ಅವ್ವ ಕೇಳೇ ನಾನೊಂದ ಕನಸ ಕಂಡೇ . . . .
ಅವ್ವ ಕೇಳೇ ಕನಸೊಂದ ನಾ ಕಂಡೆನೆ . . . .
ಮುಂಗೋಳಿ ಕೂಗಿತ್ತು ಮೂಡಲ್ಲಿ ಕಂಪಿತ್ತು
ಬೆಳ್ಳಿಯೂ ಮರಳಿತ್ತು ಹಕ್ಕಿಯೂ ಹಾಡಿತ್ತು
ಮಲ್ಲಿಗೆ ಸಂಪಿಗೆ ಘಮ್ಮೆಂದು ಬಿರಿದಿತ್ತು
ಹಾದೀಲಿ ಇಬ್ಬನಿಯು ಮುತ್ತಾಗಿ ಸುರಿದಿತ್ತು || ಅವ್ವ||

ಕಣ್ಣರೆಪ್ಪೆ ಬಿಗಿಯೆ ಕದ ತಟ್ಟಿ ಒಳಬಂದ
ಕಾರಿರುಳ ಕೆಂಜೆಡೆಗೆ ಚಂದಿರನ ಮುಡಿದಿದ್ದ
ಕಾಲ್ಗೆಜ್ಜೆ ಕುಣಿಸುತ್ತ ಶರಣು ಶರಣು ಅಂದ
ಮುಕ್ಕಣ್ಣ ತಾನೆಂದು ಮುಂಗೈಗೆ ಮುತ್ತಿಟ್ಟ
ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ
ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ
ಮುದ್ದಾಗಿ ಮಾತಾಡಿ ಮರುಳು ಮಾಡಿದನವ್ವ || ಅವ್ವ||

ತುಂಬೆಯ ಹೂ ಬಿಡಿಸಿ ತುರುಬಿಗೆ ಮುಡಿಸಿದ
ಒಂದೊಂದು ಕಿವಿಯಲ್ಲೂ ದುಂಬಿಯ ಇರಿಸಿದ
ಮಿಂಚಿನ ಹುಳುವಲ್ಲೇ ಮೂಗುತಿಯ ಮಾಡಿದ
ನೇರಳೆ ಹಣ್ಣಿನ ಹಾರವ ತೊಡಿಸಿದ
ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ
ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ . . .
ಮುದ್ದಾಗಿ ಮಾತಾಡಿ ಮರುಳು ಮಾಡಿದನವ್ವ || ಅವ್ವ||

ಹುಲಿಚರ್ಮ ಹೊದ್ದರೂ ಹಾಲು ಮನಸಿನ ಹುಡುಗ
ಡೊಳ್ಳ ಬಾರಿಸಿ, ಢಕ್ಕೆಯ ಬಡಿದು, ಡಮರುಗ ನುಡಿಸಿದ
ನವಿಲ ಹಾಗೆ ಕುಣಿದು ಮಿಂಚು ಮಳೆ ಕರೆದ
ಹಕ್ಕಿಪಿಕ್ಕಿಯಂಗೆ ಕೂಗಿ ನಕ್ಕೂನಗಿಸಿದ
ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ
ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ . . .
ಮುದ್ದಾಗಿ ಮಾತಾಡಿ ಮರುಳು ಮಾಡಿದನವ್ವ || ಅವ್ವ||

ಚಪ್ಪರ ತೋರಣ ಒಡವೆ ಓಲಗವಿಲ್ಲ
ಮಂಟಪ ಮಂಡಿಗೆ ಧಾರೆ ದಿಬ್ಬಣವಿಲ್ಲ
ಆರತಿ ಎತ್ತಲು ಮುತ್ತೈದೆಯರಿಲ್ಲ
ಮಂತ್ರಗಳಿಲ್ಲ ಶಾಸ್ತ್ರಗಳಿಲ್ಲ . . .
ಮಸಣದೊಳಗೆ ಮದುವಣಗಿತ್ತಿ ನಾನಾದೆನವ್ವ . . .
ಬೂದಿಬಡುಕನ ಬಾಳ ಬೆಳಗಿದೆನವ್ವ . . . || ಅವ್ವ ||

ಕದಳಿಯ ಬನದೊಳಗೆ ಕಾದಿಹನವ್ವ . . .
ಕಣಗಿಲೆ ಹೂ ಹಾಸಿ ಕಾದಿಹನವ್ವ . . .
ಕಣ್ಣ ಬತ್ತಿಯ ಉರಿಸಿ ಕಾದಿಹನವ್ವ . . .
ಜನುಮ ಜನುಮದ ಒಲವು ಫಲಗೂಡಿತವ್ವ . . .
ಹುಟ್ಟು ಸಾವಿನಾಚೆಯ ದಡದಿ ಮನೆ ಮಾಡಿಹನವ್ವ . . .
ತಪ್ಪೋ ಒಪ್ಪೋ ಮನ್ನಿಸಿ ಹರಸವ್ವ
ತಪ್ಪೋ ಒಪ್ಪೋ ಹರಸಿ ನೀ ಕಳಿಸವ್ವ || ಅವ್ವ ||

ಲೇಖಕರು

ಸವಿತಾ ನಾಗಭೂಷಣ (೧೯೬೧) ಅವರು ಅಂಚೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ‘ಸ್ತ್ರೀಲೋಕ’ ಅವರ ಕಾದಂಬರಿ. ‘ನಾ ಬರುತ್ತೇನೆ ಕೇಳು’, ‘ಚಂದ್ರನನ್ನು ಕರೆಯಿರಿ ಭೂಮಿಗೆ’, ‘ಹೊಳೆಮಗಳು’ ಅವರ ಕವನ ಸಂಕಲನಗಳು.

ಆಶಯ

ಪ್ರಸ್ತುತ ಕವನವನ್ನು ಅವರ ‘ನಾ ಬರುತ್ತೇನೆ ಕೇಳು’ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಕವನದ ನಾಯಕಿಯು ತನ್ನ ಅವ್ವನ ಮುಂದೆ ತನಗೆ ರಾತ್ರಿ ಬಿದ್ದ ಕನಸನ್ನು ಹೇಳಿಕೊಳ್ಳುವ ವಿಧಾನದಲ್ಲಿ ಕವನವಿದೆ. ಇದರಲ್ಲಿ ತನ್ನನ್ನು ಪ್ರೇಮಿಸಿರುವ ಗಂಡು ತನ್ನ ಒಲವನ್ನು ಪಡೆಯಲು ಮಾಡಿದ ನಾನಾ ಪ್ರಯತ್ನಗಳನ್ನು ಆಪ್ತವಾಗಿ ಆಕೆ ವರ್ಣಿಸುತ್ತಾಳೆ. ಜತೆಗೆ ತಾನು ಅವನ ಜತೆ ಮಾಡಿಕೊಂಡ ವಿಶಿಷ್ಟ ರೀತಿಯ ಮದುವೆಯನ್ನು ವಿವರಿಸುತ್ತಾಳೆ.

ಪದಕೋಶ

ಕಾರಿರುಳು = ಕಪ್ಪಾದ ರಾತ್ರಿ, ಕಪ್ಪರ = ಭಿಕ್ಷಾಪಾತ್ರೆ.

ಟಿಪ್ಪಣಿ

ಬೆಳ್ಳಿ = ಬೆಳಕಿನ ಜಾವದಲ್ಲಿ ಆಗಸದಲ್ಲಿ ಹೊಳೆಯುವ ಶುಕ್ರಗ್ರಹ, ಕದಳಿಯ ಬನ = ಶ್ರೀಶೈಲ ಪರ್ವತದಲ್ಲಿರುವ ಒಂದು ಸ್ಥಳ, ಮಂಡಿಗೆ = ಮದುವೆಯಲ್ಲಿ ಹಾಡಲಾಗುವ ಒಗಟಿನಂತಹ ಹಾಡು.

ಪ್ರಶ್ನೆಗಳು

೧. ಕವನದ ನಾಯಕಿ ತನ್ನ ಕನಸನ್ನು ಅವ್ವನ ಮುಂದೆ ಹೇಗೆ ಬಣ್ಣಿಸಿ ಹೇಳುತ್ತಾಳೆ?

೨. ಕನಸ್ಸಿನಲ್ಲಿ ಬಂದ ನಲ್ಲನು ಒಲವು ಬೇಡಿದ ನಾನಾ ಪರಿಗಳು ಎಂಥವು?

೩. ತನ್ನ ಮದುವೆಯ ವಿಶಿಷ್ಟ ವಿಧಾನವನ್ನು ಕವನದ ನಿರೂಪಕಿ ಹೇಗೆ ಯಾವ ರೀತಿಯಲ್ಲಿ ವಿವರಿಸುತ್ತಾಳೆ?

ಪೂರಕ ಓದು

೧. ೧೨ನೇ ಶತಮಾನದ ಕವಯಿತ್ರಿ ಅಕ್ಕಮಹಾದೇವಿಯ ವಚನಗಳು.

೨. ಪ್ರತಿಭಾ ನಂದಕುಮಾರ್ ಅವರ ‘ನಾವು ಹುಡುಗಿಯರೆ ಹೀಗೆ’ ಕವಿತೆ.

೩. ಎಚ್‌ಎಲ್‌ಪುಷ್ಪ ಅವರ ‘ಗಾಜುಗೊಳ’ ಕವನ ಸಂಕಲನ.

೪. ವೀಣಾ ಅವರ ‘ಗಂಡಸರು’ ಕಾದಂಬರಿ.

೫. ವೈದೇಹಿ ಅವರ ಸಣ್ಣಕತೆಗಳು.