ನಾನೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕಾಲೇಜೊಂದರ ಆಟೋಮೊಬೈಲ್ಸ್ ವೃತ್ತಿಶಿಕ್ಷಣ ವಿಭಾಗಕೆ ಒಬ್ಬ ಬಾಹ್ಯ ಪರೀಕ್ಷಕನಾಗಿ ಹೋಗಿದ್ದೆ, ಕೂತೂಹಲಕ್ಕೆಂದು ವಿಭಾಗದ ಮುಖ್ಯಸ್ಥರಿಗೆ ಕೇಳಿದೆ. “ನಿಮ್ಮಲ್ಲಿ ಬರುವ ವಿದ್ಯಾರ್ಥಿಗಳ ಇಂಗ್ಲಿಷ್‌ಹೇಗಿದೆ?” “ನಮ್ಮಲ್ಲಿ ಅದೆಲ್ಲಾ ಸಮಸ್ಯೆಯೇ ಇಲ್ಲ ಮಾರಾಯರೆ, ಎಲ್ಲ ಸ್ಟ್ಯಾಂಡರ್ಡ್‌” ಎಂದರು. ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಹೆಚ್ಚು ಅಕ್ಷಸ್ಥರ ನಾಡಗಿರುವುದರಿಂದ, ಇರಬಹುದೇನೋ ಎಂದು ಸುಮ್ಮನಾದೆ. ಆದರೆ ಪ್ರಾಕ್ಟಿಕಲ್‌ಪರೀಕ್ಷೆಯ ಹೊತ್ತಲ್ಲಿ ರೆಕಾರ್ಡ್‌ಗಳನ್ನು ಪರಿಶೀಲಿಸುವಾಗ ೩೦, ವಿದ್ಯಾರ್ಥಿಗಳಲ್ಲಿ ಸುಮಾರು ೨೦ ವಿದ್ಯಾರ್ಥಿಗಳು, ಪುಟವೊಂದಕ್ಕೆ ೧೫ಕ್ಕಿಂತಲೂ ಹೆಚ್ಚು ಕಾಗುಣಿತ ದೋಷ ಮಾಡಿ ಬರೆದಿದ್ದರು. ಕೆಲವರಲ್ಲಿ ಪುಟಕ್ಕೆ ೩೦-೪೦ ತಪ್ಪುಗಳು! ೪ ವಿದ್ಯಾರ್ಥಿಗಳು ಮಾತ್ರ ತಪ್ಪಿಲ್ಲದೆ ರೆಕಾರ್ಡ್‌ಬರೆದಿದ್ದರು. ಆ ೩೦ ಜನರಲ್ಲಿ ೧೩ ಜನ ಫಸ್ಟಕ್ಲಾಸಿನಲ್ಲಿ ೧೫ ಜನ ಸೆಕೆಂಡ್‌ಕ್ಲಾಸಿನಲ್ಲಿ ಮತ್ತು ೨ ಜನ ಮಾತ್ರ ತೃತೀಯ ದರ್ಜೇಯಲ್ಲಿ ಎಸ್ಸೆಸೆಲ್ಸಿ ಪಾಸಾದವರು. ಆನಂತರ ಮುಖ್ಯಸ್ಥರಲ್ಲಿ ಪ್ರಸ್ತಾಪಿಸಿದೆ. ಅವರು ನಿಜ ಬಾಯ್ಬಿಟ್ಟರು. “ನೋಡಿ ಸಾರ್‌, ನಾವು ಮಾಡುವುದು ಮಾಡ್ತೆವೆ. ಕಲಿಯುವುದು ಅವರಿಗೆ ಬಿಟ್ಟಿದ್ದು. ಅವರು ಎಸ್ಸೆಸೆಲ್ಸಿ ಪಾಸ್‌ಮಾಡಿ ಬಂದಿಲ್ಲವ್ವಾ? ಅವರಿಗೆ ನಾವು ಇಲ್ಲಿ ಆಟೋಮೊಬೈಲ್‌ಬಗ್ಗೆ ಹೇಳುವುದು ಬಿಟ್ಟು ಇಂಗ್ಲಿಷ್‌ಕಲಿಸಲಿಕ್ಕಾಗುತ್ತಾ? ಜನಕ್ಕೆ ಈಗ ಇಂಗ್ಲಿಷಿನ ಹುಚ್ಚು ಹಿಡಿದಿದೆ. ಎಂತಾ ಮಾಡಕಾತಿಲ್ಯೆ.

ರಾಜ್ಯದ ಯಾವುದೇ ಕಾಲೇಜಿಗೆ ಹೋಗಿ ವಿಜ್ಞಾನ ಅಥವಾ ತಾಂತ್ರಿಕ ಜ್ಞಾನದ ಅಧ್ಯಾಪಕರನ್ನು, ಭಾಷಾ ಸಮಸ್ಯೆಯ ಬಗ್ಗೆ ಕೇಳಿ ನೋಡಿ. ಎದೆಯುಬ್ಬಿಸಿಕೊಂಡು ‘ನಮ್ಮ ವಿದ್ಯಾರ್ಥಿಗಳಿಗೆ ಸಮಸ್ಯೆಯೇ ಇಲ್ಲ’ ಎಂದು ಉತ್ತರ ನೀಡುತ್ತಾರೆ. ಖಾಸಗಿಯಾಗಿ ಆಪ್ತವಾಗಿ ಪ್ರಾಮಾಣಿಕವಾಗಿ ಉತ್ತರಿಸುವಂತೆ ಮಾಡಿದರೆ, ನಿಜ ಬಾಯ್ಬಿಡುತ್ತಾರೆ.

ಕರ್ನಾಟಕ ತಾಂತ್ರಿಕ ಶಿಕ್ಷಣದಲ್ಲಿ ನಾಲ್ಕು ಬಗೆಯ ವೃತ್ತಿಪರ  ಸಂಬಂಧ ಕೋರ್ಸುಗಳಿವೆ ಅವೆಂದರೆ, ಐಟಿಐ, ಜೆಓಸಿ, ಪಾಲಿಟೆಕ್ನಿಕ್‍ಮತ್ತು ಇಂಜಿನಿಯರಿಂಗ್‌ಮೊದಲ ಮೂರು ಕೋರ್ಸುಗಳಿಗೆ ಎಸ್ಸೆಸೆಲ್ಸಿಯಲ್ಲಿ ಕಡಿಮೆ ಅಂಕಗಳನ್ನು ಪಡೆದ ಅಥವಾ ಹೆಚ್ಚು ಅಂಕ ಪಡೆದಿದ್ದರೂ ವಿಧ್ಯಾಭ್ಯಾಸದಲ್ಲಿ ಮುಂದುವರೆಸಲಾಗದ ವಿದ್ಯಾರ್ಥಿಗಳು, ಸಾಮಾನ್ಯವಾಗಿ ೨ ವರ್ಷದ ಅವಧಿಯ ಐಟಿಐ,  ಮತ್ತು ಜೆಓಸಿ  ಕೋರ್ಸುಗಳಿಗೆ ಸೇರುತ್ತಾರೆ. ಇವರಿಗೆ ಎಸ್ಸೆಸೆಲ್ಸಿ ನಂತರ ಏಳು ವರ್ಷಗಳಲ್ಲಿ ಓದಿ, ಇಂಜಿನಿಯರಿಂಗ್‌ಪದವಿ ಪಡೆಯುವಷ್ಟು ಆರ್ಥಿಕ ಚೈತನ್ಯವಿರುದಿಲ್ಲ. ಓದಿನ ನಂತರ ಕೆಲಸ ಸಿಗುವುದು ಮತ್ತು ಓದು ಅಲ್ಪಕಾಲಾವಧಿಯಲ್ಲೇ ಮುಗಿಯುವುದು ಬೇಕಿರುತ್ತದೆ. ಇದಕ್ಕೆ ಕಾರಣ, ಈ ಕೋರ್ಸುಗಳಿಗೆ ಬರುವ ವಿದ್ಯಾರ್ಥಿಗಳು ಬಹುಪಾಲು ಗ್ರಾಮೀಣ ಹಿನ್ನೆಲೆ ಅಥವಾ ನಗರದ ಕೆಳಮದ್ಯಮ ವರ್ಗಕ್ಕೆ ಸೇರಿದವರಾಗಿರವುದು. ಸರ್ಕಾರಿ ಶಾಲೆಗಳಲ್ಲಿ ಕಲಿತವರಾಗಿರುವುದು.

ಇಂಜಿನಿಯರಿಂಗ್‌ಕೋರ್ಸುಗಳಿಗೆ ಸೇರುವವರು ಪಿಯುಸಿಯಲ್ಲಿ ಇಂಗ್ಲಿಷ್‌ಮಾಧ್ಯಮದ ಅನುಭವ ಹೊಂದಿರುವುದರಿಂದ, ಇತರರಿಗೆ ಹೋಲಿಸಿದರೆ ಬೇಗನೇ ಇಂಗ್ಲಿಷ್‌ಮಾಧ್ಯಮಕ್ಕೆ ಹೊಂದಿಕೊಳ್ಳುತ್ತಾರೆ. ಎಂದು ಹೇಳಲಾಗುತ್ತದೆ.  ಪಾಲಿಟೆಕ್ನಿಕ್‍ಕಾಲೇಜುಗಳಿಗೆ ಸೇರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಹೆಚ್ಚು ತೊಂದರೆಯು ಆಗುತ್ತಿರುವುದು ನಿಜವಾದರೂ, ಬಹುತೇಕ ಮೆರಿಟ್‌ವಿದ್ಯಾರ್ಥಿಗಳು ಸೇರಿಕೊಳ್ಳುವುದರಿಂದ ಅಲ್ಲೂ ಸಹ ಇಂಗ್ಲಿಷಿನ ಸಮಸ್ಯೆ ತೀವ್ರವಾಗಿಲ್ಲ ಎಂದೇ ನಂಬಿಕೆ. ಆದರೆ ಐಟಿಐ ಮತ್ತು ಜೆಓಸಿ  ಶಿಕ್ಷಣದಲ್ಲಿ ಮಾತ್ರ, ಕನ್ನಡ ಮಾಧ್ಯಮದಲ್ಲಿ ಓದಿ ಬಂದ  ವಿದ್ಯಾರ್ಥಿಗಳು ಇಂಗ್ಲಿಷಿನ ಜೊತೆ ಹೆಣಗಾಡುವುದು ನಿಚ್ಚಳವಾಗಿ ಕಾಣುತ್ತದೆ.

ಪ್ರತೀ ವರ್ಷ ೫೦-೬೦ ಸಾವಿರ ವಿದ್ಯಾರ್ಥಿಗಳು ನಮ್ಮ ರಾಜ್ಯದಲ್ಲಿ ಪದವಿಪೂರ್ವ  ಹಂತದ ವೃತ್ತಿಶಿಕ್ಷಣ ತರಬೇತಿ ಪಡೆಯುತ್ತಿದ್ದಾರೆ. ಪದವಿ ತರಗತಿಗಳ ನಿರರ್ಥಕತೆಯನ್ನು ಮನಗಂಡ ಕರ್ನಾಟಕ ಸರ್ಕಾರ, ಅನವಶ್ಯಕವಾಗಿ ಪದವಿ ಸೇರುವುದನ್ನು ತಪ್ಪಿಸುವ ಉದ್ದೇಶದಿಂದ ಮತ್ತು +೨ ಹಂತದಲ್ಲಿ ಬದುಕಿಗೆ ಪೂರಕವಾದ ಶಿಕ್ಷಣವನ್ನು ನೀಡುವ ಉದ್ದೇಶದಿಂದ, ೧೯೭೭ರಿಂದ ವೃತ್ತಿಶಿಕ್ಷಣ  ಕೋರ್ಸುಗಳನ್ನು ಆರಂಭಿಸಿತು. ರಾಜ್ಯದಲ್ಲಿರುವ ಎಲ್ಲ ತಾಂತ್ರಿಕ ಮತ್ತು ಇತರೆ ಔದ್ಯೋಗಿಕ ಕ್ಷೇತ್ರಗಳಿಗೆ ಸಂಬಂಧಪಟ್ಟ ಸುಮಾರು ೫೩ ವಿವಿಧ ವೃತ್ತಿ ವಿಷಯಗಳು ಈ ಕಲಿಕೆಗಿವೆ. ಉದಾ:  ಆಟೋಮೊಬೈಲ್ಸ್, ಎಲೆಕ್ಟ್ರಿಕಲ್‍, ಕಂಪ್ಯೂಟರ್‌, ಡೈರಿಸೈನ್ಸ್, ಸಿರಿಕಲ್ಚರ್‌, ಬ್ಯೂಟಿಕೇರ‍್, ಫಿಶ್‌ಫಾರ್ಮಿಂಗ್‌, ಹೊಲಿಗೆ ಮತ್ತು ಕಸೂತಿ ಇತ್ಯಾದಿ.

ಈ ಮೊದಲೇ ತಿಳಿಸಿದಂತೆ ವೃತಿ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೆ ತುರ್ತು ಜೀವನದ ದಾರಿಯನ್ನು ಕಂಡುಕೊಳ್ಳುವ ಒತ್ತಡವಿರುತ್ತದೆ. ಇವರ ಗುರಿ ವೃತ್ತಿ ನೈಪುಣ್ಯತೆಯೇ ಹೊರತು  ವಿಷಯದ ಪಾಂಡಿತ್ಯವಲ್ಲ. ಆದರೆ ಈ ಎಲ್ಲಾ ಕೋರ್ಸುಗಳ ಶಿಕ್ಷಣ ಮಾಧ್ಯಮ ಇಂಗ್ಲಿಷ್‌ಆಗಿದೆ. ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಇಲಾಖೆಯವರು, ಕನ್ನಡದಲ್ಲೂ ಬೋಧನೆ ಬರಹ ಮಾಡಬಹುದೆಂದು ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಆದರೆ ಇದುವರೆಗೂ ಅಂತಹ ಯಾವ ಪ್ರಯತ್ನ ನಡೆದಿಲ್ಲ. ಕನ್ನಡದಲ್ಲಿ ಇದಕ್ಕೆ ಪೂರಕವಾದ ಬೋಧನಾ ಸಾಮಗ್ರಿ ಯಾಗಲೀ ಆ ಬಗ್ಗೆ ಯೋಚಿಸುವ ತಜ್ಞರಾಗಲೀ ಕಾರ್ಯಕ್ರಮಗಳಾಗಲೀ ಯಾವುದೂ ಇಲ್ಲ. ಕಳೆದ ೨೪ ವರ್ಷಗಳಿಂದ ಶಿಕ್ಷಣ ಮಾಧ್ಯಮದ ಈ ಸಮಸ್ಯೆ ಹಾಗೆ ಉಳಿದಿದೆ. ವಿದ್ಯಾರ್ಥಿಗಳ ಮೇಲೆ ಹಿಂಸೆಯಾಗಿ ಕೂತಿದೆ.

ವೃತ್ತಿ ಶಿಕ್ಷಣ ವಿದ್ಯಾರ್ಥಿಗಳಿಗೆ ಮೊದಲ ಆರು ತಿಂಗಳು ನರಕಯಾತನೆ.  ಇಂಗ್ಲಿಷಿನಲ್ಲಿ ಪಾಠಮಾಡಿದರೆ ಮುಖಗಳು ಕಳಾಹೀನವಾಗಿ, ತರಗತಿಯಲ್ಲಿ ನೀರವ ಮೌನ ಆವರಿಸುತ್ತದೆ. ನಾವು ನೋಟ್ಸ್‌ಗಳನ್ನು ಇಂಗ್ಲಿಷಿನಲ್ಲೇ ಕೊಟ್ಟರೂ ಪಾಠ ಮಾಡುವಾಗ ಕನ್ನಡಕ್ಕೇ ಒತ್ತುಕೊಡುತ್ತೇವೆ. ಆವರಿಗೆ ತಾಂತ್ರಿಕ ಪರಿಕಲ್ಪನೆ ಹೊಸದು. ಭಾಷೆಯೂ ಹೊಸತಾದಾಗ ಗಲಿಬಿಲಿಗೆ ಒಳಗಾಗುತ್ತಾರೆ. ಉದಾಹರಣೆಗೆ, ಒಂದು ವಾಹನದ ಇಂಜಿನ್‌ಬಗ್ಗೆ ಅಭ್ಯಾಸ ಮಾಡಬೇಕೆಂದಿಟ್ಟುಕೊಳ್ಳಿ. ಅದರಲ್ಲಿ ಬರುವ ನೂರಾರು ಸಂಕೀರ್ಣವಾದ ಬಿಡಿಭಾಗಗಳನ್ನೂ ಅದರ ಕಾರ್ಯ ವಿಧಾನಗಳನ್ನೂ ನೆನಪಿಟ್ಟುಕೊಳ್ಳಬೇಕು. ಹೀಗೆ ಮನಸ್ಸು ಹೊಸ ವಿಷಯವೊಂದಕ್ಕೆ ಹೊಸ ಪರಿಕಲ್ಪನೆಯೊಂದಕ್ಕೆ ತೆರೆದುಕೊಳ್ಳಬೇಕಾದಗ ಇಂಗ್ಲಿಷಿನ ಗೋಡೆ ಎದುರಾಗುತ್ತದೆ. ತರಗತಿಯಲ್ಲಿ ಎಷ್ಟು ಹೇಳುತ್ತೇವೋ ಅಷ್ಟೇ. ಮನೆಯಲ್ಲಿ ಹೊತ್ತಿನಲ್ಲಿ, ಇದುವರೆಗೂ ಒಂದು ಒಳ್ಳೆಯ ಪುಸ್ತಕ ಆಟೋಮೊಬೈಲ್ಸ್ ಬಗ್ಗೆ ಕನ್ನಡದಲ್ಲಿ ಲಭ್ಯವಿಲ್ಲ. ಹೀಗಾಗಿ ಅವರಲ್ಲಿ ಒಂದು ರೀತಿಯ ಅನ್ಯತನ ಬೆಳೆಯಲಾರಂಭವಾಗುತ್ತದೆ. ಒಂದು ಹೊಸ ವಿಷಯದ ಬಗ್ಗೆ. ನಾಳೆ ತಮ್ಮ ಬದುಕಿನ ಆಧಾರವಾಗಬಲ್ಲ ಕ್ಷೇತ್ರದ ಬಗ್ಗೆ ನಿಜವಾಗಿಯೂ ಮಾಡಬೇಕಾದಷ್ಟು ಆಸಕ್ತಿ ಕುತೂಹಲಗಳು ಬೆಳೆಯುವುದಿಲ್ಲ. ಇದಕ್ಕೆ ಒಟ್ಟಾರೆಯಾಗಿ ನಮ್ಮ ಶಿಕ್ಷಣ ವ್ಯವಸ್ಥೆಯ ಲೋಪದೋಷಗಳು ಕಾರಣವೆಂಬುದು ನಿಜವಾದರೂ, ಇದರಲ್ಲಿ ಭಾಷೆಯ ಪಾತ್ರ ಬಹಳ ಮುಖ್ಯ. ಹೀಗಾಗಿಯೇ ತರಗತಿಯಲ್ಲಿ ಓದುವುದರಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳೂ ಕೂಡ ಹೆಚ್ಚಿನ ಓದಿಗೆ ಇಂಗ್ಲಿಷನ್ನೇ ನೆಚ್ಚಬೇಕಾದ್ದರಿಂದ, ಜನರಲ್‌ರೀಡಿಂಗ್‌ಹೋಗುವುದಿಲ್ಲ. ವಿದ್ಯಾರ್ಥಿಗಳು ಮಾತ್ರವಲ್ಲ. ಶಿಕ್ಷಕರೂ ಸಹ. ಈ ಶಿಕ್ಷಣವು ನಮ್ಮ ಇತರೆ ಶಿಕ್ಷಣದಂತಲ್ಲದೆ ಬದುಕಿಗೆ ನೇರವಾಗಿ ಸಂಬಂಧಿಸಿದ್ದರೂ, ತರಗತಿಯಲ್ಲಿ ಈ ಬಗೆಗಿನ ಪ್ರಶ್ನೆಗಳು ಬರುವುದು ಬಹಳ ಬಹಳ ಕಡಿಮೆ. ನಾವಾಗಿಯೇ ಕೆದಕಿ ಕೇಳಿದಾಗ ಅದ್ಭುತವಾದ ಉತ್ತರ ನೀಡುವ ಪ್ರಸಂಗಗಳಿವೆ. ಥಿಯರಿ ಕ್ಲಾಸ್‍ನಲ್ಲಿ ಬೆಪ್ಪಾಗಿ ಕುಳಿತಿರುವ ಎಷ್ಟೋ ವಿದ್ಯಾರ್ಥಿಗಳು, ಪ್ರಾಯೋಗಿಕ ತರಗತಿಗಳಲ್ಲಿ ಲವಲವಿಕೆಯಿಂದ ಕೆಲಸ ಮಾಡುವುದನ್ನು ಕಾಣಬಹುದು. ನಮ್ಮ ವಿದ್ಯಾರ್ಥಿಗಳಿಗೆ ಒಂದು ಇಂಜಿನನ್ನು ಬಿಚ್ಚಿ ರಿಪೇರಿ ಮಾಡುವುದು ಸುಲಭ. ಅದರ ಬಗ್ಗೆ ಬರೆಯುವುದು ಅಥವಾ ಮಾತನಾಡುವುದು ಕಷ್ಟ.

ನಮ್ಮ ಕಾಲೇಜಿನ ಬೆಳ್ಳಿಹಬ್ಬದ ಸಂದರ್ಭದಲ್ಲಿ ವಸ್ತು ಪ್ರದರ್ಶನವೊಂದನ್ನು ಏರ್ಪಡಿಸಲಾಗಿತ್ತು. ನಮ್ಮ ವಿದ್ಯಾರ್ಥಿಗಳ ಒಂದು ತಂಡದವರು ಅಂಬಾಸಿಡರ್‌ಕಾರ್‌ಇಂಜಿನ್‌ನಲ್ಲಿ ಪೂರ್ತಿಯಾಗಿ ಸ್ವತಃ ಎರಡು ವಾರಗಳ ಕಾಲ ಶ್ರಮವಹಿಸಿ, ವರ್ಕಿಂಗ್‌ಸೆಕ್ಷನ್‌ಮಾಡೆಲ್‌ಮಾಡಿ ಪ್ರದರ್ಶನ ಕೊಟ್ಟರು. ಅವರ ಪಕ್ಕದಲ್ಲೇ ಇಂಗ್ಲಿಷ್‌ಮಾಧ್ಯಮದ ಪಿಯುಸಿ ವಿಜ್ಞಾನದ ವಿದ್ಯಾರ್ಥಿಗಳು ತಮ್ಮ ಸಣ್ಣಪುಟ್ಟ ಪ್ರಯೋಗಗಳನ್ನೇ ಇಂಗ್ಲಿಷಿನಲ್ಲಿ ಅರಳು ಹುರಿದಂತೆ ವಿವರಿಸುತ್ತಿದ್ದರು. ನಮ್ಮ ವಿದ್ಯಾರ್ಥಿಗಳು ತೀರ್ಪುಗಾರರು ಬಂದಾಗ ಅಂಜಿಕೆಯಿಂದ ಕನ್ನಡಲ್ಲೇ ತಮ್ಮ ಇಂಜಿನ್‌ಮಾಡೆಲ್‌ಬಗ್ಗೆ ವಿವರಿಸಿದರು. ಅವರಿಗೆ ಮೊದಲ ಬಹುಮಾನ ಬರಲಿಲ್ಲ. ಒಂದು ಇಂಜಿನ್‌ಮಾಡೆಲ್‌ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಒಬ್ಬ ಸಾಧಾರಣ ಅಧ್ಯಾಪಕನಿಗೂ ಹೊಳೆಯುತ್ತದೆ. ಆದರೇನು ಮಾಡುವುದು, ಅವರಿಗೆ ಇಂಗ್ಲಿಷ್‌ಇರಲಿಲ್ಲ. ನಮ್ಮಲ್ಲಿ ಇಂಗ್ಲಿಷಿನ ನದಿ ದಾಟಲಾರದೆ ಅಧಿಕೃತವಾಗಿ  ಆಟೋಮೊಬೈಲ್ಸ್ ಡಿಪ್ಲೊಮಾ ಪ್ರಮಾಣ ಪತ್ರವನ್ನು ಪಡೆಯುವ ಎಷ್ಟೋ ವಿದ್ಯಾರ್ಥಿಗಳಿದ್ದಾರೆ. ಅವರು ಫೀಲ್ಡ್‌ನಲ್ಲಿ ಬಹಳ ಹೆಸರು ಪಡೆದ ತಂತ್ರಜ್ಞರಾಗಿರುವ ನಿದರ್ಶನಗಳು ಇವೆ.

ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವಾಗ ಅರ್ಧಕಿಂತ ಹೆಚ್ಚು ಜನರಿಗೆ ಕನಿಷ್ಠ ವಾಕ್ಯ ರಚನೆಯೇ ತಿಳಿದಿಲ್ಲವೆಂದು ಸ್ಪಷ್ಟವಾಗುತ್ತದೆ. ತಿಣುಕಾಡಿ ತಿಣುಕಾಡಿ ಒಂದಷ್ಟು ಪದಗಳನ್ನು ಗುಡ್ಡೆ ಹಾಕಿರುತ್ತಾರೆ. ರಾಶಿಬಿದ್ದ ಆ ಪದಗಳಲ್ಲಿ ನಮಗೆ ಬೇಕಾದದ್ದುನ್ನು ಆಯ್ದು ಅಂಕಗಳನ್ನು ನಿಡುತ್ತಾ ಹೋಗಬೇಕಾಗುತ್ತದೆ. ಆಗ ಕುವೆಂಪು ಹೇಳಿದ ‘ಗ್ರೇಸ್‌’ ಅಂಕಗಳ ದುರಂತ ನಾಟಕ ನೆನಪಾಗುತ್ತದೆ.” ದಡದಲ್ಲಿ ನಿಂತು ನೋಡುವ ಹಿರಿಯರ ಇತ್ಯರ್ಥವೇನು? ಹುಡುಗರೆಲ್ಲ ಈಚೀಚೆಗೆ ದಡ್ಡರಾಗುತ್ತಿದ್ದಾರೆ. ಸ್ಟಾಂಡರ್ಡ್‌ತುಂಬಾ ಇಳಿದು ಹೋಗಿದೆ! ಹಾಗಾದರೆ ಏನು ಮಾಡಬೇಕು? ಇನ್ನಷ್ಟು ಪಠ್ಯಪುಸ್ತಕ ಹೆಚ್ಚಿಸಿ! ಗ್ರಾಮಲ್‌ಲೇಹ್ಯ ಇನ್ನೂ ಸ್ವಲ್ಪ ಹೆಚ್ಚಾಗಿ ತಿನ್ನಿಸಿ! ಪರಿಣಾಮ: ಪರೀಕ್ಷೆಯ ಫಲಿತಾಂಶ ಪ್ರಕಟನೆ ಸಮಯದಲ್ಲಿ ಮತ್ತೆ ‘ಕೃಪೆ’ ಯ ಕೈಹಿಡಿದು ಎತ್ತಬೇಕು, ಮುಂದಿನ ಮೆಟ್ಟಿಲಿಗೆ.”

ಈ ದುರಂತ ನಾಟಕ ಇನ್ನು ಸಾಕು ಎಂದು ಕುವೆಂಪುರವರು ೧೯೫೬ರಲ್ಲಿಯೇ ನಮ್ಮನ್ನು ಎಚ್ಚರಿಸಿದ್ದಾರೆ. ಆದರೆ ವಾಸ್ತವದಲ್ಲಿ ಆಗುತ್ತಿರುವುದೇನು? ಎಷ್ಟೋ ಭಾರಿ ಪ್ರಾಕ್ಟಿಕಲ್‌ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯ ಅಂಕ ಪಡೆದ ವಿದ್ಯಾರ್ಥಿಗಳು ಥಿಯರಿಯಲ್ಲಿ ಪ್ರಯಾಸದಿಂದ ಪಾಸಾಗುತ್ತಾರೆ. ಆಂದರೆ ಏನರ್ಥ? ಅವರಿಗೆ ವಿಷಯ ಮನದಟ್ಟಾ ಗಿಲ್ಲವೆಂದೇ ಅಥವಾ ಆಭಿವ್ಯಕ್ತಿಯ ತೊಡಕೇ? ಇನ್ನೂ ದುರಂತವೆಂದರೆ, ಒಮ್ಮೆ ಒಂದು ಕಾಲೇಜಿನ ಎಲೆಕ್ಟ್ರಿಲ್‌ವಿಭಾಗದ ವಿದ್ಯಾರ್ಥಿಗಳಲ್ಲಿ ಅರ್ಧ ಜನ ಐಚ್ಛಿಕ ವಿಷಯಗಳೆಲ್ಲಾ ತೇರ್ಗಡೆ ಹೊಂದಿದ್ದರು. ಇಂಗ್ಲಿಷ್‌ಭಾಷಾ ವಿಷಯದಲ್ಲಿ ಫೇಲಾದರು. ಬದುಕಿಗೆ ಬೇಕಾದ ವೃತ್ತಿ ವಿಷಯದಲ್ಲಿ ನೈಪುಣ್ಯತೆ  ಪಡೆದರೂ, ಇಂಗ್ಲಿಷ್‌ಭಾಷೆ ಪಾಸಾಗಿಲ್ಲವೆಂಬ ಕಾರಣಕ್ಕೆ ಫೇಲ್‌ಎಂಬ ಹಣೆಪಟ್ಟಿ ಹೊತ್ತು, ಅದನ್ನು ಪಾಸು ಮಾಡುವವರೆಗೂ ಕಾಯಬೇಕಾಗುತ್ತದೆ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇಂಗ್ಲಿಷಿಲ್ಲದ ಕಾರಣಕ್ಕೆ ನೌಕರಿ ಸಿಕ್ಕದೇ ಹೋಗಬಹುದು. ಅಗ್ರಿಕಲ್ಚರ್‌, ಹೊಲಿಗೆ ಕಸೂತಿಯಂತಹ ವಿಷಯಗಳನ್ನು ಸುಲಭವಾಗಿ ಕನ್ನಡದಲ್ಲಿ  ಬರೆಯಬಹುದು. ಆದರೆ ಕನ್ನಡದಲ್ಲಿ ಬರೆದರೆ ಅಂಕಗಳು ಕಡಿಮೆ ಎಂಬುದು ವಿದ್ಯಾರ್ಥಿಗಳು ಕಂಡುಕೊಂಡ ಸತ್ಯ. ಅದು ನಿಜವೂ ಹೌದು. ಏಕೆಂದರೆ ಮೌಲ್ಯಮಾಪನ ಮಾಡುವಾಗ ನಮ್ಮ ಅಧ್ಯಾಪಕ ಮಿತ್ರರು, ಕನ್ನಡ ಉತ್ತರ ಪತ್ರಿಕೆ ಕಂಡರೆ ಉದಾಸೀನದಿಂದಲೇ ಕೈಗೊತ್ತಿಕೊಂಡು ಸಾಗಹಾಕುತ್ತಾರೆ. ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡ ಎಂದರೆ ಮಹಾ ಅಲರ್ಜಿ.

ಬಿಸಿಲಿಗೆ ಊದಿಟ್ಟ ಒಂದು ಬಲೂನು, ಶಾಖ ಹೆಚ್ಚಾದಾಗ ಒಡೆದು ಹೋಗುತ್ತದೆ. ಎಂಬ ಪ್ರಯೋಗವನ್ನು ಪ್ರಾಥಮಿಕ ತರಗತಿಯಿಂದಲೇ ಎಲ್ಲರೂ ಓದಿರುತ್ತಾರೆ. ಆದರೆ ಅದರಿಂದ “ಯಾವುದೇ ಅನಿಲವನ್ನು ಕಾಯಿಸಿದಾಗ ಅದು ಹಿಗ್ಗುತ್ತದೆ” ಎಂಬ ಸೂತ್ರವನ್ನು (ಸಾರವನ್ನು) ವಿದ್ಯಾರ್ಥಿಗಳು ಗ್ರಹಿಸುವುದಿಲ್ಲ. ಇದು ಆಟೋಮೊಬೈಲ್ಸ್‌ನ ಮೂಲಸೂತ್ರ. ತಲೆಯಲ್ಲಿ ಯೋಚಿಸುವ ಭಾಷೆ ಬೇರೆ, ಪಠ್ಯದಲ್ಲಿ ಓದುವ ಭಾಷೆ ಬೇರೆಯಾದಾಗ ಸಂವಹನಕ್ಕೆ ನಡುವೆ ಎಲ್ಲೋ ಕಂದಕವೇರ್ಪಡುತ್ತದೆ. ಹಾಗಾಗಿಯೇ ನಮ್ಮ  ವಿದ್ಯಾರ್ಥಿಗಳಿಗೆ ಅಪ್ಲಿಕೇಶನ್‌ಆಫ್‌ನಾಲೆಜ್‌ಇಲ್ಲ. ಇದು ಇಲ್ಲದಿದ್ದಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಬಾಯಿಪಾಠಮಾಡಿ ಪರೀಕ್ಷೆ ಪಾಸು ಮಾಡಬಹುದೇ ವಿನಃ ಪೀಲ್ಡ್‌ನಲ್ಲಿ ಯಶಸ್ಸು ಸಾಧ್ಯವಿಲ್ಲ. ಪದಕೋಶಗಳನ್ನು ತಾಂತ್ರಿಕ ಶಿಕ್ಷಣದ ಪ್ರತಿಯೊಂದು ಶಾಖೆಗೂ ಪ್ರತ್ಯೇಕ ಪ್ರತ್ಯೇಕವಾಗಿ ರಚಿಸಬೇಕು. ವಿವಿಧ ಕೋರ್ಸುಗಳ ಬೋಧನೆಯಲ್ಲಿ ತೊಡಗಿರುವ ಅಧ್ಯಾಪಕರು, ಆಗಾಗ ಸೇರಿಸಿ, ವಿಚಾರ ವಿನಿಮಯ ನಡೆಸಿ, ಕನ್ನಡದ ಸಮರ್ಥ ಬಳಕೆಯ ಬಗ್ಗೆ ಹೆಚ್ಚು ಹೆಚ್ಚು ಕಾರ್ಯಕ್ರಮ ಹಾಕಿಕೊಳ್ಳವಂತಾಗಬೇಕು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ತಾಂತ್ರಿಕ ಶಿಕ್ಷಣ ಮಂಡಳಿಗಳು, ಪ್ರತ್ಯೇಕವಾಗಿ ತಂತಮ್ಮ ಇಲಾಖೆಗೆ ಸಂಬಂಧಪಟ್ಟ ಕೋರ್ಸುಗಳಿಗೆ, ಕನ್ನಡ ಪಠ್ಯಗಳನ್ನು ರಚಿಸಬೇಕು. ಸೋವಿಯತ್‌ಒಕ್ಕೂಟದಲ್ಲಿ ಅನೇಕ ರಾಷ್ಟ್ರೀಯ ಭಾಷೆಗಳನ್ನು ಈ ರೀತಿಯಾಗಿ ಬೆಳೆಸಿದ ಉದಾಹರಣೆಗಳು ನಮ್ಮ ಮುಂದಿವೆ.

ಏಕಮುಖೀ ಸಂಸ್ಕೃತಿಯತ್ತ ಜಗತ್ತಿನ ಚೈತನ್ನ್ಯ ಸಮಸ್ತವನ್ನು ಬಲಾತ್ಕರಿಸುತ್ತಿರುವ ಜಾಗತೀಕರಣದ ಈ ಸಂದರ್ಭದಲ್ಲಿ, ನಾವು ಎಚ್ಚೆತ್ತುಕೊಂಡು ವಾಸ್ತವಕ್ಕೆ ಸ್ಪಂದಿಸದಿದ್ದರೆ, ನಮ್ಮ ವಿದ್ಯಾರ್ಥಿಗಳ ಬುದ್ಧಿ ಪ್ರತಿಭೆ ಹೀಗೆ ವೃಥಾ ಪೋಲಾಗುವುದಿಲ್ಲದೇ ದೇಶವೂ ಅಧೋಗತಿಯತ್ತ ಸಾಗುತ್ತದೆ. ಶಿಕ್ಷಣದಲ್ಲಿ ನಮ್ಮ ಭಾಷೆಯನ್ನು ಅಳವಡಿಸಿಕೊಳ್ಳುವ ಹೋರಾಟವೆಂದರೆ, ನಮ್ಮ ನಿಜವಾದ ರಾಜಕೀಯ ಆರ್ಥಿಕ ಸ್ವಾತಂತ್ರ್ಯವನ್ನು ಮರಳಿ ಪಡೆಯುವುದೆಂದೇ ಅರ್ಥ

ಜಗದೀಶಚಂದ್ರ ಬೋಸರಿಗೆ ಸಸ್ಯಶಾಸ್ತ್ರದ ಅಧ್ಯಯನಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಬಂದ ಸಂದರ್ಭದಲ್ಲಿ ಅವರನ್ನು ಸಂದರ್ಶನ ನಡೆಸುತ್ತಿದ್ದ ಸಂದರ್ಶನಕಾರ ಒಂದು ಪ್ರಶ್ನೆ ಕೇಳಿದನಂತೆ. “ಬೋಸ್‌ಜೀ, ಸಸ್ಯಶಾಸ್ತ್ರವನ್ನು ಬಂಗಾಳಿಯಲ್ಲಿ ಬೋಧಿಸುವುದು ಕಷ್ಟ ಎನ್ನುತಾರಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?”  ಬೋಸ್‌ಉತ್ತರಿಸಿದರು.”ನಿಜ ಹೇಳಬೇಕೆಂದರೆ ಯಾರು ಈ ಮಾತನ್ನು ಹೇಳುತ್ತಾರೋ ಅವರಿಗೆ ಸಸ್ಯ ಶಾಸ್ತ್ರವೂ ತಿಳಿದಿಲ್ಲ. ಬಂಗಾಳಿಯೂ ತಿಳಿದಿಲ್ಲ”.

ಲೇಖಕರು

ಎಸ್‌ಸುಂದರ್‌(೧೯೬೮) ಅವರು ಶಿವಮೊಗ್ಗೆಯ ದಿವಿಎಸ್‌ಪದವಿ ಪೂರ್ವ ಸ್ವತಂತ್ರ ಕಾಲೇಜಿನಲ್ಲಿ ಆಟೋಮೊಬೈಲ್ಸ್  ವಿಷಯದಲ್ಲಿ ಅಧ್ಯಾಪಕರಾಗಿದ್ದಾರೆ. ಜನಪರ ಚಳುವಳಿಗಾರರು. ಪ್ರತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ.

ಆಶಯ

ಪ್ರಸ್ತುತ ಲೇಖನಗಳನ್ನು  ಕನ್ನಡ ವಿಶ್ವವಿದ್ಯಾಲಯದ ದಶವಾರ್ಷಿಕ ಸಂದರ್ಭದಲ್ಲಿ ಪ್ರಕಟವಾದ ‘ಕನ್ನಡ ಅಧ್ಯಯನ’ ಪತ್ರಿಕೆಯಿಂದ ಆರಿಸಿಕೊಳ್ಳಲಾಗಿದೆ. ತಾಂತ್ರಿಕ ಶಿಕ್ಷಣವನ್ನು ಮಾತೃಬಾಷೆ ಅಥವಾ ಪರಿಸರದ ಭಾಷೆಯಲ್ಲಿ ಪಡೆಯುವುದರ ಮಹತ್ವವನ್ನು, ಲೇಖಕರು ತಮ್ಮ ಅನುಭವಗಳ ಮೂಲಕ ಇಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

ಪದಕೋಶ

ಎಂತಾ ಮಾಡುಕಾತಿಲ್ಯೆ = ಏನು ಮಾಡುವುದು ತಿಳಿಯುತ್ತಿಲ್ಲ, ಲೇಹ್ಯ = ಶಕ್ತಿಕೊಡುವ ಔಷಧಿ, ಅಲರ್ಜಿ = ಆಗದಿರುವುದು, ಒಗ್ಗದಿರುವುದು

ಮಾದರಿ ಪ್ರಶ್ನೆಗಳು

೧. ಪರೀಕ್ಷಕರಾಗಿ ಹೋದ ಲೇಖಕರ ಅನುಭವ ಎಂತಹದು?

೨. ಐಟಿಐ ಮತ್ತು ಜೆಓಸಿ ಕೋರ್ಸುಗಳಿಗೆ ಸಾಮಾನ್ಯವಾಗಿ ಬರುವ ವಿದ್ಯಾರ್ಥಿಗಳ ಹಿನ್ನೆಲೆಯೇನು?

೩. ಕರ್ನಾಟಕದಲ್ಲಿರುವ ವೃತ್ತಿ ಶಿಕ್ಷಣದ ಸ್ವರೂಪ ಹೇಗಿದೆ?

೪. ಲೇಖಕರಿಗೆ ತರಗತಿಗಳಲ್ಲಿ ಭಾಷೆ ವಿಷಯದಲ್ಲಿ ಆಗುವ ಅನುಭವ ಎಂತಹದು?

೫. ತಾಂತ್ರಿಕ ವಸ್ತು ಪ್ರರ್ದರ್ಶನದಲ್ಲಿ ಕನ್ನಡ ವಿದ್ಯಾರ್ಥಿಗಳು ಮೊದಲ ಬಹುಮಾನ ಗಳಿಸದಿರಲು ಭಾಷೆ ಅಡ್ದಿಯಾಯಿತು ಎನ್ನುವ ಲೇಖಕರ ಅಭಿಪ್ರಾಯ ಕುರಿತು ನಿಮಗೇನನಿಸುತ್ತದೆ?

೬. ಕುವೆಂಪು ಹೇಳುವ ‘ದುರಂತ ನಾಟಕ’ ಯಾವುದು?

೭. ವಿದ್ಯಾರ್ಥಿಗಳು ಥಿಯರಿ ಮತ್ತು ಪ್ರಾಕ್ಟಿಕಲ್‌ತರಗತಿಗಳಲ್ಲಿ, ಪರೀಕ್ಷೆ ಹಾಗೂ ಫೀಲ್ಡಿನಲ್ಲಿ , ಬೇರೆಬೇರೆ ತರಹದ ಪ್ರತಿಭೆ ವ್ಯಕ್ತಪಡಿಸುವುದಕ್ಕೆ ಕಾರಣಗಳೇನು?

೮. ಕನ್ನಡದಲ್ಲಿ ತಾಂತ್ರಿಕ ಶಿಕ್ಷಣ ನೀಡಲು ಸರಕಾರ ಹಾಗೂ ವಿಶ್ವವಿದ್ಯಾಲಯಗಳು ಏನು ಮಾಡಬೇಕೆಂದು ಲೇಖಕರು ಸಲಹೆ ಕೊಡುತ್ತಾರೆ?

೯. ಜಗದೀಶಚಂದ್ರ ಬೋಸರು ಬಂಗಾಳಿಯಲ್ಲಿ ಸಸ್ಯಶಾಸ್ತ್ರ ಬೋಧಿಸುವ ಬಗ್ಗೆ ಹೇಳಿದ ಮಾತಿನ ಒಳಾರ್ಥವೇನು?

ಪೂರಕ ಓದು

೧. ಕುವೆಂಪು ಅವರ ‘ನಮಗೆ ಬೇಕಾಗಿರುವ ಇಂಗ್ಲಿಷ್‌ಶಿಕ್ಷಣ’ ಲೇಖನ.

೨. ಯು ಆರ್‌ಅನಂತಮೂರ್ತಿ ಅವರ ‘ಇಂಗ್ಲಿಷ್‌ಬ್ರಾಹ್ಮಣ ಕನ್ನಡ ಶೂದ್ರ’ ಲೇಖನ.

೩. ಕೆ. ವಿ. ನಾರಾಯಣ ಅವರ ‘ಭಾಷೆಯ ಸುತ್ತಮುತ್ತ’ ಪುಸ್ತಕ.

೪. ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ‘ಕನ್ನಡ ಅಧ್ಯಯನ’ ದಶವಾರ್ಷಿಕ ವಿಶೇಷ ಸಂಚಿಕೆಯಲ್ಲಿ (೨೦೦೧) ‘ಕನ್ನಡದ ಜತೆ ನನ್ನ ಅನುಸಂಧಾನ’ ಭಾಗದಲ್ಲಿ, ವಿಜ್ಞಾನಿಗಳು ಹಾಗೂ ತಾಂತ್ರಿಕ ಶಿಕ್ಷಣದ ಪ್ರಾದ್ಯಾಪಕರು ಬರೆದಿರುವ ಲೇಖನಗಳು.

೫. ಕರ್ನಾಟಕಾ ವಿಮೋಚನ ರಂಗ ಪ್ರಕಟಿಸಿರುವ ‘ಕನ್ನಡ ಬದುಕಿನ ಕಂಟಕಗಳು’ ಕೃತಿ.

೬. ಅಫ್ರಿಕಾದ ಲೇಖಕ ಗೂಗಿ ವಾ ಥಿಯಾಂಗೋ ಅವರ ಪುಸ್ತಕದ ಅನುವಾದ ‘ವಸಾಹತು ಪ್ರಜ್ಞೆ ಮತ್ತು ವಿಮೋಚನೆ’.