ಒಂದು ದಿನ:

ಇಂಡಿಯಾ ದೇಶದ ಕರ್ನಾಟಕ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ ಒಂದರಲ್ಲಿ – ಆ ದಿನ ಸೋಮವಾರವಾದುದರಿಂದ ಜನವೋ ಜನ. ದೊಡ್ಡ ಆಸ್ಪತ್ರೆಯ ರೀತಿಯಲ್ಲಿ ರೋಗಿಗಳು ತಮ್ಮ ಹೆಸರು ದಾಖಲು ಮಾಡಿಸಿ, ಗುಮಾಸ್ತನ ಅಮೃತಹಸ್ತದಿಂದ ತಮ್ಮ ಹೆಸರು, ಕುಲಗೋತ್ರ, ವಯಸ್ಸು ಮುಂತಾದವನ್ನು ಒಳಗೊಂಡ ಚೀಟಿಯ ಮೂಲಕ ವೈದ್ಯಾಧಿಕಾರಿಗಳನ್ನು ಕಾಣುವ ವ್ಯವಸ್ಥೆಗೆ ಇಲ್ಲಿ ಅವಕಾಶವಿಲ್ಲದ್ದರಿಂದ ಮೊದಲು ಬಂದ ರೋಗಿ ಯಾವುದೋ ಮೂಲೆಯಲ್ಲೋ ಅಥವಾ ವೈದ್ಯಾಧಿಕಾರಿಗಳ ಕೊಠಡಿಯ ಬಾಗಿಲಲ್ಲೋ ನಿಂತು ಅಸಹಾಯಕವಾಗಿ ಪಿಳಪಿಳನೆ ಕಣ್ಣಾಡಿಸುತ್ತ, ಅವರ ಕೃಪೆಗಾಗಿ ಕಾಯುತ್ತ, ಒಮ್ಮೊಮ್ಮೆ ಸುಸ್ತಾಗಿ ವರಾಂಡದಲ್ಲಿ ತಂದ ಸೀಸೆಯನ್ನು ತಲೆದಿಂಬಾಗಿ ಮಾಡಿಕೊಂಡು ತಾನು ಅಥವಾ ತಾವು ಬಂದ ಕೆಲಸವನ್ನೇ ಮರೆತು ನರಳುತ್ತಾ ಮಲಗಿಬಿಡುವುದು, ಹೀಗೆ ಏನೇನೋ ನಂಬಲಾರದಂಥ ವಿಷಯಗಳು. ಕೊನೆಯಲ್ಲಿ ಬಂದವನಿಗೆ ವೈದ್ಯಾಧಿಕಾರಿಗಳಿಂದ ಹಾರ್ದಿಕ ಸ್ವಾಗತ. ಇನ್ನೂ ವರ್ಣಿಸಲು ಅವಕಾಶವಿಲ್ಲದಂಥ ವರ್ಗದ ಜನ ಬಂದಾಗ ಕೃತಕ ವಿಧೇಯತೆ ತುಂಬಿದ ಸ್ವಾಗತ ಇವೆಲ್ಲಕ್ಕೂ ಪೂರ್ಣ ಅವಕಾಶ ಇದ್ದುದರಿಂದ ಬಳ್ಳಕೆರೆ ಎಂಬ ಹಳ್ಳಿಯಿಂದ ಹೊತ್ತು ಮೂಡುವುದಕ್ಕೆ ಮುಂಚೆಯೇ ಬಂದು ಆಸ್ಪತ್ರೆಯಲ್ಲಿ ಕಾಯುತ್ತಿದ್ದ ಒಬ್ಬ ಹೆಂಗಸು ಮತ್ತು ಸುಮಾರು ಹದಿನೈದು ವರ್ಷದ ಹುಡುಗ ಬಹಳ ಹೊತ್ತಿನವರೆಗು ಯಾರ ಗಮನಕ್ಕೂ ಬರದೆಯೇ ಬಿದ್ದಿದ್ದರು. ಆ ಹೆಂಗಸು ಆ ಹುಡುಗನ ತಾಯಿ, ಸುಮಾರು ನಲವತ್ತರ ಪ್ರಾಯ. ಹುಡುಗ ವರಾಂಡದಲ್ಲಿ ಕಂಬಕ್ಕೆ ಒರಗಿ, ಆಸ್ಪತ್ರೆಗೆ ಬಂದು ಹೋಗುವವರನ್ನು ಪ್ರಪಂಚದ ಮೇಲೆ ಒಂದು ಬಗೆಯ ಜಿಗುಪ್ಸೆ ಮೂಡಿನಿಂತಿತ್ತು. ಕುಳಿತೂ ಕುಳಿತೂ ಸಾಕಾಗಿ ಅವನ ಪಕ್ಕದಲ್ಲಿಯೇ ನಿಂತಿದ್ದ ತನ್ನ ಅವ್ವನ ಸೀರೆಯನ್ನು ಬಲವಾಗಿ ಎಳೆದು ಹೇಳಿದ:

“ಅವ್ವ ಬಿಸ್ಲು ಜಾಸ್ತಿ ಆಯ್ತಾ ಅದೆ, ನಡಿ ಊರಿಗೆ ಹೋಗ್ವ”

“ಒಸಿ ಸುಮ್ಕಿರು, ಬಂದೋರು ಬಂದೋ ತೋರಿಸ್ಕೊಂಡೇ ಹೋಗುವ”

“ಹೊತ್ತುಡಕೆ ಮುಂಚೆ ಬಂದೋ ನಾವು…. ”

“ಇಲ್ಲಿ ನನ್ನ ನಿನ್ನ ರಾಗವ ಯಾರು ಕೇಳಾರು?”

ತನ್ನ ತಾಯಿಯ ಧ್ವನಿಯ ಹಿನ್ನೆಲೆಯ ಆಸಹಾಯಕತೆ, ಸುತ್ತಲಿನ ವಾತಾವರಣ ನಿಷ್ಕರುಣೆಯಿಂದ ತುಂಬಿರುವುದನ್ನು ಪರಿಚಯ ಮಾಡಿಕಡುವ ರೀತಿಯಲ್ಲಿ ಮೂಡಿಬಂದ ರೀತಿಯನ್ನು ಗಮನಿಸಿಯೋ ಅಥ್ವಾ ತನಗಾಗಿ ತನ್ನನ್ನು ಹೆತ್ತವಳು ಮೌನವಾಗಿ ನೋವನ್ನು , ಅವಮಾನವನ್ನು ಸಹಿಸಿಕೊಂಡು ನೀಂತಿರುವುದನ್ನು ಕಂಡೋ ಹುಡುಗ ಹೇಳಿದ: “ನಾನು ಇದ್ದರೆಷ್ಟು, ಸತ್ತರೆಷ್ಟು ನಡಿಯವ್ವಾ, ಹೋಗುವ ಊರಿಗೆ”.

“ಮೂರೊತ್ತೂ ‘ಸಾಯ್ತೀನಿ, ಸಾಯ್ತೀನಿ’, ಇದೇ ನಿನ್ನ ನಾಲಿಗೆ ಮೇಲೆ”

“ಇದ್ದು ನಾನು ಯಾವ ರಾಜ್ಯ ಅಳಬೇಕು”- ವಯಸ್ಸಿಗೆ ಮೀರಿದ ಅನುಭವದ ಮಾತುಗಳು ತನ್ನ ಮಗನ ಬಾಯಿಂದ  ಬಂದದ್ದು ತಾಯಿಗೆ ಆಶ್ಚರ್ಯವಾಗಲಿಲ್ಲ. ಈ ವಯಸ್ಸಿಗೆ ಅನುಭವಿಸಿದ್ದ ನೋವಿನ ಮೂಸೆಯಿಂದ ಬಂದ ಮಾತುಗಳಾಗಿದ್ದವು. ಹೆತ್ತ ಕರುಳು ಚುರಕೆಂದು ಸೆರಗಿನಿಂದ ಕಣ್ಣೊರೆಸಿಕೊಂಡಳು. ತನ್ನ ದೇಹದಲ್ಲಿರುವ ಕಾಯಿಲೆಯ ನೋವನ್ನು , ತಾಯಿಯ ಅಸಾಹಾಯಕತೆಯನ್ನೂ, ತಮಗಾಗುತ್ತಿರುವ ಅವಮಾನವನ್ನೂ ಇನ್ನು ಸಹಿಸಲಾಗದು ಎನ್ನುವ ರೀತಿಯಲ್ಲಿ ಹುಡುಗ ಧಡಕ್ಕನೆ ಮೇಲೆದ್ದು ಮುಂದುವರಿದ-

“ಎಲ್ಲಿಗೋ ಮಗ?”

“ಡಾಕ್ಟ್ರು ನೋಡೋಕೆ…..”

“ಲೋ; ಮೊದಲೇ ತೂರಾಡ್ತಿ. ಬಿದ್ದು ಗಿದ್ದು ಬುಟ್ಟಿಕನಪ್ಪ” ಎಂದು ಹಿಡಿದುಕೊಳ್ಳಲು ಬಂದ ತಾಯಿಯ ಕೈಗಳಿಂದ ಕೊಸರಿಕೊಂಡವನೆ ವೈದ್ಯಾಧಿಕಾರಿಗಳ ಕೊಠಡಿಯನ್ನು ಪ್ರವೇಶಿಸಿ, ನೆರೆದಿದ್ದ ಜನರ ಗುಂಪನ್ನು ಸೀಳಿ ವೈದ್ಯಾಧಿಕಾರಿಯ ಮೇಜಿನ ಮುಂದೆ ನಿಂತು, ಜೋರಾಗಿ ಹೇಳಿದ: “ಸಾ! ನಾನು ನಮ್ಮವ್ವ ಒತ್ತಾರೆಯಿಂದ ಕಾಯ್ಕೊಂಡೀವಿ”.

ವೈದ್ಯಾಧಿಕಾರಿ ಕತ್ತೆತ್ತಿ ನೋಡಿದ. ಸುಮಾರು ಎತ್ತರದ, ನರಪೇತ್ಲ, ಅಗಲ ಕಿವಿಗಳ ಹೊಟ್ಟೆ ಡುಬ್ಬಣ್ಣನ್ನೊಬ್ಬ ತನ್ನ ಮುಂದೆ ಬಂದು ನಿಂತಿದ್ದಾನೆ. ಅವ್ಯಕ್ತ ನೋವಿನ ರೋಷ ಅವನ ಮುಖದ ಮೇಲೆ ನಿಂತಿದೆ.

ಹುಡುಗನೇ ಮತ್ತೆ ಹೇಳಿದ: “ನನ್ನೊಸಿ ನೋಡಿ ಸಾ!” ವೈದ್ಯಾಧಿಕಾರಿಗೆ ಈ ಅಪರೂಪದ ವ್ಯಕ್ತಿಯನ್ನು ಕಂಡು ಸ್ಪಲ್ಪ ಕುಚೇಷ್ಟೆ ಮಾಡಬೇಕೆನಿಸಿ, ಅವನನ್ನೇ ದೃಷ್ಟಿಸಿ ಹೇಳಿದ: “ವಸಿ ಏನೋ ಚೆನ್ನಾಗೇ ನೋಡ್ಡೆ. ನಿನ್ನ ಹೊಟ್ಟೆ ದಪ್ಪಕೈ ಕಾಲ ಸಣ್ಣ, ಕಿವಿಗಳು ಮಾತ್ರ ಗಾಂಧಿ ಕಿವಿಗಳು ಇದ್ದಾಗಿವೆಯಪ್ಪಾ”.

ಹುಡುಗ ತನ್ನ ಬಲೆಗೈಯನ್ನು ಮುಂದೆ ಚಾಚಿ: “ನನಗೆ ಕಾಯಿಲೆ ಏನು ನೋಡಿ ಸಾ” ಎಂದು ಬೇಡಿದ.

“ನಿಮ್‌ ದಮ್ಮಯ್ಯ ಕೋಪ ಮಾಡ್ಕೊಳ್ದೇ ನೋಡಿ ಸ್ವಾಮಿ. ಇವನೊಬ್ಬನೇ ನನಗೆ ಗಂಡು ಮಗ ಅಂತ ಇರೋನು!” ಹೆಂಗಸೊಬ್ಬಳು ಗೋಗೆರೆದಳು.

ವೈದ್ಯಾಧಿಕಾರಿಗೆ ತನ್ನ ಮುಂದೆ ನಿಂತಿರುವ ವ್ಯಕ್ತಿಗಳು ತನ್ನಂತೆಯೇ ಮನುಷ್ಯ ವರ್ಗಕ್ಕೆ ಸೇರಿದವರು ಎಂಬುದು ಜ್ಞಾಪಕಕ್ಕೆ ಬಂದೋ ಅಥವಾ ವೈದ್ಯರಾಗಬೇಕಾದವರಿಗೆ ಅನುಕಂಪದಿಂದ ಕೂಡಿದ ಹೃದಯ ಇರಬೇಕು ಎಂಬ ಮಾತು ನೆನಪಾಗಿಯೋ ಏನು ಕತೆಯೋ, ಒಟ್ಟಿನಲ್ಲಿ ಈ ತಾಯಿ – ಮಗನ ಮೇಲೆ ಕರುಣೆ ಬಂದು ಕೇಳಿದ: ಇವನು ನಿನ್ನ ಮಗನೇನಮ್ಮ?”

“ಹೂ! ಸ್ವಾಮಿ, ದೆವರಾಣೆಗೂ!”

“ಇವನ ಹೆಸರೇನಮ್ಮ?”

“ಗಾಂಧಿ ಸ್ವಾಮಿ!”

“ಏನಮ್ಮ ಹುಡುಗಾಟಕ್ಕೆ ನಾನು ಇವನ ಕಿವಿಗಳು ಗಾಂಧೀಜಿಗೆ ಇದ್ದಂತಿವೆ ಅಂದ್ರೆ ಇವನ್ನ ಸಾಕ್ಷಾತ್‌ಗಾಂಧಿ ಅಂತ್ಲೇ ತಿಳ್ಕೊಂಡು ಬಿಟ್ರ?”

“ಇಲ್ಲ ಸ್ವಾಮಿ, ಸುಳ್ಳಿ ಹೇಳಿದ್ರೆ ನನ್ನ ನಾಲ್ಗೆಗೆ ಉಳಾ ಬೀಳ್ಳಿ; ಸೇದೋಗ್ಲಿ ನನ್ನಾಣೆಗೂ ಇವನ ಹೆಸರು ಗಾಂಧಿ ಅಂತ”.

“ನನ್ನ ಹೆಸರು ದೇವರ ಸತ್ಯವಾಗ್ಲೂ ಸಾ ಮಹಾತ್ಮಗಾಂಧಿ ಅಂತ” ಹುಡುಗ ಧೈರ್ಯವಾಗಿ, ದೃಢ ನಿಲುವಿನಿಂದ ನುಡಿದ.

ವೈದ್ಯಾಧಿಕಾರಿ ಬೆಪ್ಪಾಗಿಹೋದ. ಅವನ ವೈದ್ಯಕೀಯ ಈವರೆಗಿನ ಅವಧಿಯಲ್ಲಿ ಈ ರೀತಿಯ ಕಾಕತಾಳ ನ್ಯಾಯವನ್ನು ಅವನು ಕಂಡಿರಲಿಲ್ಲ. ಕೇಳಿಯೂ ಇರಲಿಲ್ಲ. ತನ್ನ ಜೀವಿತದಲ್ಲಿ ಒದಗಿಬಂದ ಈ ಘಟನೆ ತೀರ ಅಪರೂಪವೆನ್ನಿಸಿ ಇದನ್ನು ತನ್ನ ಸಹದ್ಯೋಗಿಗಳೊಂದಿಗೆ ಪಾಲುಮಾಡಿಕೊಳ್ಳಲು ಮತ್ತು ಮುಂದೆ ತಾನು ಯಾರಿಗಾದರೂ ವರ್ಣಿಸುವಾಗ ಇದೊಂದು ಬಿಳಿ ಸುಳ್ಳೆಂದು ಹೇಳಿದರೆ, ಇಂಥಿಂಥವರು ಇದ್ದರು; ಬೇಕಾದರೆ ಕೇಳಿಕೊಳ್ಳಿ ಎಂದು ಸಾಕ್ಷಿಗಳನ್ನು ದಾಖಲುಪಡಿಸಿಕೊಳ್ಳಲು ಜವಾನನನ್ನು ಜೋರಾಗಿ ಕರೆದು ಹೇಳಿದ.

“ನೋಡೋ ನಾಯ್ಡು, ನರಸಿಂಹಮೂರ್ತಿ, ಸರಸಮ್ಮ ಇವರನ್ನು ಬೇಗನೆ ನಾನು ಬರಹೇಳ್ದೆ ಅಂತ ಕೂಗಯ್ಯ”, ಎಲ್ಲಾರೂ ಬಂದರು. ವೈದ್ಯಾಧಿಕಾರಿ ಹೇಳಿದ್ದನ್ನು ಕೇಳಿ ಕಿಸಕ್ಕೆನೆ ನಕ್ಕುಬಿಟ್ಟರು. ಅದರಲ್ಲಿಯೂ ಈಗ ತಾನೆ ಕುಟುಂಬ ಯೋಜನೆಯ ವಿಸ್ತರಣಾಧಿಕಾರಿಯಾಗಿ ಕೆಲಸಕ್ಕೆ ಸೇರಿದ ನರಸಿಂಹಮೂರ್ತಿ ತಾನು ಇದನ್ನು ನಂಬುವುದಿಲ್ಲ ಎನ್ನುವಂತೆ ಕಿಸಕ್ಕನೆ ನಕ್ಕ. ವೈದ್ಯಾಧಿಕಾರಿಗೆ ಸ್ಪಲ್ಪ ಕೋಪ ಕೆರಳಿ, “ಬೇಕಾದ್ರೆ ಅವನ್ನೇ ಕೇಳ್ರಿ” ಎಂದ.

ನರಸಿಂಹಮೂರ್ತಿ ವೈದ್ಯಾಧಿಕಾರಿಗಳ ಕುರ್ಚಿಯ ಮೇಲೆ ಗೋಡೆಗೆ ತೂಗು ಹಾಕಿರುವ ಪೋಟೊ ಒಂದನ್ನು ತೋರಿಸಿ ಕೇಳಿದ: ಲೋ ಹುಡುಗ ಆ ಪೋಟೋ ಯಾರದಯ್ಯಾ

“ಮಹಾತ್ಮ ಗಾಂಧಿಯೋರ್ದು ಸಾ, ಇದ ನಾ ಕಾಣನೆ?”

“ನಿನ್ನ ಹೆಸರೇನಯ್ಯ”

“ಮಹಾತ್ಮಗಾಂಧಿ ಸಾ”

“ಸುಳ್ಳು ಹೇಳಬ್ಯಾಡ”

“ಸುಳ್ಳು ಹೇಳಿ ನಿಮ್‌ತಾವು ನಾನು ಯಾವ ಸಾಮ್ರಾಜ್ಯ ಈಸ್ಕೋಬೇಕು”.

ಎಲ್ಲರೂ ನಾಲಿಗೆ ಸೇದಿ ಹೋದವರಂತೆ ನಿಂತರು. ಮಹಾತ್ಮಗಾಂಧಿಜಿಯ ಪೋಟೋವನ್ನು ಒಮ್ಮೆ; ನಂತರ ರಕ್ತಮಾಂಸ ತುಂಬಿಕೊಂಡು ಉಸಿರಾಡುತ್ತಾ ನೋವನ್ನು ಅನುಭವಿಸುತ್ತ ನೆಲದ ಮೇಲೆ ತಮ್ಮ ಕಣ್ಣೆದುರಿಗೆ ನಿಂತಿರುವ ಮಹಾತ್ಮಗಾಂಧಿಜಿಯ ಕಡೆಗೊಮ್ಮೆ ದೃಷ್ಟಿಯನ್ನು ಬೀರುತ್ತ ನಿಂತರು. ವೈದ್ಯಾಧಿಕಾರಿ ಮತ್ತು ಅವನ ಬಳಗ ಜಗತ್ತಿನ ಮೇಲೆ ತೀರ ಸೋಜಿಗದ ವಿಷಯವನ್ನು ಕಂಡವರಂತೆ ನಿಂತುದನ್ನು ಕಂಡು ಮಹಾತ್ಮಗಾಂಧಿಜಿಗೆ ಬೇಸರವಾಯಿತು.

“ನನ್ನ ಕಾಯಿಲೆ ನೋಡಿ ಸಾ! ನನ್ನ ಹಣೇಬರ ಎಂದ.”

“ನಿನಗೆ ಈ ಹೆಸರು ಯಾರು ಕಟ್ಟಿದೋರು”.

“ನಮ್ಮ ಅಯ್ಯ ಕರಿಸಿದ್ದೇಗೌಡ ಅಂತವ್ನೆ” ವೈದ್ಯಾಧಿಕಾರಿ, ಮಿಡ್‌ವೈಫ್‌ಅಮ್ಮನವರನ್ನು ಕರೆದು ಗಾಂಧಿಯನ್ನು ಪರೀಕ್ಷೆಯ ಕೊಠಡಿಗೆ ಕೆರೆದುಕೊಂಡು ಹೋಗಿ ಮಲಗಿಸುವಂತೆ ಹೇಳಿದರು. ಅವಳು ಹಾಗೆಯೇ ಮಾಡಿದಳು. ನಾಲಿಗೆ ಕಣ್ಣು, ಗಂಟಲು ನೋಡಿದ ಮೇಲೆ ಹೃದಯ ಶಾಸ್ವಕೋಶಗಳ ಪರೀಕ್ಷೆ ಮುಗಿಸಿ, ಹೊಟ್ಟೆಯನ್ನು ಪರೀಕ್ಷೆಮಾಡಿದ ವೈದ್ಯಾಧಿಕಾರಿ  ಗಾಂಧಿಯ ತಾಯಿಯ ಕಡೆ ತಿರುಗಿ “ನಿನ್ನ ಹೆಸರೇನಮ್ಮ” ಎಂದರು.

“ನಿಂಗಮ್ಮ ಸ್ವಾಮಿ”

“ನೋಡಮ್ಮ ನಿಮ್ಮುಡುಗನಿಗೆ ನೀರು ಸೇರ್ಕೊಂಡಿದೆ. ಜೊತೆಗೆ ಕಾಲುಗಳೂ ಊದಿಕೊಂಡಿವೆ. ಇದು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ. ಆಗಲೇ ಕಪ್ಪು ಈಲಿಗೂ (ಲಿವರ್‌) ಕಾಯಿಲೆ ಹಬ್ಬಿ ಅದು ಮುಟ್ಟಿದರೆ ಸಾಕು ಗಾಂಧಿ ನೋವು ಅಂತ ಬಡ್ಕೋತಾನೆ” ಏನೋ ಸ್ವಾಮಿ ನಿಮ್ಮ ಎಕ್ಡ ಮೂರು ಮೈಲಿ ನಡೀಬೇಕಾದ್ರೆ ಮೂವತ್ತು ತಾವು ಕುಂತ್ಕಂಡು, ತೆವಳ್ಕೊಂಡು ಬಂದು, ಉಳಿಸಿ ಕೊಡಿ, ನಾಳಾಕೆ ನಮ್ಮಪ್ಪನ ಕರ್ಕೊಂಡು ಬತ್ತೀನಿ…. ತಂದೆ ಇಲ್ಲದ ತಬ್ಬಲಿ”.

“ನಿನ್ನ ಗಂಡನಿಗೆ ಏನಾಗಿ ಸತ್ತೋದ?”

“ಸ್ವಾಮಿ ಸೇಂದಿ ಇಳಿಸೋಕೆ ಸಾಹುಕಾರ್ರು ತಾವು ಇದ್ರು. ಒಂದು ದಿನ ಮರದ ಮೇಲಿಂದ ಬಿದ್ದು ಫಕ್ಕನೆ ಪ್ರಾಣ ಬುಟ್ಟು -ಬುಟ್ರು”

“ಅಯ್ಯೋ ಪಾಪ! ನೋಡಮ್ಮ ನಿಮ್ಮುಡುಗನಿಗೆ ಎಕ್ಸರೇ ಆಗಬೇಕು. ಹೃದಯದ ಪರೀಕ್ಷೆ ಮಾಡಬೇಕು. ರಕ್ತ, ಮೂತ್ರ ಪರೀಕ್ಷೆ ಮಾಡಬೇಕು. ಇಲ್ಲಾಗೋ ವಿಷಯವಲ್ಲ ಇದು. ಇವನ್ನ ಡಿಸ್ಟ್ರಿಕ್ಟ್‌ಆಸ್ಪತ್ರೆಗೆ ಸೇರಿಸಬೇಕು. ನಾನು ಎಲ್ಲಾನು ಬರೆದು ಕೊಡ್ತೀನಿ. ಹೊಟ್ಟೇಲಿರೋ ನೀರು ಕಡಿಮೆ ಆಗೋಕೆ ಈಗ ಎರಡು ಗುಳಿಗೆ ನುಂಗಿಸ್ತೀನಿ ಎಂದು ಹೇಳಿ ನೀರು ತರಿಸಿ, ಗುಳಿಗೆಗಳನ್ನು ನುಂಗಿಸಿಯೇ ಬಿಟ್ಟರು ಸರಸರನೆ ದೊಡ್ಡಾಸ್ಪತ್ರೆಗೆ ಗಾಂಧಿಯ ಕಾಯಿಲೆಯ ವಿಷಯವಾಗಿ ತಾವು ಪತ್ತೆ ಹಚ್ಚಿರುವ ವಿವರಗಳನ್ನೂ ನಮೂದಿಸಿ ಕೈಗೆ ಕೊಟ್ಟರು.

* * *

ಮೊಮ್ಮಗನ ಸ್ಥಿತಿ ಚಿಂತಾಜನಕವಾದುದೆಂಬುದನ್ನು ಕರಿಸಿದ್ದೇಗೌಡನಿಗೆ ಯಾರೂ ಹೇಳಿಕೊಡಬೇಕಾಗಿರಲಿಲ್ಲ. ಅವನ ಆಸೆಯ ಕುಡಿ ತನ್ನ ಮಗಳು ನಿಂಗಮ್ಮ ಮತ್ತು ಅವಳ ಮಕ್ಕಳು ಪದ್ದಿ ಮತ್ತು ಗಾಂಧಿ. ಪದ್ದಿ ಎಷ್ಟೇ ಅದರೂ ನೆರಮನೆಗೆ ಹೋಗುವ ಹೆಣ್ಣು, ಗಾಂಧಿಯ ಮೇಲೆ ಕರಿಸಿದ್ದೇಗೌಡನಿಗೆ  ಎಲ್ಲೂ ಇಲ್ಲದ ಪ್ರೀತಿ ತನ್ನ ಈ  ಮೊಮ್ಮಗನಿಗೆ ಹೆಸರು ಕಟ್ಟಿದ್ದೇ ಒಂದು ಮರೆಯಲಾಗದ ಘಟನೆ. ಕರಿಸಿದ್ದೇಗೌಡನ ಜೀವನದಲ್ಲಿ ಹದಿನೈದು ವರ್ಷಗಳ ಹಿಂದಿನ ಮಾತು. ಹೊಲ ಉತ್ತು ಸಾಕಾಗಿ ತಾನೂ ಮತ್ತು ಅಳಿಯ ಬುಕ್ಕೇಗೌಡ ಹೊತ್ತು ಮುಳುಗಿದ ಮೇಲೆ ಬಂದಾಗ ಮೊರತುಂಬ ರಗರಗನೆ ಉರಿಯುತ್ತಾ ಮೊಮ್ಮಗು ಮಲಗಿತ್ತು. ಕರಿಸಿದ್ದೇಗೌಡ ಹಿಗ್ಗಿ ಹೀರೇಕಾಯಿ ಆದ. ತನ್ನ ಮೊಮ್ಮಗನ ಅಗಲವಾದ ಕಿವಿಗಳನ್ನು ಕಂಡು ಆನಂದಿಸುತ್ತಾ ಜೋಯಿಷರ ಮನೆ ಹಾರಿದ.  ಜೋಯಿಷರು ಮುಗು ಬಹು ಪ್ರಶಸ್ತವಾದ ಘಳಿಗೆಯಲ್ಲಿ ಹುಟ್ಟಿದೆ ಎಂದು ಲೆಕ್ಕಾ ಹಾಕಿ ಹೇಳಿ ಮಗುವಿನ ಕಿವಿ ಅಗಲ ವಾಗಿರುವುದರಿಂದಲೂ ಮತ್ತು  ಕರಿಸಿದ್ದೇಗೌಡ ಬಹಳ ವರ್ಷಗಳ ಹಿಂದೆ ಶಿವಪುರಕ್ಕೆ ಹೋಗಿ ಮಹಾತ್ಮ ಗಾಂದೀಜಿ ಯವರನ್ನು ಖುದ್ದಾಗಿ ದರ್ಶನ ಪಡೆದು ಬಂದವನು ಈ ಸುತ್ತಮುತ್ತಲಿಗೆ ಇವನೊಬ್ಬನೇ ಆದುದರಿಂದ ಮಗುವಿಗೆ ‘ಮಹಾತ್ಮಾಗಾಂಧಿ’ ಎಂದು ಹೆಸರಿಡಬೇಕೆಂದೂ ತೀರ್ಮಾನ ಹೇಳಿದರು. ಕರಿಸಿದ್ದೇಗೌಡ ಎಷ್ಟು ಮುಗ್ಢ ಎಂದರೆ ‘ಮಹಾತ್ಮಾಗಾಂಧೀಜಿಯವರೇ ಮತ್ತೆ ಜನ್ಮ ಪಡೆದು ನಿನ್ನ ಮಗಳ ಗರ್ಭದಲಿ ಜನಿಸಿದ್ದಾರೆ’ ಎಂದರೆ ಅದನ್ನೂ ನಂಬಿಬಿಡುತ್ತಿದ್ದ. ಸದ್ಯ ಜೋಯಿಷರು ಅಂಥ ಘೋರ ಅಪರಾಧ ಮಾಡಲಿಲ್ಲ.

ಕರಿಸಿದ್ದೇಗೌಡನಿಗೆ ಎರಡು ಎಕರೆ ಹೊಲ. ಒಂದು ಮನೆ, ಇತ್ತೀಚೆಗೆ ಈ ಹೊಲದಲ್ಲಿ ಒಂದು ಎಕರೆಯನ್ನು ಬಡವರಿಗೆ ಮನೆ ಕಟ್ಟಿಕೊಳ್ಳಲೆಂದು ಹಂಚುವುದಕ್ಕಾಗಿ ಸರ್ಕಾರ ವಶಪಡಿಸಿಕೊಂಡಿತ್ತು. ಇದು ಕರಿಸಿದ್ದೇಗೌಡನಿಗೆ ತನ್ನ ಅಳಿಯ ಸತ್ತುದಕ್ಕಿಂತಲೂ ತೀವ್ರ ಚಿಂತೆಗೆ ಗುರಿ ಮಾಡಿತ್ತು. ಈ ಚಿಂತೆಯಲ್ಲಿ ಮುಳುಗಿ ಫಲ ನೀಡುವ ಹಲಸಿನ ಮರವನ್ನು  ಕಡಿದುಕೊಳ್ಳುವುದೋ ಬೇಡವೋ ಎನ್ನುವ ಜಿಜ್ಞಾಸೆಯಲ್ಲಿ ಸಿಕ್ಕಿಬಿದ್ದುದರಿಂದ ಅವನು ತನ್ನ ಮೊಮ್ಮಗನ ಆರೋಗ್ಯದ ಕಡೆಗೆ ಅಷ್ಟು ಗಮನ ಕೊಟ್ಟಿರಲಿಲ್ಲ.

ಮಗಳು ವೈದ್ಯರು ಬರೆದುಕೊಟ್ಟ ಚೀಟಿಯನ್ನು ಕೊಟ್ಟು ಗಾಂಧಿಯನ್ನು ‘ದೊಡ್ಡಾಸ್ಪತ್ರೆಗೆ’ ಸೇರಿಸಬೇಕೆಂತೆ ಎಂದು ಹೇಳಿದಾಗ ಕರಿಸಿದ್ದೇಗೌಡನಿಗೆ ಎದೆ ಧಸಕ್ಕೆಂದಿತು.

ಮಾರನೆಯ ದಿನವೇ ಇಡೀ ಸಂಸಾರವೇ ಬಸ್ಸಿನಲ್ಲಿ ಅಷ್ಟೋ ಇಷ್ಟೋ ಇದ್ದ ಪುಡಿಗಂಟನ್ನು ತೆಗೆದುಕೊಂಡು ದೊಡ್ಡಾಸ್ಪತ್ರೆ ಇರುವ ತಮ್ಮ ಜಿಲ್ಲಾ ಕೇಂದ್ರಕ್ಕೆ ಪಯಣ ಬೆಳೆಸಿತು.

ಆಸ್ಪತ್ರೆ ತಲುಪಿದಾಗ ಮಧ್ಯಾಹ್ನವಾಗಿತ್ತು. ಹೊರ ರೋಗಿಗಳನ್ನು (ಔಟ್‌ಪೇಷೆಂಟ್‌) ಪರೀಕ್ಷೆ ಮಾಡುವ ವಿಭಾಗದಲ್ಲಿ ರೋಗಿಗಳ ಹೆಸರು ದಾಖಲು ಮಾಡಿಕೊಂಡು  ಚೀಟಿಯನ್ನು ಕೊಟ್ಟು ವೈದ್ಯರ ಬಳಿಗೆ ಕಳಿಸುವ ಗುಮಾಸ್ತರಿಗೆ ತಮ್ಮ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರರ ವೈದ್ಯಾಧಿಕಾರಿಗಳು ಕೊಟ್ಟಿದ್ದ ಕಾಗದವನ್ನು ಕೊಟ್ಟಾಗ, ಗುಮಾಸ್ತ ಎಲ್ಲವನ್ನೂ ಓದಿ, ರೋಗಿಯ ಹೆಸರನ್ನು ಎರಡು ಮೂರು ಸಾರಿ ಓದಿ, ಏನೋ ಅನುಮಾನ ಬಂದವನಂತೆ,  ಕರಿಸಿದ್ದೇಗೌಡ ತನ್ನ ಮೊಮ್ಮಗನನ್ನು ತೋರಿಸಲು ಓಹೋ ಇವನ ಹೆಸರು ‘ಮಹಂತೇಗೌಡ’ ಅಂತ ಅಲ್ವೆ? ನಿಮ್ಮ ಡಾಕ್ಟ್ರು ಇವನ್ನ ‘ಮಹಾತ್ಮಾಗಾಂಧಿ’ ಅಂತ ಬರೆದು ಬುಟ್ಟವರಲ್ಲ ! ಎಂದು ನಕ್ಕ.

ಕರಿಸಿದ್ದೇಗೌಡ “ಬರೆದಿರೋದು ಸರಿಯಾಗೆ ಅದೆ ಸ್ವಾಮಿ. ಇವನ ಹೆಸರು ಮಹಾತ್ಮಗಾಂಧಿ ಅಂತ್ಲೆ!” ಎಂದ. ಗುಮಾಸ್ತ ಬಿಟ್ಟ ಬಾಯಿ ಬಿಟ್ಟುಕೊಂಡೆ ಮಹಾತ್ಮ ಗಾಂಧಿಯನ್ನು ನೋಡಿದ. “ಸರಿಯಪ್ಪ ತಗೋ ಚೀಟಿ”. ಎಂದವನೆ ಹಳೆಯ ಕಾಗದ ಜೊತೆಗೆಂದು ಹೊಸ ಚೀಟಿಯನ್ನು ಕೊಟ್ಟ: ಆ ಕಡೆಗೆ ಹೋಗು ಎಂದು ತೋರಿಸಿದ.

ಅಲ್ಲೊಬ್ಬ ಇವರು ಕೊಟ್ಟ ಕಾಗದಗಳನ್ನೂ ಮತ್ತು ಇನ್ನೂ ಅನೇಕ ಹೊರರೋಗಿಗಳು ಕೊಟ್ಟ ಕಾಗದಗಳನ್ನೂ ತೆಗೆದುಕೊಂಡು ಒಳಗೆ ಹೋಗಿ ಒಂದು ದೊಡ್ಡ ಮೇಜಿನ ಸುತ್ತ ಕುರ್ಚಿಗಳಲ್ಲಿ ಕುಳಿತಿದ್ದ ವೈದ್ಯರ ಗುಂಪಿನ ಮುಂದೆ ಇಟ್ಟು ಬಂದ.

ಮಹಾತ್ಮಾಗಾಂಧಿಯ ಸರದಿ ಬಂದಾಗ ವೈದ್ಯರ ಗುಂಪು ಗಹಗಹಿಸಿತು. ಜೋರಾಗಿ ಕೂಗಿ ಕರೆದರು; ‘ಯಾರಪ್ಪಾ ಮಹಾತ್ಮಾಗಾಂಧಿ?’

“ಕರ್ಕೊಂಡು ಬಂದೇ ಸ್ವಾಮಿ ಇಲ್ಲವನೆ” ಎಂದು ಕರಿಸಿದ್ದೇಗೌಡ  ತನ್ನ ಮೊಮ್ಮಗನನ್ನು ಕರೆದುಕೊಂಡು ಒಳಗೋದ. ನಿಂಗಮ್ಮನನ್ನೂ ಮತ್ತು ಪದ್ದಿಯನ್ನೂ ಹೊರಗಡೆಯೇ ಜವಾನ ತಡೆದ.

ಕರಿಸಿದ್ದೇಗೌಡ  ತಮ್ಮ ಮುಂದೆ ಕರೆದು ತಂದು ನಿಲ್ಲಿಸಿದ ವ್ಯಕ್ತಿಯನ್ನು ವೈದ್ಯ ಮಹಾಶಾಯರುಗಳೆಲ್ಲ ಒಂದು ವಿಚಿತ್ರ ಕಾಯಿಲೆಯನ್ನು ಪತ್ತೆ ಹಚ್ಚಿದಾಗಲೋ ಅಥವಾ ಕ್ಯಾನ್ಸರ್‌ವ್ಯಾಧಿಗೆ ಔಷಧಿ ಕಂಡುಹಿಡಿದಾಗಲೋ ಆಗುವ ವಿಸ್ಮಯದಂತೆಯೇ ನೋಡಿದರು.

‘ಮಹಾತ್ಮಾಗಾಂಧಿ’ ಎಂದು ಕರೆಯಲ್ಪಡುವ ವ್ಯಕ್ತಿಯನ್ನು ಕಂಡು ಅವರಿಗೆ ಅಳಬೇಕೋ ನಗಬೇಕೋ ಅಥವಾ ನಂಬಂದಿರುವಂಥ ಒಂದು ಸ್ಥಿಯಲ್ಲಿಯೇ ಇದ್ದು ಬಿಡಬೋಕೋ ಏನೂ ತೋಚದೆ ಪರೀಕ್ಷೆಯ ಕೊಠಡಿಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿ ಕರಿಸಿದ್ದೇಗೌಡನನ್ನು ಕರೆದು “ನೋಡಯ್ಯ ನಿನ್ನ ಮೊಮ್ಮಗನಿಗೆ ಹೃದಯ ಹಾಗೂ ಮೂತ್ರಪಿಂಡಗಳ ಕಾಯಿಲೆ, ಔಷಧಿಗಳೆಲ್ಲಾನೂ ಬರೆದು ಕೊಡ್ತೀವಿ. ತಗೋ, ಹೇಗೆ ಸೇವಿಸಬೇಕು. ಅನ್ನೋದು ಹೇಳ್ತೀವಿ. ಹಾಗೆ ಕೊಡು. ಸ್ಪಲ್ಪ ಹುಷಾರುಗುತ್ತೆ’ ಎಂದರು. ಕರಿಸಿದ್ದೇಗೌಡನನ್ನು ಕತ್ತಿಡಿದು ನೀರಿಗೆ ಅದುಮಿದಂತಾಯಿತು.

“ನಿಂದಮ್ಮಯ್ಯ, ಏನೋ ನನ್‌ಮೊಮ್ಮಗನ್ನ ಕಾಪಾಡಿ ಇಲ್ಲೇ ಒಸಿ ದಿನ ಇಟ್ಕೊಂಡು ಉಳಿಸಿಕೊಡಿ. ನೀವು ಇವನಿಗೆ ಮಾಡೋ ಉಪಕಾರ ಈ ನನ್ನ ಅಪ್ಪನಿಗೆ  ಮಾಡೋ ಉಪಕಾರ ಅಂತ ತಿಳ್ಕೊಂಡು ಮಾಡಿ; ನಿಮ್ಗೆ ಪುಣ್ಯ ಬತ್ತದೆ” ಎಂದು ಅಲ್ಲಿಯೇ ನೇತು ಹಾಕಿದ್ದ ಭಾರತದ ಭಾಗ್ಯವಿಧಾತ ಮಹಾತ್ಮಗಾಂಧೀಜಿಯವರ ಭಾವಚಿತ್ರಕ್ಕೆ ಕೈಜೋಡಿಸಿ, ಕಣ್ಣೀರು ಹಾಕುತ್ತಾ ನಿಂತುಬಿಟ್ಟ. ವೈದ್ಯರು ಮರು ಮಾತಾನಾಡದೆ ಚೀಟಿಯಲ್ಲಿ ಬರೆದು ಗಂಡಸರ ವಾರ್ಡಿನಲ್ಲಿ ಮಹಾತ್ಮಗಾಂಧೀಜಿಯನ್ನು ಸೇರಿಸುವುದೆಂದು ಬರೆದು ಒಬ್ಬ ಜವಾನನನ್ನು ಕರೆದು ಜೊತೆಯಲ್ಲಿ ಕಳುಹಿಸಿದರು.

* * *

ಮುಂದಿನ ವಿಷಯವನ್ನು ಹೆಚ್ಚಿಗೆ ಬೆಳಸದೆ ಮುಗಿಸುವುದು ಒಳ್ಳೆಯದೆಂದು ಕಾಣಿಸುತ್ತದೆ. ಮಹಾತ್ಮಗಾಂಧೀಜಿಯನ್ನು  ಮೂವತ್ತು ಜನರು ಇರಬೇಕಾದ ವಾರ್ಡಿನಲ್ಲಿ  ಅರವತ್ತು ಜನರಿರುವ ಕಡೆ ನೆಲದ ಮೇಲೆ ಒಂದು ಹಾಸಿಗೆ ಕೊಟ್ಟು ಹಾಕಿದರು. ಎಕ್ಸರೇ, ತೊಂಟೆ ಪರೀಕ್ಷೆಗಳ ಜೊತೆಗೆ ಔಷಧೋಪಚಾರವೂ ನಡೆಯತೊಡಗಿತು. ವೈದ್ಯರು ಬರೆದುಕೊಟ್ಟ ಔಷಧಿಗಳನ್ನು ತಂದುಕೊಡುವುದಕ್ಕೆ ಮೂರು ದಿವಸಕ್ಕೆ ಕರಿಸಿದ್ದೇಗೌಡನ ಪುಟ್ಟ ಗಂಟು ಕರಗಿಹೋಯಿತು.

ನಾಲ್ಕನೆಯ ದಿನ ತನ್ನ ಅವ್ವ ನಿಂಗಮ್ಮ ತನ್ನ ತಂಗಿಯ ಕಿವಿಯ ಮತ್ತು ತನ್ನ ಕಿವಿಯ ಓಲೆಗಳನ್ನು ಬಿಚ್ಚಿ ತನ್ನ ಅಯ್ಯನಿಗೆ ಏಕೆ ಕೊಡುತ್ತಿದ್ದವರೆಂಬುದನ್ನು ಊಹಿಸಿ ತನ್ನ ಪ್ರೀತಿಯ ಅಯ್ಯನನ್ನು ಕರೆದು ಕೇಳಿದ: “ಅಯ್ಯ ನನ್ನ ಊರಿಗೇ ಕರ್ಕೊಂಡು ನಡಿ. ನನ್ನ ಹಣೇಬರಹ ಇದ್ದಾಂಗಾಯ್ತದೆ”.

“ಅಂಗೆಲ್ಲ ಮಾತಡಬ್ಯಾಡ ನಾನು ಇನ್ನೂ ಬದುಕಿವ್ನಿಕಲ ಮಗ. ನಿನ್ನ ಉಳಿಸಿಕೋತಿನಿ”.

ತನ್ನ  ಮೇಲೆ ಅಯ್ಯನಿಗಿರುವ ಪ್ರೀತಿಗಾಗಿ ಗಾಂಧಿಗೆ ಅಳು ಒಳಗಿನಿಂದ ಗುದ್ದುಕೊಂಡು ಬಂತು. ತನ್ನ ಪ್ರೀತಿಯ ಅಯ್ಯನ ತೊಡೆಯ ಮೇಲೆ ತಲೆ ಮಡಗಿಕೊಂಡು ದೃಷ್ಟಿಗೆ ದೃಷ್ಟಿ ಸೇರಿಸಿ ಹೇಳಿದ ; “ಅಯ್ಯ ನಾನು ಸತ್ತೋದ್ರೆ ನನ್ನ ನಮ್ಮ ಅಲಸಿನ ಮರದ ಬುಡದಲ್ಲೇ ಹಾಕಬೇಕು”. ಕರಿಸಿದ್ದೇಗೌಡ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ. ನಿಂಗಕ್ಕ ‘ಬುಡ್ತು ಅನ್ನು’ ಎಂದು ಗಾಂಧಿಯನ್ನು ಗದರಿಕೊಂಡಳು. ಪದ್ದಿ ‘ಅಣ್ಣಾ ಅಣ್ಣಾ’ ಎಂದು ಬಿಕ್ಕಳಿಸಿ ಅತ್ತುಬಿಟ್ಟಳು.

ಇಷ್ಟೆಲ್ಲಾ ನಡೆಯುತ್ತಿರುವಾಗ ಎಂ.ಡಿ ಪಾಸು ಮಾಡಿರುವ ದೊಡ್ಡ ಡಾಕ್ಟರ್‌ಸಾಹೇಬರು ದಯಾಮಾಡಿಸಿ ಗಾಂಧಿಯನ್ನು ಪರೀಕ್ಷೆ ಮಾಡಿ, ಒಂದು ಚೀಟಿಯಲ್ಲಿ ಔಷಧಿಯನ್ನು ಬರೆದು ಆದಷ್ಟು ಬೇಗ ತರಿಸಬೇಕೆಂದು ಅಪ್ಪಣೆ ಮಾಡಿ, ಬೇರೆ ರೋಗಿಗಳನ್ನು ನೋಡತೊಡಗಿದರು. ಮಗಳು ಮತ್ತು ಮೊಮ್ಮಗಳ ಓಲೆಗಳನ್ನು ತೆಗೆದುಕೊಂಡು ಊರಿಗೆ ಬಂದು ಕರಿಸಿದ್ದೇಗೌಡ ಗಿರವಿ ಇಡಲು ಪ್ರಯತ್ನಿಸಿದ. ಯಾರೂ ಒಪ್ಪಲಿಲ್ಲ. ಸಾಲ ಪಡೆಯಲು ಯತ್ನಿಸಿದ. ಎಲ್ಲೂ ಒಂದು ಪೈಸೆ ಹುಟ್ಟಲಿಲ್ಲ. ಅಲಸಿನಮರ ಕೊಡುವುದಾರೆ ಕೊಂಡುಕೊಳ್ಳುವುದಾಗಿ ಸುಳಿವು ಸಿಕ್ಕಲು, ಇನ್ನೂರ ಐವತ್ತು ರೂಪಾಯಿಗಳಿಗೆ ಮರವನ್ನು ಮಾರಬೇಕಾದರೆ ಎರಡು ದಿವಸಗಳು ಹಿಡಿದವು. ಹಣ ಪಡೆದು ಕರಿಸಿದ್ದೇಗೌಡ ಬಸ್ಸು ಹತ್ತಿ ಆಸ್ಪತ್ರೆಯ ಬಳಿಗೆ ಬಂದಾಗ ಮಗಳು ನಿಂಗವ್ವ ಬಾಗಿಲಲ್ಲೆ ಪದ್ದಿಯನ್ನು ನಿಲ್ಲಿಸಿಕೊಂಡು ಅಳುತ್ತಾ ನಿಂತಿದ್ದಳು. ಕರಿಸಿದ್ದೇಗೌಡ, ‘ಗಾಂಧಿ ಹೇಗಿದ್ದಾನೆ?’ ಎಂದು ಕೇಳಲೇ ಇಲ್ಲ. ಬದಲು ‘ಯಾವಾಗ ಜೀವ ಹೋಯ್ತು’ ಎಂದು ಕೇಳಿದ.

“ರಾತ್ರಿ ಸರೊತ್ತಿನಲ್ಲಿ, ಹೆಣೀನ ಮನೇಲಿ ಮಲಗಿಸವ್ರೆ” ಎಂದು ಅಳಲು ಪ್ರಾರಂಭಿಸಿದ ಮಗಳನ್ನು ಸಂತೈಸುತ್ತ  ಕರಿಸಿದ್ದೇಗೌಡ ಹೇಳಿದ: “ಮನುಷ್ರು ಸಾಯ್ದೆ ಕಲ್ಲು ಸತ್ತಾದ. ಸುಮ್ಕಿರು ಮಂತೆ” ಎಂದು ಗಾಂಧಿಯ ಹೆಣವನ್ನು ಪಡೆಯಲು ಅಪ್ಪಣೆಗಾಗಿ ದೊಡ್ಡ ಸಾಹೇಬರ ರೂಮಿನ ಕಡೆ ಹೆಜ್ಜೆ ಹಾಕಿದ.

ಲೇಖಕರು

ಬೆಸಗರ ಹಳ್ಳಿ ರಾಮಣ್ಣ (೧೯೩೮-೧೯೯೯) ವೃತ್ತಿಯಿಂದ ವೈದ್ಯರಾಗಿದ್ದವರು. ಬಂಡಾಯ ಚಳುವಳಿಯ ಪ್ರಸಿದ್ಧ ಲೇಖಕರಲ್ಲಿ ಒಬ್ಬರು. ಗ್ರಾಮೀಣ ಭಾಗದ ಬದುಕನ್ನು ಆಡು ಭಾಷೆಯಲ್ಲಿ ಚಿತ್ರಿಸುವುದರಲ್ಲಿ ಅವರು ಖ್ಯಾತರಾಗಿದ್ದಾರೆ. ಬಡವರ ಮತ್ತು ಅಸಹಾಯಕರ ಜೀವನವನ್ನು ಪ್ರೀತಿಯಿಂದ  ಚಿತ್ರಿಸುವುದು ಅವರ ಕತೆಗಳ ವಿಶಿಷ್ಟತೆಯಾಗಿದೆ. ‘ಗರ್ಜನೆ’, ‘ಒಂದು ಹುಡುಗನಿಗೆ ಬಿದ್ದ ಕನಸು’, ‘ಹರಕೆಯ ಹಣ’ ಅವರ ಮುಖ್ಯಕಥಾಸಂಕಲನಗಳು. ‘ಗರ್ಜನೆ’ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಆಕಾಡೆಮಿ ಬಹುಮಾನ ಬಂದಿದೆ.

ಆಶಯ

ಪ್ರಸ್ತುತ ಕತೆಯನ್ನು ‘ಒಂದು ಹುಡುಗನಿಗೆ ಬಿದ್ದ ಕನಸು’, ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಈ ಕತೆಯ ಬಡ ಕುಟುಂಬದ ರೋಗಿಯೊಬ್ಬನ ದಾರುಣ ಪರಿಸ್ಥಿತಿಯ ಮೇಲೆ ಬೆಳಕು ಬೀರುತ್ತದೆ. ಬಡವರು ನಮ್ಮ ದೇಶದಲ್ಲಿ ವೈದ್ಯಕೀಯ ಸೌಲಭ್ಯ ಪಡೆಯಲು ಪಡಬೇಕಾದ ಪಾಡನ್ನು ಕತೆ ನೀರೂಪಿಸುತ್ತದೆ. ತಾಂಧಿಯ ಮೌಲ್ಯಗಳಿಗೆ ಈ ದೇಶದಲ್ಲಾಗಿರುವ ಅವಸ್ಥೆಯನ್ನು ಕತೆ ವಿಡಂಬನೆ ಮಾಡುತ್ತದೆ.

ಪದಕೋಶ

ಸರೊತ್ತು = ಮಧ್ಯರಾತ್ರಿ, ಗಿರವಿ =ಅಡ ಇಡುವುದು, ವಸಿ =ಸ್ಪಲ್ಪ, ಮಂತೆ = ಮತ್ತೆ

ಪ್ರಶ್ನೆಗಳು

೧. ಕರಿಸಿದ್ದೇಗೌಡನು ತನ್ನ ಮೊಮ್ಮಗನಿಗೆ ಗಾಂಧಿಯ ಹೆಸರನ್ನು ಇಡಲು ಕಾರಣವೇನು?

೨. ಗಾಂಧಿ ಕತೆ ನಮ್ಮ ಭಾರತದ ವರ್ಧಮಾನದ ವಿಷಮತೆಯನ್ನು ಹೇಗೆ ಚಿತ್ರಿಸುತ್ತದೆ?

೩. ಗಾಂಧಿಯು ಆಸ್ಪತ್ರೆಗೆ ಬಂದಾಗ ವೈದ್ಯರ ಪ್ರತಿಕ್ರಿಯೆಗಳನ್ನು ವಿವರಿಸಿರಿ.

ಪೂರಕ ಓದು

೧. ಬೆಸಗರ ಹಳ್ಳಿ ರಾಮಣ್ಣ ಅವರ ‘ಪ್ರಜಾಭುತ್ತ ಮತ್ತು ಮೂರು ಮಂಗಗಳು’ಕತೆ.

೨. ಚಂದ್ರಶೇಖರ ಪಾಟೀಲ ಅವರ ‘ಗಾಂಧೀಸ್ಮರಣೆ’ ಕವನ ಸಂಕಲನ.

೩. ಇದೇ ಪುಸ್ತಕದಲ್ಲಿರುವ ತ್ರಿವೆಣಿಯವರ ‘ಬೆಡ್‌ನಂಬರ್‌ಏಳು’ ಕತೆ.

೪. ಪಿ ಲಂಕೇಶ್‌ಅವರ ‘ಮುಟ್ಟಿಸಿಕೊಂಡವನು’ ಕತೆ.

೫. ಪೂರ್ಣಚಂದ್ರ ತೇಜಸ್ವಿ ಅವರ ‘ಕುಬಿ ಮತ್ತು ಇಯಾಲ’ ಕತೆ.

೬. ಡಾ. ಅನುಪಮಾ ನಿರಂಜನ ಅವರ ಕತೆಗಳು.

೭. ಡಾ. ಶಿವರಾಂ ಅವರ ‘ಮನೋನಂದನ’ ಎಂಬ ಮನೋವೈದ್ಯನ ಅನುಭವಗಳನ್ನು ಆಧರಿಸಿದ ಕೃತಿ.