‘ಏನಪ್ಪ ಈ ದಗೆ ಉಬ್ಸಾ ಉಸ್ಸಪ್ಪಾ. ಈ ಆಳಾದ ಮಳೆಗಳೂ ಉಯ್ಯಲ್ಲೊ. ಅಸುನಿ ಬತ್ತು ವೊಯ್ತು. ರೇವತಿ , ಭರಣಿ, ಉಬ್ಬೆ ಎಲ್ಲಾ ಮಳೆಗಳೂ ಬಂದೊ ವೋದೊ. ಒಂದೂ ಕಣ್‌ಬುಟ್ಟು ನೋಡ್ನಿಲ್ವಲ್ಲ? ದಗೆ ಕತ್ತಗ ಬೇಯತದಲ್ಲೊ ಪರಮಾತ್ಮ. ನಮ್ಗೇ ಇಂಗಾದ್ರೆ ಇನ್ನು ಮುದುಕರು, ಮೋಟ್ರು ಎಂಗೆ ತಡಕಂಡರಪ್ಪ? ಊರಾದ ಊರೆ ಬ್ಯಾಸಗೆ ಜಳಕ್ಕೂ ಅದಕೂ ಜಿಗುಟದ್ರೆ ಜೀಂವ ಮೋಗಂಗದೆ. ಜನಗಳು ಎಂಗೋ ಅಂಗೇ ಮಳೆಗಳೂ ಆದೊ ತಕೊ. ಇನ್ನೊಂದದೆ ಕೆರೆ ಕಟ್ಟೆ ಒಂದ್‌ಮಾಡೊ ರೋಣಿ ಮಳೆ. ಅದೂ ಕದ್ರೆ ಜನಾದನಾ ಎಲ್ಲಾ ಒಟ್ಟಿಗೆ ಊರು ಕೇರಿ ಬುಡದೇ’ ಎಂದು ಸೆಕೆ ತಾಳಲಾರದೆ ಹನುಮಣ್ಣ ತನ್ನ ಮೈ ಮೇಲಿದ್ದ ಶರಟನ್ನು ತೆಗೆದು ಒಂದು ಮೂಲೆಗೆ ಎಸೆದು ತನ್ನ ಮನೆಯೊಳಗೆ ಆತುಕೊಂಡು ಬಿದ್ದಿದ್ದ.

ಸುತ್ತಮುತ್ತಲಿನ ಹಳ್ಳಿಗಳು ಅಲ್ಲಿಯ ಜನರು ಮಳೆ ಇಲ್ಲದೆ ಬೆಳಸು ಕಾಣದೆ ಊರಿಗೆ ಕವುಚಿಕೊಂಡಿರುವ ಬರದ ಬವಣೆಯಲ್ಲಿ ಬಳಲುತ್ತಿದ್ದರು. ಅನ್ನಮಾರ್ಗ ಕಾಣದ ಜನರು ಮಳೆ ತರುವ ಸಿಳ್ಳಪ್ಪನ ನೆನೆಯುತ್ತಿದ್ದರು. ಅವನ ಜಾತ್ರೆಯನ್ನು ಮಾಡಬೇಕೆಂದು ಊರೂರಿಗೆ ಪತ್ರ ಬಿಟ್ಟಿದ್ದರು. ಇದು ಸುತ್ತಮುತ್ತಲ ಹಳ್ಳಿಗಳಲ್ಲಿ  ಪ್ರಚಾರವಾಯಿತು. ಜನ ಹೌದು ಹೌದು ಮಾಡಬೇಕೆಂದು. ಮೂರಕ್ಷರ ಕಂಡಿರುವ ಹುಡುಗರು ಮಾತ್ರ ಈ ಹಬ್ಬದ ಹಿಂದಿರುವ ಮೂಡನಂಬಿಕೆಯನ್ನು ಹೀಗೆಳೆದರು. ಇವಕ್ಕೆಲ್ಲ ಮಳೆ ಬರುವಂತಿದರೆ ಕತ್ತೆ ಮೆರವಣಿಗೆ ಮಾಡಿದ ಊರುಗಳೆಲ್ಲಾ ಮಳೆ ಬರಬೇಕಿತ್ತೆಂದು ಗೇಲಿ ಮಾಡುತ್ತಿದ್ದರು.

ಊರ ಹಿರಿಯರು ಮೂಖಂಡರು ಇದು ಊರು ಹಾಳುಮಾಡುವ ಕೂಳೆ ಹುಡುಗರ ಬುದ್ಧಿ ಎಂದು ಲೆಕ್ಕಿಸದೆ, ಹಬ್ಬದ ದಿನವನ್ನು ನಿಗಧಿ ಪಡಿಸಿದರು. ಅಕ್ಕಪಕ್ಕದ ಊರುಗಳಿಂದೆಲ್ಲಾ ಹಬ್ಬದ ಬಗ್ಗೆ ಸಮ್ಮತಿ ಸೂಚಿಸಿ . ಊರಿನ ಮುಖ್ಯಸ್ಥರು ಖುದ್ದಾಗಿ  ಬಂದು ಸುದ್ದಿ ಮುಟ್ಟಿಸಿ, ಜಾತ್ರೆಯ ರೂಪರೇಖೆ ಚರ್ಚಿಸಿ ತೀರ್ಮಾನ ಕೈಕೊಳ್ಳುವಂತೆ ಹೇಳಿ ಹೋದರು.

ಅಂದುಕೊಂಡಂತೆ ಸಿಳ್ಳಪ್ಪನ ಜಾತ್ರೆ ಬಂತು. ಸುತ್ತೆಲ್ಲಾ ಊರುಗಳ ಜನ ಜಾತ್ರೆಗೆ ಸೇರಿದರು. ಅಂದು ದೂಪ ದೀಪ ಹೆಚ್ಚಾಗಿ ನಡೆಯುತ್ತಿತ್ತು. ಜಾತ್ರೆ ಮುಗಿದು ಮಂಗಳಾರತಿ  ಎತ್ತುವ ಸಮಯ. ಇನ್ನೇನು ಮುಗಿಯಿತು ಎನ್ನುತ್ತಿದ್ದಂತೆ ಆಕಾಶದಲ್ಲಿ ಮೋಡ ಆಡುವುದಕ್ಕೆ ಸುರುವಾಯಿತು. ಇಸಾನಿ ಮೂಲೆಯಲ್ಲಿ ತಳಾರ್ನೆ ಮಿಂಚೇರಿತು. ಸಿಳ್ಳೊಡೆದು ಗುಡುಗುತ್ತಾ ಮಳೆ ಬಂತು. ಜನ ಬಾಯಿಯ ಮೇಲೆ ಬೆರಳು ಇಟ್ಟುಕೊಂಡಿತು. ‘ನೋಡದ್ರ್ಯು ಸಿಳ್ಳಪ್ಪನ ಮಹಿಮೆ, ಕಣ್‌ಕಾಣದ ಜನ ಅಂತದಲ್ಲ’! ಎಂದು ಅವನ ಮಹಿಮೆಯ ಹೊತ್ತುಕೊಂಡು ಮೆರೆಯುತ್ತಿದ್ದರು. ಬಂದ ಮಳೆ ಬಿಡದೆ ಸುರಿಯುತ್ತಿತ್ತು. ಬಂದಿದ್ದ ಜನ ಎಲ್ಲೆಲಿದ್ದರೋ ಅಲ್ಲಲ್ಲೆ ತಂಗಿದರು. ಊರಾದ ಊರೆ ಎಷ್ಟೊತ್ತಿಗೆ ಮಳೆ ನಿಂತರೂ ಸರಿಯೆ. ಬೇಕಾದರೆ ನೇಗಲಿಗೆ ಲಾಟೀನ ಕಟ್ಟಿಕೊಂಡು ಹೊಲ ಉಳುವುದಾಗಲಿ ಎಂದು ತಣ್ಣಗೆ ಯೋಚಿಸುತ್ತಿದ್ದರು. ಮಳೆ ಬಿಡದೆ ಸುರಿಯುತ್ತಿತ್ತು.

ಊರಿನ ಕೆರೆ ಸುತ್ತೆಲ್ಲಾ ಊರುಗೂ ದಾತನಾಗಿದ್ದ ದೊಡ್ಡಕೆರೆ. ಇದರ ಸುತ್ತಾ ಎದೆಯ ಸೀಳಿಕೊಂಡು ಮಲಗಿದ್ದ ಹಳ್ಳದಲ್ಲಿ ಹರಿಯುವುದು ಪನ್ನೀರು. ಅದು ಕೋಡಿ ಬಿದ್ದು ಹೊರಳಿದರೆ ಮರಳುತ್ತಿದ್ದವು ಮರಳಿ ಮೀನುಗಳು. ಅವು ಆತುಕೊಳ್ಳಲು ಸಾಲಾಗಿರುವ  ಹೊಂಗೆ ಮರಗಳ ಮೇಲೆ ಕುಳಿತಿರುತ್ತಿದ್ದವು ಕೊಕ್ಕರೆಗಳು. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಸುತ್ತೆಂಟು ತಿಟ್ಟುಗಳಿಂದ ನೂರೆಂಟು ಹೊಳ್ಳಗಳಾಗಿ ಸದು ಸಿಕ್ಕಿದ ಕಡೆಯಲೆಲ್ಲಾ ಹರಿದು ನೀರು ನುಗ್ಗಿ ಬಂದು ಕೆರೆಯ ಸೇರುತ್ತಿತ್ತು.

ನೀರು ಸೇರಿದಂತೆ ಕೆರೆಯ ಹಿಗ್ಗುತ್ತಿತ್ತು. ಕೆರೆ ಹಿಗ್ಗಿ ಹಿಗ್ಗಿ ವಜನ್‌ತಡೆಯಲಾರದೆ  ಕೆರೆಯ ಏರಿಯು ಕಿತ್ತು ಗಾಢವಾದ ಕತ್ತಲೆಯ ಮೌನವ ಸೀಳಿ ಕೆರೆಯು ಬಯಲಾಯ್ತು. ಮೌನವಾಗಿದ್ದ ಈ ರಾತ್ರಿಯಲ್ಲಿ ನುಗ್ಗಿದ ನೀರಿನಿಂದ ಎದ್ದ ಸದ್ದಿಗೆ ಸಕಲ ಪ್ರಾಣಿ ಪಕ್ಷಿಗಳಿಗೆ ನಿದ್ರಾಭಂಗವಾಯ್ತು. ದನಕರುಗಳು ಎದ್ದು ಮೈ ಮುರಿದವು. ಬಲ ನುಲಿದವು. ಕೋಳಿಗಳು ಕೊರಗರೆದವು. ಕೊತ್ತಿಗಳು ಮೊಗ್ಗಲು ಬದಲಿಸಿದವು. ಜನ ನಿದ್ರೆ ಕಳೆದುಕೊಂಡು ಜಾತ್ರೆಗೆ ಹೋಗಿದ್ದ ತಮ್ಮ ಮನೆಯ ಜನರ ನೆನೆಯುತ್ತಿದ್ದರು. ತುಂಬಿ ತುಳುಕುತ್ತಿದ್ದ ಕೆರೆ  ಬೆಳಕು ಹರಿಯುವುದರಲ್ಲಿ ಇದ್ದು ಇಲ್ಲದಂತಾಯ್ತು. ಅದು ಎಬ್ಬಿಸಿ ಹೋದ ಸದ್ದು ಜನರ ಕಿವಿಯಲ್ಲಿ ಮೊರಗರಿಯುತ್ತಿತ್ತು.

ಈ ಗುಡಿಸಲು ಗಿಡಗಳ ಮೇಲೆ ಗೂಡು ಕಟ್ಟಿ ಗೌಜಲಕ್ಕಿಗೆ ಗೆಜ್ಜಲಾಗಿತ್ತು. ಈ ಗುಡಿಸಿಲಿನಲ್ಲಿ ಸೂಲು ಎರಡಾಗಿ ಎರಡು ನಾಕಾಗಿ ಸೂಲಾಡುತ್ತಿದವು. ಈ ಅಗಾಧ ಶಕ್ತಿಯ ಗಂಗವ್ವ ಕರುಣೆ ತೋರದೆ ಭೋರ್ಗರೆಯುತ್ತಾ ಬಂದವಳೆ ತನಗೆ ಸರಿಸಾಟಿಯಲ್ಲದ ಈ ಗುಡಿಸಿಲನ್ನು ಸೆಳೆದು ಚಿಂದಿ ಚಿಂದಿಯ ಮಾಡಿದಳು. ಅದು ಸೆತ್ತೆ ಸಿದಕಲುಗಳಲ್ಲಿ ತರಗಲೆಯ ಚೂರು ಚೂರುಗಳಂತೆ ಸಿಕ್ಕಿಕೊಂಡಿತು. ಏಕಾಂಗಿಯಾಗಿ ಮಲಗಿ ಸೂಲಾಡುತ್ತಿದ್ದ ಜವರಣ್ಣನ ಜೀವವು ಇದರ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಗೊಬ್ಬಳಿ ಮರದಲ್ಲಿ ಸಿಕ್ಕಿಯಾಕಿಕೊಂಡು ನರಳಾಡುತ್ತಿತ್ತು. ಇವನ ಮುಂದೆಯೇ ಕಾಡೆಣಗಳಿಗೆ ಆಶ್ರಯವಾಗಿದ್ದ ದೈತ್ಯಾಕಾರದ ಆಲದಮರ ಕೈ ಬೀಸಿ ಕರೆವಂತೆ ಸುಂಯ್ಯೆಂದು ಗಾಳಿ ಬೀಸಿತು. ಅದರ ಪಕ್ಕವೇ ಸುಂಟರಗಾಳಿ ಎದ್ದು ಗಿರಿಯಮ್ಮನನ್ನು ಹೊತ್ತು ಒಯ್ಯುತ್ತಿದ್ದಾಗ ತಡೆದಿಟ್ಟುಕೊಂಡು ಮನೆಯವರಿಗೆ ಒಪ್ಪಿಸಿದ್ದ ಸೀಗೆ ಬೇಲಿ ಅಡ್ಡಗಟ್ಟಿತ್ತು. ಅದು ಹುಣಸೆ ಮರಗಳ ಒತ್ತಾಸೆಯಿಂದ ಗೀ ಎನ್ನುತ್ತಿದ್ದ ದಿವಾನರ ಮಾವಿನ ತೋಪಿನಲ್ಲಿ ಲೀನವಾಗಿತ್ತು. ಇದಕ್ಕೆ ತಗುಲಿಕೊಂಡಂತೆ ತಂಪಿನ ದೊಡ್ಡಮ್ಮ, ಸಿದ್ರಾಶ್ಯಾಮೆಯ ಸಿದ್ಧಪ್ಪಾಜಿ, ಸಿಡಿ ಮಾರಮ್ಮನವರು, ಸಿಳ್ಳೊಡೆವ ಸಿಳ್ಳಪ್ಪನವರು ಈ ದೇವಮಾನವರು ಇದನ್ನು ನೋಡುತ್ತಾ ಹಟ ತೊಟ್ಟಂತೆ ಜಾಗ ಬದಲಿಸದೆ ದೃಷ್ಟಿ ನೆಟ್ಟು ನಿಂತೇ ಇದ್ದರು.

ಬೆಳಕು ಕಂಡ ಜನರು ಎದ್ದು ಬಿದ್ದು ಓಡುತ್ತಾ ಜಾತ್ರೆಗೋಗಿದ್ದ ಜನರ ಎದುರುಗೊಂಡರು. ಗುಂಪಿನಲ್ಲಿ ತನ್ನ ಮನೆಯ ಜನಗಳ ಹುಡುಕಾಡಿದರು. ಜಾತ್ರೆಯಿಂದ ಬರುತ್ತಿದ್ದ ಜನ ಗಾಬರಿಯಾಗಿ ಏನೋ ಅಚಾತುರ್ಯ ನಡೆದಿರಬಹುದೆಂದು ತಿಳಿದು ಗಾಬರಿಯಾಯ್ತು. ದೊಡ್ಡಕೆರೆ ಒಡೆದು, ಸಿಕ್ಕಿದ ಜನ ದನಗಳ ಹೊತ್ತುಕೊಂಡು ಹೋಗಿದೆ ಎಂದಾಗ, ಇತ್ತಕಡೆಯಿಂದ ಇವರು ತಮ್ಮ ಮನೆಯ ಜನಗಳ ನೆನೆದು ಓಡಲು ಸುರುಮಾಡಿದಿರು. ಆ ಕೆಡೆಯಿಂದ ಈ ಕಡೆಗೆ ಈ ಕಡೆಯಿಂದ ಆ ಕಡೆಗೆ ಜನ ಓಡಾಡುತ್ತಿದ್ದರು.

ಕೆರೆ ರಾತ್ರಿಯಲ್ಲದೆ ಬೆಳಿಗ್ಗೆ ಹೊಡೆದಿದ್ದರೆ ಇನ್ನಷ್ಟು ಕನ ಜಾನುವಾರುಗಳು ಹೋಗುತ್ತಿದ್ದವು. ಎಂದು ಜನ ನೆನೆದು ಕಂಪಿಸುತ್ತಿದ್ದರು. ಅವರು ತಮ್ಮ ಹೊಲಗಳ ಕಾಣದಾದರು ಹೊಲಗಳಲ್ಲಿದ್ದ ಮರಗಳ ಕಾಣರಾದರು. ಹೊಲಗಳಲ್ಲಿದ್ದ ಮೆದೆಗಳ ಕಾಣದಾದರು. ಅವುಗಳ ನೆನಪೂ ಅಳಿಸುವಂತೆ ನೀರು ಎಲ್ಲವನ್ನು ಕೊರೆದು ಗೋರಿ ತೆಗೆದುಕೊಂಡು ಹೊರಟೋಗಿತ್ತು. ಜನರು ಮೂಕಸ್ಮಿತರಾಗಿ ಬಾಯಿಂದ ಮಾತು ಕಡೆಸದೆ ಗಂಭೀರವಾಗಿದ್ದರು. ಮೂಡಳ್ಳಿ ಸಾಹುಕಾರ ಹೊಲದಲ್ಲಿ ಕಾವಲುಗಾರನಾಗಿದ್ದ ಜವರಣ್ಣನ ಗುಡಿಸಲೂ ನಾಪತ್ತೆಯಾಗಿರುವುದರಿಂದ ಕಂಡು ಚಲಿಸತೊಡಗಿದರು. ದಿಕ್ಕಿಗೂ ಕಣ್ಣಾಡಿಸಿ ನೋಡಿದರು. ಜವರಣ್ಣನ ಗುಡಿಸಲೂ ಚಿಂದಿಚಿಂದಿಯಾಗಿ ಅಲಲ್ಲಿ ಸ್ಪಲ್ಪ ಸ್ಪಲ್ಪವೇ ಸಿಕ್ಕಿಕೊಂಡಿದ್ದು ಅದರ ಕುರುಹು ದೊರೆಯಿತು. ಜವರಣ್ಣನನ್ನು ಎತ್ತುಕೊಂಡು ಹೋಗಿ ಗೊಬ್ಬಳಿ ಮರಕ್ಕೆ ತುರುಕಿದ್ದುದ್ದ ಕಂಡರು.

ಇವನ ಜೊತೆಯಲ್ಲಿ ಹೆಂಡತಿ ಮಕ್ಕಳೂ ಇದ್ದಿದ್ದರೆ ಅವರಿಗೂ ಇದೇ ಗತಿಯಾಗುತ್ತಿತ್ತು. ಆದರೆ ಜವರಣ್ಣ ಅವರನ್ನು ನೆನ್ನೆಯ ಸಿಳ್ಳಪ್ಪನ ಜಾತ್ರೆಗೆ ಕಳುಹಿಸಿದ್ದ. ಅಂಗಾಗಿ ಅವರನ್ನು ಸಿಳ್ಳಪ್ಪನೇ ಕಾಪಾಡಿದ್ದ. ಆದರೂ ಜಾತ್ರೆ ಮುಗಿಸಿ ಅಂದು ಸಂಜೆಯ ಬರುವವಳಿದ್ದಳು ಹೆಂಡತಿ. ಆದರೆ ಮಕ್ಕಳು ಅನ್ನವನ್ನು ಕಂಡಾಗ ‘ಅನ್ನ ಉಣಬೇಕು’ ಎಂದು ಹಟ ಹಿಡಿದವು. ಆಗ ಇವಳು ‘ತಾಡು ಬರವಳು ಬಂದಿವ್ನಿ ಐಕಳು ಅನ್ನ ಅನ್ನ ಅಂತ ಆಗರಿತವೆ ಉಣಕಳ್ಳಿ’ ಎಂದು ಜಾತ್ರೆಅಲ್ಲಿ ನಡೆಯುತ್ತಿದ್ದ ಅನ್ನ ಸಂತರ್ಪಣೆಗಾಗಿ ಕಾದಿದ್ದಳು. ಅಲ್ಲದೆ ಮಳೆಯೂ ಸಂಜೆಗೆ ಸುರುವಾದಾಗ ಮಕ್ಕಳನ್ನು ಎಳೆದುಕೊಂಡು ಬರಲಾರದೆ ಅಲ್ಲೇ ತಂಗಿದ್ದಳು.

ಮರದಲ್ಲಿ ಸಿಕ್ಕಿಕೊಂಡಿದ್ದ ಜವರಣ್ಣನನ್ನು ಜ್ವಾಪಾನವಾಗಿ  ಇಳಿಸುತ್ತಾ; ಅವನ ಚರ್ಮಕ್ಕೆ; ಮತ್ತೆ ಕೆಲವು ಅವನ ಮಾಂಸಖಂಡಗಳಿಗೆ ನುಗ್ಗಿದ್ದ ಗೊಬ್ಬಳಿ ಮುಳ್ಳನ್ನು ಹಿರಿದಾಕುತ್ತಿದ್ದರು. ನಂತರ ಅವನನ್ನು ತಂದು ಮಾಳದಲ್ಲಿ ಮಲೆಗಿಸಿದರು. ಅವನ ಮೈಯಲ್ಲಿ ಗೊಬ್ಬಳಿ ಮುಳ್ಳಾಡಿದುದರಿಂದಲೂ ರಾತ್ರಿ ಇಡೀ ದೇಹ ನೀರಿನಲ್ಲಿ ನೆನೆದುದರಿಂದಲೂ ಜವರಣ್ಣನ ಸ್ಥಿತಿ ಚಿಂತಾಜನಕವಾಗಿತ್ತು. ಅವನು ಕಣ್ಣು ಕಾಲು ತೇಲಿಸುತ್ತಾ ಮೇಲಿನ ಉಸಿರನ್ನು ಆಡಿಸುತ್ತಿದ್ದ. ಇವನ ಸ್ಥಿತಿಯನ್ನು ಕಂಡು ಗೋಳಾಡುತ್ತಿದ್ದ ಹೆಂಡತಿಯನ್ನು ನೋಡಲಾರದ ಜನ ತನ್ನ ಊರಿಗೆ ಕರೆದುಕೊಂಡು ಬಂತು. ಜವರಣ್ಣನನ್ನು ಮೈಸೂರಿಗೆ ಕರೆದುಕೊಂಡು ಹೋಗದೆ ಅವನನು ಬದುಕಿಸಲು ಸಾಧ್ಯವಿಲ್ಲ ಎಂದು ಜನ ತೀರ್ಮಾನಿಸಿ ಅವನ ದೇಹವನ್ನು ಬಸ್ಸು ನಿಲ್ಲುವ ಬುಗರಿ ಮರದ ಕೆಳಗೆ ಮಲಗಿಸಿಕೊಂಡು ಬಸ್ಸಿಗಾಗಿ ಕಾಯುತ್ತಿದ್ದರು.

ಈ ಊರು ಹುಟ್ಟಿದಾಗಿನಿಂದಲೂ ಬಸ್ಸಿನ, ಮುಖವನ್ನೇ ಕಾಣದಿದ್ದ ಈ ಊರಿನ ಜನಕ್ಕೆ ಒಳ್ಳೆಯದಕ್ಕು ಕೆಟ್ಟದಕ್ಕು ಕಾಲು ಕಾಲುದಾರಿ ಎರಡೇ ನೆನಪು. ಮಂಡಲ ಪಂಚಾಯಿತಿ ಪ್ರಧಾನರು, ಸೆಕೆಟ್ರಿ, ಅವರು, ಇವರು ಎಂದು ಎದ್ದುಕೊಂಡ ಮೇಲೆ ಅದೂ ಒಂದು ವಾರದಿಂದ ಊರಿಗೆ ಸಿಟಿ ಬಸ್‌ಹಾಕಿದ್ದರು. ಅದೋ ಬರ್‌ಎಂದು ಬಂದರೆ ಒಂದು ಬಾರಿ ಉಸಿರಾಡುವುದೋ ಇಲ್ಲವೋ ಕುಂತು ನಿಂತದ್ದವರೆಲ್ಲರನ್ನು ಏರಿಸಿಕೊಂಡು ಬರ್ರನೆ ಹೊರಟು ಬಿಡುತ್ತಿತ್ತು. ಅದು ಯಾಕೊ ಇಂದು ಹೊತ್ತು ಮೂಡಿ ಮಾರುದ್ದ ಬಂದಿದ್ದರೂ ಇನ್ನೂ ಬಂದಿರಲಿಲ್ಲ.

ಜವರಣ್ಣನ ಘಟ ಗೊಟಕ ಗೊಟಕ ಎನ್ನುತ್ತಿತ್ತು. ಜನ ಸೀರಿಯಸ್‌ಆಗಿದ್ದರು. ಇವನು ಸಾಯುವುದು ಗ್ಯಾರಂಟಿ ಎಂದರು. ಊರಲ್ಲಿ ಹೆಣ ಬಿದ್ದರೆ ಮನೆಗೆ ನೀರು ತರುವುದು ಹ್ಯಾಗೆಂದು ಹೆಂಗಸರು ಮೊದಲೇ ಬಾವಿಗೂ ಮನೆಗೂ ಓಡಾಡುತ್ತಿದ್ದರು. ಜಾತ್ರೆಗೆ ಹೋಗಿದ್ದ ಎಷ್ಟೋ ಹುಡುಗರು ಇನ್ನೂ ಬಾರದಿರುವುದರಿಂದ ಇನ್ನೂ ಸಂಜೆಯ ತನಕ ಎಷ್ಟು ಹೆಣ ಬರುತ್ತವೋ ಎಂದು ಗಾಬರಿಯಾಗಿದ್ದರು. ಮೈಸೂರಿಗೆ ಜವರಣ್ಣನನ್ನು ತೆಗೆದುಕೊಂಡು ಹೋಗಿದ್ದರೆ ಬದುಕುತ್ತಿದ್ದ ಎಂದು ಕಂಡ ವಸ್ತುಗಳ ಮೇಲೆಲ್ಲಾ ಕಿಡಿ ಕಾರುತ್ತಿದ್ದರು. ಈ ಹಾಳಾದ ಬಸ್‌ಗೆ ಮೂರು ದಿಸಕೆ ಸಾಕಾಯ್ತೇನೋ? ಕಷ್ಟ ಸುಖಕ್ಕೆ ಇಲ್ಲೆ ವೋದ್ದು ಆಮೇಲೆ ಬಂದರೆಷ್ಟು ಬರದೆ ಇದ್ದರೆಷ್ಟು ತಕೊ? ಇಷ್ಟೊತ್ತಾಗಾಗಲೆ ತಿರ್ಯಾಕತಿರ್ನಿಲ್ವ? ಎಂದು ಮಾತನಾಡಿಕೊಳ್ಳುತ್ತಿದ್ದರು.

ಕಾದು ಕೆಂಡವಾಗಿದ್ದ ಗಂಡಸರು ರಸ್ತೆ ಮಾಡಿಸಿದವನ್ನು ತೆಹಳುತ್ತಾ; “ಆ ಪುಣ್ಯಾತ್ಮ ಪಕ್ಕದ ಊರನವರು ತೆಂಡ್ರ ತಕಂಡು ರಸ್ತೆ ಮಾಡಿಸ್ತಿನಿ ಅಂತ ಮಾಡಸದ, ಕಲ್‌ಗಳ ಮೇಲೆ ಮಣ್ಣಿಟ್ಟುಬುಟ್ಟು ಹೋದ. ಒಂದು ಸರ್ತಿ ಮಳೆ ಹುಯ್ತು. ರಸ್ತಿಯಾದ ರಸ್ತೆಯಲ್ಲಾ   ಹಲ್‌ಕಿರಕತ್ತು. ಆ ಪಿಕಪ್ಪನ ತಾವು ಅದೇನು ರಸ್ತೆ ಕುಲವಯ್ಯಾ? ಈಪಿಪಾಟಿ ಹಿಟ್ಗಲ್‍ಗಳು ಮೆಡರಕ ನಿಂತಿವೆ. ಬಸ್ಸು ಹೊಯ್ತಿದ್ರೆ ದಡಗುಡತವೆ. ಒಳಗೆ ಕುಂತಿರವರ ಎತ್ತೆತ್ತಿ ಎಸಿತದೆ. ಇಂಥಾ ದಾರೀಲಿ ಎಂಥಾ ಬಸ್ಸಾದ್ರು ಕೆಟ್ಟೋಗದೆ ಪುರುವಾರವಾದ್ದ ತಕಳಿ” ಎಂದು ತಮ್ಮ ಕೈಗಳನ್ನು ಹೊಸೆಯುತ್ತಿದ್ದರು.

ಊರಿನ ಉಸ್ತುವಾರಿ ಸಿದ್ದಣ್ಣ ಊರಿನಲ್ಲೆಲ್ಲಾ ಸುತ್ತಾಡಿ ಮಕ್ಕಳು ಬಾರದೆ ಚಿಂತೆಯಲ್ಲಿದ್ದ ಜನಗಳಿಗೆ ಸಮಾಧಾನ ಹೇಳಿ ಬುಗುರಿ ಮರದ ಹತ್ತಿರಕ್ಕೆ ಬಂದ. ಇವನು ಪ್ಯಾಟೆ ಕಂಡಿರುವ ಮನುಷ್ಯ.ಅಲ್ಲದೆ ಗಿಲೀಟಿನ ಪಾರ್ಟಿ. ಊರಿನಲ್ಲಿ ಜನಕ್ಕೆ ಪಿಂಚಣಿ ಕೊಡಿಸುವುದು, ಹಸು, ಕುರಿ, ಸಾಲ ತರಿಸುವುದು ಜನತಾ ಮನೆ, ಈಗೆ ಓಡಾಡಿಕೊಂಡಿದ್ದ ಅಸಾಮಿ.

ಬಂದವನೆ; ‘ಐ ಇದ್ಯಾಕ್ರಯ್ಯ ಇನ್ನೂ ಅಂಗೆ ಕುಂತಿದಿರಿ; ಇವತ್ತು ಬಸ್ಸೆಲ್ಲಿ ಬಂದವು. ಬೇರೆ ಏನಾರು ಏರ್ಪಾಡು ಮಾಡಂವ ಹೇಳ್ರಿ ಗಾಡಿನಾದ್ರು ಕಟ್ಟಿ’ ಎಂದ.

‘ಇತ್ತಿಂದ ಗಾಡೀಲಿ ತಕ ವೋದರೆ ಅತ್ತಿಂದ ಗಾಡೀಲಿ ಹೆಣ ತರಬೇಕಾಯ್ತೆ ಅಷ್ಟೆ’ ಎಂದ ಅದಕೊಬ್ಬ.

‘ಮಂತೆ ಬಸ್‌ಬರಲ್ವಲ್ಲ ಏನ್‌ಮಾಡಿರಿ’

‘ಬಸ್‌ಬರದೆ ಎಲ್‌ಗೋದ್ದು; ವಸಿ ಹಿಂದು ಮುಂದು ಬತ್ತದೆ’ ಎಂದ ಅದಕೊಬ್ಬ,

‘ಐ ಇವತ್ತು ಬಸ್‌ಗಳು ಬಸ್‌ಸ್ಯಾಂಡ್‌ನಿಂದ ಒಂದು ಯಜ್ಜೆ ಕಿತ್ತರೆ ವುಳಕಂಗಿದ್ದದ್ರಯ್ಯಾ ಆತರವಾಗಿ ಆಡ್ರ ಮಾಡಿ ಮೈಸೂರಾದ ಮೈಸೂರೆ ಕೂಗತಾ ಕುಂತದೆ’!

‘ಅದ್ಯಾಕ್ಲ ಸಿದ್ಧ’?

‘ಐ ಕಟ್ಟೆ ನೀರಗೆ ತಗರಾಲಾಗಿ ಕುಂತಿಲ್ಲವಾ’?

‘ಅಂಗಂದರೆ ‘?

ಅಂಗಂದರೆ, ‘ಕನ್ನಂಬಾಡಿ ಕಟ್ಟೆ ನೀರ ನಮಗೂ ಬುಟ್ಟುಕೊಡಿ’ ನಮ್ಮ ಹೊಲ ಗದ್ದೆಗಳಿಗೂ ನೀರಿಲ್ದೆ ಒಣಹೋಗಿ ನಿಂತವೆ ಅಂತ ತಮಿಳ್ನಾಡನವರು ಕೊಯ್ರಿ ಆಕಂಡು ಕುಂತಿಲ್ವ?’ ಸಾಲದಕೆ ಡಿಲ್ಲಿಯಿಂದಲೇ ಆಡ್ರ ಮಾಡ್ಸವ್ರೆ?

‘ಅದಕೆ?’

‘ಅದಕೇ ನಮ್ಮ ಮಿನಿಷ್ಟ್ರು, ಎಂಲ್ಹೆ, ಎಂಪಿಗಳು ನಮಗೆ ತಿಕ ತೊಳಕಳಕ್ಕೆ ನೀರಿದ್ರೆ ಮೊಖ ತೊಳಕಳಕ್ಕಿಲ್ಲ. ಮೊಖ ತೊಳಕಂಡ್ರೆ ತಿಕ ತೊಳಕೊಳಕ್ಕಿಲ್ಲ ಇನ್ನೂ . . . ನೀವು ವಲಕ್ಕೋದ್ರಿ! ಇರದ್ನು ಏನಾರು ಕೊಟ್ಟರೆ ನಮ್ಮ ಬಾಯಿಗೆ ಮಣ್ಣೇ. ಸಾಲದದಕೆ ಜನ ನಮ್ಮನ ಸುಮ್ಮನೆ ಬುಟ್ಟದಾ? ಅಂತ ತಗರಾಲ್‌ಗಿಳ್ದು ಏಡ್‌ಕಡೆಯವರೂ ಕುಣಿತಾ ಕುಂತವ್ರೆ.’

‘ಅದಕೆ?’

‘ಅದಕೇ ಇವತ್ತು ಅತ್ತಲ ಗುಲಬರ್ಗಾ ಧಾರವಾಡದಿಂದ ಇಡದೂ ಇಡೀ ಸೈಟನಲ್ಲೆ (ಸ್ಟೇಟ್‌) ಎಲ್ಲೂ ಒಂದು ಬಸ್ಸು ರೈಲು ತಿರುಗಾಡದಂಗೆ ಅಂಗಡಿ ಮುಂಗಟ್ಟುಗಳು ಸುದಾ ಬಾಗಲ ಬಿಚ್ಚಿದಂಗೆ ಬಂದ್‌ಮಾಡಿ ನಮ್ಮ ನೀರು ನಮಗೆ ಬ್ಯಾರಿಯವರಿಗೆ ಒಂದು ಅನಿ ಮುಕ್ಷಾ ಕೊಡಕ್ಕಾಗಲ್ಲ ಅಂತಿಲ್ವ?’

‘ತಗಿಯಯ್ಯ ಇದ್ಯಾವ ಮಾತು ಅಂತ ಆಡಯಿ. ಚಿನ್ವಲ್ಲ, ಚಿಗ್ರಲ್ಲ ಕುಡಿಯ ನೀರ್ಗೆ ತಗ್ರಾಲ!?’

‘ಚಿನ್ವಾದ್ರೂ ಮಡಿಕಕೆ ಆದ್ದಯ್ಯ? ಅದೂವೆ ಸರಕಾರದ ಲೆಕ್ಕಕ್ಕೆ ಸೇರದದಲ್ವ? ಈ ಚಿನ್ನ, ಬೆಳ್ಳಿ, ಕಬ್ಬಿಣ ನೀರು ಇವು ಯಾರೊಬ್ಬರ ಸ್ವತ್ತಲ್ಲ’

ಅಂಗಾದ್ರ ದಾವಾರದವ್ರು ಮನೆ ಬಾಗ್ಲಗೆ ಬಂದು ಒಂದು ಗಳಾಸ್‌ನೀರ್‌ಕೊಡಿ ಅಂದರೆ ಅದ್ಯಾವ ಜಲ್ಮವಯ್ಯ ಇಲ್ಲ ಅನ್ನದು.

‘ಕುಡಿಯಕ್ಕೆ ಒಂದು ಗಳಾಸ್‌ಇಲ್‌ದಿದ್ರೆ ಒಂದು ಚೊಂಬನೆ ಕೊಡಂವ ಅದಕಲ್ಲ? ಆದರೆ ನಮ್ಮ ತಾವು ಇರದು ಒಂದು ಮಡಕೆ ನೀರು. ನೀನು ಬಂದು ಒಂದು ಅಳಗೆ ನೀರ್‌ಕೊಡು ಅಂದ್ರೆ ಎಂಗ್ಯಪ್ಪ’.

ಕ್ಯಾಣವಾದ ಜನ ‘ನಮ್ಮ ನೀರ ನಾವು ಇಷ್ಟ ಬಂದಂಗೆ ಬಳಸ್ಗಳಕೆ ಅದೆಂತಾ ಕೊಯ್ರಿಲಾ ಸಿದ್ಧ. ನಮಗೇ ಕುಡಿಯ ನೀರ್ಗೆ ಎಷ್ಟು ಕಷ್ಟ. ನಮ್ಮ ಬಾವಿಗಳೆಲ್ಲಾ ಸುಂಡೋಗಿ ನೀರಿಲ್ದೆ ನೀ ಕಂಡಂಗೆ ಎಷ್ಟು ಅನವಾಸ ಪಡತಾ ಇವಿ. ಮೂರು ಗಂಟೆ ರಾತ್ರಿಗೆ ಹೋಗಿ ಬಾಂವಿಗಿಳಿದು ಜಲ ಬಂದಿದಾ ನೋಡಕಂಡು ಇದ್ದ ನೀರ ಬಟ್ಟೇಲಿ ವಂಟಗ ಬಂದು ಸೋಸ್ಗ ಕುಡೀತೀವಲ್ಲ ಅದ್ನ ಯಾರೂ ಕೇಳಕ್ಕಾಗಲ್ವ?’

‘ಛೇ….. ಛೇ…. ಅಂಗಲ್ಲ ಕಣಣ್ಣ ಇದು. ಇದರ ಯವಾರನೇ ಬ್ಯಾರೆ. ನಿಮ್ಮನೇಲಿ ನೀವು ನೆಲಬಾವಿ ತೋಡಸ್ಗಂಡು ನೀರ ಕುಡದ್ರೆ ನೀ ಹೇಳತರದಲ್ಲಿ ಅದು ಸರಿ. ಅದು ನಿನ್ನ ಇಚ್ಚೆ ನಿನ್ನ ಸ್ವತಂತ್ರ. ಆದರೆ ಅದೇ ಸರಕಾರದವರು ಬಂದು ಬೋರಿಂಗ್‍ಹಾಕಸ್ದರೆ; ಅದು ನಿನ್ನೊಬ್ಬನಿಗ್ಯೊ ಅಥವಾ ಸರ್ವೆಂಟು ಜನಕ್ಕೋ?’

ವರಸೆಗೆ ವರಸೆ ಕೊಡಲು ಇಡೀ ಅಂಗಾಂಗಗಳನ್ನು ರೆಡಿ ಮಾಡಿಕೊಂಡವನೊಬ್ಬ ಪಾತಾಳದಿಂದ ಮಾತೊಂದು ಎಳೆದು ವಗೆದ.

‘ಅಲ್ವಪ್ಪ ಸಿದ್ಧ; ಸರಿ ಕಣಯ್ಯ ನಿನ್ನ ಮಾತು ಮಾತನಂತೆ ಆ ಬೋರಿಂಗು ಸರ್ವೆಂಟು ಜನಕ್ಕೂ ಸೇರಬೇಕು! ದೂರಕ್ಕೆ ಹೋಗದು ಬ್ಯಾಡ. ನಮ್ಮೂರ್ಗೆ ನಡಿಯ ಇಷಯನೆ ತಕಳಂವೆ. ಇದೇ ಗೌರ್ಮೆಂಟನವರು ಬಂದು ಇದು ಇಡೀ ಊರವರಿಗೆ ಅಂತ ಒಂದು ಹೋರಿಂಗ್‌ಹಾಕಸ್ದ್ರು. ಅದು ಲಿಂಗಾಯಿತರ ಕೇರಿ ಸೇರಕತ್ತು. ನಿನ್ನ ಮಾತನ ಸರಕಾರ, ಅದು ಸರ್ವೆಂಟು ಜನಕ್ಕೂ ಅಂದ ಮೇಲೆ ನಮ್ಮ ಕೇರಿಯವರನ್ನ ಯಾಕೆ ನೀರ್‌ತಕಳಕ್ಕೆ ಸೇರಗೊಡಲ್ವಲ್ಲ?’

ಸಿದ್ಧ ‘ಅದು ಬ್ಯಾರೆ’ ಎಂದ.

‘ಅಂದೆಂಗ್ಲ ಅದು ಬ್ಯಾರಿಯಾದದು. ನಮ್ದು ಚಿಕ್ಕದು , ನಮ್ಮ ನಮ್ಮಲೆ ಅದೆ. ಈಗ ನಡಿತಾ ಇರದು ದೊಡ್ದದು ಅಷ್ಟೆ. ಅದಕಾಗಿ ನಮ್ಮೂರಿನಲ್ಲಿ ಜಗಳ ಕಲಿಯಾಗಿ ಎಷ್ಟು ಜನರ ಬುಂಡೆ ಹೊಡೆದೋಗಿ ಹೆಣಗಳೂ ಬಿದ್ದೊ. ಇದನ ನೀನು ಯಾಕಯಾ ಕೇಳಬಾರದು. ಇವತ್ತೂ ಈಗ ಮುಕ್ಷ ನಾವು ಏಡು ಪರ್ಲಾಂಗು ದೂರದಿಂದಲೇ ನೀರೊರತಾವಿಯಲ್ಲ?’

‘ಅಂಗಾರೆ ನೀನು ಹೇಳದು ಇದನಾ ಇನ್ನೂ ದೊಡ್ಡದು ಮಾಡಬೇಕು ಅನ್ನಪ್ಪ.?’

ಛೇ….. ಛೇ….. ನಾ ಹೇಳದು ಅಂಗಲ್ಲ ಕಣಯ್ಯ. ನಮ್ಮ ಇವ್ನು ಹೇಲದಂಗೆ ದಾವಾರದವರು ಬಾಗ್ಲಲ್ಲಿ ನಿಂತು ಒಂದು ಗಳಾಸ್‌ನೀರ್‌ಕೊಡ್ರಯ್ಯ ಅಂದರೆ ಎಂಥಾ ಜಲ್ಮನೂ ಇಲ ಅನ್ನಲ್ಲ. ಕೊಟ್ಟೇ ಕೊಡತದೆ. ಆದರೆ ಈ ನೀರಿನ ತಗರಾಲು ಒಳಗೂ ಅದೆ. ಹೊರಗೂ ಅದೆ. ಇದು ಅಮೃತ. ಸರ್ವೆಂಟು ಕೆಲಸಕ್ಕೆ ಬೇಕಾದ್ದು. ಇದನ ಎಲ್ಲ ಜನವೂ ಕೂತಗಂಡು ಒಳ್ಳೆ ತರದಲ್ಲಿ ಧರ್ಮ, ಕರ್ಮ ತೂಕ ಮಾಡಿ, ನಾವು ನಾವೇ ಸರವೋಗಸ್ಗಂಡು ಅಂಚಗ ಕುಡಿಬೇಕು ಅನ್ನದಷ್ಟೆ.

ಜನ ಅವರಿಗೆ ತಿಳಿದಂತೆ ಔಷಧಿ ಮಾಡುತ್ತಾ ಜವರಣ್ಣನ ಸುದಾರಾಯಿಸಲು ಪ್ರಯತ್ನ ಮಾಡುತ್ತಿದ್ದರು. ಮೈಗೆಲ್ಲಾ ಉಪ್ಪಿನ ಶಾಖ ಕೊಡುತ್ತಿದ್ದರು. ಕೆಲವರು ಬಿಸಿನೀರಿನ ಶಾಖಕೊಡುತ್ತಿದ್ದರು. ನಡುವೆ ಯಾಕೊ ಹೊಟ್ಟೆ ಉಬ್ರಾಣಿಗೆ ಎಂದು ಹೆಗ್ಗಣದ ಪಿಕ್ಕೆ ಕಲಸಿ ಹೊಟ್ಟಿಗೆ ಬೆಜ್ಜರ ಹಾಕುತ್ತಿದ್ದರು. ಅಷ್ಟರಲ್ಲಿ ಕೆಲವು ಜನ ಬಂದ್ರೂ, ಬಂದ್ರೂ ಎಂದು ಕೂಗಿದರು. ಆ ಕಾದೆಯಿಂದ ಕತ್ತಿನಲ್ಲಿದ್ದ ಚೌಕಗಳನ್ನು ಕುಣಿಸುತ್ತಾ ಒಂದೇ ಬೀಸಿನಲ್ಲಿ ಜಾತ್ರೆಗೆ ಹೋಗಿದ್ದ ಹುಡುಗರು ಬರುತ್ತಿದ್ದರು. ‘ಥೂ ನಿಮ್ಮ ಬಾಯಿಗೆ ಮಣ್ಣಾಕ ನಮ್ಮ ಕೈಕಾಲ ಬುಡಸಿದ್ರೆಲ್ಲೋ’ ಎಂದು ಹುಡುಗರ ಜೊತೆ ಹೋಗಿದ್ದ ದೊಡ್ಡವನೊಬ್ಬನಿಗೆ ಜನವೆಲ್ಲಾ ತಗುಳಕೊಂಡರು. ಅಲ್ಲ ಕಣಯ್ಯ ನೆನ್ನೆಯ ಜಾತ್ರೆ ಬುಟ್ಟಂತಲ್ಲ. “ಅರಿದ ಐಕಳ ಕಟಗಂಡು ಎಲಗೋಗಿದ್ದೆ” ಎಂದರು.

ಅವನು ‘ಕಟ್ಟೆಗೆ ನೀರು ಬಂದದೆ ಅಂದ್ರು. ನಡಿರ್ಲ ಅಲ್ಲೂ ನೊಡಕ ಬರಂವಾ ಅಂತ ನಡಕಾ ಹೊಂಟೋದೋ ಎಂದ’. ಜನ ಬಯ್ಯವುದನ್ನ ನಿಲ್ಲಿಸಿ ‘ಸದ್ಯ ಬಂದ್ರಲ್ಲ’ ಎಂದು ನಿಟ್ಟುಸಿರಿಟ್ಟರು. ಆದೇ ಗುಂಪಿಗೆ ಸೇರಬೇಕಾಗಿದ್ದವನು ಬೆರಳ ಕಡಿಯುತ್ತಾ ‘ಅಂಗಾರೆ ಕಟ್ಟೆಗೆ ನೀರು ಬಂದಿದಾ’ ಎಂದ.

ಬೊಡ್ಡಡ್ದೆ ‘ ನೀರು ಬಂದಿದ್ದು!’ ಈ ನಮ್ಮ ಸಣ್ಣ ಕೆರೆಗೇ ಇಷ್ಟು ನೀರು ಬಂದು ತಡಕನಾರದೆ ಕಿತ್ತಗ ಹೋಗಿರುವಾಗ ಕಟ್ಟೆಗೆ ಬಂದಿಲ್ವಾ? ಬಂದು ತುಂಬಿ ಮದನಾಡಿದಂತೆ.

ಕೆಲವರು ‘ನಾವು ಹೋಗಿ ನೋಡಬೇಕು ಕಣ್ರಲಾ’ ಎನ್ನುತ್ತಿದ್ದರು.

ಈ ಸಂಭಾಷಣೆಯ ಮಧ್ಯದಲ್ಲಿ ಜವರಣ್ಣ ನಳ್ಳಾಡತಾ ‘ನೀರು’ ಎಂದ. ಹೆಂಡತಿ ಮಕ್ಕಳ ಕಣ್ಣೀರು. ಜನರು ತಂದು ಹುಯ್ದು ತಣ್ಣೀರು,  ಜವರಣ್ಣನ ಬಾಯಿಯಿಂದ ಮಾತು ತಂದವು.

ಜನ “ಜೀಂವ ವುಳಿಸದೂ ನೀರೆ; ಕಳಿಯದೂ ನೀರೆ. ಬಡ್ಡೀ ಮಗನ ದೇವರು ಎರಡನೂ ಅದರಲ್ಲೇ ಇಟ್ಟವನಲ್ಲ? ತಿಳಿದ ಬಡ್ದೆತ್ತವು ಇದು ಕಾಣದೆ ಕತ್ತಗ ಉರಿತವೆ” ಎಂದರು.

ಲೇಖಕರು

ಬಸವರಾಜ ಕುಕ್ಕರಹಳ್ಳಿ (೧೯೫೫) ಅವರು ಈಗ ಮರಿಮಪಪ್ಪ ಕಿರಿಯ ಕಾಲೇಜಿನಲ್ಲಿ ಗ್ರಂಥಾಪಾಲಕರಾಗಿದ್ದಾರೆ. ದಲಿತ ಲೋಕವನ್ನು ತಮ್ಮ ಕತೆಗಳಲ್ಲಿ ದೇವನೂರ ಮಹದೇವ, ಆನಂದ ಮಾಲಗತ್ತಿ, ಮೊಗಳ್ಳಿ ಗಣೇಶ, ಮ ನ ಜವರಯ್ಯ ಮುಂತಾದವರು ಪ್ರಕಟಿಸುತ್ತಿರುವರು. ಈ ಸಾಲಿನಲ್ಲಿ ಕುಕ್ಕರಹಳ್ಳಿ ಅವರು ಕೂಡ ಸೇರುತ್ತಾರೆ. ಅವರ ಈಚಿನ ಸಂಕಲನದ ಹೆಸರು ‘ಪುನುಗ’.

ಅಶಯ

ಪ್ರಸ್ತುತ ಕತೆಯನ್ನು ಕುಕ್ಕರಹಳ್ಳಿಯವರ ‘ಮೋಕಾರ ‘ ಎಂಬ ಕಥಾ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.  ಈ ಕತೆಯು ಮಾನವ ಬದುಕಿಗೆ ನೀರಿನ ಮಹತ್ವವನ್ನು ತಿಳಿಸಿ ಕೊಡುತ್ತದೆ. ನೀರು ಹೇಗೆ ಜೀವನಕ್ಕೆ ಕಾರಣವಾಗುತ್ತದೆಯೋ ಹಾಗೆಯೇ ಅದು ಸಾವಿಗೂ ಕಾರಣವಾಗುತ್ತದೆ. ಅದನ್ನು ಹಂಚಿಕೊಂಡು ಬಳಸದಿದ್ದರೆ, ಮನುಷ್ಯರ ನಡುವಿನ ಕಲಹಗಳಿಗೂ ಕಾರಣವಾಗುತ್ತದೆ. ಎಂಬುದನ್ನು ಕತೆ ಸೂಚ್ಯವಾಗಿ ಹೇಳುತ್ತದೆ. ಕತೆಯು ನದಿ ನೀರಿನ ಹಂಚಿಕೆ ವಿಷಯದಲ್ಲಿ ಎರಡು ರಾಜ್ಯಗಳು ಮನಸ್ತಾಪದ ವಾಶ್ತಾವರಣ ಮಾಡಿಕೊಳ್ಳುವುದನ್ನು ವಿಡಂಭಿಸುತ್ತದೆ.

ಪದಕೋಶ

ಆಳಾದ = ಹಾಳಾದ, ಉಯ್ಯಲ್ಲೋ = ಹುಯ್ಯಲಿಲ್ಲವಲ್ಲ, ಮೋಟ್ರು =ವಯಸ್ಸಾದವರು, ಮೋಗಂಗದೆ = ಹೋಗುವಹಾಗಿದೆ, ರೋಣಿ = ರೋಹಿಣಿ, ಕದ್ರೆ = ಕೈಕೊಟ್ಟರೆ,  ಇಸಾನಿ = ಈಶಾನ್ಯ, ತಳಾರ್ನೆ = ಫಳರನೆ, ತಿಟ್ಟು = ದಿಬ್ಬ, ಸದು = ಜಾಗ, ವಜನ್‌= ಒತ್ತಡ, ಕೊತ್ತಿ =ಬೆಕ್ಕು, ಮೊರಗರಿ = ಪ್ರತಿಧ್ವನಿಸು, ಸೂಲು, ಸೆತ್ತೆಸೆದಕಲು = ಕಸಕಡ್ಡಿ, ಗೋರಿ = ಬಾಚಿಕೊಂಡು, ಗೊಬಳಿಮರ = ಜಾಲಿಮರ, ಸೀಗೆ = ಮುಳ್ಳಿರುವ ಒಂದು ಜಾತಿ ಗಿಡ. ತಾಡು = ತಾಳು, ಐಕಳು =ಮಕ್ಕಳು, ಆಗರಿತವೆ = ಗೋಗರಿಯುತ್ತವೆ, ಮಾಳ = ಮೈದಾನ , ಘಟ = ದೇಹ, ತಿರ್ಯಾಕತಿರ್ನಿಲ್ವ = ತಿರುಗಿಹೋಗಿರುತ್ತಿತ್ತಲ್ಲವೇ. ತೆಂಡ್ರ = ಕಂಟ್ರ್ಯಾಕ್ಟು. ಕಿರಕತ್ತು = ಕಿರಿದುಕೊಂಡಿತು, ಪಿಕಪ್ಪನತಾಪು = ಪಿಕ್‌ಅಪ್‌ಮಾಡುವ ಜಾಗ, ಈಪಿಪಾಟಿ = ಇಷ್ಟಿಷ್ಟು ಗಾತ್ರದ, ಹಿಟ್ಗಲ್‌= ಬಿಳಿಬಣ್ಣದ ಮೃದುಕಲ್ಲು, ಮೆಡರಕ = ನಿಗುರಿ, ಪುರವಾರವಾದ್ಯ = ಉದ್ಧಾರವಾದೀತೇ, ಮಂತೆ = ಮತ್ತೆ, ವಸಿ = ಸ್ವಲ್ಪ , ಆಡ್ರ = ಆರ್ಡರ್‌, ಕಟ್ಟೆ = ಆಣೆಕಟ್ಟು, ತಕರಾಲ ಅಥವಾ ತಗ್ರಾಲ = ತಕರಾರು, ಕೊಯ್ರಿ = ವಿಚಾರಣೆ, ಕೇಸು, ಏಡ್‌=ಎರಡೂ, ಮುಕ್ಷಾ  = .. ಮಡಿಕೆ = ಇಟ್ಟುಕೊಳ್ಳುವುದಕ್ಕೆ , ದಾವಾರ =  ಬಾಯಾರಿಕೆ, ಆಳಗೆ =ಮಣ್ಣಿನ ಗುಡಾಣ, ಕ್ಯಾಣ = ಕೋಪ, ಸುಂಡೋಗಿ = ಒಣಗಿಕೊಂಡು  ಹೋಗಿ, ಅನವಾಸ = ಕಷ್ಟ, ಇವಿ = ಇದ್ದೀವಿ, ವಂಟಗ = ಬಾಚಿಕೊಂಡು, ಕಲಿಯಾಗಿ = ಕಲೆತ , ಬುಂಡೆ = ಬುರುಡೆ. ಅಂಚಗ = ಹಂಚಿಕೊಂಡು, ಉಬ್ರಾಣಿ = ಉಬ್ಬರ, ಪಿಕ್ಕೆ= ಹಕ್ಕೆ, ಬೆಜ್ಜರ = ಲೇಪನ, ಚೌಕ ಕರವಸ್ತ್ರ, ಕೈಕಾಲಬುಡಿಸು =ಗಾಬರಿಯಿಂದ ಏನೂ ಮಾಡಲಾಗದಂತೆ ನಿಷ್ಕ್ರಿಯವಾಗುವುದು, ಅರಿದ = ಅರಿಯದ, ಜಿಂವ =ಜೀವ, ಕತ್ತಗ = ಹತ್ತಿಕೊಂಡು

ಟಿಪ್ಪಣಿ

ಅಸುನಿ =ಒಂದು ಮಲೆಯ ನಕ್ಷತ್ರದ ಹೆಸರು, ಅಶ್ವಿನಿ

ಸಿಳ್ಳಪ್ಪ = ಮಳೆ ಬರಿಸಬಲ್ಲದು ಎಂದು ಜನ ನಂಬಿರುವ ದೈವದ ಹೆಸರು ತಂಪಿನ ದೊಡ್ಡಮ್ಮ, ಸಿದ್ರಾಶ್ಯಾಮೆಯ ಸಿದ್ಧಪ್ಪಾಜಿ, ಸಿಡಿಮಾರಮ್ಮನವರು, ಸಿಳ್ಳೊಡೆವ

ಸಿಳ್ಳಪ್ಪನವರು = ಊರಿನ ಗ್ರಾಮದೇವತೆಗಳು.

ಗೌಜಲಕ್ಕಿಗೆ = ಗೆಜ್ಜಲಾಗಿತ್ತು ಗೌಜಲು ಎಂಬ ಹಕ್ಕಿ ಆರಿಸಿಕೊಂಡು ತಿನ್ನಲು ಬೇಕಾದ ಗೆದ್ದಲಿಗೆ ಕಾರಣವಾಗಿತ್ತು.

ಪ್ರಶ್ನೆಗಳು

೧. ಹನುಮಣ್ಣ ಮಳೆಬಾರದೆ ಇದ್ದುದ್ದಕ್ಕೆ ತೆಗೆದ ಉದ್ಗಾರ ಎಂತಹುದು?

೨. ಮಳೆ ಬರಿಸಲು ಊರಿನ ಜನರು ಕೈಗೊಂಡ ನಿರ್ಧಾರಗಳು ಯಾವುವು?

೩. ಕೆರೆ ಒಡೆದುದರಿಂದ ಊರಿನ ಜೀವನದ ಮೇಲೆ ಉಂಟಾದ ಪರಿಣಾಮಗಳು ಯಾವುವು?

೪. ಜವರಣ್ಣನನ್ನು ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾಕೆ ಸಾಧ್ಯವಾಗಲಿಲ್ಲ?

೫. ನದಿ ನೀರಿನ ತಕರಾರಿನಿಂದ ಮೈಸೂರಿನಲ್ಲಿ ಉಂಟಾಗಿದ್ದ ಪರಿಣಾಮ ಜನರ ಮಾತುಗಳಲ್ಲಿ ಹೇಗೆ ವ್ಯಕ್ತವಾಗುತ್ತದೆ?

೬. ಜವರಣ್ಣನು ನೀರು ಎಂದು ಕೇಳಿದಾಗ ಜನ ನೀರಿನ ಬಗ್ಗೆ ಆಡಿಕೊಳ್ಳುವ ಮಾತುಗಳೇನು?

ಪೂರಕ ಓದು

೧. ಅಮರೇಶ ನುಗಡೋಣಿ ಅವರ ‘ನೀರು ತಂದವರು’ ಕತೆ.

೨. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ಹೇಮಾವತಿ ನದಿಯ ತೀರದಲ್ಲಿ’ ಪ್ರಬಂಧ.

೩. ಎ ಎನ್‌ಮೂರ್ತಿರಾವ್‌ಅವರ ‘ಅಕ್ಕಿಹೆಬ್ಬಾಳು’ ಪ್ರಬಂಧ.

೪. ಮಳೆರಾಯನನ್ನು ಕುರಿತ ಜನಪದ ಹಾಡುಗಳು.