ಹಾವುಮೀನಿನ ಬಗ್ಗೆ ಯೋಚಿಸಿದ ಕೂಡಲೆ ನನಗೆ ಇಬ್ಬರು ವ್ಯಕ್ತಿಗಳು ಜ್ಞಾಪಕಕ್ಕೆ ಬರುತ್ತಾರೆ. ಒಬ್ಬ ಚೀಂಕ್ರ ಮೇಸ್ತ್ರಿ, ಇನ್ನೊಬ್ಬ ಅರಿಸ್ಟಾಟಲ್‌, ಪ್ಲೇಟೋ ಶಿಷ್ಯನಾದ ವಿಶ್ವವಿಖ್ಯಾತ ತತ್ವಜ್ಞಾನಿ ಅರಿಸ್ಟಾಟಲ್‌ಬಗ್ಗೆ ಎಲ್ಲರೂ ಕೇಳಿರಬಹುದು. ಆದರೆ ಚೀಂಕ್ರ ಮೇಸ್ತ್ರಿ ಬಗ್ಗೆ ಯಾರೂ ಕೇಳಿರುವುದಿಲ್ಲ ಅಲ್ಲವೆ? ಸಹ್ಯಾದ್ರಿಯ ಯಾವುದೋ ಒಂದು ಮೂಲೆಯಲ್ಲಿ ಮೌನವಾಗಿ ಬಾಳು ಸಾಗಿಸಿದ ಇವನ ಬಗ್ಗೆ ಕೇಳಬೇಕಾದ ಪ್ರಮೇಯವಾದರೂ ಏನಿದ್ದೀತು! ಅದಕ್ಕೇ ಅವನ ವಿಷಯ ಕೊಂಚ ಹೇಳಿದರೆ ಅವನಿಗೂ ಅರಿಸ್ಟಾಟಲ್‌ಗೂ ಏನು ಸಂಬಂಧ ಎಂದು ನಿಧಾನವಾಗಿ ಗೊತ್ತಾದೀತು.

ಭದ್ರಾನದಿ ಬಾಳೆಹೊನ್ನುರು ದಾಟಿದ ಮೇಲೆ ಲಕ್ಕವಳ್ಳಿ ಅಣೆಕಟ್ಟಿನ ಹಿನ್ನೀರಿನವರೆಗೂ ದಟ್ಟ ಕಾಡಿನ ನಡುವೆ ಹರಿದುಹೋಗುತ್ತದೆ. ಆಚೀಚೆಯ ದಟ್ಟಕಾಡಿನ ಗುಡ್ಡಗಳ ನಡುವೆ ನದಿ ಬೋರ್ಗರೆಯುತ್ತ ಹರಿಯುವ ಈ ಜಾಗಕ್ಕೆ ಯಾರೂ ಸಾಧಾರಣವಾಗಿ ಹೋಗುವುದಿಲ್ಲ; ಇಲ್ಲಿ ತುಂಬಾ ಆನೆ ಕಾಟ. ನಾವೇ ಕೆಲವಾರು ಸಾರಿ ಆನೆ ಕೈಲಿ ಸಿಕ್ಕಿಕೊಂಡು ಅಡ್ಡದಾರಿ ಹಿಡಿದು ಬಚಾವಾಗಿ ಬಂದಿದ್ದೇವೆ. ಈ ದಾರಿ ಹಿಡಿದು ನದಿಯ ಜಾಡಿನಲ್ಲೇ ಹೊರಟರೆ ಅಲ್ಲೊಂದು ಕಡೆ ಕುದರೆ ಅಬ್ಬಿ ಅನ್ನುವ ಜಾಗ ಸಿಗುತ್ತೆ. ಇಲ್ಲಿ ಭದ್ರಾನದಿ ಬಂಡೆಗಳನ್ನು ಕೊರೆದುಕೊಂಡು ಸಣ್ಣ ಜಲಪಾತವಾಗಿ ಧುಮ್ಮಿಕ್ಕುತ್ತದೆ. ಇಲ್ಲಿ ನೀವು ಬಂಡೆಗಳ ನಡುವೆ ನದಿ ಹರಿಯುವುದನ್ನು ನೋಡುತ್ತಾ ತುಂಬ ಹೊತ್ತು ಕುಳಿತಿದ್ದರೆ, ಅಲ್ಲೊಬ್ಬ ಮುದುಕ ಕಲ್ಲಿನೊಡನೆ ಕಲ್ಲಾಗಿ ಅಲ್ಲಾಡದೆ ಗಾಳದ ಕೋಲು ಹಿಡಿದು ಕುಳಿತಿರುವುದು ಕಾಣುತ್ತದೆ. ಅವನ ಹೆಸರೇ ಚೀಂಕ್ರ ಮೇಸ್ತ್ರಿ. ಅವನ ಪಕ್ಕ ಒಂದು ಏಲಕ್ಕಿ ಕೊಯ್ಲಿಗೆ ಉಪಯೋಗಿಸುವ ಮುಚ್ಚಳದ ಬೆತ್ತದ ಬುಟ್ಟಿ ಇರುತ್ತದೆ. ಇದರಿಂದ ನೀವು ಅವನನ್ನು ಸುಲಭವಾಗಿ ಗುರುತಿಸಬಹುದು. ಏಕೆಂದರೆ ಬೇರೆ ಯಾರೂ ಆ ತರದ ಬುಟ್ಟಿ ಹಿಡಿದು ಅಲ್ಲಿಗೆ ಮೀನು ಹಿಡಿಯಲು ಬರುವುದಿಲ್ಲ.

ಅರಿಸ್ಟಾಟಲ್‌ಗೂ ಹಾವುಮೀನಿಗೂ ಇರುವ ಸಂಬಂಧ ತಿಳಿಯುವುದಕ್ಕೆ ಎಷ್ಟೋ ಮೊದಲೇ ಹಾವುಮೀನಿನ ವಿಚಿತ್ರ ಸಂಗತಿಗಳನ್ನು ನನಗೆ ಹೇಳಿದವನು ಈ ಮುದುಕ ಚೀಂಕ್ರ ಮೇಸ್ತ್ರಿ. ಅವನು ಅಲ್ಲಿಂದ ತುಂಬಾ ದೂರದಲ್ಲಿರುವ ಕರಡಿಕಾನು ತೋಟದಲ್ಲಿ ಹುಟ್ಟಿದವನು. ಅಲ್ಲೇ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಈಗ ಚೀಂಕ್ರನ ಹೆಂಡತಿ ಮತ್ತು ಅಳಿಯ ಮಗಳು ಕೆಲಸಕ್ಕೆ ಹೋಗುತ್ತಾರೆ. ಚೀಂಕ್ರ ಕೆಲಸಕ್ಕೆ ಹೋಗುವುದಿಲ್ಲ. ನಾನು ಅವನಿಗೆ ವಯಸ್ಸಾಗಿರುವುದರಿಂದ ಕೆಲಸಕ್ಕೆ ಹೋಗುವುದಿಲ್ಲೆಂದು ತಿಳಿದೆ. ಚೀಂಕ್ರ ಮೇಸ್ತ್ರಿಗೆ ದಿನಾ ಹೊಳೆದಡಕ್ಕೆ ಬಂದು ಗಾಳ ಹಾಕಿಕೊಂಡು ಕೂರುವುದೊಂದೇ ಕೆಲಸ. ಮೀನು ಸಿಕ್ಕಿದರೂ ಸಂತೋಷ, ಸಿಗದಿದ್ದರೂ ಸಂತೋಷ. ಅವನೇನೂ ಮೀನು ಹಿಡಿದು ಹೆಂಡಿರು ಮಕ್ಕಳ ಹೊಟ್ಟೆ ಹೊರೆಯಬೇಕಾಗಿರಲಿಲ್ಲ. ಒಟ್ಟಿನಲ್ಲಿ ಬೆಳಗಿನಿಂದ ಸಂಜೆವರೆಗೆ ಹೊಳೆ ದಡದಲ್ಲಿ ಕುಳಿತುಕೊಳ್ಳಲು ಗಾಳ ಹಾಕುವುದು ಅವನಿಗೊಂದು ಕಾರಣ ಅಷ್ಟೆ.

ಚೀಂಕ್ರ ಯಾರ ಜೊತೆಯೂ ಮಾತಾಡದ ಮೌನಿ. ಅವನ ವರ್ತನೆ ನೋಡಿದರೆ ಅವನೊಬ್ಬ ಝೆನ್‌ಬುದ್ಧಿಸ್ಟ್‌ಇರಬಹುದೆನ್ನಿಸುತ್ತದೆ. ಇಲ್ಲದಿದ್ದರೆ ಯಾರೊಡನೆಯೂ ಮಾತಾಡದೆ ಕಾಲ ಪ್ರವಾಹದಂತೆ ಹರಿಯುವ ನದಿಯನ್ನೆ ನಿಟ್ಟಿಸುತ್ತಾ ಯಾಕೆ ಅವನು ಕುಳಿತುಕೊಳ್ಳಬೇಕು. ಯಾರೂ ಏನು ಮಾತಾಡಿಸಿದರೂ ಸಣ್ಣಗೆ ನಸುನಕ್ಕು ತಲೆಯಾಡಿಸಿ ಬಿಡುತ್ತಾನೆ. ಬಹಳ ಜನ ಅವನಿಗೆ ಮತು ಬರುವುದಿಲ್ಲ, ಮೂಗ ಎಂದೇ ತಿಳಿದಿದ್ದಾರೆ. ಆದರೆ ನಾವೂ ಅವನಂತೆಯೆ ಗಾಳ ಹಾಕಿಕೊಂಡು ಕೂರುತ್ತಿದ್ದುದರಿಂದ ನಮ್ಮನ್ನು ಸಹೋದ್ಯೋಗಿಗಳೆಂದು ತಿಳಿದೋ ಏನೋ ನಮ್ಮ ಜೊತೆ ಮಾತ್ರ ಮಾಡುತ್ತಿದ್ದ.

ಅವನು ಕುಳಿತುಕೊಳ್ಳುತ್ತಿದ್ದ ಜಾಗಕ್ಕಿಂತ ಕೊಂಚ ಮೇಲೆ ಕುದುರೆ ಅಬ್ಬಿಯ ಪುಟ್ಟ ಜಲಪಾತ ಇತ್ತು. ಜಲಪಾತದ ಬಳಿ ಲೆಕ್ಕವಿಲ್ಲದಷ್ಟು ಮೀನುಗಳು ಮೇಲಕ್ಕೆ ಹೋಗಲು ನೆಗೆನೆಗೆದು ನೀರಿನ ಧಾರೆಗೆ ಸಿಕ್ಕೊಡನೆ ಹಿಂದಕ್ಕೆ ಮಡುವಿಗೆ ಬೀಳುತ್ತಿದ್ದವು. ಹೀಗೆ ಕೆಳಗಿನಿಂದ ಮೇಲಕ್ಕೆ ಹತ್ತಿಬಂದ ಮೀನುಗಳಿಗೆಲ್ಲ ಮುಂದೆ ಹೋಗಲು ಜಲಪಾತ ಅಡ್ಡಿಯಾಗಿ ಜಲಪಾತದ ಕೆಳಗಿನ ಆಳವಾದ ಮಡುವಿನಲ್ಲಿ ಗುಂಪಾಗಿ ಸೇರಿಕೊಂಡಿದ್ದವು. ಆದರೆ ನಾವು ಎಷ್ಟು ದಿನ ಆ ಮಡುವಿನಲ್ಲಿ ಮೀನು ಹಿಡಿಯಬೇಕೆಂದು ಪ್ರಯತ್ನಿಸಿದರೂ ಒಂದು ಮೀನೂ ನಮ್ಮ ಗಾಳಗಳಿಗೆ ಸಿಕ್ಕಲಿಲ್ಲ. ಹಾಗಾದರೆ ಗಾಳಕ್ಕೆ ಏನು ತಿಂಡಿ ಸಿಕ್ಕಿಸಿದರೆ ಈ ಮೀನುಗಳು ಬಾಯಿಹಾಕಿ ಸಿಕ್ಕಿಕೊಳ್ಳುತ್ತವೆ? ತಿಳಿಯೋಣ ಎಂದು ಈ ಮುದುಕನ ಬಳಿಗೆ ಹೋದೆವು. ಯಾರೊಡನೆಯೂ ಮಾತಾಡದ ಈ ವಿಚಿತ್ರ ಒಂಟಿಗೇಡಿ ಮುದುಕನನ್ನು ಆವರೆಗೂ ನಾವು ಮಾತಾಡಿಸಲು ಹೋಗಿರಲಿಲ್ಲ.

ಜಲಪಾತದ ಬಳಿ ಹಾರುವ ಆ ಮೀನುಗಳು ಯಾವತ್ತೂ ಯಾವ ಗಾಳಕ್ಕೂ ಸಿಕ್ಕುವುದೇ ಇಲ್ಲ. ಆದ್ದರಿಂದಲೇ ತಾನೆಂದೂ ಆ ಜಾಗಕ್ಕೆ ಗಾಳ ಹಾಕಲು ಹೋಗುವುದಿಲ್ಲೆಂದು ಚೀಂಕ್ರ ಮೇಸ್ತ್ರಿ ಹೇಳಿದ. ಅನೇಕ ದಿನಗಳಿಂದ ನಾವು ಅಲ್ಲಿ ಸತತ ಪ್ರಯತ್ನ ಪಡುತ್ತಿದ್ದುದನ್ನು ನೋಡಿಯೂ ಈ ಮುದುಕ ನಮಗೆ ಒಂದು ಮಾತು ಹೇಳದೆ ತಮಾಷೆ ನೋಡಿಕೊಂಡು ಸುಮ್ಮನೆ ಕುಳಿತಿದ್ದಾನಲ್ಲ ಎನ್ನಿಸಿತು. “ಹಾಗಾದರೆ ಆ ಮೀನುಗಳು ಏನನ್ನು ತಿನ್ನುತ್ತವೆ” ಎಂದು ಕೇಳಿದೆ.

“ಏನು ತಿನ್ನುತ್ತವೋ! ಆ ಭಗವಂತನನ್ನೇ ಕೇಳಬೇಕು. ನಾನಂತೂ ಈ ಪರ್ಪಂಚದ ಮೇಲೆ ಇರೋದನ್ನೆಲ್ಲಾ ತಂದು ಗಾಳಕ್ಕೆ ಹಾಕಿ ನೋಡಿದೆ. ಅವು ಬಾಯೇ ಬಿಡೋದಿಲ್ಲ. ತಿಳ್ಳೇಕ್ಯಾತರ ಬಲೆಗೆ ಮಾತ್ರ ಅವು ಬೀಳುತ್ತವೆ. ಅವರ ಹತ್ರ ಒಂದು ಮೀನು ತಗೊಂಡು ಹೊಟ್ಟೆ ಕೊಯ್ದು ಸಮೇತ ನೋಡಿದೆ. ಹೊಟ್ಟೆ ಒಳಗೆ ಎಂಥದೂ ಇರಲಿಲ್ಲ. ಬರೇ ಎಂಥದೋ ಹಳದಿ ಲೋಳಿ ಇತ್ತು” ಎಂದು ಹೇಳಿದ ಚೀಂಕ್ರ ಮೇಸ್ತ್ರಿ ಮಾತು ಕೇಳಿದರೆ ಅವನು ಆ ಮೀನುಗಳ ಬಗ್ಗೆ ಕೊಂಚ ಸಂಶೋಧನೆಯನ್ನೂ ನಡೆಸಿದ್ದಂತೆ ಕಂಡಿತು.

ಚೀಂಕ್ರ ಮೇಸ್ತ್ರಿ ಅಭಿಪ್ರಾಯಗಳು ಸರಿಯಾದುವೆಂದು ನನಗನ್ನಿಸಿತು. ಕೆಲವು ಮೀನುಗಳು ನೀರಿನ ಸೂಕ್ಷ್ಮ ಜೀವಿಗಳನ್ನೂ ಸಸ್ಯಗಳನ್ನೂ ಮಾತ್ರ ತಿನ್ನುತ್ತವೆ. ಅಂಥ ಜಾತಿ ಮೀನುಗಳಿಗೆ ಗಾಳಕ್ಕೆ ಯಾವ ತಿಂಡಿ ಹಾಕುವುದೂ ವ್ಯರ್ಥವೆ. ಈ ಮೀನುಗಳೂ ಅಂಥವೇ ಇರಬೇಕೆಂದು ಅಲ್ಲಿ ಮೀನು ಹಿಡಿಯುವ ವ್ಯರ್ಥ ಸಾಹಸವನ್ನು ನಾವು ಕೈಬಿಟ್ಟೆವು. ಚೀಂಕ್ರ ಮೇಸ್ತ್ರಿ ನಮಗೆ ಪರಿಚಯವಾಗಿದ್ದು ಹೀಗೆ. ನಾವು ಯಾವಾಗ ಮೀನು ಹಿಡಿಯಲು ಅಲ್ಲಿಗೆ ಹೋದರೂ ಈ ಕಂಟ್ರಿ ಅರಿಸ್ಟಾಟಲ್‌ಅಲ್ಲಿ ಕುಳಿತಿರುತ್ತಾನೆ. ಏನಾದರೂ ಶಿಕಾರಿ ಆಯ್ತ ಎಂದು ನಮ್ಮನ್ನೊಮ್ಮೆ ಕೇಳಿಯೇ ಕೇಳುತ್ತಾನೆ.

ಒಮ್ಮೆ ಚೀಂಕ್ರ ಮೇಸ್ತ್ರಿ ಹತ್ತಿರ ಮಾತಾಡುತ್ತಿರಬೆಕಾದರೆ ಅವನ ಬುಟ್ಟಿ ಡಬಡಬ ಸದ್ದುಮಾಡಿ ದೆವ್ವದ ಬುಟ್ಟಿ ತರ ಕುಣಿಯಿತು. ನಾನು ನೋಡುವಷ್ಟರಲ್ಲಿ ಬುಟ್ಟಿ ಮುಚ್ಚಳ ಅರ್ಧ ತೆರೆದುಕೊಂಡು ಅದರೊಳಗಿಂದ ಹಾವಿನಂತೆ ಉದ್ದಕ್ಕಿದ್ದ ಮೀನೊಂದು ಚಿಮ್ಮಿ ಹೊರನೆಗೆದು ಹಾವಿನ ಮಾದರಿಯಲ್ಲೇ ತೆವಳುತ್ತಾ ಅಂಕುಡೊಂಕಾಗಿ ನದಿ ಕಡೆಗೆ ಹರಿಯಿತು. ನಾನು ಮೀನು ನೀರಿಗೆ ಹಾರಿ ಪರಾರಿಯಾಗುತ್ತಲ್ಲಾ ಎಂದು ಅದರ ಕಡೆಗೆ ಓಡಿದೆ. ನೀರಿಗೂ ಮೀನಿಗೂ ಎರಡೇ ಮಾರು ಅಂತರ. ಗಡಿಬಿಡಿಯಲ್ಲಿ ಮೇಸ್ತ್ರಿ ತಡೆಯಿರಿ ಎಂದು ಹೇಳಿದ್ದು ಕೇಳಲಿಲ್ಲ. ಹೋಗಿ ಮೀನಿನ ತಲೆ ಹಿಡಿದುಕೊಂಡೊಡನೆ ಅದು ಹಾವಿನ ಮಾದರಿಯಲ್ಲೇ ಕೈಗೆ ಸುತ್ತಿಕೊಂಡು ನುಲಿಯತೊಡಗಿತು. ಆಮೇಲೆ ಅದೇನು ಮಾಡಿತೋ ನನಗೆ ಗೊತ್ತಾಗಲಿಲ್ಲ. ಇದ್ದಕ್ಕಿದ್ದಂತೆ ಗರಗಸದಲ್ಲಿ ಕೈ ಕುಯ್ದಹಾಗೆ ಯಾತನೆಯಾಯ್ತು. ಉರಿ ತಾಳಲಾರದೆ ಕೈಗೆ ಸುತ್ತಿಕೊಂಡಿದ್ದ ಮೀನನ್ನು ಕೊಡವಿದೆ. ಮೇಸ್ತ್ರಿ ಕೋಲು ತಗೊಂಡು ಹಾವು ಮೀನಿಗೆ ಹೊಡೆಯಲು ಓಡಿಬಂದ. ಅಷ್ಟರೊಳಗೆ ಮೀನು ನೀರೊಳಗೆ ನುಸುಳಿ ಮಂಗಮಾಯವಾಯ್ತು.

“ಹಾವುಮೀನು ಯಾರಾದರೂ ಕೈಯ್ಯಾಗ ಮುಟ್ತಾರ? ಅದರ ಬೆನ್ನ ಮೇಲೆ ಮುಳ್ಳಿನ ಗರಗಸ ಇರ್ತದೆ. ಕೈಗೆ ಸುತ್ತಾಕಿ ಮೂಳೆವರೆಗೂ ಕುಯ್ದುಬಿಡುತ್ತೆ” ಎಂದು ಹೇಳಿದ. ನನಗೆ ಅವನ ವಿವರಣೆಯ ಅಗತ್ಯವೇನೂ ಇರಲಿಲ್ಲ. ಉರಿಯುತ್ತಿದ್ದ ಕೈಯ್ಯೇ ಹೇಳುತ್ತಿತ್ತು. ಹಾವುಮೀನು ಓಡಿಹೋದ ನಂತರ ಹಾವುಮೀನಿನ ಮಾಂಸದ ಸಾರನ್ನು ಚೀಂಕ್ರ ಗುಣಗಾನ ಮಾಡಿದ. ಅನಂತರ ಇದ್ದಕ್ಕಿದ್ದ ಹಾಗೆ ಗಂಭೀರವಾಗಿ –

“ನೋಡಿ ನೀವೂ ಗಾಳ ಹಾಕ್ತಿರ್ತೀರ. ಒಂದಲ್ಲ ಒಂದು ದಿನ ನಿಮ್ಮ ಗಾಳಕ್ಕೂ ಅಂಥ ಮೀನು ಸಿಕ್ಕಬಹುದು ಅಂತ ನಿಮಗೆ ಒಂದು ಮೀನಿನ ವಿಚಾರ ಹೇಳಿರ್ತೀನಿ. ಯಾಕೆಂದ್ರ ಅದ್ರ ದೆಸಿಂದ ನಾನು ನನ್ನ ಮಗನ್ನೇ ಕಳಕೊಂಡೆ” ಎಂದು ಒಂದು ವಿಚಿತ್ರ ಹಾವುಮೀನಿನ ದೆಸೆಯಿಂದ ಅವನ ಜೀವನದಲ್ಲಾದ ಒಂದು ಹೃದಯವಿದ್ರಾವಕ ಘಟನೆ ಹೇಳಿದ.

ಭದ್ರಾ ನದಿಯಲ್ಲಿ ಒಂದು ಜಾತಿ ಹಾವುಮೀನು ಹದಿನೈದು ಅಡಿ ಉದ್ದ ಬೆಳೆಯುತ್ತಿದ್ದಂತೆ. ಮೈಮೇಲೆಲ್ಲ ಹಳದಿ ಪಟ್ಟೆಗಳಿರುವ ಅದು ನೋಡಲು ಹೆಬ್ಬಾವಿಗಿಂತ ಭಯಂಕರ. ಈ ಮೀನು ಒಮ್ಮೊಮ್ಮೆ ರಾತ್ರಿವೇಳೆ ನೀರಿನಿಂದ ಹೊರಬಂದು ನದಿ ಸಮೀಪದ ಮನೆಗಳಿಗೆ ನುಗ್ಗಿ ಅವರು ಸಾಕಿದ ಕೋಳಿಗಳನ್ನು ತಿಂದುಬಿಡುತ್ತದಂತೆ. ಅದಕ್ಕಾಗಿ ನದಿಯ ಬಳಿ ಮನೆಗಳಿರುವವರು ಕೋಳಿ ಒಡ್ಡಿ ಸುತ್ತ ಬೂದಿ ಚೆಲ್ಲಿರುತ್ತಾರಂತೆ. ಮೀನು ಕೋಳಿ ಕದಿಯಲು ಬಂದಾಗ ಅದರ ಮೈಮೇಲಿನ ಲೇಳಿಗೆ ಬೂದಿ ಅಂಟಿಕೊಂಡರೆ ಮೀನು ಚಲಿಸಲಾರದೆ ಸಿಕ್ಕಿಬೀಳುತ್ತದೆ. ಈ ಮೀನಿನ ಮಾಂಸವಂತೂ ಜಗತ್ತಿನಲ್ಲೇ ಸರ್ವಶ್ರೇಷ್ಠ ಆಹಾರವೆಂದೂ, ಅದನ್ನು ತಿಂದರೆ ಮೂಲವ್ಯಾಧಿಯಿಂದ ಹಿಡಿದು ಚರ್ಮರೋಗಗಳವರೆಗೆ ಸಕಲವೂ ಪರಿಹಾರವಾಗುತ್ತದೆಂದೂ ಹೇಳಿದ.

ಈ ಮೀನು ಚೀಂಕ್ರನ ಮಗನನ್ನು ಕೊಂದಿದ್ದಾದರೂ ಹೇಗೆಂದು ಕೇಳಬೇಕೆಂದಿದ್ದ ನನಗೆ ಅವನ ಅಡ್ಡ ಮಾತುಗಳಿಂದ ಅಸಹನೆಯಾಯ್ತು.

“ನಿನ್ನ ಮಗನನ್ನು ಕೊಲೋದಕ್ಕೆ ಅದೇನು ನಿನ್ನ ಮನೆವರೆಗೆ ಬಂದಿತ್ತೇನಯ್ಯಾ?” ಎಂದೆ.

“ಛೇ ಛೆ, ನನ್ಮನೆ ಇಪ್ರೀತ ದೂರ. ಹಾವುಮೀನಿಗೆ ಅಲ್ಲೀತನಕ ಬರಕ್ಕಾಗಲ್ಲ ಬಿಡಿ” ಎಂದು ಮತ್ತೆ ತನ್ನ ಕತೆ ಮುಂದುವರಿಸಿದ.

ಭದ್ರಾ ನದಿಯ ಈ ಭಾಗದಲ್ಲಿ ಮೀನು ಹಿಡಿಯಲು ಕಟ್ಟುಗಾಳ ಕಟ್ಟುವ ವಾಡಿಕೆ ಇದೆ. ಈ ರೀತಿಯ ಕಟ್ಟುಗಾಳ ಬೇರೆ ಯಾವ ನದಿಯಲ್ಲೂ ಯಾರೂ ಕಟ್ಟಿದ್ದು ನೋಡಲಿಲ್ಲ. ಇಲ್ಲಿ ಏಕಾಂಗಿಗಳಾಗಿ ಕುಳಿತು ಗಾಳದಲ್ಲಿ ಮೀನು ಹಿಡಿಯಲು ಕಾಡುಮೃಗಗಳಿಗೆ ಹೆದರಿಯೋ ಅಥವಾ ಆನೆ ಕಾಟ ಎಂದೋ ಗಾಳಗಳಿಗೆ ಜೀವಂತರವಿರವ ಚಿಕ್ಕ ಚಿಕ್ಕ ಮೀನುಗಳನ್ನು ಸಿಕ್ಕಿಸಿ ಸಂಜೆ ಕಟ್ಟಿ ಹೋಗಿಬಿಡುತ್ತಾರೆ. ಮೀನುಗಾರರು ಗಾಳದ ದಾರವನ್ನು ನದಿ ಪಕ್ಕ ಬೆಳೆದಿರುವ ಬಿದಿರನ್ನು ಬಿಲ್ಲಿನಂತೆ ಬಗ್ಗಿಸಿ ಅದರ ತುದಿಗೆ ಕಟ್ಟುತ್ತಾರೆ. ಅನಂತರ ಬಿದಿರು ಮತ್ತೆ ಚಿಮ್ಮದ ಹಾಗೆ ಕವೆಕಟ್ಟಿ ಅದನ್ನು ಸಿಡಿಕಡ್ಡಿ ಮಾದರಿಯಲ್ಲಿ ನಿಲ್ಲಿಸುರತ್ತಾರೆ. ದಡದ ನೀರಿನಲ್ಲಿರುವ ಗಾಳಕ್ಕೆ ಚುಚ್ಚಿದ ಮೀನಿಗೆ ಬಾಯಿಹಾಕಿ ದೊಡ್ಡ ಮೀನುಗಳು ದಾರ ಜಗ್ಗಿದ ಕೂಡಲೆ ಸಿಡಿ ಹಾರಿ ಬಿದಿರು ಸಟ್ಟನೆ ನೆಟ್ಟಗಾಗುತ್ತದೆ. ಗಾಳಕ್ಕೆ ಸಿಕ್ಕ ಮೀನೂ ಅದರೊಡನೆ ಆಕಾಶದಲ್ಲಿ ನೇತಾಡುತ್ತಿರುತ್ತದೆ. ಬೆಳಿಗ್ಗೆ ಬಂದ ಮೀನುಗಾರರು ಮತ್ತೆ ಬಿದಿರನ್ನು ಬಗ್ಗಿಸಿ ಮೀನು ಬಿಡಿಸಿಕೊಳ್ಳುತ್ತಾರೆ. ಚೀಂಕ್ರನ ಮಗನೂ ಇದೇ ರೀತಿ ಕಟ್ಟುಗಾಳ ಕಟ್ಟಿ ಅನೇಕ ಭಾರಿ ಭಾರಿ ಮೀನುಗಳನ್ನು ಹಿಡಿದಿದ್ದನಂತೆ. ಆದರೆ ಒಮ್ಮೆ ಕಟ್ಟು ಗಾಳಕ್ಕೆ ಬಿದ್ದ ಮೀನನ್ನು ನೋಡಲು ಬಂದಾಗ ಅವನು ಕಟ್ಟಿದ ಬಲವಾದ ಬಿದಿರೇ ಮುರಿದು ನೀರಿನಲ್ಲಿ ಬಿದ್ದಿತ್ತು. ತಾನು ಬಿದಿರನ್ನು ಬಗ್ಗಿಸಿದ್ದು ಅತಿಯಾದ್ದರಿಂದ ಬಿದಿರು ಮುರಿದು ನೀರಿಗೆ ಬಿದ್ದಿದೆ ಎಂದು ತಿಳಿದನೇ ಹೊರತು ಅದು ಮೀನಿನ ಕೆಲಸ ಇರಬಹುದೆಂದು ಶಂಕಿಸಲೂ ಇಲ್ಲ.

ಗಾಳ ಬಿಚ್ಚಕೊಳ್ಳಲು ಮೊಳಕಾಲದ್ದ ನೀರಿಗೆ ಇಳಿದು ಬಿದುರಿಗೆ ಕಟ್ಟಿದ್ದ ಗಾಳದ ದಾರಬಿಚ್ಚಿ ಎಳೆದಾಗ ತೂಕ ಇದ್ದ ಹಾಗೆ ಕಂಡರೂ ಮೀನಿನ ತಲೆ ಸಾಧಾರಣ ಗಾತ್ರಕ್ಕೆ ಇದ್ದುದರಿಂದ ಮೀನು ತಪ್ಪಿಸಿಕೊಳ್ಳದ ಹಾಗೆ ಚುರುಕಾಗಿ ತಲೆ ಹಿಡಿದುಬಿಟ್ಟ. ದೊಡ್ಡ ಹೆಬ್ಬಾವಿನಂತಿದ್ದ ಪಟ್ಟೆ ಪಟ್ಟೆಯ ಹದಿನೈದು ಅಡಿ ಉದ್ದದ ಹಾವುಮೀನಿನ ತಲೆಯೇ ಅದಾಗಿತ್ತು. ಚೀಂಕ್ರನ ಮಗ ಅದರ ತಲೆ ಗಟ್ಟಿಯಾಗಿ ಹಿಡಿದೊಡನೆ ದಢಾರನೆ ಆಸ್ಫೋಟನೆಯಾದಂತಾಗಿ ನದಿಯೆಲ್ಲಾ ತಳಮಳಿಸಿ ಹೋಯ್ತು. ತಲೆ ಹಿಡಿದಿದ್ದ ಚೀಂ‌ಕ್ರನ ಮಗನ ಮೈಗೆಲ್ಲ ಹಾವುಮೀನು ಗಿರಿಗಿರಿ ಸುತ್ತಿಕೊಳ್ಳತೊಡಗಿತು.

“ಅದಕ್ಕೂ ಗರಗಸ ಇರುತ್ತದೇನಯ್ಯಾ ಬೆನ್ನಮೇಲೆ?: ಎಂದು ಕೇಳಿದೆ.

“ಎಂಥದೂ ಇಲ್ಲ. ಬಾಲದ ಹತ್ತಿರ ಅಂಗೈ ಅಗಲದ ರೆಕ್ಕೆ ಬಿಟ್ಟರೆ ಮಿಕ್ಕಿದ್ದೆಲ್ಲಾ ಅದು ಹೆಬ್ಬಾವಿನ ಹಾಗೇ. ಬೆನ್ನಮೇಲೆ ಗರಗಸ ಇರಲಿ, ಇದಕ್ಕೆ ಅಕ್ಕಪಕ್ಕ ರೆಕ್ಕೆಗಳೂ ಸೈತ ಇಲ್ಲ.”

“ಹಂಗಾದರೆ ನಿನ್ನ ಮಗನಿಗೆ ಏನೂ ಅಪಾಯ ಮಾಡಲಿಲ್ಲ?”

“ಏನು ಮಾಡಲಿಲ್ಲ. ಅದು ಇವನ ಮಂಡೆ ಬಿಟ್ಟ ಕೂಡಲೆ ಸುರಳಿ ಬಿಚ್ಚಿಕೊಂಡು ಬದುಕಿದೆಯಾ ಎಂದು ಬಿದುರನ್ನೂ ಎಳೆದುಕೊಂಡು ಓಡೇಹೋಯ್ತು”.

“ಮತ್ತೆ ನಿಮ್ಮಗ ಯಾಕೆ ಸತ್ತ ಮಹರಾಯ?”

ಚೀಂಕ್ರ ಮೇಸ್ತ್ರಿ ಮತ್ತೆ ಕತೆ ಮುಂದುವರಿಸಿದ. ಮೇಸ್ತ್ರಿ ಮಗನಿಗೆ ಮೀನಿನ ತಲೆ ಹಿಡಿದಿದ್ದೊಂದೇ ಗೊತ್ತು. ಮರುಕ್ಷಣ ಜಲ ಪ್ರಳಯ ಆದಂತೆ ನದಿಯೆಲ್ಲ ನೊರೆ ಎದ್ದು ಮೈಯನ್ನೆಲ್ಲಾ ಹಳದಿ ಪಟ್ಟೆಗಳು ಸುತ್ತಿ ಬಂದವು. ಹಾವುಮೀನು ಸುರುಳಿ ಬಿಚ್ಚಿ ಓಡಿಹೋದ ಕೂಡಲೇ ದಿಗ್ಭ್ರಾಂತನಾದ ಮೇಸ್ತ್ರಿ ಮಗ ನೇರ ಮನೆಗೆ ಓಡಿಬಂದ. ಮೈಗೆಲ್ಲಾ ಮೀನ ಲೋಳ ಮೆತ್ತಿಕೊಂಡಿದ್ದ ಅವನನ್ನು ನೋಡಿಯೇ ಮೇಸ್ತ್ರಿಗೆ ಏನು ನಡೆದರಬಹುದೆಂದು ತಿಳಿಯಿತು.

ಅವನು ಸ್ನಾನ ಮಾಡಿ ಮುಗಿಸುವುದರೊಳಗೇ ಮೈ ಬಿಸಿ ಏರಿ ಚಳಿಜ್ವರ ಹಿಡಿಯಿತು. ಹಠಾತ್ತಾಗಿ ಸಂಭವಿಸಿದ ಆಕಸ್ಮಿಕದಿಂದ ಅವನಿಗೆ ಬಲವಾದ ಮಾನಸಿಕ ಆಘಾತ ಉಂಟಾಗಿತ್ತು. ಜ್ವರದಲ್ಲಿ ಮೀನು ಸುತ್ತಿಕೊಂಡಿದ್ದನ್ನು ಹೇಳಿ ಚೀರಿ ಕನವರಿಸುತ್ತಿದ್ದ. ಎಷ್ಟು ಔಷಧ ಮಾಡಿ ಯಾವ್ಯಾವ ದೇವರಿಗೆ ಹೇಳಿಕೊಂಡರೂ ಜ್ವರ ಇಳಿಯದೆ ಅವನು ಸತ್ತೇ ಹೋದ.

“ನೋಡಿ ಇಂಥಾ ಇಳಿವಯಸ್ನಲ್ಲಿ ಕೈಗೆ ಬಂದ ಮಗ ಹೊರಟುಹೋದರೆ ನಾನು ಯಾತಕ್ಕಾಗಿ ದುಡಿಯಲಿ! ಯಾರಿಗಂತ ಸಂಪಾದನೆ ಮಾಡಲಿ ಹೇಳಿ? ಅವನು ಸತ್ತ ಮೇಲೆ ಅವತ್ತೇ ಕೊನೆ ನಾನು ಕೆಲಸಕ್ಕೆ ಹೋಗಿದ್ದು” ಎಂದು ಚೀಂಕ್ರ ಮೇಸ್ತ್ರಿ ಹೇಳಿ ಮತ್ತೆ ಗಂಭೀರವಾಗಿ ಗಾಳ ಹಿಡಿದುಕೊಂಡು ಹೊಳೆ ದಿಟ್ಟಿಸುತ್ತಾ ಕುಳಿತ.

ಒಂದು ಹಾವುಮೀನು ಒಬ್ಬರ ಸಾವಿಗೆ ಕಾರಣವಾಯ್ತೆಂದು ನಾನು ಕೇಳಿದ್ದು ಅದೇ ಮೊದಲು. ಯಾರ ಯಾರ ಸಾವು ಯಾವ್ಯಾವುದರಲ್ಲಿರುತ್ತೆ ಎಂದು ಆಶ್ಚರ್ಯ ಆಗುತ್ತೆ! ಚೀಂಕ್ರ ಮೇಸ್ತ್ರಿ ಹೇಳಿದ ಹಾಗೆ ಹದಿನೈದು ಅಡಿ ಉದ್ದದ ಹಾವು ಮೀನು ಇರುವುದು ಹೌದ ಎಂದು ತುಂಬಾ ಜನದ ಹತ್ತಿರ ನಾನು ವಿಚಾರಿಸಿದೆ. ಎಲ್ಲಾ ಹೌದಂತೆ! ಆ ಸಂತೆಗೆ ಬಂದಿತ್ತಂತೆ! ಈ ಊರ್ನಲ್ಲಿ ಹಿಡಿದಿದ್ರಂತೆ! ಎಂದು ಹೇಳುವವರೇ ಹೊರತು ಕಣ್ಣಾರೆ ಕಂಡೆವು ಅಂದವರು ಇಲ್ಲ.

ಒಮ್ಮೆ ಕುವೆಂಪುರವರ “ನೆನಪಿನ ದೋಣಿ” ಗ್ರಂಥ ಓದುತ್ತ ಅವರ ಚಿಕ್ಕವರಿದ್ದಾಗ ಭಾರಿ ದೊಡ್ಡ ಹಾವುಮೀನು ಹಿಡಿದ ಘಟನೆ ಓದಿದೆ. ಕುತೂಹಲದಿಂದ ಅವರ ಬಳಿ ಹೆಬ್ಬಾವಿನಂಥ ಹಾವುಮೀನಿನ ಬಗ್ಗೆ ಏನಾದರೂ ಗೊತ್ತ ಎಂದು ಕೇಳಿದೆ. “ನಾನು ಚಿಕ್ಕವರಿದ್ದಾಗ ಕೇಳಿದ್ದೆವು ಅಷ್ಟೆ. ಅದು ನದಿಗಳ ಹತ್ತಿರದ ಮನೆಗಳಿಗೆ ರಾತ್ರಿ ಬಂದು ಕೋಳಿ ಹಿಡಿಯುತ್ತದಂತೆ! ಒಡ್ಡಿಸುತ್ತ ಬೂದಿ ಹಾಕಿದರೆ ಅದು ಸಿಕ್ಕಿಬೀಳುತ್ತದೆ ಅನ್ನುತ್ತಿದ್ದರು” ಎಂದು ಹೇಳಿದರು. ಚೀಂಕ್ರ ಹೇಳಿದ ವೃತ್ತಾಂತವನ್ನೇ ತದ್ವತ್ತಾಗಿ ತಂದೆಯವರೂ ಹೇಳಿದ್ದರು. ಹಾಗಾದರೆ ಇಷ್ಟು ವರ್ಷಗಳವರೆಗೂ ಇಷ್ಟೊಂದು ವ್ಯಾಪಕವಾಗಿ ಪ್ರಚಾರದಲ್ಲಿರುವ ವದಂತಿ ಕೇವಲ ಕಟ್ಟುಕತೆಯೆ? ಕುದುರೆಮುಖದಿಂದ ಬಿಡುತ್ತಿರುವ ಕಶ್ಮಲಗಳಿಗೆ ಸಿಕ್ಕಿ ಆ ಮೀನು ನಿರ್ವಂಶ ಆಗದಿದ್ದರೆ ಚೀಂಕ್ರ ಮೇಸ್ತ್ರಿ ಹೇಳಿದ ಹಾಗೆ ಒಂದಲ್ಲ ಒಂದು ದಿನ ನಮಗೆ ಅದು ಸಿಕ್ಕೀತೇನೋ.

ಲೇಖಕರು

ಕೆ ಪಿ ಪೂರ್ಣಚಂದ್ರ ತೇಜಸ್ವಿ (೧೯೩೮) ಅವರು ಕನ್ನಡದ ಕತೆಗಾರರೂ ಕಾದಂಬರಿಕಾರರೂ ಆಗಿ ಜನಮನ್ನಣೆ ಪಡೆದಿರುವರು. ಭಾರತದಲ್ಲಿದ್ದಾಗ ಬೇಟೆ ಅನುಭವಗಳನ್ನು ಬರೆದು ಖ್ಯಾತನಾದ ಇಂಗ್ಲಿಷ್‌ಲೇಖಕ ಕೆನ್ನಿತ್‌ಅಂಡರ್‌ಸನ್ನನ ಕೃತಿಗಳನ್ನು ಅವರು ಅನುವಾದಿಸಿದ್ದಾರೆ. ಅಂಡಮಾನ್‌ಮೇಲೆ ಪ್ರವಾಸ ಕಥನ ಬರೆದಿದ್ದಾರೆ. ಅಬಚೂರಿನ ಪೋಸ್ಟಾಫೀಸು ಅವರ ಮುಖ್ಯ ಕಥಾಸಂಕಲನ. ‘ನಿಗೂಢಮನುಷ್ಯರು’, ‘ಕಿರಗೂರಿನ ಗಯ್ಯಾಳಿಗಳು’ ಅವರ ಕಿರುಕಾದಂಬರಿಗಳು. ‘ಕರ್ವಾಲೋ’, ಚಿದಂಬರ ರಹಸ್ಯ’, ‘ಜುಗಾರಿಕ್ರಾಸ್‌’ ಅವರ ಕಾದಂಬರಿಗಳು. ತೇಜಸ್ವಿಯವರು ಹದಿಯರೆಯದ ಓದುಗ ವಲಯದಲ್ಲಿ ಬಹಳ ಜನಪ್ರಿಯರಾಗಿದ್ದು ತಮ್ಮ ಪರಿಸರ ಬರೆಹಗಳಿಂದ. ‘ಪರಿಸರದ ಕತೆ’, ‘ಕಾಡಿನ ಕತೆಗಳು’, ‘ಕನ್ನಡನಾಡಿನ ಹಕ್ಕಿಗಳು’, ‘ಪ್ಲೈಯಿಂಗ್‌ಸಾಸರ್ಸ್‌’, ಮುಂತಾಗಿ ಅವರು ಕಳೆದ ಹದಿನೈದು ವರುಷಗಳಿಂದ ಬರೆಯುತ್ತಿರುವ ಪರಿಸರ ಕುರಿತ ಬರೆಹಗಳು ಹದಿಹರೆಯದ ಓದುಗರನ್ನು ಸೆಳೆದಿವೆ. ನಿಸರ್ಗದ ನಿಗೂಢಗಳ ಹುಡುಕಾಟ, ಪ್ರಕೃತಿಯ ಬಗ್ಗೆ ವಿಸ್ಮಯ, ಅವರ ಬರೆಹಗಳ ವಿಶಿಷ್ಟತೆ, ಮಾನವೀಯತೆ, ವಿಚಾರವಂತಿಕೆ, ವೈಜ್ಞಾನಿಕ ಚಿಂತನೆಗಳನ್ನುಳ್ಳ ಹೊಸತಲೆಮಾರನ್ನು ರೂಪಿಸಬೇಕು ಎಂಬುದು ಅವರ ಬರೆಹದ ಒಳ ತುಡಿತವಾಗಿದೆ.

ಆಶಯ

ಯಕಶ್ಚಿತ್‌ಆಗಿ ಕಾಣುವ ವ್ಯಕ್ತಿಗಳಲ್ಲೂ ಅಸಾಧಾರಣವಾದ ಅನುಭವ ‘ಪ್ರತಿಭೆ’ ತಿಳಿವಳಿಕೆ ಇರುತ್ತದೆ. ಅದನ್ನು ಅವರು ಸಂದರ್ಭ ಬಂದಾಗ ಮಾತ್ರ ಹೊರಹಾಕುತ್ತಾರೆ. ಸಾಮಾನ್ಯ ಜನ ಒಳಗೆ ಅಪಾರ ನೋವು ತುಂಬಿಕೊಂಡಿರುತ್ತಾರೆ. ಅದನ್ನು ಮೀರುವುದಕ್ಕೆ ಏನೋ ಎಂಬಂತೆ ಅವರು ಪ್ರಕೃತಿಯ ಮಡಿಲಲ್ಲಿ ಅನೇಕ ಬಗೆಯ ಚಟುವಟಿಕೆಗಳಲ್ಲಿ ತೊಡುಗುತ್ತಾರ ಅಥವಾ ಮೌನ ಧರಿಸುತ್ತಾರೆ. ಅವರು ಮೌನಮುರಿದಾಗ ಅನೇಕ ಅದ್ಭುತ ಸಂಗತಿಗಳು ತಿಳಿಯುತ್ತವೆ. ಎಂದು ಈ ಬರೆಹ ಸೂಚಿಸುತ್ತದೆ.

ಪದಕೋಶ

ಪ್ರಮೇಯ = ಕಾರಣ, ಅಬ್ಬಿ = ಜಲಪಾತ, ಇಪ್ರೀತ = ವಿಪರೀತ, ಲೋಳಿ = ದೇಹದ ಮೇಲಿನ ಅಂಟುದ್ರವ, ಝೆನ್‌= ಧ್ಯಾನ ಮತ್ತು ಯೋಗದ ಆಚರಣೆಗಳನ್ನು ಮಾಡುವ ಬೌದ್ಧದರ್ಮದ ಒಂದು ಪಂಥ, ಜಪಾನಿನಲ್ಲಿದೆ. ಕಿಳ್ಳೇಕ್ಯಾತರು = ಮೀನು ಹಕ್ಕಿ ಹಿಡಿಯುತ್ತ ಊರಿಂದ ಊರಿಗೆ ಚಲಿಸುವ ಅಲೆಮಾರಿ ಸಮುದಾಯ, ಕಂಟ್ರಿ = ದೇಶಿ, ಸ್ಥಳೀಯ, ಮಂಡೆ = ತಲೆ, ಒಡ್ಡಿ = ಹಂದಿ ಹಾಗೂ ಕೋಳಿಗಳನ್ನು ಕೂಡುವ ದೊಡ್ಡಿ.

ಪ್ರಶ್ನೆಗಳು

೧. ಚೀಂಕ್ರ ಮೇಸ್ತ್ರಿ ಗಾಳ ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದ ಜಾಗ ಹೇಗಿತ್ತು?

೨. ಚೀಂಕ್ರ ಮೇಸ್ತ್ರಿ ಜಲಪಾತದ ಬಳಿಯಿರುವ ಮೀನುಗಳ ವಿಷಯದಲ್ಲಿ ನಡೆಸಿದ್ದ ಸಂಶೋಧನೆ ಎಂತಹದು?

೩. ನಿರೂಪಕನಿಗೆ ಹಾವು ಮೀನಿನ ಜತೆ ಆದ ಮೊದಲ ಅನುಭವ ಹೇಗಿತ್ತು?

೪. ಚೀಂಕ್ರ ಮೇಸ್ತ್ರಿಯ ಮಗನ ಸಾವು ಹೇಗೆ ಸಂಭವಿಸಿತು?

೫. ಚೀಂಕ್ರ ಮೇಸ್ತ್ರಿ ಹೇಳಿದ ಭದ್ರಾನದಿಯ ಹಾವು ಮೀನು ಕುರಿತ ದಂತಕತೆಗಳು ಯಾವುವು?

ಪೂರಕ ಓದು

೧. ಪೂರ್ಣಚಂದ್ರ ತೇಜಸ್ವಿ ಅವರ ‘ಪರಿಸರದ ಕತೆ’, ‘ಕನ್ನಡನಾಡಿನ ಹಕ್ಕಿಗಳು’, ‘ವಿಸ್ಮಯ ೧’ ಹಾಗೂ ‘ವಿಸ್ಮಯ ೨’.

೨. ಎನ್‌ವಾಸುದೇವ್‌ಅವರು ಪ್ರಜಾವಣಿಯ ಭಾನುವಾರದ ಪುರವಣಿಯಲ್ಲಿ ಬರೆಯುವ ‘ವಿಜ್ಞಾನ ವಿನೋದ’ ಎಂಬ ಅಂಕಣ.

೩. ನಾಗೇಶ ಹೆಗಡೆ ಅವರ ‘ಇರುವುದೊಂದೇ ಭೂಮಿ’ ಕೃತಿ.

೪. ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸುವ ‘ವಿಜ್ಙಾನ ಸಂಗಾತಿ’ ಪತ್ರಿಕೆ.

೫. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ‘ಕರ್ನಾಟಕ ಜ್ಞಾನವಿಜ್ಞಾನ ಕೋಶ ಸಂಪುಟ ೩’.

೬. ಕುವೆಂಪು ಅವರ ‘ಮಲೆನಾಡಿನ ಚಿತ್ರಗಳು’.

೭. ಕೆ ಪುಟ್ಟಸ್ವಾಮಿ ಹಾಗೂ ಕೃಪಾಕರ ಸೇನಾನಿ ಅವರ ‘ಜೀವಜಾಲ’.