ಶಾಲಾವರಣದಿಂದ ಬಿಡುಗಡೆಗೊಂಡುದು

ಪಂಜೆ ಮಂಗೇಶರಾಯರಿಂದ ಹಿಡಿದು ಮಕ್ಕಳ ಸಾಹಿತ್ಯ ಹಾಗೆ ನೋಡಿದರೆ ಶಾಲಾ ಮಕ್ಕಳನ್ನ ಮುಂದಿಟ್ಟುಕೊಂಡೇ ಅಗತ್ಯಗಳಿಗಾಗಿ ತುಡಿದುದು. ಈ ತುಡಿತ ಶಿಕ್ಷಕ ಸಮುದಾಯದವರ ಕೈಯಲ್ಲಿ ಢಾಳಾಗಿಯೇ ಮುನ್ನೆಲೆಗೆ ಬಂದು ನಿಂತಿತು. ಶಾಲೆ ಅಂದರೆ ಪವಿತ್ರ ತಾಣ, ಅಲ್ಲಿ ಕಲಿಸುವ ವ್ಯಕ್ತಿ ಗುರು, ಅವನು ಆದರ್ಶದ ರೂವಾರಿ, ಶಾಲೆಗೆ ಹೋಗುವುದು ಕರ್ತವ್ಯ ಮುಂತಾಗಿ ಅವಾರಗಳನ್ನ ಕಟ್ಟಿಕೊಂಡ ಬರವಣಿಗೆಯೇ ತಪ್ಪದೆ ನಡೆಯಿತು. ಬದುಕಿನ ಎಲ್ಲ ಮಗ್ಗುಲಗಳನ್ನೂ ಇದೇ ಕಟ್ಟುನಿಟ್ಟುಗಳಲ್ಲಿ ನೊಡುವ ವಾತಾವರಣವನ್ನ ಶಿಕ್ಷಕರಾಗಿ ತಮ್ಮ ಕರ್ತವ್ಯ ನಿರ್ವಹಿಸುವಚಿತೆ ಕವಿಗಳು ನಡೆದುಕೊಂಡರು. ಆದರೆ ಹೊಸಗಾಲ ಮಕ್ಕಳ ಕಾವ್ಯವನ್ನ ಈ ಗೋಡಗಳಿಂದ ಆಟದ ಬಯಲಿಗೆ ತಂದಿತು.

ಅಮ್ಮಾ, ಶಾಲೆಗೆ ನಾ ಹೋಗೀಲ್ಲ
ಬ್ಯಾಗು ಬಹಳ ಭಾರ !
ಹೊತ್ತೂ ಹೊತ್ತೂ ಬೆನ್ನು ಮುರಿಯಿತು,
ಶಾಲೆ ತುಂಬ ದೂರ !
(
ಎನ್. ಶ್ರೀನಿವಾಸ ಉಡುಪ)
*
ದೇವರೂನು ಬಂದರಿಲ್ಲಿ
ಬೇಡಿಕೊಳುವೆ ಆಟಕೆ
ಶಾಲೆ ಬೇಡ ಓದು ಬೇಡ
ಮುಕ್ತಿಗೊಳಿಸು ಪಾಠಕೆ
(
ಜೀನಹಳ್ಳಿ ಸಿದ್ಧಲಿಂಗಪ್ಪ)
*
ಮಗೀತಪ್ಪ ಎಗ್ಸಾಂ
ನಿತ್ಯ ದಾಸರ ಭೊಂ ಭೊಂ
ಹಿಡಿಯೋರ್ಯಾರು ಇನ್ನು
ಹಾರಲು ಹೊರಟವರನ್ನು !
(
ರಾಧೇಶ ತೋಳ್ಪಾಡಿ)

ಇಂಥದು ಅನೇಕ ರಚನೆಗಳಲ್ಲಿ ಕಂಡುಬಂದಿತು. ಶಾಲಾ ವಾತಾವರಣ ಇರಬೇಕಾದ ಹಾಗೆ ಇಲ್ಲದಿರುವುದನ್ನ, ಮಕ್ಕಳಿಗೆ ಅದು ಬೇಸರದ ತಾಣವಾದುದನ್ನ, ಮಕ್ಕಳ ಮನಸ್ಸಿನಲ್ಲಿ ಹುದುಗಿರುವ ಈ ತುಮುಲವನ್ನ ಹೊರಹಾಕಲು ಹಿಂದು ಮುಂದೆ ನೊಡಲಿಲ್ಲ. ಹೀಗೆಯೆ ಮಕ್ಕಳು ತಮ್ಮ ಸುತ್ತಲಿನ ಮನೋವ್ಯಪಾರಗಳನ್ನ ನೋಡುತ್ತ, ದೊಡ್ಡವರ ನಾನಾ ಬಗೆಗಳನ್ನ ಕಾಣುತ್ತ, ಅನುಭವಿಸುವ ಕಸಿವಿಸಿ, ದಿಗಿಲು, ದ್ವಂದ್ವಗಳು, ನೋವುಗಳು ಅಭಿವ್ಯಕ್ತಿಗೆ ದಾರಿ ಮಾಡಿಕೊಂಡುದು ಈ ಹೊಸತಿನ ದೊಡ್ಡದೊಂದು ಹೊರಳು.

ಗೂಡಲ್ಲಮ್ಮನ ರೆಕ್ಕೇಲಡಗಿದ ಬೆಚ್ಚನೆ ಖುಷಿಯ ಹೊತ್ತು
ಗುಬ್ಬಿ ಪುಟ್ಟಾಣಿ ಸಣ್ಣದನೀಲಿ ಅಮ್ಮನ ತಟ್ಟುತ ಹೇಳ್ತು :
ಕೋಪಿಸ್ಕೊಳ್ಳೋಲ್ಲಾಂದ್ರೆ ಒಂದ್ಮಾತ್ ಹೇಳ್ತೀನಮ್ಮ ನಾನು
ಬೈಯೋಲ್ಲಾಂತ ಈಗ್ಲೇ ಪ್ರಾಮೀಸ್ ಮಾಡ್ತೀ ತಾನೇ ನೀನು ?

ಅಂತ ಕೇಳುವ ಮಗು ಗುಬ್ಬಿ ತನ್ನ ಪ್ರಶ್ನೆಗೆ ಎತ್ತಿಕೊಳ್ಳುವ ಸಂಗತಿ ಹೈವೇ ಸೈಡಿನಲ್ಲೇ ಮರದಲ್ಲಿ ಗೂಡು ಕಟ್ಟಿದ್ಯಾಕೆ ಅಂತ. ಅದರಿಂದ ನಾನಾ ಬಗೆಯ ತಾಪತ್ರಯ, ಆಂತಕ ಎಲ್ಲವನ್ನ ಮುಂದಿಡುತ್ತ ನಮ್ಮ ಪರಿಸರದ ಕಳೆದು ಹೋದ ಕಾಳಜಿಯ ದನಿಗಳನ್ನ ಮಗುವಿನ ಮುಗ್ಧತೆಯ ಮರೆಯಲ್ಲಿ ಎತ್ತಿಕೊಳ್ಳಲು ನೋಡುತ್ತಾರೆ ರಾಧೇಶ ತೋಳ್ಪಾಡಿ.

ಮೊನ್ನೆ ಒಂದ್ಸಲಿ ಕೆಟ್ ಕನಸಮ್ಮ ಬೆಳಗಾಗ್ತಿದ್ದ ಹಾಗೇ
ಮೈಯಿಡೀ ಕಪ್ಪು ; ಹೊಗೆ ಕರಿಕಪ್ಪು, ಕತ್ತಲು ಹೊದ್ದೋರ್ ಹಾಗೆ !
ಕತ್ತಲಲ್ಲಿ ಮಿಣಿ ಮಿಣಿ ಮಿಂಚೋ ಮಿಂಚು ಹುಳದ ಬೆಳಕು
ಸ್ಟ್ರೀಟ್ ಲೈಟಲ್ಲಿ ಕರಗೇ ಹೋಯ್ತು, ಅಮ್ಮಾ ಏನಿದು ಬದುಕು ?
*
ಪುಟ್ಟ : ಊರಿಗೆ ಹೋಗೋದ್ಯಾವಾಗಮ್ಮ
ಅಜ್ಜ ಅಜ್ಜೀನ್ ನೊಡೋಕೆ ?
ಗುಡು ಗುಡು ಗುಮ್ಮಟ ದೇವರು ಬಂದರು
ಕತೆ ಕತೆ ಕಾರಣ ಕೇಳೋಕೆ ?

ಅಮ್ಮ : ಎಗ್ಸಾಮೆಲ್ಲ ಮುಗೀಬೇಕಲ್ಲ
ಕಂದಾ, ಊರಿಗೆ ಹೋಗೋಕೆ !
ಎಪ್ರೀಲ್ ತಿಂಗಳ ಹತ್ತಾಗ್ಬೇಕು
ಬೇಸಿಗೆ ರಜೆಯು ಸಿಕ್ಕೋಕೆ !

ಪುಟ್ಟ : ಊರಿಗೆ ಹೋಗೋದ್ಯಾವಾಗಮ್ಮ
ವಿಷುವಿನ ಪಾಯಸ ತಿನ್ನೋಕೆ ?
ವಾಲಗ ಢಂ ಢಂ ಸದ್ದುಗಳೊಟ್ಟಿಗೆ
ಊರಿನ ತೇರು ಎಳೆಯೋಕೆ ?

ಅಮ್ಮ : ಅಪ್ಪನ ಬಾಸ್ ಅಪ್ಪಂಗೂನು
ಕೊಡ್ಬೇಕಲ್ಲಾ ರಜೆಯನ್ನ !
ಭಾರೀ ಸಿಟ್ಟಿನ್ ಬಾಸಿಗೆ ದೇವ್ರು
ಕೊಡಲಿ ಒಳ್ಳೆ ಬುದ್ಧೀನ !

ಹೀಗೆಲ್ಲ ಸಾಗುವ ರಚನೆ ಅಡಚಣೆಗಳ ದೊಡ್ಡ ಪಟ್ಟಿಯನ್ನೇ ಮುಂದಿಡುತ್ತದೆ.

ಅಲ್ಲಿ ನಿನ್ನೂರಿನಲ್ಲಿ
ಇದೆಯಾ ಚಾಕ್ಲೇಟು
ಎರಡೂ ಜೇಬು ಎರಡೂ ಕೈ
ತುಂಬಾ ಬಿಸ್ಕೀಟು
ಝಣ ಝಣಾ ರೊಕ್ಕ
ತುಂಬಿಕೊಂಡ ಪಾಕೀಟು
ಮಿರಮಿರನೆ ಮಿಂಚುತಿರುವ
ಕೆಂಪು ಬಾಬಾ ಸೂಟು

ಹೀಗೆ ಭಾಗಗೀರಥಿ ಹೆಗಡೆ ಅವರ ಕವಿತೆಯೊಂದರಲ್ಲಿ ಚಿಟ್ಟಗುಬ್ಬಿಯನ್ನ ಕೇಳುವ ಪುಟ್ಟನಿಗೆ ಅದೆಲ್ಲ ನನಗಾಗಗದು, ಬೇಡ ಅನ್ನೋ ಗುಬ್ಬಿಗೆ ಮತ್ತೆ ಪುಟ್ಟ ಹೇಳೋದು ಹೀಗೆ

ಹಾಗಾದರೆ ಏನುಬೇಕು
ಬಾರೆ ನನ್ನ ಬಳಿಗೆ
ಹಣ್ಣು ಕಾಯಿ ಗಿಣ್ಣ ಕೂಡ
ಇದೆ ಫ್ರಿಜ್ಜಿನೊಳಗೆ

ಈ ತರಹದ್ದೆಲ್ಲ ಇನ್ನೊಂದೇ ಆದ ಬಗೆಯಲ್ಲಿ ಕೆಲ ಸಂಗತಿಗಳನ್ನ ಹೇಳವುದನ್ನ ಇಲ್ಲಿ ಹೇಳಬಹುದು ಎಂದು ಕಾಣುತ್ತದೆ. ಹಳ್ಳಿಗಾಡಿನ ಸ್ವಚ್ಛಂದದ, ಹಬ್ಬದ ಸಂಭ್ರಮದ, ಸರಳ, ಪ್ರಕೃತಿಯ ಸಾಹಚರ್ಯದ ಬಾಲ್ಯದ ಸಂಗತಿಗಳನ್ನ ಕಳೆದುಕೊಳ್ಳುತ್ತ ಶಹರದ ಯಾಂತ್ರಿಕ ವಾತಾವರಣದ ನಡುವೆ ಅರಳ ಬಯಸುವ ಬಾಲ್ಯದ ಸಂಗತಿಗಳು ಈ ಹೊಸ ತಿರುವಿನ ಕಾವ್ಯದ ಸಾಮಾನ್ಯದ ವಸ್ತು ಹರಹಾಯಿತು. ಹಾಗಾಗಿ ಬಹುಶಃ ಮಕ್ಕಳ ಆಡು ಮಾತಿನಲ್ಲಿ ಬೆರೆತು ಹೋದ ಇಂಗ್ಲೀಷು, ಶಹರದ ಸಭ್ಯತೆ-ನಿರ್ಬಂಧಗಳು, ಮಧ್ಯಮ ವರ್ಗದ ನಡುವಳಿಗಳು ಕವಿತೆಯಲ್ಲಿ ಸಹಜವಾಗಿ ಬೆರೆತು ಹೋದವು. ರಚನೆಕಾರರು ಸಹಜದ ಅಭಿವ್ಯಕ್ತಿಗೆ ತವಕಿಸಿದವರಾದುದರಿಂದ, ಮಡಿವಂತಿಕೆ ತೋರಲಿಲ್ಲ. ಅದೇ ಶಿಕ್ಷಕ ಸಮುದಾಯದ ಕವಿಗಳು ಈ ಬಗೆಯಲ್ಲಿ ಬಹಳ ಮುತುವರ್ಜಿ ವಹಿಸಿದ್ದರು. ಅವರಿಗೆಲ್ಲ ಈ ಹೊಸ ಹೊರಳು ಇರುಸು ಮುರುಸಾದುದು ಸಹಜ.

ಬೆಳೆಯುತ್ತಿರುವ ಮಕ್ಕಳ ಮನದೊಳಗು

ಸರಿ ಸುಮಾರು ಹತ್ತು ವರುಷದ ವರೆಗಿನ ಅನ್ನಬಹುದೇನೋ, ಈ ವಯೋವರ್ಗದ ಮಕ್ಕಳ ಮನೋಲೋಕವೆ ಇದುವರೆಗೂ ಕನ್ನಡ ಮಕ್ಕಳ ಸಾಹಿತ್ಯದಲ್ಲಿ ಕಾಣಿಸಿಕೊಂಡುದು. ಅಲ್ಲಿಂದಾಚೆ ಬೆಳೆಯುತ್ತಿರುವ ಮಕ್ಕಳ ಮನದೊಳಗನ್ನ ಅಷ್ಟಾಗಿ ಹೊಕ್ಕಾಡಿದ್ದು ಕಾಣುತ್ತಲಿಲ್ಲ. ವಿರಳವಾಗಿ ಅದು ಕಾಣಿಸಕೊಂಡುದನ್ನ ಈ ಹೊಸ ಹೊರಳಿನಲ್ಲಿ ಗುರುತಿಸಬಹುದು.

ಕಿರಾಣಿ ಅಂಗಡಿ ಚಡ್ಡಿಯ ಹುಡುಗ
ಮನೆಗೆ ಮರಳುತಿರಬೇಕಲ್ಲ
ನಾಯಿ ದಾರಿಯಲಿ ಒಂದೇ ಎರಡೇ
ಬೊಗಳದಿರುವುದಿಲ್ಲ
ಅರೆ, ಅರ್ಧ ತೆರೆದ ಕಿಟಕಿಯ ಒಳಗೆ
ಕರಿಯ ಮುಖವು ಚಾಚುವುದಲ್ಲ
ನೋಡಿಯೆ ಬಿಟ್ಟಿತೆ ಬೆಕ್ಕು ನನ್ನನು
ಹೊರಳಿ ಹೋಯಿತಲ್ಲ

ಮುಂತಾಗಿ ಸಾಗುವ, ರಾತ್ರಿ ಹಾಸಿಗೆಯಲ್ಲಿ ನಿದ್ರೆಗೆ ಜಾರುವ ಮೊದಲ ಲಹರಿಗಳನ್ನ ಇಡುವ ಈ ಪ್ರಬಂಧದ ಲೇಖಕ ಬಾಲ್ಯದ ಮನೋಲೋಕವನ್ನ ಅನಾವರಣ ಗೊಳಿಸುವುದು ಮಕ್ಕಳದೇ ವಾಸ್ತವಗಳ, ಸಹಜತೆಗಳ ನಡುವೆ, ಬೆಳೆಯುತ್ತಿರುವ ಮಕ್ಕಳಲ್ಲಿ ಬೆರಗಿನ ಮುಗ್ಧತೆ ಮೆಲ್ಲಗೆ ಹಿಂದೆ ಸರಿಯುತ್ತ ಸುತ್ತಲಿನ ವಾಸ್ತವಗಳನ್ನ ತೆರೆದ ಕಣ್ಣುಗಳಿಂದ ನೋಡುತ್ತ, ದಿಗಿಲುಗೊಳ್ಳುತ್ತ, ತನ್ನಲ್ಲೇ ಅವಕ್ಕೆ ಬಗೆಹರಿಯದ ಉತ್ತರಗಳನ್ನ ಕೂಡಿಹಾಕಿಕೊಳ್ಳುತ್ತ ಗಟ್ಟಿಗೊಳ್ಳುವ ಬಗೆಗಳನ್ನ ಇಂಥಲ್ಲಿ ನೋಡಬಹುದು. ಬೆಳೆಯುತ್ತಿರುವ ಮಕ್ಕಳ ಈ ಬಗೆಯ ಮನೋಲೋಕ ಕನ್ನಡದಲ್ಲಿ ಇನ್ನೂ ಸಾಕಷ್ಟು ಅರಳಿಕೊಳ್ಳುತ್ತಲಿಲ್ಲ. ದೊಡ್ಡವರಾಗುತ್ತ, ಪ್ರಾಥಮಿಕ ಶಾಲೆಯಿಂದ ಹೈಸ್ಕೂಲಗೆ ಬರುತ್ತ, ಮಾನಸಿಕವದಾಗಿ ಒಂದಿಷ್ಟು ಪ್ರಬುದ್ಧತೆಯನ್ನ ಕಂಡೂ ಕಾಣದಂತೆ ಹೊಂದುತ್ತಿರುವ ಸಮಯದಲ್ಲಿ ಬಿಚ್ಚಿಕೊಳ್ಳುವ ಸಹಜದ ಭಾವಕೋಶ ತನ್ನದೇ ಆದ ಬಗೆಯ ಹರವಿನದು. ಸ್ನೇಹವಾಗಿರಬಹುದು, ಹಿರಿಯರ ನಡೆವಳಿಯನ್ನ ಮರೆಯಲ್ಲಿ ಕಂಡುದಾಗಿರಬಹುದು, ನೆನಪಾಗಿ ಸುಳಿದುದಾಗಿರಬಹುದು, ಪ್ರಕೃತಿಯ ಯಾವೊಂದು ಸಂಗತಿಯಾದೀತು, ಕುತೂಹಲ ಹುಟ್ಟಿಸಿದ ಯಾವುದೋ ಸಂಗತಿಯಾದೀತು, ಅದೇ ಒಂದು ಬಾಲ್ಯದ ಹೊಸ ಜಗತ್ತು.

ಗೆಳೆಯನವ, ಅವನ ತುದಿಬೆರಳ ನಡುವಿತ್ತು
ಅವನಿಗೂ ಅದು ಬೇಕಿತ್ತು, ಮೊದಲೆ ಸಿಕ್ಕಿತ್ತು
ಚಾಚಿದ್ದ ಕೈ ಅಲ್ಲೇ ಉಳಿದುಹೋಯ್ತು

ತುಸುಹೊತ್ತು ಮುಟ್ಟಿಗೆಯಲಿಟ್ಟುಕೊಂಡಿದ್ದನವ
ನನ್ನನೇ ನೋಡುತಿದ್ದವು ಕಣ್ಣು, ಒಂದು ಗಳಿಗೆ
ಮರುಗಳಿಗೆ ಪಟಪಟನೆ ಅರಳಿದವು ಹೂ ಬೆರಳು

ತೆಗೆದುಕೊಳ್ಳುವುದಕ್ಕೆ ಕೈ ಮುಂದೆ ಮಾಡುವುದೆ
ಸರಿಯೆ, ಇಲ್ಲ ಬಿಟ್ಟುಬಿಡುವುದೆ ಹಾಗೆ
ಹೊಯ್ದಾಟ ಒಳಗೊಳಗೆ ಒಂದೆ ಸವನೆ

ಕಣ್ಣು ಮಿಟುಇಸಿದನವ, ಹೂಂಅಂದ
ತುಂಟತನವಿತ್ತಲ್ಲಿ, ಕಿರಿಹಲ್ಲು ಹಣಿಕಿತ್ತು
ಕೈಚಾಚಿ ಮೆಲ್ಲಗೆ ಎತ್ತಿಕೊಂಡೆ

ಇದೊಂದು ಹುಡುಗನ ಕಾಡುವ ನೆನಪಿನ ಪ್ರಸಂಗ. ನದಿಯ ದಡದ ಉಸುಕಿನಲ್ಲಿ ಆಕರ್ಷಿಸಿದ ಸಿಂಪಿಯನ್ನ ತಾನೂ ತನ್ನೋರ್ವ ಗೆಳೆಯನೂ ಕಂಡು, ಒಮ್ಮೆಲೆ ಮುಗಿಬಿದ್ದು ತೆಗೆದುಕೊಳ್ಳುವುದಕ್ಕೆ ನೋಡಿದ್ದು, ನ್ಯಾಯವಾಗಿ ಅವನಿಗೇ ಸಿಗಬೇಕಾದುದೆಂದು ಲೆಕ್ಕ ಆಗಿಯೂ, ತನಗೇ ಬೇಕೆಂಬ ಹೊಯ್ದಾಟ ಇಬ್ಬರಲ್ಲಿಯೂ ನಡೆದಾಗಿ, ಕೊನೆಗೆ ಗೆಳೆಯ ಕಣ್ಣಿನಲ್ಲೇ ಹೂಂ ಗುಟ್ಟಿ ತನಗಾಗಿ ಬಿಟ್ಟುಕೊಟ್ಟ ಅಂತ ಸೂಚಿಸಿದ ಪ್ರಸಂಗ ಈಗ ನೆನಪಾಗಿ ಮರೆಯಾಗದೆ ಕುಳಿತಿದೆ. ಈ ಹುಡುಗ ಈಗ ಎಲ್ಲಿದ್ದಾನೆ ತಿಳಿಯದು, ಆದರೆ ಸ್ನೇಹದ ಆ ಗಳಿಗೆ ಮಾಸದುದು. ಈ ಬಗೆಯ ಮಕ್ಕಳ ಭಾವ ಜಗತ್ತು ಬಾಲ್ಯದ ಏನೆಲ್ಲವನ್ನ ನಮ್ಮ ಮುಂದಿಡುತ್ತದೆ, ವಿಶೇಷವಾಗಿ ಮಕ್ಕಳಿಗೆ ಬಲು ಹತ್ತಿರದ್ದಾಗಿ ಸ್ಪಂದಿಸಲು ಒಡ್ಡಿಕೊಳ್ಳುತ್ತದೆ.

ಆ ನದಿಯ ದಡದಲ್ಲಿ ಹರಡಿರುವ ಉಸುಕಿನಲಿ
ನೂರಾರು ಹೊಸ ಸಿಂಪಿ ಬಂದಿರಲು ಬಹುದು
ಆ ಸಿಂಪಿಯಂಥದೂ ಇರಲು ಬಹುದು
ಆ ಗೆಳೆಯನಂಥವನು ಮತ್ತಲ್ಲಿ ಬರಬಹುದು
ಮತ್ತಿಂಥ ನೆನಪಿಗೆ ಕೈತೆರೆಯಬಹುದು

ಎಂದುಕೊಳ್ಳುವಲ್ಲಿ ಗೆಳೆಯನ ಹೃದಯವಂತಿಕೆ ನದಿಯ ಹಾಗೆ ನಿಲ್ಲದೆ ಮುಂದುವರಿಯುತ್ತಲೇ ಇರಲಿ ಎನ್ನುವ ಸದಾಶಯ ಕಾಣುತ್ತದೆ.

ಸ್ಕೂಲು ಬಸ್ಸಿನಲಿ
ದಿನವೂ ಬರುವಳು
ಮಾಸಿದ ಅಂಗಿಯ
ಹುಡುಗಿ

ಎಂದು ಶುರುವಾಗುವ ಪದ್ಯ ದಿನವೂ ಕಾಣುವ ದುಡಿಯುವ ಹುಡುಗಿಯೊಡನೆ ಅರಿಯದೆ ಒಳಗೇ ಉಂಟಾಗುವ ಆರ್ದ್ರ ಭಾವಗಳನ್ನ ಒಡಲಲ್ಲಿ ಇಟ್ಟುಕೊಂಡ ಕವಿತೆ.

ನನ್ನದೆ ಎತ್ತರ
ವಯಸು ನನ್ದೆ
ತಪ್ಪದೆ ಇರುವಳು
ಮಂದಿಯಲಿ

ಸ್ಕೂಲಿಗಿಂತ
ಹಿಂದಿನ ಸ್ಟಾಪಲೆ
ಇಳಿದು ಬಿಡುವಳವಳು
ಯಾರದೊ ಮನೆಯಲಿ
ಕೆಲಸವೆ ಅವಳಿಗೆ
ಎಷ್ಟು ತೆಳ್ಳಗಿಹಳು

ಎಂದೆಲ್ಲ ಸಾಗುತ್ತ ಹೀಗೊಂದು ಸಲ ಭಾರವಾದ ಬ್ಯಾಗು ಹಿಡಿದು ಬಸ್ಸು ಹತ್ತುವಾಗ ಬೀಳುತ್ತಿದ್ದವಳನ್ನ ಕೈ ಹಿಡಿದು ಎತ್ತಿಕೊಂಡವಳು ಆ ಹುಡುಗಿಯೇ ಎಂದು ಆಪ್ತ ಭಾವ ತೋರುತ್ತ, ಮಾತೇ ಆಡದೆ ಮೂಕಿಯ ಹಾಗೆ ಶಾಲೆಯ ಹುಡುಗರನ್ನ ಬೆರಗಿನಿಂದ ನೋಡುವ ಆ ಹುಡುಗಿ ಬಸ್‌ಮೇಟ್ ಆಗಿಹೋದುದನ್ನ ಹೇಳುತ್ತಾಳೆ

ದಿನವೂ ಬಸ್ಸು
ಹತ್ತಿದ ಒಡನೆ
ಹುಡುಕದಿಹುದೆ ಕಣ್ಣು
ಕಾಣದಿರಲವಳು
ಎಂದಾದರು ಸರಿ
ಕಳೆದ ಹಾಗೆ ಏನೋ
ಹೌದು, ಯಾಕೊ ಏನೋ !

ಎನ್ನುವಲ್ಲಿ ವ್ಯಕ್ತ ಪಡಿಸಲಾಗದ, ಆದರೆ ಮಾನವೀಯ ಸಂವೇದನೆಗಳು ಅರಿಯದೆ ದಾರಿಮಾಡಿಕೊಂಡುಬಿಡುವ ಸಂಗತಿ ಜರುಗುವುದನ್ನ ವ್ಯಕ್ತಪಡಿಸುತ್ತದೆ ಈ ಪ್ರಸಂಗ.

ನಮ್ಮ ಸುತ್ತಲಿನ ವಾಸ್ತವಗಳನ್ನ ಚಿತ್ರಿಸುವಲ್ಲಿ, ಮಕ್ಕಳಿಗಾಗುವ ಅಭಿವ್ಯಕ್ತಿ ಸಾಧ್ಯತೆಗಳಲ್ಲಿ ತಿರುಮಲೇಶರ ‘ದಾಮರು ಬಂದಿದೆ’ ಪದ್ಯವನ್ನ ಉದಾಹರಿಸಬಹುದು. ಬೀದಿಗೆ ದಾಮರು ಹಾಕುವ ಸಂಗತಿ ಏನೆಲ್ಲ ಸಂಗತಿಗಳಿಗೆ ಕಣ್ಣಾಗುತ್ತದೆ ಎನ್ನುವುದನ್ನ ಮಕ್ಕಳ ಮುಂದಿಡುವ ಪದ್ಯ…..

ಕಾಲಿಗೆ ದಪ್ಪದ ಚಿಂದಿಯ ಬಟ್ಟೆ
ದಾರಿ ಬಿಡಿ! ದಾರಿ ಬಿಡಿ!

ತೆಲೆಗೂ ಮೈಗೂ ಅಂಥದು ತೊಟ್ಟೇ
ದಾರಿ ಬಿಡಿ! ದಾರಿ ಬಿಡಿ!

ರಾಮ ರಹೀಮ ಗುರುತೇ ಸಿಗದು
ದಾರಿ ಬಿಡಿ! ದಾರಿ ಬಿಡಿ!

ಗಂಗೆ ಗೌರಿ ನಮ್ಮೂರವರಾ
ದಾರಿ ಬಿಡಿ! ದಾರಿ ಬಿಡಿ!

ಅವರಿಗೆ ಕುಡಿಯಲು ಶರಬತು ತನ್ನಿ
ದಾರಿ ಬಿಡಿ! ದಾರಿ ಬಿಡಿ!

ಎಂದೆಲ್ಲ ಸಾಗುವ ಮಾತುಗಳು ಬೆಳೆಯುತ್ತಿರುವ, ಸುತ್ತಲಿನ ವಾಸ್ತವವನ್ನ ರೂಢಿಸುವ ಬಗೆ ಕಾಣುತ್ತದೆ. ಹಾಗೆ ನೋಡಿದರೆ ಹಾಸ್ಯ ವಿಡಂಬನೆಯ ಮರೆಯಲ್ಲಿ ಅನೇಕ ಬಗೆಯಲ್ಲಿ ವಾಸ್ತವದ ಸಂಗತಿಗಳನ್ನ ತಿರುಮಲೇಶ ತಂದಿದ್ದಾರೆ.

ಅಕ್ಕಿ ಎಲ್ಲಿಂದ ಬಂತೋ ಪುಟ್ಟ
ಗೋಣಿ ಚೀಲ್ದಿಂದ
ಹಾಲು ಎಲ್ಲಿಂದ ಬಂತೋ ಪುಟ್ಟ
ಪ್ಲಾಸ್ಟಿಕ್ ಚೀಲ್ದಿಂದ
ಎಳನೀರ ಎಲ್ಲಿಂದ ಬಂತೋ ಪುಟ್ಟ
ಬೀದಿ ಕೊನೆಯಿಂದ
ಈರುಳ್ಳಿ ಎಲ್ಲಿಂದ ಬಂತೋ ಪುಟ್ಟ
ತಳ್ಳು ಗಾಡಿಯಿಂದ
ತತ್ತಿ ಎಲ್ಲಿಂದ ಬಂತೋ ಪುಟ್ಟ
ಇಬ್ರಾಹಿಮನ ಅಂಗಡಿಯಿಂದ
ಉಳಿದದ್ದೆಲ್ಲವು ಅಲ್ಲಿಂದ
ಕೇಳೋದೆ ಬೇಡ
*
ಅಳಿಲಿಗೆ ಗೆರೆಗಳು ಯಾಕೋ ಅಂದ್ರೆ
ಬರೀಬೇಕಲ್ಲ
ಅದ್ಕೇ ಅಂತಾನ್ ಪುಟ್ಟ
ಕಡಲಿಗೆ ತೆರೆಗಳು ಯಾಕೋ ಅಂದ್ರೆ
ಎಣಿಸ್ಬೇಕಲ್ಲ ಒಂದೂ ಎರಡೂ
ಅದ್ಕೇ ಅಂತಾನ್ ಪುಟ್ಟ
ಬಾನಿಗೆ ತಾರೆಗಳು ಯಾಕೋ ಅಂದ್ರೆ
ಹೇಳ್ಬೇಕಲ್ಲ ಅಶ್ವಿನಿ ಭರಣಿ
ಅದ್ಕೇ ಅಂತಾನ್ ಪುಟ್ಟ

ಬೆಳೆಯುತ್ತಿರುವ, ಮುಗ್ಧತೆಯನ್ನ ಸುತ್ತಲಿನ ವಾಸ್ತವದಲ್ಲಿ ಕಳೆದುಕೊಳ್ಳುತ್ತಿರುವ, ಏನೇನೆಲ್ಲ ಒಳಗೊಳಗೆ ಲೆಕ್ಕ ಹಾಕಿಕೊಳ್ಳುತ್ತಿರುವ, ಗೊಂದಲಕ್ಕೀಡಾಗುತ್ತಿರುವ, ಪ್ರಬುದ್ಧತೆಯ ಒಂದೊಂದೆ ಮೆಟ್ಟಿಲೇರಲು ತಡಬಡಿಸುತ್ತಿರುವ ಮಕ್ಕಳ ಸುತ್ತಲಿನ ಮನೋ ಭೂಮಿಕೆ ಮಕ್ಕಳ ಕಾವ್ಯದಲ್ಲಿ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಕಾಣಿಸಿಲ್ಲ. ಈ ಬಗೆಯ ಅನುಭವದ ಜಗತ್ತೇ ಒಂದು ವಿಶಿಷ್ಠದ್ದು.

ಕಥನ ಕವಿತೆಗಳು

ದೀರ್ಘಕ್ಕೆ ಹರಡಿಕೊಳ್ಳುವ ಕಥನ ರಚನೆಗಳು ಮಕ್ಕಳ ಸಂದರ್ಭದಲ್ಲಿ ಹಲವು ಕಾಣಿಸಿಕೊಂಡಿವೆ. ಕುವೆಂಪು ಅವರ ಕಿಂದರ ಜೋಗಿ ತನ್ನ ಮೋಡಿ ಮಾಡಿದ ಮೇಲೆ, ಆ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಎನ್. ಶ್ರೀನಿವಾಸ ಉಡುಪರ ‘ಕುಂಭಕರ್ಣನ ನಿದ್ದೆ’ಯೆ ಎದ್ದು ಕಾಣುವಂಥದು. ತುಂಬ ಲವಲವಿಕೆಯಿಂದ ಕೂಡಿ, ಹಾಸ್ಯವನ್ನ ತನ್ನೆಲ್ಲ ಮೈಯಲ್ಲಿ ಸಹಜವಾಗಿಯೆ ತುಂಬಿಸಿಕೊಂಡು ಬಲು ಸೊಗಸಾಗಿ ಅರಳಿರುವ ರಚನೆ ಇದು. ಪುರಾಣದ ಚಿರಪರಿಚಿತ ಪ್ರಸಂಗವೆ ಆದರೂ ಮತ್ತೆ ಹೊಸತಾಗಿ ಮಕ್ಕಳ ಸಂದರ್ಭದಲ್ಲಿ ಸೃಷ್ಟಿಗೊಂಡಿದೆ. ‘ಸೀತಾಮಾತೆಯ ರಾವಣ ಕದ್ದು, ಅಶೋಕವನದಲಿ ಬಚ್ಚಿಟ್ಟದ್ದು, ಆಂಜನೇಯನು ಸೀತೆಯ ಕಂಡು ಲಂಕಾನಗರಿಗೆ ಕಿಚ್ಚಿಟ್ಟಿದು, ಕುಂಭಕರ್ಣನಿಗೆ ಗೊತ್ತೇ ಇಲ್ಲ, ಎಂಥ ನಿದ್ರೆಯೋ ದೇವರೆ ಬಲ್ಲ !’ ಎಂದೇ ಶುರುವಾಗುವ ರಚನೆ ಕುಂಭಕರ್ಣನ ಗಾಢ ನಿದ್ರೆಯ ತರಹವಾರಿಯನ್ನೆಲ್ಲ ಮಕ್ಕಳಿಗೆ ಖುಷಿಯೊ ಖುಷಿ ಎನ್ನಿಸುವ ಹಾಗೆ ನಾನಾ ಛಂದವಾಗಿ ಹರವಿದೆ.

ಭೋರ್ ಭೋರ್ ಎನ್ನು ಭಾರೀ ಗೊರಕೆಗೆ
ಇಡೀ ಅರಮನೆ ನಡುಗುತ್ತಿತ್ತು !
ಕರೀಮಂಚ ನರಳುತ್ತಿತ್ತು !
“ನೀ ಹೋಗಯ್ಯಾ, ನೀ ನಡೆ ಮುಂದೆ”
ಒಬ್ಬರನೊಬ್ಬರ ತಿವಿಯುತ ಹಿಂದೆ
ಹಿಂದೆಯೆ ಉಳಿದರು ಬಹಳ ರಕ್ಕಸರು
ಕುಂಭಕರ್ಣನೆಬ್ಬಿಸ ಬಂದವರು
*
ಬೆಟ್ಟದ ದೇಹಕೆ ಗಂಧವ ಬಳಿದು,
ಕಣ್ಣುಗಳನು ತಣ್ಣೀರಲಿ ತೊಳೆದು,
ಸುತ್ತಲು ಧೂಪದ ಹೊಗೆಯನು ಹಾಕಿ,
ಮಂಚದ ಕೆಳಗೆ ಬೆಂಕಿಯ ನೂಕಿ,
“ಪರಾಕು ಪರಾಕು” ಎನ್ನುತ ಕಿರುಚಿ,
ಮೀಸೆಯನೆಳೆದು, ಕಿವಿಯನು ತಿರುಚಿ,
ಭೋಂಭೋಂಭೋಂಭೋಂ ಶಂಖವನೂದಿ,
ಧಮಧಮಧಮಧಮ್ ಜಾಗಟೆ ಬಡಿದು,
ಕಹಳೆಯ ಕೂಗಿಸಿ, ನಗಾರಿ ಹೊಡೆದು,
ಹೊಟ್ಟೆಯ ಮೇಲೆ ತಕತಕ ಕುಣಿದು,
ಮೂಗಿನ ಹೊಳ್ಳೆಗೆ ಬಿರಡೆ ಜಡಿದು,
ಏನು ಮಾಡಿದರು, ಎಚ್ಚರವಿಲ್ಲ,
ಅದೆಂಥ ನಿದ್ರೆಯೋ ದೇವರೆ ಬಲ್ಲ !

ಹೀಗೆಲ್ಲ ಸಾಗುವ ಪ್ರಯತ್ನಗಳೆಲ್ಲ ವಿಫಲವಾಗುತ್ತ, ರಾಜ ರಾವಣನ ನಿಜಬಲ ಹಸ್ತ, ಮಂತ್ರಿ ಪ್ರಹಸ್ತ ಬಂದು ಉಂಡೆ ಉಂಡೆ ನಶ್ಯ ನೂರು ತೊಲ ಮೂಗಿನ ಹೊಳ್ಳೆಗಳಿಗೇರಿಸಿದರೂ ಪ್ರಯೋಜನವಾಗದೆ ಹೋಯಿತು. ಕೊನೆಗೂ ‘ತಲೆ ತುಂಬ ಜಂಬದ, ಕಣ್ಣುಗಳೆರಡೂ ಉರಿವ ಹಿಲಾಲಾದ, ಗುಡಾಣ ಹೊಟ್ಟೆ, ಥಕಥೈ ಜೋಲಿನ, ಹಿಮಾಲಯದ ಗುಹೆಯಂತಿರುವ ಮೂಗಿನ’ ನಿಕುಂಭ ವೈದ್ಯ ಬರಬೇಕಾಯಿತು. ಆತನೂ ಏನೇನೆಲ್ಲ ಮಾಡಿ ಸುಸ್ತಾದ, ಅವನು ಕರೆಸಿದ ಸುಬ್ಬಾ ಜಟ್ಟಿಯ ಕತೆಯೂ ಮುಗಿಯಿತು, ಕೊನೆಗೂ ರಕ್ಕಸ ಪುಟಾಣಿಯೊಂದರ ತಲೆಗೆ ಹೊಳೆದ ಉಪಾಯ ಫಲಿಸಿ ಕುಂಭಕರ್ಣ ಎಚ್ಚರಗೊಳ್ಳುತ್ತಾನೆ. ಇಡೀ ಕವಿತೆಯ ರಂಜನೆಯ ಸಖತ್ತು ಸಾಮಗ್ರಿಯನ್ನ ಮಕ್ಕಳಿಗೆ ನೀಡಿ ಯಶಸ್ವಿಯಾಗಿದೆ.

ಕುವೆಂಪು ಅವರ ಕಿಂದರ ಜೋಗಿಯ ನಂತರ ಬಹು ಯಶಸ್ವಿಯಾದ ರಚನೆ ಇದೆ ಇನ್ನಬಹುದೇನೋ. ಈ ಬಗೆಯ ದೀರ್ಘ ರಚನೆಗಳನ್ನ ಬರೆಯುವ ಒಲವು ಅಷ್ಟಿಷ್ಟು ಕಂಡುದು ಹೊಸಗಾಲದ ಒಂದು ಮಗ್ಗಲು. ಎಚ್ ಎಸ್ ವಿ ಅವರೂ ಹಲವು ರಚನೆಗಳನ್ನ ಮಾಡಿದರು. ಅವರ ‘ಕಾಡಿನಲ್ಲಿ ಹಕ್ಕಿ ಮತ್ತು ಹುಲಿ’ ಒಂದಿಷ್ಟು ವಿಷೇಶದ ವಸ್ತುವನ್ನುಳ್ಳದ್ದು. ನಗರದ ವಾತಾವರಣ, ಕಾಡಿನ ಬಗೆಗಳ ದ್ವಂದ್ವದಲ್ಲಿಯೆ ಅದು ಕಾಣಿಸಿಕೊಳ್ಳುವುದು. ಕಾಡಿನಲಿ ಕಾರೊಂದು ಕಂಡಾಗ, ಅದರಲ್ಲಿ ಮಗುವೊಂದು ಒರಗಿರುವುದು ಕಂಡಾಗ ಹಕ್ಕಿಗಳೆರಡು ಆ ಮುದ್ದುವನ್ನ ಹುಲಿಯಿಂದ ಕಾಪಾಡುವ ಮುತುವರ್ಜಿ ವಹಿಸುವುದು ಇಲ್ಲಿದೆ. ಕಾಡಿನ ಪರಿಸರದಲ್ಲಿ ಭಯವೂ, ಪ್ರೀತಿಯೂ ಒಟ್ಟಿಗೇ ಕಾಣೋಹಾಗೆ ಇಲ್ಲಿ ವ್ಯಕ್ತವಾಗಿದೆ. ಬೊಂಬೆ ಹಕ್ಕಿಯನ್ನ ಎದೆಗವಚಿಕೊಳ್ಳುವ, ನಿಜವಾದ ಹಕ್ಕಿಗೆ ಬೆದರುವ ಮಗುವಿಗೆ ಬೊಂಬೆ ಹಕ್ಕಿ ನಿಜವಾದ ಹಕ್ಕಿಯ ಕುರಿತು ವಿಶ್ವಾಸ ಮೂಡಿಸಿ ಮಗುವಿನಲ್ಲಿ ಭಯ ದೂರ ಮಾಡುತ್ತದೆ. ಗೋವಿನ ಹಾಡಿನ ಲಯದಲ್ಲಿಯೆ, ಸಾಂಪ್ರದಾಯಿಕ ಬಗೆಯಲ್ಲಿ ನಿರೂಪಸಿರುವ ಇನನ್ನೊಂದು ರಚನೆ ಹುಳುವೊಂದು ಕೀಳರಿಮೆಗೆ ಪಕ್ಕಾಗುವುದು, ನಂತರ ಚಿಟ್ಟೆಯಾದಾಗ ಸಂಭ್ರಮಿಸುವುದು ಕಾಣುತ್ತದೆ. ಅದು ಸುಂದರ ರೂಪ ಪಡೆಯುವಲ್ಲಿ ಸಾಕಷ್ಟು ಕಷ್ಟದ ತಪಕ್ಕೆ ತೊಡಗಿತು ಎಂಬುದನ್ನ ಕವಿತೆ ಹೇಳುತ್ತದೆ.

ಬಾಳಿದರು ಅರೆಘಳಿಗೆ ಸಾಕು
ಬಾಳು ಸಾರ್ಥಕವಾಗಬೇಕು
ತಾಳಿ ಪರಹಿತಕಾಗಿ ಬಾಳಾ
ಬಾಳುವುದೆ ಗುರಿ ಎಂದಿತು
* * *
ಪಟ್ಟು ತಪವಾ ಪುಟ್ಟ ಹುಳವೇ
ಕಟ್ಟಕಡೆಗಾಗಿತ್ತು ರಂಗಿನ
ಚಿಟ್ಟೆ ! ಇಚ್ಛೆಯ ಜಯವಿದೆನ್ನುತ
ತಟ್ಟಿ ಕೈ ಚಪ್ಪಾಳೆಯಾ !

ಮುಂತಾಗಿ ಪರಂಪರೆಯ ಕಥನ ಮಾದರಿಯಲ್ಲಿ ಕಾಣಿಸಿಕೊಳ್ಳುವ ರಚನೆ ಮಕ್ಕಳಿಗೆ ಕನ್ನಡದ ಪ್ರಚುರ ಲಯವನ್ನ ನೆನಪಿಸಲು ಸಹಾಯಕವಾಗಿದೆ.

ಲಕ್ಷ್ಮೀನಾರಾಯಣ ಭಟ್ಟರು ಮೂರು ದೀರ್ಘ ಕಥನ ಕವನಗಳನ್ನೊಳಗೊಂಡ ಸಂಕಲನವನ್ನೇ ತಂದಿದ್ದಾರೆ. ಗೋವಿನ ಹಾಡನ್ನ ಮತ್ತೆ ಇನ್ನೂ ವಿಸ್ತಾರವಾಗಿ ಹೇಳಿದ್ದಾರೆ. ವಿಭಿನ್ನ ಭಾವಗಳಿಗಾಗಿ ವಿಭಿನ್ನ ಲಯಗಳನ್ನ ಬಳಸಿಕೊಂಡು ಸೊಗಸುಗೊಳಿಸಿದ್ದಾರೆ. ಮೂಲ ರಚನೆಯನ್ನ ಅನುಸರಿಸಿ ಬರೆಯುತ್ತ ಬದುಕಿನ ಗಂಭೀರ ಸಂಗತಿಗಳನ್ನೂ ಹೇಳಿದ್ದಾರೆ ಕವಿ ಇಲ್ಲಿ. ಪುಣ್ಯಕೋಟಿಯನ್ನ ಕಳುಹಿಸಿಕೊಟ್ಟಾಗ ಹುಲಿ ಅಂದುಕೊಳ್ಳುವ ಬಗೆಯು ಈ ಬಗೆಯದು

ಏನೊ ಏಕೋ ತಿಳಿಯದಿದ್ದರು
ಹುಲಿಯು ಹಸುವನು ಕಳಿಸಿತು

ಎಷ್ಟೊ ಹಸುಗಳ ತಿಂದ ನಾನು
ಬಿಡುವೆನೀ ದಿನ ಒಂದನು,
ಪಾಪ ಹಸು ಬಡಪಾಯಿ ಹೋಗಲಿ,
ಕಂದ ಕಾಣಲಿ ತಾಯನು.

ಬಾಳುವಾಸೆಯು ಯಾರಿಗಿಲ್ಲ
ಎಂದು ಯೋಚಿಸಿತಾ ಹುಲಿ,
ಸುಳ್ಳ ಹೇಳದೆ ನಿಜವ ನುಡಿವರೆ
ಎಂದು ನಕ್ಕಿತು ಹುಲಿ

ಹೀಗೆ ಅಂದುಕೊಂಡ ಹುಲಿ ವಾಪಸು ಬರುವ ಗೋವನ್ನ ಕಂಡಾಗ ‘ಅದಕೆ ಉಡುಗಿತ್ತು ಎಲ್ಲ ಬಲವು’ ಎಂದೇ ಅದರ ಪರಿವರ್ತನೆಯನ್ನ ಶುರು ಹಚ್ಚಿಕೊಂಡಿದ್ದಾರೆ. ಮಾನವನ ದ್ವಂದ್ವಗಳಿಗೆಲ್ಲ ರೋಸಿ ಪ್ರಾಣಿಗಳೆಲ್ಲ ಸಭೆಸೇರುವ ಕಥೆಯೊಂದು ಗೀತೆಗೆ ವಸ್ತುವಾದರೆ ಗಣಪನ ನಾನಾಬಗೆಯ ತುಂಟಾಟಗಳು ಇನ್ನೊಂದು ದೀರ್ಘ ರಚನೆಗೆ ವಸ್ತುವಾಗಿವೆ.