ದೊಡ್ದಗೌಡರ ಬಾಗಿಲೀಗೆ
ನಮ್ಮ ಮೂಳೆಯ ತ್ವಾರಣ
ನಮ್ಮ ಜನಗಳ ಕಾಲು ಕಯ್ಯಿ
ಕಂಬ ಅವರ ಹಟ್ಟಿಗೆ

ಅವರ ಬೇಟೆಗೆ ನಾವು ಮೊಲಗಳು
ನಮ್ಮ ಬಾಳೇ ಬಂಗಲೆ
ಅವರ ಬಂಗಲೆಯಂಗಳಕ್ಕೆ
ನಮ್ಮ ರಕ್ತದ ರಂಗಾಲೆ

ಅವರ ತೋಟದಲ್ಲಿ ತೆಂಗಿನಲ್ಲಿ
ನಮ್ಮ ರಕ್ತದ ಎಳನೀರು
ಅವರ ಅಮಲಿನ ಗುಂಗಿನಲ್ಲಿ
ಕೂಲಿ ಹೆಣ್ಣಿನ ಕಣ್ಣೀರು

ಯಾವ ಪಾಪವ ಮಾಡಲಿಲ್ಲ
ಯಾರ ತಲೆಯನು ಹೊಡೆಯಲಿಲ್ಲ
ಕರಗಿ ನಮ್ಮಯ ಬಾಳಕತ್ತಲು
ಕಾಣಲಾರವೆ ಹಗಲನು

ಲೇಖಕರು

ಸಿದ್ಧಲಿಂಗಯ್ಯನವರು (೧೯೫೪) ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರು ಕನಡದಲ್ಲಿ ದಲಿತ ಸಂವೇದನೆಯ ಕಾವ್ಯವನ್ನು ಉದ್ಘಾಟಿಸಿದವರು. ೧೯೭೫ರಲ್ಲಿ ಪ್ರಕಟವಾದ ಇವರ ‘ಹೊಲೆಮಾದಿಗರ ಹಾಡು’ ಕವನ ಸಂಕಲನವು ಕನ್ನಡದಲ್ಲಿ ಬಹಳ ಪ್ರಭಾವ ಬೀರಿತು. ನಂತರ ‘ಸಾವಿರಾರು ನದಿಗಳು’ ‘ಕಪ್ಪುನಾಡಿನ ಹಾಡು’ ಎಂಬ ಎರಡು ಸಂಕಲನಗಳು ಪ್ರಕಟವಾದವು. ಅವರ ಅನೇಕ ಹಾಡುಗಳು ಚಳುವಳಿಯಲ್ಲಿ ಹಾಡುಗಳಾಗಿ ಬಳಕೆಯಾಗುತ್ತಿವೆ. ನೋವು ಕೋಪ ವಿಷಾದಗಳನ್ನು ತುಂಬಿಕೊಂಡ ಕಾವ್ಯ ಬರೆಯುವ  ಸಿದ್ಧಲಿಂಗಯ್ಯನವರು, ಗದ್ಯದಲ್ಲಿ ತಮ್ಮ ಹಾಸ್ಯಪ್ರಜ್ಞೆಯನ್ನು ಹೊರಹಾಕುತ್ತಾರೆ. ಅವರ ಆತ್ಮ ಕಥೆಯಾದ ‘ಊರುಕೇರಿ’ ಹಾಗೂ ವಿಚಾರ ಲೇಖನಗಳಿರುವ ‘ಅವತಾರಗಳು’ ಕೃತಿಗಳಲ್ಲಿ ಇದನ್ನು ಕಾಣಬಹುದು. ‘ಕರ್ನಾಟಕದ ಗ್ರಾಮದೇವತೆ’ ಗಳ ಬಗ್ಗೆ ಸಂಶೋಧನೆ ಮಾಡಿರುವ ಸಿದ್ಧಲಿಂಗಯ್ಯನವರು  ಜನಪ್ರಿಯ ಭಾಷಣಕರಾರು. ಅವರು ಕರ್ನಾಟಕದ ವಿಧಾನ ಪರಿಷತ್ತಿನ ಸದ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಆಶಯ

ಪ್ರಸ್ತುತ ಕವನವನ್ನು ಅವರ ‘ಸಾವಿರಾರು ನದಿಗಳು’  ಕವನ ಸಂಕಲನದಿಂದ ಆಯ್ದುಕೊಂಡಿದೆ. ಕವನವು ದಲಿತರು ತಮ್ಮ ನೋವನ್ನು ಹೇಳಿಕೊಳ್ಳುವುದನ್ನು ಚಿತ್ರಿಸುತ್ತದೆ. ಆದರೆ ನೋವಿನ ಒಳಗೂ ಅವರು ತಮ್ಮ ಕನಸುಗಳನ್ನು ಕಾಣುವುದನ್ನು ಕೂಡ ಕವನ ಕಾಣಿಸುತ್ತದೆ.

ಪದಕೋಶ

ರಂಗಾಲೆ = ರಂಗೋಲೆ

ಟಿಪ್ಪಣಿ

ಬೆಲ್ಚಿ = ಬಿಹಾರದ ಒಂದು ಹಳ್ಳಿಯ ಹೆಸರು. ಇಲ್ಲಿ ಸವರ್ಣೀಯ ಜಮೀನುದಾರರು ಕೂಲಿಕಾರರಾದ ದಲಿತರನ್ನು ಬರ್ಬರವಾಗಿ ಕೊಂದು ಹಾಕಿದ ಘಟನೆ ನಡೆಯಿತು.

ಪ್ರಶ್ನೆಗಳು

೧. ದೊಡ್ಡಗೌಡರ ಮನೆಗೆ ದಲಿತರ ಬಡವರ ಅಂಗಾಂಗಗಳು ಬಳಕೆಯಾಗಿರುವ ಇಲ್ಲಿನ ಚಿತ್ರ ಏನನ್ನು ಸೂಚಿಸುತ್ತದೆ?

೨. ಬಡವರು ಉಳ್ಳವರ ವಿಲಾಸಕ್ಕೆ ಹೇಗೆ ಬಲಿಪಶುಗಳಾಗುತ್ತಾರೆ?

೩. ದಲಿತರು ತಮ್ಮ ಬಾಳಿನಲ್ಲಿ ಏನನ್ನು ಆಶಿಸುತ್ತಿದ್ದಾರೆ?

೪. ಕವನವು ಹೇಗೆ ಅಸಹಾಯಕರ ವಿಷಾದ ಗೀತೆಯಾಗಿದೆ? ವಿಶ್ಲೇಷಿಸಿರಿ.

ಪೂರಕ ಓದು

೧. ಶಿವರಾಮ ಕಾರಂತರ ‘ಚೋಮನದುಡಿ’ ಕಾದಂಬರಿ.

೨. ಕೊರ್ಡ್ಕಲ್‌ಶ್ರೀನಿವಾಸರಾಯರ ‘ದನಿಯರ ಸತ್ಯನಾರಾಯಣ’ ಕತೆ.

೩. ಸಿದ್ಧಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ ಕವನ ಸಂಕಲನದ ಕವನಗಳು.

೪. ದೇವನೂರ ಮಹಾದೇವ ಅವರ ‘ದ್ಯಾವನೂರು’ ಕಥಾಸಂಕಲನ ಹಾಗೂ ‘ಒಡಲಾಳ’ ಕಾದಂಬರಿ.

೫. ಅರವಿಂದ ಮಾಲಗತ್ತಿ ಅವರ ‘ಗೌರ್ಮೆಂಟ್‌ಬ್ರಾಹ್ಮಣ’ ಆತ್ಮಕಥೆ.