‘ಅಜ್ಜೀ ಅಜ್ಜೀ, ಅಜ್ಜೀದೊಂದ್ ಕೌದಿ !, ಕೌದೀಗೊಂದ್ ಹುಡಿಗಿ ! ನಡುವೊಂದ್ ಟುಣಕ್ ಟುಣಕ್ ಬಾಲದ ಮರಿ !, ಎನ್ನುವ ಈ ಪ್ರಬಂಧದ ಲೇಖಕನ ಬಲು ದೀರ್ಘದ ರಚನೆ ಜನಪದ ಭಾಷೆ, ಲಯಗಳಲ್ಲಿಯೇ ವಿಶೇಷವಾಗಿ ಕಟ್ಟಿಕೊಂಡಿರುವುದನ್ನು ಇಲ್ಲಿ ಹೇಳಬಹುದು. ಇಲ್ಲಿ ನಿರೂಪಕ ಮತ್ತು ಕೇಳುವ ಮಕ್ಕಳ ನಡುವೆ ಸಂಭಾಷಣೆ ನಡೆಯುತ್ತ ಕತೆ ಸಾಗುತ್ತದೆ, ಕತೆಯನ್ನ ಅನುಸರಿಸಿ ಮಕ್ಕಳ ನಾನಾ ಭಾವಗಳು, ಪ್ರತಿಕ್ರಿಯೆಗಳು, ಇವಕ್ಕೆ ನಿರೂಪಕನ ಪ್ರತಿಕ್ರಿಯೆಗಳು ಜೀವಂತಿಕೆಯನ್ನ ನೀಡಿವೆ. ಮುಖ್ಯವಾಗಿ ಜನಪದದಲ್ಲಿ ಪ್ರಚುರವಾಗಿರುವ, ಮಕ್ಕಳ ಕುತೂಹಲ ತಣಿಸುವ ಕತೆಯನ್ನ ಆಯ್ದುಕೊಳ್ಳುವುದು, ಅದನ್ನ ಮಕ್ಕಳಿಗೆ ಹೆಗೆಲ್ಲ ಹಿಡಿಸುವ ಹಾಗೆ ಹೊಸತಾಗಿ ನಿರೂಪಿಸುವುದು, ಮಕ್ಕಳ ನಡುವೆಯೆ ಅದಕ್ಕೊಂದು ಅರ್ಥವಂತಿಕೆಯನ್ನ ರೂಪಸಿಕೊಳ್ಳುವುದು ಮುಂತಾಗಿ ಇಲ್ಲಿ ಪ್ರಯೊಗಿಸಿಕೊಳ್ಳಲಾಗಿದೆ. ದೀರ್ಘವಾದ ರಚನೆಯಲ್ಲಿ ಜನಪದದ ಸಾಂಪ್ರದಾಯಿಕ ಲಯಗಳನ್ನ ಬಳಸುವ ಪ್ರಯೊಗ ಇಲ್ಲಿ ವಿಶೇಷವಾಗಿ ಕಂಡಿದೆ. ಹಗೆಯೆ ನಾಟಕೀಯತೆಯೂ ಉದ್ದಕ್ಕೂ ಸಾಧ್ಯವಾಗಿದೆ. ಉದಾಹರಣಗೆ ಅಲ್ಲಿನ ಕೆಲ ಸಾಲುಗಳನ್ನ ನೋಡಬಹುದು :

ಮುದುಕಿ : ಪುಟಾಣಿ ಇಲಿಯೆ
ಪುಟಾಣಿ ಇಲಿಯೆ
ಸಾಸಿವೆ ಇಲಿಯೆ
ಜೀರಿಗೆ ಇಲಿಯೆ
ಜೀರಿಗೆ ಇಲಿಯೆ
ಬೆರಗೀಲೆ ಮಾತಾಡೊ
ಬಲು ಬೆರಕಿ ಇಲಿಯೆ
ಏನಾಗಿದೆ ಏನಾಗಿದೆ
ಈ ನನ್ನ ತಲೆಗೆ ?
ಇಲಿ :    ಅದನೇನು ಕೇಳುವುದು
ಅದನೇನು ಹೇಳುವುದು
ಕೂಸು ಕಂದಮ್ಮಗಳು
ಕಿಲಕಿಲನೆ ನಕ್ಕಾವು
ಒಡೆದ ಮಸರಿನ ಗಡಿಗಿಯಾಗಿದೆ ತಲೆಯು
ಯಾರೂ ನೋಡಿದರೂ
ಒಡನೆ ನುಡಿಯುವರು
ಮುದುಕಿ : ಎಷ್ಟು ಚೆಂದಾಗಿ
ಹೇಳಿ ಬಿಟ್ಟೆಯ ಕಂದ
ನಿನ್ನ ಮಾತಿನಲಿ
ಅದು ಏನು ಅಂದ !
ಇನ್ನೊಂದ ಕೇಳುವೆನು
ಹೇಳುವೆಯಾ ಮುದ್ದ ?
ಇಲಿ :    ಓ ಹೊಯ್…
ಕೇಳು ಕೇಳೆಲೆ ಮುದಕಿ
ಕೇಳಲಿಕೆ ನೀನಿರುವಿ
ಹೇಳಲಿಕೆ ನಾನಿರುವೆ
ಯಾವ ಮಾತನೆ ಕೇಳು
ಎಡೆಬಿಡದೆ ಹೇಳುವೆನು
ತಡವೇಕೆ ತಡವೇಕೆ
ಒಗಟಿದ್ದರೂ ಇರಲಿ
ಒಡೆದು ಬೀಸಾಕುವೆನು !

ಹೀಗೆಯೇ ಪ್ರಚುರವಾಗಿರುವ ಗೋವಿನ ಹಾಡಿನ ಕತೆಯನ್ನೇ ಚಿಗುರೆಯ ಸಂದರ್ಭದಲ್ಲಿ ಕಾಣುವ ದೀರ್ಘದ ಕಥನವನ್ನ ‘ಹುಲ್ಲೆ ಹಾಡು’ ವಿನಲ್ಲಿ ಕುರುವ ಬಸವರಾಜ ನೀಡಿದ್ದಾರೆ.

ಕಥನದ ಬಗೆಗಳು ಮಕ್ಕಳಿಗೆ ತುಂಬ ಹಿಡಿಸುವಂಥವು ಎಂಬುದರಲ್ಲಿ ಸಂಶಯವಿಲ್ಲ. ಶಿಕ್ಷಕ ಸಮುದಾಯದಲ್ಲಿ ಹಳೆಯ ಸರಕೇ, ಜನಪದ ಮಾದರಿಯವು, ಪಂಚತಂತ್ರ ಅನುಸರಿಸಿದ ಪ್ರಾಣಿ ಕತೆಗಳನ್ನೇ ಉಳ್ಳವೇ, ಯಾವ ವಿಶೇಷತೆಗಳಿಲ್ಲದೆ ನೇರ ನಿರುಪಣೆಯಲ್ಲಿ ನೀಡಿದುದರಿಂದ ಬೇರೆಯಾಗಿ ಹೊಸ ಗಾಲದಲ್ಲಿ ಕಥನ ಮಾದರಿಗಳು ಒಂದಿಷ್ಟಾದರೂ ಹೊಸತಿಗೆ ಹೊರಳಿವೆ ಎನ್ನಬಹುದು. ಮುಖ್ಯವಾಗಿ ಅಭಿವ್ಯಕ್ತಿ ಬಗೆಯಲ್ಲಿ ಲವಲವಿಕೆಯನ್ನ ತೋರಿವೆ ಎನ್ನಬಹುದು. ಇಷ್ಟು ಮಾತ್ರ ಖಂಡಿತ ಹೇಳಬಹುದು, ಕಥನ ಕವಿತೆಗಳನ್ನ ಹೊಸಗಾಲ ಬಿಟ್ಟುಕೊಡದೆ ತನ್ನೊಂದಿಗೆ ಇಟ್ಟಿರುವುದರ ಜೊತೆಗೆ ಹೊಸ ಸೃಷ್ಟಿಗೆ ತವಕಿಸಿದೆ ಎಂದು.

ಪುಟಾಣಿಗಳಿಗೆ

ಅದೇಕೋ ಕನ್ನಡ ಮಕ್ಕಳ ಸಾಹಿತ್ಯಲೋಕ ಶಾಲಾ ಪೂರ್ವದ, ಅದೇ ಅಕ್ಷರಲೋಕಕ್ಕೆ ಕಣ್ಣುತೆರೆಯುತ್ತಿರುವ ಪುಟಾಣಿಗಳ ವಿಷಯದಲ್ಲಿ ಒಂದಿಷ್ಟು ಮೌನವನ್ನೇ ತಾಳುತ್ತ ಬಂದಿದೆ. ಜಿ ಪಿ ರಾಜರತ್ನಂ ಈ ನಿಟ್ಟಿನಲ್ಲಿ ಒಂದಿಷ್ಟು (ಅವರು ಶಿಶು ವಿಹಾರದಲ್ಲಿ ಮಕ್ಕಳೊಡನೆ ಇದ್ದುದರಿಂದ) ಗಮನ ಹರಿಸಿದುದನ್ನ ಬಿಟ್ಟರೆ, ಆ ಕಡೆ ಯಾರೂ ಗಮನವನ್ನೇ ಅಷ್ಟಾಗಿ ಹರಿಸಲಿಲ್ಲ. ಶಿಕ್ಷಕ ಸಮುದಾಯದ ಕವಿಗಳೂ ಈ ಕಡೆಗೆ ವಿಶೇಷದ ಬರವಣಿಗೆಯನ್ನೇನೂ ಮಾಡಲಿಲ್ಲ. ಆದರೆ ಹೊಸಗಾಲದ ಕವಿ ಮನಸ್ಸು ಆ ಕಡೆಗೂ ಹೊರಳಿದುದು ವಿಶೇಷವಾದುದು. ಸುಮತೀಂದ್ರ ನಾಡಿಗರದೇ ಇಲ್ಲಿ ವಿಶೇಷ ಫಸಲು. ಮೂರು ಸಂಕಲನಗಳನ್ನ ಅವರು ತಂದಿದ್ದಾರೆ. ಎಡ್ವರ್ಡ್ ಲಿಯರ್‌ನ ನಾನ್ಸೆನ್ಸ್ ದಾರಿ ಹಿಡಿದ ಅನೇಕ ಬಗೆಯವು ಇಲ್ಲಿ ಕಾಣುತ್ತವೆ, ಹಾಗೆಂದು ಅವರೇ ಹೇಳಿಕೊಂಡಿದ್ದಾರೆ. ಪುಟ್ಟ ಮಕ್ಕಳು ತಟಕ್ಕನೆ ಹಿಡಿದುಕೊಳ್ಳುವ ಲಯ, ಅದಕ್ಕೆ ಪೋಷಕವಾದ ಅನುರಣೆಯ, ಪ್ರಾಸದ ಶಬ್ದಗಳು, ‘ಡಿಡಿಲಕ್’, ‘ಡಕ್ಕಣಕ’, ‘ಚಿಲಿಮಿಲಿ ಚಿಲಮಿಲಿ ಚಿಂಚೋಣ’, ‘ಚಕಮಕ ಚಕಮಕ ಚೆಲ್ಲಾಣ’ ಅಂಥ ಧ್ವನಿರಂಜನೆಯ, ಮೋಜಿನ ಪದಗಳು, ಕುಣಿತ ಮಣಿತಕ್ಕೆಳಸುವ ಬಗೆ, ಎಲ್ಲ ಕನ್ನಡ ಶಿಶು ಸಾಹಿತ್ಯಕ್ಕೆ ಹೊಸ ದಾರಿ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ ಎಂದರೆ ತಪ್ಪಲ್ಲ.

ಢಮ್ಮ ಢಮ್ಮ ಢಮ್ಮ
ನನ್ನ ತಮ್ಮ ಡುಮ್ಮ
ನಂಗೆ ಅವ್ನು ಇಷ್ಟಾ ಆದ್ರೂ
ಎತ್ತೋಕಾಗಲ್ಲಮ್ಮ
ನೀನೆ ಎತ್ಕೊಳ್ಳಮ್ಮ
***
ಇಡೀ ಮಾವಿನ್ ಹಣ್ಣು ತಿಂದು
ನುಂಗಿ ಬಿಟ್ಟ ಓಟೆ
ಓಟೆ ಒಳ್ಗೆ ಕೂತ್ಕೊಂಡಿತ್ತು
ಟಿಪ್ಪೂ ಸುಲ್ತಾನ್ ಕೋಟೆ

ಹೀಗೆಯೆ ಎನ್ ಶ್ರೀನಿವಾಸ ಉಡುಪ, ಚಿಂತಾಮಣಿ ಕೊಡ್ಲಕೆರೆ, ತಮ್ಮಣ್ಣ ಬೀಗಾರ ಆಪಾ ಗಮನ ಸೆಳೆಯುವ ಹಲಬಗೆಯ ಪ್ರಯತ್ನ ಮಾಡಿದುದು ಕಾಣುತ್ತದೆ..

ಬೆಕ್ಕಿನ ಮರಿ ಹೊಲಿತಾ ಇದೆ
ಒಂದು ಹೊಸ ಅಂಗಿ
ನಿದ್ದೆಗೆಟ್ಟು ಹೊಲಿತಾ ಇದೆ
ಪಕ್ದಲ್ಲದರ ತಂಗಿ

ಅಕ್ಕ ತಂಗಿ ಹಾಕ್ಕೊಂಡ್
ಎಲ್ಲಿಗ್ಹೋಗ್ತಾರೆ?
ಕೈ ಕೈ ಹಿಡಿದು ಮೆಜೆಸ್ಟಿಕ್
ಪೇಟೆ ತಿರುಗ್ತಾರೆ!
ಚಿಂತಾಮಣಿ ಕೊಡ್ಲಕೆರೆ

ಪೆನ್ಸಿಲ್ಲಣ್ಣನ ಮೊದಲನೆ ಶತ್ರು
ಅಳಿಸೋ ರಬ್ಬರ‍್ರು
ತಪ್ಪು ಬರೆದರೆ ಒಪ್ಪೋದಿಲ್ಲ
ಎನೇ ಹೇಳಿದ್ರೂ!

ಪೆನ್ಸಿಲ್ಲಣ್ಣನ ಎರಡನೆ ಶತ್ರು
ಹೆರೆಯೋ ಮೆಂಡರ‍್ರು
ಮೊಂಡಾಗಿರಲು ಬಿಡೋದೆ ಇಲ್ಲ
ಎಎಷ್ಟೇ ಬಡಕೊಂಡ್ರೂ!
ಎನ್. ಶ್ರೀನಿವಾಸ ಉಡುಪ

ಒಟ್ಟಾರೆಯಾಗಿ ಹೊಸಗಾಲದ ಮಕ್ಕಳ ಪದ್ಯ ಸಾಹಿತ್ಯ ನವೋದಯದ ಹಿರಿಯರ ನಂತರ ಕಳೆದುಹೋದ ತನ್ನ ಜೀವಂತಿಕೆಯನ್ನ ಮರಳಿ ಪಡೆದಿದೆ ಎನ್ನ ಬಹುದು, ಅಷ್ಟೇ ಅಲ್ಲ, ಅದು ಮಕ್ಕಳ ಮನೋಲೋಕ ತಣಿಸುವ ನಿಟ್ಟಿನಲ್ಲಿ ಹೊಸ, ಇನ್ನೂ ಗಟ್ಟಿಯಾದ ಹೆಜ್ಜೆಗಳನ್ನೇ ಇಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ವಿ.ಕೃ. ಗೋಕಾಕರು ಒಂದು ಕಡೆ ಹೇಳಿದ ‘ಇಂಥ ಸಾಹಿತ್ಯದಲ್ಲಿಯೂ ಮುಖ್ಯವಾಗಿ ಬೇಕಾದದ್ದು ಸಾಹಿತ್ಯ ಗುಣವೆಂಬುದನ್ನು ನಾವು ಒಮ್ಮೊಮ್ಮೆ ಮರೆಯುತ್ತೇವೆ. ಸುಲಭ ಭಾಷೆ, ವಿಷಯ ಎಷ್ಟು ಕಠಿಣವಾದರೂ ಅದನ್ನು ಸಜೀವವಾಗಿಸಿ ಅದಕ್ಕೆ ಅರ್ಥವ ವಿವಿಧ ಸ್ತರಗಳನ್ನು ಕಲ್ಪಿಸಿಕೊಡುವ ರೂಪಕತೆ, ಪ್ರಸಾದ ಗುಣ, ಇದು ಬಾಲ ಸಾಹಿತ್ಯದಲ್ಲಿ ಅವಶ್ಯವಾಗಿ ಬೇಕು’ ಎಂದಿರುವ ಮಾತುಗಳನ್ನ ಸಾರ್ಥಕಗೊಳಿಸಿರುವುದಷ್ಟೇ ಅಲ್ಲ, ಮಕ್ಕಳ ಲೋಕದ ಹೊಸ ಸಾಧ್ಯತೆಗಳಿಗೆ, ಹೊಸ ಅಗತ್ಯಗಳಿಗೆ ಚಾಚುವ ಹೊಳಹುಗಳನ್ನೂ ಸೂಚಿಸಿದೆ ಹೊಸಗಾಲದ ಪದ್ಯಸಾಹಿತ್ಯ.

ಗದ್ಯ ಬರವಣಿಗೆ

ಗದ್ಯ ಸಾಹಿತ್ಯ, ಕತೆ, ಕಾದಂಬರಿಗಳಾಚೆ ಕಾಣಿಸಿಕೊಳ್ಳಲೇ ಇಲ್ಲವಷ್ಟೇ ಅಲ್ಲ, ತೀರ ವಿರಳ ಸಂಖ್ಯೆಯಲ್ಲಿ ಬರವಣಿಗೆಯನ್ನ ಕಂಡಿತು. ಹಾಗೆ ನೋಡಿದರೆ ಇಲ್ಲಿಯವರೆಗಿನ ಮಕ್ಕಳಿಗಾಗಿರುವ ಗದ್ಯ ಸಾಹಿತ್ಯ ಬರಿ ಜನಪದ, ಪುರಾಣದ ಸರಕಿನ ಮೆಲೆಯೇ ಅವಲಂಬಿಸಿಕೊಂಡಿತ್ತು. ಅದು ಈಗ ತಪ್ಪಿತು ಎನ್ನುವುದು ಸಮಾಧಾನ ಪಡಬೇಕಾದ ಸಂಗತಿ. ಮಕ್ಕಳಿಗೆ ಅದ್ಭುತ ಕಲ್ಪನೆಗಳ, ಅವಾಸ್ತವ ಸಂಗತಿಗಳ ಜಗತ್ತು ಯಾವತ್ತಿದ್ದರೂ ಬೇಕಾದ ಸಂಗತಿಯೇ ಆದರೂ ಈಗಾಗಲೇ ಪರಂಪರೆಯಿಂದ ಬಂದ ಸರಕಿನಾಚೆ ಈ ನಿಟ್ಟಿನಲ್ಲಿ ಯಾವುದೇ ಹೊಸ ಪ್ರಯತ್ನಗಳಾಗಲೇ ಇಲ್ಲ, ಹೊಸ ಸಾಧ್ಯತೆಗಳಿಗಾಗಿ ತುಡಿಯಲೇ ಇಲ್ಲ. ಆದರೆ ವಾಸ್ತವ ಮಾದರಿಯ ಹೊಸ ಮಗ್ಗಲು ಮಕ್ಕಳ ಕಥಾಲೋಕಕ್ಕೆ ಸೇರ್ಪಡೆಯಾಗಿ ಬೆಳೆಯುತ್ತಿರುವ ಮಕ್ಕಳಿಗೆ ಬೇಕಾದ ಆಹಾರವನ್ನ ನೀಡಿತು. ಹಾಗೆ ನೋಡಿದರೆ ಒಂಬತ್ತು ಹತ್ತು ವಯೋಮಾನದ ಆಚೆಯ ಮಕ್ಕಳ ಅಭಿಲಾಶೆಗಳನ್ನ ತಣಿಸುವ ಬರವಣಿಗೆ ನಮ್ಮಲ್ಲಿ ಅಷ್ಟಾಗಿ ಆಗಲೇ ಇಲ್ಲ. ತಮ್ಮ ಸುತ್ತಲಿನ ವಾಸ್ತವವನ್ನ ನೋಡತೊಡಗುವುದು, ಆ ಕುರಿತ ಹಲವಾರು ಪ್ರಶ್ನೆಗಳನ್ನ ಕೇಳಿಕೊಳ್ಳುತ್ತಿರುವುದು, ಕುತೂಹಲ ತಳೆಯುತ್ತಿರುವದು, ಅನೇಕ ಬಗೆಹರಿಯದ ಗೊಂದಲಗಳಿಗೆ ತೂರಿಕೊಳ್ಳುವುದು ಇವೆಲ್ಲ ಹೈಸ್ಕೂಲು ಹಂತಕ್ಕೆ ಬರುತ್ತಿರುವ ಮಕ್ಕಳಲ್ಲಿ ಕಾಣತೊಡಗುತ್ತವೆ. ಇಂಥ ವಯೋಮಾನಕ್ಕೆ ಬೇಕಾಗುವ ಓದನ್ನ ಪಾಶ್ಚ್ಯಾತ್ಯ ರಾಷ್ಟ್ರಗಳಲ್ಲಿ ವಿಪುಲವಾಗಿಯೇ ಕಾಣತೊಡಗಿದ್ದೇವೆ. ಆದರೆ ನಮ್ಮಲ್ಲಿ ಕಾವ್ಯವಂತೂ ಆ ನಿಟ್ಟಿನಲ್ಲಿ ಇನ್ನೂ ತೆರೆದುಕೊಳ್ಳಲೇ ಇಲ್ಲ, ಗದ್ಯ ಸಾಹಿತ್ಯ ಮಾತ್ರ ಒಂದಿಷ್ಟು ಹೊರಳಿತು. ಅದೇ ಈ ಹೊಸಗಾಲದ ಸಾಧನೆ ಎನ್ನಬಹುದು.

ನಾ ಡಿಸೋಜ ಈ ನಿಟ್ಟಿನಲ್ಲಿ ಪ್ರಮುಖವಾದ ಹೆಸರು. ಸದ್ದುಗದ್ದಲವಿಲ್ಲದೆ, ಹಲವಾರು ಕಾದಂಬರಿಗಳನ್ನ ಪ್ರಸಿದ್ಧಿಸಿದ ಅವರು ಸೊಗಸಾದ, ಗಂಭೀರ ಓದಿಗೆ ಮಕ್ಕಳನ್ನ ತೊಡಗಿಸುವ, ಮಕ್ಕಳ ಗ್ರಹಿಕೆಯಲ್ಲಿಯೇ ಸಾಧ್ಯವಾಗುವ ಬರಹಗಳನ್ನ ನೀಡಿದವರು. ಇವತ್ತಿನ ಮಕ್ಕಳು ತಮ್ಮ ಸುತ್ತಲಿನ ಪರಿಸರದಲ್ಲಿ ಏನೆಲ್ಲ ಕಾಣುತ್ತಿದ್ದಾರೆ, ತಮ್ಮದೇ ಆದ ರೀತಿಯಲ್ಲಿ ಹೇಗೆ ಪ್ರತಿಕ್ರಿಯೆ ತೋರಲು ತವಕಿಸುತ್ತಾರೆ, ದೊಡ್ಡವರ ಸಂಗತಿಗಳನ್ನ ಬಿಡುಗಣ್ಣಿನಿಂದ ಕಾಣುತ್ತಿರುವುದು, ಉತ್ಸಾಹ, ಹತಾಷೆ, ನೋವುಗಳಿಗೆ ಒಳಗಾಗುವ ಹಲವಾರು ಬಗೆಗಳು ಅವರ ಕತೆಗಳಲ್ಲಿ ಕಾಣುತ್ತವೆ. ‘ಬೆಳಕಿನೊಡನೆ ಬಂತು ನೆನಪು’ ಮಲೆನಾಡಿನಲ್ಲಿ ವಿದ್ಯುತ್ ಸ್ಥಾವರ ಬಂದಾಗಿನ ಸಂದರ್ಭದ ಚಟುವಟಿಕೆಗಳು, ಅದರ ಮರೆಯಲ್ಲಿಯೇ ನಡೆಯುವ ಅಮಾನವೀಯ ಸಂಗತಿಗಳು, ಗೊಂದಲಕ್ಕೆ ದೂಡಿಬಿಡುವ ಹಿರಿಯರ ನಡೆವಳಿಗಳು, ಪರಿಸರದೊಡನೆಯ ಮನುಷ್ಯನ ವ್ಯವಹಾರಗಳು ಮಕ್ಕಳ ಕಣ್ಣಿಂದ ಹೇಗೆಲ್ಲ ನಿರುಕಿಗೆ ಒಳಗಾಗುತ್ತವೆ ಎಂಬುದನ್ನ ವಿವರವಾಗಿ ತೆರೆದಿಡುವ ಕಾದಂಬರಿ. ಲೇಖಕರೇ ಹೇಳುವಂತೆ ಅವರ ಬಾಲ್ಯದ ನೆನಪುಗಳವು. ರಾಮು ಮಾಮಾನ ನೆನಪುಗಳಾಗಿ ‘ಝಗ್’ ಅಂತ ಬೆಳಕಿನೊಡನೆ ಬರುವುದರೊಂದಿಗೆ ಕತೆಯಾಗಿ ಹರಿದಿರುವ ಇಲ್ಲಿನ ಬರವಣಿಗೆ ಓದಿಸಿಕೊಂಡು ಹೋಗುವಂಥದು, ಜೋಗದಂತಹ ಮಲೆನಾಡ ಪ್ರದೇಶದ ಕಣಿವೆ, ದಟ್ಟವಾದ ಕಾಡು, ಮಧ್ಯ ಅಲ್ಲಲ್ಲಿ ಹಾವಿನ ಹಾಗೆ ಹರಿದು ಹೋಗಿರುವ ದಾರಿ, ದಿಗಿಲು, ಆಶ್ಚರ್ಯ, ಸಂತಸ ಎಲ್ಲವನ್ನ ಉಂಟುಮಾಡುವುದರೊಂದಿಗೆ ರಾಮುವಿಗೆ ಅಲ್ಲಿ ಏನೆಲ್ಲ ನಡೆಯುತ್ತದೆ ಎನ್ನುವ ಕುತೂಹಲವನ್ನೂ ಉಂಟು ಮಾಡುತ್ತದೆ. ವಿದ್ಯುತ್ ಉತ್ಪಾದನೆಯ ಕಾರ್ಯ ನಡೆದ ಅಂದಿನ ದಿನಗಳು, ದೊಡ್ಡ ದೊಡ್ಡ ಕಟ್ಟಡ ಕಟ್ಟುವ ಕೆಲಸ, ಮೇಲೆ ಕೆಳಗೆ ಇಳಿಯುವ ಟ್ರಾಲಿ, ಟ್ರಾಲಿಯಿಂದ ಬೀಳುವ ಸಿಮೆಂಟು, ಎಲ್ಲ ನೋಡುವಂತೆ ಮಾಡುತ್ತಿದ್ದರೆ ಕೆಲಸದಾಳು ತಂದುಕೊಡುವ ಜೇನು ತುಪ್ಪ, ರಾಮುವಿನ ತಂದೆಯನ್ನ ಕಾಡಾನೆಗಳಿಂದ ಪಾರು ಮಾಡುವ ರೀತಿ, ಕೆಲಸದಾಳು ಅಡವಿ ಕಾಲುಜಾರಿ ನದಿಯಲ್ಲಿ ಬಿದ್ದು ಸತ್ತುಹೋಗುವ ಪ್ರಸಂಗ ಎಲ್ಲವನ್ನ ತುಂಬಿಕೊಂಡ ರಾಮುವಿನ ಮನೋಲೋಕದಿಂದ ಕಾದಂಬರಿ ಸಮೃದ್ಧ ಜಗತ್ತನ್ನ ಮಕ್ಕಳಿಗೆ ನೀಡುತ್ತದೆ. ಅವರ ‘ಗೋಪಿಯ ಗೊಂಬೆ’ ಗೊಂಬೆಯ ಮೂಲಕವೆ ತೆರೆದುಕೊಳ್ಳುವ ಕತೆ ಗೋಪಿಯ ಬಾಲ್ಯದಲ್ಲಿ ಗೊಂಬೆ ವಹಿಸುವ ಭಾವಪೂರ್ಣ ಪಾತ್ರದ ಸುತ್ತ ಹೆಣೆದುದಾಗಿದೆ. ಅಂಗಡಿಯಲ್ಲಿ ಕಾಯುತ್ತ ಕುಳಿತಿದ್ದ ಗೊಂಬೆ ಸಿರಿವಂತಿಕೆಯ, ಕೃತಕ ಆಡಂಬರದ ಹೆಣ್ಣುಮಗಳೊಬ್ಬಳ ಮನೆಗೆ ಹೋಗಿ ಅಲ್ಲಿ ಶೋಕೇಸಿನಲ್ಲಿ ಬಂದಿಯಾಗುತ್ತದೆ. ಅವಳ ಅಕ್ಕನ ಮಗ ಗೋಪಿ ಆ ಮನೆಗೆ ಬಂದು ಗೊಂಬೆಗೆ ಜೀವಂತ ಲೋಕದ ಸ್ಪರ್ಶ ಒದಗುತ್ತದೆ. ಗೋಪಿಯ ಬಾಲ್ಯ ಆ ಗೊಂಬೆಯಿಂದ ಕಲ್ಪನಾಮಯವಾಗಿ ವಿಶಿಷ್ಟವಾಗುತ್ತದೆ. ಅದನ್ನೊಮ್ಮೆ ಕೆರೆಯ ದಂಡೆಯಲ್ಲಿ ಕಳೆದುಕೊಂಡ ಆತ ಕಷ್ಟಪಟ್ಟು ಹುಡುಕುವಲ್ಲಿ ಯಶಸ್ವಿಯಾಗುತ್ತಾನೆ. ಜೊತೆಗೆ ವಿಭಿನ್ನ ಬದುಕಿನ ಮನಸ್ಸುಗಳನ್ನೂ ಅರಿಯುತ್ತಾನೆ. ಅವರ ‘ಕಾಡಾನೆಯ ಕೊಲೆ’ ಆನೆಯ ದಂತ ಚೋರರನ್ನು ಪತ್ತೆ ಹಚ್ಚು ಮಾಮೂಲಿ ಸಾಹಸದ ಕತೆಯಾಗಿರದೆ ಕಾಡಿನ ನಡುವಿನ ಮಕ್ಕಳ ವಿಶಿಷ್ಟವಾದ ಅನುಭವ ಜಗತ್ತನ್ನೇ ನಮ್ಮ ಮುಂದಿಡುತ್ತದೆ. ಕಾದಂಬರಿ ನೀಡುವ ವಿವರಗಳಿಂದ, ಅನುಭವದ ಸಾಂದ್ರತೆಯ ಚಿತ್ರಣದಿಂದ ಒಂದು ಬಗೆಯ ಲವಲವಿಕೆಯ ಓದು ಮಕ್ಕಳಿಗೆ ಲಭ್ಯವಾಗುತ್ತದೆ. ಕಾಡಿನ ನಡುವೆ ಬೆಳೆಯುವ ನಾಲ್ವರು ಮಕ್ಕಳು ಭಯ, ಕುತೂಹಲಗಳೊಂದಿಗೆ ನಿಧಾನ ಕಾಡಿನ ಬದುಕಿಗೆ ಹೊಂದಿಕ್ಕೊಳ್ಳುತ್ತ ಹೋಗುತ್ತಾರೆ. ಗೋಪಿಯ ಅಜ್ಜ ಈ ಮಕ್ಕಳಲ್ಲಿ ಪ್ರೀತಿ, ಧೈರ್ಯ ತುಂಬುತ್ತಾನೆ. ಆನೆಯೊಂದನ್ನ ಪ್ರೀತಿಸಿದ ಈ ಮಕ್ಕಳು ಅದು ಒಂದು ದಿನ ಗುಂಡಿಕ್ಕಿ ಕೊಲ್ಲಲ್ಪಟ್ಟುದನ್ನ ಕಂಡು ಬೇಸರಗೊಳ್ಳುತ್ತಾರೆ. ಕಳ್ಳರನ್ನ ಪತ್ತೇ ಹಚ್ಚಲು ಸಾಹಸಕ್ಕೆ ಮುಂದಾಗುತ್ತವೆ.

ಅವರ ‘ಆನೆ ಬಂತೊಂದಾನೆ’, ವಿನು, ಸುನ್ನಿ ಮತ್ತು ಗೆಳೆಯರು’ ಹೀಗೆಯೇ ಒಳ್ಳೆಯ ಓದನ್ನ ನೀಡುವ ಕೃತಿಗಳು. ಈಚೆಗೆ ಬಂದಿರುವ ‘ಹಕ್ಕಿಗೊಂದು ಗೂಡು ಕೊಡಿ’ ಕೂಡ ಗಮನಸೆಳೆಯುವ ಕೃತಿ. ಹೀಗೆ ಅನೇಕ ಕೃತಿಗಳನ್ನ ಅವರು ನೀಡಿದ್ದಾರೆ. ಪತ್ರಿಕೆಗಳ ಮಕ್ಕಳ ಕಾಲಮ್ಮಿನಲ್ಲಿ ಒದಗಿಸುವ ಕಿರು ಅವಕಾಶಕ್ಕಾಗಿ ತಕ್ಕದಾಗಿಸಿಕೊಂಡು ಸಣ್ಣಕಥೆಗಳನ್ನೂ ಹಲವಾರು ಅವರು ರಚಿಸಿದ್ದಾರೆ. ಎಲ್ಲ ಕಡೆಯಲ್ಲಿಯೂ ಮಕ್ಕಳ ಸಂವೇದನಾಶೀಲ ಮನಸ್ಸು ಹರವಿಕೊಂಡಿರುವುದು ಕಂಡುಬರುತ್ತದೆ. ಜಾನಪದ ಪರಂಪರೆಯ, ಪುರಾಣದ ಕಥಾಲೋಕದಿಂದ ಕನ್ನಡ ಮಕ್ಕಳ ಕಥಾಲೋಕವನ್ನ ಇಂದಿನ ಮಕ್ಕಳಿಗಾಗಿ ವಾಸ್ತವದ ಹಿನ್ನೆಲೆಯಲ್ಲಿ ಢಾಳಾಗಿ ಕಾಣಸಿದವರು ಡಿಸೋಜ ಅವರೇ ಅಂದರೆ ತಪ್ಪಾಗಲಾರದು.

ಶಶಿಧರ ವಿಶ್ವಾಮಿತ್ರ ಮಕ್ಕಳಿಗಾಗಿ ಕಾಡಿನ ಅನುಭವವನ್ನೇ ಇಟ್ಟುಕೊಂಡು ನೀಡಿರುವ ಮೂರು ಮಕ್ಕಳ ಕಿರು ಕಾದಂಬರಿಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಕಾಡಿನ ಪರಿಸರದ ದಟ್ಟ ವಿವರಗಳು, ಮಕ್ಕಳ ಕಣ್ಣಿಗೆ ನಿರುಕುವ ನೆಲೆಯ ವಸ್ತುವಿನ ಹರಹು, ಅದರ ಹಿನ್ನೆಲೆಯಲ್ಲಿ ಮಾನವನ ಇಂದಿನ ವಿಪರ್ಯಾಸಗಳು, ಕಾಡಿನೊಡನೆಯ ಅವನ ಸಲ್ಲದ ವ್ಯವಹಾರಗಳು ಎಳೆಯೆಳೆಯಾಗಿ ಮೂಡಿಬಂದಿವೆ. ಬಹು ಮುಖ್ಯವಾಗಿ ಅವರ ಭಾಷೆಯ ಸೊಗಡೇ ಆಕರ್ಷಿಸುವ ವಿಶೇಷದ್ದು. ಒಂದಿಷ್ಟು ಓದಿನ ಗೀಳು ಹತ್ತಿದ, ರುಚಿ ಹತ್ತಿದ ಮಕ್ಕಳಿಗೆ ಇಲ್ಲಿನ ಬರಹಗಳು ನಿಜಕ್ಕೂ ಒಳ್ಳೇ ಉಣಿಸನ್ನ ನೀಡಬಲ್ಲವು. ‘ಕತೆಯಾದ ಹುಲಿ’ಯಲ್ಲಿ ಕಾಡಿನಲ್ಲಿ ಒಂದು ಹುಲಿಗೆ ಸಿಕ್ಕಿದ ಮನುಷ್ಯ ಮತ್ತು ಹುಲಿಯ ನಡುವೆ ನಡೆಯುವ ಸಂಭಾಷಣೆ ಕಾಡಿನಾಚೆ ಏನೆಲ್ಲ ಆಗಿಬಿಟ್ಟೀತು ಎಂದು ಕಾಳಜಿ ಮಾಡುವ, ಕಾತರಿಸುವ ಮನಸ್ಸುಗಳಿಂದ ಊಹೆಯ ಕತೆಯಾಗಿ ಅರಳಿರುವಂಥದು. ಅವರ ‘ಮರಿ ಆನೆ’ಯಂತೂ ಮರಿ ಆನೆಯೊಂದು ತನಗರಿಯದ ಲೋಕದಲ್ಲಿ ಏನೇನೆಲ್ಲಕ್ಕೆ ಕುತೂಹಲಿಯಾಗಿ ಹೊರಟು, ಕೊನೆಗೆ ಮಾನವನ ಮೋಸದ ವ್ಯವಹಾರಕ್ಕೆ ತಿಳಿಯದೆ ಒಳಗಾಗಿ ಲೋಕವನ್ನೇ ತ್ಯಜಿಸುವ ಬಿಡದೇ ಓದಿಸಿಕೊಂಡು ಹೋಗುವ, ಅಲ್ಲಿನ ಪರಿಸರವನ್ನೆಲ್ಲ ಗಟ್ಟಿಯಾಗಿ ರವಾನಿಸುವ ಕಥಾ ಹಂದರದ್ದು. ‘ಬನದ ಹಕ್ಕಿಗಳು’ ಕೂಡ ಇಂಥದೇ, ಹಕ್ಕಿಗಳ ಸುತ್ತಲಿನ ಅನುಭವಕ್ಕೆ ಕತೆ ಹೆಣೆದುದು. ಅವರ ‘ಇರಾವತಿ’ ಹಿರಿಯರನ್ನ ಅಪೇಕ್ಷಿಸುವ ಗಂಭೀರ ಸಂಗತಿಗಳು ಹಲವಕ್ಕೆ ತೆರೆದುಕೊಂಡರೂ, ಮಕ್ಕಳಿಗಾಗಿಯೇ ಹೆಚ್ಚು ವಿವರಗೊಂಡ ಕೃತಿ. ಅವರೆಲ್ಲ ಕೃತಿಗಳಲ್ಲಿ ಕಾಡೇ ಮಾತನಾಡಿದಂತಿದೆ.

‘ಯಶೋವಂತನ ಯಶೋಗೀತೆ’, ‘ಚಿನ್ನದ ಹುಡುಗಿ ಚಿನ್ನಮ್ಮ’ ಅಂಥ ಕೃತಿಗಳನ್ನ ನೀಡಿರುವ ಡಾ. ಆರ್. ವಿ. ಭಂಡಾರಿ ಅವರ ಕೊಡುಗೆ ಮತ್ತೊಂದೇ ಬಗೆಯಲ್ಲಿ ಸೆಳೆಯುವಂಥದು. ಬಡತನ, ಕೆಳವರ್ಗ, ಜಾತೀಯ ಸಂಗತಿಗಳಿಂದ ನಲುಗುವ ಮಕ್ಕಳ ಅನುಭವಗಳಿಗೆ ದನಿಯಾದ ವಿರಳ ಬರವಣಿಗೆ ಭಂಡಾರಿ ಅವರದು. ಅವರ ಕತೆಗಳಲ್ಲಿ ಎಲ್ಲ ಅನುಕೂಲಗಳಿಂದ ವಂಚಿತವಾದ ಮಕ್ಕಳು ಕೇವಲ ನೋವು ಅನುಭವಿಸುವುದನ್ನ ಮಾತ್ರ ಚಿತ್ರಿಸದೆ, ಅವು ಬಂದುದನ್ನೆಲ್ಲ ಸಹಿಸಿಕೊಂಡು, ಹೇಗಾದರೂ ಮಾಡಿ ತಮ್ಮ ಕನಸುಗಳನನ್ನ ಸಾಕಾರಗೊಳಿಸುವ ಪ್ರಯತ್ನಶೀಲತೆ ಕಂಡುಬರುತ್ತದೆ. ಮೇಲ್ವರ್ಗದ ಪಾತ್ರಗಳನ್ನ ಕೇವಲ ಶೋಷಣಗೆ ಮಾತ್ರ ಇರಿಸದೆ, ಅನಿವಾರ್ಯಗಳ ಮಧ್ಯೆ ಸಹಾಯಕ್ಕೆ ಮುಂದಾಗುವ, ಪ್ರಯತ್ನಿಸುವ ಸಂಗತಿಗಳನ್ನ ಅವರ ಬರವಣಿಗೆಯಲ್ಲಿ ಕಾಣುತ್ತೇವೆ.

ನೀಲಾಂಬರಿ ಹೆಸರಿನಲ್ಲಿ ಬರೆಯುವ ಕೆ. ಪಿ. ಸ್ವಾಮಿ ಇನ್ನೊಂದು ಮಗ್ಗುಲಿನಿಂದ ಮಕ್ಕಳ ಕಥಾಲೋಕವನ್ನ ಹೊಸತಿಗೆ ಹೊರಳಿಸಿದವರು. ಹಾಸ್ಯವೇ ವಿಶೇಷವಾಗಿ ಅವರ ಸಾಮಗ್ರಿ. ಬಿಸಿಲಿನ ತಾಪದಿಂದ ಅರಣ್ಯ ಜೀವಿಗಳ ಬದುಕು ಅಸಹನೀಯವಾದಾಗ, ಸಿಂಹರಾಜ ತನ್ನ ಮಂತ್ರಿಗಳ ಜತೆಗೆ ಸೂರ್ಯನನ್ನ ಭೇಟಿ ಮಾಡಿದ್ದು, ಚಿತ್ರಕಲಾ ಪರಿಷತ್ತಿನ ಕಿಟಕಿಯಿಂದ ಇಣುಕಿದ ಗೊರವಂಕಿಗೆ ಅಲ್ಲಿ ಪುಟ್ಟ ಮರಿಗಳ ಸಹಿತ ತನ್ನದೇ ಗೂಡಿನ ಚಿತ್ರ ಕಾಣಿಸಿದ್ದು, ಎರಡುಸಲ ಪರೀಕ್ಷೆಯಲ್ಲಿ ಡುಮಕಿ ಹೊಡೆದ ರಂಗ ಮುಂದಿನ ಸಲ ಪಾಸು ಮಾಡಿಸುವಂತೆ ಗಣಪತಿಗೆ ದುಂಬಾಲು ಬೀಳುವುದು ಮುಂತಾಗಿ ನಾನಾ ಬಗೆಯ ರುಚಿಯ ಖಾದ್ಯದ ಜೊತೆಗೆ ಶಾಲೆ ಬಿಟ್ಟನಂತರ ರಸ್ತೆಯಲ್ಲಿ ವಾಹನಗಳಿಂದ ಲಿಫ್ಟ್ ಕೇಳುವ ಅನಂತನಿಗೆ ಆದ ಶಹರದ ವಾತಾವರಣದ ಅನುಭವದಂಥ ಗಂಭೀರ ಸಂಗತಿಗಳನ್ನೂ ನೀಡಿದವರು ನೀಲಾಂಬರಿ.

ವಿಜ್ಞಾನ ವಿಷಯಗಳನ್ನೇ ಆಧಾರವಾಗಿಟ್ಟುಕೊಂಡು ಹಲವು ಕತೆಗಳನ್ನ ನೀಡಿದ ರಾಜಶೇಖರ ಭೂಸನೂರಮಠರ ಕೊಡುಗೆಯೂ ಗಮನಿಸುವಂಥದು. ಕತೆಗಳನ್ನ ರೋಚಕವಾಗಿ, ಇಂದಿನ ವಾತಾವರಣದಲ್ಲಿ ಸೃಷ್ಟಿಸುವುದರೊಂದಿಗೆ ಫ್ಯಾಂಟಸಿಯನ್ನ ಸೊಗಸಾಗಿ ಅರಳಿಸಿ ಮಕ್ಕಳಿಗ ಖುಷಿಯ ಬರವಣಿಗೆ ನೀಡಿರುವವರು ಅವರು. ಗೀತಾ ಕುಲಕರ್ಣಿ ಅವರು ಬಹು ಹಿಂದೆಯೇ ಬರೆದ ‘ನೇಜಿ ಗುಬ್ಬಚ್ಚಿ’ ಮಲೆನಾಡಿನ ಮಕ್ಕಳ ಅನುಭವಗಳನ್ನ ಬಲು ಸೊಗಸಾಗಿ ನೀಡಿದ ಕೃತಿ. ಈಚೆಗೆ ಬಂದ ಬಸು ಬೇವಿನಗಿಡದ ಅವರ ‘ನಾಳೆಯ ಸೂರ್ಯ’ ಬಡತನದ ಅನುಭವಗಳನ್ನ ಹಿನ್ನೆಲೆಯಾಗಿರಿಸಿಕೊಂಡು, ಮಕ್ಕಳು ಅನುಭವಿಸುವ ಗೊಂದಲಗಳಿಗೆ ದನಿಯಾದ ಕೃತಿ. ಸಂಪಟೂರ ವಿಶ್ವನಾಥ ಮೊದಲಾಗಿ, ವಿರಳವಾಗಿಯಾದರೂ ಹಲವರು ವಾಸ್ತವ ಮಾದರಿಯ ಕತೆಗಳನ್ನ ಬರೆಯುತ್ತ ಕನ್ನಡ ಮಕ್ಕಳ ಕಥಾಜಗತ್ತಿಗೆ ಹೊಸ ಸ್ಪರ್ಶ ನೀಡುತ್ತಿದ್ದಾರೆ.

‘ಪೀಟರ್ ಪ್ಯಾನ್’ ಕನ್ನಡಿಸಿ ನೀಡಿದ ಡಾ. ಬಿ. ಜನಾರ್ದನ ಭಟ್, ಹಾಗೆಯೇ ವಿಶ್ವನಾಥ ಅಂಥವರು ಬೇರೆ ಭಾಷೆಗಳಿಂದ ಕನ್ನಡಕ್ಕೆ ಹೊಸ ಸಾಮಗ್ರಿ ತರುವ ವಿರಳ ಕೆಲಸ ಮಾಡುತ್ತಿದ್ದಾರೆ. ಅನುವಾದದಿಂದ ಕನ್ನಡಕ್ಕೆ ಹೊಸತು ಕಾಣಿಸುವಲ್ಲಿ ಎನ ಬಿ ಟಿ ಪುಸ್ತಕಗಳದೇ ದೊಡ್ಡ ಕೊಡುಗೆ. ಅನೇಕ ಹಿರಿಯ, ಖ್ಯಾತ ಲೇಖಕರು ಮಕ್ಕಳಿಗಾಗಿ ಬರೆದ ಕೃತಿಗಳು, ಅದೂ ಅಂದವಾಗಿ, ಮಕ್ಕಳಿಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿರುವುದು ಬಹು ದೊಡ್ಡ ಕೆಲಸ. ಕನ್ನಡದ ಮಕ್ಕಳ ಸಾಹಿತ್ಯದ ವಾತಾವರಣ ಈ ಪುಸ್ತಕಗಳ ಕಡೆಗೆ ಅಷ್ಟಾಗಿ ಆಸಕ್ತಿಯಿಂದ ನೊಡುತ್ತಿಲ್ಲ ಎನಿಸುತ್ತದೆ. ಇವು ಹಲವಾರು ಹೊಸ ಸಾಧ್ಯತೆಗಳನ್ನ, ಇಂದಿನ ಅಗತ್ಯಗಳನ್ನ ನಾನಾ ಬಗೆಯಲ್ಲಿ ಹೇಳುವ ಪ್ರಯತ್ನ ಮಾಡಿವೆ.

ಮಕ್ಕಳ ನಾಟಕ ಕ್ಷೇತ್ರವೂ ಆಸಕ್ತರು ಹಲವರಿಂದ ಗಮನ ಸೆಳೆಯುವಂತಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ರಂಗ ಪ್ರಯೋಗವನ್ನ ಗಮನದಲ್ಲಿರಿಸಿಯೇ ನಾಟಕಗಳು ರಚನೆಗೊಳ್ಳುತ್ತಿರುವುದು. ರಂಗಪ್ರಯೋಗಗಳನ್ನ ಮುಂದಿರಿಸಿಕೊಂಡೇ ಈ ಕೃತಿಗಳ ಕುರಿತು ಮಾತನಾಡುವುದು ಸಾಧುವಾದುದು. ಅನೇಕರು ಈ ನಟ್ಟಿನಲ್ಲಿ ತೊಡಗಿಕೊಂಡಿದ್ದರೂ ವೈದೇಹಿ ಹಾಗೂ ಎ. ಎಸ್. ಮೂರ್ತಿ ಅವರ ಹೆಸರುಗಳು ಮುಂಚೂಣಿಯವು. ಇವರಿಬ್ಬರೂ ಅನೇಕ ನಾಟಕಗಳನ್ನ ರಚಿಸಿದ್ದು, ಅವು ರಂಗ ಪ್ರಯೋಗಕ್ಕೂ ಒಳಗಾಗುತ್ತ ಬಂದಿವೆ. ಮಕ್ಕಳ ಸುತ್ತಲಿನ ಜಗತ್ತೇ ಇಲ್ಲಿ ಅನುಭವದ ಸಾಮಗ್ರಿ ಒದಗಿಸಿರುವುದು. ಪರಿಸರದ ಕಾಳಜಿ, ಮಕ್ಕಳು ಅನುಭವಿಸುವ ಅನೇಕ ಮನೋಗೊಂದಲಗಳು, ಎದುರಿಸುವ ಸಮಸ್ಯೆಗಳು, ಹಿರಿಯರ ನಡವಳಿಕೆಗಳು ಅನೇಕ ಸಲ ವ್ಯತಿರಿಕ್ತವಾಗಿರುವುದು ಮುಂತಾಗಿ ಅನೇಕಬಗೆಯ ವಸ್ತು ಪ್ರಪಂಚ ಇಲ್ಲಿ ಕಾಣಸಿಗುತ್ತದೆ. ಎಚ್. ಎಸ್. ವೆಂಕಟೇಶಮೂರ್ತಿ ಅವರ ಅಳಿಲು ರಾಮಾಯಣ ಪುರಾಣದ ಪ್ರಸಂಗವನ್ನೇ ಆಧರಿಸಿದ್ದರೂ ಹೊಸತಾಗಿ ಅರಳಿದೆ. ಮಕ್ಕಳ ನಾಟಕಗಳ ಪ್ರಯೋಗದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಅನೇಕ ಆಸಕ್ತರು ನಮ್ಮಲ್ಲೀಗ ಕಾಣಸಿಗುತ್ತಿದ್ದಾರೆ. ಮಕ್ಕಳನ್ನ ಕಲೆಹಾಕಿಕೊಂಡು ಅವರಿಗೆ ಶಿಬಿರಗಳನ್ನ ನಡೆಸುವುದು, ರಂಗಚಟುವಟಿಕೆಯಲ್ಲಿ ಅವರನ್ನ ಸಕ್ರಿಯಗೊಳಿಸುವುದು ಈಗ ಕನ್ನಡದಲ್ಲಿ ಸಾಮಾನ್ಯವಾಗಿ ಕಾಣುವ ಸಂಗತಿ.

ಅಧ್ಯಯನ, ವಿಮರ್ಶೆ, ಚರ್ಚೆಗಳು ತುಸು ಹಿಂಜರಿಕೆಯವೇ ಅನ್ನಬೇಕು. ಸಾರಸ್ವತ ಲೋಕದ ಹಿರಿಯ ವಿದ್ವಾಂಸರು ಯಾರೂ ಈ ಕಡೆಗೆ ಅಷ್ಟಾಗಿ ಹೊರಳಿನೋಡುತ್ತಿಲ್ಲ. ಮಕ್ಕಳಿಗಾಗಿಯೂ ಆಸಕ್ತಿ ತೋರಿದ ಹಿರಿಯ ಕವಿಗಳು ಕೆಲವರು ಮಾತ್ರ ಅಲ್ಲಲ್ಲಿ ಒಂದಷ್ಟು ಉತ್ತೇಜಕವಾದ ಮಾತುಗಳನ್ನ ಆಡುವುದನ್ನ ಬಿಟ್ಟರೆ ಬೇರೆ ಕಾಣುತ್ತಿಲ್ಲ. ಅ. ನ. ಕೃಷ್ಣರಾಯರು ಹೇಳಿದಂತೆ ಮಕ್ಕಳ ಸಾಹಿತ್ಯದ ಲೋಕ ಒಂದು ‘ಸಪರೇಟ್ ಡಿಪಾರ್ಟಮೆಂಟ್’ ಎನ್ನುವುದೇ ನಿಜ. ಅದರಲ್ಲಿ ತೊಡಗಿಕೊಳ್ಳುವವರಿಗೂ ವಿಶೇಷದ ಮನಸ್ಥಿತಿ ಬೇಕು. ಮಕ್ಕಳ ಒಡನಾಟದ, ಮಕ್ಕಳ ಮನೋಲೋಕದ ಒಳಹೊಕ್ಕು ನೋಡುವ, ಆ ಲೋಕದ ಏನೋ ಒಂದು ಸೆಳೆತವಿರುವವರೇ ಇಲ್ಲಿ ಪ್ರವೇಶಿಸುತ್ತಾರೆ. ಅದೊಂದು ಲಘುವಾದ ಕೆಲಸ, ಹಾಗೆ ತೊಡಗಿಕೊಳ್ಳುವುದರಿಂದ ಏನನ್ನೋ ಕಳೆದುಕೊಂಡುಬಿಡುತ್ತೇನೆ ಎನ್ನುವ ದುಗುಡ ಅಂಥವರಲ್ಲಿ ಇರದು. ಇದು ಮಕ್ಕಳಿಗಾಗಿ ರಚಿಸುವವರಿಗೆ ಹೇಗೋ ಮಕ್ಕಳ ಸಾಹಿತ್ಯದ ಅಧ್ಯಯನ, ವಿಮರ್ಶೆಯ ವಿಶಯದಲ್ಲಿಯೂ ಅಂತ ಕಾಣುತ್ತದೆ. ತೀರ ವಿರಳವಾಗಿಯಾದರೂ ಕನ್ನಡದಲ್ಲಿ ಈ ಬಗೆಯ ಸಂಗತಿ ಶುರುವಾಗಿದೆ. ‘ಸಂಧ್ಯಾ ಸಾಹಿತ್ಯ ವೇದಿಕೆ’ ಎನ್ನುವ ಗೆಳೆಯರ ಬಳಗ ತರುತ್ತಿದ್ದ, ಈಗ ನಿಂತು ಹೋಗಿರುವ ‘ಸಂಧ್ಯಾ’ ಪತ್ರಿಕೆ ಈ ಬಗೆಯಲ್ಲಿ ತುಸುವಾದರೂ ಗಮನಾರ್ಹ ಕೆಲಸ ಮಾಡಿತು. ಪತ್ರಿಕೆ ನಿಂತರೂ ಆ ನಿಟ್ಟಿನಲ್ಲಿ ಬಳಗ ಚಟುವಟಿಕೆಗಳನ್ನ ನಡೆಸುತ್ತಿರುವುದನ್ನ ಇಲ್ಲಿ ಹೇಳಬಹುದು. ಹಿರಿಯ ಲೇಖಕರ ಸಂಶೋಧನಾ ಪ್ರಬಂಧಗಳ ಭಾಗವಾಗಿ ಬಂದ ಅಧ್ಯಯನದ ಕೆಲ ಪುಟಗಳು ಈ ನಿಟ್ಟಿನಲ್ಲಿ ಗಮನಿಸಬಹುದಾದ ಇನ್ನೊಂದು ಆಕರ. ಕುವೆಂಪು, ದಿನಕರ ದೇಸಾಯಿ, ಎಮ್. ಎಸ್. ಪುಟ್ಟಣ್ಣ, ಸಿದ್ದಯ್ಯ ಪುರಾಣಿಕ, ದೇವುಡು ಮುಂತಾಗಿ ಹಲವಾರು ಹಿರಿಯರ ಕುರಿತ ಅಧ್ಯಯನಗಳಲ್ಲಿ ಈ ಬಗೆಯದನ್ನ ನೊಡಲು ಸಾಧ್ಯವಾಗುತ್ತದೆ. ಮಕ್ಕಳ ಸಾಹಿತಿಯಾಗಿಯೇ ಕಾಣಿಸಿಕೊಂಡ ಸಿಸು ಸಂಗಮೇಶರ ಕುರಿತು ರಾಜೇಂದ್ರ ಗಡಾದ ಎನ್ನುವವರು ಸಂಶೋಧನಾ ಪ್ರಬಂಧ ಬರೆದಿರುವುದು ಇದೆ. ಕನ್ನಡ ಮಕ್ಕಳ ನಾಟಕಗಳ ಕುರಿತಾಗಿಯೇ ಸಂಶೋಧನ ಪ್ರಬಂಧ ಸಿದ್ಧಗೊಳಿಸಿರುವವರು ನಾಟಕಕಾರರಾಗಿಯೂ ಗಮನ ಸೆಳೆದಿರುವ ಡಾ. ಗಜಾನನ ಶರ್ಮ. ರಾಜ್ಯ ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು ನೀಡುವ ಒಂದಿಷ್ಟು ಪ್ರೋತ್ಸಾಹದ ಜೊತೆಗೆ ಅನೇಕ ಸಂಘ ಸಂಸ್ಥೆಗಳು ತಮಗೆ ಸಾಧ್ಯವಾದ ಮಟ್ಟಿಗಾದರೂ ಆಸಕ್ತಿ ತೋರುತ್ತಿರುವುದು ಗಮನಿಸಬೇಕಾದ ಸಂಗತಿ.

ಕನ್ನಡ ಮಕ್ಕಳ ಸಾಹಿತ್ಯ ಲೋಕ ಹೊಸತಾಗಿ ಬೆಳೆಯುತ್ತ, ತನ್ನದೇ ಪ್ರತ್ಯೇಕತೆಯನ್ನ ಸಿದ್ಧಗೊಳಿಸುವ ಸಾಧ್ಯತೆಗಳನ್ನ ತೋರಿಸುವ ನಿಟ್ಟಿನಲ್ಲಿ ವಿರಳವಾಗಿಯಾದರೂ ಗೆಲುವಿನ, ಭರವಸೆಯ ಹೆಜ್ಜೆಗಳನ್ನಿಟ್ಟಿದೆ ಎಂದು ಧಾರಾಳವಾಗಿ ಹೇಳಬಹುದು.