಂಥ ಹಬ್ಬ ಈವರೆಗೂ ಇರಲಿಲ್ಲ, ಎಲ್ಲಿಂದ ಬಂತದು, ಎಲ್ಲಿತ್ತು ಅಂತೆಲ್ಲ ಮುಗ್ಧತೆಯ ಅವ್ಯಕ್ತ ಪ್ರಶ್ನೆಗಳ ಆವರಣದೊಳಗೆ ಎಂಬಂತೆ ಅರಳಿರುವ ಪದ್ಯ ಹೇಳುವ ಸಂಗತಿಗಳು ಹೊಸದೇ ಆದ ಮನಸ್ಸಿನ ಹರವುಗಳನ್ನ ನಮ್ಮ ಮುಂದಿಡುತ್ತವೆ :

ಪಶ್ಚಿಮ ಘಟ್ಟದ ಕಾಡಿನಲಿತ್ತು
ಬಯಲು ಸೀಮೆಯ
ಹಾಡಿಯಲಿತ್ತು
ಬಾನ್ ಮೇಲಿನ
ಮೋಡದಲಿತ್ತು
ಪಾರಿಜಾತದ ಗಿಡದ
ಮೇಲಿತ್ತು

ನಾಟಕೀಯ ದೃಶ್ಯವೊಂದನ್ನ, ಅಲ್ಲಿನ ಕ್ರಿಯೆ ಪಟಪಟನೆ ನಡೆದು ಹೋಗುವುದನ್ನ ನಮ್ಮ ಮುಂದಿಡುತ್ತ ಹಿಡಿದಿಡುತ್ತಲೇ ಪಳಕ್ಕನೇ ಹೊಸದೊಂದು ಹೊಳೆದಹಾಗಾಗುವ ಬಗೆ ಈಕೆಳಗಿನ ಪುಟ್ಟ ರಚನೆಯದು

ಕತ್ತಲಾದರೆ ಬೆಕ್ಕಿಗೆ
ಮೊದಲು ಅದರ ಬಾಲ ಮಾಯ
ಆಮೇಲದರ ಕಾಲು ಮಾಯ
ಆಮೇಲದರ ಕೈ ಮಾಯ
ಆಮೇಲದರ ಹೊಟ್ಟೆ ಮಾಯ
ಆಮೇಲದರ ಮೈ ಮಾಯ
ಆಮೇಲದರ ಮೀಸೆ ಮಾಯ
ಆಮೇಲದರ ಮುಖ ಮಾಯ
ಎಲ್ಲಾ ಮಾಯವಾದರೂ
ಉಳಿಯೋದದರ ಕಣ್ಣುಗಳು
ಕತ್ತಲಲ್ಲಿ ಫಳ ಫಳ

ಇವೆಲ್ಲ ಮುಗ್ಧತೆಯ ವಿಸ್ಮಯದ, ರಮ್ಯ, ಮಾರ್ದವ ಕೋಶದೊಳಗಿಂದ ಉಚ್ಚಕೊಳ್ಳುವ ಸಾಮಗ್ರಿಯಾದರೆ ರಂಜನೆಯ ಆವರಣದಲ್ಲಿ ಮಕ್ಕಳ ನಾನಾ ಬಗೆಯ ಮನಸ್ಸಿನ ಮಗ್ಗಲುಗಳನ್ನ ರಚನೆಗೆ ತಂದುಕೊಂಡುದು ವಿಪುಲವಾಗಿ ಕಾಣುತ್ತದೆ.

ಯಾಕಪ್ಪಾ ಮಗು ನಿಂತಿದ್ದೀಯಾ
ಬೆರಳನು ಚೀಪುತ್ತಾ ?
ಮೊಡದ ಊರಿಗೆ ದಾರಿ ಯಾವುದು,
ತಾತ, ನಿಮಗೆ ಗೊತ್ತಾ ?
ಅಂತ ಒಂದು ಮಗುವಿನ ಮಾತಾದರೆ ಇನ್ನೊಂದು ಮಾತಿನ ವರಸೆ ಇಂಥದು
ಯಾಕಪ್ಪಾ ಮಗು, ಸುಮ್ಮನೆ ಕುಳಿತೆ
ನೊಡುತ ಬಾನತ್ತ ?
ತಾತ, ಸುಮ್ಮಗಿರಿ; ಕುಳಿತಿದ್ದೇನೆ
ಚಿಕ್ಕೆಗಳೆಣಿಸುತ್ತಾ !’

ಹೀಗೆ ಹಲವಾರು ಬಗೆಯ ನಕ್ಕು ನಗಿಸುವ ಸರಕುಗಳನ್ನ ಮುಂದಿಟ್ಟವರು ಎನ್. ಶ್ರೀನಿವಾಸ ಉಡುಪ ಅವರು. ಒಂದೆ ಸವನೆ ಬೊಗಳ ತೊಡಗಿರೊ ಟಾಮಿಯ ಜೊತೆ ಮಗುವಿನ ಮಾತು..

ದಪ್ಪ ಮೀಸೆಯ ದಾಂಡಿಗನೊಬ್ಬ
ಬಂದನೆ ಕನಸಲಿ ನಿನ್ನ ?
ಅಪ್ಪನ ಚಪ್ಪಲಿ ಕಚ್ಚಿತಿಂದುದಕೆ
ಭಯವಾಗುತ್ತದೊ ಚಿನ್ನ ?

ಮುದ್ದು ಮರೀ, ಟಾಮಿ ಮರೀ
ಕುಂಯ್ ಕುಂಯ್ ಬೀದಿಗೆ ಇಳಿದರೆ
ಅಣ್ಣ ಹೊಡೆದಾನು, ಜೋಕೆ !

ಕಣ್ಣು ಪಿಳಿ ಪಿಳಿ ! ಬಾಲ ಪಟ ಪಟ !
ಥೂ, ಏನಾಗಿದೆ ನಿನಗೆ ?
ಬಾಯೀ ಬಿಟ್ಟು ಹೇಳಿದರಲ್ಲದೆ
ಹೇಗೆ ತಿಳಿದೀತು ನನಗೆ ?

ಅಂತೆಲ್ಲ ಸಾಗತೊಡಗುವ ಪದ್ಯ ಶಾಲೆಗೆ ಕಳಿಸುವ ಉಪಾಯದೊಂದಿಗೆ ಮುಕ್ತಾಯವಾಗುವುದು ‘ಆದರೆ ನಿನಗೆ ನಿಕ್ಕರ್ ತೊಡಿಸೋದು ಹ್ಯಾಗೆ ಎಂಬುದೇ ನನ ಚಿಂತೆ !’ ಎಂದು.

ಮುಗ್ಧತೆಯ ಮನೋವಿಲಾಸಗಳು ನವೋದಯದ ಕವಿಗಳಿಂದ ಹರಿದು, ಮಧ್ಯದ ಶಿಕ್ಷಕ ಸಮುದಾಯದ ಮರೆಯಲ್ಲಿ ತೊರೆಯಾಗಿ ಮೂರನೆಯ ಘಟ್ಟ ಎನ್ನುವಲ್ಲಿಗೆ ಹಿರಿದೊರೆಯಾಗಿ ಹರಿದಿವೆ ಎನ್ನಲಡಿಯಿಲ್ಲ. ಈ ಮೂರನೆಯ ಘಟ್ಟದಲ್ಲಿ ಮಕ್ಕಳಿಗಾಗಿನ ಬರವಣಿಗೆ ಆದಷ್ಟೂ ಮಕ್ಕಳ ಈ ಖಾಸಾ ಭಾವ ಕೋಶದೊಳಗೆ ಇಳಿಯುವ ತುಡಿತವನ್ನೇ ತೋರಿಸಿತು. ಹಾಗೆ ಮಾಡುತ್ತ ಹಲವಂದದ ಸಾಧ್ಯತೆಗಳನ್ನ ಕಂಡುಕೊಂಡಿತು. ಅಭಿವ್ಯಕ್ತಿಸುವವರ ನಾನಾ ಮನೋಧರ್ಮದ ಪಡಿನೆಳಲಾಗಿ ವಿಭಿನ್ನತೆಯನ್ನೂ ತಂದುಕೊಂಡಿತು.

ನವೋದಯದ ಹಿರಿಯರು ಮಕ್ಕಳಿಗೆ ಅಂತ ಬರೆದಾಗಲೂ ವಿಭಿನ್ನರಾಗಿದ್ದರು. ಕುವೆಂಪುವಿಗೆ ಬಾಲ್ಯ ಲೀಲೆಯಾಗಿ ಕಂಡಿತು. ಅದರಲ್ಲಿಯೇ ಪರಿಪೂರ್ಣತೆಯನ್ನ ಭಾವಿಸಿಕೊಂಡು ನೋಡಿದವರು ಅವರು. ‘ಎಷ್ಟೆ ತಿಂದರೂ ಖರ್ಚೆ ಆಗದ ದೇವರ ಪೆಪ್ಪರಮೆಂಟಿ’ನ ರುಚಿಯನ್ನ ಅವರು ಮುಂದಿಟ್ಟುದು. ಅದೇ ದಿನಕರ ದೇಸಾಯಿ ಅವರು ಬೆಕ್ಕು, ತಿಪ್ಪಾಭಟ್ಟರು ಮುಂತಾಗಿ ಪಾತ್ರಗಳನ್ನ ಇಟ್ಟುಕೊಂಡು ಮಕ್ಕಳನ್ನ ರಂಜಿಸುವ ಕಡೆಗೆ ಹೊರಳಿದಂತೆ, ಸಾಮಾಜಿಕ ಅಸಮತೆಯ ವಿಡಂಬನೆಗೂ ದಾರಿ ಮಾಡಿಕೊಂಡರು. ಪಂಜೆಯವರು ಮಕ್ಕಳ ಒಳ್ಳೆಯ ಭವಿಷ್ಯಕ್ಕೆ ಹೆಚ್ಚಾಗಿ ತುಡಿದವರು, ಆ ಬಗೆಯ ನೈತಿಕ ಕಾಳಜಿಯನ್ನ ಅವರು ಮಕ್ಕಳ ಮುಂದಿಡಲು ನೊಡಿದರು. ರಾಜರತ್ನಂ ಹಾಗೆ ನೊಡಿದರೆ ಮಕ್ಕಳನ್ನ ರಂಜಿಸುವಲ್ಲಿ ಹೆಚ್ಚೇ ತೊಡಗಿಕೊಂಡರು. ಕುಣಿತ ಮಣಿತ, ಹಾಸ್ಯ ಕೀಟಲೆ ಎಲ್ಲಕ್ಕೂ ದಾರಿ ಮಾಡಿಕೊಂಡರು. ಮಕ್ಕಳ ಮನಸ್ಸನ್ನ ಮುಂದಿಟ್ಟುಕೊಂಡು ಅವಕ್ಕೆ ಮುದ ನಿಡುವ ಬಗೆ ಇದು. ಮಕ್ಕಳ ಮನದೊಳಗಿಂದ ಹಾಯ್ದು ಬರುವುದಕ್ಕಿಂತ, ಹೊರಗಿನಿಂದ ಅವಕ್ಕೆ ಉಣಿಸನ್ನ ನೀಡುವಂಥದು.

ಅದೇ ನಂತರ ಬಂದ ಶಿಕ್ಷಕ ಸಮುದಾಯ ಆದಷ್ಟೂ ನೀತಿಯ, ಆದರ್ಷದ ಪಾಠಗಳನ್ನ ಮುಂದಿಟ್ಟು, ತಾವೇ ರೂಪಸಿಕೊಂಡ ಭವಿಷ್ಯದ ಆಕಾರಗಳಿಗಾಗಿ ಮಕ್ಕಳನ್ನ ಸಿದ್ಧಗೊಳಿಸುವಲ್ಲಿಯೇ ಹೆಚ್ಚು ತುಡಿದರು.

ಮೂರನೆಯ ಘಟ್ಟ ಅಂತ ಹೇಳುವ ಇಂದಿನ ಹೊಸ ಹೊರಳು ಮಕ್ಕಳ ಮುಗ್ಧತೆಯ ಲೋಕವನ್ನ ಆದಷ್ಟೂ ಬಿಡುಗಣ್ಣಿಂದ ಕಂಡುಕೊಳ್ಳುತ್ತ ವಿಸ್ಮಯ ಗೊಳ್ಳುತ್ತ, ಅದರದೇ ಆದ ಅನಾವರಣಕ್ಕೆ ಕೈ ಹಾಕಿತು. ಮಕ್ಕಳದೇ ಅದ ಖಾಸಾ ಖಾಸಾ ಜಗತ್ತನಲ್ಲಿ ಇಳಿಯಲು ಬಯಸಿದುದು ಇದು. ಹಾಗಾಗಿ ಬಾಲ್ಯದ ಆವರಣದಲ್ಲಿ ಇಳಿದು ಬೆರಗಿನಿಂದ, ಕುತೂಹಲದಿಂದ ನೊಡುವ ಕಣ್ಣೋಟ ಇಲ್ಲಿ ಸಾಧ್ಯವಾಯಿತು. ಆ ಮೂಲಕವೆ ತಮ್ಮ ವಿಶೇಷತೆಗಳನ್ನ ಅಭಿವ್ಯಕ್ತಿಸಲು ಹವಣಿಸಲಾಯಿತು. ಹಾಗಾಗಿಯೆ ಮಕ್ಕಳದೇ ಆದ ಮುಗ್ಧ ಮನೋಲೋಕದ ಬೆರಗಿನ ಜಗತ್ತು ಹೆಚ್ಚು ತೆರೆದುಕೊಂಡುದು ಈ ಹೊಸ ಹೊರಳಿನಲ್ಲಿ. ಬಹುಷಃ ಅದು ಮಕ್ಕಳನ್ನ ಸ್ವಚ್ಛಂದವಾಗಿ ನೊಡಲು ಬಯಸಿದುದೆಂದು ಅಂದುಕೊಳ್ಳಬಹದು. ಬಹಳಷ್ಟು ಜನ ಮಕ್ಕಳನ್ನ ಶಾಲಾ ವಾತಾವರಣದಲ್ಲಿ ಕಾಣುವವರಲ್ಲ ಇವರು. ಹಾಗಾಗಿಯೆ ಆದಷ್ಟೂ ಸ್ವಾತಂತ್ರ‍್ಯ ವಹಿಸಿದರು ಎನ್ನಬಹುದು. ಇಂಗ್ಲೀಷಿನಲ್ಲಿ ‘official school poetry’ಗೆ ಪ್ರತಿಯಾಗಿ ‘playground poetry’ ಎಂದು ಗುರುತಿಸುವ ನಿಟ್ಟಿನಲ್ಲಿ ಇವನ್ನ ಖಂಡಿತ ಗಣಿಸಬಹುದಾದರೂ ಪೂರ್ತಿಯಾಗಿ ಹಾಗೆ ಭಾವಿಸಲಾಗದು ಎನಿಸುತ್ತದೆ. ಏಕೆಂದರೆ ಬಾಲ್ಯವನ್ನ ಅದರದೆ ಆದ ವೈಶಿಷ್ಠ್ಯದಿಂದ ಪ್ರತ್ಯೇಕವಾಗಿ ನೋಡಿದ ಬಗೆ ಢಾಳಾಗಿ ಇಲ್ಲಿ ಕಾಣದು ಎಂದೇ ನನ್ನ ಭಾವನೆ. ಮಕ್ಕಳನ್ನ ಕಾಳಜಿಯಿಂದ, ಹಿರಿಯರಾಗಿ, ಭವಿಷ್ಯದ ತಯಾರಿಗಾಗಿ ಸಿದ್ಧ ಪಡಿಸುವ ಮನೋಭಾವನೆ, ಶಾಲಾವಾತವರಣದಲ್ಲಿ ಇದ್ದ ಹಾಗೆ, ಇನ್ನೂ ಹಿನ್ನೆಲೆಯಲ್ಲಿ ಅಘೋಷಿತವಾಗಿ ಇರೋ ಹಾಗಿದೆ. ಹಾಗಾಗಿಯೆ ಬಹುಷಃ ಮಕ್ಕಳ ಸುತ್ತಲಿನ ವಾಸ್ತವಗಳಿಗೆ ಇನ್ನೂ ಬಿಡುಬೀಸಾಗಿ ಕನ್ನಡದ ಬರವಣಿಗೆ ತೆರೆದುಕೊಳ್ಳುತ್ತಿಲ್ಲ ಎಂದು ಕಾಣುತ್ತದೆ. ಆದಷ್ಟೂ ಚಿಕ್ಕ ಮಕ್ಕಳ ವಾತಾವರಣದಲ್ಲಿ ಬರವಣಿಗೆ ತನ್ನನ್ನ ಕಂಡುಕೊಳ್ಳುತ್ತಿದೆ.