ಯಾಕೆ ಈ ಸ್ಥಿತಿ?

ಕತೆಗಾರ ಡಾ. ಬೆಸಗರಹಳ್ಳಿ ರಾಮಣ್ಣನವರು ತಮ್ಮ ಅನುಭವವೊಂದನ್ನು ಹೇಳುತ್ತಿದ್ದರು. ವೈದ್ಯರಾಗಿದ್ದ ಅವರು ಒಮ್ಮೆ ಆಂಧ್ರದ ವೈದ್ಯಕೀಯ ವಿದ್ಯಾರ್ಥಿಗಳ ಜತೆ ಚರ್ಚೆ ಮಾಡುತ್ತಾ, ಪೊಟ್ಟಿ ಶ್ರೀರಾಮುಲು ಎಂಬುವರ ವಿಷಯ ತೆಗೆದರಂತೆ. ಆಗ ಆ ವಿದ್ಯಾರ್ಥಿಗಳು ‘ಅವರು ಯಾರು, ತಮಗೇನೂ ಗೊತ್ತಿಲ್ಲ’ ಎಂದು ಮುಗ್ಧವಾಗಿ ಉತ್ತರಿಸಿದರಂತೆ. ರಾಮಣ್ಣನವರಿಗೆ ಆಶ್ಚರ್ಯವಾಗಿ ‘ಅಲ್ರಯ್ಯಾ, ತೆಲುಗು ಮಾತಾಡೋ ಪ್ರದೇಶಗಳೆಲ್ಲ ಸೇರಿ ಒಂದು ರಾಜ್ಯವಾಗಬೇಕು ಅಂತ ಆ ಮನುಷ್ಯ ೫೨ ದಿವಸ ಉಪವಾಸ ಮಾಡಿ ಪ್ರಾಣಬಿಟ್ಟೋನು. ಅವನಿಂದಲೇ ನಿಮ್ಮ ಆಂಧ್ರಪ್ರದೇಶ ಆಗಿದ್ದು. ನಮ್ಮ ಕರ್ನಾಟಕ ಏಕೀಕರಣಕ್ಕೂ ಅವನ ಪ್ರಾಣತ್ಯಾಗ ಸಹಾಯ ಮಾಡ್ತು. ಅಂತಹವನ ಬಗ್ಗೆ ಗೊತ್ತಿಲ್ಲ ಅಂತೀದೀರಲ್ಲ, ಏನು ಹೇಳೋಣ’ ಅಂತ ವಿಷಾದಿಸಿರಂತೆ.

ಇದೊಂದು ಉದಾಹರಣೆ ಅಷ್ಟೆ. ಇಂತಹವು ಇನ್ನೂ ಸಿಗಬಹುದು. ಪ್ರಶ್ನೆಯೆಂದರೆ, ಅಕ್ಷರಸ್ಥರಲ್ಲಿ ತಮ್ಮ ನಾಡಿನ ಜನರ ಬಗ್ಗೆ, ಸಂಸ್ಕೃತಿ ಬಗ್ಗೆ, ಅರಿವಿಲ್ಲದ ಈ ಪರಿಸ್ಥಿತಿ ಯಾಕೆ ಸೃಷ್ಟಿಯಾಗುತ್ತದೆ. ಎಷ್ಟೋ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಎಲ್ಲೆಲ್ಲಿ ಏನು ಬೆಳೆ ಬೆಳೆಯಲಾಗುತ್ತದೆ, ಅಲ್ಲಿನ ಆಹಾರ ಪದ್ಧತಿ, ಮನೆಕಟ್ಟುವ, ಬಟ್ಟೆ ಧರಿಸುವ ವಿಧಾನ ಯಾವುದು – ಈ ಬಗ್ಗೆ ಯಾಕೆ ಸಣ್ಣ ಕುತೂಹಲವೂ ಕಾಣುವುದಿಲ್ಲ. ಬಹುಶಃ ದೋಷ ಅವರಲ್ಲಿ ಇದ್ದಂತಿಲ್ಲ. ಅವರು ಕಲಿತ ಯುವ ಪರಿಸರದಲ್ಲಿ ಇದ್ದಂತಿದೆ.

ತಮ್ಮ ನಾಡಿನ ಬಗ್ಗೆ ಅರಿವಿರಬೇಕು ಎಂದರೇನು? ಅದಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ಜನರಲ್‌ನಾಲೆಜ್‌ರೀತಿಯಲ್ಲಿ ಸಂಗ್ರಹ ಮಾಡಿಕೊಂಡಿರಬೇಕು ಎಂದರ್ಥವಲ್ಲ. ಕರ್ನಾಟಕದ ವಿಸ್ತೀರ್ಣ ಎಷ್ಟು ಎಂದರೆ ಪಟಾರನೆ ಉತ್ತರ ಹೇಳುವುದಕ್ಕೂ, ಇಲ್ಲಿನ ಜನರ ಬದುಕಿನ ಜತೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿರುವುದಕ್ಕೂ ವ್ಯತ್ಯಾಸವಿದೆ. ಮಾಹಿತಿ ಬರಿ ನೆನಪಿನ ಶಕ್ತಿಯಾಗಿ ಉಳಿದರೆ ಜಡವಾಗಿರುತ್ತವೆ. ಅದು ಸಂವೇದನೆಯ ಭಾಗವಾದರೆ, ನಾಡಿನ ಬಗ್ಗೆ ಅಪ್ತ ಸಂಬಂಧ ಬೆಳೆಸಿಕೊಳ್ಳಲು ಕಾರಣವಾಗುತ್ತದೆ. ಈ ಸಂಬಂಧವು ಜನರ ನೋವು ನಲಿವಿನ ಜತೆ ಮಿಡಿಯಲು ಪ್ರೇರಿಸುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಸ್ಕೃತಿಯನ್ನು ತಿಳಿವ ಅಗತ್ಯವಿದೆ.

ಸಂಸ್ಕೃತಿ ಎಂದರೇನು?

‘ಛೇ! ಅವರಿಗೆ ಕಲ್ಚರ್ರೇ ಇಲ್ಲಪ್ಪ’ ಎಂಬ ಮಾತನ್ನು ಕೇಳಿದ್ದೇವೆ. ಹೀಗೆ ಹೇಳುವವರ ಮನಸ್ಸಲ್ಲಿ ಸಂಸ್ಕೃತಿ ಅಂದರೆ ಏನರ್ಥ? ಅದೊಂದು ಸಭ್ಯತೆ, ತಾವು ಬೈಯುತ್ತಿರುವವರಲ್ಲಿ ಅದು ಇಲ್ಲ ಅಂತ ತಾನೇ? ಅವರ ಪ್ರಕಾರ ಸಂಸ್ಕೃತಿ ಎನ್ನುವುದು, ನಡತೆಗೆ, ನೈತಿಕ ಮೌಲ್ಯಗಳಿಗೆ ಸಂಬಂಧಿಸಿದ್ದು. ಹೌದು, ಇದೇ ಸಂಸ್ಕೃತಿಗಿರುವ ಜನಪ್ರಿಯ ಅರ್ಥ. ಈ ಅರ್ಥವನ್ನು ಒಪ್ಪಿಕೊಂಡೊಡನೆ ಒಂದು ಪ್ರಶ್ನೆ ಹುಟ್ಟುತ್ತದೆ. ಯಾರೋ ಕೆಲವರು ನಂಬಿರುವುದೇ ಯಾಕೆ ಸಂಸ್ಕೃತಿ ಎಂದಾಬೇಕು? ಬೇರೆಯವರಿಗೂ ಅವರದೇ ಸಂಸ್ಕೃತಿ  ಇರಬಹುದಲ್ಲವೇ? ಬಾಯಾರಿದವರಿಗೆ ನೀರು ಕೊಡೂವುದನ್ನು ಸಂಸ್ಕೃತಿ  ಎಂದರೆ ಸಮಸ್ಯೆಯಿಲ್ಲ. ‘ಅವರು ನಮಗೆ ಇಷ್ಟವಾಗದ ಆಹಾರ ತಿಂತಾರೆ, ಅವರು ಕೊಳಕಾಗಿದಾರೆ, ಅವರ ಭಾಷೆ ಒರಟು, ಆದ್ದರಿಂದ ಸಂಸ್ಕೃತಿ ಇಲ್ಲ’ ಎಂದರೆ ಸಮಸ್ಯೆ. ನಾಡಿನ ಜನರೆಲ್ಲ ಒಂದೇ ರೀತಿಯಲ್ಲಿ ಉಣ್ಣುವ ಉಡುವ ಚಿಂತಿಸುವ ಕೆಲಸ ಮಾಡುತ್ತಿದ್ದಾರೆ, ಈ ಕಷ್ಟ ಇರುತ್ತಿರಲಿಲ್ಲ. ಆದರೆ ಇಲ್ಲಿ ಹಲವು ಬಗೆಯ ಜನಸಮುದಾಯಗಳಿವೆ. ಹಲವು ಧರ್ಮ ಜಾತಿ ಬುಡಕಟ್ಟುಗಳು ಇವೆ. ಬಡವರಿದ್ದಾರೆ, ಸಿರಿವಂತರಿದ್ದಾರೆ. ಈ ವಿಭಿನ್ನ ಜನ ಉಡುವ ಉಣ್ಣುವ ರೀತಿಗಳಲ್ಲಿ ಸಹಜವಾಗಿ ವ್ಯತ್ಯಾಸ ಇದೆ. ಹೀಗಿರುವಾಗ ಯಾರೋ ಕೆಲವರು ಶ್ರೇಷ್ಠ ಎಂದು ನಂಬಿರುವುದು ಮಾತ್ರ ಸಂಸ್ಕೃತಿ ಎಂದರೆ ಹೇಗೆ ಒಪ್ಪುವುದು? ನೂರಾರು ಸಮುದಾಯಗಳು ಬದುಕುವ ಭಾರತದಲ್ಲಿ, ಇದೇ ಸಂಸ್ಕೃತಿ ಎಂದು ನಿರ್ಧರಿಸುವುದು ಯಾವಾಗಲೂ ಕಷ್ಟದ ಕೆಲಸ.

ಸಾಮಾನ್ಯವಾಗಿ ಎಲ್ಲ ಸಮಾಜಗಳಲ್ಲೂ ಶ್ರೇಷ್ಠ ಕನಿಷ್ಠ ಅನ್ನುವುದನ್ನ ತೀರ್ಮಾನ ಮಾಡುವುದು ಪ್ರತಿಷ್ಠಿತರು. ಒಬ್ಬ ಧಣಿ, ಕೆಲಸಗಾರರು ತನಗೆ ನಿಷ್ಠರಾಗಿ ದುಡಿಯುವುದೆ ಸಂಸ್ಕೃತಿ  ಅನ್ನಬಹುದು. ಬ್ರಿಟಿಷರು ಈ ದೇಶಕ್ಕೆ ಬಂದಾಗ ಭಾರತೀಯರ ಸಂಸ್ಕೃತಿ ಅನಾಗರಿಕ ಎಂದೂ, ಅವರಿಗೆ ತಮ್ಮ ಸಭ್ಯತೆ ಕಲಿಸಿ ನಾಗರಿಕರನ್ನಾಗಿ ಮಾಡಬೇಕು ಎಂದೂ ನಂಬಿದ್ದರು. ಅಧಿಕಾರಸ್ಥ ವರ್ಗಾದ ಜನ, ಸಂಸ್ಕೃತಿ  ವ್ಯಾಖ್ಯೆ ಮಾಡಿದಾಗೆಲ್ಲ ಈ ತಾರತಮ್ಯ ಇದ್ದೇ ಇರುತ್ತದೆ.

ಎಲ್ಲಾ ಸಮುದಾಯಗಳಿಗೆ ತಮ್ಮ ನಂಬಿಕೆ ಆಚರಣೆಗಳನ್ನು ಮತ್ತೊಬ್ಬರಿಗೆ ಇಷ್ಟವಾಗಲಿ ಬಿಡಲಿ, ಅನುಸರಿಸುವುದಕ್ಕೆ ಹಕ್ಕಿದೆ. ಅವರ ಹಕ್ಕು ಮತ್ತೊಬ್ಬರ ಹಕ್ಕನ್ನು ಕಿತ್ತುಕೊಳ್ಳಬಾರದು ಅಷ್ಟೆ. ಮೀನು ತಿನ್ನುವುದು ನಮಗೆ ಇಷ್ಟ ಎಂದಾಗ, ಅದು ಸಾಂಸ್ಕೃತಿಕ ಹಕ್ಕಾಗುತ್ತದೆ. ಅಸ್ಪೃತ್ಯತೆ ಆಚರಿಸುವುದು ನಮ್ಮ ಸಂಪ್ರದಾಯ ಎಂದಾಗ ಅದು ಇನ್ನೊಬ್ಬರನ್ನು ಕೀಳಾಗಿ ನೋಡುವ  ಮಾತಾಗುತ್ತದೆ. ಎರಡೂ ನಬಿಕೆಗಳಾದರೂ ಅವುಗಳಲ್ಲಿ ಎಷ್ಟೊಂದು ವ್ಯತ್ಯಾಸ! ನಾಗರಿಕ ಸಮಾಜಕ್ಕೆ ಭಾಧೆಯಾಗದಂತೆ ಜನ ತಮ್ಮ ಸಂಸ್ಕೃತಿಯ ವಿಷಿಷ್ಟತೆ ಉಳಿಸಿಕೊಂಡರೆ, ಅದು ಕೆಡುಕಲ್ಲ. ಕನ್ನಡದ ಮೊದಲ ಕೃತಿ ‘ಕವಿರಾಜಮಾರ್ಗ’ ದಲ್ಲಿ ‘ಪರರ ಧರ್ಮವನ್ನು ಪರರ ವಿಚಾರಗಳನ್ನು ಸಹಿಸುವುದೇ ಬಂಗಾರ’ ಎಂಬ ಒಂದು ಮಾತು ಬರುತ್ತದೆ. ಹಲವು ಸಂಸ್ಕೃತಿ ಗಳಿಗಿರುವ ಪರಿಸರದಲ್ಲಿ ಇರಲೇಬೇಕಾದ ಡೆಮಾಕ್ರಟಿಕ್‌ಸಹನೆಯನ್ನು ಇದು ಸೂಚಿಸುತ್ತಿದೆ.

ಹಾಗಾದರೆ ‘ಸಂಸ್ಕೃತಿ’ ಎಂದರೇನು? ಈ ಪ್ರಶ್ನೆಗೆ ಹೀಗೆ ಉತ್ತರಿಸಬಹುದು ಸಂಸ್ಕೃತಿ  ಎಂದರೆ ಒಂದು ನಾಡಿನ ಎಲ್ಲ ಜನರ ಜೀವನ ವಿಧಾನ. ನಮ್ಮಂತಹ ದೇಶದಲ್ಲಿ ಒಂದು ಸಂಸ್ಕೃತಿಯಲ್ಲ, ಹಲವು ಸಂಸ್ಕೃತಿಗಳಿವೆ. ಅವೆಲ್ಲ ಸೇರಿಯೆ ನಾಡಿನ ಒಟ್ಟು ಸಂಸ್ಕೃತಿ. ಒಬ್ಬರ ಜೀವನ ವಿಧಾನವನ್ನು ಮತ್ತೊಬ್ಬರು ಗೌರವಿಸುವುದು ಇಲ್ಲಿ ಬಹಳ ಮುಖ್ಯ ತತ್ವವಾಗಿದೆ.

ಒಂದಲ್ಲ ಹಲವು

ಈ ತತ್ವ ಕರ್ನಾಟಕ ಸಂಸ್ಕೃತಿಗೂ ಅನ್ವಯವಾಗುತ್ತದೆ. ನಮ್ಮ ಜನ ನಿರ್ದಿಷ್ಟ ಧರ್ಮಕ್ಕೆ ಅಥವಾ ಭಾಷೆಗೆ ಸೇರಿದವರಾಗಿದ್ದರೂ, ಅವರ ಜೀವನ ವಿಧಾನದಲ್ಲಿ ವ್ಯತ್ಯಾಸಗಳಿವೆ. ಬೀದರ್‌ಸೀಮೆಯ ಉರ್ದು ಸೊಗಡಿನ ಕನ್ನಡ ಮಾತಾಡುವವರಿಗೆ, ಕೊಳ್ಳೇಗಾಲದ ಕನ್ನಡ ಅರ್ಥವಾಗುವುದಿಲ್ಲ. ಬಿಜಾಪುರದ ಕನ್ನಡ ಉಡುಪಿಯವರಿಗೆ, ಪೂರ್ತಿ ತಿಳಿಯುವುದಿಲ್ಲ. ಧಾರವಾಡದವರು ಮೈಸೂರಿಗೆ ಹೋದರೆ ಜೋಳದ ರೊಟ್ಟಿ ಸಿಗದೆ ಯಾವುದೋ  ದೇಶಕ್ಕೆ ಬಂದೆವಲ್ಲ ಎಂದು ಪರದಾಡುವಂತಾಗುತ್ತದೆ. ಬಂಗುಡೆ  ಮೀನು ತಿನ್ನುವ ಕರಾವಳಿಯವರು ಬಳ್ಳಾರಿಗೆ ಹೋದರೂ ಹೀಗೇ ಅನಿಸಬಹುದು. ಕರ್ನಾಟಕದ ಪ್ರತಿ ಭಾಗದ ಜನ ಆಡುವ ಮಾತು, ಮಾಡುವ ಊಟ, ಉಡುವ ಬಟ್ಟೆಗಳಲ್ಲಿ ಇಷ್ಟೊಂದು ವೈವಿಧ್ಯವಿದೆ! ಇಲ್ಲಿನ ಸೋಲಿಗ ಸಿದ್ಧಿ ಹಾಲಕ್ಕಿ ಬುಡಕಟ್ಟು ಜನರ ಸಂಸ್ಕೃತಿಯಂತೂ ಮತ್ತು ವಿಶಿಷ್ಟ. ಕರ್ನಾಟಕ ಸಂಸ್ಕೃತಿ  ನಿಜಕ್ಕೂ ಬಹುರೂಪಿಯಾಗಿದೆ.

ಹಾಗಾದರೆ ಯಾವುದು ‘ಕರ್ನಾಟಕ ಸಂಸ್ಕೃತಿ’? ಕರ್ನಾಟಕದಲ್ಲಿ ಬದುಕುತ್ತಿರುವ ಎಲ್ಲಾ ಸಮುದಾಯಗಳ ಸಂಸ್ಕೃತಿಗಳ ಮೊತ್ತವೆ ಕರ್ನಾಟಕ ಸಂಸ್ಕೃತಿ. ಭಾರತೀಯ ಸಂಸ್ಕೃತಿ ಎಂದಾಗಲೂ ಇದೇ ರೀತಿಯಲ್ಲಿ ಅರ್ಥೈಸಬೇಕು.

ಸಂಸ್ಕೃತಿ ಮತ್ತು ಭಾಷೆ

‘ಕರ್ನಾಟಕ ಸಂಸ್ಕೃತಿ’ ಎಂದಂತೆ, ‘ಕನ್ನಡ ಸಂಸ್ಕೃತಿ’ ಎಂಬ ಮಾತೂ ಇದೆ. ಕನ್ನಡ ಸಂಸ್ಕೃತಿ ಎಂದಾಗ ಸಂಸ್ಕೃತಿಯನ್ನು ಭಾಷೆ ಹೆಸರಿನಲ್ಲಿ ಗುರುತಿಸುತ್ತೇವೆ. ಕರ್ನಾಟಕ ಸಂಸ್ಕೃತಿ ಎಂದಾಗ ಪ್ರದೇಶದ ಹೆಸರಿನಲ್ಲಿ ಗುರುತಿಸುತ್ತೇವೆ. ಇವುಗಳ ನಡುವೆ ಸೂಕ್ಷ್ಮ ವ್ಯತ್ಯಾಸವಿದೆ. ಕನ್ನಡ ಸಂಸ್ಕೃತಿ ಎಂದೊಡನೆ, ಕನ್ನಡ ಭಾಷೆ, ಕನ್ನಡ ಮಾತೃಭಾಷೆಯ ಜನ, ಕನ್ನಡ ಲೇಖಕರು ನೆನಪಾಗುತ್ತಾರೆ. ಆದರೆ ಮನೆಮಾತು ಕನ್ನಡವಾಗಿರದ ಜನಸಮುದಾಯಗಳೂ ಇಲ್ಲಿವೆ. ತುಳುವರಿದ್ದಾರೆ, ಕೊಡವರಿದ್ದಾರೆ. ಲಂಬಾಣಿ ಉರ್ದು ಕೊಂಕಣಿ ಮಲೆಯಾಳ, ತಮಿಳು, ತೆಲುಗು, ಮರಾಠಿ ಮಾತಾಡುವ ಜನರಿದ್ದಾರೆ. ಹಾಗಿರುವಾಗ ಇವರದು ಕನ್ನಡ ಸಂಸ್ಕೃತಿ ಹೌದೋ ಅಲ್ಲವೋ?

ಒಂದು ಭಾಷೆ ಮಾತಾಡುವ ಪ್ರದೇಶಗಳನ್ನೆಲ್ಲ ಸೇರಿಸಿ ರಾಜ್ಯ ಮಾಡಿದರೆ, ಜನ ಆ ಭಾಷೆಯಲ್ಲಿ ಶಿಕ್ಷಣ ಆಡಳಿತ ಮಾಡಿಕೊಂಡು, ಬೇಗನೆ ಅಭಿವೃದ್ಧಿ ಸಾಧಿಸುತ್ತಾರೆ. ಇದು ಭಾಷಾವಾರು ರಾಜ್ಯಗಳನ್ನು ಮಾಡಿದ್ದರ ಉದ್ದೇಶ. ಅದರಂತೆ, ೧೯೫೬ರಲ್ಲಿ ಕರ್ನಾಟಕ ರಾಜ್ಯ ಮೂಡಿತು. ಈ ಲೆಕ್ಕದಲ್ಲಿ ಕರ್ನಾಟಕ ಸಂಸ್ಕೃತಿಯೊಳಗೆ ಕನ್ನಡಭಾಷೆ ಕೇಂದ್ರ ಸ್ಥಾನದಲ್ಲಿರುವುದು ಸಹಜ. ಆದರೆ ಕರ್ನಾಟಕದಲ್ಲಿ ವಾಸಿಸುವ ಎಲ್ಲರನ್ನೂ ನಾವು ಕನ್ನಡಿಗರು ಎಂದೇ ಕರೆಯುತ್ತೇವೆ. ತುಳು, ಉರ್ದು, ಕೊಡವ ಭಾಷಿಕರು, ತಂತಮ್ಮ ಭಾಷೆಯ ಜತೆಗೆ, ಪರಿಸರದಲ್ಲಿರುವ ಕನ್ನಡವನ್ನು ಉಸಿರಾಟಕ್ಕೆ ಗಾಳಿ ಪಡೆದಷ್ಟು ಸಹಜವಾಗಿ ಪಡೆದು ಕೊಂಡಿದ್ದಾರೆ.

ಹೀಗಾಗಿ ‘ಕನ್ನಡ ಸಂಸ್ಕೃತಿ’ ಗಿಂತ ‘ಕರ್ನಾಟಕ ಸಂಸ್ಕೃತಿ’ ಎಂಬ ವಿಶಾಲ ಕಲ್ಪನೆಯನ್ನು ಬಳಸುವುದೇ ನಮ್ಮ ಸಂದರ್ಭದಲ್ಲಿ ಸೂಕ್ತ. ಕರ್ನಾಟಕ ಸಂಸ್ಕೃತಿ ಮರದ ದಿಮ್ಮಿಯಂತಿಲ್ಲ. ಕೊಂಬೆರೆಂಬೆಗಳುಳ್ಳ ಮರದಂತಿದೆ. ಅದರಲ್ಲಿ ಕನ್ನಡದ ಜತೆಗೆ ತುಳು ಕೊಡವ ಸಾಹಿತ್ಯವೂ ಇದೆ. ದಖನಿ ಉರ್ದುವಿನಲ್ಲಿ ಗುಲಬರ್ಗದ ಬಂದೇನವಾಜನೂ, ತೆಲುಗಿನಲ್ಲಿ ಕೈವಾರದ ತಾತಯ್ಯನು ರಚಿಸಿದ ಸಾಹಿತ್ಯವೂ ಇದೆ. ಧರ್ಮಗಳ ಆಧಾರದಲ್ಲಿ ಹೇಳುವುದಾದರೆ, ಹಿಂದುಗಳು ಕ್ರೈಸ್ತರು ಜೈನರು ಮುಸ್ಲಿಮರು ಎಲ್ಲ ಸೇರಿಯೇ ಕರ್ನಾಟಕ ಸಂಸ್ಕೃತಿಯಾಗಿದೆ.

ಕನ್ನಡದ ಜತೆ ಕನ್ನಡೇತರ ಮನೆಮಾತಿನ ಜನ ಇಟ್ಟುಕೊಂಡಿರುವ ಸಂಬಂಧ ಸ್ವಾರಸ್ಯಕರವಾಗಿದೆ. ಕನ್ನಡಿಗರಾದ ಗಂಗೂಬಾಯಿ ಹಾನಗಲ್‌, ಭೀಮಸೇನಜೋಶಿ ಹಾಡುವ ಹಿಂದೂಸ್ಥಾನಿ ಸಂಗೀತಕ್ಕೆ ಭಾಷೆಯ ಹಂಗೇ ಇಲ್ಲ. ಅವರು ಹಿಂದೂಸ್ಥಾನಿ ರಚನೆಗಳನ್ನು ಹಾಡುತ್ತಾರೆ. ಅವರು ಹಾಡುವ ಅಭಂಗಗಳಂತೂ ಮರಾಠಿಯವು. ಡಿವಿಜಿ, ಮಾಸ್ತಿ, ಕೈಲಾಸಂ, ಬೇಂದ್ರೆ, ನಿಸಾರ್ ಅಹಮದ್‌, ಸಾರಾ ಅಬೂಬಕರ್, ನಾ ಡಿಸೋಜ, ಲಲಿತನಾಯಕ ಇವರು ಕನ್ನಡ ಲೇಖಕರು. ಆದರೆ, ಇವರಲ್ಲಿ ಯಾರ ಮನೆಮಾತೂ ಕನ್ನಡವಲ್ಲ! ಬದಲಾಗಿ ತಮಿಳು, ತೆಲುಗು, ಉರ್ದು, ಕೊಂಕಣಿ, ಲಂಬಾಣಿ. ನೂರು ವರುಷಗಳ ಹಿಂದೆ ಕನ್ನಡಕ್ಕೊಂದು ಅಪರೂಪದ ನಿಘಂಟನ್ನು ರಚಿಸಿಕೊಟ್ಟ ಕಿಟ್ಟೆಲನಂತೂ ಈ ದೇಶದವನೇ ಅಲ್ಲ, ಜರ್ಮನಿಯವನು!

ವಿಚಿತ್ರವಾದರೂ ವಾಸ್ತವ ಸಂಗತಿಯೆಂದರೆ, ಮನೆಮಾತು ಕನ್ನಡವಾದರೂ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡದ, ಕನ್ನಡ ಮಾತಾಡಲು ಕೀಳರಿಮೆ ಪಟ್ಟುಕೊಳ್ಳುವ ಬೇಕಾದಷ್ಟು ಜನ ನಮ್ಮಲಿದ್ದಾರೆ! ಬಹುಶ ಬೆಂಗಳೂರಿನಲ್ಲಿ ಜಾಸ್ತಿ ಇದ್ದಾರೆ. ವೈದ್ಯಕೀಯ ಇಂಜಿನಿಯರಿಂಗ್‌ಶಿಕ್ಷಣವನ್ನು, ೨೦೦೦ ವರ್ಷದ ಚರಿತ್ರೆಯುಳ್ಳ, ಕೋಟ್ಯಂತರ ಜನರ ಭಾಷೆಯಾದ ಕನ್ನಡದಲ್ಲಿ, ಇನ್ನೂ ಕಲಿಸಲು ಯಾಕೆ ಸಾಧ್ಯವಾಗಿಲ್ಲ? ಕನ್ನಡಕ್ಕೆ ಸವಾಲು ಒಡ್ಡಿರುವುದು ಇಂಗ್ಲೀಷೊ, ಇಲ್ಲಿನ ಜನಭಾಷೆಗಳಾದ ತುಳು ಕೊಡವ ಉರ್ದುಗಳೋ? ಸಂಸ್ಕೃತಿಯನ್ನು ಆವೇಶದಲ್ಲಿ ಗ್ರಹಿಸಿದರೆ ಇಂತಹ ದೊಡ್ಡಸತ್ಯಗಳು ತಪ್ಪಿಸಿಕೊಂಡು ಬಿಡುತ್ತವೆ. ಸಂಸ್ಕೃತಿಯನ್ನು ಹುಶಾರಾಗಿ ವ್ಯಾಖ್ಯಾನಿಸದಿದ್ದರೆ, ಅದು ನಿಜವೈಖರಿಯನ್ನು ಬಿಟ್ಟು ಸಂಗಾತಿಯನ್ನು ದ್ವೇಷಿಸುವ ಕೆಲಸ ಮಾಡುತ್ತದೆ.

ಸಂಸ್ಕೃತಿಯಲ್ಲಿ ಕೊಡುಕೊಳು

ಬಿ ಜಿ ಎಲ್‌ಸ್ವಾಮಿ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಎಂಬ ಪುಸ್ತಕ ಬರೆದಿದ್ದಾರೆ. ಅದರಲ್ಲಿ ನಾವು ನಿತ್ಯ ಬಳಸುವ ಮೆಣಸಿನಕಾಯಿ ಗೋಡಂಬಿ ಕಡಲೆ ಪಪ್ಪಾಯಿ ಹೇಗೆ ಪರದೇಶದಿಂದ ಬಂದವು ಎಂದು ವಿವರಿಸುತ್ತಾರೆ. ನಮ್ಮ ಸಂಸ್ಕೃತಿ ಎಂಬುದು ನಮಗೇ ವಿಶಿಷ್ಟವಾದ ಗುರುತುಗಳಿರುವ ಸಂಗತಿ ಎಂಬ ಮಾತು ನಿಜ. ಹಾಗೆಂದು ಅದು ಹೊರಗಿನಿಂದ ಬಂದ ಯಾವುದರ ಜತೆಗೂ ಬೆರೆಯದೆ, ಮೂಲರೂಪದಲ್ಲಿ ಶುದ್ಧವಾಗಿ ಉಳಿದುಬಂದಿದೆ ಎಂದರ್ಥವಲ್ಲ. ಸಂಸ್ಕೃತಿಯು ಭೂಗರ್ಭದಿಂದ ಹುಟ್ಟಿ ಅಲ್ಲೇ ಬಿದ್ದಿರುವ ಬಂಡೆಯಂತಿಲ್ಲ. ಅದು ನದಿಯಂತೆ. ನೂರು ಕಡೆಯಿಂದ ಬಂದ ಜಲಧಾರೆಗಳನ್ನು ಸೇರಿಸಿಕೊಂಡು ಹರಿಯುತ್ತದೆ. ಎಂತಲೇ ಕರ್ನಾಟಕ ಸಂಸ್ಕೃತಿ ಒಂದು ದ್ವೀಪವಾಗಿಲ್ಲ. ಕನ್ನಡದಲ್ಲಿ ಸಾವಿರಾರು ಇಂಗ್ಲಿಷು ಪೋರ್ಚುಗೀಸು ಫಾರಿಸಿ ಅರಬ್ಬಿ ಸಂಸ್ಕೃತ ಭಾಷೆಯ ಪದಗಳು ಸೇರಿವೆ. ಅವು ಎಷ್ಟು ನಮ್ಮವಾಗಿವೆ ಎಂದರೆ, ಉಗಿಬಂಡಿ ಆರಕ್ಷಕ ವೈದ್ಯ ಅಭಿಯಂತರ ಮುಂತಾದವು ‘ನಮ್ಮ’ ಪದಗಳಾದರೂ ವಿದೇಶಿ ಅನಿಸುತ್ತದೆ. ರೈಲು ಪೋಲಿಸು ಇಂಜಿನಿಯರು ಡಾಕ್ಟರು ಇವು ‘ವಿದೇಶಿ’ ಪದಗಳಾದರೂ ನಮ್ಮವು ಅನಿಸುತ್ತವೆ.

ಜೀವಂತವಾದ ಯಾವ ಭಾಷೆಯೂ ಯಾವ ಸಂಸ್ಕೃತಿಯೂ ಒಂಟಿಯಾಗಿ ನಿಲ್ಲುವ ಹಟ ಮಾಡುವುದಿಲ್ಲ. ಅವು ಕೊಡುಕೊಳು ಮಾಡುತ್ತ ಬೆಳೆಯುತ್ತವೆ. ಕೊಡುಕೊಳೆ ಮಾಡುವಾಗ ಉಪಯುಕ್ತವಾದುದನ್ನು ಉಳಿಸುಕೊಳ್ಳಲು ಯತ್ನಿಸುತ್ತೇವೆ. ಬಿಜಾಪುರದ ಗೋಳಗುಮ್ಮಟ ಗಮನಿಸಿ. ಅದರಲ್ಲಿ ಪರ್ಶಿಯನ್‌ವಾಸ್ತುಶೈಲಿಯು ಭಾರತೀಯ ಶೈಲಿಯ ಜತೆ ಅದ್ಭುತವಾಗಿ ಮಿಲನಗೊಂಡಿದೆ. ಹಂಪಿಯ ಕಮಲಮಹಲ್‌ಇಡಿಯಾಗಿ ಇಸ್ಲಾಮಿಕ್‌ಶೈಲಿಯಲ್ಲಿದೆ. ಬ್ರಿಟಿಷ್‌ಇಂಜಿನಿಯರುಗಳು ಕಟ್ಟಿಸಿದ ಈಗಿನ ಮೈಸೂರು ಅರಮನೆಯಲ್ಲಿ, ಯೂರೋಪಿನ, ಪರ್ಶಿಯಾದ ಹಾಗೂ ಭಾರತೀಯ ವಾಸ್ತುಶೈಲಿಗಳೆಲ್ಲ ಮಿಲನವಾಗಿವೆ.

ಕರ್ನಾಟಕ ಸಂಸ್ಕೃತಿಗೆ ಕರ್ನಾಟಕಕ್ಕೆ ಲಗತ್ತಾಗಿರುವ ಪ್ರಾಂತ್ಯಗಳೂ ತಮ್ಮ ಕೊಡುಗೆ ಕೊಟ್ಟಿವೆ. ದಕ್ಷಿಣಕನ್ನಡ ಜಿಲ್ಲೆಯ ಊಟ ಉಡುಗೆ ಜಾತ್ರೆ ದೈವಗಳು ಹಬ್ಬಗಳು, ಕೇರಳ ಸಂಸ್ಕೃತಿಯೊಂದಿಗೆ ಗಾಢ ಸಂಬಂಧ ಹೊಂದಿವೆ. ಉತ್ತರ ಕರ್ನಾಟಕದ ಊಟ ನಾಟಕ ಉಡುಪು ವ್ಯಾಪಾರ ಇವು ಮಹಾರಾಷ್ಟ್ರ ಸಂಸ್ಕೃತಿಯೊಂದಿಗೆ ಸಂಬಂಧ ಪಡೆದಿದೆ. ಇದೇ ರೀತಿ ಕೊಳ್ಳೇಗಾಲದಲ್ಲಿ ತಮಿಳುನಾಡಿನ, ಕೋಲಾರದಲ್ಲಿ ಆಂಧ್ರದ, ಕಾರವಾರದಲ್ಲಿ ಕೊಂಕಣಿಯ ನೆರಳು ಚಾಚಿದೆ.

ಕರ್ನಾಟಕ ಸಂಸ್ಕೃತಿಯ ಬೆಳೆಗೆ ಎಷ್ಟೊಂದು ಕಡೆಯ ಮೋಡಗಳು ಮಳೆಸುರಿಸಿವೆ! ಎಷ್ಟು ದಿಸೆಯಿಂದ ಬಂದ ಗಾಳಿ ಬೀಸಿದೆ! ನಮ್ಮೀ ಸಂಸ್ಕೃತಿ ನೆರೆಯ ರಾಜ್ಯಗಳ ಮಾತ್ರವಲ್ಲ, ಜಗತ್ತಿನ ಅನೇಕ ದೇಶಗಳ ಸಂಸ್ಕೃತಿ ಪ್ರಭಾವಗಳನ್ನು ಹೊಟ್ಟೆಯೊಳಗೆ ಇಟ್ಟುಕೊಂಡು ರೂಪುತಳೆದಿದೆ. ಇದಕ್ಕೆ ಒಳ್ಳೆ ಉದಾಹರಣೆ ಎಂದರೆ, ಕರ್ನಾಟಕದಲ್ಲಿ ನಡೆಯುವ ಮೊಹರಂ ಹಬ್ಬ. ಮುಸ್ಲಿಮ್ಮರಿಲ್ಲದ ಹಳ್ಳಿಗಳಲ್ಲೂ ಮೊಹರಂ ಆಚರಣೆಗಳು ನಡೆಯುತ್ತವೆ. ಇಲ್ಲಿನ ಸೂಫಿಸಂತರ ದರ್ಗಾಳಿಗೆ, ಎಲ್ಲ ಧರ್ಮಗಳ ಜನ ನಡೆದುಕೊಳ್ಳುತ್ತಾರೆ. ಶಿರಹಟ್ಟಿ ಫಕೀರೇಶ, ಸಾವಳಗಿ ಶಿವಲಿಂಗ, ತಿಂತಿಣಿ ಮೋನಪ್ಪ ಮುಂತಾದ ಸಂತರ ಜಾಗಗಳು, ಸೂಫಿಪಂಥದ ಪ್ರಭಾವದಲ್ಲಿ ರೂಪುಗೊಂಡಿರುವ ಧಾರ್ಮಿಕ ಸಾಮರಸ್ಯದ ಕ್ಷೇತ್ರಗಳಾಗಿವೆ.

ಹಿರೀಕರ ಸಾಧನೆ ಮಾತ್ರವೆ?

ಸಂಸ್ಕೃತಿ ಎನ್ನುವುದು ನಮ್ಮ ಪೂರ್ವಿಕರು ಗೈದ ಸಾಧನೆ ಎಂಬ ನಂಬಿಕೆ ಸಾಮಾನ್ಯವಾಗಿ ಇದೆ. ಹೀಗೆ ನಂಬಿದವರಿಗೆ ಸಂಸ್ಕೃತಿ ಎಂದೊಡನೆ ಗತಕಾಲವೆ ನೆನಪಾಗುವುದು. ಗತಕಾಲದ  ಮೂಲಕ ನೋಡುತ್ತ ಹೋದರೆ, ಅದರಲ್ಲಿ ವರ್ತಮಾನದ ಪಾತ್ರವೆ ಕಾಣುವುದಿಲ್ಲ. ಆದರೆ ಸಂಸ್ಕೃತಿ  ಕೇವಲ ಗತಕಾಲದ  ಚಿತ್ರವಲ್ಲ ಅಥವಾ ಪೂರ್ವಜರು ಬಿಟ್ಟುಹೋದ ಆಸ್ತಿಯಲ್ಲ. ಅದು ವರ್ತಮಾನದವರ ಸಾಧನೆ ಸೋಲುಗಳನ್ನೂ ಒಳಗೊಂಡಿದೆ. ಹೀಗಾಗಿ ಕರ್ನಾಟಕ ಸಂಸ್ಕೃತಿಯಲ್ಲಿ ಹಂಪಿ ಹಳೇಬೀಡು ಶ್ರವಣಬೆಳಗೊಳ ಬಿಜಾಪುರಗಳಲ್ಲಿರುವ ಶಿಲ್ಪಕಲೆ ವಾಸ್ತುಕಲೆಗಳು ಮಾತ್ರವಲ್ಲ. ಈಗ ಕಟ್ಟುತ್ತಿರುವ ಕಟ್ಟಡಗಳು ಇವೆ. ವಿಧಾನಸೌಧದಿಂದ ಹಿಡಿದು ನಮ್ಮ ಜನ ವಾಸಕ್ಕೆ ಕಟ್ಟಿಕೊಂಡಿರುವ ಮನೆಗಳೂ ಇವೆ. ಸಂಸ್ಕೃತಿಯ ನದಿಯೊಳಗೆ ನೆಲದಾಳದಿಂದ ಉಕ್ಕುವ ಒರತೆ ನೀರೂ ಉಂಟು. ಹೊಸದಾಗಿ ಬೀಳುವ ಮಳೆನೀರೂ ಉಂಟು.

ಸಂಸ್ಕೃತಿಯನ್ನು ಚರಿತ್ರೆಯ ಪ್ರಸಿದ್ಧ ರಾಜರಾಣಿಯರಲ್ಲಿ ಅವರ ಅರಮನೆ ಕೋಟೆಗಳಲ್ಲಿ ಹುಡುಕುವ ಮತ್ತೊಂದು ಪದ್ಧತಿಯಿದೆ. ಅರಮನೆ ಕೋಟೆಗಳನ್ನೆಲ್ಲ ಕಟ್ಟಿದವರು. ಸಾಮಾನ್ಯ ಜನರೇ. ಆದರೆ ಹೆಸರು ಉಳಿದಿರುವುದು ಮಾತ್ರ ಕಟ್ಟಿಸಿದವರದು! ಇಂತಹ ಸಂದರ್ಭದಲ್ಲಿ ಸಮುದಾಯಗಳ ಮೂಲಕ ಸಂಸ್ಕೃತಿಯನ್ನು ನೋಡಲು ಯತ್ನಿಸಬೇಕು. ಚರಿತ್ರೆಯನ್ನು ಅಧಿಕಾರಸ್ಥರ ಕಣ್ಣಲ್ಲಿ ನೋಡುವಾಗ, ಕೆಲವರ ಸುಖಕ್ಕಾಗಿ ಹಲವರು ಕಷ್ಟಪಡುವುದು ಸರಿ ಅನಿಸತೊಡಹುತ್ತದೆ; ಜನರ ದುಡಿಮೆ ಸೇವೆ ನಿಷ್ಠೆಗಳು ತ್ಯಾಗದಂತೆಯೂ, ಜನ ನ್ಯಾಯಕ್ಕಾಗಿ ಮಾಡುವ ಪ್ರತಿಭಟನೆ ದ್ರೋಹವಾಗಿ ಕಾಣತೊಡಗುತ್ತದೆ.

ನಾವು ಯಾವುದನ್ನು ‘ತ್ಯಾಗ’ ಎನ್ನುತ್ತೇವೆ – ಇದು ಕೇಳಿಕೊಳ್ಳಬೇಕಾದ ಪ್ರಶ್ನೆ. ನಮ್ಮ ಪ್ರಾಚೀನರ ಬದುಕಿಗೆ ಸಂಬಂಧಿಸಿದಂತೆ ಇರುವ ‘ವೀರಗಲ್ಲು’ ಹಾಗೂ ‘ಸಿಡಿತಲೆಕಲ್ಲು’ ಗಳನ್ನು ಗಮನಿಸೋಣ. ವೀರಗಲ್ಲುಗಳನ್ನು ಮೂರು ಕಾರಣಕ್ಕಾಗಿ ನಿಲ್ಲಿಸಲಾಗುತ್ತಿತ್ತು. ಊರಿಗೆ ಕಳ್ಳರು ಮುತ್ತಿದಾಗ, ಊರ ಮಹಿಳೆಯರನ್ನು ಹೊರಗಿನವರು ಆಪಹರಿಸಿದಾಗ, ಊರ ದನಗಳನ್ನು – ಪರ ಊರಿನವರು ಕದ್ದು ಒಯ್ಯುವಾಗ ರಕ್ಷಿಸುತ್ತ ಹೋರಾಡಿ ಜೀವತೆತ್ತ ವೀರರಿಗೆ ವೀರಗಲ್ಲು ನಿಲ್ಲಿಸಿ ಜನ ಕೃತಜ್ಞತೆ ಸಲ್ಲಿಸುತ್ತಿದ್ದರು. ಸಿಡಿತಲೆ ಕಲ್ಲುಗಳೆಂದರೆ, ರಾಜನಿಗೆ ಸೇವಕರು ತೋರಿಸುತ್ತಿದ್ದ ಸ್ವಾಮಿನಿಷ್ಠೆಯ ಸ್ಮಾರಕಗಳು ರಾಜನಿಗೆ ಮಕ್ಕಳಾಗಲೆಂದು ಅಥವಾ ಯುದ್ಧದಲ್ಲಿ ಗೆಲವು ಸಿಗಲೆಂದು ಹರಸಿಕೊಂಡವರು, ತಮ್ಮ ತಲೆ ಕತ್ತರಿಸಿಕೊಂಡು ಹರಕೆ ತೀರಿಸುತ್ತಿದ್ದರು. ಇದರ ರೀತಿ ಭಯಾನಕವಾಗಿತ್ತು.

ವೀರಗಲ್ಲಿನದು ಸಮುದಾಯಕ್ಕಾಗಿ ಪ್ರಾಣತ್ಯಾಗ ಮಾಡುವ ಶೌರ್ಯವಾದರೆ, ಸಿಡಿತಲೆಯದು ಧಣಿಗಾಗಿ ಸೇವಕರು ತೋರಿದ ನಿಷ್ಠೆ. ಈ ಎರಡೂ ಮುಖಗಳು ಕರ್ನಾಟಕದ ಗತಕಾಲದ ಚರಿತ್ರೆಯಲ್ಲಿವೆ. ಪ್ರಜಾಪ್ರಭುತ್ವದಲ್ಲಿ ಬದುಕ್ಕುತ್ತಿರುವ ನಾವು. ಇದರಲ್ಲಿ ಯಾವುದನ್ನು ‘ನಮ್ಮ ಸಂಸ್ಕೃತಿ’ ಎಂದು ಹೆಮ್ಮೆಯಿಂದ ಮಂಡಿಸಬೇಕು? ಚರಿತ್ರೆಯನ್ನು ಧಣಿಗಳ ಮೂಲಕ ನೋಡುವುದಕ್ಕೂ ಜನರ ಮೂಲಕ ನೋಡುವುದಕ್ಕೂ ವ್ಯತ್ಯಾಸ ಮಾಡುವ ಎಚ್ಚರ ತೋರಿಸಬೇಕಾದ್ದು ಇಲ್ಲೇ.

ವೈಭವೀಕರಣ ಮತ್ತು ಅಭಿಮಾನ

ಕರ್ನಾಟಕ ಸಂಸ್ಕೃತಿಯನ್ನು ಗತವೈಭವದ ಚಿತ್ರಗಳ ಮೂಲಕ ಕಟ್ಟಿ ತೋರಿಸುವ ರೂಢಿ ಕನ್ನಡದಲ್ಲಿದೆ. ಕನ್ನಡಿಗರು ಶೂರರೂ ಚೆಲುವರೂ ಅಭಿಮಾನಿಗಳೂ ವಿವೇಕಿಗಳೂ ರಸಿಕರೂ ಆಗಿದ್ದರು. ‘ಕವಿರಾಜಮಾರ್ಗ’ ವರ್ಣಿಸುತ್ತದೆ. ಅಂಡಯ್ಯನೆಂಬ ಕವಿಯ ಪ್ರಕಾರ, ಕನ್ನಡನಾಡಿನಲ್ಲಿ ತೆಂಗು ಅಡಕೆ ಮಾವು ಸಂಪಿಗೆಯ ಮರಗಳು, ಪಕ್ಷಿಗಳಲ್ಲಿ ಗಿಳಿ ಕೋಗಿಲೆ ನವಿಲುಗಳು ಮಾತ್ರ ಇದ್ದವಂತೆ. ತಮ್ಮ ದೇಶವನ್ನು ಭಾವುಕವಾಗಿ ಉತ್ಪೇಕ್ಷೆಯಿಂದ ಬಣ್ಣಿಸಿಕೊಳ್ಳುವ ಸ್ವಭಾವ ಎಲ್ಲ ಕಡೆ ಇದ್ದಂತಿದೆ. ಆದರೆ ಇಂಥ ಉದಾಹರಣೆಗಳನ್ನೆ ಕಟ್ಟಿ ತೋರಿಸಿದರೆ, ಸಂಸ್ಕೃತಿಯ ನಿಜವಾದ ನೋಟ ಸಿಕ್ಕುತ್ತದೆಯೇ? ಸಂಸ್ಕೃತಿಯಲ್ಲಿ ಅಭಿಮಾನದ ಜತೆ ಜತೆಯಲ್ಲಿ ಲಜ್ಜೆಯ ಅಂಶಗಳೂ ಇರುತ್ತವೆ. ಕರ್ನಾಟಕದಲ್ಲಿ ಗುಣವಂತರು ಶೂರರು ಇದ್ದರು, ಈಗಲೂ ಇದ್ದಾರೆ. ಇಂತಹವರ ಜತೆ, ಕಳ್ಳರೂ ಅಪ್ರಾಮಾಣಿಕರೂ ಶೂರರು ಇದ್ದರು, ಟಿಪ್ಪುನಿನಂತಹ ಕನಸುಗಾರನೂ ಸ್ವಾಭಿಮಾನಿಯೂ ಇದ್ದ ಕಾಲದಲ್ಲೆ ಮೀರ್‌ಸಾಧಿಕನಂತಹ ಸಮಯಸಾಧಕನೂ ಇದ್ದನಲ್ಲವೆ? ಪ್ರಾಚೀನ ಕರ್ನಾಟಕದಲ್ಲಿ ಜೀತಪದ್ಧತಿಯಿತು, ಅಸ್ಪೃಶ್ಯತೆಯಿತ್ತು. ಮಹಿಳೆಯರ ಮಾರಾಟವಿತ್ತು. ಬಡತನವಿತ್ತು. ‘ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲ. ಹಸಿವಿನ ಬೆಂಕಿ ಅವರನ್ನು ಸಾಕಷ್ಟು ಸುಟ್ಟಿದೆ. ಆದ್ದರಿಂದ ಬಡವರಿಗೆ ಸಾವು ಕೊಡಬ್ಯಾಡ’ ಎಂಬ ಅರ್ಥದ ಜನಪದ ಗೀತೆಯನ್ನು ನೆನೆಯಬೇಕು. ಬರಗಾಲ ಬಂದಾಗ ಜನ, ಹೆತ್ತ ಮಕ್ಕಳನ್ನು ಮರಾಟ ಮಾಡುತ್ತಿದ್ದರು ಎಂದು ‘ಮಕ್ಕಳ ಮಾರ್ಯಾರ ಮಳೆರಾಯ’ ಎಂಬ ಹಾಡು ಹೇಳುತ್ತದೆ. ಇವೆಲ್ಲ ಕುರೂಪಗಳು ದುಃಖಗಳು ಬೇರೆ ವೇಷದಲ್ಲಿ ಈಗಲೂ ಉಳಿದುಬಂದಿವೆ. ಇವನ್ನೆಲ್ಲ ಕೂಡಿಸಿ ನೋಡಿದಾಗಲೇ ನಮ್ಮ ಸಂಸ್ಕೃತಿಯ ವಾಸ್ತವ ಚಿತ್ರ ಸಿಕ್ಕುವುದು.

ಸಂಸ್ಕೃತಿಯಲ್ಲಿ ಸ್ವವಿಮರ್ಶೆ

ಹಾಗಾದರೆ ವರ್ತಮಾನದ ನಮಗೆ ಚರಿತ್ರೆಯ ಸುಂದರವಾದ ಅಭಿಮಾನ ಹುಟ್ಟಿಸುವ ನೆನಪುಗಳು ಬೇಡವೇ? ಅವು ಬೇಕು. ಅವುಗಳ ನೆನಪಿನಿಂದ ನಮ್ಮ ಕಣ್ಣೆದುರಿನ ಕೇಡುಗಳ ವಿರುದ್ಧ ಹೋರಾಡಲು ಚೈತನ್ಯ ಸಿಗುತ್ತವೆ. ಸಂಸ್ಕೃತಿಯಲ್ಲಿ ಇಂತಹ ಅಬಿಮಾನದ ಮುಖಗಳು ಬೇಕಾದಷ್ಟಿವೆ. ಆದರೆ ಅಭಿಮಾನವು ಕೊಂಚ ಜಾರಿದರೂ ವೈಭವೀಕರಣಕ್ಕೆ ಹೋಗಿಬಿಡುತ್ತದೆ. ಕರ್ನಾಟಕ ಸಂಸ್ಕೃತಿ ಬರಿ ವೈಭವಗಳ ಕಥನವಲ್ಲ. ಅಲ್ಲಿ ನಾವು ಹೆಮ್ಮೆ ಪಡಲಾಗದ ನೂರಾರು ಕಪ್ಪುಕಲೆಗಳಿವೆ. ಯಾವತ್ತೂ ಸಾಧನೆಗಳು ಹೆಮ್ಮೆಯಿಂದ ತಲೆಯೆತ್ತಿಸುತ್ತವೆ. ನೋವು ಪಶ್ಚಾತ್ತಾಪಗಳು ಆತ್ಮವಿಮರ್ಶೆಗೆ ಹಚ್ಚುತ್ತವೆ. ಆತ್ಮವಿಮರ್ಶೆ ಇಲ್ಲದೆ ಯಾವ ದೇಶವೂ ದೊಡ್ಡದಾಗಿ ಬೆಳೆದಿಲ್ಲ. ಚರಿತ್ರೆಯನ್ನಾಗಲಿ ವರ್ತಮಾನವನ್ನಾಗಲಿ ಅಲ್ಲಿರುವ ಕೇಡೂ ನೋವು ಸೋಲುಗಳ ಸಮೇತ ಸ್ವೀಕರಿಸಬೇಕು. ನಮ್ಮಲ್ಲಿ ಕೊರತೆಯಿದೆ ಎಂದು ಒಪ್ಪಿಕೊಂಡರೆ, ಅದನ್ನು ತೊಡೆಯಲು ಯತ್ನಿಸಬಹುದು, ನೋವಿರದ ಸುಂದರ ಸಮಾಜ ಕಟ್ಟಿಕೊಳ್ಳುವ ಕನಸನ್ನು ಕಾಣಬಹುದು ತಾನೆ.

ಸಂಘರ್ಷದ ನೆನಪುಗಳು

ಕರ್ನಾಟಕ ಸಂಸ್ಕೃತಿ ಬರಿ ಸಾಮರಸ್ಯ ತ್ಯಾಗ ನಿಷ್ಠೆಗಳಿಂದ ರೂಪುಗೊಂಡಿಲ್ಲ ಅನೇಕ ಸ್ವಾಭಿಮಾನಿಗಳು ಅನ್ಯಾಯದ ವಿರುದ್ಧ ಮಾಡಿದ ಸಂಘರ್ಷಗಳಿಂದಲೂ ರೂಪುಗೊಂಡಿದೆ. ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆ ಸಂಭವಿಸುವುದೇ ಪ್ರಶ್ನಿಸುವಿಕೆಯಿಂದ, ಪ್ರತಿರೋಧದಿಂದ. ನಮ್ಮ ಜನ ಬಡವರಾಗಿದ್ದರು. ಆದರೆ ಅಭಿಮಾನ ಹೀನರಾಗಿರಲಿಲ್ಲ. ಕಣಸೆ ಜಟ್ಯ ಎಂಬುವನ ಕತೆ ನೆನಪಾಗುತ್ತದೆ. ೧೯೫೦ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾಗೋಡು ಹಳ್ಳಿಯಲ್ಲಿ ಗೇಣಿರೈತರು ಉಳುವವನಿಗೆ ಭೂಮಿ ಎಂದು ಹೋರಾಟ ಮಾಡಿದರು. ಅವರಲ್ಲಿ ಕಣಸೆ ಜಟ್ಯನೂ ಒಬ್ಬ. ಕಾಗೋಡಿನಲ್ಲಿ ಬಯಲಾಟ ನಡೆವಾಗ ಜಮೀನುದಾರರೊಬ್ಬರೇ ಕುರ್ಚಿಯ ಮೇಲೆ ಕೂರುವ ಸಂಪ್ರದಾಯ ಇತ್ತು. ಉಳಿದ ಜನರೆಲ್ಲ ನೆಲದ ಮೇಲೆ ಕೂರುತ್ತಿದ್ದರು. ಆದರೆ ಜಟ್ಯ ‘ನಮಗೆ ಭೂಮಿ ಬಿಟ್ಟುಕೊಡದ ಧಣಿಯ ಮುಂದೆ ಯಾಕೆ ತಗ್ಗಬೇಕು’ ಎಂದು, ಮನೆಯಿಂದ ಒಂದು ಕುರ್ಚಿ ತಂದು ಕೂರುತ್ತಿದ್ದನಂತೆ. ಪಕ್ಕದ ಊರಿಲ್ಲಿ ಬಯಲಾಟ ನಡೆದರೆ, ಅಲ್ಲಿಗೂ ಕುರ್ಚಿ ಹೊತ್ತುಕೊಂಡು ಹೋಗುತ್ತಿದ್ದನಂತೆ.  ಇದು ನೋಡಲು ಸಣ್ಣ ಘಟನೆಯಂತೆ ತಮಾಶೆಯಂತೆ ಕಾಣುತ್ತದೆ. ಆದರೆ ಅಳದಲ್ಲಿ ಉಳ್ಳವರಿಗೆ ಬಾಗದೆ ತಮ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಜನ ಮಾಡುವ ಸೆಣಸಾಟವನ್ನು ಸೂಚಿಸುತ್ತದೆ. ಕರ್ನಾಟಕದ ಚರಿತ್ರೆಯಲ್ಲಿ ಇಂತಹ ಜನ ಉದ್ದಕ್ಕೂ ದಿಟ್ಟ ಹೋರಾಟ ಮಾಡಿಕೊಂಡು ಬಂದಿರುವ ನಿದರ್ಶನಗಳಿವೆ. ‘ಹೋರಾಟ’ ವೆಂದರೆ ರಾಜನಿಗಾಗಿ ಸೈನಿಕರು ಮಾಡಿದ ಯುದ್ಧಗಳು ಮಾತ್ರವಲ್ಲ. ಇಡೀ ನಾಡಿನ ಬಿಡುಗಡೆಗಾಗಿ ಮಾಡಿದ ವಿಶಾಲ ಯುದ್ಧಗಳು ಹೌದು. ಉಳ್ಳಾಲದ ರಾಣಿ ಅಬ್ಬಕ್ಕ, ನರಗುಂದದ ಬಾಬಾಸಾಹೇಬ, ಮುಂಡರಗಿ ಭೀಮರಾಯ, ಕಿತ್ತೂರಚೆನ್ನಮ್ಮ, ಟಿಪ್ಪುಸುಲ್ತಾನ ಇವರೆಲ್ಲ ವಿದೇಶಿ ಆಕ್ರಮಣಕಾರರ ವಿರುದ್ಧ ಮಾಡಿದ ಯುದ್ಧಗಳು ಇಂತಹವು.ರೈತರು ಸರಕಾರಕ್ಕೆ ತೆರಿಗೆ ಕಟ್ಟದೆ ತೋರಿದ ಅಸಹಕಾರವೂ ಇನ್ನೊಂದು ಬಗೆಯ ಯುದ್ಧವೆ. ಅಂಕೋಲದಲ್ಲಿ ಇಂತಹ ಕರನಿರಾಕರಣೆ ಚಳುವಳಿ ನಡೆಯಿತು. ಗದಗ ಜಿಲ್ಲೆಯ ಕೊರ್ಲಹಳ್ಳಿಯಲ್ಲಿ ೧೯೫೭ರ ಸುಮಾರಿಗೆ ಬ್ರಿಟಿಷರ ವಿರುದ್ಧ ೨೬ ಜನ ದಂಗೆಯೆದ್ದರು. ಅವರನ್ನು ಹಿಡಿದು ಗಲ್ಲಿಗೇರಿಸಲಾಯಿತು. ೧೯೪೨ರಲ್ಲಿ ಶಿವಮೊಗ್ಗ ಜಿಲ್ಲೆಯ ಈಸೂರಿನಲ್ಲಿ ಕೂಡ ಬ್ರಿಟಿಷ್ ಸರಕಾರದ ವಿರುದ್ಧ ಬಂಡೆದ್ದ ಹಳ್ಳಿ ಜನರನ್ನು ಗಲ್ಲಿಗೇರಿಸಲಾಯಿತು. ಈ ಜನರನ್ನು ಚರಿತ್ರೆಯ ಪುಸ್ತಕಗಳು ನಾಯಕರಂತೆ ದಾಖಲಿಸದೆ ಇರಬಹುದು. ಆದರೆ ಇವರ ಧೀರಸಾವು ನಮ್ಮ  ಸಂಸ್ಕೃತಿಯ ಸತ್ವವನ್ನು ರೂಪಿಸಿದೆ. ಉಳ್ಳಾಲ, ಶ್ರೀರಂಗಪಟ್ಟಣ, ಕಿತ್ತೂರು ಸಂಗೊಳ್ಳಿ, ಹಲಗಲಿ, ನರಗುಂದ ಇವೆಲ್ಲ   ಕರ್ನಾಟಕ ಸಂಸ್ಕೃತಿಯನ್ನು ಸಂಘರ್ಷದ ಚಾಣದಿಂದ ಕಟೆದ ತಾಣಗಳು, ೨೦ನೇ ಶತಮಾನವಂತೂ ಜನರ ಚಳುವಳಿಗಳಿಂದ ತುಂಬಿ ಹೋಗಿದೆ. ಕನ್ನಡ ಚಳುವಳಿ, ರೈತ ಚಳುವಳಿ, ದಲಿತ ಚಳುವಳಿ, ಪರಿಸರ ಚಳುವಳಿ, ಮಹಿಳಾ ಹೋರಾಟ, ನದಿ ಉಳಿಸುವ ಚಳುವಳಿ, ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಹೋರಾಟ ಇವೆಲ್ಲ ನಮ್ಮ ಸಂಸ್ಕೃತಿಗೆ ಆಕಾರ ಕೊಟ್ಟಿವೆ.

ಶಿಖರಗಳ ಕೆಳಗೆ ನೆಲ

ಚರಿತ್ರೆಯಲ್ಲಿ ನಾಯಕರಿತ್ತಾರೆ. ಬಸವಣ್ಣ, ಅಕ್ಕಮಹಾದೇವಿ, ಕುಮಾರರಾಮ, ಮಂಟೇಸ್ವಾಮಿ, ಕುಮಾರವ್ಯಾಸ, ಕನಕದಾಸ, ಟಿಪ್ಪುಸುಲ್ತಾನ, ಸರ್‌ಎಂವಿ, ಕುವೆಂಪು, ಶಿವರಾಮಕಾರಂತ, ಗುಬ್ಬಿವೀರಣ್ಣ, ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ರಾಜಕುಮಾರ‍್, ಪಿ ಲಂಕೇಶ್‌ಇವರೆಲ್ಲ ಕರ್ನಾಟಕ ಸಂಸ್ಕೃತಿಯ ನಾಯಕರೆ, ಆದರೆ ನಾಯಕರ ಮೂಲಕ ಸಂಸ್ಕೃತಿ ನೋಡುವಾಗ ಮರೆತುಹೋಗುವ ಒಂದು ಅಂಶವಿದೆ. ಅದೆಂದರೆ ಈ ನಾಯಕರು ತಮ್ಮ ಪ್ರತಿಭೆ ತ್ಯಾಗ ದುಡಿಮೆಗಳಿಂದ ಮಾತ್ರ ದೊಡ್ಡವರಾದವರಲ್ಲ. ತಮ್ಮ ಪರಿಸರದಲ್ಲಿದ್ದ ಜನ ಬಲದಿಂದಲೂ ದೊಡ್ಡವರಾದವರು. ಬಸವಣ್ಣನನ್ನು ಅವನ ಜತೆಗಿದ್ದ ನೂರಾರು ಸಂಗಾತಿಗಳಿಂದ ಬೇರೆಮಾಡಿ ಹೇಗೆ ನೋಡುವುದು? ಶಿಖರಗಳು ಗಗಚುಂಬಿ ಯಾಗಿರಬಹುದು. ಆದರೆ ಅವು ನೆಲದ ಮೇಲೆಯೆ ನಿಲ್ಲಬೇಕು ತಾನೇ? ನಾಯಕರು ರಂಗದ ಮೇಲೆ ಬರುತ್ತಾರೆ.ನಾಯಕರಲ್ಲದ ಲಕ್ಷಾಂತರ ಜನ ರಂಗದ ಹಿಂದೆ ದುಡಿಯುತ್ತಾರೆ. ಎಷ್ಟೋ ಸುಂದರವಾದ ಜನಪದ ಹಾಡುಗಳನ್ನು ಕಟ್ಟಿದ ಪ್ರತಿಭಾವಂತ ಕವಿ ಯಾರೆಂದು ಗೊತ್ತೆ ಅಗುವುದಿಲ್ಲ. ಸಂಸ್ಕೃತಿ ಒಂದು ಕಾಡಿದ್ದಂತೆ. ಅದರಲ್ಲಿ ಆಕಾಶದೆತ್ತರಕ್ಕೆ ಬೆಳೆದ ಮರಗಳೂ ಇವೆ. ಹೆಸರಿಲ್ಲದ ಸಣ್ಣಪುಟ್ಟ ಗಿಡಗಳೂ ಇವೆ. ನೆಲದಲ್ಲಿ ಹರಡಿರುವ ಹುಲ್ಲೂ ಇದೆ. ಇವೆಲ್ಲ ಸೇರಿತಾನೆ ಒಂದು ಕಾಡು?

ಸಮುದಾಯದ ಸೃಜನಶೀಲತೆ

ಸಮುದಾಯಗಳ ಮೂಲಕ ನೋಡತೊಡಗಿದರೆ ಸಂಸ್ಕೃತಿಯ ವ್ಯಾಖ್ಯೆ ವಿಶಾಲಗೊಳ್ಳುತ್ತದೆ. ಆಗ ಅದು ಹೆಸರಿಲ್ಲದ ಅಧಿಕಾರವಿಲ್ಲದ ಲಕ್ಷಲಕ್ಷ ಮಾನವರ ಕಥನವನ್ನೂ ಒಳಗೊಳ್ಳಲಾರಂಭಿಸುತ್ತದೆ. ಆಗ ಧೀಮಂತ ಮಹಿಳೆಯರಾದ ಅತ್ತಿಮಬ್ಬೆ ಅಕ್ಕಮಹಾದೇವಿ ಅಬ್ಬಕ್ಕ ಕಿತ್ತೂರಚೆನ್ನಮ್ಮ ಚಾದಂಬೀಬಿಯರ ಜತೆ, ಸಾಲುಮರದ ತಿಮ್ಮಕ್ಕನೂ ಸೇರುತ್ತಾಳೆ. ಹಾದಿ ಹೋಕರಿಗೆ ನೆರಳನ್ನು ನೀಡುವ ನೂರಾರು ಮರಗಳನ್ನು ಒಂದು ಬಡಕುಟುಂಬ ಸಾಕಿ ಬೆಳೆಸಿತು. ಇದರ ಹಿಂದೆ ಕೆಲಸ ಮಾಡಿರುವ ಮನಸ್ಸು, ಕರ್ನಾಟಕ ಸಂಸ್ಕೃತಿಯ ಅಪೂರ್ವ ಸೃಷ್ಟಿಯಲ್ಲದೆ ಮತ್ತೇನು?

ಸಮುದಾಯದ ಸೃಜನಶೀಲತೆ ಎಂದರೆ, ಜನ ತಮ್ಮ ಶ್ರಮದ ಭಾಗವಾಗಿ ಪ್ರಕಟಿಸುವ ಜೀವಂತಿಕೆ; ತಮ್ಮ ಸುಖಸಂಭ್ರಮ ದುಃಖದುಗುಡಗಳ ಭಾಗವಾಗಿ ಚಿಮ್ಮಿಸುವ ಮಾನವೀಯಸ್ತೆ. ಗದಗ ಜಿಲ್ಲೆಯ ಮುಳಗುಂದದ ಹತ್ತಿರ ಒಬ್ಬ ರೈತ, ಬೆರ್ಚಪ್ಪನನ್ನು ಮಾಡುತ್ತಾನೆ. ಬೆಳೆದ ಬೆಳೆಗೆ ಕೆಟ್ಟದೃಷ್ಟಿ ತಾಗದಿರಲಿ ಎಂಬ ನಂಬಿಕೆಯಿಂದ ನಿಲ್ಲಿಸುವ ಬೆದರು ಬೊಂಬೆಗೆ ‘ಬೆರ್ಚಪ್ಪ’ ಎನ್ನುತ್ತಾರೆ. ಈ ರೈತ ಬೆರ್ಚಪ್ಪನನ್ನು ಎಲ್ಲರಂತೆ ಅಂಗಿಯೊಳಗೆ ಹುಲ್ಲುತುಂಬಿ ಮಡಕೆಯ ತಲೆಯಿಟ್ಟು ಮಾಡುತ್ತಿರಲಿಲ್ಲ. ಅಲ್ಲಿ ಇಲ್ಲಿ ಬಿದ್ದಿದ್ದ ಬಣ್ಣದ ಚಿಂದಿಬಟ್ಟೆ ಆರಿಸಿತಂದು ಮಾನವಾಕೃತಿಯ ಗೊಂಬೆ ಮಾಡುತ್ತಿದ್ದ. ಅವು ಎಷ್ಟು ಸುಂದರ ಗೊಂಬೆಗಳಾಗುತ್ತಿದ್ದವು ಎಂದರೆ, ಅವನ್ನು ನೋಡಲು ದೂರದಿಂದ ಜನ ಬರುತ್ತಿದ್ದರು. ರೈತ ಇವನ್ನು ಕಲೆ ಎಂದು ಮಾಡಲಿಲ್ಲ. ಬೆರ್ಚಪ್ಪ ಎಂದು ಮಾಡಿದರೆ ಅದು ಕಲೆಯೂ ಆಯಿತು. ಇದೇ ರೀತಿ, ನಮ್ಮ ಮಡಕೆ ಮಾಡುವಾಗ, ಬುಟ್ಟಿ ಹೆಣೆಯುವಾಗ ಕೌದಿ ಹೊಲೆಯುವಾಗ ಜನ ಕಲಾತ್ಮಕತೆ ಮೆರೆಯುತ್ತಾರೆ. ಹಳ್ಳಿಗಾಡಿನಲ್ಲಿ ಇಂತಹ ಸಾವಿರಾರು ಪ್ರತಿಭೆಗಳಿವೆ. ಇವು ನಮ್ಮ ಸೃಜನಶೀಲತೆಯಿಂದ ಇಡೀ ಪರಿಸರವನ್ನು ಜೀವಂತವಾಗಿ ಇಡುತ್ತವೆ. ರೈತರು ಬೆಳೆ ತಿನ್ನಲು ಬರುವ ಪ್ರಾಣಿಪಕ್ಷಿಗಳನ್ನು ಓಡಿಸಲು ಅಥವಾ ಬೇಟೆಯಾಡಲು ಮಾಡಿಕೊಂಡಿರುವ ನೂರಾರು ಉಪಕರಣಗಳಲ್ಲಿ, ಪಾರಂಪರಿಕ ತಂತ್ರಜ್ಞಾನದ ಸಾಧನೆಯಿದೆ. ನಮ್ಮ ನಾಡಮದ್ದು, ಕಾಡಿನ ಜನ ನೂರಾರು ವರುಷಗಳಿಂದ ಮಾಡಿದ ಪ್ರಯೋಗಗಳ ಫಲವಾದರೆ, ನಮ್ಮ ತಿಂಡಿತಿನುಸುಗಳು ಅಡುಗೆಮನೆಗಳಲ್ಲಿ ಸಾವಿರಾರು ವರುಷಗಳ ಪ್ರಯೋಗಶೀಲತೆಯ ಫಲವಾಗಿವೆ.

ದುಡಿವ ಜನರ ಸೃಜನಶೀಲತೆಯ ಅಸಲಿ ಮುಖ ಕಾಣಬೇಕಾದರೆ, ಜಾನಪದಕ್ಕೆ ಹೋಗಬೇಕು. ಜನಪದ ಸಾಹಿತ್ಯ, ಸಂಗೀತ, ಕುಣಿತ, ನಾಟಕ, ಅಡುಗೆ, ವೈದ್ಯ, ಆಚರಣೆಗಳ ಒಂದು ದೊಡ್ಡಲೋಕವೇ ಅಲ್ಲಿದೆ. ಮಂಟೆಸ್ವಾಮಿ, ಮಲೆಯ ಮಾದೇಶ್ವರ, ಜುಂಜಪ್ಪ, ಬೀರಪ್ಪ, ಎಲ್ಲಮ್ಮ ಮುಂತಾದ ದೈವಗಳ ಮೇಲೆ, ಜನಪದರು ರಾತ್ರಿಯಿಡಿ ಹಾಡಬಲ್ಲ ಕಾವ್ಯ ಕಟ್ಟಿದ್ದಾರೆ. ಗಣ್ಯರೆನಿಸಿಕೊಂಡ ವಿಜ್ಞಾನಿಗಳು ಲೇಖಕರು ಸಂಗೀತಗಾರರು ಚಿತ್ರಗಾರರು ನಟರು ಮಾಡಿದ ಸಾಧನೆ ಮೂಲಕವೆ ಸಂಸ್ಕೃತಿ ಚಿತ್ರ ಬರೆಯಲು ಸಾಧ್ಯವಿಲ್ಲ. ಹಾಗೆ ಬರೆದರೆ, ನಾಡಿನ ಕೋಟ್ಯಂತರ ದುಡಿವ ಜನ, ನೂರಾರು ವರ್ಷಗಳಿಂದ ಕಟ್ಟಿಕೊಂಡಿರುವ ದೊಡ್ದಲೋಕ ಹೊರಗುಳಿದು ಬಿಡುತ್ತದೆ. ರೈತರು ನೇಕಾರರು ಕಮ್ಮಾರರು ಕೂಲಿಕಾರರು ತಮ್ಮ ಶ್ರಮದ ಭಾಗವಾಗಿ ಸೃಷ್ಟಿಸಿರುವ ಈ ಲೋಕಕ್ಕೆ ಹೋಗದಿದ್ದರೆ, ಸಂಸ್ಕೃತಿಯ ಅರ್ಥವೆ ಕುಬ್ಜವಾಗಿಬಿಡುತ್ತದೆ.

ಸಂಸ್ಕೃತಿಯ ಸಂಕೀರ್ಣ ಚಿತ್ರ

ಇಷ್ಟೆಲ್ಲ ಹೇಳಿದ ಮೇಲೆ ‘ಕರ್ನಾಟಕ ಸಂಸ್ಕೃತಿ’ ಎಂದರೆ, ನಮ್ಮ ಮಸ್ಸಿನ ಪರದೆಯ ಮೇಲೆ ಮೂಡುವ ಚಿತ್ರ ಎಂತಹುದು? ಆ ಚಿತ್ರದಲ್ಲಿ ರೈತರು, ಕೂಲಿಕಾರರು, ಕಸಬುದಾರರು, ಕವಿಗಳು ಸಂತರು, ದೊರೆಗಳು, ಆಡಳಿತಗಾರರು, ಹೋರಾಟಗಾರರು, ಬುಡಕಟ್ಟು ಜನ ಸುಳಿಯತೊಡಗುತ್ತಾರೆ; ಪಂಪ ಕುಮಾರವ್ಯಾಸರ ಕಾವ್ಯಗಳು, ಶರಣರ ವಚನಗಳು, ಕುವೆಂಪು ಕಾರಂತರ ಕಾದಂಬರಿಗಳು, ಬೇಂದ್ರೆ ಕವನಗಳು, ಜನಪದ ಗೀತೆಗಳು ಗೋಚರಿಸುತ್ತವೆ; ಬಂಗುಡೆಮೀನು, ಜೋಳದರೊಟ್ಟಿ, ರಾಗಿಮುದ್ದೆ ಯಕ್ಷಗಾನ, ದೊಡ್ಡಾಟ, ಕೃಷ್ಣಪಾರಿಜಾತ, ಮೈಲಾರದ ಜಾತ್ರೆ, ಗೋಳಗುಮ್ಮಟ, ಹಂಪಿಯ ಗುಡಿ, ಶ್ರವಣಬೆಳಗೊಳದ ಬಾಹುಬಲಿ, ವೀರಗಲ್ಲು ಮುಂತಾದವೆಲ್ಲ ಮಿಂಚಿ ಮಾಯವಾಗುತ್ತವೆ; ಜತೆಗೆ ನಮ್ಮ ನಾಡಿನ ಬಡತನ, ಕಡಿತಲೆಯಾದ ಕಾಡು, ಚರಂಡಿಯಾಗಿರುವ ನದಿಗಳು, ಪರದೇಶಿಗರಿಗೆ ಸೂರೆಹೋಗುತ್ತಿರುವ ಸಂಪನ್ಮೂಲಗಳು, ಕನ್ನಡದ ದುಸ್ಥಿತಿ, ರೈತರ ಆತ್ಮಹತ್ಯೆ -ಇವೆಲ್ಲ ಕಾಡುತ್ತವೆ. ಇವೆಲ್ಲ ಸೇರಿದರೆ ಅದೆಂತಹ ಸಂಕೀರ್ಣ ಚಿತ್ರವಾಗುತ್ತದೆ! ಹೌದು, ಒಂದು ನಾಡಿನ ಜನಜೀವನದ ಎಲ್ಲವೂ ಸಂಸ್ಕೃತಿ ಎನ್ನುವುದಾದರೆ, ಇಂತಹ ಸಂಕೀರ್ಣ ಚಿತ್ರವೇ ಮೂಡಬೇಕು.

ಹೀಗೆ ಕರ್ನಾಟಕ ಸಂಸ್ಕೃತಿ ಬಹುರೂಪಿಯಾಗಿದೆ, ವರ್ಣರಂಜಿತವಾಗಿದೆ. ಅದರಲ್ಲಿ ಸಂಘರ್ಷವೂ ಇವೆ, ಸಾಮರಸ್ಯವೂ ಇದೆ. ಹಳತು ಹೊಸತು ಎರಡೂ ಇವೆ. ಸಂಭ್ರಮ ನೋವುಗಳೆರಡೂ ಇವೆ. ಇವೆಲ್ಲ ಇರುವುದರಿಂದಲೇ ಅದು ಜೀವಂತವಾಗಿದೆ, ಚಲನಶೀಲವಾಗಿದೆ. ಕರ್ನಾಟಕ ಸಂಸ್ಕೃತಿ ಹಡೆದ ಅಪರೂಪದ ವ್ಯಕ್ತಿ ಬಸವಣ್ಣ ಹೇಳುವಂತೆ, ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’! ಅಂದರೆ ಚಲನಶೀಲವಾಗಿರುವ ಯಾವುದಕ್ಕೂ ನಾಶದ ಭಯವಿಲ್ಲ. ಎಂತಲೇ ಅನಿಸುತ್ತದೆ: ಕರ್ನಾಟಕ ಸಂಸ್ಕೃತಿಯ ಸುಂದರ ದಿನಗಳು ಗತಕಾಲದಲ್ಲಿ ಮುಗಿದು ಹೋಗಿಲ್ಲ. ಅವು ನಮ್ಮ ಕಣ್ಮುಂದೆ ರೂಪುಗೊಳ್ಳಬೇಕಾಗಿವೆ. ಅವು ಭವಿಷ್ಯದ ಕಾಲಗರ್ಭದಲ್ಲಿ ಸುಪ್ತವಾಗಿ ಅಡಗಿಕೊಂಡಿವೆ.

ಲೇಖಕರು

ರಹಮತ್‌ತರೀಕೆರೆ (೧೯೫೯) ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದ ಅಧ್ಯಾಪಕರಾಗಿದ್ದಾರೆ. ‘ಪ್ರತಿಸಂಸ್ಕೃತಿ’ ‘ಮರದೊಳಗಣ ಕಿಚ್ಚು’ ‘ಕರ್ನಾಟಕದ ಸೂಫಿಗಳು’ ‘ಅಂಡಮಾನ್‌ಕನಸು’ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ.

ಆಶಯ

ಪ್ರಸ್ತುತ ಲೇಖನವು ಕರ್ನಾಟಕ ಸಂಸ್ಕೃತಿ ಹೇಗೆ ಬಹುರೂಪಿಯಾಗಿದೆ ಎಂದು ವಿವರಿಸಲು ಯತ್ನಿಸುತ್ತದೆ. ಯಾವುದಾರೂ ಒಂದು ಭಾಷೆ, ಸಮುದಾಯ ಅಥವಾ ಧರ್ಮದ ನೆಲೆಯಲ್ಲಿ ಮಾತ್ರ ನೋಡಿದರೆ, ಅದರ ನಿಜರೂಪ ಸಿಗಲಾರದು. ಅದರಲ್ಲಿ ಹೆಮ್ಮೆಯ ಹಾಗೂ ಅಪಮಾನದ ಎರಡೂ ಚಿತ್ರಗಳಿವೆ. ಅವೆರಡನ್ನೂ ಕೂಡಿಸಿಯೇ ನೋಡಬೇಕು ಎಂದು ಲೇಖನ ಪ್ರತಿಪಾದಿಸುತ್ತದೆ.

ಟಿಪ್ಪಣಿ

ಮಲೇಮಾದೇಶ್ವರ = ಕೊಳ್ಳೆಗಾಲ ತಾಲ್ಲೂಕು ಮಹದೇಶ್ವರ ಬೆಟ್ಟದಲ್ಲಿರುವ ದೈವ, ಕುಮಾರರಾಮ = ೧೪ನೇ ಶತಮಾನದ ಕಂಪಲಿ ರಾಜ್ಯದ ರಾಜಕುಮಾರ, ಸಂಗೊಳ್ಳಿರಾಯಣ್ಣ = ಕಿತೂರುಚೆನ್ನಮ್ಮನ ಅನುಯಾಯಿ, ಬ್ರಿಟಿಷ್‍ಸರಕಾರದ ನಿದ್ದೆ ಕೆಡಿಸಿದ್ದ ಹೋರಾಟಗಾರ, ನರಗುಂದದ ಬಾಬಾಸಾಹೇಬ = ಗದಗ ಜಿಲ್ಲೆಯ ನರಗುಂದ ಸಂಥಾನದ ಅಧಿಪತಿಯಾಗಿದ್ದವನು, ಬ್ರಿಟಿಷರ ವಿರುದ್ಧ ಹೋರಾಡಿದವನು. ಅವನನ್ನು ೧೮೫೮ ರಲ್ಲಿ ಹಿಡಿದು ಗಲ್ಲಿಗೇರಿಸಲಾಯಿತು ತಿಮ್ತಿಣಿಮೋನಪ್ಪ = ಗುಲಬರ್ಗಾ ಜಿಲ್ಲೆಯ ಜನಪ್ರಿಯ ಸಂತ, ೨ನೇ ಇಬ್ರಾಹಿಂ = ಬಿಜಾಪುರವನ್ನಾಳಿದ ಪ್ರಸಿದ್ಧ ಆದಿಲಶಾಹಿ ದೊರೆ, ಸರಸ್ವತಿಯ ಆರಾಧಕನೂ ಸಂಗೀತಪ್ರೇಮಿಯೂ ಆಗಿದ್ದ  ಈತ ಕಿತಾಬೆ ನವರ್ಸ್‌ಎಂಬ ಕೃತಿ ರಚಿಸಿದನು. ಕೈವಾರದ ತಾತಯ್ಯ = ೧೯ ನೇ ಶತಮಾನದಲ್ಲಿ ಕೋಲಾರ ಭಾಗದಲ್ಲಿದ್ದ ಸಂತ, ಅಭಂಗ = ಮರಾಠಿ ಸಂತರ ತತ್ವಪದ, ಬಂದೇನವಾಚ್‌= ೧೪ನೇ ಶತಮಾನದಲ್ಲಿ ಗುಲಬರ್ಗಾದಲ್ಲಿದ್ದ ಜನಪ್ರಿಯ ಸೂಪೀಸಂತ, ಕವಿರಾಜಮಾರ್ಗ = ೯ನೇ ಶತಮಾನದ ಅಲಂಕಾರ ಗ್ರಂಥ, ಇದರಲಿ ಕನ್ನಡ ನಾಡು, ಕನ್ನಡಭಾಷೆ ಹಾಗೂ ಕನ್ನಡಿಗರನ್ನು ಕುರಿತ ವರ್ಣನೆಗಳಿವೆ, ಮಂಟೆ ಸ್ವಾಮಿ = ಮೈಸೂರು ಮಂಡ್ಯ ಸೀಮೆಯ ಕೆಳವರ್ಗದ ಸಮುದಾಯದಲ್ಲಿ ಜನಪ್ರಿಯನಾಗಿರುವ ಸಂತ, ಪರ್ಶಿಯನ್‌= ಈಗಿನ ಇರಾನ್‌ದೇಶಕ್ಕೆ ಸಂಬಂಧಿಸಿದ, ಶಿಶುನಾಳ = ೧೯ನೇ ಶತಮಾನದಲ್ಲಿ ಗದಗ ಜಿಲ್ಲೆಯಲ್ಲಿದ್ದ ಸಂತ, ಸೂಫಿ = ಅನುಭಾವಿ ಪಂಥದ ಯೋಗಿ, ಉರುಸು = ಸೂಫಿಸಂತನ ಪುಣ್ಯತಿಥಿಯ ನೆನಪಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ಉತ್ಸವ, ಮೊಹರಂ = ೭ನೇ ಶತಮಾನದಲ್ಲಿ ಅರಬ್‌ದೇಶದಲ್ಲಿ ತಮ್ಮ ಶತ್ರುಗಳಿಂದ ಹತರಾದ ಹಸೇನ ಹುಸೇನ ಎಂಬ ಅಣ್ಣತಮ್ಮಂದಿರ ನೆನಪಲ್ಲಿ ನಡೆವ ಆಚರಣೆ, ದರ್ಗಾ = ಸಮಾಧಿ, ಗುಬ್ಬಿವೀರಣ್ಣ = ಪ್ರಸಿದ್ಧ ನಾಟಕ ಕಂಪನಿ ನಡೆಸಿದವರು, ರಾಣಿಅಬ್ಬಕ್ಕ = ಪೋರ್ಚುಗೀಸರ ವಿರುದ್ಧ ಹೋರಾಡಿದ ಉಳ್ಳಾಲದ ರಾಣಿ, ಚಾಂದಬೀಬಿ = ಮೊಗಲರ ವಿರುದ್ಧ ಹೋರಾಡಿದ ಬಿಜಾಪುರ ರಾಣಿ, ಅತ್ತಿಮಬ್ಬೆ = ದಾನಕ್ಕೆ ಹೆಸರಾಗಿದ್ದ ೧೦ನೇ ಶತಮಾನದಲ್ಲಿದ್ದ ಒಬ್ಬ ಜೈನಮಹಿಳೆ, ಮುಂಡರಗಿ ಭೀಮರಾಯ = ೧೮೫೭ ಕ್ರಾಂತಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ, ಜುಂಜಪ್ಪ = ಗೊಲ್ಲಸಮುದಾಯದ ಸಾಂಸ್ಕೃತಿಕ ನಾಯಕ, ಬೀರಪ್ಪ = ಕುರುಬ ಸಮುದಯದ  ಸಾಂಸ್ಕೃತಿಕ ನಾಯಕ, ಹಲಗಲಿ = ಬಾಗಲಕೋಟೆ ಜಿಲ್ಲೆಯ ಒಂದು ಹಳ್ಳಿ, ೧೮೫೭ರಲ್ಲಿ ಇಲ್ಲಿನ ಬೇಡರು ಶಸ್ತ್ರಗಳನ್ನು ಇಟ್ಟುಕೊಳ್ಳಬಾರದು ಎಂಬ ಬ್ರಿಟಿಷರ ಕಾನೂನನ್ನು ಪ್ರತಿಭಟಿಸಿ ಹೋರಾಡಿದರು, ಇವರಲ್ಲಿ ೧೯ ಜನರನ್ನು ಗಲ್ಲಿಗೇರಿಸಿದರು. ಸಾಲುಮರದ ತಿಮ್ಮಕ್ಕ = ತನ್ನ ಗಂಡನೊಂದಿಗೆ ಸೇರಿ ಸಾಲುಮರಗಳನ್ನು ನೆಟ್ಟು ಮಕ್ಕಳಂತೆ ಸಾಕಿದ ಮಹಿಳೆ.

ಪ್ರಶ್ನೆಗಳು

೧. ಪೊಟ್ಟಿಶ್ರೀರಾಮಲು ಬಗ್ಗೆ ಬೆಸಗರಹಳ್ಳಿ ರಾಮಣ್ಣನವರಿಗೆ ಆದ ಅನುಭವ ಏನನ್ನು ಸೂಚಿಸುತ್ತದೆ?

೨. ‘ಸಂಸ್ಕೃತಿ’ ಇರುವ ಜನಪ್ರಿಯ ಕಲ್ಪನೆಗಳು ಯಾವುವು?

೩. ಸಂಸ್ಕೃತಿಯನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಯಾಕೆ ವ್ಯಾಖ್ಯಾನಿಸುವ ಅಗತ್ಯವಿದೆ?

೪. ಕರ್ನಾಟಕ ಸಂಸ್ಕೃತಿಯನ್ನು ಸ್ವವಿಮರ್ಶೆಯ ಮೂಲಕ ಗ್ರಹಿಸುವ ಅಗತ್ಯ ಯಾಕಿದೆ?

೫. ಸಂಸ್ಕೃತಿಯನ್ನು ಗತಕಾಲದಲ್ಲಿ ಮಾತ್ರ ಅರಸುವ ಪ್ರವೃತ್ತಿಯು ಯಾಕೆ ಸರಿಯಲ್ಲ?

೬. ಕರ್ನಾಟಕ ಸಂಸ್ಕೃತಿಯಲ್ಲಿ ವೈಭವೀಕರಣದ ಅಪಾಯಗಳು ಯಾವುವು?

೭. ಸಮುದಾಯದ ಸೃಜನಶೀಲತೆ ಎಂದರೇನು?

೮. ಯಾಕೆ ಕರ್ನಾಟಕ ಸಂಸ್ಕೃತಿಯನ್ನು ಶಿಖರಗಳಿಂದಲೇ ಗುರುತಿಸುವುದು ಸಲ್ಲದು, ವಿವರಿಸಿ.

ಪೂರಕ ಓದು

೧. ಮಂಟೆಸ್ವಾಮಿ ಹಾಗೂ ಮಲೆಮಾದೇಶ್ವರ ಮಹಾಕಾವ್ಯಗಳು.

೨. ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ‘ಕರ್ನಾಟಕ ಜನಪದ ಕಲೆಗಳ ಕೋಶ’.

೩. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ‘ವಿಷಯ ವಿಶ್ವಕೋಶ : ಕರ್ನಾಟಕ’.

೪. ಬರಗೂರು ರಾಮಚಂದ್ರಪ್ಪ ಅವರ ‘ಸಂಸ್ಕೃತಿ : ಶ್ರಮ ಮತ್ತು ಸೃಜನಸೀಲತೆ’.

೫. ಎಚ್‌. ತಿಪ್ಪೇರುದ್ರಸ್ವಾಮಿ ಅವರ ‘ಕರ್ನಾಟಕ ಸಂಸ್ಕೃತಿ ಸಮೀಕ್ಷೆ’.

೬. ಮಾಸ್ತಿ ವೆಂಕಟೇಶ ಅಯ್ಯಂಗಾರ್‌ಅವರ ‘ಕರ್ನಾಟಕದ ಜನತೆಯ ಸಂಸ್ಕೃತಿ’.

೭. ಎಂ ಚಿದಾನಂದಮೂರ್ತಿ ಅವರ ‘ಕರ್ನಾಟಕ ಸಂಸ್ಕೃತಿ ‘

೮. ಕನ್ನಡ  ವಿಶ್ವವಿದ್ಯಾಲಯ ಪ್ರಕಟಿಸಿರುವ  ‘ಕನ್ನಡ ಕನ್ನಡಿ’ ಮಾಹಿತಿಕೋಶ.

೯. ಎಸ್‌ಎಸ್‌ಹಿರೇಮಠ ಅವರ ‘ಕರ್ನಾಟಕ ಸಂಸ್ಕೃತಿ ಪರಂಪರೆ ಹಬ್ಬಗಳು ‘,

೧೦. ಬೆಟಗೇರಿ ಕೃಷ್ಣಶರ್ಮ ಅವರ ‘ನಮ್ಮ ಸಂಸ್ಕೃತಿ ಪರಂಪರೆ’.

೧೧. ಎಚ್‌ಎಸ್‌ಗೋಪಾಲರಾವ್‌ಅವರ ‘ನಮ್ಮ ನಾಡು ಕರ್ನಾಟಕ ‘.

೧೨. ಜಿ. ರಾಜಶೇಖರ ಅವರ ‘ಕಾಗೋಡು ಸತ್ಯಾಗ್ರಹ’.

೧೩. ಶಿವರಾಮ ಕಾರಂತರ ‘ನಮ್ಮ ಸಂಸ್ಕೃತಿಯ ಹೆಮ್ಮ ಸಾಲದು’ ಎಂಬ ಲೇಖನ.

೧೪. ಎನ್‌, ಪಿ. ಶಂಕರನಾರಾಯಣರಾವ್‌ಅವರ ‘ಸಾತಂತ್ರ್ಯ ಗಂಗೆಯ ಸಾವಿರ ತೊರೆಗಳು’.