ಗೋವಿಂದ ಮುರಹರ ಮಾಧವ |
ಸರ್ವರ ಪಾಲಿಸು ಶ್ರೀಧವ ||

ನಮ್ಮೂರಲ್ಲಿದ್ದ ಕೋಣವೇಗೌಡ
ಜೀನನೆಂದರೆ ಹೆಸರೇಳಬೇಕು
ಜೋಳನಾದ್ರೆ ಬಿತ್ತೇ ಆಯ್ತು
ಮೂರು ವರ್ಷ ಮಳೆಯೇ ಹೋಯ್ತು
ಇರುವೆ ಕಾಳಹೊತ್ಕೊಂಡೋದೊ
ಗೌಡನು ಇಲಿಗೆ ಸಂಕಲೆ ಹಾಕಿ
ಕಾಳನೆಲ್ಲಾ ತೆಗೆದು ತುಂಬ್ದ

ಹೊಟ್ಗಿಲ್ದೋರು ಕೇಳಿದವರನ
ಭಿಕ್ಷನಾದರೆ ಕೊಡಿಗಿಡಿಯೆಂದು
ಭಿಕ್ಷದೋನ್ಕಾಟ ತಡಿಲಾರ್ದೆ
ಕರೆದು ಹೆಂಡ್ತೀಗೇಳ್ದಹಾಗೆ
ಭಿಕ್ಷದವರು ಬಂದ್ಗಿಂದಾರು
ಭಿಕ್ಷಕಾದರೆ ಬಂದಾರೀಗ
ಸತ್ತಂತೆ ನಾನು ಬಿದ್ಕೋತೀನಿ ||

ಅಳುತಾ ಬಾಕ್ಲಲ್ಲೆ ಕುಂತ್ಕೋ ಹೆಣ್ಣೆ
ದಾಸಯ್ಯನಾದ್ರೆ ಬರ್ತಾನಾಗ
ಇದ್ಯಾರಮ್ಮ ಅನ್ನುತಾನೆ
ಗಂಡ ಸತ್ತೋದ ಅಂತ ಹೇಳು
ದೇವ್ರು ಸೂತ್ನಕ್ಕೆ ಸಿಕೋಯ್ತೆಂದು
ದಾಸಯ್ಯನಾದ್ರೆ ಓಡ್ತಾನಾಗ
ಹೀಗಂತ ಹೇಳಿ ಗೌಡ ಮಲಗ್ದ
ಸತ್ತಂಗೆ ಮೂಲೇಲಿ ಬಿದ್ಕೊಂಡ ||

ಕೊಡಗಿನ ಮಾರಿ ತಂಟಲ ಮಾರಿ
ಗೌಡಗೆ ಬುದ್ಧಿ ಕಲಿಸಾಲೆಂತ
ದಾಸಯ್ನ ವೇಷ ಹಾಕಿಕೊಂಡು
ತುಳಸೀ ಮಣಿಯ ಕತ್ತಿಗೆ ಹಾಕಿ
ಕೈಲಿ ಜಾಗಟೆ ಕಂಕ್ಳಲ್ಶ್ಯಂಖು
ಹಣೀಲ್ನಾಮ ಇಟ್ಟುಕೊಂಡು
ಗೋವಿಂದ ತಿಮ್ಮಪ್ಪ ಎಂದೆನ್ನುತ್ತ
ಗೌಡ್ನ ಹಟ್ಟಿ ಬಾಗ್ಲಿಗೆ ಬಂದ್ಲು
ನೋಡಿದಳಲ್ಲಿ ಗೌಡ್ನ ಹೆಂಡ್ತಿ
ಅಳುತ ಬಾಕ್ಲಲ್ಲಿ ಕುಂತಿರೋದ
ಇದ್ಯಾಕಮ್ಮ ಅಳ್ತಿ ಎಂದ್ಲು
ಗೌಡ ಸತ್ತೋದ ಕೆಟ್ಟೆ ಕಾಣಪ್ಪ
ಹೊರೋರು ಹೆಣವ ದಿಕ್ಕಿಲ್ವಲ್ಲೋ
ನನಗೆ ಮುಂದಕೆ ದಿಕ್ಕಿಲ್ಲ ತಂದೆ
ಕೆಟ್ನಲ್ಲಪ್ಪೊ ಕೆಟ್ನಲ್ಲಪ್ಪೊ
ಅಂತ ಹೇಳಿ ಬಿಕ್ಕಿ ಅತ್ಲು
ಕಣ್ಣಲ್ಲಿ ತೊಟ್ಟು ನೀರೇ ಇಲ್ಲ.||

ಅಯ್ಯೋ ಕೊಣವಪ್ಪ ಸತ್ಯಾ ನೀನು
ಚಿನ್ನದಂತ ಮನುಷ್ಯನು ನೀನು
ನಿನ್ನಂಥಾ ದಾನಿ ಸತ್ತಾ ಮೇಲೆ
ನಮ್ಗೆ ಹೊಟ್ಗ್ಯಾರೊ ಕೊಡಾರಪ್ಪ
ಅಂತಾ ತುಂಬಾ ಬಗೇಲಿ ದಾಸಯ್ಯ
ತಲೆಯಾ ತಲೆಯಾ ಹೊಡಕೊಂಡತ್ತ ||

ಏಟೊತ್ತು ಬಡ್ಕೊಂಡ್ರು ಇದ್ದೆ ಆದೆ
ಹೆಣವ ಹೋರೋರು ದಿಕ್ಕಿಲ್ಲಂತೆ
ಅಂತ ಹೇಳಿ ದಾಸಯ್ಯನಾಗ
ಶಂಕು ಜಾಗಾಟೆ ತೆಗೆದು ಮಡಗಿ
ಉಟ್ಟಿದೊದ್ದಿದ್ಬಟ್ಟೆ ತೆಗೆದು
ಒಂದು ಕಡೀಕೆ ಗಂಟ್ಕಟ್ಟಿಟ್ಟು
ಗೌಡ ಮೊಕವಾ ನೋಡಾಕೋದ ||

ಹೊರಗಡೆ ನಡೆಯೋ ಪರಸಂಗ ಕೇಳಿ
ದಾಸಯ್ಯ ಬರುವಾ ಗುರ್ತಾನರ್ತು
ಗೌಡ ಬಿಗೀಲಿ ಉಸಿರಾ ಕಟ್ಟಿ
ಕಣ್ಗುಡ್ಡೆ ಮೇಕ್ಕೆ ಸಿಕ್ಕಿಸಿಕೊಂಡು
ಕೈ ಕಾಲ್ತಾನು ಮುದುರಿಕೊಂಡು
ಸತಂಗೆ ತಾನು ಬಿದ್ಕೊಂಡಿದ್ದ ||

ಗೌಡ್ನ ರುಣವ ತೀರ್ಸೋನೆವದಿ
ದಾಸಯ್ಯ ಒಂದಿಡಿ ಅಕ್ಕೀ ತಮ್ದು
ಮೊಕ್ದಾ ಮುಸ್ಕಾ ಒಕ್ಕಡಿಕೇಳ್ದು
ಕಿಸಿದಿದ್ಬಾಯ್ಗೆ ಅಕ್ಕೀ ತುಂಬಿ
ಆಯ್ಯೋ ಅಪ್ಪಾ ಸತ್ಯಾ ಗೌಡ
ನಿನ್ನಂತಾ ಗೌಡ ಹುಟ್ತಾನೇನೋ
ಅಂತಾ ಅಳ್ತಾ ಹೋರಿಕೆ ಬಂದಾ ||

ಬಿದಿರಾ ಹಿಂಡ್ಲಲ್ಬಿದಿರಾ ತಂದು
ಚಟ್ಟವನಾದ್ರೇ ಕಟ್ಟಿಕೊಂಡು
ಹೆಣವ ತಂದು ಅದರ ಮೇಲಿಡಲು
ಹಣೀನ ಮುಸುಕು ತೆಗೆದು ನೋಡಿದ್ರೆ
ಅಕ್ಕಿ ಒಂದ್ಕಾಳಿರಲೇಯಿಲ್ಲ
ತೆಗೆದಿದ್ದ ಬಾಯಿ ಮುಚ್ಕೊಂಡಿತ್ತು
ಮುದುರಿದ್ದ ಕಾಲು ನೀಡ್ಕೊಂಡಿತ್ತು ||

ದೆವ್ವ ಬಂದದೆ ಹೆಣದ ಮ್ಯಾಲೆ
ಅದ್ನ ಈಗ ಓಡ್ಸಲೇಬೇಕು
ಅಂತಾ ಹೇಳಿ ಬರಗುಳಾವಾ
ಬೆಂಕೀಲಾಕಿ ಚಂದ್‌ಗ್ಕಾಸಿ
ಓಡೋಡ್ಲೇ ಹಾಳು ದೆವ್ವೇ ನೀನು
ಹೆಣಾನ ಯಾಕೆ ಹಿಡಕೊಂಡಿದ್ದಿ
ಅಂತಾ ಹೇಳಿ ಗೌಡ್ನ ಬೆನ್‌ಮೇಲೆ
ಬರಗುಳ ಉಳ್ದ ಚೋರ ಚೋರ ಅಂತು ||

ಅಯ್ಯಯ್ಯಪ್ಪ ಎಂದಾ ಗೌಡ
ಉರೀಗೆ ಬಾಯ್ಬಾಯಿ ಬಡ್ಕೊಂಡ್ಬಿಟ್ಟ
ದಾಸಯ್ಯನಾದ್ರೆ ಕಿಸಿಕಿಸಿ ನೆಗ್ತಾನೆ
ಗೌಡ್ನ ಹೆಂಡ್ತಿ ಬೀದೀಲಿದ್ದೋಳು
ಬಳೀಕೆ ಬಂದು ನೋಡ್ತಾಳಲ್ಲಿ
ಗಂಡಗೆ ರಗುಳ ಬಿದ್ದೀರೋದಾ
ಜೀನಗಂಡ್ನಾ ಗತಿಯಾ ಕಂಡು
ಅಳುವಿನ ಜೊತೆಗೆ ನಗುವೂ ಬಂತು ||

ದಾಸಯ್ಯ ಶಂಕು ಜಾಗಟೆ ತಂದು
ಭಿಕ್ಷಾ ಹಾಕಮ್ಮ ಅಂತ ಳೇಳ್ತಾನೆ
ಕೊಣವೇ ಗೌಡ್ನಗೆ ಈಟು ಹೊತ್ಗೇ
ಬಂದಿತ್ತು ಬುದ್ಧಿ ಚೆನ್ನಾಗೇಯೆ
ಹಾಕೆ ಒಂದಿಡಿ ಜೋಳ ಅವನ್ಗೆ
ಅಂತಾ ಹೆಂಡ್ತಿಗೇಳ್ದಾ ಅವನು ||

ಸತ್ತೋದ ಗೌಡ ಬದುಕ್ಕೊಂಡವನೇ
ಒಂದಿಡಿ ಜೋಳ ನನಗೆ ಸಾಲ್ದು
ಕೊಡಬೇಕು ನನಗೆ ಒಂದು ಹೇರು
ಅಂತಾ ಹೇಳಿ ಹಟವಾ ಹಿಡಿದ ||

ಕರ್ತೃ

ಇದೊಂದು ಜನಪದ ರಚನೆ, ಜನಪದ ಕತೆಯನ್ನೊ ಹಾಡನ್ನೊ ಮೂಲತಃ ಯಾರೋ ಒಬ್ಬ ಪ್ರತಿಭಾವಂತ ವ್ಯಕ್ತಿಗಳೇ ರಚಿಸಿರುತ್ತಾರೆ. ಆದರೆ ರಚನೆಯ ಜತೆ ಅವರ ಹೆಸರು ಉಳಿದು ಬರುವುದಿಲ್ಲ. ಇಡೀ ಸಮುದಾಯ ಅದನ್ನು ತನ್ನದನ್ನಾಗಿ ಮಾಡಿಕೊಂಡು ಬಾಯಿಂದ ಬಾಯಿಗೆ ಮುಂದುವರೆಸುತ್ತಾ ಬರುತ್ತದೆ. ಕನ್ನಡದಲ್ಲಿ ಕಾವ್ಯ ಕತೆ ಗಾದೆ ನಾಟಕ ಹಾಡು ಮೊದಲಾದ ಪ್ರಕಾರಗಳಲ್ಲಿ ಅಪಾರ ಜನಪದ ಸಾಹಿತ್ಯವಿದೆ. ಜನಪದ ಕಾವ್ಯದಲ್ಲಿಯೇ ತ್ರಿಪದಿ, ಕೋಲಾಟದ ಪದ, ಲಾವಣಿ, ಕಥನಗೀತೆ, ಮಹಾಕಾವ್ಯ, ಮಕ್ಕಳಪದ ಇತ್ಯಾದಿ ರೂಪಗಳಿವೆ.

ಆಶಯ

ಪ್ರಸ್ತುತ ಗೀತೆಯನ್ನು ದೇ. ಜವರೇಗೌಡ ಅವರು ಸಂಕಲಿಸಿರುವ ‘ಜನಪದ ಗೀತಾಂಜಲಿ’ ಕೃತಿಯಿಂದ ಆರಿಸಿಕೊಳ್ಳಲಾಗಿದೆ. ಇದೊಂದು ಕಥನಗೀತೆಯಾಗಿದೆ. ಇದರಲ್ಲಿ ಜಿಪುಣ ವ್ಯಕ್ತಿಯೊಬ್ಬನ ಜಿಪುಣತನದ ಪರಿಣಾಮಗಳನ್ನು ತಮಾಶೆ ಮಾಡಲಾಗಿದೆ.

ಪದಕೋಶ

ಜೀನ = ಜಿಪುಣ, ಸಂಕಲೆ = ಸರಪಳಿ, ಮೊಕ್ದಾ = ಮುಖದ, ಮುಸ್ಕಾ = ಮುಸುಕನ್ನು, ಒಕ್ಕಡಿಕೆ = ಒಂದು ಕಡೆಗೆ, ಬರಗುಳ = ನೇಗಿಲಿನ ತುದಿಗೆ ನೆಲ ಉಳಲು ಸಿಕ್ಕಿಸುವ ಕಬ್ಬಿಣದ ಪಟ್ಟಿ, ಹೇರು = ಒಬ್ಬ ಮನುಷ್ಯ ಹೊತ್ತುಕೊಂಡು ಹೋಗುವಷ್ಟು

ಟಿಪ್ಪಣಿ

ದಾಸಯ್ಯ = ಹಾಸನ ಮಂಡ್ಯ ಜಿಲ್ಲೆಗಳಲ್ಲಿ ಕಾಣಬರುವ ಶ್ರೀವೈಷ್ಣವ ಪಂಥದ ಒಬ್ಬ ಪೂಜಾರಿ. ಹಣೆಗೆ ಮೂರು ನಾಮಧರಿಸಿ ಒಂದು ಕೈಯಲ್ಲಿ ಜಾಗಟೆ ಹಾಗೂ ಶಂಖು ಹಿಡಿರುತ್ತಾನೆ. ಇನ್ನೊಂದರಲ್ಲಿ ಗರುಡಗಂಬ ಎಂದು ಕರೆಯುವ ದೀಪದ ಕಂಬ ಹಿಡಿರುತ್ತಾನೆ. ಬಗಲಲ್ಲಿ ಜೋಳಿಗೆ ಇರುತ್ತದೆ.

ಪ್ರಶ್ನೆಗಳು

೧. ಕೊಣವೇಗೌಡನ ಜಿಪುಣತನ ಇರುವೆ ವಿಷಯದಲ್ಲಿಯೂ ಹೇಗೆ ವ್ಯಕ್ತವಾಗುತ್ತಿತ್ತು?

೨. ಭಿಕ್ಷೆ ಬೇಡಲು ಬಂದವರಿಗೆ ಬರಿಗೈಲಿ ಕಳಿಸಲು ಗೌಡನು ಮಾಡಿದ ಉಪಾಯವೇನು?

೩. ಕೊಣವೇಗೌಡನಿಗೆ ಬುದ್ಧಿಕಲಿಸಲು ಕೊಡಗಿನ ಮಾರಿ ಹೂಡಿದ ಆಟವೆಂತಹದು?

೪. ಜಿಪುಣತನದ ಮೇಲೆ ಜನಪದ ಗೀತೆಯನ್ನು ಯಾವ ಅಭಿಪ್ರಾಯ ತಾಳುತ್ತಿದೆ?

ಪೂರಕ ಓದು

೧. ಜಿಪುಣರನ್ನು ಕುರಿತ ಜನಪದ ಗೀತೆಗಳು.

೨. ಜಿಪುಣರನ್ನು ಕುರಿತು ತಮಾಶೆ ಮಾಡುವ ಶರಣರ ವಚನಗಳು.

೩. ಜಿಪುಣರನ್ನು ವಿಡಂಬಿಸುವ ಪುರಂದರದಾಸರ ಕೀರ್ತನೆಗಳು.