ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಠಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಅಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಭೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ತತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಕನ್ನಡ ನಾಡಿನ ಶಿಕ್ಷಣ ಮತ್ತು ಜನಜೀವನದ ಎಲ್ಲ ಮುಖಗಳಲ್ಲಿ ಈ ನಾಡಿನ ಭಾಷೆಯಾದ ಕನ್ನಡವು ಜೀವಂತವಾಗಿ ಮತ್ತು ಅರ್ಥಪೂರ್ಣವಾಗಿ ಹಬ್ಬಿಕೊಳ್ಳಬೇಕೆಂಬುದು, ಆ ಮೂಲಕವಾಗಿ ಪ್ರಪಂಚದ ಸಾಮಾನ್ಯ ಮತ್ತು ತಾಂತ್ರಿಕ ಜ್ಞಾನವೆಲ್ಲ ಈ ನಾಡಿನಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸುಲಭವಾಗಿ ದೊರೆಯಬೇಕೆಂಬುದು, ಈ ನಾಡಿನ ಶಿಕ್ಷಣವೇತ್ತರ ಮತ್ತು ಸಾಮಾನ್ಯ ಜನರ ಬಹು ದಿನಗಳ ಬಯಕೆಯಾಗಿದೆ. ಈ ಉದ್ದೇಶಕ್ಕಾಗಿ ಕನ್ನಡವನ್ನು ಸಮೃದ್ಧಗೊಳಿಸುವ ಮತ್ತು ಎಲ್ಲ ರೀತಿಯ ಅಭಿವ್ಯಕ್ತಿಗಳಿಗೆ ಅದನ್ನು ಸಮರ್ಥ ಮಾಧ್ಯಮವನ್ನಾಗಿ ಸಜ್ಜುಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವಿರುವ ಕನ್ನಡ ಭಾಷೆ ಮತ್ತು ಸಾಹಿತ್ಯ ಎಂತಹ ಕ್ಷಿಷ್ಟ, ಗಹನ ಮತ್ತು ಗಂಭೀರ ವಿಷಯಗಳನ್ನೂ ಸರಳವಾಗಿ, ಸಂಪೂರ್ಣವಾಗಿ ಹಾಗೂ ಶಕ್ತವಾಗಿ ಅಭಿವ್ಯಕ್ತಗೊಳಿಸಬಲ್ಲುದು ಎಂಬ ಅರಿವೇ, ನಮ್ಮ ನಾಡಿನ ಬಹಳಷ್ಟು ಜನಕ್ಕೆ ಇಲ್ಲ. ಇದಕ್ಕೆ ಕಾರಣ ಈ ಭಾಷೆಯ ವ್ಯಾಪಕತೆಯ, ಸೂಕ್ಷ್ಮತೆಯ, ಸತ್ವಶೀಲತೆಯ ತಿಳುವಳಿಕೆ ಅವರಿಗಿಲ್ಲದಿರುವುದು. ಇದರಿಂದಾಗಿ ತಮ್ಮ ಮಕ್ಕಳು ಇಂಗ್ಲೀಶ್‌ಮಾಧ್ಯಮದಲ್ಲಿ ಕಲಿತರೆ ಮಾತ್ರ ಅವರ ಬದುಕು ಸಾರ್ಥಕ ಎಂಬ ಭ್ರಮೆಯಲ್ಲಿ ಅವರಿದ್ದಾರೆ. ಹೀಗಾಗಿ ನಮ್ಮ ವಿದ್ಯಾರ್ಥಿಗಳು ಸಂಪೂರ್ಣವಾಗಿ ಮತ್ತು ಸಮರ್ಥವಾಗಿ ಇಂಗ್ಲೀಶ್‌ಭಾಷೆಯನ್ನು ಕಲಿಯುವುದರಲ್ಲಿ ವಿಫಲರಾಗಿ, ತಮ್ಮ ತಾಯಿನುಡಿ ಹಾಗೂ ಪ್ರಾದೇಶಿಕ ನುಡಿಯಲ್ಲಿ ಶಿಕ್ಷಣ ಕೈಗೊಂಡರೆ ತಾವು ಕಲಿಯುವ ವಿಷಯ ಪರಿಪೂರ್ಣವಾಗಿ ತಮ್ಮ ಮನೋಗವಾಗುತ್ತದೆ ಎಂಬ ಪ್ರಜ್ಞೆಯಿಲ್ಲದೆ ಎಡಬಿಡಂಗಿಗಳಾಗುತ್ತಿದ್ದಾರೆ. ಇದು ವಿದ್ಯಾರ್ಥಿಗಳನ್ನು ಉರು ಹೊಡೆಯುವ ಯಂತ್ರಗಳನ್ನಾಗಿ, ತಲಸ್ಪರ್ಶಿಯಾದ ವಿಷಯ ಜ್ಞಾನವಿಲ್ಲದ ಕೇವಲ ಪರೀಕ್ಷಾ ಜೀವಿಗಳನ್ನಾಗಿ ಮಾಡುತ್ತಿದೆ. ಈ ಕಾರಣದಿಂದಾಗಿ ಒಂದು ರೀತಿಯ ಕೃತಕ ವಾತಾವರಣ ಕಲ್ಪಿತವಾಗಿ, ವಿಷಯದ ಅರ ಬರೆ ಜ್ಞಾನ ಮಾತ್ರ ಪಾಂಡಿತ್ಯವೆಂಬ ಭ್ರಮೆಯನ್ನು ಉಂಟುಮಾಡುತ್ತಿದೆ. ಈ ವಿಷಮ ಪರಿಸ್ಥಿತಿಯನ್ನು ಹೋಗಲಾಡಿಸಿ ಶಿಕ್ಷಣದ ಎಲ್ಲ ಮಟ್ಟಗಳಲ್ಲಿಯೂ ಕನ್ನಡ ಕಲಿಕೆ ಅಗತ್ಯ ಮತ್ತು ಅನಿವಾರ್ಯವೆಂಬುದನ್ನು ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು, ಬಹುವರ್ಷಗಳಿಂದ ಶಿಕ್ಷಣ ಪ್ರೇಮಿಗಳು ಕನ್ನಡ ನಾಡಿನುದ್ದಕ್ಕೂ ಈ ಸಂಬಂಧವಾದ ಸಭೆ, ಚಳುವಳಿ, ಸಂವಾದಗಳನ್ನು ಸಂಘಟಿಸುತ್ತಾ ಬಂದಿದಾರೆ. ಈ ಒತ್ತಾಸೆಯ ಫಲವಾಗಿ ಮತ್ತು ಬಹುಮುಖ್ಯವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದೃಢಸಂಕಲ್ಪದ ಪರಿಣಾಮವಾಗಿ, ಸರ್ಕಾರ ಕನ್ನಡ ಕಲಿಕೆಯು ಶಿಕ್ಷಣದ ಎಲ್ಲ ಹಂತಗಳಲ್ಲಿ ಅಗತ್ಯವೆಂದು ನಿಯಮಗಳನ್ನು ರೂಪಿಸಿದೆ. ಇದರ ಸತ್ಫಲವಾಗಿ ತಾಂತ್ರಿಕ ಪದವಿ ಶಿಕ್ಷಣ ತರಗತಿಗಳಲ್ಲಿ ಕನ್ನಡ ಮತ್ತು ಕನ್ನಡೇತರ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಠ್ಯಗಳನ್ನು ನೇಮಿಸಿ, ಎಲ್ಲರೂ ತಮ್ಮ ವಿಷಯ ಜ್ಞಾನಕ್ಕೆ ಪೂರಕವಾಗಿ ಇವುಗಳನ್ನು ಅಧ್ಯಯನ ಮಾಡಬೇಕೆಂದು ಅದೇಶ ಹೊರಡಿಸಲಾಗಿದೆ.

ಈ ಮೇಲಿನ ಹಿನ್ನಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನನ್ನ ಅಧ್ಯಕ್ಷತೆಯಲ್ಲಿ ಪ್ರಸಿದ್ಧ ವಿದ್ವಾಂಸರಾದ ಪ್ರೊ. ಕೆ.ವಿ. ನಾರಾಯಣ, ಪ್ರೊ. ಬಿ.ಎ. ವಿವೇಕ ರೈ, ಡಾ. ರಹಮತ್‌ತರೀಕೆರೆ, ಡಾ. ಲಿಂಗದೇವರು ಹಳೆಮನೆ ಮತ್ತು ಡಾ. ಮಲ್ಲಿಕಾ ಘಂಟಿ ಅವರನ್ನು ಒಳಗೊಂಡು ಕನ್ನಡ ಪಠ್ಯಪುಸ್ತಕ ಸಮಿತಿಯನ್ನು ರಚಿಸಿದೆ. ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ನಾಡಿನ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಅರಿವನ್ನು ತಮ್ಮ ವಿಷಯ ಪಠ್ಯಗಳ ಜೊತೆಯಲ್ಲಿಯೇ ಪಡೆಯಲು ಹಾಗೂ ಕನ್ನಡೇತರ ವಿದ್ಯಾರ್ಥಿಗಳು ತಮ್ಮ ವ್ಯವಹಾರಕ್ಕೆ ಮತ್ತು ಸಂವಹನಕ್ಕೆ ಅಗತ್ಯವಾಗುವ ಬಳಕೆಗನ್ನಡದ ಪರಿಚಯವನ್ನು ಪಡೆಯಲು ಅನುಕೂಲವಾಗುವಂತೆ, ಕನ್ನಡ ಮನಸು ಎಂಬ ಸಾಂಸ್ಕೃತಿಕ ಪಠ್ಯವನ್ನು, ಕನ್ನಡ ಕಲಿ ಎಂಬ ಭಾಷಾ ಪಠ್ಯವನ್ನು ರಚಿಸಲಾಗಿದೆ.

ಮೇಲಿನ ತರಗತಿಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಮತ್ತು ಅದು ಅಭಿವ್ಯಕ್ತಿಸುವ ವಿಷಯ ಒಂದು ಹೊರೆಯಾಗದಂತೆ, ಅದೇ ಸಂದರ್ಭದಲ್ಲಿ ಉನ್ನತ ಕನ್ನಡ ಮನಸ್ಸುಗಳು ಸೃಷ್ಟಿಸಿರುವ ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿಯಾದ ವಿಷಯಗಳನ್ನು ಆಕರ್ಷಕವಾಗಿ ಮನಸ್ಸಿಗೆ ಮುಟ್ಟಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಂಸ್ಕೃತಿಕ ಪ್ರಜ್ಞೆಯನ್ನು ಮೊಳೆಯಿಸುವಂತೆ ಈ ಪಠ್ಯವನ್ನು ರೂಪಿಸಲಾಗಿದೆ. ಸಾಹಿತ್ಯ ಮತ್ತು ಇತರ ವಿಷಯಗಳ ಬಗೆಗಿನ ಅರಿವನ್ನು ಸರಳ ಸುಲಭವಾಗಿ ಮೂಡಿಸುವ ಪಠ್ಯಗಳಿಗೆ ಆದ್ಯತೆಯನ್ನು ನೀಡಲಾಗಿದೆ. ಕಥೆ, ಕಾವ್ಯ, ಹಾಸ್ಯ, ಪ್ರಬಂಧ, ವ್ಯಕ್ತಿ ಚಿತ್ರ, ಪ್ರವಾಸ ಕಥನ, ಅಂಕಣ ಬರಹ, ಪರಿಸರ, ತಂತ್ರಜ್ಞಾನ, ವಿಜ್ಞಾನ ಈ ಎಲ್ಲ ಮುಖಗಳನ್ನು ಕುತೂಹಲಕರವಾಗಿ ಪರಿಚಯ ಮಾಡಿಕೊಡುವ ಬರಹಗಳನ್ನು ಇಲ್ಲಿ ಆರಿಸಿ ಸಂಕಲಿಸಲಾಗಿದೆ. ಇವುಗಳನ್ನು ಆರಿಸುವಾಗ ವಿದ್ಯಾರ್ಥಿಗಳಿಗೆ ಜನಜೀವನದ ಹಲವು ಮುಖಗಳ ಅರಿವು ಸಹಜವಾಗಿಯೇ ಆಗುವಂತೆ ಮಾಡುವ ದೃಷ್ಟಿಯನ್ನು ಇರಿಸಿಕೊಳ್ಳಲಾಗಿದೆ. ಇದರ ಜೊತೆಗೆ ಕರ್ನಾಟಕ ಸಂಸ್ಕೃತಿಯ ವಿಶಿಷ್ಣತಯನ್ನು ಹಾಗೂ ಮುಖ್ಯ ಸ್ವರೂಪಗಳನ್ನು ಪರಿಚಯ ಮಾಡಿಕೊಡುವ ವಿಷಯ ಸಂಪನ್ನವೂ, ಪಾರದರ್ಶಕವೂ ಆದ ಲೇಖನವೊಂದನ್ನು ಸೇರಿಸಲಾಗಿದೆ. ಇಂತಹ ಲೇಖನವೊಂದು ಈ ಸಾಂಸ್ಕೃತಿಕ ಪಠ್ಯದಲ್ಲಿರುವುದು ಅಗತ್ಯವೆಂದು ಸಮಿತಿ ಅಭಿಪ್ರಾಯಪಟ್ಟಿದ್ದರಿಂದ, ಡಾ. ರಹಮತ್‌ತರೀಕೆರೆ ಅವರಿಂದ ಈ ಪಠ್ಯಕ್ಕೆಂದೇ ಈ ಲೇಖನವನ್ನು ಬರೆಯಿಸಲಾಗಿದೆ. ವೈವಿಧ್ಯಮಯವಾದ ವಿಷಯಗಳಿಂದ ಹಾಗೂ ಸರಳ ನಿರೂಪಣೆಯಿಂದ ಪರಿಪುಷ್ಟವಾಗಿರುವ ಇಲ್ಲಿನ ಬರಹಗಳು, ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪದವಿಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಬಗ್ಗೆ ವಿಶೇಷ ಅರಿವನ್ನು ಪಡರಯುವ ಆಸಕ್ತಿಯನ್ನು ಉದ್ದೀಪಿಸುವಂತೆ ಇಲ್ಲಿ ಮಾಡಲು ಪ್ರಯತ್ನಿಸಲಾಗಿದೆ.

ಕನ್ನಡೇತರ ವಿದ್ಯಾರ್ಥಿಗಳ ಅಧ್ಯಯನಕ್ಕೆಂದು ರಚಿಸಲಾಗಿರುವ ಕನ್ನಡ ಕಲಿ ಪಠ್ಯವನ್ನು ಈ ಕ್ಷೇತ್ರದಲ್ಲಿ ಪರಿಣತರಾದ ಡಾ. ಲಿಂಗದೇವರು ಹಳೆಮನೆ ಅವರು ವಿಶೇಷ ಪರಿಶ್ರಮದಿಂದ ಮತ್ತು ಈ ಕ್ಷೇತ್ರದ ತಮ್ಮ ಸುದೀರ್ಘ ಅನುಭವದಿಂದ ತುಂಬು ಆಸಕ್ತಿ ವಹಿಸಿ ರಚಿಸಿ ಕೊಟ್ಟಿದ್ದಾರೆ. ಕನ್ನಡ ಭಾಷೆಯನ್ನು ಅತ್ಯಮತ ಸುಗಮವಾಗಿ ಕಲಿಯಲು, ಪ್ರಯೋಗಿಸಲು ಮತ್ತು ಅದರಲ್ಲಿ ವ್ಯವಹರಿಸಲು ಮತ್ತು ಆ ಮೂಲಕ ತಮ್ಮ ವಿಷಯ ಕ್ಷೇತ್ರದಲ್ಲಿ ಈ ನಾಡವರೊಡನೆ ಅರ್ಥಪೂರ್ಣ ಸಂಪರ್ಕ ಮತ್ತು ಸಂವಹನವನ್ನು ಸಾಧಿಸಲು ನೆರವಾಗುವ ರೀತಿಯಲ್ಲಿ ಇದು ರಚಿತವಾಗಿದೆ.

ಈ ಎರಡೂ ಪಠ್ಯಗಳನ್ನು ವಿದ್ಯಾರ್ಥಿಗಳು ಗಂಭೀರವಾದ ಆಸಕ್ತಿಯಿಂದ ಅಧ್ಯಯನ ಮಾಡಿದಲ್ಲಿ ಮತ್ತು ಇವುಗಳನ್ನು ಕಲಿಸುವ ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ನಾಡು-ನುಡಿಯ ಮೇಲಿನ ಅಭಿಮಾನ ಉದ್ದೀಪಿಸುವಂತೆ ಕಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ, ವಿಶ್ವವಿದ್ಯಾಲಯಗಳ ಹಾಗೂ ಈ ಸಮಿತಿಯ ಶ್ರಮ ಸಾರ್ಥಕವಾಗುತ್ತದೆಂದು ನಾನು ಭಾವಿಸಿದ್ದೇನೆ. ಬಹು ಸಮಯದ ಬೇಡಿಕೆಯಾದ ಈ ಪಠ್ಯಗಳನ್ನು ಸಿದ್ಧಪಡಿಸಲು ಸಮಿತಿ ರಚಿಸಿ ಚಾಲನೆ ನೀಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಮಾನ್ಯ ಡಾ. ಕೆ. ಬಾಲವೀರರೆಡ್ಡಿ ಅವರಿಗೆ, ಇವುಗಳನ್ನು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಆಸಕ್ತಿ ವಹಿಸಿದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಮಾನ್ಯ ಡಾ. ಚಂದ್ರಶೇಖರ್‌ಅವರಿಗೆ, ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಪರಿಶ್ರಮ ಹಾಗೂ ಆಸಕ್ತಿಗಳಿಂದ ಈ ಪಠ್ಯಗಳನ್ನು ಸಿದ್ಧಪಡಿಸಿಕೊಟ್ಟ ಸಮಿತಯ ಎಲ್ಲ ಸದಸ್ಯರಿಗೂ ಹಾರ್ದಿಕ ಕೃತಜ್ಞತೆಗಳು.

ಡಾ. ಎಚ್‌. ಜೆ. ಲಕ್ಕಪ್ಪಗೌಡ
ಕುಲಪತಿಗಳು